ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಲ 1

ವಿಕಿಸೋರ್ಸ್ದಿಂದ

ಕಾಲ 1

    ಕಾಲ ಎಂಬುದು ಮಾನವನ ಅನುಭವಗಳ ಸರಣಿಯನ್ನು ಸಕ್ರಮವಾಗಿ ಪೋಣಿಸುವ ಒಂದು ತಂತು. ಭಾಷೆಯ ಮಾಧ್ಯಮದಲ್ಲಿ ನಾವು ಬಳಸುವ ಹಿಂದು ಮುಂದು, ಈಗ ಆಮೇಲೆ, ಮೊದಲು ಅನಂತರ, ಇದರಿಂದ ಅದರಿಂದ

_ಮುಂತಾದ ಮಾತುಗಳು ಕಾಲವನ್ನು ಸೂಚಿಸುವ ಸ್ಥೂಲರೂಪಗಳು. ಮಾನವನ ಪ್ರಜ್ಞೆ ಮತ್ತು ಆಲೋಚನೆಗೆ ಬೇಕಾದ ಅತ್ಯಂತ ಮೂಲಭೂತವೂ ಅತಿಸೂಕ್ಷ್ಮವೂ ಆದ ಕಾಲವನ್ನು ವರ್ತಮಾನ, ಭೂತ ಮತ್ತು ಭವಿಷ್ಯತ್ತುಗಳೆಂಬ ಮೈಲಿಗಲ್ಲುಗಳಿಂದ ನಾವು ಗುರುತಿಸುತ್ತೇವೆ. ವರ್ತಮಾನ ಕಾಲಪುರುಷನ ಕೇಂದ್ರಬಿಂದುವೆನಿಸಿದರೆ ಭೂತ ಭವಿಷ್ಯತ್ತುಗಳೇ ಅತನ ದೀರ್ಘ ಬಾಹುಗಳು. ಭವಿಷ್ಯತ್ ಕಾಲ ವರ್ತಮಾನಕ್ಕೆ ಮೂಲಕವೇ ಭೂತಕಾಲಕ್ಕೆ ಜಾರುತ್ತದಾದ್ದರಿಂದ ಮಾನವ ಸದಾ ವರ್ತ ಮಾನಕ್ಕೆ ಸಾಕ್ಷಿಯಾಗಿ ನಿಂತಿದ್ದಾನೆ. ವರ್ತಮಾನವನ್ನು ಪ್ರತ್ಯಕ್ಷದರ್ಶನದಿಂದ ತಿಳಿಯಬಲ್ಲ ಮಾನವ ಭೂತ ಭವಿಷ್ಯಗಳನ್ನರಿಯಲು ಶಬ್ದ (ಟೆಸ್ಟಿಮೊನಿ), ಅನುಮಾನ (ಇನ್‍ಫರೆನ್ಸ್) ಮುಂತಾದ ಪ್ರಮಾಣಗಳನ್ನು ಆಶ್ರಯಿಸುತ್ತಾನೆ.

 ಸೃಷ್ಟಿಯಲ್ಲಿ ಕಾಲದಷ್ಟೇ ಸರ್ವವ್ಯಾಪ್ತಿಯುಳ್ಳ ಮತ್ತೊಂದು ತತ್ತ್ವವೂ ಇದೆ. ಅದೇ ದೇಶ ಇಲ್ಲವೆ ಆಕಾಶ. ವಿಶ್ವದ ಆಗುಹೋಗುಗಳು ಕಾಲದೇಶಗಳ ನಿಯತಿಯ ಚೌಕಟ್ಟಿಗೆ ಒಳಪಟ್ಟೇ ನಡೆಯುತ್ತವೆ. ಕಾಲದೇಶಗಳು ಹಾಸುಹೊಕ್ಕಾಗಿ ಜಗತ್ತಿನ ಸರ್ವವ್ಯಾಪಾರವನ್ನೂ ನಿಯಂತ್ರಿಸುವುದರಿಂದ ಪ್ರಜ್ಞಾಶೀಲವಾದ ಮಾನವ ಇವುಗಳ ಅಸ್ತಿತ್ವ ಮತ್ತು ಹಿರಿಮೆಯನ್ನು ಅಲಕ್ಷಿಸುವುದು ಸಾಧ್ಯವಿಲ್ಲದ ಮಾತು. ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸುವ ವಿಜ್ಞಾನಿ, ಹಾಗೂ ಅದರ ತಾತ್ತ್ವಿಕ ಚಿಂತನೆಯಲ್ಲಿ ತೊಡಗಿರುವ ದಾರ್ಶನಿಕ-ಇವರು ಕಾಲದೇಶಗಳ ಮೂಲಸ್ವರೂಪವೇನೆಂಬುದರ ವಿಚಾರದಲ್ಲಿ ಆಳವಾಗಿ ಆಲೋಚಿಸಿದ್ದಾರೆ.

 ಕಾಲದ ಪ್ರಮಾಣ:- ವಿಜ್ಞಾನಿಯ ವಿಶ್ಲೇಷಣೆಯ ಪ್ರಕಾರ ಕಾಲಕ್ಕೆ ಒಂದೇ ಒಂದು ಆಯಾಮವೂ (ಡೈಮೆನ್ಷ್‍ನ್) ದೇಶಕ್ಕೆ ಮೂರು ಆಯಾಮಗಳೂ ಇವೆ. ಅವಿಚ್ಛಿನ್ನ ಅಥವಾ ಸಂತತ ಗಮನ ಒಂದೇ ಕಾಲಕ್ಕಿರುವ ಆಯಾಮ. ದೇಶಕ್ಕೆ ಉದ್ದ, ಅಗಲ ಮತ್ತು ದಪ್ಪ ಇಲ್ಲವೇ ಎತ್ತರ ಎಂಬ ಮೂರು ಆಯಾಮಗಳುಂಟು.

 ನಾವು ನಮ್ಮ ನಿತ್ಯಜೀವನದ ವ್ಯವಹಾರದಲ್ಲಿ ಕ್ಷಣಗಳನ್ನು ಕಾಲದ ಮೂಲಧಾತುಗಳೆಂದು ಪರಿಗಣಿಸುತ್ತೇವೆ. ಕಾಲವು ಸದಾ ನಮ್ಮ ಅನುಭವಗಳೊಡನೆ ಮೈಗೂಡಿ ಬರುವುದರಿಂದ ನಮ್ಮ ಅನುಭವಗಳಿಗಿಂತ ಹೊರತಾದ ಕಾಲದ ಸ್ವರೂಪವೇನಿರಬಹುದೆಂಬುದು ಬಹು ಗಹನವಾದ ಪ್ರಶ್ನೆ. ಈ ಸಮಸ್ಯೆ ಎಷ್ಟು ದೂರದವರೆಗೆ ಹೋಗಬಲ್ಲದೆಂದರೆ ವಸ್ತುಗಳು ಮತ್ತು ಘಟನೆಗಳಿಗೆ ಹೊರತಾಗಿ ತಾನೇ ತಾನಾಗಿ ಕಾಲವೆಂಬುದೊಂದು ಇರಲು ಸಾಧ್ಯವೇ ಎಂಬ ಶಂಕೆ ಮೂಡುವಂತಾಗಿದೆ. ನಮ್ಮ ಅರಿವಿನ ಕ್ಷಣಗಳು ಒಂದಲ್ಲ ಒಂದು ಅನುಭವವನ್ನು ಹೊತ್ತು ಬರುವುದರಿಂದ ಅನುಭವರಹಿತವಾದ ಕಾಲವೆಂಬುದು ಒಂದು ರೀತಿಯಲ್ಲಿ ಶೂನ್ಯವೇ ಸರಿ.

 ಎರಡು ಘಟನೆಗಳ ನಡುವಿನ ಓಟದ ಅಂತರವನ್ನು ಗುರುತಿಸಲು ಕಾಲದ ಪ್ರಜ್ಞೆ ಬೇಕಾಗುವುದಾದರೂ ಈ ಅಂತರದ ಕಾಲ ಮಾತ್ರ ಶೂನ್ಯವಾಗಿರುವುದಿಲ್ಲ. ಅದು ವಿವಿಧ ರೂಪದ ಘಟನೆಗಳನ್ನು ಮೈವೆತ್ತೇ ಬರುತ್ತದೆ. ಮಗುವಿನ ಹುಟ್ಟಿನಿಂದ ಮುಪ್ಪಿನವರೆಗಿನ ಬೆಳೆವಣಿಗೆಯನ್ನು ಕಾಲಮಾಪನದಿಂದ ಗುರುತಿಸುತ್ತೇವೆ ನಿಜ. ಆದರೆ ಆ ವ್ಯಕ್ತಿಯ ಜೀವಿತಕಾಲದ ಪ್ರತಿಕ್ಷಣವೂ ಒಂದಲ್ಲ ಒಂದು ಘಟನೆಯಿಂದ ಜೀವಂತವಾಗಿರುತ್ತದೆ. ಹಾಗಿಲ್ಲವಾದರೆ ಅದರ ಅಸ್ತಿತ್ವವನ್ನೇ ನಾವು ಗುರುತಿಸಲಾರೆವು.

 ಸೃಷ್ಟಿ ಸ್ಥಿತಿ ಲಯಾತ್ಮಕವಾದ ಈ ಕಾಲದ ಲೀಲೆಗೆ ಬೇಕಾದ ರಂಗಭೂಮಿ ದೇಶದಿಂದ ಲಭಿಸುತ್ತದೆ. ಆದರೆ ದೇಶಕ್ಕಿಂತ ಕಾಲ ಹೆಚ್ಚು ಸೂಕ್ಷ್ಮವೂ ಮತ್ತು ವ್ಯಾಪಕವೂ ಆದದ್ದೆಂದರೆ ತಪ್ಪಾಗುವುದಿಲ್ಲ. ನಮ್ಮ ಬೌದ್ಧಿಕ ಕ್ರಿಯೆಗೂ ಕಾಲ ಬೇಕಾಗುತ್ತದೆ. ಆದರೆ ಅದಕ್ಕೆ ದೇಶದ ಅವಲಂಬನೆ ಇರುವುದಿಲ್ಲ.

 ವಾಸ್ತವ ಜಗತ್ತಿನ ವಸ್ತುಸ್ಥಿತಿಯೊಂದಿಗೆ ಹೆಣೆದುಕೊಂಡು ಸ್ಥೂಲರೂಪದಲ್ಲಿ ಕಾಣಬರುವ ಕಾಲ ಸೂಕ್ಷ್ಮಶರೀರಿಯಾಗಿದ್ದು ಕಾರಣಕಾರ್ಯಸ್ವರೂಪದಲ್ಲಿ ಜಗದ್ವ್ಯಾಪಿಯಾಗಿದೆ. ಕಾರ್ಯಕಾರಣ ನಿಯಮದ ವಿಚಾರದಲ್ಲಿ ಆಳವಾಗಿ ಅವಲೋಕಿಸಿದ ಜಾನ್ ಸ್ಟೂ ಅರ್ಟ್ ಮಿಲ್ ಕಾರಣ ಕಾರ್ಯಪೂರ್ವದಲ್ಲಿ (ಆಂಟಿಸಿಡೆಂಟ್) ಕಾರ್ಯಕ್ಕೆ ಹಿನ್ನೆಲೆಯಾಗಿ, ಅದಕ್ಕೆ ಇಂಬುಗೊಟ್ಟಂತಿರುತ್ತದೆ-ಎಂದಿದ್ದಾನೆ. ಅಂದರೆ ಕಾರಣದ ಅನಂತರವೇ ಕಾರ್ಯ. ಈ ಕಾಲದ ಕ್ರಮಗತಿಯನ್ನು ಮೀರುವುದು  ಸೃಷ್ಟಿಯ ಸ್ವರೂಪದಲ್ಲಿಲ್ಲ.

 ಕಾಲದ ನೆಲೆ:- ಕಾಲ ಎಲ್ಲಿಂದ ಮೂಡಿಬರುತ್ತದೆ ಅಥವಾ ಅದರ ಮೇಲೆ ಯಾವುದು ಎಂಬುದಕ್ಕೆ ಮೂರು ರೀತಿಯ ವಿವರಣೆಗಳು ದೊರೆಯುತ್ತವೆ. ಕಾಲ ಸ್ವತಂತ್ರವಾದ ಹಾಗೂ ವಸ್ತುಗಳಿಗಿಂತ ಭಿನ್ನವಾದ ಒಂದು ವಾಸ್ತವಿಕ ತತ್ತ್ವ; ಅದು ಜಗತ್ತಿಗೆ ಆಧಾರಭೂತವಾಗಿ ವಿಶ್ವದ ಅಸ್ತಿತ್ವವನ್ನು ತನ್ನಲ್ಲಿ ಒಳಗೊಂಡು ಇರುವಂಥ ಮೂಲವಸ್ತು ಎಂಬುದು ಐಸಾಕ್ ನ್ಯೂಟನ್ನನ ಸಿದ್ದಾಂತ. ಇದಕ್ಕಿಂತಲೂ ಭಿನ್ನವಾದ ಕಾಲದ ವಿವರಣೆಯೊಂದು ಲೈಬೆನಿಟ್ಸ್ ಮತ್ತು ಐನ್‍ಸ್ಟೈನರಲ್ಲಿ ಕಾಣುತ್ತದೆ. ಕಾಲವೆಂಬುದು ವಸ್ತುಗಳ ಪರಸ್ಪರ ಸಂಬಂಧದಿಂದ ಮಾತ್ರ ಸ್ಫುರಿಸುವ ಪ್ರಜ್ಞೆ. ಏಕೆಂದರೆ ಕೇವಲ ಒಂದೇ ಒಂದು ವಸ್ತುವಿದ್ದು, ಅದರೊಂದಿಗೆ ಹೋಲಿಸಲು ಬೇರೊಂದು ವಸ್ತುವಿಲ್ಲದಿದ್ದಾಗ ಕಾಲದ ಕಲ್ಪನೆಗೆ ಜಾಗವೇ ಇರುವುದಿಲ್ಲ. ಆದ್ದರಿಂದ ಕಾಲವೆಂಬುದು ವಾಸ್ತವಿಕ ಜಗತ್ತಿನ ತುಲನಾತ್ಮಕ ಪ್ರಜ್ಞೆಯಿಂದ ಜನಿಸುವ ಒಂದು ವಿಶ್ವಧರ್ಮ ಎಂಬುದು ಇವರ ನಂಬಿಕೆ. ಈ ಎರಡು ವಾದಗಳ ಜೊತೆಗೆ ಇಮಾನ್ಯುಅಲ್ ಕಾಂಟನಿಂದ ದೊರೆತ ಮತ್ತೊಂದು ವಿವರಣೆಯೂ ಉಂಟು. ಕಾಲ ದೇಶಗಳು ವಸ್ತುಗಳಿಗೆ ಸೇರಿದ ಧರ್ಮಗಳಲ್ಲವೆಂದೂ ಅವು ಮಾನವನ ಪ್ರಜ್ಞೆಗೆ ಇಲ್ಲದೆ ಅರಿವಿಗೆ ಸೇರಿದ ತತ್ತ್ವಗಳೆಂದೂ ಈತ ನಂಬುತ್ತಾನೆ. ದೃಶ್ಯ ಜಗತ್ತಿನಲ್ಲಿ ಕಾಣುವ ಕಾಲದ ಕಲ್ಪನೆ ಆ ಜಗತ್ತನ್ನು ಗುರುತಿಸುವ ಮಾನವನ ಐಂದ್ರಿಕ ಪ್ರಜ್ಞೆಗೆ ಸೇರಿದ್ದು. ಇದು ಮಾನವನ ಐಂದ್ರಿಕ ಪ್ರಜ್ಞೆಯ ವಸ್ತುಗಳಿಗೆ ತೊಡಿಸುವ ಒಂದು ಮುಖವಾಡ. ಕಾಲದೇಶಗಳ ಮುಖವಾಡಗಳಿಲ್ಲದ ವಸ್ತುವಿನ ರೂಪರೇಖೆಗಳೇನೆಂಬ ಅರಿವು ಮಾನವನ ಐಂದ್ರಿಕ ಪ್ರಜ್ಞೆಗೆ ಸಾಧ್ಯವಿಲ್ಲವಾದ್ದರಿಂದ ಕಾಲದೇಶಗಳು ಮಾನವನ ಐಂದ್ರಿಕ ಪ್ರಜ್ಞೆ ಮತ್ತು ತಿಳಿವಿಗೆ ಸೇರಿದಂತಿರುವ ಧರ್ಮಗಳೆಂದೂ ಈ ಧರ್ಮಗಳು ವಸ್ತುತಃ ಬಾಹ್ಯ ಜಗತ್ತಿನಲ್ಲಿಲ್ಲವೆಂಬ ವಿನೂತನವೂ ಕ್ರಾಂತಿಕಾರವೂ ಆದ ಸಿದ್ಧಾಂತವನ್ನು ಕಾಂಟ್ ರೂಪಿಸಿದ್ದಾನೆ.

 ಕಾಲದ ಕೊನೆ ಮೊದಲುಗಳು :- ಕಣ್ಣಿಗೆ ಕಾಣದಿದ್ದರೂ ಬಾಳಿನ ಅಂತರಂಗ ಬಹಿರಂಗಗಳನ್ನೆಲ್ಲ ವ್ಯಾಪಿಸಿರುವ ಈ ಕಾಲ ಸಾಂತವೋ ಅನಂತವೋ ಇದಕ್ಕೆ ಕೊನೆ ಮೊದಲೆಂಬುದೇನಾದರೂ ಉಂಟೇ ಎಂಬುದನ್ನು ಕುರಿತು ಸಾಕಷ್ಟು ಚಿಂತನೆ ನಡೆದಿದೆ. ಇದಕ್ಕೆ ಹೊಂದಿದಂತೆ ಮತ್ತೊಂದು ಸಮಸ್ಯೆಯೂ ಇದೆ. ಅದೇನೆಂದರೆ ಕಾಲ ಅಖಂಡಾತ್ಮಕವಾದದ್ದೋ ಇಲ್ಲವೆ ಖಂಡತ್ವಕ್ಕೊಳಗಾದದ್ದೋ ಎಂಬುದು. ಕಾಲ ಅಖಂಡವಾಗಿದ್ದು, ಅದರಲ್ಲಿ ಅಂಶರೂಪವಾದ ಬಿರುಕುಗಳೇನೂ ಇಲ್ಲವೆಂಬುದಾದರೆ ಆಗ ಅದಕ್ಕೆ ಆದಿ ಅಂತ್ಯಗಳು ಸಾಧ್ಯವಿಲ್ಲವಾಗುತ್ತವೆ. ಕಾಲದಲ್ಲಿ ಮೂಡಿಬರುವ ಆಗುಹೋಗುಗಳು ಬಿಡಿಬಿಡಿಯಾಗಿರಬಲ್ಲವಲ್ಲದೆ ಕಾಲ ಮಾತ್ರ ಏಕಮುಖವಾದ ನಿತ್ಯ ಪ್ರವಾಹವೆನಿಸುತ್ತದೆ. ಈ ಪ್ರವಾಹ ಮೊದಲಾಯಿತೆನ್ನುವುದಾದರೆ ಅದಕ್ಕೆ ಹಿಂದೆ ಮತ್ತೊಂದು ಕಾಲವಿರಬೇಕೆಂಬ ಕೊನೆ ಇಲ್ಲದ ಪ್ರತಿಗಮನಕ್ಕೆಡೆಗೊಡುತ್ತದೆ (ಇನ್‍ಫಿನೆಟ್ ರಿಗ್ರೆಸ್). ಹಾಗೆ ನೋಡಿದರೆ, ಅಖಂಡತ್ವದ ಗರ್ಭದಲ್ಲಿಯೇ ಅನಾದಿತ್ವವೂ ಇರುವುದರಿಂದ ಕಾಲದ ಅಖಂಡತ್ವವನ್ನು ಒಪ್ಪಿದ ಮೇಲೆ ಅದರ ಅನಾದಿತ್ವವನ್ನು ಒಪ್ಪುವುದು ಸುಲಭವಾಗುತ್ತದೆ; ಅಷ್ಟೇ ಏಕೆ, ಆದಿ ಇಲ್ಲದ ಕಾಲ ಅಂತ್ಯವಿಲ್ಲದ್ದೂ ಅಹುದು. ಹೀಗೆ ಕಾಲದ ಅಖಂಡತ್ವದಿಂದ ಕಾಲ ಶಾಶ್ವತವೆನ್ನುವ ಸಿದ್ಧಾಂತಕ್ಕೆ ಬಂದು ನಿಲ್ಲುತ್ತೇವೆ. ಕಾಲ ಸತ್ಯವಾದದ್ದು ಎಂದು ನಂಬುವ ಆದರ್ಶವಾದಿಗಳ ಕ್ರಮವೇ ಬೇರೆ.

 ಕಾಲ ಅನಿತ್ಯವಾದದ್ದೆಂದು ನಂಬಿದ ದಾರ್ಶನಿಕರು ಕಾಲಕ್ಕೆ ಅತೀತವಾದ, ಕಾಲದೇಶಗಳಿಂದ ಮುಕ್ತವಾದ, ನಿತ್ಯಸತ್ಯ ಒಂದರ ಹಿನ್ನೆಲೆಯಲ್ಲಿ ಕಾಲದ ಅನಿತ್ಯತೆ ಮತ್ತು ಸಖಂಡತೆಯನ್ನು ಸ್ಥಾಪಿಸುತ್ತಾರೆ. ಪಾಶ್ಚಾತ್ಯ ದರ್ಶನದಲ್ಲಿ ಪ್ಲೇಟೊ ಈ ಪ್ರಯತ್ನವನ್ನು ವ್ಯವಸ್ಥಿತ ರೀತಿಯಲ್ಲಿ ತನ್ನ ಆದರ್ಶಗಳ ವಾದದಲ್ಲಿ (ಥಿಯೊರಿ ಆಫ್ ಐಡಿಯಾಸ್) ಮಾಡಿದ್ದಾನೆ. ಸ್ಥೂಲಜಗತ್ತಿನ ಎಲ್ಲ ವಸ್ತುಗಳಿಗೂ ಮೂಲರೂಪವಾಗಿ ಸ್ವಯಂಪೂರ್ಣವೂ ಕಾಲಾತೀತವೂ ಆದ ಆದರ್ಶ (ಐಡಿಯಲ್) ರೂಪ ಬಂದಿದೆಯೆಂಬುದು ಪ್ಲೇಟೊನ ಸಿದ್ಧಾಂತ. ಕಾಲದೇಶಗಳಿಗೊಳಪಟ್ಟ ಸ್ಥೂಲಜಗತ್ತು ಕಾಲಾತೀತವಾದ ಆದರ್ಶಗಳ ಪ್ರತಿಬಿಂಬ ಇಲ್ಲವೆ ಅಪೂರ್ಣ ಅನುಕರಣೆಯೆಂದು ಆತ ವಿವರಿಸುತ್ತಾನೆ. ಇದೇ ಕ್ರಮದಲ್ಲಿ ಸ್ಪಿನೋಜನ ಮೂಲಧಾತುವಿನ (ಸಬ್‍ಸ್ಟೆನ್ಸ್) ಕಲ್ಪನೆಯೂ ಕಾಲಾತೀತವಾದ ಸತ್ಯದ ಸಹಾಯದಿಂದ ಕಾಲಕ್ಕಧೀನವಾದ ವಿಶ್ವದ ವಿವರಣೆಗೆ ಮಾಡಿದ ಮತ್ತೊಂದು ಪ್ರಯತ್ನ. ಪ್ಲೇಟೊವಿನ ಆದರ್ಶಗಳಾಗಲಿ ಸ್ಪಿನೋಜನ ಮೂಲಧಾತುವೇ ಆಗಲಿ ಅವು ಕಾಲದಿಂದ ಮುಕ್ತವಾಗಿದ್ದು ಕಾಲಕ್ಕಧೀನವಾದ ವಾಸ್ತವಿಕ ಜಗತ್ತಿಗೆ ಹೇಗೆ ಕಾರಣವಾಗಬಲ್ಲವೆಂಬುದು ಬಿಡಿಸಲಾರದ ಒಗಟಿನಂತಿದೆ.

 ಭಾರತೀಯ ದರ್ಶನದಲ್ಲಿ ಕಾಲದ ಕಲ್ಪನೆ:- ಭಾರತೀಯ ದಾರ್ಶನಿಕರಲ್ಲಿ ಜಗತ್ತನ್ನು ಅನಿತ್ಯವೆಂದು ಗಣಿಸಿದ ಉಪನಿಷತ್‍ಕಾರರು ಬ್ರಹ್ಮನ ನಿತ್ಯತ್ವವನ್ನು ಪೂರ್ಣವಾಗಿ ಮನಗಂಡಿದ್ದರು. ಸೃಷ್ಟಿ ಸ್ಥಿತಿ ಲಯಗಳಿಗಧೀನವಾದ ವಿಶ್ವವ್ಯಾಪಾರ ನಿತ್ಯಸ್ವರೂಪಿಯಾದ ಬ್ರಹ್ಮನನ್ನು ಆಧರಿಸಿ ನಡೆಯುವ ಒಂದು ಲೀಲೆ. ಬ್ರಹ್ಮ ಅಖಂಡ ಮತ್ತು ನಿತ್ಯನೆನಿಸಿದ್ದರಿಂದ ಕಾಲ ಅನಿತ್ಯವೆನಿಸಿತು. ನಿತ್ಯಮುಕ್ತನಾದ ಬ್ರಹ್ಮ ಹೇಗೋ, ಲೀಲೆಗೆಂತಲೋ ಮಾಯೆಗೆಂತಲೋ, ಅಂತೂ ಕಾಲದ ಅನಿತ್ಯತೆಗೆ ಮೈಒಡ್ಡಿದಾಗ ಜೀವಭಾರವನ್ನು ತಳೆಯುತ್ತಾನೆ. ಅವಿನಾಶಿಯಾದ ಆತ್ಮಲ ಕಾಲದ ಪಾಶಕ್ಕೊಳಗಾಗಿರುವ ವರೆಗೂ ಜನನ ಮರಣದ ಭವಚಕ್ರಕ್ಕೆ ಸಿಕ್ಕಿ ಸಾಕ್ಷೀಭೂತನಾಗಿರುತ್ತಾನೆ. ಈ ಭವಬಂಧನವನ್ನು ಗೆದ್ದು ತನ್ನ ಸಹಜತೆಯನ್ನು ಗಳಿಸುವ ಸ್ಥಿತಿಯನ್ನೇ ಮುಕ್ತಿ ಇಲ್ಲವೆ ಬಿಡುಗಡೆ ಎನ್ನುವುದು. ಅಂದರೆ ಕಾಲಕ್ಕಧೀನವಾಗುವುದೇ ಬಂಧನ, ಕಾಲದಿಂದ ಬಿಡುಗಡೆ ಹೊಂದುವುದೇ ಮುಕ್ತಿ.

ಆಸ್ತಿಕ ಧರ್ಮದಲ್ಲಿ ಮಾತ್ರವೇ ಅಲ್ಲದೆ, ಭಾರತೀಯರಲ್ಲಿ ನಾಸ್ತಿಕಧರ್ಮಗಳೆನಿಸಿದ ಬೌದ್ಧ ಮತ್ತು ಜೈನಧರ್ಮಗಳಲ್ಲಿಯೂ ಕಾಲಕ್ಕೆ ಬಹು ಮಹತ್ತ್ವದ ಸ್ಥಾನ ದೊರೆತಿದೆ. ಅದನ್ನು ಕುರಿತು ಆಳವಾದ ಚಿಂತನೆ ಈ ಧರ್ಮಗಳಲ್ಲಿ ಕಾಣಬರುತ್ತದೆ. ಬೌದ್ಧ ಸಿದ್ಧಾಂತಕ್ಕೆ ಅವರ ಕ್ಷಣಿಕವಾದ ಒಂದು ಕೀಲಿಕೈ ಇದ್ದಂತೆ. ಈ ಕ್ಷಣಿಕವಾದವನ್ನು ಒಪ್ಪದಿದ್ದವರು ಬೌದ್ಧಧರ್ಮದ ಇನ್ನುಳಿದ ತತ್ತ್ವಗಳಾದ ಅನಾತ್ಮವಾದ, ನಿರೀಶ್ವರವಾದಗಳನ್ನು ಮನ್ನಿಸುವುದು ದುಸ್ತರವಾಗುತ್ತದೆ. ಕ್ಷಣಕ್ಷಣಗಳ ನಿತ್ಯಪ್ರವಾಹದಿಂದಾಗಿ ಕರ್ಮ ಇಲ್ಲವೇ ಸಂಸ್ಕಾರ ಸಂಘಾತಗೊಂಡು ಹೆಪ್ಪುಗಟ್ಟುತ್ತದೆ. ಹಾಗೆಯೇ ಹಿಂದೆಂದೂ ಇಲ್ಲದ ಆತ್ಮಭಾವ ಮೂಡಿ ಏಕತೆಯ ಭ್ರಾಂತಿಗೆ ಎಡೆಕೊಡುತ್ತದೆ. ಅಂದಿನಿಂದಲೇ ಜೀವಿಯ ತೊಳಲಾಟ ಮೊದಲಾಯಿತು. ಕೊನೆಗೊಮ್ಮೆ ಈ ಭಾವಕರಗಿ ಶೂನ್ಯಗೊಳ್ಳುವುದೂ ಕ್ಷಣಸ್ವರೂಪಿಯಾದ ಕಾಲವಿನ್ಯಾಸಕ್ಕೊಳಪಟ್ಟೇ. ಜೀವಿ ಶೂನ್ಯತೆಯಲ್ಲಿ ನಿರ್ವಾಣಗೊಂಡಮೇಲೂ ಕಾಲಗತಿ ಎಂದಿನಂತೆ ನಡೆದೇ ಇರುತ್ತದೆ. ಅಂದಮೇಲೆ ಕ್ಷಣಸ್ವರೂಪಿಯಾದ ಕಾಲ ಜೀವನಿಗಿಂತಲೂ ಶಾಶ್ವತವಾಗಿ ನಿಲ್ಲುವಂತೆ ಕಾಣುತ್ತದೆ.

 ಜೈನಧರ್ಮದಲ್ಲಿಯೂ ಕಾಲಕ್ಕೆ ಮಹತ್ತರವಾದ ಸ್ಥಾನ ಉಂಟು. ಏಕೆಂದರೆ ಅವರ ಮೂಲದ್ರವ್ಯಗಳಲ್ಲಿ ಒಂದಾದ ಅಜೀವದಲ್ಲಿ ಕಾಲ ಒಂದು ಮೂಲಧಾತು. ಜಡಪ್ರಪಂಚಕ್ಕೆ ಕಾರಣರೂಪವಾದ ಪುದ್ಗಲಪರಿಣಾಮ ಕಾಲಗತಿಗೊಳಪಟ್ಟು ನಡೆಯುತ್ತದೆ. ಇವರ ಕಲ್ಪನೆಯಂತೆ ಕಾಲ ವರ್ತುಲಾಕಾರದಲ್ಲಿ ಚಲಿಸುವಂತಿದ್ದು ಅದರಲ್ಲಿ ಊಧ್ರ್ವಗತಿ ಮತ್ತು ಅಧೋಗತಿಗಳೆಂಬ ಎರಡು ರೀತಿಯ ಚಲನೆಗಳಿವೆ. ಕಾಲದ ಊಧ್ರ್ವಗತಿಯನ್ನು ಉತ್ಸರ್ಪಿಣಿಯಲ್ಲಿಯೂ ನಡೆಯುತ್ತದೆಂದು ತಿಳಿಯುತ್ತಾರೆ. ಮುಕ್ತ ಜೀವರಾದ ತೀರ್ಥಂಕರರು ಈ ಕಾಲವರ್ತುಲದಿಂದ ಮುಕ್ತರಾಗಿ ಅಲೋಕಾಕಾಶದಲ್ಲಿ ರಂಜಿಸುತ್ತಾರೆಂಬ ಜೈನರ ಸಿದ್ಧಾಂತ ಕಾಲಾತೀತ ಸ್ಥಿತಿಯೊಂದರ ಕಲ್ಪನೆಗೆ ಇಂಬುಗೊಡುತ್ತದೆ.

 ಇತಿಹಾಸ ಮತ್ತು ಕಾಲ:- ವಿಜ್ಞಾನಿಗಳು, ದಾರ್ಶನಿಕರು ಮಾತ್ರವೇ ಅಲ್ಲದೆ ಇತಿಹಾಸಜ್ಞರೂ ಕಾಲದ ವಿಚಾರದಲ್ಲಿ ಮನಸ್ಸನ್ನು ಹರಿಯಬಿಟ್ಟಿದ್ದಾರೆ. ಇತಿಹಾಸವೆಲ್ಲವೂ ಗತಕಾಲದ ಮರುನೆನಪು ಎಂಬುದಾದ್ದರಿಂದ ಕಾಲದಿಂದಾಗಿಯೇ ಇತಿಹಾಸ ಸಾಧ್ಯವಾಯಿತು. ಕಾ¯ ಓಡಿದಂತೆಲ್ಲ ಅದರಲ್ಲಿನ ಘಟನೆಗಳು ಮಸುಕಾಗುತ್ತವೆ. ಏಕೆಂದರೆ ಅವು ಕಾಲದ ಪದರದಲ್ಲಿ ಮುಚ್ಚಿಹೋಗುತ್ತವೆ. ಈ ಇತಿಹಾಸದ ಗಮನವೂ ಒಂದು ದಾರ್ಶನಿಕ ನಿಯಮಕ್ಕೊಳಪಟ್ಟಂತೆ ನಡೆಯುತ್ತದೆಂಬುದನ್ನು ಗುರುತಿಸಿದವ ಹೆಗೆಲ್ ಮಹಾಶಯ. ಇವನ ವಾದಾತ್ಮವಿಕಾಸವಾದ (ಡಯಲೆಕ್ಟಿಕಲ್ ಎವಲ್ಯೂಷನ್) ಇತಿಹಾಸಗತಿಯಲ್ಲಿ, ಸಿದ್ಧಾಂತ (ಥೀಸಿಸ್) ಪ್ರತಿಸಿದ್ಧಾಂತ (ಆಂಟಿಥೀಸಿಸ್) ಮತ್ತು ಸಮನ್ವಯ (ಸಿಂಥೆಸಿಸ್) ಎಂಬ ಮೂರು ಹೆಜ್ಜೆಗಳನ್ನು ಗುರುತಿಸುತ್ತದೆ. ಇತಿಹಾಸದ ಚಲನೆಯಲ್ಲಿ ಈ ಧರ್ಮಸದಾ ಕಾಣಬರುವುದರಿಂದ ಇದೇ ಇತಿಹಾಸದ ಅನುಕ್ರಮ. ಈ ಕ್ರಮದಲ್ಲಿಯೇ ಭೂತಕಾಲ ವರ್ತಮಾನವನ್ನೂ ವರ್ತಮಾನ ಭವಿಷ್ಯದ ಗರ್ಭವನ್ನೂ ಹೋಗುತ್ತದೆ. ಇತಿಹಾಸದ ಈ ಕ್ರಮಗತಿ ಕಾಲಕ್ಕೊಂದು ಸೇತುವೆ ಇದ್ದಂತಿದೆ.

ಅಂತೂ ಕಾಲಕ್ಕಧೀನವಾದ ಮಾನವಪ್ರಜ್ಞೆ ಕಾಲದ ಮೂಲವನ್ನೇ ಕುರಿತು ಚಿಂತಿಸಹೊರಟಾಗ ಈ ರೀತಿಯ ವೈವಿಧ್ಯಪೂರ್ಣವಾದ ವಿವರಣೆಗಳನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲದೆ ತ್ರಿಕಾಲಾಬಾಧಿತವಾದ ಈ ಕಾಲದ ವಿರಾಡ್ ರೂಪವನ್ನು ಕಂಡ ಕವಿ, ಸಂತರನೇಕರು ಮೂಕವಿಧಿಸ್ಮಿತರಾಗಿರುವುದೂ ಉಂಟು. ಇದು ಭಾವುಕರಿಂದ ದೊರೆತ ಕಾಲವು ವಿವರಣೆಯೋ ಎಂಬಂತಿದೆ.

 

(ಎ.ಎಲ್.ಎಸ್.)