ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಮುದೇಂದು

ವಿಕಿಸೋರ್ಸ್ದಿಂದ

"ಕುಮುದೇಂದು":-

 ಷಟ್ಪದಿಯಲ್ಲಿ ರಾಮಾಯಣವೊಂದನ್ನು ಬರೆದ ಕನ್ನಡ ಕವಿ. ಅದಕ್ಕೆ ಕುಮುದೇಂದು ರಾಮಾಯಣವೆಂಬ ಹೆಸರೇ ಉಳಿದು ಬಂದಿದೆ. ಕವಿಯ ಕಾಲ ಸು.1275. ಈತನ ವಿಷಯಕವಾದ ಎಲ್ಲ ಸಂಗತಿಗಳೂ ದೊರೆಯುವುದಿಲ್ಲ. ತನ್ನ ಗ್ರಂಥದಲ್ಲಿ ಕವಿ ತಂದೆ ಮತ್ತು ದೊಡ್ಡಪ್ಪಂದಿರ ವಿಷಯವಾಗಿ ಕೆಲವು ಸಂಗತಿಗಳನ್ನು ಹೇಳಿಕೊಂಡಿದ್ದಾನೆ. ತಂದೆ ಪದ್ಮನಂದಿವ್ರತಿ, ಬಾಣಸಕುಲತಿಲಕ, ಸಾಹಿತ್ಯವಿಶಾರದ, ಚತುರ್ವಿಧ ಪಾಂಡಿತ್ಯಕಳಾಕುಶಲ, ವಾದಿಗಳಲ್ಲಿ ಶ್ರೇಷ್ಠ; ಹೆಸರು ವಾಸಿಯಾದ ಕವಿಯೂ ಆಗಿದ್ದನೆಂದು ಕವಿಮುಖಮಣಿಮುಕುರಂ ಎಂಬ ಆತನ ಬಿರುದಿನಿಂದ ತಿಳಿಯುತ್ತದೆ. ಕವಿಯ ದೊಡ್ಡಪ್ಪ ಆಗಮ, ನಾಟಕ, ತರ್ಕ, ವ್ಯಾಕರಣ, ಛಂದೋಲಂಕೃತಿ, ಶ್ರುತಿ, ಸ್ಮುತಿ, ವೇದಾಂತ, ಮಂತೌಷಧಿ, ರತ್ನಪರೀಕ್ಷೆ-ಮುಂತಾದ ಶಾಸ್ತ್ರಗಳಲ್ಲಿ ಪಂಡಿತನಾದ ಅರ್ಹಣಂದಿವ್ರತಿ.

ಹೀಗೆ ಕವಿ ಘನವಿದ್ವಾಂಸರ ವಂಶದಲ್ಲಿ ಹುಟ್ಟಿದವ. ಈತನ ಗುರು ಸಿದ್ಧಾಂತ ಚಕ್ರವರ್ತಿಯೆನಿಸಿದ ಮಾಘನಂದಾಚಾರ್ಯ. ಇಂಥ ಪಂಡಿತವಂಶದಲ್ಲಿ ಹುಟ್ಟಿ ಸಿದ್ಧಾಂತ ಚಕ್ರವರ್ತಿಯೆನಿಸಿದ ಗುರುವಿನ ಅಡಿಯಲ್ಲಿ ಅಧ್ಯಯನ ಮಾಡಿದ ಕುಮುದೇಂದು ಅಸಾಮಾನ್ಯ ಪಂಡಿತನಾಗಿರುವುದು ಸ್ವಾಭಾವಿಕವೇ. ಪರವಾದಿ ಗಿರಿವಜ್ರ, ವಾದಿಗಜಕೇಸರಿ, ವಾದಿಭಾಳಲೋಚನ, ವಾದಿಧರಾಧರಕುಳಿಶ, ಪರವಾದಿಗಂಡ ಭೇರುಂಡ, ಕವಿರಾಜಶಿಖಾಮಣಿ, ಸರಸಕವಿತಿಲಕ, ಸರಸಕವಿಮುಖತಿಲಕ, ಕವಿಕುಳ ಭಾಳಲಲಾಮ- ಮುಂತಾದ ಆತನ ಬಿರುದುಗಳು ಆತನ ವೈದುಷ್ಯವನ್ನು ಪುಷ್ಟೀಕರಿಸುತ್ತವೆ. ಈ ಬಿರುದುಗಳ ಮೇಲಿಂದ ಈತ ವಾದದಲ್ಲಿ ಅನೇಕ ಪಂಡಿತರನ್ನು ಗೆದ್ದಿರಬೇಕು ಎಂದು ಕಂಡುಬರುವುದು. ಈತನ ರಾಮಾಯಣ ರಾಮಣವಧೆಯಾದ ಮೇಲೆ ರಾಮಚಂದ್ರ ಸೀತಾಲಕ್ಷ್ಮಣರೊಡನೆ ಅಯೋಧ್ಯೆಗೆ ಬರುವಮಟ್ಟಿಗೆ ಇದೆ. ಪಂಪರಾಮಾಯಣದಂತೆ ರಾಮಕೇವಲಿಯ ಮೋಕ್ಷದವರೆಗೆ ಸಂಪೂರ್ಣವಾಗಿಲ್ಲ. ಬಹುತರವಾಗಿ ಅದು ಅಲ್ಲಿಗೇ ನಿಂತುಹೋಗಿ, ಕವಿ ಗತಿಸಿರಬಹುದು. ಈಗ ಪ್ರಕಟವಾಗಿರುವ ಗ್ರಂಥದಲ್ಲಿ ಒಂದರಿಂದ ಎಂಟು ಸಂಧಿಗಳು ಮಾತ್ರ ಇವೆ.

ಇದರಲ್ಲಿನ ರಾಮಕಥೆ ವಿಮಲಸೂರಿಯ ಸಂಪ್ರದಾಯಕ್ಕೆ ಸೇರಿದ್ದು. ಅಂದರೆ ಇದು ಪಂಪರಾಮಾಯಣವನ್ನು ಬಹುತೇಕ ಅನುಸರಿಸಿದೆ. ಆದರೆ ಕಥಾ ಸ್ವಾರಸ್ಯಕ್ಕಾಗಿ ಅಲ್ಲಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡುದು ಕಂಡು ಬರುತ್ತದೆ.

  • "ಕುಮುದೇಂದು ರಾಮಾಯಣ" ಎಲ್ಲ ಜಾತಿಯ ಷಟ್ಟದಿಗಳೂ ಎದ್ದು ಗ್ರಂಥ ಛಂದೋವೈವಿಧ್ಯದಿಂದ ಕೂಡಿದುದಾಗಿದೆ. ಅಲ್ಲಲ್ಲಿ ಕೆಲವು ರಗಳೆಗಳೂ ದೊರೆಯುತ್ತವೆ. ಪ್ರತಿ ಸಂಧಿಯೂ ಷಟ್ಟದಿಯ ಒಂದೊಂದು ಪ್ರಕಾರದಲ್ಲಿದೆಯಲ್ಲದೆ ಒಂದೊಂದು ಸಂಧಿಗೂ ಒಂದೊಂದು ರಾಗವನ್ನು ಸೂಚಿಸಲಾಗಿದೆ. ಎರಡು ಸಂಧಿಗಳಿಗೆ ತಾಳಸೂಚನೆಯೂ ಇದೆ. ವಿಶೇಷವೆಂದರೆ ಪರಿವರ್ಧಿನಿಯ ಆರನೆಯ ಪಾದಗಳಲ್ಲಿ ಇರಬೇಕಾದುದಕ್ಕಿಂತ ಒಂದು ಗಣ ಹೆಚ್ಚಾಗಿದೆ, ಇಲ್ಲವೆ ಅರ್ಧ ಗಣ ಹೆಚ್ಚಾಗಿದ್ದು ಆಂತರಿಕಯತಿ-ಪ್ರಾಸಗಳನ್ನು ಒಮ್ಮೆ ಬಳಸಿದೆ, ಒಮ್ಮೆ ಬಿಟ್ಟಿದೆ. ಇದರಿಂದಾಗಿ ಛಂದಸ್ಸಿನ ಶೈಥಿಲ್ಯ ಎದ್ದು ಕಾಣುತ್ತದೆ. ಇದನ್ನು ನೋಡಿದರೆ ಕುಮುದೇಂದುವಿನ ಸಂಗೀತಜ್ಞಾನ ಪದ್ಯರಚನೆಯಲ್ಲಿ ಗುಣದೋಷಗಳೆರಡಕ್ಕೂ ಎಡೆ ಮಾಡಿದೆಯೆನ್ನಬೇಕು. ಆದರೂ ಅರ್ಥ, ರಸ, ಗುಣ, ಅಲಂಕಾರ, ಮೃದುಪದ ಭಾವಗಳನ್ನು ಕಾವ್ಯದಲ್ಲಿ ಕಾಣಬಹುದು. ಹಾಡುಗಬ್ಬದಲ್ಲಿ ಪ್ರೌಢಕಾವ್ಯದ ಲಕ್ಷಣ ತಂದು ಹಳೆಯ ಹೊಸ ಶೈಲಿಗಳ ಮಿಶ್ರಣ ಮಾಡಿದ್ದಾನೆ, ಕವಿ. ಭಾಷೆಯ ಮೇಲೆ ಇವನಿಗಿರುವ ಪ್ರಭುತ್ವ ಎಲ್ಲೆಡೆಯೂ ಸುಲಭವಾಗಿ ಗೋಚರಿಸುತ್ತದೆ. ಮತ್ಕಂತಿ ಮಾಡುವುದು ಚಮತ್ಕಂತಿಯಂ' ಎಂಬ ಕವಿವಾಣಿ ಕಾವ್ಯದಲ್ಲಿ ಸಾಕಷ್ಟು ಸಮರ್ಥನೆಯನ್ನು ಪಡೆದಿದೆ.           

 (ಕೆ.ಜಿ.ಕೆ.)