ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಳ್ಳಹಕ್ಕಿ

ವಿಕಿಸೋರ್ಸ್ದಿಂದ

ಕಳ್ಳಹಕ್ಕಿ


 ಕಾರ್ವಿಡೀ ಕುಟುಂಬಕ್ಕೆ ಸೇರಿದ ಒಂದು ಹಕ್ಕಿ (ಟ್ರೀ ಪೈ). ಬಿಳಿ ಕೋಗಿಲೆ ಇದರ ಪರ್ಯಾಯ ನಾಮ. ಡೆಂಡ್ರೊಸಿಟಿ ಎಂಬ ಶಾಸ್ತ್ರೀಯ ಹೆಸರಿನ ಜಾತಿಗೆ ಸೇರಿದೆ. ಸಾಮಾನ್ಯವಾಗಿ ಗುಡ್ಡಗಾಡುಗಳಲ್ಲಿ ವಾಸಿಸುತ್ತದೆ. ಸುಮಾರು 17-70 ಸೆಂ.ಮೀ. ವರೆಗೂ ಬೆಳೆಯುತ್ತದೆ. ಇದಕ್ಕೆ ಉದ್ದವಾದ ಬಾಲ ಇದೆ. ಪುಕ್ಕಗಳ ಬಣ್ಣ ಕಪ್ಪು, ಬಿಳಿ, ನೀಲಿ, ಹಸಿರು, ಹಳದಿ, ಕಂದು, ಕೆಂಗಂದು ಇತ್ಯಾದಿ ಹಲವು ರೀತಿಯದು. ಕೆಲವು ಪ್ರಬೇಧಗಳಲ್ಲಿ ರೆಕ್ಕೆ ಹಾಗೂ ಬಾಲದ ಪುಕ್ಕಗಳ ಮೇಲೆ ಪಟ್ಟಿಗಳಿವೆ. ಇದು ಸಾಧಾರಣವಾಗಿ ಗುಂಪುಗಳಲ್ಲಿ ವಾಸಿಸುತ್ತದೆ. ಹಣ್ಣು, ಕೀಟಗಳು, ಹಲ್ಲಿಗಳು, ಕಪ್ಪೆಗಳು, ಇತರ ಹಕ್ಕಿಗಳ ಮೊಟ್ಟೆ ಮತ್ತು ಸಣ್ಣ ಪಟ್ಟ ಸ್ತನಿಗಳು ಮುಂತಾದವೆಲ್ಲ ಇವುಗಳ ಆಹಾರ. ಕೆಲವು ಪ್ರಬೇಧಗಳು ಚೆನ್ನಾಗಿ ಹಾಡಬಲ್ಲವು.

 ಭಾರತದಲ್ಲಿ ಈ ಜಾತಿಯ ಐದು ಪ್ರಭೇದಗಳು ಕಾಣಬರುತ್ತವೆ:

1. ಡೆಂಡ್ರೊಸಿಟ್ಟ್ ವೆಗಬುಂಡ (ಭಾರತದ ಕಳ್ಳ ಹಕ್ಕಿ)

2. ಡೆಂಡ್ರೊಸಿಟ್ಟ್ ಫೆರ್ಮೊಸೆ (ಬೂದು ಕಳ್ಳಹಕ್ಕಿ)

3. ಡೆಂಡ್ರೊಸಿಟ್ಟ್ ಲೊಕೊಗ್ಯಾಸ್ಟ್ರ್ (ಬಿಳಿ ಹೊಟ್ಟೆಯ ಕಳ್ಳಹಕ್ಕಿ)

4. ಡೆಂಡ್ರೊಸಿಟ್ಟ್ ಪ್ರಂಬಾಲಿಸ್ (ಕರಿಹುಟ್ಟಿನ ಕಳ್ಳಹಕ್ಕಿ)

5. ಡೆಂಡ್ರೊಸಿಟ್ಟ್ ಬೈಲೇಯಿ (ಅಂಡಮಾನಿನ ಕಳ್ಳಹಕ್ಕಿ)

       

(ಎಸ್.ವಿ.ಎ.)

 (ಪರಿಷ್ಕರಣೆ: ಕೆ ಎಸ್ ನವೀನ್)