ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೃಹ ಮತ್ತು ಗೃಹಾಲಂಕರಣ

ವಿಕಿಸೋರ್ಸ್ದಿಂದ

ಗೃಹ ಮತ್ತು ಗೃಹಾಲಂಕರಣ


ಕರ್ನಾಟಕದಲ್ಲಿ ಗೃಹಗಳನ್ನು ರಚಿಸುವ ಪದ್ಧತಿ ಆರಂಭವಾದುದು ಸು.4,500 ವರ್ಷಗಳ ಪೂರ್ವದಲ್ಲಿ, ನವಶಿಲಾಯುಗದ ಕಾಲದಲ್ಲಿ. ಆ ಹಿಂದಿನ ಕಾಲಘಟ್ಟದಲ್ಲಿ ಬೇಟೆಗಾರ ಜನಾಂಗಗಳು ಮಾತ್ರ ಈ ನಾಡಿನಲ್ಲಿ ಇದ್ದರಾಗಿ, ವಲಸೆಗಾರರಾದ ಆ ಕಾಲದ ಜನ ಮನೆಗಳನ್ನು ಕಟ್ಟಿಕೊಂಡು ಒಂದೆಡೆ ನಿಲ್ಲುವ ಅವಕಾಶ ಇದ್ದಿರುವುದು ಕಡಿಮೆ. ನವಶಿಲಾಯುಗದ ಕಾಲದಲ್ಲಾದರೋ ವ್ಯವಸಾಯ ಬಳಕೆಗೆ ಬಂದುದರಿಂದ ಮನೆಗಳನ್ನು ಕಟ್ಟಿ ನೆಲೆಸುವುದು ಆವಶ್ಯಕವಾಯಿತು. ಆದರೆ ಆ ಕಾಲದಲ್ಲಿದ್ದ ಮನೆಗಳು ಯಾವ ರೀತಿಯವು ಎಂಬ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುವುದಿಲ್ಲ. ಧಾರವಾಡ ಜಿಲ್ಲೆಯ ಹಳ್ಳೂರು, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಮತ್ತು ಸಂಗನಕಲ್ಲು, ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಪಿಕ್ಲಿಹಾಳು, ಮೈಸೂರು ಜಿಲ್ಲೆಯ ಹೆಮ್ಮಿಗೆ ಮೊದಲಾದೆಡೆಗಳಲ್ಲಿ ನಡೆದಿರುವ ಉತ್ಖನನಗಳಿಂದ ಕೆಲವು ಸೂಚನೆಗಳು ದೊರಕುತ್ತವೆ. ಈ ಎಲ್ಲ ಸ್ಥಳಗಳಲ್ಲೂ ಕಂಬಗಳಿಗಾಗಿ ಮಾಡಿದ ಗುಳಿಗಳು ಕಂಡುಬಂದಿರುವುದರಿಂದ ಆ ಕಾಲದಲ್ಲಿ ಮರದ ಕಂಬಗಳನ್ನು ನೆಟ್ಟು ಎತ್ತಿದ ಗುಡಿಸಲುಗಳ ರಚನೆ ಸಾಮಾನ್ಯವಾಗಿತ್ತು ಎಂದು ಹೇಳಬಹುದು. ಸಂಗನಕಲ್ಲಿನ ಉತ್ಖನನದಲ್ಲಿ ಬಿದಿರಿನ ಪಡಿಯಚ್ಚನ್ನೊಳಗೊಂಡ ಮಣ್ಣಿನ ಭಾಗಗಳು ದೊರೆತಿವೆ. ಸೀಳಿದ ಬೊಂಬಿನ ಜಾಳಿಗೆಗಳನ್ನು ನಾಲ್ಕರಿಂದ ಆರು ಅಡಿಗಳಷ್ಟು ಎತ್ತರದ ಗೋಡೆಗಳ ಮೇಲೆ ನಿಲ್ಲಿಸಿ ಆ ಜಾಳಿಗೆಗಳಿಗೆ ಮಣ್ಣನ್ನು ಮೆತ್ತಲಾಗಿತ್ತು. ಅಲ್ಲಿ ದೊರೆತಿರುವ ಅತಿದೊಡ್ಡ ಗುಡಿಸಲು 18 ವ್ಯಾಸವುಳ್ಳದ್ದು. ತೆಕ್ಕಲಕೋಟೆಯಲ್ಲಿ ತಗ್ಗುದಿಣ್ಣೆಗಳನ್ನು ಕಲ್ಲುಮಣ್ಣಿನಿಂದ ಮಟ್ಟಸಮಾಡಿ 10-12 ವ್ಯಾಸದ ವೃತ್ತಾಕಾರದ ತಳವಿನ್ಯಾಸವುಳ್ಳ ಏಕಕೋಣೆಯ ಗುಡಿಸಲುಗಳನ್ನು ನಿರ್ಮಿಸುತ್ತಿದ್ದರೆಂಬುದು ತಿಳಿದುಬಂದಿದೆ. ಅಲ್ಲಿನ ಗೋಡೆಗಳು ಬರಿಯ ಬಿದಿರುದಬ್ಬೆ ಅಥವಾ ಕಡ್ಡಿ ಸೊಪ್ಪುಗಳಿಂದ ಮಾಡಿದ ತಡಿಕೆಗಳೋ ಇಲ್ಲವೆ ಅವುಗಳ ಮೇಲೆ ಮಣ್ಣು ಮೆತ್ತಿದ ತಡಿಕೆ ಗೋಡೆಗಳೋ ಆಗಿರುತ್ತಿದ್ದುವು. ಗೋಡೆಯ ಸುತ್ತ ದಪ್ಪ ಕಲ್ಲುಗುಂಡುಗಳನ್ನು ಜೋಡಿಸಿ ಹೊರಗಿನ ನೀರು ಒಳ ಬರದಂತೆ ಮಾಡಿರುವ ವ್ಯವಸ್ಥೆಯೂ ಕಂಡುಬಂದಿದೆ. ಸುಮಾರು ಇದೇ ವೈಶಿಷ್ಟ್ಯಗಳುಳ್ಳ ಗುಡಿಸಲುಗಳನ್ನು ಇತ್ತೀಚಿನ ಬೋವ ಜನಾಂಗದವರು ಆ ಪ್ರದೇಶದಲ್ಲಿ ರಚಿಸುತ್ತಾರಾಗಿ, ಅವು ಆ ಕಾಲದಿಂದಲೂ ಉಳಿದುಬಂದಿರುವ ಮಾದರಿಗಳಾಗಿರಬಹುದೆಂಬ ಊಹೆಯ ಮೇಲೆ ನವಶಿಲಾಯುಗದ ಕಾಲದ ಗುಡಿಸಲುಗಳಲ್ಲೂ ಬೋವ ಗುಡಿಸಲುಗಳಂತೆ ಚೂಪು ತುದಿಯ ಅರ್ಧಶಂಖುವಿನಾಕಾರದ ಹುಲ್ಲು ಸೊಪ್ಪಿನ ಚಾವಣಿಯನ್ನು ನಿರ್ಮಿಸಲಾಗುತ್ತಿರಬೇಕೆಂದು ಊಹಿಸಲಾಗಿದೆ. ಹಳ್ಳೂರಿನಲ್ಲಿಯೂ ವೃತ್ತಾಕಾರದ ಗುಡಿಸಿಲಿನ ಅವಶೇಷಗಳು ದೊರತಿವೆ. ಸುಮಾರು 10 ವ್ಯಾಸದ ಈ ಗುಡಿಸಿಲಿನ ಮಧ್ಯಭಾಗದಲ್ಲಿ ಎರಡು ಗುಳಿಗಳಿದ್ದವು. ಬಹುಶಃ ವೃತ್ತಾಕಾರದ ಮೇಲ್ಫಾವಣಿಯನ್ನು ಈ ಗುಳಿಗಳಲ್ಲಿ ನೆಟ್ಟಿದ್ದ ಕಂಬಗಳ ಮೇಲೆ ಹೊದಿಸಲಾಗಿತ್ತೆಂದು ತೋರುತ್ತದೆ. ಹೆಮ್ಮಿಗೆಯಲ್ಲಿ ನಡೆದ ಉತ್ಖನನದಿಂದ ಸುಮಾರು ಆಯಾಕಾರದ ತಳವಿನ್ಯಾಸದ ಪುಟದ ಗೋಡೆಗಳಿದ್ದ ಏಕ ಕೋಣೆಯ ಮನೆಗಳನ್ನು ಕಟ್ಟುವ ರೂಢಿಯೂ ಇದ್ದಿರಬೇಕೆಂದು ತಿಳಿದುಬರುತ್ತದೆ.

ನವಶಿಲಾಯುಗದ ಅನಂತರ ಕ್ರಿ.ಪೂ.1ನೆಯ ಸಹಸ್ರಮಾನದಲ್ಲಿ ಬಂದ ಕಬ್ಬಿಣದ ಯುಗದಲ್ಲಿ ಇದ್ದ ಮನೆಗಳ ಸ್ವರೂಪ ತಿಳಿದಿಲ್ಲ. ಕೆಲವು ನೆಲೆಗಳಲ್ಲಿ ಕಂಬದ ಗುಳಿಗಳು ಮಾತ್ರ ಕಂಡುಬಂದಿವೆ. ಈ ಕಾಲದ ಸಮಾಧಿಗಳಲ್ಲಿ ಕಲ್ಲಿನ ತುಂಡುಗಳನ್ನು ಬಳಸಿ ಗೋಡೆಗಳನ್ನು ಕಟ್ಟುವ, ಕಲ್ಲುಚಪ್ಪಡಿಗಳನ್ನು ಉಜ್ಜಿ ನಯಮಾಡುವ ತಂತ್ರ ಇದ್ದುದಕ್ಕೆ ಮಾಹಿತಿಗಳು ದೊರಕುತ್ತವೆ. ಆದರೆ ಕಲ್ಲನ್ನು ಮನೆಗಳ ನಿರ್ಮಾಣಕ್ಕೆ ಉಪಯೋಗಿಸುತ್ತಿದ್ದ ಬಗ್ಗೆ ಇದುವರೆಗೆ ಯಾವ ಕುರುಹೂ ಬೆಳಕಿಗೆ ಬಂದಿಲ್ಲ. (ಬಿ.ಆರ್.ಜಿ.)

ಕರ್ನಾಟಕದಲ್ಲಿ ಮನೆಗಳನ್ನು ಕಟ್ಟಲು ಇಟ್ಟಿಗೆಯನ್ನು ಬಳಸಲು ಆರಂಭವಾದುದು ಕ್ರಿಸ್ತಶಕಾರಂಭದ ಆಸುಪಾಸಿನಲ್ಲಿ. ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಉತ್ಖನನದಲ್ಲಿ ಈ ಕಾಲದ ಪದರಗಳಲ್ಲಿ ಇಟ್ಟಿಗೆಯ ತುಂಡುಗಳು ದೊರೆತಿವೆ. ಕರ್ನಾಟಕದ ಎಲ್ಲೆಯಿಂದ ಅನತಿದೂರದಲ್ಲಿರುವ ಕೊಲ್ಲಾಪುರದ ಬ್ರಹ್ಮಪುರಿ ಪ್ರದೇಶದಲ್ಲಿ ಮತ್ತು ಇತ್ತೀಚೆಗೆ ಬೆಳಗಾಂವಿ ಸಮೀಪದ ವಡಗಾಂವ ಮಾಧವಪುರದಲ್ಲಿ ನಡೆದ ಉತ್ಖನನಗಳಿಂದ ಕ್ರಿಸ್ತಶಕ 12ನೆಯ ಶತಮಾನಗಳಲ್ಲಿ ಕಟ್ಟಿರಬಹುದಾದ ಇಟ್ಟಿಗೆಯ ಮನೆಗಳ ಅವಶೇಷಗಳು ದೊರಕಿವೆ. ಈ ಕಾಲದಲ್ಲಿ ಹೆಚ್ಚಿನ ಅಡಿಪಾಯವೇನೂ ಇಲ್ಲದೆ ಗೋಡೆಗಳನ್ನು ಕಟ್ಟಲಾಗುತ್ತಿತ್ತು. ಬಂಧಕ ಸಾಮಗ್ರಿಯಾಗಿ ಮಣ್ಣು ಬಳಕೆಯಾಗುತ್ತಿತ್ತು. ಮನೆಗಳಲ್ಲಿ ಆಯಾಕಾರದ ಎರಡು ಅಥವಾ ಮೂರು ಕೋಣೆಗಳು, ನಡುಮನೆ ಇರುತ್ತಿದ್ದುವು. ಮನೆಯ ಒಟ್ಟು ತಳವಿನ್ಯಾಸ ಸಹ ಆಯಾ ಮನೆಗಳ ಮೇಲೆ ಮರದ ಇಳಿಹಂದರವನ್ನು ಮಾಡಿ ಚಪ್ಪಟೆಯ ಮಣ್ಣು ಹೆಂಚುಗಳನ್ನು ಒಂದರಮೇಲೊಂದು ಕೂಡುವಂತೆ ಜೋಡಿಸಿ ಅವನ್ನು ಬಹುಶಃ ತಂತಿ ಅಥವಾ ಹಗ್ಗದಿಂದ ಬಂಧಿಸಿ ಚಾವಣಿಗಳನ್ನು ನಿರ್ಮಿಸುವ ಪದ್ಧತಿ ರೂಢಿಗೆ ಬಂದಿತು. ಈ ಕಾಲದಲ್ಲಿ ಬಳಕೆಯಲ್ಲಿದ್ದ ಗೃಹಾಲಂಕರಣದ ವಿಷಯ ಅಸ್ಪಷ್ಟ. ಬೋವ ಜನರ ವೃತ್ತಾಕಾರದ ಗುಡಿಸಲುಗಳು, ತೆಕ್ಕಲಕೋಟೆ

ಕ್ರಿಸ್ತಶಕಾರಂಭದಿಂದ 18-19ನೆಯ ಶತಮಾನದವರೆಗೆ ಕರ್ನಾಟಕದಲ್ಲಿದ್ದ ಮನೆಗಳ ಸ್ವರೂಪವನ್ನು ತಿಳಿಯಲು ಸಾಕಷ್ಟು ವಾಸ್ತು ಆಧಾರಗಳಿಲ್ಲ. ಹಳೇಬೀಡಿನಲ್ಲಿ ನಡೆದ ಉತ್ಖನನದಿಂದ ಇಟ್ಟಿಗೆ ಮತ್ತು ಕಲ್ಲನ್ನು ಉಪಯೋಗಿಸಿ ಕಟ್ಟಿದ ಹೊಯ್ಸಳ ಕಾಲದ ಕೆಲವು ಗೋಡೆಗಳ ಅವಶೇಷಗಳು ಕಂಡುಬಂದಿದ್ದುವು. ಅಲ್ಲದೆ ಚಪ್ಪಟೆ ಹೆಂಚು ಸಹ ಉಪಯೋಗದಲ್ಲಿದ್ದಂತೆ ಕಂಡುಬಂದಿತು. ಬೃಹತ್ತಾದ ಕಲ್ಲು ಮತ್ತು ಇಟ್ಟಿಗೆಯ ಕಟ್ಟಡಗಳು ಮತ್ತು ಸುಣ್ಣಗಾರೆ ಇಸ್ಲಾಮಿ ಅರಸರ ಆಳಿಕೆಯಲ್ಲಿ ಸು.14-15ನೆಯ ಶತಮಾನದಾರಭ್ಯ ರೂಢಿಗೆ ಬಂದು ಅಂದಿನಿಂದ ಕರ್ನಾಟಕದ ಎಲ್ಲೆಡೆಯೂ ಪ್ರಚಾರಗೊಂಡಿತು. ಗುಲ್ಬರ್ಗ, ಬಿಜಾಪುರ, ಹಂಪೆ, ಬೀದರ್ ಮುಂತಾದ ಸ್ಥಳಗಳಲ್ಲಿ ವಿಶಾಲವಾದ ಕೊಠಡಿಗಳು, ದೊಡ್ಡ ಅಂಗಳಗಳು, ಬುರುಜು, ಚಾವಣಿಗಳು ಇವುಗಳನ್ನು ಒಳಗೊಂಡಿದ್ದ ಬಹುಮಟ್ಟಿಗೆ ಆಯಾಕಾರದ ತಳವಿನ್ಯಾಸವುಳ್ಳ ದೊಡ್ಡ ಅರಮನೆ ಮತ್ತು ಶ್ರೀಮಂತರ ಮನೆಗಳ ಅವಶೇಷಗಳು ಉಳಿದುಬಂದಿವೆ. ಇವೆಲ್ಲ ಕಲ್ಲು ಮತ್ತು ಸುಣ್ಣಗಾರೆಯಲ್ಲಿ ಕಟ್ಟಿದ್ದವು. 1416ನೆಯ ಶತಮಾನಗಳ ಅವಧಿಗೆ ಸೇರಿದವು. ಗೋಡೆಗಳಿಗೆ ಗಾರೆಯನ್ನು ಬಳಿಯುವುದು ರೂಢಿಯಲ್ಲಿತ್ತು. ಬೀದರ್, ಬಿಜಾಪುರ ಈ ಸ್ಥಳಗಳಲ್ಲಿ ನಯವಾದ ಬಣ್ಣ ಬಣ್ಣದ ಗಾಜಿನ ಲೇಪದ ಮೆರುಗು ಬಿಲ್ಲೆಗಳಿಂದ ಅಲಂಕರಿಸಲಾಗಿರುವ ಕಟ್ಟಡಗಳು ಇವೆ. ಜೊತೆಗೆ ಭಿತ್ತಿಯ ಮೇಲೆ ವರ್ಣಚಿತ್ರಗಳೂ ಇದ್ದಿರಬಹುದು. (ಐ.)

ಪ್ರಾಚೀನ ಕರ್ನಾಟಕದ ಗೃಹ ಮತ್ತು ಗೃಹಾಲಂಕರಣಕ್ಕೆ ಸಂಬಂಧಿಸಿದ ವಿಷಯಗಳು ಕೆಲವಾರು ಪ್ರಾಚೀನ ಕಾವ್ಯಗಳಲ್ಲೂ ಕಂಡುಬರುತ್ತವೆ. ಇವುಗಳಲ್ಲಿ ಹೆಚ್ಚಿನವು ಅರಮನೆ ಮತ್ತು ಶ್ರೀಮಂತರ ಮನೆಗಳಿಗೆ ಸಂಬಂಧಿಸಿದವು. ಅಲ್ಲದೆ ಹಲವೆಡೆ ವರ್ಣನೆಗಳು ಸ್ಥಿತಿಗಿಂತಲೂ ಕವಿಕಲ್ಪನೆಗಳಾಗಿರುವ ಸಾಧ್ಯತೆಯೂ ಇದೆ. ಉದಾಹರಣೆಗೆ, ಕೆಲವು ಕಾವ್ಯಗಳಲ್ಲಿ ದೊರೆಯುವ ವಜ್ರ, ಪಚ್ಚೆ, ಮಾಣಿಕ್ಯದ ಪುಡಿಗಳಿಂದ ರಂಗವಲ್ಲಿ ಹಾಕುತ್ತಿದ್ದರೆಂಬ ವರ್ಣನೆ ವರ್ತಮಾನ ಉತ್ಪೇಕ್ಷೆಯಾಗದಿರದು. ದೇಪರಾಜನ ಸೊಬಗಿನ ಸೋನೆಯಲ್ಲಿ ಬರುವ ಚದುರದೇಶದ ಸಸಿವೊಳಲೆಂಬ ಪಟ್ಟಣದ ವರ್ಣನೆ ಹೀಗಿದೆ; ಅಲ್ಲಿನ ರಾಜಬೀದಿ ಮುತ್ತಿನ ರಂಗವಲ್ಲಿಯಿಂದಲೂ ಹೊನ್ನಿನ ತೋರಣದಿಂದಲೂ ಶೋಭಾಯ ಮಾನವಾಗಿತ್ತು. ಆ ಪೊಳಲ ಬೀದಿ ಬೀದಿಗಳಲ್ಲಿಯೂ ರನ್ನದ ಉಪ್ಪರಿಗೆಗಳು, ರೇಷ್ಮೆಯ ಬಾವುಟಗಳು, ಚಿನ್ನದ ನವಿಲ ಉಯ್ಯಾಲೆಗಳು, ಕನ್ನಡಿ ಬಿಗಿದ ತೋರಣಗಳು ಕಂಗೊಳಿಸುತ್ತಿದ್ದುವು. ಶೃಂಗಾರ ಪೇಟೆ, ಸೂಳೆಗೇರಿ, ಮಾತುಳನ ಅರಮನೆಯ ಹೆಬಾಪಿಗಿಲು ತನಗೆ ಸರಿಸಾಟಿ ಮತ್ತೊಂದಿಲ್ಲವೆಂಬಂತೆ ಮೆರೆಯುತ್ತಿದ್ದುವು. ಬಣ್ಣಬಣ್ಣದ ಉಪ್ಪರಿಗೆ ಮನೆಗಳು, ಮಣಿಮಯವಾದ ಬಾಗಿಲುಗಳು, ಗಜಶಾಲೆ, ಹಯಶಾಲೆಗಳು ಅಂದಿನ ವೈಶಿಷ್ಟ್ಯಗಳಾಗಿದ್ದುವು. ಅಲ್ಲಿ ಗೋಡೆಯನ್ನು ಕೊರೆದು ಹಲವು ಹಕ್ಕಿಗಳ ಗೂಡುಗಳೂ ಬಾಗಿಲುಸಹಿತವಾದ ಹಲವಾರು ಪಂಜರಗಳೂ ಸವಡಿದಂತದ ಬಳೆಗಳೂ ಹೊಸ ಮಾಣಿಕ್ಯದ ಪಾದಪೀಠಗಳಲ್ಲಿ ಸೇರಿಸಿದ್ದ ಇಂದ್ರನೀಲದ ಪುತ್ರಿಕೆ, ಮುತ್ತಿನ ಮೈದೊಡವು, ಹೊನ್ನರನ್ನದ ಬಟ್ಟಲುಗಳು, ಲತಾವನಗಳು, ರನ್ನದ ಜಗಲಿಗಳು, ತಳಿರುಯ್ಯಾಲೆಗಳು ರನ್ನದಿಂದ ಕಂಡರಿಸಿದ ದಾರಿಗಳು, ಮುತ್ತಿನ ಗೊಂಡೆಯಗಳು, ಚಿತ್ರದ ಮೇಲ್ಕಟ್ಟು, ಮಕರಂದ ಮಾಲೆಗಳಿಂದ ಅಲಂಕೃತವಾಗಿತ್ತು. ಕೆಲವು ಕಾವ್ಯಗಳಲ್ಲಿ ಹಬ್ಬಹರಿದಿನಗಳಲ್ಲಿ ಮನೆಗಳನ್ನು ಕಸ್ತೂರಿ ಕುಂಕುಮ ಪನ್ನೀರುಗಳ ಸಾರಣೆ, ಕಾರಣೆ, ಬಳೆಗಳಿಂದ ಅಲಂಕರಿಸುತ್ತಿದ್ದರು. ಪಚ್ಚೆಯಹಾರದ ಮಕರಂದ ತೋರಣಗಳನ್ನು ಕಟ್ಟುತ್ತಿದ್ದರು. ಸುಗಂಧದ್ರವ್ಯಗಳ ಪರಿಮಳ ಭಾರದಿಂದ ಬಿರುಗಾಳಿಯೂ ಕುಸಿದುಹೋಗುತ್ತಿತ್ತು ಎಂಬ ವರ್ಣನೆಗಳಿವೆ. ಗೋವಿಂದ ವೈದ್ಯನ ಪ್ರಕಾರ ಕಂಠೀರವ ನರಸರಾಜನ ಅರಮನೆಗೆ ಎಷ್ಟೋ ನೆಲೆಯುಪ್ಪರಿಗೆಗಳಿದ್ದುವಂತೆ. ಅವುಗಳಲ್ಲಿಯೂ ಜಯಸಿರಿ, ಭಾಗ್ಯಸಿರಿ, ಶಾರದಲಕ್ಷ್ಮಿ, ಧೈರ್ಯಲಕ್ಷ್ಮಿಯರ ಮುಖಾಬ್ಜದಂತೆ ಅವು ಮೆರೆಯುತ್ತಿದ್ದುವಂತೆ. ಈ ಧವಳದುಪ್ಪರಿಗೆಗಳ ಅಂತರಾಂತರದ ಭಿತ್ತಿಯಲಿ...... ಮೋಹರಸವ ಸೂಸುತ ಚೆಲ್ವಾಂತ ಪುತ್ಥಳಿಗಳು ಶೋಭಿಸುತ್ತಿದ್ದುವಂತೆ. ಅಲ್ಲದೆ ಈ ಪುತ್ಥಳಿಗಳು ಭಾರತ ರಾಮಾಯಣ ಭಾಗವತ ಕಥಾಸಂದರ್ಭಗಳನ್ನು ಪ್ರದರ್ಶಿಸುವಂತಿದ್ದುವಲ್ಲದೆ ಶೃಂಗಾರರಸಪೂರಿತವಾದ ಕಾವ್ಯನಾಟಕದಲ್ಲಿಯ ಕಥೆಯ ಸೂಚಕಗಳಾಗಿದ್ದ ಸುರಧೀೀರನ ಬಲದಂತೆ, ಅರಸಂಚೆ, ಸೋಗೆನವಿಲು, ಬಣ್ಣದ ಕೋಗಿಲೆ, ಗಿಳಿ, ಚಕ್ರವಾಕ ಮುಂತಾದ ಪಕ್ಷಿಗಳ ಗೊಂಬೆಗಳು ಅಲ್ಲಿ ಶೋಭಿಸುತ್ತಿದ್ದುವಂತೆ. ಹಮ್ರ್ಯಗಳಲ್ಲಿ ಆನೆ, ವರಾಹ, ಕಾಡುಕೋಣ, ಹೆಬ್ಬುಲಿ, ಸಿಂಹ, ಹರಿಣ, ಭೇರುಂಡ ಮುಂತಾದ ಬಗೆಬಗೆಯ ಪ್ರತಿಮೆಗಳು ಸುಶೋಭಿಸುತ್ತಿದ್ದುವಂತೆ. ಅರಮನೆಯೊಳಗೆ ಪ್ರವೇಶದೊಡನೆ ಮೊದಲನೆಯದಾಗಿ ಚಿನ್ನದ ತಗಡುಗಳಲ್ಲಿ ಹುದುಗಿ ನಿಂತಿದ್ದಂತೆ ಕಾಣುವ ಕಂಬಗಳು ಮತ್ತು ಪಟ್ಟೋಳಿಯ (ರೇಷ್ಮೆಬಟ್ಟೆ) ಸರಗೊಂಡೆಯದ ಲೋವೆಯಿಂದ ಅಲಂಕರಿಸಲ್ಪಟ್ಟ ಹಿರಿಯ ಹಜಾರ, ಅಲ್ಲಿಂದ ಮುಂದೆ ಸುರಪನ ಆಸ್ಥಾನಮಂಟಪದ ಪರಿವಿಡಿಯನ್ನೇ ಸೋಲಿಸಿಬಿಡುವಷ್ಟು ಅಂದದ ಚಿತ್ರಶಾಲೆ ಲಕ್ಷ್ಮಿವಿಲಾಸ, ಅದರ ಮುಂದೆ ಒಂದೆಡೆ ದುರ್ಗಾಮಂಟಪ, ಮತ್ತೊಂದೆಡೆ ಗಿರಿಜಾಕಲ್ಯಾಣದ ಕಥೆಯ ಚಾರುತರದ ಚೆಲ್ವಬಿತ್ತರಗಳಂತೆ ಅರಗಿಳಿ ನವಿಲು ಕೋಗಿಲೆ ಕೊಂಚೆ ಕೊಳರ್ವಕ್ಕಿ ಮೊದಲಾದ ಹಕ್ಕಿಗಳ ಪ್ರಣಯಜೀವನವನ್ನೂ ಸುರನಾರಿಯರ ವಿಲಾಸಗಳನ್ನೂ ರೂಪಿಸಿರುವ ಪುತ್ಥಳಿಗಳಿರುವ ಶಾರದಾಮಂಟಪ, ಅದರ ಬಳಿಯಲ್ಲಿಯೇ ಇಂದಿರಾಮಂದಿರ, ಮುಂದೆ ಬಂಗಾರ ಚೌಕಿ, ಮತ್ತೂ ಮುಂದೆ ಮದನವಿಲಾಸ ಇದ್ದುವಂತೆ. ಅರಮನೆಗಳಲ್ಲಿ ಮಣಿಮಯಭವನಗಳೂ ನವರತ್ನದ ತೊಟ್ಟಿಗಳೂ ನಾಟಕಶಾಲೆಗಳೂ ಭೋಜನಶಾಲೆ ಒಳಬೊಕ್ಕಸ ಪೂರ್ಣಭಂಡಾರ ಪೊನ್ನನಿಳಯ ಉಗ್ರಾಣಪಾಕಗಳ ಗೃಹ ಆಯುಧಶಾಲೆಗಳು ಇದ್ದುವಲ್ಲದೆ ಬಿಳಿ ಮತ್ತು ಕೆನ್ನೀರ ಮತ್ತು ಕಟ್ಟಾಣಿತೋರಣದ ಮುತ್ತು ಮೊದಲಾದ ಜಾತಿ ಮುತ್ತುಗಳು, ಸಣ್ಣ ಪವಳ ಕೈಕಟ್ಟಿನ ಪವಳ ಬಣ್ಣಸರದ ಪವಳ ಇವುಗಳಂಥ ಪವಳದ ಪಸರಗಳಿಂದ ಕಣ್ಣು ಕೋರೈಸುವಂತೆ ಗೃಹಾಲಂಕಾರ ಮಾಡುತ್ತಿದ್ದರೆಂದು ಕನ್ನಡ ಕಾವ್ಯಗಳಿಂದ ತಿಳಿಯುತ್ತದೆ. ಕತ್ತುರಿ, ಸೇವಂತಿಗೆ, ದುಂಡುಮಲ್ಲಿಗೆ, ಜಾಜಿ, ಸಂಪಿಗೆ ಮೊದಲಾದ ಹೂಗಳಿಂದ ಮನೆಗಳನ್ನು ಅಲಂಕರಿಸುತ್ತಿದ್ದರಂತೆ. ಸೂಳೆಗೇರಿಯ ಸಾಲುಭವನದ ಮಳಿಗೆಗಳೊಳಗೆ ಗಿಳಿಯ ಪಂಜರ, ಪಾರಿವಾಳಗಳ ಪೊಂಗೂಡು, ಕಳಕಂಠಕೇಕಿಯ ದೇಹಿ ಇವುಗಳೆಲ್ಲ ರಾರಾಜಿಸುತ್ತಿದ್ದುವಂತೆ.

ಕನಕದಾಸರು ತಾವು ಕಂಡ ವಿಜಯನಗರದ ವರ್ಣನೆಯಲ್ಲಿ ಹೊಂದಗಡಿನ ಹೊದಕೆಯ ಮನೆ ಬಹಳ ನೇರ (ಎಂದರೆ ತುಂಬ ಅಚ್ಚುಕಟ್ಟಾದುವುಗಳು) ಮನೆಗಳಿಗೆ ಅಂದವಡೆದ ಪಟ್ಟಸಾಲೆಗಳು, ಮುಂದೆಸೆಯಲಿ ತುಳಸಿಯ ಮಂಟಪ ಎಂದು ಬ್ರಾಹ್ಮಣರ ಕೇರಿಯ ಮನೆಗಳನ್ನು ವರ್ಣಿಸಿದ್ದಾರೆ. ಅರಮನೆ ಸುಂದರವಾಗಿತ್ತು. ಮುಗಿಲನ್ನು ಮುಟ್ಟುವ ಕೋಟೆ ಹೆಬ್ಬಾಗಿಲನ್ನು ಒಳಗೊಂಡಿತ್ತು. ಮುತ್ತಿನ ಚಾವಡಿಯನ್ನು ಮಕರತೋರಣ, ಮಣಿನಿಕರ ಹಿಂಗುಬ್ಬ ಇವುಗಳಿಂದ ಅಲಂಕರಿಸಲಾಗಿತ್ತು. ಜಂತದ ಚಾವಡಿಯಲ್ಲಿ ರಾಜ ಕುಳಿತಿರುವನು ಎಂದು ಅರಮನೆಯನ್ನು ವರ್ಣಿಸಿದ್ದಾರೆ. ಡೊಮಿಂಗೊ ಪೆಯಿಸ್ ಎಂಬುವನು ಈ ಅರಮನೆಯ ದಿವಾನಖಾನೆಯಾದ ಈ ಜಂತದ ಚಾವಡಿಯಲ್ಲಿನ ಕಂಬಗಳು ಮಾತ್ರ ಕಲ್ಲಿನದಾಗಿದ್ದು, ಗೋಡೆಕಂಬ ಜಂತಿ ಹಲಗೆ ಮೊದಲಾದ ಎಲ್ಲವನ್ನೂ ದಂತದಿಂದಲೇ ನಿರ್ಮಿಸಿರುವುದಾಗಿಯೂ ಹೇಳಿದ್ದಾನೆ. ಅಲ್ಲದೆ ಅದರ ತೊಲೆ, ನಾಗವಂದಿಗೆಗಳ ಮೇಲೆ ಗುಲಾಬಿಯ ಹೂಗಳನ್ನೂ ಕಮಲಗಳನ್ನೂ ಕೊರೆಯಲಾಗಿದ್ದು, ಅವುಗಳೂ ಜಂತದಿಂದಲೇ ನಿರ್ಮಿತವಾಗಿದ್ದು ಬಹುಸುಂದರವೂ ಅಮೂಲ್ಯವೂ ಆಗಿದ್ದು ಇಂಥ ಅಲಂಕರಣ ಮತ್ತೆಲ್ಲಿಯೂ ನೋಡಲಿಕ್ಕೆ ದೊರೆಯಲಾರದೆಂದು ಹೇಳುತ್ತಾನೆ.

ಹಿಂದೆ ಅವಿಭಕ್ತ ಕುಟುಂಬ ಪದ್ಧತಿ ರೂಢಿಯಲ್ಲಿದ್ದುದರಿಂದ ದೊಡ್ಡ ದೊಡ್ಡ ಮನೆಗಳು ಸಾಮಾನ್ಯವಾಗಿ ಇದ್ದಿರಬಹುದು. ಈಗಲೂ ಉತ್ತರ ಕರ್ನಾಟಕದ ಕೆಲವೆಡೆ ಉಳಿದುಬಂದಿರುವ ವಾಡೆಗಳಲ್ಲಿ ಪ್ರಾಚೀನ ಮಾದರಿಯ ಶ್ರೀಮಂತರ ಮನೆಗಳ ಸ್ವರೂಪವನ್ನು ಗುರುತಿಸಬಹುದು. ಅವುಗಳಲ್ಲಿ ವಿಶಾಲ ಪಡಸಾಲೆ, ಅಡುಗೆಮನೆ, ದೇವರಮನೆ, ಉಗ್ರಾಣ, ತೊಟ್ಟಿಮನೆಗಳಿರುತ್ತಿದ್ದುವು. ಊಟದ ಮನೆ ವಿಶಾಲವಾಗಿರುತ್ತಿತ್ತು. ಮಾಡು ಹೆಂಚಿನದು. ಕೊಟ್ಟಿಗೆಗಳು ಪ್ರತ್ಯೇಕವಾಗಿರುತ್ತಿದ್ದುವು. ಉತ್ತರ ಕನ್ನಡ ಜಿಲ್ಲೆಯ ಐನಕೈ ಸೋಗೆ ಮನೆ

ಇಂದು ಉಳಿದಿರುವ ಹೆಚ್ಚಿನ ವಾಡೆಗಳು 19ನೆಯ ಶತಮಾನದವು. ಸಹಜವಾಗಿ ಇಲ್ಲಿನ ಗೃಹಾಲಂಕರಣ ಆ ಕಾಲಕ್ಕೆ ಒಗ್ಗುವಂಥದ್ದು. ಮನೆಗಳಲ್ಲಿ ಬಾಗಿಲುವಾಡ, ಕಂಬ, ಲೋವೆ ಮುಂತಾದ ಮರದ ಭಾಗಗಳೆಲ್ಲ ಸುಂದರವಾದ ಕೆತ್ತನೆಗಳಿಂದ ಕೂಡಿರುತ್ತವೆ. ಮುಖ್ಯದ್ವಾರದ ಇಕ್ಕೆಲಗಳ ತೋಳುಗಳಲ್ಲೂ ಮೇಲುಗಡೆ ಜಿಗಿಯುತ್ತಿರುವ ಕುದುರೆ ಮುಂತಾದ ಮರದ ಬೊಂಬೆಗಳನ್ನು ಅಳವಡಿಸಲಾಗಿರುತ್ತದೆ. ಪಡಸಾಲೆಯಲ್ಲಿ ಸಾಮಾನ್ಯವಾಗಿ ಆಗಂತುಕರಿಗಾಗಿ ಒಂದು ಮಂಚ ಇಡುವುದು ಅಥವಾ ಜಮಖಾನ ಹಾಸಿ ಹುಲ್ಲಿನ ಅಥವಾ ಹತ್ತಿಯ ದಿಂಬುಗಳನ್ನಿಡುವುದು ರೂಢಿ. ಬಾಗಿಲಿಗೆ ಮಣಿಮಯವಾದ ತೋರಣ ಇರುತ್ತದೆ. ಗೋಡೆಗಳಲ್ಲಿ ರವಿವರ್ಮನ ಚಿತ್ರಪಟಗಳು ಮತ್ತೆ ಕೆಲವು ಮನೆಗಳಲ್ಲಿ ಕಾಡುಕೋಣ, ಜಿಂಕೆ ಹುಲಿ ಆನೆ ಇವುಗಳ ಕೊಂಬು ಹಾಗೂ ಚರ್ಮ ಇವುಗಳಿಂದ ಅಲಂಕರಿಸುವ ರೂಡಿs ಕಾಣಬಹುದು. ಸಗಣಿಯಿಂದ ಸಾರಿಸಿದ ನೆಲ, ನೆಲದ ಅಂಚಿನ ಗೋಡೆಗೆ ತಾಗಿದಂತೆ ಸುಣ್ಣ ಹಾಗೂ ಕೆಂಪು ಮಣ್ಣಿನ ದಪ್ಪ ದಪ್ಪ ಗೆರೆಯ ಕಾರಣೆ (ಕರೆ), ಗೋಡೆಗಳಿಗೆ ದಪ್ಪ ಬಣ್ಣ ಇವು ಇಲ್ಲಿ ಸಾಮಾನ್ಯ. (ಎಂ.ಜೆ.ಬಿ.)

ಪ್ರಾಚೀನ ಕರ್ನಾಟಕದಲ್ಲಿ ಜನಸಾಮಾನ್ಯರ ಮನೆಗಳು ಯಾವ ರೀತಿಯಲ್ಲಿ ಇದ್ದುವು ಎಂಬುದನ್ನು ತಿಳಿಯಲು ಯಾವ ರೀತಿಯ ಆಧಾರಗಳೂ ದೊರಕುವುದಿಲ್ಲ. ಆದರೆ ಜನಪದ ಸಂಪ್ರದಾಯ ಹಿಂದಿನಿಂದಲೂ ಇದ್ದು ಈಗಲೂ ಹೆಚ್ಚು ಬದಲಾವಣೆ ಇಲ್ಲದೆ ಉಳಿದುಬಂದಿದೆಯಾಗಿ, ಈಗಿನ (ಇತ್ತೀಚಿನ ಬೆಳೆವಣಿಗೆಗಳ ವಿನಾ) ಗ್ರಾಮೀಣ ಗೃಹಗಳ ಸ್ವರೂಪವೇ ಅಂದಿನಿಂದಲೂ ಪ್ರಚಲಿತವಾಗಿರಬೇಕೆಂದು ತಿಳಿಯಬಹುದು. ಗ್ರಾಮೀಣ ಗೃಹಗಳು ಬಹು ಸರಳಕೃತಿಗಳು. ಇವು ಸಾಮಾನ್ಯವಾಗಿ ಚಿಕ್ಕವೂ ವೈವಿಧ್ಯರಹಿತವೂ ಆಗಿರುತ್ತವೆ. ಇವುಗಳಲ್ಲಿ ಅಲಂಕರಣವೂ ಕನಿಷ್ಟ.

ಜನಪದ ಗೃಹಗಳ ಒಂದು ವೈಶಿಷ್ಟ್ಯವೆಂದರೆ ಇವುಗಳ ರಚನೆಯಲ್ಲಿ ಕಂಡುಬರುವ ಪರಿಸರದ ಗಾಢಪ್ರಭಾವ. ಇದನ್ನು ಗೃಹ ರಚನೆಗೆ ಉಪಯೋಗಿಸುವ ವಸ್ತುಗಳಲ್ಲೂ ಮತ್ತು ರಚನೆಯ ಆಕಾರದಲ್ಲೂ ಕಾಣಬಹುದು. ಗೃಹಗಳ ರಚನೆಗೆ ಆಯಾ ಸ್ಥಳದಲ್ಲಿ ಸಿಕ್ಕುವ ತುಟ್ಟಿಯಲ್ಲದ ವಸ್ತುಗಳನ್ನಷ್ಟೇ ಆರಿಸಿಕೊಂಡಿರುವುದಲ್ಲದೆ, ಆಯಾ ಪ್ರದೇಶದ ಹವಾಗುಣಕ್ಕನುಗುಣವಾಗಿ ಸ್ವರೂಪವೂ ಇರುತ್ತದೆ. ಈ ದೃಷ್ಟಿಯಿಂದ ಜನಪದ ಗೃಹಗಳಲ್ಲಿ ಸ್ವಲ್ಪಮಟ್ಟಿಗೆ ಪ್ರಾದೇಶಿಕ ಭಿನ್ನತೆ ಕಂಡುಬರುತ್ತದೆ.

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುವುದರಿಂದ ಇಲ್ಲಿಯ ಜನಪದ ನಿವಾಸಗಳಲ್ಲಿ ಗೋಡೆಗಳು ಕುಳ್ಳಾಗಿ ಇದ್ದು ಚಾವಣಿ ಹೆಚ್ಚು ಇಳಿಜಾರಾಗಿ ಅದರ ಸೂರು ಗೋಡೆಗಿಂತ ತುಂಬ ಮುಂಚಾಚಿರುವಂತೆ ಕಟ್ಟಲಾಗಿರುತ್ತದೆ. ಮಳೆಯ ಇರುಚಲು ಗೋಡೆಗಳ ಮೇಲೆ ಬೀಳಬಾರದೆಂಬುದೇ ಇದರ ಉದ್ದಿಶ್ಯ. ಗೋಡೆಗಳು ಸಾಮಾನ್ಯವಾಗಿ ಮಣ್ಣು ಅಥವಾ ಜಂಬಿಟ್ಟಿಗೆಯವು. ಚಾವಣಿಗಳು (ಇತ್ತೀಚಿಗೆ ಮಂಗಳೂರು ಹೆಂಚು ಬಳಕೆಗೆ ಬಂದಿದೆ) ವಿಶೇಷತಃ ಬಿದಿರು ಅಥವಾ ಮರದಜಂತಿ ಹಂದರದ ಮೇಲೆ ಹುಲ್ಲು, ಗರಿಗಳನ್ನು ಮುಚ್ಚಿಮಾಡಿದವು. ಇಲ್ಲಿಯ ಮನೆಗಳಲ್ಲಿ ಇದ್ದಿಲು ಮುಂತಾದ ಸಾಮಗ್ರಿಗಳನ್ನು ಬೆರಸಿ ಅರೆದು ಮಾಡಿದ ನಯಗಾರೆಯನ್ನು ನೆಲ ಮತ್ತು ಗೋಡೆಯ ಕೆಳಮಟ್ಟಗಳಿಗೆ ಹಚ್ಚುವ ರೂಢಿ ಇದೆ. ಕೆಂಪು ಕಾರಣೆಯ ಸರಳ ಅಲಂಕರಣವೂ ಉಂಟು. ಮನೆಗಳ ಮುಂದೆ ಹೆಬ್ಬಾಗಿಲ ಇಕ್ಕೆಲದಲ್ಲಿ ಜಗಲಿ, ಒಳಗೆ ಹಜಾರ ಮತ್ತು ವಿವಿಧ ಗೃಹಉದ್ದೇಶಗಳಿಗಾಗಿ ಬಳಸಲು ಬೇರೆ ಬೇರೆ ಕೋಣೆಗಳಿರುತ್ತವೆ. ಬಹು ಸರಳವಾದ ಗುಡಿಸಲುಗಳು ಆಕಾಶದಲ್ಲಿ ಸುಮಾರು ಇದೇ ರೀತಿಯಿದ್ದರೂ ಒಳ ಆವರಣದಲ್ಲಿ ಹೆಚ್ಚು ವಿಂಗಡಣೆಗಳಿರುವುದಿಲ್ಲ.

ಉತ್ತರ ಕರ್ನಾಟಕದ ಬಯಲು ಪ್ರದೇಶ ಹಾಗೂ ದಕ್ಷಿಣ ಕರ್ನಾಟಕದ ಮಳೆ ಕಡಿಮೆ ಇರುವ ಚಿತ್ರದುರ್ಗ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆಗಳು ಮತ್ತು ಅವುಗಳ ಸುತ್ತಲ ಪ್ರದೇಶಗಳಲ್ಲಿ ಆಯಾಕಾರದ ಮಾಳಿಗೆ ಮನೆಗಳು ವಿಶೇಷ. ಇವುಗಳ ಗೋಡೆಗಳು ಹೆಚ್ಚು ಮಟ್ಟಿಗೆ ಮಣ್ಣಿನವು. ಕಲ್ಲು ವಿಶೇಷವಾಗಿ ದೊರಕುವ ಕೆಲವೆಡೆಗಳಲ್ಲಿ ಕಲ್ಲುಚೂರುಗಳನ್ನು ಜೋಡಿಸಿ ಮಾಡಿದ ಗೋಡೆಗಳೂ ಇರುತ್ತವೆ. ಹೆಬ್ಬಾಗಿಲು ಕಿರಿದು ಮತ್ತು ಕುಳ್ಳು. ಒಳಭಾಗದಲ್ಲಿ ಆವಶ್ಯಕತೆಗೆ ತಕ್ಕಂತೆ ಕೋಣೆಗಳೂ ಹಜಾರವೂ ಇರುತ್ತವೆ. ಗೋಡೆಗಳ ಮೇಲೆ ತೊಲೆ ಮತ್ತು ಅಡ್ಡಜಂತಿಗಳನ್ನು ಇಟ್ಟು ಹಂದರ ಮಾಡಿ, ಮೇಲೆ ಕಡ್ಡಿ ಸೊಪ್ಪುಗಳನ್ನು ಜೋಡಿಸಿ, ಅದರ ಮೇಲೆ ಮಣ್ಣನ್ನು ದಪ್ಪಗೆ ಹರವಿ ಮಾಡಿದ ಚಾವಣಿ ಇರುತ್ತದೆ. ಗೋಡೆಗಳು ಇರುಚಲಿನಿಂದ ನೆನೆಯದಂತೆ, ಅವುಗಳ ಮೇಲಂಚಿನಲ್ಲಿ ಮುಂಚಾಚುವ ಲೋವೆ ಕಲ್ಲುಗಳನ್ನೋ ಭೂತಾಳೆ ಪಟ್ಟಿಗಳನ್ನೋ ಜೋಡಿಸಿರುತ್ತಾರೆ. ಮೇಲೆ ಹರವಿದ ಮಣ್ಣು ಮಳೆಯಿಂದ ಕೊಚ್ಚಿಹೊಗದಂತಿರಲೂ ಬಿದ್ದ ನೀರು ಕಟ್ಟಡಕ್ಕೆ ಅಪಾಯವಾಗದಂತೆ ಒಂದೆಡೆಯಿಂದ ಹರಿದುಹೋಗಲೂ ಸುತ್ತಂಚಿನಲ್ಲಿ ಮಣ್ಣುದಿಂಡನ್ನೂ ಅಲ್ಲಲ್ಲಿ ಮಣ್ಣಿನ ದೋಣಿಗಳನ್ನೂ ಒದಗಿಸಿರುತ್ತಾರೆ. ಈ ಕಟ್ಟಡಗಳಿಗೆ ಕಿಟಕಿಗಳಿರುವುದಿಲ್ಲವಾದರೂ ಇದಕ್ಕೆ ಅಪವಾದಗಳೂ ಇಲ್ಲದಿಲ್ಲ. ಮನೆಗಳಿಗೆ ಮಣ್ಣುಗಾರೆ, ಸುಣ್ಣ, ಕಾರಣೆಯ ಪರಿಷ್ಕರಣವಿರುತ್ತದೆ. ಕೋಲಾರ, ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗ್ರಾನೈಟ್ ಚಪ್ಪಡಿಗಳು ಬಹುವಾಗಿ ದೊರಕುವುದರಿಂದ ಇಲ್ಲಿಯ ಮಾಳಿಗೆ ಮನೆಗಳಲ್ಲಿ ಮಣ್ಣಿನ ಬದಲು ಈ ಕಲ್ಲಿನ ಉಪಯೋಗವೇ ಹೆಚ್ಚು. ಮೊದಲು ಕಲ್ಲಿನ ಕಂಬಗಳನ್ನು ನೆಟ್ಟು, ಅದೇ ಕಲ್ಲಿನ ತೊಲೆಗಳನ್ನು ಜೋಡಿಸಿ, ಮೇಲೆ ಚಪ್ಪಡಿಗಳನ್ನು ಹಾಸುವ ಪದ್ಧತಿ ಇಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಮಳೆ ಕಡಿಮೆ ಬೀಳುವ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾಳಿಗೆ ಮನೆಗಳಲ್ಲದೆ ವೃತ್ತಾಕಾರದ ತಳವಿನ್ಯಾಸವಿರುವ ಗುಡಿಸಲುಗಳೂ ಇವೆ. ಇವು ವಿಶೇಷವಾಗಿ ಒಂದೇ ಕೋಣೆಯವು. ಗೋಡೆ ಮಣ್ಣಿನದು. ಮೇಲೆ ಬಿದಿರಿನ ಅಥವಾ ಕಡ್ಡಿಗಳ ಹಂದರದ ಮೇಲೆ ಹುಲ್ಲು ಮುಚ್ಚಿದ ಶಂಕುತಲೆಯಾಕಾರದ ಚಾವಣಿ ಇರುತ್ತದೆ.

ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿನ ಜನಪದ ನಿವಾಸಗಳು ಸಾಮಾನ್ಯವಾಗಿ ಆಯಾಕಾರದ ಮಣ್ಣುಗೋಡೆಯ ಮನೆಗಳು. ಇವುಗಳಲ್ಲೂ ಮುಂದೆ ಬಾಗಿಲಿನ ಇಕ್ಕೆಲಗಳಲ್ಲಿ ಜಗಲಿ, ಒಳಗೆ ಹಜಾರ ಮತ್ತು ಅನೇಕ ಕೋಣೆಗಳಿರುತ್ತವೆ. ದೊಡ್ಡ ಮನೆಗಳಲ್ಲಿ ಪುಟದ ಗೋಡೆ (ಅಂದರೆ ಕಲಸಿದ ಮಣ್ಣಿನ ದಪ್ಪ ಉಂಡೆಗಳನ್ನು ಒಂದರ ಮೇಲೊಂದು ಪೇರಿಸಿ ಎತ್ತಿದ ಗೋಡೆ) ಸಾಮಾನ್ಯ. ಬಹು ಎತ್ತರವಾದ ಗೋಡೆಗಳ ಆವಶ್ಯಕತೆ ಇದ್ದಾಗ ಅಥವಾ ಚಿಕ್ಕ ಮನೆಗಳನ್ನು ಕಟ್ಟುವಾಗ ತಡಿಕೆಗೋಡೆಯನ್ನು ಅಂದರೆ, ಬಿದಿರಿನ ಕಂಬಗಳಿಗೆ ಬಿಗಿದ ಬಿದಿರು ದಬ್ಬೆಗಳ ಹಂದರದ ಮೇಲೆ ಕಲಸಿದ ಮಣ್ಣನ್ನು ಮೆತ್ತಿ ಮಾಡಿದ ತೆಳುಗೋಡೆಯನ್ನು ಅಳವಡಿಸುವುದುಂಟು. ಮನೆಗಳ ಚಾವಣಿ ಸಾಮಾನ್ಯವಾಗಿ ಇಪ್ಪಾರು, ಪಕ್ಕದ ಗೋಡೆಗಳ ಎತ್ತರದ ಭಾಗದಲ್ಲಿ ಒಂದು ಬೆಮ್ಮರವನ್ನು ಇಟ್ಟು, ಹಾರು ಎರಡೂ ಕಡೆ ಇಳಿಜಾರಾಗಿರುವಂತೆ ಮಾಡಲಾಗಿರುತ್ತದೆ. ಈ ಹಾರುಗಳು ಬೊಂಬು, ಗಳುಗಳಿಂದ ಆದ ಹಂದರಗಳು, ತೆಂಗಿನ ಗರಿಯಿಂದ ಹೆಣೆದ ಮಟ್ಟಾಳೆಯನ್ನು ಅಥವಾ ಮಣ್ಣಿನ ಅರೆಕೊಳವೆ ಆಕೃತಿಯ ನಾಡಹೆಂಚುಗಳನ್ನು ಮೇಲೆ ಮುಚ್ಚಲು ಉಪಯೋಗಿಸಲಾಗುತ್ತದೆ. ಕೆಲವೆಡೆ ಸೋಗೆ ಮತ್ತು ಹುಲ್ಲನ್ನೂ ಬಳಸುವುದುಂಟು. ಮಣ್ಣಿನ ತಡಿಕೆ ಅಥವಾ ಪುಟದ ಗೋಡೆಗಳನ್ನು ಆಯಾಕಾರದಲ್ಲಿ ಕಟ್ಟಿ ಒಂದು ಗೋಡೆಯನ್ನು ಎತ್ತರಕ್ಕೆ ಮಾಡಿ ಅದಕ್ಕೆ ಸಮಕೋನದಲ್ಲಿರುವ ಗೋಡೆಗಳನ್ನು ಇಳಿಜಾರಾಗಿರುವಂತೆ ರೂಪಿಸಿ ಇದರ ಮೇಲಿನ ಚಾವಣಿ ಒಂದೇ ಕಡೆಗೆ ಇಳಿಜಾರಾಗಿರುವಂತೆ ಮಾಡಿದ ಒಪ್ಪಾರು ಕಟ್ಟಡಗಳೂ ಅಲ್ಲಲ್ಲಿ ಕಂಡುಬರುತ್ತವೆ. ಆದರೆ ಇಂಥ ಕಟ್ಟಡಗಳನ್ನು ದನ, ಎಮ್ಮೆಗಳನ್ನು ಕಟ್ಟಲು ಕೊಟ್ಟಿಗೆಯಾಗಿ ಉಪಯೋಗಿಸುವುದೇ ಹೆಚ್ಚು. ಒಂದು ವಿಶಿಷ್ಟ ರೀತಿಯ ವಿಶೇಷವಾಗಿ ಸ್ವಲ್ಪ ಸ್ಥಿತಿವಂತರಿಗೇ ಸೇರಿದ ತೊಟ್ಟಿಮನೆಗಳು ಕರ್ನಾಟಕದ ಹಲವೆಡೆಗಳಲ್ಲಿವೆ. ಇವು ರಚನಾವಿಧಾನದಲ್ಲಿ ಇತರವಂತೆಯೇ ಇದ್ದರೂ ವಿನ್ಯಾಸ ಮಾತ್ರ ಸ್ವಲ್ಪ ವ್ಯತ್ಯಾಸವಾಗಿರುತ್ತದೆ. ಇವುಗಳಲ್ಲಿ ಆಯ ಅಥವಾ ಚೌಕತಳ ವಿನ್ಯಾಸವಿದ್ದು ಮಧ್ಯೆ ಒಂದು ತೆರೆದ (ಮುಚ್ಚು ಇಲ್ಲದ) ತೊಟ್ಟಿ ಇರುತ್ತದೆ. ತೊಟ್ಟಿಯ ಸುತ್ತಲೂ ಪಡಸಾಲೆ, ಅದರ ಸುತ್ತಲೂ ಕೋಣೆಗಳನ್ನು ವ್ಯವಸ್ಥೆ ಮಾಡಲಾಗಿರುತ್ತದೆ. ಮುಂದೆ ಮುಂಬಾಗಿಲಿನ ಇಕ್ಕೆಲಗಳಲ್ಲಿ ಜಗಲಿಗಳಿರುತ್ತವೆ. ಈ ತೊಟ್ಟಿ ಮನೆಗಳು ವಿಶಾಲವಾಗಿದ್ದು, ಒಂದು, ಎರಡು ಅಥವಾ ಮೂರು ಅಂಕಣಗಳ ತೊಟ್ಟಿಮನೆಗಳು ಇತ್ಯಾದಿಯಾಗಿ ವಿವಿಧ ಪರಿಮಾಣಗಳಲ್ಲಿರುತ್ತವೆ. (ಎಸ್.ಎನ್.)

ಜನಪದ ಗೃಹಾಲಂಕರಣ ಬಹು ಸರಳ. ಸುಣ್ಣ ತೊಡೆಯುವುದು ಸಾಮಾನ್ಯವಾಗಿ ಎಲ್ಲೆಡೆಯೂ ಕಂಡುಬರುತ್ತದೆ. ವರ್ಷಕ್ಕೊಮ್ಮೆ ಅಥವಾ ಹಬ್ಬಹರಿದಿನಗಳಲ್ಲಿ ನೀರಿನಲ್ಲಿ ಸುಣ್ಣವನ್ನು ಗಟ್ಟಿಯಾಗಿ ಕಲೆಸಿ, ಸಣ್ಣಕುಂಚದಿಂದ ತೊಟ್ಟಿಯ ಅಂಚು, ಗೋಡೆಯ ಕೆಳಭಾಗ ಕಂಬದ ಕೆಳಗೆ ನೆಲವನ್ನು ಬಿಟ್ಟು ಒಂದಂಗುಲ ಎತ್ತರಕ್ಕೆ ಒಂದೆರಡು ಇಂಚು ಅಗಲದ ಪಟ್ಟಿಗಳನ್ನೆಳೆಯುವ ರೂಢಿ ಅಲ್ಲಲ್ಲಿ ಕಂಡುಬರುತ್ತದೆ. ಹಳ್ಳಿಗಳಲ್ಲಿ ಇದಕ್ಕೆ ಕಿರುಸುಣ್ಣ ಎಂದು ಹೇಳುತ್ತಾರೆ. ಚಂದ್ರದಿಂದ ರಂಗೋಲಿ ಬಿಡುವುದು ಹಳ್ಳಿಗರ ಗೃಹಾಲಂಕರಣದ ಮತ್ತೊಂದು ವಿಧಾನ. ಚಂದ್ರವನ್ನು ನೀರಿನಲ್ಲಿ ಕರಗಿಸಿ, ತೊಟ್ಟಿ ಮನೆಗಳಲ್ಲಿ ಈಚಲುಗರಿಯ ಸೋಗೆಗಳಿಂದ ಮಾಡಿದ ಕುಂಚದ ಮೂಲಕ ಅಚ್ಚುಕಟ್ಟಾಗಿ ಎರಡೆರಡು ಎಳೆಗಳನ್ನು ಎಳೆಯುತ್ತಾರೆ. ಗ್ರಾಮಾಂತರ ಜನ ಇದನ್ನು ಕಾರ್ಲಿ (ಕರೆ) ಬಿಡುವುದು ಎನ್ನುತ್ತಾರೆ. ಕೆಮ್ಮಣ್ಣಿನಿಂದ ಹೊಸ್ತಿಲು ಸಾರಿಸುವುದು ಅವರ ಗೃಹಾಲಂಕರಣದ ಮತ್ತೊಂದು ವಿಧಾನ. ಧೂಳಿನಂತಿರುವ ಕೆಮ್ಮಣ್ಣನ್ನು ನೀರಿನಲ್ಲಿ ಗಟ್ಟಿಯಾಗಿ ಕಲಸಿ ಮನೆಯ ಹೊಸ್ತಿಲು ಮತ್ತು ಬಾಗಿಲಿನ ಚೌಕಟ್ಟಿನ ತಳಭಾಗಗಳಿಗೆ ಆರು ಅಂಗುಲ ಎತ್ತರಕ್ಕೆ, ಸಾರಿಸುತ್ತಾರೆ. ನೆಲಕ್ಕೆ ಸಗಣಿ ಸಾರಿಸುವುದು ಹೆಚ್ಚು. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಣ್ಣಿನ ನೆಲಕ್ಕೆ ಒಂದಂಗುಲ ಎತ್ತರಕ್ಕೆ ಮರಳು ಹಾಗೂ ಮಣ್ಣು ತುಂಬಿ, ಅದರ ಮೇಲೆ ಗೇರುಬೀಜದ ಎಣ್ಣೆಯನ್ನು ಬಳಿದು ಸಾರಣೆ ಮಾಡುತ್ತಾರೆ. ಅನಂತರ ಸಾಕಷ್ಟು ತೆಂಗಿನ ಹೂವನ್ನು ತೆಗೆದು, ತೆಂಗಿನ ಸಿಪ್ಪೆಯ ಸಹಾಯದಿಂದ ನೆಲವನ್ನು ಉಜ್ಜಿದರೆ, ನೆಲವು ಕರ್ರಗಿನ ಸಿಮೆಂಟಿನಂತೆ ಮಿರುಗುತ್ತದೆ. ಇದು ಗುಡಿಸಿಲುಗಳ ಅಂದವನ್ನು ಹೆಚ್ಚಿಸುತ್ತದೆ.

ಕೆಲವೆಡೆ ಗೊಂಬೆಗಳಿಂದ ಮನೆಗಳನ್ನು ಸಿಂಗರಿಸುವ ರೂಢಿ ಇದೆ. ಮಣ್ಣಿನಿಂದ ಮಾಡಿ ಬಣ್ಣ ಹಚ್ಚಿದ ಗಿಳಿ, ಆನೆ, ಬಸವ, ಹುಲಿ, ಜಿಂಕೆ ಮುಂತಾದ ಗೊಂಬೆಗಳನ್ನು ನಡುವೆ ಕೃಷ್ಣ, ಅಕ್ಕಪಕ್ಕದಲ್ಲಿ ಮರದ ಗಿಳಿಗಳು, ಹಾಗೆಯೇ ಬಸವ, ಹುಲಿಮುಖ, ಆನೆಮುಖ, ಜಿಂಕೆಮುಖ ಹೀಗೆ ಸಾಲಾಗಿ ಗೋಡೆಗಳಿಗೆ ನೇತುಹಾಕಿ ಗೃಹವನ್ನು ಅಲಂಕರಿಸುತ್ತಾರೆ. ಕೆಲವು ಮನೆಗಳಲ್ಲಿ ಮರದಿಂದ ಮಾಡಿದ ಕುದುರೆಮುಖವನ್ನು ಗೋಡೆಗೆ ಅಂಟಿಸಿ ಅದರ ಅಕ್ಕಪಕ್ಕಗಳಲ್ಲಿ ಗಿಳಿಗಳನ್ನು ಅಂಟಿಸುವುದುಂಟು. ಜಿಂಕೆಕೊಂಬನ್ನು ನಯಗೊಳಿಸಿ ಒಳ್ಳೆಯ ಮರದ ಹಲಗೆಯಲ್ಲಿ ಪ್ರಾಣಿಮುಖದ ಆಕಾರ ಬರುವಂತೆ ರೂಪಿಸಿ ಅದರಲ್ಲಿ ಕೊಂಬನ್ನು ಸೇರಿಸಿ ಗೋಡೆಗೆ ತೂಗುಹಾಕುವುದುಂಟು. ಮೂರು ಗಿಳಿಗಳನ್ನೊಳಗೊಂಡ ನಿಲುವನ್ನು ಗೋಡೆಗೆ ತೂಗುಹಾಕುವುದೂ ಉಂಟು. ಬೇಟೆಯ ಹವ್ಯಾಸವುಳ್ಳವರ ಮನೆಗಳಲ್ಲಿ ಹುಲಿ, ಸಿಂಹಗಳ ಚರ್ಮವನ್ನೂ ಕಾಡುಕೋಣದ ಕೊಂಬು, ಆನೆಯ ದಂತ ಇವುಗಳನ್ನೂ ಗೋಡೆಗೆ ತೂಗುಹಾಕುವುದುಂಟು. ಬತ್ತದ ಗೊನೆಗಳು ಚೆನ್ನಾಗಿ ಮಾಗಿದಾಗ, ತೆನೆಗಳನ್ನು ಕತ್ತರಿಸಿ, ಅವುಗಳನ್ನು ಒಂದೇ ಸಮನಾಗಿ ಜೋಡಿಸಿ, ಹೆಣೆದು ಗಂಟೆಯಾಕಾರದ ಗುಚ್ಚವನ್ನು ತಯಾರಿಸಿ ದೇವರ ಕೋಣೆಯಲ್ಲಿ ದೇವರ ಪಟದ ಆ ಕಡೆ ಈ ಕಡೆಗಳಲ್ಲಿ ತೂಗಿಸುವುದುಂಟು. ಬತ್ತದ ತೆನೆಗಳನ್ನು ಕೆಳಗೆ ತೂಗುಬಿಟ್ಟು, ಒಂದಕ್ಕೊಂದು ಹೆಣೆದು ಬತ್ತದ ತೋರಣವನ್ನು ಮಾಡಿ ಬಾಗಿಲಿಗೆ ಕಟ್ಟುವುದೂ ಉಂಟು. ಹಳ್ಳಿಗಳಲ್ಲಿ ಇದನ್ನು ಬಾಗಿಲು ಬತ್ತ ಎನ್ನುತ್ತಾರೆ. ಹಸುರು ಗಿಡಗಳ ಮೂಲಕ ಕಂಗೊಳಿಸುತ್ತಿರುವ ಒಳ ಗೃಹಾಲಂಕರಣ

ಸ್ವಲ್ಪ ಅನುಕೂಲವಂತರ ಮನೆಗಳಲ್ಲಿ ಬಳೆಗಳ ಚೂರು ಹಾಗೂ ಸಣ್ಣ ದೊಡ್ಡ ಮಣಿಗಳಿಂದ ಬಾಗಿಲುತೋರಣವನ್ನು ಮಾಡಿ ಬಾಗಿಲಿಗೆ ಕಟ್ಟಿ ಅದರ ಸರಪಳಿಗಳನ್ನು ಚಿತ್ರಪಟಗಳ ಮೇಲೆ ತೂಗಬಿಡುವುದು. ಬಣ್ಣಬಣ್ಣದ ಸಣ್ಣ ಮಣಿಗಳಿಂದ ಮಾಡಿದ ಸರಸ್ವತಿ, ಲಕ್ಷ್ಮಿ, ಕಾಮಧೇನು, ಪಟ್ಟದ ಆನೆ, ಪಟ್ಟದ ಕುದುರೆ ಮುಂತಾದ ರಚನೆಗಳನ್ನೊಳಗೊಂಡಂತೆ ವಿವಿಧ ನಮೂನೆಯ ಚಿತ್ತಾಕರ್ಷಕ ತಟ್ಟೆಗಳನ್ನು ಗೋಡೆಗಳಲ್ಲಿ ಅಲಂಕಾರಕ್ಕಾಗಿ ತೂಗುಹಾಕುವುದು. ಕಸೂತಿ ಹಾಕಿದ ಕೊಕ್ಕೆ ಸೂಜಿಯಿಂದ ಹೆಣೆದ ಪರದೆಗಳನ್ನು ಬಾಗಿಲುಗಳಿಗೆ ಇಳಿಬಿಡುವುದು. ಮುಖ್ಯ ಹಜಾರಗಳಲ್ಲಿ ಕೆತ್ತನೆ ಕೆಲಸಗಳಿಂದ ಅಲಂಕರಿಸಿದ ಅತ್ಯುತ್ತಮ ಮರದಿಂದ ಮಾಡಿದ ಆಕರ್ಷಕ ಚಿತ್ರಗಳನ್ನು ಬಿಡಿಸಿದ ಚೌಕದ ಹಲಗೆಯನ್ನು ಮಾಡಿಗೆ ಮೊಳೆಗಳಿಂದ ಕೂರಿಸುವುದು, ಕುಸುರಿ ಕೆಲಸದ ಕಂಬಗಳಿಗೆ ಬೆಳ್ಳಿಯ ಹೂಗಳನ್ನು ಅಂಟಿಸುವುದು, ಹಿತ್ತಾಳೆಯ ರೇಕುಗಳನ್ನು ಬಿಚ್ಚಿ ಎಳೆಯುವುದು ಮುಂತಾದವನ್ನು ಕಾಣಬಹುದು. (ಎಂ.ಜೆ.ಬಿ.)

ಕರ್ನಾಟಕಕ್ಕೆ ಐರೋಪ್ಯ ಸಂಪರ್ಕ ಒದಗಿಬಂದ ಕಾಲದಿಂದ ಇಲ್ಲಿನ ಗೃಹನಿರ್ಮಾಣದ ತಂತ್ರ ಮತ್ತು ಸ್ವರೂಪದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಂಡುವು. ಟಿಪ್ಪುಸುಲ್ತಾನನ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ಕಟ್ಟಿದ ಅವನ ಅರಮನೆ, ಬೆಂಗಳೂರಿನ ಅರಮನೆ ಮುಂತಾದೆಡೆಗಳಲ್ಲಿನ ಐರೋಪ್ಯ ರೀತಿಯ ಪಾವಟಿಗೆ, ಟೆರೆಸ್ ಚಾವಣಿ ಇವುಗಳು ಬಹುಶಃ ಫ್ರೆಂಚ್ ತಂತ್ರಜ್ಞರ ಮೂಲಕ ಬಳಕೆಗೆ ಬಂದಿತ್ತು. ಆದರೆ ಐರೋಪ್ಯ ಗೃಹನಿರ್ಮಾಣತಂತ್ರದ ಪ್ರಭಾವ ದಿನೇ ದಿನೇ ವರ್ಧಿಸಲಾರಂಭವಾದುದು 19ನೆಯ ಶತಮಾನದ ಆದಿಭಾಗದಿಂದ. ಶ್ರೀರಂಗಪಟ್ಟಣ, ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಬೆಳಗಾಂವಿ ಪಟ್ಟಣಗಳಲ್ಲಿ ಎಲ್ಲಾ ರೀತಿಯ ದೊಡ್ಡ ಗೃಹಗಳು ಹೆಚ್ಚು ಮಟ್ಟಿಗೆ ಐರೋಪ್ಯ ಅಧಿಕಾರಿಗಳಿಗೆ ನಿರ್ಮಿತವಾದುವು. ಮೈಸೂರು, ಬೆಂಗಳೂರು ಮೊದಲಾದೆಡೆಗಳಲ್ಲಿ ಈ ರೀತಿಯ ಮನೆಗಳನ್ನು ಕಟ್ಟುವುದು ಉನ್ನತಸ್ಥಾನದ ಒಂದು ಚಿಹ್ನೆಯಾಗಿ ಅನೇಕ ಸ್ಥಳೀಯ ಶ್ರೀಮಂತರೂ ಆ ವಿಧಾನಗಳನ್ನು ಅನುಕರಿಸಲಾರಂಭಿಸಿದರು. ಹಿಂದಿನ ಕಾಲದಲ್ಲಿ ಮನೆಗಳ ಮುಂದೆ ಜಗಲಿಗಳಿದ್ದು ಅವು ಬೀದಿಯೆಡೆಗೆ ತೆರೆದುಕೊಂಡಂತಿದ್ದು ಕಟ್ಟಡಗಳು ಬಹುಸಾಮಾನ್ಯವಾಗಿದ್ದರೆ, ಈಗ ದೊಡ್ಡ ಸುತ್ತುಗೋಡೆ ಇರುವ ಆವರಣದ ಮಧ್ಯದಲ್ಲಿ ಮನೆಯನ್ನು ನಿರ್ಮಿಸಿ ಸುತ್ತಲೂ ತೋಟ ಬೆಳೆಸುವ ಅಥವಾ ಮನೆಯ ಮುಂದೆ ಸ್ವಲ್ಪ ಜಾಗವನ್ನು ಬಿಟ್ಟು ಕಾಂಪೌಂಡ್ ಕಟ್ಟಿ, ಮನೆ ರಸ್ತೆಯಿಂದ ಸ್ವಲ್ಪ ಹಿಂದೆ ಇರುವಂತೆ ಕಟ್ಟುವ ಸಂಪ್ರದಾಯ ವಿಶೇಷವಾಗಿ ಬೆಳೆಯಿತು. ಗೃಹರಚನೆಯಲ್ಲಿ ವರಾಂಡ, ದೊಡ್ಡ ಹಜಾರ, ಅಡುಗೆಕೋಣೆ, ಓದುವ ಕೋಣೆ, ಮಲಗುವ ಕೋಣೆ ಹೀಗೆ ಪ್ರತ್ಯೇಕ ಉದ್ದೇಶಗಳಿಗಾಗಿ ಪ್ರತ್ಯೇಕ ಕೋಣೆಗಳನ್ನು ದೊಡ್ಡದಾಗಿ ಅಳವಡಿಸುವ ರೂಢಿ ಬಂತು. ತೊಟ್ಟಿ ಮನೆಗಳಿಗೆ ಬದಲಾಗಿ ಪೂರ್ಣ ಮುಚ್ಚಿದ ಮಾಳಿಗೆಯ ಮನೆಗಳನ್ನು ಕಟ್ಟುವುದೂ ಜಂತಿಗಳನ್ನು ಗೋಡೆಗಳ ಮೇಲೆ ಅಡ್ಡಡ್ಡವಾಗಿ ಹಾಸಿ ಮೇಲೆ ಇಟ್ಟಿಗೆ ಚದರಗಳನ್ನು ಒತ್ತಾಗಿ ಜೋಡಿಸಿ ಮಾಡಿದ ಮಟ್ಟಚಾವಣಿಯನ್ನು (ಮದ್ರಾಸ್ ಟೆರೇಸ್) ಹಾಕುವುದೂ ರೂಢಿಗೆ ಬಂದುವು. ಕೆಲವೆಡೆ ಎರಡು ಮೂರು ಅಂತಸ್ತಿನ ಮನೆಗಳೂ ರಚಿತವಾದುವು. ಮನೆಗಳ ಮುಂಭಾಗದಲ್ಲಿ ಐರೋಪ್ಯ ರೀತಿಯ ಡೋರಿಕ್, ಕೋರಿಂಥಿಯನ್ ಮೊದಲಾದ ಕಂಬಗಳನ್ನು ಅಳವಡಿಸಿರುವುದೂ ಅಲ್ಲಲ್ಲಿ ಕಂಡುಬರುತ್ತದೆ. 19ನೆಯ ಶತಮಾನದ ಗೃಹನಿರ್ಮಾಣದಲ್ಲಿ ಕಂಡುಬಂದ ಇನ್ನೊಂದು ಮುಖ್ಯ ಬದಲಾವಣೆ ಮಂಗಳೂರು ಹೆಂಚಿನ ಅಳವಡಿಕೆ. ಬಾಸೆಲ್ ಮಿಶನ್‍ರವರಿಂದ 1865ರಲ್ಲಿ ಮಂಗಳೂರಿನಲ್ಲಿ ಮೊದಲ ಮಂಗಳೂರು ಹೆಂಚು ಕಾರ್ಖಾನೆ ಪ್ರಾರಂಭವಾಯಿತು. ಇದಕ್ಕೆ ಸ್ವಲ್ಪ ಮುಂಚೆಯೇ ಪ್ಲೆಬಿತ್ ಎಂಬ ಆಂಗ್ಲರು ಮಂಗಳೂರು ಹೆಂಚನ್ನು ತಯಾರಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಮಂಗಳೂರಿನ ಹಲವು ಕಾರ್ಖಾನೆಗಳು ಹೆಂಚು ತಯಾರಿಕೆಯನ್ನು ತಯಾರಿಸಲಾರಂಭಿಸಿದ ಕಾಲದಿಂದ ಕರ್ನಾಟಕದ ಎಲ್ಲೆಡೆಯೂ ಇದು ಬಳಕೆಗೆ ಬಂತು. ಅನಂತರ ಬೆಂಗಳೂರು ಮೊದಲಾದ ಇತರೆಡೆಗಳಲ್ಲೂ ಇಂಥ ಕಾರ್ಖಾನೆಗಳು ಸ್ಥಾಪಿತವಾದವು.

20ನೆಯ ಶತಮಾನದಲ್ಲಿ ಕಬ್ಬಿಣ, ಸಿಮೆಂಟ್, ಮೊಸಾಯಿಕ್, ಟೈಲ್ಸ್, ಗ್ರಾನೈಟ್, ಮಾರ್ಬಲ್ ಮೊದಲಾದ ಹೊಸ ರಚನಾ ಸಾಮಗ್ರಿಗಳು ಬಳಕೆಗೆ ಬಂದುದರಿಂದ ಮನೆಗಳ ರಚನಾ ತಂತ್ರವೂ ಸ್ವರೂಪವೂ ಅಗಾಧವಾಗಿ ಬದಲಾವಣೆಯಾಗಿದೆ. ಐರೋಪ್ಯ ನಾಗರಿಕತೆಯ ಪ್ರಭಾವವೂ ಈ ಕಾಲದಲ್ಲಿ ಹೆಚ್ಚಾದುದರಿಂದ ಜನರ ಜೀವನ ವಿಧಾನವೂ ಬದಲಾಗುತ್ತ ಬಂದು ಅದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಮನೆಗಳ ನಿರ್ಮಾಣ ಮಾಡುವುದು ಇಂದಿನ ಪ್ರವೃತ್ತಿ. ಮನೆಗಳನ್ನು ಕಟ್ಟುವುದೇ ಒಂದು ಉದ್ಯಮವಾಗಿ ವಿನ್ಯಾಸಕಾರರು, ಕಟ್ಟುವವರು ಇವರ ಒಂದು ತಾಂತ್ರಿಕವರ್ಗ ಬೆಳೆದಿದೆ. ಮನೆಗಳ ನವೀನತೆ ವೈವಿಧ್ಯಗಳ ಎಡೆಗೆ ಗಮನ ಹೆಚ್ಚಾಗಿದೆ. ಇದರ ಜೊತೆಯಲ್ಲೇ ದೊಡ್ಡ ಪಟ್ಟಣಗಳ ಬೆಳೆವಣಿಗೆ, ಜನಸಂಖ್ಯೆಯ ಹೆಚ್ಚಳ ಇತ್ಯಾದಿ ಕಾರಣಗಳಿಂದ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಫ್ಲಾಟ್ ರೀತಿಯ ಮನೆಗಳನ್ನು ರಚಿಸುವುದು, ದೊಡ್ಡ ಮನೆಗಳನ್ನು ವಿಂಗಡಿಸಿ ವಠಾರಗಳನ್ನು ಮಾಡುವುದು, ಹಿಮ್ಮನೆಗಳನ್ನು ಜೋಡಿಸುವುದು ಇವೂ ಹೆಚ್ಚಾಗುತ್ತಿವೆ. ಈ ಬದಲಾವಣೆಗಳು ದೊಡ್ಡ ಪಟ್ಟಣ ನಗರಗಳಲ್ಲಿ ಹೆಚ್ಚು. ಗ್ರಾಮಾಂತರ ಪ್ರದೇಶಗಳಲ್ಲಿ ಹಳೆಯ ಜನಪದ ಸಂಪ್ರದಾಯ ಇನ್ನೂ ಸಾಕಷ್ಟು ಉಳಿದಿದೆ. (ಐ.)

ಆಧುನಿಕ ಗೃಹಾಲಂಕರಣ ಸಂಪ್ರದಾಯದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಗೃಹಾಲಂಕರಣ ವಿದ್ಯೆ (ಇಂಟೀರಿಯರ್ ಡೆಕೊರೇಷನ್) ಶಾಸ್ತ್ರರೂಪವಾಗಿ ಬೆಳೆದಿದೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಡಿಪೆÇ್ಲಮಾ ಮತ್ತು ಪದವಿ ಶಿಕ್ಷಣಗಳ ಪಠ್ಯವಿಷಯವೂ ಆಗಿದೆ. ಮನೆಯನ್ನು ಶುಚಿಯಾಗಿಡುವುದು, ಪುಷ್ಪಗಳ ಜೋಡಣೆ, ಮನೆಯ ಅಲಂಕರಣ ಮುಂತಾದುವುಗಳನ್ನು ಗೃಹವಿe್ಞÁನ ಶಿಕ್ಷಣದಲ್ಲಿ ಕಲಿಸುತ್ತಾರೆ. ಇಂದಿನ ಜನ ಅನೇಕ ಮಹಾನಗರಗಳನ್ನು ಕಂಡಿರುತ್ತಾರೆ. ಅಲ್ಲಿನ ಗೃಹಾಲಂಕರಣ ವಿಧಾನಗಳಲ್ಲಿ ಅತ್ಯುತ್ತಮವಾದುದನ್ನು ಆಯ್ದುಕೊಂಡು ತಮ್ಮ ಗೃಹಗಳ ಅಲಕಂರಣಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಮಂಗಳೂರಿನ ವೃತ್ತಾಕಾರದ ವಿಶಿಷ್ಟ ಆಧುನಿಕ ಮಹಡಿಮನೆ

ಸರಳತೆ ಹಾಗೂ ಶುಭ್ರತೆಗೆ ಈಗ ಆದ್ಯತೆ. ಶ್ರೀಮಂತರಾದವರು ಬೆಲೆಬಾಳುವ ಪೀಠೋಪಕರಣಗಳು ಮತ್ತು ನೂತನ ಅಲಂಕರಣ ವಿಧಾನಗಳಿಂದ ಗೃಹವನ್ನು ಅಲಂಕರಿಸುತ್ತಾರೆ. ಮಧ್ಯಮವರ್ಗದವರು, ಬಡವರು ತಮ್ಮ ಮನೆಗಳನ್ನು ತಮ್ಮದೇ ಆದ ರೀತಿಯಲ್ಲಿ ಸರಳವಾಗಿ ಅಲಂಕರಿಸುತ್ತಾರೆ. ಮಧ್ಯಮವರ್ಗದ ಮನೆಗಳಲ್ಲಿ ವರಾಂಡದಲ್ಲಿ ಕೆಲವಾರು ಕುರ್ಚಿಗಳನ್ನೂ ನಡುವೆ ಒಂದು ಚಿಕ್ಕ ಟೀಪಾಯಿ ಅಥವಾ ಮೇಜನ್ನು ಇಡುತ್ತಾರೆ. ಮೇಜಿನ ಮೇಲೆ ಕಸೂತಿ ಕೆಲಸ ಮಾಡಿದ ಅಥವಾ ಬಣ್ಣಬಣ್ಣದ ಬಟ್ಟೆಯನ್ನು ಹಾಸುತ್ತಾರೆ. ಗೋಡೆಗೆ ಸ್ವಾಗತ ಬಯಸುವಂಥ ಚಿತ್ರಪಟವನ್ನು ತೂಗುಹಾಕುತ್ತಾರೆ. ಮನೆಯ ಪಡಸಾಲೆಯಲ್ಲಿ ಸುತ್ತಲೂ ನಾಲ್ಕು ಬೆತ್ತದ ಕುರ್ಚಿಗಳಲ್ಲಿ ಮೆತ್ತಗಿನ ದಿಂಬುಗಳನ್ನೂ ಇಟ್ಟು ನಡುವೆ ಒಂದು ಟೀಪಾಯಿಯನ್ನಿಡುತ್ತಾರೆ. ಗೋಡೆಯಲ್ಲಿ ಕೊರೆದು ಮಾಡಿದ ಕಪಾಟಿನಲ್ಲಿ ಕೆಲವಾರು ಸುಂದರ ಗೊಂಬೆಗಳನ್ನು ಓರಣವಾಗಿಡುತ್ತಾರೆ. ಒಂದು ಮೂಲೆಯಲ್ಲಿ ರೇಡಿಯೊ ಸ್ಟ್ಯಾಂಡು, ಅದರ ಕೆಳಗಡೆ ಪುಸ್ತಕಗಳನ್ನಿಡುವ ಅಲೆಮಾರಿನಲ್ಲಿ ಒಪ್ಪವಾಗಿ ಪುಸ್ತಕಗಳನ್ನು ಜೋಡಿಸಿಡುತ್ತಾರೆ. ಅದರ ಮೇಲ್ಭಾಗದಲ್ಲಿ ಹಾಗೂ ಎರಡು ಗೋಡೆಗಳು ಸೇರುವೆಡೆಯಲ್ಲಿ ಗೊಂಬೆಗಳನ್ನಿಡುವ ಪೀಠವನ್ನಿರಿಸುತ್ತಾರೆ. ಅದರ ಮೇಲ್ಭಾಗದಲ್ಲೊಂದು ಹೂದಾನಿಯನ್ನಿರಿಸುತ್ತಾರೆ. ಅಷ್ಟೇ ಸುಂದರವಾದ ಪ್ರಕೃತಿಸೌಂದರ್ಯದ ಫೋಟೋ ಕ್ಯಾಲೆಂಡರ್‍ಗಳನ್ನೂ ತೂಗುಹಾಕುವುದುಂಟು. ಮತ್ತೆ ಕೆಲವರು ಮಧ್ಯದ ಗೋಡೆಯ ಹತ್ತಿರ ಮಂಚವೊಂದನ್ನು ಹಾಕಿ, ಅದರ ಮೇಲೆ ಮೆತ್ತಗಿನ ಹಾಸಿಗೆಯನ್ನು ಹಾಸುತ್ತಾರೆ. ಮಂಚದ ಒಂದು ತುದಿಯಲ್ಲಿ ಒಂದು ಕಪಾಟನ್ನು ಇನ್ನೊಂದು ಪಕ್ಕದಲ್ಲಿ ಮತ್ತೊಂದು ಕಪಾಟನ್ನಿಟ್ಟು, ಒಂದರಲ್ಲಿ ಕಲಾಪೂರ್ಣ ವಸ್ತುಗಳನ್ನೂ ಮತ್ತೊಂದರಲ್ಲಿ ಪುಸ್ತಕಗಳನ್ನೂ ಇಡುತ್ತಾರೆ. ದೇವರ ಮನೆ ಇದ್ದರೆ ಅದನ್ನು ಸುಂದರವಾಗಿ ಆಲಂಕರಿಸುತ್ತಾರೆ. ಇದರಲ್ಲಿ ಒಂದು ಜಗಲಿ, ಅದರ ಮೇಲೆ ಸುಂದರವಾದ ಮಂಟಪ, ಅದರಲ್ಲಿ ಆಯಾ ಜನರ ಆರಾಧ್ಯ ದೇವರು, ಮಂಟಪದ ಎರಡು ಬದಿಯಲ್ಲಿ ಸದಾ ಉರಿಯುತ್ತಿರುವ ನಂದಾದೀಪಗಳು, ಸುತ್ತ ರಂಗವಲ್ಲಿ ಈ ವ್ಯವಸ್ಥೆ ಸಾಮಾನ್ಯ. ಸುಂದರವಾದ ಬಣ್ಣ ಬಣ್ಣದ ಪುಷ್ಪಗಳಿಂದ ಹೂವಿನ ಹಾರಗಳಿಂದ ದೇವರನ್ನು ಶೃಂಗರಿಸುತ್ತಾರೆ. ಊಟದ ಮನೆಯನ್ನು ಈಗ ಹೆಚ್ಚು ಹೆಚ್ಚು ಅಲಂಕಾರಿಕವಾಗಿ ಇಡುತ್ತಾರೆ. ಮಧ್ಯದಲ್ಲಿ ಊಟದ ಮೇಜು ಕುರ್ಚಿಗಳನ್ನಿಟ್ಟು, ಅದರ ಮೇಲೆ ಅಲಂಕಾರದ ದೃಷ್ಟಿಯಿಂದ ಸುಂದರವಾದ ಬೊಂಬೆಯನ್ನಿಡುತ್ತಾರೆ. ಎರಡೂ ಗೋಡೆಗಳು ಸೇರುವ ಕಡೆಗಳಲ್ಲಿ ಒಂದು ನಿಲುವನ್ನಿಟ್ಟು ಅದರ ಮೇಲೂ ಗೊಂಬೆಗಳನ್ನಿಡುತ್ತಾರೆ. ಗೋಡೆಯಲ್ಲಿ ಸುಂದರವಾದ ಪ್ರಕೃತಿ ಸೌಂದರ್ಯವನ್ನೋ ಪುಷ್ಪಸೌಂದರ್ಯವನ್ನೊ ಬೀರುವ ಚಿತ್ರಪಟವನ್ನೂ ತೂಗುಹಾಕುತ್ತಾರೆ. ಮಲಗುವ ಕೋಣೆಗಳನ್ನು ಆಕರ್ಷಕವಾದ ರೀತಿಯಲ್ಲಿ ಅಲಂಕರಿಸುತ್ತಾರೆ. ಕಣ್ಣಿಗೆ ತಂಪನ್ನೀಯಬಲ್ಲ ತಿಳಿನೀಲಿ ಬಣ್ಣವನ್ನು ಗೋಡೆಗೆ ಬಳಿಯುತ್ತಾರೆ. ಸುಂದರವಾದ ಪರದೆಗಳನ್ನು ಇಳಿಬಿಡುತ್ತಾರೆ. ಗೋಡೆಗೆ ಸುಂದರವಾದ ಕೆತ್ತನೆ ಕೆಲಸದ ಕುಸುರಿಕೆಲಸದ ವಾಲ್ ಪ್ಲೇಟನ್ನು ತೂಗಿಸುತ್ತಾರೆ. ಉತ್ತಮವಾದ ಮರದ ಮಂಚದ ಮೇಲೆ ಮೆತ್ತನೆಯ ಹಾಸಿಗೆ, ನೆಲಕ್ಕೆ ರತ್ನಗಂಬಳಿ, ಬಾಗಿಲಿನಲ್ಲಿ ಕಾಲೊರಸು ಚಾಪೆ, ಮಂಚಕ್ಕೆ ಒಂದು ಸೊಳ್ಳೆಪರದೆ, ಮಕ್ಕಳ ತೊಟ್ಟಲಿದ್ದರೆ ಅದಕ್ಕೂ ಸೊಳ್ಳೆಪರದೆಯನ್ನೂ ತೂಗುಬಿಟ್ಟು ಅದರ ಮೇಲಿನ ತಟ್ಟೆಗಳಿಗೆ ಪಕ್ಷಿಗಳ ಬಟ್ಟೆಯ ಗೊಂಬೆಯನ್ನು ಗಿಲಿಗಿಲಿ ಶಬ್ದಮಾಡುವ ಆಟಿಕೆಗಳನ್ನು ತೂಗಿಸುತ್ತಾರೆ. ಕೆಲವೊಂದು ಭಾವಚಿತ್ರಗಳು, ಪಕ್ಕದಲ್ಲೊಂದು ಸ್ಟ್ಯಾಂಡು ಅದರ ಮೇಲೆ ಟಿ.ವಿ. ರೇಡಿಯೋ, ಮಂಚದ ತಲೆಯ ಭಾಗದಲ್ಲಿ ಸ್ಟೂಲಿನ ಮೇಲೆ ಗೋಡೆಬಣ್ಣದ ಟೇಬಲ್ ಲ್ಯಾಂಪ್, ಇನ್ನೊಂದು ಪಕ್ಕದಲ್ಲಿ ಕನ್ನಡಿಯುಳ್ಳ ಬೀರು, ಪ್ರಸಾಧನಸಾಮಗ್ರಿಗಳು, ಇತ್ಯಾದಿಯಾಗಿ ಸಜ್ಜುಗೊಳಿಸುವುದು ಸಾಮಾನ್ಯ.

ಮಲಗುವ ಕೋಣೆ

ಇಂದಿಗೂ ಹೆಚ್ಚಿನ ಮನೆಗಳಲ್ಲಿ ರಂಗವಲ್ಲಿ ಗೃಹಾಲಂಕಾರ ಸಾಧನಗಳಲ್ಲಿ ಬಹುಮುಖ್ಯ. ದೇವರಮನೆಯಲ್ಲಿ, ಮುಂಬಾಗಿಲ ಹೊಸ್ತಿಲಿನಲ್ಲಿ, ಮನೆಯ ಪ್ರವೇಶ ದ್ವಾರದಲ್ಲಿ ರಂಗವಲ್ಲಿ ಹಾಕುವುದಕ್ಕೆ ಧಾರ್ಮಿಕ ಹಿನ್ನೆಲೆಯಿದ್ದರೂ ಅದು ಮನೆಗೊಂದು ಅಲಂಕಾರವನ್ನೂ ಶೋಭೆಯನ್ನೂ ನೀಡುತ್ತದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಮುಂಜಾನೆ ಗುಡಿಸಿ ಸಾರಿಸಿ, ಅಕ್ಕಿಹಿಟ್ಟು ಸುಣ್ಣಕಲ್ಲಿನ ಪುಡಿ ಇವುಗಳಿಂದ ರಂಗವಲ್ಲಿಯನ್ನು ಹಾಕಿ ಅಲಂಕರಿಸುತ್ತಾರೆ. ಹಬ್ಬಹರಿದಿನಗಳಲ್ಲಿ ಬಣ್ಣಬಣ್ಣದ ಪುಡಿಗಳಿಂದ ರಂಗವಲ್ಲಿಯನ್ನು ಹಾಕುತ್ತಾರೆ. ಮನೆಯಂಗಳ ಹಾಗೂ ದೇವರ ಕೋಣೆಯಲ್ಲಿ ನಿತ್ಯವೂ ರಂಗವಲ್ಲಿ ಹಾಕುವುದಾದರೆ, ಅತಿಥಿಗಳು ಆಗಮಿಸಿದಾಗ ಊಟದ ಮನೆಯನ್ನೂ ಪಡಸಾಲೆಯನ್ನೂ ನೂರಾರು ಬಗೆಯ ನಾನಾ ರಂಗಿನ ಪುಡಿಗಳ ರಂಗವಲ್ಲಿಯಿಂದ ಅಲಂಕರಿಸುವುದುಂಟು. ನಗರ ಪ್ರದೇಶಗಳಲ್ಲಿನ ಮನೆಗಳ ಮುಂಭಾಗ ಸಿಮೆಂಟಿನದಾಗಿರುವುದರಿಂದ ನೀರು ಹಾಕಿ ತೊಳೆದರೆ ಸಾಕಾಗುತ್ತದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಮಣ್ಣಿನ ನೆಲವಾದುದರಿಂದ ಅದನ್ನು ಗುಡಿಸಿ, ಪ್ರತಿನಿತ್ಯವೂ ಸಗಣಿಯಿಂದ ಸಾರಿಸಿ ಬಿಳಿಯ ಬಣ್ಣದ ರಂಗವಲ್ಲಿಯನ್ನು ಹಾಕುತ್ತಾರೆ. ಕೆಂಪು ನೆಲ, ಹಸುರು ಸಾರಣೆ ಇವುಗಳ ಹಿನ್ನೆಲೆಯಲ್ಲಿ ಬಿಳಿಬಣ್ಣದ ರಂಗವಲ್ಲಿ ಬಹು ಸುಂದರವಾಗಿ ಕಾಣುತ್ತದೆ. ಅದರಲ್ಲೂ ಮನೆಯಂಗಳದಲ್ಲಿ ರಂಗವಲ್ಲಿ ಹಾಕಿ, ಅದರ ನಡುವೆ ಸ್ವಲ್ಪ ಸಗಣಿಯನ್ನಿಟ್ಟು, ಅದರ ಮೇಲೆ ಕುಂಬಳದ ಪುಷ್ಪಗಳನ್ನಿಟ್ಟರೆ ಅನಿಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಕೆಲವರು ಹೀಗೆ ಅಲಂಕರಿಸುವುದುಂಟು. ಇದು ಮತ್ತಷ್ಟು ಸುಂದರವಾಗಿರುತ್ತದೆ. ಮತ್ತೆ ಕೆಲವರು ಆಯಾ ವಾರಗಳಿಗನುಗುಣವಾಗಿ ಸೋಮವಾರ ಶಿವಪೀಠ, ಮಂಗಳವಾರ ಕಾಲಪೀಠ, ಬುಧವಾರ ಸ್ವತ್ತಿಕೆ ಹೀಗೆ ಹಾಕುತ್ತಾರೆ. ಇದು ವೈವಿಧ್ಯಮಯವಾಗಿರುತ್ತದೆ. ಪಂಚಮಿ, ನವರಾತ್ರಿ, ಸೀಗೆ ಹುಣ್ಣಿಮೆ, ದೀಪಾವಳಿ, ಯುಗಾದಿ ಮುಂತಾದ ವರ್ಷದ ಹಬ್ಬಗಳಲ್ಲಿಯಂತೂ ಮಹಿಳೆಯರು ಬಹು ಸುಂದರವಾದ ರಂಗವಲ್ಲಿಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ನಾಗಪಂಚಮಿಯಂದು ದುಂಡಗಿನ ಅಥವಾ ಚೌಕಾಕಾರದಲ್ಲಿ ಜೋಡುನಾಗಗಳ ರಂಗವಲ್ಲಿಯನ್ನೆಳೆದರೆ, ಸೀಗೆ ಹುಣ್ಣಿಮೆಯಂದು ಮನೆಯಲ್ಲಿರುವ ಬುಟ್ಟಿಗಳನ್ನು ಕೆಂಪುಮಣ್ಣಿನಿಂದ ಅಥವಾ ಸಗಣಿಯಿಂದ ಸಾರಿಸಿ, ಅದರ ಸುತ್ತಲೂ ಚುಕ್ಕಿಗಳನ್ನಿಟ್ಟು ಸುಣ್ಣದಿಂದ ರಂಗವಲ್ಲಿ ತೆಗೆಯುತ್ತಾರೆ. ದೀಪಾವಳಿಯಂದು ಮನೆಯ ಮುಂದೆ ರಂಗವಲ್ಲಿಗಳ ಪೈಪೋಟಿಯೇ ನಡೆಯುತ್ತದೆಯೇನೋ ಎಂಬಂತೆ ಬಣ್ಣ ಬಣ್ಣದ ರಂಗವಲ್ಲಿಗಳನ್ನು ಹಾಕುತ್ತಾರೆ. ಲಕ್ಷ್ಮೀ ಪೂಜೆಯಂದು ಲಕ್ಷ್ಮಿಗೆ ಪ್ರಿಯವಾದ ಕಮಲದ ರಂಗವನ್ನೂ ಸುಣ್ಣದಿಂದ ಕೋಟೆಯನ್ನೂ ಬಿಡಿಸುವುದುಂಟು. ಚೈತ್ರಮಾಸದ ಗೌರಿಯ ಮುಂದೆಯೂ ಹೀಗೆ ರಂಗವಲ್ಲಿ ಹಾಕುತ್ತಾರೆ. ಈಗೀಗ ನಗರದ ಮಹಿಳೆಯರು ಬಿಳೀಪೆಯಿಂಟಿನಿಂದ ಮನೆಯ ವರಾಂಡ, ಪಡಸಾಲೆ ಇವುಗಳ ಸುತ್ತಲೂ ಗೋಡೆಯ ಉದ್ದಕ್ಕೆ ಎಲೆಬಳ್ಳಿಗಳ ರಂಗವಲ್ಲಿಯನ್ನು ಹಾಕುವುದುಂಟು.

ಸ್ವಲ್ಪ ಅನುಕೂಲವಂತರು ಜಲಸಸ್ಯಗಳನ್ನೂ ಜಲಚರಗಳನ್ನೂ ಇಡುವುದಕ್ಕಾಗಿ ಮಾಡಿದ ಅಕ್ವೇರಿಯಂ ಎಂಬ ಮೀನು ತೊಟ್ಟಿ ಅಥವಾ ಕೊಳವನ್ನು ಮನೆಯ ವರಾಂಡದಲ್ಲಿರಿಸಿ ಅದು ಕಾಣುವಂತೆ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ. ಸುಂದರವಾದ ಗಿಳಿ ಅಥವಾ ಪಕ್ಷಿ ಪಂಜರವನ್ನು ವರಾಂಡದಲ್ಲಿ ತೂಗುಹಾಕುವುದೂ ವಾಡಿಕೆಯಾಗಿದೆ.

ಚಿತ್ರಪಟಗಳನ್ನೂ ಗೃಹಾಲಂಕರಣದ ಸಾಧನಗಳನ್ನಾಗಿ ಉಪಯೋಗಿಸುತ್ತಾರೆ. ಕೌಟುಂಬಿಕ ಚಿತ್ರಗಳನ್ನು ಪಡಸಾಲೆಯಲ್ಲೂ ಪ್ರಕೃತಿಸೌಂದರ್ಯದ ಚಿತ್ರಪಟಗಳನ್ನು ವರಾಂಡದಲ್ಲೂ ತೂಗುಹಾಕುತ್ತಾರೆ. ಮನೆಮಕ್ಕಳ ಫೋಟೋಗಳನ್ನು ಫ್ರೇಮಿನೊಳಗಿಟ್ಟು ಮೇಜಿನ ಮೇಲಾಗಲಿ, ಬೀರುವಿನ ಮೇಲಾಗಲಿ ಇಡುವುದುಂಟು. ಫಲಪುಷ್ಪಗಳ, ನೈಸರ್ಗಿಕ ಸೌಂದರ್ಯದ ವಾಲ್ ಪ್ಲೇಟ್‍ಗಳನ್ನು ತೂಗಿಸುತ್ತಾರೆ. ಹಾಗೆಯೇ ಬೆಲೆಬಾಳುವ ಪೀಠೋಪಕರಣಗಳನ್ನು ಆಧುನಿಕ ರೀತಿಯಲ್ಲಿ ಅಲಂಕರಿಸಿ, ಮನೆಯಲ್ಲಿರುವ ಕನ್ನಡಿ, ಚಿತ್ರಪಟಗಳು, ಹೂದಾನಿಗಳು, ಗೊಂಬೆಗಳು ಮೊದಲಾದುವನ್ನು ವ್ಯವಸ್ಥಿತವಾಗಿರಿಸಿ ಮನೆಯನ್ನು ಅಲಂಕರಿಸುವುದುಂಟು.

ಅತ್ಯಾಧುನಿಕ ಪ್ರವೃತ್ತಿಯವರು ಕಿಟಕಿ ಬಾಗಿಲುಗಳಿಗೆ ಸುಂದರವಾದ ಪರದೆಗಳನ್ನು ಹಾಕುವುದರಲ್ಲಿಯೂ ತಮ್ಮ ಅಭಿರುಚಿಯನ್ನು ವ್ಯಕ್ತಪಡಿಸುತ್ತಾರೆ. ಪ್ರಶಾಂತ ವಾತಾವರಣದ ಅಪೇಕ್ಷೆಯುಳ್ಳವರೂ ತಿಳಿಬಣ್ಣಗಳ ಪರದೆಗಳನ್ನು ಉಪಯೋಗಿಸಿದರೆ, ಉತ್ಸಾಹಮಯವಾದ ವಾತಾವರಣವನ್ನು ಬಯಸುವವರು ದಟ್ಟವಾದ ಬಣ್ಣಗಳನ್ನು ಉಪಯೋಗಿಸುವರು. ಮತ್ತೆ ಕೆಲವರು ಗೋಡೆಯ ಬಣ್ಣಗಳಿಗೆ ಹೊಂದಿಕೆಯಾಗಬಲ್ಲ ಪರದೆಗಳನ್ನು ಬಳಸುತ್ತಾರೆ. ಕೆಲಮಟ್ಟಿಗೆ ದಟ್ಟ, ಕೆಲಮಟ್ಟಿಗೆ ತಿಳಿ, ಕೆಲಮಟ್ಟಿಗೆ ಪ್ರಕಾಶಹೀನ ಕೆಲಮಟ್ಟಿಗೆ ಪ್ರಕಾಶಮಾನ ಎಂಬ ಉಕ್ತಿಗನುಗುಣವಾಗಿ ಗೋಡೆಯ ಬಣ್ಣಗಳಿಗೆ ಹೊಂದಿಕೆಯಾಗುವಂತೆ ಕಿಟಕಿ ಮೇಜುಗಳ ಹೊದಿಕೆ, ಬಾಗಿಲು ಕಿಟಕಿ ಪರದೆಗಳನ್ನು ಆರಿಸಿರುತ್ತಾರೆ. ಬಾಗಿಲುಗಳಿಗೆ ಇಳಿಬಿಟ್ಟ ಪರದೆಗಳನ್ನು ಎರಡು ಭಾಗಗಳಾಗಿ ಕತ್ತರಿಸಿ ಹೊಲಿದು ನಿರಿಗೆ ತೆಗೆದು, ಅರ್ಧಅರ್ಧ ಭಾಗವನ್ನು ಪ್ಲಾಸ್ಟಿಕ್ ಮಣಿಗಳಿಂದ ಮತ್ತು ರಿಬ್ಬನ್‍ಗಳಿಂದ ಕಟ್ಟುವುದೂ ಉಂಟು. ಸೋಫಾದ ಮೇಲೆ ಇರಿಸುವ ಒರಗುದಿಂಬಿಗೆ ಸುತ್ತಲೂ ನಿರಿಗೆ ಕಟ್ಟಿ ಹೊಲಿದ ಚೀಲವನ್ನು ಹಾಕಿ ನಡುವೆ ಸುಂದರವಾದ ಕಸೂತಿ ಕೆಲಸವನ್ನು ಮಾಡುತ್ತಾರೆ.

ಅಲಂಕೃತಗೋಡೆ

ಗೃಹಾಲಂಕಾರದಲ್ಲಿ ಹೂಗಳ ಪಾತ್ರ ಬಹಳ ಹಿರಿದು. ಅರಳಿದ ಹೂಗಳನ್ನು ಹಸುರೆಲೆಗಳನ್ನು ಹೂದಾನಿಗಳಲ್ಲಿಟ್ಟು ಅಲಂಕರಿಸಿ ಮೇಜಿನ ಮೇಲಿಡುವುದು ಹೆಚ್ಚಾಗಿ ಬಳಕೆಗೆ ಬರುತ್ತಿದೆ. ಹೂಗಳನ್ನು ಒಂದೆಡೆಯಲ್ಲಿ, ತರಕಾರಿಗಳನ್ನು ಒಂದೆಡೆಯಲ್ಲಿ ಜೋಡಿಸುವುದು, ಹೂದಾನಿಗಳಲ್ಲಿ ಅಚ್ಚುಕಟ್ಟಾಗಿ ಹೂಗಳನ್ನು ಜೋಡಿಸುವುದು ಒಂದು ಕಲೆಯೇ ಆಗಿದೆ. ಜಪಾನೀಯ ಹೂವಿನ ಅಲಂಕಾರದ ಪ್ರಭಾವ ಅಲ್ಲಲ್ಲಿ ಕಾಣುತ್ತದೆ. ಇಕೆಬಾನಾ ಕಲೆ ಪ್ರಚಾರಗೊಳ್ಳುತ್ತಿದೆ.

ಮನೆಯ ಸೊಬಗು ಹೆಚ್ಚಿಸಲು ಮನೆ ಮುಂದೆ ಸುಂದರವಾದ ಕೈ ತೋಟ ಮಾಡುವುದು, ಅಲಂಕಾರಿಕ ಸಸ್ಯಗಳು ಮತ್ತು ಹೂವಿನ ಗಿಡಗಳನ್ನು ಕುಂಡಗಳಲ್ಲಿ ಜೋಡಿಸುವುದು, ಅಲಂಕಾರಿಕ ಕುಂಡಗಳಲ್ಲಿ ಇಳಿಬೀಳುವ ಸಸ್ಯಗಳನ್ನು ಇಟ್ಟು ಮನೆಯ ಮುಂದೆ ಚಾವಣಿಗೆ ತೂಗುಹಾಕುವುದು ರೂಢಿಯಲ್ಲಿದೆ. (ಎಂ.ಜೆ.ಬಿ.)