ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಣಗಿಲೆ

ವಿಕಿಸೋರ್ಸ್ದಿಂದ

ಕಣಗಿಲೆ : ಕಣಗಿಲೆ ಅಪೊಸೈನೇಸೀ ಕುಟುಂಬದ ನೀರಿಯಮ್ ಓಲಿಯಂಡರ್ ಎಂಬ ವೈಜ್ಞಾನಿಕ ಹೆಸರಿನ ಸುಂದರವಾದ ಹೂ ಬಿಡುವ ಬಹುವಾರ್ಷಿಕ ಪೊದೆಸಸ್ಯ. ಇದನ್ನು ಉದ್ಯಾನವನ, ದೇವಸ್ಥಾನ ಮತ್ತು ಮನೆಗಳ ಪಕ್ಕದಲ್ಲಿ ಅಲಂಕಾರಸಸ್ಯವಾಗಿ ಬೆಳೆಸುತ್ತಾರೆ.

ಕಣಗಿಲೆಹೂವನ್ನು ದೇವರ ಪುಜೆಗೂ ಹಾರ ಮತ್ತು ಕಳಸದ ಅಲಂಕಾರಕ್ಕೂ ಉಪಯೋಗಿಸುತ್ತಾರೆ. ಅಲ್ಲದೆ ಈ ಸಸ್ಯದ ವಿವಿಧ ಭಾಗಗಳು ಅನೇಕ ಆಯುರ್ವೇದ ಔಷಧಗಳಲ್ಲಿ ಉಪಯೋಗದಲ್ಲಿವೆ. ಕರವೀರ, ಕಣಿಗಲು ಪರ್ಯಾಯ ನಾಮಗಳು. ನೀರಿಯಮ್ ಜಾತಿಯಲ್ಲಿ ಮೂರು ಮುಖ್ಯ ಪ್ರಭೇದಗಳಿವೆ. ಇವು ಮೆಡಿಟರೇನಿಯನ್ ಪ್ರದೇಶದಿಂದ ಜಪಾನ್ದೇಶದವರಿಗೂ ಹರಡಿವೆ. ದುಂಡಗಿರುವ ಕಾಂಡದ ತುದಿಯಲ್ಲಿ ಚಿಕ್ಕ ತೊಟ್ಟಿರುವ ವೃತ್ತಜೋಡಣೆಯ ಎಲೆಗಳು ಇರುತ್ತವೆ. ತುದಿಯಲ್ಲಿ ಹೊಸ ಹೊಸ ಎಲೆಗಳು

ಹೊರಬಂದಂತೆಲ್ಲ ಕೆಳಭಾಗದಲ್ಲಿರುವ ಹಳೆಯ ಎಲೆಗಳು ಉದುರಿ ಹೋಗುತ್ತವೆ. ಎಲೆಯ ತೊಟ್ಟುಗಳು ಕಾಂಡಕ್ಕೆ ಬಿಗಿಯಾಗಿ ಅಂಟಿಕೊಂಡಿದ್ದು, ಅನಂತರ, ಉದುರುವುದ ರಿಂದ ಕಾಂಡದ ಮೇಲೆ ಎಲೆಗಳು ಅಂಟಿಕೊಂಡಿದ್ದ ಕಲೆಗಳು ಉಳಿಯುತ್ತವೆ. ಭರ್ಜಿಯಾಕಾರ,

ಚರ್ಮದಂತೆ, ಒರಟು, ಅತಿ ಹಸಿರಾದ ಮೇಲುಭಾಗ, ನಸುಹಸಿರು, ಬಣ್ಣದ ತಳಭಾಗ, ನಯ ಅಂಚು, ಮೊನಚು ತುದಿ ಇವು ಎಲೆಗಳ ಲಕ್ಷಣ. ಎಲೆಯ ನಡುದಿಂಡು ಮತ್ತು ನಾಳಗಳು ತಳಭಾಗದಲ್ಲಿ ಪ್ರಮುಖವಾಗಿ ಉಬ್ಬಿ ಕಾಣುತ್ತವೆ. ತುದಿಯ ಗೊಂಚಲಾಗಿ ಬಿಡುವ

ಮಧ್ಯಾರಂಭಿ (ಸೈಮೋಸ್) ಹೂಗೊಂಚಲು ಆಕರ್ಷಕವಾಗಿ ಕಾಣುತ್ತದೆ. ಪುಷ್ಪ ಪತ್ರ ಸಾಮಾನ್ಯವಾಗಿ 5. ಇವುಗಳ ಬುಡದ ಒಳಭಾಗದಲ್ಲಿ ಗ್ರಂಥಿಗಳಿವೆ. ಹೂದಳ ಸಂಯುಕ್ತ ಮಾದರಿಯದು (ಗ್ಯಾಮೊಪೆಟಲಸ್). ಅದರಲ್ಲಿ 5 ಭಾಗಗಳಿವೆ. ಅದರ ಆಕಾರ ಆಲಿಕೆಯಂತೆ.

ಹೂಗಂಟಲ ಮೇಲೆ ಅನುಬಂಧಿಕೆ (ಅಪೆಂಡೇಜ್) ಇರುತ್ತದೆ. ಚಿಕ್ಕ ತೊಟ್ಟಿರುವ 5 ಕೇಸರಗಳು ಹೂಗಂಟಲಿಗೆ ಅಂಟಿರುತ್ತವೆ. ಪರಾಗ ಕೋಶಗಳಲ್ಲಿ ಪ್ರಭೇದಕ್ಕೆ ಅನುಸಾರವಾಗಿ ವಿವಿಧ ಬಣ್ಣದ ಅನುಬಂಧಿಕೆಗಳಿವೆ. ಅಂಡಾಶಯ ಉಚ್ಚಸ್ಥಾನದ್ದು. ಎರಡು ಕಾರ್ಪೆಲುಗಳಿವೆ.

ಫಲ ಫಾಲಿಕಲ್ಗಳ ಒಂದು ಜೋಡಿ. ಕಣಗಿಲೆಯ ಇನ್ನೊಂದು ಪ್ರಭೇದವಾದ ನೀ. ಓಡರೇಟಮಿನಲ್ಲಿ ಅನೇಕ ಆಕರ್ಷಕ ತಳಿಗಳಿವೆ. ಒಂದು ಸುತ್ತಿನ ಬಿಳುಪು ಬಣ್ಣದ ಹೂಬಿಡುವ ತಳಿ (ಆಲ್ಬೊಪ್ಲಿನಮ್). ಎರಡು ಸುತ್ತಿನ ಅತೀ ಕಡುಗೆಂಪು ಬಣ್ಣದ (ಬ್ಯಾಕ್ಪ್ರಿನ್ಸ್‌), ಎರಡು ಸುತ್ತಿನ

ನಸುಗೆಂಪು ಬಣ್ಣದ ಹೂಬಿಡುವ ತಳಿ (ಪ್ಲೊರೊಪ್ಲಿನೊ), ಒಂದು ಸುತ್ತಿನ ಗುಲಾಬಿ ಬಣ್ಣದ ಹೂ ಬಿಡುವ ತಳಿ (ರೋಸಿಯ)-ಇವು ತೋಟಗಾರಿಕೆಯಲ್ಲಿ ಹೆಸರಾಗಿರುವ ತಳಿಗಳು. ಕಣಗಿಲೆ ಸಸ್ಯವನ್ನು ಕಾಂಡದ ತುಂಡುಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಕಾಂಡದ ತುಂಡುಗಳನ್ನು ನಾಟಿಮಾಡಲು ಮಳೆಗಾಲ ಯೋಗ್ಯವಾದದ್ದು. ತುಂಡುಗಳನ್ನು ನಾಟಿಮಾಡಿದಮೇಲೆ ಅವು ಚಿಗುರಿ ಮೂರು ಅಡಿ ಎತ್ತರ ಬೆಳೆಯುವವರೆಗೆ ಕ್ರಮವಾಗಿ ನೀರು

ಹಾಕಬೇಕು. ಸುತ್ತಲೂ ಬೇಲಿಹಾಕಿದರೆ ಉತ್ತಮ. ಈ ಗಿಡದ ಬೇರು, ತೊಗಟೆ, ಬೀಜ ಮತ್ತು ಇತರ ಭಾಗಗಳೂ ವಿಷಕಾರಿಯಾದವು. ಅದರ ಹಾಲಿನಂಥ ದ್ರವದಲ್ಲಿರುವ ಗ್ಲೈಕೊಸೈಡ್ ಎಂಬ ವಸ್ತು ಹೃದಯ ಮತ್ತು ಬೆನ್ನುನರಗಳ ಮೇಲೆ ನಿಶ್ಚೇತನಗೊಳಿಸುವ ಪರಿಣಾಮವನ್ನು ಬೀರುವುದು. ಈ ಸಸ್ಯದ ಸುಟ್ಟಬೂದಿಯಲ್ಲಿ

ಪೊಟ್ಯಾಸಿಯಂ ಲವಣಗಳು ಅಧಿಕವಾಗಿರುತ್ತವೆ. ಬೇರಿನ ತೊಗಟೆಯಿಂದ ಇಳಿಸುವ ಒಂದು ಜಾತಿಯ ತೈಲವನ್ನು ಚರ್ಮರೋಗಕ್ಕೆ ಔಷಧಿಯಾಗಿ ಬಳಸುವರು. (ಬಿ.ಎ.ಸಿ.; ಡಿ.ಎಂ.; ಎಂ.ಎಸ್.ಎಸ್.ಆರ್.)