ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಡಿ

ವಿಕಿಸೋರ್ಸ್ದಿಂದ

ಗಾಡಿ[ಸಂಪಾದಿಸಿ]

ದವಸ ಧಾನ್ಯಗಳ, ಸಾಮಾನು ಸರಂಜಾಮುಗಳ ಸಾಗಣೆಗೆ ಹಾಗೂ ಜನರ ಪ್ರಯಾಣಕ್ಕೆ ಬಹಳ ಹಿಂದಿನಿಂದಲೂ ಬಳಸಲಾಗುತ್ತಿರುವ ಸಾಧನ. ಚಕ್ರ ಅಥವಾ ಗಾಲಿಗಳ ಸಂಖ್ಯೆಯ ಆಧಾರದ ಮೇಲೆ ಇವನ್ನು ಬೇರೆ ಬೇರೆ ಹೆಸರಿನಲ್ಲಿ ವರ್ಗೀಕರಿಸಲಾಗಿದೆಯಾದರೂ ಸಾಮಾನ್ಯವಾಗಿ ಎರಡು ಚಕ್ರಗಳುಳ್ಳ ಕಮಾನು ರಹಿತವಾದ, ಸ್ಪ್ರಿಂಗ್ ಅಥವಾ ಸ್ಪ್ರಿಂಗ್ ಫಲಕಗಳನ್ನು ಹೊಂದಿರದ ಸಾಗಣೆಯ ಸಾಧನವನ್ನು ಗಾಡಿ ಅಥವಾ ಬಂಡಿಯೆಂದು ಕರೆಯುತ್ತಾರೆ. ಗಾಡಿ ಎಳೆಯಲು ವ್ಯಕ್ತಿ ಇಲ್ಲವೆ ಯಾವುದಾದರೂ ಒಂದು ಬಗೆಯ ಪ್ರಾಣಿಯನ್ನು ಬಳಸಲಾಗುತ್ತದೆ. ಈ ಸಂಚಾಲಕ ಶಕ್ತಿಯ ಆಧಾರದ ಮೇಲೆ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಕೊಡಲಾಗಿದೆ. ಅತ್ಯಾಧುನಿಕ ವಾಹನಗಳು ಬಳಕೆಗೆ ಬಂದಿದ್ದರೂ ಇಂದೂ ಹಲವು ದೇಶಗಳಲ್ಲಿ ಸೀಮಿತೋದ್ದೇಶಗಳಿಗಾದರೂ ಈ ವಾಹನ ಬಳಕೆಯಲ್ಲಿದೆ.

ಇತಿಹಾಸ[ಸಂಪಾದಿಸಿ]

ವಿಶ್ವದ ಪ್ರಾಚೀನ ಸಾಹಿತ್ಯದಲ್ಲಿ-ಉದಾಹರಣೆಗೆ, ಭಾರತದ ವೈದಿಕ ಸಾಹಿತ್ಯದಲ್ಲಿ, ಬೈಬಲಿನಲ್ಲಿ-ಗಾಡಿಯ ಉಲ್ಲೇಖವಿದೆ. ಶೂದ್ರಕನಂತೂ ತನ್ನ ಜಗದ್ವಿಖ್ಯಾತ ಮೃಚ್ಛಕಟಿಕಾ ನಾಟಕದ ಮೂಲಕ ಗಾಡಿಗೆ ಸಾಹಿತ್ಯೇತಿಹಾಸದಲ್ಲಿಯೇ ಅಪುರ್ವ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾನೆ. ಪ್ರಾಚೀನ ನಾಗರಿಕತೆಯ ಆಡುಂಬೊಲಗಳಾಗಿದ್ದ ಪ್ರದೇಶಗಳಲ್ಲಿ ನಡೆಸಿದ ಉತ್ಖನನಗಳಲ್ಲಿ, ಚಿತ್ರಕಲೆಯ ಹಾಗೂ ಶಿಲ್ಪದ ಪ್ರಾಚೀನ ಮಾದರಿಗಳಲ್ಲಿ, ಗಾಡಿಗಳು ಕಂಡು ಬಂದಿರುವುದು ಮಾನವ ಜನಾಂಗಕ್ಕೆ ಅವು ಎಂಥ ಉಪಯುಕ್ತ ಸಾಧನಗಳಾಗಿದ್ದವೆಂಬುದನ್ನು ಸ್ಪಷ್ಟಪಡಿಸುತ್ತದೆ.

ಗಾಡಿಗೆ ತುಂಬ ಪ್ರಾಚೀನ ಇತಿಹಾಸವಿದೆ. ಕನಿಷ್ಟ ಪಕ್ಷ ಪ್ರ.ಶ.ಪು. ಮೂರು-ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆಯೇ ಗಾಡಿಗಳು ಅಸ್ತಿತ್ವದಲ್ಲಿದ್ದುವೆಂಬುದಕ್ಕೆ ಖಚಿತ ಸಾಕ್ಷ್ಯಗಳಿವೆ. ಕೆಲವು ವಿದ್ವಾಂಸರು ಇವುಗಳ ಪ್ರಾಚೀನತೆಯನ್ನು ಪ್ರ.ಶ.ಪು. 15ನೆಯ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತಾರೆ. ಪ್ರಾಚೀನ ಮೆಸಪೊಟೇಮಿಯ ದಲ್ಲಿ ಇವು ಬಳಕೆಯಲ್ಲಿದ್ದುವೆಂದು ನಿಶ್ಚಿತವಾಗಿ ತಿಳಿದು ಬಂದಿದೆ. ಈ ಸಂಸ್ಕೃತಿಯನ್ನು ಘೋಷಿಸಿದ ಜನರೇ ಗಾಡಿಗಳನ್ನು ಮೊಟ್ಟಮೊದಲಿಗೆ ಬಳಕೆಗೆ ತಂದಿರಬೇಕೆಂದು ಹೇಳಲಾಗಿದೆ. ಕಿಷ್ನಲ್ಲಿ ದೊರೆತಿರುವ ಪುರ್ವ-ವಂಶಜರ ಸಮಾಧಿಗಳಲ್ಲಿ ಕಂಡುಬಂದಿರುವ ಗಾಡಿಗಳಲ್ಲಿ ಉಂಡೆಚಕ್ರವಿದ್ದು, ಅವು ತಾಮ್ರದ ಪಟ್ಟೆಯನ್ನು ಹೊಂದಿವೆ. ಮಾನವ ತನ್ನ ತಲೆಯ ಮೇಲೆ ಹಾಗೂ ಪ್ರಾಣಿಗಳ ಮೇಲೆ ಹೊರೆಯನ್ನು ಹೇರಿಕೊಂಡು ಹೋಗುವುದಕ್ಕೆ ಬದಲಾಗಿ ಸಾಗಣೆಯ ಸಾಧನವೊಂದನ್ನು ರೂಪಿಸಲು ಪ್ರಯತ್ನಿಸಿದಾಗ ಬಹುಶಃ ಗಾಡಿಯ ಮೊಟ್ಟಮೊದಲ ಸ್ವರೂಪ ಗೋಚರಿತು. ಇದೇ ಸ್ಲೆಜ್ ಅಥವಾ ಜಾರುಬಂಡಿ. ಇದಕ್ಕೆ ಗಾಲಿಗಳು (ಚಕ್ರ) ಇರುತ್ತಿರಲಿಲ್ಲ (ನೋಡಿ- ಗಾಲಿ). ಚಕ್ರದ ಆವಿಷ್ಕಾರ ಸಾಗಣೆಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಸುಮೇರಿಯನ್ ಚಿತ್ರಲಿಪಿಯಲ್ಲಿ ಜಾರುಬಂಡಿಗಳನ್ನು ಹೋಲುವಂಥ ಕೆಲವು ಚಿತ್ರಗಳಿವೆ. ಆದರೆ, ಈ ಸಂಸ್ಕೃತಿಯ ಅತ್ಯಂತ ಪ್ರಾಚೀನ ಅವಶೇಷಗಳಲ್ಲಿ- ಅಂದರೆ ಮಡಕೆಗಳ ಮೇಲೆ ಕೆತ್ತಿರುವ ಚಿತ್ರಗಳಲ್ಲಿ-ನಾಲ್ಕು ಚಕ್ರಗಳನ್ನುಳ್ಳ ವಾಹನವೂ ಕಾಣದೊರೆತಿರುವುದು ಕುತೂಹಲಕರವಾಗಿದೆ. ಈ ಸಂಸ್ಕೃತಿಯ ಕೇಂದ್ರವೆಂದು ಭಾವಿಸಲಾಗಿರುವ ಸುಮೇರ್ ಪ್ರದೇಶದ ಎರೆಖ್ ಎಂಬಲ್ಲಿರುವ ಇನ್ನಾವ ದೇವಾಲಯದಲ್ಲಿಯೂ ನಾಲ್ಕು ಉಂಡೆಚಕ್ರಗಳನ್ನುಳ್ಳ, ಬಹುಮಟ್ಟಿಗೆ ಜಾರುಬಂಡಿಯನ್ನು ಹೋಲುವಂಥ ಗಾಡಿಯೊಂದರ ಚಿತ್ರವಿದೆ. ಇದೇ ಅವಧಿಯದಾಗಿರಬಹುದೆಂದು ಭಾವಿಸಲಾಗಿರುವ ಕಿಷ್, ಉರ್ ಮತ್ತು ಸ್ಯೂಜ಼್ಯ ಪ್ರದೇಶಗಳಲ್ಲಿ ದೊರೆತಿರುವ ರಾಜರ ಸಮಾಧಿಗಳಲ್ಲಿಯೂ ಈ ಬಗೆಯ ಗಾಡಿಗಳ ಪ್ರತಿಕೃತಿಗಳಿವೆ.

ಮಧ್ಯ ಏಷ್ಯದ ಸ್ಟೆಪ್ ಹುಲ್ಲುಗಾವಲುಗಳಲ್ಲಿ ಹಾಗೂ ಸಿಂಧೂನದೀ ಕಣಿವೆಯಲ್ಲಿ ಎರಡು ಚಕ್ರಗಳನ್ನುಳ್ಳ ಗಾಡಿಯೇ ವಿಶೇಷವಾಗಿ ಬಳಕೆಯಲ್ಲಿದ್ದುದಾಗಿ ತಿಳಿಯಬಂದಿದೆ. ಈ ಅವಶೇಷಗಳು ಪ್ರ.ಶ.ಪು. ಮೂರನೆಯ ಸಹಸ್ರಾಬ್ದದ ಕೊನೆಯ ಶತಮಾನದವಾಗಿದ್ದಿರಬೇಕೆಂದು ಭಾವಿಸಲಾಗಿದೆ. ಸಿಂಧೂ ನದೀ ಕಣಿವೆಯಲ್ಲಿನ ಚನ್ಹು-ದಾರೋ ಎಂಬಲ್ಲಿ ದೊರೆತಿರುವ ಗಾಡಿಗಳ ಮಾದರಿಗಳು ಆಕಾರದಲ್ಲಿ ಚಿಕ್ಕವಾಗಿದ್ದುವು; ನೊಗಕ್ಕೆ ಎರಡು ಎತ್ತುಗಳನ್ನು ಕಟ್ಟಲಾಗುತ್ತಿತ್ತು. ಹೊರವಲಯಕ್ಕೆ ಉಬ್ಬಿಕೊಂಡಿರುತ್ತಿದ್ದ ವಕ್ರರೂಪದಲ್ಲಿರುತ್ತಿದ್ದ ಎರಡು ತೊಲೆಗಳಿದ್ದು ಅಡ್ಡವಾಗಿ ಮೂರು ಕಿರು ತೊಲೆಗಳನ್ನು ಜೋಡಿಸಿ ಇವನ್ನು ಬಂಧಿಸಲಾಗುತ್ತಿತ್ತು. ಉದ್ದ ತೊಲೆಗಳಲ್ಲಿ ರಂಧ್ರಗಳನ್ನು ಕೊರೆದು ಗೂಟಗಳನ್ನು ಹೊಡೆದಿರುತ್ತಿದ್ದರು. ಚಕ್ರಗಳು ಉಂಡೆಯಾಗಿರುತ್ತಿದ್ದುವು. ಮೂರು ವೃತ್ತ ಖಂಡಗಳ ರೂಪದಲ್ಲಿ ಕತ್ತರಿಸಲಾದ ಮರದ ಭಾಗಗಳನ್ನು ಜೋಡಿಸಿ ಉಂಡೆಚಕ್ರವನ್ನು ರೂಪಿಸುವ ವಾಡಿಕೆ ಇದ್ದಂತೆ ತೋರುತ್ತದೆ. ಮಧ್ಯೆ ಅಚ್ಚಿನ ಭಾಗವೂ ಸೇರ್ಪಡೆಗೊಂಡಿರುತ್ತಿತ್ತು. ಗಾಡಿಯ ದೂರಿ ಮತ್ತು ಚಕ್ರಗಳನ್ನು ಒಂದಿಗೇ ಹಿಡಿದಿಡಲು ಕಡಾಣಿಯನ್ನು ಬಳಸಲಾಗುತ್ತಿತ್ತು. ಚಕ್ರಗಳನ್ನೊಳಗೊಂಡ ಅಚ್ಚಿನ ಮರದ ಚೌಕಟ್ಟಿನಲ್ಲಿ ಅಟ್ಟಣೆಯನ್ನು ಕಟ್ಟಿ, ಸಾಮಾನುಗಳನ್ನು ಇಡಲು ಅಥವಾ ಜನರಿಗೆ ಕೂಡಲು ಅನುಕೂಲ ಮಾಡಿಕೊಡಲಾಗುತ್ತಿತ್ತು. ಇತಿಹಾಸಪುರ್ವಕಾಲದ ಈ ಗಾಡಿಗಳ ಸ್ವರೂಪ ಇಂದೂ ಸಿಂಧ್ನಲ್ಲಿ ಬಳಕೆಯಲ್ಲಿರುವ ರೈತರ ಗಾಡಿಗಳಿಗಿಂತ ಬಹುವಾಗಿ ಭಿನ್ನವಾಗಿಲ್ಲ. ಕರ್ನಾಟಕ ರಾಜ್ಯದ ಕೆಲೆವೆಡೆಗಳಲ್ಲಿ ಕಾಣಬರುವ ವಡ್ಡರ ಬಂಡಿಗಳು ಬಹುಮಟ್ಟಿಗೆ ಇದೇ ಮಾದರಿಯವು. ಏಷ್ಯದ ಸ್ಟೆಪ್ ಹುಲ್ಲುಗಾವಲಿನ ವಲಸೆಗಾರರು ಕಮಾನುಯುಕ್ತವಾದ ಗಾಡಿಗಳನ್ನೂ ಬಳಸುತ್ತಿದ್ದರು. ಬಹುಮಟ್ಟಿಗೆ ಕುಟುಂಬದ ಸದಸ್ಯರ ಪ್ರಯಾಣಕ್ಕಾಗಿ ಬಳಸಲಾಗುತ್ತಿದ್ದ ಈ ಗಾಡಿಗಳ ಮಾದರಿಗಳು ಪ್ರ.ಶ.ಪು. ಮೂರನೆಯ ಸಹಸ್ರಾಬ್ದದ ಹೊತ್ತಿಗೆ ಸಿರಿಯ ಮತ್ತು ಅಸ್ಸೀರಿಯಗಳಲ್ಲಿ ಕಾಣಬಂದುವೆಂದು ಹೇಳಲಾಗಿದೆ. ಪ್ರ.ಶ.ಪು. ಎರಡನೆಯ ಸಹಸ್ರಾಬ್ದದ ಆರಂಭದ ಹೊತ್ತಿಗೆ ಮಧ್ಯ ಪ್ರಾಚ್ಯದಲ್ಲೆಲ್ಲ ಈ ಬಗೆಯ ಗಾಡಿಗಳು ಕಾಣದೊರೆಯುತ್ತಿದ್ದುವು. ಸಿರಿಯ, ಕ್ರೀಟ್ ಮತ್ತು ಅನಟೋಲಿಯ ಪ್ರಸ್ಥಭೂಮಿಯನ್ನೂ ಅವು ಪ್ರವೇಶಿಸಿದ್ದುವು. ಪ್ರಚಲಿತ ಶಕ ಪುರ್ವದ ಕೊನೆಯ ಶತಮಾನಗಳ ಅವಧಿಯಲ್ಲಿ ಈ ಕಮಾನು ಗಾಡಿಗಳು ಚೀನವನ್ನು ಪ್ರವೇಶಿಸಿದುವು. ಹಂಗರಿಯ ಸರಕುಸಾಗಣೆ ಗಾಡಿಗಳು ಸಿರಿಯದ ಮಾದರಿಯನ್ನೂ ಕ್ಯಾಲ್ಮಿಕ್ ಸ್ಟೆಪ್ ಹುಲ್ಲುಗಾವಲಿನ ಗಾಡಿಗಳು ಸಿಥಿಯನ್ ಮಾದರಿಯನ್ನೂ ಹೋಲುತ್ತವೆ. ಅನಟೋಲಿಯದ ಸಾಗರ ಸಂಚಾರಿಗಳು ಈಜಿಪ್ಪಿನ ಮೇಲೆ ಆಕ್ರಮಣ ಮಾಡಿದ ಅನಂತರದಲ್ಲಿಯೇ ಈಜಿಪ್ಪಿಗೆ ಗಾಡಿಗಳ ಪ್ರವೇಶವಾದದ್ದು. ಗ್ರೀಸ್ ಮತ್ತು ರೋಮ್ಗಳಲ್ಲಿಯೂ ಉಂಡೆಚಕ್ರದ ಬೇಸಾಯದ ಬಂಡಿಗಳು ಬಳಕೆಯಲ್ಲಿದ್ದುವು. ಕಂಚಿನ ಯುಗದ ಕೊನೆಯ ದಿನಗಳಲ್ಲಿ ಗಾಡಿಗಳು ಯುರೋಪನ್ನು ಪ್ರವೇಶಿಸಿದವು. ಈ ಹೊತ್ತಿಗೆ ಉಂಡೆಚಕ್ರಗಳಿಗೆ ಬದಲಾಗಿ ಅಲೆಗಳನ್ನುಳ್ಳ ಚಕ್ರಗಳೂ ಬಳಕೆಗೆ ಬಂದಿದ್ದುವು. ಈ ಕಾಲದ ಗ್ರೀಸಿನ ಕುಂಭಕಲಾ ಚಿತ್ರಗಳಲ್ಲಿ ಈ ಬಗೆಯ ಚಕ್ರಗಳನ್ನುಳ್ಳ ಗಾಡಿಗಳ ಪ್ರತಿಕೃತಿಗಳು ಕಾಣದೊರೆಯುತ್ತವೆ. ಉಂಡೆಚಕ್ರಗಳಿಗೆ ಬದಲಾಗಿ ಅರೆಯುಕ್ತ ಚಕ್ರಗಳನ್ನು ಬಳಸುವ ಕ್ರಮವನ್ನು ಮುಂದೆ ತಂದವರು ಹಿಟ್ಟೈಟರೆಂದು ಹೇಳಲಾಗಿದೆ. ಮೊದಲಿಗೆ ಇಂಥ ಮರದ ಚಕ್ರಗಳನ್ನೂ ಮುಂದೆ ಮರದ ಚಕ್ರಗಳಿಗೆ ಬದಲಾಗಿ ಲೋಹದ ಚಕ್ರಗಳನ್ನೂ ಬಳಸಿದವರಲ್ಲಿ ಇವರೇ ಮೊದಲಿಗರು. ರೋಮನ್ ಚಕ್ರಾಧಿಪತ್ಯದಲ್ಲಿ ಉಂಡೆ ಚಕ್ರದ ಹಾಗೂ ಅರೆ ಚಕ್ರದ ಗಾಡಿಗಳು 20ನೆಯ ಶತಮಾನದ ಮಧ್ಯಭಾಗದಲ್ಲಿಯೂ ಬಳಕೆಯಲ್ಲಿದ್ದುವು. ಈ ಬಗೆಯ ರೋಮನ್ ಗಾಡಿಗಳ ಮಾದರಿಗಳನ್ನು ಸ್ಪೇನ್, ಸಾರ್ಡೀನಿಯ, ಬೋಸ್ನಿಯ, ಅನಟೋಲಿಯ ಮತ್ತು ಮಧ್ಯ ಇಟಲಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ರಚನೆಯ ದೃಷ್ಟಿಯಿಂದ ಈ ಗಾಡಿಗಳನ್ನು ಎರಡು ಬಗೆಯಾಗಿ ವಿಂಗಡಿಸಬಹುದು: ಅಚ್ಚಿನ ಮೇಲೆ ಕುಳಿತಿರುವ ಅಟ್ಟಣೆಯನ್ನುಳ್ಳ ಗಾಡಿಗಳು ಹಾಗೂ ಮೂಕಿ ತೊಲೆಯ ಮೇಲೆ ಕುಳಿತಿರುವ ಗಾಡಿಗಳು ಎಂದು. ಮೊದಲ ಮಾದರಿಯ ಗಾಡಿಗಳು ಸ್ಪೇನ್, ಲ್ಯಾಟಿಯಂ ಮತ್ತು ಇಟಲಿಗಳಲ್ಲಿಯೂ ಎರಡನೆಯ ಬಗೆಯವು ಅನಟೋಲಿಯ ಮತ್ತು ಸಾರ್ಡೀನಿಯಗಳಲ್ಲಿಯೂ ಕಾಣಬರುತ್ತವೆ, ಅಮೆರಿಕ ಖಂಡಕ್ಕೆ ಈ ಗಾಡಿಗಳ ಪರಿಚಯವಾದದ್ದು ಸ್ಪ್ಯಾನಿಷ್ ಆಕ್ರಮಣದ ಅನಂತರದಲ್ಲಿಯೇ.

ಅಮೆರಿಕವನ್ನು ಪ್ರವೇಶಿಸಿದ ಈ ಗಾಡಿಯನ್ನು ಎಳೆಯಲು ಹೇಸರುಗತ್ತೆಗಳನ್ನು ಬಳಸಲಾಗಿತ್ತು. ಪ್ರ.ಶ. 1ನೆಯ ಶತಮಾನದ ಹೊತ್ತಿಗೆ ಮೇಕೆಗಳು ಅಥವಾ ನಾಯಿಗಳು ಎಳೆಯಬಹುದಾಗಿದ್ದಂಥ ಸಣ್ಣ ಗಾಡಿಗಳು ರೂಪುದಳೆದಿದ್ದುವೆಂಬುದಕ್ಕೆ ಪಾಂಪೆಯ ಭಿತ್ತಿಚಿತ್ರಗಳು ಸಾಕ್ಷಿಯಾಗಿವೆ. ಪ್ರ.ಶ.2ನೆಯ ಶತಮಾನದ ಹೊತ್ತಿಗೆ ಎತ್ತಿನ ದೊಡ್ಡ ಗಾಡಿಗಳು ಚೀನದಲ್ಲಿ ಬಹುವಾಗಿ ಬಳಕೆಗೆ ಬಂದುವು. ಗಾಡಿಗೆ ನೊಗವನ್ನು ಹೂಡಿ ಎತ್ತುಗಳನ್ನು ಕಟ್ಟುವ ಈ ಬಳಕೆ ಪಾಶ್ಚಾತ್ಯ ಪ್ರಪಂಚಕ್ಕಿಂತಲೂ ದೂರ ಪ್ರಾಚ್ಯದಲ್ಲಿಯೇ ಹೆಚ್ಚಾಗಿ ಬಳಕೆಗೆ ಬಂತು. ಯುರೋಪಿನ ಕೆತ್ತನೆಗಳಲ್ಲಿ 8ನೆಯ ಶತಮಾನದ ಅಂತರದಲ್ಲಿಯೇ ಈ ಬಗೆಯ ಮೊದಲ ಚಿತ್ರ ಕಾಣದೊರೆತಿರುವುದು ಈ ಅಭಿಪ್ರಾಯಕ್ಕೆ ಪುಷ್ಟಿಯನ್ನೊದಗಿಸುತ್ತದೆ. ಭಾರತದಲ್ಲಿ ಎತ್ತುಗಳನ್ನು ವಿಶೇಷವಾಗಿ ಬಳಸುತ್ತಿದ್ದರು. ಆದರೆ ಕೆಲವೆಡೆಗಳಲ್ಲಿ ಕೋಣಗಳನ್ನೂ ಅಪುರ್ವವಾಗಿ ಬಂಜೆ ಹಸುಗಳನ್ನೂ ಈ ಉದ್ದೇಶಕ್ಕೆ ಬಳಸುವ ವಾಡಿಕೆ ಇರುವುದೂ ಕಂಡುಬಂದಿದೆ. ಪರ್ಷಿಯ ಮತ್ತು ಕಪ್ಪಡೋಸಿಯಗಳಲ್ಲಿ ಬಹುಶ: ಮೊದಲ ಬಾರಿಗೆ ಕುದುರೆಗಾಡಿಗಳು ಸಿದ್ಧವಾದಂತೆ ತಿಳಿದು ಬಂದಿದೆ. ಅಂದರೆ ಪ್ರಚಲಿತ ಶಕಪುರ್ವ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದೆಯೇ ಕುದುರೆಗಳನ್ನು ಈ ಕಾರ್ಯಕ್ಕೆ ಬಳಸುವ ಪದ್ಧತಿ ಬಳಕೆಗೆ ಬಂದಿರಬೇಕೆಂದು ಹೇಳಲಾಗಿದೆ.

ಗಾಡಿಯ ಬಗೆಗಳು[ಸಂಪಾದಿಸಿ]

ಭಾರತದಲ್ಲಿ ಒಂಟೆತ್ತಿನ ಗಾಡಿ, ಜೋಡೆತ್ತಿನ ಗಾಡಿ, ವಡ್ಡರ ಗಾಡಿ (ಚಕ್ಕಡಿ), ಕೈಗಾಡಿ ಮತ್ತು ಕುದುರೆಗಾಡಿ ವಿಶೇಷವಾಗಿ ಬಳಕೆಯಲ್ಲಿವೆ. ಇವುಗಳಲ್ಲಿ ವಡ್ಡರ ಗಾಡಿಯೊಂದು ಈಚೆಗೆ ಅಪುರ್ವ ವಸ್ತುವಾಗಿ ಪರಿಣಮಿಸುತ್ತಿದೆ. ರಚನೆಯ ಸ್ಥೂಲತ್ವ ಮತ್ತು ಅಕುಶಲತ್ವಗಳಿಂದಾಗಿ ಹಾಗೂ ಅವನ್ನು ಯಾವ ಉದ್ಧೇಶಕ್ಕಾಗಿ ಬಳಸುತ್ತಿದ್ದರೋ ಆ ಉದ್ದೇಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅವುಗಳಿಗೆ ವಡ್ಡರ ಬಂಡಿ ಎಂದು ಹೆಸರಿಸಿರಬೇಕು. ವಡ್ಡ ಜನಾಂಗದಲ್ಲಿ ಅವು ವಿಶೇಷವಾಗಿ ಬಳಕೆಯಲ್ಲಿದ್ದುದೂ ಇದಕ್ಕೆ ಕಾರಣವಾಗಿರಬೇಕು.

ಒಂಟೆತ್ತಿನ ಗಾಡಿ ಮತ್ತು ಜೋಡೆತ್ತಿನ ಗಾಡಿ ಎಂಬ ಶಬ್ದಗಳೇ ಈ ಸಾಧನಗಳಲ್ಲಿ ಕ್ರಮಶಃ ಒಂದು ಮತ್ತು ಎರಡು ಎತ್ತುಗಳನ್ನು ಬಳಸಲಾಗುತ್ತದೆಂಬುದನ್ನು ಸೂಚಿಸುತ್ತವೆ. ಇವುಗಳಲ್ಲಿ ಕಮಾನುರಹಿತ ಹಾಗೂ ಕಮಾನುಸಹಿತವಾದ ಗಾಡಿಗಳೆಂದು ಎರಡು ಬಗೆಗಳುಂಟು. ದೂರಿ ಮತ್ತು ಕಡಾಣಿಗಳಿಂದ ಬಂಧಿಸಲ್ಪಟ್ಟ ಎರಡು ಚಕ್ರಗಳ ನಡುವೆ ಮರದ ಅಚ್ಚು ಇದ್ದು, ಅದರ ಮೇಲೆ ಅಟ್ಟಣೆ ಇರುತ್ತದ್ದೆಯಷ್ಟೇ. ಈ ಅಟ್ಟಣೆಯ ಎಡ ಮತ್ತು ಬಲತುದಿಯಲ್ಲಿ ದಪ್ಪನಾದ ತೊಲೆಗಳಿರುತ್ತವೆ. ಇದರ ಹಿಂಬದಿ ಮತ್ತು ಮುಂಬದಿಗಳಲ್ಲಿ ಅಡ್ಡಡ್ಡವಾಗಿ ದಪ್ಪ ತೊಲೆಗಳನ್ನು ಕೂಡಿಸಿ ಆಯತಾಕಾರದ ಚೌಕಟ್ಟನ್ನು ನಿರ್ಮಿಸಿರುತ್ತಾರೆ. ಚೌಕಟ್ಟಿನ ಮಧ್ಯೆ ಹಲಗೆಗಳನ್ನು ಜೋಡಿಸಿರುತ್ತಾರೆ. ಒಂಟೆತ್ತಿನ ಗಾಡಿಯಲ್ಲಿ ಎಡ ಮತ್ತು ಬಲಬದಿಯ ತೊಲೆಗಳು ಕೆಲವು ಮೀಟರ್ಗಳಷ್ಟು ಮುಂದಕ್ಕೆ ಚಾಚಿಕೊಂಡಿದ್ದು ಮತ್ತೊಂದು ಉರುಟಾದ ನೊಗ ಇದಕ್ಕೆ ಅಡ್ಡವಾಗಿ ಬಂದು ಚೌಕಟ್ಟೊಂದನ್ನು ನಿರ್ಮಿಸುತ್ತದೆ. ಈ ಚೌಕಟ್ಟಿನ ನಡುವೆ ಒಂದು ಎತ್ತು ಬರುತ್ತದೆ, ಅದರ ಹೆಗಲಿನ ಮೇಲೆ ನೊಗವನ್ನಿಟ್ಟು ಕಣ್ಣಿಯಿಂದ ಅದನ್ನು ನೊಗಕ್ಕೆ ಬಂಧಿಸಲಾಗುತ್ತದೆ. ಎರಡೂ ಬದಿಯ ತೊಲೆಗಳಲ್ಲಿ ಅಲ್ಲಲ್ಲಿ ರಂಧ್ರಗಳನ್ನು ಕೊರೆದು ಕವೆಗೋಲು ಅಥವಾ ಗೂಟಗಳನ್ನು ನೆಟ್ಟಿರುತ್ತಾರೆ. ಅಗತ್ಯಾನುಗುಣವಾಗಿ ಬಿದಿರಿನ ದೆಬ್ಬೆಗಳನ್ನು ಹೆಣೆದು ಈ ಪಾಶರ್ವಗಳನ್ನು ಪುರೈಸುವುದೂ ಉಂಟು. ಸಾಮಾನು ಸರಂಜಾಮುಗಳ ಸಾಗಣೆಗೆ ಹಾಗೂ ಪ್ರಯಾಣಿಕರು ಒರಗಿಕೊಂಡು ಕೂಡಲು ಇದರಿಂದ ಅನುಕೂಲವಾಗುತ್ತದೆ. ಜೋಡೆತ್ತಿನ ಗಾಡಿಯಲ್ಲಿ ಬದಿಯ ತೊಲೆಗಳು ಅಟ್ಟಣೆಯ ಚೌಕಟ್ಟಿನಲ್ಲಿಯೇ ಕೊನೆಗಾಣುತ್ತವೆ. ಅದರೆ, ಮೂರನೆಯ ದಪ್ಪ ತೊಲೆಯೊಂದು ಇವುಗಳ ನಡುವೆ ಬಂದಿದ್ದು ಅದು ಕೆಲವು ಮೀಟರ್ಗಳಷ್ಟು ಮುಂದಕ್ಕೆ ಚಾಚಿಕೊಂಡಿದ್ದು, ಮೂಕಿಯಲ್ಲಿ ಕೊನೆಗೊಂಡಿರುತ್ತದೆ. ಪ್ರತ್ಯೇಕವಾದ ನೊಗವನ್ನು ಇಟ್ಟು ಕಟ್ಟಲು ಅನುಕೂಲವಾಗುವಂತೆ ಮೂಕಿಯ ತುದಿ ತತ್ಕ್ಷಣದ ಪಾತಳಿಗಿಂತ ಸು. 16 ಸೆಂ.ಮೀನಷ್ಟು ಮೇಲೆ ಎದ್ದಿರುತ್ತದೆ. ಅಂದರೆ, ಆ ರೀತಿ ಅದನ್ನು ಕೊರೆಯಲಾಗಿರುತ್ತದೆ. ಅದರ ತುದಿಯ ತಳಭಾಗವೂ ಲಂಬಾಕಾರವಾಗಿ ಸುಮಾರು 46 ಸೆಂ.ಮೀನಷ್ಟು ಕೆಳಚಾಚಿ ಕೊಂಡಿರುತ್ತದೆ. ಹೀಗಾಗಿ, ಗಾಡಿಯ ಅಟ್ಟಣೆಯ ಮುಂಚಾಚು, ಒಂಟೆತ್ತಿನ ಗಾಡಿಯಲ್ಲಾಗುವಂತೆ, ನೆಲದ ಮೇಲೆ ಕುಳಿತಿರುವುದಿಲ್ಲ. ಅಡ್ಡಲಾಗಿ ಹಾಕಲಾದ ನೊಗದ ಎರಡೂ ಬದಿಗಳಲ್ಲಿ ತುದಿಯಿಂದ ಸ್ವಲ್ಪ ದೂರದಲ್ಲಿ ಒಂದೊಂದು ರಂಧ್ರವಿರುತ್ತದ. ಇದೇ ಕಣ್ಣಿಗೂಟದ ರಂಧ್ರ, ಈ ಗೂಟದ ನೆರವಿನಿಂದ ಹಾಗೂ ಕಣ್ಣಿಯನ್ನು ಬಳಸಿ ನೊಗಕ್ಕೆ ಕಟ್ಟಲಾಗುತ್ತದೆ. ಈ ಪ್ರಕ್ರಿಯೆಯನ್ನು ಗಾಡಿ ಹೂಡುವುದು ಎನ್ನುತ್ತಾರೆ. ಅಟ್ಟಣೆಯ ಎರಡೂ ಬದಿಯಿಂದ ಬಲವಾದ ಬಿದಿರುದೆಬ್ಬೆಗಳನ್ನು ಎಳೆದು ಮೂಕಿಯ ತುದಿಯಲ್ಲಿ ಬಂಧಿಸಿರುತ್ತಾರೆ. ಅಡ್ಡ ತೊಲೆ ಮತ್ತು ಈ ಎರಡು ಬಿದಿರು ಬಾಹುಗಳು ಸೇರಿ ಒಟ್ಟಿನಲ್ಲಿ ಒಂದು ಸಮದ್ವಿಬಾಹು ತ್ರಿಭುಜವನ್ನು ರಚಿಸಿರುತ್ತವೆ. ನಡುವಣ ದಪ್ಪ ತೊಲೆ ಈ ತ್ರಿಭುಜವನ್ನು ಎರಡು ತ್ರಿಭುಜಗಳಾಗಿ ವಿಂಗಡಿಸುವ ಲಂಬರೇಖೆಯಂತಿರುತ್ತದೆ. ಗಾಡಿ ಹೊಡೆಯು ವವನು ಸರಿಯಾಗಿ ಕುಳಿತು ಗಾಡಿ ಹೊಡೆಯಲು ಇದರಿಂದ ಅನುಕೂಲವಾಗುತ್ತದೆ. ಎತ್ತಿನ ಕತ್ತಿಗೆ ಕಟ್ಟಿರುವ ಹಗ್ಗಗಳೆರಡನ್ನೂ ಹಿಡಿದುಕೊಂಡು ಗಾಡಿ ಹೊಡೆಯವವನು ಕುಳಿತುಕೊಳ್ಳೂತ್ತಾನೆ. ಒಂಟೆತ್ತಿನ ಗಾಡಿಯಲ್ಲಿ ಸಾರಥಿ ಅಟ್ಟಣೆಯ ಮುಂಬದಿಯ ಒಂದು ಪಕ್ಕದಲ್ಲಿ ಮಾತ್ರ ಇರುತ್ತದೆ. ಈ ಹಗ್ಗ ಅಥವಾ ಹಗ್ಗಗಳೇ ಇಲ್ಲಿಯ ಸ್ಟಿಯರಿಂಗ್ ಸಾಧನಗಳು; ಅಂದರೆ, ಅವನ್ನು ಅಗತ್ಯಾನುಗುಣವಾಗಿ, ಎಳೆದು ಅಥವಾ ಪಾಶರ್್ವವನ್ನು ಬದಲಾಯಿಸುವುದರ ಮೂಲಕ ಅಪೇಕ್ಷಿಸಿದ ದಿಕ್ಕಿನಲ್ಲಿ ಹೋಗಬಹುದು. ತಿರುಗಬಹುದು. ಅಷ್ಟೇ ಅಲ್ಲ, ಬ್ರೇಕ್ ಅಥವಾ ತಡೆಯ ಸಾಧನವೂ ಇದೇ. ಜಗ್ಗಿಸಿ, ಹಿಡಿದೆಳೆದರೆ ಗಾಡಿ ನಿಲ್ಲುತ್ತದೆ. ಸಡಿಲ ಬಿಟ್ಟರೆ ಚಲಿಸುತ್ತದೆ. ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯುವ ಹಾಗೂ ತನ್ಮೂಲಕ ಸಾಗಣೆಯ ಅಥವಾ ಯಾನದ ಸೌಕರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ, ಕವೆಗೋಲು ಅಥವಾ ಗೂಟಗಳನು ವಿಸ್ತರಿಸಿ, ಅವನ್ನು ಆಧರಿಸಿ ಬಿದಿರಿನ ಕಮಾನನ್ನು ಕಟ್ಟಿ, ಅದಕ್ಕೆ ಗೋಣಿಪಟ್ಟೆಯನ್ನು ಹೊಲಿಯುವುದುಂಟು. ಇದನ್ನೇ ಕಮಾನು ಗಾಡಿ ಎಂದು ಕರೆಯುವುದು. ಅಲಂಕರಣದ ದೃಷ್ಟಿಯಿಂದ ಕಮಾನಿನ ಒಳಭಾಗಕ್ಕೆ ಬಣ್ಣ ಹಚ್ಚುವ, ಬದಿಗಳಿಗೆ, ಕನ್ನಡಿಯನ್ನು ಜೋಡಿಸುವ ವಾಡಿಕೆಯೂ ಇದೆ. ಹಬ್ಬಹರಿದಿನಗಳಲ್ಲಿ ಪ್ರಮುಖರನ್ನು ಸನ್ಮಾನಿಸುವಂಥ ಸಂದರ್ಭಗಳಲ್ಲಿ ಜೋಡೆತ್ತಿನ ಗಾಡಿಗಳ ಮೆರವಣಿಗೆಯನ್ನು ಏರ್ಪಡಿಸುವುದೂ ಉಂಟು. ಒಬ್ಬಿಬ್ಬರು ನಿರ್ವಹಿಸಬಹುದಾದಷ್ಟು ಪ್ರಮಾಣದ ಹೊರೆಯನ್ನು ತುಂಬಹುದಾ ದಂಥ ಕಿರು ಒಂಟೆತ್ತಿನ ಗಾಡಿಯೇ ಕೈಗಾಡಿ. ವ್ಯತ್ಯಾಸ ಇಷ್ಟೇ. ಎತ್ತಿಗೆ ಬದಲಾಗಿ ಮಾನವ ವ್ಯಕ್ತಿ ಈ ಗಾಡಿಯನ್ನು ಎಳೆಯುತ್ತಾನೆ. ಸೀಮಿತೋದ್ಧೇಶಗಳಿಗೆ ಹಾಗೂ ಸೀಮಿತ ದೂರಗಳಿಗೆ ಇದನ್ನು ಬಳಸಬಹುದು.

ಮುಗ್ಗಾಲಿಗಳ ಬಳಕೆ ಅಷ್ಟಾಗಿ ಕಾಣಬರುವುದಿಲ್ಲವಾದರೂ ಮಕ್ಕಳ ಆಟಕ್ಕೆ ಉಪಯೋಗಿಸುವ ಆಟದ ಗಾಡಿ ವಾಸ್ತವವಾಗಿ ಒಂದು ಮುಗ್ಗಾಲಿಯೇ. ಮಗು ನೆಟ್ಟಗೆ ನಿಂತು ಹಿಡಿದುಕೊಳ್ಳಲು ಅನುಕೂಲವಾಗುವಷ್ಟು ಅಂದರೆ ಸುಮಾರು 46 ಸೆಂ.ಮೀನಷ್ಟು ಎತ್ತರದಲ್ಲಿ ಒಂದು ಅಡ್ಡಪಟ್ಟಿ, ಅದರ ಎರಡೂ ತುದಿಗಳಿಗೆ ಸ್ವಲ್ಪ ದೂರದಲ್ಲಿ ಎರಡು ಲಂಬಾಕಾರದ ಪಟ್ಟಿಗಳು. ಅವನ್ನು ಬಂಧಿಸುವ ಮತ್ತೊಂದು ಅಡ್ಡಪಟ್ಟಿ. ಅದರ ಇಕ್ಕೆಲಗಳಲ್ಲಿ ಎರಡು ಚಕ್ರಗಳು. ಕೆಳ ಅಡ್ಡ ಪಟ್ಟಿಯ ಮಧ್ಯದಿಂದ ನೇರವಾಗಿಯೂ ಮೇಲು ಅಡ್ಡಪಟ್ಟಿಯಿಂದ ಇಳಿಜಾರಾಗಿಯೂ ಬರುವ ಪಟ್ಟಿಗಳ ಸಂಧಿಸ್ಥಾನಕ್ಕೆ ಕೊಂಚ ಮುಂದೆ ಮತ್ತೊಂದು ಚಕ್ರವನ್ನು ಅಳವಡಿಸಿರುತ್ತಾರೆ. ಹೀಗಾಗಿ ಇದನ್ನು ತಳ್ಳಿಕೊಂಡು ಹೋಗುವುದು ಮಗುವಿಗೆ ಸುಲಭವೂ ಹೌದು. ಮಕ್ಕಳಿಗೆ ಇದು ಮನೋರಂಜನೆಯನ್ನೊದಗಿಸುವ ಆಟಿಕೆಯೂ ಹೌದು. ಬೇಗ ಕಾಲು ಬರದ - ಅಂದರೆ ನಡೆಯುವುದನ್ನು ಕಲಿಯದ - ಮಕ್ಕಳಿಗೆ ನಡೆಗಲಿಸುವುದರಲ್ಲಿ ಇದು ತುಂಬ ಪರಿಣಾಮಕಾರಿ.

ಒಂಟೆತ್ತಿನ ಗಾಡಿ ಅಥವಾ ಜೋಡೆತ್ತಿನ ಗಾಡಿ ವ್ಯವಸಾಯ - ವಾಣಿಜ್ಯೋದ್ದೇಶ ಗಳಿಗೆ ತುಂಬ ಉಪಯುಕ್ತವಾಗಿವೆಯಾದರೂ ಮುಖ್ಯ ಕೊರತೆಯೆಂದರೆ ಅವುಗಳ ಪರಿಮಿತ ವೇಗ. ಈ ಗಾಡಿಗಳನ್ನು ಎಳೆಯುವ ಎತ್ತು, ಕೋಣ ಮೊದಲಾದುವು ತುಂಬ ವೇಗದಿಂದ ಚಲಿಸಲಾರವು. ಗಾಡಿಗಳ ಭಾರವೂ ಗಾಲಿಯ ಸುತ್ತಿನ ಲೋಹ ಪಟ್ಟಿಯೂ ಇದಕ್ಕೆ ಕಾರಣ. ಹೀಗಾಗಿ, ಸಾಕಷ್ಟು, ಹಿಂದೆಯೇ ಈ ಗಾಡಿಗಳಿಗೆ ಕುದುರೆಗಳನ್ನು ಬಳಸುವ ಪದ್ಧತಿ ಜಾರಿಗೆ ಬಂದಿತು. ಇದರಿಂದ ವೇಗದ ಪ್ರಯಾಣ ಸಾಧ್ಯವಾಯಿತು. ಕ್ರಮೇಣ ಗಾಡಿಯ ಸ್ವರೂಪದಲ್ಲೂ ಸುಧಾರಣೆಗಳಾದುವು. ಇದರ ಫಲವೇ ಈಗಿನ ಕುದುರೆ ಗಾಡಿ. ಕುದುರೆಗಳನ್ನು ಯುದ್ಧರಥಗಳಿಗೆ ಹಾಗೂ ವೈಭವೋ ಪೇತ ವಾಹನಗಳಾದ ಕೋಚುಗಳಿಗೆ ಬಳಸುವ ವಾಡಿಕೆ ಬೆಳೆದು ಬಂದಿತ್ತಾದರೂ ಕುದುರೆಗಾಡಿಯ ಉದ್ದೇಶ ಮತ್ತು ಸೌಲಭ್ಯಗಳು ಬೇರೆಯೇ ಆಗಿದ್ದುವು. ಇದು ಒಂಟೆತ್ತಿನ ಗಾಡಿಯ ಸುಧಾರಿತ ರೂಪ. ಅದುವರೆಗೆ ಚಕ್ರಕ್ಕೆ ಹಾಕುತ್ತಿದ್ದ ಕಬ್ಬಿಣದ ಪಟ್ಟೆಗಳಿಗೆ ಬದಲಾಗಿ ರಬ್ಬರಿನ ಪಟ್ಟೆ ಬಂತು. ಅಚ್ಚಿನ ಮೇಲೆ ಅಟ್ಟಣಿಗೆಯನ್ನು ನೇರವಾಗಿ ಕೂಡಿಸುವುದರಿಂದ ರಸ್ತೆಯ ಏರಿಳಿತಗಳು ಪ್ರತಿಯೊಂದು ಕಂಪನವೂ ಆಘಾತವೂ ವಾಹನ ಮೇಲೆ ಕುಳಿತಿರುವ ಪ್ರಯಾಣಿಕರ ಮೇಲೆ ಪ್ರಭಾವ ಬೀರುತ್ತದೆ. ಈ ಕಂಪನವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸ್ಪ್ರಿಂಗ್ - ಫಲಕಗಳ ಮೇಲೆ ಅಟ್ಟಣಿಗೆಯನ್ನು ಕೂಡಿಸಲಾಯಿತು. ಒಂಟೆತ್ತಿನ ಗಾಡಿಯಲ್ಲಿರುವಂತೆ, ಅಟ್ಟಣೆಯ ಮುಂಚಾಚಿನ ಪಾಶರ್್ವಸ್ಥ ಕಿರುದೊಲೆಗಳನ್ನು ಮತ್ತೊಂದು ಉರುಟು ನೊಗ ಬಂಧಿಸಿ ರುವುದಿಲ್ಲ. ಚರ್ಮದ ಕಣ್ಣಿಗಳನ್ನು ಹಾಕಿರುತ್ತಾರೆ. ಇವುಗಳ ನೆರವಿನಿಂದ ಲಗಾಮು ಹಾಕಿರುವ ಕುದುರೆಯನ್ನು ಗಾಡಿಗೆ ಕಟ್ಟಲಾಗುತ್ತದೆ. ಪ್ರಯಾಣಿಕರು ಹತ್ತಿ ಗಾಡಿಯಲ್ಲಿ ಕುಳಿತುಕೊಳ್ಳಲು ನೆರವಾಗುವುದಕ್ಕಾಗಿ ಗಾಡಿಯ ಹಿಂಬದಿಯಲ್ಲಿ ಕಾಲೊತ್ತು ಇರುತ್ತದೆ. ಅಟ್ಟಣೆಯ ಮೇಲೆ ಸುಮಾರು 75 ಸೆಂ.ಮೀ.ಯಷ್ಟು ಎತ್ತರದಲ್ಲಿ ಕಮಾನನ್ನು ಕಟ್ಟಿದ್ದು, ಅದಕ್ಕೆ ಸಾಮಾನ್ಯವಾಗಿ ಜಲನಿರೋಧಕ ಮೇಣಗಪಟದ ಬಟ್ಟೆಯನ್ನು ಹೊದಿಸಿರುತ್ತಾರೆ. ಒಳಗೆ ಕುಳಿತವರು ಹಿಡಿದುಕೊಳ್ಳಲು ಅನುಕೂಲವಾಗುವಂತೆ ಲೋಹದ ಅಥವಾ ಮರದ ಗುಂಡುಗೋಲನ್ನು ಅಥವಾ ಕಂಬಿಯನ್ನು ಎರಡೂ ಬದಿಗಳಲ್ಲಿ ಹಾಕಿರುತ್ತದೆ. ಅಲಂಕರಣದ ದೃಷ್ಟಿಯಿಂದ, ಕನ್ನಡಿಯನ್ನು ಅಳವಡಿಸಿರುವುದೂ ಚಿತ್ತಾರಗಳನ್ನು ಬರೆಸಿರುವುದೂ ಉಂಟು. ಕೂರುವ ಜಾಗದ ಉದ್ದಕ್ಕೂ ಕುದುರೆಗೆ ತಿನ್ನಲು ಕೊಡುವ ಹುಲ್ಲನ್ನು ಹರಡಿದ್ದು ಅದರ ಮೇಲೆ ಜಮಖಾನೆಯನ್ನು ಹಾಸಿರುತ್ತಾರೆ. ನಾಲ್ಕರಿಂದ ಆರುಮಂದಿ ಇದರಲ್ಲಿ ಒಮ್ಮೆಗೇ ಹಾಗೂ ಹೆಚ್ಚು ವೇಗವಾಗಿ ಪ್ರಯಾಣ ಮಾಡಬಹುದು. ಆದರೆ, ಕುಳಿತುಕೊಳ್ಳುವವರು ಮೈ - ಕೈ ಮುದುರಿಕೊಂಡು ಕೂಡಬೇಕಾಗುತ್ತದೆ. ಆದ್ದರಿಂದ ದೀರ್ಘಕಾಲದ ಅಥವಾ ದೂರದ ಪ್ರಯಾಣಕ್ಕೆ ಇದು ಹೇಳಿಸಿದ್ದಲ್ಲ.

ಕುದುರೆಗಾಡಿಯ ಆಸನವ್ಯವಸ್ಥೆಯ ಈ ಅಸುಖವನ್ನು ಹೋಗಲಾಡಿಸಲಾಗಿರುವ ವಾಹನವೇ ಷಾಪಸಂದ್. ಆದರೆ ಇದರಲ್ಲಿ ಆಸನವ್ಯವಸ್ಥೆ ಮಾತ್ರ ನಾಲ್ಕು ಮಂದಿಗೆ ಸೀಮಿತ. ಕುದುರೆಗಾಡಿಯಲ್ಲಿ ಬಹುಮಟ್ಟಿಗೆ ಎದುರುಬದುರಾಗಿ ಕೂಡಬೇಕಷ್ಟೇ. ಆದರೆ ಇಲ್ಲಿ ಬೆನ್ನಿಗೊಬ್ಬರು ಒರಗಿ ಕುಳಿತುಕೊಳ್ಳುವಂತೆ - ಒಂದು ಜೋಡಿ ಮುಮ್ಮುಖವಾಗಿ, ಒಂದು ಜೋಡಿ ಹಿಮ್ಮುಖವಾಗಿ - ವ್ಯವಸ್ಥೆಮಾಡಲಾಗಿದೆ. ಷಾಪಸಂದ್ ನೋಡಲಿಕ್ಕೂ ತುಂಬ ಸುಂದರವಾಗಿದೆ. ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡುವುದಂತೂ ತುಂಬ ಸುಖಕರ. ಇದಕ್ಕೆ ಕಾರಣ ಕಾಲು ಚಾಚಿ ಕುಳಿತುಕೊಳ್ಳಲು ಅನುವಾಗುವಂತೆ ಅಟ್ಟಣೆಯ ಕೆಳಭಾಗದಲ್ಲಿ ಹಾಗೂ ಅದಕ್ಕೆ ಸೇರಿದಂತೆ ಪಾದಪೀಠದ ವ್ಯವಸ್ಥೆ ಇರುವುದು. ಮುಂಭಾಗದಲ್ಲಿ ಒಂದು ತೊಟ್ಟಿಯನ್ನು ಏರ್ಪಡಿಸಲಾಗಿದೆ. ಮುಂಬದಿಯಲ್ಲಿ ಕೂಡುವವರು ಕಾಲನ್ನು ಇಳಿಬಿಟ್ಟುಕೊಂಡು ಕೂಡಬಹುದು. ಸಾಮಾನ್ಯವಾಗಿ, ಕುದುರೆಗೆ ಹಾಕುವ ಹುಲ್ಲನ್ನು ಇದರಲ್ಲಿ ತುಂಬಿರುತ್ತಾರೆ. ಕೂಡಲು ಮತ್ತೆಯನ್ನು ಹಾಕಿರುತ್ತಾರೆ. ಮುಂಬದಿಯ ಎರಡೂ ಪಾಶರ್ವಗಳಲ್ಲಿ ಹತ್ತಿ ಕುಳಿತುಕೊಳ್ಳಲು ನೆರವಾಗುವ, ಒಂದೊಂದು ಕಾಲೊತ್ತು ಇರುತ್ತದೆ. ಕಮಾನಿನ ಚಾವಣಿ ವಿಸ್ತಾರವಾಗಿಯೂ ವಿಶಿಷ್ಟ ವಕ್ರದಂತೆಯೂ ಇದ್ದು, ರೆಕ್ಸೀನಿನಂಥ ಜಲನಿರೋಧಕ ವಸ್ತ್ರದಿಂದ ಆಚ್ಛಾದಿತವಾಗಿರುವುದರಿಂದ ಗಾಡಿ ನೋಡಲೂ ಚೆನ್ನಾಗಿರುತ್ತದೆ. ಚಕ್ರದ ಪಟ್ಟೆಯ ಮೇಲೆ ದೂಳು ರಕ್ಷಕ ಪಟ್ಟಿ ಅಟ್ಟಣಿಗೆ ಸೇರಿದಂತೆ, ಇರುತ್ತದೆ. ಗಾಡಿಯ ವಿವಿಧ ಭಾಗಗಳಿಗೆ ಬೇರೆ ಬೇರೆ ಬಣ್ಣವನ್ನು ಲೇಪಿಸಿ ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಿರುತ್ತಾರೆ. ಒಳಪಾಶರ್ವದಲ್ಲಿ ಕನ್ನಡಿಯೂ ಚಿತ್ತಾರಗಳೂ ಇರುತ್ತವೆ. ಕುಳಿತಿರುವವರು ಆಯ ತಪ್ಪದಂತೆ ಹಿಡಿದುಕೊಂಡು ಕುಳಿತುಕೊಳ್ಳುವ ಸಲುವಾಗಿ ಚರ್ಮದ ಪಟ್ಟಿಯನ್ನು ಹಾಕಿರುತ್ತಾರೆ. ಇದರಲ್ಲಿನ ಪ್ರಯಾಣ ಸಂತಸದಾಯಕವಾಗಿರುತ್ತದೆ.

ಕುದುರೆಗಾಡಿಗೆ ಜಟಕಾ ಎಂಬ ಹೆಸರೂ ಇದೆ. ಸಾರಥಿಯ ಸೂಚನೆ ದೊರೆತೊಡನೆಯೇ ಚಿಮ್ಮಿ ಮುಂದೆ ಹೋಗುವ (ಝಟಕಾ) ವಾಹನವಾದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ಮೊದಲಿಗೆ ಆಡಳಿತಗಾರರ, ಅಧಿಕಾರಿಗಳ ಉಪಯೋಗಕ್ಕಾಗಿ ರಚಿತವಾಗಿದ್ದಿರಬಹುದಾದ ವಾಹನವಾದ್ದರಿಂದ ಜಟಕಾದ ಸುಧಾರಿತ ರೂಪದ ವಾಹನಕ್ಕೆ ಷಾಪಸಂದ್ (ಷಾಹ್ ಆಡಳಿತಗಾರರ, ಪಸಂದ್ ಇಷ್ಟ) ಎಂದು ಹೆಸರು ಬಂದಿರಬೇಕು. ಕುದುರೆಗಾಡಿ ಅಥವಾ ಜಟಕಾಗಳು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಾಣಬರುತ್ತವೆಯಾದರೂ ಷಾಪಸಂದ್ ಕೆಲವೇ ನಗರಗಳ ವೈಶಿಷ್ಟ್ಯಪುರ್ಣ ವಾಹನವೆನ್ನಿಸಿಕೊಂಡಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಮೈಸೂರಿನಲ್ಲೂ ಉತ್ತರ ಭಾರತದಲ್ಲಿ ವಾರಣಸಿ, ಆಗ್ರ ಮುಂತಾದ ಕಡೆಗಳಲ್ಲೂ ಇವನ್ನು ಕಾಣಬಹುದು. ದುಃಖದ ಸಂಗತಿ ಎಂದರೆ ಈ ವೇಗದ ಯುಗದ ವಾಹನಗಳಲ್ಲೊಂದಾದ ಆಟೋರಿಕ್ಷಾದ ಪ್ರಭಾವದಿಂದಾಗಿ ಕುದುರೆಗಾಡಿಗಳು ಮೂಲೆಗುಂಪಾಗುತ್ತಿವೆ.

ಸ್ವಯಂಚಾಲಿತ ವಾಹನಗಳ ಪ್ರಭಾವ ಸಾಂಪ್ರದಾಯಿಕ ಸ್ವರೂಪದ ಗಾಡಿಗಳ ಮೇಲೆ ಬಿದ್ದಿರುವುದಕ್ಕೆ ರಬ್ಬರ್ ಚಕ್ರದ ಗಾಡಿಗಳು ಸಾಕ್ಷಿಯಾಗಿವೆ. ಇವು ಉದ್ದ ಅಗಲ ಆಕಾರಗಳಲ್ಲಿ ಸಾಮಾನ್ಯ ಗಾಡಿಗಳಿಗಿಂತ ದೊಡ್ಡವಾಗಿರುತ್ತವೆ. ಅಚ್ಚು, ದೂರಿ, ಕಡಾಣಿಗಳಿಗೆ ಬದಲಾಗಿ, ಬಲವಾದ ಆಕ್ಸಲ್ ಮೇಲೆ ಜೋಡಿಸಿರುವ ಲೋಹದ ಚೌಕಟ್ಟಿನ ಮೇಲೆ ಗಾಡಿಯ ಅಟ್ಟಣೆ ಕುಳಿತಿರುತ್ತದೆ. ಉರುಳು ಮಣಿಗಳ (ಬಾಲ್ -ಬೇರಿಂಗ್ಸ್) ನೆರವಿನಿಂದ ಚಕ್ರಗಳು ಸುಲಭವಾಗಿ ತಿರುಗುತ್ತವೆ. ಲೋಹದ ಚಕ್ರಮೂಲ (ಹ್ವೀಲ್ - ಬೇಸ್) ಹೊಂದಿದಂತೆ ಟೈರು ಮತ್ತು ಟ್ಯೂಬುಗಳಿರುತ್ತವೆ. ಟ್ಯೂಬಿಗೆ ಗಾಳಿಯನ್ನು ತುಂಬಿಸಲಾಗುತ್ತದೆ. ಈ ಚಕ್ರ ಬಸ್ಸಿನ ಚಕ್ರಕ್ಕಿಂತ ದೊಡ್ಡದಾಗಿರುವ ಸಂಭವವಿಲ್ಲದಿರುವುದರಿಂದ, ಸಾಂಪ್ರದಾಯಿಕ ಗಾಡಿಯ ಚಕ್ರಕ್ಕೂ ಇದಕ್ಕೂ ಹೋಲಿಕೆಯೇ ಇಲ್ಲ. ಅಂತೆಯೇ ಮೂಕಿ ಮತ್ತು ಅಟ್ಟಣೆ ಚೌಕಟ್ಟಿನ ನಡುವಣ ತ್ರಿಭುಜಾಕಾರ ರಚನೆಗಳಿರುವುದಿಲ್ಲ. ಯಂತ್ರಕ್ಕೆ ಬದಲಾಗಿ ಎತ್ತುಗಳೇ ಇವನ್ನು ಎಳೆಯುತ್ತವೆ. ಇದನ್ನು ಸಾಮಾನ್ಯವಾಗಿ ಸರಕು ಸಾಗಣೆ ಉಪಯೋಗಿಸುವುದರಿಂದ ಕಮಾನು ಇರುವುದಿಲ್ಲ. ಒಟ್ಟಿನಲ್ಲಿ, ಚಕ್ರಸಹಿತವಾದ ಗಾಡಿಗಳು ಮುಖ್ಯವಾಗಿ ವ್ಯವಸಾಯದ ಹಾಗೂ ಪ್ರಯಾಣದ ಅಗತ್ಯಗಳನ್ನು ಪುರೈಸಿವೆ. ಇಂದಿನ ಯಂತ್ರಯುಗದಲ್ಲೂ ಇವುಗಳ ಮಹತ್ತ್ವ, ಕನಿಷ್ಠ ಪಕ್ಷ ಭಾರತದಲ್ಲಿ, ಕಡಿಮೆಯಾಗಿಲ್ಲ. ಯಂತ್ರೀಕರಣಕ್ಕೊಳಗಾಗಿರುವ ದೇಶಗಳಲ್ಲಿಯೂ ಇವು ಇನ್ನೂ ಬಳಕೆಯಲ್ಲಿವೆ. ಯುರೋಪಿನಲ್ಲಿ ಟಿಂಕರ್ಸ ಕಾರ್ಟ್ ಮತ್ತು ಐರಿಷ್ ಜಾಂಟಿಂಗ್ ಕಾರ್ ಎಂಬ ಬಂಡಿಗಳು ವೈಯಕ್ತಿಕ ಸಾಗಣೆಯ ಸಾಧನಗಳಾಗಿವೆ. ರೆಡ್ ರಿವರ್ ಕಾರ್ಟ್ ಎಂಬುದು ಸಾಮಾನು ಸರಂಜಾಮುಗಳ ಬಳಕೆಗೆ ಉಪಯೋಗಿಸಲಾಗುತ್ತಿದ್ದ ದೊಡ್ಡ ಗಾಡಿಯ ಹೆಸರು. ಮೆಕ್ಸಿಕೊದಲ್ಲಿ ತುಂಬ ಜನಪ್ರಿಯವಾಗಿರುವ ಎತ್ತಿನ ಗಾಡಿಯ ಹೆಸರು ಕಾರೇಟಾ. ರಿಕ್ಷಗಳು: ಕೈಗಾಡಿಯ ವಿಚಾರವನ್ನು ಪ್ರಸ್ತಾವಿಸುವಾಗ, ಎರಡು ಚಕ್ರಗಳ ಮಾನವ ಚಾಲಿತ ರಿಕ್ಷಗಳ ವಿಚಾರವನ್ನೂ ಉಲ್ಲೇಖಿಸಬಹುದು. ಎರಡು ಚಕ್ರಗಳನ್ನುಳ್ಳ ಅಚ್ಚಿನ ಮೇಲೆ ಎತ್ತರದಲ್ಲಿ ಆಸನ ವ್ಯವಸ್ಥೆಯನ್ನು ಹೊಂದಿರುವ (ಕೆಲವೊಮ್ಮೆ ಪ್ರಯಾಣಿಕನಿಗೆ ನೆರಳನ್ನು ಉಂಟು ಮಾಡುವುದಕ್ಕಾಗಿ ಮುಂಚಾಚಬಹುದಾದ ಹಾಗೂ ಮಡಿಸಬಹುದಾದ ಛತ್ರಿಯನ್ನು ಹೊಂದಿರುವ) ಈ ಗಾಡಿಯನ್ನು ಅಟ್ಟಣಿಗೆಗಳಿಂದ ಮುಂಚಾಚಿರುವ ಪಟ್ಟಿ ಕೋಲುಗಳನ್ನು ಹಿಡಿದುಕೊಂಡು ಮಾನವ ವ್ಯಕ್ತಿ ಎಳೆದುಕೊಂಡು ಓಡುತ್ತಾನೆ. ಪ್ರಯಾಣಿಕ ಆಸನದಲ್ಲಿ ಕುಳಿತಿರುತ್ತಾನೆ. ದುರದೃಷ್ಟಶಾಲಿಯೊಬ್ಬ ಪ್ರಾಣಿಯಂತೆ ಗಾಡಿಯನ್ನೆಳೆಯುವುದು ಆತನ ಸೇವೆಯನ್ನು ಕೊಂಡುಕೊಳ್ಳಲು ಸಮರ್ಥನಾಗಿರುವ ವ್ಯಕ್ತಿ ಕುಳಿತು ದರ್ಬಾರು ಮಾಡುವುದು ಮಾನವತೆಯ ವಿಡಂಬನೆ ಎಂದು ಪರಿಗಣಿಸಿ ಕೆಲವೆಡೆಗಳಲ್ಲಿ ವಾಹನ ಈ ವ್ಯವಸ್ಥೆಯನ್ನು ಬಹಿಷ್ಕರಿಸಲಾಗಿದೆಯಾದರೂ ಅವಶೇಷರೂಪದಲ್ಲಿದು ಅಲ್ಲಲ್ಲಿ ಇನ್ನೂ ಉಳಿದುಕೊಂಡಿದೆ. ರಥಗಳು: ಪ್ರಾಚೀನ ಕಾಲದಲ್ಲಿ ಯುದ್ಧ, ಬೇಟೆ, ಮೆರವಣಿಗೆ ಮತ್ತು ಪಂದ್ಯಗಳ ಸಂದರ್ಭದಲ್ಲಿ ಎರಡು ಚಕ್ರದ ರಥಗಳನ್ನು ಬಳಸುತ್ತಿದ್ದರು. ಅಂದರೆ ಶಾಂತಿ ಮತ್ತು ಯುದ್ಧ ಕಾಲಗಳೆರಡರಲ್ಲಿಯೂ ಇವು ಬಳಕೆಯಲ್ಲಿರುತ್ತಿದ್ದುವು. ಅಥೀನ ಎಂಬ ದೇವತೆ ಯುದ್ಧದ ರಥವನ್ನು ಸೃಷ್ಟಿಸಿದಳೆಂದು ಗ್ರೀಕ್ ಪುರಾಣಗಳಲ್ಲಿ ಹೇಳಲಾಗಿದೆ. ಮೆಸಪೊಟೇಮಿಯ ಮತ್ತು ಸಿರಿಯಗಳಲ್ಲಿ ಪ್ರ.ಶ.ಪು. ಸುಮಾರು 20ನೆಯ ಶತಮಾನದ ಹೊತ್ತಿಗೆ ರಥಗಳು ಬಳಕೆಯಲ್ಲಿದ್ದುವೆಂದು ಅವುಗಳ ಚಿತ್ರಣ ಲಭ್ಯವಾಗಿದೆಯೆಂದೂ ಹೇಳಲಾಗಿದೆ. ರೋಮನ್ನರಲ್ಲಿಯೂ ಕೆಲವು ಬಗೆಯ, ರಥಗಳು ಬಳಕೆಯಲ್ಲಿದ್ದುದಾಗಿ ತಿಳಿಯಬಂದಿದೆ. ಹೀರೊಡಟಸನ ಪ್ರಕಾರ, ಸಿಥಿಯನರು ಮೇಲು ಛಾವಣಿಗಳನ್ನುಳ್ಳ ರಥಗಳನ್ನು ಬಳಸುತ್ತಿದ್ದರು. ಈ ರಥದ ಮೇಲಿನ ಛತ್ರ ಅಥವಾ ಚಾವಣಿಯನ್ನು ತೆಗೆದು ಇರಿಸಬಹುದಾಗಿತ್ತು ಹಾಗೂ ಅದನ್ನು ಡೇರೆಯ ರೂಪದಲ್ಲಿ ಬಳಸಬಹುದಾಗಿತ್ತು. ಈಜಿಪ್ಟಿಗೆ ರಥಗಳನ್ನು ಪರಿಚಯಿಸಿಕೊಟ್ಟವರು ಹಿಕ್ಸೋಸರು ಪ್ರ.ಶ.ಪು. ಸುಮಾರು 15ನೆಯ ಶತಮಾನದ ಹೊತ್ತಿಗೆ ಚೀನ ದೇಶದಲ್ಲಿಯೂ ರಥಗಳು ಬಳಕೆಯಲ್ಲಿದ್ದುವು. ಟ್ರೋಜನ್ ಯುದ್ಧದ ಹಾಗೂ ಪೆಟ್ರೋಕ್ಲಸನ ಅಂತ್ಯಸಂಸ್ಕಾರದ ವರ್ಣನೆಗಳ ಸಂದರ್ಭದಲ್ಲಿ ಹೋಮರ್ ಕ್ರಮಶಃ ರಥಗಳ ಯುದ್ಧ ಹಾಗೂ ರಥ ಸ್ಪರ್ಧೆಗಳ ವಿವರಗಳನ್ನು ಚಿತ್ರಿಸಿದ್ದಾನೆ. ರಾಮಾಯಣ, ಮಹಾಭಾರತಗಳಲ್ಲೂ ಇವನ್ನು ಆಶ್ರಯಿಸಿ ರಚಿತವಾದ ಸಾಹಿತ್ಯದಲ್ಲೂ ರಥಗಳ, ರಥ ಯುದ್ಧಗಳ ವರ್ಣನೆ ಬರುತ್ತದೆ. ಭೂ - ಜಲ - ವಾಯುಮಾರ್ಗಗಳಲ್ಲಿ ಸಂಚರಿಸಬಲ್ಲವಾಗಿದ್ದಂಥ ರಥಗಳ ಉಲ್ಲೇಖವೂ ಬರುತ್ತದೆ. ಗ್ರೀಕರೂ ರೋಮನ್ನರೂ ರಥಗಳನ್ನು ಯುದ್ಧಕ್ಕೆ ಅಷ್ಟಾಗಿ ಬಳಸುತ್ತಿರಲಿಲ್ಲ. ಆದರೆ ಪಂದ್ಯ ಹಾಗೂ ಮೆರವಣಿಗೆಗಳ ಸಂದರ್ಭದಲ್ಲಿ ಇವುಗಳ ಬಳಕೆ ವಿಶೇಷವಾಗಿರುತ್ತಿತ್ತು. ಒಲಿಂಪಿಕ್ ಪಂದ್ಯ ಹಾಗೂ ಇತರ ಸಮಾರಂಭಗಳ ಅಂಗವಾಗಿ ರಥ ಸ್ಪರ್ಧೆ ನಡೆಯುತ್ತಿತ್ತು. ರೋಮಿನಲ್ಲಿ ಅನುಭವಿಗಳಾದ ಸಾರಥಿಗಳನ್ನು ಪಂದ್ಯದ ಸಂದರ್ಭದಲ್ಲಿ ನೇಮಿಸಿಕೊಳ್ಳುತ್ತಿದ್ದರು. ಇದನ್ನು ಆಶ್ರಯಿಸಿ ಜೂಜಾಟವೂ ಬಹಳವಾಗಿ ನಡೆಯುತ್ತಿತ್ತು. ರೋಮನ್ ರಥಕ್ಕೆ ಸಾಮಾನ್ಯವಾಗಿ ಎರಡು ಕುದುರೆಗಳನ್ನು ಕಟ್ಟುತ್ತಿದ್ದರು. ಆದರೆ ಮೂರು, ನಾಲ್ಕು ಕುದುರೆಗಳನ್ನುಳ್ಳ ರಥಗಳೂ ಇರುತ್ತಿದ್ದುವು. ಕಾನ್ಸ್ಟ್ಯಾಂಟಿನೋ ಪಲ್ನಲ್ಲಿ ರಥ ಸ್ಪರ್ಧೆ ಪ್ರಮುಖ ಜನಪ್ರಿಯ ಮನರಂಜನೆಯ ಸಾಧನವಾಗಿತ್ತು. ಹಸಿರು ಮತ್ತು ನೀಲಿಯ ಬಣ್ಣಗಳು ಪಂದ್ಯದ ಬಣ್ಣಗಳಾಗಿದ್ದುವು. ಇವು ನಗರದಲ್ಲಿಯೂ ಪಕ್ಷ- ವಿಪಕ್ಷ ಸೂಚಕವಾಗಿದ್ದು ಎರಡು ಪಂಗಡಗಳ ನಡುವೆ ಘರ್ಷಣೆಗಳಿಗೂ ಎಡೆಮಾಡಿಕೊಡುತ್ತಿದ್ದುವು. ಯುರೋಪ್ ಖಂಡದಲ್ಲಿ ಹಾಗೂ ಬ್ರಿಟಿಷ್ ದ್ವೀಪಗಳಲ್ಲಿ ನಡೆದ ಕೆಲ್ಟಿಕ್ ಯುದ್ಧಗಳು ಆ ಯುದ್ಧಗಳಲ್ಲಿ ಬಳಸಲಾದ ಹರಿತವಾದ ಅಲುಗುಗಳಿಂದ ಯುಕ್ತವಾಗಿದ್ದ ಚಕ್ರಗಳನ್ನೊಳಗೊಂಡ ರಥಗಳ ದೃಷ್ಟಿಯಿಂದಲೂ ಗಮನಾರ್ಹವಾಗಿವೆ.

ನಾಲ್ಕು ಚಕ್ರದ ಗಾಡಿಗಳೆಂದರೆ ತೇರುಗಳು, ಪ್ರಯಾಣ ಅಥವಾ ಸರಕು ಸಾಗಣೆ ವಾಹನಗಳು ಮತ್ತು ಕೋಚುಗಳು. ಭಾರತದಲ್ಲಿ ಪ್ರತಿಯೊಂದು ಮುಖ್ಯ ದೇವಾಲಯದಲ್ಲಿಯೂ ಸಾಮಾನ್ಯವಾಗಿ ಒಂದು ತೇರು ಇರುತ್ತದೆ. ವಿಶಿಷ್ಟ ದಿನಗಳಂದು- ರಥೋತ್ಸವದ ದಿವಸಗಳಂದು - ಭಕ್ತರು ತೇರನ್ನೆಳೆಯುತ್ತಾರೆ. ಇದು ಬೃಹದಾಕಾರವಾದ ವಿಶಿಷ್ಟ ಅಲಂಕೃತ ರಚನೆ. ಇಂಗ್ಲೆಂಡಿನಲ್ಲಿ 16ನೆಯ ಶತಮಾನದವರೆಗೆ ಲಿಟ್ಟರ್ ಎಂಬುದೇ ರಾಜ ಮನೆತನದ ವಾಹನ ವಾಗಿತ್ತು. ಹಂಗರಿಯ ಕೋಚ್್ಸ ಎಂಬಲ್ಲಿ ಮೊಟ್ಟಮೊದಲಿಗೆ ಒಂದು ಬಗೆಯ ವಿಶಿಷ್ಟ ರೀತಿಯ ವಾಹನವನ್ನು ಪ್ರಯೋಗಾರ್ಥವಾಗಿ ಬಳಸಿದ್ದರಿಂದ ಮುಂದೆ ಆ ಬಗೆಯ ವಾಹನಕ್ಕೆ ಕೋಚ್ ಎಂಬ ಹೆಸರು ಬಳಕೆಗೆ ಬಂದಿತು. ಆದರೆ ಅದರ ಉಚ್ಚಾರಣೆಯಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಯಿತು. ಇಂಗ್ಲೆಂಡಿನಲ್ಲಿ ಮೊದಲು ಕೊಚ್ ತಯಾರಾದದ್ದು 1555 ರಲ್ಲಿ. ಅನಂತರ ಎಲಿಜóಬೆತ್ ರಾಣಿಯೂ ಭವ್ಯವಾದ ಕೋಚನ್ನು ಮಾಡಿಸಿಕೊಂಡುದಾಗಿ ಹೇಳಲಾಗಿದೆ. 1640 ರಲ್ಲಿ ಊರಿಂದೂರಿಗೆ ಪ್ರಯಾಣ ಮಾಡುವ ಸ್ಟೇಜ್ ಕೋಚುಗಳು ಬಳಕೆಗೆ ಬಂದುವು. ಹದಿನೇಳನೆಯ ಶತಮಾನದ ಹೊತ್ತಿಗೆ ಇವು ತುಂಬ ಜನಪ್ರಿಯವಾಗಿದ್ದುವು. ಇವುಗಳ ಅಲಂಕರಣದ ಬಗೆಗೂ ಶ್ರದ್ಧೆ ಹೆಚ್ಚಿತು. 1669 ಸ್ಯಾಮ್ಯುಯೆಲ್ ಪೆಪ್ಸ ಎಂಬಾತ ತನ್ನ ಕೋಚಿಗೆ ಗಾಜಿನ ಕಿಟಕಿಗಳನ್ನು ಹಾಕಿರುವುದಾಗಿ ಪ್ರಚಾರ ಮಾಡಿದನಂತೆ. ಗಾಜಿನ ಕಿಟಕಿ, ಪರದೆ, ಅಲಂಕರಣ ಇವುಗಳು ಹೆಚ್ಚಿದಂತೆ ಕೋಚುಗಳ ತೂಕ ಹೆಚ್ಚಿ ವೇಗ ಕಡಿಮೆಯಾಯಿತು. ಆಗ ಮತ್ತೊಮ್ಮೆ ಅವುಗಳ ಸರಳೀಕರಣದ ಗಮನ ಹರಿಯಿತು. 1784 ರಲ್ಲಿ ಊರಿಂದೂರಿಗೆ ಅಂಚೆಯನ್ನು ಒಯ್ಯಲೂ ಕೋಚುಗಳನ್ನು ಬಳಸಲಾಯಿತು. ಕೋಚುಗಳಿಗೆ ಒಂದೆಡೆ ಸ್ಪ್ರಿಂಗು ಮತ್ತು ಸ್ಪ್ರಿಂಗ್ಪ್ಲೇಟುಗಳನ್ನು ಅಳವಡಿಸಿ ರಸ್ತೆಯ ಆಘಾತ ಮತ್ತು ಕಂಪನಗಳನ್ನು ಕಡಿಮೆ ಮಾಡುವುದು, ಅವುಗಳ ರಚನೆಯನ್ನು ಸುಧಾರಿಸುವುದು ನಡೆದಂತೆ ಇನ್ನೊಂದೆಡೆ ರಸ್ತೆಗಳನ್ನು ಸುಧಾರಿಸುವ ಕೆಲಸವೂ ನಡೆದು, ಯುರೋಪಿನಲ್ಲಿ ಸುಂದರ ಸಾರ್ವಜನಿಕ ರಸ್ತೆಗಳು ಕಂಗೊಳಿಸತೊಡಗಿದುವು. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕೋನ್ಸಟೋಗಾ ವ್ಯಾಗನ್ 19 ನೆಯ ಶತಮಾನದಲ್ಲಿ ಕೊನೆಯಲ್ಲಿ ಬಳಕೆಗೆ ಬಂತು. ಪೆನ್ಸಿಲ್ವೇನಿಯದ ಕೋನ್ಸಟೋಗಾ ಎಂಬಲ್ಲಿ ಅದನ್ನು ನಿರ್ಮಿಸಿದ್ದುದೇ ಈ ಹೆಸರು ಬಳಕೆಗೆ ಬರಲು ಕಾರಣ. ಮುಂದೆ ಸ್ವಯಂಚಾಲಿತ ವಾಹನಗಳಿಗೂ ಇದೇ ಹೆಸರು ಬಳಕೆಗೆ ಬಂತು. ಚಕ್ರಗಳ ಸಂಖ್ಯೆ, ಪ್ರವೇಶ ವಿಧಾನ, ಸ್ಥಳಾವಕಾಶ, ಮೇಲ್ಛಾವಣಿ, ಸಾರಥಿಯ ಸ್ಥಳ, ಕುದುರೆ ಹೂಡುವ ವ್ಯವಸ್ಥೆ - ಇವುಗಳಿಗನುಗುಣವಾಗಿ ಕೋಚುಗಳು ವ್ಯಾಗನ್ನು ಗಳು ಭಿನ್ನವಾಗಿರುತ್ತಿದ್ದುವು. ಎರಡು ಚಕ್ರದ ವಾಹನಗಳನ್ನು ಎಳೆಯಲು ಒಂದು ಅಥವಾ ಎರಡು ಕುದುರೆಗಳನ್ನು ಉಪಯೋಗಿಸುತ್ತಿದ್ದರು. ಒಬ್ಬರು ಅಥವಾ ಇಬ್ಬರಿಗೆ ಸ್ಥಳಾವಕಾಶವಿರುತ್ತಿದ್ದ ಈ ವಾಹನಗಳು ಹಗುರಾಗಿರುತ್ತಿದ್ದುವು. ಪೋಲೋಕಾರ್ಟ್ ಕ್ಯಾಬ್ರಿಯೊಲೆ, ಡಾಗ್ಕಾರ್ಟ್ ಮತ್ತು ಸಲ್ಕಿ ಈ ಬಗೆಯವು. ಬಕ್ಬೋರ್ಡ್, ಬಗ್ಗಿ, ಸರ್ರಿ, ಬ್ಯಾರೂಷ್, ಬ್ರೂಮ್ ಇವು ನಾಲ್ಕು ಚಕ್ರದ ವಾಹನಗಳಾಗಿದ್ದುವು. ಸಾಮಾನ್ಯವಾಗಿ ಇವುಗಳ ಮುಂದಿನ ಚಕ್ರಗಳು ಆಕಾರದಲ್ಲಿ ಕಿರಿಯವಾಗಿರುತ್ತಿದ್ದುವು. ಕಡಿದಾದ ತಿರುವು ತೆಗೆದುಕೊಳ್ಳಲು ಅನುವು ಮಾಡಿ ಕೊಡುವುದೇ ಇದರ ಉದ್ದೇಶವಾಗಿತ್ತು. 19ನೆಯ ಶತಮಾನದ ಮಧ್ಯ ಭಾಗದ ಹೊತ್ತಿಗೆ ಸ್ವಯಂಚಾಲಿತ ವಾಹನಗಳ ಯುಗ ಆರಂಭವಾಗಿ, ದಿನಗಳೆದಂತೆ ಅವುಗಳ ಉತ್ಕರ್ಷ ಸಾಧಿತವಾಗುತ್ತ ಬಂದುದರಿಂದ ಈ ಎಲ್ಲ ವಾಹನಗಳೂ ಮೂಲೆಗುಂಪಾಗಿ, ಸೀಮಿತೋದ್ಧೇಶಗಳಿಗೆ ಮಾತ್ರ ಬಳಕೆಯಾಗುತ್ತಿವೆ. ಕೆಲವಂತೂ ಅವಶೇಷ ಮಾತ್ರವಾಗಿ ಉಳಿದಿವೆ.


Clavette de roue de chariot