ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಡೆಯೂರು ಸಿದ್ಧಲಿಂಗ

ವಿಕಿಸೋರ್ಸ್ದಿಂದ

ಶ್ರೀ ತೋಂಟದ ಸಿದ್ಧಲಿಂಗೇಶ್ವರ : - ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿ (ಸು.1470) ಇದ್ದ ಒಬ್ಬ ವಚನಕಾರ, ಧರ್ಮಗುರು, ಮನೆತನದ ವಿವರಗಳು ತಿಳಿದಿಲ್ಲ. ವೀರಶೈವ ಪುರಾಣಗಳಲ್ಲಿ ಈತನನ್ನು ನಿರಂಜನಗಣೇಶ್ವರನ ಅವತಾರವೆಂದೂ ಪರಶಿವನ ಅಪ್ಪಣೆಯಂತೆ ಷಟ್ಸ್ಥಲದ ಉದ್ಧಾರಕ್ಕಾಗಿ ಅವತರಿಸಿದವನೆಂದೂ ವರ್ಣಿಸಿದೆ. ವಾಣಿಜ್ಯಪುರ ಅಥವಾ ಹರದನ ಹಳ್ಳಿಯಲ್ಲಿ ಎಂಟು ವರ್ಷದ ಬಾಲಕನ ರೂಪಿನಿಂದ ಕಾಣಿಸಿಕೊಂಡ ಈತ ಚೆನ್ನಬಸವೇಶ್ವರನೆಂಬ ಶಿವಭಕ್ತನೆಂಬ ದೀಕ್ಷೆ ಪಡೆದು ಹಲವು ಪವಾಡಗಳನ್ನು ಮೆರೆಯುತ್ತ, ದೇಶಸಂಚಾರ ಮಾಡಿಕೊಂಡು ತುಮಕೂರು ಜಿಲ್ಲೆಯ ಕಗ್ಗೆರೆ ಎಂಬ ಗ್ರಾಮದ ಬಳಿಯಿದ್ದ ತೋಟಕ್ಕೆ ಬಂದು ಕೆಲಕಾಲ ಅಲ್ಲಿಯೇ ನೆಲೆಸಿದ. ತೋಂಟದ ಸಿದ್ಧಲಿಂಗ ಯತಿ ಎಂಬ ಹೆಸರಿನಿಂದ ಈತನ ಕೀರ್ತಿ ಎಲ್ಲೆಡೆಯಲ್ಲೂ ಹಬ್ಬಿತು. ಈತನ ನಡತೆಯಿಂದ, ಉಪದೇಶದಿಂದ ಆಕರ್ಷಿತರಾದ ಜನ ಅಮಿತಸಂಖ್ಯೆಯಲ್ಲಿ ಈತನ ಸುತ್ತ ನೆರೆದರು. ಸಿದ್ಧಲಿಂಗ ಯತಿ ಅವರ ಆರಾಧ್ಯದೈವವಾದ ಬಸವಾದಿ ಪ್ರಮಥರ ಕಾಲದಲ್ಲಿ ಕಾಣಬರುತ್ತಿದ್ದ ಧಾರ್ಮಿಕ ವಾತಾವರಣ ಮತ್ತೆ ಮೂಡುವಂತೆ ಮಾಡಿ ಜನರಲ್ಲಿ ಧರ್ಮಶ್ರದ್ಧೆ, ಸಾತ್ವಿಕೋತ್ಸಾಹಗಳನ್ನು ಕೆರಳಿಸಿ ಜನಜಾಗೃತಿಯನ್ನು ಸಾಧಿಸಿದ. ತುಮಕೂರು ಜಿಲ್ಲೆಯ ಎಡೆಯೂರಿನಲ್ಲಿ ಹೋಗಿ ನೆಲೆಸಿದ. ಈತನ ಸುತ್ತ ಧರ್ಮಪ್ರಚಾರಕರು ನೆಲೆಸಿ ವೀರಶೈವದ ಪ್ರಚಾರ, ಪ್ರಸಾರಗಳನ್ನು ನಡೆಸಿದರು. ಹಿಂದಿನ ಕಾಲದ ಹಂಪೆಯಂತೆ ಎಡೆಯೂರು (ನೋಡಿ- ಎಡೆಯೂರು) ವೀರಶೈವಧರ್ಮದ ಕೇಂದ್ರವಾಯಿತು. ಹದಿನೈದನೆಯ ಶತಮಾನದಲ್ಲಿ ಸ್ವತಂತ್ರ ವಚನ ರಚನೆಯ ಪುನರುಜ್ಜೀವನ ಕಾರ್ಯದಲ್ಲಿ ಆದ್ಯವಾಗಿ, ಅಗ್ರಗಣ್ಯನಾಗಿ ಇದ್ದಾತ ಈ ಸಿದ್ಧಲಿಂಗೇಶ್ವರ. ಈತನ ವಚನಗ್ರಂಥಕ್ಕೆ ಷಟ್ಸ್ಥಲಜ್ಞಾನಸಾರಾಮೃತ ಎಂದು ಹೆಸರು. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ ಎಂಬುದು ಇಲ್ಲಿನ ವಚನಗಳ ಅಂಕಿತ. ಹಿಂದಿನ ವಚನಕಾರರಲ್ಲಿ ಕಂಡುಬರುವ ಮಹೋನ್ನತ ಕಾವ್ಯಗುಣಗಳು ಇವುಗಳಲ್ಲಿ ಇಲ್ಲವಾದರೂ ಭಕ್ತನ ನಿಷ್ಠೆ, ಶ್ರದ್ಧೆ ಮತ್ತು ಆರ್ತಭಾವಗಳಿಗೆ ಕೊರತೆಯೇನೂ ಇಲ್ಲ. ಅನುಭಾವದ ಆಳಕ್ಕಿಂತ ಮನಸ್ಸಿನ ಸ್ಥೈರ್ಯಕ್ಕೆ, ಸಾಧಕನ ಕಳವಳ ಆತ್ಮರೋಧನಗಳಿಗಿಂತ ಸಿದ್ಧಪುರುಷನ ಪ್ರಶಾಂತತೆಗೆ ಇವು ಹೆಸರಾಗಿವೆ. ಎಡೆಯೂರಿನಲ್ಲಿ ಈತನ ಜ್ಞಾಪಕಾರ್ಥವಾಗಿ ಒಂದು ಶಿವಾಲಯವನ್ನೂ ಕಲ್ಲುಮಠವನ್ನೂ ಕಟ್ಟಿಸಿ, ಶಾಸನವನ್ನು ನೆಟ್ಟಿದ್ದಾರೆ. ಇಂದಿಗೂ ಆ ಊರು ಶಿವಭಕ್ತರ ಪುಣ್ಯಭೂಮಿಯಾಗಿದೆ. ಸಿದ್ಧಲಿಂಗೇಶನ ಸಮಾಧಿ ಜಾಗ್ರತಸ್ಥಳವೆನಿಸಿದೆ. ವಿರಕ್ತ ತೋಂಟದಾರ್ಯ, ಶಾಂತೇಶ ಮೊದಲಾದ ಕವಿಗಳು ಈತನ ಬಾಳಕಥೆಯನ್ನು ಕುರಿತು ಕಾವ್ಯಗಳನ್ನು ರಚಿಸಿದ್ದಾರೆ. ಸ್ವತಂತ್ರ ಸಿದ್ಧಲಿಂಗೇಶ್ವರ ಮತ್ತು ಗುಮ್ಮಳಾಪುರದ ಸಿದ್ಧಲಿಂಗೇಶ್ವರ ಎಂಬ ಇಬ್ಬರು ವಚನಕಾರರು ಈತನ ಶಿಷ್ಯವರ್ಗಕ್ಕೆ ಸೇರಿದವರು.

(ಟಿ.ಎಸ್.ಎಸ್.ಆರ್.)