ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣರಾಯ, ಅ ನ

ವಿಕಿಸೋರ್ಸ್ದಿಂದ

ಅ.ನ.ಕೃಷ್ಣರಾಯ : - 1908-1971. ಅನಕೃ ಎಂಬ ಮೂರಕ್ಷರಗಳಿಂದ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಚಿರಪರಿಚಿತರಾದ ಇವರ ಪೂರ್ತ ಹೆಸರು ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಎಂದು. ಕೃಷ್ಣರಾಯರು 1908ರ ಮೇ 9ರಂದು ಜನಿಸಿದರು. ತಂದೆ ನರಸಿಂಗರಾಯರು; ತಾಯಿ ಅನ್ನಪೂರ್ಣಮ್ಮನವರು. ಪ್ರಾಥಮಿಕ ಮಾಧ್ಯಮಿಕ ಶಾಲೆಗಳ ಓದನ್ನು ಮುಗಿಸಿ ಕೃಷ್ಣರಾಯರು ಬೆಂಗಳೂರಿನ ದೇಶೀಯ ವಿದ್ಯಾಶಾಲೆಗೆ ಸೇರಿದರು. ಅಲ್ಲಿನ ವಾತಾವರಣ ಬಾಲಕ ಕೃಷ್ಣರಾಯರ ಆಸಕ್ತಿ-ವಿಚಾರಗಳನ್ನು ರೂಪಿಸುವಲ್ಲಿ ನೆರವಾಯಿತು. ರಾಷ್ಟ್ರೀಯ ಭಾವನೆಗಳ ಕೇಂದ್ರವಾಗಿತ್ತು, ಆ ಶಾಲೆ. ಅಲ್ಲಿ ಸಂಪದ್ಗಿರಿರಾಯರಂಥ, ಕಂದಾಡೆ ಕೃಷ್ಣಯ್ಯಂಗಾರರಂಥ ಅಧ್ಯಾಪಕರು ಶಿಷ್ಯರ ಹೃದಯ, ಮನಸ್ಸುಗಳನ್ನು ಕೆತ್ತುತ್ತಿದ್ದರು. ಕೃಷ್ಣರಾಯರಿಗೆ ಓದಿನ ಗೀಳು ಹತ್ತಿತು; ಗಾಂಧಿ ವಿವೇಕಾನಂದರ ಪರಿಚಯವಾಯಿತು; ಅವರ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದರು. ಶಾಲೆಯ ಓದಿಗೆ ಗಮನ ಕೊಡಲಿಲ್ಲವಾಗಿ ಆ ಕಾಲದ ಎಂಟ್ರೆನ್ಸ್ ಪರೀಕ್ಷೆಯನ್ನು ದಾಟುವುದು ಕೃಷ್ಣರಾಯರಿಗೆ ಸಾಧ್ಯವಾಗಲಿಲ್ಲ.

ತಂದೆ ನರಸಿಂಗರಾಯರಿಗೆ ನಾಟಕದ ಹುಚ್ಚು.. ಕರ್ನಾಟಕ ರಂಗಭೂಮಿಯ ಸ್ಥಾಪಕರಲ್ಲಿ ಅವರೂ ಒಬ್ಬರಾಗಿದ್ದರು. ಎ.ವಿ. ವರದಾಚಾರ್ಯರಂಥ ಶ್ರೇಷ್ಠ ಕಲಾವಿದರನ್ನು ಕಟ್ಟಿಕೊಂಡು ಅವರು ನಾಟಕ ಪ್ರದರ್ಶನಗಳಿಗಾಗಿ ಹವ್ಯಾಸೀ ಕ್ಲಬ್ ಒಂದನ್ನು ನಡೆಸುತ್ತಿದ್ದರು. ಇದರಿಂದ ಸಹಜವಾಗಿಯೇ ಕೃಷ್ಣರಾಯರಿಗೆ ಎಳವೆಯಿಂದಲೂ ರಂಗಭೂಮಿಯ ಪರಿಚಯವಾಯಿತು. ವರದಾಚಾರ್ಯರ ನಾಟಕಗಳನ್ನು ಇವರು ತಪ್ಪದೆ ನೋಡುತ್ತಿದ್ದರು. ಆ ನಟಸಾರ್ವಭೌಮರ ಅಭಿನಯಕ್ಕೆ ಕೃಷ್ಣರಾಯರು ಮಾರುಹೋದರು. ಆ ಕಾಲದಲ್ಲಿ ರಂಗದ ಮೇಲೆ ಬರುತ್ತಿದ್ದ ನಾಟಕಗಳೆಲ್ಲ ಪೌರಾಣಿಕ ವಸ್ತುವನ್ನು ಅವಲಂಬಿಸಿರುತ್ತಿದ್ದುವು. ಅಪರೂಪವಾಗಿ ಐತಿಹಾಸಿಕ ಪ್ರಸಂಗಗಳೂ ನಾಟಕರೂಪ ತಾಳುತ್ತಿದ್ದವು. ಈ ನಾಟಕಗಳು ಹದಿಹರಯದ ಕೃಷ್ಣರಾಯರಿಗೆ ಕಂದಾಚಾರದ ನಾಟಕಗಳಾಗಿ ಕಂಡವು. ತಮ್ಮ ಸುತ್ತಣ ಸಮಾಜದ ಸಮಸ್ಯೆಗಳು ಸಂಗತಿಗಳು ಏಕೆ ರಂಗದ ಮೇಲೆ ಬರಬಾರದು ಎಂಬ ಪ್ರಶ್ನೆ ಇವರನ್ನು ಕಾಡುತ್ತಿತ್ತು. ಒಂದು ಸಲ ಇವರು ವರದಾಚಾರ್ಯರಿಗೆ ಈ ಪ್ರಶ್ನೆ ಹಾಕಿದರು. "ಅಂಥ ನಾಟಕಗಳÀನ್ನು ಯಾರು ಬರೆಯುತ್ತಾರೆ?" ಎಂದು ಆಚಾರ್ಯರು ನಿರಾಶೆಯಿಂದ ಕೇಳಿದರು. ಕೃಷ್ಣರಾಯರು ಮರುದಿನವೇ ತಾವು ಅಂಥ ನಾಟಕವೊಂದನ್ನು ಬರೆದು ಕೊಡುವುದಾಗಿ ಹೇಳಿ ಆಚಾರ್ಯರನ್ನು ತಬ್ಬಿಬ್ಬು ಮಾಡಿದರು. ಅಷ್ಟೇ ಅಲ್ಲ, ಅಂದು ಇಡೀ ರಾತ್ರಿ ಕುಳಿತು ಒಂದು ನಾಟಕ ಬರೆದು ಬೆಳಗ್ಗೆ ಅದನ್ನು ಆಚಾರ್ಯರ ಕೈಯಲ್ಲಿಟ್ಟರು. ಅದೊಂದು ಸಾಮಾಜಿಕ ನಾಟಕ. ಅದರ ಹೆಸರು-ಮದುವೆಯೋ ಮನೆ ಹಾಳೋ ಎಂದು. ಅದು ಕೃಷ್ಣರಾಯರ ಮೊದಲ ಕೃತಿ (1924). ಅದರೊಂದಿಗೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೊಸ ಅಧ್ಯಾಯವೊಂದು ತೊಡಗಿತು. ಕೃಷ್ಣರಾಯರು ಹೀಗೆ ನಾಟಕಕಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಟ್ಟು ಮುಂದೆ ಹತ್ತಿರ ಹತ್ತಿರ ಅರ್ಧ ಶತಮಾನ, ಕಾವ್ಯವೊಂದನ್ನು ಬಿಟ್ಟು ಮಿಕ್ಕ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೆಲಸ ಮಾಡಿ, ಪ್ರಭಾವಶಾಲಿಯಾಗಿ ಖ್ಯಾತಿಗಳಿಸಿದರು.

ಕೃಷ್ಣರಾಯರು ಸುಮಾರು 190 ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 112 ಕಾದಂಬರಿಗಳು; 9 ಕಥಾಸಂಗ್ರಹಗಳು, 24 ನಾಟಕಗಳು; 24 ವಿಮರ್ಶೆ ಹಾಗೂ ಪ್ರಬಂಧ ಸಂಕಲನಗಳು; 9 ಜೀವನ ಚರಿತ್ರೆಗಳು; 3 ಅನುವಾದಗಳು; 9 ಸಂಪಾದಿತ ಗ್ರಂಥಗಳು. ಇವುಗಳಲ್ಲಿ ನಾಲ್ಕೈದು ಕೃತಿಗಳು ಇನ್ನೂ ಪ್ರಕಟವಾಗಬೇಕಾಗಿವೆ. ಹೀಗೆ ನಾನಾ ಪ್ರಕಾರಗಳಲ್ಲಿ ಕೃಷ್ಣರಾಯರು ದುಡಿದಿದ್ದರೂ ಕಾದಂಬರಿಕಾರರೆಂದೇ ಇವರು ಪ್ರಸಿದ್ಧರಾಗಿದ್ದಾರೆ. ಇವರ ಕಾದಂಬರಿಗಳಲ್ಲಿ ಹದಿನೈದನ್ನು ಬಿಟ್ಟರೆ ಉಳಿದವೆಲ್ಲ ಸಾಮಾಜಿಕ ಕಾದಂಬರಿಗಳು. ಈ ಕಾದಂಬರಿಗಳಲ್ಲಿವರು ಸಮಕಾಲೀನ ಜೀವನದ ಬೇರೆ ಬೇರೆ ಮುಖಗಳನ್ನು ತೋರಿಸಿದ್ದಾರೆ. ಕಲಾವಿದರ ಸಮಸ್ಯೆಗಳು, ಆಧುನಿಕ ವಿದ್ಯಾಭ್ಯಾಸದ ಪರಿಣಾಮ, ಭಾರತೀಯ ಸಂಸ್ಕøತಿಯ ಮೌಲ್ಯಗಳ ಮಹತ್ತ್ವ, ಅವಿಭಕ್ತಕುಟುಂಬ ಜೀವನ, ಒಡೆಯುತ್ತಿರುವ ಬದುಕು, ವೇಶ್ಯಾ ಸಮಸ್ಯೆ, ಲಂಚಗುಳಿತನ, ಸ್ತ್ರೀಸ್ವಾತಂತ್ರ್ಯ, ಜೈಲುಗಳ ಸುಧಾರಣೆ, ದಾಂಪತ್ಯವಿಚ್ಚೇದನ, ಜಾತೀಯತೆಯ ಭೂತ, ರಾಜಕೀಯ ದೊಂಬರಾಟ, ಪವಿತ್ರ ಪ್ರೇಮ, ಕೊಳಚೆಯ ಕಾಮ, ಪಾನನಿರೋಧದ ಸಮಸ್ಯೆ, ಶ್ರೀಮಂತಿಕೆಯ ಡೌಲು, ಬಡತನದ ದಾರುಣತೆ, ಪೂರ್ವಪಶ್ಚಿಮಗಳ ಸಂಗಮ, ಧಾರ್ಮಿಕತೆಯ ಸೋಗು, ಆಡಳಿತದ ಅಬ್ಬರ ಆರ್ಭಟಗಳು, ಸ್ವಾತಂತ್ರ್ಯದ ಕೆಚ್ಚು, ಬದುಕಿನ ಮೇಲೆ ವಿಜ್ಞಾನದ ಪ್ರಭಾವ-ಹೀಗೆ ನಾನಾ ಸಂಗತಿಗಳನ್ನು ಕುರಿತು ಕೃಷ್ಣರಾಯರು ವಿಚಾರ ಮಾಡಿದ್ದಾರೆ. ತಮ್ಮ ವಿಚಾರಗಳನ್ನು ಪ್ರತಿಪಾದಿಸಲು ಇವರು ಕಾದಂಬರಿಯನ್ನು ಬಳಸಿಕೊಂಡರು. ತಮ್ಮ ಕಥನಕೌಶಲ, ನಿರರ್ಗಳವಾದ ಶೈಲಿ, ಸಂಭಾಷಣೆಯ ಚಾತುರ್ಯ ಇವುಗಳಿಂದ ಇವರು ತಮ್ಮ ಓದುಗರನ್ನು ಸೆರೆಹಿಡಿದರು; ತಮ್ಮ ಕಾಲದ ಅತ್ಯಂತ ಜನಪ್ರಿಯ ಲೇಖಕ ಎನ್ನಿಸಿಕೊಂಡರು.

ತಮ್ಮ ಬರವಣಿಗೆಯ ಆರಂಭಕಾಲದಲ್ಲಿ ಕೃಷ್ಣರಾಯರು ರಚಿಸಿದ, ಕಲಾವಿದರ ಜೀವನವನ್ನು ಕುರಿತ ಸಂಧ್ಯಾರಾಗ, ಉದಯರಾಗ, ಸಾಹಿತ್ಯರತ್ನ, ನಟಸಾರ್ವಭೌಮ ಮೊದಲಾದ ಕಾದಂಬರಿಗಳೇ ಇವರ ಶ್ರೇಷ್ಠ ಕೃತಿಗಳೆಂದು ಪರಿಗಣಿತವಾಗಿವೆ. ಇವರ ಮುಂದಿನ ಬರಹಗಳಲ್ಲಿ ಗಾತ್ರದ ಪ್ರಮಾಣವನ್ನು ಗುಣ ಕಾಯ್ದುಕೊಳ್ಳುವುದು ಸಾಧ್ಯವಾಗಲಿಲ್ಲ. ಅವರ ಪಾತ್ರಗಳಲ್ಲಿ ವೈವಿಧ್ಯದ ಬಲವಿಲ್ಲದಿರುವುದೇ ಒಂದು ದೋಷ. ಬೇರೆ ಬೇರೆ ಸಂದರ್ಭಗಳಿಗೆ, ಸಂಗತಿಗಳಿಗೆ, ಸಮಸ್ಯೆಗಳಿಗೆ ಬೇಕಾದ ಬೇರೆ ಬೇರೆ ಪಾತ್ರಗಳು ಅನಕೃ ಅವರ ಕುಲುಮೆಯಲ್ಲಿ ಕರಗಿ ಹೋಗಿ ತಮ್ಮತನಗಳನ್ನು ಕಳೆದುಕೊಂಡು ಸಾಧಾರಣೀಕೃತರಾಗಿಬಿಡುತ್ತಾರೆ. ಅವರ ಯಾವುದೇ ಕಾದಂಬರಿಯನ್ನು ಎತ್ತಿಕೊಂಡರೂ ಅಲ್ಲಿನ ಪಾತ್ರಗಳನ್ನು ಇನ್ನೆಲ್ಲಿಯೋ ನೋಡಿದ್ದೇವಲ್ಲ ಎನ್ನಿಸಿಬಿಡುತ್ತದೆ. ಸಮಕಾಲೀನ ಜೀವನಸಮಸ್ಯೆಗಳ ವಿಸ್ತಾರವನ್ನು, ವಿವಿಧ ಪರಿಗಳನ್ನು ಅನಕೃ ವಿವರವಾಗಿ ಗುರುತಿಸಿ, ವರ್ಣಿಸಲು ಸಮರ್ಥರಾಗಿದ್ದರೂ ಸಾಹಿತ್ಯ ಚರಿತ್ರೆಯಲ್ಲಿ ಅವರ ಹೆಸರು ಅವರ ಮೊದಲ ಕೃತಿಗಳಿಂದಲೇ ನಿಲ್ಲಬೇಕಾಗುತ್ತದೆಂಬುದು ಸಮಕಾಲೀನ ಸಾಹಿತ್ಯದ ಒಂದು ಸೋಜಿಗವಾಗಿದೆ. ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಕನ್ನಡ ಕಾದಂಬರಿಕಾರರಲ್ಲಿ ಅನಕೃ ಇಂದಿಗೂ ಅದ್ವಿತೀಯರು ಎಂಬುದಾಗಿ ವಿಮರ್ಶಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಕೃಷ್ಣರಾಯರ ಕೊನೆಕೊನೆಯ ಕಾದಂಬರಿಗಳಂತೂ ಬರವಣಿಗೆಯ ಯಾಂತ್ರಿಕತೆಯಿಂದ ತುಂಬ ಜಾಳುಜಾಳಾಗಿ ಹೋಗಿವೆ.

ನಗ್ನಸತ್ಯ, ಶನಿಸಂತಾನ, ಸಂಜೆಗತ್ತಲು ಮೊದಲಾದ ಕಾದಂಬರಿಗಳಲ್ಲಿ ಕೃಷ್ಣರಾಯರು ಸೂಳೆಯ ಜೀವನವನ್ನೂ ಆ ಜೀವನದ ಸಮಸ್ಯೆಗಳನ್ನೂ ಚಿತ್ರಿಸಿದ್ದಾರೆ. ಆ ಕಾದಂಬರಿಗಳು ಪ್ರಕಟವಾದಾಗ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಕೋಲಾಹಲವಾಯಿತು. ಕೃಷ್ಣರಾಯರ ಮೇಲೆ ಅಶ್ಲೀಲತೆಯ ಆರೋಪ ಬಂತು. ಆಗ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಸಾಹಿತ್ಯ ಮತ್ತು ಕಾಮಪ್ರಚೋದನೆ ಎಂಬ ದೊಡ್ಡ ಗ್ರಂಥವನ್ನೇ ಬರೆಯಬೇಕಾಯಿತು. ಈ ಕಾದಂಬರಿಗಳಲ್ಲಿ ಸೂಳೆಯ ದು:ಖಕ್ಕಿಂತ ಸುಖವೇ ಹೆಚ್ಚಾಗಿ ವರ್ಣಿತವಾಗಿದೆಯೆಂಬುದಂತೂ ನಿಜ. ಗೃಹಲಕ್ಷ್ಮಿ, ರುಕ್ಮಿಣಿ ಮೊದಲಾದ ಕಾದಂಬರಿಗಳಲ್ಲಿ ಇವರು ಭಾರತೀಯ ಸ್ತ್ರೀಯನ್ನು ಆ ಸಂಸ್ಕøತಿಯ ಪ್ರತೀಕವನ್ನಾಗಿ ಚಿತ್ರಿಸಿದ್ದಾರೆ. ಅವುಗಳಲ್ಲಿ ಬರುವ ಸಮಾಜ ಜೀವನದ ಚಿತ್ರಣದಲ್ಲಿ ಕಥೆಯನ್ನು ಭಾವುಕತೆಯೇ ಆಳುವಂತೆ ತೋರುತ್ತದೆ. ಯಾವುದೇ ಪಾತ್ರಗಳನ್ನು ನಿರ್ಮಿಸುವಲ್ಲಿ ಕೃಷ್ಣರಾಯರಿಗೆ ಒಳ್ಳೆಯ ಹಾಗೂ ಕೆಟ್ಟ ತುದಿಗಳು ಮಾತ್ರ ತಿಳಿದಿವೆ. ಬಹುಪಾಲು ಜೀವನ ಈ ಎರಡರ ನಡುವೆ ಇದೆ ಎಂಬುದನ್ನು ಇವರು ಸಾಮಾನ್ಯವಾಗಿ ಲಕ್ಷಿಸುವುದಿಲ್ಲ. ಕಲಾವಿದರಾಗಿ ಇವರ ಸೋಲಿಗೆ ಈ ದೃಷ್ಟಿಯೂ ಒಂದು ಕಾರಣವಿರಬಹುದು. ಕೃಷ್ಣರಾಯರ ಐತಿಹಾಸಿಕ ಕಾದಂಬರಿಗಳಲ್ಲಿ ಬಹುಪಾಲು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದವು. ಬೆಂಗಳೂರು ಕೆಂಪೇಗೌಡನನ್ನೂ ಕಿತ್ತೂರು ಚೆನ್ನಮ್ಮನನ್ನೂ ಕುರಿತು ಇವರು ಒಂದೊಂದು ಕಾದಂಬರಿಯನ್ನು ಬರೆದಿದ್ದಾರೆ.

ಇವರ ಸಣ್ಣ ಕಥೆ ಮತ್ತು ನಾಟಕಗಳಲ್ಲಿಯೂ ಕಾದಂಬರಿಯ ವಸ್ತುಗಳೇ ಅನೇಕ ಸಲ ಕಾಣಿಸಿಕೊಳ್ಳುತ್ತವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ತರುಣದಲ್ಲಿ ತೀವ್ರವಾಗಿ ಉದ್ಭವಿಸಿದ ಕೋಮುವಾರು ಗಲಭೆಗಳಿಗೆ ಸಂಬಂಧಿಸಿದಂತೆ ಇವರು ಬರೆದ ಕಥೆಯೊಂದು ಸರ್ಕಾರದ ಬಹಿಷ್ಕಾರಕ್ಕೆ ಒಳಗಾಗಿತ್ತು. ಇವರ ಕೆಲವು ನಾಟಕಗಳು ರಂಗಭೂಮಿಯ ಮೇಲೂ ಯಶಸ್ವಿಯಾಗಿವೆ. ಸಂಧ್ಯಾರಾಗ ಕಾದಂಬರಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದೆ.

ಕೃಷ್ಣರಾಯರ ವಿಮರ್ಶಾತ್ಮಕ ಪ್ರಬಂಧಗಳು ಹಲವು ಸಂಪುಟಗಳಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ-ನಾಟಕಕಲೆ, ಸಜೀವ ಸಾಹಿತ್ಯ, ಸಮದರ್ಶನ, ಸಂಸ್ಕøತಿಯ ವಿಶ್ವರೂಪ, ಸಾಹಿತ್ಯ ಮತ್ತು ಜೀವನ, ಸಾಹಿತ್ಯ ಮತ್ತು ಯುಗಧರ್ಮ-ಮೊದಲಾದವು ಉಲ್ಲೇಖನೀಯವಾಗಿವೆ. ಕನ್ನಡದ ದಾರಿ, ಅಖಂಡ ಕರ್ಣಾಟಕ, ಕರ್ಣಾಟಕದ ಹಿತಚಿಂತನೆ, ಬಳ್ಳಾರಿ ಸಮಸ್ಯೆ-ಮೊದಲಾದ ಗ್ರಂಥಗಳಲ್ಲಿ ಕೃಷ್ಣರಾಯರು ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕøತಿಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಚರ್ಚಿಸಿದ್ದಾರೆ; ತಮ್ಮದೇ ಆದ ಸಲಹೆ ಸೂಚನೆಗಳನ್ನು ಮಂಡಿಸಿದ್ದಾರೆ. ಕರ್ಣಾಟಕದ ಕಲಾವಿದರು ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಕನ್ನಡ ನಾಡಿನ ಕಲಾವಿದರನೇಕರ ಸಾಧನೆ ಸಿದ್ಧಿಗಳನ್ನು ನಿರೂಪಿಸಿ, ಕರ್ಣಾಟಕದ ಕಲಾಶ್ರೀಮಂತಿಕೆ ಯಾವ ಬಗೆಯದೆಂಬುದನ್ನು ವಿವೇಚಿಸಿದ್ದಾರೆ. ಅಷ್ಟಾಗಿ ಬೆಳಕಿಗೆ ಬಾರದ ಕಲಾವಿದರ ಸಾಧನೆಗಳನ್ನೂ ಗಮನಿಸಿ ಅವರನ್ನು ನಾಡವರ ಕಣ್ಣಿಗೆ ಬೀಳುವಂತೆ ಮಾಡಿದ್ದು ಕೃಷ್ಣರಾಯರ ಹೆಚ್ಚುಗಾರಿಕೆ. ಕನ್ನಡ ಕುಲರಸಿಕರು ಎಂಬ ಗ್ರಂಥದಲ್ಲಿ ಪ್ರಖ್ಯಾತರಾದ ಕನ್ನಡ ಲೇಖಕರು, ವಿದ್ವಾಂಸರು, ಸಂಶೋಧಕರ ವ್ಯಕ್ತಿಚಿತ್ರಗಳಿವೆ. ವೀರಶೈವ ಸಾಹಿತ್ಯ ಮತ್ತು ಸಂಸ್ಕøತಿ, ಬಸವಣ್ಣನವರ ಅಮೃತವಾಣಿ ಮೊದಲಾದ ಗ್ರಂಥಗಳು ವೀರಶೈವ ಸಾಹಿತ್ಯದಲ್ಲಿ ಇವರಿಗಿದ್ದ ಪ್ರವೇಶವನ್ನು ಸೂಚಿಸುತ್ತವೆ. ಕೃಷ್ಣರಾಯರು ಕಲಾವಿಮರ್ಶಕರೂ ಆಗಿದ್ದರು. ರವಿವರ್ಮನ ಕೃತಿಗಳನ್ನು ಭಾರತೀಯ ಚಿತ್ರಕಲೆಯಲ್ಲಿ ರಾಜಾ ರವಿವರ್ಮನ ಸ್ಥಾನ ಎಂಬ ಗ್ರಂಥದಲ್ಲಿ ಸವಿಸ್ತಾರವಾಗಿ ವಿಮರ್ಶಿಸಿದ್ದಾರೆ. ಕನ್ನಡದಲ್ಲಿ ಈ ಬಗೆಯ ಕೃತಿ ಇಂದಿಗೂ ಹೊಸದೆ. ಚಿತ್ರಕಲೆ ಎಂಬುದು ಇಂಥದೇ ಇನ್ನೊಂದು ಗ್ರಂಥ. ಗಾಂಧಿ, ವಿವೇಕಾನಂದ, ಬಸವೇಶ್ವರ, ಕಬೀರ್ ಮೊದಲಾದವರ ಜೀವನ ಚರಿತ್ರೆಗಳನ್ನು ಕೃಷ್ಣರಾಯರು ರಚಿಸಿದ್ದಾರೆ. ನನ್ನನ್ನು ನಾನೇ ಕಂಡೆ ಎನ್ನುವುದು ಸ್ವಯಂ ಸಂದರ್ಶನಗಳನ್ನೊಳಗೊಂಡ ಗ್ರಂಥ. ಇದರಲ್ಲಿ ಇವರು ತಮ್ಮ ವಿಚಾರಗಳನ್ನು ವಿನೂತನವಾಗಿ ನಿರೂಪಿಸಿದ್ದಾರೆ. ಬರಹಗಾರನ ಬದುಕು ಎನ್ನುವುದು ಇವರ ಆತ್ಮಕಥೆ. ಇದನ್ನು ಇವರು ದಿನಪತ್ರಿಕೆಯೊಂದರ ವಾರದ ಪುರವಣಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರು. ಈಚೆಗೆ ಇದು ಪುಸ್ತಕರೂಪದಲ್ಲಿಯೂ ಪ್ರಕಟವಾಗಿದೆ. ಎರಡು ಸಂಪುಟಗಳಲ್ಲಿ ಗಾರ್ಕಿಯ ಕಥೆಗಳನ್ನೂ ಭಾರತದ ಕಥೆ (ದಿ ಸ್ಟೋರಿ ಆಫ್ ಇಂಡಿಯ) ಎಂಬ ಪುಸ್ತಕವನ್ನೂ ಇವರು ಅನುವಾದಿಸಿದ್ದಾರೆ. ಸುಮಾರು ಹತ್ತು ಪುಸ್ತಕಗಳನ್ನು ಕೃಷ್ಣರಾಯರು ಸಂಪಾದಿಸಿ ಪ್ರಕಟಿಸಿದ್ದಾರೆ. ಕನ್ನಡದ ಕಥೆಗಳನ್ನೂ ಪ್ರೇಮಗೀತೆಗಳನ್ನೂ ಪ್ರಾತಿನಿಧಿಕವಾಗಿ ಆಯ್ದು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮ್ಯಾಕ್ಸಿಂ ಗಾರ್ಕಿಯ ಬಗೆಗೆ ಇವರು ಸಂಪಾದಿಸಿರುವ ಗ್ರಂಥ ವಿಶಿಷ್ಟ ರೀತಿಯದಾಗಿದೆ. ಬಸವೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿಯರನ್ನು ಕುರಿತು ಕೃಷ್ಣರಾಯರು ಇಂಗ್ಲಿಷಿನಲ್ಲಿಯೂ ಬರೆದಿದ್ದಾರೆ.

ಕೃಷ್ಣರಾಯರು ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರವರ್ತಕರು. ಇವರು ತಮ್ಮ ಧ್ಯೇಯಸಾಧನೆಗಾಗಿ ಒಂದು ಗುಂಪನ್ನೇ ಕಟ್ಟಿದರು; ಹೊಸ ಲೇಖಕರ ಒಂದು ಪಡಯನ್ನೇ ನಿರ್ಮಿಸಿದರು; ಉತ್ಸಾಹ ಉದ್ವೇಗಗಳಿಂದ ಸಾಹಿತ್ಯಕ್ಕೆ ಹೊಸ ತಿರುವು ತಂದು ಕೊಟ್ಟರು. ಈ ಚಳವಳಿ ಕೇವಲ ಚಳವಳಿಯಾಗಿ ಉಳಿಯಿತೇ ವಿನಾ ಪರಂಪರೆಯಾಗಲಿಲ್ಲ, ಪರಂಪರೆಯ ಭಾಗವಾಗಲಿಲ್ಲ. ಆದರೆ ಇದಕ್ಕೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ವಿಶೇಷ ಸ್ಥಾನವಿದೆಯೆಂಬುದನ್ನು ಮರೆಯುವ ಹಾಗಿಲ್ಲ. ಕೃಷ್ಣರಾಯರು ಬೆಳಕಿಗೆ ತಂದ ಲೇಖಕರಲ್ಲಿ ಒಬ್ಬಿಬ್ಬರಾದರೂ ಕನ್ನಡದಲ್ಲಿ ಇಂದು ಮಹತ್ತ್ವದ ಹೆಸರು ಪಡೆದಿದ್ದಾರೆ; ವಿಶಿಷ್ಟವಾದ ಕೆಲಸ ಮಾಡಿದ್ದಾರೆ.

ಕೃಷ್ಣರಾಯರು ಪತ್ರಿಕೋದ್ಯಮ, ಚಲನಚಿತ್ರೋದ್ಯಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದರು. ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಗಳಿಗೆ ಇವರು ಕೆಲಕಾಲ ಸಂಪಾದಕರಾಗಿದ್ದರು. ಕಥಾಂಜಲಿ, ವಿಶ್ವವಾಣಿ ಎಂಬ ಪತ್ರಿಕೆಗಳನ್ನು ಇವರೇ ಪ್ರಕಟಿಸುತ್ತಿದ್ದರು. ಉದ್ದೇಶ, ವಿನ್ಯಾಸಗಳಲ್ಲಿ ಆ ಪತ್ರಿಕೆಗಳು ಇಂದಿಗೂ ಆದರ್ಶಪ್ರಾಯವಾಗಿವೆ. ಕೆಲವು ಕನ್ನಡ ಚಲನಚಿತ್ರಗಳ ನಿರ್ಮಾಣದೊಂದಿಗೂ ಇವರ ಸಂಪರ್ಕವಿತ್ತು. ಕೃಷ್ಣರಾಯರು ನಡೆಸಿದ ಸಾಹಿತ್ಯಕ ಜಗಳಗಳಿಗೆ ಲೆಕ್ಕವಿಲ್ಲ. ತಮ್ಮನ್ನು ಹಲವು ಕಾಳಗಗಳ ಕಲಿ ಎಂದು ತಾವೇ ಒಂದು ಕಡೆ ವರ್ಣಿಸಿಕೊಂಡಿದ್ದಾರೆ. ಕನ್ನಡದ ಬಗೆಗೆ ಯಾರಿಂದಲೇ ಆಗಲಿ, ಯಾವುದೇ ಮೂಲೆಯಿಂದಾಗಲಿ ಅಪಸ್ವರ ಬಂದಾಗ ಕೃಷ್ಣರಾಯರು ಗರ್ಜಿಸುತ್ತಿದ್ದರು. ತಮ್ಮ ಸ್ವಂತ ವಿಚಾರಗಳನ್ನು ಪ್ರತಿಪಾದಿಸಲು ಇವರು ಯಾವಾಗಲೂ ಹಿಂದೆ ಮುಂದೆ ನೋಡಿದವರಲ್ಲ. ಇವರ ಕನ್ನಡ ಅಭಿಮಾನ ಅಪೂರ್ವವಾದದ್ದು. ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ; ಆದರೆ ನನಗಿರುವುದು ಒಂದೇ ಕನ್ನಡ ಎನ್ನುವುದು ಇವರದೇ ಒಂದೇ ಮಾತು. ಕನ್ನಡ ನಾಡಿನ ಏಕೀಕರಣಕ್ಕಾಗಿ, ಏಕೀಕೃತ ನಾಡಿನ ಸರ್ವಾಂಗೀಣ ಪ್ರಗತಿಗಾಗಿ ಇವರು ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು. ನಾಡಿನ ಉದ್ದಗಲಗಳಲ್ಲೆಲ್ಲ ಸಂಚರಿಸಿ ಜಾಗೃತಿಯ ಜಯಘಂಟೆಯನ್ನು ಬಾರಿಸಿದರು; ನಾಡಿನ ಹೊರಗೂ ಸಂಚರಿಸಿ ಕನ್ನಡ ಸಾಹಿತ್ಯಕ ಸಾಂಸ್ಕøತಿಕ ಹಿರಿಮೆಯ ಜಯಘೋಷ ಮಾಡಿದರು. ಕೃಷ್ಣರಾಯರು ಶುದ್ಧ ಕನ್ನಡಿಗರು; ವೀರ ಕನ್ನಡಿಗರು. ಕನ್ನಡಿಗರ ಆತ್ಮಾಭಿಮಾನವನ್ನು ಇವರ ಹಾಗೆ ಉಕ್ಕಿಸಿದವರು ಹಲವರಿಲ್ಲ.

ಕೃಷ್ಣರಾಯರು ದೊಡ್ಡ ಪ್ರಮಾಣದಲ್ಲಿ ತಮ್ಮ ಜನರ ಪ್ರೀತಿವಿಶ್ವಾಸಗಳನ್ನು ಪಡೆದಿದ್ದರು. ಸಾಹಿತಿಯಾಗಿ, ವಾಗ್ಮಿಯಾಗಿ ಜನಪ್ರಿಯತೆಯ ಶಿಖರವನ್ನೇರಿದ್ದರು. ಮಣಿಪಾಲದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನಿತ್ತು ಗೌರವಿಸಿತ್ತು. ಮೈಸೂರು ರಾಜ್ಯದ ಸಾಹಿತ್ಯ ಅಕಾಡಮಿಗೆ ಇವರು ಮೊದಲ ಅಧ್ಯಕ್ಷರಾಗಿದ್ದರು. (ನೋಡಿ- ಪ್ರಗತಿಶೀಲ-ಸಾಹಿತ್ಯ)

              (ಎಚ್.ಎಂ.ಎನ್.)

ಈಚೆಗಿನ ವರ್ಷಗಳಲ್ಲಿ ಕೃಷ್ಣರಾಯರ ಕಾದಂಬರಿಗಳೇ ಆಸಕ್ತಿ ಮತ್ತೆ ಕಾಣಬರುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಇವರ ಕಾದಂಬರಿಗಳು ಮತ್ತೆ ಪ್ರಕಟವಾಗಿವೆ. `ಸಾಹಿತ್ಯ ಮತ್ತು ಕಾಮ ಪ್ರಚೋದನೆ ಯಂಥ ಕೃತಿಯೂ ಮತ್ತೆ ಮಾರುಕಟ್ಟೆಗೆ ಬಂದಿದೆ.

ಈಚೆಗಿನ ವರ್ಷಗಳಲ್ಲಿ ಕೃಷ್ಣರಾಯರ ಕಾದಂಬರಿಗಳನ್ನು ವಿಮರ್ಶಕರು ಹೊಸ ದೃಷ್ಟಿಯಿಂದ ಕಾಣುತ್ತಿದ್ದಾರೆ. ಭಾರತದಲ್ಲಿ ಮೊದಲಿನಿಂದ ಕುಟುಂಬವು ಸಮುದಾಯದ ಬದುಕಿನ ಅಸ್ತಿಭಾರ. ಕುಟುಂಬ ಜೀವನಕ್ಕೆ ಭಾರತೀಯರು ವಿಶೇಷ ಮಹತ್ವವನ್ನು ನೀಡುತ್ತಾ ಬಂದಿದ್ದಾರೆ. ಆದರೆ ಕೈಗಾರಿಕಾಕರಣದಿಂದ ಹಳ್ಳಿಯ ಜನರು ನಗರಕ್ಕೆ ನೆಲೆಸಲು ಹೋಗುವುದು, ಪಾಶ್ಚಾತ್ಯ ಜೀವನ ರೀತಿಯ ಪ್ರಭಾವ-ಇವುಗಳಿಂದ ಕುಟುಂಬವು ಸಡಿಲವಾಗುತ್ತ ಬಂದಿದೆ. ಅವಿಭಕ್ತ ಕುಟುಂಬಗಳು ಒಡೆಯುತ್ತಿವೆ. ಅನಕೃ ಸಮಾಜದ ಇಂಥ ಸಂಧಿ ಕಾಲವನ್ನು ಚಿತ್ರಿಸುತ್ತಾರೆ. ಹೊಸ ಮೌಲ್ಯಗಳ ಪ್ರಖರತೆಯಿಂದ ಹಳೆಯ ಮೌಲ್ಯಗಳು ಬಾಡುತ್ತ, ಶಕ್ತಿಗುಂದುತ್ತಿರುವುದನ್ನು ಚಿತ್ರಿಸುತ್ತಾರೆ.

ಪ್ರಗತಿಶೀಲ ಸಾಹಿತ್ಯ ಚಳವಳಿಯ ನಾಯಕರಾಗಿ ಅನಕೃ ಸಾಹಿತ್ಯವನ್ನು ಕುರಿತು ಹಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದರು. ಲೇಖಕ-ಸಮಾಜಗಳ ಸಂಬಂಧ, ಲೇಖಕನ ಸಾಮಾಜಿಕ ಹೊಣೆ ಇಂಥ ಪ್ರಶ್ನೆಗಳಿಗೆ ಮಹತ್ವವನ್ನು ತಂದುಕೊಟ್ಟರು. ಈ ಚರ್ಚೆಗಳಲ್ಲಿ ಹಲವು ಸೂಕ್ಷ್ಮಗಳನ್ನು ಅವರು ಗಮನಿಸಲಿಲ್ಲ ಎಂದರೂ ದೇಶವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಲೇಖಕನ ಹೊಣೆಯ ಪ್ರಶ್ನೆಗೆ ಮಹತ್ವವನ್ನು ತಂದುಕೊಟ್ಟಿದ್ದು ಸೂಕ್ತವಾಯಿತು. ಸಾಹಿತ್ಯ ಕೃತಿಗಳ ಮೌಲ್ಯಮಾಪನದ ಪ್ರಶ್ನೆಯನ್ನು ಅವರು ಎತ್ತಿದರು.

ಶರಣರ ವಚನಗಳನ್ನು ಹಾಡುವ ಸಾಧ್ಯತೆಯನ್ನು ಡಾ.ಮಲ್ಲಿಕಾರ್ಜುನ ಮನ್‍ಸೂರರಿಗೆ ಸೂಚಿಸಿದವರು ಅ.ನ.ಕೃ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅದ್ದೂರಿಯಾಗಿ ಪ್ರತಿವರ್ಷ ನಡೆಯುತ್ತಿದ್ದ ರಾಮೋತ್ಸವದ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರಿಗೆ ಮತ್ತು ಕನ್ನಡ ಗೇಯಕೃತಿಗಳಿಗೆ ನ್ಯಾಯವಾದ ಸ್ಥಾನ ದೊರಕುತ್ತಿಲ್ಲವೆಂದು ಪ್ರತಿಭಟಿಸಿ ಅ.ನ.ಕೃ, ವೀರಕೇಸರಿ ಸೀತಾರಾಮಶಾಸ್ತ್ರಿ, ಸು.ರಾಮಮೂರ್ತಿ ಮೊದಲಾದವರು 1963ರ ಫೆಬ್ರವರಿ 27ರಂದು ನಡೆಸಿದ ಪ್ರತಿಭಟನಾ ಮೆರವಣಿಗೆ ಬೆಂಗಳೂರಿನಲ್ಲಿ ಕನ್ನಡ ಪರವಾದ ಹೋರಾಟದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಕನ್ನಡಕ್ಕಾಗಿ ಸಾಹಿತಿಗಳು ಬೀದಿಗಿಳಿಯುವುದು ಅಸಮಾಧಾನ ಎಂಬ ಅರಿವನ್ನು ಈ ಮೆರವಣಿಗೆ ತಂದುಕೊಟ್ಟಿತು. ಕನ್ನಡಿಗರ ಆತ್ಮಗೌರವವನ್ನು ಎಚ್ಚರಿಸಿದವರು ಅ.ನ.ಕೃ.

(ಎಲ್.ಎಸ್.ಎಸ್)