ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ವಾಲ ಲುಂಪುರ್

ವಿಕಿಸೋರ್ಸ್ದಿಂದ

ಕ್ವಾಲ ಲುಂಪುರ್

ಮಲೇಷ್ಯದ ರಾಜಧಾನಿ. ವಿಶ್ವವಿದ್ಯಾಲಯ ಮತ್ತು ವಾಣಿಜ್ಯ ಕೇಂದ್ರ. ಜನಸಂಖ್ಯೆ 3,16,230 (1957) ಪರ್ಯಾಯ ದ್ವೀಪದ ಪಶ್ಚಿಮ ತೀರದಿಂದ 25 ಮೈ. ದೂರದಲ್ಲಿ ಕ್ಲಾಂಗ್ ಮತ್ತು ಗೊಂಬರ್ ನದಿಗಳ ಸಂಗಮಸ್ಥಳದಲ್ಲಿದೆ. ಬ್ರಿಟಿಷರು ಇಲ್ಲಿಗೆ ಮೊದಲ ಬಾರಿಗೆ ಬಂದಾಗ ಇದೊಂದು ಹಳ್ಳಿಯಾಗಿತ್ತು. ಇದರ ಸುತ್ತಣ ಪ್ರದೇಶದಲ್ಲಿ ಸತುವಿನ ಗಣಿಗಳು ಆರಂಭವಾದ ಮೇಲೆ ಇದು ಬೆಳೆಯತೊಡಗಿತು. ರೈಲುಮಾರ್ಗಗಳು, ರಸ್ತೆ ನಿರ್ಮಾಣವಾಗಿ ಇದರ ಪ್ರಾಮುಖ್ಯ ಅಧಿಕವಾಯಿತು. ಸಿಂಗಾಪುರಕ್ಕೆ ವಾಯವ್ಯದಲ್ಲಿ 200 ಮೈ. ದೂರದಲ್ಲಿರುವ ಈ ನಗರ ಸೆಲಾಂಗರ ರಾಜಧಾನಿಯಾಗಿದ್ದು, ಅನಂತರ, 1895ರಲ್ಲಿ ಮಲಯ ಸಂಯುಕ್ತ ರಾಜ್ಯದ ರಾಜಧಾನಿಯಾಯಿತು. ಕ್ವಾಲ ಲುಂಪುರದ ಬೆಳವಣಿಗೆಯ ವೇಗ ಅಧಿಕವಾದ್ದು ಮಲಯ ಸ್ವತಂತ್ರವಾದ (1957) ಮೇಲೆ. ಅಲ್ಲಿ ನೂತನ ವಸತಿಗಳು ನಿರ್ಮಾಣಗೊಂಡುವು. ಸರ್ಕಾರದ ಮುಖ್ಯ ಕಚೇರಿಗಳು ಇರುವುದು ಸಂಗಮದ ಬಳಿಯಲ್ಲಿ.

ಕ್ವಾಲಲುಂಪುರದಲ್ಲಿ ಎರಡು ಕೈಗಾರಿಕಾ ವಲಯಗಳಿವೆ. ಅಗ್ನೇಯದಲ್ಲಿರುವ ಸುಂಗೈ ಬೇಸೆಯಲ್ಲಿ ಲೋಹದ ಉದ್ಯಮವೂ ಉತ್ತರದಲ್ಲಿರುವ ಸೆಂತುರ್‍ನಲ್ಲಿ ಎಂಜಿನಿಯರಿಂಗ್ ಉದ್ಯಮವೂ ಬೆಳೆದಿವೆ. ಪೆಟಾಲಿಂಗ್ ಜಯ ಎಂಬ ಉಪನಗರ ಇರುವುದು ಉತ್ತರದಲ್ಲಿ-ಮುಖ್ಯನಗರಕ್ಕೆ 6 ಮೈ. ದೂರದಲ್ಲಿ. ವನಸ್ಪತಿ ಮತ್ತು ಸಾಬೂನು ತಯಾರಿಕೆ. ಮದ್ಯೋತ್ಪಾದನೆ ಮುಂತಾದ ಕೈಗಾರಿಕೆಗಳು ಅಲ್ಲಿ ಬೆಳೆದಿವೆ. ಕ್ವಾಲ ಲುಂಪುರ್ ತವರ ರಬ್ಬರುಗಳ ವ್ಯಾಪಾರಕೇಂದ್ರವಾಗಿದೆ. *