ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃತಕ ಎಳೆಗಳು

ವಿಕಿಸೋರ್ಸ್ ಇಂದ
Jump to navigation Jump to search

ಕೃತಕ ಎಳೆಗಳು

ನೈಸರ್ಗಿಕ ಅಥವಾ ಇನಾಗ್ರ್ಯಾನಿಕ್ ಅಥವಾ ಸಂಶ್ಲೇಷಿತ ವಸ್ತುಗಳಿಂದ ತಯಾರಿಸಿದ ಎಳೆಗಳು. ರೇಯಾನ್ಸ್, ನೈಲಾನ್, ಝಫ್ರಾನ್ ಮುಂತಾದವು ಉದಾಹರಣೆಗಳು. ಎಲ್ಲ ಕೃತಕ ಎಳೆಗಳೂ ರಾಸಾಯನಿಕವಾಗಿ ವಿವಿಧಬಗೆಯ ಪಾಲಿಮರಗಳು. ಇವುಗಳಲ್ಲಿ ಸರಳ ಸಂಯುಕ್ತಗಳ ಅನೇಕ ಅಣುಗಳು ಪರಸ್ಪರ ಸರಪಳಿಯಂತೆ ಕೂಡಿಕೊಂಡು ಎಳೆಗಳ ಸರಪಳಿ ಪಾಲಿಮರಗಳು ಆಗುತ್ತವೆ.

ಸುಧಾರಿತ ಹಾಗೂ ಕೃತಕ ತಂತುಗಳ ಮತ್ತು ಅವುಗಳ ಸಂಸ್ಕರಣೆಯ ಬಗ್ಗೆ ಮಹತ್ವಪೂರ್ಣ ಸಂಶೋಧನೆಗಳು ಕಳೆದ ಏಳೆಂಟು ದಶಕಗಳಿಂದ ನಡೆದಿವೆ. ಮನುಷ್ಯ ಮೊದಮೊದಲು ತಯಾರಿಸಿದ ಕೃತಕ ದಾರ ರೇಯಾನ್. ಅದನ್ನು ಸರಂಧ್ರೀಯವಾಗಿ ತಯಾರಿಸಿದ. ಪ್ರೋಟೀನ್ ಪದಾರ್ಥಗಳು, ಕಡಲೆಕಾಯಿ, ಕೆನೆತೆಗೆದ ಹಾಲು ಮುಂತಾದ ವಸ್ತುಗಳಿಂದ ಹಲವು ಬಗೆಯ ಇತರ ತಂತುಗಳು ತಯಾರಾದವು. ಮತ್ತೆ ಕೆಲವು ಕೃತಕ ತಂತುಗಳು ಸಂಯೋಜಿತ ಕೃತಕ ರಬ್ಬರು ಮತ್ತು ಗಾಜಿನಿಂದ ಉತ್ಪಾದನೆಯಾದವು. ಕೃತಕ ದಾರ ಅಥವಾ ಸಂಯೋಜಿತ ದಾರ ಎಂಬ ಪದಗಳು ಸಾಮಾನ್ಯವಾಗಿ ಸಂಯೋಜಿತ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ತಂತುಗಳಿಗೆ ಅನ್ವಯವಾಗುತ್ತವೆ. ವಸ್ತುತಃ ಸ್ವಾಭಾವಿಕ ಉತ್ಪನ್ನಗಳನ್ನು ಬಳಸದೆಯೇ ಬಟ್ಟೆ ತಯಾರಿಕೆಗೆ ಬೇಕಾದ ಈ ಕೃತಕ ತಂತುಗಳನ್ನು ಸೃಜಿಸಬಹುದಾಗಿರುವುದರಿಂದ ಅವು ಜನತೆಯ ಆಸಕ್ತಿಯನ್ನು ಹೆಚ್ಚಿಸಿವೆ. ನೈಲಾನ್, ಟೆರಿಲಿನ್, ಓರ್ಲಾನ್ ಮೊದಲಾದವು ಹೆಚ್ಚು ಮೊತ್ತದಲ್ಲಿ ತಯಾರಾಗುವ ಬಹು ಮುಖ್ಯ ಕೃತಕ ತಂತುಗಳಲ್ಲಿ ಕೆಲವು ಬಗೆ.

ನೈಲಾನ್: ತಮ್ಮ ಮೂಲ ರಾಸಾಯನಿಕ ವಸ್ತುಗಳಲ್ಲಿ ವ್ಯತ್ಯಾಸಗಳಿದ್ದರೂ ಸರ್ವಸಾಧಾರಣವಾಗಿ ಆ ರಾಸಾಯನಿಕ ವಸ್ತುಗಳನ್ನು ಮಂದಗೊಳಿಸಿ ತಯಾರಿಸುವ ಕೆಲವು ಬಗೆಯ ನೈಲಾನ್ ತಂತುಗಳಿವೆ. ಅವುಗಳಿಗೆಲ್ಲ ಪಾಲಿಯಾಮೈಡ್ ತಂತುಗಳೆಂದು ಹೆಸರು. ಮೂಲವಸ್ತುಗಳ ಸಂಯೋಜನ ಕ್ರಮದಲ್ಲಿ ಸಣ್ಣ ಕಣಗಳು ದೊಡ್ಡ ಕಣಗಳಾಗಿ ಹೇಗೆ ಮಾರ್ಪಡುತ್ತವೆ ಎಂಬ ಬಗ್ಗೆ ಡಬ್ಲ್ಯು. ಎಚ್. ಕರೊಥೆರ್ಸ್ ಮತ್ತು ಆತನ ಸಹಾಯಕ ಸಂಶೋಧಕರು ನಡೆಸಿದ ಸಂಶೋಧನೆಗಳ ಫಲವಾಗಿ ಡ್ಯುಪಾಂಟ್ ಕಂಪೆನಿಯವರು ತಯಾರಿಸಿದ ಹೊಚ್ಚ ಹೊಸ ತಂತುಗಳಿಗೆ ಇಟ್ಟ ಹೆಸರು ನೈಲಾನ್. ಈ ದೊಡ್ಡ ಕಣಗಳಿಗೆ ಪಾಲಿಮರುಗಳೆಂದು ಹೆಸರು. ಕೆಲವು ರಾಸಾಯನಿಕ ವಸ್ತುಗಳು ಪ್ರಬಲ ಹಿರಿಯಕಣಗಳಾಗಿ (ಅತಿಪಾಲಿಮರುಗಳು) ಸಂಯೋಗವಾಗಬಲ್ಲುವೆಂದೂ ಅವುಗಳಲ್ಲಿ ಕೆಲವನ್ನು ದಾರವನ್ನಾಗಿ ಎಳೆಯಬಹುದು ಇಲ್ಲವೆ ಹೊರಡಿಸಬಹುದೆಂದೂ ಡ್ಯುಪಾಂಟ್ ರಾಸಾಯನಿಕ ಸಂಶೋಧಕರು ಕಂಡುಹಿಡಿದರು. ಈ ಉದ್ದೇಶಕ್ಕಾಗಿ ಕಲ್ಲಿದ್ದಲು, ವಾಯು ಮತ್ತು ನೀರು ಇವುಗಳಿಂದ ಪಡೆದ ಆಧಾರವಸ್ತುಗಳು ತೃಪ್ತಿಕರವಾಗಿ ಒಟ್ಟುಗೂಡುತ್ತವೆಂದು ಕಂಡುಬಂದಿತು. ಅದರ ಪರಿಣಾಮವಾಗಿ ನೈಲಾನ್ ಸೃಷ್ಟಿಯಾಯಿತು(1938). ಒಂದು ವರ್ಷದ ತರುವಾಯ ಬಟ್ಟೆ ನೂಲಿನಂತೆಯೆ ಅಲ್ಲದೆ ಬಿರುಸು ಎಳೆ ಮತ್ತು ಫಲಕ ರೂಪಗಳಲ್ಲಿ ಹಾಗೂ ತೀರ ಗಟ್ಟಿಯಾದ ಬಲವಾದ ಮತ್ತು ಸ್ಥಿತಿಸ್ಥಾಪಕ ಗುಣವುಳ್ಳ ಇತರ ಪ್ರಕಾರಗಳಲ್ಲಿ ನೈಲಾನ್ ವಾಣಿಜ್ಯ ಸರಕಾಗಿ ತಯಾರಾಗಲು ಪ್ರಾರಂಭವಾಯಿತು(1939). ರಾಷ್ಟ್ರರಕ್ಷಣೆಯ ಉದ್ದೇಶಗಳಿಗಾಗಿ, ವೈಮಾನಿಕರ ಧುಮುಕು ಛತ್ರಿ, ಸಮವಸ್ತ್ರ, ಟೈರುಗಳ ಹುರಿ ಮೊದಲಾದ ವಸ್ತುಗಳ ತಯಾರಿಕೆಗೆ ನೈಲಾನ್ ಉತ್ಪಾದನೆಗಳನ್ನು ಮೀಸಲಿಡಲಾಯಿತು. ಯುದ್ಧ ಮುಗಿದ ತರುವಾಯ ಪುನಃ ಜನರ ಉಪಯೋಗಕ್ಕಾಗಿ ನೈಲಾನ್ ಉತ್ಪಾದನೆ ಪ್ರಾರಂಭವಾಯಿತು. 66 ಮತ್ತು 6 ತರಹೆಗಳ ಎಳೆಗಳನ್ನು ಡ್ಯುಪಾಂಟ್ ಕಂಪೆನಿ ತಯಾರಿಸತೊಡಗಿತು. ಅದರೊಂದಿಗೆ ನೈಲಾನನ್ನು ಒಂದಲ್ಲ ಒಂದು ರೂಪದಲ್ಲಿ ತಯಾರಿಸುವ ಅನೇಕ ಉದ್ಯಮ ಸಂಸ್ಥೆಗಳಿವೆ. ನೈಲಾನ್ ತಯಾರಾಗುತ್ತಿರುವ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಅದಕ್ಕೆ ಕೊಟ್ಟಿರುವ ಪ್ರಸಿದ್ಧ ಹೆಸರುಗಳಿವು: ಜಪಾನ್-ಅಮಿಲಾನ್, ಜರ್ಮನಿ-ಪೆರ್ಲಾನ್,ನೆದರ್ಲೆಂಡ್-ಬಿಟಾಲ್, ಇಟಲಿ, ಬ್ರೆಜಿûಲ್ ಮತ್ತು ಫ್ರಾನ್ಸ್-ರಿಲ್ಸಾನ್.

ತಯಾರಿಕೆ: ನೈಲಾನ್ ತಯಾರಿಕೆಗೆ ಬೇಕಾದ ಮೂಲ ಕಚ್ಚಾ ಪದಾರ್ಥಗಳು ಹೈಡ್ರೋಕಾರ್ಬನ್ ಸಂಯುಕ್ತ, ಸಾರಜನಕ, ಆಮ್ಲಜನಕ ಮತ್ತು ಜಲಜನಕ. ಕಲ್ಲಿದ್ದಲಿನಿಂದ ಜಲಜನಕ ಮತ್ತು ಆಮ್ಲಜನಕÀಗಳನ್ನೂ ನೀರಿನಿಂದ ಜಲಜನಕವನ್ನೂ ಪಡೆಯಲಾಗುತ್ತದೆ. ಭಾರಿ ಒತ್ತಡದ ಬಲದಿಂದ ಹೈಡ್ರೊಕಾರ್ಬನ್ ಸಂಯುಕ್ತ ಹಾಗೂ ಇತರ ಮಧ್ಯವರ್ತಿಗಳು ಅಡಿಪಿಕ್ ಆಮ್ಲ ಮತ್ತು ಹೆಕ್ಸಮೆಥಿಲಿನ್ ಡಯಮೈನ್‍ಗಳಾಗಿ ರೂಪುಗೊಳ್ಳುತ್ತವೆ. ಹೆಕ್ಸಮೆಥಿಲಿನ್ ಡೈ ಅಮೊನಿಯಂ ಅಡಿಪೇಟ್ ಎಂಬ ಲವಣದ್ರಾವಣವನ್ನು ತಯಾರಿಸಲು ನೀರಿನೊಡನೆ ನಿರ್ದಿಷ್ಟ ಪ್ರಮಾಣಗಳ ಆಮ್ಲ ಮತ್ತು ಡೈಅಮೈನ್ ದ್ರಾವಣವನ್ನು ಸಂಯೋಜಿಸುತ್ತಾರೆ. ತರುವಾಯ ಸಂಯೋಜೀಕರಣ ಅಂದರೆ ಸಣ್ಣ ಸಣ್ಣ ಕಣಗಳನ್ನು ಒಗ್ಗೂಡಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಹೀಗೆ ಸಣ್ಣ ಕಣಗಳನ್ನು ಸಂಯೋಜಿಸಲು ನೈಲಾನ್ ಲವಣದ್ರಾವಣವನ್ನು ಉಸಿರುಪಾತ್ರೆಯಲ್ಲಿ ಹಾಯಿಸುತ್ತಾರೆ. ಆ ಉಸಿರುಪಾತ್ರೆಯಲ್ಲಿ ಒತ್ತಡಕ್ಕೆ ಒಳಪಡುವಂತೆ ದ್ರಾವಣಕ್ಕೆ ಕಾವು ಕೊಟ್ಟಾಗ, ಹೊಸ ಹಿರಿಯ ಕಣವಾಗಿ ರೂಪುಗೊಳ್ಳಲು ಡೈಅಮೈನ್ ಕಣ ಮೂಲ ಆಮ್ಲಕಣದೊಂದಿಗೆ ಮಿಲನವಾಗುತ್ತದೆ. ಕಣಗಳ ಸರಣಿಯಾಗಲು, ಅಂದರೆ ಹಿರಿಯ ಕಣವಾಗಿ ಸಂಯೋಗವಾಗಲು ಈ ಕಣಗಳು ಇದೇ ರೀತಿ ರಚಿತವಾದ ಇತರ ಕಣಗಳೊಂದಿಗೆ ಸೇರಿಕೊಳ್ಳುತ್ತವೆ. ಈ ಸಂಯೋಗದಿಂದ ಹಿರಿಯ ಕಣ ಅಶುದ್ಧಾವಸ್ಥೆಯಲ್ಲೆ ಉಸಿರುಪಾತ್ರೆಯ ತಳದ ಸೀಳುಕಂಡಿಯಿಂದ ಹೊರಬರುತ್ತದೆ. ಅದನ್ನು ನೀರಿನಿಂದ ತಂಪಾಗುವ ತಿರುಗುಚಕ್ರದ ಮೇಲೆ ಇರಿಸುತ್ತಾರೆ. ಆಗ ಅದು ದಂತವರ್ಣದ ಪಟ್ಟಿಯ ಆಕಾರದಲ್ಲಿ ಗಟ್ಟಿಯಾಗುತ್ತದೆ. ಅದನ್ನು ಚೂರುಗಳಾಗಿ ಇಲ್ಲವೆ ಉಣ್ಣೆ ಎಳೆಯಂಥ ಪೊರೆಗಳನ್ನಾಗಿ ಕತ್ತರಿಸುತ್ತಾರೆ. ತರುವಾಯ ನೈಲಾನ್ ಪೊರೆಗಳನ್ನು ಕರಗಿಸಿ, ಕರಗಿಸಿ-ನೂಲು-ತೆಗೆಯುವ ವಿಧಾನದಲ್ಲಿ (ಮೆಲ್ಟ್‍ಸ್ಪಿನ್ನಿಂಗ್) ಕಿರುರಾಟೆಯ ಮೂಲಕ ಹೊರಡಿಸುತ್ತಾರೆ. ಕಿರುರಾಟೆಯ ರಂಧ್ರಗಳಿಂದ ಪ್ರವಹಿಸುವ ನೈಲಾನ್ ಸೂಕ್ಷ್ಮಪಟ್ಟಿಗಳು ತಂಪಾಗಿ ಕೂಡಲೆ ಫನೀಕೃತ ತಂತುಗಳಾಗುತ್ತವೆ. ಈ ಹಂತದಲ್ಲಿ ಮತ್ತೊಂದು ಹೊಸ ಮತ್ತು ಸ್ವಾರಸ್ಯವಾದ ಕ್ರಿಯೆ ನಡೆಯುತ್ತದೆ: ಹೀಗೆ ಉತ್ಪನ್ನವಾದ ನವಿರೆಳೆಗಳು ಮತ್ತು ತಂತುಗಳು ಬಟ್ಟೆ ತಯಾರಿಕೆಗಾಗಿ ಬಳಸುವಷ್ಟು ತೃಪ್ತಿಕರವಾಗಿರುವುದಿಲ್ಲ. ಆದ್ದರಿಂದ ಹಸಿಯಾಗಿ ತೆಗೆಯುವ ವಿಧಾನವೆಂಬ ಕ್ರಮದಲ್ಲಿ ಅವನ್ನು ಮೊದಲ ಉದ್ದಕ್ಕಿಂತಲೂ 3-4 ಪಟ್ಟು ಉದ್ದಕ್ಕೆ ವಿಸ್ತರಿಸುತ್ತಾರೆ. ಈ ಪ್ರಕಾರವಾದ ಲಂಬನೆಯಿಂದ ಅವುಗಳ ಬಲ ಮತ್ತು ಸ್ಥಿತಿಸ್ಥಾಪಕತ್ವ ಉತ್ತಮವಾಗುವುವು. ನೈಲಾನನ್ನು ನವಿರೆಳೆ ಮತ್ತು ತಂತು ರೂಪಗಳಲ್ಲಿ ತಯಾರಿಸುತ್ತಾರೆ. ನೂಲುವ ದ್ರಾವಣದಲ್ಲಿ ಟಿಟಾನಿಯಂ ಡೈಆಕ್ಸೈಡ್ ಮಾದರಿಯ ಹೊಳಪಿಲ್ಲದ ದ್ರವ್ಯವನ್ನು ಸೇರಿಸಿ ಅದರ ಕಾಂತಿಯನ್ನು ಕುಂದಿಸಬಹುದು. ಇದೇ ರೀತಿ ವರ್ಣದ್ರವ್ಯ ಸೇರಿಸಿ ಬಣ್ಣದ ನೈಲಾನ್ ತಯಾರಿಸಬಹುದು.

ಬಟ್ಟೆ ತಯಾರಿಕೆಯಲ್ಲಿ ಉಪಯೋಗಿಸುವ ಇತರ ಯಾವುದೇ ದಾರಗಳಿಗಿಂತ ನೈಲಾನ್ ತಂತುಗಳು ಗಟ್ಟಿಯಾದವು. ಅವುಗಳ ಶುಷ್ಕ ಸಾಮಥ್ರ್ಯ ಅಧಿಕ. ತೇವಸಾಮಥ್ರ್ಯ ಕೇವಲ 15%. ತೂಕದಲ್ಲಿ ಹಗುರ ಹಾಗೂ ಅವುಗಳ ಘರ್ಷಣ ನಿರೋಧಶಕ್ತಿ ಉಣ್ಣೆಗಿಂತಲೂ ಸುಮಾರು ಮೂರು ಪಟ್ಟು ಹೆಚ್ಚು. ನೈಲಾನ್ ಬಹಳ ಸುಲಭವಾಗಿ ಎಳೆದು ಮತ್ತೆ ಪೂರ್ವಸ್ಥಿತಿಗೆ ತರಬಹುದಾದ ಸ್ಥಿತಿಸ್ಥಾಪಕ ಗುಣವುಳ್ಳ ವಸ್ತು. ತಂತುಗಳು ನುಣುಪಾಗಿಯೂ ರಂಧ್ರವಿಹೀನವಾಗಿಯೂ ಇರುವುದರಿಂದ ಬೇಗ ಕೊಳೆಯಾಗುವುದಿಲ್ಲ. ನೈಲಾನ್ ತೇವವನ್ನು ಹೀರುವುದಿಲ್ಲವಾದ್ದರಿಂದ ಬೇಗ ಒಣಗುತ್ತದೆ. ಜಲನಿರೋಧಗುಣ ಇರುವುದರಿಂದ ನೈಲಾನ್ ಬಟ್ಟೆ ಬೇಸಗೆಯಲ್ಲಿ ತೊಡಲು ಹಿತವಲ್ಲ. ಕೃತಕ ಎಳೆಗಳಂತೆ ನೈಲಾನ್ ಎಳೆಗಳಿಗೂ ವಿಸ್ತರಣಶಕ್ತಿಯನ್ನು ಕೊಡಬಹುದು. ಕ್ಷಾರಗಳನ್ನು ನೈಲಾನ್ ಬಹಳ ಚೆನ್ನಾಗಿ ತಡೆಯುತ್ತದೆ. ಆದರೆ ಸಲ್ಫೂರಿಕ್ ಆಮ್ಲದಲ್ಲಿ ಕರಗಿಹೋಗುತ್ತದೆ. ತೀಕ್ಷ್ಣ ಬಿಸಿಲಿಗೆ ಇಲ್ಲವೆ ಸಾಮಾನ್ಯ ಬೆಳಕಿಗೆ ದೀರ್ಘಕಾಲ ಬಿಟ್ಟರೆ ಸಾಮಾನ್ಯದರ್ಜೆಯ ನೈಲಾನ್ ಹಾಳಾಗುತ್ತದೆ. ನೈಲಾನ್ ಬಟ್ಟೆಗೆ ಬೂಷ್ಟು ಹಿಡಿಯುವುದಿಲ್ಲ; ಕೀಟಗಳಿಂದ ಅಥವಾ ಬೆಳ್ಳಿಹುಳುಗಳಿಂದ ಅದು ನಾಶವಾಗುವುದಿಲ್ಲ. ಅದನ್ನು ಕನಿಷ್ಠ ಉಷ್ಣತೆಗಳಲ್ಲಿ ಮಾತ್ರ ಇಸ್ತ್ರಿ ಮಾಡಬೇಕು. ನೈಲಾನನ್ನು ಬಿಡಿತಂತುಗಳನ್ನಾಗಿ ಮತ್ತು ಹಲವಾರು ಎಳೆಗಳಿಂದ ಕೂಡಿದ ತಂತುಗಳನ್ನಾಗಿ ತಯಾರಿಸುತ್ತಾರೆ. ಅಲ್ಲದೆ ಪ್ರಸಾರಬಲ, ಬಾಳಿಕೆ ಇತ್ಯಾದಿಗಳ ಸಾಧ್ಯತೆಗೆ ರೇಷ್ಮೆಯಂಥ ಹುರಿಮಾಡಿದ ದಾರವನ್ನಾಗಿಯೂ ಅನೇಕ ಎಳೆಗಳ ತಂತುಗಳನ್ನಾಗಿಯೂ ತಯಾರಿಸುತ್ತಾರೆ. ಸೂಕ್ತ ಉದ್ದಳತೆಗಳಿಗೆ ಕತ್ತರಿಸಿದ ನೈಲಾನ್ ನವಿರೆಳೆಗಳನ್ನು ಹತ್ತಿ, ಉಣ್ಣೆ, ರೇಷ್ಮೆ ಅಥವಾ ಮತ್ತಿತರ ತಂತುಗಳೊಂದಿಗೆ ಸೇರಿಸಿ ನೂಲುವುದುಂಟು. ಛಿದ್ರವಾಗದಂತೆ ನೈಲಾನ್ ಬಟ್ಟೆಯನ್ನು ಸೋಡಿಯಂ ಕ್ಲೋರೇಟ್‍ನಿಂದ ಸುರಕ್ಷಿತವಾಗಿ ಬಿಳಿಚಿಸಬಹುದು. ಸಾಮಾನ್ಯವಾಗಿ ನೈಲಾನಿಗೆ ಪ್ರಾಸಾರಿಕ ವರ್ಣಗಳನ್ನು ಉಪಯೋಗಿಸಿ ಬಣ್ಣ ಕಟ್ಟುತ್ತಾರೆ. ಆರಿಸಿದ ಆಮ್ಲವರ್ಣಗಳನ್ನು ಸಹ ಬಣ್ಣಕಟ್ಟಲು ಉಪಯೋಗಿಸಬಹುದು.

ನೈಲಾನ್ ತನ್ನ ಬಿಗುಲಕ್ಷಣದಿಂದ ವೈಮಾನಿಕರ ಧುಮುಕುಛತ್ರಿ ಬಟ್ಟೆ, ಹುರಿ, ಕುದುರೆ ಮೊದಲಾದ ಭಾರಹೊರುವ ಪ್ರಾಣಿಗಳ ಸರಂಜಾಮು-ಇವುಗಳ ತಯಾರಿಕೆಯಲ್ಲಿ ಬಹು ಮುಖ್ಯವಸ್ತುವಾಗಿದೆ. ಬಾಳಿಕೆ ಮತ್ತು ಬಲದ ದೃಷ್ಟಿಯಿಂದ ನೈಲಾನ್ ಯಂತ್ರವಹನ ಪಟ್ಟಿಗಳ ತಯಾರಿಕೆಗೆ ಯೋಗ್ಯವಾಗಿದೆ. ನೈಲಾನಿನ ಬಹುಮುಖತೆ ಅದರಲ್ಲೂ ತಂತುಗಳ ಮಿಶ್ರಣದಲ್ಲಿ ಅದರ ಪಾತ್ರ ಅಮಿತವಾದದ್ದು. ಸ್ಥಿರವಿದ್ಯುಚ್ಛಕ್ತಿ(ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ), ಬಿಳಿನೈಲಾನ್ ಕಂದುಬಣ್ಣಕ್ಕೆ ತಿರುಗುವುದು ಮತ್ತು ಬಟ್ಟೆಯ ಮೇಲೆ ಸುರುಳಿಗಟ್ಟುವುದು ಇವು ನೈಲಾನಿನ ಹಲವು ಕೊರತೆಗಳು.

ಟೆರಿಲಿನ್: ಇದು ಜೆ. ಆರ್. ವಿಹಿನ್‍ಫೀಲ್ಡ್ ಮತ್ತು ಜೆ. ಟಿ. ಡಿಕ್‍ಸನ್ ಇವರು ಸೃಷ್ಟಿಸಿದ ಕೃತಕ ತಂತು. ಪಾಲಿಯೆಸ್ಟರ್ಸ್ ಮಂದವಸ್ತುಗಳ ಬಗ್ಗೆ ಡಬ್ಲ್ಯು. ಎಚ್. ಕರೋಥರ್ಸ್ ನಡೆಸಿದ ಸಂಶೋಧನೆಯನ್ನು ನೇರವಾಗಿ ಮುಂದುವರಿಸಿದ ಫಲವಾಗಿ ಪಡೆದ ರಾಸಾಯನಿಕ ವಸ್ತುವಿದು. ಬ್ರಿಟನ್ನಿನಲ್ಲಿ ತಯಾರಾಗುವ ಈ ಮಾದರಿಯ ಎಳೆ ಮತ್ತು ದಾರಗಳಿಗೆ ಟೆರಿಲಿನ್ ಎಂದು ಹೆಸರು. ಇದನ್ನು ಅಮೆರಿಕದಲ್ಲಿ ಡಕ್ರಾನ್ ಎಂದೂ ಭಾರತದಲ್ಲಿ ಟೆರಿನ್ ಎಂದೂ ಕರೆಯುತ್ತಾರೆ. ಈ ತಂತುಗಳ ಉತ್ಪಾದನೆಗೆ ಬೇಕಾದ ಮೂಲ ರಾಸಾಯನಿಕ ವಸ್ತುಗಳು ಕಲ್ಲಿದ್ದಲು, ವಾಯು, ನೀರು ಮತ್ತು ಪೆಟ್ರೋಲಿಯಂ. ಡೈಮಿಥೈಲ್ ಟೆರಿಪ್ಥಲೇಟ್ ಮತ್ತು ಎಥಿಲೀನ್ ಗ್ಲೈಕೋಲ್ ರಾಸಾಯನಿಕ ಪದಾರ್ಥಗಳನ್ನು, ಅವು ಪಿಂಗಾಣಿ ಜೇಡಿಮಣ್ಣಿನಂತೆ ಘನಾಕಾರ ತಾಳಿ ಗಟ್ಟಿಯಾಗುವ ವರೆಗೆ, ಅಧಿಕ ಉಷ್ಣತೆಯಲ್ಲಿ ನಿರ್ವಾಯು ಪಾತ್ರೆಯೊಂದರಲ್ಲಿಟ್ಟು ಬೇಯಿಸುತ್ತಾರೆ. ತರುವಾಯ ಅದನ್ನು ಜೇನುತುಪ್ಪದಂಥ ದ್ರವವಾಗುವಂತೆ ಕರಗಿಸಿ, ಕಿರುಚರಕದ(ಕರೆಗಿಸಿ ನೂಲುತೆಗೆಯುವ ಮೆಲ್ಟ್ ಸ್ಟನ್ ಸಾಧನದ) ಮೂಲಕ ಹೊರಡಿಸುತ್ತಾರೆ. ಬಿಡಿ ನವಿರೆಳೆಗಳನ್ನು ಒಟ್ಟಿಗೆ ಸೆಳೆದು ಸೆಳೆಯದ ತಂತುಗಳಂತೆಯೇ ವರ್ತುಲ ನಾಳಗಳಿಗೆ ಸುತ್ತುತ್ತಾರೆ. ಈ ಹಂತದಲ್ಲಿ ತಂತನ್ನು ಎಳೆದು ಹುರಿಮಾಡುವ ಯಂತ್ರಗಳಿಗೆ ಒಯ್ದು ಅಲ್ಲಿ ಅದನ್ನು ಅದರ ಮೂಲ ಉದ್ದದ 5ರಷ್ಟು ಉದ್ದಕ್ಕೆ ಲಂಬಿಸುತ್ತಾರೆ. ಈ ವಿಧಾನದಲ್ಲಿ ಬಟ್ಟೆ ತಯಾರಿಕೆಯಲ್ಲಿ ಉಪಯೋಗಿಸುವ ಸಾಮಾನ್ಯ ಸಾಮಥ್ರ್ಯವುಳ್ಳ ದಾರ ಮತ್ತು ಕೈಗಾರಿಕೆಯ ಉದ್ದೇಶಗಳಿಗಾಗಿ ಬಳಸುವ ಬಹು ಬಿಗಿಯಾದ ದಾರ ಈ ಎರಡು ಟೆರಿಲಿನ್ ತಂತುಗಳನ್ನು ತಯಾರಿಸುತ್ತಾರೆ.

ನವಿರೆಳೆಗಳನ್ನು ನೂಲುವ ಹಂತದ ವರೆಗೆ ಇದೇ ರೀತಿ ತಯಾರಿಸುತ್ತಾರೆ. ಬಹುಸಂಖ್ಯೆಯ ನವಿರೆಳೆಗಳನ್ನು ಒಟ್ಟಿಗೆ ನೂತು ದೊಡ್ಡ ತುಂಡುನಾರಿನ ಆಕೃತಿಗೆ ತರುತ್ತಾರೆ. ಈ ತುಂಡು ನಾರನ್ನು ಉಣ್ಣೆಯ ಎಳೆಗಳಂತೆ ನಿರಿಗೆ-ನಿರಿಗೆಗಳಾಗಿ ಸೆಳೆದು, ಕಾವು ಕೊಟ್ಟು ನಿರಿಗೆಗಳನ್ನು ಸ್ಥಿರಗೊಳಿಸುತ್ತಾರೆ. ತುಂಡುನಾರನ್ನು ನೇಯ್ಗೆಯ ಉದ್ದೇಶಕ್ಕೆ ತಕ್ಕಂತೆ ಹಲವು ಇಂಚುಗಳ ಉದ್ದಗಳಲ್ಲಿ ಕತ್ತರಿಸುತ್ತಾರೆ. ತರುವಾಯ ಅವನ್ನು ಕಂಬಳಿದಾರ, ಉಣ್ಣೆ, ಹತ್ತಿ ಮತ್ತು ಅಗಸೆನಾರು ಇವುಗಳ ಜೊತೆಗೆ ನೂಲಲು ಅನುಕೂಲವಾಗುವಂತೆ ಉದ್ದನೆಯ ದಪ್ಪದಾರವಾಗಿ ಹಾಗೂ ಸೂಕ್ಷ್ಮ ಎಳೆಯಾಗಿ ಸಿದ್ಧಗೊಳಿಸುತ್ತಾರೆ. ಸಾಧಾರಣ ದಾರವನ್ನು ಕಾಂತಿಯುತವಾಗಿ ಇಲ್ಲವೆ ಕಾಂತಿರಹಿತವಾಗಿ ತಯಾರಿಸುತ್ತಾರೆ. ನೂಲುವ ದ್ರಾವಣದಲ್ಲಿ ಸ್ವಲ್ಪ ಟಿಟಾನಿಯಂ ಡೈಆಕ್ಸೈಡ್ ಸೇರಿಸಿದರೆ ನೂಲು ಕಾಂತಿರಹಿತವಾಗುತ್ತದೆ. ಸೂಕ್ಷ್ಮ ಎಳೆಗಳಾಗಿ ಮತ್ತು ನವಿರೆಳೆಗಳಾಗಿ ತಯಾರಾಗುವ ಪಾಲಿಯೆಸ್ಟರ್ ತಂತುಗಳನ್ನು ನೇಯಬಹುದು ಅಥವಾ ಹೆಣಿಗೆಗೆ ಉಪಯೋಗಿಸಬಹುದು. ಟಫೆಟಾ ಬಟ್ಟೆ, ತೆರೆಬಟ್ಟೆ ಮತ್ತು ಸ್ಯಾಟಿನ್ ಬಟ್ಟೆ ತಯಾರಿಕೆಯಲ್ಲಿ ನಯವಾದ ಸೂಕ್ಷ್ಮ ಎಳೆಗಳನ್ನು ಉಪಯೋಗಿಸುತ್ತಾರೆ. ರಚನೆಯಲ್ಲಿ ಹತ್ತಿ ಅಥವಾ ಉಣ್ಣೆಯ ಎಳೆಗಳಂತಿರುವ ಪಾಲಿಯೆಸ್ಟರ್ ನೂಲಿನಿಂದ ಬಟ್ಟೆಗಳನ್ನು ತಯಾರಿಸುತ್ತಾರೆ. ನವಿರೆಳೆಗಳಂತೂ ವಿಶಿಷ್ಟವಾಗಿ ಮಿಶ್ರಣ ಉದ್ದೇಶಕ್ಕೆ ಯೋಗ್ಯವಾಗಿವೆ. ಪಾಲಿಯೆಸ್ಟರ್ ಹತ್ತಿ ಮಿಶ್ರಿತದಾರ (65% ಪಾಲಿಯಸ್ಟರ್ ಎಳೆ ಮತ್ತು 35% ಹತ್ತಿ ಎಳೆ) ಸಾಧಾರಣ ಬಳಕೆಯ ಷರ್ಟಿಂಗ್ ಬಟ್ಟೆ, ರವಿಕೆ, ಇಜಾರ, ಹೆಣಿಗೆ ಹಾಕಿದ ಟಿ-ಷರಟು ಮೊದಲಾದ ಬಟ್ಟೆಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿದೆ. ಪಾಲಿಯೆಸ್ಟರ್-ಆಕ್ರೈಲಿಕ್ ಮಿಶ್ರಿತ ತಂತುಗಳನ್ನು (50/50) ಗಂಡಸರ ಬೇಸಗೆ ಉಡುಪು ಬಟ್ಟೆ ತಯಾರಿಕೆಗೆ ಉಪಯೋಗಿಸುತ್ತಾರೆ. ಪಾಲಿಯೆಸ್ಟರ್ ಮತ್ತು ಉಣ್ಣೆದಾರ ಮಿಶ್ರಿತವಾದ ಬಟ್ಟೆಗಳಿಗೆ (55/45) ಮಡಿಕೆ ನಿಲ್ಲುತ್ತದೆ; ಅವು ಸುಕ್ಕಾಗುವುದಿಲ್ಲವಾಗಿ ಸೂಟಿಂಗ್ ಬಟ್ಟೆಗಳಿಗೆ ಪ್ರಸಿದ್ಧವಾಗಿವೆ. ಗಂಡಸರ ಉಡುಪಿಗೆ ಬೇಕಾದ ಬಟ್ಟೆ ತಯಾರಿಕೆಯಲ್ಲಿ ಪಾಲಿಯೆಸ್ಟರ್ ತಂತುಗಳನ್ನು ರೆಯಾನ್ ತಂತುಗಳೊಂದಿಗೆ ಸಹ ಬೆರೆಸುತ್ತಾರೆ.

ಪಾಲಿಯೆಸ್ಟರ್ ತಂತುಗಳು ವಾಸ್ತವವಾಗಿ ಸ್ವಯಂ ಶುಭ್ರವಾಗುವ ಉಡುಗೆ ತಯಾರಿಕೆಗೆ ಯೋಗ್ಯವಾಗಿವೆ. ಈ ಬಟ್ಟೆಗಳು ಸುಕ್ಕಾಗುವುದಿಲ್ಲ: ಪದೇ ಪದೇ ಒಗೆದು ಇಸ್ತ್ರಿಮಾಡದಿದ್ದರೂ ಅದಕ್ಕೆ ಸುಕ್ಕಾಗದಂಥ ಸ್ಥಿರತೆ ಉಂಟು. ತಂತುಗಳನ್ನು ಕಾವಿಗಿಟ್ಟು ನಿಯಂತ್ರಿತ ಎಳೆತಕ್ಕೆ ನಿಲ್ಲುವಂತೆ ಮತ್ತು ಜೋಲುಬೀಳದಂತೆ ಬಟ್ಟೆಯನ್ನು ತಯಾರಿಸಬಹುದು. ಹಾಗೂ ಅದನ್ನು ಸ್ಥಿರವಾದ ಮಡಿಕೆಗೆ ನಿಲ್ಲಿಸಬಹುದು. ಪಾಲಿಯೆಸ್ಟರ್ ಬಿಸಿಲಿನಿಂದ ಮತ್ತು ಹವೆಯಿಂದ ಹಾಳಾಗುವುದಿಲ್ಲ; ಅದಕ್ಕೆ ನುಸಿ ಮತ್ತು ಬೂಷ್ಟು ತಗಲುವುದಿಲ್ಲ. ಸೂಕ್ತಬಣ್ಣ ಮತ್ತು ಮೆರುಗನ್ನು ಕೊಟ್ಟರೆ ಈ ಬಟ್ಟೆಗೆ ಅಗ್ನಿಗ್ರಾಹಕ ಶಕ್ತಿ ಕಡಿಮೆಯಾಗುವುದು. ಟೆರಿಲಿನ್ ದಾರ ಸ್ವಾಭಾವಿಕವಾಗಿ ದಂತವರ್ಣದಿಂದ ಕೂಡಿರುವುದರಿಂದ ಅದನ್ನು ಬಿಳುಪು ಮಾಡಬೇಕಾಗಿಲ್ಲ. ಹಾಗೇನಾದರೂ ಅದನ್ನು ಬಿಳಿಚಿಸುವ ಅವಶ್ಯಕತೆ ಇದ್ದರೆ ನೈಟ್ರಿಕ್ ಆಮ್ಲವನ್ನು ಉಪಯೋಗಿಸಿ 2-3 ಪ್ರಮಾಣಕ್ಕೆ ಸೋಡಿಯಂ ಕ್ಲೋರೇಟ್‍ನ ಕುದಿಯುವ ದ್ರಾವಣದಿಂದ ಬಿಳಿಚಿಸಬಹುದು. ವಿಶಿಷ್ಟ ರೀತಿಯಲ್ಲಿ ಬೆಳಕಿನ ಸಹಾಯದಿಂದ ಬಿಳಿಚಿಸುವ (ಸಿಬಾ ಕಂಪೆನಿಯ) ಯುನಿಟೆಕ್ಸ್‍ರೇ ಮಾದರಿಯ ಮಧ್ಯಮಗಳು ಟೆರಿಲಿನ್ ತಂತುಗಳಿಗೆ ಯೋಗ್ಯವಾದವು.

ಪಾಲಿಯೆಸ್ಟರ್ ತಂತುಗಳಿಗೆ ಬಣ್ಣಕಟ್ಟುವುದು ಹೆಚ್ಚು ಕಷ್ಟವಾಗಿತ್ತು. ಸೆಲುಲೋಸ್ ಅಸಿಟೇಟ್ ಮತ್ತು ನೈಲಾನ್‍ಗಳಲ್ಲಿ ಪ್ರಯೋಜನಕರವಾಗಿ ಉಪಯೋಗಿಸಬಹುದಾದ ಪ್ರಾಸಾರಿಕ ವರ್ಣಗಳನ್ನು ಟೆರಿಲಿನ ತಂತುಗಳ ಬಗ್ಗೆ ಸಹ ಉಪಯೋಗಿಸಲು ಸಾಧ್ಯವಾಗಲಿಲ್ಲ. ಸೆಲುಲೋಸ್ ಅಸಿಟೇಟ್‍ಗಿಂತ ಟೆರಿಲಿನ್ ತಂತುಗಳಲ್ಲಿ ಕಣಸರಣಿಗಳು ಒತ್ತಾಗಿರುವುದೇ ಇದಕ್ಕೆ ಕಾರಣ. ಈ ತೊಂದರೆಯನ್ನು ಮೂರು ಪ್ರತ್ಯೇಕ ವಿಧಾನಗಳಿಂದ ಮುಂದೆ ಬಗೆಹರಿಸಲಾಯಿತು. ಆ ವಿಧಾನಗಳಿವು (1)1000 ಸೆಂ. ಉಷ್ಣತೆಗಿಂತ ಹೆಚ್ಚು ಉಷ್ಣತೆಯಲ್ಲಿ ಬಣ್ಣಕಟ್ಟುವುದು; (2) ಉಬ್ಬಿಸುವ ಮಾಧ್ಯಮವಾಗಿ ವರ್ತಿಸುವ ವಾಹಕಗಳ ನೆರವಿನಿಂದ ಬಣ್ಣಕಟ್ಟುವುದು. ಸಾಮಾನ್ಯವಾಗಿ ಉಪಯೋಗಿಸುವ ವಾಹಕಗಳು ಟುಮಿಸ್ ಕೋಲ್ ಡಿ ಮತ್ತು ಟುಮಿಸ್ ಕೋಲ್ ಒ.ಪಿ.; (3) ಥರ್ಮೊಸೋಲ್ ವಿಧಾನ. ಮೂರನೆಯ ವಿಧಾನದಲ್ಲಿ ಕಾರ್ಬಾಕ್ಸಿಮೀಥೈಲ್ ಸೆಲುಲೋಸ್ (ಸಿ.ಎಂ.ಸಿ) ಮಾದರಿಯ ಒಂದು ಅಸಿಟೇಟ್ ಬಣ್ಣ ಮತ್ತು ಸೆಲ್ಲೊಸಾಲ್ ಮಾದರಿಯ ಒಂದು ಮೂಲಭೂತ ಲೀನಕಾರಿಯನ್ನು ಪ್ರಸರಿಸಿ ಬಟ್ಟೆಗೆ ಮೆತ್ತೆಗಟ್ಟಲಾಗುತ್ತದೆ. ಮೆತ್ತೆಗಟ್ಟಿದ ಬಟ್ಟೆಯನ್ನು 700 ಸೆಂ.ಉಷ್ಣತೆಯಲ್ಲಿ ಒಣಗಿಸಿ, ತರುವಾಯ ಸುಮಾರು ಒಂದು ಮಿನಿಟ್ ಕಾಲ 1750 - 2000ಸೆಂ. ಉಷ್ಣತೆಯಲ್ಲಿ ಬೇಯಿಸಿದ ಮೇಲೆ ಅದನ್ನು ಚೆನ್ನಾಗಿ ಅಪ್ಪಳಿಸಲಾಗುವುದು. ಬಟ್ಟೆ ತಯಾರಿಕೆಯಲ್ಲಿ ಟೆರಿಲಿನ್ ತಂತು ಹೆಚ್ಚು ಉಪಯೋಗದಲ್ಲಿದ್ದರೂ ಹಲವಾರು ಇತರ ಕೈಗಾರಿಕೆಗಳಲ್ಲಿ ಸಹ ಅದನ್ನು ಚೆನ್ನಾಗಿ ಬಳಸುತ್ತಾರೆ. ಅದರಿಂದ ಹಗ್ಗ, ಮೀನಿನ ಬಲೆ ಹಾಗೂ ಹಡಗಿನ ಪಟ ತಯಾರಿಸುತ್ತಾರೆ. ಸಾಮಾನ್ಯ ಹಗ್ಗದ ಬಾಳಿಕೆಗಿಂತ ಟೆರಿಲಿನ್ ಹಗ್ಗ 15 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ. ಆಮ್ಲಗಳನ್ನು ನಿರೋಧಿಸುವ ರಾಸಾಯನಿಕ ಶಕ್ತಿ ಟೆರಿಲಿನ್‍ಗೆ ಇರುವುದರಿಂದ ಆಮ್ಲಗಳನ್ನು ಬಳಸುವ ಯಂತ್ರಶಾಲೆಗಳಲ್ಲಿ ಅದನ್ನು ರಕ್ಷಕ ತೊಡಿಗೆಯನ್ನಾಗಿ ಉಪಯೋಗಿಸುತ್ತಾರೆ. ಅದಕ್ಕೆ ಸೂಕ್ಷ್ಮದರ್ಶಕದಲ್ಲಿ ಕಾಣುವಂಥ ಅಣುಜೀವಿಗಳನ್ನು ತಡೆಯುವ ಸಾಮಥ್ರ್ಯವಿರುವುದರಿಂದ ಜಲಶುದ್ಧೀಕರಣ ಕೆಲಸಗಳಲ್ಲಿ ಉಪಯೋಗಿಸುತ್ತಾರೆ. ಸ್ಥಿರವಿದ್ಯುಚ್ಛಕ್ತಿ ಅನೇಕ ಕೃತಕ ಬಟ್ಟೆಗಳ ಸಂಬಂಧವಾದ ಸಮಸ್ಯೆ. ಇಂದು ಇದರ ನಿರೋಧಕ ಪರಿಷ್ಕರಣ ವಸ್ತುಗಳನ್ನು ಉಪಯೋಗಿಸಿ ಈ ಕ್ಲಿಷ್ಟತೆಯನ್ನು ಬಹುಮಟ್ಟಿಗೆ ನಿವಾರಿಸಿದೆ.

ಅಕ್ರಿಲಿಕ್ ತಂತುಗಳು: ಅಕ್ರಿಲಿಕ್ ತಂತುಗಳನ್ನು ಪಾಲಿ ಅಕ್ರಿಲೋನಿಟ್ರೈಲ್ ಎಂಬ ರಾಸಾಯನಿಕ ಮಿಶ್ರಣದಿಂದ ತಯಾರಿಸುತ್ತಾರೆ. ಇದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಕಲ್ಲಿದ್ದಲು, ಗಾಳಿ, ಪೆಟ್ರೋಲಿಯಂ, ಸುಣ್ಣ ಮತ್ತು ಸ್ವಾಭಾವಿಕ ಅನಿಲಗಳು. ಆರ್ಲಾನ್ 1948ರಲ್ಲಿ ವ್ಯಾಪಾರ ಉದ್ದೇಶಕ್ಕಾಗಿ ಮೊದಲು ತಯಾರಿಸಿದ ಅಕ್ರಿಲಿಕ್ ತಂತು. ಅದು ಸೂಕ್ಷ್ಮ ಎಳೆ ಮತ್ತು ನವಿರೆಳೆ ರೂಪಗಳಲ್ಲಿ ದೊರೆಯುತ್ತದೆ. ಅಕ್ರಿಲಾನ್, ಕ್ರೆಸ್ಲಾನ್, ಜûಫ್ರಾನ್ ಮೊದಲಾದವು ಇತರ ಪ್ರಮುಖ ಅಕ್ರಿಲಿಕ್ ತಂತುಗಳು. ಹುಮಾದರಿಗಳಲ್ಲಿ ಅಕ್ರಿಲಿಕ್ ತಂತುಗಳನ್ನು ಸಾಮಾನ್ಯದಾರದ ರೂಪದಲ್ಲಿ ತಯಾರಿಸುವುದರಿಂದ ಅವು ಮೃದುವಾಗಿರುತ್ತವೆ. ಅವು ದಪ್ಪವಾಗಿದ್ದರೂ ಹಗುರವಾಗಿರುತ್ತವೆ. ಅವು ಬಿಸಿಲು ಮತ್ತು ಕ್ರಿಮಿ ಕೀಟಗಳನ್ನು ನಿರೋಧಿಸುವುವಲ್ಲದೆ ಸುಕ್ಕಾಗುವುದಿಲ್ಲ. ಆರ್ಲಾನ್ ಬಟ್ಟೆಗೆ ನೀರು ಸುಲಭವಾಗಿ ಹಿಡಿಯುವುದಿಲ್ಲವಾಗಿ ಅವನ್ನು ಒಗೆಯುವುದು ಕಷ್ಟ.. ಅವುಗಳಿಗೆ ಮೊದಲು ಮೂಲ ವರ್ಣಗಳನ್ನು ಕೊಡುತ್ತಿದ್ದರೂ ಬಣ್ಣ ಮಾಸಿಹೋಗುತ್ತಿತ್ತು. ಕ್ಯುಪ್ರಸ್ ಅಯಾನ್ ವಿಧಾನ ಎಂಬ ಬಣ್ಣ ಕಟ್ಟುವ ತಂತ್ರದಿಂದ ಆಮ್ಲವರ್ಣಗಳನ್ನು ಉಪಯೋಗಿಸಿ ಈ ಬಟ್ಟೆಗೆ ಬಣ್ಣ ಕಟ್ಟುವುದು ಸಾಧ್ಯವಾಗಿದೆ.

ಹಲವಾರು ಕಾರಣಗಳಿಂದ ಆರ್ಲಾನ್ ಬಟ್ಟೆಗಳು ಮತ್ತು ಆರ್ಲಾನ್ ತಂತುಗಳನ್ನೊಳಗೊಂಡ ಸಂಯೋಜಿತ ತಂತುಗಳು ಜನಪ್ರಿಯವಾಗಿವೆ. ಆರ್ಲಾನ್ ತನ್ನ ಆಕಾರವನ್ನು ತಡೆದುಕೊಳ್ಳುತ್ತದೆ; ಅದು ಘರ್ಷಣ ನಿರೋಧಕ; ಅದನ್ನು ಸುಲಭವಾಗಿ ಒಗೆಯಬಹುದು; ಬೇಗ ಒಣಗುತ್ತದೆ; ಅದಕ್ಕೆ ಇಸ್ತ್ರಿ ಮಾಡಬೇಕಾಗಿಲ್ಲ. ಹಾಗೆ ಇಸ್ತ್ರಿ ಮಾಡಬೇಕಾದರೂ ಸ್ವಲ್ಪ ಉಷ್ಣತೆಗೆ ಇಸ್ತ್ರಿನಿಲ್ಲುತ್ತದೆ. ಮೃದು ಆರ್ಲಾನ್ ಸ್ವೆಟರುಗಳು ಕಾಶ್ಮೀರಿ ಸ್ವೆಟರುಗಳಷ್ಟೇ ನೂರಕ್ಕೆ ನೂರು ಭಾಗ ಮೃದುವಾಗಿರುತ್ತದೆ. ಅಕ್ರಿಲಿಕ್ ದಾರಗಳಿಂದ ಸ್ವೆಟರ್ ಮತ್ತು ಕಂಬಳಿ ನೇಯುತ್ತಾರೆ. 50/50 ಅಕ್ರಿಲಿಕ್-ಹತ್ತಿ/ ರೆಯಾನ್ ಮಿಶ್ರದಾರದಿಂದ ಕಾಲುಚೀಲಗಳನ್ನು ತಯಾರಿಸುತ್ತಾರೆ. ಅಕ್ರಿಲಿಕ್ ನೈಲಾನ್ ಸಂಯೋಜಿತ ತಂತುಗಳಿಂದ ಚಿತ್ತಾಕರ್ಷಕ ದಾರಗಳನ್ನು ತಯಾರಿಸುತ್ತಾರೆ. ವ್ಯಾಪಾರಕ್ಕಾಗಿ ತಯಾರಿಸುವ ಅಕ್ರಿಲಿಕ್ ಸಂಯೋಜಿತ ತಂತುಗಳಿಂದ ಸೂಟಿಂಗ್ ಬಟ್ಟೆ, ಹೆಣೆದ ಉಡುಪುಗಳು, ಷರಾಯಿ, ಕ್ರೀಡಾಕವಚಗಳು ಮತ್ತು ಜಮಖಾನೆಗಳನ್ನು ತಯಾರಿಸುತ್ತಾರೆ.

ಡೈನೆಲ್ ಎಂಬ ಪರಿವರ್ತಿತ ಅಕ್ರಿಲಿಕ್ ತಂತನ್ನು ವಿನೈಲ್ ಕ್ಲೋರೈಡ್ ಮತ್ತು ಆಕ್ರಿಲೊನೈಟ್ರಿಲ್ ಎಂಬ ರಾಸಾಯನಿಕ ವಸ್ತುಗಳಿಂದ ತಯಾರಿಸುತ್ತಾರೆ. ಅದಕ್ಕೆ ಬಿಸಿಲು ಮತ್ತು ಬೆಂಕಿಯನ್ನು ನಿರೋಧಿಸುವ ಗುಣವಿರುವುದರಿಂದ ಅದನ್ನು ತೆರೆ ಮತ್ತು ಪೀಠೋಪಕರಣಗಳ ಬಟ್ಟೆ ತಯಾರಿಕೆಯಲ್ಲಿ ಬಳಸುತ್ತಾರೆ. ಡೈನೆಲ್ ಬಟ್ಟೆಗೆ ಹಲವು ರಾಸಾಯನಿಕ ವಸ್ತುಗಳನ್ನು ತಡೆಯುವ ಗುಣ ಇರುವುದರಿಂದ ಅದು ಕೈಗಾರಿಕೆಯಲ್ಲಿ ಸೋಸುವ ಬಟ್ಟೆಯನ್ನಾಗಿ ಉಪಯೋಗಿಸಲು ಯೋಗ್ಯವಾಗಿದೆ. ಡೈನೆಲ್ ಬಟ್ಟೆಯ ಬಣ್ಣ ಮಾಸುವುದಿಲ್ಲ. ಅದನ್ನು ಸುಲಭವಾಗಿ ಒಗೆದು ಉಪಯೋಗಿಸಬಹುದು. ಬಟ್ಟೆ ಸುಕ್ಕುವುದಿಲ್ಲ. ಡೈನೆಲ್ ತಂತುಗಳಲ್ಲಿ ಹತ್ತಿ, ರೆಯಾನ್ ಅಥವಾ ಉಣ್ಣೆಯ ಎಳೆಗಳನ್ನು ಬೆರೆಸುವುದುಂಟು.

ಸಾರಾನ್ ತಂತುಗಳು: ಸಾರಾನ್ ಎಂಬುದು ಕೃತಕರಾಳ. ಅದು ವಿನೈಲಿಡೀನ್ ಕ್ಲೋರೈಡ್ ಮತ್ತು ವಿನೈಲ್ ಕ್ಲೋರೈಡ್‍ನ ಸಹಪಾಲಿಮರ್ ಅಂಟು. ನೈಲಾನ್ ಮತ್ತು ಟೆರಿಲಿನ್‍ಗಳಂತೆ ಸಾರಾನ್ ಸಹ ಉಷ್ಣಲೇಪಕ ಸ್ವಭಾವವುಳ್ಳದ್ದು. ಅದು ಉಷ್ಣದಿಂದ ಅಂಟಿಕೊಳ್ಳುವ ವಸ್ತು. ಅದರ ಸಂಯೋಜನೆಗೆ ಬೇಕಾದ ವಸ್ತುಗಳು ಪೆಟ್ರೋಲಿಯಂ ಮತ್ತು ಲವಣ. ಸಾರನ್ ಕೃತಕರಾಳವನ್ನು ತಯಾರಿಕೆದಾರರಿಗೆ ಪುಡಿಯ ರೂಪದಲ್ಲಿ ಒದಗಿಸಲಾಗುತ್ತದೆ. ಈ ಪುಡಿಯನ್ನು ದ್ರಾವಣವಾಗುವಂತೆ ಕರಗಿಸುತ್ತಾರೆ. ದ್ರಾವಣವನ್ನು ನೂಲುರಾಟೆಯ ಮೂಲಕ ಹೊರಡಿಸುತ್ತಾರೆ. ರಾಟೆಯಿಂದ ಹೊರಟ ಎಳೆಗಳನ್ನು ನೀರಿನಲ್ಲಿಟ್ಟು ಗಟ್ಟಿಮಾಡಿ ಲಂಬಿಸಿ ಉರುಳೆಗಳಲ್ಲಿ ಸುತ್ತುತ್ತಾರೆ. ಸಾರಾನ್ ತಂತುಗಳನ್ನು ಪರಿಮಿತ ಮೊತ್ತದಲ್ಲಿ ಉತ್ಪಾದಿಸಿದರೂ ಅವುಗಳಲ್ಲಿ ಹೆಚ್ಚು ಭಾಗ ಒಂದೇ ಎಳೆಯ ದಾರಗಳಾಗಿರುತ್ತವೆ. ಸಾರಾನ್ ತಂತು ಬಿಸಿಲು ಮತ್ತು ಹವೆಯನ್ನು ತಡೆಯಬಲ್ಲುದು. ತೆರೆ ಮತ್ತು ಹೊರಾಂಗಣದ ಪೀಠೋಪಕರಣಗಳ ಬಟ್ಟೆ ತಯಾರಿಕೆಗೆ ಸಾರಾನ್ ತಂತು ಯೋಗ್ಯವಾಗಿದೆ. ಅದು ರಾಸಾಯನಿಕ ವಸ್ತುಗಳನ್ನು ಚೆನ್ನಾಗಿ ತಡೆಯುತ್ತದೆ ಹಾಗೂ ಬೆಂಕಿಗೆ ಹೊತ್ತಿಕೊಳ್ಳುವುದಿಲ್ಲ. ಟೆನಿಸ್ ಬ್ಯಾಟು, ನೇತುಹಾಕಲು ಉಪಯೋಗಿಸುವ ಸಾಧನಗಳು ಮೊದಲಾದವನ್ನು ಅದರಿಂದ ತಯಾರಿಸುತ್ತಾರೆ. ಕೀಟಗಳಿಂದ ಮತ್ತು ಏಕಾಣುಜೀವಿಗಳಿಂದ ಅದಕ್ಕೆ ಹಾನಿಯಿಲ್ಲ. ಸಾರಾನ್ ತಂತುವಿನ ಮತ್ತೊಂದು ಹೆಸರು ವೆಲಾನ್. ಅದರ ನಯವಾದ ಮತ್ತು ಕಾಂತಿಯುತವಾದ ಎಳೆಗಳನ್ನು ನೇಯಬಹುದು, ಹೆಣಿಗೆ ಹಾಕಬಹುದು ಹಾಗೂ ಹೊಸೆಯಬಹುದು. ಅದನ್ನು ಕಿಟಕಿ ತೆರೆಗಳಿಗೆ ಉಪಯೋಗಿಸುವ ಚಿತ್ತಾರದ ಅಲಂಕಾರ ಪಟ್ಟಿ ಅಥವಾ ಲೇಸ್, ಹೆಣೆದ ಮೇಜಿನ ಹಾಸುವಸ್ತ್ರ, ಹಡಗು ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸುವ ಹಗ್ಗ-ಇವನ್ನು ತಯಾರಿಸಲು ಉಪಯೋಗಿಸುತ್ತಾರೆ.

ಓಲಿಪಿನ್ ತಂತುಗಳು: ಈ ಬಗೆಯಲ್ಲಿ ಪ್ಯಾರಾಫಿನ್ ಆಧಾರಿತ ಪಾಲಿಎಥಿಲೀನ್ ಮತ್ತು ಪಾಲಿಪ್ರೊಪೈಲಿನ್ ಎಂಬ ಎರಡು ಮಾದರಿ ತಂತುಗಳಿವೆ. ಪಾಲಿಎಥಿಲೀನ್ ಎಂಬುದು ಒಂದು ಬಗೆಯ ಕೃತಕರಾಳ ಕಾವು ಮತ್ತು ಒತ್ತಡಕ್ಕೊಳಗಾದ ಎಥಿಲೀನ್ ಸಂಯೋಜನೆಯಿಂದ ಇದು ಸೃಜಿತವಾಗುತ್ತದೆ. ಅವಿಚ್ಛಿನ್ನವಾದ ಏಕ ಎಳೆಯ ಆಕಾರವನ್ನು ತಾಳುವಂತೆ ಈ ಕೃತಕ ರಾಳವನ್ನು ಕರಗಿಸಿ ರಾಟೆಯಿಂದ ಹೊರಡಿಸಿ ತಂಪುಗೊಳಿಸಲಾಗುವುದು. ಹೀಗೆ ರೂಪಗೊಂಡ ತಂತುಗಳು ಮೇಣದಂತೆ ಮೃದುವಾಗಿರುತ್ತವೆ. ಅವುಗಳಿಗೆ ಸ್ವಲ್ಪಮಟ್ಟಿಗೆ ಕಾವನ್ನು ನಿರೋಧಿಸುವ ಗುಣ ಉಂಟು. ಅವು ಉತ್ತಮ ಘರ್ಷಣ ನಿರೋಧಕಗಳು. ತೇಲುವ ಸ್ವಭಾವ ಅವುಗಳಿಗಿದೆ. ಇಂಥ ಗುಣಗಳಿರುವುದರಿಂದ ಈ ತಂತುಗಳು ಉಡುಪಿನ ತಯಾರಿಕೆಗೆ ಯೋಗ್ಯವಾಗಿಲ್ಲ. ಆದರೆ ಈ ತಂತುಗಳು ಬಿಸಿಲನ್ನು ನಿರೋಧಿಸುವುದರಿಂದ ತೆರೆ ಮತ್ತು ಪೀಠೋಪಕರಣಗಳ ಬಟ್ಟೆಗಳನ್ನು ತಯಾರಿಸಲು ಉಪಯುಕ್ತವಾಗಿದೆ. ಅವುಗಳಿಗೆ ರಾಸಾಯನಿಕ ವಸ್ತುಗಳನ್ನು ತಡೆಯುವ ಗುಣ ಇರುವುದರಿಂದ ಅವನ್ನು ಚೌರಿ, ಹುರಿ, ಹಗ್ಗ ಮತ್ತು ಬಲೆಗಳನ್ನು ತಯಾರಿಸಲು ಉಪಯೋಗಿಸಬಹುದು. ಸಾರಾನ್ ತಂತುಗಳೊಂದಿಗೆ ಹೋಲಿಸಿದರೆ ಈ ತಂತುಗಳ ತಯಾರಿಕೆಗೆ ಹೆಚ್ಚು ವೆಚ್ಚ ತಗಲುವುದಿಲ್ಲ. ವರ್ಣದ್ರವ್ಯಗಳನ್ನು ಉಪಯೋಗಿಸಿ ವಿವಿಧ ಬಣ್ಣಗಳಲ್ಲಿ ಈ ತಂತುಗಳನ್ನು ತಯಾರಿಸಬಹುದು. ಆದರೆ ಅವುಗಳಿಗೆ ಪ್ರತ್ಯೇಕವಾಗಿ ಬಣ್ಣ ಕಟ್ಟಲಾಗುವುದಿಲ್ಲ.

ಪ್ರಾಪಿಲಿನ್ ಅನಿಲ ಆಧಾರಿತ ಪಾಲಿಪ್ರಾಪಿಲಿನ್ ತಂತುಗಳನ್ನು ಪ್ರಪ್ರಥಮವಾಗಿ ಇಟಲಿಯಲ್ಲಿ ಬಟ್ಟೆ ತಯಾರಿಕೆಗಾಗಿ 1951ರಲ್ಲಿ ತಯಾರಿಸಿದರು. ಅದನ್ನು ಮಿರಕ್ಲಾನ್ ಎಂದು ಕರೆದರು. ಪಾಲಿಎಥಿಲೀನ್ ದಾರದಂತೆ ಇದು ಸಹ ಪ್ಯಾರಫಿನ್ ಮೇದಸ್ಸಿನ ಆಧಾರವುಳ್ಳ ತಂತು. ಅದನ್ನು ಓಲಿಫಿನ್ ತಂತುಗಳಿಗೆ ಸೇರಿದಂತೆ ವರ್ಗೀಕರಿಸಿದ್ದಾರೆ. ಪಾಲಿಎಥಿಲೀನ್ ತಂತುಗಳಿಗಿಂತ ಇದು ಪ್ರಸಿದ್ಧವಾಗಿರಲು ಕಾರಣಗಳಿವು: ಇದು ಹಗುರವಾದದ್ದು ಮತ್ತು ಗಟ್ಟಿಯಾದದ್ದು; ಇದು ಉಷ್ಣದ ಪ್ರಭಾವಕ್ಕೆ ಒಳಗಾಗುವುದಿಲ್ಲ; ಇದಕ್ಕೆ ಮೇಣದಂಥ ಜಿಡ್ಡು ಗುಣವಿಲ್ಲ, ಇದನ್ನು ಮಿತವೆಚ್ಚದಲ್ಲಿ ತಯಾರಿಸಬಹುದು; ಇದು ರಾಸಾಯನಿಕ ವಸ್ತುಗಳನ್ನು ಚೆನ್ನಾಗಿ ತಡೆಯವುದಲ್ಲದೆ ಬಲವಾಗಿಯೂ ಇದೆ; ಮಿರಕ್ಲಾನ್ ಬಿಸಿಲನ್ನು ನಿರೋಧಿಸುತ್ತದೆ ಹಾಗೂ ಇದು ಘರ್ಷಣ ನಿರೋಧಕ; ಇದರ ಕರಗುವ ಕ್ಷೀಣಶಕ್ತಿ, ಇದಕ್ಕೆ ಬಣ್ಣಕಟ್ಟುವ ಬಗ್ಗೆ ಇರುವ ತೊಂದರೆ, ವರ್ಣದ್ರವ್ಯಗಳನ್ನು ಉಪಯೋಗಿಸಿ ಬಣ್ಣದ ತಂತುಗಳನ್ನು ಉತ್ಪಾದಿಸಬಹುದಾದರೂ ಪ್ರತ್ಯೇಕವಾಗಿ ಇದಕ್ಕೆ ಬಣ್ಣ ಕಟ್ಟುವ ಸಂಬಂಧದಲ್ಲಿ ತೊಂದರೆ ಇವು ಮಿರಕ್ಲಾನ್ ತಂತುವಿನ ಪ್ರಮುಖ ಕೊರತೆಗಳು. ಇತ್ತೀಚೆಗೆ ಬಣ್ಣಕಟ್ಟಬಹುದಾದ ಈ ವರ್ಗಕ್ಕೆ ಸೇರಿದ ತಂತುವೊಂದನ್ನು ಸೃಜಿಸಿದ್ದಾರೆ.

ಪಾಲಿಪ್ರೊಪೈಲಿನ್ ಎಳೆಗಳನ್ನು ವಿದ್ಯುದವಾಹಕಪಟ್ಟಿ (ಇನ್ಸುಲೇಷನ್ ಟೇಪ್), ಹಗ್ಗ, ಮೀನುಬಲೆ, ಸಮವಸ್ತ್ರ ಮತ್ತು ವಿದ್ಯುಲ್ಲೇಪನ (ಎಲೆಕ್ಟ್ರೊಪ್ಲೇಟಿಂಗ್) ಕೈಗಾರಿಕೆಯಲ್ಲಿ ಉಪಯೋಗಿಸುವ ಅನೋಡ್ ಬ್ಯಾಗ್‍ಗಳೆಂಬ ಧನವಿದ್ಯುತ್ತಿನ ಧ್ರುವಚೀಲಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಅದರ ನವಿರೆಳೆಗಳನ್ನು ಸೂಟಿಂಗ್ ಬಟ್ಟೆ, ಹೆಣಿಗೆಯ ಉಡುಪು ಇತ್ಯಾದಿಗಳಿಗಾಗಿ ಉಪಯೋಗಿಸುವ ಸ್ವಾಭಾವಿಕ ಹಾಗೂ ಕೃತಕ ತಂತುಗಳೊಡನೆ ಸಂಯೋಜಿಸಲು ಬಳಸುತ್ತಾರೆ. ಅದನ್ನು ಪೀಠೋಪಕರಣಗಳ ಬಟ್ಟೆ ತಯಾರಿಕೆಗೂ ಉಪಯೋಗಿಸಬಹುದು.

ಕೃತಕ ತಂತುಗಳ ಮತ್ತು ವಸ್ತುಗಳ ತಯಾರಿಕೆ ಬೃಹದ್ರೂಪದಲ್ಲಿ ಸಾಗುತ್ತಿದ್ದರೂ ಈ ಕೈಗಾರಿಕೆಯ ಕ್ಷೇತ್ರ ಸೀಮಿತವಾದದ್ದು, ನೈಲಾನ್ ಸಂಯೋಜನೆಯಲ್ಲಿ ಕರೋಥೆರ್ಸ್ ವಿಜ್ಞಾನಿಯ ಅದ್ಭುತ ಸಾಧನೆ, ಆತನ ತರುವಾಯದ ಸಂಶೋಧಕರು ಟೆರಿಲಿನ್, ಡೈನೆಲ್ ಮೊದಲಾದ ವಸ್ತ್ರಗಳ ತಯಾರಿಕೆಯಲ್ಲಿ ಪಡೆದ ಯಶಸ್ಸು ಏನೇ ಆದರೂ ಈ ಕೃತಕ ವಸ್ತ್ರಗಳ ಕೈಗಾರಿಕೆಗೆ ಅಷ್ಟು ಪ್ರಾಮುಖ್ಯ ದೊರೆಯದು; ಎಲ್ಲ ಕೃತಕ ತಂತುಗಳಿಗೆ ಕೆಲವು ನಿರ್ದಿಷ್ಟ ಗುಣಗಳಿರುವುದರಿಂದ ಅವುಗಳ ತಯಾರಿಕೆದಾರರಿಗೆ ಅವುಗಳ ಹೊಸ ಪ್ರಯೋಜನಗಳೇನೆಂಬುದನ್ನು ಹುಡುಕಲು ಅವಕಾಶವಿದೆ. ಕೃತಕ ತಂತುಗಳು ಬಲಯುತವಾದವು, ಬಾಳಿಕೆ ಬರುವಂಥವು; ಅವು ರಾಸಾಯನಿಕ ಪದಾರ್ಥಗಳಿಂದ ಮತ್ತು ಕ್ರಿಮಿಕೀಟಗಳಿಂದ ನಾಶವಾಗುವುದಿಲ್ಲ. ಆದರೆ ಹತ್ತಿಯಂತೆ ತೇವವನ್ನು ಹೀರಿಕೊಳ್ಳುವ ಗುಣ ಅವುಗಳಿಗಿಲ್ಲ. ಅಲ್ಲದೆ ಅವುಗಳಿಗೆ ಹತ್ತಿ ಅಥವಾ ಉಣ್ಣೆಯಂತೆ ಸುಲಭವಾಗಿ ಬಣ್ಣ ಕಟ್ಟಲಾಗುವುದಿಲ್ಲ. ಸಂಯೋಜಿಸಲು ಸುಲಭವಾದ ತಂತುಗಳನ್ನು ಈ ವರೆಗೆ ರಾಸಾಯನಿಕ ತಜ್ಞರು ಕೃತಕವಾಗಿ ತಯಾರಿಸಿದ್ದಾರೆ. ಆದರೆ ಅವುಗಳಲ್ಲಿ ಯಾವುವೂ ನೈಸರ್ಗಿಕ ಎಳೆಗಳಂತಿಲ್ಲ. ಈ ಕಾರಣದಿಂದ ಜಲಗ್ರಾಹಕ ತಂತುಗಳನ್ನು ತಯಾರಿಸಲು ಸಂಶೋಧನೆಗಳು ನಡೆಯುತ್ತಿವೆ.

ಹೊಸ ಬಗೆಯ ಉತ್ತಮ ತಂತುಗಳ ತಯಾರಿಕೆಯಿಂದ ಹೆಚ್ಚು ಪ್ರಯೋಜನವಾಗುತ್ತಿದೆ. ವಿಶ್ವದ ಎಲ್ಲೆಡೆಗಳಲ್ಲೂ ಬಟ್ಟೆ ತಯಾರಿಕೆ ಕೈಗಾರಿಕೆಗಳಲ್ಲಿ ಕಾರ್ಮಿಕರ ಸ್ಥಿತಿಗತಿಗಳಲ್ಲಿ ಗಣನೀಯವಾದ ಬದಲಾವಣೆಗಳಾಗುತ್ತವೆ. ಕೃತಕ ತಂತುಗಳ ಉತ್ಪಾದನೆಯಲ್ಲಿನ ನವ ತಂತ್ರಗಳು ಬಹುಮಂದಿ ರಸಾಯನಶಾಸ್ತ್ರಜ್ಞರಿಗೆ, ಭೌತವಿಜ್ಞಾನಿಗಳಿಗೆ ಎಂಜಿನಿಯರುಗಳಿಗೆ ಹಾಗೂ ತಜ್ಞರಿಗೆ ಉದ್ಯೋಗಗಳನ್ನು ದೊರಕಿಸಿಕೊಟ್ಟಿವೆ. ಕೃತಕ ವಸ್ತ್ರ ತಯಾರಿಕೆಯ ಕೈಗಾರಿಕೆ ಬೆಳೆಯುತ್ತಿರುವುದರಿಂದ ಸಹಸ್ರಾರು ಕಾರ್ಮಿಕರ ಜೀವಿತದಲ್ಲಿ ನವಕ್ರಾಂತಿಯುಂಟಾಗಿದೆ. (ನೋಡಿ- ಎಳೆಗಳು) (ವಿ.ಎಸ್.ಟಿ.)