ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಶ್ವಲಾಯನ

ವಿಕಿಸೋರ್ಸ್ದಿಂದ

ಆಪಸ್ತಂಬನಂತೆಯೇ ಶಾಖಾಪ್ರವರ್ತಕನಾದ ಆಚಾರ್ಯ. ಆಪಸ್ತಂಬ ಯಜುರ್ವೇದದ ಶಾಖಾಪ್ರವರ್ತಕನಾದರೆ ಆಶ್ವಲಾಯನ ಋಗ್ವೇದದ ಶಾಖಾಪ್ರವರ್ತಕ. ಈತ ಶೌನಕನ ಶಿಷ್ಯನೆಂಬ ಪ್ರತೀತಿಯಿರುವಂತೆ ಈತನ ಸೂತ್ರಗಳ ಆದ್ಯಂತಗಳಲ್ಲಿ ನಮಃ ಶೌನಕಾಯ - ಎಂಬ ಉಲ್ಲೇಖವಿರುವುದು ಇದನ್ನು ಪುಷ್ಟೀಕರಿಸುತ್ತದೆ.

ಆಶ್ವಲಾಯನ ಆಪಸ್ತಂಬನಿಗಿಂತ ಪ್ರಾಚೀನನೆಂಬುದು ನಿರ್ವಿವಾದ. ಇವನು ಕೇವಲ ಪ್ರಾಚೀನ ಆಚಾರ್ಯರನ್ನು ಮಾತ್ರ ಸ್ಮರಿಸಿದ್ದಾನೆ. ಶುಕ್ಲ ಯಜುರ್ವೇದದ ಆರಣ್ಯಕದಲ್ಲಿ ಅಶ್ವಲನೆಂಬ ಒಬ್ಬ ಋಷಿ ಜನಕರಾಜನ ಸಭೆಯಲ್ಲಿದ್ದನೆಂದು ಹೇಳಲಾಗಿದೆ. ಕಲ್ಪಸೂತ್ರಕಾರ ನಾದ ಆಶ್ವಲಾಯನ ಅಶ್ವಲನ ಮಗನೇ ಇದ್ದರೂ ಇರಬಹುದು. ಕಾತ್ಯಾಯನನ ಸರ್ವಾನುಕ್ರಮಣೀ ಗ್ರಂಥಕ್ಕೆ ಷಡ್ಗುರುಶಿಷ್ಯ ಬರೆದಿರುವ ಭಾಷ್ಯದಲ್ಲಿ, ಶಿಷ್ಯನಾದ ಆಶ್ವಲಾಯನನ ಸೂತ್ರಗಳನ್ನು ನೋಡಿದೊಡನೆ ಶೌನಕ ತಾನೇ ಬರೆದಿದ್ದ ಕಲ್ಪಸೂತ್ರಗಳನ್ನು ಹರಿದು ಹಾಕಿದನೆಂಬ ಐತಿಹ್ಯವನ್ನು ಉಲ್ಲೇಖಿಸಿದ್ದಾನೆ. ಶೌನಕನ ಬೃಹದ್ದೇವತಾ ಗ್ರಂಥದಲ್ಲಿಯೇ ಆಶ್ವಲಾಯನನ ಉಲ್ಲೇಖವಿರುವ ಕಾರಣ ಆಶ್ವಲಾಯನನ ಕಾಲ ಪಾಣಿನಿಯದಕ್ಕಿಂತ ಪ್ರಾಚೀನ, ಸು. ಪ್ರ.ಶ.ಪು. 700 ಇರಬೇಕೆಂದು ಪ್ರಾಚೀನ ಸಂಶೋಧಕರ ಮತ.

ಆಶ್ವಲಾಯನ ಶ್ರೌತಸೂತ್ರ, ಗೃಹ್ಯಸೂತ್ರ, ಗೃಹ್ಯಪರಿಶಿಷ್ಟಗಳನ್ನು ಮಾತ್ರ ರಚಿಸಿದ್ದಾನೆ. ಆಪಸ್ತಂಬನಂತೆ ಧರ್ಮಸೂತ್ರ, ಶುಲ್ಬಸೂತ್ರಗಳನ್ನು ರಚಿಸಿಲ್ಲ. ಈತನ ಶ್ರೌತಸೂತ್ರಕ್ಕೆ ದೇವಸ್ವಾಮಿ ರಚಿತ ಭಾಷ್ಯವೂ ನಾರಾಯಣೋಪಾಧ್ಯಾಯನ ವೃತ್ತಿಯೂ ಇವೆ. ಋತ್ವಿಜರ ಹೌತ್ರಕರ್ಮದ ವಿವೇಚನೆ, ಋಗ್ವೇದಮಂತ್ರಗಳ ವಿನಿಯೋಗ, ಪ್ರದರ್ಶನ-ಇವು ಇಲ್ಲಿಯ ಮುಖ್ಯ ವಿಷಯಗಳು. ದರ್ಶಪುರ್ಣಮಾಸ, ಅಗ್ನ್ಯಾಧಾನ, ಪುನರಾಧಾನ, ಆಗ್ರಯಣ, ಕಾಮ್ಯೇಷ್ಟಿ, ಚಾತುರ್ಮಾಸ್ಯ, ಪಶು, ಸೌತ್ರಾಮಣಿ, ಅಗ್ನಿಷ್ಟೋಮಾದಿ ಸೋಮಸಂಸ್ಥೆಗಳು-ಇವು ಮೊದಲನೆಯ ಭಾಗದಲ್ಲಿ ಬರುತ್ತವೆ. ಎರಡನೆಯ ಭಾಗದಲ್ಲಿ ಸತ್ರಗಳು, ಹೋತ್ರಗಳು, ಹೋತ್ರ ಪ್ರವರಸಂಗ್ರಹ, ಕರ್ಮವೈಕಲ್ಯಕ್ಕೆ ಪ್ರಾಯಶ್ಚಿತ್ತಗಳು ನಿರೂಪಿತವಾಗಿವೆ. ಒಮ್ಮೊಮ್ಮೆ ಅಧ್ವರ್ಯುಗಳಿಗೆ ಉಪಯುಕ್ತವಾದ ವಿಷಯಗಳೂ ಬರುವುದುಂಟು.

ಆಶ್ವಲಾಯನ ಗೃಹ್ಯಸೂತ್ರಗಳಲ್ಲೂ ದ್ವಿಜರ ಷೋಡಶ ಸಂಸ್ಕಾರಗಳು ಹಾಗೂ ಪಂಚಮಹಾಯಜ್ಞಗಳು ವಿಹಿತವಾಗಿವೆ. ಇಲ್ಲಿ ಪ್ರಾಯಿಕವಾಗಿ ವಿನಿಯುಕ್ತ ಮಂತ್ರಗಳೆಲ್ಲ ಋಗ್ವೇದಮಂತ್ರಗಳೆಂಬುದಷ್ಟೇ ವಿಶೇಷ.

ಗೃಹ್ಯಪರಿಶಿಷ್ಟದಲ್ಲಿ ಸಂಧ್ಯೋಪಾಸನಾಂಗಗಳಾದ ಆಚಮನ, ಮಾರ್ಜನ, ಪಾಪಶೋಧನ, ಗಾಯತ್ರೀಧ್ಯಾನ, ಸ್ನಾನವಿಧಿ, ವೈಶ್ವದೇವ, ಸ್ಥಾಲಿಪಾಕ, ವಿವಾಹ ವಿಧಿ, ಗ್ರಹಯಜ್ಞ, ದೇವತಾರ್ಚನ, ಪಿತೃಮೇಧ, ಅಗ್ನಿಕಾರ್ಯ ಮುಂತಾದ ವಿಷಯಗಳು ಬರುತ್ತವೆ.

ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ಆಶ್ವಲಾಯನಶಾಖೆಯ ಪ್ರಸಾರವಿರುವುದು ಅದರ ಪ್ರಾಚೀನತೆ ಹಾಗೂ ಪ್ರಾಶಸ್ತ್ಯಗಳ ಕುರುಹಾಗಿದೆ. ಆಶ್ವಲಾಯನ ಗೃಹ್ಯಪರಿಶಿಷ್ಟ, ಆಶ್ವಲಾಯನ ಗೃಹ್ಯಕಾರಿಕಾ, ಆಶ್ವಲಾಯನ ಗೃಹ್ಯ ಪರಿಭಾಷಾ, ಆಶ್ವಲಾಯನ ಗೃಹ್ಯಪ್ರಯೋಗ ಇತ್ಯಾದಿ ಗ್ರಂಥಗಳು ಆಶ್ವಲಾಯನ ಸೂತ್ರಗಳನ್ನವಲಂಬಿಸಿ ಬರೆದ ಗ್ರಂಥಗಳಾಗಿವೆ.