ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪಾಧ್ಯಾಯ

ವಿಕಿಸೋರ್ಸ್ದಿಂದ

ಉಪಾಧ್ಯಾಯ: ಸಾರ್ವಜನಿಕ ಅಥವಾ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಾಲಕರ ಮತ್ತು ತರುಣರ ಕಲಿವಿನ ಅನುಭವಗಳನ್ನು ನಿರ್ದೇಶಿಸಲು ಅಧಿಕೃತವಾಗಿ ನೇಮಕವಾಗಿರುವ ವ್ಯಕ್ತಿ. ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅನುಭವ ಅಥವಾ ಶಿಕ್ಷಣ ಪಡೆದಿದ್ದು ತನ್ನ ಪ್ರಭಾವಕ್ಕೊಳಗಾಗುವ ಇತರರ ಬೆಳವಣಿಗೆಯನ್ನೂ ವಿಕಾಸವನ್ನೂ ಪೋಷಿಸುವವ. ಅಂಗೀಕೃತ ಅಧ್ಯಾಪಕವೃತ್ತಿ ಶಿಕ್ಷಣ ಸಂಸ್ಥೆಯೊಂದು ರೂಪಿಸಿರುವ ಅಧ್ಯಯನಕ್ರಮವನ್ನು ಯಶಸ್ವಿಯಾಗಿ ಮುಗಿಸಿ, ಆ ಬಗ್ಗೆ ರಾಜ್ಯದ ಅಧಿಕೃತ ಸಂಸ್ಥೆಯಿಂದ ಅರ್ಹತಾಪತ್ರ ಪಡೆದಿರುವ, ಇತರರಿಗೆ (ದೊಡ್ಡವರಿಗೂ ಸೇರಿ) ಪಾಠ ಹೇಳತಕ್ಕ ವ್ಯಕ್ತಿ. ಅಧ್ಯಾಪಕ, ಆಚಾರ್ಯ, ಅಯ್ಯ, ಓಜ, ಗುರು, ಶಿಕ್ಷಕ-ಇವು ಪರ್ಯಾಯವಾಗಿ ಈತನ ಹೆಸರುಗಳು. ಪ್ರಾಚೀನ ಭಾರತದಲ್ಲಿ ಆಚಾರ್ಯ ಅಥವಾ ಗುರು ಎನಿಸಿದವನಿಗೆ ಸಮಾಜದಲ್ಲಿ ಹಿರಿಯ ಸ್ಥಾನವಿತ್ತು. ಆತನ ಗುಣಲಕ್ಷಣಗಳ ಬಗ್ಗೆ ಮತ್ತು ಆತ ನಡೆಸುತ್ತಿದ್ದ ಗುರುಕುಲದ ಬಗ್ಗೆ ತಿಳಿಯಲು (ನೋಡಿ-ಗುರು-1; ಗುರುಕುಲ). ಪ್ರಪಂಚದಲ್ಲಿ ಈಗ ಸುಮಾರು ಒಂದೂವರೆ ಕೋಟಿ ಮಂದಿ ಅಧ್ಯಾಪಕರಿದ್ದಾರೆ. ಪ್ರಾಚೀನ ಕಾಲದಲ್ಲಿ ಎಲ್ಲೋ ಕೆಲವರು ಜೀವನದ ಆದರ್ಶ, ದೃಷ್ಟಿ, ಧ್ಯೇಯಗಳಿಂದ ಪ್ರೇರಿತರಾಗಿ ಈ ವೃತ್ತಿಯನ್ನು ಅನುಸರಿಸುತ್ತಿದ್ದರು. ವರ್ಷಂಪ್ರತಿ ಲಕ್ಷಗಟ್ಟಲೆ ಅಧ್ಯಾಪಕರ ಅಗತ್ಯವಿರುವ ಈ ಕಾಲದಲ್ಲಿ ಅವರೆಲ್ಲರೂ ಆದರ್ಶ, ಸಾಧನೆಗಾಗಿಯೇ ಬರುವರೆಂದು ಹೇಳುವಂತಿಲ್ಲ; ಅದು ಸಾಧ್ಯವೂ ಇಲ್ಲ. ಉಪಾಧ್ಯಾಯರ ವೃತ್ತಿಯೂ ಈಗ ಇತರ ವೃತ್ತಿಗಳಂತೆ ಜೀವನೋಪಾಯಕ್ಕಾಗಿ ಅನುಸರಿಸುವ ಒಂದು ಸಾಮಾನ್ಯ ವೃತ್ತಿಯಾಗುತ್ತಿದೆ.

ಮಿಕ್ಕ ವೃತ್ತಿಗಳೊಡನೆ ಹೋಲಿಸಿದರೆ ಅಧ್ಯಾಪಕವೃತ್ತಿಯ ಹೊಣೆಗಾರಿಕೆ ಹೆಚ್ಚಿನದೆಂಬುದು ಹಿಂದಿನಿಂದಲೂ ಗೊತ್ತೇ ಇದೆ. ಮುಂದಿನ ಪೀಳಿಗೆಯ ಸ್ವರೂಪವನ್ನು ರೂಪಿಸುವ ಹಿರಿಯ ಹೊಣೆಗಾರಿಕೆ ಆ ವ್ಯಕ್ತಿಗೆ ಸಂದಿದೆ. ಆದ್ದರಿಂದ ತಕ್ಕಮಟ್ಟಿಗಾದರೂ ಆ ವೃತ್ತಿಯನ್ನನುಸರಿಸುವ ವರು ವೃತ್ತಿಯ ಆದರ್ಶವನ್ನು ಪಾಲಿಸುವುದು ಅನಿವಾರ್ಯವೆನಿಸುತ್ತದೆ. ಆದ್ದರಿಂದ ಯಾವ ದೇಶದಲ್ಲೇ ಆಗಲಿ ಶಿಕ್ಷಣ ವ್ಯವಸ್ಥೆಯ ಹೊಣೆಯನ್ನು ಹೊತ್ತಿರುವ ಸರ್ಕಾರ ತನ್ನ ಶಿಕ್ಷಣ ಸಂಸ್ಥೆಗಳಿಗೆ ಸಮರ್ಥ ಉಪಾಧ್ಯಾಯರನ್ನು ಆರಿಸಬೇಕಾಗುತ್ತದೆ.

ಶಿಕ್ಷಣ ಕಾರ್ಯದಲ್ಲಿ ಪಾತ್ರ ವಹಿಸತಕ್ಕ ವಿದ್ಯಾರ್ಥಿ, ಪಠ್ಯವಿಷಯ ಮತ್ತು ಅಧ್ಯಾಪಕ-ಈ ಮೂರರಲ್ಲಿ ಪ್ರಥಮ ಪ್ರಾಧಾನ್ಯ ಮಕ್ಕಳಿಗಿದ್ದರೂ ಅದರ ಯಶಸ್ಸು ಮಾತ್ರ ಶಿಕ್ಷಕರನ್ನೇ ಅವಲಂಬಿಸಿರುತ್ತದೆ; ಉತ್ತಮ ಪಠ್ಯವಸ್ತು, ಉತ್ತಮ ಪಠ್ಯಪುಸ್ತಕ, ಉತ್ತಮ ಶಿಕ್ಷಣಯೋಜನೆ, ಪ್ರತಿಭಾವಂತ ಮಕ್ಕಳು-ಇಷ್ಟೆಲ್ಲ ಇದ್ದರೂ ತಕ್ಕ ಉಪಾಧ್ಯಾಯರಿಲ್ಲದಿದ್ದರೆ ಅವೆಲ್ಲ ನಿರರ್ಥಕವಾಗ ಬಹುದು. ಅದಕ್ಕಾಗಿ ಈಗ ಎಲ್ಲ ದೇಶಗಳಲ್ಲೂ ಇರುವ ಅವಕಾಶದಲ್ಲಿ ಉತ್ತಮ ವ್ಯಕ್ತಿಗಳನ್ನು ಉಪಾಧ್ಯಾಯ ವೃತ್ತಿಗೆ ಆರಿಸುವ ಯತ್ನ ನಡೆಯುತ್ತಿದೆ. ಅಧ್ಯಾಪಕರನ್ನು ಆರಿಸುವಾಗ ಒಳ್ಳೆಯ ಉಪಾಧ್ಯಾಯರಲ್ಲಿರಬೇಕಾದ ಲಕ್ಷಣಗಳ ಕಡೆಗೆ ಗಮನ ಕೊಡಬೇಕಾಗುತ್ತದೆ. ಕೆಟಲ್ ನಡೆಸಿರುವ ಸಂಶೋಧನೆಗಳ ಆಧಾರದ ಮೇಲೆ ಹೇಳುವುದಾದರೆ ಯಶಸ್ವೀ ಅಧ್ಯಾಪಕರಲ್ಲಿ ಹಲವು ಲಕ್ಷಣಗಳಿರುವುದು ಅಗತ್ಯ, ಜೊತೆಗೆ ಆ ಒಂದೊಂದು ಲಕ್ಷಣವೂ ಯಾವ ಪ್ರಮಾಣದಲ್ಲಿ ಅಧ್ಯಾಪಕರ ಯಶಸ್ಸಿಗೆ ಕಾರಣವಾಗುವುದೆಂಬುದೂ ನಿಷ್ಕರ್ಷೆಯಾಗಿದೆ. ಆ ಅಂಶಗಳನ್ನೂ ವೃತ್ತಿಯ ಯಶಸ್ಸಿನಲ್ಲಿ ಅವು ವಹಿಸುವ ಪಾತ್ರದ ಪ್ರಮಾಣವನ್ನೂ ಕೆಳಗಿನ ಪಟ್ಟಿಯಲ್ಲಿ ಸೂಚಿಸಿದೆ:

ಅಧ್ಯಾಪಕರ ಲಕ್ಷಣ ಯಶಸ್ಸಾಧನೆಯಲ್ಲಿ ಆಯಾ ಲಕ್ಷಣ ವಹಿಸುವ ಪ್ರಭಾವದ ಶೇಕಡ ಪ್ರಮಾಣ
ಬುದ್ಧಿಶಕ್ತಿ 10
ವ್ಯಕ್ತಿತ್ವ ಮತ್ತು ಸಂಕಲ್ಪ 10
ತೆರೆದ ಮನಸ್ಸು 10
ಸಹಾನುಭೂತಿ 10
ಸರಸ ಪ್ರವೃತ್ತಿ 10
ಆದರ್ಶ 10
ದಯೆ 5
ಉತ್ಸಾಹ 5
ಕಷ್ಟ ಸಹಿಷ್ಣುತೆ 5
ಆತ್ಮಸಂಯಮ 5

ಕೆಟಲ್ ಸೂಚಿಸುವ 22 ಲಕ್ಷಣಗಳಲ್ಲಿ ಈ ಹತ್ತು ಅಂಶಗಳು ವೃತ್ತಿ ಯಶಸ್ಸಿಗೆ ಶೇ.80ರಷ್ಟು ನೆರವಾಗುತ್ತವೆ; ಮಿಕ್ಕ 12 ಲಕ್ಷಣಗಳು ಇನ್ನುಳಿದ ಶೇ. 20ರಷ್ಟು ನೆರವಾಗುತ್ತವೆ. ಎಂದರೆ ಅಧ್ಯಾಪಕವೃತ್ತಿಗೆ ಆರಿಸಿಕೊಳ್ಳುವಾಗ ಈ ಹತ್ತು ಅಂಶಗಳನ್ನು ನಿರ್ಣಾಯಕ ಅಂಶಗಳ ನ್ನಾಗಿ ಮಾಡಿಕೊಳ್ಳಬೇಕು. ಆದರೆ ಈ ಅಂಶಗಳನ್ನು ಅಳೆದು ನೋಡುವುದು ಹೇಗೆ? ಇವುಗಳಲ್ಲಿ ಕೆಲವು ಲಕ್ಷಣಗಳನ್ನು ಅಳೆಯಲು ಮನೋವೈಜ್ಞಾನಿಕ ಪರೀಕ್ಷಣಗಳು ಈಗ ರೂಪುಗೊಂಡಿವೆ. ಅವನ್ನು ಬಳಸಿ ಆಯಾ ಲಕ್ಷಣಗಳ ಪ್ರಮಾಣವನ್ನು (ಉತ್ತಮ, ಮಧ್ಯಮ ಅಥವಾ ಅಧಮ) ನಿಷ್ಕರ್ಷಿಸಬಹುದು, ಇದು ವೃತ್ತಿಶಿಕ್ಷಣಕ್ಕೆ ಅಭ್ಯರ್ಥಿಗಳನ್ನು ಆರಿಸುವಾಗ ನಡೆಯಬೇಕು. ಅಧ್ಯಾಪಕವೃತ್ತಿಯ ಕೆಲವು ಸಾಮಾನ್ಯ ಲಕ್ಷಣಗಳನ್ನು ಮೇಲೆ ಸೂಚಿಸಿದ್ದರೂ ಬೇರೆ ಬೇರೆ ದೃಷ್ಟಿಕೋನದಿಂದ ಪರೀಕ್ಷಿಸಿದಾಗ ಬೇರೆ ಬೇರೆ ಲಕ್ಷಣಗಳು ಮುಖ್ಯವೆನಿಸುತ್ತವೆ. ಆ ಮುಖವಾಗಿಯೂ ಕೆಲವು ಸಂಶೋಧನೆಗಳು ನಡೆದಿವೆ. ಅವೆಲ್ಲದರಿಂದ ಸಂಗ್ರಹಿಸಿ ಆ ಲಕ್ಷಣಗಳನ್ನು ನಾಲ್ಕು ರೀತಿಯವಾಗಿ ವಿಂಗಡಿಸಬಹುದು; ಮಾನವೀಯ ಲಕ್ಷಣಗಳು, ವೃತ್ತಿ ಲಕ್ಷಣಗಳು, ಸಾಂಸ್ಕೃತಿಕ ಲಕ್ಷಣಗಳು, ಮತ್ತು ಆರೋಗ್ಯ ಲಕ್ಷಣಗಳು.

1. ಮಾನವೀಯ ಲಕ್ಷಣಗಳು: ಮಕ್ಕಳು ಶಿಕ್ಷಕರಲ್ಲಿ ಆಸಕ್ತಿ ತಾಳಿ ಅವರ ಬಗ್ಗೆ ಗೌರವಾಭಿ ಮಾನಗಳಿಂದಿದ್ದು ಅವರ ಸಲಹೆ, ಸಹಕಾರಗಳನ್ನು ಸ್ವೀಕರಿಸಿ ಅವರ ನೇತೃತ್ವದಲ್ಲಿ ತಮ್ಮ ಪ್ರಗತಿಯನ್ನು ಸಾಧಿಸಬೇಕಾದರೆ ಪ್ರಥಮತಃ ಶಿಕ್ಷಕರು ಕೆಲವು ಮಾನವೀಯ ಗುಣಗಳನ್ನು ಹೊಂದಿರಬೇಕು. ಅವುಗಳಲ್ಲಿ ಶೀಲಸಂಪನ್ನತೆ, ವಿನಯ, ದಯೆ, ಮಕ್ಕಳ ಬಗ್ಗೆ ಸಹಜವಾದ ಮಮತೆ, ಸಹನೆ, ಹಿತಕರವೆನಿಸುವ ಶರೀರ ರಚನೆ, ನ್ಯಾಯಪರತೆ, ನಿಷ್ಪಕ್ಷಪಾತಭಾವನೆ, ದೃಢಚಿತ್ತ, ಗಾಂಭೀರ್ಯ, ಒಳ್ಳೆಯದರ ಬಗ್ಗೆ ಅಭಿಮಾನ ಮತ್ತು ಸಹಕಾರ ಭಾವನೆ-ಇವು ಮುಖ್ಯವಾದವು. ಇವೆಲ್ಲ ಬಹುಮಟ್ಟಿಗೆ ಜೀವನದಲ್ಲಿ ರೂಢಿಸಿಕೊಂಡವೇ ಆದರೂ ಅನುವಂಶೀಯವಾಗಿ ಬರುವ ಮೂಲಪ್ರವೃತ್ತಿಗಳನ್ನು ಅನುಸರಿಸಿರುತ್ತವೆ. ಅಂಥ ಉತ್ತಮ ಅನುವಂಶೀಯ ಪ್ರವೃತ್ತಿಗಳನ್ನು ಪಡೆದಿರುವ ಕೆಲವರು ಸುಲಭವಾಗಿ ಸನ್ನಿವೇಶ, ಸಂಸ್ಕಾರಗ ಳಿಂದ ಉತ್ತಮ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳಬಲ್ಲರು, ಲಕ್ಷಗಟ್ಟಲೆ ಅಧ್ಯಾಪಕರು ಬೇಕಾಗಿರುವ ಈ ಕಾಲದಲ್ಲಿ ಅಂಥವರು ಸಿಕ್ಕವುದಾದರೂ ಹೇಗೆ ಸಾಧ್ಯ? ಅಷ್ಟಾಗಿ ಅನುವಂಶೀಯ ಸಂಪತ್ತಿಲ್ಲದವರು ಶಿಕ್ಷಣ ಸಂಸ್ಕಾರಗಳಿಂದ ಸ್ವಲ್ಪ ಮಟ್ಟಿಗಾದರೂ ಆ ಗುಣ ಧರ್ಮಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಥವರ ಪಾಲಿಗೆ ವೃತ್ತಿ ಶಿಕ್ಷಣ, ವೃತ್ತಿಯಲ್ಲಿ ದೊರಕುವ ಅನುಭವ-ಇವೆಲ್ಲ ತುಂಬ ಸಹಕಾರಿಯಾಗತಕ್ಕ ಸಿದ್ಧತಾಕಾರ್ಯ ಕ್ರಮಗಳು.

2. ವೃತ್ತಿಲಕ್ಷಣಗಳು: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಹಲವು ಸಲ್ಲಕ್ಷಣಗಳೂ ಶಿಕ್ಷಣ ವೃತ್ತಿಗೆ ಅಗತ್ಯ: ಬಹುಮಟ್ಟಿಗೆ ಅವೆಲ್ಲ ವೃತ್ತಿಶಿಕ್ಷಣದಿಂದ ದೊರೆಯುವ ಕುಶಲ ಅಭ್ಯಾಸಗಳ ರೂಪದಲ್ಲೋ ಆದರ್ಶಗಳ ರೂಪದಲ್ಲೋ ಇರುತ್ತವೆ. ಅವುಗಳಲ್ಲಿ 1. ಸ್ಪಷ್ಟವಾಗಿ ಭಾವಗಳನ್ನು ವ್ಯಕ್ತಪಡಿಸುವಂತೆ ಮಾತಾಡುವ ಅಭ್ಯಾಸ, 2. ದೋಷರಹಿತ ಭಾಷೆಯಲ್ಲಿ ಸರಿಯಾಗಿ ಉಚ್ಚರಿಸುವ ಅಭ್ಯಾಸ, 3. ಮಕ್ಕಳ ಮನೋಜೀವನಕ್ಕೆ ಸಂಬಂಧಿಸಿದ ಪರಿಜ್ಞಾನ, 4.ಶಿಕ್ಷಣದ ಗುರಿಯ ಬಗ್ಗೆ ಸ್ಪಷ್ಟವಾದ ಅರಿವು ಮತ್ತು ನಿಷ್ಠೆ, 5. ಶಿಕ್ಷಣವೃತ್ತಿಯಲ್ಲಿ ಆಸಕ್ತಿ. 6.ಬೋಧನೆ ಮತ್ತು ಕಲಿಕೆಗಳ ಬಗ್ಗೆ ತಕ್ಕ ಷ್ಟು ಜ್ಞಾನ ಮತ್ತು ಕೌಶಲ. 7. ಮಾನವ ಜೀವನದಲ್ಲಿ ವಿಶಾಲವಾದ ಆಸಕ್ತಿ. 8. ಹೊಂದಿಕೊಳ್ಳುವ ಶಕ್ತಿ ಮತ್ತು ಕ್ರಿಯಾತ್ಮಕ ಆಸಕ್ತಿ-ಇವು ಮುಖ್ಯವಾದವು. ಇವೆಲ್ಲ ಬಹುಮಟ್ಟಿಗೆ ವೃತ್ತಿಶಿಕ್ಷಣದಿಂದ ದೊರೆಯತಕ್ಕವಾಗಿದ್ದರೂ ಇವು ದೃಢಗೊಂಡು ಫಲಕಾರಿಯಾಗಿ ಕೆಲಸಮಾಡುವಂತಾಗುವುದು ವೃತ್ತಿನಿರತರಾದಮೇಲೆಯೆ.

3. ಸಾಂಸ್ಕೃತಿಕ ಲಕ್ಷಣಗಳು: ಉಪಾಧ್ಯಾಯರು ಜನಾಂಗದ ಸಂಸ್ಕೃತಿ, ನಾಗರಿಕತೆಗಳನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹಸ್ತಗತ ಮಾಡುವ ಹೊಣೆಗಾರಿಕೆಯನ್ನು ಹೊತ್ತಿರುತ್ತಾರೆ. ಆದ್ದರಿಂದ ಅವರಿಗೆ ತಮ್ಮ ಜನಾಂಗದ ಸಂಸ್ಕೃತಿ ನಾಗರಿಕತೆಗಳ ಪರಿಚಯ ಅಗತ್ಯ; ಜೊತೆಗೆ ಆ ಜನತೆಯ ಜೀವನದಲ್ಲಿ ಪ್ರಚಾರದಲ್ಲಿರುವ ಮೌಲ್ಯಗಳನ್ನು ಅರಿತು, ಅಲ್ಲಿನವರ ಆದರ್ಶಗಳಿಗೆ ಒಪ್ಪುವಂತೆ ತಮ್ಮ ದೃಷ್ಟಿ ಧ್ಯೇಯಗಳನ್ನವರು ರೂಪಿಸಿಕೊಂಡಿರಬೇಕು. ಇಲ್ಲವಾದರೆ ಮಕ್ಕಳ ಮತ್ತು ಅಲ್ಲಿನ ಸಮಾಜದ ವಿಶ್ವಾಸವನ್ನಾಗಲಿ ಅಭಿಮಾನವನ್ನಾಗಲಿ ಪಡೆದುಕೊಳ್ಳುವುದು ಕಷ್ಟ. ಅಂಥ ಸಾಂಸ್ಕೃತಿಕ ಸಿದ್ಧಿಯಲ್ಲಿ ಮುಖ್ಯವಾದ ಅಂಶಗಳೆಂದರೆ-1. ಬೋಧಿಸತಕ್ಕ ವಿಷಯದಲ್ಲಿ ತಕ್ಕ ಷ್ಟು ಪರಿಜ್ಞಾನ, 2. ಸಮಾಜರಚನೆಯ ಪರಿಚಯ 3. ಜನಾಂಗದ ಸಂಸ್ಕೃತಿ ನಾಗರಿಕತೆಗಳ ಇತಿಹಾಸದ ಪರಿಚಯ, 4. ಜನಾಂಗದ ತತ್ತ್ವದೃಷ್ಟಿಯ ಪರಿಚಯ, 5 ಜೀವನದ ಆಶೆ ಆಕಾಂಕ್ಷೆಗಳ ಅರಿವು 6. ಅಲ್ಲಿ ಪ್ರಚಾರದಲ್ಲಿರುವ ದೃಷ್ಟಿಧ್ಯೇಯಗಳು, ರುಚಿಯ ಸ್ವರೂಪ, ನಯನಾಜೂಕುಗಳು-ಇವೆಲ್ಲದರ ಅನುಸರಣೆ, 7. ತಮ್ಮ ಜೀವನದಲ್ಲಿ ಜನಾಂಗದ ಮೌಲ್ಯಗಳ ಅನುಷ್ಠಾನ. ಈ ಸಾಂಸ್ಕೃತಿಕ ಲಕ್ಷಣಗಳೆಲ್ಲ ಶಿಕ್ಷಣದಿಂದ ಲಭಿಸಬೇಕು. ಅದಕ್ಕಾಗಿಯೇ ಶಿಕ್ಷಣ ವೃತ್ತಿಗೆ ಬರತಕ್ಕವರಿಗೆ ವೃತ್ತಿ ಶಿಕ್ಷಣದ ಜೊತೆಗೆ ಕನಿಷ್ಠ ಮಟ್ಟದ ಸಾಂಸ್ಕೃತಿಕ ಶಿಕ್ಷಣವನ್ನೂ ಗೊತ್ತುಮಾಡಿರುವುದು. ಮೇಲೆ ಉಲ್ಲೇಖಿಸಿದ ತ್ರಿಮುಖ ಲಕ್ಷಣಗಳೂ ಒಬ್ಬ ಉಪಾಧ್ಯಾಯನಲ್ಲೇ ಇರುವುದು ಅಗತ್ಯವಾದರೂ ಅಂಥ ಸಕಲ ಸಂಪನ್ನತೆಯ ಸಂಸ್ಕಾರ ಪಡೆದಿರುವ ಉಪಾಧ್ಯಾಯರು ಸಿಕ್ಕುವುದು ಅಪರೂಪ. ಆದರೂ ಆ ಲಕ್ಷಣಗಳಲ್ಲಿ ಬಹು ಅಂಶಗಳನ್ನು ತಕ್ಕ ಷ್ಟು ಉತ್ತಮಮಟ್ಟ ದಲ್ಲಿ ಪಡೆದಿರುವವರ ಸಂಖ್ಯೆ ತಕ್ಕಮಟ್ಟಿಗೆ ಇದ್ದೇ ಇರುತ್ತದೆ. ಅದು ಪ್ರಕೃತಿಧರ್ಮ. ಸು. ಶೇ. 60 ಪ್ರಮಾಣದಲ್ಲಿತಕ್ಕ ಅಂಥ ವ್ಯಕ್ತಿಗಳಲ್ಲಿ ಬಹುಮಂದಿ ಶಿಕ್ಷಣವೃತ್ತಿಗೆ ಬರಲೊಲ್ಲರು. ವಿದ್ಯಾವಂತರಲ್ಲಿ ಶೇ.ಸು.15 ಮಾತ್ರ ಈ ವೃತ್ತಿಗೆ ಬರುತ್ತಾರೆ. ಹಾಗೂ ಇನ್ನೆಲ್ಲೂ ಅವಕಾಶ ದೊರಕದ ಕೆಳಗಿನ ಅಂತಸ್ತಿನವರೇ ಅವರಲ್ಲಿ ಅಧಿಕವಾಗಿರುತ್ತಾರೆ. ನಾವು ಎಷ್ಟೇ ಎಚ್ಚರಿಕೆ ವಹಿಸಿ ಸೂಕ್ತವಾದವರನ್ನು ಆರಿಸಿಕೊಳ್ಳಲು ಯತ್ನಿಸಿದರೂ ಅಂಥ ಮೇಲ್ಮಟ್ಟದ ವ್ಯಕ್ತಿಗಳು ಸಿಕ್ಕದಿರುವುದಕ್ಕೆ ಇದೂ ಒಂದು ಕಾರಣ.

4. ಆರೋಗ್ಯ ಲಕ್ಷಣಗಳು: ಯಾವ ವೃತ್ತಿಯೇ ಆಗಲಿ, ಅದರಲ್ಲಿ ನಿರತರಾದವರ ದೇಹಸ್ಥಿತಿ ಅವರ ಕೆಲಸದ ದಕ್ಷತೆಯ ಮೇಲೆ ಪರಿಣಾಮ ಬೀರುವುದು ಸ್ವಾಭಾವಿಕವಾದುದು. ದೈಹಿಕ ಆರೋಗ್ಯ ಆ ದಕ್ಷತೆಗೆ ನೇರವಾಗಿ ಸಂಬಂಧಿಸಿದ್ದು ತಾತ್ಕಾಲಿಕ ಪರಿಣಾಮ ಬೀರುವಂಥದು. ಆದರೆ ಅಷ್ಟು ತೀಕ್ಷ್ಣವಲ್ಲದಿದ್ದರೂ ದೀರ್ಘಕಾಲದ ದುಷ್ಪರಿಣಾಮ ಬೀರತಕ್ಕ ರೀತಿಯದು ಅವರ ಮಾನಸಿಕ ಅಸ್ವಸ್ಥತೆ. ಆದ್ದರಿಂದ ಅದನ್ನು ಮಾತ್ರ ಇಲ್ಲಿ ವಿವರವಾಗಿ ಪರಿಶೀಲಿಸಿದೆ.

ವೃತ್ತಿದಕ್ಷತೆಯಲ್ಲಿ ಅಧ್ಯಾಪಕರ ಮಾನಸಿಕ ಆರೋಗ್ಯ ಮುಖ್ಯವೆಂಬ ಅಂಶ ಈಗ ಸ್ಪಷ್ಟವಾಗಿದೆ. ದೇಹವೇ ಬೇರೆ, ಮನಸ್ಸೇ ಬೇರೆ ಎನ್ನುತ್ತಿದ್ದ ಕಾಲವೊಂದಿತ್ತು. ಒಂದನ್ನುಳಿದು ಇನ್ನೊಂದು ಕೆಲಸಮಾಡುವಂತಿಲ್ಲವೆಂಬುದು ಈಗ ಸ್ಪಷ್ಟಪಟ್ಟಿದೆ. ದೇಹ, ಮನಸ್ಸು ಎರಡೂ ಆರೋಗ್ಯದಿಂದಿರುವುದು ಅವರೆಡರ ಕ್ಷೇಮಕ್ಕೂ ಅಗತ್ಯ. ಒಳ್ಳೆಯ ದೇಹದಲ್ಲಿ ಒಳ್ಳೆಯ ಮನಸ್ಸು ಎಂಬ ಹಳೆಯ ಮಾತು ಮತ್ತೆ ಆಧುನಿಕವಾಗಿ ತೋರುತ್ತಿದೆ. ವ್ಯಕ್ತಿ ಅನುಭವಿಸುವ ನಿರಾಶೆ, ಘರ್ಷಣೆ. ಆಘಾತ ಇತ್ಯಾದಿ ಅಹಿತ ಪರಿಣಾಮಗಳು ಮನಸ್ಸಿನ ರೋಗರುಜಿನಗಳಿಗೆ ಕಾರಣವೆನಿಸುತ್ತದೆ. ಅವು ನಮ್ಮ ಅರಿವಿಗೆ ನಿಲುಕದ ಅಜ್ಞಾತ ಮನಸ್ಸಿನಲ್ಲಿ ಮುದುರಿಕೊಂಡು ಸಂಕೀರ್ಣತೆಯ ಸ್ವರೂಪವನ್ನು ತಾಳಿ ನಿತ್ಯಜೀವನದ ವರ್ತನೆಗಳ ಮೇಲೆ ಅಹಿತ ಪ್ರಭಾವವನ್ನು ಬೀರುತ್ತಿರುತ್ತವೆ. ಅದೇ ಮನೋರೋಗ, ಅದರಿಂದ ಅಹಿತ ವ್ಯಕ್ತಿತ್ವ ಲಕ್ಷಣಗಳು ಮೂಡಿಕೊಳ್ಳು ತ್ತವೆ; ವ್ಯಕ್ತಿಗೆ ನೆಮ್ಮದಿ ಕಡಿಮೆಯಾಗುತ್ತದೆ; ತಾನು ಅನುಸರಿಸುವ ವೃತ್ತಿಯಲ್ಲಿ ದಕ್ಷತೆ ಕುಂದುತ್ತದೆ. ಈ ಮಾತುಗಳು ಉಪಾಧ್ಯಾಯ ವೃತ್ತಿಗೆ ಅಕ್ಷರಶಃ ಅನ್ವಯಿಸುತ್ತವೆ. ಅವರು ದಕ್ಷರಾಗಿರಬೇಕೆಂದು ಆಶಿಸುವುದಾದರೆ ಅವರ ಮಾನಸಿಕ ಆರೋಗ್ಯದ ಕಡೆ ಗಮನವೀಯು ವುದು ತೀರ ಅಗತ್ಯ.

ಮಾನಸಿಕ ಆರೋಗ್ಯವುಳ್ಳ ಉಪಾಧ್ಯಾಯರ ಲಕ್ಷಣಗಳು ಹೀಗಿವೆ; ಹಿಂದೆ ದಕ್ಷ ಶಿಕ್ಷಕರ ಲಕ್ಷಣಗಳನ್ನು ಉಲ್ಲೇಖಿಸಿದೆ. ಅವೆಲ್ಲ ಬಹುಮಟ್ಟಿಗೆ ಮಾನಸಿಕವಾಗಿ ಆರೋಗ್ಯದಿಂದಿ ದ್ದವರ ಲP್ಪ್ಷಣಗಳೇ. ಎಂದರೆ ಮಾನಸಿಕ ಆರೋಗ್ಯದ ಲಕ್ಷಣಗಳು ದಕ್ಷಶಿಕ್ಷಕರ ಲಕ್ಷಣಗಳೂ ಆಗಿರುತ್ತವೆ. ಆದರೂ ಮಾನಸಿಕವಾಗಿ ಆರೋಗ್ಯದಿಂದಿರುವ ಉಪಾಧ್ಯಾಯರ ಲಕ್ಷಣಗಳನ್ನು ಸಂಶೋಧಕರು ಪ್ರತ್ಯೇಕವಾಗಿ ನಿರ್ಧರಿಸಿರುವರು. ಅವುಗಳಲ್ಲಿ 1. ಬೋಧಿಸುವ ವಿಷಯದಲ್ಲಿ ಪಾಂಡಿತ್ಯ. 2. ವೃತ್ತಿಯ ಆದರ್ಶಗಳಲ್ಲಿ ವ್ಯಕ್ತಿಯ ಆಸಕ್ತಿ, 3. ಪರಿಣಾಮಕಾರಿಯಾಗುವಂತೆ ಬೋಧಿಸುವ ಕೌಶಲ, 4. ಮಕ್ಕಳಲ್ಲಿ ದಯೆ, ಮಮತೆ ಮತ್ತು ವಿಶ್ವಾಸ, 5. ಭಾವನೆಗಳನ್ನು ನಿರ್ವಿಕಾರವಾಗಿ ವ್ಯಕ್ತಪಡಿಸುವ ಶಕ್ತಿ, 6. ಪಕ್ಷಪಾತರಹಿತವೂ ಮಾನವೀಯವೂ ಆದ ಸ್ವಭಾವ, 7. ಮಕ್ಕಳ ಅಭಿವೃದ್ಧಿಯಲ್ಲಿ ಆಸಕ್ತಿ. 8. ಮಕ್ಕಳ ಜೀವನದಲ್ಲಿ ಕುತೂಹಲ, ಅವರ ಕಷ್ಟಗಳಲ್ಲಿ ಅನುಕಂಪ, ಅವರ ಶಕ್ತಿವಿಶೇಷಗಳಲ್ಲಿ ನಂಬಿಕೆ, ಅವುಗಳ ವಿಶ್ಲೇಷಣದಲ್ಲಿ ಕುತೂಹಲ, ಅವರ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡುವ ವೃತ್ತಿಧರ್ಮ. 9 ವಿನೋದ ಮತ್ತು ಸರಸಪ್ರವೃತ್ತಿ ಮತ್ತು 10. ಗಾಂಭೀರ್ಯ ಪ್ರವೃತ್ತಿ-ಇವು ಮುಖ್ಯವಾದವು. ಇವೆಲ್ಲ ಒಳ್ಳೆಯ ಶಿಕ್ಷಕರಲ್ಲಿ ಇರುವುವೆಂದು ಆಗಲೇ ಸೂಚಿಸಿದೆ. ಇವು ಮಾನಸಿಕ ಆರೋಗ್ಯವುಳ್ಳ ಶಿಕ್ಷಕರಲ್ಲೂ ಇರುವುದ ರಿಂದ ದಕ್ಷತೆಗೂ ಮಾನಸಿಕ ಆರೋಗ್ಯಕ್ಕೂ ನಿಕಟಸಂಬಂಧವಿರುವುದು ವ್ಯಕ್ತಪಡುತ್ತದೆ. ಶಿಕ್ಷಕವೃತ್ತಿಯಲ್ಲಿರುವವರಲ್ಲಿ ಶೇ. 33ಕ್ಕೂ ಹೆಚ್ಚು ಮಂದಿ ಮನೋರೋಗದಿಂದ ನರಳತಕ್ಕವರೆಂದು ಹಲವು ಸಂಶೋಧನೆಗಳು ಸೂಚಿಸಿವೆ. ಕೆಲವರಲ್ಲಿ ಈ ರೋಗ ಆರಂಭಾವಸ್ಥೆಯಲ್ಲಿರುತ್ತದೆ, ಅಂಥವರಲ್ಲಿ ಕೆಲವು ವಿಲಕ್ಷಣ ವರ್ತನೆಗಳೂ ಉದ್ರೇಕ ಪ್ರವೃತ್ತಿಯೂ ವೃತ್ತಿಯಲ್ಲಿ ನಿರಾಸಕ್ತಿಯೂ ಕಂಡುಬರುತ್ತವೆ. ಮತ್ತೆ ಕೆಲವರಲ್ಲಿ ರೋಗ ಮುಂದುವರಿದಿದ್ದು, ಅವರು ಮಕ್ಕಳೊಡನೆ ಸಿಕ್ಕಾಪಟ್ಟೆ ಕಿರುಚಾಡಿ ಅಕ್ಷಮ್ಯ ರೀತಿಯಲ್ಲಿ ವರ್ತಿಸುವುದು ಕಂಡುಬರುತ್ತದೆ. ಅಕ್ಷಮ್ಯವೆನ್ನಬಹುದಾದ ಅವರ ಅಂಥ ಆದರ್ಶ ಮಕ್ಕಳಿಗೆ ಮೇಲ್ಪಂಕ್ತಿಯಾಗಿ ಅವರ ಮುಂದಿನ ಜೀವನ ಕಳಂಕಮಯವಾಗಬಹುದು. ರೋಗ ಇನ್ನೂ ಪ್ರಬಲಿಸಿರುವವರು ವೃತ್ತಿಗೆ ಅಯೋಗ್ಯರಾಗಿದ್ದು ಚಿಕಿತ್ಸಾಲಯಕ್ಕೆ ಸೇರುವುದು ಅಗತ್ಯವೆನಿಸುತ್ತದೆ. ಸಾಮಾನ್ಯವಾಗಿ ಅಂಥವರು ವೃತ್ತಿಯಲ್ಲಿ ಶೇ. 7-8ರಷ್ಟು ಇರುವರೆಂದು ಅಂದಾಜುಮಾಡಲಾಗಿದೆ.

ಮಾನಸಿಕರೋಗಕ್ಕೂ ವೃತ್ತಿದಕ್ಷತೆಗೂ ನಿಕಟಸಂಬಂಧವಿರುವುದರಿಂದ ಅಂಥ ಅಧ್ಯಾಪಕರನ್ನು ಗುರುತಿಸಲು ನೆರವಾಗುವ ಹಲವು ವಿಚಿತ್ರಲಕ್ಷಣಗಳ ಪರಿಚಯ ಅಗತ್ಯವೆನಿಸ ಬಹುದು. ಅಂಥ ಉಪಾಧ್ಯಾಯರಲ್ಲಿ ಕಂಡುಬರುವ ಮುಖ್ಯ ಲಕ್ಷಣಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸಿದೆ; 1. ಪಾಠಪ್ರವಚನದ ಜಾಡನ್ನು ಬಿಟ್ಟು ಅತ್ತ ಇತ್ತ ಮನಸ್ಸನ್ನು ಹರಿಯಗೊಡು ವುದು, ಅದು ತೋರುವಂತೆ ಹಾವಭಾವಗಳನ್ನು ಮಾಡುವುದು, ಆಗಾಗ ಪಾಠವಿಷಯಗಳಲ್ಲಿ ವಿವರಗಳನ್ನು ಮರೆತು ತಬ್ಬಿಬ್ಬಾಗುವುದು, 2. ಮಕ್ಕಳನ್ನು ಸಿಕ್ಕಾಪಟ್ಟೆ ಅಡ್ಡಹೆಸರುಗಳಿಂದ, ಅನ್ವರ್ಥನಾಮಗಳಿಂದ ಕರೆಯುತ್ತ, ಹಿಯ್ಯಾಳಿಸುವ ದನಿಯಿಂದ ಮಾತನಾಡಿಸುವುದು, ಭೀತಿ ಹುಟ್ಟಿಸುವುದು, ಮತ್ತೆ ಮತ್ತೆ ಪರೀಕ್ಷೆಯ ವಿಷಯವೆತ್ತಿ ಅನಗತ್ಯವಾಗಿ ಕಾತರವನ್ನು ಕೆರಳಿಸುವುದು, ಹಾಸ್ಯಮಾಡುವುದು. 3. ಕೆಳದರ್ಜೆಯ ಗಾದೆಗಳನ್ನೂ ಅಶ್ಲೀಲ ಹಾಸ್ಯಸನ್ನಿವೇಶ ಗಳನ್ನೂ ತೀರ ಹಳಸಿದ ನಿದರ್ಶನಗಳನ್ನೂ ಮಿತಿಯಿಲ್ಲದೆ ಬಳಸುವುದು, ಮನ ಬಂದಂತೆ ಅನಗತ್ಯ ಸನ್ನಿವೇಶಗಳಿಗೆ ವಿಪರೀತ ಪ್ರಾಮುಖ್ಯ ನೀಡುವುದು, 4. ಆಕರ್ಷಕವಲ್ಲದ ಕೀರಲು ಧ್ವನಿ. ಇಲ್ಲವೇ ತೀರ ಗಡಸು ಧ್ವನಿ, ಅಥವಾ ಉದ್ರೇಕಗೊಂಡು ನಡುಗುವ ಧ್ವನಿ-ಇತ್ಯಾದಿ ವಿಕಾರಗಳಿಂದ ಮಕ್ಕಳಿಗೆ ಅಹಿತವೆನಿಸುವಂತೆ ಮಾತನಾಡುವುದು. 5. ಒಟ್ಟಿನಲ್ಲಿ ತರಗತಿಯಲ್ಲೂ ಇತರ ಶಾಲಾ ಸನ್ನಿವೇಶಗಳಲ್ಲೂ ಏನು ಮಾಡಿದರೂ ವಿಕಾರವಾಗಿ ಮಾಡುವುದು. ಕೆಲವು ವರ್ತನೆಗಳಂತೂ ವೈಪರೀತ್ಯವನ್ನು ಮುಟ್ಟಿದಂತಿರುವುದು.

ಈ ಐದು ಪ್ರಧಾನ ಲಕ್ಷಣಗಳ ಜೊತೆಗೆ ಇತರ ಗೌಣಲಕ್ಷಣಗಳೂ ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಹೀಗಿವೆ: 1. ಮಕ್ಕಳೊಡನೆ, ಸಹೋದ್ಯೋಗಿಗಳೊಡನೆ ವ್ಯವಹರಿಸುವಾಗ ಸಂಕೋಚ ಹಾಗೂ ಅನುಸರಿಸಿಕೊಂಡು ಹೋಗಲಾರದ ಪ್ರವೃತ್ತಿ. 2. ತೇಜಸ್ಸು ಕುಂದಿ, ಅಂತರ್ಮುಖ ಜೀವನ ಆರಂಭವಾಗಿ ಗೌಪ್ಯವಾಗಿ ಒಂದೆಡೆ ಕುಳಿತು ಕೊರಗುವುದು, ಎಟುಕದ ಆಸೆಗಳನ್ನು ಕಟ್ಟುವುದು, ವಿಫಲವಾದ ಸಂಭವಗಳನ್ನು ನೆನೆದು ನಿಟ್ಟುಸಿರುಬಿಡುವುದು. 3. ತನ್ನ ಸಮಸ್ಯೆಯೇ ದೊಡ್ಡದೆಂದುಕೊಂಡು ಮಿಕ್ಕ ಪ್ರಪಂಚವನ್ನು ಕಡೆಗಣಿಸುವುದು, ತನ್ನ ಕಷ್ಟಕ್ಕೆಲ್ಲ ಇತರರನ್ನು ದೂಷಿಸುವುದು, 4. ಸಣ್ಣ ಪುಟ್ಟ ಆಗುಹೋಗುಗಳನ್ನು ದೊಡ್ಡದು ಮಾಡಿಕೊಂಡು ಹೋಗುತ್ತ ಎಲ್ಲವೂ ತನ್ನ ದುರ್ದೈವವೆಂದು ಕೊರಗುವುದು, ವೈಪರೀತ್ಯದ ಭಾವನೆಗಳನ್ನೂ ವರ್ತನೆಗಳನ್ನೂ ಪ್ರದರ್ಶಿಸುವುದು, 5. ಮಾತಿನಲ್ಲಿ ಧ್ವನಿಯಲ್ಲಿ ಅಳತೆ ತಪ್ಪುವುದು, 6. ವೃತ್ತಿಯಲ್ಲಿ ಆಸಕ್ತಿ ತಪ್ಪಿ ಬೋಧನೆ, ವಿಷಯ, ಮಕ್ಕಳು-ಇವುಗಳ ಬಗ್ಗೆ ನಿರ್ಲಕ್ಷ್ಯ ತಾಳುವುದು. 7. ಯಾರು ಸಿಕ್ಕಿದರೂ ತನ್ನ ನಷ್ಟಗಳನ್ನೆ ತೋಡಿಕೊಳ್ಳುತ್ತ ಕೇಳುವವರಿಗೆ ಬೇಸರ ಹಿಡಿಸುವುದು, 8. ಶಿಕ್ಷಣವೃತ್ತಿ ಎತ್ತಿಹಿಡಿದಿರುವ ಆದರ್ಶಗಳಿಗೆ ಬೆನ್ನು ತಿರುಗಿಸಿ, ಶಿಕ್ಷಣಶಾಖೆಯ ನಿಯಮಗಳನ್ನು ಉಲ್ಲಂಘಿಸಿ ನಿತ್ಯ ಕಾರ್ಯಗಳಲ್ಲಿ ಕ್ರಮಾನುಸರಣೆಯಿಲ್ಲದೆ ನಡೆದುಕೊಳ್ಳುವುದು.

ಇಂಥ ವಿಲಕ್ಷಣವರ್ತನೆಗಳಿಂದ ಶಿಕ್ಷಕರಿಗೂ ಸುಖವಿಲ್ಲ. ಅವರ ಸಹೋದ್ಯೋಗಿಗಳಿಗೂ ಸುಖವಿಲ್ಲ. ಅವರ ಸೇವೆಯನ್ನು ಆಶ್ರಯಿಸಿರುವ ಶಾಲೆಗಳಿಂದ ಮಕ್ಕಳಿಗಾಗಲಿ ಸಮಾಜಕ್ಕಾಗಲಿ ಅನುಕೂಲವಿಲ್ಲ. ಆದ್ದರಿಂದ ಶಿಕ್ಷಣದ ದಕ್ಷತೆಗೆ ಮಿಕ್ಕೆಲ್ಲ ಲೋಪದೋಷಗಳಿಗಿಂತ ಅಧ್ಯಾಪಕರ ಮಾನಸಿಕ ಅನಾರೋಗ್ಯ ದೊಡ್ಡ ಆತಂಕವೆನಿಸುತ್ತದೆ.

ಮಾನಸಿಕ ಅಸ್ವಸ್ಥತೆ ಎಲ್ಲ ವೃತ್ತಿಯವರಲ್ಲೂ ಕಂಡುಬರುತ್ತದೆ. ಆದರೆ ಕೆಲವು ವೃತ್ತಿಗಳಲ್ಲಿ ಅದರ ಪ್ರಮಾಣ ಅಧಿಕವಾಗಿರುತ್ತದೆ. ಅಂಥ ವೃತ್ತಿಗಳಲ್ಲಿ ಶಿಕ್ಷಣವೂ ಒಂದೆಂದು ಹೇಳುವರು. ಇದು ನಿಜವಾದರೆ. ಅಧ್ಯಾಪಕರ ಮಾನಸಿಕ ಆರೋಗ್ಯವನ್ನು ಕೆಡಿಸಲು ಈ ವೃತ್ತಿಯಲ್ಲಿ ಅಂತರ್ಗತವಾಗಿರುವ ಅಂಶಗಳಾವುವು ಎಂಬ ಸಮಸ್ಯೆ ಕುತೂಹಲ ಹುಟ್ಟಿಸದಿರಲಾರದು. ಆ ಬಗ್ಗೆ ಸಂಶೋಧನೆಗಳು ನಡೆದಿವೆ. ಅವು ಸೂಚಿಸಿರುವಂತೆ ಶಿಕ್ಷಕರ ಮನೋರೋಗಕ್ಕೆ ಕಾರಣವಾದ ಅಂಶಗಳಲ್ಲಿ ಕೆಲವು ಹೀಗಿವೆ: 1. ವಿಫಲವಾದ ಆಶೆ ಆಕಾಂಕ್ಷೆಗಳು, 2. ವಿದ್ಯಾರ್ಥಿ ಗಳು, ಆಡಳಿತವರ್ಗ ಮತ್ತು ಸಮಾಜ ತಮ್ಮ ಬಗ್ಗೆ ತೋರುವ ನಿರ್ಲಕ್ಷ್ಯ. 3. ಮೇಲಧಿಕಾರಿಗಳ ಕಠೋರವೂ ನಿಷ್ಠುರವೂ ಅಮಾನುಷವೂ ಹಲವು ವೇಳೆ ವೈಯಕ್ತಿಕವೂ ಆದ ವರ್ತನೆ. 4. ಮೇಲಧಿಕಾರಿಗಳು ಎಂದು, ಎಲ್ಲಿ ಯಾವ ಶಿಕ್ಷೆ ವಿಧಿಸುವರೋ ಎಂಬ ನಿರಂತರ ಭೀತಿ, 5. ಅಂದಿಗಂದಿಗೆ ಶಾಲೆಯಲ್ಲಿ ಸಂಭವಿಸುವ ಗಲಭೆ, ಘರ್ಷಣೆ, ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಮುಷ್ಕರ, ಸಹೋದ್ಯೋಗಿಗಳು ನಡೆಸುವ ಪಿತೂರಿ ಇತ್ಯಾದಿಗಳಿಂದ ಉದ್ಭವಿಸುವ ಉದ್ರೇಕದ ಸನ್ನಿವೇಶಗಳು, 6. ವೃತ್ತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಡಳಿತವರ್ಗ ರೂಪಿಸುವ ಆದರ್ಶತೆಯ ಕಠೋರನಿಯಮಗಳು, 7. ಬಡತನಕ್ಕೆ ಸಿಕ್ಕಿದ ಕುಟುಂಬ ಜೀವನದ ವೈಯಕ್ತಿಕ ಸಂಕಟಗಳು, 8. ಅಗತ್ಯ ಉಪಕರಣಾದಿ ಸೌಲಭ್ಯಗಳು ಇಲ್ಲವಾದರೂ ಉತ್ತಮ ಶಿಕ್ಷಣಾಭಿವೃದ್ಧಿಯನ್ನೇ ಬಯಸಿ ದಂಡಧಾರಿಗಳಾಗಿ ನಿಂತಿರುವ ಸಮಾಜದ ಮತ್ತು ಶಿಕ್ಷಣಶಾಖೆಯ ಕಠೋರಪ್ರವೃತ್ತಿ 9. ಸೂಕ್ತ ವಸತಿ ಸೌಕರ್ಯವಿಲ್ಲದೆ ದೇಹಾರೋಗ್ಯ ಕುಂದಿ ನರಳುತ್ತಿರುವ ಅಧ್ಯಾಪಕರ ಸತ್ತ್ವಹೀನ ಜೀವನ, 10. ತಕ್ಕ ಷ್ಟು ವೃತ್ತಿಕೌಶಲದ ಮತ್ತು ಸಿದ್ಧಿ ಸಂಸ್ಕಾರಗಳ ಅಭಾವ.

ಇವುಗಳಲ್ಲಿ ಕೆಲವು ವೃತ್ತಿಯ ಬಗ್ಗೆ ರಾಷ್ಟ್ರ ತೋರುತ್ತಿರುವ ಕಾರ್ಪಣ್ಯದೃಷ್ಟಿಯಿಂದ ಹುಟ್ಟಿದವು; ಇನ್ನು ಕೆಲವು ಶಿಕ್ಷಣದ ಆಡಳಿತಗಾರರಲ್ಲಿ ಕಂಡುಬರುವ ಪಾಶವೀವರ್ತನೆಯಿಂದ ಹುಟ್ಟಿಕೊಂಡಂತಹವು; ಮತ್ತೆ ಕೆಲವು ಅಧ್ಯಾಪಕರ ನಿರ್ಲಕ್ಷ್ಯದಿಂದಲೇ ಮೂಡಿಕೊಂಡಿರು ವಂತಹವು. ಅವು ಹೇಗೇ ಮೂಡಿಕೊಳ್ಳಲಿ ಅವುಗಳಿಂದರಾಷ್ಟ್ರಕ್ಕೆ ಅಗಾಧಪ್ರಮಾಣದ ನಷ್ಟವಾಗುತ್ತಿದೆ. ಈ ದೃಷ್ಟಿಯಿಂದ ರಾಷ್ಟ್ರದ ಕಾರ್ಪಣ್ಯದೃಷ್ಟಿ ‘ಪೆನ್ನಿವೈಸ್ ಪೌಂಡ್ ಫೂಲಿಷ್’ ಎಂಬ ಇಂಗ್ಲಿಷ್ ಗಾದೆಯನ್ನು ನೆನಪಿಗೆ ತರುತ್ತದೆ. ಎಂದರೆ ಶಿಕ್ಷಣಶಾಖೆ ಒಂದಿಷ್ಟು ಹೆಚ್ಚು ಹಣ ಒದಗಿಸುವುದರಿಂದ ರಾಷ್ಟ್ರ ಅನೇಕ ಉಪಾಧ್ಯಾಯರ ಮನೋರೋಗಗಳನ್ನು ತಡೆಯಬಹುದು; ಆ ಮೂಲಕ ಆ ಕ್ಷೇತ್ರದ ದಕ್ಷತೆ ಹೆಚ್ಚಿ ಖರ್ಚು ಮಾಡಿದ ಅದರ ಹಣಕ್ಕೆ ಸರಿದೂಗಿಸುವಂಥ ಪ್ರತಿಫಲ ದೊರಕಬಲ್ಲದು. ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಅಧ್ಯಾಪಕರೂ ಪ್ರಯತ್ನಿಸಬೇಕು, ಅವರ ಆ ದಿಶೆಯ ಯತ್ನದಲ್ಲಿ ನೆರವಾಗತಕ್ಕ ಹಲವು ಸಲಹೆಗಳು ಇವು: 1. ವಿಪರೀತಕ್ಕೆ ಹೋಗದ ವಿಹಿತವಾದ ಭಾವನೆಗಳನ್ನೂ ಆಶೋತ್ತರಗಳನ್ನೂ ಬೆಳೆಸಿಕೊಳ್ಳುವುದು, 2. ತಮ್ಮ ವೃತ್ತಿಗೆ ಅಗತ್ಯವಾದ ಅರ್ಹತೆಗಳನ್ನು ಸಾಧಿಸಲು ನಿರಂತರವೂ ಯತ್ನಿಸುವುದು, 3. ವೃತ್ತಿದಕ್ಷತೆಗೆ ಸಾಧಕವೆನಿಸುವ ಅಂಶಗಳನ್ನು ಅಭ್ಯಸಿಸಿ ಅನುಷ್ಠಾನಕ್ಕೆ ತರುವುದು, 4. ಅವಕಾಶವಾದಾಗ ಮನೋರಂಜನಕಾರ್ಯಗಳಲ್ಲಿ ಭಾಗವಹಿಸುವುದು, 5. ಆದಾಯಕ್ಕೆ ತಕ್ಕಂತೆ ಖರ್ಚನ್ನು ಮಿತಿಗೊಳಿಸಿಕೊಳ್ಳುವುದು, 6. ಪಾಠಪ್ರವಚನಗಳಲ್ಲಿ ಮಕ್ಕಳಿಗೆ ಅತಿಯಾದ ಹೊರೆಯನ್ನು ಹೇರಹೋಗದೆ ಸಹಾನುಭೂತಿ ಯಿಂದ ವರ್ತಿಸುವುದು, 7. ಶಿಕ್ಷಣಶಾಖೆ, ಶಾಲೆ ಇತರ ಸಂಘಸಂಸ್ಥೆಗಳು ನೀಡಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದು, 8. ವಾಸಕ್ಕೆ ಅನುಕೂಲವಾದ ಮನೆ ಮಾಡುವುದು. 9. ವೃತ್ತಿಗೆ ಸಂಬಂಧಿಸಿದ ನೀತಿ ಸಂಹಿತೆಗೆ ನಿಷ್ಠೆಯಿಂದಿರುವುದು, 10. ವೃತ್ತಿನಿರತರ ಸಂಘಸಂಸ್ಥೆಗಳಲ್ಲಿ ಪಾತ್ರವಹಿಸುವುದು, 11. ಸಹೋದ್ಯೋಗಿ ವೃತ್ತದಲ್ಲಿ ಅಥವಾ ಸಂಬಂಧಿಸಿದ ಸನ್ನಿವೇಶಗಳಲ್ಲಿ ನಡೆಯುವ ಪಿತೂರಿಗಳಲ್ಲಿ ಭಾಗವಹಿಸದಿರುವುದು ಮತ್ತು ಆ ಬಗ್ಗೆ ಅತಿಯಾಗಿ ಹಚ್ಚಿಕೊಂಡು ಹೋಗದಿರುವುದು, 12. ತನ್ನ ಬಗ್ಗೆ ತನ್ನ ಮನಸ್ಸಿನಲ್ಲಿ ಕೀಳುಭಾವನೆ ಯನ್ನು ಬೆಳಸಿಕೊಳ್ಳುವ ಪ್ರವೃತ್ತಿಯಿಂದ ದೂರವಿದ್ದು ಆತ್ಮವಿಶ್ವಾಸವನ್ನು ಸಾಧಿಸುವುದು.

ಮೇಲಿನ ಅಂಶಗಳಲ್ಲಿ ಹಲವು ಶಿಕ್ಷಕರನ್ನೇ ಅವಲಂಬಿಸಿವೆ. ಆದ್ದರಿಂದ ತಮ್ಮ ಆರೋಗ್ಯ ಜೀವನಕ್ಕೆ ತಾವೂ ಹೊಣೆಯಾಗಬೇಕೆನ್ನಿಸುತ್ತದೆ. ಅವರ ಕೈ ಮೀರಿರುವ ಅಂಶಗಳೂ ಅದರಲ್ಲಿವೆ. ಅವನ್ನು ನಿವಾರಿಸುವುದು ಸಮಾಜದ ಮತ್ತು ರಾಷ್ಟ್ರದ ಹೊಣೆಗಾರಿಕೆ. (ಎನ್.ಎಸ್.ವಿ.)