ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಮಲಭವ

ವಿಕಿಸೋರ್ಸ್ದಿಂದ

"ಕಮಲಭವ ": - ಶಾಂತೀಶ್ವರಪುರಾಣವೆಂಬ ಚಂಪುಕಾವ್ಯವನ್ನು ಬರೆದ ಕವಿ ಕಾಲ ಸು.1235. ಜೈನಧರ್ಮದವ; ದೇಶೀಯಗಣ ಪುಸ್ತಕಗುಚ್ಛದ ಕೊಂಡಕುಂದಾನ್ವಯದ ಮಾಘನಂದಿ ಪಂಡಿತ ಮುನೀಶ್ವರನ ಶಿಷ್ಯ. ಈತನಿಗೆ ಕವಿಕಂಜಗರ್ಭ, ಸೂಕ್ತಿಸಂದರ್ಭಗರ್ಭ ಎಂಬ

ಬಿರುದುಗಳಿದ್ದಂತೆ ಕಾಣುತ್ತದೆ. ದೇವಗಿರಿಯ ಯಾದವ ರಾಜನಾದ ಸಿಂಹಣನ ಕಾಲದಲ್ಲಿ (1210-1247) ಇದ್ದನೆಂದು ಅವನ ಸಿಂಹಣೋರ್ವೀಶ್ವರಂ ವಿನಮನ್ಮಸ್ತಕ ನಾದಂ ಎಂಬ ಉಕ್ತಿಯಿಂದ ಊಹಿಸಬಹುದಾಗಿದೆ. ತನ್ನ ಕಾವ್ಯದಲ್ಲಿ ಪೂರ್ವ ಕವಿಗಳಾದ ಪಂಪ, ಪೊನ್ನ,

ನಾಗಚಂದ್ರ, ರನ್ನ, ಬಂಧುವರ್ಮ, ನೇಮಿಚಂದ್ರ, ಜನ್ನ, ಅಗ್ಗಳ- ಮೊದಲಾದವರ ಕೃತಿಸೌಂದರೀಸುಭಗಮಾವಗಮಿರ್ಕೆ- ಎಂದು ಹೇಳಿಕೊಂಡಿದ್ದಾನೆ. ಈ ಕಾರಣದಿಂದ ಜನ್ನಕವಿಯ (1230) ಈಚೆಗೂ ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವದಲ್ಲಿ (ಸು. 1243) ಇವನ

ಗ್ರಂಥದಿಂದ ಪದ್ಯಗಳು ಉದ್ಧರಿಸಲ್ಪಟ್ಟಿರುವುದರಿಂದ ಇದಕ್ಕೆ ಮೊದಲೂ ಕಮಲಭವ ಇದ್ದಿರಬೇಕು. ದೇವಕವಿಯ ಕುಸುಮಾವಳೀಕಾವ್ಯದ ಕವಿಕಮಳಜ ಸೂಕ್ತಿ ಸುಧಾರ್ಣವ ಸೋಮಂ ಎಂಬ ಉಕ್ತಿಯಿಂದ ದೇವಕವಿಯಿಂದ ಈತ ಪ್ರೋತ್ಸಾಹ ಪಡೆದವನೆಂದು ಊಹಿಸಲಾಗಿದೆ. ಶಾಂತೀಶ್ವರಪುರಾಣವನ್ನು ರಚಿಸಿದ ಕನ್ನಡ ಕವಿಗಳಲ್ಲಿ ಈತ ಎರಡನೆಯವ. ಹದಿನಾರನೆಯ ತೀರ್ಥಂಕರನನ್ನು ಕುರಿತ ಈ ಪುರಾಣದಲ್ಲಿ ಹದಿನಾರು ಆಶ್ವಾಸಗಳಿರುವುದು ಸಾರ್ಥಕವಾಗಿದೆ. ಪುರಾಣಕಾವ್ಯದ ಲಕ್ಷಣಗಳನ್ನೆಲ್ಲ ಒಳಗೊಂಡ ಪರಿಪುರ್ಣದ ಚಂಪುಕೃತಿ ಇದು.

ಕಥನವಿಸ್ತಾರ ಮತ್ತು ವರ್ಣನಾ ವಿಸ್ತಾರಗಳಲ್ಲಿ ಪೊನ್ನನ ಕಾವ್ಯವನ್ನು ಇದು ಮೀರಿಸುತ್ತದೆ. ಲಲಿತಪದಬಂಧ, ಕಥೆಯ ನಿರರ್ಗಳ ಓಟ, ಉಕ್ತಿ ಪ್ರೌಢಿಮೆ, ಭಾವತತ್ಪರತೆ, ಸುಂದರ ಕಲ್ಪನೆಗಳಿಂದ ಕೂಡಿದ ವರ್ಣನೆಗಳು, ಕವಿಸಮಯ ಮತ್ತು ಅಲಂಕಾರಗಳಿಂದ ತುಳುಕುವ ಪಾಂಡಿತ್ಯ-ಇವುಗಳಿಂದ ಇದು ಗಣ್ಯ ಚಂಪುಕೃತಿ ಎನ್ನಿಸುತ್ತದೆಯಾದರೂ ರಸದ ನಿರರ್ಗಳ

ಪ್ರವಾಹವಿಲ್ಲದುದರಿಂದ, ಅಂಶ ಅಂಶಗಳಲ್ಲಿ ಸುಂದರವಾಗಿದ್ದರೂ ಒಟ್ಟಾರೆ ನೋಡಿದಾಗ ಸಮಷ್ಟಿ ಸೌಂದರ್ಯದ ಕೊರತೆ ಎದ್ದುಕಾಣುತ್ತದೆ. (ಕೆ.ಜಿ.ಕೆ.)