ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಲಾಮೀ ಸಂತತಿ

ವಿಕಿಸೋರ್ಸ್ದಿಂದ

ಗುಲಾಮೀ ಸಂತತಿ

ಮಹಮ್ಮದ್ ಘೋರಿಯ ಗುಲಾಮನೂ ನೆಚ್ಚಿನ ಸೇನಾನಿಯೂ ಆಗಿದ್ದ ಕುತುಬ್-ಉದ್-ದೀನ್ ಐಬಕನಿಂದ ಭಾರತದಲ್ಲಿ ಸ್ಥಾಪಿತವಾದ ಮುಸ್ಲಿಂ ರಾಜವಂಶ. ಇವನು ಘೋರಿಯ ಭಾರತ ದಂಡಯಾತ್ರೆಯಲ್ಲಿ ಪಾಲ್ಗೊಂಡಿದ್ದನಲ್ಲದೆ, ಅವನಿಗೆ ಸೇರಿದ ಪ್ರದೇಶಗಳ ಮೇಲ್ವಿಚಾರಕನೂ ಆಗಿದ್ದ. ಮಹಮ್ಮದ್ ಘೋರಿ 1206ರಲ್ಲಿ ಸತ್ತಾಗ ಕುತುಬ್-ಉದ್-ದೀನ್ ಸ್ವತಂತ್ರನಾಗಿ ದೆಹಲಿ ಸುಲ್ತಾನನೆಂದು ಘೋಷಿಸಿಕೊಂಡ. ಇವನು ಮೊದಲು ಗುಲಾಮನಾಗಿದ್ದುದರಿಂದ ಇವನಿಂದ ಮೊದಲಾದ ರಾಜ ಪರಂಪರೆಗೆ ಗುಲಾಮೀ ಸಂತತಿಯೆಂದು ಕರೆಯುವ ರೂಢಿಯಿದೆ. ಆದರೆ ಈ ವಂಶವನ್ನು ಗುಲಾಮೀ ಸಂತತಿ ಎಂದು ಕರೆಯುವುದರ ಔಚಿತ್ಯ ಪ್ರಶ್ನಾರ್ಹವಾದದ್ದು. ಈ ಸಂತತಿಯಲ್ಲಿ ಆಳಿದ ಸುಲ್ತಾನರಲ್ಲಿ ಮೂವರು ಮಾತ್ರ -ಕುತುಬ್-ಉದ್-ದೀನ್-ಐಬಕ್, ಇಲ್ತಮಿಷ್, ಬಲ್ಬನ್-ಮೊದಲು ಗುಲಾಮರಾಗಿದ್ದರು. ಇವರಲ್ಲಿ ಕುತುಬ್-ಉದ್-ದೀನ್ ಸುಲ್ತಾನ ಪದವಿ ಪಡೆಯುವ ವೇಳೆಗೆ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ. ಇಲ್ತಮಿಷ್ ಹಾಗೂ ಬಲ್ಬನ್ ತಮ್ಮ ಬಾಳಿನಲ್ಲಿ ಮೊದಲೇ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ್ದರು. ವಾಸ್ತವವಾಗಿ ಗುಲಾಮರು ಯಾರೂ ಆಗ ಆಳಿದ್ದಿಲ್ಲ. ಮಧುಯುಗದ ಚರಿತ್ರಕಾರರು ಇವರನ್ನು ಮಮ್ಲೂಕರೆಂದು ಕರೆದಿದ್ದಾರೆ. ಅದೇ ಅವರಿಗೆ ಸರಿಯಾದ ಹೆಸರೆಂದು ವಾದಿಸಲಾಗಿದೆ.

ಕುತುಬ್-ಉದ್-ದೀನ್ ಐಬಕ್ (ಆಳ್ವಿಕೆ 1206 - 1210) ಸುಲ್ತಾನನಾದ ಮೇಲೆ ರಾಜ್ಯದ ಸ್ವರೂಪದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಪ್ರಭುತ್ವಸೂಚಕವಾದ ಯಾವ ಬಿರುದನ್ನೂ ಈತ ಧರಿಸಲಿಲ್ಲ. ತನ್ನ ಹೆಸರಿನಲ್ಲಿ ನಾಣ್ಯವನ್ನು ಹೊರಡಿಸಲಿಲ್ಲ. ಆದರೆ ತಾನು ಸ್ವತಂತ್ರ ಸುಲ್ತಾನನೆಂದು ಪ್ರಕಟಿಸಿದ್ದು, ಇವನ ರಾಜ್ಯ ಘಜ್ನಿಯಿಂದ ತನ್ನ ಸಂಬಂಧ ತೊಡೆದುಹಾಕಿತೆಂಬುದನ್ನು ಸೂಚಿಸುತ್ತದೆ. ಈ ಕ್ರಮದಿಂದ ವಿರೋಧ ಉಂಟಾಗಬಹುದೆಂದು ಶಂಕಿಸಿ, ಆ ಕಡೆಯಿಂದ ಬರಬಹುದಾದ ದಾಳಿಯನ್ನು ಎದುರಿಸಲು ತನ್ನ ಸೇನೆಯೊಡನೆ ಬಹುಕಾಲ ಈತ ಲಾಹೋರಿನಲ್ಲಿಯೇ ಉಳಿದಿದ್ದ. ಭಾರತದಲ್ಲಿ ಹಿಂದೂ ರಾಜರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದ.

ಕುತುಬ್-ಉದ್-ದೀನನ ಮರಣಾನಂತರ ಇವನ ಮಗ ಆರಾಂ ಲಾಹೋರಿನಲ್ಲಿ ಸಿಂಹಾಸನವನ್ನೇರಿದ. ಕುತುಬ್-ಉದ್-ದೀನನ ಅಳಿಯನೂ ದಕ್ಷ ಆಡಳಿತಗಾರನೂ ಬರಾನಿನ ರಾಜ್ಯಪಾಲನೂ ಆಗಿದ್ದ ಇಲ್ತಮಿಷನ ಪಕ್ಷವನ್ನು ದೆಹಲಿಯಲ್ಲಿದ್ದ ಒಂದು ಶಕ್ತಿಯುತ ಪಕ್ಷ ಎತ್ತಿ ಹಿಡಿಯಿತು. ಆ ಜಗಳ ಸುಮಾರು ಎಂಟು ತಿಂಗಳುಗಳ ಕಾಲ ಮುಂದುವರಿಯಿತು. ಆರಾಂ ತನ್ನ ಸೇನೆಯೊಡನೆ ದೆಹಲಿಗೆ ಬರುತ್ತಿದ್ದಾಗ ಮಾರ್ಗದಲ್ಲಿ ಸತ್ತಾಗ ಇಲ್ತಮಿಷ್ ಸುಲ್ತಾನನಾದ (1211 - 1236)

ಇಲ್ತಮಿಷ್ ದೆಹಲಿಯ ಸುಲ್ತಾನರ ಆಡಳಿತದ ನಿಜವಾದ ಸ್ಥಾಪಕ. ಇವನು ದಕ್ಷ ಸೇನಾನಿಯಾಗಿದ್ದ. 1221ರಲ್ಲಿ ಮಂಗೋಲರ ದಾಳಿಯನ್ನು ಅಡಗಿಸಿ, 1225ರಲ್ಲಿ ಬಂಗಾಳವನ್ನು ವಶಪಡಿಸಿಕೊಂಡ. ಕುತುಬ್-ಉದ್-ದೀನನ ಕೈಬಿಟ್ಟಿದ್ದ ರಾಂತಂ ಭೋರ್ 1226ರಲ್ಲಿ ಇವನ ಕೈವಶವಾಯಿತು. ಬಾಗ್ದಾದಿನ ಕಲೀಫ ಇವನನ್ನು ಭಾರತದ ಸುಲ್ತಾನನೆಂದು ಮಾನ್ಯ ಮಾಡಿದ. ಇದರಿಂದ ಸಂತೋಷಗೊಂಡ ಇಲ್ತಮಿಷ್ ಕಲೀಫನ ಹೆಸರನ್ನು ತನ್ನ ನಾಣ್ಯಗಳಲ್ಲಿ ಸೇರಿಸಿದ. 1232ರಲ್ಲಿ ಗ್ವಾಲಿಯರನ್ನು ವಶಪಡಿಸಿಕೊಂಡ. ಇಲ್ತಮಿಷ್ 1236ರಲ್ಲಿ ಮರಣ ಹೊಂದಿದ.

ಕುತುಬ್-ಉದ್-ದೀನನ ಆಳ್ವಿಕೆಯಲ್ಲಿ ಪ್ರಾರಂಭವಾದ ಕುತುಬ್ ಮಿನಾರ್ (ನೋಡಿ- ಕುತುಬ್-ಮಿನಾರ್) ಇವನ ಕಾಲದಲ್ಲಿ ಪೂರ್ಣವಾಯಿತು.

ತನ್ನ ಹಿರಿಯ ಮಗ ಅನಿರೀಕ್ಷಿತವಾಗಿ ಮರಣ ಹೊಂದಿದಾಗ ಹಿರಿಯ ಮಗಳಾದ ರಜಿóಯಾಳನ್ನು ಉತ್ತರಾಧಿಕಾರಿಣಿಯಾಗಿ ಇಲ್ತಮಿಷ್ ನೇಮಿಸಿದ್ದ. ಆದರೆ ಸಾಯುವ ಮುನ್ನ ಇವನು ಮನಸ್ಸು ಬದಲಿಸಿದನೆಂದು ಬದುಕಿದ್ದ ಪುತ್ರರ ಪೈಕಿ ಹಿರಿಯನಾಗಿದ್ದ ಫಿರೂಜ್ ತನ್ನ ಅನಂತರ ಸಿಂಹಾಸನವನ್ನೇರಬೇಕೆಂಬುದು ಇವನ ಅಭಿಲಾಷೆಯಾಗಿತ್ತೆಂದೂ ಹೇಳಲಾಗಿದೆ. ಅಂತೂ ಫಿರೂಜ್ ಪಟ್ಟಕ್ಕೆ ಬಂದ. ಆದರೆ ಭೋಗಾಸಕ್ತನಗಿದ್ದ ಅವನು ಕೊಲೆಯಾದ. ಅತೃಪ್ತ ಜನತೆಯ ಬೆಂಬಲದಿಂದ ರಜಿಯಾ ಅಧಿಕಾರಕ್ಕೆ ಬಂದಳು.

ರಜಿóಯಾ ಬುದ್ಧಿವಂತೆ. ಇಲ್ತಮಿಷನ ಮರಣಾನಂತರ ರಾಜ್ಯದಲ್ಲಿ ತಲೆದೋರಿದ್ದ ಗಲಭೆಗಳನ್ನು ಅವಳು ಅಡಗಿಸಿ ದೇಶದಲ್ಲಿ ಶಾಂತಿ ಸ್ಥಾಪಿಸಿದಳು. ಅವಳು ಗಂಡಸಿನಂತೆ ಉಡಿಗೆ ತೊಡಿಗೆ ಧರಿಸಿ, ದಕ್ಷತೆಯಿಂದ ಆಡಳಿತ ನಡೆಸುತ್ತಿದ್ದಳು. ಆದರೆ ಆಕೆ ಸ್ತ್ರೀಯಾಗಿದ್ದದ್ದರಿಂದಲೂ ಅಧಿಕಾರದ ಹುದ್ದೆಗಳಿಗೆ ಅವಳು ಮಾಡಿದ ನೇಮಕಗಳಿಂದ ಕೆಲವರಲ್ಲಿ ಅತೃಪ್ತಿ ಉಂಟಾದ್ದರಿಂದಲೂ ಅವಳು ಕೊಲೆಗೆ ಈಡಾದಳು. ಅವಳ ಮೂರು ವರ್ಷಗಳ ಆಳ್ವಿಕೆ ಕೊನೆಗೊಂಡಿತು. ಮುಂದೆ ಸುಲ್ತಾನನಾಗುವ ಸರದಿ ಇಲ್ತಮಿಷನ ಕಿರಿಯ ಮಗ ನಾಸಿರುದ್ದೀನ್ ಮಹಮದನಿಗೆ ಬಂತು (1246).

ನಾಸಿರುದ್ದೀನ್ (ಆ. 1246 - 66) ಸೌಜನ್ಯ ಮತ್ತು ಶ್ರದ್ಧಾಭಕ್ತಿಗಳ ಪ್ರತಿರೂಪವಾಗಿದ್ದ. ಅವನು ಸಾಹಿತ್ಯಪೋಷಕನೂ ಹೌದು. ಆದರೆ ರಾಜ್ಯಭಾರದಲ್ಲಿ ಆಸಕ್ತಿಯಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಹವಣಿಸುತ್ತಿದ್ದ ಹಿಂದೂ ರಾಜರು ದಂಗೆ ಎದ್ದು ಆಡಳಿತ ಶಿಥಿಲವಾಯಿತು. ಮಂಗೋಲರ ದಾಳಿಗೆ ಎಡೆ ದೊರಕಿತು. ನಾಸಿರುದ್ದೀನ್ ಅಶಕ್ತನಾದರೂ ಅದøಷ್ಟವಂತ. ಅವನ ಮಾವ ಘಿಯಾಸುದ್ದೀನ್ ಬಲ್ಬನ್ ರಾಜ್ಯದ ಸುಭದ್ರತೆಗೆ ಶ್ರಮಿಸಿ ಅದು ಛಿದ್ರವಾಗುವುದನ್ನು ತಪ್ಪಿಸಿದ. ನಾಸಿರುದ್ದೀನನ ಮರಣಾನಂತರ ಅವನೇ ಸುಲ್ತಾನನಾದ.

ಘಿಯಾಸುದ್ದೀನ್ ಬಲ್ಬನ್ (ಆ. 1266 - 1286) ಈ ವಂಶದ ಸುಲ್ತಾನರಲ್ಲಿ ಪ್ರಸಿದ್ಧ. ಅವನು ಸುಲ್ತಾನನದ ಮೇಲೆ ದುರ್ದಮ್ಯವೂ ಕಠಿಣವೂ ಆದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ರಾಜ್ಯದ ಆಡಳಿತ ವ್ಯವಸ್ಥೆ, ಮಂಗೋಲರ ದಾಳಿಯನ್ನು ಅಡಗಿಸುವ ಏರ್ಪಾಡು - ಇವುಗಳಿಗೆ ಅವನು ತ್ವರಿತವಾಗಿ ಗಮನ ಹರಿಸಬೇಕಾಯಿತು. ಉಗ್ರವಾದ ಶಿಕ್ಷೆ ಹಾಗೂ ಕಾನೂನಿನ ಸಹಾಯದಿಂದ ಸುವ್ಯವಸ್ಥೆ ಸ್ಥಾಪಿಸಿದ.

ನಾಸಿರುದ್ದೀನನ ಆಳ್ವಿಕೆಯಲ್ಲಿ ತಾನೇ ಆಡಳಿತವನ್ನು ನಿರ್ವಹಿಸುತ್ತಿದ್ದುದರಿಂದ ಆತ ಅಪಾರ ಅನುಭವಗಳನ್ನು ಪಡೆದಿದ್ದ. ಸುಭದ್ರ ಸರ್ಕಾರಕ್ಕೆ ವ್ಯವಸ್ಥಿತ ಸೇನೆ ಆವಶ್ಯಕವೆಂದು ಮನಗಂಡು ಸುಸಜ್ಜಿತ ಅಶ್ವಸೇನೆ ಮತ್ತು ಕಾಲಾಳೂ ಪಡೆಗಳನ್ನು ನಿರ್ಮಿಸಿ, ನುರಿತ ಹಾಗೂ ನಿಷ್ಠರಾದ ಸೇನಾಧಿಕಾರಿಗಳಿಗೆ ಒಪ್ಪಿಸಿದ. ರಾಜ್ಯದ ಸಮಸ್ತ ಅಧಿಕಾರವೂ ಅವನಲ್ಲಿತ್ತು. ಮುಖ್ಯ ಪ್ರಾಂತ್ಯಾಧಿಕಾರಿಗಳಾಗಿದ್ದ ಅವನ ಮಕ್ಕಳಿಗೂ ಹೆಚ್ಚಿನ ಅಧಿಕಾರವಿರಲಿಲ್ಲ. ನ್ಯಾಯಾಡಳಿತದಲ್ಲಿ ಅವನ ಬಂಧುಗಳಿಗೆ ಕೂಡ ಪಕ್ಷಪಾತ ತೋರುತ್ತಿರಲಿಲ್ಲ. ನ್ಯಾಯಾಡಳಿತವನ್ನು ಸಮರ್ಪಕಗೊಳಿಸಲು ಗೂಢಚಾರರನ್ನು ನೇಮಿಸಿದ್ದ. ಅವರು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ವಿಶಿಷ್ಟ ವಿಚಾರಗಳನ್ನು ಅವನ ಗಮನಕ್ಕೆ ತರುತ್ತಿದ್ದರು. ಗೂಢಚಾರರು ಅಪರಾಧಗಳನ್ನು ತಡೆಗಟ್ಟುತ್ತಿದ್ದರಲ್ಲದೆ, ನಿರಪರಾಧಿಗಳನ್ನು ಅಧಿಕಾರಿಗಳ ಸ್ವೇಚ್ಛಾಪ್ರವೃತ್ತಿಯಿಂದ ಪಾರು ಮಾಡುತ್ತಿದ್ದರು.

ತನ್ನ ಕಡೆಯ ದಿವಸಗಳಲ್ಲಿ ಸುಲ್ತಾನ ದೊಡ್ಡ ವಿಪತ್ತನ್ನು ಎದುರಿಸಬೇಕಾಯಿತು. ತೈಮೂರನ ಮುಖಡಂತ್ವದಲ್ಲಿ ಮಂಗೋಲರು 1285ರಲ್ಲಿ ಪಂಜಾಬನ್ನು ಮುತ್ತಿದರು. ವೃದ್ಧನಾದ ಸುಲ್ತಾನ ತನ್ನ ಹಿರಿಯ ಮಗನನ್ನು ಸೇನೆಯೊಡನೆ ಕಳುಹಿಸಿದ. ಅವನು ಲಾಹೋರಿಗೆ ಸೇನೆಯೊಡನೆ ಹೋಗುತ್ತಿದ್ದಾಗ, ಹೊಂಚು ಹಾಕುತ್ತಿದ್ದ ಮಂಗೋಲರು ಅವನನ್ನು ಕೊಂದರು (1286). ಎಂಬತ್ತು ವರ್ಷದ ಬಲ್ಬನ್ ಈ ಅನೀರಿಕ್ಷಿತ ವಿಪತ್ತನ್ನು ಎದುರಿಸಲಾರದವನಾದ.

ದೆಹಲಿ ಸುಲ್ತಾನರ ಸಂತತಿಯಲ್ಲಿ ಬಲ್ಬನ್ ಚಿರಸ್ಥಾಯಿಯಾದ ಸ್ಥಾನ ಗಳಿಸಿದ್ದಾನೆ. ಶೈಶವಾವಸ್ಥೆಯಲ್ಲಿದ್ದ ಮುಸಲ್ಮಾನ್ ರಾಜ್ಯವನ್ನು ಮಂಗೋಲರ ದಾಳಿಯಿಂದ ರಕ್ಷಿಸಿ, ಸುಸಜ್ಜಿತವಾದ ಸೈನ್ಯವನ್ನು ನಿರ್ಮಿಸಿ, ದೇಶದಲ್ಲಿ ಸಾಮಾಜಿಕ ಶಾಂತಿ ನೆಲೆಸುವಂತೆ ಮಡಿ ಮುಂದೆ ಅಲ್ಲಾವುದ್ದೀನ್ ಖಿಲ್ಜಿರೂಪಿಸಿದ ಆಡಳಿತ ಸುಧಾರಣೆಗಳಿಗೆ ಅವನು ಮಾರ್ಗದರ್ಶಕನಾದ. ಭಾರತದಲ್ಲಿ ಮುಸಲ್ಮಾನರ ಪ್ರಭುತ್ವಕ್ಕೆ ಪ್ರತಿಷ್ಠೆ ತಂದುಕೊಟ್ಟವರಲ್ಲಿ ಬಲ್ಬನ್ ಮೊದಲಿಗ.

ಬಲ್ಬನನ ಎರಡನೆಯ ಮಗ ಬುಘ್ರಾಖಾನನ ಮಗ ಕೈಕುಬಾದನನ್ನು ಆಸ್ಥಾನಿಕರು ಸುಲ್ತಾನನ್ನಾಗಿ ಮಾಡಿದರು. ವಿಷಯಾಸಕ್ತನಾಗಿದ್ದ ಈತ ಅಧಿಕಾರ ಕಳೆದುಕೊಂಡ. ಇವನ ಮೂರು ವರ್ಷದ ಮಗನನ್ನು ಸುಲ್ತಾನನ್ನಾಗಿ ಘೋಷಿಸಿದರು. ಈ ವ್ಯವಸ್ಥೆ ಬಹುಕಾಲ ಉಳಿಯಲಿಲ್ಲ. ಆಸ್ಥಾನಿಕರಲ್ಲಿ ಒಳಜಗಳ ಪ್ರಾರಂಭವಾಯಿತು. ಸುಲ್ತಾನನ ಹೆಸರಿನಲ್ಲಿ ಅವರು ತಮ್ಮ ಹಗೆಗಳನ್ನು ನಿರ್ಮೂಲ ಮಾಡಲು ಪ್ರಯತ್ನಿಸಿದರು. ಇದು ಅಶಾಂತಿಗೆ ಎಡೆ ಕೊಟ್ಟಿತು. ಬಾಲ ಸುಲ್ತಾನನನ್ನು ಖಿಲ್ಜಿ ವಂಶದ ಸ್ಥಾಪಕನಾದ ಮಾಲಿಕ್ ಫಿರೂಜ್ ಅಪಹರಿಸಿ, ಅವನ ಹೆಸರಿನಲ್ಲಿ ಮೂರು ತಿಂಗಳು ರಾಜ್ಯಭಾರ ಮಡಿದ. ಈ ಹುಡುಗನ ಅಂತ್ಯ ಹೇಗಾಯಿತೆಂಬುದು ತಿಳಿಯದು. ಫಿರೂಜ್ 1290ರಲ್ಲಿ ಸುಲ್ತಾನ್ ಜಲಾಲುದ್ದೀನ್ ಖಿಲ್ಜಿಯೆಂದು ಘೋಷಿಸಿಕೊಂಡು ಖಿಲ್ಜಿ ವಂಶದ ಆಳ್ವಿಕೆಯನ್ನು ಪ್ರಾರಂಭಿಸಿದ. ಇದರೊಂದಿಗೆ ಗುಲಾಮಿ ಸಂತತಿಯ ಆಳ್ವಿಕೆ ಕೊನೆಗೊಂಡಿತು.

ಗುಲಾಮೀ ಸಂತತಿಯವರು ತಮ್ಮ ಉತ್ತರಾಧಿಕಾರಿಗಳ ಆಯ್ಕೆಯ ವಿಚಾರದಲ್ಲಿ ಸೂಕ್ತ ನಿಯಮಗಳನ್ನು ರೂಪಿಸುವಲ್ಲಿ ವಿಫಲರಾದರು. ಇದರಿಂದಾಗಿ ಪದೇ ಪದೇ ಸಿಂಹಾಸನಕ್ಕಾಗಿ ಕಾದಾಟ ನಡೆಯುತ್ತಿತ್ತು. ಸುಲ್ತಾನರು ದೇಶದ ರಕ್ಷಣೆ ಹಗೂ ಆಡಳಿತಕ್ಕೆ ಗಮನ ಕೊಡುವುದರ ಬದಲು ತಮ್ಮ ಸ್ಥಾನ ಭದ್ರತೆಗೆ ಹೆಚ್ಚಿನ ಗಮನ ಕೊಡಬೇಕಾಯಿತು. ಇದರಿಂದ ಆಡಳಿತದಲ್ಲಿ ದಕ್ಷತೆ ಇಲ್ಲವಾಯಿತು. ಆಸ್ಥಾನಿಕರು ಮತ್ತು ಶ್ರೀಮಂತ ವರ್ಗದವರಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿದ್ದ ಪೈಪೋಟಿ, ಮಂಗೋಲರ ದಾಳಿಗಳು, ಹಿಂದೂ ರಾಜರು ತಮ್ಮ ಸ್ವಾತಂತ್ರ್ಯವನ್ನು ಗಳಿಸಲು ನಡೆಸುತ್ತಿದ್ದ ಪ್ರಯತ್ನ, ತುರ್ಕಿ ಜನಾಂಗದವರ ಬಗ್ಗೆ ತೊರುತ್ತಿದ್ದ ಪಕ್ಷಪಾತ ಇವು ಅವರ ರಾಜ್ಯ ಕ್ಷೀಣಿಸಲು ಕಾರಣ.

ಗುಲಾಮೀ ಸಂತತಿಯವರು ಭಾರತದಲ್ಲಿ ಮತೀಯ ಪ್ರಭುತ್ವವನ್ನು ಸ್ಥಾಪಿಸಿದರು. ಅವರ ರಾಜ್ಯಾಂಗ ಕೊರಾನಿನ ನಿಯಮಗಳ ಮೇಲೆ ರೂಪುಗೊಂಡಿತ್ತು. ಸುಲ್ತಾನನನ್ನು ದೇವರ ಪ್ರತಿನಿಧಿ ಎಂದು ಪರಿಗಣಿಸಲಾಗಿತ್ತು. ಮೌಲ್ವಿಗಳು ನಿರೂಪಿಸಿದ ಇಸ್ಲಾಮಿನ ವಿಧಿಗಳಿಗೆ ಅವನು ಬಾಧ್ಯನಾಗಿದ್ದ. ಆದರೆ ಈ ಕಟ್ಟು ಪಾಡಿಗೆ ಒಪ್ಪಲು ಬಲ್ಬನ್ ನಿರಾಕರಿಸಿದ. ಅವನೇ ಇಸ್ಲಾಂ ರಾಜ್ಯಾಂಗ ವಿಧಿಗಳನ್ನು ಕಡೆಗಣಿಸಿದ್ದಲ್ಲದೆ, ರಾಜತ್ವ ದೇವರ ಕೊಡುಗೆ ಮತ್ತು ರಾಜ ಅಸದೃಶ ಪುರುಷ ಎಂದು ಹೇಳಿದ. ಅಷ್ಟೇ ಅಲ್ಲ, ಮಹಮ್ಮದನ ಅನಂತರದ ಮುಖ್ಯ ಸ್ಥಾನರಾಜನದೆಂದು ಹೇಳಿಕೊಂಡ.

ಗುಲಾಮೀ ಅರಸರ ಪ್ರಭುತ್ವಕ್ಕೆ ಸೈನ್ಯಶಕ್ತಿ ಅಡಿಪಾಯವಾಗಿತ್ತು. ಅಂತೆಯೇ ಸೈನ್ಯವ್ಯವಸ್ಥೆ ಅನಿವಾರ್ಯವಾಯಿತು. ಆದರೆ ಹಿಂದೂ ರಾಜರಂತೆ ಮಂತ್ರಿಮಂಡಲವನ್ನು ಸ್ಥಾಪಿಸದಿದ್ದುದು ಸುಲ್ತಾನರ ನಿರಕುಂಶ ಪ್ರಭುತ್ವಕ್ಕೆ ಎಡೆ ಮಡಿಕೊಟ್ಟಿತು.

ಅವರ ರಾಜ್ಯದಲ್ಲಿ ಹಿಂದೂಗಳು ಎರಡನೆಯ ದರ್ಜೆಯ ಪ್ರಜೆತನದಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಹಿಂದೂ - ಮುಸ್ಲಿಂ ಸಾಮರಸ್ಯ ಇಲ್ಲವಾಯಿತು. ಆರ್ಥಿಕ ಸ್ಥಿತಿ ಕ್ಷೀಣಿಸತೊಡಗಿತು. ಕೃಷಿ, ಕೈಗಾರಿಕೆ ಮತ್ತು ವ್ಯಾಪರಕ್ಕೆ ಸರ್ಕಾರದ ಪ್ರೋತ್ಸಾಹ ಅವಶ್ಯಕವೆಂದು ಸುಲ್ತಾನರು ಪರಿಗಣಿಸಲಿಲ್ಲ. ಶ್ರೀಮಂತ ಹಾಗೂ ಬಡಜನರ ಅಂತರ ದಿನೇ ದಿನೇ ಬೆಳೆಯುತ್ತಿತ್ತು. ದೇಶದಲ್ಲಿ ಆಗಾಗ್ಗೆ ಕ್ಷಾಮಗಳು ಸಂಭವಿಸುತ್ತಿದ್ದವು.

ವಾಸ್ತುಶಿಲ್ಪ ಕ್ಷೇತ್ರದಲ್ಲಿ ಇವರು ಹೊಸ ಶೈಲಿಯನ್ನು ರೂಪಿಸಿದಂತೆ ತೊರುವುದಿಲ್ಲ. ಇವರು ಹಿಂದೂ ದೇವಾಲಯಗಳನ್ನು ನಾಶ ಮಾಡಿ ಅವುಗಳ ಸಾಮಗ್ರಿಗಳಿಂದ ಮಸೀದಿಗಳನ್ನು ಕಟ್ಟಿಸಿದರು. ಅವರ ಕಟ್ಟಡಗಳು ಹಿಂದೂ ಶೈಲಿಯನ್ನು ಹೋಲುತ್ತವೆ ಎಂದು ಹಾವೆಲ್ ಹೇಳಿದ್ದಾರೆ. ಆ ಕಾಲದ ಪ್ರಸಿದ್ಧ ಸ್ಮಾರಕಗಳೆಂದರೆ ಕುವ್ವತ್-ವುಲ್-ಇಸ್ಲಾಂ ಮಸೀದಿ ಮತ್ತು ಕುತುಬ್ ಮಿನಾರ್, ಕುವ್ವತ್-ವುಲ್-ಇಸ್ಲಾಂ ಅನ್ನು ಕುತುಬ್-ಉದ್-ದೀನ್ ಕಟ್ಟಿಸಿದ; ಅದರ ಅಂಗಣವನ್ನು ಇಲ್ತಮಷ್ ವಿಸ್ತರಿಸಿದ. ಅದರ ಹೊರ ಆವರಣದಲ್ಲಿ ಕುತುಬ್ ಮಿನಾರ್ ಇದೆ. (ಎಚ್.ವಿ.ಎಸ್.ಎಂ.)

ನಾಣ್ಯಗಳು : ಗುಲಾಮೀ ಸಂತತಿಯ ಅರಸರ ನಾಣ್ಯಗÀಳು ಬಹುಪಾಲು ಚಿನ್ನ ಬೆಳ್ಳಿಗಳ ಟಂಕಗಳು, ಮಿಶ್ರಲೋಹದ ಜಿಕಾಲುಗಳು ಅಥವಾ ದೆಹಲಿವಾಲಾಗಳು ಮತ್ತು ಕಡಿಮೆ ಮೌಲ್ಯದ ತಾಮ್ರದ ನಾಣ್ಯಗಳು. ಈ ನಾಣ್ಯಗಳ ಮುಂಬದಿಯಲ್ಲಿ ಸಾಮಾನ್ಯವಾಗಿ ಇಸ್ಲಾಂ ಮತ ಸಂದೇಶಗಳೂ ಹಿಂಬದಿಯಲ್ಲಿ ಸುಲ್ತಾನನ ಹೆಸರು, ಮುದ್ರಿತ ಸ್ಥಳ, ಇಸವಿ ಮತ್ತು ಬೆಳ್ಳಿ ಟಂಕಗಳು ಒಂದೇ ತೂಕದವಾಗಿರುತ್ತವೆ. ಸುಮಾರು 172 ಗ್ರೇನ್ ತೂಗುತ್ತವೆ. ಕ್ರಿ.ಶ 13ನೆಯ ಶತಮಾನದಲ್ಲಿ ಪ್ರತಿಯೊಂದು ಟಂಕವೂ 96 ರತಿಗಳಿಗೆ ಸಮನಾಗಿತ್ತು. ಒಂದು ರತಿ 1.8 ಗ್ರೇನ್ ತೂಗುತ್ತಿತ್ತು. 2 ರತಿಗಳು ಸೇರಿದರೆ ಒಂದು ಜಿಕಾಲು ಮತ್ತು 48 ಜಿಕಾಲುಗಳು ಸೇರಿದರೆ ಒಂದು ಟಂಕ ಆಗುತ್ತಿದ್ದವು. ಜಿಕಾಲುಗಳನ್ನು ಚಿನ್ನ ಅಥವಾ ಬೆಳ್ಳಿಯ ಅಂಶವಿರುವ ಮಿಶ್ರಲೋಹದಿಂದ ತಯಾರಿಸುತ್ತಿದ್ದರು. ಚಿನ್ನ ಮತ್ತು ಬೆಳ್ಳಿಗಳ ಅನುಪಾತ 1:10; ಬೆಳ್ಳಿ ಮತ್ತು ತಾಮ್ರಗಳ ಅನುಪಾತ 1:80.

ಚಿನ್ನದ ನಾಣ್ಯಗಳು : ಈ ಸಂತತಿಯ ಚಿನ್ನದ ನಾಣ್ಯಗಳು ಬಹಳ ವಿರಳ. ಚಿನ್ನದ ಟಂಕಗಳು ಸುಮಾರು 170 ಗ್ರೇನ್ ತೂಗುತ್ತವೆ. ಇವು ಆಕಾರದಲ್ಲಿ ಗುಂಡಾಗಿದ್ದು ಎರಡು ಪ್ರರೂಪಗಳಲ್ಲಿ ದೊರೆತಿವೆ. 1 ಅಶ್ವಾರೋಹಿ ಪ್ರರೂಪ ಮತ್ತು 2 ಖಲೀಫ ಪ್ರರೂಪ.

ಅಶ್ವಾರೋಹಿ ಪ್ರರೂಪ: ಈ ಪ್ರರೂಪಿ ನಾಣ್ಯದ ಮುಂಬದಿಯ ವೃತ್ತದದೊಳಗೆ ಕೈಯಲ್ಲಿ ದಂಡ ಅಥವಾ ಗದೆಯನ್ನು ಹಿಡಿದಿರುವ ಅಶ್ವಾರೋಹಿಯ ಚಿತ್ರವೂ ಹಿಂಬದಿಯಲ್ಲಿ ಸುಲ್ತಾನನ ಹೆಸರು, ಮುದ್ರಿಸಿದ ಸ್ಥಳ ಇಸವಿ ಮತ್ತು ಇತರ ವಿವರಗಳೂ ಇವೆ.

ಖಲೀಫ ಪ್ರರೂಪ : ಈ ಪ್ರರೂಪಿ ನಾಣ್ಯದ ಮುಂಬದಿಯಲ್ಲಿ ಅರಬ್ಬೀ ಲಿಪಿಯಲ್ಲಿ ಖಲೀಫನ ಹೆಸರೂ ಹಿಂಬದಿಯಲ್ಲಿ ಅಶ್ವಾರೋಹಿ ಪ್ರರೂಪಿ ನಾಣ್ಯದಲ್ಲಿರುವಂತೆಯೇ ಸುಲ್ತಾನನ ಹೆಸರು ಮತ್ತು ಇತರ ವಿವರಗಳೂ ಇವೆ. ಇಲ್ತಮಿಷ್, ಅಲ್ಲಾವುದ್ದೀನ್, ಮಸೂದ್, ಷಹ, ನಾಸಿರುದ್ದೀನ್ ಮಹಮ್ಮದ್ ಮತ್ತು ಘಿಯಾಸುದ್ದೀನ್ ಬಲ್ಬನ್ ಇವರ ಸುವರ್ಣ ನಾಣ್ಯಗಳು ಮಾತ್ರ ಇದುವರೆಗೆ ದೊರೆತಿವೆ. ಚಿನ್ನದ ಟಂಕಗಳಲ್ಲದೆ ಇದೇ ಲೋಹದ ಮತ್ತು ಇದೇ ಬಗೆಯ ಬೇರೆಬೇರೆ ಮೌಲ್ಯಗಳ ನಾಣ್ಯಗಳ ಚಲಾವಣೆಯಲ್ಲಿದ್ದುವು.

ಬೆಳ್ಳಿಯ ನಾಣ್ಯಗಳು : ಚಿನ್ನದ ಟಂಕಗಳಂತೆಯೇ ಬೆಳ್ಳಿಯ ಟಂಕಗಳೂ ಗಾತ್ರ ಮತ್ತು ತೂಕಗಳಲ್ಲಿ ಸಮನಾಗಿದ್ದುವು; ಇವು ಚಿನ್ನದ ನಾಣ್ಯಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ದೊರೆತಿವೆ. ಇಲ್ತಮಿಷನ ಬೆಳ್ಳಿಯ ಟಂಕಗಳು ಮಾತ್ರ ಖಲೀಫ ಮತ್ತು ಅಶ್ವಾರೋಹಿ ಪ್ರರೂಪಗಳಲ್ಲಿ ಮಾತ್ರ ದೊರೆತಿವೆ. ಉಳಿದ ಸುಲ್ತಾನರ ಬೆಳ್ಳಿಯ ಟಂಕಗಳು ಖಲೀಫ ಪ್ರರೂಪದಲ್ಲಿ ಮಾತ್ರ ದೊರೆತಿವೆ. ಕುತುಬ್-ಉದ್-ದೀನನ ಬೆಳ್ಳಿಯ ನಾಣ್ಯಗಳು ಇದುವರೆಗೆ ದೊರೆತಿಲ್ಲ.

ಮಿಶ್ರಲೋಹದ ನಾಣ್ಯಗಳು: ಈ ನಾಣ್ಯಗಳನ್ನು ಚಿನ್ನ ಅಥವಾ ಬೆಳ್ಳಿಯ ಅಂಶವಿರುವ ಮಿಶ್ರಲೋಹದಿಂದ ಮಾಡಲಾಗಿದೆ. ಆ ಕಾಲದ ಜಿಕಾಲುಗಳು ಈ ಲೋಹದವು. ಇವುಗಳ ತೂಕ 45-55 ಗ್ರೇನ್ ಇವನ್ನು ಮುಸ್ಲಿಂ ದೊರೆಗಳು ಮುದ್ರಿಸಿರುವರಾದರೂ ಇವುಗಳಲ್ಲಿ ಭಾರತೀಯ ನಾಣ್ಯಗಳ ಪರಂಪರೆಯನ್ನುಳಿಸಿಕೊಂಡು ಬಂದಿರುವುದು ವಿಶೇಷ ಸಂಗತಿ. ಏಕೆಂದರೆ ಇವು ಅತ್ಯಂತ ಹೆಚ್ಚಾಗಿ ಚಲಾವಣೆಯಲ್ಲಿದ್ದ ನಾಣ್ಯಗಳು ಸಾಮಾನ್ಯವಾಗಿ ಇವುಗಳ ಮುಂಬದಿಯಲ್ಲಿ ಶಿವನ ವಾಹನವಾದ ನಂದಿಯ ಚಿತ್ರವೂ ದೇವನಾಗರೀ ಲಿಪಿಯಲ್ಲಿ ಸುಲ್ತಾನನ ಹೆಸರೂ ಇವೆ. ಹಿಂಬದಿಯಲ್ಲಿ ಚೌಹಾನ್ ಅಶ್ವಾರೋಹಿಯ ಚಿತ್ರವೂ ಸುಲ್ತಾನನ ಬಿರುದುಗಳೂ (ಉದಾ: ಶ್ರೀ ಹಮೀರ, ಶ್ರೀಪೃಥ್ವೀರಾಜದೇವ) ದೇವನಾಗರೀ ಲಿಪಿಯಲ್ಲಿವೆ. ಇವುಗಳಲ್ಲಿ ಇದೇ ಬಗೆಯ ಆದರೆ ಅರಬ್ಬೀ ಲಿಪಿಯಲ್ಲಿ ವಿವರಗಳನ್ನು ಕೊಟ್ಟಿರುವ ನಾಣ್ಯಗಳೂ ಉಂಟು.

ತಾಮ್ರದ ನಾಣ್ಯಗಳು : ಇವು ಕಡಿಮೆ ಆಕಾರ ಮತ್ತು ಮೌಲ್ಯಗಳ ನಾಣ್ಯಗಳು. ಇವುಗಳ ತೂಕ 12-70 ಗ್ರೇನ್‍ಗಳು. ಇವುಗಳಲ್ಲಿ ಬಹು ಸಂಖ್ಯೆಯ ನಾಣ್ಯಗಳ ಮೇಲೆ ಎರಡೂ ಬದಿಗಳಲ್ಲಿ ಅರಬ್ಬೀ ಲಿಪಿಯಲ್ಲಿ ವಿವರಗಳಿವೆಯಾದರೂ ದೇವನಾಗರೀ ಲಿಪಿಯಲ್ಲಿ ವಿವರಗಳುಳ್ಳ ಮತ್ತು ಮುಂಬದಿಯಲ್ಲಿ ಗೂಳಿಯ ಚಿತ್ರವಿರುವ ನಾಣ್ಯಗಳೂ ಉಂಟು. (ಎಂ.ಎಸ್.ಕೆ.ಎಂ.)