ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಸೀನಿ, ಜಿಯೊವಾನಿ ಡೊಮಿನಿಕೊ

ವಿಕಿಸೋರ್ಸ್ದಿಂದ

ಕಾಸೀನಿ, ಜಿಯೊವಾನಿ ಡೊಮಿನಿಕೊ

  1625-1712. ಇಟಲಿ ಮತ್ತು ಫ್ರಾನ್ಸುಗಳ ಖ್ಯಾತ ಖಗೋಳಶಾಸ್ತ್ರಜ್ಞ. ಇಟಲಿಯ ಖಗೋಳಶಾಸ್ತ್ರಜ್ಞರ ಮತ್ತು ನಕ್ಷಾನಿರೂಪಣಗಾರರಾದ ಕಾಸೀನಿ ಮನೆತನದವರ ಮೂಲಪುರುಷನೀತ. ಜನಿಸಿದ್ದು ಇಟಲಿಯ ನೀಸ್ ನಗರದ ಬಳಿಯಿರುವ ಪೆರಿನಾಲ್ಡೋವಿನಲ್ಲಿ. ಜೆನವದಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಅನಂತರ ಬೋಲೋನ್ಯಾ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕನಾದ (1650). ಗುರುಗ್ರಹ ಮತ್ತು ಮಂಗಳಗ್ರಹಗಳ ಆವರ್ತನಾವಧಿಗಳನ್ನು ಅನುಕ್ರಮವಾಗಿ 1665 ಮತ್ತು 1660ರಲ್ಲಿ ಲೆಕ್ಕ ಹಾಕಿ ಖ್ಯಾತಿ ಗಳಿಸಿದ. ಪ್ಯಾರಿಸಿನ ವೀಕ್ಷಣಾಲಯದ ನಿರ್ದೇಶಕನಾದುದು 1667ರಲ್ಲಿ. ಗುರುಗ್ರಹದ ಉಪಗ್ರಹಗಳ (ಚಂದ್ರರ) ಚಲನೆಯನ್ನು ಕುರಿತ ಒಂದು ಕೋಷ್ಟಕವನ್ನು ಈತ ರಚಿಸಿದ (1668). ಮುಂದೆ ಈ ಕೋಷ್ಟಕ ಡೇನಿಷ್ ಖಗೋಳಶಾಸ್ತ್ರಜ್ಞನಾದ ರೂಮರನಿಗೆ (1645-1710) ಬೆಳಕಿನ ವೇಗವನ್ನು ನಿರ್ಧರಿಸಲು ಸಹಾಯಕವಾಯಿತು. 1673ರಲ್ಲಿ ಈತನಿಗೆ ಪ್ಯಾರಿಸಿನ ಪೌರತ್ವ ಲಭಿಸಿದುದರಿಂದ ಅಲ್ಲಿಯೇ ನೆಲೆಸಿ ಅಧ್ಯಯನ ಸಂಶೋಧನೆಗಳನ್ನು ಮುಂದುವರಿಸಲು ಸಾಧ್ಯವಾಯಿತು.

 ಶನಿಗ್ರಹದ ಬಗ್ಗೆ ಸಂಶೋಧನೆಯನ್ನು 1671-84ರ ವರೆಗೂ ನಡೆಸಿ ಅದರ ನಾಲ್ಕು ಉಪಗ್ರಹಗಳನ್ನು [ಇಯಾಪೆಟಸ್ (1671), ರ್ಹೀಆ (1672), ಡಯಾನೆ ಮತ್ತು ಟೆಥೀಸ್ (1684)] ಕಂಡುಹಿಡಿದ, ಶನಿಗ್ರಹದ ಉಪಗ್ರಹಗಳ ಬಗ್ಗೆ ಈತನ ಸಂಶೋಧನೆ ಹೈಗನ್ಸನ (1629-1695) ಸಂಶೋಧನೆಯನ್ನು ಮೀರಿಸಿತ್ತು. ಹೈಗನ್ಸನ ಖ್ಯಾತ ಪರಿಶೋಧನೆಯಾದ ಶನಿಗ್ರಹದ ಬಳೆಯ ವಿಚಾರದಲ್ಲಿ ಈತ ಸಂಶೋಧನೆ ಮಾಡಿ ಆ ಬಳೆಯಲ್ಲಿ ನಿಜಕ್ಕೂ ಎರಡು ಬಳೆಗಳಿವೆ ಮತ್ತು ಅವುಗಳ ನಡುವೆ ಒಂದು ಕಪ್ಪು ಪ್ರದೇಶವಿದೆ ಎಂದು ಶೋಧಿಸಿದ. ಆ ಪ್ರದೇಶಕ್ಕೆ ಈಗಲೂ ಕಾಸೀನಿ ಕಪ್ಪು ಪ್ರದೇಶವೆಂದೇ ಹೆಸರಿದೆ. ರಾಶಿಚಕ್ರಬೆಳಕಿನ (eóÉೂೀಡಿಯಾಕಲ್ ಲೈಟ್) ಬಗ್ಗೆ ಮೂಲಭೂತ ಅಧ್ಯಯನ, ಸಂಶೋಧನೆಗಳನ್ನು ಮಾಡಿ ಆ ಬಗ್ಗೆ ಒಂದು ಗ್ರಂಥವನ್ನು (ಐes ಇಟemeಟಿಣs ಜ'ಚಿsಣಡಿoಟಿomie veಡಿiಜಿies) ಹೊರತಂದ (1693). ಮಂಗಳಗ್ರಹದ ದಿಗ್‍ವ್ಯತ್ಯಾಸವನ್ನು ನಿರ್ಧರಿಸುವಲ್ಲಿ ಈತನ ಕೆಲಸ ಪ್ರಶಂಸಾರ್ಹ. ಕಾಸೀನಿ ಆ ಗ್ರಹದ ವೀಕ್ಷಣೆ ಮಾಡುವ ಕಾಲಕ್ಕೆ ಸರಿಯಾಗಿ ಫ್ರೆಂಚ್ ಗಯಾನದಲ್ಲಿ ರೀಪೆ ಎಂಬ ಫ್ರೆಂಚ್ ಖಗೋಳಶಾಸ್ತ್ರಜ್ಞ ಸಹ ಅದೇ ಗ್ರಹವನ್ನು ವೀಕ್ಷಿಸುತ್ತಿದ್ದ. ಇದರಿಂದಾಗಿ ಭೂಮಿಯಿಂದ ಮಂಗಳ ಗ್ರಹದ ದೂರ ನಿರ್ಧರಿಸಲು ಕಾಸೀನಿಗೆ ಅನುಕೂಲವಾಯಿತು. ಕೆಪ್ಲರನ ಕಾಲದಿಂದಲೂ ಭೂಮಿಯಿಂದ ಸೂರ್ಯನ ಮತ್ತು ಇತರ ಗ್ರಹಗಳ ದೂರ ಸಾಕಷ್ಟು ನಿಖರವಾಗಿ ಗೊತ್ತಿದ್ದರೂ ಅದನ್ನು ಇನ್ನಷ್ಟು ಪರಿಷ್ಕರಿಸುವುದು ಅಗತ್ಯವಾಗಿತ್ತು. ತಾನು ಲೆಕ್ಕಹಾಕಿದ ಮಂಗಳಗ್ರಹದ ದೂರದ ಸಹಾಯದಿಂದ ಸೂರ್ಯ ಭೂಮಿಯಿಂದ 140 ಮಿಲಿಯನ್ ಕಿ.ಮೀ.ಗಳ ದೂರದಲ್ಲಿದೆಯೆಂದು ಕಾಸೀನಿ ನಿರ್ಧರಿಸಿದ. ಸೂರ್ಯನ ಸುತ್ತಲ ಗ್ರಹಗಳ ಚಲನೆಯ ಬಗ್ಗೆ ಇರುವ ಕೆಪ್ಲರನ ದೀರ್ಘವೃತ್ತಗಳು ಎಂಬ ಹೆಸರಿಗೆ ಬದಲಾಗಿ ಕೆಲವು ಬೇರೆ ಬೇರೆ ದೀರ್ಘವೃತ್ತಾಕಾರದ ಕಕ್ಷೆಗಳನ್ನು ಈತ ಸೂಚಿಸಿದ. ಇವನ್ನು ಕಾಸೀನಿಯನ್ಸ್ ಎಂದು ಕರೆಯುತ್ತಾರೆ. ಕ್ರಾಂತಿಚಕ್ರದ ಬಾಗುವಿನ ಬಗ್ಗೆಯೂ ಈತ ಅಧ್ಯಯನ ನಡೆಸಿದ. ವೈಜ್ಞಾನಿಕವಾಗಿ ಇಷ್ಟೆಲ್ಲ ಮಹತ್ಸಾಧನೆಗಳನ್ನು ಈತ ಸಿದ್ಧಿಸಿದ್ದರೂ ವೈಯಕ್ತಿಕವಾಗಿ ಬಲು ಛಲವಾದಿಯೂ ಹಿಡಿದ ಪಟ್ಟನ್ನು ಬಿಡದವನೂ ಆಗಿದ್ದ. ಕೋಪರ್ನಿಕಸನ (1473-1540) ಸೂರ್ಯಕೇಂದ್ರವಾದವನ್ನು ಒಪ್ಪದಿದ್ದ ಮಹಾಖಗೋಳ ವಿಜ್ಞಾನಿಗಳಲ್ಲಿ ಈತ ಕೊನೆಯವನೆಂದರೆ ಇವನ ಪುರಾತನ ಸಂಪ್ರದಾಯಶರಣತೆಯ ಅರಿವಾದೀತು.

 ಕಾಸೀನಿ ವಂಶದಲ್ಲಿ ನಾಲ್ಕು ಜನ ಖಗೋಳ ಶಾಸ್ತ್ರಜ್ಞರೂ ಒಬ್ಬ ಸಸ್ಯಶಾಸ್ತ್ರಜ್ಞನೂ ಆಗಿಹೋದರು. ಫ್ರಾನ್ಸ್ ದೇಶದ ಖಗೋಳ ವಿಜ್ಞಾನದಲ್ಲಿ ಈ ವಂಶಸ್ಥರು ಒಂದು ಶತಮಾನದವರೆಗೆ ಸಾರ್ವಭೌಮತ್ವ ಸ್ಥಾಪಿಸಿದ್ದು ಆ ವಿಜ್ಞಾನದ ಬೆಳೆವಣಿಗೆಗೆ ಅಷ್ಟೇನೂ ಪೋಷಕವಾಗಲಿಲ್ಲ.

 ಇತ್ತೀಚೆಗೆ (2004) ಶನಿಗ್ರಹವನ್ನು ಅರಸಿ ಹೊರಟ ಬಾಹ್ಯಾಕಾಶ ನೌಕೆಗೆ ಕ್ಯಾಸಿನಿ ಎಂದೇ ಹೆಸರಿಸಲಾಗಿದೆ.

 

(ಪರಿಷ್ಕರಣೆ: ಡಾ|| ಬಿ. ಎಸ್. ಶೈಲಜಾ)