ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಥಾನಕ

ವಿಕಿಸೋರ್ಸ್ದಿಂದ

ಕಥಾನಕ

 12ನೆಯ ಶತಮಾನದ ಉತ್ತರಾರ್ಧ, 13ನೆಯ ಶತಮಾನ, 14ನೆಯ ಶತಮಾನದ ಪೂವಾರ್ಧ-ಈ ಅವಧಿಯಲ್ಲಿ ಫ್ರಾನ್ಸಿನಲ್ಲಿ ಬಳಕೆಗೆ ಬಂದ ವಿಶಿಷ್ಟವಾದೊಂದು ಬಗೆಯ ಚಿಕ್ಕ ಕಥೆ (ಫಾಬ್ಲಿಯೊ). ಬರಬರುತ್ತ ಅನೇಕ ಕವಿಗಳು ಅಂಥ ರಚನೆಯಲ್ಲಿ ತೊಡಗಿದರಾಗಿ ಆ ಬಗೆಯ ಸಾಹಿತ್ಯ ಬೆಳೆಯಿತು. ಆದರೆ ಆ ಕವಿಗಳಾರ ಹೆಸರೂ ಉಳಿದು ಬಂದಿಲ್ಲದಿರುವುದು ಸೋಜಿಗ. ರೂಟ್‍ಬೂಫ್ ಎಂಬ 13ನೆಯ ಶತಮಾನದ ಕವಿಯೂ ಕೆಲವು ಕಥಾನಕಗಳನ್ನು ಕಟ್ಟಿದನೆಂದು ಪ್ರತೀತಿಯಿದೆ. ಕಥಾನಕಗಳು ಅಷ್ಟೊಂದು ವಿಪುಲವಾಗಿ ನಿರ್ಮಾಣವಾದರೂ ನೈಜ ಕಥಾನಕವೆನ್ನಿಸಿಕೊಳ್ಳಬಲ್ಲವು ಕೇವಲ 150 ಮಾತ್ರ.

ಕಥಾನಕ ಸಾಮಾನ್ಯವಾಗಿ ಪದ್ಯದಲ್ಲಿ ಬರೆದ ಸಣ್ಣ ಕಥೆ. 300 ರಿಂದ 400ರವರೆಗೂ ಪದ್ಯಸಾಲುಗಳುಂಟು; 400ನ್ನು ಅದು ಮೀರಲಿಲ್ಲ. ಪ್ರತಿ ಸಾಲಿಗೂ ಎಂಟು ಉಚ್ಚಾರಾಂಶ. ಎರಡೆರಡು ಸಾಲು. ಅಂತ್ಯಪ್ರಾಸದಿಂದ ಕೂಡಿಕೊಂಡು ದ್ವಿಪದಿಯಾಗುತ್ತದೆ.

ಕಥಾನಕದ ಉದ್ದೇಶ ಲೇವಡಿ ಪ್ರಮುಖವಾದ ವಿಡಂಬನೆ, ಕಟುವಾದ ವಿಡಂಬನೆ. ನೀತಿಬೋಧೆಯಲ್ಲ, ಹೃದಯಾಹ್ಲಾದವಲ್ಲ. ಕೆಲವೊಮ್ಮೆ ಅದು ಬಿರುಸು ಅಪಹಾಸ್ಯವಾಗಿ ಅಸಭ್ಯತೆಯ ಗಡಿಯೊಳಕ್ಕೆ ನುಗ್ಗುತ್ತದೆ. ಆ ಕಾಲದಲ್ಲಿ ಉಚ್ಚ ವರ್ಗದವರು ಓದುತ್ತಿದ್ದ ಸಾಹಿತ್ಯ ರೊಮಾನ್ಸ್ ಎಂಬ ಅದ್ಭುತ ಕಥೆ; ಶೂರರ ಸಾಹಸಗಳೂ ಆದರ್ಶ ಸ್ತ್ರೀಯರನ್ನು ಕುರಿತ ಅವರ ಪ್ರಣಯವೂ ಅದರ ತಿರುಳು. ಅಂಥ ಕಥೆಗಳಿಂದ ರೋಸಿಹೋದ ಲೇಖಕ ಮಂದಿ ಮಧ್ಯಮವರ್ಗದ ಜನಜೀವನದ ಕಡೆಗೆ ತಿರುಗಿ, ಸಾಧಾರಣ ಘಟನಾವಳಿಯನ್ನು ಆರಿಸಿಕೊಂಡು, ಯಥಾವತ್ತಾಗಿ ಅವನ್ನು ನಿರೂಪಿಸುತ್ತ, ಕುಲೀನ ಪದ್ಧತಿಗಳನ್ನು, ಮುಖ್ಯವಾಗಿ ಶ್ರೀಮಂತ ಪ್ರಣಯವನ್ನು ಅವಹೇಳನಕ್ಕೆ ಈಡುಮಾಡಿ, ವಿನೋದ ತಂದು ಕೊಡಲಾರಂಭಿಸಿದರು. ಕ್ರೈಸ್ತ ಚರ್ಚಿನ ಮತ್ತು ಸಂನ್ಯಾಸಿಮಠಗಳ ಅಧಿಕಾರಿಗಳೂ ಅವರ ಗೇಲಿಗೆ ಗುರಿಯಾದರು. ಆ ಬೂಟಾಟಿಕೆಯವರಲ್ಲಿ ನುಡಿ ನಡೆಗಳಲ್ಲಿ ಭೇದ ಪ್ರತ್ಯಕ್ಷವಾಗಿ ಕಂಡುಬರುತ್ತಿತ್ತು. ಕಥಾನಕದ ನಾಯಕಿ ಒರಟಳೂ ಕೊಂಚ ಗಯ್ಯಾಳಿಯೂ ಆದ ದಿಟ್ಟ ಹೆಂಗಸು. ಗಂಡನನ್ನು ವಂಚಿಸುವುದಕ್ಕೂ ಅವಳು ಹೇಸದಂಥ ಚತುರೆ.

ಕಥಾನಕದ ಭಾಷೆ ಸರಳ ಸಾಮಾನ್ಯವಾದದ್ದು. ಅವಿನಯಕ್ಕೆ ಅಂಜದಂಥಾದ್ದು. ಚುಚ್ಚಿ ಕೆಣಕುವಂಥಾದ್ದು, ಹಾಗೂ ಬಲಿಷ್ಠವಾದದ್ದು. ಆದರ್ಶಕತೆ, ಸಭ್ಯ ಸಂಪ್ರದಾಯಗಳನ್ನು ಎದುರಿಸಿ ವಾಸ್ತವತೆಯನ್ನು ಪೋಷಿಸುವುದೇ ಕಥಾನಕದ ತೀವ್ರ ಬಯಕೆ. ಕಥಾನಕವನ್ನು ಓದಿಗೀದೀರಿ ಎಂಬ ಧಾರ್ಮಿಕ ಉಪದೇಶ ಕಥಾನಕದ ಜನಪ್ರಿಯತೆಗೆ ಸಾಕ್ಷ್ಯ.

ಇತರ ದೇಶಗಳಲ್ಲೂ ಇತರ ಶತಕಗಳಲ್ಲೂ ಕಥಾನಕದ ಪ್ರಭಾವವನ್ನು ಕಾಣುತ್ತೇವೆ. ಇಂಗ್ಲೆಂಡಿನ ಶ್ರೇಷ್ಠ ಕವಿ ಚಾಸರ್ ಒಂದೆರಡನ್ನು ಬರೆದ. 17ನೆಯ ಶತಮಾನದ ಶ್ರೇಷ್ಠ ಸಾಹಿತಿ ಲ ಫಾಂಟೇನ್ ತನ್ನ ನೀತಿಕಥೆ (ಫೇಬಲ್)ಯೊಂದಿಗೆ ಕಥಾನಕದ ಲಕ್ಷಣಗಳನ್ನು ಜೋಡಿಸಿ ಕೆಲವು ಕಲಾತ್ಮಕ ಕೃತಿಗಳನ್ನು ರಚಿಸಿದ. 18ನೆಯ ಶತಮಾನದ ಸಿ. ಎಫ್. ಜೆಲರ್ಟ್ 19ನೆಯ ಶತಮಾನದ ಐ. ಎ. ಕ್ರಿಲೋವ್ ಮುಂತಾದವರು ಕಥಾನಕ ಸಾಹಿತಿಗಳು. 19ನೆಯ ಶತಮಾನದ ಕೊನೆಯಲ್ಲಿ ಕಥಾನಕ ಸಂಕಲನಗಳು ಹೊರಬಂದು ಮೆಚ್ಚಿಕೆ ಪಡೆದುವು.

ಕಥಾನಕ ಪದ್ಧತಿ ಫ್ರಾನ್ಸಿನಲ್ಲಿ ಇಂದಿಗೂ ಅಳಿಸಿಹೋಗಿಲ್ಲವೆಂದೇ ವಿದ್ವಾಂಸರ ಅಭಿಪ್ರಾಯ.

(ಎಸ್.ವಿ.ಆರ್.)