ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಲ್ಲರಸ

ವಿಕಿಸೋರ್ಸ್ದಿಂದ

ಕಲ್ಲರಸ:-- ಸು.೧೪೫೦. ಜನವಶ್ಯ ಎಂಬ ಕಾಮಶಾಸ್ತ್ರಗಂಥದ ಕರ್ತೃ. ಇವನ ಸ್ಥಳ ಹಂಪೆ. ಕ್ರಿಯಾಶಕ್ತಿಮುನಿ ಇವನ ಕುಲಗುರು. ಹೇಮಕೂಟಗಿರಿ ನಿವಾಸಿ ಮಲ್ಲಿಕಾರ್ಜುನ ಆರಾಧ್ಯದೈವ. ಪೂರ್ವಕವಿಗಳಲ್ಲಿ ಭೋಜನನ್ನು ಸ್ಮರಿಸಿದ್ದಾನೆ.

ಜನವಶ್ಯಕ್ಕೆ ಮದನತಿಲಕ, ಮಲ್ಲಿಕಾರ್ಜುನವಿಜಯ ಎಂಬ ಹೆಸರುಗಳೂ ಇವೆ. ೧೩ ಸಂಧಿ, ೬೮೫ ಶರ, ಕುಸುಮ, ಭೋಗ ಷಟ್ಪದಿಗಳನ್ನೊಳಗೊಂಡಿರುವ ಈ ಕೃತಿ ರತಿರಹಸ್ಯದ ನೇರವಾದ ಅನುವಾದ. ಕಕೋಕ ಸಂಸ್ಕೃತದಲ್ಲಿ ಸೂತ್ರಬದ್ಧವಾಗಿ ಹೇಳುವುದನ್ನು ಅಷ್ಟೇ ಸೂತ್ರಬದ್ಧವಾಗಿ ಸಮರ್ಥವಾಗಿ ಕಲ್ಲರಸ ಕನ್ನಡದಲ್ಲಿ ಅನುವಾದ ಮಾಡಿದ್ದಾನೆ. ಆದರೆ ತನ್ನ ಕೃತಿಗೆ ಆಕರವನ್ನು ಹೇಳುವಾಗ ಇಂದುಶೇಖರ ಕೃಷ್ಣ ನಂದೀಶ ಗೋಣಿಕಾನಂದನಂ ಮೊದಲಾದವರ್ ಪೇಳಿದ ಕಂದರ್ಪಶಾಸ್ತ್ರಮಂ ಮಂದಸ್ಮಿತಾಸ್ಯೆ ನಿನಗಂದಮೊದವಿರ್ದ ಕನ್ನಡದಿನೊರೆದೆ ಎಂದು ಹೇಳಿ ಕಕೋಕನ ಹೆಸರನ್ನು ಗ್ರಂಥದಲ್ಲಿ ಎಲ್ಲಿಯೂ ಹೇಳುವುದಿಲ್ಲ. ಹಾಗೆಯೇ ಮಲ್ಲಿಕಾರ್ಜುನ ನೃಪಾಲ ತನ್ನ ಹೆಂಡತಿಗೆ ಹೇಳಿದ ಜನವಶ್ಯವನ್ನು ತಾನು ಕನ್ನಡದಲ್ಲಿ ವಿಸ್ತರಿಸಿ ಹೇಳುತ್ತಿರುವುದಾಗಿ, ಮಲ್ಲಿಕಾರ್ಜುನ ಧರಾವಲ್ಲಭನೊಸೆದು ತನ್ನ ನಲ್ಲಳವಂತೊರೆದ ಜನವಶ್ಯಮಂ ಸಲ್ಲಲಿತವಾಣಿ ಕವಿ ಕಲ್ಲರಸನಱುವವರ ಮೆಲ್ಲೆರ್ದೆಯನಿಂಬುಗೊಳ್ವಂತೆ ಬರೆದು ಎಂಬ ಪದ್ಯದಲ್ಲಿ ಹೇಳಿಕೊಂಡಿದ್ದಾನೆ. ಮೇಲಿನ ಪದ್ಯದಲ್ಲಿ ಉಲ್ಲೇಖಿತನಾಗಿರುವ ಮಲ್ಲಿಕಾರ್ಜುನ ೧೪೪೬ ರಿಂದ ೧೪೬೫ರವರೆಗೆ ಆಳಿದ ವಿಜಯನಗರದ ದೊರೆಯೆಂದು ತಿಳಿದುಬರುತ್ತದೆ.

ಜನವಶ್ಯದ ರಚನೆಯಲ್ಲಿ ಕಂಡುಬರುವ ಕಲ್ಲರಸನ ಕವಿತಾಶಕ್ತಿ ಮತ್ತು ಪ್ರತಿಭೆ ಮೆಚ್ಚುವಂತಹುದು. ಕಾಮಶಾಸ್ತ್ರದ ನಿರೂಪಣೆಗೆ ಬೇಕಾದ ಲಲಿತಶೈಲಿಯನ್ನು ಈತ ಸಾಧಿಸಿಕೊಂಡಿದ್ದಾನೆ. ಈತನೇ ಹೇಳುವ ಅಯದರ್ಗುಪದೇಶವದರ್ಗೆ ಜೀವಕಳೆಯದ ಯದವರಿಗ ವೆನಿಸಿರ್ಪುದು ಮ ಯಿಲ್ಲದೆಲ್ಲರ್ಗೆ ನೆವೆಯವೊಲ್ ಕಲೆಯನು ಬೀರ್ವುದೆನ್ನಕೃತಿ ಸತತಮಬಲೆ -ಎಂಬ ಮಾತು ಉತ್ಪ್ರೇಕ್ಷೆಯಲ್ಲ. ಸತಿಪತಿಯರ ಸರಸ ಸಂಭಾಷಣೆಯ ಚೌಕಟ್ಟಿನಲ್ಲಿ ಸಾಗುವ ಈ ಕೃತಿ ಓದುಗನ ಮನಮುಟ್ಟುವಲ್ಲಿ ತನ್ನ ಸಾರ್ಥಕತೆಯನ್ನು ಕಂಡುಕೊಂಡಿದೆ. ಕನ್ನಡದಲ್ಲಿ ಕಾಮಶಾಸ್ತ್ರವನ್ನು ಕುರಿತ ಅನುಭವಮುಕುರ, ಮದನ ತಿಲಕ, ಮನ್ಮಥವಿಜಯ ಮೊದಲಾದ ಕೃತಿಗಳು ಬಂದಿದ್ದು, ಜನವಶ್ಯ ಅವುಗಳಲ್ಲೆಲ್ಲ ಸಮಗ್ರವೂ ಸಮರ್ಪಕವೂ ಆದ ಕೃತಿಯಾಗಿದೆ ಎಂದು ಹೇಳಬಹುದು. (ಜಿ.ಜಿ.ಎಂ.)