ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ನೋ, ನಿಕೊಲಾಸ್ ಲಿಯೊನಾರ್ಡ್ ಸಾಡಿ

ವಿಕಿಸೋರ್ಸ್ ಇಂದ
Jump to navigation Jump to search

ಕಾರ್ನೋ, ನಿಕೊಲಾಸ್ ಲಿಯೊನಾರ್ಡ್ ಸಾಡಿ

1796-1832. ಫ್ರಾನ್ಸಿನ ಭೌತಶಾಸ್ತ್ರಜ್ಞ. ಜನನ ಪ್ಯಾರಿಸಿನಲ್ಲಿ ಜೂನ್ 1, 1796ರಲ್ಲಿ. ಈಕೊಲ್ ಪಾಲಿಟೆಕ್ನಿಕಿನಲ್ಲಿ ವ್ಯಾಸಂಗಮಾಡಿ 1814ರಲ್ಲಿ ಮಿಲಿಟರಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ. ಆ ಗುಂಪಿನ ಕ್ಯಾಪ್ಟನ್ ಆಗಿ 1827ರಲ್ಲಿ ಬಡ್ತಿ ಬಂದರೂ ಮರುವರ್ಷವೇ ಆತ ಮಿಲಿಟರಿ ಹುದ್ದೆ ತ್ಯಜಿಸಿದ. ಆಗಸ್ಟ್ 24, 1832ರಲ್ಲಿ ಕಾರ್ನೋ ಗತಿಸಿದ.

 ತನ್ನ ಸಂಶೋಧನೆಗಳೆಲ್ಲವನ್ನೂ ಒಂದೇ ಒಂದು ಪುಸ್ತಕದಲ್ಲಿ ಕಾರ್ನೋ ಬರೆದು ಇಟ್ಟಿದ್ದಾನೆ. ಉಷ್ಣಯಂತ್ರಗಳ ವಿಷಯದಲ್ಲಿ ಕಾರ್ನೋ ನಡೆಸಿದ ಸಂಶೋಧನೆಗಳನ್ನು ಒಳಗೊಂಡಿರುವ ಈ ಅತ್ಯಮೂಲ್ಯ ಗ್ರಂಥವನ್ನು ಆತ ಬರೆದದ್ದು 1824ರಲ್ಲಿ. ಆದರೆ ಇದರ ಮೌಲ್ಯ ಆತ ಗತಿಸಿದ ಸುಮಾರು 16 ವರ್ಷಗಳ ಅನಂತರ ಎಂದರೆ 1848-49ರಲ್ಲಿ ಆಸಕ್ತರಿಗೆ ತಿಳಿಯಿತು. ಕೆಲ್ವಿನ್ ತೋರಿಸಿಕೊಡುವವರೆಗೂ ವಿಜ್ಞಾನಿಗಳ ಗಮನಕ್ಕೆ ಬಂದಿರಲಿಲ್ಲ. ಅದೃಷ್ಟವಶಾತ್ ಆತನ ಕೈಬರಹವನ್ನು ಜೋಪಾನವಾಗಿಟ್ಟದ್ದರಿಂದ ಇದರ ಪ್ರಕಟಣೆ ಸಾಧ್ಯವಾಯಿತು. ಈ ಗ್ರಂಥವೊಂದರಿಂದಲೇ ಕಾರ್ನೋನನ್ನು ಸುಪ್ರಸಿದ್ಧ ಭೌತಶಾಸ್ತ್ರಜ್ಞರ ಗುಂಪಿಗೆ ಸೇರಿಸಬಹುದು.

 ಆತನ ಬರಹದಿಂದ ಕಾರ್ನೋ ಉಷ್ಣದ ನಿಜಸ್ವರೂಪದ ಬಗ್ಗೆ ಎಷ್ಟು ಆಳವಾಗಿ ಅಧ್ಯಯನ ನಡೆಸಿದ್ದನೆಂಬುದರ ಜೊತೆಗೆ ಉಷ್ಣದ ಯಾಂತ್ರಿಕ ಸಾಮ್ಯ ಕಂಡುಹಿಡಿಯಲು ನಾವು ಈಗ ಆಧುನಿಕವೆಂದು ಉಪಯೋಗಿಸುತ್ತಿರುವ ಉತ್ತಮ ಪ್ರಯೋಗಗಳ ಪ್ರಯತ್ನಗಳನ್ನು ಆಗಲೇ ಅವನು ಮಾಡಿದ್ದನೆಂಬುದೂ ತಿಳಿಯಿತು. ಉದಾಹರಣೆಗೆ ಜೌಲ್ ಮತ್ತು ಕೆಲ್ವಿನ್‍ರವರ ಪ್ರಸಿದ್ಧ ಸರಂಧ್ರಪ್ಲಗ್ ಪ್ರಯೋಗದ ಪ್ರಯತ್ನ ಮುಂತಾದುವುಗಳೂ ಅಲ್ಲಿದ್ದುವು. ಕಾರ್ನೋ ನೀಡಿರುವ ಉಷ್ಣಯಂತ್ರ ಪ್ರಮೇಯ ಹೀಗಿದೆ: ಯಾವ ಉಷ್ಣ ಎಂಜಿನ್ನೂ ಅದೇ ಉಷ್ಣತೆಗಳ ನಡುವೆ ಕ್ರಿಯಾಶೀಲವಾಗಿರುವ ವಿಪರ್ಯಶೀಲ ಎಂಜಿನ್‍ಗಿಂತ ದಕ್ಷತರವಾಗಿರಲಾರದು. ಆದ್ದರಿಂದ ವಿಪರ್ಯಶೀಲ (ರಿವರ್ಸಿಬಲ್) ಎಂಜಿನ್‍ನ ದಕ್ಷತೆ ಕ್ರಿಯಾನಿರತ ಪದಾರ್ಥವನ್ನು ಅವಲಂಬಿಸಿಲ್ಲ. ಬದಲು, ಅದು ವರ್ತಿಸುತ್ತಿರುವ ಉಷ್ಣತಾಮಿತಿಗಳನ್ನು ಮಾತ್ರ ಅವಲಂಬಿಸಿದೆ. ಇದು ಉಷ್ಣಚಲನಶಾಸ್ತ್ರದ ಅಡಿಗಲ್ಲಾಗಿದೆ.

                                                                       (ಪಿ.ವಿ.)

                                                                               (ಪರಿಷ್ಕರಣೆ: ಹೆಚ್.ಆರ್.ಆರ್)