ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಲಬುರ್ಗಿ, ಎಂ ಎಂ

ವಿಕಿಸೋರ್ಸ್ದಿಂದ

ಕಲಬುರ್ಗಿ, ಎಂ ಎಂ : (೧೯೩೮). ಕನ್ನಡದ ಪ್ರಸಿದ್ಧ ಸಂಶೋಧಕರು, ವಿಶ್ರಾಂತ ಕುಲಪತಿಗಳು. ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಗುಬ್ಬೇವಾಡದಲ್ಲಿ ೧೯೩೮ ನವೆಂಬರ್ ೨೯ರಂದು ಜನಿಸಿದರು. ತಂದೆ ಮಡಿವಾಳಪ್ಪ, ತಾಯಿ ಗುರಮ್ಮ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪ್ರಶಸ್ತಿಯೊಂದಿಗೆ ಉನ್ನತಶ್ರೇಣಿಯಲ್ಲಿ ಪಡೆದರು. ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಗಳಿಸಿದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ (೧೯೬೨) ಇವರು ಅನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವನ್ನು ಸೇರಿ (೧೯೬೬) ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ೩೨ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ಬಳಿಕ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡು (೧೯೯೮) ಮೂರು ವರ್ಷ ಕ್ರಿಯಾಶೀಲರಾಗಿ ದುಡಿದರು.

ಕಲಬುರ್ಗಿಯವರು ಸಂಶೋಧನೆಗಾಗಿ ತಮ್ಮನ್ನು ಅರ್ಪಿಸಿಕೊಂಡು ಈ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದವರು. ಇವರ ಸಂಶೋಧನೆ ಎರಡು ಬಗೆಯದು. ಒಂದು, ವೈಯಕ್ತಿಕ ನೆಲೆಯಲ್ಲಿ ಕೈಗೊಂಡ ಸಂಶೋಧನೆ ಮತ್ತೊಂದು ಸಾಂಸ್ಥಿಕ ನೆಲೆಯಲ್ಲಿ ಮಾಡಿದ ಸಂಶೋಧನೆ. ಹಳಗನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಜಾನಪದ, ಶಾಸನ, ಭಾಷಾವಿಜ್ಞಾನ (ನಾಮವಿಜ್ಞಾನ) ಹೀಗೆ ಇವರ ಸಂಶೋಧನೆಯ ವ್ಯಾಪ್ತಿ ದೊಡ್ಡದು. ಇವರು ೪೬ಕ್ಕೂ ಹೆಚ್ಚು ಗ್ರಂಥಗಳನ್ನೂ ೨೦೦ ಸಂಶೋಧನ ಲೇಖನಗಳನ್ನೂ ಬರೆದಿದ್ದಾರೆ. ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ.

ಸಂಶೋಧನೆ ಸತ್ಯನಿಷ್ಠವಾಗಿರಬೇಕೆಂಬ ಸಿದ್ಧಾಂತದಲ್ಲಿ ನಂಬಿಕೆಯುಳ್ಳ ಇವರು ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ, ಸತ್ಯ ಕಹಿಯಾಗಿರುವುದೇ ಹೆಚ್ಚು ಎಂಬುದನ್ನು ಮನಗಂಡವರು. ಸಂಶೋಧನೆಯಲ್ಲಿ ಕ್ಷೇತ್ರಕಾರ್ಯದ ಅನುಭವಗಳಿಗೂ ಹೆಚ್ಚು ಒತ್ತುಕೊಟ್ಟವರು. ಈ ಕಾರಣಕ್ಕಾಗಿ ಇವರು ನಾಡಿನಾದ್ಯಂತ ಹಾಗೂ ನಾಡಿನ ಹೊರಗೂ ಸಂಚರಿಸಿದ್ದಾರೆ. ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯ, ನಿಂಬಸಾಮಂತ ಚರಿತೆ, ಸಿರುಮಣನಾಯಕನ ಸಾಂಗತ್ಯ, ಸಿರುಮನ ಚರಿತೆ, ಗೊಲ್ಲಸಿರುಮನ ಚರಿತೆ, ಕೊಂಡಗುಳಿ ಕೇಶಿರಾಜನ ಕೃತಿಗಳು, ವಿಜಾಪುರ ಧಾರವಾಡ ಜಿಲ್ಲೆಯ ಶಾಸನಗಳು (೧೯೭೬), ಕರ್ನಾಟಕ ಕೈಫಿಯತ್ತುಗಳು (೧೯೯೪) ಮೊದಲಾದ ಸಂಪಾದಿತ ಕೃತಿಗಳು ಕರ್ನಾಟಕದ ಇತಿಹಾಸ ರಚನೆಯಲ್ಲಿ ಅಪೂರ್ವ ಆಕರ ಗ್ರಂಥಗಳಾಗಿವೆ.

ಹಳಗನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ ವಿದ್ವತ್ತು ಗಳಿಸಿರುವ ಇವರಿಗೆ ಪಂಪ, ವಚನಕಾರರು, ಹರಿಹರ ಅಚ್ಚುಮೆಚ್ಚು. ಹಾಗಾಗಿ ಪ್ರಾಚೀನ ಗ್ರಂಥಗಳ ಪರಿಷ್ಕರಣ ವಿಚಾರದಲ್ಲಿ ಆಸ್ಥೆ ಬೆಳೆಸಿಕೊಂಡರು. ಚೆನ್ನಬಸವಣ್ಣನವರ ಷಟ್ಸ್ಥಲವಚನ, ಮಹಾಸಂಪುಟ (೧೯೯೦) ಬಸವಣ್ಣನವರ ಟೀಕಿನ ವಚನಗಳು, ಹರಿಹರನ ರಗಳೆಗಳು, ಕುಮಾರರಾಮ ಸಾಂಗತ್ಯಗಳ ಸಂಪಾದನೆ ಮೂಲಕ ಆಕರ ಸಂಶೋಧನೆಗೆ ಕೊಡುಗೆ ನೀಡಿದರು. ಇವರು ರಚಿಸಿದ ಕನ್ನಡ ಗ್ರಂಥಸಂಪಾದನ ಶಾಸ್ತ್ರ (೧೯೭೨) ಈ ಕ್ಷೇತ್ರದ ಒಂದು ಮಹತ್ವದ ಕೃತಿ. ಕನ್ನಡ ಸಂಶೋಧನ ಶಾಸ್ತ್ರ (೧೯೯೨), ಹಸ್ತಪ್ರತಿ ಶಾಸ್ತ್ರ, ಕನ್ನಡ ನಾಮ ವಿಜ್ಞಾನ ಶಾಸ್ತ್ರ-ಇವು ಆಯಾ ಕ್ಷೇತ್ರದ ಅಮೂಲ್ಯ ಕೃತಿಗಳೆನಿಸಿವೆ.

ಕಲಬುರ್ಗಿಯವರ ಸಮಗ್ರ ಸಂಶೋಧನ ಬರೆಹಗಳು ಮಾರ್ಗ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಈ ಎಲ್ಲ ರಚನೆಗಳು ಸಾಹಿತ್ಯ, ಸಂಸ್ಕೃತಿ, ಶಾಸನ, ಜಾನಪದ ಕ್ಷೇತ್ರದಲ್ಲಿ ನಡೆಸಿದ ಬಹುಮುಖೀ ಸಂಶೋಧನೆಗೆ ಹಿಡಿದ ಕನ್ನಡಿಯಾಗಿವೆ. ವ್ಯಾಖ್ಯಾನ ಮತ್ತು ವಿಶ್ಲೇಷಣೆಗಳನ್ನು ಮೇಳೈಸಿ ಕೊಂಡಿರುವುದೇ ಇಲ್ಲಿನ ಸಂಶೋಧನೆಯ ವೈಶಿಷ್ಟ್ಯ. ಸಂಶೋಧನ ಪ್ರತಿಭೆಯ ಬಹುಶ್ರುತತೆಯನ್ನು ನಾವು ಈ ಲೇಖನಗಳಲ್ಲಿ ಕಾಣಬಹುದಾಗಿದೆ. ಈ ಸರಣಿಯ ನಾಲ್ಕನೆಯ ಸಂಪುಟ ೨೦೦೪ರಲ್ಲಿ ಬೆಳಕುಕಂಡಿದೆ.

ಕನ್ನಡ ಸಂಶೋಧನೆಗೆ ಸಂಬಂಧಿಸಿದಂತೆ ಹಲವಾರು ಉತ್ತಮ ಯೋಜನೆಗಳನ್ನು ಇವರು ರೂಪಿಸಿ, ಅದರಲ್ಲಿ ಸಂಸ್ಥೆಗಳನ್ನು ತೊಡಗಿಸಿಕೊಂಡು ಸಾಕಾರಗೊಳಿಸಿದ್ದಾರೆ. ಈ ಪೈಕಿ ಕನ್ನಡ ಹಸ್ತಪ್ರತಿಗಳ ಸಂಗ್ರಹಣೆ, ಪರಿವೀಕ್ಷಣೆ, ಸಮಗ್ರ ವಚನ ಸಾಹಿತ್ಯ ಪ್ರಕಟಣೆ, ಕರ್ನಾಟಕದ ನೆರೆಯ ರಾಜ್ಯಗಳ ಹಸ್ತಪ್ರತಿ ಸಂಗ್ರಹ, ಮಾನಸೋಲ್ಲಾಸ ಅನುವಾದ, ಅಪ್ರಕಟಿತ ವೀರಶೈವ ಗ್ರಂಥಗಳ ಪ್ರಕಟಣಾ ಯೋಜನೆ ಬೆಲೆಯುಳ್ಳವಾಗಿವೆ.

ಇವರು ತಮ್ಮ ಸಾಹಿತ್ಯಕ ಸಾಧನೆಗಾಗಿ ಅನೇಕ ಗೌರವ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಶಾಸನಗಳಲ್ಲಿ ಶಿವಶರಣರು (೧೯೭೦), ಶಾಸನ ವ್ಯಾಸಂಗ (೧೯೭೪) ಮೊದಲಾದ ಐದು ಗ್ರಂಥಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ವರ್ಷದ ಶ್ರೇಷ್ಠ ಪುಸ್ತಕ ಬಹುಮಾನ ಲಭ್ಯವಾಗಿದೆ. ವಿಶ್ವಮಾನವ ಪ್ರಶಸ್ತಿ (೧೯೯೦), ರಾಜ್ಯೋತ್ಸವ ಪ್ರಶಸ್ತಿ (೧೯೯೧), ವರ್ಧಮಾನ ಪ್ರಶಸ್ತಿ (೧೯೯೪) ಇವರಿಗೆ ಸಂದಿವೆ. ಇವರಿಗೆ ೧೯೯೬ರಲ್ಲಿ ಕರ್ನಾಟಕ ಸರ್ಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿದೆ. ಪಂಪ ಪ್ರಶಸ್ತಿಯಿಂದ ಬಂದ ಒಂದು ಲಕ್ಷರೂಪಾಯಿಗಳನ್ನು ಇವರು ಅಣ್ಣಿಗೇರಿಯಲ್ಲಿ ಪಂಪನ ಹೆಸರಿನ ಸಂಶೋಧನ ಕೇಂದ್ರ ತೆರೆಯಲು ಕೊಡುಗೆಯಾಗಿ ನೀಡಿದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಇವರಿಗೆ ಜಾನಪದ ತಜ್ಞ ಪ್ರಶಸ್ತಿ ನೀಡಿದೆ. ಇವರಿಗೆ ಮಹಾಮಾರ್ಗ ಎಂಬ ಗೌರವ ಗ್ರಂಥವನ್ನು ಸಮರ್ಪಿಸಲಾಗಿದೆ. (ವೈ.ಸಿ.ಬಿ.)