ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿರಾಣಿ ವ್ಯಾಪಾರಿ

ವಿಕಿಸೋರ್ಸ್ ಇಂದ
Jump to navigation Jump to search

ಕಿರಾಣಿ ವ್ಯಾಪಾರಿ

 ಗೃಹಕೃತ್ಯಕ್ಕೆ ಬೇಕಾದ ಚಿಲ್ಲರೆ ಸಾಮಾನುಗಳನ್ನು, ಮುಖ್ಯವಾಗಿ ಸಂಬಾರ ಜಿನಸಿ, ಒಣಹಣ್ಣುಗಳು, ಸಕ್ಕರೆ ಮುಂತಾದವನ್ನು, ಮಾರಾಟ ಮಾಡುವವ (ಗ್ರೋಸರ್). ಸರಕುಗಳನ್ನು ಒಟ್ಟಿನ ಮೇಲೆ (ಗ್ರೋಸ್) ಕೊಂಡು ಮಾರುವವರನ್ನು ಇಂಗ್ಲಿಷಿನಲ್ಲಿ ಗ್ರೋಸರ್ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಈ ಶಬ್ದದ ಅರ್ಥದಲ್ಲಿ ವ್ಯತ್ಯಾಸವಾಯಿತು. ಒಟ್ಟು ಮತ್ತು ಚಿಲ್ಲರೆ ವ್ಯಾಪಾರ ಮಾಡುವವರನ್ನೆಲ್ಲ ಗ್ರೋಸರ್ ಎಂದು ಕರೆಯುವ ವಾಡಿಕೆಯಿದೆ.

 ಒಟ್ಟು ವ್ಯಾಪಾರಿಗಳು ಕಾರ್ಖಾನೆಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಕೊಂಡುಕೊಳ್ಳುತ್ತಾರೆ. ಅಥವಾ ವ್ಯವಸಾಯೋತ್ಪನ್ನವಾದರೆ ಅದರ ಉತ್ಪತ್ತಿ ಸ್ಥಾನದಿಂದ ಅವನ್ನು ಸಣ್ಣ ಗುಡ್ಡೆಯಾಗಿ ಕೊಂಡು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಇದರ ಕಾರ್ಯ.

 ಸಾಮಾನ್ಯ ಗ್ರಾಹಕರಿಗೆ ಚಿಲ್ಲರೆ ವ್ಯಾಪಾರಿಗಳು ಅತಿಮುಖ್ಯ. ಇವರು ಎಲ್ಲ ಕಡೆಗಳಲ್ಲೂ ಉಂಟು. ವ್ಯಾಪಾರದ ಗಾತ್ರಕ್ಕೆ ಅನುಸಾರವಾಗಿ ಈ ಅಂಗಡಿಗಳ ಗಾತ್ರ ವ್ಯತ್ಯಾಸವಾಗುತ್ತದೆ. ಮನೆಯ ದಿನಬಳಕೆಯ ವಸ್ತುಗಳೆಲ್ಲ ಇಲ್ಲಿರುತ್ತವೆ. ಐರೋಪ್ಯ ದೇಶಗಳಲ್ಲಿ ಕಿರಾಣಿ ವರ್ತಕರು ಮಾಂಸ ಪದಾರ್ಥಗಳನ್ನೂ ಮಾರಾಟ ಮಾಡುತ್ತಾರೆ. ಭಾರತದಲ್ಲಿ ಹಾಗಲ್ಲ. ಮಾಂಸದ ಅಂಗಡಿಗಳು ಪ್ರತ್ಯೇಕವಾಗಿರುತ್ತವೆ.

 ಸಣ್ಣ ಕಿರಾಣಿ ಅಂಗಡಿಗಳಿಗೆ ಕಾರ್ಖಾನೆಗಳೂ ಸಗಟು ವ್ಯಾಪಾರಿಗಳೂ ಆಲಂಬನ. ಸಾಮಾನ್ಯವಾಗಿ ಇವು ಏಕವ್ಯಕ್ತಿ ಅಥವಾ ಪಾಲುದಾರಿಕೆ ಉದ್ಯಮಗಳು. ಆದರೆ ಈ ವ್ಯಾಪಾರ ಮಾಡುವ ಸರಪಣಿ ಮಳಿಗೆಗಳೂ ಇಲಾಖಾ ಮಳಿಗೆಗಳೂ ಬಳಕೆದಾರರ ಸಹಕಾರ ಸಂಘಗಳೂ ಉಂಟು. ಇವು ಮಾರಾಟ ಮಾಡುವ ಸರಕುಗಳು ಸಾಮಾನ್ಯವಾಗಿ ಮುದ್ರಾಂಕಿತವಾದವು. ಅವುಗಳ ಮೇಲೆ ಲಾಭದ ಪ್ರಮಾಣ ಕಡಿಮೆ. ಆದರೆ ಅವು ಹೆಚ್ಚು ವ್ಯಾಪಾರ ಮಾಡುವುದರಿಂದ ಒಟ್ಟಿನಲ್ಲಿ ಲಾಭದಾಯಕವಾಗಿರುತ್ತದೆ. ಕಿರಾಣಿ ಅಂಗಡಿಗಳ ಒಂದು ದೊಡ್ಡ ಅನುಕೂಲವೆಂದರೆ ಗ್ರಾಹಕರೊಂದಿಗೆ ಅವು ಪಡೆಯುವ ವೈಯಕ್ತಿಕ ಸಂಪರ್ಕ. ಅವರ ರುಚಿಧರ್ಮಗಳನ್ನೂ ಬಯಕೆಗಳನ್ನೂ ಅಂಗಡಿಕಾರ ಚೆನ್ನಾಗಿ ಅರಿತಿರುತ್ತಾನೆ. ನಿತ್ಯಬಳಕೆಯ ಸರಕನ್ನು ಹೆಚ್ಚಾಗಿ ಕೊಂಡು ದಾಸ್ತಾನು ಮಾಡಿಕೊಳ್ಳಲಾಗದ ಅಸಂಖ್ಯಾತ ಅನುಭೋಗಿಗಳಿಗೆ ಕಿರಾಣಿ ಅಂಗಡಿ ಒಂದು ವರ. ಉದ್ದರಿ ಲೆಕ್ಕ, ಮನೆಮನೆಗೆ ಸರಕಿನ ಸರಬರಾಯಿ-ಮುಂತಾದ ಸೌಲಭ್ಯಗಳನ್ನೂ ಅದು ಒದಗಿಸುತ್ತದೆ. 

(ಜೆ.ಕೆ.ಐ.)