ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲ್ಲಿಸ್, ಹೆನ್ರಿ ಹ್ಯಾವಲಾಕ್

ವಿಕಿಸೋರ್ಸ್ದಿಂದ

ಎಲ್ಲಿಸ್, ಹೆನ್ರಿ ಹ್ಯಾವಲಾಕ್: 1859-1939. ಇಂಗ್ಲೆಂಡಿನ ವೈದ್ಯ. ಮಾನವನ ಲೈಂಗಿಕ ವರ್ತನೆಯ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರಸಿದ್ಧನಾದವ. 1859ರ ಫೆಬ್ರವರಿ ತಿಂಗಳ ಎರಡನೆಯ ತಾರೀಖು ಕ್ರಾಯ್ಡನ್ನಲ್ಲಿ ಜನ್ಮತಳೆದ. ತಂದೆ ಕಡಲ ನಾವಿಕ. ಹಾಗಾಗಿ ತುಂಬ ಚಿಕ್ಕವಯಸ್ಸಿನಿಂದಲೇ ಸಮುದ್ರಯಾನ ಮಾಡತೊಡಗಿದ. ಏಳು ವರ್ಷದವನಿದ್ದಾಗ ತಂದೆ ಇವನನ್ನು ತನ್ನ ಹಡಗಿನಲ್ಲಿ ಪ್ರಪಂಚ ಪರ್ಯಟನೆಗೆ ಕರೆದೊಯ್ದ. ಆದರೆ ಎಲ್ಲಿಸ್ಗೆ ನಾವಿಕನಾಗುವ ಇಷ್ಟ ಇರಲಿಲ್ಲ.

ಎಲ್ಲಿಸ್ಗೆ ತುಂಬ ಚಿಕ್ಕವಯಸ್ಸಿನಲ್ಲೇ ಪುಸ್ತಕಗಳನ್ನು ಓದುವ ಚಟ ಅಂಟಿಕೊಂಡಿತು. ಹನ್ನೆರಡನೆಯ ವಯಸ್ಸಿನಲ್ಲಿ ಅನೇಕ ಇಂಗ್ಲೀಷ್ ಕವಿಗಳ ಕೃತಿಗಳನ್ನು ಓದತೊಡಗಿದ. ಸ್ವತಃ ಬರೆವಣಿಗೆಯನ್ನು ಪ್ರಾರಂಭಿಸಿದ. ಹೂವಿನ ಮೇಲೊಂದು ಪುಸ್ತಕವನ್ನು ಅನೇಕ ಪ್ರಬಂಧಗಳನ್ನೂ ಬರೆದ. ಹದಿನಾರನೆಯ ವಯಸ್ಸಿಗೆ ಶಾಲೆಯ ಶಿಕ್ಷಣವನ್ನು ಮುಗಿಸಿಕೊಂಡ ಮೇಲೆ ಕೆಲವು ಕಾಲ ಸಿಡ್ನಿಯ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ. ಆಮೇಲೆ ಸ್ವಲ್ಪ ಸಮಯ ಖಾಸಗಿ ಅಧ್ಯಾಪಕನಾಗಿ ಪಾಠ ಹೇಳಿದ. ಹೀಗೆ ನಾಲ್ಕು ವರ್ಷ ನ್ಯೂಸೌತ್ವೇಲ್ಸ್‌ನಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ ಮೇಲೆ ವೈದ್ಯವಿಜ್ಞಾನವನ್ನು ಓದಲು ನಿರ್ಧರಿಸಿ, ಇಂಗ್ಲೆಂಡಿಗೆ ಹಿಂತಿರುಗಿ ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಗೆ ಸೇರಿದ. ಏಳು ವರ್ಷಗಳ ಅಧ್ಯಯನ ಆದ ಅನಂತರ ವೈದ್ಯನಾದ. ಇದೇ ಅವಧಿಯಲ್ಲಿ ಸಾಹಿತ್ಯ, ಸಂಗೀತ, ಸಮಾಜ ವಿe್ಞÁನ, ಪುರಾಣಗಳು, ತತ್ತ್ವಶಾಸ್ತ್ರ, ಇತಿಹಾಸ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಪಾಂಡಿತ್ಯವನ್ನು ಗಳಿಸಿಕೊಂಡ. 1889ರಲ್ಲಿ ಎಂ.ಡಿ. ಪದವಿಯನ್ನು ಪಡೆದ. 1891ರಲ್ಲಿ ಎಡಿತ್ ಲೀಸ್ ಎಂಬವಳನ್ನು ಮದುವೆಯಾದ.

ಖಾಸಗಿ ವೈದ್ಯನಾಗಿ ಕೆಲಸ ಪ್ರಾರಂಭಮಾಡಿದ ಕೆಲವು ದಿನಗಳಲ್ಲೇ ಅದನ್ನು ಬಿಟ್ಟು ಕೊಟ್ಟು ಬರೆವಣಿಗೆಗೆ ತನ್ನ ಸಮಯವನ್ನು ಮೀಸಲಿಟ್ಟ. ಮನುಷ್ಯನ ಕಾಮವರ್ತನೆ ಯಲ್ಲಿ ವೈe್ಞÁನಿಕ ಆಸಕ್ತಿ ತಳೆದದ್ದು ತುಂಬಾ ಚಿಕ್ಕ ವಯಸ್ಸಿನಲ್ಲೇ. ಹದಿನಾರು ವರ್ಷದ ಹುಡುಗನಾಗಿದ್ದಾಗಲೇ ಮನುಷ್ಯನ ಕಾಮಜೀವನವನ್ನು ವಸ್ತುನಿಷ್ಠವಾಗಿ, ವೈe್ಞÁನಿಕವಾಗಿ ಅಧ್ಯಯನ ಮಾಡಬೇಕೆಂದು ನಿರ್ಧರಿಸಿದ್ದ. ಈ ನಿರ್ಧಾರದ ಮೂಲಕಾರಣ ಕಾಮಪ್ರವೃತ್ತಿಯ ಬಗೆಗೆ ಅವನ ಮತ್ತು ಅವನ ಶತಮಾನದ ಅe್ಞÁನವೇ. ಆ ಕಾಲದ ಇತರ ಹುಡುಗರಂತೆಯೇ ಎಲ್ಲಿಸ್ಗೆ ಹದಿನಾರನೆಯ ವಯಸ್ಸಿನಲ್ಲಿ ಲೈಂಗಿಕತೆಯ ಬಗೆಗೆ ಹೆಚ್ಚೇನೂ ಗೊತ್ತಿರದೆ ಮನುಷ್ಯನ ಈ ಹುಟ್ಟು ಗುಣ, ಈ ಸಹಜ ವರ್ತನೆ, ಈ ಅನಿವಾರ್ಯ ಪ್ರವರ್ತನೆ ಅವನಿಗೆ ಒಂದು ನಿಗೂಢವಾದ ಸಮಸ್ಯೆಯಾಗಿತ್ತು. ಬಹುಶಃ ಮಡಿವಂತಿಕೆಯ ಸಂಪ್ರದಾಯ ಅತ್ಯಂತ ಪ್ರಬಲವಾಗಿದ್ದ 19ನೆಯ ಶತಮಾನದ ಇಂಗ್ಲೆಂಡಿನಲ್ಲಿ ಇದೇನೂ ವಿಶೇಷವಾಗಿರಲಿಲ್ಲ. ಆದರೆ ವೈe್ಞÁನಿಕ ಕುತೂಹಲ ಮತ್ತು ನಡೆವಳಿಕೆಯಲ್ಲಿ ತನ್ನ ಕಾಲದವರಿಗಿಂತ ಬಹಳಷ್ಟು ಮುಂದಿದ್ದ ಎಲ್ಲಿಸ್ಗೆ ಮಾತ್ರ ಇದು ಸಹ್ಯವಾಗಲಿಲ್ಲ. ಲೈಂಗಿಕತೆಯ ಮೇಲೆ ಏನಾದರೂ ವೈe್ಞÁನಿಕವಾದ ತಿಳಿವಳಿಕೆ ದೊರೆಯುತ್ತದೆಯೋ ಎಂದು ಹಾತೊರೆದ. ಆತನಿಗೆ ಅದು ಎಲ್ಲೂ ಸಿಗಲಿಲ್ಲ. ಅದರ ಬದಲು ಕಾಮಜೀವನದ ಬಗೆಗೆ ಕೆಟ್ಟ ಸಂಕೋಚ, ನಾಚಿಕೆಗೇಡಿನ ಮುಚ್ಚುಮರೆ, ಭಯಂಕರ ಮಡಿವಂತಿಕೆ, ಅಗಾಧವಾದ ಅe್ಞÁನ, ದಂಗುಬಡಿಸುವ ಮೂಢನಂಬಿಕೆಗಳು, ಆಧಾರವಿಲ್ಲದ ಸುಳ್ಳು ಸಿದ್ಧಾಂತಗಳು, ಅರ್ಥಹೀನವಾದ ಉಪದೇಶಾಮೃತಗಳೇ ಕಂಡವು. ಇದನ್ನು ನೋಡಿ, ಅನುಭವಿಸಿದ ಎಲ್ಲಿಸ್ ಮಾನವನ ಕಾಮಜೀವನದ ವಾಸ್ತವಿಕ ಅಂಶಗಳನ್ನು ಕಂಡುಹಿಡಿಯುವುದೇ ತನ್ನ ಜೀವನದ ಉದ್ದೇಶವಾಗಬೇಕೆಂದು ನಿರ್ಧರಿಸಿಕೊಂಡ. ಎಲ್ಲಿಸನ ಜೀವನ ಮತ್ತು ಕೃತಿಗಳನ್ನು ಪರಿಶೀಲಿಸಿದರೆ, ಬಹುಶಃ ಆತ ತನ್ನ ಉದ್ದೇಶವನ್ನು ಬಲು ಸಮರ್ಥವಾಗಿ ನೆರವೇರಿಸಿಕೊಂಡು ಸಾರ್ಥಕವಾದ ಬದುಕನ್ನು ನಡೆಸಿದನೆಂದೇ ಹೇಳಬೇಕು.

ಹ್ಯಾವಲಾಕ್ ಎಲ್ಲಿಸ್ 1894ರಲ್ಲಿ ಮ್ಯಾನ್ ಅಂಡ್ ವುಮನ್ ಎಂಬ ಪುಸ್ತಕವನ್ನು ಪ್ರಕಟಿಸಿದ. ಇದರಲ್ಲಿ ಆತ ಹೆಣ್ಣು ಮತ್ತು ಗಂಡಿನ ಶರೀರ ರಚನೆ, ಮತ್ತು ಅವುಗಳ ಮುಖ್ಯ ವ್ಯತ್ಯಾಸಗಳನ್ನು ದೀರ್ಘವಾಗಿ ವಿಶ್ಲೇಷಿಸಿದ್ದಾನೆ. ಅಲ್ಲದೆ ಹೆಣ್ಣು ಗಂಡಿನ ಬೆಳೆವಣಿಗೆಯ ವಿಶಿಷ್ಟ ಕ್ರಮಗಳು, ಜ್ಞಾನೇಂದ್ರಿಯಗಳ, ಭಾವಪ್ರತಿಕ್ರಿಯೆಗಳ ಬೆಳೆವಣಿಗೆ, ಜೀರ್ಣಾಂಗಗಳು ಮತ್ತು ಒಳಸುರಿತಗಳು, ಹೆಣ್ಣಿನ ವಿಶಿಷ್ಟ ಜೈವಿಕ ಕ್ರಿಯೆಯಾದ ಮುಟ್ಟು-ಇವೆಲ್ಲದರ ಬಗ್ಗೆ ಬರೆದ. ಹೆಣ್ಣು ಗಂಡುಗಳು ಬೇರೆ ಬೇರೆ, ಆದರೆ ಸರಿಸಮ. ಇಬ್ಬರೂ ಭಿನ್ನ ಪ್ರಕೃತಿಯವರೇ ಹೊರತು ಇವರಲ್ಲಿ ಮೇಲುಕೀಳುಗಳಿಲ್ಲ-ಎಂಬ ಧೋರಣೆಯನ್ನು ಎಲ್ಲಿಸ್ ತನ್ನ ಈ ಕೃತಿಯಲ್ಲಿ ವ್ಯಕ್ತಪಡಿಸಿದ.

ಇದಾದ ಮೇಲೆ ಎಲ್ಲಿಸ್ ಕಾಮವಿಕಾರಗಳ ಮೇಲೆ ಅನೇಕ ಅಧ್ಯಯನಗಳನ್ನು ನಡೆಸಿದ. ಅವನ ಬರೆಹಗಳಲ್ಲೆಲ್ಲ ಪ್ರಸಿದ್ಧವಾದವು ಇವೇ. ಕಾಮವಿಕಾರಗಳ ಮೇಲಿನ ಅವನ ಅಧ್ಯಯನಗಳೆಲ್ಲ ಈಗ ಸ್ಟಡೀಸ್ ಇನ್ ದಿ ಸೈಕಾಲಜಿ ಆಫ್ ಸೆಕ್ಸ್‌ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಇವು ಏಳು ಬೃಹತ್ ಸಂಪುಟಗಳಲ್ಲಿದ್ದು ಲೇಖಕನ ಮೂವತ್ತು ವರ್ಷಗಳ ಜೀವನಾನುಭವಗಳನ್ನೂ ವ್ಯಾಸಂಗದ ಸಾರವನ್ನೂ ಒಳಗೊಂಡಿವೆ. ಇದು ಮತ್ತು ಈತನ ವಲ್ಡ್‌ರ್ ಆಫ್ ಡ್ರೀಮ್ಸ್‌ (1911) ಎಂಬ ಗ್ರಂಥಗಳನ್ನು ಫ್ರಾಯ್ಡ್‌ ಬಹಳ ಮೆಚ್ಚಿದ್ದಾನೆ. ಎಲ್ಲಿಸ್ ಮಾಡಿದ ಮೊದಲ ಅಧ್ಯಯನವೆಂದರೆ ಸಲಿಂಗರತಿಯ (ಹೋಮೊಸೆಕ್ಷುಯಾಲಿಟಿ) ಮೇಲೆ; ಆದರೆ ಆ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಇದನ್ನು ಪ್ರಕಟಿಸುವುದು ಸುಲಭವಾಗಲಿಲ್ಲ. ವೈದ್ಯಕೀಯ ಪುಸ್ತಕಗಳನ್ನು ಪ್ರಕಟಿಸಿದ ಸಂಸ್ಥೆಗಳು ಈ ಪುಸ್ತಕವನ್ನು ತೆಗೆದುಕೊಳ್ಳಲಿಲ್ಲ. ಕೊನೆಗೆ ಲಂಡನ್ನಿನಲ್ಲಿ ವಾಸವಾಗಿದ್ದ ಜರ್ಮನನೊಬ್ಬ ಇದನ್ನು ಪ್ರಕಟಿಸಿದ. ಆದರೆ ಸ್ವಲ್ಪ ದಿನಗಳಲ್ಲೇ ಈ ವ್ಯಕ್ತಿ ಭಾರಿ ಕೇಡಿಗನೆಂದೂ ಸಂಭಾವಿತನ ಸೋಗು ಹಾಕಿ ಬದುಕುತ್ತಿದ್ದ ವಂಚಕನೆಂದೂ ಗೊತ್ತಾಯಿತು. ಸಲಿಂಗರತಿಯ ಮೇಲಿನ ಈ ಪುಸ್ತಕ ಪ್ರಕಟವಾದ ಸ್ವಲ್ಪ ದಿನಗಳಲ್ಲೇ ಒಂದು ಸಾರ್ವಜನಿಕ ಸಂಸ್ಥೆಯಲ್ಲಿ ಪೋಲೀಸರ ಕೈಗೆ ಸಿಕ್ಕು ಅಶ್ಲೀಲವೆಂಬ ಕಾರಣಕ್ಕಾಗಿ ನ್ಯಾಯಸ್ಥಾನದ ವಿಚಾರಣೆಗೆ ಗುರಿಯಾಯಿತು. ಆದರೆ ಹೇಗೋ ಎಲ್ಲಿಸ್ನನ್ನು ಮಾತ್ರ ಪೋಲೀಸರು ಪೀಡಿಸಲಿಲ್ಲ. ಈ ಪುಸ್ತಕ ಅಶ್ಲೀಲ, ವಿಕೃತ, ಅವೈಜ್ಞಾನಿಕವೆಂದು ನ್ಯಾಯಸ್ಥಾನ ಘೋಷಿಸಿತು. ಪೋಲೀಸರು ಪುಸ್ತಕವನ್ನು ಪ್ರಕಟಿಸಿದ ಜರ್ಮನ್ ಕೇಡಿಗನನ್ನು ಬಹಳ ಕಷ್ಟಪಟ್ಟು ಹಿಡಿದರು. ಆದರೆ ಆತ ನ್ಯಾಯಸ್ಥಾನಕ್ಕೆ ಹೋಗುವ ಮೊದಲೇ ಆತ್ಮಹತ್ಯೆ ಮಾಡಿಕೊಂಡ.

ತನ್ನ ವೈಜ್ಞಾನಿಕ ಬರೆಹಕ್ಕೆ ಸಿಕ್ಕಿದ ಇಂಥ ಸ್ವಾಗತದಿಂದ ಮನ ನೊಂದ ಎಲ್ಲಿಸ್ ಮುಂದೆ ತನ್ನ ಯಾವ ಪುಸ್ತಕವನ್ನೂ ಇಂಗ್ಲೆಂಡಿನಲ್ಲಿ ಪ್ರಕಟಿಸಲಿಲ್ಲ. ಆದರೆ ಅಮೆರಿಕದ ಕಂಪನಿಯೊಂದು ಕೂಡಲೇ ಅವನ ಪುಸ್ತಕಗಳನ್ನು ಪ್ರಕಟಿಸಲು ಮುಂದಾಯಿತು. ಅನಂತರ ಅವನ ಎಲ್ಲ ಪುಸ್ತಕಗಳನ್ನೂ ಈ ಕಂಪನಿ ಪ್ರಕಟಿಸಿತು. 1939ರಲ್ಲಿ ಎಲ್ಲಿಸ್ ತೀರಿಕೊಳ್ಳುವ ಹೊತ್ತಿಗೆ ಅವನ ಕೃತಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿತ್ತು. ಆದರೆ ಎಲ್ಲಿಸ್ ಪ್ರಾರಂಭದಲ್ಲಿ ತನ್ನ ಈ ವೈಜ್ಞಾನಿಕ ಆಸಕ್ತಿಯಿಂದಾಗಿ ಸಾಕಷ್ಟು ಕಷ್ಟವನ್ನೇ ಅನುಭವಿಸಬೇಕಾಯಿತು.

ಅನೇಕ ಬಗೆಯ ಕಾಮವಿಕಾರಗಳ ಬಗ್ಗೆ ಎಲ್ಲಿಸ್ ಬರೆದಿದ್ದಾನೆ. ಇವನ ಬರೆಹದ ಒಂದು ಒಳ್ಳೆಯ ಅಂಶವೆಂದರೆ, ಆವರೆಗೆ ದೊರೆಯದಿದ್ದ ದೀರ್ಘವಾದ ರೋಗ ಸಂಗತಿಗಳನ್ನು ಕೊಟ್ಟಿರುವುದೇ ಆಗಿದೆ. ಈತ ಮುಖ್ಯವಾಗಿ ಸಲಿಂಗರತಿ, ಬದಲುಡಿಗೆ (ಟ್ರಾನ್ಸ್‌ ವೆಸ್ಟಿಸಮ್), ಸೇಡುಗಾಮ (ಸ್ಯಾಡಿಸಮ್), ಸಂಕಟಕಾಮ (ಮ್ಯಾಸೊಫಿಸಮ್) ಇತ್ಯಾದಿಗಳ ಬಗ್ಗೆ ಬರೆದಿದ್ದಾನೆ. ಎಲ್ಲಿಸ್ನ ಪ್ರಕಾರ ಮನುಷ್ಯನ ಕಾಮಪ್ರವೃತ್ತಿ ಅವನ ಸಹಜ ಪ್ರವೃತ್ತಿಗಳಲ್ಲೆಲ್ಲ ಮುಖ್ಯವಾದದ್ದು. ಆದರೆ ಮನುಷ್ಯನ ಎಲ್ಲ ಚಟುವಟಿಕೆಯ ಮೂಲ ಕಾಮವೆಂಬ ಫ್ರಾಯ್ಡನ ಅಭಿಪ್ರಾಯವನ್ನು ಎಲ್ಲಿಸ್ ಅನುಮೋದಿಸಲಿಲ್ಲ. ಜೀವನದ ಸಂಕೀರ್ಣವಾದ, ವೈವಿಧ್ಯಮಯವಾದ ವ್ಯಾಪಾರವನ್ನು ಯಾವುದಾದರೊಂದು ಅಂಶಕ್ಕೆ ಬಟ್ಟಿ ಇಳಿಸಬಹುದೆಂದು ಎಲ್ಲಿಸ್ ನಂಬಿರಲಿಲ್ಲ. ಹಾಗಿದ್ದರೂ ಮನುಷ್ಯನ ಎಲ್ಲ ಸಹಜ ಪ್ರವೃತ್ತಿಗಳಲ್ಲಿ ಕಾಮ ಬಲು ಅರ್ಥಪುರ್ಣವಾದ, ಆಳವಾದ, ಬದುಕಿನ ಬಹಳಷ್ಟು ಚಟುವಟಿಕೆಗಳಿಗೆ ವಿಶೇಷ ಮಹತ್ತ್ವವನ್ನು ಕೊಡುವ ಶಕ್ತಿಯೆಂಬುದು ಎಲ್ಲಿಸ್ನ ಕಲ್ಪನೆ.

ಕಾಮವಿಕಾರಗಳ ಬಗ್ಗೆ ಎಲ್ಲಿಸ್ನ ಒಟ್ಟು ದೃಷ್ಟಿಕೋನ ಜೀವವಿಜ್ಞಾನದಿಂದ ಪ್ರಭಾವಿತವಾದದ್ದು. ಆತ ಫ್ರಾಯ್ಡನಂತೆ ಮಾನಸಿಕ ಅಂಶಗಳಿಗೆ ಹೇಳಿಕೊಳ್ಳಬಹುದಾದಂಥ ಪ್ರಾಮುಖ್ಯ ಕೊಡಲಿಲ್ಲ. ಎಲ್ಲ ಬಗೆಯ ಕಾಮವಿಕಾರಗಳಿಗೂ ಮೂಲವಾಗಿ ಶರೀರ ಪ್ರಕೃತಿಯ ದೋಷಗಳಿರುತ್ತವೆ. ಈ ದೋಷ ಬಹು ಮಟ್ಟಿಗೆ ಆನುವಂಶಿಕವಾಗಿ ಬಂದದ್ದು ಎಂಬುದು ಅವನ ಅಭಿಪ್ರಾಯ. ಆದ್ದರಿಂದ ಕಾಮವಿಕಾರಗಳು ವಿಕೃತ ಪ್ರತಿಕ್ರಿಯೆಗಳಾದರೂ ಇವು ಹುಟ್ಟಿನಿಂದಲೇ ಪಡೆದುಬಂದವು; ಅಥವಾ ಹುಟ್ಟಿದ ಮೇಲೆ ಶಾರೀರಿಕ ಕ್ರಿಯೆಯಲ್ಲಾಗುವ ತಾರುಮಾರುಗಳ ಪ್ರತಿಫಲವಾಗಿ ಕಾಣಿಸಿಕೊಳ್ಳುವಂತವು. ಪರಿಣಾಮವಾಗಿ ಈ ಬಗೆಯ ವಿಚಾರಗಳನ್ನು ಉಂಟು ಮಾಡುವುದರಲ್ಲಿ ಪರಿಸರದ ಅನುಭವಗಳು ಅಷ್ಟು ಪ್ರಮುಖವಲ್ಲ ಎಂಬುದು ಎಲ್ಲಿಸ್ನ ನಂಬಿಕೆಯಾಗಿತ್ತು. ಇದಲ್ಲದೆ, ಸಹಜವಾಗಿಯೇ ನೋವು ಮತ್ತು ಸಂಕಟ ಕಾಮದ ಹುಟ್ಟನ್ನು ಕೂಡ ಎಲ್ಲಿಸ್ ಜೀವದಂಶಗಳಲ್ಲೇ ಕಾಣಲು ಪ್ರಯತ್ನಿಸಿದ. ಎಲ್ಲಿಸ್ನ ಅಧ್ಯಯನ ಬಹುಮುಖ್ಯವಾದುದು. ದಿ ಕ್ರಿಮಿನಲ್ (1899) ಎಂಬ ಈತನ ಗ್ರಂಥ ಕೊಲೆ ದರೋಡೆಗಳ ಬಗ್ಗೆ ಬ್ರಿಟನ್ನಿನಲ್ಲಿ ಮೊದಲ ಬಾರಿ ಮಾಡಿದ ಮಾನಸಿಕ ವಿಶ್ಲೇಷಣೆಯಾಗಿದೆ. ಎ ಸ್ಟಡಿ ಆಫ್ ದಿ ಬ್ರಿಟಿಷ್ ಜೀನಿಯಸ್ (1904) ಎಂಬುದು ಮೇಧಾಶಕ್ತಿಗೂ ಆನುವಂಶೀಯತೆಗೂ ಇರುವ ಸಂಬಂಧದ ವಿಶ್ಲೇಷಣೆಗೆ ಮೀಸಲಾಗಿರುವ ಪುಸ್ತಕ. ಆಫರ್ಮೇಷನ್ಸ್‌ (1898), ದಿ ಸೋಲ್ ಆಫ್ ಸ್ಪೇನ್ (1908), ಸೆಕ್ಸ್‌ ಇನ್ ರಿಲೇಷನ್ ಟು ಸೊಸೈಟಿ (1910), ಇಂಪ್ರೆಷನ್ಸ್‌ ಅಂಡ್ ಕಾಮೆಂಟ್ಸ್‌ (1914-24), ದಿ ಡಾನ್ಸ್‌ ಆಫ್ ಲೈಫ್ (1923), ದಿ ನ್ಯೂಸ್ಪಿರಿಟ್ (1926), ಮ್ಯಾರಿಯೇಜ್ ಟುಡೆ ಅಂಡ್ ಟುಮಾರೊ (1929) ಇವು ಈತನ ಇತರ ಪುಸ್ತಕಗಳು. ಈತನ ಶೈಲಿ ಸರಳ, ಸುಂದರವಾದುದು. ಬುದ್ಧಿ ತೀಕ್ಷ್ಣವಾದುದು. ಎಲ್ಲ ಕೃತಿಗಳಲ್ಲೂ ಮಾನವನ ಲೋಪದೋಷಗಳ ಬಗ್ಗೆ ಈತನಿಗಿದ್ದ ಸಹಾನುಭೂತಿ ಎದ್ದು ತೋರುತ್ತದೆ.

ಎಲ್ಲಿಸ್ನ ಬರೆಹದ ಪ್ರಾಮುಖ್ಯ ಈಗ ಮುಖ್ಯವಾಗಿ ಐತಿಹಾಸಿಕ ಮಹತ್ತ್ವದ್ದಾಗಿದೆ. ಅವನ ಸಿದ್ಧಾಂತಗಳು ಅನೇಕ ಬಗೆಯ ಆಕ್ಷೇಪಣೆಗಳಿಗೆ ಗುರಿಯಾಗಿವೆ. ಕಾಮವಿಕಾರಗಳು ಮುಖ್ಯವಾಗಿ ವ್ಯಕ್ತಿಯ ಶರೀರ ಪ್ರಕೃತಿಯನ್ನವಲಂಬಿಸಿದ ಅಥವಾ ಹುಟ್ಟಿನೊಡನೆ ಪಡೆದು ಬಂದ ತಾರುಮಾರುಗಳು ಎಂಬ ದೃಷ್ಟಿಕೋನಕ್ಕೆ ಆಧುನಿಕ ಸಂಶೋಧನೆಗಳಿಂದ ಹೇಳಿಕೊಳ್ಳುವಂಥ ಪುಷ್ಟಿ ದೊರೆತಿಲ್ಲ. ಕಲಿಕೆಯ ಮತ್ತು ಪರಿಸರದ ಅಂಶಗಳು ಕೂಡ ಈ ರೀತಿಯ ವಿಕಾರಗಳಿಗೆ ತಕ್ಕ ಮಟ್ಟಿಗೆ ಕಾರಣಗಳಾಗಬಹುದು ಎಂಬುದಕ್ಕೆ ಈಗ ಸಾಕಷ್ಟು ಆಧಾರಗಳಿವೆ. ಹೀಗೆ ಎಲ್ಲಿಸ್ನ ಸಿದ್ಧಾಂತಗಳು ಆಕ್ಷೇಪಣೆಗೆ ಗುರಿಯಾದರೂ ಈತ ಕಾಮಜೀವನದ ವೈಜ್ಞಾನಿಕ ಅಧ್ಯಯನಕ್ಕೆ ಕೈ ಹಾಕಿದವರಲ್ಲಿ-ಅದೂ ಮಡಿವಂತಿಕೆಯ 19ನೆಯ ಶತಮಾನದಲ್ಲಿ ಮೊದಲಿಗನಾಗಿದ್ದಾನೆ. ಆದ್ದರಿಂದ ಮನುಷ್ಯನ ವರ್ತನೆಯ ನಿಗೂಢ ಅಂಶಗಳನ್ನು, ಸಹಜ ಪ್ರೇರಣೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದ ವಿಜ್ಞಾನಿಗಳಲ್ಲಿ ಎಲ್ಲಿಸ್ ಗಣನೀಯನಾಗಿದ್ದಾನೆ. (ಎಂ.ಎಸ್.ಎಚ್.; ಎಸ್.ಕೆ.ಆರ್.)