ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕತ್ತಿಕಾಯಿಮರ

ವಿಕಿಸೋರ್ಸ್ ಇಂದ
Jump to navigation Jump to search

ಕತ್ತಿಕಾಯಿಮರ : ಡೆಲೊನಿಕ್ಸ್‌ ರೀಜಿಯ ಅಥವಾ ಪಾಯಿನ್ಸಿಯಾನಾ ರೀಜಿಯ ಎಂಬ ವ್ಶೆಜ್ಞಾನಿಕ ಹೆಸರಿನ ಚೆಲುವಾದ ಹೂ ಬಿಡುವ ಮರ. ಲೆಗ್ಯುಮಿನೋಸೀ ಕುಟುಂಬದ ಸಿಸಾಲ್ಪಿನೀ ಉಪಕುಟುಂಬಕ್ಕೆ ಸೇರಿದೆ. ಮಡಗಾಸ್ಕರಿನ ಮೂಲವಾಸಿಯಾದ ಈ ಮರ ಭಾರತಕ್ಕೆ ಸು. 100-125 ವರ್ಷಗಳ ಹಿಂದೆ ಬಂತೆಂದು ಹೇಳಲಾಗಿದೆ. ಹಿಂದಿ ಭಾಷೆಯಲ್ಲಿ ಗುಲ್ಮೊಹರ್ ಎನ್ನಲಾಗುವ ಇದಕ್ಕೆ ಸ್ಥಳೀಯವಾಗಿ ಸೀಮೆಸಂಕೇಶ್ವರ, ಕೆಂಪುತುರಾಯಿ, ದೊಡ್ಡ ರತ್ನಗಂಧಿ ಇತ್ಯಾದಿ ಹೆಸರುಗಳೂ ಇವೆ. ಇದು ಸು. 15 ರಿಂದ 18 ಮೀ ಎತ್ತರ ಬೆಳೆಯುತ್ತದೆ. ಫಲವತ್ತಾದ ನೆಲ ಮತ್ತು ನೀರಿನ ಸೌಲಭ್ಯವಿದ್ದರೆ ಇನ್ನೂ ಎತ್ತರ ಬೆಳೆಯುವುದುಂಟು. ಮರದ ಆಕಾರ ಛತ್ರಿಯಂತೆ, ತೊಗಟೆ ಒರಟಾಗಿ ಅಲ್ಲಲ್ಲಿ ಗಂಟುಗಳಿಂದ ಕೂಡಿದೆ. ಬಣ್ಣ ಮಾಸಲು ಕಂದು. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ. ಅವು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ ಒಂದು ಮುಖ್ಯ ಮಧ್ಯಶಾಖೆಯೂ ಅದರಿಂದ ಹೊರಟ ಹಲವಾರು ಕಿರುಶಾಖೆಗಳೂ ಇವೆ. ಪ್ರತಿಯೊಂದು ಕಿರುಶಾಖೆಯಲ್ಲಿ 15-20 ಜೋಡಿ ಪರ್ಣಿಕೆಗಳಿವೆ. ಹೂಗಳು ರೇಸಿಮ್ ಮಾದರಿಯ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿವೆ. ಹೂಬಿಡುವ ಕಾಲ ಏಪ್ರಿಲ್-ಮೇ ತಿಂಗಳುಗಳು. ಹೂಬಿಡುವ ಮುನ್ನ ಎಲೆಗಳೆಲ್ಲ ಉದುರಿಹೋಗುತ್ತವೆ. ಹೂಗಳು ಸಾಕಷ್ಟು ದೊಡ್ಡವೂ ಕಿತ್ತಳೆಮಿಶ್ರಿತ ಕೆಂಪುಬಣ್ಣದಿಂದ ಹಿಡಿದು ಕಗ್ಗೆಂಪು ಬಣ್ಣದವೂ ಆಗಿ ಬಹು ಸುಂದರವಾಗಿವೆ. ಪುಷ್ಪಪತ್ರಗಳು ಐದು. ಅವುಗಳ ಹೊರಭಾಗ ಹಸಿರು, ಒಳಭಾಗ ಕೆಂಪು. ದಳಗಳು ಐದು. ಅವುಗಳಲ್ಲಿ ನಾಲ್ಕು ಒಂದೇ ಬಗೆಯವಾಗಿದ್ದು ಕೆಂಪುಬಣ್ಣದವಾಗಿವೆ. ಉಳಿದುದು ಕೊಂಚ ದೊಡ್ಡದೂ ಬಿಳಿ ಅಥವ ಹಳದಿ ಬಣ್ಣದ್ದೂ ಆಗಿದ್ದು ಅದರ ಮೇಲೆಲ್ಲ ಕೆಂಪು ಮಚ್ಚೆಗಳಿವೆ. ಎಲ್ಲ ದಳಗಳ ಅಂಚೂ ಕೊಂಚ ಮಡಿಸಿದಂತಿದೆ. ಕೇಸರಗಳು 10, ಬಿಡಿ ಬಿಡಿಯಾಗಿವೆ. ಅವುಗಳ ಬಣ್ಣವೂ ಕೆಂಪು. ಅಂಡಾಶಯ ಉಚ್ಚಸ್ಥಾನದ್ದು. ಒಂದೇ ಕಾರ್ಪೆಲನ್ನು ಹೊಂದಿದೆ. ಅದರೊಳಗೆ ಹಲವಾರು ಅಂಡಕಗಳಿವೆ. ಫಲ ಪಾಡ್ ಮಾದರಿಯದು. ಸು. 6096 ಮೀ ಉದ್ದವಾಗಿದ್ದು ಕತ್ತಿಯಂತಿರುತ್ತದೆ. ಬಹಳ ದಿನ ಮರದ ಮೇಲೆ ಕಾಯಿಗಳು ನೇತಾಡುತ್ತಿರುವುದನ್ನು ನೋಡಬಹುದು.

ಕತ್ತಿಕಾಯಿ ಮರವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿಯೂ ನೆರಳಿನ ಮರವಾಗಿ ರಸ್ತೆಯ ಬದಿಗಳಲ್ಲೂ ಬೆಳೆಸುತ್ತಾರೆ. ಸಾಮಾನ್ಯವಾಗಿ ಇದನ್ನು ಬೀಜಗಳಿಂದ ವೃದ್ಧಿಮಾಡುತ್ತಾರೆ. ತುಂಡುಗಳಿಂದಲೂ ಬೆಳೆಸಬಹುದು. ಹೆಚ್ಚಾಗಿ ಅಲಂಕಾರ ಸಸ್ಯವೆಂದು ಹೆಸರಾಗಿರುವ ಇದರ ಕಾಯಿ ಮತ್ತು ಮರವನ್ನು ಸೌದೆಗಾಗಿ ಉಪಯೋಗಿಸುವುದೂ ಉಂಟು. (ಎಂ.ಎಸ್.ಎಸ್.ಆರ್.; ಎಂ.ಎಚ್.ಎಂ.)