ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಮಾದೇವಿ

ವಿಕಿಸೋರ್ಸ್ದಿಂದ

ಉಮಾದೇವಿ: ಹೊಯ್ಸಳ ಚಕ್ರವರ್ತಿ ಇಮ್ಮಡಿ ವೀರಬಲ್ಲಾಳನ (1173-1220) ಮಹಿಷಿಯರಲ್ಲಿ ಒಬ್ಬಳು. ಈಕೆಯ ವರ್ಣನೆ ಅನೇಕ ಶಾಸನಗಳಲ್ಲಿ ಕಂಡುಬರುತ್ತದೆ. ಜಗನ್ನಾಥವಿಜಯದ ಕರ್ತೃ ರುದ್ರಭಟ್ಟ ತನ್ನ ಕಾವ್ಯದಲ್ಲಿ ಬಲ್ಲಾಳನನ್ನು ಉಮಾಕಾಮಿನೀಜೀ ವಿತೇಶ್ವರ ಎಂದು ಸಂಬೋಧಿಸಿದ್ದಾನೆ. ಬಲ್ಲಾಳನ ದಂಡನಾಯಕರಲ್ಲೊಬ್ಬನಾದ ಕುಮಾರ ಪಂಡಿತಯ್ಯ ತಾನು ಉಮಾದೇವಿ ಮತ್ತು ಬಲ್ಲಾಳಚಕ್ರವರ್ತಿಯ ಕುಮಾರನೆಂಬುದಾಗಿ ಕರೆದುಕೊಂಡಿದ್ದಾನೆ. ಈಕೆ ವೀರವಾಣಿ. ಬಲ್ಲಾಳನ ರಾಜ್ಯಾಡಳಿತದಲ್ಲಿ ಸಲಹೆಗಳನ್ನು ನೀಡುತ್ತಿದ್ದುದುದಲ್ಲದೆ ಸ್ವಯಂ ಯುದ್ಧಭೂಮಿಯಲ್ಲಿ ನಿಂತು ಶತ್ರುಗಳನ್ನು ಎದುರಿಸುತ್ತಿದ್ದಳು. 1196-97ರಲ್ಲಿ ರಾಣಿ ಸೈನ್ಯಸಮೇತವಾಗಿ ಬೆಳಗವತ್ತಿಯ ಸಿಂಧಭೂಪಾನಾದ ಈಶ್ವರದೇವನ ರಾಜ್ಯವನ್ನು ಮುತ್ತಿ ಅವನ ಸೈನ್ಯವನ್ನು ಸೋಲಿಸಿ ಅಪಾರ ಐಶ್ವರ್ಯಸಮೇತ ಹಿಂದಿರುಗಿದ ಳೆಂದು ಹೊನ್ನಾಳಿ ತಾಲ್ಲೂಕಿನಲ್ಲಿ ದೊರೆತಿರುವ ಶಾಸನವೊಂದರಿಂದ ತಿಳಿದು ಬರುತ್ತದೆ. ಈಕೆ ಸುಂದರಿಯೂ ಗೀತಾವಾದ್ಯ ನೃತ್ಯ ಚತುರೆಯೂ ಆಗಿದ್ದಳೆಂದು ಅರಸೀಕೆರೆ ಬಳಿ ಸಿಕ್ಕಿರುವ ತ್ರಿವಿಕ್ರಮ ಪಂಡಿತನದೆನ್ನಲಾದ ಶಾಸನವೊಂದರಿಂದ ತಿಳಿದುಬರುತ್ತದೆ.(ಜಿ.ಆರ್.ಆರ್.)