ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಲಬ್ಬುಗಳು

ವಿಕಿಸೋರ್ಸ್ದಿಂದ

ಕ್ಲಬ್ಬುಗಳು

ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಕಲೆತು, ತನ್ನ ಸದಸ್ಯರೆಲ್ಲರ ಹಿತಕ್ಕಾಗಿ, ಸಹಕಾರಕ್ಕಾಗಿ ಆಗಾಗ ಸಭೆ ಸೇರಿ ಆಸಕ್ತಿಯ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುವ ಸಂಘ, ಸಮಾಜ ಅಥವಾ ಕೂಟಗಳಿಗೆ ಇರುವ ಹೆಸರು. ಕಾಫಿ ಕ್ಲಬ್, ಟೆನಿಸ್ ಕ್ಲಬ್, ಲಿಟರರಿ ಕ್ಲಬ್ ಎಂಬಲ್ಲಿ ಈ ಪದ ಉಳಿದು ಬಂದಿದೆ. ಕ್ಲಬ್ ಎಂಬ ಪದಕ್ಕೆ ಸಮಾನಾರ್ಥಕವಾಗಿ ಸಂಘ,ಸಮಾಜ, ಕೂಟ, ಗೋಷ್ಠಿ ಎಂಬ ಪದಗಳಿವೆಯಾದರೂ ಯಾವ ಒಂದೂ ಕ್ಲಬ್ಬಿನ ವೈಶಿಷ್ಟ್ಯ ಮತ್ತು ವ್ಯಾಪ್ತಿಯನ್ನು ಪಡೆದಿಲ್ಲವಾಗಿ ಅದೇ ಪದವನ್ನು ಇಲ್ಲಿ ಅಂಗೀಕರಿಸಲಾಗಿದೆ. ಪ್ರಾಚೀನ ಗ್ರೀಸಿನಲ್ಲಿ ಭೋಜನ, ಪಾನ, ಸಮೂಹವಿವಾಹ-ಇತ್ಯಾದಿ ಸಮಾರಂಭಗಳಲ್ಲಿ ಸೇರುತ್ತಿದ್ದ ಕೂಟಗಳಿಗೆ ಈ ಹೆಸರಿತ್ತು. ಅನಂತರ ಇದನ್ನು ಮತೀಯ ದೀಕ್ಷೆ ಪಡೆದವರ ಸಂಘಕ್ಕೂ ರಾಜಕೀಯ, ವಾಣಿಜ್ಯ, ವ್ಯಾಯಾಮ ಮುಂತಾದ ಗೋಷ್ಠಿಗಳಿಗೂ ಬಳಸಲಾಯಿತು. ರೋಮಿನಲ್ಲಿ ಮತೀಯ ಮತ್ತು ವಾಣಿಜ್ಯ ಸಂಘಗಳಿಗೆ ಈ ಹೆಸರಿತ್ತು. ಅವರ ರಾಜಕೀಯ ಸಂಘಗಳು ತಮ್ಮ ಉದ್ದೇಶ ಮತ್ತು ವ್ಯವಸ್ಥೆಗಳಲ್ಲಿ ಆಧುನಿಕ ಕ್ಲಬ್ಬುಗಳನ್ನೇ ಹೋಲುವಂತಿದ್ದುವು. ಆದರೆ ಕ್ರಮಕ್ರಮವಾಗಿ ಅವು ಪಿತೂರಿಯ ಕೂಟಗಳಾಗುತ್ತ ಬಂದದ್ದರಿಂದ ಜೂಲಿಯಸ್ ಸೀಸರ್ ರಾಷ್ಟ್ರಹಿತಕ್ಕೆ ಹಾನಿ ತರತಕ್ಕವೆಂದು ಬಗೆದು ಅವನ್ನು ದಮನ ಮಾಡಬೇಕಾಯಿತು. ಬಡ ಕುಟುಂಬಗಳಲ್ಲಿ ಸತ್ತವರ ಹೆಣಗಳ ಸಂಸ್ಕಾರಕ್ಕಾಗಿ ಹಣವೊದಗಿಸಲೋಸ್ಕರವೂ ಅಲ್ಲಿ ಕ್ಲಬ್ಬುಗಳು ಏರ್ಪಟ್ಟಿದ್ದುವು. ಭೋಜನಾನಂತರ ನಡೆಯುತ್ತಿದ್ದ ವಿಚಾರಗೋಷ್ಠಿಗಳಿಗೂ ಈ ಪದವನ್ನು ಬಳಸುತ್ತಿದ್ದರು. ಅಂಥ ಗೋಷ್ಠಿಯೊಂದರಲ್ಲಿ ಭಾಗವಹಿಸಿದ ಸಿಸಿರೋ ಅಲ್ಲಿನ ಚರ್ಚೆ, ಸಂಭಾಷಣೆ ಮತ್ತು ಭಾಷಣಾದಿಗಳು ಅಂದಿನ ಊಟದಷ್ಟೇ ರುಚಿಕರವಾಗಿದ್ದುವೆಂದು ಪ್ರಶಂಸಿಸಿದ್ದಾನೆ. ಕ್ಲಬ್ಬುಗಳ ಆಡಳಿತಕ್ಕಾಗಿ ಸಮಿತಿಗಳನ್ನು ರಚಿಸುವುದು, ಕೆಲವು ನೀತಿನಿಯಮಗಳನ್ನೂ ವಿಧಾಯಕಗಳನ್ನೂ ಅನುಮೋದಿಸುವುದು ಈ ಕಾಲಕ್ಕಾಗಲೆ ಕಂಡುಬರುತ್ತಿತ್ತು ಎನ್ನಲಾಗಿದೆ. ಅಲ್ಲಿನ ಸಾರ್ವಜನಿಕ ಸ್ನಾನಘಟ್ಟಗಳಲ್ಲಿ ಸೇರುತ್ತಿದ್ದವರಲ್ಲಿ ಕೂಡ ನಿಜವಾದ ಕ್ಲಬ್ಬಿನ ಮನೋಧರ್ಮ ಕಂಡುಬರುತ್ತಿತ್ತೆಂದು ಹೇಳಲಾಗಿದೆ.

ಬ್ರಿಟಿಷ್ ಕ್ಲಬ್ಬುಗಳು

ಇಂಗ್ಲೆಂಡಿನ ನಾಲ್ಕನೆಯ ಹೆನ್ರಿಯ ಕಾಲದಲ್ಲಿ ಲಂಡನ್ ನಗರದ ಮಿಡ್ಲ್ ಟೆಂಪಲ್ಲಿನ ಬಳಿಯ ಗೃಹವೊಂದರಲ್ಲಿ ಭೋಜನಕ್ಕಾಗಿ ಕ್ಲಬ್ಬಿನಂಥ ಕೂಟವೊಂದನ್ನು ಮಾಡಿಕೊಳ್ಳಲಾಗಿತ್ತು. ಎಲಿಜûಬೆತ್ ರಾಣಿಯ ಕಾಲದಲ್ಲೂ ಸರ್ ವಾಲ್ಟರ್ ರ್ಯಾಲೆಯಿಂದ ಸ್ಥಾಪಿತವಾಗಿದ್ದ ಬ್ರೆಡ್ ಸ್ಟ್ರೀಟ್ ಕ್ಲಬ್ ಎಂಬುದು ಮೆರ್ಮೇಡ್ ಟ್ಯಾವರ್ನ್‍ನಲ್ಲಿ ಸೇರುತ್ತಿತ್ತು. ಮುಖ್ಯವಾಗಿ ಅದೂ ಒಂದು ಭೋಜನಕೂಟವೇ. 1616ರ ಸುಮಾರಿನಲ್ಲಿ ಟೆಂಪಲ್‍ಬಾರ್‍ನ ಬಳಿಯ ಡೆವಿಲ್ ಟ್ಯಾವರ್ನ್‍ನಲ್ಲಿ ಅಪಾಲೊ ಕ್ಲಬ್ ಎಂಬ ಕ್ಲಬ್ಬೊಂದನ್ನು ಬೆನ್ ಜಾನ್ಸನ್ ಆರಂಭಿಸಿದ್ದ. ಲೂಷಿಯಸ್ ಕ್ಯಾರಿ, ಸರ್ ಜಾನ್ ಸಕ್ಲಿಂಗ್, ರಾಬರ್ಟ್ ಹೆರಿಕ್ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಅದರ ಸದಸ್ಯರಾಗಿದ್ದರು. ಕೇವಲ ಪುರುಷರಿಗೆಂದು ಆರಂಭವಾದ ಈ ಕ್ಲಬ್ಬಿನಲ್ಲಿ ವಿಶೇಷ ಸಂದರ್ಭಗಳಲ್ಲಿ ಮಹಿಳೆಯರಿಗೂ ಅವಕಾಶ ದೊರೆಯುತ್ತಿತ್ತು. ಹದಿನೇಳನೆಯ ಶತಮಾನದ ಮಧ್ಯಕಾಲದ ಸುಮಾರಿಗೆ ಕಾಫಿ ನಿಲಯಗಳು ಆರಂಭವಾದಂತೆ ಕ್ಲಬ್ಬುಗಳಿಗೆ ನಿರ್ದಿಷ್ಟ ರೂಪ, ನಿಗದಿಯಾದ ವಸತಿ ರೂಪುಗೊಳ್ಳುವಂತಾಯಿತು. ಕಾಫಿ ನಿಲಯದ ಒಡೆಯ ತನ್ನ ಗೃಹದಲ್ಲಿ ಕ್ಲಬ್ಬಿಗೆಂದು ಒಂದು ಕೊಠಡಿಯನ್ನು ಮೀಸಲಿಡುತ್ತಿದ್ದ. ಅದಕ್ಕೆ ಬಾಡಿಗೆ ಕೇಳುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದ ಸದಸ್ಯರು ಕೊಳ್ಳುತ್ತಿದ್ದ ತಿಂಡಿ ತೀಥಗಳಿಂದ ಅವನಿಗೆ ಆದಾಯ ಬರುತ್ತಿತ್ತು. ಖ್ಯಾತ ವ್ಯಕ್ತಿಗಳು ಬರುತ್ತಿದ್ದುದರಿಂದ ಅವನ ಕಾಫಿ ನಿಲಯಕ್ಕೆ ಒಳ್ಳೆಯ ಹೆಸರೂ ಬರುತ್ತಿತ್ತು. ಆ ವೇಳೆಗೆ ಕ್ಲಬ್ ಎಂಬ ಪದಕ್ಕೆ ಆಧುನಿಕ ಅರ್ಥ ವ್ಯಾಪ್ತಿ ಬರತೊಡಗಿತು. ಸ್ಯಾಮ್ಯುಯೆಲ್ ಪೆಪ್ಸ್ ಪಾಲ್‍ಮಾಲ್‍ನಲ್ಲಿದ್ದ ವುಡ್ಸ್ ಟ್ಯಾವರ್ನ್ ಎಂಬ ಒಂದು ಕ್ಲಬ್ಬನ್ನು ಹೆಸರಿಸಿರುವುದಲ್ಲದೆ ಅವನೂ ಅವನ ಗೆಳೆಯರೂ ಅದರ ಸದಸ್ಯರಾಗಿಯೂ ಇದ್ದರು. 1659ರಲ್ಲಿ ಜೇಮ್ಸ್ ಹ್ಯಾರಿಂಗ್‍ಟನ್ ಸ್ಥಾಪಿಸಿದ ರೋಟಾ ಎಂಬುದು ಹದಿನೇಳನೆಯ ಶತಮಾನದಲ್ಲಿ ಖ್ಯಾತಿಪಡೆದಿದ್ದ ರಾಜಕೀಯ ಕ್ಲಬ್ಬು. ಲಾರ್ಡ್ ವಿಲಿಯಂ ರಸೆóಲ್ ಮುಂತಾದ ರಾಜಕಾರಣಿಗಳು ಆಂಡ್ರೂ ಮಾರ್ವೆಲ್ ನಂಥ ಕವಿಗಳೂ ಅದರ ಸದಸ್ಯರಾಗಿದ್ದರು. ಪೆಪ್ಸ್ ಅದನ್ನು ಕಾಫಿಕ್ಲಬ್ ಎಂದು ಕರೆದಿದ್ದಾನೆ. ಬಹುಶಃ ವೆಸ್ಟ್‍ಮಿನ್ಸ್‍ಟರ್‍ನ ಕಾಫಿ ನಿಲಯವೊಂದರ ಕೊಠಡಿಯಲ್ಲಿ ಸೇರುತ್ತಿದ್ದುದರಿಂದ ಅದನ್ನು ಹಾಗೆ ಕರೆದಿರಬಹುದು. 1693ರಲ್ಲಿ ಮುಂದೆ ಟೋರಿಪಕ್ಷದ ಕಾರ್ಯಕೇಂದ್ರವಾಗಿ ಪರಿವರ್ತನೆಗೊಂಡ ಹ್ವೈಟ್‍ಕ್ಲಬ್ ಎಂಬ ಸಂಸ್ಥೆ ಹ್ವೈಟ್ ಎಂಬಾತನ ಒಂದು ಚಾಕೊಲೆಟ್ ನಿಲಯದಲ್ಲಿ ಆರಂಭವಾಗಿ ಪ್ರಸಿದ್ಧಿಪಡೆಯಿತು. ಮೊದಲು ಅದು ಸಾಮಾಜಿಕ ಸಂಘದಂತೆ ಆರಂಭವಾದರೂ ಅದರ ಒಡೆಯ ಸದಸ್ಯತ್ವವನ್ನು ಆಯ್ದ ವ್ಯಕ್ತಿಗಳಿಗೆ ಮಾತ್ರ ಮೀಸಲು ಮಾಡಿದ್ದುದಲ್ಲದೆ ಅದಕ್ಕಾಗಿ ನಿಯಮಾವಳಿಯನ್ನೂ ರೂಪಿಸಿದ್ದ. ಇದು ಹದಿನೆಂಟನೆಯ ಶತಮಾನದಲ್ಲಿ ಖ್ಯಾತಿಗಳಿಸಿ ಸ್ಥಳದಿಂದ ಸ್ಥಳಕ್ಕೆ ವರ್ಗವಾಗುತ್ತ ಕೊನೆಗೆ ಜಾನ್ ಆರ್ಥರನ ಯತ್ನದಿಂದ ಆರ್ಥರ್ಸ್ ಕ್ಲಬ್ ಆಗಿ ಪರಿವರ್ತನೆಗೊಂಡಿತು. ಹದಿನೇಳನೆಯ ಶತಮಾನದಲ್ಲಿ ಸ್ಟೂವರ್ಟ್ ದೊರೆಗಳ ಕಾಲದಲ್ಲಿ ರಾಯಲ್ ನೇವಿ ಎಂಬುದು ವಿಲಿಯಂ ಪೀಟರ್‍ಸನ್ ಎಂಬಾತನಿಂದ ಡಾಗ್ ಅಂಡ್ ಹ್ವಿಸ್ಲ್ ಟ್ಯಾವರ್ನ್‍ನಲ್ಲಿ ಆರಂಭವಾಗಿತ್ತು. ಪೀಟರ್‍ಸನ್ ಆ ಕಾಲದ ಆರ್ಥಿಕ ತಜ್ಞನೆನಿಸಿದ್ದ. ಮುಂದೆ ಬ್ಯಾಂಕ್ ಆಫ್ ಇಂಗ್ಲೆಂಡಿನ ಉದಯಕ್ಕೆ ಅಲ್ಲಿ ನಡೆಯುತ್ತಿದ್ದ ಕೂಟಗಳು ಅಸ್ತಿಭಾರ ಹಾಕಿದುವು.

ಹದಿನೆಂಟನೆಯ ಶತಮಾನದಲ್ಲಿ ದೇಶಾದ್ಯಂತ ರಾಜಕೀಯ ಧ್ಯೇಯಗಳ ಕ್ಲಬ್ಬುಗಳು ಆರಂಭವಾದುವು. ಅವೆಲ್ಲ ಬಹುಮಟ್ಟಿಗೆ ಉಗ್ರನೀತಿ ಪ್ರತಿಪಾದಕ ಸಂಘಗಳಂತಿದ್ದುವು. ಒಂದನೆಯ ಚಾರಲ್ಸ್‍ನ ಕ್ರೌರ್ಯವನ್ನೂ ಉದ್ಧಂಡತನವನ್ನೂ ಧಿಕ್ಕರಿಸಿದ್ದ ಕಾವ್ಸ್ ಹೆಡ್ ಕ್ಲಬ್ ಎಂಬುದು ಪ್ರಸಿದ್ಧವಾದದ್ದು. ಪುಂಡರು ಪೋಕರಿಗಳು ರಚಿಸಿಕೊಂಡು, ಸಮಾಜಘಾತುಕ ಕಾರ್ಯಗಳನ್ನು ನಡೆಸುತ್ತಿದ್ದ ಕ್ಲಬ್ಬುಗಳೂ ಆ ಕಾಲದಲ್ಲಿ ಇದ್ದುವು. ಜೊತೆಗೆ ನಿರ್ದಿಷ್ಟ ದೃಷ್ಟಿ ಧ್ಯೇಯಗಳೇ ಇಲ್ಲದ ಕ್ಲಬ್ಬುಗಳೂ ಆರಂಭವಾಗಿದ್ದುವು. ಈ ಕ್ಲಬ್ಬುಗಳ ವಿವರ ಸ್ಪೆಕ್ಟೇಟರ್ ಪತ್ರಿಕೆಯಲ್ಲಿವೆ.

ಉತ್ತಮ ದೃಷ್ಟಿಧ್ಯೇಯಗಳಿಂದ ಪ್ರೇರಿತವಾಗಿ, ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡು, ಕೀರ್ತಿಪಡೆದಿದ್ದ ಆ ಕಾಲದ ಕ್ಲಬ್ಬುಗಳೆಲ್ಲ ಬಹುಮಟ್ಟಿಗೆ ರಾಜಕೀಯ ಬಣ್ಣದವಾಗಿದ್ದುವು. ಅಕ್ಟೋಬರ್ ಕ್ಲಬ್ ಎಂಬುದು ಟೋರಿಗಳದ್ದಾದರೆ, ಕೋಕೊ ಟ್ರೀ ಜಾಕೊಬೈಟ್ ಪಕ್ಷದವರದ್ದು. ಜೋನಾಥನ್ ಸ್ವಿಫ್ಟ್ ಎರಡನೆಯದರ ಸದಸ್ಯನಾಗಿದ್ದ. ಸೇಂಟ್ ಜೇಮ್ಸ್ ರಸ್ತೆಯಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ಬ್ರೂಕ್ಸ್ ಕ್ಲಬ್ಬೂ ಆಗಲೆ ಆರಂಭವಾಯಿತು.

ಅಂದಿನ ಕ್ಲಬ್ಬುಗಳು ರಾಜಕೀಯವಾಗಿ ತುಂಬ ಪ್ರಭಾವಶಾಲಿಗಳಾಗಲಿಲ್ಲವಾಗಿ ಕ್ರಮೇಣ ಅವು ಸಾಮಾಜಿಕ, ಕಲಾತ್ಮಕ ಮತ್ತು ಸಾಹಿತ್ಯಾತ್ಮಕ ರುಚಿಪ್ರಸಾರಕ್ಕೆ ತವರೆನಿಸಿದ್ದುವು. ಬ್ರೂಕ್ಸ್ ಕ್ಲಬ್ಬಿನ ಸದಸ್ಯರು ಸಾಹಿತ್ಯದಲ್ಲಿ ರುಚಿಶುದ್ಧಿಯನ್ನು ತಂದರು. ಬ್ಲೂ ಸ್ಟಾಕಿಂಗ್ ಕ್ಲಬ್ಬಿನ ಸದಸ್ಯರು ಶ್ರೀಮಂತ ಸಮಾಜದ ನಯನಾಜೂಕಿನ ಜೀವನಕ್ಕೆ ಮಾರ್ಗದರ್ಶಿಗಳೆನಿಸಿದ್ದರು. 1714ರಲ್ಲಿ ಸ್ವಿಫ್ಟ್ ಸ್ಥಾಪಿಸಿದ ಸ್ಕ್ರಿಬ್ಲರ್ಸ್ ಕ್ಲಬ್ಬು ಆರ್ಲ್ ಆಫ್ ಆಕ್ಸ್‍ಫರ್ಡ್ ವೈಕೌಂಟ್ ಬೋಲಿಂಗ್ ಬ್ರೂಕ್ ಮುಂತಾದ ಸೌಂದರ್ಯೋಪಾಸಕರನ್ನೂ ಜಾನ್ ಗೇ, ಅಲೆಕ್ಸಾಂಡರ್ ಪೋಪ್‍ರಂಥ ಕವಿಗಳನ್ನೂ ಸದಸ್ಯರನ್ನಾಗಿ ಪಡೆದಿತ್ತು. 1734ರಲ್ಲಿ ಆರಂಭವಾದ ಡಲೆಂಟಾಂಟಿ ಕ್ಲಬ್ಬು ಕಲಾಕೃತಿಗಳನ್ನು ಸಂಗ್ರಹಿಸುವ ಹವ್ಯಾಸಿಗಳನ್ನು ಒಳಗೊಂಡಿತ್ತು. ಅಂದು ಅದು ಸಂಗ್ರಹಿಸಿದ್ದ ಜಾಷುವ ರೆನಲ್ಡ್ಸ್ ಮತ್ತು ಜಾರ್ಜ್ ನಾಪ್ಟನ್‍ರ ಚಿತ್ರಗಳನ್ನು ಇಂದಿಗೂ ಪಿಕ್ಯಾಡಿಲಿಯ ಸೇಂಟ್ ಜೇಮ್ಸ್ ಕ್ಲಬ್ಬಿನಲ್ಲಿ ರಕ್ಷಿಸಿಡಲಾಗಿದೆ. ಜೋಸೆಫ್ ಜೇಕಬ್ ಟಾನ್ಸನ್ ಎಂಬ ಪುಸ್ತಕ ವ್ಯಾಪಾರಿಯೊಬ್ಬ ಹದಿನೆಂಟನೆಯ ಶತಮಾನದ ಆದಿಯಲ್ಲಿ ಸ್ಥಾಪಿಸಿದ ಕಿಟ್-ಕ್ಯಾಟ್ ಕ್ಲಬ್ಬು ಪ್ರಸಿದ್ಧ ಸಾಹಿತಿಗಳ ಸಮ್ಮೇಳನಗಳಿಗೆ ಆಶ್ರಯಸ್ಥಾನವಾಗಿತ್ತು. 1749ರಲ್ಲಿ ಡಾ.ಜಾನ್ಸನ್ ಐವಿ ಲೇನ್ ಕ್ಲಬ್ಬನ್ನು ಆರಂಭಿಸಿದ. 15 ವರ್ಷಗಳ ಅನಂತರ ಜಾಷುವ ರೆನಲ್ಡ್ಸ್‍ನ ಸಹಕಾರದೊಡನೆ ಆತ ಮತ್ತೊಂದು ಕ್ಲಬ್ಬನ್ನು ಆರಂಭಿಸಿದ. ಅದರ ಹೆಸರು ದಿ ಕ್ಲಬ್ ಎಂದು. ಅದರ ಸದಸ್ಯರ ಸಂಖ್ಯೆಯನ್ನು 40ಕ್ಕೆ ಸೀಮಿತಗೊಳಿಸಲಾಗಿತ್ತು. ಆಲಿವರ್ ಗೋಲ್ಡ್ ಸ್ಮಿತ್, ಎಡ್ಮಂಡ್ ಬರ್ಕ್, ಡೇವಿಡ್ ಗ್ಯಾರಿಕ್, ಜೇಮ್ಸ್ ಬಾಸ್ವೆಲ್ ಜಾನ್ ಹಾಕಿನ್ಸ್ ಮುಂತಾದ ಪ್ರಸಿದ್ಧ ಪುರುಷರು ಅದರ ಸದಸ್ಯತ್ವ ಹೊಂದಿದ್ದರು. ಅನಂತರ ತಾನು ಸಾಯುವುದಕ್ಕೆ ಸ್ವಲ್ಪ ಮೊದಲು 1783ರಲ್ಲಿ ಜಾನ್ಸನ್ ಎಸೆಕ್ಸ್ ಹೆಡ್ ಎಂಬ ಮತ್ತೊಂದು ಕ್ಲಬ್ಬನ್ನು ಆರಂಭಿಸಿದ. ಬೂಡ್ಲ್ ಕ್ಲಬ್, ಕವೆಂಟ್ರಿ ಹೌಸ್‍ಕ್ಲಬ್ ಮುಂತಾದವೂ ಆ ಕಾಲದಲ್ಲಿ ಆರಂಭವಾಗಿ ಇಂದಿಗೂ ಉಳಿದುಕೊಂಡು ಬಂದಿವೆ.

ಇಂಗ್ಲೆಂಡಿನ ಮತ್ತು ಫ್ರಾನ್ಸಿನ ಮಾದರಿಯ ಕ್ಲಬ್ಬುಗಳ ಪ್ರಭಾವ ಹದಿನೆಂಟನೆಯ ಶತಮಾನದ ಕೊನೆಯ ವೇಳೆಗೆ ಆ ರಾಷ್ಟ್ರಗಳ ವಸಾಹತುಗಳಿಗೂ ಹರಿದು ಬಂತು. ಫ್ರೆಂಚರು ದಕ್ಷಿಣ ಭಾರತದಲ್ಲೂ ಇಂಗ್ಲಿಷರು ಕಲ್ಕತ್ತ, ಮದ್ರಾಸು ಮುಂತಾದೆಡೆಯೂ ಕೆಲವು ಕ್ಲಬ್ಬುಗಳನ್ನು ಆರಂಭಿಸಿದರು. ಟಿಪ್ಪೂ ಸುಲ್ತಾನ್ ಸಾಯುವುದಕ್ಕೆ ಸ್ವಲ್ಪ ಮುಂದೆ, ಶ್ರೀರಂಗಪಟ್ಟಣದಲ್ಲಿ, ಕ್ಲಬ್ಬೊಂದನ್ನು ಫ್ರಾನ್ಸಿನ ರಾಜದೂತನೊಬ್ಬ ಆರಂಭಿಸಿದನೆನ್ನಲಾಗಿದೆ.

ಹತ್ತೊಂಬತ್ತು-ಇಪ್ಪತ್ತನೆಯ ಶತಮಾನಗಳಲ್ಲಿ ವಿವಿಧ ವೃತ್ತಿಯವರು, ವಿವಿಧ ಸಾರ್ವಜನಿಕ ಸೇವಾಕ್ಷೇತ್ರದವರು, ಮಕ್ಕಳು, ಯುವಕರು, ನಿವೃತ್ತ ಅಧಿಕಾರಿಗಳು, ಮಹಿಳೆಯರು, ಆಟಗಾರರು, ಹವ್ಯಾಸಿಗಳು, ಪ್ರವಾಸಿಗರು ತಮ್ಮದೇ ಆದ ಕ್ಲಬ್ಬುಗಳನ್ನು ಎಲ್ಲ ದೇಶಗಳಲ್ಲೂ ಸ್ಥಾಪಿಸತೊಡಗಿದರು. ಅವುಗಳಲ್ಲಿ ಖ್ಯಾತಿಗಳಿಸಿದ ಕೆಲವು ಕಲಾ ಮತ್ತು ಸಾಹಿತ್ಯಕ ಕ್ಲಬ್ಬುಗಳನ್ನು ಇಲ್ಲಿ ಉಲ್ಲೇಖಿಸಬಹುದು. 1823ರಲ್ಲಿ ಲಂಡನ್ನಿನ ಆಲ್ಬಿಮಾರ್ಲೆ ರಸ್ತೆಯ ಜಾನ್ ಮರ್ರೇ ನಿಲಯದಲ್ಲಿ ಜಾನ್ ವಿಲ್ಸನ್ ಕ್ರೋಕರ್ ಆರಂಭಿಸಿದ ಅಥೀನಿಯಂ ಎಂಬುದು ಇಂಗ್ಲೆಂಡಿನ ಆ ಕಾಲದ ಪ್ರಸಿದ್ಧ ಸಾಹಿತಿಗಳ ಸಂಪರ್ಕ ಹೊಂದಿತ್ತು. ವಾಲ್ಟರ್ ಸ್ಕಾಟ್, ಟಾಮ್ ಮೂರ್ ಮತ್ತು ಇತರ ಲೇಖಕರು ಅದರ ಸದಸ್ಯರಾಗಿದ್ದರು. 1868ರಲ್ಲಿ ಆರಂಭವಾದ ಸ್ಯಾವಿಲ್, 1857ರಲ್ಲಿ ಆರಂಭವಾದ ಸ್ಯಾವೇಜ್ ಎಂಬ ಕ್ಲಬ್ಬುಗಳು ಅಷ್ಟೇ ಖ್ಯಾತಿ ಗಳಿಸಿದ್ದುವು. 1863ರಲ್ಲಿ ಆಟ್ರ್ಸ್ ಕ್ಲಬ್ಬೂ 1891ರಲ್ಲಿ ಆಥರ್ಸ್ ಕ್ಲಬ್ಬೂ 1921ರಲ್ಲಿ ಪಿ.ಇ.ಎನ್. ಕ್ಲಬ್ಬಿನ ಮೂಲಕೇಂದ್ರವೂ ಆರಂಭವಾದುವು. ಆಗ ಎಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ತಮ್ಮವೇ ಆದ ಕ್ಲಬ್ಬುಗಳೂ ಅಸ್ತಿತ್ವಕ್ಕೆ ಬಂದುವು. ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳ ಸಂಘಗಳು 1830ರಲ್ಲಿ ಆರಂಭವಾದುವು. 1885ರಲ್ಲಿ ಸಿಟಿ ಯೂನಿವರ್ಸಿಟಿ ಕ್ಲಬ್ಬು ಅಸ್ತಿತ್ವಕ್ಕೆ ಬಂತು.

ರಾಜಕೀಯ ಕ್ಷೇತ್ರದಲ್ಲಿ ಆಗ ಎರಡು ಪ್ರಮುಖ ಕ್ಲಬ್ಬುಗಳು ಅಸ್ತಿತ್ವಕ್ಕೆ ಬಂದುವು. 1831ರಲ್ಲಿ ಕನ್ಸರ್‍ವೆಟಿವ್ ಪಕ್ಷದವರು ಕಾರ್ಲ್‍ಟನ್ ಕ್ಲಬ್ಬನ್ನೂ ಲಿಬರಲ್ ಪಕ್ಷದವರು ರಿಫಾರಂ ಕ್ಲಬ್ಬನ್ನೂ ಸ್ಥಾಪಿಸಿದರು. ಅವೆರಡೂ ಲಂಡನ್ ನಗರದಲ್ಲಿ ಭವ್ಯಮಂದಿರಗಳನ್ನು ಪಡೆದಿದ್ದುವು. ಅವೆರಡನ್ನು ಅನುಸರಿಸಿ ಇತರ ಅನೇಕ ರಾಜಕೀಯ ಕ್ಲಬ್ಬುಗಳು ಕ್ರಮೇಣ ಹುಟ್ಟಿಕೊಂಡುವು.

ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಕೆಲವು ಕ್ಲಬ್ಬುಗಳಲ್ಲಿ ಜೂಜಾಟ ನಡೆಯುತ್ತಿತ್ತು. ಮುಂದಿನ ಶತಮಾನದಲ್ಲಿ ಅಂಥ ಕ್ಲಬ್ಬುಗಳೂ ಇನ್ನೂ ಹೆಚ್ಚಿಕೊಂಡುವು. ದಾಳದಾಟ, ಇಸ್ಪೀಟಾಟ ಮುಂತಾದ ಜೂಜಿನಾಟಗಳಿಗೆ ಅವು ತವರೆನಿಸಿ ಸೋಮಾರಿ ಶ್ರೀಮಂತರಲ್ಲಿ ಕೆಲವರಿಗೆ ಅವು ಪ್ರಿಯವಾಗುತ್ತ ಬಂದುವು. ಆಟಗಾರರಿಗೆ ಅಲ್ಲಿ ಊಟ ತಿಂಡಿ ತೀರ್ಥಗಳಿಗೂ ಸಮರ್ಪಕ ಏರ್ಪಾಡಿದ್ದುದರಿಂದ ಅನೇಕರು ಮನೆ ಮಠಗಳನ್ನು ಮರೆತು ತಿಂಗಳುಗಟ್ಟಲೆ ಅಲ್ಲಿಯೇ ಮೊಕ್ಕಾಂ ಮಾಡುತ್ತಿದ್ದುದೂ ಉಂಟು. ಇದರ ಫಲವಾಗಿ ಆ ಶತಮಾನದ ಕೊನೆಕೊನೆಗೆ ಕ್ಲಬ್ಬು ಜೀವನವೆಂದರೆ ದೂಷ್ಯವೆಂಬ ಮನೋಭಾವ ಜನತೆಯಲ್ಲಿ ಬೆಳೆಯುತ್ತ ಬಂತು.

ವಿಕ್ಟೋರಿಯ ರಾಣಿಯ ಆಳ್ವಿಕೆಯ ಕೊನೆಕೊನೆಗೆ ಮಹಿಳಾ ಕ್ಲಬ್ಬುಗಳು ಆರಂಭವಾದುವು. ಅವುಗಳೆಲ್ಲ ಬಹುಮಟ್ಟಿಗೆ ಕೆಲಸಕ್ಕೆ ಸೇರಿದ್ದ ಮಹಿಳೆಯರ ವಸತಿಗೃಹಗಳ ರೂಪದಲ್ಲಿದ್ದುವು. 1883ರ ವರೆಗೆ ಕ್ಲಬ್ಬುಗಳ ಸದಸ್ಯತ್ವ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಕೆಲವು ಕ್ಲಬ್ಬುಗಳಲ್ಲಿ ಮಹಿಳೆಯರಿಗೆ ಪ್ರವೇಶವಿತ್ತಾದರೂ ಅದು ಕೇವಲ ರಿಯಾಯಿತಿ ರೂಪದಲ್ಲಿತ್ತು. ಅದೇ ವರ್ಷ ಅಲೆಕ್ಸಾಂಡ್ರಿಯ ಕ್ಲಬ್ಬು ಕೇವಲ ಮಹಿಳೆಯರಿಗೆ ಮಾತ್ರವೆಂದು ಆರಂಭವಾಯಿತು. ಒಮ್ಮೆ ಕಾರಣಾಂತರದಿಂದ ಅಲ್ಲಿಗೆ ಹೋಗಬಯಸಿದ ವೇಲ್ಸಿನ ರಾಜಕುಮಾರನಿಗೂ ಅಲ್ಲಿ ಪ್ರವೇಶ ದೊರೆಯಲಿಲ್ಲವಂತೆ. ಅನಂತರ 1887ರಲ್ಲಿ ವಿಶ್ವವಿದ್ಯಾಲಯದ ಮಹಿಳೆಯರ ಕ್ಲಬ್ಬೂ 1829ರಲ್ಲಿ ಪಯನಿಯರ್ ಕ್ಲಬ್ಬೂ ಆರಂಭವಾದುವು. ಮೂರು ವರ್ಷಗಳ ಅನಂತರ ಅಮೆರಿಕದಿಂದ ಲಂಡನ್ನಿಗೆ ಬರುತ್ತಿದ್ದ ಮಹಿಳೆಯರಿಗಾಗಿ ಅಮೆರಿಕನ್ ವಿಮೆನ್ಸ್ ಕ್ಲಬ್ಬೂ 1897ರಲ್ಲಿ ಎಂಪ್ರೆಸ್ ಕ್ಲಬ್ಬೂ ಜನ್ಮವೆತ್ತಿದುವು. ಲೇಡೀಸ್ ಎಂಪೈರ್ (1902). ಲಂಡನ್ ಲೈಸಿಯಂ(1904), ಲೇಡೀಸ್ ಕಾರ್ಲ್‍ಟನ್ (1906)-ಇವೆಲ್ಲ ಕ್ರಮೇಣ ಹುಟ್ಟಿದ ಕ್ಲಬ್ಬುಗಳು. ಹಾಗೆ ಆರಂಭವಾದ ಕ್ಲಬ್ಬುಗಳು ಕೇವಲ ವಿಹಾರಗೃಹಗಳಾಗಿರದೆ ಮಹಿಳೆಯರ ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಚಳವಳಿ ಆರಂಭಿಸಿದ್ದು, ಗಮನಾರ್ಹ ಸಂಗತಿ. ಕ್ರಮಕ್ರಮವಾಗಿ ಸಾಹಿತ್ಯ, ಸಂಗೀತ, ನೃತ್ಯ, ಆಟಪಾಟಗಳು, ರಾಜಕೀಯ ಇತ್ಯಾದಿ ಆಸಕ್ತಿಗಳಿಗೆಲ್ಲ ಪ್ರತ್ಯೇಕ ಮಹಿಳಾ ಕ್ಲಬ್ಬುಗಳು ನಿರ್ಮಾಣವಾದುವು. ಲಂಡನ್ನಿನಲ್ಲಿ ಮೊದಲು ಆರಂಭವಾದ ಮಹಿಳಾ ಕ್ಲಬ್ಬುಗಳು ಈ ಚಳವಳಿ ಕ್ರಮೇಣ ಗ್ರಾಮಾಂತರ ಪ್ರದೇಶಗಳಿಗೂ ಹರಡಿತು.

ಟ್ಯೂಡರ್ ದೊರೆಗಳ ಕಾಲದಿಂದಲೂ ಕ್ರೀಡಾ ಕ್ಲಬ್ಬುಗಳು ಅಸ್ತಿತ್ವದಲ್ಲಿದ್ದುವು. ಹದಿನೆಂಟನೆಯ ಶತಮಾನದ ಮಧ್ಯಕಾಲದಿಂದ ಇಂಗ್ಲೆಂಡಿನಲ್ಲೂ ಯೂರೋಪಿನಲ್ಲೂ ಕ್ರೀಡಾಪಟುಗಳು ತಮ್ಮವೇ ಆದ ಕ್ಲಬ್ಬುಗಳನ್ನು ಏರ್ಪಡಿಸಿಕೊಳ್ಳಲಾರಂಭಿಸಿದರು. ಪ್ರಿನ್ಸ್ ಆರ್ಥರ್ಸ್ ನೈಟ್ಸ್, ಸನ್ಸ್ ಆಫ್ ದಿ ಥೇಂಸ್ ಎಂಬುವು ಅವುಗಳಲ್ಲಿ ಮುಖ್ಯವಾದುವು. ಥೇಂಸ್ ರೋಯಿಂಗ್ ಕ್ಲಬ್, ರಾಯಲ್ ಥೇಂಸ್ ಯಾಚ್ ಕ್ಲಬ್, ಲಂಡನ್ ರೋಯಿಂಗ್ ಕ್ಲಬ್, ರಾಯಲ್ ಟಾಕ್ಸೊಫಿಲೈಟ್ ಇವೆಲ್ಲ ಅದೇ ಮಾದರಿಯ ಕ್ಲಬ್ಬುಗಳು. ಹ್ಯಾಂಬಲ್ಡನ್ ಕ್ಲಬ್ಬಿನ ಸದಸ್ಯರು ಕ್ರಿಕೆಟ್ ಕ್ರೀಡೆಯ ಪ್ರಗತಿಗೆ ಅಸ್ತಿಭಾರ ಹಾಕಿದರು. ಇದು ಶಿಥಿಲವಾಗುತ್ತಿದ್ದಂತೆ ಪ್ರಖ್ಯಾತ ಎಂ.ಸಿ.ಸಿ.ಯ (ಮಾರ್ಲಬನ್ ಕ್ರಿಕೆಟ್ ಕ್ಲಬ್) ಉದಯವಾಯಿತು(1787). 1750ರಲ್ಲಿ ಪಾಲ್‍ಮಾಲ್ ಎಂಬಲ್ಲಿನ ಒಂದು ಕಾಫಿ ನಿಲಯದಲ್ಲಿ ಕುದುರೆಜೂಜಿನಲ್ಲಿ ಆಸಕ್ತಿಯಿದ್ದ ಕೆಲವರು ಜಾಕೀಸ್ ಕ್ಲಬ್ಬನ್ನು ಆರಂಭಿಸಿದರು. ಅದು ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕುದುರೆ ಜೂಜಿಗೆ ಸಂಬಂಧಿಸಿದಂತೆ ನೀತಿನಿಯಮಗಳನ್ನು ರೂಪಿಸಲು ಶಕ್ತವಾಯಿತು. ಅನಂತರ ಟರ್ಫ್ ಕ್ಲಬ್, ವಿಕ್ಟೋರಿಯ ಕ್ಲಬ್ ಮತ್ತು ಇತರ ಕ್ಲಬ್ಬುಗಳೂ ಜೂಜಿನಲ್ಲಿ ಆಸಕ್ತಿಯಿದ್ದವರಿಂದ ಆರಂಭವಾದುವು. ಕಾಲಕ್ರಮದಲ್ಲಿ ಈಜುವ ಕ್ಲಬ್ಬು, ಗಾಲ್ಫರ್ಸ್ ಕ್ಲಬ್, ಫುಟ್‍ಬಾಲ್ ಕ್ಲಬ್, ಓಷನ್ ರೇಸಿಂಗ್ ಕ್ಲಬ್, ಆಲ್ಪೈನ್ ಕ್ಲಬ್-ಇತ್ಯಾದಿ ವಿವಿಧ ಆಟಗಳ ಕ್ಲಬ್ಬುಗಳು ಆರಂಭವಾದುವು.

ಪಟ್ಟಣಗಳಂತೆ ಗ್ರಾಮಾಂತರ ಪ್ರದೇಶಗಳಲ್ಲೂ ಕ್ಲಬ್ಬುಗಳು ಆರಂಭವಾದುವು. ಅವು ಗ್ರಾಮಜೀವನದ ಕೇಂದ್ರಗಳಂತಿದ್ದುವು. ವಿವಿಧ ಮೂಲಗಳಿಂದ ಚಂದಾಹಣವನ್ನು ಸಂಗ್ರಹಿಸಿ ಕಷ್ಟದಲ್ಲಿ ಸಿಕ್ಕಿದವರಿಗೆ ಸಹಾಯ ಮಾಡುವುದು ಅವುಗಳ ಒಂದು ಮುಖ್ಯ ಉದ್ದೇಶವಾಗಿತ್ತು. ಆಗಾಗ ಸದಸ್ಯರು ಊರಿನ ಒಂದೆಡೆ ಸಭೆ ಸೇರುತ್ತಿದ್ದರು. ವರ್ಷಕ್ಕೊಮ್ಮೆ ಆಟಪಾಟಗಳನ್ನೂ ಪೂಜೆಪುನಸ್ಕಾರಗಳನ್ನೂ ನಡೆಸುತ್ತಿದ್ದರು. ಮುಖ್ಯವಾಗಿ ಅವು ಬೆನಿಫಿಟ್ ಕ್ಲಬ್‍ಗಳಾಗಿದ್ದವು ತಮ್ಮ ಸದಸ್ಯರಿಗೆ ಅಗತ್ಯವಾದಾಗ ಸಹಾಯ ನೀಡುತ್ತಿದ್ದ ಆ ಕ್ಲಬ್ಬುಗಳು ಈಚೆಗೆ ರಾಷ್ಟ್ರೀಯ ಜೀವವಿಮೆ ಜಾರಿಗೆ ಬಂದ ಮೇಲೆ ನಿಂತುಹೋದುವು.

ಕ್ಲಬ್ಬುಗಳ ಅವನತಿ : ಈಚೆಗೆ ಕಾರಣಾಂತರಗಳಿಂದ ಬ್ರಿಟಿಷ್ ಕ್ಲಬ್ಬುಗಳ ಪ್ರಾಶಸ್ತ್ಯ ಕುಗ್ಗುತ್ತಿದೆ. ತಮ್ಮ ಸಾಹಿತ್ಯ ಮತ್ತು ಇತಿಹಾಸದೊಡನೆ ಹೆಣೆದುಕೊಂಡು ಬಂದಿರುವ ಇವುಗಳ ಅವನತಿ ಅಲ್ಲಿನ ಸಂಪ್ರದಾಯವಾದಿಗಳ ಮನಸ್ಸಿನಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅವನತಿಗಿಂತಲೂ ತೀವ್ರತರವಾದ ಪರಿಣಾಮವನ್ನುಂಟುಮಾಡಿದೆ. 1962ರಿಂದ ಈಚಿನ ಹತ್ತು ವರ್ಷಗಳಲ್ಲಿ ಸುಮಾರು ಹದಿನೈದು ಕ್ಲಬ್ಬುಗಳು ಮುಚ್ಚಿಹೋಗಿವೆ ಅಥವಾ, ಇತರ ಕ್ಲಬ್ಬುಗಳೊಡನೆ ಸಮಾವೇಶಗೊಂಡಿವೆ. ಉಳಿದಿರುವ ಸುಮಾರು 35 ಕ್ಲಬ್ಬುಗಳು ಇನ್ನು ಒಂದೆರಡು ದಶಮಾನಗಳಲ್ಲಿ ಮುಚ್ಚಿಹೋಗಬಹುದೆಂದು ಶಂಕಿಸಲಾಗಿದೆ. ಕ್ಲಬ್ಬುಗಳ ರಾಜಕೀಯ ಪ್ರಭಾವ ಇಂದಿಗೂ ಉಳಿದುಕೊಂಡು ಬಂದಿದ್ದರೂ ಯುವಜನರು ತಮ್ಮ ಜೀವನದ ಉನ್ನತಿಗಾಗಲಿ, ಅಂತಸ್ತಿನ ಸ್ಥಾಪನೆಗಾಗಲಿ ಇವನ್ನು ಆಶ್ರಯಿಸುತ್ತಿಲ್ಲ; ಅಲ್ಲಿನ ಅಧಿಕಾರ ಸ್ಥಾನಮಾನಗಳನ್ನು ಗಳಿಸುವುದರಲ್ಲಿ ಯಾವ ಆಸಕ್ತಿಯನ್ನೂ ತೋರುತ್ತಿಲ್ಲ. ಏಕೆಂದರೆ ಆ ಸ್ಥಾನಗಳಿಗೆ ಹಿಂದಿದ್ದ ಮಹತ್ತ್ವ ಉಳಿದುಕೊಂಡು ಬಂದಿಲ್ಲ. ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಹೆಚ್ಚು ಸದಸ್ಯರನ್ನು ಆಕರ್ಷಿಸಲು ಸದಸ್ಯತ್ವದ ಶುಲ್ಕವನ್ನು ತಗ್ಗಿಸಲಾಗಿದೆ. ದುಡ್ಡು ಕೊಡಬಲ್ಲ ಯಾರನ್ನಾದರೂ ಸದಸ್ಯರನ್ನಾಗಿ ಸೇರಿಸಿಕೊಳ್ಳುವುದು ಕಂಡುಬರುತ್ತಿದೆ. ಸದಸ್ಯತ್ವ ನೀಡುವಲ್ಲಿ ವ್ಯಕ್ತಿಗಳ ಮನೆತನವನ್ನಾಗಲಿ ಸಾಮಾಜಿಕ ಸ್ಥಾನವನ್ನಾಗಲಿ ಅಷ್ಟಾಗಿ ಪರಿಗಣಿಸುತ್ತಿಲ್ಲ.

ಬೂಡ್ಲ್‍ಸ್, ಬೂಕ್ಸ್, ಹ್ವೈಟ್ಸ್ ಮುಂತಾದ ಕೆಲವು ಕ್ಲಬ್ಬುಗಳೇನೊ ಇನ್ನೂ ಉತ್ತಮಸ್ಥಿತಿಯಲ್ಲೇ ಇವೆ. ಅಲ್ಲಿ ಸದಸ್ಯತ್ವ ಪಡೆಯುವುದು ಇಂದಿಗೂ ಸ್ವಲ್ಪ ಕಷ್ಟ. ಅವುಗಳ ಆರ್ಥಿಕ ಸ್ಥಿತಿಯೂ ಚೆನ್ನಾಗಿದೆ. ಆದರೆ ಮಿಕ್ಕ ಬಹುತೇಕ ಕ್ಲಬ್ಬುಗಳು ಕ್ರಮೇಣ ತಮ್ಮ ಆಸ್ತಿಪಾಸ್ತಿಗಳನ್ನು ಮಾರಿಕೊಂಡು ಕರಗಿಹೋಗುತ್ತಿವೆ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಕ್ಲಬ್ಬುಗಳು 17ನೆಯ ಶತಮಾನದ ಇಂಗ್ಲಿಷ್ ಕ್ಲಬ್ಬುಗಳು ಅಮೆರಿಕಕ್ಕೆ ಮಾದರಿಯೆನಿಸಿದುವು. ಹದಿನೆಂಟನೆಯ ಶತಮಾನದಲ್ಲಿ ಅಲ್ಲಿನ ಪ್ರಮುಖ ನಗರಗಳಲ್ಲಿ ಪ್ರಾರಂಭವಾದ ಕ್ಲಬ್ಬುಗಳು ಸದಸ್ಯರ ಸಾಮಾಜಿಕ ಜೀವನದ ಕೇಂದ್ರಗಳಾದುವು. ಅನಂತರ ಅವು ಕ್ರಮಕ್ರಮವಾಗಿ ಗ್ರಾಮಾಂತರ ಪ್ರದೇಶಗಳಿಗೂ ಹರಡಿದುವು. ನಗರಗಳಲ್ಲಿ ಮೊದಮೊದಲು ಆರಂಭವಾದವು ಕೇವಲ ಶ್ರೀಮಂತರನ್ನು ಮಾತ್ರ ಸದಸ್ಯರನ್ನಾಗಿ ಸೇರಿಸಿಕೊಂಡು ಹೆಚ್ಚು ಚಂದಾ ತೆಗೆದುಕೊಳ್ಳುತ್ತಿದ್ದುವು. ಅನಂತರ ಆರಂಭವಾದುವು ಸಾಹಿತ್ಯ, ಕಲೆ, ವಿಜ್ಞಾನ ಇತ್ಯಾದಿ ವಿಶಿಷ್ಟ ಆಸಕ್ತಿಯವರನ್ನು ಮಾತ್ರ ಸೇರಿಸಿಕೊಳ್ಳಲಾರಂಭಿಸಿದುವು. ಹಾಗೆಯೆ, ವಿವಿಧ ಕ್ರೀಡಾಕ್ಲಬ್ಬುಗಳೂ ಅಸ್ತಿತ್ವಕ್ಕೆ ಬಂದುವು.

ಪೌರಸತ್ತೆಯ ತತ್ತ್ವಕ್ಕೆ ರಾಷ್ಟ್ರದಲ್ಲಿ ಮನ್ನಣೆ ಹೆಚ್ಚಿದಂತೆ ಎಲ್ಲರನ್ನೂ ಸೇರಿಸಿಕೊಳ್ಳುವ ಸಾಮಾನ್ಯ ಕ್ಲಬ್ಬುಗಳು 19ನೆಯ ಶತಮಾನದಲ್ಲಿ ರಾಷ್ಟ್ರಾದ್ಯಂತ ಅಸ್ತಿತ್ವಕ್ಕೆ ಬಂದುವು. ಈ ನೂತನ ಕ್ಲಬ್ಬುಗಳು ಈಚೆಗೆ ದೇಶದ ರಾಜಕೀಯ ಜೀವನಕ್ಕೆ ಅಸ್ತಿಭಾರವಾಗಿ ಪರಿಣಮಿಸಿವೆ. ಚುನಾವಣೆಗಳಲ್ಲಿ ಅವು ಪ್ರಧಾನಪಾತ್ರ ವಹಿಸುತ್ತಿವೆ ಆದರೂ ಆಯಾ ಕ್ಲಬ್ಬು ತನ್ನ ಸದಸ್ಯರ ಸಾಮಾಜಿಕ ಜೀವನದ ಕಾರ್ಯಕ್ರಮಗಳಿಗೂ ವ್ಯವಸ್ಥೆ ಮಾಡುತ್ತಿದೆ. ಈಚೆಗೆ ವಿವಿಧ ರೀತಿಯ ಸೇವಾನಿರತ ಕ್ಲಬ್ಬುಗಳೂ ಆರಂಭವಾಗಿವೆ. ಅವುಗಳಲ್ಲಿ ಅಂತರರಾಷ್ಟ್ರೀಯವಾಗಿ ವ್ಯಾಪಿಸಿ ಖ್ಯಾತಿಗಳಿಸಿರುವ ರೋಟರಿ ಕ್ಲಬ್, ಎಕ್ಸ್‍ಚೇಂಜ್ ಕ್ಲಬ್, ಕಿವಾನಿಸ್ ಕ್ಲಬ್, ಲಯನ್ಸ್ ಕ್ಲಬ್-ಇವು ಮುಖ್ಯವಾದುವು. ಇವೆಲ್ಲ ಆದರ್ಶ ಸದಸ್ಯತ್ವಕ್ಕೆ ಹೆಚ್ಚಿನ ಪ್ರಾಮುಖ್ಯವೀಯತಕ್ಕವು. ಜೊತೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಇವು ಏರ್ಪಡಿಸುತ್ತವೆ.

20ನೆಯ ಶತಮಾನದಲ್ಲಿ ಉದ್ಯೋಗಗಳು ಹೆಚ್ಚು ಹೆಚ್ಚು ಯಂತ್ರಚಾಲಿತವಾದಂತೆ ಕೆಲಸಗಾರರಿಗೆ ವಿರಾಮವೂ ಹೆಚ್ಚಾಗಿ ಸಿಕ್ಕುವಂತಾಯಿತು. ಇದರಿಂದ ನಗರಗಳಲ್ಲಿ ಕೇವಲ ವಿರಾಮಕಾಲದ ವಿನಿಯೋಗಕ್ಕೂ ವಿಹಾರಕ್ಕೂ ವಿಧವಿಧವಾದ ಕ್ಲಬ್ಬುಗಳು ಅಸ್ತಿತ್ವಕ್ಕೆ ಬಂದುವು. ನಗರ ಜೀವನದ ತೊಡಕುಗಳ ಫಲವಾಗಿ ಮೂಡಿಕೊಳ್ಳುವ ಜಂಜಡವನ್ನು ಕಳೆಯಲು ಹಲವು ರೀತಿಯ ಕ್ರೀಡಾಕ್ಲಬ್ಬುಗಳೂ ಹೇರಳವಾಗಿ ಆರಂಭವಾಗುತ್ತಿರುವ ಕಂಟ್ರಿ ಕ್ಲಬ್ಬುಗಳು ಮಧ್ಯಮವರ್ಗದ ಜನತೆಯ ಸಾಮಾಜಿಕ ಕೇಂದ್ರಗಳಾಗುತ್ತಿವೆ.

ಅಮೆರಿಕದಲ್ಲಿ ರಾಷ್ಟ್ರೀಯ ಮತ್ತು ಧಾರ್ಮಿಕ ರೀತಿಯ ಕ್ಲಬ್ಬುಗಳೂ ಆರಂಭವಾಗಿವೆ. ಪ್ರತಿಯೊಂದು ಧಾರ್ಮಿಕ ವರ್ಗದವರೂ ತಮ್ಮದೇ ಆದ ಕ್ಲಬ್ಬನ್ನು ಹೊಂದಿದ್ದು ಅಲ್ಲಿ ತಮಗೆ ಅನುಕೂಲಿಸುವಂತೆ ಧಾರ್ಮಿಕ, ಸಾಮಾಜಿಕ ಮತ್ತು ಇತರ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಳ್ಳುತ್ತಿರುವರು. ಇವುಗಳಲ್ಲಿ ಕೆಲವು ಆಯಾಧಾರ್ಮಿಕ ಪೀಠಗಳಿಗೆ ಅಂಗಸಂಸ್ಥೆಗಳಾಗಿರುವುದೂ ಉಂಟು.

ಅಮೆರಿಕದ ಮಹಿಳಾ ಕ್ಲಬ್ಬುಗಳು ವೈಶಿಷ್ಟ್ಯಪೂರ್ಣವೆನಿಸಿವೆ. ಸಂಖ್ಯೆಯಲ್ಲೂ ವ್ಯಾಪ್ತಿಯಲ್ಲೂ ಅವು ಮಿಕ್ಕೆಲ್ಲ ಕ್ಲಬ್ಬುಗಳಿಗಿಂತ ಅಧಿಕವಾಗಿರುವುದಲ್ಲದೆ ತಮ್ಮ ಎಲ್ಲ ಕ್ಲಬ್ಬುಗಳಿಗೂ ಅನ್ವಯವಾಗುವಂತೆ ರಾಷ್ಟೀಯ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡಿವೆ(1889). ಮೊದಮೊದಲು ಸಾಹಿತ್ಯ, ಲಲಿತಕಲೆ, ತೋಟಗಾರಿಕೆ ಇತ್ಯಾದಿಯಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದ ಆ ಕ್ಲಬ್ಬುಗಳು ಈಚೆಗೆ ಸಾಮಾಜಿಕ ಮತ್ತು ರಾಜಕೀಯ ಹವ್ಯಾಸಗಳ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸುತ್ತಿದೆ.

ಫೋರ್ ಎಚ್ ಕ್ಲಬ್ : ಸಹಕಾರೀ ಬೇಸಾಯ ವಿಸ್ತರಣ ಪದ್ಧತಿಯಲ್ಲಿ ಬಾಲಕ ಬಾಲಕಿಯರಿಗಾಗಿ ಏರ್ಪಟ್ಟು ಅಮೆರಿಕದ ಸಂಯುಕ್ತಸಂಸ್ಥಾನಗಳ ಆದ್ಯಂತ ಅಂಗಸಂಸ್ಥೆಗಳನ್ನು ಹೊಂದಿರುವ ಒಂದು ವಿಶಿಷ್ಟರೀರಿಯ ಸಂಸ್ಥೆ ಇದು. ಬುದ್ಧಿ(ಹೆಡ್), ಹೃದಯ (ಹಾರ್ಟ್), ಆರೋಗ್ಯ (ಹೆಲ್ತ್), ಕೈ (ಹ್ಯಾಂಡ್)-ವ್ಯಕ್ತಿಶಿಕ್ಷಣದ ಮುಖ್ಯ ಅಂಗಗಳಾದ ಈ ನಾಲ್ಕಕ್ಕೆ ಗಮನವೀಯುವುದು ಈ ಕ್ಲಬ್ಬಿನ ಮುಖ್ಯ ಧ್ಯೇಯ. ಕ್ಲಬ್ಬಿನ ಹೆಸರಿನಲ್ಲಿ ಅದರ ಧ್ಯೇಯ ಅಡಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ವ್ಯವಸಾಯ, ಗೃಹವಿಜ್ಞಾನ, ಹೊಲಗದ್ದೆಗಳಲ್ಲೂ ಮನೆಯಲ್ಲೂ ಜೀವನವನ್ನು ಉತ್ತಮಪಡಿಸಿಕೊಳ್ಳುವ ಮಾರ್ಗ, ಗ್ರಾಮಾಂತರ ಪ್ರದೇಶದಲ್ಲಿ ನಾಯಕತ್ವ ವಹಿಸಲು ಬೇಕಾಗುವ ಜ್ಞಾನ ಮತ್ತು ಅನುಭವ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

ಭಾರತದಲ್ಲಿ ಕ್ಲಬ್ಬುಗಳು

ಪಾಶ್ಚಾತ್ಯ ಮಾದರಿಯ ಕ್ಲಬ್ಬುಗಳನ್ನು ಹೋಲುವ ಸಂಸ್ಥೆಗಳು ಭಾರತದಲ್ಲಿ ಇತ್ತೀಚಿನ ಬೆಳೆವಣಿಗೆಯಾದರೂ ಪ್ರಾಚೀನ ಕಾಲದಲ್ಲಿ ಅಂಥ ಸಂಸ್ಥೆಗಳನ್ನು ಹೋಲುವ ಸಂಘಗಳಿದ್ದುದನ್ನು ಗುರುತಿಸಬಹುದು. ಮಹಾಭಾರತದ ಶಾಂತಿಪರ್ವದಲ್ಲಿ ಉಲ್ಲೇಖವಾಗಿರುವ ಗಣಗಳು ಈ ಮಾದರಿಯವಾಗಿದ್ದವು. ಸ್ಮøತಿ ಮತ್ತು ನಿಬಂಧಗಳಲ್ಲೂ ಇವುಗಳ ಬಗ್ಗೆ ಉಲ್ಲೇಖವುಂಟು. ಪ್ರತಿಗಣಕ್ಕೂ ಒಬ್ಬ ಗಣಮುಖ್ಯ ಅಧ್ಯಕ್ಷನಾಗಿರುತ್ತಿದ್ದ. ಇವು ಕೇವಲ ಉದ್ಯೋಗ ಸಂಸ್ಥೆಗಳಂತಿದ್ದರೂ ಸಮಾಜ ಹಿತದ ಸೇವಾಕಾರ್ಯಗಳನ್ನೂ ಕೈಕೊಳ್ಳುತ್ತಿದ್ದುವು. ತಮ್ಮ ನಡೆವಳಿಕೆಯ ಬಗ್ಗೆ ಇವು ತಮ್ಮವೇ ಆದ ನೀತಿ ನಿಯಮಗಳನ್ನು ರೂಪಿಸಿಕೊಂಡಿದ್ದುವು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಅಂಥ ನೀತಿನಿಯಮಗಳನ್ನು ಸೂಚಿಸಿದೆ. ಇವು ರಾಷ್ಟ್ರಹಿತಕ್ಕೆ ಧಕ್ಕೆ ತರುವಂತೆ ನಡೆದಾಗ ರಾಜ ಇವುಗಳ ವಿಷಯದಲ್ಲಿ ಸೂಕ್ತ ಕಾರ್ಯಕ್ರಮ ಕೈಗೊಳ್ಳುತ್ತಿದ್ದ. 12ನೆಯ ಶತಮಾನದ ಕರ್ಣಾಟಕದ ವೀರ ಬಲಂಜು ಎಂಬಲ್ಲಿನ ವಾಣಿಜ್ಯ ಸಂಘವೊಂದು ಡಂಬಳ ಎಂಬಲ್ಲಿ ಒಂದು ಕಲಾಶಾಸ್ತ್ರದ ವಿದ್ಯಾಲಯವನ್ನು ನಡೆಸುತ್ತಿತ್ತು. ಇದನ್ನು ಇಂದಿನ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಹೋಲಿಸಬಹುದು.

ಭಾರತದಲ್ಲಿ ಸಾಮೂಹಿಕ ಜೀವನಕ್ಕೆಂದು ಏರ್ಪಟ್ಟಿದ್ದ ಸಾಮಾಜಿಕ, ಧಾರ್ಮಿಕ ಮತ್ತು ಇತರ ಉದ್ದೇಶಗಳನ್ನೊಳಗೊಂಡಿದ್ದ ಸಂಘಗಳು ಪ್ರಾಚೀನಕಾಲದಿಂದಲೂ ಕಂಡುಬರುತ್ತಿವೆ. ಅವುಗಳಲ್ಲಿ ಗರಡಿಯ ಮನೆ, ಭಜನೆಯ ಮನೆ, ನಾಟಕಮಂಡಲಿ, ನೃತ್ಯಮಂಡಲಿ, ಜೂಜುಕಟ್ಟೆ, ಗಸ್ತುಕೂಟ (ಹಳ್ಳಿಯ ಕಾವಲಿಗಾಗಿ) ಇತ್ಯಾದಿಗಳನ್ನು ಉಲ್ಲೇಖಿಸಬಹುದು. ಇವುಗಳ ಜೊತೆಗೆ ಗ್ರಾಮಜೀವನದಲ್ಲಿ ತಲೆದೋರಬಹುದಾದ ಪರಗ್ರಾಮದ ದಾಳಿ, ಅಲ್ಲಿನವರ ಜಗಳ, ಮತೀಯವಾದ ಸಮಸ್ಯೆ ಇತ್ಯಾದಿಗಳು ಉದ್ಭವಿಸಿದಾಗ ನೆರೆಯುತ್ತಿದ್ದ ಕೂಟ, ಪಂಚಾಯತಿ ಇತ್ಯಾದಿಗಳೂ ಶಾಶ್ವತವಾಗಿಯೊ ತಾತ್ಕಾಲಿಕವಾಗಿಯೊ ಅಸ್ತಿತ್ವಕ್ಕೆ ಬರುತ್ತಿದ್ದುವು. ಜಾತ್ರೆ ಉತ್ಸವ ಮುಂತಾದವನ್ನು ನಿಯತಕಾಲದಲ್ಲಿ ನಡೆಸತಕ್ಕ ಹತ್ತೂಜನರ ಊರೊಟ್ಟಿನ ಕೂಟಗಳೂ ಇರುತ್ತಿದ್ದುವು. ಇವೆಲ್ಲ ಒಂದು ರೀತಿಯ ಕ್ಲಬ್ಬುಗಳಂತೆಯೇ ಕೆಲಸ ಮಾಡುತ್ತಿದ್ದುವು.

ಇಂಗ್ಲಿಷ್ ಮಾದರಿಯ ಕ್ಲಬ್ಬುಗಳು ಭಾರತಕ್ಕೆ 19ನೆಯ ಶತಮಾನದ ಪೂರ್ವಾರ್ಧದಲ್ಲಿ ಆಗಮಿಸಿದುವು. ಕಂಪನಿಯ ಅಧಿಕಾರಿಗಳ ಆನಂದವಿಹಾರಗಳಿಗಾಗಿ ಅವು ಮೊದಲು ಕಲ್ಕತ್ತ ಮದ್ರಾಸು ಮುಂತಾದ ಆಡಳಿತ ಕೇಂದ್ರಗಳಲ್ಲಿ ಆರಂಭವಾದುವು. ಗವರ್ನರ್ ಜನರಲ್ ಬೆಂಟಿಂಕ್ ಬೇಸಗೆಯ ನಿವಾಸಕ್ಕೆಂದು ಏರ್ಪಡಿಸಿಕೊಂಡಿದ್ದ ಸಿಮ್ಲಾದ ಗಿರಿಧಾಮ ಪ್ರಸಿದ್ಧ ಕ್ಲಬ್ಬುಗಳೆರಡರ ಉಗಮಸ್ಥಾನವಾಯಿತು. ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಅಲ್ಲಿ ಯುನೈಟೆಡ್ ಸರ್ವಿಸ್ ಕ್ಲಬ್ ಎಂಬ ಸಂಸ್ಥೆ ಸ್ಥಾಪನೆಯಾಯಿತು. 1887ರಲ್ಲಿ ಗವರ್ನರ್ ಜನರಲ್ಲರ ಕಾರ್ಯಾಲಯವನ್ನು ಕೊಂಡುಕೊಂಡು ಅಲ್ಲಿ ನ್ಯೂ ಕ್ಲಬ್ ಎಂಬ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದು ಬೇಗ ಜನಪ್ರಿಯತೆಯನ್ನು ಗಳಿಸಿ ಹಳೆಯ ಕ್ಲಬ್ಬಿಗೆ ಪ್ರತಿಸ್ಪರ್ಧಿಯಾಯಿತು. ಕಾರಣಾಂತರದಿಂದ ಸರ್ಕಾರದ ವಕ್ರದೃಷ್ಟಿ ಅದರ ಮೇಲೆ ಬಿದ್ದು ಕೆಲವೇ ವರ್ಷಗಳಲ್ಲಿ ಅದು ತನ್ನ ಕಟ್ಟಡವನ್ನು ಮಾರಿಕೊಂಡು ನಾಮಾವಶೇಷವಾಯಿತು. 1972ರಲ್ಲಿ ನಡೆದ ಭಾರತ ಪಾಕಿಸ್ತಾನಗಳ ಶೃಂಗಸಭೆಗೆ ಬಂದಿದ್ದ ಪತ್ರಿಕಾ ಪ್ರತಿನಿಧಿಗಳಿಗೆ ಈ ಕಟ್ಟಡದಲ್ಲಿ ಬಿಡಾರವೇರ್ಪಡಿಸಿದ್ದುದು.

ಕ್ರಮೇಣ ಭಾರತೀಯ ಅಧಿಕಾರಿಗಳು ಕೆಲವು ಕ್ಲಬ್ಬುಗಳನ್ನು ಆರಂಭಿಸಿದರು. 20ನೆಯ ಶತಮಾನದ ಆರಂಭಕಾಲಕ್ಕೇ ದೇಶಾದ್ಯಂತ ಅಂಥ ಕ್ಲಬ್ಬುಗಳು ಅಸ್ತಿತ್ವಕ್ಕೆ ಬಂದಿದ್ದುವು. ಸದ್ಯದಲ್ಲಿ ಭಾರತದಲ್ಲಿ ಇರತಕ್ಕ ಕ್ಲಬ್ಬುಗಳನ್ನು ಹೀಗೆ ವಿಂಗಡಿಸಬಹುದು. ಸರ್ಕಾರದ ಸೇವಾಶಾಖೆಗಳಲ್ಲಿ ಕೆಲಸಮಾಡುವ ಅಧಿಕಾರಿಗಳವು; ಸಾರ್ವಜನಿಕರು ಏರ್ಪಡಿಸಿಕೊಂಡಿರುವಂಥವು; ಆಟಗಾರರವು; ಹವ್ಯಾಸಿಗಳವು; ಮಹಿಳಾ ಕ್ಲಬ್ಬುಗಳು ಮತ್ತು ಅಂತರರಾಷ್ಟ್ರೀಯ ವ್ಯಾಪ್ತಿಯ ಕ್ಲಬ್ಬುಗಳು. ಈಚೆಗೆ ಯುವಜನ ಸಂಘಗಳೂ ದೇಶದ ಬೇರೆಬೇರೆ ಭಾಗಗಳಲ್ಲಿ ಆರಂಭವಾಗಿವೆ. ಅವೆಲ್ಲ ಬಹುಮಟ್ಟಿಗೆ ಯುವಕರ ವಿಹಾರಕ್ಕೂ ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳೆವಣಿಗೆಗೂ ನೆರವಾಗತಕ್ಕ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಳ್ಳುತ್ತವೆ. ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ರೈತರ ಕ್ಲಬ್ಬುಗಳ ಮಾದರಿಯಲ್ಲಿ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ರೈತರ ಕ್ಲಬ್ಬುಗಳೂ ಆರಂಭವಾಗಿವೆ. ಇಪ್ಪತ್ತನೆಯ ಶತಮಾನದಲ್ಲಿ ಪ್ರೌಢಶಾಲೆಗಳಲ್ಲೂ ಕಾಲೇಜುಗಳಲ್ಲೂ ಶೈಕ್ಷಣಿಕ ಕ್ಲಬ್ಬುಗಳೂ ಆರಂಭವಾಗಿವೆ. ಅವುಗಳ ಉದ್ದೇಶ ಮತ್ತು ಕಾರ್ಯಕ್ರಮಗಳು ಕೇವಲ ಶಾಲಾ ಕಾಲೇಜುಗಳ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತವಾಗಿರುವುದಲ್ಲದೆ ವಿಶಿಷ್ಟ ರೀತಿಯವೂ ಆಗಿರುವುದರಿಂದ ಅವನ್ನು ಮುಂದೆ ಪ್ರತ್ಯೇಕವಾಗಿ ಪರಿಗಣಿಸಿದೆ. (ಎನ್.ಎಸ್.ವಿ.)

ಶಿಕ್ಷಣ ಸಂಸ್ಥೆಗಳಲ್ಲಿ ಕ್ಲಬ್ಬುಗಳು

ರೋಟರಿ ಕ್ಲಬ್ಬು, ಲಯನ್ಸ್ ಕ್ಲಬ್, ಫೋರ್ ಎಚ್ ಕ್ಲಬ್ ಮುಂತಾದ ಕೆಲವು ಕ್ಲಬ್ಬುಗಳು ತಮ್ಮ ಉದ್ದೇಶಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಸೇರಿಸಿಕೊಂಡಿವೆಯಷ್ಟೆ. ಅವುಗಳ ಪ್ರಭಾವ ಶಿಕ್ಷಣ ಕ್ಷೇತ್ರದಲ್ಲೂ ಬಿದ್ದು ವಿದ್ಯಾರ್ಥಿ ಜೀವನಕ್ಕೆ ಸಂಬಂಧಿಸಿದಂತೆ ವಿಧವಿಧವಾದ ಕ್ಲಬ್ಬುಗಳು ಆರಂಭವಾಗಿವೆ. ಪ್ರಾಥಮಿಕ ಶಾಲೆಯಲ್ಲಿ ಅಷ್ಟಾಗಿ ಅವು ಪ್ರಚಾರಕ್ಕೆ ಬಂದಿಲ್ಲ. ಪ್ರೌಢಶಾಲೆಯಲ್ಲೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಪ್ರಪಂಚದ ಅನೇಕ ಕಡೆಗಳಲ್ಲಿ ಅವು ಪ್ರಚಾರಕ್ಕೆ ಬಂದಿವೆ. ಅವನ್ನು ಕ್ಲಬ್ ಅಥವಾ ಸಂಘ ಎಂದು ಕರೆಯುವುದು ವಾಡಿಕೆ.

ಶಾಲಾಕಾಲೇಜುಗಳಲ್ಲಿರುವ ಕ್ಲಬ್ಬುಗಳನ್ನು 1. ಅಧ್ಯಯನ ವಿಷಯಗಳ ಕ್ಲಬ್ಬುಗಳು, 2. ಹವ್ಯಾಸದ ಕ್ಲಬ್ಬುಗಳು, 3.ಕ್ರೀಡಾಕ್ಲಬ್ಬುಗಳು. 4.ಅಂತರರಾಷ್ಟ್ರೀಯ ಸಂಸ್ಥೆಗೆ ಸೇರಿದ ಕ್ಲಬ್ಬುಗಳು ಎಂದು ನಾಲ್ಕು ವಿಧವಾಗಿ ವಿಂಗಡಿಸಬಹುದು. ಈ ಒಂದೊಂದು ವಿಧದ ಕ್ಲಬ್ಬುಗಳೂ ತಮ್ಮವೇ ಆದ ಉದ್ದೇಶಗಳನ್ನೂ ಕಾರ್ಯಕ್ರಮಗಳನ್ನೂ ಹೊಂದಿರುವುವಲ್ಲದೆ ಅವು ಸೇರಿಸಿಕೊಳ್ಳುವ ಸದಸ್ಯರು. ಹಾಕಿಕೊಳ್ಳುವ ಕಾರ್ಯಕ್ರಮ, ಆರ್ಥಿಕ ವ್ಯವಸ್ಥೆ ಇವುಗಳೆಲ್ಲದರಲ್ಲೂ ವ್ಯತ್ಯಾಸವಿರುವುದರಿಂದ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸಿದೆ.

1. ಅಧ್ಯಯನ ವಿಷಯಗಳ ಕ್ಲಬ್ಬುಗಳು : ಶಾಲೆಯ ಪಠ್ಯಕ್ರಮದಲ್ಲಿ ಸೇರಿರುವ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಏರ್ಪಡುವ ಈ ಕ್ಲಬ್ಬುಗಳಿಗೆ ಆ ಶಾಲೆಯಲ್ಲಿ ಆ ವಿಷಯವನ್ನು ಅಧ್ಯಯನ ಮಾಡುವ ಎಲ್ಲ ವಿದ್ಯಾರ್ಥಿಗಳೂ ಸದಸ್ಯರಾಗಿರುವುದುಂಟು. ತರಗತಿಯಲ್ಲಿ ಬೋಧಿಸಲಾಗದ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕ ಅನುಭವವನ್ನು ಪಡೆಯುವುದು, ವ್ಯಾಸಂಗ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಯೋಗಗಳನ್ನು ನಡೆಸುವುದು, ಉಪಕರಣಗಳನ್ನು ನಿರ್ಮಿಸುವುದು. ಅವನ್ನು ಬಳಸುವುದು, ವಿಷಯಕ್ಕೆ ಸಂಬಂಧಿಸಿದ ಕಾರ್ಖಾನೆ ಪ್ರದೇಶ-ಇವೇ ಮುಂತಾದೆಡೆಗಳಿಗೆ ಪ್ರವಾಸಗಳನ್ನು ಕೈಗೊಳ್ಳುವುದು, ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ, ಚರ್ಚೆ, ಅಧ್ಯಯನ ಗೋಷ್ಠಿ ಮುಂತಾದುವನ್ನು ಏರ್ಪಡಿಸುವುದು, ಆ ವಿಷಯವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಸಂಪರ್ಕ ಬೆಳೆಸುವುದು ಮುಂತಾದ ಕಾರ್ಯಕ್ರಮಗಳು ಈ ಕ್ಲಬ್ಬುಗಳಲ್ಲಿ ಸೇರಿರುತ್ತವೆ. ಭಾಷೆ, ಗಣಿತ, ಇತಿಹಾಸ, ವಿಜ್ಞಾನ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಕ್ಲಬ್ಬುಗಳು ಏರ್ಪಡುವುದುಂಟು. ಇವುಗಳಲ್ಲಿ ಈಚೆಗೆ ಪ್ರಚಾರಕ್ಕೆ ಬಂದಿರುವ ವಿಜ್ಞಾನದ ಕ್ಲಬ್ಬುಗಳು ಹೆಚ್ಚು ಜನಪ್ರಿಯವಾಗುತ್ತಿವೆ.

2. ಹವ್ಯಾಸದ ಕ್ಲಬ್ಬುಗಳು : ಸಂಗೀತ, ನೃತ್ಯ, ನಾಟಕ, ಸಾಹಿತ್ಯರಚನೆ, ಛಾಯಾಚಿತ್ರಗ್ರಹಣ, ಅಕ್ಷರ ಪ್ರಚಾರ, ಸಮಾಜಸೇವೆ, ತೋಟಗಾರಿಕೆ ಇತ್ಯಾದಿ ವಿಷಯಗಳಲ್ಲಿ ವಿಶೇಷ ಆಸಕ್ತಿಯಿರುವ ಶಾಲೆಯ ವಿದ್ಯಾರ್ಥಿಗಳನ್ನೊಳಗೊಂಡ ಆಯಾ ಆಸಕ್ತಿಯ ಕ್ಲಬ್ಬುಗಳಿವು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಅಥವಾ ಅಭಿರುಚಿಯ ಕಸಬು, ಕಲೆ ಮುಂತಾದವುಗಳಲ್ಲಿ ಮುಂದುವರಿಯಲು ಅನುಕೂಲಿಸುವಂಥ ಕಾರ್ಯಕ್ರಮಗಳನ್ನು ಇವು ಏರ್ಪಡಿಸಿಕೊಳ್ಳುವುದುಂಟು.

3 ಕ್ರೀಡಾ ಕ್ಲಬ್ಬುಗಳು : ಫುಟ್‍ಬಾಲ್, ವಾಲಿಬಾಲ್, ಕ್ರಿಕೆಟ್, ಹಾಕಿ, ಬ್ಯಾಡ್‍ಮಿಂಟನ್, ಕಬಡ್ಡಿ ಇತ್ಯಾದಿ ಆಟಗಳಿಗೂ ಗರಡಿ, ಕುಸ್ತಿ, ವ್ಯಾಯಾಮ, ಈಜುಗಾರಿಕೆ ಹೈಕಿಂಗ್, ವಿಮಾನಯಾನ ಮುಂತಾದ ಅಭ್ಯಾಸಗಳಿಗೂ ವಿದ್ಯಾರ್ಥಿಗಳು ಏರ್ಪಡಿಸಿಕೊಳ್ಳುವ ಕೂಟಗಳಿವು.

4. ಅಂತರರಾಷ್ಟ್ರೀಯ ಕ್ಲಬ್ಬುಗಳು : ಬಾಯ್‍ಸ್ಕೌಟ್, ಗರ್ಲ್‍ಗೈಡ್ ಮುಂತಾದ ಅಂತರರಾಷ್ಟ್ರೀಯ ವ್ಯಾಪ್ತಿಯ ಕ್ಲಬ್ಬುಗಳೂ ಶಿಕ್ಷಣಸಂಸ್ಥೆಗಳಲ್ಲಿ ತಮ್ಮ ಘಟಕಗಳನ್ನು ಏರ್ಪಡಿಸಿಕೊಂಡಿರುವುದುಂಟು. ಅವು ತಮ್ಮವೇ ಆದ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನೊದಗಿಸುತ್ತವೆ. ಇವು ಶಾಲಾಕಾಲೇಜುಗಳ ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. (ಜಿ.ಎಸ್.ಕೆ.ಆರ್.)