ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ಯಾರಿಸನ್, ವಿಲಿಯಮ್ ಲಾಯ್ಡ್‌

ವಿಕಿಸೋರ್ಸ್ ಇಂದ
Jump to navigation Jump to search

ಗ್ಯಾರಿಸನ್, ವಿಲಿಯಮ್ ಲಾಯ್ಡ್ - 1805-1879. ಅಮೆರಿಕಾದಲ್ಲಿ ಗುಲಾಮಗಿರಿಯ ವಿರುದ್ಧ ಹೋರಾಟ ನಡೆಸಿದವರಲ್ಲೊಬ್ಬ. ಮ್ಯಾಸಚೂಸೆಟ್ಸ್‍ನ ನ್ಯೂಬರಿಪೋರ್ಟಿನಲ್ಲಿ 1805ರ ಡಿಸೆಂಬರ್ 12ರಂದು ಜನಿಸಿದ. ತಂದೆ ಅಬಿಜಾ ಒಬ್ಬ ಹಡಗು ಚಾಲಕ, ಕುಡುಕ. ವಿಲಿಯಂ ಮಗುವಾಗಿದ್ದಾಗಲೇ ತಂದೆ ಮನೆ ತೊರೆದ. ತಾಯಿ ಸುಶೀಲೆ, ಲಕ್ಷಣವಂತೆ. ವಿಲಿಯಮನಿಗೆ ಹೆಚ್ಚು ಶಿಕ್ಷಣವೇನೂ ದೊರೆಯಲಿಲ್ಲ. ಆದರೆ ತನಗೆ ದೊರೆತ ಅವಕಾಶಗಳನ್ನೆಲ್ಲ ಅವನು ಸದುಪಯೋಗ ಪಡಿಸಿಕೊಂಡ. ನ್ಯೂಬರಿಪೋರ್ಟ್ ಮತ್ತು ಬಾಲ್ಟಿಮೋರ್‍ನಲ್ಲಿ ಮೊಚ್ಚೆ ತಯಾರಿಕೆಯನ್ನು ಕಲಿಯಲು ಅವನನ್ನು ಸೇರಿಸಲಾಗಿತ್ತು. ಅನಂತರ ಅವನು ಅಲಮಾರು ತಯಾರಕನೊಬ್ಬನಲ್ಲಿ ಅಭ್ಯಾಸಿಯಾಗಿದ್ದ. ನಡುವೆಯೇ ಅವನು ಓಡಿಹೋದ. ನ್ಯೂಬರಿಫೋರ್ಟ್ ಹೆರಾಲ್ಡ್ ಪತ್ರಿಕೆಯಲ್ಲಿ ಮೊಳೆ ಜೋಡಿಸುವ ಕೆಲಸ ಕಲಿಯಲು ಅವನನ್ನು ಹಚ್ಚಲಾಯಿತು. ಅದರಲ್ಲೇ ಅವನು ತುಂಬ ಪಳಗಿದ . ಅನಂತರ ಆ ಪತ್ರಿಕೆಗಾಗಿ ಅಜ್ಞಾತವಾಗಿ ಲೇಖನಗಳನ್ನು ಬರೆದು ಸಂಪಾದಕನ ಮೆಚ್ಚುಗೆ ಗಳಿಸಿದ. ಇತರ ಅನೇಕ ಪತ್ರಿಕೆಗಳಿಗೂ ಲೇಖನ ಬರೆದ. ಮೊಳೆ ಜೊಡಿಸುವ ಕೆಲಸದಲ್ಲೂ ಪರಿಣತಿ ಪಡೆದ ವಿಲಿಯಮನಿಗೆ ಮೇಸ್ತ್ರಿಯ ಹುದ್ದೆ ದೊರಕಿತು. ಬರವಣಿಗೆಯಲ್ಲಿ ಅವನು ಗಳಿಸಿದ ಸಾಮಥ್ರ್ಯ ಸಮಾನ್ಯವಲ್ಲ. ಸಂಪಾದಕ ಸ್ವಲ್ಪಕಾಲ ತನ್ನ ಕೆಲಸ ನಿರ್ವಹಿಸಲಾಗದಾಗ ಪತ್ರಿಕೆ ನಡೆಸುವ ಹೊಣೆ ಅವನದಾಗಿತ್ತು. ಮುದ್ರಣಾಲಯದಲ್ಲಿ ವಿಲಿಯಂ ನಿಜವಾದ ವಿದ್ಯೆ ಸಂಪಾದಿಸಿದ. ಸ್ವಾತಂತ್ರ್ಯದ ಬಗ್ಗೆ ಆತನ ಕಾಳಜಿ ಬಹಳ. ತುರ್ಕಿಯ ಆಡಳಿತದಿಂದ ವಿಮೋಚನೆ ಹೊಂದಲು ಗ್ರೀಕರು ಹೂಡಿದ್ದ ಹೋರಾಟದಲ್ಲಿ ಅವನಿಗೆ ಸಹಾನುಭೂತಿ ಇತ್ತು. ತಾನೂ ಏಕೆ ಸಿಪಾಯಿಯ ತರಬೇತು ಹೋದಿ ಯುದ್ಧದಲ್ಲಿ ದುಮುಕಬಾರದು? ಎಂದು ಕೂಡ ಚಿಂತಿಸುತ್ತಿದ್ದ. 1826ರಲ್ಲಿ ಅವನ ಅಭ್ಯಾಸ ಅವಧಿ ಮುಗಿಯಿತು. ತಾನೇ ಫ್ರೀ ಪ್ರೆಸ್ ಎಂಬ ಪತ್ರಿಕೆಯೊಂದನ್ನಾರಂಭಿಸಿದ. ಸ್ವದೇಶಾಭಿಮಾನವನ್ನು ಬೆಳೆಸುವುದೇ ಅವನ ಪತ್ರಿಕೆಯ ಮುಖ್ಯೋದ್ದೇಶ. ಆದರೆ ಆ ಸ್ಥಳಕ್ಕೆ ಅವನ ಪತ್ರಿಕೆ ಅತ್ಯಂತ ತೀವ್ರಗಾಮಿಯೆನಿಸಿತು. ಪತ್ರಿಕೆ ಮುಚ್ಚಿಕೊಂಡಿತು. ಅನಂತರ ಆತ ಬಾಸ್ಟನಿಗೆ ಹೊಂಗಿ ಮುದ್ರಣ ಕಾರೇಗಾರ (ಜರ್ನಿಮನ್) ಆದ. ನ್ಯಾಷನಲ್ ಫಿಲಾಂತ್ರಪಿಸ್ಟ್ ಎಂಬ ಪತ್ರಿಕೆಯೊಂದು ಅವನ ಸಂಪಾದಕತ್ವದಲ್ಲಿ ಹೊರಾಡುತ್ತಿತ್ತು. ಮದ್ಯಪಾನವನ್ನು ವರ್ಜಿಸಬೇಕೆಂಬ ಉದ್ದೇಶವಿದ್ದ ಪ್ರಥಮ ಅಮೆರಿಕನ್ ಪತ್ರಿಕೆಯಿದು. ಆ ವರ್ಷದ ಕೊನೆಯೊಳಗೆ ಪತ್ರಿಕೆಯ ಒಡೆತನ ಬದಲಾದ್ದರಿಂದ ಆತ ಇದನ್ನು ಬಿಡಬೇಕಾಯಿತು. 1828ರಲ್ಲಿ ಬೆನಿಂಗ್ಟನಿನಲ್ಲೊಂದು ಪತ್ರಿಕೆ ತೆರೆದ. ಆ ಪತ್ರಿಕೆಯೂ ಒಂದು ವರ್ಷದೊಳಗೆ ಪರಿಸಮಾಪ್ತಿ ಹೊಂದಿತು.

ಗುಲಾಮಗಿರಿ ನಿರ್ಮೂಲವಾಗಬೇಕೆಂದು ಪ್ರಚಾರ ನಡೆಸುತ್ತಿದ್ದ ಬೆಂಜಮಿನ್ ಲಂಡಿಯ ಪರಿಚಯ ಅವನಿಗೆ ಆಯಿತು. ಗ್ಯಾರಿಸನನಿಗೂ ಈ ಪ್ರಶ್ನೆಯಲ್ಲಿ ಆಸಕ್ತಿ ಬೆಳೆಯಿತು. ಗುಲಾಮರ ವಿಮೋಚನೆ ಕ್ರಮಕ್ರಮವಾಗಿ ಆಗಬೇಕೆಂಬ, ವಿಮೋಚನೆಗೊಂಡ ಗುಲಾಮರನ್ನು ಅಮೆರಿಕ ಸಂಯುಕ್ತಸಂಸ್ಥಾನಗಳಿಂದಾಚೆ ಎಲ್ಲಾದರೂ ನೆಲೆಗೊಳಿಸಬೇಕೆಂಬ ಲಂಡಿಯ ಅಭಿಪ್ರಾಯಕ್ಕೆ ಪ್ರಾರಂಭದಲ್ಲಿ ಗ್ಯಾರಿಸನನ ವಿರೋಧವೇನೂ ಇರಲಿಲ್ಲ. ಲಂಡಿ ಪ್ರಕಟಿಸುತ್ತಿದ್ದ ಜೀನಿಯಸ್ ಆಫ್ ಯೂನಿವರ್ಸಲ್ ಇಮಾನ್ಸಿಪೇಷನ್ ಎಂಬ ಪತ್ರಿಕೆಯ ಸಂಪಾದನ ಕಾರ್ಯದಲ್ಲಿ ಲಂಡಿ ಸಹಾಯ ನೀಡಬೇಕೆಂಬ ಆಹ್ವಾನವನ್ನೊಪ್ಪಿಕೊಂಡು ಅವನೊಂದಿಗೆ ಕೆಲಸ ಆರಂಭಿಸಿದ ಮೇಲೆ ಗ್ಯಾರಿಸನನ ಭಾವನೆಗಳು ಕ್ರಮೇಣ ಬದಲಾದವು. ಗುಲಾಮಗಿರಿ ಕೂಡಲೇ ರದ್ದಾಗಬೇಕೆಂದು ಗ್ಯಾರಿಸನ್ ಪ್ರತಿಪಾದಿಸಿದ. ಗುಲಾಮಗಿರಿಯ ದುಷ್ಪರಿಣಾಮಗಳನ್ನು ಮಾತ್ರ ಬಯಲಿಗೆಳಿಯುತ್ತಿದ್ದು, ಅದರ ನಿರ್ಮೂಲದ ಕರ್ತವ್ಯವನ್ನು ಭವಿಷ್ಯದ ಪೀಳಿಗೆಗಳಿಗೆ ವರ್ಗಾಯಿಸುವ ಧೋರಣೆಗಳನ್ನು ಅವನು ಒಪ್ಪಲಿಲ್ಲ. ತನ್ನ ಭಾವನೆಗಳ ಪ್ರಚಾರಕ್ಕೆ ಅವನು ಜೀನಿಯಸ್ ಪತ್ರಿಕೆಯನ್ನು ಮಾಧ್ಯಮವನ್ನಾಗಿ ಮಾಡಿಕೊಂಡ. ಗುಲಾಮರ ಒಡೆಯರು ಪತ್ರಿಕೆಯನ್ನೂ ಗ್ಯಾರಿಸನನ್ನೂ ದ್ವೇಷಿಸತೊಡಗಿದರು. ಗುಲಾಮರ ಸಾಗಾಣೆಯ ಹಡಗೊಂದರ ಯಜಮಾನ ಹೂಡಿದ ಮಾನನಷ್ಟ ಮೊಕದ್ದಮೆಯಲ್ಲಿ ಅವನಿಗೆ 50 ಡಾಲರುಗಳ ದಂಡ ವಿಧಿಸಲಾಯಿತು. ಗ್ಯಾರಿಸನ್ ದಂಡ ತೆರಲಾರದೆ ಕಾರಾಗೃಹಕ್ಕೆ ಹೋಗಿ ಶಿಕ್ಷೆಯನ್ನು ಭಾಗಶಃ ಅನುಭವಿಸಿದ ಮೇಲೆ ಅಭಿಮಾನಿಯೊಬ್ಬ ದಂಡದ ಹಣ ನೀಡಿದ್ದರಿಂದ ಅವನಿಗೆ ಬಿಡುಗಡೆ ಆಯಿತು. ಲಂಡಿ-ಗ್ಯಾರಿಸನರ ಸಹಯೋಗ ಕೊನೆಗೊಂಡಿತು. ತನ್ನದೇ ಪತ್ರಿಕೆಯೊಂದನ್ನು ಬಾಸ್ಟನಿನಲ್ಲಿ ಆರಂಭಿಸಲು ಗ್ಯಾರಿಸನ್ ಮನಸ್ಸು ಮಾಡಿದ. ಉತ್ತರದ ಪ್ರಮುಖ ಸ್ಥಳಗಳಲ್ಲಿ ಪ್ರಚಾರರೋಪನ್ಯಾಸ ಮಾಡಬೇಕೆಂದು ನಿಶ್ಚಯಿಸಿದ. ಬಾಸ್ಟನಿನಲ್ಲಿ ಇದಕ್ಕಾಗಿ ಸ್ಥಳವೊಂದನ್ನು ಕಷ್ಟಪಟ್ಟು ಸಂಪಾದಿಸಿಕೊಂಡ. ಐಸಾಕ್ ನ್ಯಾಪ್ ಎಂಬುವನೊಂದಿಗೆ ಕೂಡಿ ಲಿಬಿರೇಟರ್ ಎಂಬ ಪತ್ರಿಕೆ ಹೊರಡಿಸಿದ. ಆರಂಭದಲ್ಲಿ ಅದಕ್ಕೆ ಬಂಡವಾಳವಾಗಲಿ ಒಬ್ಬನಾದರೂ ಚಂದಾದಾರನಾಗಲಿ ಇರಲಿಲ್ಲ. ತನ್ನ ಮಾತುಗಳನ್ನು ಜನ ಆಲಿಸುವ ವರೆಗೂ, ಗುರಿ ಸಾಧಿಸುವವರೆಗೂ ನಿಲ್ಲುವುದಿಲ್ಲವೆಂಬುದು ಅವನ ಛಲ.

ಗ್ಯಾರಿಸನ್ ಶಾಂತಿಪ್ರಿಯ. ನೈತಿಕ ಮಾರ್ಗಗಳಿಂದಲೇ ಗುಲಾಮಗಿರಿಯನ್ನು ನಿರ್ನಾಮಗೊಳಿಸಬೇಕೆಂದು ಆತನ ಇಷ್ಟ. ಉತ್ತರದಲ್ಲಿ ಉಪನ್ಯಾಸ ಮಾಡಿ, ದಕ್ಷಿಣದ ರಾಜ್ಯಗಳ ಮೇಲೆ ಉತ್ತರದವರ ನೈತಿಕ ಒತ್ತಾಯ ಬೀಳುವ ಹಾಗೆ ಮಾಡಲು ಯತ್ನಿಸಿದ. ಉತ್ತರದವರು ಆಸಕ್ತಿ ತೋರಲಿಲ್ಲ. ಗ್ಯಾರಿಸನನಿಗೆ ಕೋಪ ಬಂತು. ಅವರನ್ನು ಹೀಗಳೆದ. 1840ರ ವೇಳೆಗೆ ಆತ ಸಂಪ್ರದಾಯಗಳನ್ನು ಕಿತ್ತೊಗೆಯುವಂಥ ತೀವ್ರವಾದಿಯಾದ. 1832ರಲ್ಲಿ ಅವನು ನ್ಯೂ ಇಂಗ್ಲೆಂಡ್ ಗುಲಾಮಗಿರಿ ವಿರೋಧಿ ಸಂಘ ಸ್ಥಾಪಿಸಿದ. ಆತನ ಥಾಟ್ಸ್ ಆನ್ ಆಫ್ರಿಕನ್ ಕಾಲೊನೈಸೇಷನ್ ಎಂಬ ಪುಸ್ತಕ ಪ್ರಕಟವಾದ್ದು ಅದೇ ವರ್ಷ. ಅಮೆರಿಕನ್ ವಸಾಹತು ನಿರ್ಮಾಣ ಸಂಘ ಗುಲಾಮಗಿರಿಯ ಸಾಧನೆಗಾಗಿ ಸ್ಥಾಪಿತವಾಗಿರುವ ಸಂಘವೆಂದು ಆತ ವಾದಿಸಿದ. ತನ್ನ ಸಂಘದ ಪ್ರತಿನಿಧಿಯಾಗಿ ಆತ 1833ರಲ್ಲಿ ಇಂಗ್ಲೆಂಡಿಗೆ ಹೋಯ್ದು ಅಮೆರಿಕನ್ ವಸಾಹತು ನಿರ್ಮಾಣ ಸಂಘದ ದುರದ್ದೇಶಗಳನ್ನು ಬಯಲಿಗೆಳೆಯುವುದಕ್ಕಾಗಿ, ಅಲ್ಲಿಯ ಗುಲಾಮಗಿರಿ ವಿರೋಧಿಗಳು ಗ್ಯಾರಿಸನನ್ನು ಪ್ರೀತ್ಯಾದರಗಳಿಂದ ಸ್ವಾಗತಿಸಿದರಲ್ಲದೆ ಅವನ ಯತ್ನಗಳಿಗೆ ತಮ್ಮ ಬೆಂಬಲ ಸೂಚಿಸಿದರು.

ಗ್ಯಾರಿಸನನ ತಾಯಿನಾಡಿನಲ್ಲಿದ್ದ ಗುಲಾಮಗಿರಿಪ್ರಿಯರು ಕ್ರೋಧಗೊಂಡರು. ಅಮೆರಿಕದ ಗುಲಾಮಗಿರಿ ವ್ಯವಸ್ಥೆಯ ವಿರುದ್ಧ ಉಪನ್ಯಾಸ ನೀಡಲು ಜಾರ್ಜ್ ಥಾಮ್ಸನನನ್ನು ನೇಮಿಸಿರುವುದಾಗಿ ಗ್ಯಾರಿಸನ್ ಪ್ರಕಟಿಸಿದ. ಗುಲಾಮಗಿರಿಯ ಪರವಾದವರ ವಿರೋಧ ಇನ್ನೂ ಉಗ್ರವಾಯಿತು. ಆಗ ಸ್ಥಾಪನೆಗೊಂಡ ಅಮೆರಿಕನ್ ಗುಲಾಮಗಿರಿ ವಿರೋಧಿ ಸಂಘಕ್ಕೆ ಸ್ಫೂರ್ತಿ ನೀಡಿದವನು ಗ್ಯಾರಿಸನನೇ. ಥಾಮ್ಸನನ ಭಾಷಣಗಳೂ ಈ ಸಂಘದ ಚಟುವಟಿಕೆಗಳೂ ಗುಲಾಮರೊಡೆಯರನ್ನು ಇನ್ನಷ್ಷು ಕೆರಳಿಸಿದವು. ಥಾಮ್ಸನ್ ಗುಟ್ಟಾಗಿ ಇಂಗ್ಲೆಂಡಿಗೆ ಹಿಂದಿರುಗ ಬೇಕಾಯಿತು. ಬಾಸ್ಟನಿನಲ್ಲಿ ಸ್ತ್ರೀಯರ ಗುಲಾಮವಿರೋಧಿ ಸಂಘವನ್ನುದ್ದೇಶಿಸಿ ಅವನು ಭಾಷಣ ಮಾಡುವುದಾಗಿ ಪ್ರಕಟಿಸಲÁಗಿತ್ತು. ಥಾಮ್ಸನ್ ಅಲ್ಲಿರಲಿಲ್ಲ. ಜನರು ಗ್ಯಾರಿಸನನ್ನೇ ಹಿಡಿದು ಬೀದಿಯಲ್ಲಿ ಎಳೆದಾಡಿದರು. ಅವನನ್ನು ಬಿಡಿಸಿ ಕಾರಾಗೃಹದಲ್ಲಿಟ್ಟು ರಕ್ಷಣೆ ನೀಡಬೇಕಾಯಿತು.

1839-40ವರೆಗೂ ಅಮೆರಿಕದ ಗುಲಾಮಗಿರಿ ನಿರ್ಮೂಲವಾದಿಗಳಲ್ಲಿ ಒಗ್ಗಟ್ಟಿತ್ತು. ಅನಂತರ ಇದು ಒಡೆಯಿತು. ಗ್ಯಾರಿಸನ್ ತನ್ನ ಉದ್ದೇಶ ಸಾಧನೆಗಾಗಿ ಸ್ತ್ರೀಯರ ನೆರವನ್ನೂ ಪಡೆದುಕೊಂಡಿದ್ದ. ಅವರೂ ಭಾಷಣ ನೀಡುತ್ತಿದ್ದರು. ಸ್ತ್ರೀಪುರುಷರಿಬ್ಬರೂ ಸಮಾನರೆಂಬುದು ಅವನ ನಂಬಿಕೆಯಾಗಿತ್ತು. ಸ್ತ್ರೀಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದವರ ವಿರೋಧವನ್ನು ಇದರಿಂದ ಕಟ್ಟಿಕೊಳ್ಳಬೇಕಾಯಿತು. ಚರ್ಚೂ ಎದುರುಬಿತ್ತು. ಏಕೆಂದರೆ ಚರ್ಚನ್ನೂ ಅವನು ಟೀಕಿಸಿದ್ದ. 1840ರಲ್ಲಿ ಹೊಸದೊಂದು ಗುಲಾಮಗಿರಿ ವಿರೋಧ ಸಂಘವೂ ಲಿಬರ್ಟಿ ಪಕ್ಷವೂ ಸ್ಥಾಪಿತವಾದವು. ಲಂಡನಿನಲ್ಲಿ ಆ ವರ್ಷ ನಡೆಯಲ್ಲಿದ್ದ ಗುಲಾಮಗಿರಿ ವಿರೋಧಿಗಳ ಸಮಾವೇಶಕ್ಕೆ ಈ ಎರಡು ಸಂಸ್ಥೆಗಳೂ ಪ್ರತಿನಿಧಿಗಳನ್ನು ಕಳಿಸಿದುವು. ಆ ಸಮಾವೇಶದಲ್ಲಿ ಸ್ತ್ರೀ ಪ್ರತಿನಿಧಿಗಳಿಗೆ ಅವಕಾಶವಿರಲಿಲ್ಲವೆಂಬ ಕಾರಣದಿಂದಾಗಿ ಗ್ಯಾರಿಸನ್ ಅದರಲ್ಲಿ ಭಾಗವಹಿಸಲ್ಲೊಪ್ಪಲಿಲ್ಲ.

ಅಮೆರಿಕ ಸಂಯುಕ್ತಸಂಸ್ಥಾನಗಳ ಸಂವಿಧಾನ ಗುಲಾಮಗಿರಿಯ ಪರವಾಗಿದೆಯೆಂಬ ಕಾರಣದಿಂದ ಗ್ಯಾರಿಸನ್ ಅದನ್ನೂ ಟೀಕಿಸಿದ. ಸಂವಿಧಾನಕ್ಕೆ ಬೆಂಬಲ ನೀಡುವ ಪ್ರತಿಜ್ಞಾವಚನ ಸ್ವೀಕರಿಸುವುದು ಪಾಪಕರವೆಂಬುದು ಅವನ ಭಾವನೆ. ಸಂವಿಧಾನದ ಪ್ರತಿಯನ್ನು ಅವನು ಸುಟ್ಟ. ಒಕ್ಕೂಟವನ್ನು ಒಡೆಯಬೇಕೆಂದೂ ಅವನು ಪ್ರಚಾರ ಮಾಡತೊಡಗಿದ.

1861ರಲ್ಲಿ ದಕ್ಷಿಣ ಸಂಸ್ಥಾನಗಳು ಪ್ರತ್ಯೇಕವಾದವು. ಒಕ್ಕೂಟದ ವಿರುದ್ಧ ಹೋರಾಟ ಆರಂಭಿಸಿದ. ಈ ಸಂಘರ್ಷದ ಪರಿಣಾಮವಾಗಿ ಗುಲಾಮಗಿರಿ ವಿಧಿಗಳು ಸಂವಿಧಾನದಿಂದ ತೊಡೆದುಹೋಗುವುದೆಂಬುದು ಅವನಿಗೆ ಮನವರಿಕೆಯಾಯಿತು. ಆದ್ದರಿಂದ ಅಲ್ಲಿಂದ ಮುಂದೆ ಅವನು ಒಕ್ಕೂಟದ ರಕ್ಷಣೆಗಾಗಿ ಬದ್ಧಕಂಕಣನಾದ. ಲಿಂಕನ್ ಅವನನ್ನು ಗೌರವಿಸಿದ. ಗುಲಾಮಗಿರಿಯ ವಿರೋಧವಾಗಿ ಅವನ ನಿರ್ಭಯಹೋರಾಟವನ್ನು ಹಲವರು ಮೆಚ್ಚಿಕೊಂಡರು.

ಅಮೆರಿಕನ್ ಅಂತರ್ಯುದ್ಧ ಕೊನೆಗೊಂಡು ಗುಲಾಮಗಿರಿ ರದ್ದಾದಾಗ, 1865ರಲ್ಲಿ ಗುಲಮಗಿರಿ ನಿರ್ನಾಮವಾಗಿ ತನ್ನ ಕರ್ತವ್ಯ ತೀರಿತೆಂದು ಗ್ಯಾರಿಸನ್ ಘೋಷಿಸಿದ. ಅಮೆರಿಕನ್ ಗುಲಾಮಗಿರಿ ವಿರೋಧಿ ಸಂಘವನ್ನು ವಿಸರ್ಜಿಸಬೇಕೆಂಬುದು ಆತ ಮಾಡಿದ ಸಲಹೆ. ವಿಮೋಚನೆಗೊಂಡ ಗುಲಾಮರ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರತ್ಯೇಕವಾದ ಯಥೋಚಿತವಾದ ಸಂಸ್ಥೆಗಳ ಸ್ಥಾಪನೆಯಾಗಲೆಂದು ಆತ ಸೂಚಿಸಿದ. ಏನೇ ಕಷ್ಟ ಬಂದರೂ ಆತ ಬಿಡದೆ ನಡೆಸುತ್ತಿದ್ದ ಲಿಬರೇಟ್ ಪತ್ರಿಕೆ, 35 ವರ್ಷಗಳ ಅನಂತರ, ನಿಂತಿತು. 1846ರಲ್ಲೂ 1867ರಲ್ಲೂ ಗ್ಯಾರಿಸನ್ ಇಂಗ್ಲೆಂಡಿಗೆ ಭೇಟಿ ನೀಡಿದಾಗ ಪ್ರಜಾಸಮೂಹವೂ ಸರ್ಕಾರವೂ ಅವನಿಗೆ ವೀರೋಚಿತ ಸ್ವಾಗತ ನೀಡಿದವು. ಅನಂತರ ಅವನು ಮುಕ್ತ ವ್ಯಾಪಾರಕ್ಕಾಗಿ ಚಳವಳಿ ಹೂಡಿದ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಎಲ್ಲ ಬಗೆಯ ಸುಂಕಗಳೂ ರದ್ದಾಗಬೇಕೆಂಬುದು ಅವನ ವಾದ. 1869ರಲ್ಲಿ ಆತ ಮುಕ್ತ ವ್ಯಾಪಾರ ಸಂಘದ ಅಧ್ಯಕ್ಷನಾದ. 1877ರಲ್ಲಿ ಗ್ಯಾರಿಸನ್ ಮತ್ತೆ ಇಂಗ್ಲೆಂಡಿಗೆ ಭೇಟಿ ನೀಡಿದ. ಗ್ಯಾರಿಸನ್ ತೀರಿಕೊಂಡದ್ದು 1879ರ ಮೇ 24ರಂದು.

ಆತ ಕೆಲವು ಪದ್ಯಗಳನ್ನು ಬರೆದಿದ್ದಾನೆ. ಅವು 1843ರಲ್ಲಿ ಸಂಕಲನರೂಪದಲ್ಲಿ ಪ್ರಕಟವಾದವು. ಅವನ ಆಯ್ದ ಲೇಖನೋಪನ್ಯಾಸಗಳ ಸಂಪುಟವೊಂದು ಬೆಳಕಿಗೆ ಬಂದದ್ದು 1852ರಲ್ಲಿ. (ಎಂ.ಆರ್.ಎ.ಎನ್.)