ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಮ್ಮತ್ತಿ
ಉಮ್ಮತ್ತಿ: ಸೊಲನೇಸೀ ಕುಟುಂಬದ ಸಸ್ಯ (ದತೂರ,ಸ್ಟ್ರಮೋನಿಯಂ). ರೂಢ ನಾಮಗಳು ದತೂರ, ಜಿಮ್ಸನ್ ವೀಡ್, ಜೇಮ್ಸ್‌ಟೌನ್ವೀಡ್, ಮದ್ದು ಕುಣಿಕೆ, ಬದನೆ ಜಾತಿಯದು. 15 ಪ್ರಭೇದಗಳಿವೆ. ಮುಖ್ಯವಾದವು ಎರಡು-ಬಿಳಿ ಉಮ್ಮತ್ತಿ (ದತೂರ ಸ್ಟ್ರಮೋನಿಯಂ) ಮತ್ತು ಕರಿ ಉಮ್ಮತ್ತಿ (ದತೂರ ಮೆಟಲ್). ಉಮ್ಮತ್ತಿಯ ಮೂಲಸ್ಥಾನ ಮೆಕ್ಸಿಕೊ. ಆದರೆ ಈಗ ಇದು ಸರ್ವವ್ಯಾಪಿಯಾಗಿದೆ. ಸಾಮಾನ್ಯವಾಗಿ ಬಯಲುಜೀವಿ: ಶೀತಪ್ರದೇಶ, ಕೊಚ್ಚೆ ಕೊಂಪೆಗಳಲ್ಲಿ ವಿಪುಲವಾಗಿ ಬೆಳೆಯುತ್ತದೆ. ಹೆಚ್ಚಿನ ಪ್ರಭೇದಗಳು ಪೊದೆರೂಪದ ಗಿಡಗಳು. ಕೆಲವು ಮರಗಳಾಗಿ ಬೆಳೆಯುವುದೂ ಉಂಟು. ಹೂಗಳು ಕೊಳವೆಯಾಕಾರದ ಉದ್ದ ತೊಟ್ಟಿನಿಂದ ತೊಡಗಿ ತುತ್ತೂರಿಯ ಕೊಡೆಯಂತೆ ಹೊರಕ್ಕೆ ತೆರೆದುಕೊಂಡಿರುವುವು. ಒಂದೇ ದಳ, ಹೂಗಳ ಬಣ್ಣ ಕೆಂಪು, ಬಿಳಿ, ಹಳದಿ, ಕಾಯಿಗಳ ಮೇಲೆ ಮುಳ್ಳಿವೆ. ಉಮ್ಮತ್ತಿ ಬೀಜಗಳನ್ನು ವಿಶಿಷ್ಟರೀತಿಯಲ್ಲಿ ಸಂಸ್ಕರಿಸಿ ಮಾದಕ ರೀತಿಯಲ್ಲಿ ಸಂಸ್ಕರಿಸಿ ಮಾದಕ ದ್ರವ್ಯವಾಗಿ ಸೇವಿಸುವ ದುಶ್ಚಟ ಬಲು ಪ್ರಾಚೀನ ಕಾಲದಿಂದ ನಡೆದು ಬಂದಿದೆ. ಬೀಜಗಳಲ್ಲಿ ದತ್ತೂರಿನ್ ಎಂಬ ಮದ್ದು ಇದೆ. ಮಕ್ಕಳು ಈ ಬೀಜಗಳನ್ನು ತಿಂದು ಅನಾಹುತಗಳಾ ಗಿವೆ. ಮೆಣಸಿನಕಾಯಿ ಬೀಜಗಳಂತಿ ರುವ ಇವನ್ನು ಎಲೆ ಅಡಕೆಯೊಂದಿಗೆ ಸೇರಿಸಿಕೊಟ್ಟು ಅರಿವು ತಪ್ಪಿಸಿ ಮೋಸ ಮಾಡುವುದು ಹಳ್ಳಿಗಳ ಕಡೆ ಈಗಲೂ ಇದೆ. ತಮ್ಮ ಗಂಡಂದಿರ ಕಣ್ಣುತಪ್ಪಿಸು ವುದಕ್ಕಾಗಿ ದತ್ತೂರಬೀಜದ ರಸವನ್ನು ಊಟದಲ್ಲೋ ಪಾನೀಯದಲ್ಲೋ ಕೊಡುತ್ತಿದ್ದರೆಂದು ಗೋವಾನಗರವನ್ನು ಕಂಡ ಪ್ರವಾಸಿ ಜಾನನ್ ಹ್ಯೂಘನ್ ಫನ್ ಲಿನ್ ಷಾಟಿನ್ ತನ್ನ ದಿನಚರಿ ಯಲ್ಲಿ ಬರೆದಿದ್ದಾನೆ. (1583-1588). ಇದರ ವಿಷವೇರಿದ ಲಕ್ಷಣಗಳು ಅಟ್ರೋ ಪೀನಿನ ವಿಷದಂತೆಯೇ. ಅಟ್ರೋಪೀನ್ ವಿಷಕ್ಕೆ ಮಾಡಿದಂತೆಯೇ ಇದಕ್ಕೂ ಚಿಕಿತ್ಸೆ. ಉಮ್ಮತ್ತಿ ಗಿಡದ ಮೇಲ್ಪದರದಲ್ಲಿ ಸ್ಕೋಪಲಮೈನ್ ಎಂಬ ರಾಸಾಯನಿಕವಸ್ತು ಉತ್ಪತ್ತಿಯಾಗುತ್ತದೆ ಶಸ್ತ್ರಕ್ರಿಯೆಯಲ್ಲಿ ಸಂವೇದನ ನಾಶಕವಾಗಿ ಸಸ್ಯದ ವಿವಿಧ ಭಾಗಗಳನ್ನು ಉಪಯೋಗಿಸುತ್ತಾರೆ. ಬಿಳಿ ಮತ್ತು ಕರಿ ಉಮ್ಮತ್ತಿಯ ಒಣಗಿದ ಎಲೆಗಳನ್ನು ಕಫದಿಂದ ಕೂಡಿದ ಅಸ್ತಮ ಕಾಯಿಲೆ ಯನ್ನು ಗುಣಪಡಿಸಲು ಚುಟ್ಟಾರೂಪದಲ್ಲಿ ಸೇದುವುದುಂಟು. ಎಲೆಗಳಿಂದ ಎಣ್ಣೆ ತಯಾರಿಸು ತ್ತಾರೆ; ಸಿ ಜೀವಾತನ್ನು ಸಹ ಪಡೆಯುತ್ತಾರೆ. (ಎಂ.ಎಂ.ಯು.;ಡಿ.ಎಸ್.ಎಸ್.)
ಉಮ್ಮತ್ತಿ ಹೂ ಶಿವನಿಗೆ ಪ್ರಿಯವಾದುದೆಂದೂ ಶಿವನ ಶಿರಸ್ಸಿನಲ್ಲಿ ಈ ಹೂ ಕಂಗೊಳಿಸುವುದರಿಂದ ಇದಕ್ಕೆ ಶಿವಶೇಖರ, ಶಿವಪ್ರಿಯ ಎಂಬ ಹೆಸರುಗಳಿವೆಯೆಂದೂ ಶಿವಪುಜಾಕಲ್ಪದಲ್ಲಿ ಹೇಳಿದೆ. ದತ್ತೂರ, ಜಾಜಿ, ಕಲ್ಹಾರ, ಕನ್ನೈದಿಲೆ ಹೂಗಳಿಂದ ಶರದೃತುವಿನಲ್ಲಿ ಗೌರೀಪತಿಯಾದ ಶಿವನನ್ನು ಪುಜಿಸುವಾತ ಸತ್ರಯಾಗದ ಫಲವನ್ನು ಹೊಂದುತ್ತಾನೆಂದು ಶೈವಾಗಮ ತಿಳಿಸುತ್ತದೆ. ಪುತ್ರಾರ್ಥಿಯಾದವ ಒಂದು ಲಕ್ಷ ಉಮ್ಮತ್ತಿ ಹೂಗಳಿಂದ ಶಿವನನ್ನು ಪುಜಿಸಬೇಕು. ಕೆಂಪು ತೊಟ್ಟುಳ್ಳ ಈ ಹೂ ಪೂಜೆಗೆ ಬಹಳ ಶ್ರೇಷ್ಠವಾದುದೆಂದು ಶಿವಪುರಾಣದಲ್ಲಿ ಹೇಳಿದೆ. (ಎಸ್.ಎಸ್.ಎಚ್.)