ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೂ, ನೆಹೆಮಿಯ

ವಿಕಿಸೋರ್ಸ್ದಿಂದ

ಗ್ರೂ, ನೆಹೆಮಿಯ

1641-1712. ಇಂಗ್ಲೆಂಡಿನ ಪ್ರಖ್ಯಾತ ಅಂಗರಚನಾ ಶಾಸ್ತ್ರಜ್ಷ ಮತ್ತು ಶರೀರವಿಜ್ಷಾನಿ. ಇಂಗ್ಲೆಂಡಿನ ವಾರ್ ವಿಕ್‍ಷೈರ್ ಎಂಬಲ್ಲಿ ಸೆಪ್ಟಂಬರ್ 26, 1641ರಂದು ಜನನ. 1661ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಪದವೀಧರನಾಗಿ 1671ರಲ್ಲಿ ಲೀಡನ್ ವಿಶ್ವವಿದ್ಯಾಲಯದ ಎಂ.ಡಿ. ಪದವಿ ಪಡೆದು ಕೊವೆಂಟ್ರಿಯಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ. ಆದರೆ ಅಲ್ಲಿ ಹೆಚ್ಚು ಕಾಲ ಇರದೆ ಲಂಡನ್ನಿಗೆ ಹೋಗಿ ನೆಲೆಸಿದ. ಅಲ್ಲಿ ಬಹುಬೇಗನೆ ರಾಯಲ್ ಸೊಸೈಟಿಯ ಸದಸ್ಯನಾಗಿ ಆಯ್ಕೆಗೊಂಡ. 1677ರಲ್ಲಿ ಈ ಸಂಘದ ಕಾರ್ಯದರ್ಶಿಯೂ ಆದ. ಸಂಘದ ಕೋರಿಕೆಯ ಮೇರೆ 1681ರಲ್ಲಿ ನೈಸರ್ಗಿಕ ಮತ್ತು ಅಪೂರ್ವವಸ್ತುಗಳ ಪಟ್ಟಿ ಹಾಗೂ ವಿವರಣೆಯನ್ನೊಳಗೊಂಡ (ಕ್ಯಾಟಲಾಗ್ ಅಂಡ್ ಡಿಸ್ಕ್ರಿಪ್ಷನ್ ಆಫ್ ನ್ಯಾಚುರಲ್ ಅಂಡ್ ಆರ್ಟಿಫಿಷಿಯಲ್ ರೇರಿಟೀಸ್) ಎಂಬ ಗ್ರಂಥವನ್ನು ಬರೆದ.

ಸಸ್ಯ ಅಂಗರಚನಾ ಶಾಸ್ತ್ರದ ಸಹಸ್ಥಾಪಕನಾದ ಮಾಟಲ್ಟೀಗಿಯೊಂದಿಗೆ ಅವಿರತವಾಗಿ ದುಡಿದು ಅನಾಟಮಿ ಆಫ್ ವೆಜಿಟಬಲ್ಸ್ ಬಿಗುನ್ ಎಂಬ ಪುಸ್ತಕವನ್ನು 1672ರಲ್ಲಿ ಬರೆದ (ಅನಂತರ ಇದನ್ನು ಮಾಲ್ಪೀಗಿ ಲ್ಯಾಟಿನಿಗೆ ಭಾಷಾಂತರಿಸಿದ). ತುಲನಾತ್ಮಕ ಅಂಗರಚನಾಶಾಸ್ತ್ರ (ಕಂಪ್ಯಾರಟಿವ್ ಅನಾಟಮಿ) ಎಂಬ ಪದವನ್ನು ಮೊಟ್ಟಮೊದಲಿಗೆ ಬಳಕೆಗೆ ತಂದವ ಈತ. ಕಂಪ್ಯಾರಟಿವ್ ಅನಾಟಮಿ ಆಫ್ ಟ್ರಂಕ್ಸ್ ಎಂಬ ಪುಸ್ತಕವನ್ನು 1675ರಲ್ಲಯೂ ಕಂಪ್ಯಾರಟಿವ್ ಅನಾಟಮಿ ಆಫ್ ಸ್ಟಮಕ್ ಅಂಡ್ ಗಟ್ಸ್ ಎಂಬ ಹೊತ್ತಗೆಯನ್ನು 1681ರಲ್ಲಿಯೂ ಬರೆದು ಪ್ರಕಟಿಸಿದ. ಇದರಲ್ಲಿ ಸುಮಾರು 35 ಪ್ರಭೇದಗಳ ಅಂಗರಚನಾವಿವರಗಳು ಇವೆ. ಮರು ವರ್ಷ ಅಂದರೆ 1682ರಲ್ಲಿ ಸಸ್ಯಗಳ ಅಂಗರಚನಾಶಾಸ್ತ್ರ (ಅನಾಟಮಿ ಆಫ್ ಪ್ಲಾಂಟ್ಸ್) ಎಂಬ ಗ್ರಂಥ ಪ್ರಕಟವಾಯಿತು.

ಗ್ರೂ ವಿಜ್ಞಾನಕ್ಕಿತ್ತ ಕೊಡುಗೆಯಲ್ಲಿ ಅತ್ಯಂತ ಗಮನಾರ್ಹವಾದ ವಿಷಯವೆಂದರೆ ಸಸ್ಯಗಳಲ್ಲಿ ಹೂಗಳೇ ಜನನೇಂದ್ರಿಯ ಭಾಗಗಳೆಂದು ಕಂಡುಹಿಡಿದುದು. ಹೂಗಲ್ಲಿ ಪುಷ್ಪಪಾತ್ರೆ, ಪುಷ್ಪದಳ, ಕೇಸರ ಮತ್ತು ಅಂಡಾಶಯಗಳೆಂಬ ನಾಲ್ಕು ಭಾಗಗಳನ್ನು ಗುರುತಿಸಿ ಕೇಸರ ಮತ್ತು ಅಂಡಾಶಯಗಳನ್ನು ಅನುಕ್ರಮವಾಗಿ ಗಂಡು ಮತ್ತು ಹೆಣ್ಣು ಜನನೇಂದ್ರಿಯಗಳೆಂದು ಸ್ಪಷ್ಟಪಡಿಸಿದ. ಗ್ರೂ ಸಣ್ಣ ಗಿಡಗಳಲ್ಲಿನ ನಾಳಕೂರ್ಚಗಳ ಸೂಕ್ಷ್ಮ ಅಭ್ಯಾಸವನ್ನೂ ನಡೆಸಿದ. ಹಗೆ ಸಸ್ಯಗಳ ಅಂಗರಚನಾಶಾಸ್ತ್ರದ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಿದಾತ ಗ್ರೂ. ಇವನು ಮಾರ್ಚ್ 25, 1712ರಲ್ಲಿ ತನ್ನ 71ನೆಯ ವಯಸ್ಸಿನಲ್ಲಿ ಲಂಡನಿನಲ್ಲಿ ನಿಧನನಾದ. (ಎಸ್.ಡಿ.ಕೆ.)