ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಜ಼, ಐಸೋಲ್

ವಿಕಿಸೋರ್ಸ್ದಿಂದ

ಕರ್ಜ಼, ಐಸೋಲ್ಡ್‌: 1853-1944. ಜರ್ಮನ್ ಲೇಖಕಿ. ಸಣ್ಣಕಥೆಗಳನ್ನೂ ಭಾವಗೀತೆ ಗಳನ್ನೂ ಕಾದಂಬರಿಗಳನ್ನೂ ಬರೆದಿದ್ದಾಳೆ. ಪ್ರಸಿದ್ಧ ಸ್ವಾಬಿಯಾ ಕಾದಂಬರಿಕಾರ ಹರ್ಮನ್ ಕರ್ಜ಼ ಈಕೆಯ ತಂದೆ. ಬಾಲ್ಯದಿಂದಲೂ ತಾಯಿಯ ಪ್ರಭಾವ ಹಾಗೂ ಶಿಕ್ಷಣದಲ್ಲಿ ಬೆಳೆದದ್ದರಿಂದ ಸಾಹಿತ್ಯದಲ್ಲಿ ಅಭಿರುಚಿಯುಂಟಾಯಿತು. ಪ್ರಾಚೀನ, ಅರ್ವಾಚೀನ ಜರ್ಮನ್ ಸಾಹಿತ್ಯವನ್ನು ಓದಿಕೊಂಡಳು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಸ್ವಾವಲಂಬಿಯಾಗಿ ದುಡಿಯ ಬೇಕಾಯಿತು. ಮ್ಯೂನಿಚ್ನಲ್ಲಿ ಭಾಷೆ ಕಲಿಸುವ ಶಿಕ್ಷಕಿಯಾದಳು. ಆಗ ಬರೆದ ಮೊದಲ ಸಣ್ಣಕಥೆ ಪ್ರಸಿದ್ಧವಾಯಿತು. ಯೌವನ ಸಹಜವಾದ ಭಾವನಾಶೀಲತೆ, ಧೀರೋದಾತ್ತ ನಾಯಕ ಚಿತ್ರಣ-ಇವು ಈಕೆಯ ಕಥೆಗಳಲ್ಲಿ ಕಂಡುಬಂದರೂ ಹಗಲುಗನಸು ಕಾಣುವಂಥ ಮನೋಧರ್ಮ ಈಕೆಗೆ ಇರಲಿಲ್ಲ. 1877ರಿಂದ ಆಚೆ ಫ್ಲಾರೆನ್ಸಿನಲ್ಲಿದ್ದ ತನ್ನ ತಾಯಿ ಮತ್ತು ಸೋದರರೊಂದಿಗೆ ಇರತೊಡಗಿದಳು. ಕಡಲು ಈಕೆಯ ಮುಖ್ಯ ಆಕರ್ಷಣೆ. ಈಕೆಯ ಪಾಲಿಗೆ ಅದು ಸ್ವತಂತ್ರ ವಿಚಾರದ ಸಂಕೇತವಾಯಿತು. ಸುಮಾರು 27 ವರ್ಷ ಇಟಲಿಯಲ್ಲೇ ನೆಲೆಸಿ ಅವ್ಯಾಹತವಾಗಿ ಕೃತಿರಚನೆ ಮಾಡಿದಳು. ಒಂದನೆಯ ಮಹಾಯುದ್ಧ ಆರಂಭವಾದಾಗ ಮ್ಯೂನಿಚ್ಗೆ ಹಿಂತಿರುಗಿದಳು. ಈಕೆಯ ಕಾವ್ಯಕ್ಕೆ ಇಟಲಿಯೇ ನಿರಂತರವಾದ ಸ್ಫೂರ್ತಿಯ ನೆಲೆ. ಆದ್ದರಿಂದಲೇ ಈಕೆ ಬರೆದ ಎಲ್ಲ ಕಥೆಗಳಲ್ಲೂ ಇಟಲಿಯ ಜೀವನ ಹಾಸುಹೊಕ್ಕಾಗಿದೆ. ಗೆದಿಷ್ಟೆ (1899), ನ್ಯೂ ಗೆದಿಷ್ಟೆ (1905)-ಇವು ಈಕೆಯ ಪ್ರಕಟಿತ ಕವನ ಸಂಕಲನಗಳು. ಇವುಗಳಲ್ಲಿ ಚಿಂತನವೇ ಪ್ರಧಾನ ಗುಣ. ಕೆಲವೆಡೆ ಅದು ಅತಿ ಎನಿಸಿದರೂ ಜರ್ಮನ್ ಭಾವಗೀತೆಗಳಲ್ಲಿ ಈಕೆಯ ಕವಿತೆಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಆಲೋಚನೆಗಳಾಗಲೀ ಭಾವನೆಗಳಾಗಲೀ ಭಾವಾತಿರೇಕದ ಲೇಪವಿಲ್ಲದೆ ಪ್ರಾಮಾಣಿಕವಾಗಿ ನೇರವಾಗಿ ಅಭಿವ್ಯಕ್ತವಾಗಿರುವುದೇ ಈ ಕವನಗಳಿಗೆ ವಿಶೇಷತೆ. ಈ ದೃಷ್ಟಿಯಿಂದ ಈಕೆಯ ಕವನಗಳನ್ನು ರಿಕಾರ್ಡ್ ಹ್ಯೂನ ಕವನಗಳಿಗೆ ಹೋಲಿಸುವುದುಂಟು. ಹ್ಯೂ ಈಕೆಗಿಂತಲೂ ಶ್ರೇಷ್ಠ ಕವಿಯಾದರೂ ಆತನ ಕವನಗಳಲ್ಲಿ ಕಾಣದ ಸೊಗಸು, ಹೊಳಹು ಈಕೆಯ ಕವಿತೆಗಳಲ್ಲಿವೆ. ಐಸೋಲ್ಡಳ ಕಾದಂಬರಿ ವನಾಡಿಸ್ ಅನ್ನು ಜರ್ಮನಿಯ ಬಿಲ್ಡುಂಗ್ಸ್‌ ರೊಮಾನ್ ಪರಂಪರೆಗೆ ಸೇರಿಸಿದ್ದಾರೆ. ಕೆಲವು ಬಾರಿ ಭಾವದ ಕಾವಿಗೂ ಸತ್ತ್ವಕ್ಕೂ ಚ್ಯುತಿ ಬಂದರೂ ಕೃತಿಯ ರಚನೆಯ ಕಡೆ ಸುಭಗವಾದ ಶೈಲಿಯಕಡೆ ವಿಶೇಷಗಮನವಿತ್ತು. ಶ್ರಮವಹಿಸಿ ತಿದ್ದಿ ತೀಡಿ ಹೊಳಪು ಕೊಟ್ಟಿರುವುದರಿಂದ ಐಸೋಲ್ಡಳ ಕೃತಿಗಳು ಕಲಾತ್ಮಕ ಪರಿಪೂರ್ಣತೆಗೆ ಹೆಸರಾಗಿವೆ. (ಕೆ.ಬಿ.ಪಿ.)