ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಟ್ಟಿಗೆ

ವಿಕಿಸೋರ್ಸ್ದಿಂದ

ಇಟ್ಟಿಗೆ ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಿದ ಆಯತಾಕಾರದ ಘನ; ಕಟ್ಟಡ ರಚನೆಯಲ್ಲಿ ಬಳಸಲಾಗುವ ವಸ್ತು (ಬ್ರಿಕ್), ನೀರಿನಲ್ಲಿ ಕಲಸಿದ ಮಣ್ಣನ್ನು ಮರದ ಅಚ್ಚುಗಳಿಗೆ ತುಂಬಿ ಇಟ್ಟಿಗೆಗಳನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸುವುದು ಪ್ರಾಚೀನ ಈಜಿಪ್ಟಿನಲ್ಲಿ ಕ್ರಿ.ಪೂ. 4000ದಲ್ಲಿಯೇ ಬಳಕೆಯಲ್ಲಿತ್ತು. ಇವು ನೀರು ಬಿದ್ದಾಗ ಕರಗುತ್ತವೆ. ಇವನ್ನು ಬೆಂಕಿಯಲ್ಲಿ ಸುಟ್ಟು ಗಟ್ಟಿಯಾಗಿ ಮಾಡಿದ್ದು ನಾಗರಿಕತೆಯ ಇತಿಹಾಸದಲ್ಲಿಯೇ ಒಂದು ದೊಡ್ಡ ಹೆಜ್ಜೆ. ಮೆಸೊಪೊಟೇಮಿಯದ ಅರಮನೆಯನ್ನು ಕ್ರಿ.ಪೂ. 3500ರಲ್ಲಿ ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ್ದರು. ಬ್ಯಾಬಿಲಾನಿನ ಮನೆಗಳ ಗೋಡೆಗಳಲ್ಲಿ ಸುಟ್ಟ ಮತ್ತು ಸುಡದೆ ಇದ್ದ ಇಟ್ಟಿಗೆಗಳನ್ನು ಉಪಯೋಗಿಸಿದ್ದಾರೆ. ಆದರೆ ಕ್ರಿ.ಪೂ. 6ನೆ ಶತಮಾನದಲ್ಲಿ ಕಟ್ಟಿದ ಹೊಸ ಅರಮನೆ, ತೂಗಾಡುವ ತೋಟ ಬೆಲ್ ದೇವತೆ ದೇವಾಲಯ ಇವುಗಳಲ್ಲಿ ಬಣ್ಣದ ಸುಟ್ಟ ಇಟ್ಟಿಗೆಗಳನ್ನು ಉಪಯೋಗಿಸಿದ್ದಾರೆ. ಈ ಇಟ್ಟಿಗೆಗಳ ಅಳತೆ 304 ಮಿ.ಮೀ. ಚೌಕ, 76-101 ಮಿ.ಮೀ. ದಪ್ಪ. ಕ್ರಿ.ಪೂ. 3ನೆಯ ಶತಮಾನದಲ್ಲಿ ಚೀನಿಯರು ತಮ್ಮ ದೇಶದ ರಕ್ಷಣೆಗಾಗಿ ಕಟ್ಟಿದ ಭಾರೀ ಗೋಡೆಯಲ್ಲಿ ಇಟ್ಟಿಗೆಗಳನ್ನು ಉಪಯೋಗಿಸಿದ್ದಾರೆ. ಪ್ರಾಚೀನರಲ್ಲಿ ಶ್ರೇಷ್ಠ ಶಿಲ್ಪಿಗಳಾದ ರೋಮನರು ತಮ್ಮ ಕಟ್ಟಡಗಳಲ್ಲಿಯೂ ಮೇಲುಗಾಲುವೆಗಳಲ್ಲಿಯೂ ಸುಟ್ಟ ಇಟ್ಟಿಗೆಗಳನ್ನು ಧಾರಾಳವಾಗಿ ಬಳಸುತ್ತಿದ್ದರು. ಇವರು ಸುಟ್ಟ ಇಟ್ಟಿಗೆ ಹೊರಭಾಗಕ್ಕೆ ಅಂದವಾದ ಬಣ್ಣವನ್ನು ಹಾಕುತ್ತಿದ್ದರು. ಕ್ರಿ.ಶ. 8ನೆಯ ಶತಮಾನದಲ್ಲಿ ಪೂರ್ವ ಬಂಗಾಲದ ಷರಹ್‍ಪುರದ ದೇವಸ್ಥಾನವನ್ನು ಸಣ್ಣ ಇಟ್ಟಿಗೆಗಳು ಮತ್ತು ಗಾರೆ ಉಪಯೋಗಿಸಿ ಕಟ್ಟಿ ಬಣ್ಣ ಬಣ್ಣದ ಮಣ್ಣಿನ ಪ್ರತಿಮೆಗಳಿಂದ ಅಲಂಕರಿಸಿದ್ದಾರೆ.

ಇಟ್ಟಿಗೆಗಳನ್ನು ಜೇಡಿ ಅಥವಾ ಕೊಜೆ ಮಣ್ಣಿನಿಂದ ಮಾಡುತ್ತಾರೆ. ಮರಳಿನ ಅಂಶ ಕಡಿಮೆಯಾಗಿರಬೇಕಾದದ್ದು ಇಟ್ಟಿಗೆ ಮಣ್ಣಿನ ಮುಖ್ಯ ಗುಣ. ಕೆಲವು ಕಡೆ ಉತ್ಕøಷ್ಟವಾದ ಮಣ್ಣು ದೊರಕುತ್ತದೆ. ದೊರಕದಿದ್ದಲ್ಲಿ ಮಣ್ಣನ್ನು ಬೇಕಾದ ಮಟ್ಟಕ್ಕೆ ಶುದ್ಧಪಡಿಸುತ್ತಾರೆ. ನೀರಿನಲ್ಲಿ ಕಲಸಿ ಕಾಲುಗಳಿಂದ ತುಳಿದು ಕೊಂಚ ಕಾಲ ಕೊಳೆಯುವುದಕ್ಕೆ ಬಿಟ್ಟು ಹದಮಾಡಿದ ಮಣ್ಣನ್ನು ಮರದ ಅಚ್ಚುಗಳಿಗೆ ತುಂಬಿ ಕೈಯಿಂದ ಇಟ್ಟಿಗೆಗಳನ್ನು ಕೊಯ್ಯುವುದೇ ರೂಢಿ. ಪಾಶ್ಚಾತ್ಯ ದೇಶಗಳಲ್ಲಿ ಯಂತ್ರಗಳಿಂದ ಇಟ್ಟಿಗೆಗಳನ್ನು ಮಾಡುತ್ತಾರೆ. ಭಾರತದ ನಗರಗಳಲ್ಲಿ ನಯವಾಗಿ ಉಕ್ಕಿನ ತಂತಿಯಿಂದ ಕತ್ತರಿಸಿ ಕುಲುಮೆಗಳಲ್ಲಿ ಸುಟ್ಟ ಬಲಿಷ್ಠವಾದ ಇಟ್ಟಿಗೆಗಳ ತಯಾರಿಕೆಯೂ ಇದೆ. ಈಗ ಮಣ್ಣಿನ ವಿಜ್ಞಾನಶಾಸ್ತ್ರವೇ ಅಪಾರವಾಗಿ ಬೆಳೆದಿದೆ. ಸಂಶೋಧನೆಗಳನ್ನು ನಡೆಸಿ ಎಲ್ಲೆಲ್ಲೂ ಸಿಕ್ಕುವ ಮಣ್ಣನ್ನು ಸಂಸ್ಕರಿಸಿ ನೂತನ ಕ್ರಮಗಳಿಂದ ಸಾಕಷ್ಟು ಬಲಿಷ್ಠವೂ ಅಂದವೂ ಆದ ಇಟ್ಟಿಗೆಗಳನ್ನು ತಯಾರಿಸಿದರೆ ರಾಷ್ಟ್ರದ ಉದ್ಯಮಗಳಲ್ಲಿ ಉಳಿತಾಯವಾಗುತ್ತದೆ.

ಮರದ ಅಚ್ಚುಗಳಿಂದ ತಯಾರಿಸಿದ ಇಟ್ಟಿಗೆಗಳನ್ನು ಬಟ್ಟಿಗಳಲ್ಲಿ ಸುಡುವುದಕ್ಕೆ ಮುಂಚೆ ತಯಾರಿಸಿದಲ್ಲಿಯೇ ಬಿಟ್ಟು ಬಿಸಿಲಿನಲ್ಲೂ ಗಾಳಿಯಲ್ಲೂ ಒಣಗಿಸುತ್ತಾರೆ. ಆದರೆ ಈ ಕ್ರಮದಲ್ಲಿ ಹೆಚ್ಚು ಜಾಗ ಬೇಕಾಗುತ್ತದೆ. ಅದಕ್ಕಾಗಿ ಇಟ್ಟಿಗೆಗಳನ್ನು ಸಾಲಾಗಿ ಮಧ್ಯೆ ಜಾಗವನ್ನು ಬಿಟ್ಟು ಒಂದರ ಮೇಲೊಂದರಂತೆ ಹತ್ತು ಹನ್ನೆರಡು ಇಟ್ಟಿಗೆಗಳನ್ನು ಎತ್ತರವಾಗಿ ಪೇರಿಸಿ ಮೇಲುಗಡೆ ಚಪ್ಪರಗಳನ್ನು ಕಟ್ಟಿ ಮಳೆಯಿಂದ ಕಾಪಾಡುತ್ತಾರೆ. ಆದರೆ ಈ ಕ್ರಮದಲ್ಲಿ ಹಸಿ ಇಟ್ಟಿಗೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದರಲ್ಲಿ ನಷ್ಟವೂ ವೆಚ್ಚವೂ ಹೆಚ್ಚಾಗುತ್ತವೆ.

ರೋಮನರ ಕಾಲದಿಂದಲೂ ಕೆಳಗಡೆ ಇಟ್ಟಿಗೆಗಳಿಂದಲೇ ಒಲೆಗಳನ್ನು ಕಟ್ಟಿ ಮೇಲುಗಡೆ ಹಸಿ ಇಟ್ಟಿಗೆಗಳನ್ನು 3-4 ಮೀ. ವರೆಗೂ ಗೋಡೆಯಾಗಿ ಪೇರಿಸಿದ ಬಟ್ಟಿಗಳಲ್ಲಿ ಇಟ್ಟಿಗೆ ಸುಡುತ್ತಿದ್ದಾರೆ. ಹದವಾಗಿ ಬೆಂದ ಇಟ್ಟಿಗೆಗಳು ಕಟ್ಟಡಗಳಿಗಾಗಿ ಬೇಕಾದಾಗ ಮಧ್ಯದಲ್ಲಿ ಇನ್ನೊಂದು ಒಲೆಗಳ ಸಾಲನ್ನು ಕಟ್ಟುತ್ತಾರೆ. ಬಟ್ಟಿಯ ಅಳತೆ ಸುಡಬೇಕಾದ ಇಟ್ಟಿಗೆಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ. ಒಲೆಯ ಗೂಡುಗಳ ದಿಕ್ಕನ್ನು ಆ ಕಾಲದಲ್ಲಿ ಬೀಸುವ ಗಾಳಿಯ ದಿಕ್ಕಿನಲ್ಲಿ ಇಡಬೇಕು. ದೊಡ್ಡ ಮರದ ದಿಮ್ಮಿಗಳನ್ನು ಒಲೆಗಳಲ್ಲಿಟ್ಟು ಹೊತ್ತಿಸಿ ರಾತ್ರಿಯೆಲ್ಲ ಆ ಕೆಲಸದಲ್ಲಿ ಪಳಗಿದ ಆಳುಗಳು ಬೆಂಕಿ ಒಲೆಗಳಲ್ಲಿ ಸರಿಯಾಗಿ ಉರಿಯುವಂತೆ ನೋಡಿಕೊಂಡರೆ ಒಂದು ವಾರದಲ್ಲಿ ಸುಟ್ಟ ಇಟ್ಟಿಗೆಗಳು ಸಿದ್ಧವಾಗುತ್ತವೆ. ಕಾವು ಆರಿದ ಮೇಲೆ ಗೂಡಿನಿಂದ ಇಟ್ಟಿಗೆಗಳನ್ನು ಬೇಕು ಬೇಕಾದಾಗ ಕೆಳಕ್ಕೆ ಇಳಿಸಿಕೊಳ್ಳಬಹುದು.

ಒಳ್ಳೆಯ ಇಟ್ಟಿಗೆಯ ಮಣ್ಣಿನ ರಾಸಾಯನಿಕ ರಚನೆಯನ್ನು ಸ್ಥೂಲವಾಗಿ ಮುಂದೆ ವಿವರಿಸಿದೆ. ಹತ್ತರಲ್ಲಿ ಆರು ಸಿಲಿಕನ್ ಡೈಆಕ್ಸೈಡ್, ಎರಡು ಅಲ್ಯುಮಿನಿಯಂ ಆಕ್ಸೈಡ್ ಮತ್ತು ಉಳಿದ ಎರಡರಲ್ಲಿ ವಿವಿಧ ಪ್ರಮಾಣಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಂ, ಸೋಡಿಯಂ ಮತ್ತು ಪೊಟ್ಯಾಸಿಯಮ್ಮಿನ ರಾಸಾಯನಿಕಗಳೂ ಸೇರಿರುತ್ತವೆ. ಸಿಲಿಕ ಅಥವಾ ಸಿಲಿಕಾನ್ ಡೈ ಆಕ್ಸೈಡ್ ಮರಳಿನ ರೂಪದಲ್ಲಿಯಾದರೂ ಇರಬಹುದು, ಇಲ್ಲವೆ ಅಲ್ಯುಮಿನಿಯಂ ಮತ್ತು ನೀರಿನೊಂದಿಗೆ ರಾಸಾಯನಿಕವಾಗಿಯಾದರೂ ಸೇರಿರಬಹುದು. ಇದು ಒಂದು ಪ್ರಮಾಣದವರೆಗೂ ಮಣ್ಣನ್ನು ಗಟ್ಟಿಯಾಗಿ ಮಾಡುತ್ತದೆ. ಹೆಚ್ಚಾಗಿದ್ದರೆ ಸುಟ್ಟ ಇಟ್ಟಿಗೆ ಒಡೆದುಹೋಗುತ್ತದೆ. ಸುಣ್ಣಕಲ್ಲು ಇಟ್ಟಿಗೆಯನ್ನು ಬಲಿಷ್ಠವಾಗಿ ಮಾಡುತ್ತದೆ. ಕಬ್ಬಿಣ ಹೆಚ್ಚಾಗಿದ್ದರೆ ಆ ಮಣ್ಣಿನಿಂದ ಮಾಡಿದ ಇಟ್ಟಿಗೆ ಸೀಳಿಹೋಗುತ್ತದೆ.

ಸುಣ್ಣ ಮತ್ತು ಕೊಂಚವೇ ಕಬ್ಬಿಣವಿರುವ ಮಣ್ಣಿನಿಂದ ದಂತದ ಬಣ್ಣದ ಇಟ್ಟಿಗೆಗಳನ್ನು ಮಾಡಬಹುದು. ಕಬ್ಬಿಣದ ಆಕ್ಸೈಡ್ ಹೆಚ್ಚಾಗಿದ್ದರೆ ಇಟ್ಟಿಗೆಗಳಿಗೆ ನೀಲಿಬಣ್ಣ ಬರುತ್ತದೆ. ಜೊತೆಗೆ ಮ್ಯಾಂಗನೀಸ್ ಸೇರಿದ್ದರೆ ಇಟ್ಟಿಗೆಗಳಿಗೆ ಕಪ್ಪುಬಣ್ಣ ಬರುತ್ತದೆ. ಬೇರೆ ಅಶುದ್ಧತೆಗಳಿಲ್ಲದೆ ಕಬ್ಬಿಣದ ಆಕ್ಸೈಡ್ ಹೆಚ್ಚಾಗಿದ್ದರೆ ಬೆಂಕಿಯಲ್ಲಿ ಅದು ಕೆಂಪು ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ. ಇಂಥ ಇಟ್ಟಿಗೆಗಳನ್ನು ಕಟ್ಟಡದ ಮುಖದಲ್ಲಿ ಗಿಲಾವು ಮಾಡದೆ ಇರುವ ಕಡೆ ವಿಶೇಷವಾಗಿ ಉಪಯೋಗಿಸುತ್ತಾರೆ.


ಚಿತ್ರ-1 ಈಗ ನಗರಗಳಲ್ಲಿ ಇಟ್ಟಿಗೆಗಳನ್ನು ಆವಿಗೆಗಳಲ್ಲಿ (ಕಿಲ್ನ್ಸ್) ಸುಡುವುದೇ ಹೆಚ್ಚು. ಸತತವಾಗಿ ಉರಿಯುವ ಈ ಒಲೆಗಳಲ್ಲಿ ಎರಡು ವಿಧಗಳಿವೆ: 1. ಹಾಫ್‍ಮನ್ ಒಲೆ, 2. ಸುರಂಗದ ಒಲೆ.

ಚಿತ್ರ-2


ಹಾಫ್‍ಮನ್ ಒಲೆಯನ್ನು ಅದರ ನಿರ್ಮಾತೃವಿನ ಹೆಸರಿನಿಂದ ಕರೆಯುತ್ತಾರೆ. ಇದರಲ್ಲಿ ಹಸಿ ಇಟ್ಟಿಗೆಗಳನ್ನು ಇಟ್ಟಿಗೆಗಳಿಂದಲೇ ಭದ್ರವಾಗಿ ಕಟ್ಟಿದ ಗೂಡುಗಳಲ್ಲಿ (ಚೇಂಬರ್ಸ್) ಪೇರಿಸುತ್ತಾರೆ. ಒಂದೊಂದು ಆವಿಗೆಯಲ್ಲೂ 16-24 ರವರೆಗೆ ಇಂಥ ಗೂಡುಗಳು ಪಕ್ಕಪಕ್ಕದಲ್ಲಿ ಎರಡು ಸಾಲುಗಳಲ್ಲಿರುತ್ತವೆ. ಗೂಡುಗಳ ಕೊನೆಗಳೂ ಅರ್ಧವರ್ತುಲಾಕಾರವಾಗಿ ಇಲ್ಲವೇ ದೀರ್ಘ ಚತುರಸ್ರಾಕಾರವಾಗಿರುತ್ತವೆ. ಪ್ರತಿ ದಿನವೂ ಬೆಂಕಿಯನ್ನು ಒಂದುಗೂಡಿನಿಂದ ಇನ್ನೊಂದಕ್ಕೆ ಬದಲಿಸುತ್ತಾರೆ. ಒಂದು ಕಡೆ ಹಸಿ ಇಟ್ಟಿಗೆಗಳನ್ನು ಒಳಕ್ಕೆ ತುಂಬುತ್ತಾರೆ. ಇನ್ನೊಂದು ಕಡೆ ಬೆಂದ ಇಟ್ಟಿಗೆಗಳನ್ನು ಹೊರಕ್ಕೆ ತೆಗೆಯುತ್ತಾರೆ. ಒಂದೊಂದು ದಿವಸವೂ ಉರಿಯುತ್ತಿರುವ ಗೂಡಿನ ಸ್ಥಾನ, ಹಸಿ ಇಟ್ಟಿಗೆಗಳನ್ನು ತುಂಬಿರುವ ಗೂಡಿನಿಂದ ನಾಲ್ಕೈದು ಗೂಡುಗಳ ಆಚೆಗೂ ಬೆಂದ ಇಟ್ಟಿಗೆಗಳನ್ನು ಇಳಿಸುತ್ತಿರುವ ಗೂಡಿನಿಂದ ಏಳೆಂಟು ಗೂಡುಗಳ ಆಚೆಗೂ ಇರುವುದು. ಇಟ್ಟಿಗೆಗಳನ್ನು ಸುಡುವ ಕ್ರಮ ಹೀಗಿದೆ: ಬೆಂದ ಇಟ್ಟಿಗೆಗಳನ್ನು ಹೊರಕ್ಕೆ ತೆಗೆಯುವ ಗೂಡಿನ ಹಿಂಭಾಗದಿಂದ ತಣ್ಣನೆಯ ಗಾಳಿ ಒಳಕ್ಕೆ ಬಂದು ಆಗ ತಾನೇ ಬೆಂದು ತಣ್ಣಗಾಗುತ್ತಿರುವ ಇಟ್ಟಿಗೆಗಳ ಏಳೆಂಟು ಗೂಡುಗಳ ಮೂಲಕ ಹೋಗಿ ಬಿಸಿಯಾಗುತ್ತದೆ. ಅಲ್ಲಿಂದ ಕಲ್ಲಿದ್ದಲನ್ನೂ ಕಟ್ಟಿಗೆಯನ್ನೂ ತುಂಬಿ ಉರಿಯುತ್ತಿರುವ ಗೂಡುಗಳನ್ನು ನುಗ್ಗಿ ಮತ್ತು ಬಿಸಿಯಾಗಿ ಆ ಕಡೆ ಹಸಿ ಇಟ್ಟಿಗೆಗಳಿರುವ ಗೂಡುಗಳನ್ನು ಪೂರ್ವಭಾವಿಯಾಗಿ ಕಾಯಿಸುತ್ತದೆ. ಈ ಬಲೆಗಳನ್ನು ಕಟ್ಟುವುದಕ್ಕೆ ಹಣ ಹೆಚ್ಚಾದರೂ ಕಟ್ಟಿಗೆ ಉಪಯೋಗದಲ್ಲಿ ಉಳಿತಾಯವಾಗುವುದರಿಂದಲೂ ಒಂದೇ ಸಮನಾಗಿ ಬೆಂದ ಇಟ್ಟಿಗೆಗಳು ಬರುವುದರಿಂದಲೂ ಅನುಕೂಲವೇ ಹೆಚ್ಚು.

ಸುರಂಗದ ಒಲೆ : ಇದರಲ್ಲಿ ಬೆಂಕಿ ಒಂದೇ ಕಡೆ ಇರುತ್ತದೆ. ಆದರೆ ಇಟ್ಟಿಗೆಗಳು ಸತತವಾಗಿ ದೀರ್ಘ ಚತರುಸ್ರಾಕಾರವಾದ ಸುರಂಗದಲ್ಲಿ ಸಂಚರಿಸುವಂಥ ಏರ್ಪಾಡಿದೆ. ಈ ಸುರಂಗ 121 ಮೀ. ಗಳಿಗಿಂತಲೂ ಉದ್ದವಾಗಿದ್ದು ನೆಲಮಟ್ಟದಲ್ಲಿ ಕಂಬಿಗಳಿವೆ. ಕಂಬಿಗಳ ಮೇಲೆ ಸುಡಬೇಕಾದ ಇಟ್ಟಿಗೆಗಳನ್ನು ಹೊತ್ತ ಗಾಡಿಗಳು ಓಡಾಡುತ್ತವೆ. ಹಾಫ್ಮನ್ ಆವಿಗೆ 6 ಚದರವಾಗಿದೆ. ಗಾಡಿಗಳು 6 1/2 ಉದ್ದವಾಗಿದ್ದು ಒಂದೊಂದೂ 1200 ಇಟ್ಟಿಗೆಗಳನ್ನು ಸಾಗಿಸುತ್ತದೆ. ಎರಡು ಗಂಟೆಗೆ ಒಂದು ಗಾಡಿ ಒಳಕ್ಕೆ ಬರುತ್ತದೆ. ಹೊರಕ್ಕೆ ಹೋಗುವುದಕ್ಕೆ 36-72 ಗಂಟೆಗಳ ಕಾಲ ಬೇಕು. ಇದನ್ನು ಹಾಫ್‍ಮನ್ ಆವಿಗೆಗಿಂತ ಮುಂದೆ ಸಂವಿಧಾನ ಮಾಡಿತ್ತು. ಮೊದಲನೆಯ ಮಹಾಯುದ್ಧದ ಅನಂತರ ಲಾಭದಾಯಕವಾಗಿ ಎಲ್ಲ ಕಡೆಗಳಲ್ಲೂ ಉಪಯೋಗವಾಗುತ್ತಿದೆ. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಇದರ ಬಳಕೆ ಹೆಚ್ಚು. ಕಲ್ಲಿದ್ದಲು, ಖನಿಜ ಎಣ್ಣೆ, ಇಲ್ಲವೆ ಪ್ರೊಡ್ಯೂಸರ್ ಅನಿಲದಿಂದ ಬೆಂಕಿಯನ್ನು ಉರಿಸುತ್ತಾರೆ. ಇದರಲ್ಲೂ ಹಾಫ್‍ಮನ್ ಆವಿಗೆಯಲ್ಲಿ ಎಷ್ಟೋ ಅಷ್ಟೇ ಇಂಧನ ಖರ್ಚಾಗುತ್ತದೆ.

ಇಟ್ಟಿಗೆಗಳನ್ನು ಸ್ಥೂಲವಾಗಿ ಮೂರು ಬಗೆಯಾಗಿ ವರ್ಗೀಕರಿಸಬಹುದು : 1. ಸಾಮಾನ್ಯ ಇಟ್ಟಿಗೆ, 2. ಮುಖದ ಇಟ್ಟಿಗೆ, ಯಂತ್ರ ಶಿಲ್ಪದ ಇಟ್ಟಿಗೆ, ಮುಕ್ಕಾಲು ಪಾಲು ಸಾಮಾನ್ಯವಾದ ಇಟ್ಟಿಗೆಗಳನ್ನೇ ತಯಾರಿಸುತ್ತಾರೆ. ಮುಖದ ಇಟ್ಟಿಗೆಗಳನ್ನು ಅಲಂಕಾರಕ್ಕಾಗಿ ಪ್ರತ್ಯೇಕವಾಗಿ ತಯಾರಿಸುತ್ತಾರೆ. ಯಂತ್ರ ಶಿಲ್ಪದ ಇಟ್ಟಿಗೆ ನೀರಿನಲ್ಲಿ ಕರಗುವುದಿಲ್ಲ. ಈ ಇಟ್ಟಿಗೆ ಚದರ ಅಂಗುಲಕ್ಕೆ 3150-4500 ಕೆ.ಜಿ.ಗಳ ತ್ರಾಸದಲ್ಲಿ ಪುಡಿಯಾಗುತ್ತದೆ. ಒಳ್ಳೆಯ ಮುಖದ ಇಟ್ಟಿಗೆ 1350-2250 ಕೆ.ಜಿ.ಗಳ ತ್ರಾಸದಲ್ಲಿ ಪುಡಿಯಾಗುತ್ತದೆ.

ಇಟ್ಟಿಗೆಯ ಅಳತೆ ಇಂಗ್ಲೆಂಡಿನಲ್ಲಿ 152 ಮಿ.ಮೀ. 76 ಮಿ.ಮೀ. 32 ಮಿ.ಮೀ. ಪ್ರಮಾಣದಲ್ಲೂ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ 230 ಮಿ.ಮೀ. 57 ಮಿ.ಮೀ. 13 ಮಿ.ಮೀ. ಪ್ರಮಾಣದಲ್ಲೂ ಸ್ಥಿರವಾಗಿದೆ. ಭಾರತದಲ್ಲಿ ಇಂಗ್ಲೆಂಡಿನ ಅಳತೆಯನ್ನೆ ಉಪಯೋಗಿಸುತ್ತಿದ್ದಾರೆ. ಇಟ್ಟಿಗೆಯ ಉದ್ದ ಎರಡು ಅಗಲಗಳಿಗಿಂತ ಒಂದು ಗೆರೆಯಷ್ಟು ಹೆಚ್ಚಾಗಿರಬೇಕು. ಎತ್ತರ ಅಗಲಕ್ಕಿಂತ ಕಡಿಮೆಯಾಗಿರಬೇಕು. ಇಟ್ಟಿಗೆಗಳು ಚೆನ್ನಾಗಿ ಬೆಂದಿರಬೇಕು. 20% ಕ್ಕಿಂತ ಹೆಚ್ಚು ನೀರನ್ನು ಯಾವ ಸಂದರ್ಭದಲ್ಲೂ ಹೀರಬಾರದು. ಒಂದು ಇಟ್ಟಿಗೆಯನ್ನು ಇನ್ನೊಂದರಿಂದ ಹೊಡೆದರೆ ಲೋಹದ ಧ್ವನಿ ಬರಬೇಕು. ಕರಣೆಯಿಂದ ಮೂರು ನಾಲ್ಕು ಏಟುಗಳು ಬೀಳುವವರೆಗೂ ಭಾಗವಾಗಬಾರದು. (ಎಚ್.ಸಿ.ಕೆ.)

ಇಟ್ಟಿಗೆ ಗೂಡು : ಹಸಿ ಇಟ್ಟಿಗೆಗಳನ್ನು ಸುಟ್ಟು ಗಟ್ಟಿ ಮಾಡಲು ಬಳಸುವ ಕಟ್ಟಡ. ಎರಡು ವಿಧದ ಗೂಡುಗಳಿವೆ. ಮೊದಲನೆಯವು ಸುತ್ತುಗೋಡೆ ಮೇಲ್ಚಾವಣಿಯನ್ನು ಹೊಂದಿದ್ದು ಒಳಗಡೆ ಇಟ್ಟಿಗೆಗಳನ್ನು ಪೇರಿಸಿ ಸುಡಲು ಅನುಕೂಲವಾಗುವಂತೆ ಖಾಯಂ ಕಟ್ಟಡವಿರುವುವು. ಎರಡನೆಯವು ಇವು ಯಾವುವೂ ಇಲ್ಲದಂತೆ ಕಚ್ಚಾ ಇಟ್ಟಿಗೆಗಳನ್ನೇ ಬಯಲು ಪ್ರದೇಶದಲ್ಲಿ ಪೇರಿಸಿ ಸುಡಲು ಅನುಕೂಲವಾಗುವಂತೆ ಕಟ್ಟಲಾಗುವ ಹಂಗಾಮಿ ಗೂಡುಗಳು. ಈ ಎರಡನೆಯ ತರಹೆಯ ಗೂಡುಗಳ ಹೊರವಲಯದಲ್ಲಿ ಇಟ್ಟಿಗೆಗಳು ಸಮರ್ಪಕವಾಗಿ ಸುಡುವುದಿಲ್ಲ. ಅಲ್ಲದೆ ಗಾಳಿ ಮಳೆಗಳ ಹೊಡೆತಗಳಿಂದ ನಷ್ಟವಾಗುವ ಸಂಭವವೂ ಉಂಟು. ಇಂಥ ಗೂಡುಗಳಿಗೆ ಗ್ರಾಮ್ಯಗೂಡುಗಳು (ಕ್ಲ್ಯಾಂಪ್ಸ್) ಎಂದು ಹೆಸರು. ಅಧಿಕ ಬೆಲೆಯ ಉತ್ತಮ ತರಹೆ ಇಟ್ಟಿಗೆಗಳ ತಯಾರಿಕೆಯಲ್ಲಿ ಮೊದಲ ತರಹೆಯ ಕಾಯಂ ಗೂಡುಗಳನ್ನು ಬಳಸಲಾಗುತ್ತದೆ. ಇವುಗಳಲ್ಲೂ ಬಿಡುವು ಗೂಡುಗಳಲ್ಲಿ ಸುಟ್ಟ ಇಟ್ಟಿಗೆಗಳು ಆರುವವರೆಗೆ ಅವನ್ನು ಹೊರತೆಗೆಯುವುದಾಗಲಿ ಅಥವಾ ಸುಡಬೇಕಾದ ಕಚ್ಚಾ ಇಟ್ಟಿಗೆಗಳನ್ನು ಒಳಕ್ಕೆ ತರುವುದಾಗಲಿ ಆಗದೆ ಕಾಲ ವ್ಯರ್ಥವಾಗುತ್ತದೆ. ಆದರೆ ಅವಿಶ್ರಾಂತ ಗೂಡುಗಳಲ್ಲಿ ಹೀಗಿರದೆ ನಿರಂತರವಾಗಿ ಇಟ್ಟಿಗೆಗಳನ್ನು ತಯಾರಿಸಲು ಅನುಕೂಲವಿದೆ. ಇಂಥ ಅವಿಶ್ರಾಂತ ಗೂಡುಗಳಲ್ಲಿ ಅತಿ ಮುಖ್ಯವಾದುವಕ್ಕೆ ವಾರನ್‍ಟೈಪ್ ಎನ್ನುತ್ತಾರೆ.

ಚಿತ್ರ-3

ಗ್ರಾಮ್ಯ ಗೂಡುಗಳಲ್ಲಿ ಒಣಗಿದ ಇಟ್ಟಿಗೆಗಳನ್ನು ಮುಟ್ಟವರಿಸೆಗಳಾಗಿ (ಹಾರಿಜಾಂಟಲ್ ಕೋರ್ಸಸ್) ಪೇರಿಸಿ ಬೆಲ್ಲದ ಅಚ್ಚಿನ ರೂಪದಲ್ಲಿ ಜೋಡಿಸಿರುತ್ತಾರೆ. ಅಲ್ಲದೆ ಮಧ್ಯೆ ಮಧ್ಯೆ ಉರುವಲು ತುಂಬಲು ಅನುಕೂಲವಾಗುವಂತೆ ಉದ್ದನೆಯ ಕಣ್ಣುಗಳನ್ನು ಅಳವಡಿಸಿದೆ. ಇಂಥ ಗೂಡು ಉರುವಲು ತುಂಬಿ ಸಿದ್ಧವಾದ ಅನಂತರ ಗೂಡಿನ ಹೊರಭಾಗದ ತಲವನ್ನು ಕೆಸರಿನಿಂದ ದಟ್ಟವಾಗಿ ಲೇಪಿಸಿ ಉರುವಲನ್ನು ಹೊತ್ತಿಸುತ್ತಾರೆ. ಬೆಂಕಿ ಒಳಗೊಳಗೇ ಕ್ರಮೇಣ ಹರಡಿ ಇಟ್ಟಿಗೆಗಳೆಲ್ಲವನ್ನೂ ಐದು ಅಥವಾ ಆರು ದಿವಸಗಳಲ್ಲಿ ಸಾಕಷ್ಟು ಸುಡುತ್ತದೆ. ಆರಿದ ಅನಂತರ ಗೂಡನ್ನು ಬಿಚ್ಚಿ ಇಟ್ಟಿಗೆಗಳನ್ನು ಹೊರತೆಗೆಯಬಹುದು.

ವಾರನ್ ತರಹೆ ಗೂಡುಗಳಲ್ಲಿ ಅನೇಕ ಕೋಣೆಗಳಿವೆ. ಇವುಗಳಲ್ಲಿ ಒಂದಕ್ಕೊಂದಕ್ಕೆ ಸಂಪರ್ಕವಿರುವುದು. ಇವುಗಳಿಂದ ಹೊರಬರುವ ಹೊಗೆ ಮುಂತಾದ ಅನಿಲಗಳೂ ಪಾರಾಗುವುದಕ್ಕೋಸ್ಕರ ಕೇಂದ್ರದಲ್ಲಿ ಸಾಲು ಸಾಲಾದ ಎತ್ತರದ ಹೊಗೆ ಕೊಳವೆಗಳಿವೆ. ಈ ಗೂಡಿನಲ್ಲಿ 1, 2, 3 ಕೋಣೆಗಳಲ್ಲಿ ಪೇರಿಸಿರುವ ಇಟ್ಟಿಗೆಗಳು ಸುಡುತ್ತಿರುವಾಗ (ಚಿತ್ರ 3), ಹೊರಟ ಉಷ್ಣವಾಯು 4, 5, 6 ಕೋಣೆಗಳನ್ನು ಪ್ರವೇಶಿಸಿ ಅಲ್ಲಿ ಪೇರಿಸಿರುವ ಹಸಿ ಇಟ್ಟಿಗೆಗಳನ್ನು ಒಣಗಿಸಿ ಅಥವಾ ಅರ್ಧ ಬೇಯಿಸಿ ಅಲ್ಲಿಂದ ಮುಂದೆ ಕೇಂದ್ರ ಕೊಳವೆಯ ಮೂಲಕ ಹೊರವಾಯುವಿಗೆ ಸೇರುತ್ತದೆ. 7, 8, 9 ಮತ್ತು 10, 11, 12 ಕೋಣೆಗಳಲ್ಲಿ ಕ್ರಮೇಣ ಆರಿದ ಇಟ್ಟಿಗೆಗಳನ್ನು ಹೊರತೆಗೆಯುವ ಮತ್ತು ಹಸಿ ಇಟ್ಟಿಗೆಗಳನ್ನು ಪೇರಿಸುವ ಕಾರ್ಯ ನಡೆದಿರುವುದು. ಹೀಗೆ ಇಟ್ಟಿಗೆ ಸುಡುವ ಒಣಗಿಸುವ ತುಂಬುವ ಮತ್ತು ಹೊರತೆಗೆಯುವ ಕೆಲಸ ಸತತವಾಗಿ ನಡೆದು ಉರುವಲಿನಿಂದ ಬಂದ ಉಷ್ಣದ ಯಾವ ಭಾಗವೂ ವ್ಯರ್ಥವಾಗದಂತೆ ಪೂರ್ತಿಯಾಗಿ ಉಪಯೋಗಿಸಲಾಗುತ್ತದೆ. (ಕೆ.ಎಸ್.ಕೆ.)

ಇಟ್ಟಿಗೆ ಒಲೆ : ದೊಡ್ಡ ಒಲೆಯ ಪಕ್ಕದಲ್ಲಿ ಹಿಂದಿನ ಕಾಲದಲ್ಲಿ (ವಿಶೇಷವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ) ಕಟ್ಟುತ್ತಿದ್ದ ರಚನೆ. ಒಲೆಯ ಉಷ್ಣ ಅಪವ್ಯಯವಾಗದಂತೆ ಬೇರೆ ವಿಧದ ಉಪಯೋಗಕ್ಕೆ (ಉದಾಹರಣೆಗೆ, ರೊಟ್ಟಿ ಸುಡಲು) ಬರುವಂತೆ ಅಳವಡಿಸುವುದು ಇದರ ಉದ್ದೇಶ. ಇಟ್ಟಿಗೆಯ ಒಲೆಗೆ ಒಂದು ಕಬ್ಬಿಣದ ಬಾಗಿಲಿದೆ. ಒಲೆಯ ಒಳಗಡೆ ಜಾಲರದ ಮೇಲೆ ಸೌದೆ ಅಥವಾ ಇದ್ದಲಿನ ಬೆಂಕಿಯನ್ನು ಮಾಡಿ ಸಹಾಯಕವಾಗಿ ಗಾಳಿ ಕಂಡಿಯನ್ನು ತೆರೆದು ಇಡುವರು. ಸೌದೆ ಅಥವಾ ಇದ್ದಲು ಪೂರ್ತಿ ಉರಿದ ಮೇಲೆ ಗಾಳಿಕಂಡಿಯನ್ನು ಮುಚ್ಚಿ ಜಾಲರದ ಮೇಲಿನ ಬೂದಿಯನ್ನು ಕೆಳಗೆ ತಳ್ಳಿ ಅದರ ಮೇಲೆ ತಿಂಡಿಯನ್ನು ಬೇಯಲು ಇಟ್ಟು ಒಲೆಯ ಬಾಗಿಲನ್ನು ಮುಚ್ಚುತ್ತಾರೆ. ಬಾಗಿಲು ತೆರೆಯಲು, ತಿಂಡಿಯನ್ನು ಒಲೆಯ ಒಳಗಡೆ ಇಡಲು ಒಂದು ತರಹೆ ಉದ್ದವಾದ ಕಬ್ಬಿಣದ ಚಪ್ಪಟೆ ಕೈಯನ್ನು ಉಪಯೋಗಿಸುತ್ತಾರೆ. ಈಗಲೂ ಕೆಲವು ಹಳೆಯಕಾಲದ ದೊಡ್ಡ ಮನೆಗಳಲ್ಲಿ ಇಟ್ಟಿಗೆ ಒಲೆಯನ್ನು ಉಪಯೋಗಿಸುತ್ತಾರೆ. ಆದರೆ ಹೆಚ್ಚಿನ ಉಪಯೋಗ ರೊಟ್ಟಿ ತಯಾರು ಮಾಡುವವರಿಗೆ. (ಬಿ.ಎಲ್.ಸಿ.ಆರ್.)

ನಾಗರಿಕತೆಯ ಸಂಕೇತ : ಇಟ್ಟಿಗೆ ಬೆಳೆದು ಬಂದ ಬಗೆ ನಾಗರಿಕತೆಯ ವಿಕಾಸವನ್ನು ಸೂಚಿಸುತ್ತದೆ. ನೈಸರ್ಗಿಕ ಆವರಣಗಳಾದ ಗುಹೆ ಪೊಟರೆ ಮುಂತಾದವುಗಳಿಂದ ತಾನೇ ರಚಿಸಿದ ಗುಡಿಸಲುಗಳಿಗೆ ಮಾನವ ಪ್ರವೇಶಿಸಿದ್ದು ಮೊದಲ ಹೆಜ್ಜೆ. ಸುಲಭವಾಗಿ ದೊರೆಯುವ ಹಸಿ ಮಣ್ಣುಕಲ್ಲುಗಳಿಂದ ಇಂಥ ಕಟ್ಟಡ ರಚಿತವಾದುದಾಗಿರಬಹುದು. ಮುಂದೆ ಕಲ್ಲುಗಳ ಕೊರತೆಯಾದಾಗಲೊ ಮಣ್ಣುಗೋಡೆ ವಿಕಾರವಾಗಿ ಕಂಡುದರಿಂದಲೊ ಹಸಿಮಣ್ಣನ್ನು ಒಂದು ನಿಯತಾಕಾರಕ್ಕೆ ಕೊಯ್ದು ಪೇರಿಸಿ ಗೋಡೆ ಕಟ್ಟುವ ಕ್ರಮ ಬಳಕೆಗೆ ಬಂದಿರಬಹುದು. ಹೀಗೆ ಒಣಗಿಸಿದ ಗಟ್ಟಿ ಉಂಡೆಗಳೇ ಅತ್ಯಂತ ಪ್ರಾಚೀನ ಇಟ್ಟಿಗೆಗಳು. ಇಂಥ ಇಟ್ಟಿಗೆಗಳನ್ನು ಇಸ್ರೇಲಿನ ಜೆರಿಕೋ ಎಂಬಲ್ಲಿ ನವಶಿಲಾಯುಗದ ಕಾಲದಲ್ಲೇ (ಕ್ರಿ.ಪೂ.ಸು. 7000) ಉಪಯೋಗಿಸುತ್ತಿದ್ದುದು ಕಂಡುಬಂದಿದೆ. ಕಲಸಿದ ಮಣ್ಣನ್ನು ಬುಟ್ಟಿಗಳ ಬದಲಾಗಿ ಮರದ ಹಲಗೆಗಳಿಂದ ಮಾಡಿದ ಅಚ್ಚುಗಳಿಗೆ ತುಂಬಿ ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸುವ ಪದ್ಧತಿ ಕ್ರಮೇಣ ಬೆಳೆಯಿತು. ಈ ಕಾಲದ ಅಚ್ಚುಗಳು ಮಟ್ಟದ ಮರದ ಹಲಗೆಗಳಿಂದಾಗಿ ಇಟ್ಟಿಗೆಗಳು ಚೌಕ ಅಥವಾ ಆಯಾಕಾರವನ್ನು ತಳೆದುವು. ಇಂಥ ಅಚ್ಚುಗಳಲ್ಲಿ ತಯಾರಿಸಿದ ಇಟ್ಟಿಗೆಗಳು ಮೊದಲು ಮೆಸೊಪೊಟೇಮಿಯದಲ್ಲಿ ಕ್ರಿ.ಪೂ. 3500ರ ಸುಮಾರಿನಲ್ಲಿ ಬಳಕೆಗೆ ಬಂದುವು. ಅನತಿಕಾಲದಲ್ಲಿ ಒಣಗಿಸಿದ ಇಟ್ಟಿಗೆಗಳ ಜೊತೆಯಲ್ಲೇ ಆವಿಗೆಯಲ್ಲಿ ಸುಟ್ಟ ಇಟ್ಟಿಗೆಗಳ ಬಳಕೆಯೂ ಬೆಳೆಯಿತು. ಮೆಸೊಪೊಟೇಮಿಯದಲ್ಲಿ ಮೊದಲು ಆವಿಷ್ಕರಿಸಲ್ಪಟ್ಟ ಈ ಹೊಸ ವಿಧಾನ ಕ್ರಮೇಣ ಈಜಿಪ್ಟ್, ಭಾರತದ, ಚೀನ ಮುಂತಾದೆಡೆಗಳಲ್ಲೆಲ್ಲ ಹರಡಿತು. ಮೆಸೊಪೊಟೋಮಿಯ ಬಯಲು ಪ್ರದೇಶದಲ್ಲಿ ಕಲ್ಲು ದೊರಕದಿರುವುದರಿಂದ ಅಲ್ಲಿನ ಪ್ರಾಚೀನ ನಾಗರಿಕತೆಗೆ ಸಂಬಂಧಿಸಿದ ಕಟ್ಟಡಗಳು ಇಟ್ಟಿಗೆಯವೇ ಆಗಿವೆ. ಅಲ್ಲದೆ ಗೋಡೆಗಳ ಹೊರಭಾಗದಲ್ಲಿ ಸುಂದರ ನಮೂನೆಗಳು ಮೂಡಿಸಲು ಅನುಕೂಲವಾಗುವಂತೆ ಒಂದು ಮುಖದಲ್ಲಿ ಅಚ್ಚುಗಳಿಂದ ಒತ್ತಿದ ನಕಾಶೆಗಳನ್ನುಳ್ಳ ಇಟ್ಟಿಗೆಗಳೂ (ಸ್ಟಾಂಪ್ಡ್ ಬ್ರಿಕ್ಸ್) ಗಾಜಿನಂಥ ವಸ್ತುನಿನಿಂದ ಬಣ್ಣ ಬಣ್ಣದ ಮೆರುಗಣ್ಣು ಕೊಟ್ಟಿರುವ ಇಟ್ಟಿಗೆಗಳೂ (ಗ್ಲೇಸ್ಡ್ ಬ್ರಿಕ್ಸ್) ಇಲ್ಲಿ ಕ್ರಿ.ಪೂ. 1500ರ ಸುಮಾರಿನಲ್ಲಿಯೇ ಬಳಕೆಗೆ ಬಂದವು. ಇಂತಹ ಇಟ್ಟಿಗೆಗಳಿಂದ ಕಟ್ಟಿದ ಉತ್ತಮ ರಚನೆಗಳು ಬ್ಯಾಬಿಲಾನಿನ ಹೊಸ ಅರಮನೆಯ (ಕ್ರಿ.ಪೂ. 6ನೆಯ ಶತಮಾನ) ಅವಶೇಷಗಳಲ್ಲಿವೆ. ಯೂರೋಪಿನ ಬಹುಭಾಗಗಳಲ್ಲಿ ಇಟ್ಟಿಗೆ ಉಪಯೋಗ ರೋಮನ್ನರ ಕಾಲದಲ್ಲಿ ಪ್ರಚಾರವಾಯಿತು. ಆ ಕಾಲದ ಸುಟ್ಟ ಇಟ್ಟಿಗೆಗಳಲ್ಲಿ ಕಟ್ಟಿದ ಅನೇಕ ಕಟ್ಟಡಗಳು ಇಂದಿಗೂ ಗಟ್ಟಿಮುಟ್ಟಾಗಿ ಉಳಿದು ಬಂದಿದೆ.

ಭಾರತದಲ್ಲಿ ಇಟ್ಟಿಗೆಯ ಅತ್ಯಂತ ಪ್ರಾಚೀನ ಬಳಕೆ ಕಾಲಿಬಂಗನ್, ಕೊಟ್‍ದೀಜಿ ಮುಂತಾದೆಡೆಗಳಲ್ಲಿ ಹರಪ್ಪ ಸಂಸ್ಕøತಿಗೂ ಹಳೆಯದಾದ ಅವಶೇಷಗಳಲ್ಲಿ (ಕ್ರಿ.ಪೂ.ಸು. 2700)ಯೂ ಕಂಡುಬಂದಿದೆ. ಹರಪ್ಪ ಸಂಸ್ಕøತಿಯ ಕಾಲದಲ್ಲಿ (ಕ್ರಿ.ಪೂ. ಸು. 2500-1500) ಒಣಗಿಸಿದ ಮತ್ತು ಸುಟ್ಟ ಇಟ್ಟಿಗೆಗಳು ವಿಶೇಷವಾಗಿ ಬಳಕೆಯಲ್ಲಿದ್ದುವು. ವೇದಕಾಲದಲ್ಲಿ ಸಹ ಇಟ್ಟಿಗೆ ಉಪಯೋಗದಲ್ಲಿತ್ತೆಂಬುದು ಐತರೇಯ, ಶತಪಥ ಮುಂತಾದ ಬ್ರಾಹ್ಮಣಗಳಿಂದ ತಿಳಿದುಬರುತ್ತದೆ. ಆದರೆ ಸಮಕಾಲೀನ ಇಟ್ಟಿಗೆಗಳಾವುವೂ ಈವರೆಗೆ ಸಿಕ್ಕಿಲ್ಲ. ಪುನಃ ಇಟ್ಟಿಗೆಯ ಉಪಯೋಗದ ಬಗ್ಗೆ ಮಾಹಿತಿ ದೊರಕುವುದು ಕ್ರಿ.ಪೂ. 7ನೆಯ ಶತಮಾನದಲ್ಲಿ. ಈ ಕಾಲದ ಒಂದು ಇಟ್ಟಿಗೆಯ ಕೋಟೆ ಕೌಶಾಂಬಿಯಲ್ಲಿದೆ. ಅಲ್ಲಿಂದ ಮುಂದೆ ಇತ್ತೀಚಿನವರೆಗೂ ಇದರ ಉಪಯೋಗ ಅವ್ಯಾಹತವಾಗಿ ಸಾಗಿ ಬಂದಿದೆ. ಆದರೆ ಈ ಇಟ್ಟಿಗೆಗಳ ಗಾತ್ರ ಮತ್ತು ಆಕಾರ ಕಾಲಕಾಲಕ್ಕೆ ಬದಲಾಯಿಸಿವೆ.

ಕರ್ನಾಟಕದಲ್ಲಿ ಕ್ರಿ.ಪೂ. ಸುಮಾರು 2-1ನೆಯ ಶತಮಾನಗಳಲ್ಲಿ ಇಟ್ಟಿಗೆಯ ಬಳಕೆ ಆರಂಭವಾಯಿತು. ಈಗ ಉಪಲಬ್ಧವಿರುವ ಅತ್ಯಂತ ಪ್ರಾಚೀನ ಇಟ್ಟಿಗೆ ಕಟ್ಟಡವೆಂದರೆ ಚಿತ್ರದುರ್ಗ ಜಿಲ್ಲೆ ಬ್ರಹ್ಮಗಿರಿಯ ಉತ್ಖನನದಲ್ಲಿ ಬೆಳಕಿಗೆ ಬಂದಿರುವ ಒಂದು ಚೈತ್ಯಾಲಯದ ಅಡಿಪಾಯ. ಈ ಪ್ರದೇಶಗಳಲ್ಲಿ ಸಹ ಇಟ್ಟಿಗೆ ಉಪಯೋಗ ಅವಿಚ್ಛಿನ್ನವಾಗಿ ಅಂದಿನಿಂದ ಮುಂದುವರಿದು ಬಂದಿದೆ. ಬೀದರಿನಲ್ಲಿರುವ ಬಹಮನಿ ಅರಸರ ಕಾಲಕ್ಕೆ ಸೇರಿದ ರಂಗೀನ್‍ಮಹಲ್ ಎಂಬ ಕಟ್ಟಡದಲ್ಲಿ ಬಣ್ಣ ಬಣ್ಣದ ಮೆರುಗು ಕೊಟ್ಟ ಇಟ್ಟಿಗೆಗಳನ್ನು ಬಳಸಲಾಗಿದೆ. (ಎಸ್.ಎನ್.)

ಆಧುನಿಕ ಇಟ್ಟಿಗೆಗಳು

ಸಾಂಪ್ರದಾಯಿಕ ಅಳತೆಯ ಇಟ್ಟಿಗೆಗಳು ಭಾರತೀಯ ಮಾನದ ಪ್ರಕಾರ 230 ಮಿ.ಮೀ. ಉದ್ದ, 110 ಮಿ.ಮೀ. ಅಗಲ, 70 ಮಿ.ಮೀ. ದಪ್ಪವಿರಬೇಕು. ಇವುಗಳ ಅಳತೆಗಳ ಏರಿಳಿತಗಳು ಭಾರತೀಯ ಮಾನಕ್ಕನುಗುಣವಾಗಿರಬೇಕು.

ಭಾರತೀಯ ಮಾನವು ಮಾಡ್ಯುಲರ್ ಇಟ್ಟಿಗೆಗಳನ್ನು ಬಳಸಲು ನಿರ್ದೇಶಿಸಿದೆ. ಇದರ ಅಳತೆ 190 ಮಿ.ಮೀ. ಉದ್ದ, 90 ಮಿ.ಮೀ. ಅಗಲ ಮತ್ತು 90 ಮಿ.ಮೀ. ದಪ್ಪ ಇವು ಮೆಟ್ರಿಕ್ ಅಳತೆಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ತೂರುಬೂದಿಯ ಇಟ್ಟಿಗೆಗಳು

ಶಾಖೋತ್ಪನ್ನ ವಿದ್ಯುದಾಗಾರಗಳಲ್ಲಿ ತೂರುಬೂದಿ (ಜಿಟಥಿ ಚಿsh) ಅಪಾರವಾಗಿ ತ್ಯಾಜ್ಯವಾಗಿ ಹೊರಬರುತ್ತದೆ. ಇದನ್ನು ಬಳಸಿ ಇಟ್ಟಿಗೆಗಳನ್ನು ತಯಾರಿಸಲು ಪ್ರಯತ್ನಗಳು ನಡೆದಿವೆ. ತೂರುಬೂದಿಯ ಬಳಕೆಯಿಂದ ಕೃಷಿ ಭೂಮಿಯ ದುರುಪಯೋಗವನ್ನು ನಿವಾರಿಸಬಹುದಾಗಿದೆ. (ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)