ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೈಗಡಿಯಾರ

ವಿಕಿಸೋರ್ಸ್ ಇಂದ
Jump to navigation Jump to search

ಕೈಗಡಿಯಾರ

ಕೈಯ ಮಣಿಗಂಟಿಗೆ ಕಟ್ಟಿಕೊಳ್ಳಬಹುದಾದ ಕಾಲಸೂಚಕ ಯಂತ್ರ (ರಿಸ್ಟ್ ವಾಚ್). ಪ್ರಥಮ ಗಡಿಯಾರದ ನಿರ್ಮಾಣ ಎಂದು ಎಲ್ಲಿ ಆಯಿತು ಎಂಬ ಸಂಗತಿ ಅಸ್ಪಷ್ಟವಾಗಿದೆ. ಆದರೆ ಮೇನ್‍ಸ್ಪ್ರಿಂಗನ್ನು ಉಪಜ್ಞಿಸುವ ಮೊದಲು ಕೈಗಡಿಯಾರದ ರಚನೆ ಸಾಧ್ಯವಾಗಿರಲಿಲ್ಲ ಎಂಬುದು ಸ್ಪಷ್ಟ. ಆ ಮೊದಲು ಗುರುತ್ವ ಬಲದಿಂದ ಇಳಿಯುತ್ತಿದ್ದ ತೂಕಗಳ ನಿಯಂತ್ರಣದಿಂದ ಕಾಲಮಾಪನ ಯಂತ್ರಗಳನ್ನು (ಗಡಿಯಾರಗಳು) ನಿರ್ಮಿಸುತ್ತಿದ್ದರು. ಇಂಥ ಗಡಿಯಾರಗಳು, ಅವು ಎಷ್ಟೇ ಸುಧಾರಿತ ಯಾಂತ್ರಿಕ ಕೌಶಲಗಳನ್ನು ಒಳಗೊಂಡಿದ್ದರೂ, ದೊಡ್ಡ ಗಾತ್ರದವೂ ತೂಕದವೂ ಆಗಿರುತ್ತಿದ್ದುದರಿಂದ ಶ್ರೀಮಂತರ ನಿವಾಸಗಳ ಅಲಂಕರಣ ಸಾಮಗ್ರಿಗಳಾಗಿಯೂ ಸರಕಾರದ ಕಚೇರಿಗಳಲ್ಲಿನ ಆವಶ್ಯಕ ಸಾಧನಗಳಾಗಿಯೂ ಇರುತ್ತಿದ್ದುವೇ ವಿನಾ ಎಲ್ಲಿ ಬೇಕೆಂದರಲ್ಲಿಗೆ ಒಯ್ಯಬಲ್ಲ ಸುಲಭೋಪಕರಣಗಳಾಗಿ ಇರುತ್ತಿರಲಿಲ್ಲ. ಪ್ರಥಮ ಗಡಿಯಾರಗಳ ನಿರ್ಮಾಣ ಜರ್ಮನಿ ಹಾಗೂ ಫ್ರಾನ್ಸ್ ದೇಶಗಳಲ್ಲಿ ಆಯಿತು. ಇಟಲಿಯ ಕೊಡುಗೆಯೂ ಗಮನಾರ್ಹವಾಗಿದೆ. 20ನೆಯ ಶತಮಾನದ ಆರಂಭದವರೆಗೂ ಕೈಗಡಿಯಾರಗಳ ಬಳಕೆ ಬಂದಿರಲಿಲ್ಲ-ಕಿಸೆಗಡಿಯಾರಗಳು, ಪುಟ್ಟ ಗಡಿಯಾರಗಳು ಮುಂತಾದುವು ಅಂದಿನ, ಸುಲಭವಾಗಿ ಒಯ್ಯಬಲ್ಲ, ಕಾಲಮಾಪೀ ಉಪಕರಣಗಳಾಗಿದ್ದವು. ರಚನಾಕೌಶಲದಲ್ಲಿ ಸುಧಾರಣೆಗಳೂ ಸೂಕ್ಷ್ಮತೆಗಳೂ ಸಿದ್ದಿಸಿದ ಮೇಲೆ ಹೇರ್‍ಸ್ಪ್ರಿಂಗ್, ಬ್ಯಾಲೆನ್ಸ್ ಚಕ್ರ ಮುಂತಾದ ನಿಷ್ಕøಷ್ಟಸಾಧನಗಳ ಉಪಜ್ಞೆ ನಡೆಯಿತು. ಈ ಪ್ರಯತ್ನಗಳ ಸಂಯುಕ್ತ ಫಲ ಕೈಗಡಿಯಾರ.

ಎಲ್ಲ ಕಾಲಸೂಚಕ ಉಪಕರಣಗಳಲ್ಲೂ ಮೂರು ಮುಖ್ಯ ಭಾಗಗಳಿವೆ: 1. ಪುನರಾವರ್ತಿಸುವ ಒಂದು ವಿದ್ಯಮಾನವನ್ನು ಸೃಜಿಸುವ ಯಂತ್ರವಿನ್ಯಾಸ, ಲೋಲಕದ ಆಂದೋಳನ, ಚಕ್ರದ ಆವರ್ತನೆ ಮುಂತಾದವು ಉದಾಹರಣೆಗಳು. ಈ ಯಂತ್ರವಿನ್ಯಾಸದ ನಿಷ್ಕøಷ್ಟತೆಯನ್ನು ಅವಲಂಬಿಸಿ ಕಾಲಸೂಚಕ ಉಪಕರಣದ ನಿಖರತೆ ಇರುವುದು. 2. ಪುನರಾವರ್ತಿಸುವ ವಿದ್ಯಮಾನವನ್ನು ಎಣಿಸಿ ಅದರಿಂದ ಕಾಲಮಾಪನ ಮಾಡಿ ಕಾಲವನ್ನು ಓದುವ ಒಂದು ವಿಧಾನ. ಗಡಿಯಾರದ ಮುಖ ಫಲಕದ ಮೇಲಿನ ಮುಳ್ಳುಗಳು ಮಾಡುವುದು ಈ ಕೆಲಸವನ್ನು. 3 ಪುನರಾವರ್ತಿಸುವ ವಿದ್ಯಮಾನವನ್ನು ಉತ್ಪಾದಿಸಲು ಬೇಕಾದ ಶಕ್ತಿ ಆಕರ.

ಕೈಗಡಿಯಾರದಲ್ಲಿ ಹೇರ್‍ಸ್ಪ್ರಿಂಗಿನ ನೆರವಿನಿಂದ ಬ್ಯಾಲೆನ್ಸ್ ಚಕ್ರ ಪುನರಾವರ್ತಿಸುವ ವಿದ್ಯಮಾನವನ್ನು ಸೃಜಿಸುತ್ತದೆ. ಇದರ ಪರಿಣಾಮವಾಗಿ ಮುಖಫಲಕದ ಮೇಲಿನ ವಿವಿಧ ಮುಳ್ಳುಗಳು-ಸೆಕೆಂಡ್, ಮಿನಿಟ್ ಹಾಗೂ ಗಂಟೆ-ನಿಯತರೀತಿಯಲ್ಲಿ ಚಲಿಸಿ ಕಾಲವನ್ನು ಓದುವುದು ಸುಲಭಸಾಧ್ಯವಾಗುತ್ತದೆ. ಕೈಗಡಿಯಾರದ ಪ್ರಧಾನ (ಮೇನ್) ಸ್ಪ್ರಿಂಗನ್ನು ತಿರುಚಿದಾಗ (ವೈಂಡಿಂಗ್. ರೂಢಿಯ ಮಾತಿನಲ್ಲಿ ಕೀ ಕೊಟ್ಟಾಗ) ಆ ಸ್ಪ್ರಿಂಗ್ ಸಂಕುಚನಗೊಂಡು ಅದರಲ್ಲಿ ಶಕ್ತಿ ಸಂಚಯನವಾಗುತ್ತದೆ. ಇದೇ ಕೈ ಗಡಿಯಾರದ ಶಕ್ತಿ ಆಕರ. ಇಲ್ಲಿಂದ ಶಕ್ತಿ ತಕ್ಕ ನಿಯಂತ್ರಕಗಳ ಮೂಲಕ ಬ್ಯಾಲೆನ್ಸ್ ಚಕ್ರಕ್ಕೆ ಒದಗಿ ಅದರ ಆಂದೋಳನದ ನಿರಂತರತೆಯನ್ನು ಕಾಯ್ದಿಡುತ್ತದೆ. ಬ್ಯಾಲೆನ್ಸ್ ಚಕ್ರದ ಆಂದೋಳನದ ಪರಿಣಾಮವಾಗಿ, ಹಲವಾರು ಪರಸ್ಪರ ಬಂಧಿತ ಹಲ್ಲುಚಕ್ರಗಳ ಮೂಲಕ, ಕೈಗಡಿಯಾರದ ಮುಳ್ಳುಗಳು ನಿಯತ ದರದಲ್ಲಿ ವರ್ತಿಸಿ ಕಾಲದ ಓದಿಕೆ ಸಾಧ್ಯವಾಗುತ್ತದೆ.

ಕೈಗಡಿಯಾರಗಳಲ್ಲಿ ನಾನಾ ಪ್ರಭೇದಗಳಿವೆ. ಗಂಡಸರು ಕಟ್ಟುವ ಕೈಗಡಿಯಾರಗಳ ವ್ಯಾಸಗಳು ಸರಿಸುಮಾರು 23-30 ಮಿಮೀ. ವ್ಯಾಪ್ತಿಯಲ್ಲಿವೆ. ಹೆಂಗಸರ ಕೈಗಡಿಯಾರಗಳ ವ್ಯಾಸವ್ಯಾಪ್ತಿ 14-20 ಮಿಮೀ. ಸೆಕೆಂಡ್ ಮುಳ್ಳನ್ನು ಮುಖಫಲಕದ (ಡಯಲ್) ಮೇಲೆ ಒಂದು ಬದಿಗೆ (ಸಾಮಾನ್ಯವಾಗಿ ಗಂಟೆ 6ರ ಪಕ್ಕದಲ್ಲಿ) ಪ್ರತ್ಯೇಕವಾಗಿ ಜೋಡಿಸಿರುತ್ತಾರೆ. ಮುಖಫಲಕದ ಕೇಂದ್ರಬಿಂದುವಿನಲ್ಲೇ (ಎಂದರೆ ಮಿನಿಟ್ ಹಾಗೂ ಗಂಟೆ ಮುಳ್ಳುಗಳು ಜೋಡಣೆಗೊಂಡಿರುವಲ್ಲೇ) ಜೋಡಣೆಗೊಳಿಸಿರುವ ಸೆಕೆಂಡ್ ಮುಳ್ಳು ಇರುವ (ಸೆಂಟರ್ ಸೆಕೆಂಡ್ಸ್) ಕೈಗಡಿಯಾರಗಳು ಇಂದಿನ ಒಲವು ಇನ್ನಷ್ಟು ಸೂಕ್ಷ್ಮ ಹಾಗೂ ಅಧಿಕ ಕ್ರಯದ ಗಡಿಯಾರಗಳಲ್ಲಿ ದಿನಾಂಕವನ್ನು ತೋರಿಸುವ ಏರ್ಪಾಡು ಸಹ ಇರುತ್ತದೆ. ಇನ್ನು ತಿರುಚು ಕ್ರಿಯೆ ಬೇಡವಾದ-ಎಂದರೆ ಸ್ವಯಂ ತಿರುಚು ಸಾಧಿಸಿಕೊಳ್ಳಬಲ್ಲ-ಕೈಗಡಿಯಾರಗಳು ಸಹ ಬಳಕೆಯಲ್ಲಿವೆ. ಮಣಿಗಂಟಿನ ಚಲನೆ, ಕೈ ಕುಲುಕುವಿಕೆ ಮುಂತಾದವುಗಳಿಂದ ಒದಗುವ ಶಕ್ತಿಯನ್ನು ಇಂಥ ಗಡಿಯಾರಗಳ ಸೂಕ್ಷ್ಮ ಸ್ಪ್ರಿಂಗು ಸಂಗ್ರಹಿಸಿ ಚಾಲನ ಶಕ್ತಿಯನ್ನು ಒದಗಿಸಬಲ್ಲುದು. ಎಚ್ಚರಗಂಟೆ (ಅಲಾರಂ) ಹೊಡೆಯುವ ಕೈಗಡಿಯಾರಗಳನ್ನೂ ನಿರಂತರ ತಾರೀಕುಪಟ್ಟಿ ದಾಖಲೆಯನ್ನು ಒಳಗೊಂಡಿರುವ ಕೈಗಡಿಯಾರಗಳನ್ನೂ ತಯಾರಿಸಲಾಗಿದೆ.

ಕೈಗಡಿಯಾರ, ಗಡಿಯಾರ ಮುಂತಾದ ವಿವಿಧ ಕಾಲಮಾಪಿಗಳ ಯಂತ್ರವಿನ್ಯಾಸವನ್ನೂ ಕ್ರಿಯಾವಿನ್ಯಾಸವನ್ನೂ ತಿಳಿಯಲು (ನೋಡಿ- ಗಡಿಯಾರ)