ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈಸ್ಕುಲೇಪಿಯಸ್

ವಿಕಿಸೋರ್ಸ್ದಿಂದ

ಈಸ್ಕುಲೇಪಿಯಸ್

	ಗ್ರೀಕ್ ಪುರಾಣದಲ್ಲಿ ಉಲ್ಲೇಖವಾಗಿರುವ, ರೋಗಗುಣಪಡಿಸುವ ದೇವತೆ. ಹಾವು ಬಳಸಿ ಸುತ್ತಿರುವ ಒರಟು ಕೋಲು ಈ ದೇವತೆಯ ದಂಡ. ಪ್ರಪಂಚದಲ್ಲಿ ಇಂದು ಎಲ್ಲೆಲ್ಲೂ ವೈದ್ಯಕ ಸೇವಾ ಸಂಘಗಳಿಗೆ, ಪತ್ರಿಕೆಗಳಿಗೆ ಇದೇ ಲಾಂಛನ (ನೋಡಿ- ಉರಗದಂಡ). ರೋಮಿನಲ್ಲಿ ಆಗ ಎಲ್ಲೆಲ್ಲೂ ಹಬ್ಬಿದ ಮಹಾ ಮಾರಿಯಿಂದ (ಪ್ಲೇಗು) ಬಿಡುಗಡೆ ಮಾಡುವುದೆಂಬ ಸಿಬಿಲ್ಲ ದಿವ್ಯವಾಣಿಯ ಫಲವಾಗಿ, ಗ್ರೀಕರ ವೈದ್ಯದೇವತೆ ಅಸ್‍ಕ್ಲಿಪಿಯಸ್ಸನ (ಲ್ಯಾಟಿನ್ ಹೆಸರು ಈಸ್ಕುಲೇಪಿಯಸ್) ಪಂಥ ರೋಮನ್ನರ ಮತದಲ್ಲಿ ಕ್ರಿ.ಪೂ. ಸುಮಾರು 203ರಲ್ಲಿ ಹುಟ್ಟಿಕೊಂಡಿತು. ಕ್ರಿ.ಪೂ. 293ರಲ್ಲಿ ರೋಮಿನಲ್ಲಿ ಮಹಾಮಾರಿ ಸಾಂಕ್ರಾಮಿಕವಾದಾಗ, ಗ್ರೀಕ್ ದೇವತೆಗಳನ್ನು ರೋಮನ್ನರು ಒಪ್ಪಿಕೊಂಡಾಗ ಅಸ್‍ಕ್ಲಿಪಿಯಸ್ಸಿಗೆ ಈಸ್ಕುಲೇಪಿಯಸ್ ಎಂದು ಹೆಸರು ಕೊಟ್ಟರು. ಹೈಜಿಯ ದೇವತೆಗೆ ಸಂಬಂಧಿಸಿದ್ದರಿಂದ, ಈ ದೇವತೆಯ ದೇಗುಲಗಳಿಗೆ ಅಸ್‍ಕ್ಲಿಪಿಯಸ್‍ಗಳೆಂದು (ಆಸ್ಪತ್ರೆಗಳು) ಹೆಸರಾಯಿತು.

ಪುರಾತನ ಗ್ರೀಕ್ ಪುರಾಣದಲ್ಲಿ ಅಪೊಲೊ (ಸೂರ್ಯ) ದೇವತೆ ಮತ್ತು ಅಪ್ಸರೆ ಕಾರೊನಿಸ್ಸರ ಮತ ಈಸ್ಕುಲೇಪಿಯಸ್. ನರಾಶ್ವ (ಚಿರಾನ್, ಸೆಂಟಾರ್) ಇವನಿಗೆ ವೈದ್ಯ ಹೇಳಿಕೊಟ್ಟಿತಂತೆ. ಯಾವ ಮಾನವನ ಕೈಯಿಂದಲೂ ಆಗದ ರೋಗ ವಾಸಿಮಾಡುವ ಶಕ್ತಿ ಹೊಂದಿದ್ದರಿಂದ ಇವನನ್ನು ವೈದ್ಯ ದೇವನಾಗಿ ಥೆಸೆಲೆಯಲ್ಲಿ ಪೂಜಿಸುತ್ತಿದ್ದರು. ರೋಗಗಳನ್ನು ಹೋಗಲಾಡಿಸುವುದರಲ್ಲಿ ಬಹಳ ಹೆಸರಾದುದನ್ನು ಕಂಡ ಪ್ಲೂಟೊ. ಗ್ರೀಕ್ ಪುರಾಣದ ಪಾತಾಳಲೋಕದಲ್ಲಿನ ಭೂತಗಳನ್ನೇ ಕಡಿಮೆ ಮಾಡಿದನೆಂದು ಆಪಾದಿಸಿದ. ಇವನು ಎಲ್ಲರಿಗೂ ಬೇಕಾದವನಾದ್ದರಿಂದ ಇತರ ದೇವತೆಗಳಿಗೆ ಅಸೂಯೆಯಾಯಿತು. ಜ್ಯೂಸ್ ಇವನನ್ನು ಮಿಂಚಿನಿಂದ ಸಿಗಿದುಹಾಕಿದ. ಇವನು ಸತ್ತಮೇಲೆ ಗ್ರೀಸಿನ ಎಷ್ಟೋ ದೇಗುಲಗಳಲ್ಲಿ ಈಸ್ಕುಲೇಪಿಯಸ್ಸನ ಮೂರ್ತಿಯನ್ನಿರಿಸಿ ಪೂಜಿಸತೊಡಗಿದರು. ರೋಗಿಗಳೂ ಬೇನೆಯಿಂದ ನರಳುವವರೂ ಈ ದೇಗುಲಗಳಿಗೆ ಬರತೊಡಗಿದರು. ಆಗಿನ ಕಾಲದಲ್ಲಿ ಜನಮನ್ನಣೆಗೆ ಪಾತ್ರನಾಗಿ ನಿಜವಾಗೂ ಬದುಕಿದ್ದ ಯಾರೋ ಒಬ್ಬ ಥೆಸಲೆ ದೇಶದ ವೈದ್ಯನ ಸುತ್ತ ಈ ಕಟ್ಟುಕತೆ ಕಟ್ಟಿರುವಂತೆ ತೋರುತ್ತದೆ. ಈ ವೈದ್ಯ ಬಲು ಚುರುಕಿನ ಮದ್ದುಗಳನ್ನು ಕೊಡದೆ. ಜ್ವರವಿದ್ದಾಗ ಮುಖ್ಯವಾಗಿ ಮೂರೋ ಮತ್ತಷ್ಟು ದಿನಗಳೋ ಹೊಟ್ಟೆಗಿಲ್ಲದೆ ಇರಿಸುತ್ತಿದ್ದ. ನೋವು ಹೆಚ್ಚಿದ್ದರೆ, ರಕ್ತ ತೆಗೆಯಬೇಕೆನ್ನುತ್ತಿದ್ದರೂ ಬೇರೂರಿದ ಹಳೆಯ ಕಾಯಿಲೆಗಳಿಗೆ ಉಪವಾಸ. ಅಂಗ ಸಾಧನೆ, ಮಜ್ಜನ, ನೀವುಗೆಗಳನ್ನು ನಿಯಮಿಸುತ್ತಿದ್ದ.

ಎಲ್ಲೆಲ್ಲೂ ಇದ್ದ ಈಸ್ಕುಲೇಪಿಯಸ್ಸಿನ ದೇಗುಲಗಳಲ್ಲಿ ಈ ಚಿಕಿತ್ಸೆಗಳೇ ಹೆಚ್ಚಾಗಿ ನಡೆಯುತ್ತಿದ್ದರೂ ಕಾಸ್, ನಿಡಸ್, ಎಪಿಡಾರಸ್, ಪರ್ಗೆಮಸಿನಲ್ಲಿ ಇದ್ದವಲ್ಲೆ ಮುಖ್ಯವಾದವು ನಡೆಯುತ್ತಿದ್ದವು. ಈ ದೇಗುಲಗಳು ಬಹುಮಟ್ಟಿಗೆ ಕಾಡಿನ ಇಳಿಮೇಡುಗಳ, ಗುಣಕಾರಕ ಚಿಲುಮೆಗಳ ಬಳಿ ಇರುತ್ತಿದ್ದವು. ನಿದ್ರಿಸುವಾಗ ದೇವರು ಗುಣಪಡಿಸುವನೆಂದೂ ಕನಸುಬಿದ್ದರಂತೂ ಇನ್ನೂ ಒಳ್ಳೆಯದು ಎಂದಿದ್ದರಿಂದ ರೋಗಿಗಳು ದೇಗುಲಗಳಲ್ಲೇ ಮಲಗಬೇಕಿತ್ತು. ಒಂದು ದೇಗುಲವನ್ನೂ ಅಲ್ಲಿ ಒಪ್ಪಿಸುತ್ತಿದ್ದ ನೈವೇದ್ಯಗಳನ್ನೂ ಹೆರೊಡಾಸ್ ಬಣ್ಣಿಸಿದ್ದಾನೆ. ಇಲ್ಲಿ ವಾಸಿಯಾದವರೆಲ್ಲ ಸಾಮಾನ್ಯವಾಗಿ ತಮ್ಮ ಹೆಸರು, ರೋಗ, ಗುಣವಾದ ರೀತಿಗಳನ್ನು ಸೂಚಿಸುವ ನೆನಪಿನ ಫಲಕಗಳನ್ನು ತಗಲಿಹಾಕುತ್ತಿದ್ದರು. ಈಸ್ಕುಲೇಪಿಯಸ್ಸನ ಗ್ರಂಥಗಳು ಸಿಗದಿದ್ದರೂ ಈ ಫಲಕಗಳಾದರೂ ಎಪಿಡಾರಸ್‍ನಲ್ಲಿ ದೊರೆತಿವೆ. ಇಲ್ಲೇ ಅವನ ದೇಗುಲಗಳಿವೆ. ಗುಣವಾದವರು ಪ್ರಾಣಿಬಲಿ (ಮುಖ್ಯವಾಗಿ ಹುಂಜ) ಕೊಡುತ್ತಿದ್ದರು. ಈಗಲೂ ಈಜಿಯನ್ ಕಡಲಲ್ಲಿರುವ ಟೆನೋಸ್ ದ್ವೀಪದಲ್ಲಿ ಈ ಪದ್ಧತಿ ಇದೆ.

ಈಸ್ಕುಲೇಪಿಯಸ್ಸಿನ ಮೂರ್ತಿಯನ್ನು ತರಲು ಎಪಿಡಾರಸ್‍ಗೆ ಹೋದ ದೂತ ಆ ದೇವನೇ ಇರುವನೆಂದುಕೊಂಡಿದ್ದ ಒಂದು ಹಾವನ್ನು ತಂದ. ಇದರಿಂದಾಗಿ ಟೈಬರ್ ನದಿಯ ದ್ವೀಪದ ಮೇಲೆ ಅವನಿಗೊಂದು ದೇಗುಲವಾಯಿತು. ಜೀರ್ಣೋದ್ಧಾರದ ಕುರುಹಾಗಿ ಒಂದು ಹಾವು ಬಳಸಿ ಸುತ್ತಿಕೊಂಡಿರುವ ಕೋಲಿನ (ಉರಗದಂಡ) ಮೇಲೆ ಒರಗಿಕೊಂಡು ತೆರೆದೆದೆಯ ನಿಲುವಂಗಿಯಲ್ಲಿ ಈಸ್ಕುಲೇಸಿಯಸ್ ನಿಂತಿರುವಂತೆ ಪುರಾತನ ಚಿತ್ರಕಾರರು ಶಿಲ್ಪ, ನಾಣ್ಯಗಳಲ್ಲಿ ಚಿತ್ರಿಸಿರುವರು. ಈಸ್ಕುಲೇಪಿಯಸ್ಸನ ಹೆಂಡತಿ ಈಪಿಯೋಳೊಂದಿಗೆ ಇದ್ದ ಮಕ್ಕಳಲ್ಲಿ ಗೊತ್ತಿರುವವರು. ಚುರುಕಮತಿಯ ಬಾಲವೈದ್ಯ ಟೆಲಿಸ್ಫೋರಸ್, ಆರೋಗ್ಯ ದೇವತೆ ಹೈಜಿಯ, ಪೆನೇಸಿಯ, ಹೋಮರನ ಇಲಿಯಡ್ ಮಹಾಕಾವ್ಯದಲ್ಲಿ ಹೆಸರಿಸಿರುವ ಶಸ್ತ್ರ ವೈದ್ಯರಾದ ಮಚಾವನ್, ಏಷ್ಯ ಮೈನರಿನ ಪೊಡಿಲೇರಿಗಸ್. ಇವನಿಗೆ ಇನ್ನಷ್ಟು ಮಕ್ಕಳಿದ್ದರು. ತೀರ ಮುಪ್ಪಿನಾಚೆಗೂ ಈಸ್ಕುಲೇಪಿಯಸ್ ಬದುಕಿದ್ದು ಎಲ್ಲೋ ಬಿದ್ದು ಸತ್ತನಂತೆ. ತನ್ನ ಕೈಚಳಕದಿಂದ ಎಲ್ಲ ಮಾನವರನ್ನೂ ಚಿರಂಜೀವಿಗಳಾಗಿ ಮಾಡಿಬಿಟ್ಟಾನೆಂದು ರೊಚ್ಚಿಗೆದ್ದು ಜ್ಯೂಸ್ ಇವನ ಮೇಲೆ ಬಿಟ್ಟ ಮಿಂಚಿನ ಪರಿಣಾಮ ಇದು ಎಂದಿದೆ. ಬರಬರುತ್ತ ಕ್ರಿಸ್ತಮತದ ಪ್ರಭಾವದಿಂದ ಈಸ್ಕುಲೇಪಿಯಸ್‍ನಲ್ಲಿ ಜನರಿಗೆ ಹಿಂದಿದ್ದ ಭಕ್ತಿ ಮಾಸಿಹೋಯಿತು.

(ಎಂ.ಡಿ.)