ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವ್ಯದ ಸುವರ್ಣಯುಗ

ವಿಕಿಸೋರ್ಸ್ದಿಂದ

ಕಾವ್ಯದ ಸುವರ್ಣಯುಗ

ಆಂಗ್ಲ ಸಾಹಿತ್ಯ ಚರಿತ್ರೆಯಲ್ಲಿ 18ನೆಯ ಶತಮಾನದ ಕೊನೆಯಿಂದ 19ನೆಯ ಶತಮಾನದ ಕೊನೆಯವರೆಗೂ ಎಂದರೆ ಸುಮಾರು ನೂರು ನೂರಿಪ್ಪತ್ತು ವರ್ಷಗಳ ಅವಧಿಯನ್ನು ಆಂಗ್ಲ ಸಾಹಿತ್ಯದ ಸುವರ್ಣಯುಗವೆನ್ನುತ್ತಾರೆ. ರಮ್ಯಸಾಹಿತ್ಯದಲ್ಲಿ ಅಮರರಾಗಿರುವ ವಡ್ರ್ಸವರ್ತ್, ಕೋಲ್‍ರಿಜ್, ಬೈರಾನ್, ಷೆಲ್ಲಿ, ಕೀಟ್ಸ್ ಮೊದಲಾದವರ ಕೃತಿಗಳ ವಿಚಾರವನ್ನಿಲ್ಲಿ ಪ್ರಸ್ತಾಪಿಸಲಾಗಿದೆ.

18ನೆಯ ಶತಮಾನದಲ್ಲಿ ರಾಜಕೀಯ ಮತ್ತು ವಿಜ್ಞಾನದ ಬದಲಾವಣೆಗಳ ಪ್ರಭಾವ ಸಾಹಿತ್ಯಪ್ರಪಂಚದ ಮೇಲೂ ಸಾಕಷ್ಟು ಆಯಿತು. ಬೆನ್‍ತಮ್ ಮತ್ತು ಸ್ಟೂಅರ್ಟ್ ಮಿಲ್ ಅವರ ಬರೆವಣಿಗೆಗಳಿಂದ ಜನಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳು ಕಂಡುಬಂದುವು. ಸಾಹಿತ್ಯರಚನೆಯಲ್ಲಿಯೂ ತೀವ್ರವಾದ ಬದಲಾವಣೆಗಳಾದುವು. ಕವಿಗಳು ಹೊಸ ಹುರುಪಿನಿಂದ ಬರೆಯತೊಡಗಿದರು. ಈ ರೀತಿಯ ಬದಲಾವಣೆಗಳು ಒಂದೆರಡು ದಿನಗಳಲ್ಲಿ ಆದುವಲ್ಲ. ಫ್ರಾನ್ಸಿನ ಮಹಾಕ್ರಾಂತಿ ಜನಗಳ ಮನಸ್ಸಿನಲ್ಲಿ ಹೊಸ ಅಭಿಪ್ರಾಯಗಳನ್ನು ಮೂಡಿಸಿತ್ತು. ಜನಗಳ ದೃಷ್ಟಿಕೋನ ಬದಲಾಯಿಸಿತ್ತು. ಕಾವ್ಯವಸ್ತುಗಳು ಜನಜೀವನಕ್ಕೆ ತೀರ ನಿಕಟವರ್ತಿಯಾಗತೊಡಗಿದ್ದುವು. ರಾಜಮಹಾರಾಜರು, ದೇವರುಗಳು, ಸಾಧ್ಯವಾದಷ್ಟು ದೂರ ಸರಿದಿದ್ದರು. ನಗರ ಜೀವನದಿಂದ ಹಳ್ಳಿಗಾಡಿನ ಕಡೆಗೆ ಕವಿಗಳು ತಮ್ಮ ದೃಷ್ಟಿ ಹರಿಸಿದ್ದರು. ಈ ರೀತಿ ಮಾಡಿದುದರಿಂದ ಕಾವ್ಯಪ್ರಪಂಚಕ್ಕೂ ಜನ ಸಾಮಾನ್ಯರಿಗೂ ಸಂಬಂಧ ಕಲ್ಪನೆಯಾಯಿತು. ಸಾಹಿತ್ಯ ಸರ್ವತೋಮುಖವಾಗಿ ಬೆಳೆದು ಜನಜೀವನದ ಪ್ರತಿಬಿಂಬವಾಯಿತು. ಅಂದಿನ ಯುಗವನ್ನು ರಮ್ಯ (ರೊಮ್ಯಾಂಟಿಕ್) ಯುಗವೆಂದೂ ಕರೆಯುತ್ತಾರೆ. ಇದು ಆಂಗ್ಲಸಾಹಿತ್ಯದ ಕಾವ್ಯ ಸೃಷ್ಟಿಯಲ್ಲಿ ನಿಜಕ್ಕೂ ಸುವರ್ಣಯುಗ. ಕಾವ್ಯ ವಸ್ತುವನ್ನೇ ಅಲ್ಲ, ಕಾವ್ಯದ ಭಾಷೆಯನ್ನು ಬದಲಾಯಿಸಿ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಿದ ಕೀರ್ತಿ ರಮ್ಯ ಕವಿಗಳಿಗೆ ಸೇರಿದ್ದು. ಅಭಿಜಾತ (ಕ್ಲಾಸಿಕಲ್) ಪದ್ಧತಿಯಲ್ಲಿದ್ದ ಕಾವ್ಯದ ಕಠಿಣಭಾಷೆ, ಗ್ರೀಕ್ ಪುರಾಣದ ಪ್ರಸ್ತಾಪಗಳು ಇಲ್ಲವಾದುವು. ಆದುದರಿಂದ ಸಾಹಿತ್ಯ ಸುಲಭವೂ ಆಯಿತು. ಪ್ರಿಯವೂ ಆಯಿತು. ಈ ರೀತಿಯಾದ ಸಾಧನೆ ಪ್ರಾರಂಭವಾಗಿದ್ದು 18ನೆಯ ಶತಮಾನದ ಕೊನೆಯ ಭಾಗದ ಕವಿಗಳಿಂದ; ಆದರೆ ಅದರ ಪೂರ್ಣ ಯಶಸ್ಸು ಗಳಿಸಿದವರು 19ನೆಯ ಶತಮಾನದ ಕವಿಗಳು ಇಂಥ ಸಾಹಿತ್ಯ ಇಂಗ್ಲಿಷ್ ಕಾವ್ಯ ಸೃಷ್ಟಿಯಲ್ಲಿ ಹಿಂದೆ ಎಂದೂ ಇರಲಿಲ್ಲ. ಆದುದರಿಂದ ಈ ಸುವರ್ಣಯುಗದ ಕೀರ್ತಿ ಮತ್ತು ನೆನಪು ಸದಾ ಉಳಿದಿದೆ.

18ನೆಯ ಶತಮಾನದ ಕೊನೆಯ ಭಾಗದಲ್ಲಿ ಬಂದ ಥಾಮಸ್ ಕಾಲಿನ್ಸ್, ಗ್ರೇ ಮತ್ತು ರಾಬರ್ಟ್ ಬನ್ರ್ಸ್ ಒಂದು ಗುಂಪಿಗೆ ಸೇರಿದ ಕವಿಗಳು. ಇವರೆಲ್ಲರೂ ಸಾಧಾರಣವಾಗಿ ತಮ್ಮ ಕಾಲದ ಜನಜೀವನದ ಆಸೆ ಆಕಾಂಕ್ಷೆಗಳನ್ನು, ಸುಖದುಃಖಗಳನ್ನು ತಮ್ಮ ಕವನಗಳಲ್ಲಿ ತೋಡಿಕೊಂಡಿದ್ದಾರೆ. ಇವರು ಹಳೆಯ ಸಂಪ್ರದಾಯದ ಕಾವ್ಯವಸ್ತು, ಕಾವ್ಯದ ಭಾಷೆ ಮತ್ತು ಕಾವ್ಯದ ರೀತಿಯನ್ನು ಬದಲಾಯಿಸಿದರು. ಕಾವ್ಯಗಳ ಕಥಾನಾಯಕರಾದ್ದ. ರಾಜ ಮಹಾರಾಜ ಬದಲು ಕುರುಬ ಕಮ್ಮಾರರು ಇವರ ಕಥಾನಾಯಕರಾದರು. ಎ ಮ್ಯಾನ್ ಈಸ್ ಎ ಮ್ಯಾನ್ ಫಾರ್ ಆಲ್ ದಟ್-ಎಂಬ ಗೀತೆಯಲ್ಲಿ ಬನ್ರ್ಸ್ ಈ ವಿಷಯವನ್ನು ಚೆನ್ನಾಗಿ ನಿರೂಪಿಸಿದ್ದಾನೆ. ಮೈ ಲವ್ ಈಸ್ ಲೈಕ್ ಎ ರೆಡ್ ರೆಡ್ ರೋಸ್-ಎಂಬ ಕವನ ಜನಸಾಮಾನ್ಯನೊಬ್ಬ ತನ್ನ ಪ್ರಿಯತಮೆಯನ್ನು ಎಷ್ಟು ಮಮತೆಯಿಂದ ಬಣ್ಣಿಸಬಹುದು ಎಂಬುದನ್ನು ತೋರಿಸುತ್ತದೆ. ಥಾಮಸ್ ಗ್ರೇ ಬರೆದಿರುವ ಎಲಿಜಿ ಇಂಗ್ಲಿಷ್ ಭಾಷೆ ತಿಳಿದಿರುವ ಪ್ರತಿಯೊಬ್ಬರಿಗೂ ಪರಿಚಿತವಾದ ಕವನ, ಹಳ್ಳಿಯೊಂದರ ಶ್ಮಶಾನವನ್ನು ನೋಡುತ್ತ ಓಕ್ ಮರಕ್ಕೆ ಒರಗಿ ನಿಂತಾಗ ಕವಿಗೆ ಆ ಹಳ್ಳಿಯ ಪೂರ್ವಿಕರ ಜೀವನದ ಕಷ್ಟಸುಖಗಳು, ಆಸೆನಿರಾಸರೆಗಳು ಮನಃಪಟಲದ ಮೇಲೆ ಮೂಡಿಬರುತ್ತವೆ. ಸಂಜೆಯ ವರ್ಣನೆಯಿಂದ ಪ್ರಾರಂಭವಾಗುವ ಈ ಕವನ ಹಳ್ಳಿಯ ಜನಜೀವನವನ್ನೇ ಚಿತ್ರಿಸುತ್ತ ಹೋಗುತ್ತದೆ. ಶ್ರೀಮಂತರ ಸೊಕ್ಕು ಸಾವಿನಡಿಯಲ್ಲಿ ಅಡಗುತ್ತದೆಯಾದರೂ ಗುಡಿಗೋಪುರಗಳನ್ನು ಕಟ್ಟಿ ಸಾವಿನಲ್ಲಿಯೂ ಮೆರೆಯುವ ಶ್ರೀಮಂತರ ಅಹಂಕಾರವನ್ನು ಕವಿ ಹಳಿಯುತ್ತಾನಲ್ಲದೆ ಬಡವರ ಕಷ್ಟಕ್ಕೆ ಕಣ್ಣೀರಿಡುತ್ತಾನೆ. ಶಕ್ತಿಸಾಮಥ್ರ್ಯ ಇದ್ದರೂ ಅವಕಾಶವಿಲ್ಲದ ಆ ಜನ ಮೂಕ ಮಿಲ್ಟನ್‍ಗಳು ಶಕ್ತಿಹೀನ ಹ್ಯಾಮ್‍ಡನ್‍ಗಳು, ಹೆಸರಿಲ್ಲದ ಕ್ರಾಮವೆಲ್‍ಗಳು ಆಗಿಹೋದರು-ಎಂಬ ಮಾತು ಬರುತ್ತದೆ. ಅನಘ್ರ್ಯ ರತ್ನಗಳು ಸಮುದ್ರದಡಿಯಲ್ಲಿ ಅಡಗಿ ಪ್ರಕಾಶಿಸುವಂತೆ ಕಾಡಿನಲ್ಲಿ ಅರಳಿ ಸುಗಂಧವನ್ನು ಅರಣ್ಯಪಾಲು ಮಾಡಿದ ವನಸುಮಗಳಂತೆ ಹಳ್ಳಿಯ ಜನರಜೀವನ ಬೆಳಕು ಕಾಣಲಿಲ್ಲ ಎಂಬ ಮರುಕ ಕವಿಗುಂಟಾಗಿ ಅದಕ್ಕವನು ಸಮಾಧಾನವನ್ನು ಹೇಳುತ್ತಾನೆ. ನಾವು ಶ್ರೀಮಂತರಾಗಿಲ್ಲದಿರುವುದರಿಂದ ಪಾಪ ಮಾಡುವುದು ಕಡಿಮೆ. ದೇವರು ನಮ್ಮ ಮೇಲೆ ಹೆಚ್ಚು ಕರುಣೆ ಇಡುತ್ತಾನೆ ಎಂಬ ಭಾವನೆಯನ್ನೂ ಮೂಡಿಸುತ್ತಾನೆ. ಥಾಮಸ್ ಗ್ರೇ ಬರೆದಿರುವ ಇತರ ಕವನಗಳು ಇದರಷ್ಟು ಭಾವಮಯವಾಗಿಲ್ಲ. ಅವು ಕವಿಯ ಚತುರತೆಯನ್ನು ಮಾತ್ರ ತೋರುತ್ತವೆ. ಈ ರೀತಿಯಾಗಿ ಇಂಗ್ಲಿಷ್ ಕವಿಗಳ ಕಾವ್ಯಸೃಷ್ಟಿ ಬದಲಾಗತೊಡಗಿತು. ಕಠಿಣಶಬ್ದಗಳ ಬಳಕೆ ಕಡಿಮೆಯಾಯಿತು. ಪುರಾಣ ಕಥೆಗಳ ಪ್ರಸ್ತಾಪ ದೂರವಾಯಿತು. ಕವಿಯ ಭಾವನೆ ಕಾವ್ಯ ವಸ್ತು ಮತ್ತು ಕಾವ್ಯದ ಭಾಷೆ ಜನಜೀವನಕ್ಕೆ ಹತ್ತಿರ ಹತ್ತಿರ ಬರತೊಡಗಿದವು. ಈ ರೀತಿ ಬೆಳೆದು ಬಂದ ಆಂಗ್ಲ ಕಾವ್ಯವೃಕ್ಷ ಕವಲೊಡೆದು ಫಲಭರಿತವಾಗತೊಡಗಿದ್ದು 19ನೆಯ ಶತಮಾನದಲ್ಲಿ. ಅತ್ಯಂತ ಪ್ರತಿಭಾನ್ವಿತ ಕವಿಗಳು ಕಾದಂಬರಿಕಾರರು, ದಾರ್ಶನಿಕರು ಸಾರಸ್ವತ ಪ್ರಪಂಚದಲ್ಲಿ ಬೆಳಗಲಾರಂಭಿಸಿದರು. ಡಾ. ಜಾನ್ಸನ್ನಂಥ ಮಹಾಮಹಿಮರು ಗೋಲ್ಡ್‍ಸ್ಮಿತ್ ಮತ್ತು ಸ್ಕಾಟರಂಥ ಕಾದಂಬರಿಕಾರರು ತಮ್ಮ ಕೃತಿಗಳಿಂದ ಜನಮನವನ್ನು ರಂಜಿಸಿದುದಲ್ಲದೆ ಮಾರ್ಗದರ್ಶಕರೂ ಆದರು. ಕಾವ್ಯದೃಷ್ಟಿಯಿಂದ ಇನ್ನೊಂದು ಗುಂಪು ಬಹಳ ಪ್ರಾಧಾನ್ಯಕ್ಕೆ ಬಂತು. ಕಾವ್ಯರಚನೆಯಲ್ಲಿನ ಸಂಪ್ರದಾಯವನ್ನು ವಿರೋಧಿಸಿ ವಾಸ್ತವಿಕ ಜೀವನದ ನಡೆನುಡಿಗಳನ್ನೇ ಅನುಸರಿಸಬೇಕೆಂದೂ ನಗರಜೀವನದ ಕೃತಕ ಭಾಷೆ ಮತ್ತು ಕೃತಕ ಬಾಳಿನಿಂದ ನೈಸರ್ಗಿಕ ಜೀವನಕ್ಕೆ ಹಿಂತಿರುಗಬೇಕೆಂದೂ ಕ್ರಾಂತಿ ಎಬ್ಬಿಸಿದ ಗುಂಪಿಗೆ ನಾಯಕನಾಗಿದ್ದವ ವಿಲಿಯಂ ವಡ್ರ್ಸ್‍ವರ್ತ್ (1770-1850).

ರಮ್ಯ ಸಾಹಿತ್ಯ ಚಳವಳಿ ಪ್ರಾರಂಭವಾಗಿದ್ದು ವಡ್ರ್ಸ್‍ವರ್ತ್‍ನ ನಾಯಕತ್ವದಲ್ಲಿ. ಸ್ನೇಹಿತ ಕೋಲ್‍ರಿಜ್‍ನ ಬೆಂಬಲ, ಮಾರ್ಗದರ್ಶನ ಎರಡೂ ವಡ್ರ್ಸ್‍ವರ್ತನಿಗೆ ದೊರೆತುವು. ಇವರಿಬ್ಬರ ಸ್ನೇಹ ಮತ್ತು ಕಾವ್ಯಸೃಷ್ಟಿ ಕಾವ್ಯದ ಸುವರ್ಣಯುಗದ ಹೊಂಬಿಸಿಲು. ವಡ್ರ್ಸ್‍ವರ್ತ್ ಕಾವ್ಯಸೃಷ್ಟಿಗಿಂತ ಮುಂಚೆ ಗದ್ಯರೂಪದಲ್ಲಿ ತನ್ನ ಧ್ಯೇಯಗಳನ್ನೆಲ್ಲ ಪ್ರತಿಪಾದಿಸಿದ. ಕಾವ್ಯದ ಭಾಷೆ ಜನರಾಡುವ ಭಾಷೆಯಾಗಿರಬೇಕು. ಕಾವ್ಯವಸ್ತು ನಿತ್ಯಜೀವನದಲ್ಲಿ ಕಾಣುವ ಸತ್ಯವಾಗಿರಬೇಕು. ಕಾವ್ಯಗಳು ಬರೀ ಕಲ್ಪನಾಲೋಕದಲ್ಲಿ ತೇಲುತ್ತ ನಿತ್ಯಸತ್ಯಕ್ಕೆ ದೂರವಾಗಬಾರದು ಎಂಬ ಅನೇಕ ಧ್ಯೇಯಗಳನ್ನು ಆತ ಜನರ ಮುಂದಿಟ್ಟ, ಹೊಸದು ಬಂದರೆ ಅವನ್ನು ಜರಿಯುವುದು. ತಡೆಗಟ್ಟುವುದು ಸಂಪ್ರದಾಯಬದ್ಧರ ಪದ್ಧತಿ. ಇಂಗ್ಲೆಂಡಿನಲ್ಲೂ ಹಾಗೇ ನಡೆಯಿತು. ಅವರ ಸವಾಲನ್ನು ಮೆಟ್ಟಿನಿಂತು, ತನ್ನ ಧ್ಯೇಯ ನಿಯಮಗಳಿಗೆ ಅನುಸಾರವಾಗಿ ವಡ್ರ್ಸ್‍ವರ್ತ್ ಮತ್ತು ಕೋಲ್‍ರಿಜ್ ಇಬ್ಬರೂ ಸೇರಿ 1798ರಲ್ಲಿ ಲಿರಿಕಲ್ ಬ್ಯಾಲಡ್ಸ್ ಎಂಬ ಪದ್ಯಸಂಗ್ರಹವನ್ನು ಪ್ರಕಟಿಸಿದರು. ಆ ಪುಸ್ತಕ ಸಾಹಿತ್ಯ ಪ್ರಪಂಚದಲ್ಲಿ ಬಿರುಗಾಳಿ ಎಬ್ಬಿಸಿತು. ವಡ್ರ್ಸ್‍ವರ್ತ್ ಪ್ರಕೃತಿ ಸಹಜವಾದ ವಸ್ತುಗಳನ್ನು ಕೋಲ್‍ರಿಜ್ ಜನಮನದಲ್ಲಿ ಅಚಲವಾಗಿ ಬೇರೂರಿರುವ ಅಲೌಕಿಕ ವಸ್ತುಗಳನ್ನು ತಮ್ಮ ಕವನಗಳಲ್ಲಿ ಬಳಸಿದ್ದರು. ಇದರಿಂದ ಓದುಗರಿಗೆ ಹೊಸ ರೀತಿಯ ಅನುಭವ ಆಯಿತು. ಅವರ ಕಾವ್ಯದ ಭಾಷೆಯೋ ಎಲ್ಲರೂ ಮನೆಯಲ್ಲಾಡುವ ಸರಳಶಬ್ದಗಳ ಜೋಡಣೆ; ಕಾವ್ಯ ವಸ್ತುಗಳಂತೂ ಸಹಜ, ಮನಮೋಹಕ. ಮೈಕೇಲನಂಥ ಒಬ್ಬ ಸಾಧಾರಣ ಕುರುಬನ ಮನೆಯ ನಡೆನುಡಿ ಆಸೆ-ಆಕಾಂಕ್ಷೆ ತನ್ನ ಪಿತ್ರಾರ್ಜಿತ ಭೂಮಿಯ ಮೇಲೆ ಅವನಿಗಿದ್ದ ಮಮತೆ, ಮಗ ಲ್ಯೂಕನ ಮೇಲಿನ ಮೋಹ

_ಇವು ಯಾವ ಸಿರಿವಂತನ ಭಾವನೆಗಳಿಗೂ ಕಡಿಮೆಯಿರಲಿಲ್ಲ. ಲಂಡನ್ನಿಗೆ ಹೋದ ಮಗ ಮರಳಿ ಬರಲಿಲ್ಲವಲ್ಲ ಎಂಬ ಕೊರಗಿನಲ್ಲಿ, ಕುರಿದೊಡ್ಡಿ ಕಟ್ಟಬೇಕೆಂಬ ಆಸೆಯಿಂದ ಶೇಖರಿಸಿದ್ದ ಕಲ್ಲುಗಳಲ್ಲಿ ಒಂದನ್ನೂ ಎತ್ತಲಾರದಷ್ಟು ಮೈಕೇಲ್ ಶಕ್ತಿ ಹೀನನಾದ. ಅದೇ ದುಃಖದಲ್ಲಿ ಮಣ್ಣಿಗೆ ಮರಳಿದ. ಅವನ ಹೆಂಡತಿ ಇಸಬೆಲ್ ಗಂಡನನ್ನು ಕೆಲವು ವಾರಗಳಲ್ಲಿ ಸೇರಿಕೊಂಡಳು. ಅವರಿದ್ದ ಮನೆ, ಅವರ ಪಿತೃಗಳ ಭೂಮಿಗಳ ಮೇಲೆ ಯಾರೋ ಶ್ರೀಮಂತರ ಮನೆಯ ನೇಗಿಲ ಕುಳ ಉಳುತ್ತಿತ್ತು. ಮೈಕೇಲನಂಥ ಒಬ್ಬ ಸಾಧಾರಣ ಮನುಷ್ಯನ ಜೀವನ ಜನರ ಮನಸ್ಸನ್ನು ಕಲಕಿತು. ಕವನದ ಭಾಷೆಯಂತೂ ಮೈಕೇಲನ ಭಾಷೆಯಷ್ಟೇ ಸರಳವಾಗಿದ್ದುದು ಗಮನಾರ್ಹ. ಜನಸಾಮಾನ್ಯರಿಗೆ ಮೈಕೇಲ್ ಷೇಕ್ಸ್‍ಪಿಯರನ ಹ್ಯಾಮ್ಲೆಟ್, ಕ್ಲಿಯೋಪಾತ್ರ, ಪ್ರಾಸ್ವರೊಗಳಷ್ಟು ದೂರದವನಾಗಿರಲಿಲ್ಲ. ಆತ ಸ್ಪೆನ್ಸ್‍ರ್‍ನ ರೆಡ್ ಕ್ರಾಸ್

_ನೈಟನಷ್ಟು ನಂಬಲಾಗದ ಸುಗುಣ ಸಂಪನ್ನನಲ್ಲ, ಮಿಲ್ಟನನ ಸೇಟನನಷ್ಟು ಮಹಾ ಶಕ್ತನಲ್ಲ. ಮೈಕೇಲ್ ನಮ್ಮವ; ಅಥವಾ ನಮ್ಮ ನೆರೆಯವ, ಇದೇ ರೀತಿ ವಡ್ರ್ಸವರ್ತ್ ಚಿಕ್ಕ ಮಗು ಲೂಸಿಯ ಕತೆ ಹೇಳಿದ್ದಾನೆ. ಮಗನನ್ನು ಕಳೆದುಕೊಂಡ ಮಾರ್ಗರೆಟಳ ದುಃಖವನ್ನು ಬಣ್ಣಿಸಿದ್ದಾನೆ. ಇವರೆಲ್ಲರೂ ಜನಸಾಮಾನ್ಯರೇ. ವಡ್ರ್ಸ್‍ವರ್ತ್ ಬರೀ ಕತೆಗಳನ್ನು ಹೇಳಿ ಜನ ಮೆಚ್ಚಿಸಿದವನಲ್ಲ. ಅತ್ಯಂತ ಗಾಢವಾಗಿ, ಮನಸ್ಸನ್ನು ಪರಮಾರ್ಥದ ಕಡೆಗೆ ಆತ ಎಳೆದಿದ್ದಾನೆ. ಅವನ ಟಿಂಟರ್ನ್ ಅಬೆ ಮತ್ತು ಇಮ್ಮಾಟ್ರ್ಯಾಲಿಟಿಯನ್ನು ಕುರಿತ ಈ ಗುಂಪಿಗೆ ಸೇರಿದುವು. ಲೌಕಿಕ ಆಕರ್ಷಣೆಯಿಂದ ಸರ್ವಸ್ವವನ್ನೂ ದೇಹ ಸುಖಕ್ಕೇ ಮೀಸಲಾಗಿಡುವುದರ ವಿರುದ್ಧ ಟೀಕೆಯನ್ನು ವಡ್ರ್ಸ್‍ವರ್ತ್ ತನ್ನ ವಲ್ರ್ಡ್ ಈಸ್ ಟೂ ಮಚ್ ವಿತ್ ಅಸ್ ಎಂಬ ಸಾನೆಟ್‍ನಲ್ಲಿ ಒದಗಿಸಿದ್ದಾನೆ. ಒಬ್ಬ ವ್ಯಕ್ತಿ ತನ್ನ ಸ್ವಾತಂತ್ರ್ಯಕ್ಕೆ ಮತ್ತು ಉದ್ಯೋಗ ಗೌರವಕ್ಕೆ ಎಷ್ಟರಮಟ್ಟಿಗೆ ಬೆಲೆ ಕೊಡಬಹುದು ಎಂಬುದನ್ನು ಒಬ್ಬ ಜಿಗಣೆ ಹಿಡಿಯುವ ಮುದುಕನಿಂದ ಹೇಳಿಸಿದ್ದಾನೆ. ವಡ್ರ್ಸ್‍ವರ್ತ್‍ನ ಗದ್ಯಲೇಖನಗಳು ಬಹಳ ವಿಚಾರಪ್ರಚೋದಕವಾಗಿವೆ. ಕವಿ ಏನಾದರೂ ಬೋಧಿಸಬೇಕು, ಸಾಹಿತ್ಯ ಕೆಲವು ಭಾಗದಲ್ಲಿಯಾದರೂ ನೀತಿಬೋಧಕವಾಗಿರಬೇಕು

_ಎಂಬುದು ವಡ್ರ್ಸ್‍ವರ್ತ್‍ನ ನಂಬಿಕೆ. ಪ್ರಕೃತಿದೇವಿಯ ಹಿರಿಯ ಭಕ್ತನಾದ ಕವಿ ತನ್ನ ನೆಚ್ಚಿನ ಲೇಕ್ ಜಿಲ್ಲೆಯಲ್ಲಿ ರೈಲುಮಾರ್ಗವನ್ನು ಹಾಕುವುದರ ವಿರುದ್ಧ ಭಾರಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನೇ ನಡೆಸಿದ. ಪ್ರಕೃತಿಯ ನಿಕಟಸಂಬಂಧದಿಂದ ಮಾನವನ ಜೀವನ ಸುಗಮವೂ ಶ್ರೀಮಂತವೂ ಆಗುತ್ತದೆ ಎಂಬುದೇ ಈತನ ನಂಬಿಕೆ. ಪ್ರಕೃತಿಯೇ ಇವನ ಸ್ನೇಹಿತ, ಉಪದೇಶಕ ಮತ್ತು ದಾರಿತೋರುಗ

_ಎಲ್ಲ, ಬಹುಮುಖ ಪ್ರತಿಭೆಯ ಈ ಕವಿಗೆ ಅಂದಿನ ಬ್ರಿಟಿಷ್ ಸರ್ಕಾರ ಕವಿಸಾರ್ವಭೌಮನೆಂಬ ಬಿರುದು ಕೊಟ್ಟು ವರ್ಷಾಶನವಿತ್ತು ಗೌರವಿಸಿತು.

 ಇಂಗ್ಲಿಷ್ ಸಾಹಿತ್ಯದ, ಪದ್ಯಕಾವ್ಯಸಂಪತ್ತಿನ ದೃಪ್ಟಿಯಿಂದ ನೋಡಿದರೆ ವಡ್ರ್ಸ್‍ವರ್ತ್ ಮಹೋನ್ನತ ಕವಿ. ಅನೇಕ ಹೆಸರಾಂತ ವಿಮರ್ಶಕರು ಈತನನ್ನು ಅತ್ಯಂತ ದೊಡ್ಡ ಕವಿಯೆಂದು ಕೊಂಡಾಡಿದ್ದಾರೆ.

 ಕೋಲ್‍ರಿಜ್ ಕವಿ (1772

_1834) ವಡ್ರ್ಸ್‍ವರ್ತನ ಪ್ರತಿಭೆಯ ಇನ್ನೊಂದು ಮುಖವನ್ನು ಪ್ರತಿಬಿಂಬಿಸುತ್ತಾನೆ. ಕಲ್ಪನಾಶಕ್ತಿಯಲ್ಲಿ ಈತ ವಡ್ರ್ಸ್‍ವರ್ತನಿಗಿಂತ ಮಿಗಿಲಾದವ. ಅತಿಮಾನುಷ ವಿಷಯವನ್ನೇ ಮೂಲವಾಗಿಟ್ಟುಕೊಂಡು ಅತ್ಯಂತ ಸುಂದರವಾದ ಕವಿತೆಗಳನ್ನು ಈತ ಬರೆದಿದ್ದಾನೆ. ಕ್ರಿಸ್ಟಬೆಲ್ ಕವನದಲ್ಲಿ ಬರುವ ಜೆರಾಲ್ಡೀನ್ ಮೋಹಿನಿ ಮನುಷ್ಯರಷ್ಟೇ ಸಹಜ ಸ್ವಭಾವದವಳಂತೆ ನಟಿಸುತ್ತಾಳೆ. ದಿ ಏನ್ಷಂಟ್ ಮ್ಯಾರಿನರ್ ಎಂಬ ಸಾಕಷ್ಟು ದೂಡ್ಡ ಕವನದಲ್ಲಿ ಕವಿ ಪ್ರೇತಪ್ರಪಂಚದ ಅದ್ಭುತ ಶಕ್ತಿಗಳನ್ನು ಬಳಸಿ ನಿಜವೆಂಬುವಷ್ಟರ ಮಟ್ಟಿಗೆ ಕವನದ ಕಥೆ ಬೆಳೆಸಿದ್ದಾನೆ. ನಾವಿಕ ಕಥೆ ಹೇಳುತ್ತಿದ್ದರೆ ಆತ ನಾವಿಕನೊ ಅಥವಾ ಅವನ ಪ್ರೇತವೋ ಎಂಬ ಅನುಮಾನ ಬರುವುದು ಕವನದ ಕೊನೆಯಲ್ಲಿ. ಈ ಎರಡು ಕವನಗಳಲ್ಲಿಯೂ ನೀತಿಬೋಧೆಯಿದೆ. ಜನಪ್ರೀತಿಯೇ ದೇವರ ಕೃಪೆ ಎಂಬ ಅಭಿಪ್ರಾಯ ಮನದಲ್ಲಿ ಮೂಡುತ್ತದೆ. ಕುಬ್ಲಖಾನ್ ಕವಿತೆ ಕ್ರಿಸ್ಟಬೆಲ್‍ನಂತೆ ಅಪೂರ್ಣ. ಚೀನಾದೇಶದ ಖಾನ ಅರಮನೆ ಕಟ್ಟಿಸುತ್ತಿರುವ ವರ್ಣನೆ, ಅದರಲ್ಲಿ ಬರುವ ನೀರು ಸೂಸುತ್ತಿರುವ ಸಮುದ್ರದ ಅಲೆಗಳು, ನೀಲಿಯ ಆಕಾಶ ಮತ್ತು ಇತರ ಹಿನ್ನೆಲೆಗಳು ಕಲ್ಪನೆಯ ಕಟ್ಟಡಕ್ಕೆ ಮೆರಗು ಕೊಡುತ್ತವೆ. ಫ್ರಾಸ್ಟ್ ಎಟ್ ಮಿಡ್‍ನೈಟ್ ಕವಿತೆಯಲ್ಲಿ ತನ್ನ ಮಗುವನ್ನು ತೂಗಿ ಮಲಗಿಸುವಾಗ ಮಗುವಿನ ಮುಖದಲ್ಲಿ ಮಿನುಗುವ ನಗು, ಮಂದ ಹಾಸಗಳು ತುಂಬ ಸುಂದರವಾಗಿ ಚಿತ್ರಿತವಾಗಿವೆ. ಕವಿ ವಿಮರ್ಶಾಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾನೆ, ಬಯೊಗ್ರಾಫಿಯ ಲಿಟರೇರಿಯ ವಿಮರ್ಶಾ ಗ್ರಂಥಗಳಲ್ಲಿ ಅಮೂಲ್ಯವಾದುದು. ಅಲ್ಲದೆ ಕೋಲ್‍ರಿಜ್ ಷೇಕ್ಸ್‍ಪಿಯರ್‍ನ ಅನೇಕ ಪಾತ್ರಗಳ ಮೇಲೆ ಪಾಂಡಿತ್ಯಪೂರ್ಣ ವಿಮರ್ಶೆ ಬರೆದಿದ್ದಾನೆ. ಸಂಸಾರಜೀವನದಲ್ಲಿ ಸುಖವಿಲ್ಲದಿದ್ದರೂ ಸ್ನೇಹಿತರೂಂದಿಗೆ ಸಂತೋಷವಾಗಿದ್ದ ಕವಿಗೆ ಅಫೀಮು ಸೇವನೆಯ ಚಟವಿತ್ತು. ಅದರ ಸೇವನೆ ಅತಿಯಾಗಿ 1834ರಲ್ಲಿ ಈತ ಮರಣಹೊಂದಿದ.

 ರಮ್ಯಕಾವ್ಯದ ಕ್ರಾಂತಿಯ ಹಿರಿಯ ನಾಯಕರಲ್ಲೊಬ್ಬನಾದ ಕೋಲ್‍ರಿಜ್ಜನ ಹೆಜ್ಜೆಯಲ್ಲಿ ನಡೆದು ಬಂದವರಲ್ಲಿ ಬೈರನ್ ಕವಿ ಮುಖ್ಯನಾದವ.

 ಹುಟ್ಟಿನಿಂದಲೇ ಶ್ರೀಮಂತನಾದ ಬೈರನ್ (1788-1824) ಸ್ವಾತಂತ್ರ್ಯ, ಪ್ರೇಮಗಳಿಗೆ ಹೆಸರಾದವ. ತನ್ನ ರಾಷ್ಟ್ರ ಸ್ವತಂತ್ರವಾಗಿದ್ದರೆ ಸಾಲದು, ಪ್ರಪಂಚದ ಎಲ್ಲ ರಾಷ್ಟ್ರಗಳೂ ಸ್ವತಂತ್ರವಾಗಿರಬೇಕೆಂಬ ಬಯಕೆ ಈತನದು. ಇಂಗ್ಲೆಂಡಿನ ಸರ್ಕಾರ ಇಂಥ ಕ್ರಾಂತಿಕಾರರಿಗೆ ಪ್ರೋತ್ಸಾಹ ಕೊಡುತ್ತಿರಲಿಲ್ಲ. ಅನೇಕ ವೇಳೆ ಬೈರನ್‍ಯೂರೋಪು ಖಂಡದ ಅನೇಕ ರಾಷ್ಟ್ರಗಳಲ್ಲಿ ಸಂಚರಿಸುತ್ತಿದ್ದ. ದೇಶಪ್ರೇಮಿಗಳ ಕತೆಗಳು ಇವನಿಗೆ ಪ್ರಿಯ. ಇವನ ಪ್ರಸಿದ್ಧ ಕವನಗಳಾದ ಡಾನ್‍ವಾನ್ ಮತ್ತು ಚೈಲ್ಡ್ ಹೆರಾಲ್ಡ್ ಕವಿಯ ಸಂಚಾರಗಳನ್ನೂ ಆ ಮೂಲಕ ಸ್ವಾತಂತ್ರ್ಯದ ಕತೆಯನ್ನೂ ಸಾರುತ್ತವೆ. ಡಾನ್‍ವಾನಿನಲ್ಲಿ ಬರುವ ಅನೇಕ ಹಾಡುಗಳಲ್ಲಿ ಖ್ಯಾತವಾದುದು ಐಲ್ಸ್ ಆಫ್ ಗ್ರೀಸ್ ಎಂಬುದು. ಪರ್ಷಿಯ ದೇಶದವರಿಗೆ ಸೋತಿದ್ದ ಗ್ರೀಕರನ್ನು ತನ್ನ ಈ ಪದ್ಯದಿಂದ ಹುರಿದುಂಬಿಸಿದ ಕೀರ್ತಿ ಬೈರನ್ನಿಗೆ ಸೇರಿದ್ದು. ತನ್ನ ಕವಿತೆಗಳಲ್ಲಿ ಕೆಲವು ಕಡೆ ವ್ಯಂಗ್ಯವನ್ನು ತೋರಿಸಿರುವುರಿಂದ ಅವು ಚುರುಕು ಮುಟ್ಟಿಸುವಂತಿವೆ. ಪ್ರಿಸನರ್ ಆಫ್ ಷಿಲಾನ್ ಕವಿತೆಯಲ್ಲಿ ಇಟಲಿಯ ದೇಶಪ್ರೇಮಿಯೊಬ್ಬನ ಕತೆಯನ್ನು ಕವಿ ತುಂಬ ಹೃದಯಸ್ವರ್ಶಿಯಾಗಿ ಹೇಳಿದ್ದಾನೆ. ತನ್ನ ಇಡೀ ಕುಟುಂಬವನ್ನೇ ದೇಶಸೇವೆಗೆ ಬಲಿಕೂಟ್ಟ ಬೋನಿವಾರ್ಡ್ ತನ್ನ ಚಿಕ್ಕ ತಮ್ಮನ ಮರಣ ಕಾಲದಲ್ಲಿ ಹೇಳಿದ ಅತ್ಯಂತ ಮಾರ್ಮಿಕವಾದ ಮಾತುಗಳಿವು: ಐ ನೂ ನಾಟ್ ವೈ ಐ ಕುಡ್ ನಾಟ್ ಡೈ. ಈ ಕವಿತೆ ಅತ್ಯಂತ ಜನಪ್ರಿಯವಾಗಿದೆ. ಬೈರನ್ ತನ್ನ ಕವಿತೆಗಳಲ್ಲಿ ಹೇಳಿಕೊಂಡಿರುವ ಪ್ರಿಯವಸ್ತುಗಳಲ್ಲಿ ಸ್ವಾತಂತ್ರ್ಯ ಪ್ರೇಮವೇ ಮಾದಲನೆಯದು ಮತ್ತು ಕಡೆಯದು.

 ಇದೇ ಕಾಲದ ಸುಪ್ರಸಿದ್ಧ ಕವಿಗಳಲ್ಲಿ ಜಾನ್ ಕೀಟ್ಸ್ (1795-1821) ಮುಖ್ಯನಾದವ. ಈತ ಬದುಕಿದ್ದ ಕೆಲವೆ ವರ್ಷಗಳಾದರೂ ಇವನ ಸಾಧನೆ ಅಪೂರ್ವವಾದುದು. ಗ್ರೀಕ್ ಕವಿ ಹೋಮರ್ ಮತ್ತು ಇಂಗ್ಲಿಷ್ ಕವಿ ಸ್ಪೆನ್ಸರ್

_ಇವರು ಕೀಟ್ಸ್‍ನ ಕಾವ್ಯಗಳ ಮೇಲೆ ಅತ್ಯಂತ ಪ್ರಭಾವ ಬೀರಿದವರು. ಕೀಟ್ಸ್‍ನ ದೊಡ್ಡ ಕವಿತೆಗಳಲ್ಲಿ ಹೈಪರಿಯನ್ ಮುಖ್ಯವಾದದ್ದು. ಇದರಲ್ಲಿ ಕವಿ ಸ್ಪೆನ್ಸರನ ಪ್ರಭಾವಕ್ಕೆ ಎಷ್ಟರಮಟ್ಟಿಗೆ ಒಳಗಾಗಿದ್ದಾನೆಂಬುದನ್ನು ಕಾಣಬಹುದು. ಈವ್ ಆಫ್ ಸೇಂಟ್ ಆಗ್ನಸ್ ಇನ್ನೊಂದು ಸುಂದರ ಕವನ. ಈ ದೊಡ್ಡ ಕವನಗಳಿಗಿಂತ ಕೀಟ್ಸ್‍ನ ಕೀರ್ತಿ ಬೆಳಗಿಸಿದುವು ಅವನ ಆರು ಪ್ರಗಾಥಗಳು. ಅವುಗಳಲ್ಲಿ ಓಡ್ ಟು ಎ ನೈಟಿಂಗೇಲ್ ಮತ್ತು ಓಡ್ ಆನ್ ಎ ಗ್ರೀಸಿಯನ್ ಅರ್ನ್ ಪ್ರಸಿದ್ಧವಾದುವು. ಎ ಥಿಂಗ್ ಆಫ್ ಬ್ಯೂಟಿ ಈಸ್ ಎ ಜಾಯ್ ಫಾರ್ ಎವರ್

_ಅಭಿಪ್ರಾಯವನ್ನು ಎಂಡಿಮಿಯಾನ್ ಕವನದಲ್ಲಿ ಸೂಚಿಸಿ ಅನಂತರ ನೈಟಿಂಗೇಲನ್ನು ಕುರಿತ ಕವನದಲ್ಲಾದನ್ನು ಕವಿ ಸವಿಸ್ತಾರವಾಗಿ ಬೆಳೆಸಿದ್ದಾನೆ. ಆ ಹಕ್ಕಿಯ ಮಧುರವಾದ ಹಾಡು ಮೈ ಮರೆಸುತ್ತದೆ. ಅನಾದಿಕಾಲದಿಂದಲೂ ಆ ಹಕ್ಕಿ ಅದೇ ರೀತಿ ಆನಂದದಿಂದ ಹಾಡುತ್ತಿದೆ. ಜನನ ಮರಣಗಳನ್ನದು ಮೀರಿ ನಿಂತಿದೆ, ಆ ಹಕ್ಕಿಯ ಹಾಡು. ಅದೊಂದು ಪಕ್ಷಿ ಹೋದರೂ ಅದೇ ಜಾತಿಯ ಇನ್ನೊಂದು ಪಕ್ಷಿ ಅದೇ ಹಾಡನ್ನು ಹಾಡುತ್ತದೆ. ಸುಂದರವಾದ ಆ ಹಾಡಿಗೆ ಮರಣವೆಲ್ಲಿಯದು? ಈ ರೀತಿಯಾಗಿ ಭಾವಿಸಿದ ಕವಿ ಸೌಂದರ್ಯ ಸಂತೋಷ ಪ್ರಚೋದಕ ಎಂಬ ತೀರ್ಮಾನಕ್ಕೆ ಬರುತ್ತಾನೆ. ಆದರೆ ಅದು ಎಂಥ ಸೌಂದರ್ಯ? ಮನಸ್ಸನ್ನು ಕೆರಳಿಸುವುದಿಲ್ಲ. ಮನಸ್ಸನ್ನು ಭೌತಿಕ ಪ್ರಪಂಚದಿಂದ ದೂರ ಮಾಡಿ ನಿರ್ಲಿಪ್ತತೆಯ ಕಡೆಗೆ ಎಳೆಯುವುದೇ ಸೌಂದರ್ಯದ ಲಕ್ಷಣ. ಅದು ಹಕ್ಕಿಯ ಹಾಡಾಗಬಹುದು; ಸಂಗೀತವಾಗಬಹುದು; ಶಿಲ್ಪವಾಗಬಹುದು. ಈರೀತಿಯ ಸೌಂದರ್ಯವನ್ನು ಕಾಣುವುದು. ದೇಹಲಕ್ಷಣದಲ್ಲಿಲ್ಲ. ಮನಸ್ಸಿನ ಸುಂದರತೆ ಕಲಾರೂಪದಲ್ಲಿ ಹೊರಹೊಮ್ಮುವುದು. ಕೀಟ್ಸ್‍ನ ಇನ್ನೊಂದು ಗೀತೆ ಓಡ್ ಆನ್ ಎ ಗ್ರೀಸಿಯನ್ ಅರ್ನ್ ಕಲೆಯ ಅಮರತ್ವವನ್ನು ಸಾರುತ್ತದೆ. ಹಸಿರು ಮರದ ಕೆಳಗೆ ಯೌವನದ ಹೊಸಲಿನಲ್ಲಿರುವ ಇಬ್ಬರು ಪ್ರೇಮಿಗಳ ಚಿತ್ರ ಪಾತ್ರೆಯೊಂದರ ಮೇಲೆ ಕೆತ್ತಿದೆ. ಕೊಳಲೂದುತ್ತಿರು ಯುವಕ ತನ್ನ ಪ್ರಿಯತಮೆಯ ತುಟಿಗಳನ್ನು ಚುಂಬಿಸಲು ತೀರ ಹತ್ತಿರದಲ್ಲಿದ್ದಾನೆ. ಚುಂಬಿಸಿಲ್ಲ. ಕವಿ ತನ್ನ ಭಾವನೆಗಳನ್ನು ಹರಿಯಬಿಡುತ್ತಾನೆ. ಅವನ ಕೊಳಲಿನಲ್ಲಿ ಬರುವ ಸಂಗೀತ ಯಾವುದು? ನಿಮ್ಮ ಮನಸ್ಸಿಗೆ ಯಾವುದು ಪ್ರಿಯವೊ ಮಧುರವೊ ನೀವೇ ಕಲ್ಪಿಸಿಕೊಳ್ಳಬಹುದು. ನಾದ ಹರಡುತ್ತದೆ. ಅವನು ನುಡಿಸುತ್ತಲೆ ಇದ್ದಾನೆ. ಮರದ ಹಸಿರಾಗಲಿ ಪ್ರಿಯತಮೆಯ ಅರಳಿದ ತುಟಿಯಾಗಲಿ, ಯುವಕನ ಪ್ರೀತಿ, ಆತುರಗಳಾಗಲಿ ಕಡಿಮೆಯಾಗಿಲ್ಲ, ಹೀಗೆ ಇದೆ

_ಸಾವಿರಾರು ವರ್ಷಗಳಿಂದ. ಮನುಷ್ಯ ಜನನ ಮರಣಕ್ಕೆ ಅಧೀನ. ಆದರೆ ಕಲೆ ಅಮರ, ಸುಂದರ. ಸೌಂದರ್ಯವೆ ಸತ್ಯ, ಸತ್ಯವೆ ಸೌಂದರ್ಯ ಎಂಬುದು ಕವಿಯ ನಂಬಿಕೆ. ಸತ್ಯ, ಸೌಂದರ್ಯ, ಶಿವ ಇವುಗಳನ್ನು ಕಾಣಬೇಕೆಂದರೆ ಆಧ್ಯಾತ್ಮಿಕ ಜ್ಞಾನ ಪರಿಪೂರ್ಣವಾಗಿರಬೇಕು. ಇಂಥ ಭಾವನೆಯನ್ನು ಕೀಟ್ಸ್ ತನ್ನ ಕವಿತೆಯಲ್ಲಿ ಸುಂದರವಾಗಿ ವರ್ಣಿಸಿದ್ದಾನೆ. ಪ್ರೇಮದ ನಿರಾಸೆಯಿಂದ ಒಂದು ಕಡೆ, ಕ್ಷಯರೋಗದಿಂದ ಇನ್ನೊಂದು ಕಡೆ ನರಳಿ ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿಯೇ ಗತಿಸಿದ ಜಾನ್ ಕೀಟ್ಸ್ ಅಲ್ಪಾಯುವಾದರೂ ತನ್ನ ಕೃತಿಗಳಿಂದ ಅಮರನಾಗಿದ್ದಾನೆ.

 ಈ ಗುಂಪಿನ ಕವಿಗಳಲ್ಲಿ ಷೆಲ್ಲಿ (1792-1822) ವಿಶೇಷ ಸ್ಧಾನಗಳಿಸಿದ್ದಾನೆ. ಇವನೊಬ್ಬ ಕ್ರ್ರಾಂತಿ ಪುರುಷ. ಕೇಂಬ್ರಿಜ್ಜಿನಲ್ಲಿ ಈತ ಓದಿದ್ದು ವಿದ್ಯುಚ್ಛಕ್ತಿಯನ್ನು ಕುರಿತು. ಆದರೆ ಈತನ ಒಲವೆಲ್ಲ ಸಾಮಾಜದ ಸ್ಧಿತಿಗತಿಗಳು ಷೆಲ್ಲಿಗೆ ಬೇಸರ ತಂದುವು. ಕ್ರೈಸ್ತಮತದ ನಡವಳಿಗಳನ್ನಂತೂ ತೀವ್ರವಾಗಿ ವಿರೋಧಿಸಿದ್ದರ ಫಲವಾಗಿ ವಿಶ್ವವಿದ್ಯಾನಿಲಯ ಕವಿಯನ್ನು ಹೊರಹಾಕಿತು. ಬೈರನಿನಂತೆ ಇವನಿಗೂ ಸ್ವಾತಂತ್ರ್ಯದ ಹುಚ್ಚು. ವ್ಯಕ್ತಿಸ್ವಾತಂತ್ರಕ್ಕೆ ಬಹು ಹೋರಾಡಿದ ವ್ಯಕ್ತಿ ಷೆಲ್ಲಿ. ಒಂದು ರೀತಿಯಲ್ಲಿ ಅತಿಯಾದುದರಿಂದ ಜನರಿಗದು ಹಿಡಿಸಲಿಲ್ಲ. ಗುರು ಗಾಡ್ವಿನ್ನನ ತತ್ತ್ವಗಳು ಷೆಲ್ಲಿಗೆ ಅತ್ಯಂತ ಪ್ರಿಯವಾದುವು. ವಿಜ್ಞಾನದ ಮುನ್ನಡೆ ಈ ಕವಿಯ ಮೇಲೆ ಹೆಚ್ಚು ಪರಿಣಾಮವುಂಟು ಮಾಡಿತ್ತು. ಈತನ ಬರೆವಣಿಗೆ ವೈವಿಧ್ಯಪೂರ್ಣವಾಗಿದೆ. ಇವನ ಕಾವ್ಯಸಮರ್ಥನೆ (ಡಿಫೆನ್ಸ್ ಆಫ್ ಪೊಯಟ್ರಿ) ಎಂಬ ಗದ್ಯಕೃತಿ ಅದ್ಭುತವಾದ ವಾದಗಳಿಂದ ಕೂಡಿದೆ. ಕಾವ್ಯದ ಮೇರೆ, ವಸ್ತು ಮತ್ತು ಕರ್ತವ್ಯಗಳ ಬಗೆಗೆ ಚೆನ್ನಾಗಿ ವಾದಿಸಿ ಕವಿಗಳನ್ನು `ಜಗತ್ತಿನ ಅನಧಿಕೃತ ಶಾಸನಕರ್ತರು ಎಂದು ಕವಿ ಕರೆದಿದ್ದಾನೆ. ಪ್ರೊಮಿತಿಯಸನನ್ನು ಕುರಿತ ಪದ್ಯನಾಟಕದಲ್ಲಿ, ಗ್ರೀಕ್ ಪುರಾಣದ ಹಿನ್ನೆಲೆಯಲ್ಲಿ, ತಾಳ್ಮೆ ಸ್ಥೈರ್ಯ ಮತ್ತು ಅಚಲವಾದ ನಂಬಿಕೆಗಳಿಗೆ ಎಂದೂ ಸೋಲಿಲ್ಲ ಎಂಬುದನ್ನು ಪ್ರತಿಪಾದಿಸಿದ್ದಾನೆ. ಕ್ಲೌಡ್ ಎಂಬ ಕವನದಲ್ಲಿ ವಿಜ್ಞಾನದ ವಸ್ತುವನ್ನು ಕಾವ್ಯರೂಪಕ್ಕೆ ತಿರುಗಿಸಿ ಮೋಡವನ್ನು ಭೂಮಿ ಮತ್ತು ಸಾಗರಗಳ ಮಗುವಾಗಿಸಿದ್ದಾನೆ. ಪ್ರಕೃತಿ ನಶ್ವರವಲ್ಲ ಎಂಬ ನಂಬಿಕೆಯನ್ನು ಕವನ ರೂಪದಲ್ಲಿ ಸಾರಿದ್ದಾನೆ. ಓಡ್ ಟು ದಿ ವೆಸ್ಟ್ ವಿಂಡ್‍ಷೆಲ್ಲಿಯ ಪ್ರಸಿದ್ಧ ಕವನ. ಹಳೆಯದನ್ನೆಲ್ಲ ಕೊಚ್ಚಿಹಾಕಿ ಹೊಸ ಜೀವನವನ್ನು ಸೃಷ್ಟಿಸುತ್ತದೆ, ಪಶ್ಚಿಮದ ಬಿರುಗಾಳಿ. ಜೀವನದಲ್ಲಿ ತುಂಬ ನೋವನ್ನನುಭವಿಸಿದ ಈ ಕವಿಗೆ ಪಶ್ಚಿಮದ ಗಾಳಿಯಷ್ಟು ಶಕ್ತಿಯಿದ್ದಿದ್ದರೆ ತನ್ನ ಆಸೆಯಂತೆ ಇಡೀ ಪ್ರಪಂಚವನ್ನೇ ಬದಲಾಯಿಸುತ್ತಿದ್ದ. ಸೂಕ್ಷ್ಮಮತಿಗಳಾದವರು ಸಮಾಜದಲ್ಲಿ ಎಷ್ಟು ತೊಂದರೆ ಪಡುತ್ತಾರೆ, ಒಂಟಿಯಾಗುತ್ತಾರೆ ಎಂಬುದು ಸೆನ್ಸಿಟಿವ್ ಪ್ಲ್ಯಾಂಟ್‍ನಲ್ಲಿ ಚೆನ್ನಾಗಿ ಚಿತ್ರಿತವಾಗಿದೆ. ಷೆಲ್ಲಿಯ ಆಸೆಗಳೆಲ್ಲ ಕೈಗೆ ನಿಲುಕದಂಥವು. ಆದುದರಿಂದಲೇ ಮ್ಯಾಥ್ಯೂ ಆರ್ನಲ್ಡ್ ಈತನನ್ನು ಇನ್‍ಎಫೆಕ್ಟ್ಯುಅಲ್ ಏಂಜಲ್ ಎಂದು ಕರೆದಿದ್ದಾನೆ. ಸಾಧಿಸಲಿ, ಬಿಡಲಿ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಆಸೆ ಪಡುವುದರಲ್ಲಿ ತಪ್ಪೇನು? ಇಂಥ ಉದಾತ್ತ ಕವಿ ತನ್ನ 30ನೆಯ ವಯಸ್ಸಿನಲ್ಲಿ, ಇಟಲಿ ದೇಶದ ಸರೋವರ ಒಂದರಲ್ಲಿ ದೋಣಿಯಲ್ಲಿ ವಿಹರಿಸುತ್ತಿದ್ದಾಗ ದೋಣಿ ಮುಳುಗಿ ಸತ್ತ. ಅವನ ಸಾವಿನೊಂದಿಗೆ ಇಂಗ್ಲಿಷ್ ಸಾಹಿತ್ಯದ ಸುವರ್ಣಯುಗವೂ ಅಂತ್ಯವಾಯಿತು.

 ರಮ್ಯಯುಗವೇ ಕಾವ್ಯಸೃಷ್ಟಿಯ ದೃಷ್ಟಿಯಲ್ಲಿ ಸುವರ್ಣಯುಗ. ಆಗಿನ ಕಾಲದ ಕವಿಗಳು ಯೋಚಿಸಿದಷ್ಟು ದೀರ್ಘವಾಗಿ, ಆಳವಾಗಿ, ಬೇರೆ ಯಾರೂ ಚಿಂತನೆ ಮಾಡಿರಲಿಲ್ಲ. ಅವರ ವಿಚಾರಪೂರಿತ ಯೋಜನೆಗಳು

_ಪ್ರಕೃತಿ, ಮನುಷ್ಯ, ಸಮಾಜ

_ಎಲ್ಲವನ್ನು ಒಳಗೊಂಡಿದ್ದುವು. ಆ ಕಾಲದ ಜನರ ಆಸೆ ಆಕಾಂಕ್ಷೆಗಳನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಪ್ರತಿಯೊಬ್ಬ ಕವಿಯೂ ಚಿತ್ರಿಸಿದ್ದಾನೆ. ಅಲ್ಲಿನ ವೈವಿಧ್ಯ, ವಿಚಾರಪೂರ್ಣ ಚಿಂತನೆಗಳು ಸುಲಭ ಭಾಷೆಯಲ್ಲಿ ಮೂಡಿಬಂದಿವೆ.   

 (ಎಂ.ಸಿ.ಎಚ್.)