ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಹಾರಗಳು, ವಿವಿಧ ರಾಷ್ಟ್ರಗಳಲ್ಲಿ

ವಿಕಿಸೋರ್ಸ್ದಿಂದ

ಬೇರೆ ಬೇರೆ ದೇಶಗಳ ಅಹಾರಗಳು ಬೇರೆ ಬೇರೆ ತೆರನಾಗಿದ್ದರೂ ಅವುಗಳಲ್ಲಿ ಅನೇಕ ಹೋಲಿಕೆಗಳಿರುತ್ತವೆ. ಎಲ್ಲ ನಾಡುಗಳವರೂ ಆಹಾರಗಳನ್ನು ಸಿದ್ಧಪಡಿಸುವಾಗ ಹುರಿಯುವುದು, ಒಲೆಯ ಮೇಲಿಟ್ಟು ಬೇಯಿಸುವುದು, ಕೆಂಡದ ಮೇಲೆಬಾಡಿಸುವುದು, ಆವಿಯಲ್ಲಿ ಬೇಯಿಸುವುದೇ ಮಂತಾದ ವಿಧಾನಗಳನ್ನು ಬಳಸುತ್ತಾರೆ. ಮಾಂಸದೊಂದಿಗೆ ಕಾಯಿಪಲ್ಯೆಗಳನ್ನು ಜೋಡಿಸುವುದು ಅನೇಕ ದೇಶಗಳಲ್ಲಿ ಜನಪ್ರಿಯವಾಗಿದೆ. ಹಣ್ಣು, ಹಿಟ್ಟು, ಬೆಣ್ಣೆ, ಸಕ್ಕರೆಗಳಿಂದ ಸಿಹಿ ತಿಂಡಿಗಳನ್ನು ಎಲ್ಲರು ತಯಾರಿಸಿದರೂ ರುಚಿಯಾಗಿ ಸೇರಿಸುವ ವಿಶೇಷಣಗಳೇ ಬೇರೆ; ಉಪಯೋಗಿಸುವ ತರಕಾರಿಗಳೂ ಹಣ್ಣುಗಳೂ ಬೇರೆ. ಅಡಿಗೆ ಮಾಡುವಾಗ ಪದಾರ್ಥಗಳನ್ನು ಬಳಸುವ ರೀತಿಗಳಲ್ಲೂ ವ್ಯತ್ಯಾಸಗಳಿವೆ.

ಬೇರೆ ಬೇರೆ ನಾಡುಗಳ ಆಹಾರ ಪದ್ಧತಿಗಳು ಆಯಾ ದೇಶದ ಹಣಕಾಸಿನ ಸ್ಥಿತಿ, ನೆಲ ಗುಣ, ಮತಧರ್ಮ-ಇವನ್ನು ಅವಲಂಬಿಸಿರುತ್ತವೆ. ಬೇಗ ಕೆಡುವ ಆಹಾರಗಳನ್ನು ಕೆಡದಿರಿಸಲು ಶೀತಕಗಳು ಇಲ್ಲದ ದೇಶಗಳಲ್ಲಿ, ಒಣಗಿಸಿಟ್ಟ, ಉಪ್ಪು ಹಾಕಿ ಊರಿಟ್ಟ ಆಹಾರಗಳ ಬಳಕೆ ಇರುತ್ತದೆ. ಜನರ ಬಲ ಹೆಚ್ಚಿದ್ದು ಹಣಕಾಸಿರದ ಹಿಂದುಳಿದ ದೇಶಗಳಲ್ಲಿ ಕಾಳುಗಳೇ ಮುಖ್ಯ ಆಹಾರ. ಹೊಸ ತಿಳಿವಳಿಕೆ, ಹಣಕಾಸು ತುಂಬಿಕೆ, ಬೇರೆ ನಾಡುಗಳ ಸಂಪರ್ಕ ಇವುಗಳಿಂದ ಆಹಾರ ಪದ್ಧತಿಗಳು ನಿಧಾನವಾಗಿ ಬದಲಾಯಿಸುತ್ತವೆ. ಆದರೆ ಕೆಲವು ಆಹಾರಗಳಂತೂ ಬಲು ರುಚಿಕರ ಆಗಿರುವುದರಿಂದ ಬಹುಕಾಲವಾದರೂ ಜನಪ್ರಿಯವಾಗೇ ಉಳಿಯುತ್ತವೆ.

ಅಮೆರಿಕ :[ಸಂಪಾದಿಸಿ]

ಇಂದಿನ ಕಾರ್ಖಾನೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ತಯಾರಾದ ಅನೇಕ ಬಗೆಯ ಆಹಾರಗಳು ಅಮೆರಿಕದ ನಗರಗಳಲ್ಲಿ ದಂಡಿಯಾಗಿ ದೊರೆಯುತ್ತವೆ. ಆದ್ದರಿಂದ, ಡಬ್ಬಿಗಳಲ್ಲೂ ಶೀತಕಗಳಲ್ಲೂ ಬಗೆಬಗೆಯ ಆಹಾರಗಳು ವರ್ಷವೆಲ್ಲ ಸಿಗುತ್ತವೆ. ಕೇಕುಗಳು, ರೊಟ್ಟಿಗಳು, ಸಿಹಿ ತಿಂಡಿಗಳನ್ನು ಮಾಡಲು ಅಣಿಮಾಡಿದ (ರೆಡಿ ಮೇಡ್) ಹಿಟ್ಟಿನ ಮಿಶ್ರಣಗಳು ಯಾವಾಗಲೂ ದೊರೆಯುವುವು. ಮಾಂಸಾಹಾರಗಳಲ್ಲಿ ದನದ ಮಾಂಸವೇ ಹೆಚ್ಚು ಬಳಕೆ. ಇದಲ್ಲದೆ ಹೆಚ್ಚಾಗಿ ಹಂದಿಯ ಮಾಂಸವೂ ತುಸುಮಟ್ಟಿಗೆ ಆಡಿನÀ ಮಾಂಸವೂ ಬಳಕೆಯಲ್ಲಿವೆ. ಮಾಂಸಾಹಾರಗಳನ್ನು ಹುರಿಯುವುದು, ಕೆಂಡದ ಮೇಲೆ ಬಾಡಿಸುವುದು, ಒಲೆಯಲ್ಲಿ ಸುಡುವುದು, ಬೇಯಿಸುವುದೇ ಮುಂತಾದ ಸರಳ ರೀತಿಗಳಲ್ಲಿ ಸಿದ್ಧಪಡಿಸುವುದು ಸಾಮಾನ್ಯ. ಮಾಂಸದ ದಪ್ಪ ತುಂಡುಗಳು ಇಷ್ಟವೆನಿಸಿದರೂ ಬೆಲೆ ಹೆಚ್ಚು . ಸಣ್ಣದಾಗಿ ಕತ್ತರಿಸಿದ ಕೀಮಾದಿಂದ ಮಾಡಿದ ಹ್ಯಾಂಬರ್ಗರ್, ಫ್ರಾಂಕ್‍ಫರ್ಟರ್, ಮಸಾಲೆ ಬಾಡು ಸಮೋಸ (ಹಾಟ್‍ಡಾಗ್) ಮುಂತಾದವನ್ನು ರೊಟ್ಟಿಯ ಜೊತೆಗೆ ಹಗಲಿನ ಊಟದಲ್ಲಿ ತಿನ್ನುವುದು ವಾಡಿಕೆ. ಸುಟ್ಟು ಬಾಡಿಸಿದ ಟರ್ಕಿಯನ್ನು ಕ್ರ್ಯಾನ್-ಬೆರಿ ಚಟ್ನಿಯೊಂದಿಗೆ ಧನ್ಯವಾದಾರ್ಪಣೆ (ಥ್ಯಾಂಕ್ಸ್‍ಗಿವಿಂಗ್) ಹಬ್ಬದಲ್ಲಿ ಮೆಲ್ಲುವರು. ಕುಂಬಳಕಾಯಿ, ಸೀಕಡುಬು ಆ ದಿನದ ಸಿಹಿ ತಿಂಡಿ. ಕೋಳಿ, ಟರ್ಕಿಕೋಳಿಮಾಂಸಗಳನ್ನು ವರ್ಷವೆಲ್ಲ ತಿನ್ನುತ್ತಾರೆ. ದಕ್ಷಿಣ ಭಾಗದ ಉಣಿಸು ಎನಿಸಿಕೊಂಡ ಹುರಿದ ಕೋಳಿ ಎಲ್ಲ ಭಾಗಗಳಲ್ಲೂ ಪ್ರಿಯ, ಮೀನುಗಳ ಬಳಕೆ ಅಷ್ಟಾಗಿಲ್ಲ. ಕ್ಲಾಮ್ ಜೌಡರ್, ಕಡಲನಳ್ಳಿ (ಲಾಬ್ಸ್‍ಟರ್), ಮೊದಲಾದ ಕಡಲಾಹಾರಗಳನ್ನು ನ್ಯೊ ಇಂಗ್ಲೆಂಡ್‍ನಲ್ಲೂ ಸೀಗಡಿಯನ್ನು (ಪ್ರಿಂಪ್) ಅಟ್ಲಾಂಟಿಕ್ ತೀರದಲ್ಲೊ ಹೆಚ್ಚಾಗಿ ಬಳಸುತ್ತಾರೆ. ಇವರು ತಿನ್ನುವ ಮೈದಾಹಿಟ್ಟಿನ ರೊಟ್ಟಿ ಮೆತ್ತಗೂ ಬೆಳ್ಳಗೂ ಇರುವುದು. ಮಸುಕಿನ ಜೋಳದ ರವೆಯಿಂದ ಮಾಡಿದ ಬಿಸಿ ರೊಟ್ಟಿ ಎಲ್ಲೆಲ್ಲೂ ಜನಪ್ರಿಯ. ಹಾಲು, ಮೊಟ್ಟೆಗಳು ದಂಡಿಯಾಗಿ ಬಳಕೆಯಲ್ಲಿವೆ. ಜೋಳದವುಲು (ಕಾರನ್ ಫ್ಲೇಕ್ಸ್ ), ತೋಕೆಗೋದಿ ಹಿಟ್ಟೇ (ಓಟ್ ಮೀಲ್) ಮುಂತಾದ ಧಾನ್ಯಗಳಿಂದ ಮಾಡಿದ ಪದಾರ್ಥಗಳು, ತವೆ ದೋಸೆ (ಗ್ರಿಡಲ್ ಕೇಕ್), ತೆಳುದೋಸೆ (ವ್ಯಾಫಲ್) ತೆರನ ತಿಂಡಿಗಳು ಬಳಕೆಯಲ್ಲಿವೆ. ಮೊಸರು, ಕಿಲಾಟ (ಚೀಸ್), ಹಣ್ಣುಗಳು, ಅದರಲ್ಲೂ ಈಳೆಯ (ಸಿಟ್ರಸ್) ಹಣ್ಣುಗಳು ಹೊತ್ತಾರೊಟದಲ್ಲಿ (ಬ್ರೇಕ್ ಫಾಸ್ಟ್) ಸೇರುತ್ತವೆ.

ನೀರಲ್ಲಿ ಬೇಯಿಸಿ, ಬೆಣ್ಣೆ ಹಾಕಿದ ತರಕಾರಿ, ಬೇಯಿಸಿದ ಕಾಳು, ಹಸಿ ಹಣ್ಣು, ತರಕಾರಿಗಳಿಂದ ತಯಾರಿಸಿದ ಕೋಸಂಬರಿಗಳೂ ಹಗಲಿನ ಊಟಕ್ಕೆ ಬರುತ್ತವೆ. ಐಸ್‍ಕ್ರೀಮ್, ಸೇಬಿನ ಸೀಕಡುಬು (ಆಪಲ್ ಪೈ)-ಇವು ಊಟದ ಕೊನೆಯಲ್ಲಿ ತಿನ್ನುವ ಸಿಹಿ ತಿಂಡಿಗಳು (ಡೆಸ್ಸರ್ಟ್‍ಸ್), ಬಿಸಿಕಾಫಿ ಮುಖ್ಯ ಪಾನೀಯ. ಇಟಾಲಿಯನ್, ಚೀಣೀ ಫಲಾಹಾರಮಂದಿರಗಳು (ರೆಸ್ಟೋರಂಟ್ಸ್) ಮುಖ್ಯವಾದ ಎಲ್ಲ ಊರುಗಳಲ್ಲೂ ಇವೆ. ಅಮೆರಿಕದಲ್ಲಿ ನೆಲೆಸಿರುವ ಬಗೆಬಗೆ ಜನಾಂಗಗಳವರ ನಾನಾ ತೆರನ ಆಹಾರಗಳನ್ನು ಅಮೆರಿಕನ್ನರು ತಮ್ಮದಾಗಿಸಿಕೊಂಡಿದ್ದಾರೆ. ಆದ್ದರಿಂದಲೇ, ಗ್ರೀಕ್, ಜರ್ಮನ್, ಇಟಾಲಿಯನ್, ಚೀನೀ, ಹಂಗೇರಿಯನ್ ಮುಂತಾದ ತಿಂಡಿತಿನಿಸುಗಳನ್ನೂ ಅಲ್ಲಿ ತಿನ್ನಬಹುದು.


ಗ್ರೇಟ್ ಬ್ರಿಟನ್ :[ಸಂಪಾದಿಸಿ]

ಇಲ್ಲಿನ ಅಡಿಗೆಗಳು ಬಹು ಸರಳ. ನೀರಲ್ಲಿ ಬೇಯಿಸುವುದು, ಒಲೆಯ ಮೇಲೆ ಬೇಯಿಸುವುದು ಹುರಿಯುವುದು ಸಾಮಾನ್ಯ ವಿಧಾನಗಳು. ಆಹಾರಗಳ ಎಂದಿನ ನಿಜವಾದ ರುಚಿ, ವಾಸನೆಗಳೇ ಇವರಿಗೆ ಇಷ್ಟವಾದ್ದರಿಂದ ಹೆಚ್ಚಾಗಿ ಯಾವ ಮಸಾಲೆ ಪದಾರ್ಥಗಳನ್ನೂ ಸೇರಿಸುವುದಿಲ್ಲ. ಹೊತ್ತಾರೊಟಕ್ಕೆ ಹುರಿದ ಹಂದಿ ಮಾಂಸ, ಮೊಟ್ಟೆ, ಹೊಗೆಯಿಟ್ಟ (ಹ್ಯಾಡಾಕ್, ಕಿಪ್ಪರ್) ಮೀನುಗಳು ಪ್ರಿಯವಾದುವು. ಹಗಲೊಟಕ್ಕೆ ಹುರಿದ ಮಾಂಸ, ಬೇಯಿಸಿದ ತರಕಾರಿಗಳು; ಸಿಹಿ ರುಚಿಗೆ, ಹಣ್ಣಿನ ಸೀಕಡುಬು, ಮೊಟ್ಟೆ, ಹಾಲು ಪಾಯಸ (ಕಸ್ಟರ್ಡ್); ದನ, ಆಡು, ಹಂದಿಗಳ ಹುರಿದ ಮಾಂಸಗಳ ಜೊತೆಗೆ ಸೇಬು ಪಳಿದ್ಯ (ಆಪಲ್ ಸಾಸ್) ಇರುತ್ತದೆ. ಮಾಂಸ, ತರಕಾರಿಗಳನ್ನು ಒಟ್ಟಿಗೆ ಬೇಯಿಸಿದ ಲಾಂಕಾಷೈರ್ ಹಾಟ್‍ಪಾಟ್ ಹೆಸರಾದ್ದು. ಇಂಗ್ಲೆಂಡನಲ್ಲಿ ಹುರಿದ ಮೀನೂ ಆಲೂಗೆಡ್ಡೆ ದುಂಡುಚೂರುಗಳೂ ಎಲ್ಲರಿಗೂ ಬೇಕಾದವು. ಮೈದಾ, ಗೋಧಿ ರೊಟ್ಟಿಗಳು, ಬನ್ನು, ಹಣ್ಣಿನ ಸೀಕಡುಬುಗಳು, ಆವಿಯಲ್ಲಿ ಬೇಯಿಸಿದ ಸಿಹಿ ಕಡುಬುಗಳು ಹೆಚ್ಚಾಗಿ ಬಳಕೆಯಲ್ಲಿವೆ. ಕ್ರಿಸ್‍ಮಸ್ ಹಬ್ಬಕ್ಕೆ ದ್ರಾಕ್ಷಿ, ಸುಲ್ತಾನ, ಬೆರ್ರಿ ಮುಂತಾದ ಒಣಗಿದ ಹಣ್ಣುಗಳೂ ಜಿಡ್ಡು, ಸಕ್ಕರೆಗಳಿಂದ ಮಾಡಿದ ದ್ರಾಕ್ಷಿ ಕಡುಬೂ (ಪ್ಲಂ ಪುಡಿಂಗ್) ಇರುತ್ತವೆ. ಹಣ್ಣು, ಹಿಟ್ಟುಗಳಿಂದ ಕ್ರಿಸ್‍ಮಸ್ ಕೇಕ್ ತಯಾರಿಸಿ, ಮೇಲೆ ಬಾದಾಮಿ ಸರಿ (ಆಮಂಡ್ ಪೇಸ್ಟ್), ಸೀಪಾಕ (ಐಸಿಂಗ್) ಬಳಿದಿರುತ್ತಾರೆ. ಬೆಣ್ಣೆ ಹಾಕಿದ ಕಾಲುದೋಸೆಯನ್ನು (ಸ್ಕೋನ್) ಸಂಜೆಯ ಚಹದ ಜೊತೆಗೆ ತಿನ್ನುತ್ತಾರೆ. ಸ್ಕಾಟ್‍ಲೆಂಡಲ್ಲಿ ತೋಕೇಗೋದಿಯಿಂದ (ಓಟ್ಸ್) ಹುಗ್ಗಿ (ಪಾರಿಡ್ಜ್), ಕೇಕ್‍ಗಳನ್ನು ತಯಾರಿಸುತ್ತಾರೆ. ಐರ್ಲೆಂಡ್‍ನಲ್ಲಿ ಆಲೊಗೆಡ್ಡೆ, ಕೋಸುಗಳ ಬಳಕೆ ಹೆಚ್ಚು. ಕುರಿಮಾಂಸ, ಆಲೊಗೆಡ್ಡೆ, ಈರುಳ್ಳಿಗಳನ್ನು ಹಾಕಿ ನಿಧಾನವಾಗಿ ಬೇಯಿಸಿದ ಐರಿಷ್ ನೆನಗುದಿಲ (ಸ್ಟ್ಯೂ) ಹೆಸರಾದ್ದು. ಕೋರ್ರಾಜಿನ್ ಪಾಚಿಯಿಂದ ಗಿಜಿ (ಜೆಲ್ಲಿ) ಸಿಹಿತಿಂಡಿ ಮಾಡುತ್ತಾರೆ. ಹಾಲು ಬೆರೆಸಿದ ಬಿಸಿ ಚಹಾ ದೇಶದ ಎಲ್ಲ ಕಡೆಯಲ್ಲೂ ಜನಪ್ರಿಯ ಪಾನೀಯ.

ಆಸ್ಟ್ರೇಲಿಯ, ನ್ಯೂಜಿಲೆಂಡ್ :[ಸಂಪಾದಿಸಿ]

ಮುಖ್ಯವಾಗಿ ಇಂಗ್ಲೆಂಡಿನ ಆಹಾರಗಳೊಂದಿಗೆ ಕೆಲವು ತಮ್ಮವೇ ಆದ ಹೊಸ ಆಹಾರಗಳನ್ನು ಬಳಸುತ್ತಾರೆ. ಇದರ ಜೊತೆಗೆ, ಅಮೆರಿಕ, ಚೀನಗಳ ಪ್ರಭಾವವೂ ಇದೆ. ಅಡುಗೆಯ ವಿಧಾನ ಸರಳ. ಮಾಂಸ, ತರಕಾರಿಗಳೇ ಹೆಚ್ಚು. ಕಡಲ ಆಹಾರಗಳು ಜನಪ್ರಿಯ. ಬಾಡುತುಂಡಿನ (ಸ್ಟೀಕ್) ಜೊತೆಗೆ ಅಣಬೆ, ಮೋಳಿ (ಆಯಸ್‍ಟರ್), ಕೆಂಡದ ಮೇಲೆ ಸುಟ್ಟ ಬಾಡುತುಂಡು (ಗ್ರಿಲ್ಡ್ ಸ್ಟೀಕ್), ಜೊತೆಗೆ ಹುರಿದ ಮೊಟ್ಟೆ, ಹಂದಿಮಾಂಸಗಳನ್ನು ಹೆಚ್ಚು ಬಳಸುವರು. ಕೋಸಂಬರಿಗಳು, ತರಕಾರಿಗಳು ವರ್ಷವೆಲ್ಲ ಬಳಕೆಯಲ್ಲಿರುತ್ತವೆ. ಪವಲೋವಾ ಸೀಕಡುಬು, ಸೇಬು ಹೂ ಸೀಕಡುಬು (ಆಪಲ್ ಬ್ಲಾಸಂ ಪೈ) ಹೆಸರಾದವು. ಇವುಗಳಲ್ಲಿ ಹಿಟ್ಟಿನ ಹೂರಣದೊಳಗೆ, ಪ್ಯಾಶನ್ ಹಣ್ಣು, ಕೆನೆ, ಸೇಬು, ಮೊಟ್ಟೆ, ನಿಂಬೆ ರಸಗಳೂ ಇರುತ್ತವೆ. ನ್ಯೂಜಿಲೆಂಡ್‍ನ ಹಲ ತೆರನ ಕೇಕ್, ಅಟ್ಟಕಣಕ (ಪೇಸ್ಟ್ರಿ ), ಬಿಸ್ಕತ್ತುಗಳನ್ನು ತಿನ್ನುತ್ತಾರೆ.

ಕೆನಡ :[ಸಂಪಾದಿಸಿ]

ಇಲ್ಲಿ ನೆಲೆಸಿರುವ ಫ್ರಂಚ್, ಅಮೆರಿಕನ್, ಇಂಗ್ಲಿಷ್ ಜನರ ಆಹಾರಗಳಲ್ಲಿ ಅನೇಕ ಬಳಕೆಯಲ್ಲಿವೆ. ತರಕಾರಿ, ಹಣ್ಣು ಬೆರಸಿದ ಕೋಸಂಬರಿಗಳು, ಮೀನುಗಳು, ಗರಿಗರಿ ಬಿಸ್ಕತ್ತುಗಳು ಎಲ್ಲ ಕಡೆಗಳಲ್ಲೂ ರೂಢಿಯಲ್ಲಿವೆ. ಇವುಗಳ ಜೊತೆಗೆ ಮೇಪಲ್ ಗಿಡದ ಸಕ್ಕರೆ ಪಾನಕ ಹೆಚ್ಚು. ಮಾಂಸಾಹಾರದಲ್ಲಿ ಉಪ್ಪು ಹಾಕಿದ ಹಂದಿ ತೊಡೆ ಮಾಂಸ (ಗ್ಯಾಮನ್)-ಸಾಸಿವೆ, ಸಿಹಿಚಟ್ನಿ, ಅನಾನಸ್ ಹಣ್ಣುರಸ ಮುಂತಾದವು ಸೇರಿದ್ದೊ ಹುರಿದ ಟರ್ಕಿಕೋಳೀ, ಚೆಸ್‍ನಟ್ ಹಾಕಿದ್ದೂ ಹೆಸರಾಗಿವೆ. ಕಿತ್ತಳೆಹಣ್ಣು, ತಕ್ಕಾಳಿ (ಟೊಮ್ಯಾಟೋ), ಪೇರುಹಣ್ಣುಗಳನು ಹಾಲ್ಮೂಲಂಗಿ (ಲೆಟಿಸ್) ಎಲೆಗಳಲ್ಲಿಟ್ಟು ತಿನ್ನುತ್ತಾರೆ. ನೀಲಗಾಯಿ (ಬ್ಲೊ ಬೆರಿ) ಕುಂಬಳಕಾಯಿ, ಲೆಮನ್ ಷಿಫಾನ್ ಸೀಕಡುಬು ಪ್ರಿಯವಾದ ಸಿಹಿತಿಂಡಿಗಳು.

ದಕ್ಷಿಣ ಆಫ್ರಿಕ :[ಸಂಪಾದಿಸಿ]

ಕುರಿಮಾಂಸದ ಸಣ್ಣ ತುಂಡುಗಳು, ಈರುಳ್ಳಿ, ಮಸಾಲೆ ಪುಡಿ, ಕಾಡಿ (ವಿನೆಗರ್), ಚಟ್ನಿ, ನಿಂಬೆ ಎಲೆಗಳನ್ನು ಹಾಕಿದ ಸೊಸಾಟೀಸ್ ತಿಂಡಿ ಹೆಸರಾಗಿದೆ. ಇದರ ಜೊತೆಗೆ ಅನ್ನ, ಚಟ್ನಿ ತಿನ್ನುತ್ತಾರೆ. ಬೊಬೋಟಿ ಎನ್ನುವುದು ಮಾಂಸದ ಕೀಮಾ, ಈರುಳ್ಳಿ, ಬಾದಾಮಿ, ದ್ರಾಕ್ಷಿ, ಮಸಾಲೆ ಪುಡಿಗಳೊಂದಿಗೆ ಬೆಂದ ಮೊಟ್ಟೆ ಬೆರೆತ ಹಾಲು. ಹಿಟ್ಟನ್ನು ಬಿಸ್ಕತ್ತಿನಂತೆ ಕರಿದು, ಆಮೇಲೆ ಸಕ್ಕರೆ ಪಾಕದಲ್ಲಿ ಅದ್ದಿರುವುದು ಕುರಿಸ್ಟರ್ಸ್. ಫ್ರಾನ್ಸ್ : ಇಲ್ಲಿ ಅಡಿಗೆ ಒಂದು ವಿಶೇಷ ಕಲೆ. ಸೊಪ್ಪುಗಳು, ಸಂಬಾರ ದಿನಸಿಗಳು, ದ್ರಾಕ್ಷಾಸುರೆಗಳು ತಿಂಡಿ ತಿನಿಸುಗಳ ಜೊತೆ ಸಾಕಷ್ಟು ಸೇರುತ್ತವೆ. ಫ್ರೆಂಚ್ ತಿಳಿಸಾರು ಹೆಸರು ಪಡೆದಿದೆ. ಈರುಳ್ಳಿ ತಿಳಿಸಾರಿನಲ್ಲಿ, ಬೆಣ್ಣೆಯಲ್ಲಿ ಬೇಯಿಸಿದ ಈರುಳ್ಳಿ, ಮಸಾಲೆ ಪದಾರ್ಥ, ಮಾಂಸ ಬೇಯಿಸಿದ ಕಟ್ಟೂ (ಸ್ಟಾಕ್) ಇರುತ್ತವೆ. ಬಗೆಬಗೆಯ ಮೀನುಗಳಿಂದಾದ ಮಾರ್ಸೇಲ್ಸ್ ಮೀನಿನ ತಿಳಿಸಾರು ಜನಪ್ರಿಯ. ಮೈದಾ, ಗೋಧಿ, ಚಿಟ್ಟಗೋಧಿ (ರೈ) ಮುಂತಾದುವುಗಳಿಂದ ಬಗೆಬಗೆಯಾಗಿ ತಯಾರಿಸಿದ ನೀಳ ರೊಟ್ಟಿಗಳು ಫ್ರಾನ್ಸ್‍ನಲ್ಲಿ ಎಲ್ಲೆಲ್ಲೂ ಬಳಕೆಯಲ್ಲಿವೆ. ಮಾಂಸವನ್ನು ದ್ರಾಕ್ಷಿರಸಗಳಲ್ಲೂ ಬೇಯಿಸುವ ಪದ್ಧತಿಯಿದೆ. ಹಸಿ ತರಕಾರಿ, ಎಣ್ಣೆ, ಕಾಡಿ ಬೆರೆಸಿದ ಕೋಸಂಬರಿಗಳು ಜನಪ್ರಿಯ. ಬೇಯಿಸಿದ, ಸುಟ್ಟಹಿಟ್ಟಿನಂತೆ ಆಲೊಗೆಡ್ಡೆಯಿಂದ ಮಾಡಿದ ಅನೇಕ ತೆರನ ಆಹಾರಗಳು ರೂಢಿಯಲ್ಲಿವೆ. ಸಿಹಿತಿಂಡಿಗಳಲ್ಲಿ ಬಹು ಅಲಂಕಾರವಾಗಿ ತಯಾರಿಸಿದ ಅಟ್ಟಕಣಕ, ಕೇಕ್‍ಗಳ ಬಳಕೆ ಹೆಚ್ಚು. ಮೊಟ್ಟೆಗಳನ್ನು ಬಗೆಬಗೆಯಾಗಿ ಬಳಸುವುದು ಫ್ರೆಂಚರಿಗೆ ಚೆನ್ನಾಗಿ ಗೊತ್ತು. ಇವರು ಹಾಲನ್ನು ಅಷ್ಟಾಗಿ ಬಳಸರು. ಕಿಲಾಟದಲ್ಲಿ ನೂರಾರು ಬಗೆಗಳಿವೆ. ಇವುಗಳಲ್ಲಿ ಬೂಷ್ಟಿನಿಂದಾದ ಕ್ಯಾಮೆಂಬರ್ಟ್, ರೋಕಿಫರ್ಟ್ ಕಿಲಾಟಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕಾಫಿ, ಚಾಕೊಲೇಟ್ ಮುಖ್ಯವಾದ ಬಿಸಿಪಾನೀಯಗಳು, ಕಾಫಿಗೆ ಚಿಕೋರಿ ಬೆರೆಸುವುದೂ (ಫ್ರೆಂಚ್ ಕಾಫಿ) ಫ್ರೆಂಚರ ಹೆಚ್ಚಳಿಕೆ.

ನೆದರ್‍ಲೆಂಡ್ಸ್ :[ಸಂಪಾದಿಸಿ]

ಇವರ ಮುಖ್ಯ ಅಡಿಗೆಗಳು ಒಳ್ಳೆಯ ಪುಷ್ಟಿಕರ ವಸ್ತುಗಳಿಂದ ತಯಾರಿಸಿದವು. ಸಂಜೆಯ ಊಟವೇ ಮುಖ್ಯವಾದದ್ದು, ದೊಡ್ಡದು. ಕಿಲಾಟ ಮತ್ತು ಬೇಯಿಸಿದ ಮೊಟ್ಟೆಗಳನ್ನು ಹೊತ್ತಾರೂಟದಲ್ಲಿ ತೆಗೆದುಕೊಳ್ಳುವರು. ಜೊತೆಯಲ್ಲಿ ಬಗೆಬಗೆಯ ರೊಟ್ಟಿಗಳು, ಬೆಣ್ಣೆ, ಹಣ್ಣಿನ ಮುರಬ್ಬಗಳನ್ನು ತಿನ್ನುವರು. ಹಗಲೂಟಕ್ಕೆ ರೊಟ್ಟಿಯನ್ನು ಪದರಗಳಾಗಿ ಕತ್ತರಿಸಿ, ಅದರ ನಡುವೆ ಮಸಾಲೆ ಬಾಡು, ದನ ಇಲ್ಲವೇ ಹಂದಿಮಾಂಸ (ಸಾಸೇಜ್), ಹುರಿದ ಮೊಟ್ಟೆ ಇಟ್ಟು ಸಾಧಾರಣವಾಗಿ ಎಲ್ಲರೂ ತಿನ್ನುವರು. ರಾತ್ರಿ ಊಟಕ್ಕೆ ಮೊದಲು ಹುರುಳಿಕಾಯಿ ಇಲ್ಲವೇ ಬಟಾಣಿಕಾಳಿನ ತಿಳಿಸಾರು, ಅಮೇಲೆ ಮಾಂಸ ಇಲ್ಲವೇ ಮೀನು ಕಾಯಿಪಲ್ಯೆಗಳ ಭಕ್ಷ್ಯ, ಕೊನೆಯದಾಗಿ ಸಿಹಿ ಕೇಕ್ ಇಲ್ಲವೇ ಹಣ್ಣು; ಇವರ ಅಡುಗೆಯ ವಿಧಾನ ಸರಳ. ಅದರೆ ಹೊರ ದೇಶಗಳಲ್ಲಿ ಇವರ ಚಕ್ರಾಧಿಪತ್ಯ ಹಿಂದೆ ಇದ್ದ ಕಾರಣ, ಅನ್ನ, ಮಸಾಲೆ ಸಮಾನುಗಳ ಬಳಕೆಯೂ ಈಗ ಸೇರಿದೆ. ಆವಿಯಲ್ಲಿ ಬೇಯಿಸಿದ ತರಕಾರಿಗಳಿಗೆ, ಲವಂಗಪಟ್ಟೆ, ಜಾಯಿಕಾಯಿ ಸೇರಿಸುತ್ತಾರೆ. ಒಣ ಬಟಾಣಿ ಕಾಳು, ಹುರುಳಿಕಾಯಿ ಬೀಜಗಳ ಬಳಕೆ ಹೆಚ್ಚು. ಅವನ್ನು ರಾತ್ರಿ ನೆನೆಸಿಟ್ಟು, ಬೆಳಗ್ಗೆ ಬೇಯಿಸುತ್ತಾರೆ. ಬೀಟ್‍ಗಡ್ಡೆ ಸೇಬು, ಕೋಸು, ಇವನನ ಬೆಣ್ಣೆ, ಜಾಯಿಕಾಯಿ ಸೇರಿಸಿ ಬೇಯಿಸುತ್ತಾರೆ. ಮೀನುಗಳ ಸೇವನೆ ಧಾರಾಳ. ಹೆರ್ರಿಂಗ್, ಪ್ಲೈಸ್ ಜಾತಿಯ ಮೀನುಗಳು, ದನದ ಮಾಂಸ, ಹಂದಿಮಾಂಸ, ಕರುವಿನ ಬಾಡು (ವೀಲ್) ಎಲ್ಲರಿಗೂ ಪ್ರಿಯ. ಮೊಟ್ಟೆ, ಸಕ್ಕರೆ, ದ್ರಾಕ್ಷಿ, ಕಿಲಾಟ, ಲವಂಗ ಮುಂತಾದವನ್ನು ಸೇರಿಸಿ, ಹುದುಗೇಳಿಸಿದ ಹಿಟ್ಟಿನಿಂದ ಬಗೆಬಗೆ ರುಚಿಯ ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಹಾಲು ಸೇರಿಸದ ಚಹ, ಹಾಲು ಬೆರೆಸದ ಕಾಫಿ ಅಲ್ಲಿಯ ಜನರ ಬಿಸಿ ಪಾನೀಯಗಳು.

ಬೆಲ್ಜಿಯಂ :[ಸಂಪಾದಿಸಿ]

ಇಲ್ಲಿ ಮುಖ್ಯವಾದ ನೆರೆದೇಶಗಳಾದ ಫ್ರಾನ್ಸ್ ಮತ್ತು ಹಾಲೆಂಡ್‍ಗಳ ತಿಂಡಿತಿನಿಸುಗಳೇ ಹೆಚ್ಚು. ಆದರೂ ಕೆಲವು ತಮ್ಮವೇ ಆದ ಅಡುಗೆಗಳೂ ಇದೆ. ವಾಟರ್‍ಸಾಯ್ಲ್ ಎನ್ನುವುದು, ಕೋಳಿ ಬೇಯಿಸಿದ ನೀರೂ ಬಿಳಿ ದ್ರಾಕ್ಷಾರಸವೂ ಸೇರಿದ್ದು. ಇದೇ ತೆರನ ಮೀನಿನ ತಿಳಿಸಾರೂ ಉಂಟು. ಹಂದಿಮಾಂಸ, ಆಲೂಗೆಡ್ಡೆ, ಬೀರ್ ಸೇರಿಸಿ ಬೇಯಿಸಿದ್ದು, ಹಂದಿಮಾಂಸದ ಕೀಮ ಆಲೊಗೆಡ್ಡೆ, ಬಿಳಿ ದ್ರಾಕ್ಷಾರಸ ಇಲ್ಲವೇ ಬೀರ್‍ನಲ್ಲಿ ಬೇಯಿಸಿದ್ದು, ಮೊಲದ ಮಾಂಸ, ಪ್ರೂನ್ ಹಣ್ಣು, ದ್ರಾಕ್ಷಾರಸ ಹಾಕಿ ಬೇಯಿಸಿದ್ದು-ಇವೆಲ್ಲ ಜನಪ್ರಿಯ ಭಕ್ಷ್ಯಗಳು. ಚಿಕೋರಿ, ಸಲ್ಲಗೆಡ್ಡೆ (ಅಸ್ಪರಾಗಸ್). ಹಾಪ್ ಗಿಡದ ಸೊಪ್ಪು ಜನಪ್ರಿಯ ತರಕಾರಿಗಳು. ಚಿಕೋರಿ ಗೆಡ್ಡೆಯನ್ನು ಕೋಸಂಬರಿಯಾಗೂ ಮಾಂಸದ ಜೊತೆಯಲ್ಲೂ ತಿನ್ನುತ್ತಾರೆ. ಸಿಹಿಗಾಗಿ ಮೊಟ್ಟೆ, ಬೆಣ್ಣೆ, ಸಕ್ಕರೆಗಳೊಂದಿಗೆ, ಹುದುಗೇಳಿಸಿದ ಹಿಟ್ಟಿನಿಂದ ಮಾಡಿದ ದೋಸೆಗಳೂ ಕಿಲಾಟ. ಸಕ್ಕರೆ, ಬೆಣ್ಣೆ, ಮೊಟ್ಟೆ ಹಾಕಿ ಮಾಡಿದ ಅಟ್ಟಕಣಕಗಳನ್ನು ಬಳಸುತ್ತಾರೆ. ಬಿಳಿ ಮತ್ತು ಕೆಂಪು ಸೀಪಾಕ ಬಳಿದ ಬಿಸ್ಕತ್ತ್‍ಗಳನ್ನು ಸಂತ ನಿಕೋಲಾಸನ ಹಬ್ಬದಲ್ಲಿ ಎಲ್ಲರೂ ತಿನ್ನುತ್ತಾರೆ.

ಜರ್ಮನಿ :[ಸಂಪಾದಿಸಿ]

ಮಾಂಸಾಹಾರಗಳಿಗೆ ಸಿಹಿ ಚಟ್ನಿಗಳು, ಬೀರ್ ಬೆರೆಸಿದ ತಿಳಿಸಾರು, ಮಸಾಲೆ ಬಾಡು, ಕೋಸು ಮದ್ಯ (ಸಾವರ್ ಕ್ರಾಟ್), ತೋಕೆ ಗೋದಿ ಬ್ರೆಡ್ ಜರ್ಮನಿಯ ಆಹಾರದಲ್ಲಿ ಮುಖ್ಯವಾದುವು. ಬೀರ್ ಜೊತೆಗೆ ಪಟ್ಟೆ, ಆಲೂಗೆಡ್ಡೆ ಹಿಟ್ಟು, ನಿಂಬೆಹುಳಿ ಬೆರೆಸಿದ ಮಂದನಾದ ತಿಳಿಸಾರು ಹೆಸರಾಗಿದೆ. ಕಾರ್ಪ್, ಹೆರ್ರಿಂಗ್ ಮೀನುಗಳಿಗೆ, ಸಾಸಿವೆ, ಮೆಣಸು, ಕಾಡಿ ಬೆರಸಿ, ಉಪ್ಪಿನಕಾಯಿ ತೆರನ ಆಹಾರ ತಯಾರಿಸುತ್ತಾರೆ. ಹಂದಿ, ದನ, ಬಾತುಗಳ ಕರಿದ ಮಾಂಸಗಳೊಳಗೆ ಸೇಬು, ಚೆಸ್‍ನಟ್ ಬೀಜ, ಒಣ ದ್ರಾಕ್ಷಿ ಮುಂತಾದವನ್ನು ತುಂಬಿದ್ದು ಜನಪ್ರಿಯ ಭಕ್ಷ್ಯ. ಕಿತ್ತಳೆ ಕೇಕ್, (ರಮ್ ಸೀಪಾಕ ಮಾಡಿದ್ದು), ಜಾಕಾಯಿ ಬೆರೆಸಿದ ಅಟ್ಟ ಕಣಕ, ಕಿಲಾಟ ಬೆರೆಸಿದ ಬಿಸ್ಕತ್, ಮುಂತಾದವು ಇಷ್ಟವಾದ ಸಿಹಿತಿಂಡಿಗಳು. ಕಿಲಾಟಗಳಲ್ಲಿ ಲಿಂಬರ್ಗರ್ ಮತ್ತು ಟೆಲ್ನಿಟರ್‍ಗಳನ್ನು ಎಲ್ಲರೂ ಬಳಸುವರು. ಊಟದ ಜೊತೆಗೆ ಹೆಚ್ಚಾಗಿ ಬೀರ್ ಸೇವಿಸುವರು. ಕಾಫಿ ಜನಪ್ರಿಯ ಬಿಸಿ ಪಾನೀಯ.


ಆಸ್ಟ್ರಿಯ :[ಸಂಪಾದಿಸಿ]

ಇಲ್ಲಿನ ತಿಳಿ ಸಾರುಗಳು ಹೆಸರಾದವು. ಅವುಗಳಲ್ಲಿ ಬಗೆಬಗೆ ಪದಾರ್ಥಗಳು ಬೀಳುವುದರಿಂದ ಕೇವಲ ಅವನ್ನೇ ಊಟದಲ್ಲಿ ತಿನ್ನಬಹುದು. ಕೀಮಾ ಉಂಡೆ, ಹಿಟ್ಟಿನ ಉಂಡೆ, ಅನ್ನ, ಶೇವಿಗೆ (ನೊಡ್ಲ್‍ಸ್) ಮುಂತಾದವು ತಿಳಿ ಸಾರಿನಲ್ಲಿ ಸೇರುತ್ತವೆ. ನದೀಮೀನು, ಉಪ್ಪುಮೀನು, ಜನಪ್ರಿಯವಾದುವು. ಆಹಾರ ಪದಾರ್ಥಗಳಿಗೆ ಸಿಹಿ ಮೆಣಸನ್ನೂ (ಪೆಪ್ರಿಕ) ಹೆಚ್ಚಾಗಿ ಬಳಸುತ್ತಾರೆ. ಹಂದಿಮಾಂಸ, ಕರುವಿನ ಮಾಂಸ, ಜಿಂಕೆ ಮಾಂಸ ಎಲ್ಲರೂ ತಿನ್ನುವರು. ಮೊಟ್ಟೆ, ರೊಟ್ಟಿಚೂರುಗಳನ್ನು ಹಿಟ್ಟು ಸವರಿದ ತೆಳ್ಳನೆಯ ಮಾಂಸದ ತುಂಡುಗಳಿಗೆ ಬಳಿದು, ಬೆಣ್ಣೆಯಲ್ಲಿ ಕರಿದು ಬೇಗನೇ ಬಿಸಿಬಿಸಿಯಾಗಿ ತಿನ್ನುವುದು ಪ್ರಸಿದ್ದ ವೀನರ್ ಪ್ನಿಟ್ಸೆಲ್. ಕೋಳಿಯ ಮಾಂಸಕ್ಕಿಂತ ಬಾತುಮಾಂಸದ ಬಳಕೆ ಹೆಚ್ಚು. ಇವುಗಳ ಜೊತೆಗೆ ಸೌತೆಕಾಯಿ, ಕೋಸಂಬರಿ ಇರುತ್ತದೆ. ಇಲ್ಲಿನ ಅಟ್ಟಕಣಕದ ಸಿಹಿತಿಂಡಿಗಳು ಜಗತ್ತಿಗೇ ಹೆಸರಾದವು. ಬಹು ತೆಳ್ಳನೆಯ ಹಿಟ್ಟಿನ ಕಣಕಕ್ಕೆ ರೊಟ್ಟಿಯ ಚೂರು, ಸೇಬಿನ ಹಣ್ಣಿನ ಹೋಳುಗಳು, ಒಣದ್ರಾಕ್ಷಿ, ಸಕ್ಕರೆ, ಲವಂಗ ಪಟ್ಟೆ ಮುಂತಾದವನ್ನು ಹೂರಣವಾಗಿಟ್ಟು, ಸುರುಳಿ ಸುತ್ತಿ ಒಲೆಯಲ್ಲಿ ಬೇಯಿಸಿ, ತುಂಡುಗಳಾಗಿ ಕತ್ತಿರಿಸುವುದು, ಹೆಸರಾದ ಆಪಲ್ ಸ್ಟ್ರೊಡೆಲ್, ಮೊಸರು, ಮೊಟ್ಟೆ, ಸಕ್ಕರೆ, ಒಣದ್ರಾಕ್ಷಿ, ಹುದುಗು ಬೆರೆಸಿದ ಹಿಟ್ಟು, ಇವುಗಳಿಂದ ಬಗೆಬಗೆಯ ಕೇಕ್ ಮುಂತಾದವನ್ನು ಮಾಡುತ್ತಾರೆ. ಕಾಫಿ, ಚಾಕಲೇಟುಗಳ ಮೇಲೆ ಸಿಹಿನೊರೆ ಕೆನೆ ಹಾಕಿದವು ಪ್ರಿಯವಾದ ಬಿಸಿ ಪಾನೀಯಗಳು.

ಹಂಗೆರಿ :[ಸಂಪಾದಿಸಿ]

ಇಲ್ಲಿ ತಿಳಿಸಾರು, ಮೀನು, ಮಾಂಸದ ಅಡಿಗೆಗಳಿಗೆ ಕೆಂಪು ಬಣ್ಣ ಕೊಡಲು, ಹೆಚ್ಚಾಗಿ ಅಷ್ಟೇನೊ ಖಾರವಲ್ಲದ ಸಿಹಿ ಮೆಣಸಿನ ಪುಡಿ ಉದುರಿಸುತ್ತಾರೆ. ಗುಲಾಷ್ ಎಂಬುದು ಹೆಸರುವಾಸಿ ಅಡಿಗೆ. ಮಾಂಸ, ಈರುಳ್ಳಿ, ಸಿಹಿ ಮೆಣಸ್ಸು, ತಕ್ಕಾಳಿ, ಸೀಮೆಸೋಂಪು (ಕ್ಯಾರವೇ) ಬೀಜ, ಇವನ್ನು ಒಟ್ಟಿಗೆ ಬೇಯಿಸಿ, ಜೊತೆಗೆ ಆಲೂಗೆಡ್ಡೆ, ಅನ್ನ ಬಡಿಸುತ್ತಾರೆ. ಚೆರ್ರಿ, ಕೇಕ್, ಗಸೆಗಸೆ ಹಾಕಿದ ಸಿಹಿತಿಂಡಿಗಳು ಜನಪ್ರಿಯ.

ಪೋಲೆಂಡ್ :[ಸಂಪಾದಿಸಿ]

ಇಲ್ಲಿನ ಆಹಾರ ಇತರ ಯೂರೋಪು ದೇಶಗಳಂತಿಲ್ಲ. ಇಲ್ಲಿನ ಅಡುಗೆಯ ವಿತರಣೆ ಶತಮಾನಗಳ ಕಾಲದಿಂದ ಬಂದದ್ದು. ಸೌತೆಕಾಯಿ, ಮೊಸರು ಹಾಕಿದ ತಿಳಿಸಾರು, ಮೀನು, ಅನ್ನ, ಸಬ್ಬಸಿಗೆ (ಡಿಲ್) ಬೀಜ ಸೇರಿಸಿ ಬೇಯಿಸಿದ ಅಡಿಗೆ-ಇವನ್ನು ಎಲ್ಲರೂ ತಿನ್ನುವರು. ಇದಲ್ಲದೆ ದನ, ಹಂದಿ, ಜಿಂಕೆಗಳ ಮಾಂಸ ಜನಪ್ರಿಯ. ಕೋಸು ಮದ್ಯ, ಮಾಂಸ, ಅಣಬೆ, ಸೇಬಿನ ಹಣ್ಣು, ತಕ್ಕಾಳಿ ಸೇರಿದ, ಪ್ರಸಿದ್ಧ ಅಡಿಗೆ ಬೈಗಾಸ್, ಹಿಟ್ಟಿನ ಉಂಡೆ, ಮೀನು, ಕಿಲಾಟ, ಸಿಹಿ ಮೆಣಸು ಬೆರೆಸಿದ್ದು ಇನ್ನೊಂದು ವಿಶೇಷ ಅಡುಗೆ. ಬಗೆಬಗೆಯ ಕಾಯಿಪಲ್ಯಗಳು, ಸಿಹಿತಿಂಡಿಗಳು, ಕೇಕುಗಳನ್ನು ಬಳಸುವರು. ಹಾಲಿಲ್ಲದ ಕಾಫಿ, ಚಹ ಜನಪ್ರಿಯ ಬಿಸಿ ಪಾನೀಯಗಳು.

ಇಟಲಿ :[ಸಂಪಾದಿಸಿ]

ಬೇರೆ ಬೇರೆ ಭಾಗಗಳಲ್ಲಿ ತರಾತೆರನ ಅಡುಗೆಗಳು ಬಳಕೆಯಲ್ಲಿವೆ. ಬೋಲೋನಲ್ಲಿ ಶೇವಿಗೆಯಂಥ ಪದಾರ್ಥ (ಸ್ಪ್ಯಾಗೆಟಿ) ಕೇಮು ಮಾಂಸ, ತಕ್ಕಾಳಿ ಅಣಬೆ ಬೆರೆಸಿದ್ದು —ತಿನ್ನುತ್ತಾರೆ. ಕಾಯಿಪಲ್ಯೆ, ಕಿಲಾಟ ಬೆರೆಸಿದ ತಿಳಿ ಸಾರು, ಮೊಟ್ಟೆ, ಹಿಟ್ಟು, ರವೆ, ಆಲೂಗೆಡ್ಡೆ ಹಿಟ್ಟು ಹಾಕಿದ, ಶೇವಿಗೆಯಂತಿರುವ ಪಾಸ್ಟಾಸ್ (ಬೇರೆ ಬೇರೆ ಆಕಾರಗಳದ್ದು) ಎಲ್ಲರೂ ಸೇವಿಸುತ್ತಾರೆ. ಹಿಟ್ಟಿನ ಉದ್ದನೆಯ ಕಣಕದಲ್ಲಿ ಕೀಮೂ ಹೂರಣ ಇಟ್ಟು ಮಾಡುವುದೇ ರಾವಿಯೋಲಿ. ಅನ್ನವನ್ನು ಬೆಣ್ಣೆ, ಕೇಸರಿ, ಕಿಲಾಟಗಳೊಂದಿಗೆ ಬೇಯಿಸುತ್ತಾರೆ. ಗೆಡ್ಡೆಗಳು, ಹುರುಳಿಕಾಯಿ, ಬಟಾಣಿ, ಸೋರೆಕಾಯಿ ತೆರನ ಕಾಯಿಗಳು, ದಪ್ಪ ಮೆಣಸಿನ ಕಾಯಿ ಮುಂತಾದ ತರಕಾರಿಗಳನ್ನು ದಂಡಿಯಾಗಿ ಬಳಸುತ್ತಾರೆ. ಎಣ್ಣೆ, ಕಾಡಿ ಹಾಕಿ ಇವುಗಳಿಂದ ಪಚಡಿಗಳನ್ನು (ಸಾಲಡ್ಸ್) ತಯಾರಿಸುತ್ತಾರೆ. ನೇಪಲ್ಸ್‍ನಲ್ಲಿ, ದಪ್ಪ ಚಪಾತಿಯಂಥ ರೊಟ್ಟಿಯ ಮೇಲೆ ತಕ್ಕಾಳಿ, ಮಾಂಸ, ಸೊಪ್ಪು, ಮೆಣಸಿನ ಪುಡಿ, ಕಿಲಾಟ ಹಾಕಿ ಬೇಯಿಸಿದ ಪಿಸ್ಸಾ ಅಡುಗೆ ಹೆಸರು ಪಡೆದಿದೆ. ಬಗೆಬಗೆಯ ಮೀನುಗಳು ಸೀಗಡಿ, ಕಪ್ಪೆ ಚಿಪ್ಪಿನ ಪ್ರಾಣಿಗಳ ತೆರನ ಕಡಲ ಆಹಾರಗಳು ಹೆಚ್ಚು ಬಳಕೆಯಲ್ಲಿವೆ. ದನ, ಕುರಿ, ಕೋಳಿ, ಹಂದಿ ಮಾಂಸಾಹಾರಗಳನ್ನು ಹುರಿಯುವುದು, ಕೆಂಡದ ಮೇಲೆ ಬೇಯಿಸುವುದು; ಒಲೆಯ ಮೇಲೆ ಬೇಯಿಸುವುದು ಸಾಧಾರಣ ಪದ್ಧತಿಗಳು. ಊಟದ ಜೊತೆಗೆ ಸಿಹಿ ತಿಂಡಿಗಳನ್ನು ಬಳಸುವುದು ಅಪರೂಪ. ಅದಕ್ಕೆ ಬದಲು ಹಣ್ಣುಗಳ ಸೇವನೆ ಹೆಚ್ಚು.. ಬಿಸಿ ಕಾಫಿ ಜನಪ್ರಿಯ. 

ಸ್ಪೇನ್ :[ಸಂಪಾದಿಸಿ]

ಇಲ್ಲಿನ ಆಹಾರಗಳಲ್ಲಿ ಮಸಾಲೆ ಸಾಮಾನುಗಳು, ಬೆಣ್ಣೆ ಹೆಚ್ಚು. ಅಡುಗೆಗೆ ಬೆಳ್ಳುಳ್ಳಿ, ಎಣ್ಣೆ, ಮೆಣಸಿನ ಕಾಯಿ, ಸಿಹಿಮೆಣಸು, ಜೀರಿಗೆ-ಇವನ್ನು ಹೆಚ್ಚಾಗಿ ಹಾಕುವರು. ಕೋಳಿ, ಸಿಗಡಿ, ಏಡಿ, ಮೀನುಗಳು, ತರಕಾರಿಗಳು, ಅಕ್ಕಿ ಇವನ್ನೆಲ್ಲ ಬೆರೆಸಿ, ಬೆಳ್ಳುಳ್ಳಿ, ಕೇಸರಿ ಹಾಕಿ ಬೇಯಿಸಿದ್ದು ಪಯೆಲ್ಲ, ತಕ್ಕಾಳಿ, ಮೆಣಸಿನ ಕಾಯಿ ಹಾಕಿ ಅಡುಗೆಗಳಿಗೆ ಬಣ್ಣ ಕಟ್ಟುತ್ತಾರೆ. ತಿಳಿಸಾರುಗಳಿಗೆ ಅನೇಕ ಕಾಯಿಪಲ್ಯೆಗಳು, ಅನ್ನ, ಶೇವಿಗೆ, ಕೀಮಾ ಮಾಂಸಗಳೂ ಸೇರುತ್ತವೆ. ಕೋಳಿ, ಹಂದಿ, ಕುರಿಗಳ ಮಾಂಸ ಎಲ್ಲರೂ ಬಳಸುತ್ತಾರೆ. ಹಸಿ ಇಲ್ಲವೇ ಬೇಯಿಸಿದ ತರಕಾರಿಗಳಿಗೆ ಆಲಿವ್ ಎಣ್ಣೆ, ಕಡಿ ಇವನ್ನು ಹಾಕಿ ಮಾಡಿದ ಕೋಸಂಬರಿಗಳು, ಆಲಿವ್‍ಕಾಯಿ ಉಪ್ಪಿನಕಾಯಿ ಜನಪ್ರಿಯವಾದವು. ಊಟದಲ್ಲಿ ಸಿಹಿತಿಂಡಿ ಇರುವುದಿಲ್ಲ. ಆದರೆ ಸಕ್ಕರೆ ಹಾಕಿದ ಹಣ್ಣು ತಿನ್ನುತ್ತಾರೆ.

ಪೋರ್ಚುಗಲ್ :[ಸಂಪಾದಿಸಿ]

ಇಲ್ಲಿನ ಆಹಾರ ಸ್ಪೇನ್ ದೇಶದ್ದನ್ನೇ ಹೋಲಿದರೂ ಇನ್ನೂ ಸರಳ. ಬಗೆಬಗೆಯಾಗಿ ಹುರಿದ ಮೊಟ್ಟೆ ಹೆಚ್ಚು ಬಳಕೆಯ ಆಹಾರ. ಕಿತ್ತಳೆ, ಸೌತೆಕಾಯಿ, ದ್ರಾಕ್ಷಿ ಹಣ್ಣುಗಳನ್ನು ಊಟ ಮಾಡುವಾಗ ತಿನ್ನುತ್ತಾರೆ.

ಮೆಕ್ಸಿಕೊ :[ಸಂಪಾದಿಸಿ]

ಇಲ್ಲಿನ ಅಡುಗೆಗಳು ಸ್ಪೇನ್ ದೇಶದ ಅಡುಗೆಗಳಂತಿದ್ದರೂ ಮೆಣಸಿನ ಕಾಯಿ ಖಾರ ಹೆಚ್ಚು. ಚಪಾತಿ ಹಾಗೆ ಗೋಧಿ ಹಿಟ್ಟಿನಿಂದ ಟೊರ್ಟುಲ್ಲ ರೊಟ್ಟಿ ಸಾಮಾನ್ಯ ಬಳಕೆಯಲ್ಲಿದೆ. ಇದರೊಳಗೆ ಕೀಮಾ ಮಾಂಸ, ಈರುಳ್ಳಿ, ಕಿಲಾಟಗಳನ್ನು ಬೆರೆಸಿ, ಮೇಲೆ ಟೊಮ್ಯಾಟೊ ಚಟ್ನಿ ಇಟ್ಟು ಬೇಯಿಸಿದ್ದೇ ಎಂಕೊಲೆಡೋಸ್. ಇದನ್ನು ಜಿಡ್ಡಿನಲ್ಲಿ ಹುರಿದರೆ ಟೊಸ್ಟಾಡೊ ಆಗುತ್ತದೆ. ಮುಸುಕಿನ ಜೋಳದ ಹಿಟ್ಟು, ಕೀಮಾ ಮಾಂಸ, ಮೆಣಸಿನಕಾಯಿಗಳಿಂದ ಮಾಡಿದ ಕಡುಬಿನಂತೆ ಆವಿಯಲ್ಲಿ ಬೇಯಿಸಿದ ಪದಾರ್ಥ ಹೆಸರಾದ ಟಮಾಲೆಗಳು. ದಪ್ಪ ಹುರುಳಿಕಾಯಿ, ಅನ್ನ ಮೆಕ್ಸಿಕನ್ನರ ಮುಖ್ಯ ಆಹಾರ. ಮಾವು, ಪಪಾಯಿ ಬಳಕೆಯಲ್ಲಿರುವ ಹಣ್ಣುಗಳು. ಚಾಕೊಲೇಟ್ ಜನಪ್ರಿಯ ಪಾನೀಯ.

ಸ್ಕಾಂಡಿನೇವಿಯ :[ಸಂಪಾದಿಸಿ]

ಶೀತ ವಾತಾವರಣ, ಕಡಲ ಸಾಮಿಪ್ಯ, ವರ್ಷದ ಕೆಲವೇ ತಿಂಗಳಲ್ಲಿ ಬೆಳೆ ಬರುವುದು-ಇವು ಇಲ್ಲಿನ ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರಿವೆ. ನಾರ್ವೆಯಲ್ಲಿ ಮೀನುಗಳು, ಉಪ್ಪು ಹಾಕಿದ ಮಾಂಸಗಳು, ಹೊಗೆ ಹಿಡಿಸಿದ ಮೀನಿನ ಮಾಂಸಗಳು, ಬಳಕೆಯಲ್ಲಿವೆ. ಚಿಟ್ಟಗೋಧಿ ಹಿಟ್ಟಿನಿಂದ ಮಾಡಿದ ರೊಟ್ಟಿಗಳನ್ನು ಹೆಚ್ಚು ತಿನ್ನುತ್ತಾರೆ. ಸ್ವೀಡನ್‍ನಲ್ಲಿ ದಂಡಿಯಾಗಿ ಸಿಗುವ ಹೆರ್ರಿಂಗ್ ಮೀನೇ ಮುಖ್ಯ ಆಹಾರ. ಇದಲ್ಲದೆ ಸೀಗಡಿ, ಕುರಿಯ ಮಾಂಸಗಳು ಬಳಕೆಯಲ್ಲಿವೆ. ಕೇಕಿನಂತೆ ಮೆತುವಾದ ಲಿಂಪಾ ರೊಟ್ಟಿ ಜನಪ್ರಿಯ. 

ಡೆನ್‍ಮಾರ್ಕ್ :[ಸಂಪಾದಿಸಿ]

ತಿಳಿಸಾರು ಕೆಲವು ವೇಳೆ ಮುಖ್ಯ ಆಹಾರವಾಗುತ್ತದೆ. ಇದರಲ್ಲೇ ಹಂದಿ ಮಾಂಸ, ಬಟಾಣಿ ಬೇಳೆ, ಹಿಟ್ಟಿನ ಉಂಡೆ, ಕೀಮಾ ಮಾಂಸದ ಉಂಡೆ ಸೇರುತ್ತವೆ. ಮಜ್ಜಿಗೆಗೆ ಅನ್ನ, ನಿಂಬೆ ರಸ, ಲವಂಗಪಟ್ಟೆ, ಬಾದಾಮಿ ಬೀಜ ಹಾಕಿ ಒಂದು ಬಗೆಯ ಸಿಹಿ ತಿಳಿಸಾರು ಮಾಡುತ್ತಾರೆ. ಮೀನುಗಳನ್ನು ದಂಡಿಯಾಗಿ ತಿನ್ನುತ್ತಾರೆ. ಕಾಡ್, ಮ್ಯಾಕೆರೆಲ್, ಪ್ಲೈಸ್, ಸಾಮನ್ ಮೀನುಗಳೇ ಹೆಚ್ಚು. ದನ, ಕರುಗಳ, ಕುರಿಗಳ ಮಾಂಸಗಳನ್ನು ಒಲೆಯಮೇಲೆ ಬೇಯಿಸುತ್ತಾರೆ. ಕೋಳಿ, ಬಾತುಗಳ ಮಾಂಸ ಬಳಕೆಯಲ್ಲಿವೆ. ಕರಿದ ಬಾತಿನ ಮಾಂಸದ ಜೊತೆಗೆ ಕೆಂಪು ಕೋಸು, ಕೆಂಪು ದ್ರಾಕ್ಷಿ ಹಾಕುತ್ತಾರೆ. ಬೇಯಿಸಿದ ಆಲೊಗೆಡ್ಡೆಗೆ ಸಕ್ಕರೆ ಬಳಿದು ಬೆಣ್ಣೆಯಲ್ಲಿ ಹುರಿಯುತ್ತಾರೆ. ಸೌತೆಕಾಯಿ, ಬೀಟ್‍ಗೆಡ್ಡೆಗಳ ಕೋಸಂಬರಿ, ಸೇಬು ಹಣ್ಣಿನ ಕೇಕ್, ದೋಸೆ ಜನಪ್ರಿಯವಾದುವು. ಹುದುಗೇಳಿಸಿದ ಹಿಟ್ಟಿಗೆ ಬೆಣ್ಣೆ, ಬಾದಾಮಿ ಬೀಜದ ಹಿಟ್ಟು, ಸುವಾಸನೆಗಾಗಿ ವನಿಲ ಸುಗಂಧಸಾರ, (ಎಸೆನ್ಸ್), ಕೆನೆ, ಪ್ರೂನ್ ಹಣ್ಣುಗಳನ್ನು ಸೇರಿಸಿ ತಯಾರಿಸಿದ ಡೇನಿಶ್ ಅಟ್ಟಕಣಕದ ಸಿಹಿ ತಿಂಡಿಗಳು ಪ್ರಪಂಚಕ್ಕೆ ಹೆಸರಾದುವು. ಇವನ್ನು ಹೊತ್ತಾರೂಟಕ್ಕೆ ಬಳಸುತ್ತಾರೆ. ಜೊತೆಗೆ ತೆಳ್ಳಗೆ ಕತ್ತರಿಸಿದ ನೀಲಿ ಕಿಲಾಟವನ್ನೂ ತಿನ್ನುತ್ತಾರೆ.

ಗ್ರೀಸ್ :[ಸಂಪಾದಿಸಿ]

ಕುರಿಮಾಂಸ ಇಲ್ಲಿನ ಎಲ್ಲರಿಗೂ ಬೇಕಾದ ಆಹಾರ. ಇದನ್ನು ಕೆಂಡದ ಮೇಲೆ ಬೇಯಿಸುವುದೇ ರೂಢಿ. ಈಸ್ಟರ್ ಹಬ್ಬದಲ್ಲಿ ಪೂರ್ತಿ ಕುರಿಯ ದೇಹವನ್ನೇ ಸುಡುತ್ತಾರೆ. ಮಾಂಸದ ತುಂಡುಗಳನ್ನು ಎಣ್ಣೆಯಲ್ಲಿ ಹುರಿದು, ಜೊತೆಗೆ ಈರುಳ್ಳಿ, ಸೊಪ್ಪುಗಳನ್ನು ಬೇಯಿಸಿ ಅನ್ನದ ಜೊತೆಗೆ ಕೊಡುವುದು ಸೌಲೇಕಿಯಾ. ಕೀಮಾ ಮಾಂಸ, ಆಲೂಗೆಡ್ಡೆ ಕಿಲಾಟಗಳನ್ನು ಪದರಪದರವಾಗಿಟ್ಟು ಒಲೆಯಲ್ಲಿ ಬೇಯಿಸಿ ತಯಾರಿಸುವುದೇ ಮಸಾಕಾ. ಕೋಳಿಮಾಂಸ ಬೇಯಿಸಿದ ನೀರು, ಅನ್ನ, ಮೊಟ್ಟೆ, ನಿಂಬೆರಸಗಳಿಂದ ಮಾಡುವ ತಿಳಿಸಾರು ಜನಪ್ರಿಯ. ಆಲಿವ್ (ಇಪ್ಪೆ) ಎಣ್ಣೆ, ಎಲ್ಲರೂ ಬಳಸುವರು. ಬೇಯಿಸಿದ ಮೀನು, ಈರುಳ್ಳಿ, ತಕ್ಕಾಳಿ, ಬೆಳ್ಳುಳ್ಳಿ ಹಾಕಿದ ತಿಂಡಿ ಹೆಸರುವಾಸಿ. ಕಡಲ ಆಹಾರ ಪದಾರ್ಥಗಳು ಹೆಚ್ಚು ಬಳಕೆಯಲ್ಲಿವೆ. ಟರ್ಕಿ ದೇಶದ ಸಂಪರ್ಕದಿಂದ ಪಲಾವ್‍ನಂಥ ಅನೇಕ ಆಹಾರಗಳು ಇವರಲ್ಲೂ ಬಳಕೆಯಲ್ಲಿವೆ. ತರಕಾರಿಗಳಲ್ಲಿ ಅನ್ನ, ಕೀಮಾ ಮಾಂಸ, ಕೋಸು ಮುಂತಾದವನ್ನು ತುಂಬಿ ಬೇಯಿಸುತ್ತಾರೆ. ಕತ್ರರಿಸಿದ ಕೋಸು ಎಲೆ, ಆಲಿವ್, ಬೀಟ್‍ಗೆಡ್ಡೆ, ಹುರುಳಿಕಾಯಿ ಬೀಜಗಳಿಗೆ ಕಾಡಿ, ಇಪ್ಪೆಎಣ್ಣೆ ಬೆರೆಸಿ ಮಾಡಿದ ಕೋಸಂಬರಿಯನ್ನು ಸೌಲೇಕಿಯಾ ಜೊತೆಗೆ ಬಡಿಸುತ್ತಾರೆ. ಬೆಣ್ಣೆ, ಹಿಟ್ಟು, ಸಕ್ಕರೆ ಹಾಕಿರುವ ಚಿಕ್ಕ ರೊಟ್ಟಿಗಳಿಗೆ ಸಕ್ಕರೆ ಪಾಕ ಬಳಿದು ಹಬ್ಬಗಳಲ್ಲಿ ತಿನ್ನುತ್ತಾರೆ. ರೊಟ್ಟಿ ಜೊತೆಗೆ ಹಸಿ ಕಿಲಾಟ ಬಳಸುವರು. ಸಕ್ಕರೆ ಹಾಕಿದ ಕರೀ ಚಹ, ಕೆನೆ ಹಾಕಿದ ಟರ್ಕಿ ಕಾಫಿ ಜನಪ್ರಿಯ ಬಿಸಿ ಪಾನೀಯಗಳು.

ಟರ್ಕಿ, ಅರಬ್ಬೀ ರಾಜ್ಯಗಳು :[ಸಂಪಾದಿಸಿ]

ಟರ್ಕಿ ದೇಶದಲ್ಲಿ ಕುರಿಮಾಂಸ, ಅನ್ನ, ತರಕಾರಿಗಳು, ಎಣ್ಣೆಸೇರಿದ ಅಡಿಗೆಗಳೇ ಹೆಚ್ಚು. ಮಾಂಸದ ತುಂಡುಗಳನ್ನು ಕಾಡಿ, ಎಣ್ಣೆಗಳಲ್ಲಿ ಹುರಿದು, ಹುರಿದ ಈರುಳ್ಳಿ, ಲವಂಗಗಳನ್ನು ಸೇರಿಸಿ ಅನ್ನದ ಜೊತೆಗೆ ಬಡಿಸುವುದೇ ಕಬಾಬ್. ಸೊಪ್ಪು, ಕೀಮಾ, ಮಸಾಲೆ ಸಾಮಾನುಗಳು ಎಲ್ಲ ಅಡಿಗೆಗಳಲ್ಲೂ ಸೇರುತ್ತವೆ. ಎಳ್ಳಿನ ಪುಡಿಗೆ ಸಕ್ಕರೆ, ಚಾಕೊಲೇಟ್, ಬಾದಾಮಿ ಸೇರಿಸಿ ಮಾಡುವ ಸಿಹಿ ಪದಾರ್ಥಕ್ಕೆ ಹಲ್ವ ಎನ್ನುವರು. ಒಳಗೆ ಮಾಂಸ ಮುಂತಾದುವನ್ನು ತುಂಬಿಸಲು ಪದರವಿರುವ ಚಪಾತಿಯಂತೆ ತೆಳ್ಳಗಿರುವ ರೊಟ್ಟಿ ಎಲ್ಲರೂ ತಿನ್ನುವುದಾಗಿದೆ. ಟೊಳ್ಳಾಗೊ ಗರಿಗರಿಯಾಗೂ ದುಂಡಗೂ ಇರುವ ಇನ್ನೊಂದು ರೊಟ್ಟಿ ಕೊಡ ಬಳಕೆಯಲ್ಲಿದೆ. ಬಾಕ್ಲಾವಾ ಎನ್ನುವುದು ಬಾದಾಮಿ, ಜೇನು ಸೇರಿಸಿದ ಕೇಕಿನಂಥ ಸಿಹಿ ತಿಂಡಿ. ಊಟವಾದ ಮೇಲೆ ಏಲಕ್ಕಿ ಬೆರೆಸಿದ ಕಾಫಿಯನ್ನು ಕುಡಿಯುವರು. 

ಭಾರತ :[ಸಂಪಾದಿಸಿ]

ಹಣಕಾಸಿನ ಸ್ಥಿತಿ. ಜನ ಅವಲಂಬಿಸುವ ಧರ್ಮಗಳ ಕಾರಣದಿಂದ ಭಾರತದಲ್ಲಿ ಮಾಂಸಾಹಾರಗಳ ಬಳಕೆ ಕಡಿಮೆ. ಧಾನ್ಯಗಳೇ ಜನರ ಮುಖ್ಯ ಆಹಾರ. ಅಕ್ಕಿ, ಗೋಧಿ, ಬೇಳೆಗಳು ಇನ್ನೂ ಮುಖ್ಯ. ಉತ್ತರದಲ್ಲಿ ಗೋಧಿಯಿಂದ ಮಾಡಿದ ಚಪಾತಿಗಳೂ ದಕ್ಷಣದಲ್ಲಿ ಅಕ್ಕಿಯಿಂದ ಮಡಿದ ಅನ್ನವೂ ಜೋಳದ ರೊಟ್ಟಿಯೂ ರಾಗಿ ಮುದ್ದೆಯೂ ಎಲ್ಲರೂ ದಿನವೂ ಸೇವಿಸುವ ಆಹಾರ. ಇವುಗಳ ಜೊತೆಗೆ ಬೇಳೆಗಳಿಂದ, ತರಕಾರಿಗಳಿಂದ ಮಾಡಿದ ಅಡಿಗೆಗಳೂ ಇವೆ. ಬೆಣ್ಣೆಯಿಂದ ತುಪ್ಪ ತಯಾರಾಗುವುದು ಭಾರತವೊಂದರಲ್ಲೇ. ಕೊತ್ತುಂಬರಿ ಬೀಜ (ದನಿಯಾ), ಅರಿಶಿನ, ಶುಂಠಿ, ಮೆಣಸು, ಲವಂಗ ಮುಂತಾದ ಅನೇಕ ಸಂಬಾರ ಪದಾರ್ಥಗಳು ಸೇರುವ ಮಸಾಲೆಗಳನ್ನು ಆಹಾರಗಳ ಜೊತೆ ಸೇರಿಸುತ್ತಾರೆ. ಕುರಿ ಮಾಸ, ಕೋಳಿ ಮಾಂಸ, ಬಳಕೆಯಲ್ಲಿದೆ. ಕಡಲ ತೀರ ಪ್ರದೇಶಗಳಲ್ಲಿ ಜನರು ಹೆಚ್ಚಾಗಿ ಮೀನುಗಳನ್ನೂ ಸೇವಿಸುತ್ತಾರೆ. ಗೆಡ್ಡೆಗಳು, ಬೆಂಡೆ, ಹುರುಳಿ, ಬಟಾಣಿ, ಹೀರೆ, ಸೋರೆ, ಪಡುವಲ, ಬೂದುಗುಂಬಳ, ಮುಂತಾದ ತರಕಾರಿಗಳು, ಬಗೆಬಗೆಯ ಸೊಪ್ಪುಗಳು ಜನಪ್ರಿಯವಾಗಿವೆ. ಉತ್ತರ ಭಾರತದಲ್ಲಿ, ಹಾಲು ಹೆಚ್ಚಾಗಿ ಸಿಗುವುದರಿಂದ ಅದರಿಂದ ಅನೇಕ ತೆರನ ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಹಾಲು, ಮೊಸರು, ಕೆನೆ, ಕೋವ, ಬೆಣ್ಣೆ, ತುಪ್ಪ ಮುಂತಾದ ಹಾಲಿನ ಉತ್ಪನ್ನಗಳು ಎಲ್ಲರೂ ಇಷ್ಟಪಡುವ ಆಹಾರಗಳು. ಪಂಜಾಬು, ಉತ್ತರಪ್ರದೇಶ ಮುಂತಾದ ಕಡೆ ಗೋಧಿಯೊಂದನ್ನೇ ಬಳಸುತ್ತಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ಕಡೆಗಳಲ್ಲಿ, ಗೋಧಿ, ಅಕ್ಕಿ ಎರಡರನ್ನೂ ಸಮಸಮವಾಗಿ ಸೇವಿಸುತ್ತಾರೆ. ಜೈನರೊ ಹಿಂದುಗಳಲ್ಲಿ ಕೆಲವು ಪಂಗಡದವರೂ ಅಚ್ಚ ಶಾಕಾಹಾರಿಗಳು. ಮಾಂಸಾಹಾರಿಗಳಾದರೂ ಇತರರು ಹಣಕಾಸಿನ ಕಾರಣ ಕೆಲವೊಮ್ಮೆ ಮಾತ್ರ ಸೇವಿಸುವರು. ಕುರಿ, ಮೇಕೆ, ಕೋಳಿ, ಹಂದಿ ಮುಂತಾದವು ಮಾಂಸಾಹಾರಗಳಾಗಿವೆ. ಉತ್ತರದಲ್ಲಿ ತಿಳಿ ಚಹ, ದಕ್ಷಣದಲ್ಲಿ ಕಾಫಿ ಜನಪ್ರಿಯ ಬಿಸಿ ಪಾನೀಯಗಳು.

ರಷ್ಯ :[ಸಂಪಾದಿಸಿ]

ಇಲ್ಲು ಪೂರ್ವ, ಪಶ್ಚಿಮ ದೇಶಗಳ ಅಡಿಗೆ ಪದ್ಧತಿಗಳು ಬೆರೆತಿವೆ. ಬಕ್ ಗೋಧಿಯಿಂದ ಕಾಡಿದ ದೋಸೆಗಳನ್ನು ಮೊಸರಿನ ಜೊತೆಗೆ ತಿನ್ನುತ್ತಾರೆ. ಕಾಯಿಪಲ್ಲೆಗಳು, ಮಾಂಸ, ಕೋಳಿಮಾಂಸ, ಮೀನುಗಳ ಜೊತೆಗೆ, ಮೇಯೊನ್ನೀಟ್ ಚಟ್ನಿ ಬೆರೆಸಿ, ಕೋಸಂಬರಿ ಮಾಡುತ್ತಾರೆ. ಕೋಸಿನ ತಿಳಿಸಾರೂ ಬೀಟ್‍ಗೆಡ್ಡೆ ತಿಳಿಸಾರೂ ಜನಪ್ರಿಯವಾದುವು. ಮಾಂಸಗಳ ಜೊತೆಗೆ ಮೊಸರು, ಕಾಯಿಪಲ್ಯೆ, ಸೌತೇಕಾಯಿ ಉಪ್ಪಿನಕಾಯಿ, ಕೋಸುಮದ್ಯ ಬಡಿಸುತ್ತಾರೆ. ಹಾಲು, ಸಕ್ಕರೆ ಹಾಕದ ಚಹ ಜನಪ್ರಿಯ ಪಾನೀಯ. ಇದಕ್ಕೆ ಕೆಲವರು ಹಣ್ಣಿನ ಮುರಬ್ಬ ಸೇರಿಸುತ್ತಾರೆ. ಆಲೊಗೆಡ್ಡೆಯಿಂದ ತಯಾರಿಸಿದ ವೋಡ್ಕ ಎಂಬ ತಿಳಿಮದ್ಯ ಎಲ್ಲೆಲ್ಲೂ ಜನಪ್ರಿಯ ಪಾನೀಯ.

ಚೀನ :[ಸಂಪಾದಿಸಿ]

ಫ್ರೆಂಚ್ ಜನರಂತೆ ಇವರೂ ಅಡಿಗೆಗಳಲ್ಲಿ ಬಲು ನಿಸ್ಸೀಮರು. ಅನ್ನ, ಸೋಯಾ ಅವರೆ (ಸೋಯಾ ಬೀನ್) ಮೊಳಕೆಗಳು, ಅದರ ಮೊಸರು, ಹಸಿ ಶುಂಠಿ ಅಡಿಗೆಗಳಿಗೆ ಹೆಚ್ಚಾಗಿ ಹಾಕುವ ಪದಾರ್ಥಗಳು. ಬೆಣ್ಣೆ, ಹಾಲು, ಕಿಲಾಟ ಮುಂತಾದವನ್ನು ಎಂದೂ ಅಡಿಗೆಗಳಲ್ಲಿ ಬಳಸರು. ಸಂಬಾರ ದಿನಸಿಗಳೊ ಹೆಚ್ಚಾಗಿ ಬಳಕೆಯಲ್ಲಿಲ್ಲ. ಬೆಳ್ಳುಳ್ಳಿ, ಈರುಳ್ಳಿಗಳನ್ನು ಮಾತ್ರ ಕೆಲವು ಅಡಿಗೆಗಳಲ್ಲಿ ಹೆಚ್ಚಾಗಿ ಸೇರಿಸುತ್ತಾರೆ. ಚಾಪ್ ಕಡ್ಡಿಗಳಿಂದ ಇಲ್ಲವೆ ಚಮಚದಿಂದ ಊಟ ಮಾಡುತ್ತಾರೆ. ಅಡಿಗೆಯ ಪದಾರ್ಥಗಳನ್ನೆಲ್ಲ ಸಣ್ಣದಾಗಿ ಕತ್ತರಿಸಿ ಬೇಯಿಸುವುದರಿಂದ ಊಟ ಮಾಡುವಾಗ ಇವರಿಗೆ ಚಾಕು ಬೇಕಿರದು. ಮೀನು ಎಲ್ಲರಿಗೂ ಇಷ್ಟವಾದ ಆಹಾರ. ಸಿಗಡಿಗಳು, ಹಂದಿ, ಕೋಳಿ, ಬಾತಿನ ಮಾಂಸಗಳು ಒಳ್ಳೆಯ ಆಹಾರಗಳೆಂದು ತಿಳಿದಿರುವರು. ಇವನ್ನು ಕಾಡಿ, ಹಿಟ್ಟು, ಸಕ್ಕರೆಗಳ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಹುರಿಯುತ್ತಾರೆ. ಸೋಯ ಅವರೆ ಚಟ್ನಿ ಇವುಗಳ ಜೊತೆಗೆ ಸೇರುತ್ತದೆ. ಅನ್ನ, ಶೇವಿಗೆ ತೆರನ ಪದಾರ್ಥಗಳೇ ಮುಖ್ಯ ಆಹಾರ. ಕಾಯಿಪಲ್ಯೆಗಳನ್ನು ದಂಡಿಯಾಗಿ ತಿನ್ನುತ್ತಾರೆ. ಅಣಬೆಗಳು, ಬೊಂಬಿ ಚಿಗುರು, ಕಾಳಿನ ಮೊಳಕೆಗಳು ಅಡಿಗೆಗಳಲ್ಲಿ ಸೇರುತ್ತವೆ. ಅನ್ನವನ್ನು ಮಾಡುವುದರಲ್ಲೂ ಅನೇಕ ಬಗೆಗಳಿವೆ. ಪೀಚ್, ಪೇರೆ, ಮಾವು, ಲೀಚಿ ಹಣ್ಣುಗಳನ್ನು ತಿನ್ನುವರು. ಬಾದಾಮಿ ಬಿಸ್ಕತ್, ಬಾದಾಮಿ ಹಿಟ್ಟಿನಿಂದ ಮಾಡಿದ ಹಲ್ವದಂತಿರುವ ಪದಾರ್ಥ, ಎಲ್ಲರೂ ಇಷ್ಟಪಡುವ ಸಿಹಿತಿಂಡಿಗಳು. ಅಕ್ಕಿಯಿಂದ ತಯಾರಿಸಿದ ವೈನ್ ಮದ್ಯವನ್ನು ಅಡಿಗೆಗಳಲ್ಲೂ ಊಟದ ಜೊತೆಗೆ ಪಾನೀಯವಾಗೂ ಬಳಸುತ್ತಾರೆ. ಚಹ ಪಾನೀಯವನ್ನು ದಿನಕ್ಕೆ ಹಲವು ಬಾರಿ ಸೇವಿಸುತ್ತಾರೆ.

ಜಪಾನ್ :[ಸಂಪಾದಿಸಿ]

ಈ ನಾಡಿನವರ ಅಡಿಗೆಗಳು ಬಹಳ ಸರಳ. ಕೆಂಡದ ಮೇಲೋ ಒಲೆಯ ಮೇಲೋ ಬೇಯಿಸುವುದು ಸಾಧಾರಣ ವಿಧಾನ. ಅಡಿಗೆಗಳನ್ನು ತಟ್ಟೆಗಳಲ್ಲಿ ಅಲಂಕಾರವಾಗಿ ಜೋಡಿಸುವುದು ಇವರ ವಿಶೇಷ ಪದ್ಧತಿ. ಇವರಲ್ಲಿ ಅದೊಂದು ಕಲೆ, ಊಟ, ಬಗೆಬಗೆ ಅಡಿಗೆಗಳ ಸ್ವಲ್ಪ ಸ್ವಲ್ಪ ಭಾಗಗಳಿಂದ ಕೂಡಿರುತ್ತದೆ. ಅನ್ನ, ಮೊಟ್ಟೆ, ಹಿಟ್ಟಿನಿಂದ ಮಾಡಿದ ಶೇವಿಗೆ ಮುಖ್ಯ ಆಹಾರ. ಸೋಯಾ ಅವರೆ ಹಿಟ್ಟು, ಮೀನು, ಮೊಟ್ಟೆಗಳಿಂದ ತಿಳಿಸಾರು ತಯಾರಿಸುವರು. ಜಪಾನೀಯರು ಮೀನುಗಳು ಮತ್ತಿತರ ಕಡಲ ಆಹಾರಗಳನ್ನು ದಂಡಿಯಾಗಿ ತಿನ್ನುತ್ತಾರೆ. ಸೌತೆಕಾಯಿ, ಹಾಲ್ಮೊಲಂಗಿ (ಲೆಟಿಸ್) ಸೊಪ್ಪಿನೊಂದಿಗೆ, ಹಸಿ ಮೀನಿನ ಕೋಸಂಬರಿಯನ್ನು ತಿನ್ನುವುದೂ ಉಂಟು. ಊಟದ ಮೇಜಿನ ಮೇಲೇ ತಯಾರಿಸಿ ತಿನ್ನುವ ಅಡಿಗೆ ಸುಕಿಯಾರೆ. ತೆಳ್ಳಗೆ ಕೊಯ್ದ ಮಾಂಸ, ಈರುಳ್ಳಿ, ಬೊಂಬಿನ ಚಿಗುರು, ಲೀಕ್ ಮುಂತಾದವನ್ನು ಎಣ್ಣೆಯಲ್ಲಿ ಸ್ವಲ್ಪ ಹುರಿದು ಸಣ್ಣ ಪಾತ್ರೆಯಲ್ಲಿಟ್ಟು, ಮೇಜಿನ ಮೇಲೆ ಮದ್ಯಸಾರದ ದೀಪದ ನೆರವಿಂದ ಬೇಯಿಸಿದ ಕೂಡಲೇ ಸೋಯ ಅವರೆ ಚಟ್ನಿ, ಸೋಯ ಅವರೆ ಮೊಸರಿನ ಜೊತೆಗೆ ಇದನ್ನು ಬಡಿಸುವರು. ಅಕ್ಕಿಯಿಂದ ಮಾಡಿದ ವೈನ್ ಮದ್ಯ ಜನಪ್ರಿಯ. ದಿನದ ಊಟಗಳ ಜೊತೆಗೆ ಚಹ ಸೇವಿಸುತ್ತಾರೆ.

ಸಿಂಹಳ :[ಸಂಪಾದಿಸಿ]

ಇಲ್ಲಿನ ಅಡಿಗೆಗಳಲ್ಲಿ ತೆಂಗಿನಕಾಯಿಗೆ ಹೆಚ್ಚು ಪ್ರಾಧಾನ್ಯ. ತೆಂಗಿನ ಹಾಲು, ತುರಿ ಅಥವಾ ಒಣಕೊಬ್ಬರಿ ಹೆಚ್ಚು ಕಡಿಮೆ ಎಲ್ಲ ಸಿಹಿ ಮತ್ತು ಖಾರದ ಭಕ್ಷ್ಯಗಳಲ್ಲಿ ಸೇರುತ್ತವೆ. ಸಂಬಾರಜಿನಸಿಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಆದ್ದರಿಂದ ಆಹಾರಗಳು ತೀಕ್ಷ್ಣ ವಾಸನೆ, ರುಚಿ ಹೊಂದಿರುತ್ತವೆ.

ತರಕಾರಿಗಳಿಂದಲೂ ದನ, ಕುರಿ, ಕೋಳಿ, ಹಂದಿ ಮುಂತಾದ ಪ್ರಾಣಿಗಳ ಮಾಂಸಗಳಿಂದಲೂ ವಿಧವಿಧವಾದ ಮೀನುಗಳಿಂದಲೂ ರುಚಿಯಾದ ಸಂಬೋಲ್‍ಗಳನ್ನು (ಸಾರು) ತಯಾರಿಸುತ್ತಾರೆ. ಇವಕ್ಕೆ ತೆಂಗಿನ ಹಾಲು, ಸಂಬಾರಜಿನಸಿ ಹಾಕಿ ಬೇಯಿಸಿದ ಹಲವು ಬಗೆಯ ಅನ್ನಗಳನ್ನು ಮಾಡುತ್ತಾರೆ. ಅಂಬೊಲ್ ಕಿಯಾಲ್ (ಮೀನು), ಸೀಮ್ ಸಂಬೋಲ್, ಮಿರಿಸ್ ಮಾಲು, ಕಿರಿತ್ತೋಡಿ ಮುಂತಾದುವು ಪ್ರಸಿದ್ಧ ಖಾರದ ಅಡುಗೆಗಳು. ಪೊಲೋಸ್ ಪಾಹಿ ಎನ್ನುವುದು ಹಲಸಿನ ಕಾಯಿಂದ ಮಾಡಿದ್ದು. ಹೋಳುಗಳನ್ನು ಮೆತ್ತಗೆ ಬೇಯಿಸಿ, ಸಾಸಿವೆ, ಬೆಳ್ಳುಳ್ಳಿ, ಮೆಣಸಿನಕಾಯಿ, ಶುಂಠಿ ಮತ್ತು ಉಪ್ಪು ಹಾಕಿ ಅರೆದ ಮಸಾಲೆಯನ್ನು ಬೆರೆಸಿ ಸ್ವಲ್ಪ ವಿನೆಗರ್ ಜೊತೆಗೆ ಕುದಿಸುವರು. ಇದನ್ನು ಗಾಜಿನ ಪಾತ್ರದಲ್ಲಿಟ್ಟುಕೊಂಡು ಬೇಕಾದಾಗ ಗೊಜ್ಜಿನಂತೆ ಬಳಸಬಹುದು. ಬೆಳಗಿನ ಉಪಾಹಾರಕ್ಕೆ ದೋಸೆಯಂತೆ ಮಡಕೆಗಳಲ್ಲಿ ಬೇಯಿಸುವ ಅಕ್ಕಿಹಿಟ್ಟಿನ ಹಾಪರ್; ಅಕ್ಕಿ, ತೆಂಗಿನ ಹಾಲು, ದ್ರಾಕ್ಷಿ, ಏಲಕ್ಕಿ ಹಾಕಿ ಬೇಯಿಸಿದ ಕಿರಿಬಾತ್; ಅಕ್ಕಿ ಹಿಟ್ಟಿನ ಪುಟ್ಟು (ಬೊಂಬಿನಲ್ಲಿ ಬೇಯಿಸಿದ್ದು) ಜನಪ್ರಿಯವಾದ ಅಡಿಗೆಗಳು.

ಕೊಬ್ಬರಿ, ಹಾಲು, ಸಕ್ಕರೆ, ಗೋಡಂಬಿ ಹಾಕಿ ಗಟ್ಟಿ ಮಾಡಿದ ಕೋಕನಟ್ ಬಾಕ್; ಕೊಬ್ಬರಿ ಹಾಲು, ಅಕ್ಕಿಹಿಟ್ಟು, ಬೆಲ್ಲ ಗೋಡಂಬಿ ಹಾಕಿದ ಕಾಲು ದೋದೊಲ; ಅಕ್ಕಿಹಿಟ್ಟು, ಮೊಟ್ಟೆ, ತೆಂಗಿನಹಾಲು, ಉಪ್ಪು, ಹಾಕಿ ಎಣ್ಣೆಯಲ್ಲಿ ಕರಿಯುವ ಕೋಕಿ; ಎಳ್ಳು ಕೊಬ್ಬರಿ ತುರಿ, ಬೆಲ್ಲ ಹಾಕಿದ ತಲಗುಲಿ-ಮುಂತಾದುವು ಪ್ರಸಿದ್ಧ ಸಿಹಿ ತಿಂಡಿಗಳು. ಬಿಬಿತ್ಕಾನ್ ಎನ್ನುವುದು ತೆಂಗಿನಹಾಲು, ಬೆಲ್ಲ, ಗೋಡಂಬಿ, ಮೈದಾಹಿಟ್ಟು, ಲವಂಗ, ಏಲಕ್ಕಿ, ಶುಂಠಿ, ನಿಂಬೆಸಿಪ್ಪೆಯ ಚೊರುಗಳು ಮತ್ತು ಸಕ್ಕರೆ ಬೆರೆಸಿ ಕೇಕಿನಂತೆ ಒಲೆಯಲ್ಲಿ ಬೇಯಿಸುವುದು. ಹಲಾಪೆ ಎನ್ನುವುದು ಅಕ್ಕಿಹಿಟ್ಟು, ಕೊಬ್ಬರಿತುರು, ಏಲಕ್ಕಿ ಮತ್ತು ಕಾಕಂಬಿ ಬೆರೆಸಿ ರೊಟ್ಟಿಗಳಂತೆ ತಟ್ಟಿ ಬಾಳೆಲೆಯ ಮಧ್ಯೆಯಿಟ್ಟು, ಹಬೆಯಲ್ಲಿ ಬೇಯಿಸಿ ತಯಾರಿಸುವುದು.

ಪಾನೀಯಗಳಲ್ಲಿ ಕಾಫಿ, ಟೀ, ಬಾರ್ಲಿ ನೀರು, ಶುಂಠಿ ಅಥವಾ ಪಟ್ಟೆಹಾಕಿದ ಟೀ, ಸಬ್ಬಕ್ಕಿ (ಸೇಗೋ) ಗಂಜಿ ಜನಪ್ರಿಯವಾದುವು.

(ವೈ.ಎಸ್.ಎಲ್.)