ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆನೆಡಿ, ಜಾನ್ ಫಿಟ್ಸ್‌ ಜೆರಲ್ಡ್‌

ವಿಕಿಸೋರ್ಸ್ದಿಂದ

ಕೆನೆಡಿ, ಜಾನ್ ಫಿಟ್ಸ್ ಜೆರಲ್ಡ್ 1917-1963. ಅಮೆರಿಕ ಸಂಯುಕ್ತ ಸಂಸ್ಥಾನದ 35ನೆಯ ಅಧ್ಯಕ್ಷ. ಆ ಸ್ಥಾನಕ್ಕೆ ಆ ವರೆಗೆ ಆಯ್ಕೆಯಾದವರಲ್ಲಿ ಅತ್ಯಂತ ಕಿರಿಯ; ರೋಮನ್ ಕೆಥೊಲಿಕ್ ಪಂಥದವರಲ್ಲಿ ಪ್ರಥಮ. ಕೊಲೆಗಡುಕನ ಗುಂಡಿಗೆ ಬಲಿಯಾದ ಅಮೆರಿಕಾಧ್ಯಕ್ಷರ ಪೈಕಿ ನಾಲ್ಕನೆಯವ. ಮ್ಯಾಸಚೂಸೆಟ್ಸಿನ ಬಾಸ್ಟನ್‍ನ ಉಪನಗರಗಳಲ್ಲೊಂದಾದ ಬ್ರೂಕ್ಲಿನಿನಲ್ಲಿ 1917ರ ಮೇ 29ರಂದು ಜನಿಸಿದ. ತಂದೆ ಜೋಸೆಫ್ ಪ್ಯಾಟ್ರಿಕ್ ಕೆನೆಡಿ, ತಾಯಿ ರೋಸ್. ತಂದೆ-ತಾಯಿಯರಿಬ್ಬರ ಹಿರಿಯರೂ ಐರ್ಲೆಂಡಿನಿಂದ ಬಂದವರು. ಅವರ ಒಂಬತ್ತು ಜನ ಮಕ್ಕಳ ಪೈಕಿ ಜಾನ್ ಎಫ್.ಕೆನಡಿ ಎರಡನೆಯವ.

ಕೆನಡಿಯ ಬಾಲ್ಯ ಬಾಸ್ಪನಿನ ಕೆಳಮಧ್ಯಮ ವರ್ಗದ ವಸತಿಪ್ರದೇಶದಲ್ಲಿ ಆರಂಭವಾಯಿತಾದರೂ ತಂದೆಯ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಹೆಚ್ಚು ಹೆಚ್ಚು ಉತ್ತಮ ವಾತಾವರಣದಲ್ಲಿ ಬೆಳೆಯುವ ಅವಕಾಶ ಅವನಿಗೆ ಒದಗಿಬಂತು. ಕೆನೆಡಿಯ ಸಂಸಾರವೂ ಕ್ರಮಕ್ರಮವಾಗಿ ಬೆಳೆಯುತ್ತಿತ್ತು. ತಮ್ಮಂದಿರ, ತಂಗಿಯರ ಪ್ರೀತಿ, ತಂದೆತಾಯಿಯರ ವಾತ್ಸಲ್ಯ, ದಾದಿಯರ ಆರೈಕೆ-ಇವೆಲ್ಲ ಅವನಿಗೆ ಲಭ್ಯವಾದುವು. ಸ್ಥಳೀಯ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದ ಮೇಲೆ ನ್ಯೂ ಮಿಲ್ಫರ್ಡಿನ ಕ್ಯಾಂಟರ್‍ಬೆರಿ, ವಾಲಿಂಗ್ ಫರ್ಡಿನ ಕೊಯೇಟ್, ಪ್ರಿನ್ಸ್‍ಟನ್ ಮತ್ತು ಹಾರ್ವರ್ಡ್‍ಗಳಲ್ಲಿ ವ್ಯಾಸಂಗ ಮಾಡಿದ ಕೆನೆಡಿಯ ಬುದ್ಧಿಮತ್ತೆ ಆತನ ವಿದ್ಯಾಭ್ಯಾಸದ ಕೊನೆಯ ವರ್ಷಗಳಲ್ಲಿ ಹೆಚ್ಚು ಪ್ರಕಾಶಕ್ಕೆ ಬಂತು. ಈ ಕಾಲದಲ್ಲಿ ಆತ ಇತಿಹಾಸ ರಾಜಕಾರಣಗಳಲ್ಲಿ ಹೆಚ್ಚು ಆಸಕ್ತಿ ತಳೆದನಲ್ಲದೆ ದೇಶವಿದೇಶ ಸಂಚಾರ ಮಾಡಿ ಅನುಭವ ಗಳಿಸಿದ. ಎರಡನೆಯ ಮಹಾಯುದ್ಧದ ಆದಿಕಾಲದಲ್ಲಿ ಯೂರೋಪು ಹಿಟ್ಲರನ ಆಕ್ರಮಣಕ್ಕೊಳಗಾಗುತ್ತಿದ್ದಾಗ ಈತ ಹಾರ್ವರ್ಡ್‍ನ ಪ್ರಗತಿಪರ ಇತಿಹಾಸಕಾರರ, ರಾಜ್ಯಶಾಸ್ತ್ರಜ್ಞರ ಪ್ರಭಾವಕ್ಕೊಳಗಾದ. ಜರ್ಮನಿ ಪ್ರಬಲವಾಗುತ್ತಿದ್ದಾಗಲೇ ಬ್ರಿಟನ್ ಏಕೆ ಎಚ್ಚತ್ತುಕೊಳ್ಳಲಿಲ್ಲವೆಂಬುದನ್ನು ವಿವರಿಸಿ ಹಾರ್ವರ್ಡಿನ ವ್ಯಾಸಂಗಕ್ರಮದ ಕೊನೆಯ ವರ್ಷದಲ್ಲಿ ಬರೆದ ಪೌಢಪ್ರಬಂಧ 1940ರಲ್ಲಿ ಬ್ರಿಟನ್-ಅಮೆರಿಕಗಳಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿತು. ಕೆನೆಡಿ 1940ರಲ್ಲಿ ಹಾರ್ವರ್ಡ್ ವ್ಯಾಸಂಗ ಪೂರೈಸಿದ ಮೇಲೆ ಕ್ಯಾಲಿಫೋರ್ನಿಯದ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಕೆಲವು ತಿಂಗಳುಗಳ ಕಾಲ ಗ್ರಾಜುಯೇಟ್ ಸ್ಕೂಲ್ ಆಫ್ ಬಿಸನೆಸ್ ವಿದ್ಯಾರ್ಥಿಯಾಗಿದ್ದು ದಕ್ಷಿಣ ಅಮೆರಿಕದಲ್ಲಿ ಪ್ರವಾಸ ಮಾಡಿದ. 1941ರಲ್ಲಿ ಅಮೆರಿಕದ ನೌಕಾಪಡೆಯನ್ನು ಸೇರಿ ಮೋಟಾರ್ ಟಾರ್ಪೆಡೊ ದೋಣಿಯೊಂದರ ಕಮ್ಯಾಂಡರ್ ಆಗಿ, ಆಗ್ನೇಯ ಫೆಸಿಫಿಕಿನ ಸಾಲೊಮನ್ ದ್ವೀಪಗಳಲ್ಲಿ ಜಪಾನ್ ನೌಕಾಪಡೆಯ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ. 1943ರಲ್ಲಿ ಜಪಾನಿ ಡಿಸ್ಟ್ರಾಯರ್ ಒಂದು ಇವನ ದೋಣಿಯ ಮೇಲೆ ಏರಿ ಬಂದು ಅದನ್ನು ಮುಳುಗಿಸಿತು. ಕೆನೆಡಿಯೂ ಅವನ ಜೊತೆಗಾರರ ಪೈಕಿ ಸಾಯದೆ ಉಳಿದವರೂ ಸುಮಾರು ಮೂರು ಮೈಲಿಗಳ ದೂರ ಸಮುದ್ರದಲ್ಲಿ ಈಜಿ ದ್ವೀಪವೊಂದನ್ನು ಸೇರಿ ಬದುಕಿಕೊಂಡರು. ನೌಕಾ ಮತ್ತು ಸಮುದ್ರ ಪಡೆಯ ಪದಕವೂ ಪರ್ಪಲ್ ಹಾರ್ಟ್ ಪ್ರಶಸ್ತಿಯೂ ಕೆನಡಿಗೆ ಲಭ್ಯವಾದುವು. ಸಮರದಲ್ಲಿ ಗಾಯಗೊಂಡಿದ್ದುದಲ್ಲದೆ ಮಲೇರಿಯ ವ್ಯಾಧಿಗ್ರಸ್ತನಾಗಿದ್ದ ಕೆನೆಡಿಯನ್ನು ಸ್ವದೇಶಕ್ಕೆ ಕಳುಹಿಸಲಾಯಿತು.

1945ರಲ್ಲಿ ಕೆನೆಡಿಗೆ ನೌಕಾಪಡೆಯಿಂದ ಬಿಡುಗಡೆಯಾಯಿತು. ಮುಂದೇನು ಮಾಡಬೇಕೆಂಬುದು ನಿರ್ಧಾರವಾಗಿರಲಿಲ್ಲ. ಆತ ಪತ್ರಿಕೋದ್ಯಮದಲ್ಲಿ ಸ್ವಲ್ಪಕಾಲ ನಿರತನಾಗಿದ್ದ. ಅಣ್ಣ ಜೋಸೆಫ್ ಪಿ. ಕೆನೆಡಿ ರಾಜಕೀಯ ಪ್ರವೇಶ ಮಾಡಬೇಕೆಂಬುದು ಕುಟುಂಬದ ಹಿರಿಯರ ಮೊದಲಿನ ಉದ್ದೇಶವಾಗಿತ್ತು. ಆದರೆ ಆತ 1944ರಲ್ಲಿ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ. ಅಣ್ಣನ ಸಾವಿನಿಂದಾದ ಆ ಅರಕೆಯನ್ನು ತುಂಬುವುದೂ ಜಾನ್ ಕೆನೆಡಿಯ ರಾಜಕೀಯ ಪ್ರವೇಶದ ಒಂದು ಉದ್ದೇಶವಾಗಿತ್ತು. ಅಂತೂ ಪೂರ್ವ ಬಾಸ್ಟನಿನ ಕ್ಷೇತ್ರದಲ್ಲಿ ಅವನು ರಾಜಕಾರಣದಲ್ಲಿ ಧುಮುಕಿದ. ಕೆನೆಡಿಯ ಹಿರಿಯರು ರಾಜಕೀಯದಲ್ಲಿ ಸಕ್ರಿಯವಾದ ಪಾತ್ರ ವಹಿಸುತ್ತಿದ್ದುದು ಅಲ್ಲಿಂದಲೇ. 1946ರಲ್ಲಿ ಆತ ಡೆಮೋಕ್ರಾಟಿಕ್ ಪಕ್ಷದಿಂದ ಕಾಂಗ್ರೆಸ್ಸಿಗೆ ಸ್ಪರ್ಧಿಸುವ ತೀರ್ಮಾನ ಮಾಡಿದ. ಹಾರ್ವರ್ಡ್ ಮತ್ತು ನೌಕಾ ಗೆಳೆಯರು ಇವನ ಹಿಂದೆ ನಿಂತು ಕೆಲಸ ಮಾಡಿದರು. ಪ್ರಾಥಮಿಕದಲ್ಲಿ ಭಾಗವಹಿಸಿ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, 1947ರ ಜನವರಿಯಲ್ಲಿ ಪ್ರತಿನಿಧಿ ಸಭೆಯನ್ನು ಪ್ರವೇಶಿಸಿದ. ಆಗ ಅವನಿಗೆ ಇನ್ನೂ 29 ವರ್ಷ. ಅನ್ನಸ್ವಾತಂತ್ರ್ಯ, ಕಾರ್ಮಿಕರ ಸಮಸ್ಯೆ, ಸಮಾಜ ಕಲ್ಯಾಣ, ಸಾಮಾಜಿಕ ರಕ್ಷಣೆ ಮುಂತಾದ ಕಾರ್ಯನೀತಿಗಳಿಗೆ ಕೆನೆಡಿ ಬೆಂಬಲ ನೀಡಿದ. ಇದರಿಂದ ಕೆನೆಡಿಯ ಜನಪ್ರಿಯತೆ ಹೆಚ್ಚಿತು. ಮತ್ತೆ ಎರಡು ಬಾರಿ-1948 ಮತ್ತು 1950ರಲ್ಲಿ-ಅವನು ಪ್ರತಿನಿಧಿ ಸಭೆಯ ಚುನಾವಣೆಯಲ್ಲಿ ಜಯ ಗಳಿಸಿದ. 1952ರಲ್ಲಿ ಸೆನೆಟಿಗೆ ಸ್ಪರ್ಧಿಸಿಯೂ ಗೆದ್ದ. 1953ರ ಸೆಪ್ಟೆಂಬರಿನಲ್ಲಿ ಕೆನೆಡಿಗೆ ಜಾಕ್ವೆಲೀನ್ ಲೀ ಬೌವಿಯೇರಳೊಂದಿಗೆ ವಿವಾಹವಾಯಿತು. ಯುದ್ಧ ಸಮಯದಲ್ಲಿ ಕೆನಡಿಯ ಬೆನ್ನುಮೂಳೆಗೆ ಆಗಿದ್ದ ಆಘಾತದಿಂದಾಗಿ ನೋವು ಅತಿಯಾಗಿ, 1954ರಲ್ಲಿ ಆತ ಆಸ್ಪತ್ರೆ ಹೋಗಬೇಕಾಯಿತು. ಅಲ್ಲಿ ಎರಡು ಬಾರಿ ಅಪಾಯಕಾರಿ ಶಸ್ತ್ರಕ್ರಿಯೆಗೆ ಒಳಗಾಗಿ ಮೃತ್ಯುಮುಖದಿಂದ ಪಾರಾದ. ಅನಂತರದ ಚೇತರಿಕೆಯ ಅವಧಿಯಲ್ಲಿ ಒಂದು ಪುಸ್ತಕ ರಚಿಸಿದ. ಅದರ ಹೆಸರು ಪ್ರೊಫೈಲ್ಸ್ ಇನ್ ಕರೇಜ್ (1956). ತಂತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯವೆನಿಸದಿರುವ ನಿಲುವು ತಳೆದು ಅಸಾಧಾರಣ ಧೈರ್ಯ ಪ್ರದರ್ಶಿಸಿದ ರಾಜಕಾರಣಿಗಳ ಜೀವನಚಿತ್ರಗಳು ಅದರಲ್ಲಿವೆ. ಅಭ್ಯರ್ಥಿಗಳು ತಂತಮ್ಮ ಚುನಾವಣಾ ಕ್ಷೇತ್ರಗಳ ಹಿತಸಾಧನೆ ಮಾಡುವುದಷ್ಟೇ ಅಲ್ಲದೆ ರಾಷ್ಟ್ರಹಿತದೃಷ್ಟಿಯನ್ನೂ ಸಾಧಿಸಬೇಕೆಂದು ಮತದಾರರು ಬಯಸುವರೆಂದು ಕೆನೆಡಿ ಆ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾನೆ. ಆಪುಸ್ತಕಕ್ಕೆ 1957ರಲ್ಲಿ ಪುಲಿಟ್‍ಜóರ್ ಬಹುಮಾನ ಬಂತು. 1956ರಲ್ಲಿ ಅವನು ರಾಷ್ಟ್ರದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷದ ನಾಮಕರಣ ಪಡೆಯಲು ಯತ್ನಿಸಿ ಸ್ವಲ್ಪದರಲ್ಲಿ ವಿಫಲನಾದ. ಆದರೆ 1958ರಲ್ಲಿ ಸೆನೆಟಿಗೆ ನಡೆದ ಚುನಾವಣೆಯಲ್ಲಿ ಆತನಿಗೆ ಅಧಿಕ ಬಹುಮತ ಲಭ್ಯವಾಯಿತು. 1960ರಲ್ಲಿ ಅಧ್ಯಕ್ಷಸ್ಥಾನಕ್ಕೆ ಪಕ್ಷದ ನಾಮಕರಣ ಪಡೆಯಲು ಪ್ರಯತ್ನ ನಡೆಸಿ ಸಫಲನಾದ. ಚುನಾವಣೆಗೆ ಪೂರ್ವಭಾವಿಯಾಗಿ ದೀರ್ಘಕಾಲದ ಪ್ರಚಾರ, ಗೆಳೆಯರ ಸ್ನೇಹ ಸಾಧನೆ, ಜನಹಿತದೃಷ್ಟಿಯ ಪ್ರತಿಪಾದನೆ, ಔತಣಕೂಟ-ಮುಂತಾದ ವಿಧಾನಗಳನ್ನು ಅಚ್ಚುಕಟ್ಟಾಗಿ ಅನುಸರಿಸಿದ ಕೆನಡಿಯನ್ನು 1960ರಲ್ಲಿ ಲಾಸ್ ಆಂಜೆಲೆಸ್‍ನಲ್ಲಿ ಅಧ್ಯಕ್ಷಸ್ಥಾನಕ್ಕೆ ಡೆಮೊಕ್ರಾಟ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಆ ವರ್ಷ ನವೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಕೆನೆಡಿ ವಿಜಯಿಯಾದ. ಅವನ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ರಿಚರ್ಡ್ ಎಂ. ನಿಕ್ಸನ್. 1961ರ ಜನವರಿ 20ರಂದು ಅಧ್ಯಕ್ಷಾಧಿಕಾರ ಸ್ವೀಕಾರ ಮಾಡಿದ ಕೆನೆಡಿಯ ಪ್ರಾರಂಭ ಭಾಷಣ ಗಮನಾರ್ಹವಾದ್ದು. ಭೂಮಿಯ ಅರ್ಧಭಾಗದಲ್ಲಿ ಗುಡಿಸಲುಗಳಲ್ಲೂ ಹಳ್ಳಿಗಳಲ್ಲೂ ವಾಸಿಸುವ ಜನರಿಗೆ ನೆರವು ನೀಡುವುದಾಗಿ ಆತ ಪ್ರತಿಜ್ಞೆ ಮಾಡಿದ. ಕಮ್ಯೂನಿಸ್ಟ್ ರಾಷ್ಟ್ರಗಳೊಂದಿಗೆ ಸಂಧಾನ ಮಾಡಲು ಹೆದರಬಾರದು; ಆದರೆ ಹೆದರಿಕೆಯಿಂದ ಸಂಧಾನ ಮಾಡಬಾರದು-ಎಂದ. ನಿಮ್ಮ ದೇಶನಿಮಗೇನು ಮಾಡಬಲ್ಲುದೆಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ಮಾಡಬಲ್ಲಿರೆಂದು ಕೇಳಿಕೊಳ್ಳಿ ಎಂಬುದು ಕೆನೆಡಿಯ ಪ್ರಸಿದ್ಧ ವಾಕ್ಯ.

ಕೆನೆಡಿ ತನ್ನ ಸಂಪುಟಕ್ಕೂ ಇತರ ಸ್ಥಾನಗಳಿಗೂ ನೇಮಿಸಿಕೊಂಡ ವ್ಯಕ್ತಿಗಳು ದಕ್ಷರು, ನಿಷ್ಠಾವಂತರು. ಈ ನೇಮಕಗಳು ಅವನ ಕೀರ್ತಿಪ್ರತಿಷ್ಠೆ ಬೆಳೆಯಲು ಸಾಧಕವಾದುವು. ಅವನ ಚೇತನ ಅದ್ಭುತವಾದ್ದು. ಪತ್ನಿ ಕಲಾಪ್ರಿಯೆ. ಇದರಿಂದ ಅಧ್ಯಕ್ಷನ ಅಧಿಕೃತ ನಿವಾಸವಾದ ಶ್ವೇತಭವನ ಎಲ್ಲರ ಗಮನ ಸೆಳೆಯಿತÀು. ಅದೊಂದು ರಾಜಕೀಯ ಮಧುಚಂದ್ರದ ಕಾಲ. ಆ ಕಾಲದಲ್ಲಿ ಕೆನೆಡಿ ಅನೇಕ ವಿಶ್ವಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಶ್ರಮಿಸಿದ. ಆದರೆ ಬಲುಬೇಗ ಭ್ರಮನಿರಸನ ಅವನಿಗಾಗಿ ಕಾದಿತ್ತು. ಕ್ಯೂಬದಲ್ಲಿ ಅಧಿಕಾರ ಗಳಿಸಿದ್ದ ಫಿಡೆಲ್ ಕ್ಯಾಸ್ಟ್ರೋನನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದವರಿಗೆ ಬೆಂಬಲವಾಗಿ ಆಕ್ರಮಣಕಾರ್ಯ ನಡೆಸಬೇಕೆಂಬ ಕೆನೆಡಿಯ ಸೂಚನೆಗೆ ಕಾಂಗ್ರೆಸ್ ಒಪ್ಪಲಿಲ್ಲ. ಲಾವೋಸ್ ವಿಯೆಟ್ನಾಂಗಳಲ್ಲಿ ಕಮ್ಯೂನಿಸ್ಟ್ ಕಾರ್ಯಾಚರಣೆಯ ವಿರುದ್ಧ ಅಮೆರಿಕನ್ ಪಡೆಗಳು ಸತ್ತ್ವಹೀನವಾಗಿದ್ದುವು. ಪಶ್ಚಿಮಬರ್ಲಿನಿಗೂ ಪೂರ್ವಬರ್ಲಿನಿಗೂ ಸಂಪರ್ಕವನ್ನು ಕಡಿದುಹಾಕಲು ಪೂರ್ವಜರ್ಮನ್ ಸರ್ಕಾರ ಅವೆರಡು ಭಾಗಗಳ ನಡುವೆ ಗೋಡೆ ಎಬ್ಬಿಸಿತು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೆನೆಡಿ ಕೆಲವು ದೃಢ ಕ್ರಮಗಳನ್ನು ಕೈಗೊಂಡ. ಲ್ಯಾಟಿನ್ ಅಮೆರಿಕದ ಆರ್ಥಿಕ ಬೆಳೆವಣಿಗೆ, ಅಭಿವೃದ್ಧಿ ಹೊಂದದ ರಾಷ್ಟ್ರಗಳಿಗೆ ಆರ್ಥಿಕ ಸಹಾಯ, ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಸ್ವಾತಂತ್ರ್ಯದಾನ, ಅಂತರರಾಷ್ಟ್ರೀಯ ವ್ಯಾಪಾರ ಕುದುರಿಸಲು ಸುಂಕದ ಇಳಿತಾಯ-ಇವು ಕೆಲವು ಉದಾಹರಣೆಗಳು.

ಆಂತರಿಕವಾಗಿಯೂ ಕೆನೆಡಿ ಅನೇಕ ಕ್ರಮಗಳನ್ನು ಕೈಕೊಂಡ. ದೇಶದ ಆರ್ಥಿಕ ಹಿಂಜರಿತವನ್ನು ತಡೆಯಲು 1961ರಲ್ಲಿ ಅನೇಕ ದೃಢಕ್ರಮಗಳು ಜಾರಿಗೆ ಬಂದುವು. ಆದರೆ 1962ರಲ್ಲಿ ಇವು ಸತ್ತ್ವಹೀನವಾದುವು. 1962ರಲ್ಲಿ ಉಕ್ಕಿನ ಬೆಲೆಗಳು ಏರದಂತೆ ಅಧ್ಯಕ್ಷಾಧಿಕಾರ ಚಲಾಯಿಸಿದ್ದು ಇನ್ನೊಂದು ದೃಢಕ್ರಮ, ವಸತಿ ನಿರ್ಮಾಣ, ಕನಿಷ್ಠ ಕೂಲಿ ಏರಿಕೆ, ಕಲ್ಯಾಣ ಕಾರ್ಯಕ್ರಮಗಳ ವಿಸ್ತರಣ-ಇವುಗಳಿಗಾಗಿ ತಂದ ಸೂಚನೆಗಳಿಗೆ ಕಾಂಗ್ರೆಸಿನ ಒಪ್ಪಿಗೆ ದೊರಕಿತು. ಶಿಕ್ಷಣಕ್ಕೆ ನೆರವು, ತೆರಿಗೆ ಸುಧಾರಣೆ, ವೃದ್ಧರಿಗೆ ವೈದ್ಯಕೀಯ ಸೌಲಭ್ಯ ನೀಡಿಕೆ, ಹೊಸ ಕೃಷಿ ನೀತಿ, ನಗರ ವಿಚಾರಗಳಿಗಾಗಿ ಸಂಪುಟಮಟ್ಟದ ಇಲಾಖೆಯ ರಚನೆ, ಖಜಾನೆಯಿಂದ ಸಾಲ ಪಡೆದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ದೀರ್ಘಕಾಲಿಕ ಆರ್ಥಿಕ ನೆರವು ನೀಡಿಕೆ-ಈ ಕ್ರಮಗಳಿಗೆ ಕಾಂಗ್ರೆಸಿನ ಒಪ್ಪಿಗೆ ದೊರಕಲಿಲ್ಲ. ಕಾಂಗ್ರೆಸಿನ ಡೆಮೊಕ್ರಾಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳಲ್ಲಿದ್ದ ಸಂಪ್ರದಾಯಶರಣರೆಲ್ಲ ಒಂದಾಗಿ ಕೆನೆಡಿಯ ಪ್ರಗತಿಪರ ಕ್ರಮಗಳನ್ನೆಲ್ಲ ವಿರೋಧಿಸುತ್ತಿದ್ದರು. ಅವರನ್ನು ಬಯಲಿಗೆಳೆದು ಧೈರ್ಯವಾಗಿ ಮುನ್ನಡೆಯಬೇಕೆಂಬುದು ಕೆಲವರ ಸಲಹೆಯಾಗಿತ್ತು. ಆದರೆ ಅವರನ್ನು ಕ್ರಮಕ್ರಮವಾಗಿ ಒಲಿಸಿಕೊಳ್ಳಬೇಕೆಂಬುದು ಕೆನೆಡಿಯ ನೀತಿಯಾಗಿತ್ತು. ಕೆನೆಡಿಯ ಅಧ್ಯಕ್ಷಾಧಿಕಾರದ ಶಿಖರಸದೃಶ ಘಟನೆಯೆಂದರೆ ಕ್ಯೂಬದ ಬಿಕ್ಕಟ್ಟು. ಸೋಮಿಯೆತ್ ದೇಶ ಕ್ಯೂಬದಲ್ಲಿ ದೂರಗಾಮಿ ಕ್ಷಿಪಣಿಗಳನ್ನು ಸ್ಥಾಪಿಸುತ್ತಿದೆಯೆಂಬ ಸುದ್ದಿ ತಿಳಿದ ಕೆನೆಡಿ ಆ ದ್ವೀಪಕ್ಕೆ ದಿಗ್ಭಂಧನ ವಿಧಿಸಿದ. ಇವನ್ನೆಲ್ಲ ಕೂಡಲೇ ಕಿತ್ತು ಸಾಗಿಸಬೇಕೆಂದು ಸೋವಿಯತ್ ದೇಶಕ್ಕೂ ಕ್ಯೂಬಕ್ಕೂ ಎಚ್ಚರಿಕೆ ನೀಡಿದ. ಸ್ವಲ್ಪಕಾಲ ಪರಿಸ್ಥಿತಿ ಆತಂಕಕಾರಿಯಾಗಿತ್ತು. ಕ್ಯೂಬದತ್ತ ಸಾಗಿ ಬರುತ್ತಿದ್ದ ಶಸ್ತ್ರ ತುಂಬಿದ ಹಡಗುಗಳು ಹಿಂದಿರುಗಿದುವು. ಕ್ಯೂಬದಲ್ಲಿ ಸ್ಥಾಪಿಸಲಾಗಿದ್ದ ಕ್ಷಿಪಣಿಗಳನ್ನೂ ಸೋವಿಯೆತ್ ದೇಶ ಹಿಂತೆಗೆದುಕೊಂಡಿತು.

1963ರ ನವೆಂಬರಿನಲ್ಲಿ ಕೆನೆಡಿ ಟೆಕ್ಸಾಸಿನಲ್ಲಿ ಭಾಷಣಪ್ರವಾಸ ಕೈಗೊಂಡಿದ್ದ. ನವೆಂಬರ್ 22ರಂದು ಡ್ಯಾಲಸಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಅಲ್ಲಿಂದ ಮೋಟಾರಿನಲ್ಲಿ ಪರಿವಾರದೊಡನೆ ಸಾಗುತ್ತಿದ್ದಾಗ ಹಂತಕನೊಬ್ಬ ಮೂರು ಗುಂಡು ಹಾರಿಸಿದ. ಎರಡು ಗುಂಡುಗಳು ಕೆನಡಿಯನ್ನು ತಾಕಿ ಅವನು ಮೃತಪಟ್ಟ. ಲೀ ಹಾರ್ವೆ ಆಸ್ವಾಲ್ಡ್ ಕೊಲೆಗಡುಕನೆಂದು ಆರೋಪಿಸಿ ಪೋಲೀಸರು ಅವನನ್ನು ಬಂಧಿಸಿದರು. ನವೆಂಬರ್ 24ರಂದು ಆಸ್ವಾಲ್ಡನನ್ನು ಡ್ಯಾಲಸ್ ಕೌಂಟಿ ಜೈಲಿಗೆ ಸಾಗಿಸುತ್ತಿದ್ದಾಗ ಅವನನ್ನು ಜಾಕ್ ರೂಬಿ ಗುಂಡಿಕ್ಕಿ ಕೊಂದ.

ಕೆನೆಡಿಯ ಕೊಲೆಗೆ ಸಂಬಂಧಿಸಿದ ವಿಚಾರಗಳ ತನಿಖೆ ಮಾಡಲು ಅಮೆರಿಕದ ಪರಮೋಚ್ಚ ನ್ಯಾಯಮೂರ್ತಿ ಅರ್ಲ್‍ವಾರೆನ್ ಅಧ್ಯಕ್ಷತೆಯಲ್ಲಿ ಒಂದು ಆಯೋಗ ನೇಮಕವಾಗಿತ್ತು. ಕೆನೆಡಿಯ ಸಾವಿಗೆ ಕಾರಣವಾದ ಗುಂಡುಗಳನ್ನು ಹಾರಿಸಿದವರು ಲೀ ಹಾರ್ವೆ ಆಸ್ವಾಲ್ಡನೆಂದೂ ಕೊಲೆಯ ಸ್ಥಳದ ಬಳಿಯಲ್ಲಿರುವ ಟೆಕ್ಸಾಸ್ ಸ್ಕೂಲ್ ಬುಕ್ ಡಿಪಾಸಿಟರಿ ಸಂಸ್ಥೆಯ ಕಟ್ಟಡದ ಆರನೆಯ ಮಹಡಿಯ ಕಿಟಕಿಯಿಂದ ಆತ ಪಿಸ್ತೂಲಿನಿಂದ ಗುಂಡು ಹಾರಿಸಿದನೆಂದೂ ಈ ಕೊಲೆಗಾಗಿ ಸಂಚು ನಡೆದಿತ್ತೆಂಬುದಕ್ಕೆ ಸಾಕ್ಷಿ ದೊರಕಿಲ್ಲವೆಂದೂ ಆ ನಿಯೋಗ ವರದಿ ಮಾಡಿತು. (ಎಂ.ಬಿ.ಆರ್.ಯು.)