ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಂಧಿ ಮತ್ತು ಅಹಿಂಸೆ

ವಿಕಿಸೋರ್ಸ್ದಿಂದ

ಗಾಂಧಿ ಮತ್ತು ಅಹಿಂಸೆ

[ಸಂಪಾದಿಸಿ]

ಗಾಂಧೀಜಿಯವರ ಜೀವನದರ್ಶನದಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ ಅಹಿಂಸೆಗೆ ದ್ವಿತೀಯ ಸ್ಥಾನ. ಸತ್ಯಶೋಧನೆಯಲ್ಲಿ ತೊಡಗಿದ ಇವರು ಅನುಸರಿಸಿದ ಏಕೈಕ ಮಾರ್ಗವೇ ಅಹಿಂಸೆ. ಅಹಿಂಸೆ ಸಾಧನ, ಸತ್ಯವೇ ಅದರ ಸಿದ್ಧಿ. ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಇವರು ಅಹಿಂಸೆಯ ಆಚರಣೆಗೆ ತಮ್ಮ ಬಾಳಿನ ಸರ್ವಸ್ವವನ್ನೂ ಪಣವಾಗಿಟ್ಟರು. ಇವರ ಅಂತರಂಗ ಬಹಿರಂಗ ಜೀವನವನ್ನೆಲ್ಲಾ ಇದು ವ್ಯಾಪಿಸಿತು. ತ್ರಿಕರಣಪುರ್ವಕ ಅಹಿಂಸೆಯ ಆಚರಣೆಯಲ್ಲಿ ತೊಡಗಿದ ಇವರು ಅಹಿಂಸೆಯನ್ನು ಕುರಿತು ಹೇಳಿರುವ ಮಾತುಗಳು ಋಷಿ ವಾಣಿಯಂತೆ ಪ್ರಮಾಣವಾಕ್ಯಗಳಾಗಿವೆ.

ಅಹಿಂಸೆಯ ಅರ್ಥ

[ಸಂಪಾದಿಸಿ]

ಗಾಂಧೀಜಿಯವರೇನು ಅಹಿಂಸಾತತ್ತ್ವದ ಜನಕರಲ್ಲ. ಏಕೆಂದರೆ ಭಾರತೀಯ ದರ್ಶನದಲ್ಲಿ ಅದರಲ್ಲಿಯೂ ಜೈನ ಮತ್ತು ಬೌದ್ಧದರ್ಶನದಲ್ಲಿ, ಅಹಿಂಸಾತತ್ತ್ವ ಮತ್ತು ಅದರ ಆಚರಣೆ ಅತ್ಯಂತ ಸಮರ್ಥರೀತಿಯಲ್ಲಿ ನಿರೂಪಿತವಾಗಿದೆ. ಆದರೂ ಗ್ರಂಥಸ್ಥವಾದ ಈ ತತ್ತ್ವ ಗಾಂಧಿಜಿಯವರ ಬದುಕಿನಲ್ಲಿ ಜೀವಂತಗೊಂಡು ನಮ್ಮ ಸಮಕಾಲೀನ ಯುಗದಲ್ಲಿ ಒಂದು ಪವಾಡವನ್ನೇ ಎಸಗಿದೆ. ಸ್ಥೂಲವಾಗಿ ನೋಡಿದಾಗ ಅಹಿಂಸೆ ಎಂದರೆ ಕೊಲ್ಲದಿರುವುದು ಅಥವಾ ಹಿಂಸಿಸದಿರುವುದು ಎಂದಾದರೂ ಇದರ ಸೂಕ್ಷ್ಮ ಹಾಗೂ ವಿಸ್ತುೃತವಾದ ಅರ್ಥವನ್ನು ಗ್ರಹಿಸಲು ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೆರಡನ್ನೂ ಅವಲೋಕಿಸಬೇಕಾಗುತ್ತದೆ. ಸತ್ಯನಿಷ್ಠನಾದ ಹಾಗು ಅಹಿಂಸೆಯ ಪ್ರಯೋಗದಲ್ಲಿ ತೊಡಗಿದ ಗಾಂಧೀಜಿ ಯವರು ಇದು ಕೇವಲ ಒಂದು ಧಾರ್ಮಿಕ ನಿಯಮ ಮಾತ್ರವಲ್ಲ; ಇದು ಆರ್ಥಿಕ, ಸಾಮಾಜಿಕ, ರಾಜಕೀಯವೇ ಮುಂತಾದ ಎಲ್ಲ ರಂಗಗಳಲ್ಲಿಯೂ ಪ್ರತಿಧ್ವನಿತವಾಗುವಂಥ ವಿಶ್ವವ್ಯಾಪಿತತ್ತ್ವ. ಚರಾಚರಾತ್ಮಕವಾದ ಜಗತ್ತೆಲ್ಲವೂ ಈ ತತ್ತ್ವಕ್ಕೆ ತಲೆಬಾಗಿ ನಡೆಯುತ್ತದೆ- ಎಂಬುದನ್ನು ಕಂಡುಕೊಂಡರು. ಅಹಿಂಸೆಯ ವಿಶ್ವರೂಪದರ್ಶನ ಇವರಿಗಾದಂತೆಲ್ಲ. ಈ ಮಹತ್ತತ್ತ್ವದ ಪೂರ್ಣ ವ್ಯಾಖ್ಯಾನ ಮಾನವನಿಂದ ಸಾಧ್ಯವಾಗದು, ತಮ್ಮಿಂದಂತೂ ಸಾಧ್ಯವಾಗಿಲ್ಲ ಎಂಬುದನ್ನು ಬಹುದುಃಖದಿಂದ ಹೇಳಿಕೊಂಡರು. ಆದರೂ ಅಹಿಂಸೆಯ ಸಾಧನೆ ತಮಗೆ ಅಳವಟ್ಟಷ್ಟರಿಂದಲೇ. ಅದಕ್ಕಿರುವ ಅಗಾಧ ಶಕ್ತಿಯ ಅರಿವು ತಮಗಾಯಿತೆಂಬ ತೃಪ್ತಿಯೂ ಇವರಲ್ಲಿ ಕಾಣತ್ತದೆ. ವಿನಾಶಕಾರಿ ಅಸ್ತ್ರಗಳಿಂದೊದಗುವ ಯಾವ ಶಕ್ತಿಯೂ ಈ ಅಹಿಂಸೆಯ ಶಕ್ತಿಗೆ ಸರಿಸಮನಾಗಲಾರದೆಂದು ಇವರು ಹೇಳಿದರು. ಅಹಿಂಸೆಯಿಂದ ಸಾಧಿಸಲಾರದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದೇ ಇವರ ಅನುಭವ. ಆದರೆ ಅಹಿಂಸೆಯ ಸಾಧಕನಲ್ಲಿ ಅಮಿತವಾದ ಸಾಮರ್ಥ್ಯವಿರಬೇಕೆಂಬುದನ್ನು ಹೇಳಲು ಇವರು ಮರೆತಿಲ್ಲ.

ಅಹಿಂಸೆಯ ಸಹಕಾರಿ ಧರ್ಮಗಳು

[ಸಂಪಾದಿಸಿ]

ಗಾಂಧೀಜಿ ಕಂಡಂತೆ, ಅಹಿಂಸೆಯ ಆಚರಣೆಯಲ್ಲಿ ಪ್ರೇಮ, ತ್ಯಾಗ, ಸಹನೆ ಮತ್ತು ಧೈರ್ಯ ಎಂಬ ಮೂಲಧಾತುಗಳು ಅಡಗಿವೆ. ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ. ಪ್ರೀತಿ ಇರುವಲ್ಲಿ ಹಿಂಸೆಗೆ ಸ್ಥಾನವಿಲ್ಲ. ನಮಗೆ ಪ್ರಿಯವಾದುದನ್ನು ನಾವು ಎಂದೂ ನಾಶಪಡಿಸುವುದಿಲ್ಲ. ಪ್ರೀತಿಯ ಅಭಾವವಿದ್ದಲ್ಲಿ ಮಾತ್ರವೇ ಹಿಂಸೆ ಸಾಧ್ಯ. ದ್ವೇಷಕ್ಕೆ ದ್ವೇಷ ಪರಿಹಾರವಲ್ಲ. ಕ್ರೌರ್ಯಕ್ಕೆ ಏಕೈಕ ಪರಿಹಾರವೆಂದರೆ ಪ್ರೇಮ. ಈ ಅಂಶವನ್ನು ಗಾಂಧೀಜಿಯವರ ಮಾತಿನಲ್ಲಿಯೇ ಹೇಳುವುದಾದರೆ ‘ಶಸ್ತ್ರಸನ್ಯಾಸ ಮಾಡಿರುವ ನನ್ನಲ್ಲಿ ನನ್ನನ್ನು ದ್ವೇಷಿಸುವವರಿಗೆ ಕೊಡಲು ಪ್ರೇಮ ತುಂಬಿದ ಬಟ್ಟಲಲ್ಲದೆ ಬೇರೇನೂ ಇಲ್ಲ’. ಈ ಮಾತು ಅಹಿಂಸೆಗೆ ಇವರು ಕೊಟ್ಟ ಒಂದು ವ್ಯಾಖ್ಯಾನ. ಪುನರ್ಜನ್ಮದಲ್ಲಿ ನಂಬಿಕೆ ಇದ್ದ ಇವರು ಈ ಜನ್ಮದಲ್ಲಲ್ಲದಿದ್ದರೆ ಅನೇಕ ಜನ್ಮಗಳ ಅನಂತರವಾದರೂ ವಿಶ್ವದ ಜೀವಜಂತುಗಳನ್ನೆಲ್ಲ ತಮ್ಮ ಪ್ರೇಮಬಾಹುಗಳಿಂದ ಅಪ್ಪಲು ಬಯಸುತ್ತಾರೆ.

ಅಹಿಂಸೆಯ ಸಾಧನೆ ತಕ್ಕ ಮಟ್ಟಿಗಾದರೂ ಫಲಪ್ರದವಾಗಬೇಕಾದರೆ ತ್ಯಾಗ ಅತ್ಯಂತ ಆವಶ್ಯಕವೆಂಬುದನ್ನು ಗಾಂಧೀಜಿ ಮನಗಂಡಿದ್ದರು. ಸ್ವಾರ್ಥವೆಂಬುದು ಒಂದು ರೀತಿಯ ಹಿಂಸೆ. ಶರೀರ ಸುಖ, ಕೀರ್ತಿ, ಲಾಭ, ಇಲ್ಲವೆ ಅಹಂಕಾರದ ಆಡಂಬರ, ಇವುಗಳಿಗಾಗಿಯೇ ಒಬ್ಬರು ಮತ್ತೊಬ್ಬರನ್ನು ಹಿಂಸಿಸುವುದು. ವ್ಯಕ್ತಿಗಳಷ್ಟೇ ಏಕೆ, ರಾಷ್ಟ್ರಗಳೂ ಇದರಿಂದ ಮುಕ್ತವಲ್ಲ. ಕಾಮ, ಕ್ರೋಧ, ಮದ, ಮತ್ಸರಗಳಿಗೆ ಒಳಗಾಗಿರುವ ಮಾನವನಿಗೆ ಶುದ್ಧ ಅಹಿಂಸೆಯ ಅಚರಣೆ ಕೇವಲ ಮರೀಚಿಕೆಯೇ ಸರಿ. ಯಾವ ರೀತಿಯಿಂದಲೇ ಆಗಲಿ ತನ್ನ ಹಿತಕ್ಕಾಗಿ ಅನ್ಯರನ್ನು ಬಳಸುವುದು ಸ್ವಾರ್ಥ. ಇದೊಂದು ಮೃಗಧರ್ಮ. ಅನ್ಯರ ಒಳಿತಿಗಾಗಿ ತಾನು ಶ್ರಮಿಸುವುದೇ ತ್ಯಾಗ. ಆದ್ದರಿಂದ ಅಹಿಂಸೆ ಅಥವಾ ವಿಶ್ವಪ್ರೇಮಕ್ಕೆ ಯಾವ ತ್ಯಾಗವೂ ಹೆಚ್ಚೆನಿಸಲಾರದು. ಅಹಿಂಸೆಯ ಆಚರಣೆಗೆ ಬೇಕಾದ ಮತ್ತೊಂದು ಸಹಕಾರಿ ಧರ್ಮವೆಂದರೆ ಸಹನೆ. ತನ್ನನ್ನು ದ್ವೇಷಿಸುವವನನ್ನು ತಾನು ಪ್ರೀತಿಸಬೇಕೆಂದರೆ ಆಗ ಅವನಲ್ಲಿ ಬೆಟ್ಟದಷ್ಟು ಸಹನೆ ಬೇಕು. ಕೋಪ ಮತ್ತು ಮಾತ್ಸರ್ಯ ಅಹಿಂಸೆಯ ಪರಮ ವೈರಿಗಳು. ನಿರಹಂಕಾರಿಯಾದವನಿಗೆ ಮಾತ್ರ ಈ ಸಹನೆ ಸಾಧ್ಯ. ಗಾಂಧೀಜಿ ಉದಾಹರಿಸಿದಂತೆ, ತಾಯಿಯ ಪ್ರೇಮ ಸಹನೆಯ ಪ್ರತೀಕ.

ಇನ್ನು ಅಹಿಂಸೆಯ ಆಚರಣೆ ಹೇಡಿಯಾದವನಿಗೆ ಎಂದೂ ಸಾಧ್ಯವಿಲ್ಲ. ಗೀತೆಯಲ್ಲಿ ಹೇಳಿರುವ ಅಭಯತ್ವ ಕೈಗೂಡದವನು ಹಿಂಸೆಗೆ ಅಹಿಂಸೆಯನ್ನು ಹಿಂದಿರುಗಿಸಲು ಎಂದೂ ಶಕ್ತನಾಗುವುದಿಲ್ಲ. ಹಿಂಸಾವಾದಿಗಳಿಂದ ತನಗಾಗುವ ಎಲ್ಲ ರೀತಿಯ ಅಘಾತಗಳನ್ನೂ ಸಹಿಸಿಕೊಂಡು ಹಿಂಸಾವಾದಿಗಳ ಹೃದಯ ಪರಿವರ್ತನೆಯಾಗುವಂತೆ ಮಾಡುವುದೇ ಅಹಿಂಸೆಯ ಉದ್ದೇಶ. ಸತ್ಯಕ್ಕೆ ಹೊರತಾಗಿ ಮತ್ತಾವುದಕ್ಕೂ ಅಂಜೆನೆಂಬ ಎದೆಗಾರಿಕೆ ಇರುವವನಿಗೆ ಮಾತ್ರ ಈ ಸಾಹಸ ಸಾಧ್ಯ. ಸತ್ಯಕ್ಕಾಗಿ ಅಹಿಂಸಾಚರಣೆಯಲ್ಲಿ ತೊಡಗಿರುವವನು ಸಾಕ್ರಟಿಸ್ನಂತೆ, ಏಸುವಿನಂತೆ, ಸತ್ಯಕ್ಕಾಗಿ ಸಾವನ್ನೂ ಸ್ವಾಗತಿಸುತ್ತಾರೆ. ವಿಶ್ವದಲ್ಲಿಯೇ ಅಜೇಯವೆನಿಸಿದ ಬ್ರಿಟಿಷ ಸಾಮ್ರಾಜ್ಯದೆದುರು ಗಾಂಧೀಜಿಯವರ ಹೋರಾಟದ ಜೀವನ ಹಾಗೂ ವಿಜ್ಞಾನಿಯ ಗುಂಡಿಗೆ ಬಲಿಯಾದ ಇವರ ಧೀರಮರಣ ಇವು ಇವರ ಅಭಯತ್ವದ ಜೀವಂತಸಾಕ್ಷಿ. ಅಹಿಂಸಾಚರಣೆಗೆ ಬೇಕಾದ ಅಭಯತ್ವಕ್ಕೆ ಈ ಮಹನೀಯರ ಇಡೀ ಜೀವನವೇ ನಿದರ್ಶನ.

ಅಹಿಂಸೆಯ ದಾರ್ಶನಿಕ ಸ್ವರೂಪ

[ಸಂಪಾದಿಸಿ]

ಅಹಿಂಸೆ ಎಂಬುದು ಒಂದು ಆತ್ಮಕಶಕ್ತಿ. ಅತ್ಯಂತ ಕ್ರೂರಿಯ ಹೃದಯದಲ್ಲಿಯೂ ಭಗವಂತನ ಅಂಶ ಇದೆ ಎಂಬುದೇ ಇದರ ಬುನಾದಿ. ಇದು ಯಾವಾಗಲೂ ಯಾರಿಗೂ ಕೆಟ್ಟದ್ದನ್ನು ಮಾಡುವಂಥದಲ್ಲ. ಇದನ್ನು ಅರಿತು ಅಚರಿಸುವವರೂ ಉಂಟು. ಅರಿಯದೇ ಆಚರಿಸುವ ಮುಗ್ಧ ಚೇತನಗಳೂ ಉಂಟು. ಇದನ್ನು ಎಷ್ಟೇ ಅಪೂರ್ಣವಾಗಿ ಆಚರಿಸಿದರೂ ಅದರಿಂದ ಸಾಕಷ್ಟು ಉತ್ತಮ ಫಲ ದೊರೆತೇ ದೊರೆಯುತ್ತದೆ. ಇದರ ಆಚರಣೆಗೆ ಪಂಡಿತನ ಪಾಂಡಿತ್ಯವೇ ಬೇಕೆಂದಿಲ್ಲ. ಸತ್ಯದಲ್ಲಿ ನಿಷ್ಠೆಯೊಂದಿದ್ದರೆ ಮಿಕ್ಕೆಲ್ಲ ಮಾರ್ಗದರ್ಶನವೂ ತಾನೇ ತಾನಾಗಿ ದೊರೆಯುತ್ತದೆ. ಇದನ್ನು ಆಚರಿಸುವವನು ಮಾತ್ರವಲ್ಲದೆ ಅವನ ಪರಿಸರವೂ ಇದರಿಂದ ಪ್ರಭಾವಿತವಾಗುತ್ತದೆ. ಜೀವ ಜಂತುಗಳಲ್ಲೆಲ್ಲ ಸುಪ್ತವಾಗಿರುವ ದಿವ್ಯಶಕ್ತಿಯನ್ನು ಸಚೇತನ ಗೊಳಿಸುವ ಶಕ್ತಿ ಅಹಿಂಸೆಗಿದೆ. ಶುದ್ಧ ಅಹಿಂಸಾವ್ರತಿಗೆ ವಿಷ ತುಂಬಿದ ಹಾವಿನೊಂದಿಗೂ ಸಖ್ಯಸಾಧ್ಯವಾಗಬೇಕು. ಆದರೆ ತಾವು ಆ ಆದರ್ಶ ಸ್ಥಿತಿಯಿಂದ ಬಹು ಹಿಂದೆ ಬಿದ್ದಿರುವುದಾಗಿ ಗಾಂಧೀಜಿ ಒಮ್ಮೆ ಮನನೊಂದು ಹೇಳಿದ್ದಾರೆ. ಅಹಿಂಸೆಯ ಆಚರಣೆಯಿಂದ ಶತ್ರು ಮಿತ್ರನಾಗುತ್ತಾನೆ. ದ್ವೇಷಿಸುವವ ಪ್ರೀತಿಸಲು ಕಲಿಯುತ್ತಾನೆ. ನಿಂದಕನಲ್ಲಿ ಪಶ್ಚಾತ್ತಾಪ ಮೂಡುತ್ತದೆ. ಜೀವಂತ ನಿದರ್ಶನವಿಲ್ಲದಿದ್ದಾಗ ಈ ಮಾತು ಕೇವಲ ಕಲ್ಪನೆಯಂತೆ ಕಾಣಬಹುದು. ಅಹಿಂಸೆಯನ್ನು ನಂಬಿ ತುಸು ದೂರ ಆ ಮಾರ್ಗದಲ್ಲಿ ನಡೆದ ಭಾರತರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಟ್ಟಾಗಲೂ ಅನಂತರವೂ ಬ್ರಿಟಿಷ್ ಸಾಮ್ರಾಜ್ಯ ಹಾಗೂ ಅಲ್ಲಿನ ವಿಚಾರವಂತ ಜನರಲ್ಲಿ ಕಂಡ ಪ್ರೇಮ ಮತ್ತು ಮೈತ್ರಿಗಳು ವಿಶ್ವದ ಇತಿಹಾಸದಲ್ಲಿಯೇ ಕಂಡರಿಯದ ಒಂದು ವಿನೂತನ ಅನುಭವ. ಪೂರ್ಣ ಅಹಿಂಸೆ ಸಾಧ್ಯವೇ? ನೂರಕ್ಕೆ ನೂರರಷ್ಟು ಅಹಿಂಸೆಯ ಆಚರಣೆ ಮಾನವ ಮಾನವನಾಗಿರುವವರೆಗೂ ಸಾಧ್ಯವಾಗದೆಂಬುದೇ ಗಾಂಧೀಜೀಯವರ ಮತ. ಮಾನವ ತನ್ನ ಶರೀರ ಪೋಷಣೆಗಾಗಿ ಅನ್ನಪಾನೀಯಗಳನ್ನು ತೆಗೆದುಕೊಳ್ಳುವಾಗ ಅನೇಕ ಸಸ್ಯ ಹಾಗೂ ಸೂಕ್ಷ್ಮ ಕ್ರಿಮಿಗಳ ನಾಶ ಅವನಿಗರಿವಿಲ್ಲದೇ ನಡೆಯುತ್ತದೆ. ಆಹಾರಧಾನ್ಯಗಳನ್ನು ಬೆಳೆಯುವಾಗ ಮತ್ತು ದವಸಧಾನ್ಯಗಳನ್ನು ರಕ್ಷಿಸುವಾಗ ಅನೇಕ ಕ್ರಿಮಿಕೀಟಗಳ ನಾಶ ಅನಿವಾರ್ಯ. ಹುಚ್ಚಿದ್ದ ವ್ಯಕ್ತಿಯೊಬ್ಬ ತನ್ನೆದುರಿಗೆ ಕಂಡವರನ್ನೆಲ್ಲಾ ಕೊಲ್ಲುತ್ತ ಹೋಗುವಾಗ ಅವನನ್ನು ಗುಂಡಿಕ್ಕಿ ಕೊಲ್ಲುವುದು ಯುಕ್ತವಾಗಿಯೇ ಕಾಣುತ್ತದೆ. ಹಾಗೆಯೇ ವೈದ್ಯಕೊಟ್ಟ ಯಾವ ಔಷಧಿಗೂ ಮಣಿಯದ ನಿರಂತರ ವೇದನೆಯಿಂದ ಯಾತನೆಗೊಳ್ಳುತ್ತಿದ್ದ ತಮ್ಮ ಆಶ್ರಮದ ಕರು ಒಂದನ್ನು,

ಕರುವಿನ ಮೇಲಿನ ಕರುಣೆಯಿಂದಲೇ ಕೊಲ್ಲಲು ಗಾಂಧೀಜಿಯವರೇ ಅನುಮತಿ ಕೊಟ್ಟದ್ದುಂಟು. ಪೋಲೀಸಿ ನವರಿಂದ ತಮ್ಮ ಹೆಂಡತಿ ಮಕ್ಕಳ ಮಾನಭಂಗವಾದದ್ದನ್ನು ಅಹಿಂಸಾಚರಣೆಯ ಹೆಸರಿನಲ್ಲಿ ಮೂಕ ಪ್ರೇಕ್ಷಕರಂತೆ ನೋಡಿ ಬಂದ ಬೆಟ್ಟೆಯ ಎಂಬ ಗ್ರಾಮದ ಜನರ ನಡತೆಯನ್ನು ‘ಇದು ಕೇವಲ ಅಹಿಂಸೆಯ ದುರುಪಯೋಗ’ ಎಂದು ಗಾಂಧೀಜಿಯವರೇ ಖಂಡಿಸಿದರು. ಅಹಿಂಸೆ ಸಾಧ್ಯವಾಗದಿದ್ದಾಗ ಹಿಂಸೆಯಿಂದಲಾದರೂ ಅವರ ಮಾನರಕ್ಷಣೆ ಮಾಡಬೇಕಾಗಿದ್ದಿತೆಂಬುದೇ ಗಾಂಧೀಜಿಯವರ ಅಭಿಮತ. ಅಹಿಂಸೆಯ ಹೆಸರಿನಲ್ಲಿ ಮಾನವ ಹೇಡಿಯಾಗಬೇಕೆಂದು ಗಾಂಧೀಜಿ ಎಂದೂ ಬಯಸಲಿಲ್ಲ. ಹಿಂಸೆಯನ್ನು ಆತ್ಮಬಲದಿಂದ ಎದುರಿಸಲು ಕಲಿಯಬೇಕೆಂಬುದೇ ಅಹಿಂಸೆಯ ಮೂಲ ಸಂದೇಶ. ಹೇಡಿತನ ಮತ್ತು ಹಿಂಸೆ ಈ ಎರಡರ ನಡುವೆ ಯಾವುದಾದರೂ ಒಂದನ್ನು ಆರಿಸಬೇಕಾದಲ್ಲಿ ನಾನು ಹಿಂಸೆಯ ಮಾರ್ಗವನ್ನೆ ತುಳಿದೇನು ಎಂದು ಗಾಂಧೀಜಿ ಹೇಳಿದ್ದರು. ಅಂದಮೇಲೆ ಅಹಿಂಸೆ ಸಾಧ್ಯವಾಗದಾಗ ಹಿಂಸೆಯೇ ಮೇಲು, ಹೇಡಿತನವಂತೂ ಎಂದಿಗೂ ಕೂಡದು. ಗುಣಮಟ್ಟದಿಂದ ನಿರ್ಣಯಿಸಬಹುದಾದರೆ ಅಹಿಂಸೆಯೇ ಪರಮಧರ್ಮ, ಅದಕ್ಕೆ ಕೀಳಾದದ್ದು ಹಿಂಸೆ, ಹೇಡಿತನವಂತೂ ಅದಕ್ಕಿಂತ ಕೀಳಾದದ್ದು, ಅಂದಮೇಲೆ ಅಹಿಂಸೆಯನ್ನು ಗುರುತಿಸುವಾಗ ಕೇವಲ ಒಂದು ಕಾರ್ಯದ ಸ್ಥೂಲ ರೂಪವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅದರಲ್ಲಡಗಿರುವ ಉದ್ದೇಶ ಅದರಿಂದಾಗುವ ಫಲ ಮತ್ತು ಅದು ಅನುಸರಿಸುವ ಮಾರ್ಗ ಇವುಗಳ ಸಮಗ್ರ ಚಿತ್ರ ನಮ್ಮ ಕಲ್ಪನೆಗೆ ಬರಬೇಕು.

ಪೂರ್ಣ ಅಹಿಂಸೆಯ ಆಚರಣೆ ಒಂದು ಮಹದಾದರ್ಶ ಎನ್ನುವುದಂತೂ ನಿಜ. ಮಾನವನ ಬದುಕು ಸಾಧ್ಯವಾಗಬೇಕಾದರೆ ಸ್ವಲ್ಪಮಟ್ಟಿನ ಹಿಂಸೆ ಅನಿವಾರ್ಯ ವೆಂದೇ ಕಾಣುತ್ತದೆ. ಇದನ್ನು ವ್ಯಾವಹಾರಿಕವಾಗಿ ಗುರುತಿಸಿದ ಗಾಂಧೀಜಿ, ಹಿಂಸೆಯ ವಲಯವನ್ನು ಆದಷ್ಟು ಕಡಿಮೆ ಮಾಡುವುದು ಮಾನವನ ಪ್ರಗತಿಯ ಚಿಹ್ನೆ ಎಂದರು. ಈ ರೀತಿಯ ಅತ್ಯಲ್ಪ ಹಿಂಸೆ ತನ್ನ ಬದುಕಿಗೆ ಅನಿವಾರ್ಯ ಹಾಗೂ ಇದು ತನ್ನ ದೌಬಲ್ಯವೇ ಸರಿ ಎಂದರಿತು ಮಾನವ ಹೆಚ್ಚು ನಮ್ರತೆಯಿಂದ ಜಗತ್ತಿನಲ್ಲಿ ವ್ಯವಹರಿಸು ವಂತಾಗಬೇಕು ಎಂದು ಗಾಂಧೀಜಿ ಹೇಳಿದರು. ತಮ್ಮ ಬಾಳಪರ್ಯಂತ ಗೌರವಿಸಿ ಆಚರಿಸುತ್ತಿದ್ದ ಅಸ್ತೇಯ, ಅಸಂಗ್ರಹ, ಬ್ರಹ್ಮಚರ್ಯ, ಶರೀರಶ್ರಮ, ಸರ್ವಧರ್ಮಸಮಾನತ್ವ, ಸ್ವದೇಶಿ ಮುಂತಾದ ಏಕಾದಶ ವ್ರತಗಳೂ ಮೂಲತಃ ಸತ್ಯ ಮತ್ತು ಅಹಿಂಸೆಯ ಪುರಕ ತತ್ತ್ವಗಳೇ ಎಂದು ಗಾಂಧೀಜಿ ಗ್ರಹಿಸಿದ್ದರು. ನಮ್ಮ ಅವಶ್ಯಕತೆಗಿಂತಲೂ ಹೆಚ್ಚಾಗಿ ಸಂಗ್ರಹಿಸಿಡುವುದು ಅನ್ಯರ ಅವಶ್ಯಕತೆಗಳನ್ನು ಮರೆತು ನಾವು ಅವರಿಗೆಸಗಿದ ಹಿಂಸೆ ಇಲ್ಲವೇ ಅಪಚಾರ, ತಮ್ಮ ಬಳಕೆಗೆ ಬೇಕಾಗುವುದಕ್ಕಿಂತಲೂ ಮಿಗಿಲಾಗಿ ಸಂಗ್ರಹಿಸಿಡುವ ಪೀಠೋಪಕರಣ, ಉಡುಪು ವಸ್ತ್ರಗಳಿಂದಲೂ ತಾವು ಅಹಿಂಸಾಚರಣೆಯ ಉಲ್ಲಂಘನೆ ಮಾಡುತ್ತೇವೆಂದೂ ಗಾಂಧೀಜಿ ಯೋಚಿಸಿದರು. ಈ ಭಾವನೆಯ ಫಲವಾಗಿಯೇ ತಮ್ಮ ವಸ್ತ್ರ ಉಡುಪುಗಳಲ್ಲಿವರು ನಿರಾಡಂಬರವನ್ನು ಕ್ರಮಕ್ರಮವಾಗಿ ಸಾಧಿಸಿದರು. ಅಹಿಂಸೆಯ ತತ್ತ್ವದಲ್ಲಿ ಅಂತರ್ಗತವಾಗಿರುವ ಸೂಕ್ಷ್ಮ ಅಂಶಗಳು ಇನ್ನೂ ಅಗಾಧವಾಗಿದ್ದು ಅವುಗಳ ಸಂಶೋಧನೆ ಮಾನವವಂಶ ಇರುವವರೆಗೂ ನಡೆದುಕೊಂಡು ಹೋಗುತ್ತದೆಂಬುದಕ್ಕೆ ಗಾಂಧೀಜಿ ಮತ. ಅಹಿಂಸೆಯತ್ತ ಕ್ರಮಗತಿಯಲ್ಲಿ ಬೆಳೆಯುತ್ತಿರುವುದೇ ಮಾನವನ ಇತಿಹಾಸ. ಮೃಗಗಳ ಬೇಟೆಯಿಂದ ಜೀವಿಸುತ್ತಿದ್ದ ಆದಿಮಾನವ ಅಹಿಂಸೆಯ ಜಾಡನ್ನು ತುಳಿದಂತೆಲ್ಲ ಕೃಷಿಯಿಂದ ಬದುಕಲು ಕಲಿತ. ಸೂಕ್ಷ್ಮಸಂವೇದಿಯಾದ ಮಾನವನಿಗೆ ಹಿಂಸೆ ಏಕೋ ಮುಜುಗರವೆನಿಸಿತೆಂಬುದು ಮಾನವನ ಇತಿಹಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮಗೆ ಕಂಡುಬರುತ್ತದೆ.

ಅಹಿಂಸೆ ಹಾಗೂ ಸತ್ಯಾಗ್ರಹ

[ಸಂಪಾದಿಸಿ]

ಅಸತ್ಯದೊಡನೆ ಮಾಡುವ ಅಸಹಕಾರವನ್ನು ಅಥವಾ ಸತ್ಯಕ್ಕಾಗಿ ಎಸಗುವ ಆಗ್ರಹವನ್ನು ಗಾಂಧೀಜಿ ಸತ್ಯಾಗ್ರಹ ಎಂದು ಕರೆದರು. ಈ ಅಸಹಕಾರ ಯಾವ ಕಾರಣದಿಂದಲೂ ಅಹಿಂಸೆಗೆ ವಿರುದ್ಧವಾಗುವಂತಿಲ್ಲ. ಅದು ಹಿಂಸಾತ್ಮಕವಾದರೆ ಆಗ ಅದು ದುರಾಗ್ರಹವೆನಿಸುತ್ತದೆ. ಆದ್ದರಿಂದಲೇ ಸತ್ಯಾಗ್ರಹಿ ಪುರ್ಣ ಅಹಿಂಸವಾದಿಯಾಗಬೇಕೆಂಬ ನಿಯಮ. ತಾನು ಮಾಡುವ ಅಸಹಕಾರದಿಂದ ಎದುರಾಳಿಗೆ ಯಾವ ರೀತಿಯಿಂದಲೂ ಕೆಡುಕಾಗಬಾರದು. ಸತ್ಯಾಗ್ರಹಿ ಸದಾ ಎದುರಾಳಿಯ ಒಳಿತನ್ನೇ ಗಮನದಲ್ಲಟ್ಟಿರಬೇಕು. ಅಸತ್ಯಕ್ಕಂಟಿದ ಅವನ ಮನಸ್ಸನ್ನು ಪರಿವರ್ತಿಸಿ ಅವನ ಆತ್ಮೋನ್ನತಿಗೆ ಸಹಾಯ ಮಾಡುವುದೇ ಈ ಸತ್ಯಾಗ್ರಹದ ಮೂಲ ಉದ್ದೇಶ. ಎದುರಾಳಿಯಿಂದ ಸತ್ಯಾಗ್ರಹಿಗೆ ಎಷ್ಟೇ ನೋವಾದರೂ ಅದನ್ನು ಸಹಿಸುವ ಹೊಣೆಗಾರಿಕೆ ಇವನದು. ಸತ್ಯಾಗ್ರಹಿಯಲ್ಲಿ ಯಾವ ರಹಸ್ಯ, ಗುಟ್ಟು ಇಲ್ಲವೇ, ಕುತಂತ್ರವೂ ಇರಬಾರದು. ಸತ್ಯಾಗ್ರಹಿ ತಾನು ಮಾಡುವ ಕಾರ್ಯವಿಧಾನಗಳನ್ನೆಲ್ಲ ಪೂರ್ವಭಾವಿ ಯಾಗಿ ಎದುರಾಳಿಗೆ ತಿಳಿಸಿ ಅವನು ಅದಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಳ್ಳಲು ನೆರವಾಗಬೇಕು. ಆ ಕಾರಣದಿಂದಲೇ ಗಾಂಧೀಜಿಯವರು ತಾವೆಸಗಿದ ಎಲ್ಲ ಸತ್ಯಾಗ್ರಹಗಳಿಗೂ ಮುನ್ನ ಅದರ ಕ್ರಮ ಮತ್ತು ಉದ್ದೇಶಗಳನ್ನು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿ ಅವರಿಗೆ ಯಾವ ರೀತಿಯ ಇಕ್ಕಟ್ಟೂ ಆಗದಂತೆ ನೋಡಿಕೊಳ್ಳ್ಳುತ್ತಿದ್ದರು.

ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು. ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹಿಂಸಾಚರಣೆಯಲ್ಲಿ ಮಿಕ್ಕ ರಾಷ್ಟ್ರಗಳಿಗಿಂತಲೂ ಮುಂದೆ ಹೋಗಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡುವಂತಾಗಬೇಕು. - ಗಾಂಧೀಜಿಯವರ ಈ ನಂಬಿಕೆಗೆ ಪುಷ್ಟಿ ದೊರೆಯುವಂಥ ಕೆಲವು ನಿದರ್ಶನಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿರುವುದು ಒಂದು ಆಶಾದಾಯಕ ಚಿಹ್ನೆ. ಅಮೆರಿಕದ ನೀಗ್ರೋ ಜನ ವರ್ಣ ವೈಷಮ್ಯಕ್ಕೆ ಸಿಲುಕಿ ತೊಳಲಾಡುತ್ತಿದ್ದಾಗ ಗಾಂಧೀಜಿಯವರ ಅಹಿಂಸಾತತ್ತ್ವದಿಂದ ಪ್ರೇರಿತನಾದ ಮಾರ್ಟಿನ್ ಲೋಥರ್ ಕಿಂಗ್ ದ್ವೇಷರಹಿತ ಹೋರಾಟದಿಂದ ಬಿಳಿ ಜನರ ಮನಸ್ಸನ್ನೂ ಮಾರ್ಪಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ನಿದರ್ಶನ ಇನ್ನೂ ಅಚ್ಚ ಹಸುರಾಗಿದೆ. 20ನೆಯ ಶತಮಾನದಲ್ಲಿ ಬಹು ವಿಚಾರಪರ ದಾರ್ಶನಿಕನೆನಿಸಿದ ಬರ್ಟ್ರೆಂಡ್ ರಸಲ್ ಯುದ್ಧ ದಾಹದಿಂದ ಉನ್ಮತ್ತರಾಗಿ, ವಿನಾಶಕಾರಕವಾದ ಅಣ್ವಸ್ತ್ರಗಳನ್ನು ಸೃಷ್ಟಿಸಿ, ಸರ್ವನಾಶಕ್ಕೆ ಉದ್ಯುಕ್ತರಾಗಿದ್ದ ಶಕ್ತ ರಾಷ್ಟ್ರಗಳ ಮನ ಒಲಿಸಲು ಬಳಸಿದ ಅಸ್ತ್ರದ ಸ್ವರೂಪವಾದರೂ ಏನು? ಶಾಂತಿಪ್ರಿಯರಾದ ಜನರೆನ್ನೆಲ್ಲ ತಮ್ಮ ಹಿಂದೆ ಸಾಲ್ಗೂಡಿಸಿ ಲಂಡನ್ ನಗರದ ಬೀದಿಗಳಲ್ಲಿ ಕಿಲೋಮೀಟರ್ ಗಟ್ಟಳೆ, ಮಳೆ ಚಳಿಯನ್ನು ಲೆಕ್ಕಿಸದೆ, ಪಾದಯಾತ್ರೆ ನಡೆಸಿ ವಿಶ್ವದ ಜನತೆಯ ಅಭಿಪ್ರಾಯವನ್ನೆಲ್ಲ ಶಾಂತಿಯ ಸಂದೇಶದತ್ತ ವಾಲುವಂತೆ ಮಾಡಿದ ರಸಲ್ಲನ ಈ ಮಾರ್ಗ ಗಾಂಧೀಜಿಯವರ ದಂಡಿಯಾತ್ರೆಯ ಪುನಃ ಸ್ಮರಣೆಯಂತಿದೆ.

ಹಾಗೆ ನೋಡುವುದಾದರೆ ಮಾನವ ಅನಾದಿಕಾಲದಿಂದ ಹಿಂಸಾಮಾರ್ಗವನ್ನು ತುಳಿದು ಅದರಲ್ಲಿ ನೂರಾರು ಪ್ರಯೋಗಗಳನ್ನು ಮಾಡಿ ಅದರಿಂದ ಈಗ ಬೇಸತ್ತಿದ್ದಾನೆ. ಅದು ಈಗ ಗತಕಾಲದ ಪಳೆಯುಳಿಕೆಯಂತಿದೆ. ಆದ್ದರಿಂದಲೇ ಈಗ ಅವನು ಅಹಿಂಸೆಯ ಅರುಣೋದಯದತ್ತ ಆಶಾವಾದಿಯಾಗಿ ಕಣ್ತೆರೆಯುತ್ತಿದ್ದಾನೆ.