ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವ್ಯಮೀಮಾಂಸೆ
ಕಾವ್ಯಮೀಮಾಂಸೆ
ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯಪ್ರಭೇದಗಳು, ಕಾವ್ಯಗಳಲ್ಲಿ ಅಲಂಕಾರ, ರೀತಿ, ರಸ, ಧ್ವನಿ ಮೊದಲಾದುವುಗಳ ಸ್ಥಾನ, ಕಾವ್ಯದ ವಸ್ತು ಮತ್ತು ಆತ್ಮಗಳ ಪರಿಶೀಲನ--ಇತ್ಯಾದಿಯಾಗಿ ಕಾವ್ಯವಿದ್ಯೆಗೆ ಸಂಬಂಧಿಸಿದ ವಿಷಯಗಳ ಶಾಸ್ತ್ರೀಯ ನಿರೂಪಣೆಯನ್ನು ಈ ಹೆಸರಿನಿಂದ ಕರೆಯುವುದಿದೆ. ಸಂಸ್ಕøತದಲ್ಲಿ ಕಾವ್ಯಮೀಮಾಂಸೆ ಕ್ರಿಸ್ತಶಕದ ಆರಂಭದ ವೇಳೆಗೆ ಸ್ವತಂತ್ರ ಶಾಸ್ತ್ರವೆನಿಸುತ್ತಿದ್ದುದನ್ನು ರುದ್ರದಾಮನ ಶಿಲಾಲೇಖ, ಪತಂಜಲಿಯ ಮಹಾಭಾಷ್ಯ ಭರತನ ನಾಟ್ಯಶಾಸ್ತ್ರ ಮುಂತಾದವು ಸೂಚಿಸುತ್ತವೆ. ಆದರೆ ಕ್ರಿ.ಶ. 5-6ನೆಯ ಶತಮಾನಗಳ ಹಿಂದಿನ ಕೃತಿಗಳು (ವರರುಚಿ, ರಾಮಶರ್ಮ, ಕಶ್ಯಪ ಇತ್ಯಾದಿ ಶಾಸ್ತ್ರಕಾರರವು) ಉಪಲಬ್ಧವಿಲ್ಲ. ಮೊದಲು ಸಿಕ್ಕುವ ಭಾಮಹನ ಕಾವ್ಯಾಲಂಕಾರ, ದಂಡಿಯ ಕಾವ್ಯದರ್ಶಗಳೇ ಅಲಂಕಾರ, ಗುಣ, ಮಾರ್ಗ, ದೋಷ, ರಸ ಮೊದಲಾದ ಪ್ರಕ್ರಿಯೆಗಳನ್ನು ಪ್ರಸ್ತಾಪಿಸುವುದರ ಜೊತೆಗೆ ಸ್ವನಿರ್ಮಿತ ಹಾಗೂ ಉದಾಹೃತ ಲಕ್ಷ್ಯಗಳನ್ನೂ ಹೇರಳವಾಗಿ ಒದಗಿಸುತ್ತವೆ. ಮುಂದೆ ವಾಮನ (ಸುಮಾರು ಕ್ರಿ.ಶ. 800) ಕಾವ್ಯಾಲಂಕಾರ ಸೂತ್ರವೃತ್ತಿಯನ್ನು ಬರೆದು ಕಾವ್ಯದ ಆತ್ಮವೇನೆಂಬ ತಾತ್ತ್ವಿಕ ಚರ್ಚೆಗೆ ಜನಕನಾದ. ರೀತಿತತ್ತ್ವವನ್ನು ಸಾರಿದ. ಇವನ ಸಮಕಾಲೀನನಾದ ಉದ್ಭಟ ಭಾಮಹನ ವಿಚಾರಗಳಿಗೆ ಹೊಸ ವಿವರಣೆ ನೀಡಿದಂತೆ ನಾಟ್ಯಶಾಸ್ತ್ರದ ರಸಸಿದ್ಧಾಂತಕ್ಕೂ ವಿಶೇಷ ಗಮನವಿತ್ತು ಕಾವ್ಯಾಲಂಕಾರ ಸಂಗ್ರಹವನ್ನು ಬರೆದ. ರುದ್ರಟ (9ನೆಯ ಶತಮಾನ) ಪೂರ್ವ ಕೃತಿಗಳ ಸಾರವನ್ನೆಲ್ಲ ಪರಿಷ್ಕರಿಸಿದ್ದಲ್ಲದೆ ಗುಣಾಲಂಕಾರ, ರೀತಿ ರಸಗಳ ನಿರೂಪಣೆಯಲ್ಲಿ ಭೇದ ಪ್ರಭೇದಗಳನ್ನು ವಿಸ್ತರಿಸಿದ. ಇವರೆಲ್ಲ ಪ್ರಾಚೀನರು. ಕಾವ್ಯದ ನಾಯಕ ನಾಯಿಕೆಯರ ವಿಭೇದಗಳನ್ನು ವಿವರಿಸುವ ಶೃಂಗಾರತಿಲಕವೆಂಬ ರುದ್ರಭಟ್ಟನ ಕೃತಿಯೂ ಕೂಡ ಪ್ರಾಚೀನ ಪರಂಪರೆಗೇ ಸೇರುತ್ತದೆ.
ಈ ಪರಂಪರೆಯ ಸಿದ್ಧಾಂತವನ್ನು ಸ್ಪಷ್ಟಪಡಿಸಲು ಹತ್ತನೆಯ ಶತಮಾನದ ರಾಜಶೇಖರ ತನ್ನ ಕಾವ್ಯಮೀಮಾಂಸೆಯಲ್ಲಿ ಒಂದು ಸುಂದರ ಕಾವ್ಯ ಪುರುಷನ ಕಲ್ಪನೆಯನ್ನು ಪ್ರತಿಮಾ ವಿಧಾನದಿಂದ ನೀಡಿದ್ದಾನೆ. ಸರಸ್ವತಿಯ ಸುಕುಮಾರ ಕಂದನೇ ಕಾವ್ಯಪುರುಷ. ಅವನ ನಲ್ಲೆಯೇ ಸಾಹಿತ್ಯವಿದ್ಯೆ. ಅವರ ಪ್ರಣಯಲೀಲೆಯಲ್ಲಿಯೇ ಸಕಲ ಕಾವ್ಯ ಶೋಭಾಂಗಗಳೂ ಉದಯಿಸಿವೆ. ಶಬ್ದಾರ್ಥಗಳೇ ಅವನ ಶರೀರ, ಅವನ ಚೇತನದಲ್ಲಿ ಮಾಧುರ್ಯ, ಔದಾರ್ಯ, ಪ್ರಸಾದ ಮುಂತಾದ ಗುಣಗಳು ಮನೆಮಾಡಿವೆ. ಮಾತೆಲ್ಲ ಚಮತ್ಕಾರದಿಂದ ತುಂಬಿ ಅಲಂಕಾರವೆನಿಸಿದೆ. ಅವನ ಆತ್ಮವೇ ರಸ. ಛಂದಸ್ಸುಗಳೇ ಅವನ ಕೂದಲು. ಚತುರೋಕ್ತಿಗಳು ಅವನ ವಿನೋದಗಳು. ಅವನನ್ನೊಲಿಸಲು ಸಾಹಿತ್ಯವಿದ್ಯೆಯೆಂಬ ವಧು ಬಳಸುವ ಭಾವಭಂಗಿಗಳೇ ವೃತ್ತಿಗಳು : ಸವಿ ಲಲ್ಲೆಯೇ ರೀತಿ.
ಪ್ರಾಚೀನ ಲಕ್ಷಣಿಕರಿಗೆಲ್ಲ ಮಾನ್ಯವಾಗಿರುವ ಸಾಹಿತ್ಯತತ್ತ್ವವನ್ನು ಹೀಗೆ ಸಂಗ್ರಹಿಬಹುದು ; ಸಾಹಿತ್ಯದ ಜೀವಾಳವೆಂದರೆ ಸೌಂದರ್ಯವೇ. ಕಾವ್ಯಸತ್ಯ ವಾಸ್ತವ ಸತ್ಯವಲ್ಲ, ಕಲ್ಪನಾಸತ್ಯ. ಧರ್ಮನೀತಿಗಳ ಬೋಧನೆ ಸಾಹಿತ್ಯಕ್ಕೆ ಆನುಷಂಗಿಕವೇ ವಿನಾ ಪ್ರಧಾನವಲ್ಲ. ಕವಿಯ ಕರ್ಮದ ವೈಶಿಷ್ಟ್ಯವಿರುವುದು ಅವನ ಪ್ರತಿಭೆಯಲ್ಲಿಯೆ. ಶಬ್ದದ ಶ್ರವ್ಯ ಹಾಗೂ ಅರ್ಥಬೋಧಕ ಅಂಶಗಳಲ್ಲಿ ಸೌಂದರ್ಯವನ್ನು ಸಾಧಿಸುವುದು ಅವನ ಗುರಿ. ಭಾಷೆಯ ಶಬ್ದಾರ್ಥಗಳೇ ಅವನ ಕಲಾಸಾಮಗ್ರಿ. ಈ ಸೌಂದರ್ಯದ ಪ್ರಕಾರಗಳೇ ಗುಣ ಮತ್ತು ಅಲಂಕಾರಗಳು. ಆದ್ದರಿಂದ ಆಡುನುಡಿ, ಶಾಸ್ತ್ರಭಾಷೆ ಇವುಗಳಿಂದ ಕಾವ್ಯವನ್ನು ಪ್ರತ್ಯೇಕಿಸುವ ಶೋಭಾದಾಯಕ ತತ್ತ್ವಗಳೇ ಗುಣಾಲಂಕಾರಗಳೆನ್ನಬಹುದಾಗಿದೆ.
ಭಾಷೆಯ ನುಡಿಗಳಲ್ಲಿಯೇ ಸ್ವರೂಪಸಿದ್ಧವಾದ ಕೆಲವಂಶಗಳು ಇರುತ್ತವೆ. ಲೀಲೆ, ವಿಲಾಸ, ಲಲನಾ ಮುಂತಾದ ಶಬ್ದಗಳು ಅದೇ ಅರ್ಥವನ್ನು ಹೇಳುವ ಕ್ರೀಡೆ, ವಿಭ್ರಮ, ಸ್ತ್ರೀ ಎಂಬ ಶಬ್ದಗಳಿಗಿಂತ ಕೋಮಲ ಹಾಗೂ ಮಧುರವೆನಿಸುತ್ತವೆ. ಸತಿಯ ತುರುಬು, ಎನ್ನುವುದನ್ನು ಕಾಂತಾಕಚಪ್ರಚಯ ಎಂದೋ ಪ್ರಮದಾಕೇಶ ಪಾಶಪ್ರಪಂಚ ಎಂದೋ ಹೇಳಿದಾಗ ಅಲ್ಲಿನ ಓಜೋಗುಣ ಸ್ಪಷ್ಟವಾಗುತ್ತದೆ. ಕವಿಯ ಮಾತು ಸರಳವಾಗಿ ಅರ್ಥವಾಗುತ್ತಿರುವುದೇ ಪ್ರಸಾದಗುಣ. ಕೇಳುವಾಗ ಕಿವಿಯೇ ಗ್ರಹಿಸುವ ಶಬ್ದಗುಣಗಳಿವು. ಇವುಗಳಂತೆ ಕಾವ್ಯಾರ್ಥದಲ್ಲಿಯೂ ಗುಣಗಳುಂಟು. ಕಿರಿದರದಲ್ಲಿ ಪಿರಿದರ್ಥವನ್ನು ಹೇಳುವಶ್ಲೇಷ; ಅದ್ಭುತ ವೃತ್ತಾಂತದಲ್ಲಡಗಿರುವ ಔದಾರ್ಯ ಅಥವಾ ಭವ್ಯತೆ; ಪ್ರಣಯ ನಿರೂಪಣೆಯಲ್ಲಿ ಮೂಡಿಬರುವ ಮಾಧುರ್ಯ ವೀರೋತ್ಸಾಹದ ಮಾತುಗಳಲ್ಲಿ ಕಿಡಿಯಾಡುವ ಕಾಂತಿ--ಇತ್ಯಾದಿ. ಹೀಗೆ ಶಬ್ದಾರ್ಥ ಗುಣಗಳನ್ನು ಅರಿತು ಬಳಸುವ ಶಕ್ತಿ ಕವಿಯ ಮನೋಧರ್ಮದಲ್ಲಿ ಸಹಜವಾಗಿ ಸೇರಿದಾಗ ಮಾತ್ರ ಉತ್ತಮ ಕವಿತೆಯಾಗುತ್ತದೆ ಉದ್ದ ಸಮಾಸಗಳನ್ನು ಯಾವಾಗ ರಚಿಸಬೇಕು, ಯಾವಾಗ ಬಿಡಬೇಕು, ಎಂದು ಮೊದಲಾಗಿ ಅವನ ಶೈಲಿಯನ್ನು ಅಥವಾ ರೀತಿಯನ್ನು ನಿರ್ಣಯಿಸುವ ಸೌಂದರ್ಯಾಂಶಗಳೇ ಗುಣಗಳು. ಸರಳ ನಿರಾಡಂಬರ ಶೈಲಿಗೆ ಮಾರುಹೋದ ಕಾಳಿದಾಸಾದಿಗಳದು ವೈದರ್ಭಿಯೆಂಬ ಒಂದು ರೀತಿ. ಅದೇ ಕೋರೈಸುವ ಆಡಂಬರಕ್ಕೆ ಮನಸೋತ ಬಾಣಾದಿಗಳದು ಗೌಡಿಯೆಂಬ ರೀತಿ. ಹೀಗೆ ಕವಿಶೈಲಿಯನ್ನು ನಿಯಮಿಸುವ ವಿಭಿನ್ನ ಸೌಂದರ್ಯಾಂಶಗಳೇ ಗುಣಗಳು. ಇವಕ್ಕೆ ತಮ್ಮದೇ ಆದ ವಿಷಯವಿರುವುದರಿಂದ ಇವನ್ನು ವ್ಯಾಕರಣಾದಿ ದೋಷಗಳ ಅಭಾವವೆಂದು ಭ್ರಮಿಸಲಾಗದು. ಕವಿಪ್ರತಿಭೆಗೆ ಉಚಿತವಾದ ಸಂಸ್ಕಾರ ಬಲದಿಂದಲೇ ಗುಣಗಳು ಸಂಪನ್ನವಾಗುತ್ತವೆ. ಗುಣಗಳ ಅಸ್ತಿತ್ವದಿಂದಲೇ ಕವಿ ರಚನೆಗೆ ಕಾವ್ಯಸೌಂದರ್ಯ ಸಿದ್ಧಿಸುತ್ತದೆ. ಗುಣಹೀನ ಕವಿತೆ ಎಂದೂ ಸುಂದರ ಕವಿತೆಯೆನಿಸದು.
ಗುಣಕೃತವಾದ ಸೌಂದರ್ಯದ ಜೊತೆಗೆ ಕವಿನಿರ್ಮಿತವಾದ ಇನ್ನೊಂದು ರೀತಿಯ ಸೌಂದರ್ಯವನ್ನೂ ನೋಡುತ್ತೇವೆ. ಅವೇ ಅಲಂಕಾರಗಳು. ಇದ್ದ ಭಾಷಾ ಸಾಮಾಗ್ರಿಯನ್ನು ಔಚಿತ್ಯದಿಂದ ಕಲಾನ್ವಿತವಾಗಿ ಬಳಸುವುದೇ ಗುಣವಾದರೆ, ಒಂದು ಭಾಷೆಯ ಎಲ್ಲ ಕವಿಗಳಿಗೂ ಸಮಾನವಾಗಿ ಅನ್ವಯಿಸುವ ಸೌಂದರ್ಯತತ್ತ್ವ ಗುಣದ್ದಾದರೆ, ಪ್ರತ್ಯೇಕ ಕವಿಯೂ ತನ್ನ ತನ್ನ ವೈಶಿಷ್ಟ್ಯವನ್ನು ಪ್ರದರ್ಶಿಸಲು ಎಡೆಮಾಡುವ ಸೌಂದರ್ಯತತ್ತ್ವ ಅಲಂಕಾರವೆನಿಸುತ್ತದೆ. ವಿಶಿಷ್ಟಶಬ್ದಾರ್ಥಗಳ ಆಯ್ಕೆ ಗುಣಕೃತ ; ಆದರೆ ಅವುಗಳ ಪ್ರತಿಭಾಪೂರ್ಣ ಪ್ರತಿಪಾದನೆಯ ಪ್ರಕಾರಗಳೇ ಅಲಂಕಾರಗಳು. ಗುಣ ಸ್ವಭಾವಸಿದ್ಧ; ಅಲಂಕಾರ ಬುದ್ಧಿ ಲಭ್ಯ, ಕಲ್ಪನಾಗಮ್ಯ. ಒಂದನ್ನು ವರ್ಣಿಸುವಾಗ ಇನ್ನೊಂದರೊಡನೆ ಹೋಲಿಸಬಹುದು. ಅದು ಉಪಮೆ; ಇನ್ನೊಂದೇ ಅದೆಂದು ಆರೋಪಿಸಬಹುದು. ಅದು ರೂಪಕ. ಎಲ್ಲೂ ಇಲ್ಲದ ಮತ್ತೊಂದರ ಹಾಗಿದೆಯೆಂದು ಊಹಿಸಬಹುದು; ಅದು ಉತ್ಪ್ರೇಕ್ಷೆ. ಅಂಥ ಮತ್ತೊಂದರ ಕ್ರಿಯೆಯನ್ನು ಮಾತ್ರ ವರ್ಣಿಸಬಹುದು; ಅದು ಅತಿಶಯೋಕ್ತಿ. ಅಚೇತನದಲ್ಲಿ ಚೇತನಕ್ರಿಯೆಯನ್ನು ಅನ್ವಯಿಸಬಹುದು; ಅದು ಸಮಾಸೋಕ್ತಿ. ಅಪ್ರಕೃತದ ವರ್ಣನೆಯಿಂದಲೇ ಪ್ರಕೃತ ವಸ್ತುವನ್ನು ಸೂಚಿಸಬಹುದು; ಅದು ಅಪ್ರಸ್ತುತ ಪ್ರಶಂಸೆ. ಹೊಗಳುವ ಉದ್ದೇಶವನ್ನು ಮೇಲ್ನೋಟಕ್ಕೆ ಬೈಗುಳವೆನಿಸುವ ಉಕ್ತಿಯಿಂದ ಸಾಧಿಸಬಹುದು; ಅದು ವ್ಯಾಜಸ್ತುತಿ. ಒಂದನ್ನು ಇದೋ ಅದೋ ಮತ್ತೊಂದೋ ಎಂದು ಸಂದೇಹಿಸಬಹುದು; ಆಗದು ಸಂಶಯಲಾಂಕಾರ. ವಿಶೇಷಾಂಶವನ್ನು ಸಮರ್ಥಿಸಲು ಸಾಮಾನ್ಯ ತತ್ತ್ವವನ್ನು ಹೇಳಬಹುದು; ಆಗದು ಅರ್ಥಾಂತರನ್ಯಾಸ. ಕಾರಣವಿಲ್ಲದಿದ್ದರೂ ಕಾರ್ಯ ಸಂಭವಿಸಿತೆಂದಾಗ ಅದು ವಿಭಾವನೆ. ಕಾರಣವಿದ್ದರೂ ಕಾರ್ಯವಿಲ್ಲವೆಂದರೆ ವಿಶೇಷೋಕ್ತಿ. ಪರಸ್ಪರ ವಿರೋಧ ಕಾಣುವಂತೆ ಬಣ್ಣಿಸುವುದು ವಿರೋದಾಭಾಸ. ಹೀಗೆ ಒಂದಲ್ಲ, ಎರಡಲ್ಲ, ಕವಿಯ ಉಕ್ತಿಪ್ರಕಾರಗಳ ಒಂದೊಂದು ಪರಿಯು ಸೌಂದರ್ಯಾಂಶವಿದ್ದಾಗ ಅಲಂಕಾರವೇ ಸರಿ. ಅಲಂಕಾರಶಾಸ್ತ್ರದ ಇತಿಹಾಸವೆಲ್ಲ ಹೊಸಹೊಸ ಅಲಂಕಾರಗಳ ಪರಿಗಣನೆ, ಪ್ರಸಿದ್ಧ ಅಲಂಕಾರಗಳ ವಿಷಯ ಪರಿಷ್ಕಾರ ಇವುಗಳಿಂದಲೇ ತುಂಬಿಕೊಂಡಿವೆ. ಈ ದೃಷ್ಟಿಯಿಂದ ಕಾವ್ಯಸೌಂದರ್ಯ ವಿವೇಚನೆಯೆಂದರೆ ಅಲಂಕಾರಗಳ ಅನುಸಂಧಾನವೇ ಎಂದರೂ ಸಲ್ಲುತ್ತದೆ. ಇವೆಲ್ಲ ಅರ್ಥಾಲಂಕಾರಗಳು. ಶಬ್ದ ಯೋಜನೆಯಲ್ಲಿಯೂ ಬುದ್ಧಿಪೂರ್ವಕ ಹೊಮ್ಮಿದ ಪ್ರಾಸಾದಿಗಳು ಕಂಡಾಗ ಅವನ್ನು ಶಬ್ದಾಲಂಕಾರಗಳೆನ್ನುತ್ತೇವೆ. ಉದಾಹರಣೆಗೆ ವಾಣೀ ವಾಣೀವ ಪರಂ | ವೇಣೀ ವೇಣೀವ ಕೇವಲಂ ತಸ್ಯಾಃ ||
9ನೆಯ ಶತಮಾನದಲ್ಲಿ ಧ್ವನ್ಯಾಲೋಕವೆಂಬ ಪ್ರಸ್ಥಾನ ಗ್ರಂಥವನ್ನು ರಚಿಸಿದ ಆನಂದವರ್ಧನ ಮೇಲಿನ ಗುಣಾಲಂಕಾರರೀತಿ ತತ್ತ್ವಗಳನ್ನು ಮತ್ತಷ್ಟು ಅಭ್ಯಂತರವಾದ ತಾತ್ತ್ವಿಕದೃಷ್ಟಿಯಿಂದ ವಿಮರ್ಶೆಗೆ ಗುರಿಮಾಡಿ ಅವುಗಳ ಗ್ರಾಹ್ಯತೆಗೆ ರಸತತ್ತ್ವದ ಪಾರಮ್ಯ ಮತ್ತು ಧ್ವನಿತತ್ತ್ವದ ಅನುಗ್ರಹ ಅಗತ್ಯವೆಂಬುದನ್ನು ಮನಗಾಣಿಸಿ ಧ್ವನಿಪ್ರತಿಷ್ಠಾಪನಪರಮಾಚರ್ಯನೆನಿಸಿದ. ಈ ಸಿದ್ಧಾಂತವನ್ನು ಅಭಿನವಗುಪ್ತ ತನ್ನ ಉಜ್ವಲ ರಚನೆಗಳಿಂದ ಸ್ವೀಕರಿಸಿದ. ಕಾಶ್ಮೀರಕರ ಈ ಹೊಸ ಸಿದ್ಧಾಂತವನ್ನು ಅಲಂಕಾರಶಾಸ್ತ್ರದಲ್ಲಿ ನವೀನ ಮತವೆನ್ನುತ್ತಾರೆ. ಸಂಸ್ಕøತ ಲಾಕ್ಷಣೀಕರ ತತ್ತ್ವವಿವೇಚನೆಯ ಶಿಖರವೇ ರಸಧ್ವನಿ ಸಿದ್ಧಾಂತ.
ಹಿಂದಿನವರ ಗುಣಾಲಂಕಾರಾದಿಗಳೆಲ್ಲ ಕಾವ್ಯದ ಬಾಹ್ಯಶರೀರವನ್ನು ಮಾತ್ರ ವಿವರಿಸಿಯಾವೆಂಬುದು ಧ್ವನಿವಾದಿಗಳ ನಿರ್ಣಯ. ಅವು ಕೇವಲ ಕಾವ್ಯ ಸಾಮಾಗ್ರಿಗಳ ಪರೀಕ್ಷೆಗೆ ಮೀಸಲಾಗಿವೆ. ಆದರೆ ಸಂಗೀತ, ಚಿತ್ರ, ನಾಟ್ಯಗಳಂತೆ ಕಾವ್ಯವೂ ಒಂದು ಲಲಿತಕಲೆ. ಕಲೆಯ ಆಸ್ವಾದದಿಂದ ಬರುವ ಆನಂದಾನುಭವವೇ ರಸ. ಕವಿಯ ವರ್ಣನಾವಸ್ತುವಿನ ಆಯ್ಕೆ, ಯೋಜನೆ, ಪಾತ್ರಗಳ ರಚನೆ, ಜೀವನಾನುಭವದ ಪ್ರಕಟನೆ--ಇವುಗಳನ್ನೆಲ್ಲ ಒಳಗೊಳ್ಳಲು ಸೂಕ್ಷವಾದ ರಸಸಿದ್ಧಾಂತವೇ ಅಗತ್ಯ. ಆದುದರಿಂದ ರಸವೇ ಕಾವ್ಯದ ಆತ್ಮ. ರಸ ಸಹೃದಯನ ಆನಂದಾನುಭವ ಮಾತ್ರ. ಲೋಕಜೀವನದಲ್ಲಿ ಸುಖದುಃಖಗಳಿಗೆ ಮಾತ್ರ ಅವಕಾಶ, ವೈಯಕ್ತಿಕತೆ ಅನಿವಾರ್ಯವಾಗಿ ಇದ್ದೇ ಇರುವುದರಿಂದ. ಕಲಾಜಗತ್ತಿನಲ್ಲಿ ಈ ವೈಯಕ್ತಿಕತೆ ಅನಿವಾರ್ಯವಾಗಿ ಇದ್ದೇ ಇರುವುದರಿಂದ. ಕಲಾಜಗತ್ತಿನಲ್ಲಿ ಈ ವೈಯಕ್ತಿಕತೆ ತಾತ್ಕಾಲಿಕವಾಗಿ ಮರೆಯಾಗುತ್ತದೆ; ತಟಸ್ಥ ಪ್ರೇಕ್ಷಕನ ಮನೋವೃತ್ತಿ ಮೂಡುತ್ತದೆ; ಆಗ ದುಃಖದರ್ಶನದಿಂದಲೂ ಆಸ್ವಾದ ಪಡೆಯುವ ಲೋಕೋತ್ತರ ಅನುಭವವುಂಟಾಗುತ್ತದೆ. ಕಲೆಯ ಪಾತ್ರಗಳು ಸಾಧಾರಣೀಕರಣದ ಪ್ರಭಾವದಿಂದ ನಮ್ಮ ಕೇವಲ ರಸಸ್ವಾದಕ್ಕೆ ನಿಮಿತ್ತಗಳಾಗುತ್ತವೆ. ಇದು ಅಭಿನವಗುಪ್ತನ ವಿವರಣೆ.
ರಸದ ದೃಷ್ಟಿಯಿಂದ ಕವಿವ್ಯಾಪಾರವೆಲ್ಲ ಮಾನವನ ಚಿತ್ತವೃತ್ತಿಗಳ ಒಂದು ನಿಯೋಜಿತ ಪ್ರದರ್ಶನ ಮಾತ್ರ. ಅವಕ್ಕೆ ಪಾತ್ರಗಳೇ ಆಲಂಬನಗಳು; ಪ್ರಕೃತಿಯೇ ಉದ್ದೀಪಕ. ಎರಡೂ ಕಾರಣ ಅಥವಾ ವಿಭಾವಗಳಾದರೆ ಅವುಗಳ ಕಾರ್ಯಗಳೇ ಅನುಭಾವಗಳು. ಚಿತ್ತವೃತ್ತಿಗಳಲ್ಲಿ ಕೆಲವು ಸ್ಥಾಯಿಯೆನಿಸಬಲ್ಲವು ; ಮಿಕ್ಕವು ಸಂಚಾರಿಗಳು ಮಾತ್ರ. ಇವುಗಳೆಲ್ಲ ಒಂದು ಸುಸಂಬದ್ಧ ರೀತಿಯಲ್ಲಿ ಪರಸ್ಪರ ಕೂಡಿಕೊಂಡು ಪರಿಪುಷ್ಟಿವಡೆದಾಗ ಸಹೃದಯನಿಗೆ ರಸಲ್ಲೋಸ ಒದಗುತ್ತದೆ.
ಕಾವ್ಯಶರೀರದ ಸೌಂದರ್ಯಾಂಗಗಳಾದ ಗುಣಾಲಂಕಾರಗಳಿಗೂ ಕಾವ್ಯಾತ್ಮವೆನಿಸುವ ರಸಾಂಗಗಳಿಗೂ ಸಂಬಂಧವೇನೂ ಎಂಬುದು ತತ್ತ್ವಶಾಸ್ತ್ರದ ಪ್ರಶ್ನೆ. ಇದಕ್ಕೆ ಧ್ವನಿಯೆಂಬ ಸಮರ್ಥಕ ಉತ್ತರ ಹೇಳಿದುದೇ ಆನಂದವರ್ಧನನ ಮೇಲ್ಮೆ. ಸಾಹಿತ್ಯದಲ್ಲಿ ಮೇಲ್ನೋಟದ ಅರ್ಥದ ಜೊತೆಗೇ ರಸಿಕರು ಮೆಚ್ಚಿ ತಲೆದೂಗುವ ಮತ್ತೊಂದು ಸೂಚ್ಯಾಂಶವೂ ಇದೆ. ಹೆಚ್ಚಾಗಿ ಚಿತ್ತವೃತ್ತಿವಿಶೇಷವೇ ಈ ಒಳ ಅರ್ಥ; ಒಮ್ಮೊಮ್ಮೊ ವಸ್ತು ಅಲಂಕಾರಗಳೂ ಸೂಚ್ಯವಾಗಬಹುದು. ಈ ಒಳ ಅರ್ಥ ಅರಸಿಕರ ಅರಿವಿಗೆಬಾರದು ; ರಸಿಕರಿಗೆ ಮಾತ್ರ ತಟ್ಟನೆ ತಿಳಿವಂಥದು. ರಸಾದಿಗಳ ಪ್ರಕಟನೆಗೆ ಕವಿಗಿರುವ ಒಂದೇ ದಾರಿಯೆಂದರೆ ಸೂಚನೆ ಅಥವಾ ಧ್ವನಿ. ಇದು ಆಡುನುಡಿಯಲ್ಲಿ ಅಲ್ಪವಾಗಿ ಉಂಟು; ಶಾಸ್ತ್ರದಲ್ಲಿ ಅನಗತ್ಯ; ಕಾವ್ಯದಲ್ಲಿ ಇದರದೇ ಸಾಮ್ರಾಜ್ಯ, ಸೂಚ್ಯವಾಚ್ಯಕ್ಕಿಂತ ರಮಣೀಯತರವೆಂಬ ಹೊಸ ರಹಸ್ಯ ಈಗ ಎದ್ದು ಕಾಣುತ್ತದೆ. ಅಸಭ್ಯ, ಅಶ್ಲೀಲಾದಿ ದೋಷಗಳೂ ಸೂಚ್ಯವಾದಾಗ ನಿರ್ದುಷ್ಟವೆನಿಸಿ ಗ್ರಾಹ್ಯವಾಗುತ್ತವೆ, ವಸ್ತುಧ್ವನಿಯಿಂದ. ದೀಪಕ, ಸಮಾಸೋಕ್ತಿ ಮುಂತಾದ ಅರ್ಥಾಲಂಕಾರಗಳಲ್ಲಿಯೂ ಉಪಮಾಲಂಕಾರ ಸೂಚ್ಯವಾಗಿರುವುದರಿಂದಲೇ ಸೌಂದರ್ಯಾಂಶ ಹೆಚ್ಚಾಗಿದೆ. ಹೀಗೆ ವಸ್ತು, ಅಲಂಕಾರ, ರಸ--ಇವು ಮೂರೂ ಕಾವ್ಯದಲ್ಲಿ ಧ್ವನಿಯ ಮೂರು ಅಂಶಗಳು.
ಈ ಧ್ವನಿತತ್ತ್ವದ ಪುರಸ್ಕಾರದಿಂದ ನಮಗಿಂದು ಪ್ರಾಯೋಗಿಕ ವಿಮರ್ಶೆಯೆನ್ನುವ ಸಾಹಿತ್ಯಭಾಗಕ್ಕೂ ಬಾಗಿಲು ತೆರೆದಂತಾಗುತ್ತದೆ. ಅಲಂಕಾರಗಳ ಬಳಕೆ, ಗುಣಗಳ ಯೋಜನೆ, ರೀತಿಗಳ ಆಯ್ಕೆ ಎಲ್ಲದರಲ್ಲಿಯೂ ರಸೌಚಿತ್ಯವಿದೆಯೇ ಎಂಬ ಪ್ರಶ್ನೆ ಬೆಲೆಕಟ್ಟಲು ನೆರವಾಗುತ್ತದೆ. ಎಲ್ಲಿ ರಸೌಚಿತ್ಯ ತಪ್ಪಿ ಅನೌಚಿತ್ಯಕ್ಕೆಯೆಡೆಯಾಗಿದ್ದರೂ ಅದು ದೋಷವೆಂದು ನಿರ್ಣಯಿಸಲು ಸಹಕಾರಿಯಾಗುತ್ತದೆ.
ಸಂಸ್ಕøತ ಕಾವ್ಯಮೀಮಾಂಸೆಯಲ್ಲಿ ಆನಂದವರ್ಧನನಾದ ಮೇಲೆ ಬಂದವರಲ್ಲಿ ಮಮ್ಮಟ, ವಿಶ್ವನಾಥ, ಜಗನ್ನಾಥರಂತೆ ಅವನ ತತ್ತ್ವವನ್ನು ಶಿರಸಾ ಮಾನ್ಯಮಾಡುವ ಮಹನೀಯರೇ ಅಧಿಕ, ಭಾಷೆಗೆ ಧ್ವನಿಯೆಂಬ ತೃತೀಯ ವ್ಯಾಪಾರವಿಲ್ಲವೆಂದೂ ಅದು ಭಾವಕತ್ವ ಇಲ್ಲವೆ ಅನುಮಾನ ಇತ್ಯಾದಿಗಳಲ್ಲೇ ಅಡಕವಾಗುವುದೆಂದೂ ಧ್ವನಿ ಧ್ವಂಸಕ್ಕೆ ಹೊರಡುವ ಭಟ್ಟನಾಯಕ, ಮಹಿಮಭಟ್ಟ ಮುಂತಾದ ಧ್ವನಿವಿರೋಧಿಗಳು ಕೂಡ ರಸೌಚಿತ್ಯದ ಪಾರಮ್ಯವನ್ನೂ ರಸವೇ ಕಾವ್ಯದ ಆತ್ಮವೆಂಬ ಮೂಲಸಿದ್ಧಾಂತವನ್ನೂ ಮಾನ್ಯಮಾಡಿದ್ದಾರೆ. ವಿವರಿಸುವ ಪರಿಭಾಷೆ ಬೇರೆಯಾದರೂ ಒಳಗಿನ ತತ್ತ್ವ ಬೇರೆಯಲ್ಲ. ಕುಂತುಕ ವಕ್ರೋಕ್ತಿಯ ಮಹಾವ್ಯಾಪ್ತಿಯಲ್ಲಿ ಧ್ವನಿಯನ್ನು ಅಳವಡಿಸಿದರೂ ಆನಂದವರ್ಧನನ ಅನುಯಾಯಿಯಂತೆಯೇ ಪ್ರಾಯೋಗಿಕ ವಿಮರ್ಶೆಗೆ ಹೆಚ್ಚು ಗಮನವಿತ್ತಿದ್ದಾನೆ.
ಹೀಗೆ ಸಂಸ್ಕøತ ಕಾವ್ಯಮೀಮಾಂಸೆಯಲ್ಲಿ ಸಿದ್ಧಾಂತ ತಾತ್ತ್ವಿಕವಾಗಿರುವಷ್ಟೇ ಪ್ರಯೋಗಾನುಸಂಧಾನ ಮಾರ್ಮಿಕವಾಗಿಯೂ ಇದೆ. ಆದರೆ ವಿಮರ್ಶೆಯೇ ಒಂದು ಸ್ವತಂತ್ರ ಸಾಹಿತ್ಯ ಪ್ರಕಾರವೆಂಬ ಕಲ್ಪನೆ ಹಿಂದಿನವರಲ್ಲಿ ಮೂಡಿಬಾರದ ಕಾರಣ ಅವರು ಸ್ವತಂತ್ರ ಕವಿಕಾವ್ಯವಿಮರ್ಶೆಗಳನ್ನು ರಚಿಸಲಿಲ್ಲ.
(ಕೆ.ಕೆ.)