ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಮಾಶ್ರೀ

ವಿಕಿಸೋರ್ಸ್ದಿಂದ

ಉಮಾಶ್ರೀ: ಕನ್ನಡದ ಪ್ರಸಿದ್ಧ ಚಲನಚಿತ್ರ ನಟಿ, ರಂಗಕಲಾವಿದೆ ಹಾಗೂ ರಾಜಕಾರಣಿ. ಕರ್ನಾಟಕ ವಿಧಾನಮಂಡಲದ ಸದಸ್ಯೆ. ಹಾಸ್ಯಪಾತ್ರಗಳನ್ನೂ ಇತರ ವಿವಿಧ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಿ, ಪ್ರೇಕ್ಷಕರ ಮನಗೆದ್ದ ಖ್ಯಾತಿ ಇವರದು. ಸ್ವಾಭಿಮಾನ, ಗೋಲ್ಮಾಲ್ ರಾಧಾಕೃಷ್ಣ, ಸಂಗ್ಯಾ ಬಾಳ್ಯಾ, ಕುರಿಗಳು ಸಾರ್ ಕುರಿಗಳು ಮೊದಲಾದ 350ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಕೀರ್ತಿ ಇವರದು. ರಂಗ ಕಲಾವಿದೆಯಾಗಿ ಇವರಿಗೆ 30 ವರ್ಷಗಳ ಅನುಭವವಿದೆ. ಜರ್ಮನ್ ನಿರ್ದೇಶಕ ಫ್ರಿಟ್ಸ್‌ ಬೆನೆವಿಟ್ಸ್‌ ಅವರೂ ಸೇರಿದಂತೆ, ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ಟಿ.ಎಸ್.ನಾಗಾಭರಣ ಮೊದಲಾದ ಕನ್ನಡದ ಶ್ರೇಷ್ಠ ನಿರ್ದೇಶ ಕರ ನಿರ್ದೇಶನದಲ್ಲಿ ಸಮರ್ಥವಾಗಿ ನಟಿಸಿದ್ದಾರೆ. ಇವರು ಸು.100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, ಸು. 6000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ `ಗುಲಾಬಿ ಟಾಕೀಸ್’ ಚಲನಚಿತ್ರದಲ್ಲಿನ ಇವರ ನಟನೆಗೆ `ಅತ್ಯುತ್ತಮ ನಟಿ’ಯೆಂಬ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮುಸ್ಸಂಜೆಯ ಕಥಾಪ್ರಸಂಗ, ಕಿಚ್ಚು ಮೊದಲಾದ ದೂರದರ್ಶನದ `ಧಾರಾವಾಹಿ’ಗಳು, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳಲ್ಲೂ ನಟಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿಯ ಜೊತೆಗೆ, ರಾಜ್ಯೋತ್ಸವ ಪ್ರಶಸ್ತಿ (1999-2000), ಫಿóಲ್ಮ್‌ಫೇರ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕಾರ ಮೊದಲಾದ ಹಲವಾರು ಗೌರವಗಳು ಇವರಿಗೆ ಲಭಿಸಿವೆ. (ಬಿ.ವಿ.ಎಸ್.)