ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರಿಫಿತ್, ರಾಲ್ಫ್‌ ಥಾಮಸ್ ಹಾಚ್ಕಿನ್

ವಿಕಿಸೋರ್ಸ್ದಿಂದ

ಗ್ರಿಫಿತ್, ರಾಲ್ಫ್ ಥಾಮಸ್ ಹಾಚ್‍ಕಿನ್ - 1826-1906 ಸಂಸ್ಕ್ರತ ಹಾಗೂ ಭಾರತೀಯ ಸಂಸ್ಕøತಿಯ ಅಧ್ಯಯನ ಅಧ್ಯಾಪನಗಳಿಗೆ ತನ್ನ ಆಯುರ್ದಾಯವನ್ನು ವ್ಯಯಿಸಿದ ಸುಪ್ರಸಿದ್ಧ ವಿದ್ವಾಂಸ. ಕ್ರೈಸ್ತ ಪಾದ್ರಿಯೊಬ್ಬನ ಮಗನಾದ ಈತ 1846ರಲ್ಲಿ ಆಕ್ಸಫರ್ಡಿನ ಕ್ವೀನ್ಸ್ ಕಾಲೇಜಿನಲ್ಲಿ ಬಿ.ಎ. ಪದವೀಧರನಾದ. ಆಗಿನ ಕಾಲಕ್ಕೆ ಪ್ರಸಿದ್ಧ ಸಂಸ್ಕøತಜ್ಞನೆಂದು ಖ್ಯಾತಿ ಪಡೆದಿದ್ದ ಎಚ್.ಎಚ್. ವಿಲ್ಸನನ ಶಿಷ್ಯನಾಗಿ 1849ರದಲ್ಲಿ ಎಂ.ಎ ಪದವೀಧರನಾದ. ಆಗ ಆಕ್ಸಫರ್ಡ್ ವಿಶ್ವ ವಿದ್ಯಾನಿಲಯದ ಬೋದೆನ್ ಸಂಸ್ಕ್ರತ ವಿದ್ಯಾರ್ಥಿವೇತನ ಈತನಿಗೆ ಲಭಿಸಿತು. ಅಲ್ಲಿಂದ ಮುಂದೆ ಐವತ್ತೇಳು ವರ್ಷಗಳ ಕಾಲ ನಿರಂತರವಾಗಿ, 1906ರವರೆಗೆ ಸಂಸ್ಕ್ರತ ಗ್ರಂಥಗಳ ಭಾಷಾಂತರ, ಅಧ್ಯಾಪನಗಳಲ್ಲಿ ನಿರತನಾದ.

ಎಂ.ಎ ಪದವಿ ಪಡೆದ ಮೊದಲ ಮೂರು ವರ್ಷಗಳ ಕಾಲ ಗ್ರಿಫಿತ್ ಇಂಗ್ಲೆಂಡಿನ ಮಾರ್ಲ್‍ಬರೋವಿನ ಕಾಲೇಜಿನಲ್ಲಿ ಸಹೋಪಾಧ್ಯಾಯನಾಗಿದ್ದು ಅನಂತರ 1853ರಲ್ಲಿ ಭಾರತೀಯ ವಿದ್ಯಾ ಇಲಾಖೆಯನ್ನು ಸೇರಿ ಬನಾರಸ್ ಕಾಲೇಜಿನಲ್ಲಿ 1863ರ ತನಕ ಇಂಗ್ಲಿಷ್ ಪ್ರಾಧ್ಯಾಪಕನಾದನಲ್ಲದೆ ಮುಂದೆ ಹದಿನೈದು ವರ್ಷಗಳ ಕಾಲ ಅಲ್ಲಿಯೇ ಪ್ರಿನ್ಸಿಪಾಲ್ ಆಗಿ ದುಡಿದ. 1878ರಲ್ಲಿ ಆಗಿನ ಔದ್ ಮತ್ತು ವಾಯುವ್ಯ ಪ್ರಾಂತಗಳ ವಿದ್ಯಾ ಇಲಾಖಾ ನಿರ್ದೇಶಕನಾಗಿ ಸೇವೆ ಸಲ್ಲಿಸಿ ತನ್ನ ಅರುವತ್ತನೆಯ ವರ್ಷದಲ್ಲಿ (1885) ವಿಶ್ರಾಂತಿ ಪಡೆದ.

ಎಂಬತ್ತು ವರ್ಷಗಳ ಸಾರ್ಥಕ ಜೀವನ ನಡೆಸಿ ಈತ ತನ್ನ ಇಪ್ಪತ್ತಾರನೆಯ ವಯಸ್ಸಿನಿಂದಲೇ ಸಂಸ್ಕøತ ಗ್ರಂಥಗಳ ಸಂಪಾದನೆ ಮತ್ತು ಭಾಷಾಂತರಕ್ಕೆ ಕೈ ಹಚ್ಚಿದ. 1 ಸ್ಪೆಸಿಮೆನ್ಸ್ ಆಫ್ ಓಲ್ಡ ಇಂಡಿಯನ್ ಪೊಯೆಟ್ರಿ 1852 ( ಪ್ರಾಚೀನ ಭಾರತೀಯ ಕಾವ್ಯ ಮಾದರಿಗಳು): 2 ದಿ ಬರ್ತ್ ಆಫ್ ದಿ ವಾರ್ ಗಾಡ್ 1853 ( ಕುಮಾರ ಸಂಭವ): 3 ಇಡಿಲ್ಸ್ ಫ್ರಂ ಸ್ಯಾನ್ಸ್‍ಕ್ರಿಟ್ 1866 ( ಸಂಸ್ಕøತ ಸಾಹಿತ್ಯದ ಮನಮೋಹಕ ದೃಶ್ಯಗಳು) : 4 ಸೀನ್ಸ್ ಫ್ರಂ ದಿ ರಾಮಾಯಣ 1868 (ರಾಮಾಯಣದ ಚಿತ್ರಗಳು), 5 ರಾಮಾಯಣದ ಪದ್ಯಾನುವಾದ ಐದು ಭಾಗಗಳೂ (1870-75): 6 ಋಗ್ವೇದ್, ನಾಲ್ಕು ಸಂಪುಟಗಳು 1989-92); 7 ಸಾಮವೇದ (1893); 8 ಅರ್ಥವೇದ, ಎರಡು ಸಂಪುಟಗಳು (1895-96) 9 ಶುಕ್ಲ ಯಜುರ್ವೇದ (1899). ಹೀಗೆ ಪ್ರಾಚೀನ ಭಾರತೀಯರ ಪವಿತ್ರ ಗ್ರಂಥಗಳು ಹಾಗೂ ನಾಲ್ಕು ವೇದಗಳನ್ನು ಇಂಗ್ಲಿಷಿಗೆ ಸಂಪೂರ್ಣವಾಗಿ ಭಾಷಾಂತರಿಸಿದ ಕೀರ್ತಿ ಗ್ರಿಫಿತನದು.

ಇಂಗ್ಲಿಷ್, ಸಂಸ್ಕøತ, ಹಿಂದಿ ಮತ್ತು ಷರ್ಪಿಯನ್ ಭಾಷೆಗಳನ್ನು ಅಭ್ಯಸಿಸಿ ಪಾಂಡಿತ್ಯ ಗಳಿಸಿದ ಈತನಿಗೆ ಆಗಿನ ಬ್ರಿಟಿಷ್ ಸರ್ಕಾರ ಸಿ.ಐ.ಇ. ಪ್ರಶಸ್ತಿಯನ್ನಿತ್ತಿತ್ತು. ಕಲ್ಕತ್ತ ವಿಶ್ವವಿದ್ಯಾಲಯ ತನ್ನ ಸದಸ್ಯತ್ವವನ್ನು (ಫೆಲೋಷಿಪ್) ಕೊಟ್ಟು ಗೌರವಿಸಿತು. ಭಾಷಾಭಿವೃದ್ದಿಗಾಗಿಯೇ; ಮೀಸಲಾಗಿದ್ದು ವಾರಾಣಸಿಯಿಂದ ಪ್ರಕಟವಾಗುತ್ತಿದ್ದ ಪಂಡಿತ ಎಂಬ ಸಂಸ್ಕøತ ನಿಯತಕಾಲಿಕೆಯೊಂದಕ್ಕೆ ಗ್ರಿಫಿತ್ ಸಂಪಾದಕನಾಗಿ ಕೆಲಸ, ಮಾಡಿದ. ಯಾವ ಐಹಿಕ ಜೀವನದ ಆಕರ್ಷಣೆಗಳಿಗೂ ಪಕ್ಕಾಗದ ಈತ ವಿಶ್ರಾಂತನಾದ ಮೇಲೂ ನೀಲಗಿರಿಯ ಕೋಟಗಿರಿಯಲ್ಲಿ ನೆಲಸಿ ನಾಲ್ಕು ವೇದಗಳನ್ನೂ ಇಂಗ್ಲಿಷಿಗೆ ಭಾಷಾಂತರ ಮಾಡುವ ಮಹಾಕಾರ್ಯವನ್ನು ಸಾಧಿಸಿದ.

ಗ್ರಿಫಿತ್ತನ ಸಮಾಧಿ ಕೋಟಗಿರಿಯಲ್ಲಿಯೇ ಇದೆ. (ಸಿ.ಜಿ.ಪಿ.)