ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಣಿಮರ
ಗೋಣಿಮರ- ಮೋರೇಸಿ ಕುಟುಂಬಕ್ಕೆ ಸೇರಿದ ಒಂದು ದೊಡ್ಡ ಗಾತ್ರದ ಮರ. ಅಂಜೂರ, ಅರಳಿ, ಆಲ ಮುಂತಾದ ಮರಗಳ ಹತ್ತಿರ ಸಂಬಂಧಿ. ಶಾಸ್ತ್ರೀಯ ಹೆಸರು ಫೈಕಸ್ ಡ್ರೂಪೇಸಿಯ ಇಲ್ಲವೆ ಫೈಕಸ್ ಮೈಸೂರೆನ್ಸಿಸ್. ಕರ್ನಾಟಕದ ಮೂಲವಾಸಿಯಾದ ಇದು ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಶ್ರೀಲಂಕಾ, ಬರ್ಮ ಮತ್ತು ಭಾರತದ ಖಾಸಿ ಬೆಟ್ಟಗಳಲ್ಲೂ ಇದನ್ನು ಕಾಣಬಹುದು. ಗೋಣಿ ಮರವನ್ನು ಅಲಂಕಾರಕ್ಕಾಗಿ ಉದ್ಯಾನವನಗಳಲ್ಲೂ ಸಾಲು ಮರವಾಗಿ ರಸ್ತೆಯ ಅಂಚುಗಳಲ್ಲಿಯೂ ಬೆಳೆಸುವುದುಂಟು.
ಗೋಣಿಮರ ಸುಮಾರು 15 - 20 ಮೀ. ಎತ್ತರಕ್ಕೆ ಬೆಳೆಯುವ ಮರ. ಕಾಂಡ ಬೂದು ಬಣ್ಣದ್ದು. ಎಳೆಯ ಕಾಂಡವನ್ನು ಮುರಿದರೆ ಬಿಳಿ ಬಣ್ಣದ ಹಾಲ್ನೊರೆ ಒಸರುತ್ತದೆ. ಎಲೆಗಳು ಸರಳ ಮಾದರಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಆಕಾರ ಅಂಡದಂತೆ. ತುದಿ ಮೊನಚು. ಎಲೆಗಳ ಮೈ ಹೊಳಪಿನದು. ಎಲೆಗಳು ಎಳೆಯವಾಗಿರುವಾಗ ವೃಂತಪತ್ರ ರಕ್ಷಿತವಾಗಿರುತ್ತವೆ; ದೊಡ್ಡವಾದಂತೆ ವೃಂತಪತ್ರ ಬಿದ್ದು ಹೋಗುತ್ತದೆ. ಹೂಗಳು ಬಲು ಚಿಕ್ಕವು. ಅರಳಿ, ಆಲ ಮುಂತಾದವುಗಳಲ್ಲಿರುವಂತೆ ಅವು ಗುಂಡನೆಯ ಹೂಗೊಂಚಲುಗಳ ಒಳಭಾಗದಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲಿಗೆ ಹೈಪ್ಯಾಂತೋಡಿಯಮ್ ಎಂದು ಹೆಸರು. ಇದು ಹೊರನೋಟಕ್ಕೆ ಕಾಯಿಯಂತೆಯೇ ಕಾಣುತ್ತದೆ. ಎಳೆಯದಿರುವಾಗ ಇದರ ಬಣ್ಣ ಹಸಿರು, ಮಾಗಿದ ಮೇಲೆ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಆಗ ಇದನ್ನು ಸೈಕೋನಸ್ ಎಂದು ಕರೆಯುತ್ತಾರೆ. ಹೂಗಳು ಏಕಲಿಂಗಿಗಳು. ಪ್ರತಿ ಹೂಗೊಂಚಲು ಸಣ್ಣ ದ್ವಾರವನ್ನು ಪಡೆದಿರುವ ಒಂದು ಪಾತ್ರೆಯಂತಿದೆ. ಒಳಗೆ ತಳಭಾಗದಲ್ಲಿ ಹೆಣ್ಣು ಹೂಗಳೂ ಮೇಲ್ಭಾಗದಲ್ಲಿ ಅಂದರೆ ದ್ವಾರದ ಕಡೆಗೆ ಕೆಲವು ಗಂಡು ಹೂಗಳೂ ಇವೆ. ಇವಕ್ಕೆ ಗಾಲ್ ಹೂಗಳೆಂದು ಹೆಸರು. ಪ್ರತಿ ಗಂಡು ಹೂವಿನಲ್ಲಿ ನಾಲ್ಕು ಪೆರಿಯಾಂತ್ ಹಾಲೆಗಳು ಮತ್ತು ಒಂದೇ ಕೇಸರ ಹಾಗೂ ಪ್ರತಿಯೊಂದು ಹೆಣ್ಣು ಹೂವಿನಲ್ಲಿ ನಾಲ್ಕು ಪೆರಿಯಾಂತ್ ಹಾಲೆಗಳು ಮತ್ತು ಉಚ್ಚ ಸ್ಥಾನದ ಒಂದು ಅಂಡಾಶಯ ಇವೆ. ಅಂಡಾಶಯದೊಳಗೆ ಒಂದು ಅಂಡಕ ಮಾತ್ರ ಇದೆ. ಗಾಲ್ ಹೂಗಳ ಅಂಡಾಶಯದಲ್ಲಿ ಅಂಡಕದ ಬದಲು ಒಂದು ಬಗೆಯ ಕೀಟದ ಕೋಶಾವಸ್ಥೆ ಇರುತ್ತದೆ. ಗೋಣಿ ಮರದಲ್ಲಿ ಪರಾಗ ಸ್ಪರ್ಶ ವಿಶಿಷ್ಟ ರೀತಿಯದ್ದಾಗಿದೆ. ಹೈಮಿನಾಪ್ಟರ್ ಗುಂಪಿಗೆ ಸೇರಿದ ಕೀಟವೊಂದು ಹೂಗೊಂಚಲಿನ ದ್ವಾರದ ಮೂಲಕ ಒಳಹೊಕ್ಕು ಗಾಲ್ ಹೂವಿನ ಅಂಡಾಶಯದ ಒಳಗೆ ಮೊಟ್ಟೆಯನ್ನಿಟ್ಟು ಹೂವಿನಿಂದ ಹೊರಬರಲಾರದೆ ಅಲ್ಲೇ ಸಾಯುತ್ತದೆ. ಮೊಟ್ಟೆಯಿಂದ ಹೊರಬರುವ ಮರಿ ಅಲ್ಲೇ ಕೋಶಾವಸ್ಥೆಯನ್ನು ಕಳೆದು ಕೀಟವಾಗಿ ಹೊರಬರುತ್ತದೆ. ಮೊಟ್ಟೆ ಇಡಲು ಹೋದ ಕೀಟ ಹೊರಗೆ ಬರಲಾಗದುದಕ್ಕೂ ಮೊಟ್ಟೆಯಿಂದ ಬೆಳೆದ ಕೀಟ ಸುಲಭವಾಗಿ ಹೊರಬರಲು ಸಾಧ್ಯವಾಗುವುದಕ್ಕೂ ಕಾರಣ ಇಷ್ಟೇ. ಹೂಗೊಂಚಲಿನ ಮುಖದಲ್ಲಿ ಒಳಮುಖವಾಗಿ ಬೆಳದಿರುವ ರೇಕುಗಳೂ ಪ್ರಾರಂಭದಲ್ಲಿ ಬಹು ಗಡಸಾಗಿರುತ್ತವೆ. ಇದರಿಂದಾಗಿ ಕೀಟ ಹೂವಿನಿಂದ ಹೊರಬರಲು ಆಗುವುದಿಲ್ಲ. ಹೂ ಮಾಗಿದಂತೆ ರೇಕುಗಳು ಮೃದುವಾಗಿ ಸುರುಟಿಕೊಳ್ಳುತ್ತವಾಗಿ ಬೆಳೆದ ಕೀಟ ಸುಲಭವಾಗಿ ಹೊರಬರುತ್ತದೆ; ಹೀಗೆ ಬರುತ್ತಿರುವಾಗ ಅದು ಗಂಡು ಹೂಗಳ ಮೇಲೆ ಚಲಿಸುವುದರಿಂದ ಪರಾಗ ಅದರ ಮೈಗೆ ಅಂಟಿಕೊಳ್ಳುತ್ತದೆ. ಇದು ಇನ್ನೊಂದು ಹೂಗೊಂಚಲಿನ ಒಳಗೆ ಮೊಟ್ಟೆಯಿಡಲು ಹೋದಾಗ ಅದರ ಮೈ ಮೇಲಿರುವ ಪರಾಗ ಹೆಣ್ಣು ಹೂವಿನ ಶಲಾಕಾಗ್ರದ ಮೇಲೆ ಬೀಳುತ್ತದೆ. ಹೀಗೆ ಪರಾಗ ಸ್ಪರ್ಶ ನಡೆಯುತ್ತದೆ. ಮಕ್ಕಳಿಗೆ ದಡಾರ ಬಂದಾಗ ಗೋಣಿಮರದ ಹಾಲ್ನೊರೆಯನ್ನು ಮೇಕೆ ಇಲ್ಲವೆ ಹಸು ಹಾಲಿನೊಂದಿಗೆ ಸೇರಿಸಿ ಕೊಡುವುದಿದೆ. ಮರವನ್ನು ಸೌದೆಯಾಗೂ ಸೊಪ್ಪು ಸದೆಯನ್ನು ಜಾನುವಾರಗಳ ಮೇವಾಗೂ ಉಪಯೋಗಿಸುತ್ತಾರೆ. (ಕೆ.ಎನ್.ಜಿ.)