ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಲ್ಲೋಮೆ ಡುಪ್ಯೀಟ್ರಾನ್

ವಿಕಿಸೋರ್ಸ್ದಿಂದ
ಗಿಲ್ಲೋಮೆ ಡುಪ್ಯೀಟ್ರಾನ್

1777-1835. ಫ್ರಾನ್ಸಿನ ಶಸ್ತ್ರವೈದ್ಯ ಮತ್ತು ಅಂಗರಚನಾಶಾಸ್ತ್ರಜ್ಞ. ಶಸ್ತ್ರಕ್ರಿಯಾವಿಧಾನಗಳನ್ನು ಸುಧಾರಿಸಿದ್ದು ಮಾತ್ರವಲ್ಲ ಹೊಸ ಉಪಕರಣಗಳನ್ನು ಕಂಡುಹಿಡಿದ. ಡುಪ್ಯೀಟ್ರಾನ್ ತೀರ ಬಡ ಕುಟುಂಬದಲ್ಲಿ 1777ರ ಅಕ್ಟೋಬರ್ 5ರಂದು ಜನಿಸಿದ. ಸ್ವಂತ ಪರಿಶ್ರಮ ಸಾಮರ್ಥ್ಯಯಗಳಿಂದ ಮುಂದೆ ಬಂದು ವೈದ್ಯಶಾಸ್ತ್ರವನ್ನು ಅಭ್ಯಾಸಿಸಿ 1802ರಲ್ಲಿ ಡಿ ಯು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕನಾದ. ಶಸ್ತ್ರಚಿಕಿತ್ಸೆಯಲ್ಲಿ ಆಗಾಧ ಚಾತುರ್ಯವನ್ನು ಪ್ರದರ್ಶಿಸಿ ಚಿಕಿತ್ಸೆಯಲ್ಲಿ ಅನೇಕ ಹೊಸತಂತ್ರಗಳನ್ನೂ ಉಪಕರಣಗಳನ್ನೂ ಶೋಧಿಸಿದ. ಮೂವತ್ತೆಂಟನೆಯ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸ ಶಾಸ್ತ್ರದ ಪ್ರಾಧ್ಯಾಪಕನಾದ. ಈತ ನೀಡುತ್ತಿದ್ದ ಪಾಂಡಿತ್ಯಪೂರ್ಣ ಉಪನ್ಯಾಸಗಳು ಮತ್ತು ರೋಗನಿದಾನ ಹಾಗೂ ಚಿಕಿತ್ಸೆಯಲ್ಲಿ ತೋರುತ್ತಿದ್ದ ಕಾರ್ಯಕೌಶಲ ಅನೇಕ ರಾಷ್ಟ್ರಗಳಿಂದ ವಿದ್ಯಾರ್ಥಿಗಳನ್ನು ಇವನೆಡೆಗೆ ಆಕರ್ಷಿಸಿದವು. ಈತನ ಶಸ್ತ್ರಕೌಶಲಕ್ಕೆ ಸರ್ಕಾರ ಮಾನ್ಯತೆಯನ್ನು ನೀಡಿತು. 18ನೆಯ ಲ್ಯೂಯಿ ಮತ್ತು ಹತ್ತನೆಯ ಚಾರಲ್ಸ್ ದೊರೆಗಳಿಗೆ ಡುಪ್ಯೀಟ್ರಾನನು ಶಸ್ತ್ರಚಿಕಿತ್ಸಕನಾಗಿ ನೇಮಕಗೊಂಡಿದ್ದ. ರಕ್ತನಾಳ ರೋಗಗಳು, ಕಾಳಗದಲ್ಲಿ ಉಂಟಾದ ಹುಣ್ಣುಗಳು, ಮುಂದೆ ಕಣಕಾಲ, ಹೊರ ಎಲುಬು ಶಸ್ತ್ರಚಿಕಿತ್ಸೆ - ಇವುಗಳಲ್ಲಿ ಹೊಸ ವಿಧಾನಗಳನ್ನು ಬಳಕೆಗೆ ತಂದ. ಅಂಗೈ ತಂತುಕಟ್ಟಿನ ಬಿಗಿತದಿಂದ ಕೈಬೆರಳುಗಳು ಹಿಂದಕ್ಕೆಳೆಯಲ್ಪಟ್ಟು ಉಂಟಾದ ವಿಕಲತೆಯನ್ನು ಅಭ್ಯಾಸಿಸಿ, ಆ ತಂತುಕಟ್ಟಿನ ಅಡ್ಡಕೊಯ್ತ ಬೆರಳುಗಳ ಸರಾಗ ಚಲನೆಗೆ ಸಹಾಯಕವಾಗು ವುದೆಂದು ತೋರಿಸಿದ; ಅಂಗೈಯಲ್ಲಿ ಉಂಟಾಗುವ ಆ ತೆರನಾದ ಎಳೆದುಕೊಳ್ಳುವಿಕೆಗೆ ಡುಪ್ಯೀಟ್ರಾನನ ಎಳೆದುಕೊಳ್ಳುವಿಕೆ ಎಂದೇ ಹೆಸರಿಡಲಾಗಿದೆ. ಡುಪ್ಯೀಟ್ರಾನನು ಬಲು ಧೈರ್ಯವಂತನಾದ ಶಸ್ತ್ರಕಾರ್ಯತಜ್ಞ. ಎಂಥ ಆತಂಕ ಸನ್ನಿವೇಶಗಳಲ್ಲೂ ಮನಸ್ಸಿನ ಸ್ಥೈರ್ಯವನ್ನು ಕೆಡಿಸಿ ಕೊಳ್ಳುತ್ತಿರಲಿಲ್ಲ. ಶಸ್ತ್ರಕ್ರಿಯೆಯಿಂದ ಕೆಳದವಡೆಯನ್ನು ಪುರ್ತಿಯಾಗಿ ತೆಗೆದು ಹಾಕಿದ ಮೊದಲಿಗ (1812). ಏಡಿಗಂತಿ ಚಿಕಿತ್ಸೆಗೆ ಗರ್ಭಕೋಶದ ಕಂಠವನ್ನು ಶಸ್ತ್ರಕ್ರಿಯೆಯಿಂದ ಪ್ರಥಮವಾಗಿ ತೆಗೆದು ಹಾಕಿದ್ದೂ ಇವನೇ. ತೊಡೆ ಕೀಲಿನ ಆಜನ್ಮ ಸರಿತವನ್ನು (ಕನ್ಜೆನಿಟಲ್ ಡಿಸ್ಲೊಕೇಷನ್ ಆಫ್ ದಿ ಹಿಪ್) ವಿವರವಾಗಿ, ವೈಜ್ಞಾನಿಕವಾಗಿ ಮೊದಲು ವಿವರಿಸಿದ್ದೂ ಇವನೇ (1826). 1835ರ ಫೆಬ್ರವರಿ 8ರಂದು ಪ್ಯಾರಿಸಿನಲ್ಲಿ ನಿಧನನಾದ.