ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ

ವಿಕಿಸೋರ್ಸ್ದಿಂದ

ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ

ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಉತ್ತರ ಐರ್ಲೆಂಡ್ ಇವುಗಳ ರಾಜಕೀಯ ಒಕ್ಕೂಟ. ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್ ಕೂಡಿ ಗ್ರೇಟ್ ಬ್ರಿಟನ್ ಆಗಿದೆ. ಸಂಯುಕ್ತ ರಾಜ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡು ಎರಡು ಮುಖ್ಯ ಭಾಗಗಳಾದರೂ ಐರಿಷ್ ಸಮುದ್ರದಲ್ಲಿರುವ ಐಲ್ ಆಫ್ ಮ್ಯಾನ್, ಫ್ರಾನ್ಸಿನ ವಾಯುವ್ಯತೀರದ ಬಳಿ ಇರುವ ಚ್ಯಾನಲ್ ದ್ವೀಪಗಳು - ಇವೂ ಅದರಲ್ಲಿ ಸೇರಿವೆ. ಈ ಲೇಖನದಲ್ಲಿ ಸಂಯುಕ್ತ ರಾಜ್ಯವನ್ನು ಮತ್ತು ಅದರ ಅಂಗಭೂತ ರಾಜ್ಯಗಳನ್ನು ಕುರಿತ ವಿಚಾರಗಳ ಸ್ಥೂಲ ವಿವೇಚನೆಯಿದೆ. ವಿವರಗಳಿಗೆ ಇಂಗ್ಲೆಂಡ್, ಸ್ಕಾಟ್ಲೆಂಡ್, ಐರ್ಲೆಂಡ್, ಚ್ಯಾನಲ್ ಐರ್ಲೆಂಡ್ಸ್, ಕಾಮನ್ವೆಲ್ತ್ ಇವನ್ನು ಕುರಿತ ಲೇಖನಗಳನ್ನು ನೋಡಿ.

ವೇಲ್ಸ್ ಮತ್ತು ಇಂಗ್ಲೆಂಡ್‍ಗಳ ಒಕ್ಕೂಟದ ಇತಿಹಾಸ 1301ರಲ್ಲಿ ಆರಂಭವಾಗುತ್ತದೆ. ಆ ವರ್ಷ ಇಂಗ್ಲೆಂಡಿನ ದೊರೆ 1ನೆಯ ಎಡ್ವರ್ಡನ ಮಗನನ್ನು ವೇಲ್ಸ್ ರಾಜಕುಮಾರನೆಂದು ಕರೆಯಲಾಯಿತು. ವೇಲ್ಸಿಗೆ ಪಾರ್ಲಿಮೆಂಟಿನಲ್ಲಿ ಪ್ರಾತಿನಿಧ್ಯವನ್ನು ನೀಡಿದ್ದು ಎಂಟನೆಯ ಹೆನ್ರಿಯ ಕಾಲದಲ್ಲಿ.

ಸಂಯುಕ್ತ ರಾಜ್ಯ ಎಂಬ ಹೆಸರನ್ನು ಮೊದಲ ಬಾರಿಗೆ ಬಳಸಿದ್ದು 1604 ರಲ್ಲಿ - ಸ್ಕಾಟ್ಲೆಂಡಿನ 6ನೆಯ ಜೇಮ್ ದೊರೆ ಇಂಗ್ಲೆಂಡಿನ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ ಮೇಲೆ. ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡುಗಳ ಪಾರ್ಲಿಮೆಂಟುಗಳು ಒಂದಾದಾಗ, 1707ರಲ್ಲಿ, ಸಂಯುಕ್ತ ರಾಜ್ಯ ಎಂಬ ಹೆಸರನ್ನು ಅಧಿಕೃತವಾಗಿ ಬಳಸಲಾಯಿತು.

ಐರ್ಲೆಂಡನ್ನು ಗ್ರೇಟ್ ಬ್ರಿಟನಿಗೆ ಸೇರಿಸಿದ್ದು 1801ರಲ್ಲಿ. ಆಗ ಈ `ಒಕ್ಕೂಟದ ಅಧಿಕೃತ ಹೆಸರು ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಸಂಯುಕ್ತ ರಾಜ್ಯ ಎಂದಾಯಿತು. 1922ರಲ್ಲಿ ಐರ್ಲೆಂಡಿನ 26 ಕೌಂಟಿಗಳು ಸಂಯುಕ್ತ ರಾಜ್ಯದಿಂದ ಬೇರ್ಪಟ್ಟು ಆ ಭಾಗ ಸ್ವತಂತ್ರ ರಾಜ್ಯವಾಯಿತು. ಮುಂದೆ ಗಣರಾಜ್ಯವಾಯಿತು. ಆ ಭಾಗ ಪ್ರತ್ಯೇಕವಾದಂದಿನಿಂದ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ ಎಂದಾಯಿತು. ಪಾರ್ಲಿಮೆಂಟು ಈ ಹೆಸರನ್ನು ಅಧಿಕೃತವಾಗಿ ಬಳಸಲಾರಂಭಿಸಿದ್ದು 1927ರಲ್ಲಿ, ಆ ಬಗ್ಗೆ ಅಧಿನಿಯಮವೊಂದರ ಮೂಲಕ, ರಾಜಮನೆತನಕ್ಕೆ ಸಂಬಂಧಿಸಿದಂತೆ ಈ ಹೆಸರನ್ನು ಬಳಸಲಾರಂಭಿಸಿದ್ದು 1953ರಲ್ಲಿ, ಎರಡನೆಯ ಎಲಿಜಬೆತಳನ್ನು ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯದ, ಆಕೆಯ ಇತರ ರಾಜ್ಯಗಳ ಮತ್ತು ಪ್ರದೇಶಗಳ ರಾಣಿಯೆಂದು ಆಗ ಘೋಷಿಸಲಾಯಿತು. ಇಡೀ ಸಂಯುಕ್ತ ರಾಜ್ಯಕ್ಕೆ ಒಂದೇ ಪಾರ್ಲಿಮೆಂಟ್ ಇದೆ. ಆದರೆ ಅದರ ಅಂಗಭೂತ ರಾಜ್ಯಗಳಲ್ಲಿ ಹೆಚ್ಚು ಕಡಿಮೆ ಸ್ವಯಮಾಧಿಕರವುಂಟು. ಸ್ಕಾಟ್ಲೆಂಡಿಗೆ ಅದರದೇ ಆದ ನ್ಯಾಯ ವ್ಯವಸ್ಥೆಯುಂಟು. ಸ್ಕಾಟ್ಲೆಂಡಿಗೂ ವೇಲ್ಸಿಗೂ ಪ್ರತ್ಯೇಕ ಸ್ಟೇಟ್ ಸೆಕ್ರೆಟರಿಗಳಿದ್ದಾರೆ. ಪಾರ್ಲಿಮೆಂಟಿನಲ್ಲಿ ಉತ್ತರ ಐರ್ಲೆಂಡಿಗೂ ಪ್ರಾತಿನಿಧ್ಯವಿರುವುದಾದರೂ ಗೃಹ ವ್ಯವಹಾರಗಳನ್ನು ನಿರ್ವಹಿಸಲು ಅದರದೇ ವಿಧಾನಮಂಡಲವೂ ಕಾರ್ಯಾಂಗವೂ ಉಂಟು. ಸಂಯುಕ್ತ ರಾಜ್ಯದ ವಿವಿಧ ಭಾಗಗಳ ವಿಸ್ತಿರ್ಣ ಮತ್ತು ಜನಸಂಖ್ಯೆಗಳನ್ನು ಕೆಳಗೆ ಕೊಟ್ಟಿದೆ :

ವಿಸ್ತಿರ್ಣ (ಚ. ಮೈ.), ಜನಸಂಖ್ಯೆ

ಇಂಗ್ಲೆಂಡ್ ಮತ್ತು ವೇಲ್ಸ್ 58348 4,83,90,000(1967ರ ಅಂದಾಜು)

ಸ್ಕಾಟ್ಲೆಂಡ್ 30,411 51,91,000 (1967 ರ ಅಂದಾಜು)

ಉತ್ತರ ಐರ್ಲೆಂಡ್ 5,206 14,84,800 (1966)

ಐಲ್ ಆಫ್ ಮ್ಯಾನ್ 227 50,423 (1966

ಚ್ಯಾನಲ್ ದ್ವೀಪಗಳು 28,712 ಎಕರೆ 63,345 (1961)


ಸಂಯುಕ್ತ ರಾಜ್ಯದ ದ್ವೀಪಗಳಲ್ಲಿ ಅತ್ಯಂತ ದೊಡ್ಡದು ಗ್ರೇಟ್ ಬ್ರಿಟನ್. ಇಂಗ್ಲೆಂಡ್, ಉತ್ತರದಲ್ಲಿರುವ ಸ್ಕಾಟ್ಲೆಂಡ್, ಪಶ್ಚಿಮಕ್ಕಿರುವ ವೇಲ್ಸ್ ಇವು ಇದರಲ್ಲಿ ಸೇರಿವೆ. ಪಶ್ಚಿಮ ಯೂರೋಪಿನಿಂದ ಇದನ್ನು ದಕ್ಷಿಣದಲ್ಲಿ ಇಂಗ್ಲೀಷ್ ಕಡಲ್ಗಾಲುವೆಯೂ ಪೂರ್ವದಲ್ಲಿ ಉತ್ತರ ಸಾಗರವೂ ಪ್ರತ್ಯೇಕಿಸುತ್ತವೆ. ಇದರ ಉತ್ತರ ಪಶ್ಚಿಮಗಳಲ್ಲಿ ಅಟ್ಲಾಂಟಿಕ್ ಸಾಗರವಿದೆ. ಐರ್ಲೆಂಡ್ ಇರುವುದು ಪಶ್ಚಿಮಕ್ಕೆ. ಗ್ರೇಟ್ ಬ್ರಿಟನಿಗೂ ಐರ್ಲೆಂಡಿಗೂ ನಡುವೆ ಐರಿಷ್ ಸಮುದ್ರವಿದೆ.

ಗ್ರೇಟ್ ಬ್ರಿಟನಿನ ವಾಯುಗುಣ ಸಮಶೀತೋಷ್ಣದ್ದು. ಇಲ್ಲಿ ಭಾಷೆ ಇಂಗ್ಲಿಷ್. ವೇಲ್ಸಿನಲ್ಲಿ ವೆಲ್ಷ್ ಭಾಷೆ ಹೆಚ್ಚಾಗಿ ಬಳಕೆಯಲ್ಲಿದೆ. ಇಲ್ಲಿಯ ಜನ ವಿಶೇಷವಾಗಿ ಚರ್ಚ್ ಆಫ್ ಇಂಗ್ಲೆಂಡಿಗೆ ನಡೆದುಕೊಳ್ಳುತ್ತಾರೆ. ರೋಮನ್ ಕ್ಯಾಥೊಲಿಕ್, ಮೆಥಾಡಿಸ್ಟ್, ಪ್ರೆಸ್ಬೆಟೀರಿಯನ್, ಕಾಂಗ್ರೆಗೇಷನಲ್ ಮತ್ತು ಬ್ಯಾಪ್ಟಿಸ್ಟ್ ಮತಗಳನ್ನು ಅನುಸರಿಸುವವರೂ ತಕ್ಕಮಟ್ಟಿನ ಸಂಖ್ಯೆಗಳಲ್ಲಿದ್ದಾರೆ. ಇಲ್ಲಿ 5 ಲಕ್ಷ ಯಹೂದ್ಯರುಂಟು. ಮುಖ್ಯ ಪಟ್ಟಣ ಲಂಡನ್.

ಐರ್ಲೆಂಡಿನ ಈಶಾನ್ಯದಲ್ಲಿರುವ ಪ್ರದೇಶ ಉತ್ತರ ಐರ್ಲೆಂಡ್. ಇದು ಸಂಯುಕ್ತ ರಾಜ್ಯದ ಭಾಗ. ಆಲ್ಸ್ಟರಿನ ಆರು ಕೌಂಟಿಗಳಾದ ಆಂಟ್ರಿಂ, ಆರ್ಮಾ, ಡೌನ್, ಫಮ್ರ್ಯಾನ, ಲಂಡನ್‍ಡೆರಿ, ಟಿರೋನ್ — ಇವು ಉತ್ತರ ಐರ್ಲೆಂಡಿಗೆ ಸೇರಿವೆ.

ಉತ್ತರ ಐರ್ಲೆಂಡಿನದು ಸಮಶೀತೋಷ್ಣ ವಾಯುಗುಣ. ಭಾಷೆ ಇಂಗ್ಲಿಷ್. ಜನಸಂಖ್ಯೆಯ ಮೂರನೆಯ ಎರಡು ಭಾಗ ಪ್ರಾಟೆಸ್ಟಂಟರು. ಉಳಿದವರು ಬಹುತೇಕ ರೋಮನ್ ಕ್ಯಾಥೊಲಿಕರು. ಮುಖ್ಯ ಪಟ್ಟಣ ಬೆಲ್ಫಾಸ್ಟ್.

ಐರ್ಲೆಂಡಿನ ಶಾಸನಾಧಿಕಾರವನ್ನು ಪಾರ್ಲಿಮೆಂಟು ಚಲಾಯಿಸುತ್ತದೆ. ಇದು ಸೆನೆಟ್ ಮತ್ತು ಕಾಮನ್ಸ್ ಸಭೆಗಳನ್ನೊಳಗೊಂಡಿದೆ. ಐರ್ಲೆಂಡಿನ ಪ್ರದೇಶಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಶಾಸನ ರಚಿಸಲು ಪಾರ್ಲಿಮೆಂಟಿಗೆ ಅಧಿಕಾರವಿದೆ. ವಿದೇಶ ನೀತಿ, ರಕ್ಷಣೆ ಮುಂತಾದ ಇತರ ವಿಚಾರಗಳನ್ನು ಸಂಯುಕ್ತ ರಾಜ್ಯ ಪಾರ್ಲಿಮೆಂಟು ಕಾದಿರಿಸಿಕೊಂಡಿದೆ. ಸೆನೆಟ್ ಸದಸ್ಯರನ್ನು ಕಾಮನ್ಸ್ ಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ. ಕಾಮನ್ಸ್ ಸಭೆಯ ಸದಸ್ಯರ ಚುನಾವಣೆ ಐದು ವರ್ಷಗಳಿಗೊಮ್ಮೆ. 21 ವರ್ಷಗಳಿಗೆ ಮೇಲ್ಪಟ್ಟ ಎಲ್ಲರಿಗೂ ಮತಾಧಿಕಾರವುಂಟು. ಉತ್ತರ ಐರ್ಲೆಂಡಿನಿಂದ 12 ಮಂದಿ ಸದಸ್ಯರು ಸಂಯುಕ್ತ ರಾಜ್ಯದ ಪಾರ್ಲಿಮೆಂಟಿಗೆ ಚುನಾಯಿತರಾಗುತ್ತಾರೆ. ಐರ್ಲೆಂಡಿನ ಕಂಬಲ್ರ್ಯಾಂಡ್ ತೀರಕ್ಕೂ ಉತ್ತರ ಐರ್ಲೆಂಡಿಗೂ ಮಧ್ಯೆ, ಐರಿಷ್ ಸಮುದ್ರದಲ್ಲಿ, ಐಲ್ ಆಫ್ ಮ್ಯಾನ್ ಇದೆ. ಅದರ ಆಡಳಿತಕ್ಕೆ ಪ್ರತ್ಯೇಕ ಕಾನೂನುಗಳಿವೆ. ಅದರ ವಿಧಾನ ಮಂಡಲದಲ್ಲಿ (ಟಿನ್ವಾಲ್ಡ್) ಲೆಜಿಸ್ಲೆಟಿವ್ ಕೌನ್ಸಿಲ್ (ವಿಧಾನ ಪರಿಷತ್ತು) ಮತ್ತು ಹೌಸ್ ಆಫ್ ಕೀಸ್ ಎಂಬ ಎರಡು ಸದನಗಳಿವೆ. ಇವು ಸಂಯುಕ್ತವಾಗಿ ಅಧಿವೇಶನ ನಡೆಸುವುದಾದರೂ ಕೆಲವು ವಿನಾ ಉಳಿದೆಲ್ಲ ವಿಷಯಗಳನ್ನು ಕುರಿತು ಪ್ರತ್ಯೇಕವಾಗಿ ಮತ ನೀಡುತ್ತವೆ. ಹೌಸ್ ಆಫ್ ಕೀಸ್‍ನಲ್ಲಿ ವಯಸ್ಕ ಮತದಾನದ ಮೇಲೆ ಐದು ವರ್ಷಗಳ ಅವಧಿಗೆ ಆಯ್ಕೆಯಾದ 24 ಸದಸ್ಯರು ಇರುತ್ತಾರೆ. ಲೆಜಿಸ್ಲೆಟಿವ್ ಕೌನ್ಸಿಲ್‍ನಲ್ಲಿ ಗವರ್ನರ್, ಲಾರ್ಡ್ ಬಿಷಪ್, ಪ್ರಥಮ ಡೀಮ್ಸ್ಟರ್ (ನ್ಯಾಯಾಧೀಶ), ಅಟಾರ್ನಿ ಜನರಲ್, ಗವರ್ನರನಿಂದ ಆಯ್ಕೆಯಾದ ಇಬ್ಬರು, ಹೌಸ್ ಆಫ್ ಕೀಸ್‍ನಿಂದ ಆಯ್ಕೆಯಾದ ಐವರು - ಇವರು ಸದಸ್ಯರು. ಸುಂಕ, ವರಮಾನ ತೆರಿಗೆ ಇವು ಟಿನ್ವಾಲ್ಡ್ ಅಧಿಕಾರವ್ಯಾಪ್ತಿಗೆ ಒಳಪಟ್ಟಿವೆ. ಕೀಸ್ ಸಭೆಗೆ ಗವರ್ನರ್ ಆಯವ್ಯಯವನ್ನೊಪ್ಪಿಸುತ್ತಾನೆ. 1958ರ ಅಧಿನಿಯಮದ ಪ್ರಕಾರ ವಿತ್ತೀಯ ವ್ಯವಹಾರಗಳಲ್ಲಿ ಟಿನ್ವಾಲ್ಡ್‍ಗೆ ಹೆಚ್ಚಿನ ಅಧಿಕಾರಗಳು ದತ್ತವಾಗಿವೆ. ಕೀಸ್ ಸಭೆಯ ಐವರು ಮತ್ತು ಲೆಜಿಸ್ಲೆಟಿವ್ ಕೌನ್ಸಿಲಿನ ಇಬ್ಬರು ಸದಸ್ಯರನ್ನೊಳಗೊಂಡ ಆಡಳಿತ ಮಂಡಲಿಯೊಂದು ಗವರ್ನರನೊಂದಿಗೆ ಕಾರ್ಯ ನಿರ್ವಹಿಸಲು ರಚಿತವಾಗಿದೆ. ಐಲ್ ಆಫ್ ಮ್ಯಾನ್‍ಗೆ ಅದರದೇ ಆದ ನ್ಯಾಯ ವ್ಯವಸ್ಥೆಯಿದೆ.

ಚ್ಯಾನೆಲ್ ದ್ವೀಪಗಳು ಫ್ರಾನ್ಸಿನ ವಾಯುವ್ಯತೀರದಾಚೆಗೆ ಇವೆ. ನಾರ್ಮಂಡಿಯ ಡಚಿಯ ಭಾಗ ಮಾತ್ರ ಈಗ ಇಂಗ್ಲೆಂಡ್ ಪ್ರಭುತ್ವಕ್ಕೆ ಸೇರಿದೆ. ನಾರ್ಮನ್ ವಿಜಯದ ಕಾಲದಿಂದಲೂ ಇವು ಈ ಪ್ರಭುತ್ವದ ಅಡಿಯಲ್ಲಿವೆ. ಈ ದ್ವೀಪಸ್ತೋಮದಲ್ಲಿರುವ ಜರ್ಸಿ, ಗರ್ನ್‍ಸಿ, ಆಲ್ಡರ್ನಿ ಮತ್ತು ಸಾರ್ಕ್ ದ್ವೀಪಗಳಲ್ಲಿ ಜರ್ಸಿ ಅತ್ಯಮತ ದೊಡ್ಡ ದ್ವೀಪ. ಆಲ್ಡರ್ನಿ ಅತ್ಯಂತ ಉತ್ತರದಲ್ಲೂ ಜರ್ಸಿ ಅತ್ಯಂತ ದಕ್ಷಿಣದಲ್ಲೂ ಇವೆ. ಜರ್ಸಿಯ ಲೆಫ್ಟೆನಂಟ್ ಗವರ್ನರ್ ಹಾಗೂ ಮಹಾ ದಂಡಾಧಿಕಾರಿಯೇ ಅಲ್ಲಿಯ ಆಡಳಿತ ಮುಖ್ಯಸ್ಥ. ಈತ ಇಂಗ್ಲೆಂಡಿನ ದೊರೆ ಅಥವಾ ರಾಣಿಯಿಂದ ನೇಮಕವಾಗುತ್ತಾನೆ. ಸ್ಟೇಟ್ ಸಬೆಯಲ್ಲಿ ಪೀಠಸ್ಥನಾಗಲೂ ಮಾತಾಡಲೂ ಇವನಿಗೆ ಅಧಿಕಾರವುಂಟು. ಆದರೆ ಮತಾಧಿಕಾರವಿಲ್ಲ. ಸ್ಟೇಟ್ಸ್ ಸಭೆಯ ಹಾಗೂ ಜರ್ಸಿಯ ರಾಯಲ್ ಕೋರ್ಟಿನ ಅಧ್ಯಕ್ಷನಾದ ಬೆಯ್ಲಿಫನೂ ದೊರೆ ಅಥವಾ ರಾಣಿಯಿಂದ ನೇಮಕವಾಗುತ್ತಾನೆ. ರಾಜ್ಯಗಳಿಂದ ನೇಮಕವಾದ ಸಮಿತಿಗಳು ಇಲ್ಲಿಯ ಆಡಳಿತ ನಡೆಸುತ್ತವೆ. ಇಲ್ಲಿಯ ಅಧಿಕೃತ ಭಾಷೆ ಫ್ರೆಂಚ್. ಆದರೆ ಇಂಗ್ಲಿಷ್ ದಿನಬಳಕೆಯ ಭಾಷೆ. (ಎಸ್.ಎನ್.ಎ.ಆರ್.ಇ.)

ಸಂವಿಧಾನ : ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯದ ಸಂವಿಧಾನ ವಿಶ್ವದ ಪ್ರಜಾಪ್ರಭುತ್ವ ಸಂವಿಧಾನಗಳಲ್ಲಿ ಅದ್ವಿತೀಯವಾದ್ದು. ಪುರಾತನತೆ, ಪ್ರೌಢಿಮೆ, ಸಮಯೋಚಿತವಾಗಿ ಹೊಂದಿಕೊಳ್ಳುವ ಸಾಮಥ್ರ್ಯ ಮತ್ತು ಬಾಳಿಕೆಗೆ ಇದು ಹೆಸರಾಂತಿದೆ. ನಮ್ಯವೂ ಅಲಿಖಿತವೂ ಆಗಿರುವುದು ಇದರ ವೈಶಿಷ್ಟ್ಯ. ಬ್ರಿಟನಿನ ಸಂವಿಧಾನ ಯಾವ ಒಂದು ಸಂಸ್ಥೆಯಿಂದಲೂ ಯಾವ ಒಂದು ನಿರ್ದಿಷ್ಟ ಕಾಲದಲ್ಲೂ ಪೂರ್ಣವಾಗಿ ತಯಾರಿಸಲ್ಪಟ್ಟದಲ್ಲ. ಅನೇಕ ಶತಮಾನಗಳ ಅವಧಿಯಲ್ಲಿ ದೈನಂದಿನ ರಾಜಕೀಯ ವ್ಯವಹಾರ ಸಂದರ್ಭಗಳಲ್ಲಿ ಉತ್ತಮ ಮಾರ್ಗದರ್ಶನ ನೀಡಲು ಬೆಳೆದು ಬಂದ ಮೂಲಭೂತ ನಿಯಮ ಸಂಯಮಗಳ ರಾಶಿಯಿದು. ಬ್ರಿಟನಿನ ಸಂವಿಧಾನದ ಮುಖ್ಯ ಮೂಲಗಳು ಇವು : 1 ಪಾರ್ಲಿಮೆಂಟಿನ ಶಾಸನಗಳು, 2 ನ್ಯಾಯಾಲಯಗಳ ತೀರ್ಪುಗಳು, 3 ರಾಜ್ಯಾಂಗದ ಸಂಪ್ರದಾಯಗಳು ಮತ್ತು 4 ರಾಜ್ಯಶಾಸ್ತ್ರ ಮತ್ತು ನ್ಯಾಯಶಾಸ್ತ್ರ ಪಂಡಿತರ ಬರವಣಿಗೆಗಳು.

ಸಂಸದೀಯ ಪ್ರಜಾಪ್ರಭುತ್ವ, ಕಾನೂನುಬದ್ಧವಾದ ಆಡಳಿತ ಮತ್ತು ವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನೇ ಮುಖ್ಯ ಗುರಿಯಾಗಿ ಉಳ್ಳ ಈ ಸಂವಿಧಾನ ಪ್ರಧಾನಮಂತ್ರಿಯಿಂದ ಸಾಮಾನ್ಯ ನಾಗರಿಕನವರೆಗಿನ ಎಲ್ಲ ಅಧಿಕಾರಗಳು ಮತ್ತು ಪ್ರಜೆಗಳನ್ನೂ ಏಕರೂಪವಾದ ಕಾನೂನು ಮತ್ತು ನ್ಯಾಯಾಲಯಗಳಿಗೆ ಬದ್ಧರನ್ನಾಗಿ ಮಾಡುತ್ತದೆ. ಆದ್ದರಿಂದಲೇ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯದಲ್ಲಿ ಸ್ವೇಚ್ಚಾವರ್ತಿಯಲ್ಲದ, ಕಾನೂನುಬದ್ಧವಾದ, ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಪ್ರಜಾಪ್ರಭುತ್ವ ಆಡಳಿತ ಶೋಭಿಸುತ್ತದೆ.

ಏಕಾತ್ಮಕವಾದ ವಿಭಿನ್ನಾಧಿಕಾರತತ್ತ್ವರಹಿತವಾದ ಬ್ರಿಟನಿನ ಸಂವಿಧಾನದಲ್ಲಿ ಕಂಡುಬರುವ ಮುಖ್ಯ ಸಂಸ್ಥೆಗಳು ನಾಲ್ಕು : ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪುರಾತನವಾದ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಚರ್ಚುಗಳು. ಈ ಸಂಸ್ಥೆಗಳು ಪರಸ್ಪರಾವಲಂಬಿಗಳೂ ಸಹಕಾರದಿಂದ ಕೆಲಸ ಮಾಡುವವೂ ಆದ ಸಂಸ್ಥೆಗಳಾಗಿವೆ.

ರಾಜಪ್ರಭುತ್ವ : ಬ್ರಿಟನಿನ ಪ್ರಜಾಪ್ರಭುತ್ವ ಚರಿತ್ರಾರ್ಹವಾದ್ದು. ಆದರೂ ಅಲ್ಲಿ ರಾಜಪ್ರಭುತ್ವ ಪ್ರಾಚೀನ ಕಾಲದಿಂದಲೂ ಇವೆ. ಇಂದು ಈ ಪ್ರಜಾಪ್ರಭುತ್ವ ನಾಮಮಾತ್ರವಾದ್ದು ಮತ್ತು ಬಹುಪಾಲು ಸಾಂಕೇತಿಕವಾದ್ದು. ಬ್ರಿಟನಿನ ರಾಜಪೀಠ ರಾಜ್ಯದ ಎಲ್ಲ ಅಂಗಗಳಿಗೂ ಮುಖ್ಯವಾದ್ದು. ರಾಜ್ಯದ ಎಲ್ಲ ಅಧಿಕಾರಗಳೂ ಈ ಪೀಠದಲ್ಲಿ ಉದ್ಭವಿಸಿ ಮುಂದೆ ಹರಿಯುತ್ತವೆ. ಇವುಗಳ ನಿರ್ವಹಣೆಯಲ್ಲಿ ಈ ಪೀಠ ಸಾಂಕೇತಿಕವಾದ ಪಾತ್ರ ವಹಿಸುತ್ತದೆ. ಇದರ ಅಧಿಕಾರ ಸಾಂಕೇತಿಕವಾದರೂ ಆಡಳಿತದ ಮೇಲೆ ಇದರ ಪ್ರಭಾವವನ್ನು ಅಲ್ಲಗೆಳೆಯುವಂತಿಲ್ಲ. ಬ್ರಿಟನಿನ ರಾಜ ಅಥವಾ ರಾಣಿಗೆ ಆಡಳಿತದ ಸಕಲ ಆಗುಹೋಗುಗಳ ಮತ್ತು ನೀತಿಗಳ ಬಗ್ಗೆ ವಿಚಾರ ತಿಳಿಯುವ ಹಕ್ಕಿದೆ ಮತ್ತು ನಿರಂತರವಾದ, ತನ್ನ ಅನುಭವಾಧಾರಿತವಾದ ಸಲಹೆ ನೀಡುವ ಹಕ್ಕೂ ಇದೆ. ರಾಜನ ಸಲಹೆಗೆ ಬ್ರಿಟನಿನ ಸರ್ಕಾರ ಪದ್ಧತಿಯಲ್ಲಿ ಸೂಕ್ತ ಪುರಸ್ಕಾರ ನೀಡಲಾಗುತ್ತಿದೆ. 1701 ರ,1936ರ ಅಧಿನಿಯಮಗಳಲ್ಲಿ ವಿವರಿಸಿ ನಿಯಂತ್ರಿಸಿರುವ ರೀತಿಯಲ್ಲಿ ರಾಜಪ್ರಭುತ್ವ ವಂಶಾನುಗತವಾದ ಒಂದು ಸ್ಥಾನವಾಗಿದೆ.

ನ್ಯಾಯಾಂಗ : ಬ್ರಟಿನಿನ ನ್ಯಾಯಾಂಗ ಭಾರತ ಅಥವಾ ಅಮೆರಿಕದ ಸಂಯುಕ್ತ ಸಂಸ್ಥಾನಗಳ ನ್ಯಾಯಾಂಗಗಳಷ್ಟು ಅಧಿಕಾರಯುತವಲ್ಲ. ಸಂವಿಧಾನ ಅಲಿಖಿತವಾಗಿರುವುದರಿಂದಲೂ ಪಾರ್ಲಿಮೆಂಟು ಸಾರ್ವಭೌಮವಾದ್ದರಿಂದಲೂ ವಿಧಿಯುಕ್ತವಾಗಿ ತಯಾರಿಸಲಾದ ಸಂಸದೀಯ ಅಧಿನಿಯಮಗಳನ್ನು ತಿರಸ್ಕರಿಸುವ ಅಧಿಕಾರ ಬ್ರಿಟನಿನ ನ್ಯಾಯಾಂಗಕ್ಕಿಲ್ಲ. ಆದರೂ ಪಾರ್ಲಿಮೆಂಟಿನ ಹತೋಟಿ ಒಂದನ್ನು ಬಿಟ್ಟರೆ ಬ್ರಿಟನಿನ ನ್ಯಾಯಾಂಗ ಸ್ವತಂತ್ರವಾಗಿಯೂ ಸಮರ್ಥವಾಗಿಯೂ ಕಾನೂನು ಬದ್ಧ ಆಡಳಿತವನ್ನು ರಕ್ಷಿಸುವುದರಲ್ಲಿ ಬಹು ಉಪಯುಕ್ತವಾಗಿದೆ.

ಇಂಗ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡಿನ ನ್ಯಾಯಾಲಯಗಳಿಗೆ ಏಕಸ್ವರೂಪವಿಲ್ಲದ್ದೇ ಬ್ರಿಟನಿನ ನ್ಯಾಯಾಂಗ ವ್ಯವಸ್ಥೆಯ ಒಂದು ವಿಶೇಷಗುಣ. ಇಲ್ಲಿ ಸಿವಿಲ್ ಮತ್ತು ಕದ್ರಿಮಿನಲ್ ವ್ಯಾಜ್ಯಗಳಿಗೆ ಸಾಮಾನ್ಯವಾಗಿ ಬೇರೆ ಬೇರೆ ಪ್ರಾಥಮಿಕ ಮತ್ತು ಅಪೀಲು ಕೋರ್ಟುಗಳಿವೆ. ಉಚ್ಚ ನ್ಯಾಯಾಲಯದಲ್ಲಿ ಮೂರು ಮುಖ್ಯ ವಿಭಾಗಗಳಿವೆ : 1 ಚಾನ್ಸೆರಿ ವಿಭಾಗ, 2 ರಾಣಿಯ ಬೆಂಚಿನ ವಿಭಾಗ ಮತ್ತು 3 ಆಡ್ಮಿರಾಲ್ಟಿ ವಿಭಾಗಗಳು. ಇವುಗಳ ತೀರ್ಮಾನದ ವಿರುದ್ಧ ಕೋರ್ಟ್ ಆಫ್ ಅಪೀಲಿಗೆ ಮೇಲರ್ಜಿ ಹಾಕಲು ಅವಕಾಶವುಂಟು. ಬ್ರಿಟನ್ನಿನ ಪರಮೋನ್ನತ ನ್ಯಾಯಾಲಯವೆಂದರೆ ಹೌಸ್ ಆಫ್ ಲಾಡ್ರ್ಸ. ಹೌಸ್ ಆಫ್ ಲಾಡ್ರ್ಸ್ ನ್ಯಾಯಾಲಯವಾಗಿ ಕುಳಿತಾಗ ಸಾಮಾನ್ಯವಾಗಿ ಲಕಾರ್ಡ್ ಚಾನ್ಸಲರನ ಅಧ್ಯಕ್ಷತೆಯಲ್ಲಿ ಆ ಸದನದ ಲಾ ಲಾರ್ಡ್‍ಗಳು ಮತ್ತು ನ್ಯಾಯಶಾಸ್ತ್ರ ಪರಿಣತರಾದ ಇತರ ಲಾರ್ಡ್‍ಗಳು ಮಾತ್ರ ಭಾಗವಹಿಸುತ್ತಾರೆ.

ಕಾರ್ಯಾಂಗ : ಬ್ರಿಟನಿನ ಸರ್ಕಾರವನ್ನು ಸಂಪುಟ ಸರ್ಕಾರ ಎಂದು ಕರೆಯುವುದು ಉಂಟು. ಇದಕ್ಕೆ ಕಾರಣವೆಂದರೆ ಬ್ರಿಟನಿನ ಸರ್ಕಾರ ವ್ಯವಸ್ಥೆಯಲ್ಲಿ ಸಂಪುಟಕ್ಕಿರುವ ಪ್ರಧಾನ ಪಾತ್ರ. ಮಧ್ಯಯುಗದ ಕ್ಯೂರಿಯ ರೆಜಿಸ್, ಟ್ಯೂಡರ್ ಕಾಲದ ರಾಜ ಸಮಿತಿ ಮತ್ತು 17ನೆಯ ಶತಮಾನದ ಪ್ರಿವಿ ಕೌನ್ಸಿಲಿನ ಸಮಿತಿ - ಇವುಗಳಿಂದ ಉದ್ಭವಿಸಿದ ಸಚಿವ ಸಂಪುಟ ಇಂದಿನ ವಾಸ್ತವಿಕ ಕಾರ್ಯಾಂಗ. ರಾಜರ ಆಹ್ವಾನದ ಮೇಲೆ ಸಂಸತ್ತಿನ ಬಹುಮತ ಪಕ್ಷದ ನಾಯಕ ಪ್ರಧಾನ ಮಂತ್ರಿಯಾಗಿ ತನ್ನ ಇಚ್ಛೆಗನುಸಾರ ಇತರ ಸಚಿವರ ನೇಮಕವನ್ನು ಕುರಿತು ಸಲಹೆ ನೀಡಿ ರಾಜನಿಂದ ನೇಮಕ ಮಾಡಿಸಿಕೊಂಡು ಸಂಪುಟವನ್ನು ರಚಿಸುತ್ತಾನೆ ; ಸಾಮಾನ್ಯವಾಗಿ ಬ್ರಿಟಿಷ್ ಸರ್ಕಾರದಲ್ಲಿ 20 ಮಂದಿ ಸಂಪುಟ ಸಚಿವರಲ್ಲದೆ 20 ಸಂಪುಟೇತರ ಮಂತ್ರಿಗಳೂ 50 ಮಂದಿ ಕಿರಿಯ ಮಂತ್ರಿಗಳೂ ಇರುತ್ತಾರೆ. ಸಾಮಾನ್ಯವಾಗಿ ಸಂಪುಟದ ಸಚಿವರು ಮತ್ತು ವಿಶೇಷವಾಗಿ ಇತರ ಸಚಿವರು ಇಲಾಖೆಗಳ ಮುಖ್ಯಸ್ಥರಾಗಿ ಕಿರಿಯ ಮಂತ್ರಿಗಳ ಸಹಾಯದಿಂದ ಆಡಳಿತ ನಡೆಸುತ್ತಾರೆ. ಸಚಿವ ಸಂಪುಟ ಇಡೀ ಆಡಳಿತಕ್ಕೆ ನಾಯಕತ್ವ ನೀಡುತ್ತದೆ. ರಾಜನ ಹೆಸರಿನಲ್ಲಿ ಎಲ್ಲ ಆಡಳಿತ ನಡೆದರೂ ಸರ್ಕಾರದ ಕೀಲಿಕೈ ಸಚಿವ ಸಂಪುಟದ ಕೈಯಲ್ಲಿದೆ. ಸಚಿವರು ವೈಯಕ್ತಿಕವಾಗಿಯೂ ಒಟ್ಟಾಗಿಯೂ ತಮ್ಮ ಆಡಳಿತದ ಬಗ್ಗೆ ಸಂಸತ್ತಿಗೆ ಉತ್ತರವಾದಿಗಳಾಗಿದ್ದು ಅದರ ಹತೋಟಿಗೆ ಒಳಗಾಗಬೇಕಾಗುತ್ತದೆ. ಸಚಿವ ಸಂಪುಟ ಮುಖ್ಯವಾದ್ದಾದರೂ ಅದರ ಅಳಿವು ಉಳಿವು ಸಂಸತ್ತಿನ ವಿಶ್ವಾಸವನ್ನು ಆಧರಿಸಿರುವುದರಿಂದಲೇ ಬ್ರಿಟಿಷ್ ಸರ್ಕಾರವನ್ನು ಸಂಸದೀಯ (ಪಾರ್ಲಿಮೆಂಟರಿ) ಪ್ರಭುತ್ವವೆಂದು ಕರೆಯಲಾಗುತ್ತದೆ.

ಪಾರ್ಲಿಮೆಂಟ್ : ಬ್ರಿಟನಿನ ಶಾಸಕಾಂಗವಾದ ಪಾರ್ಲಿಮೆಂಟ್ (ಸಂಸತ್ತು) ಮಧ್ಯಯುಗದ ಕ್ಯೂರಿಯ ರೆಜಿಸ್‍ನಿಂದ ಉದ್ಭವಿಸಿದ್ದು. 1688ರ ಕ್ರಾಂತಿಕಾರಿ ಒಪ್ಪಂದದ ಪ್ರಕಾರ ರಾಜನಿಂದ ಸಾರ್ವಭೌಮತ್ವವನ್ನು ಸಂಸತ್ತು ಪಡೆದುಕೊಂಡ ಮೇಲೆ ಬ್ರಿಟನಿನ ಸರ್ಕಾರದಲ್ಲಿ ಅದರ ಪ್ರಭುತ್ವ ಮತ್ತು ಪ್ರಭಾವಗಳು ವೃದ್ಧಿಯಾದವು. ಬ್ರಿಟನಿನ ಸಂಸತ್ತಿ ನಲ್ಲಿ ಎರಡು ಶಾಸನ ಸಭೆಗಳಿವೆ : 1 ಹೌಸ್ ಆಫ್ ಲಾಡ್ರ್ಸ್ ಮತ್ತು 2 ಹೌಸ್ ಆಫ್ ಕಾಮನ್ಸ್. ಉತ್ತರ ಐರ್ಲೆಂಡಿಗೆ ಪ್ರತ್ಯೇಕವಾದ ಒಂದು ಸಂಸತ್ತು ಇದೆ. ಬ್ರಿಟನಿನ ಪಾರ್ಲಿಮೆಂಟು ರಾಜ್ಯದ ಎಲ್ಲ ಭಾಗಗಳನ್ನೂ ಪ್ರತಿನಿಧಿಸುವುದಲ್ಲದೆ ಇಡೀ ರಾಜ್ಯಕ್ಕೆ ಶಾಸನ ಮಾಡುವ ಹಕ್ಕೂ ಪಡೆದಿದೆ. ಉತ್ತರ ಐರ್ಲೆಂಡಿನ ಪಾರ್ಲಿಮೆಂಟು ಉತ್ತರ ಐರ್ಲೆಂಡಿಗೆ ಸಂಬಂಧಿಸಿದ ಆಂತರಿಕ ವಿಚಾರಗಳ ಮೇಲೆ ಶಾಸನ ಮಾಡುವ ಹಕ್ಕು ಹೊಂದಿದೆ.

ಹೌಸ್ ಆಫ್ ಲಡ್ರ್ಸ್ : ಸಮತಾವಾದವನ್ನು ಆಧರಿಸಿದ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅಸಮತೆಯ ಹೆಗ್ಗುರುತಾದ ಲಾರ್ಡ್‍ಗಳಿಗೆ ಪ್ರತ್ಯೇಕವಾದ ಒಂದು ಸಭೆ ಇರುವುದರ ಔಚಿತ್ಯದ ಬಗ್ಗೆ ಎಷ್ಟೇ ವಾದಗಳಿದ್ದರೂ ಬ್ರಿಟನಿನ ಸಂವಿಧಾನದಲ್ಲಿ ಹೌಸ್ ಆಫ್ ಲಾಡ್ರ್ಸ್‍ನ್ನು ರದ್ದುಗೊಳಿಸುವ ಕಾರ್ಯಕ್ಕೆ ಯಾವಾಗಲೂ ಬ್ರಿಟನಿನಲ್ಲಿ ಬಹುಮತ ದೊರೆತಿಲ್ಲ. ಆದ್ದರಿಂದಲೇ ಸುಮಾರು 900 ಮಂದಿಯಷ್ಟು ಸದಸ್ಯರಿರುವ ಹೌಸ್ ಆಫ್ ಲಾಡ್ರ್ಸ್ ಸಭೆ ಇಂದಿಗೂ ಇದೆ. ಈ ಸಭೆಯಲ್ಲಿ ವಂಶಾನುಗತ ಪೀರ್‍ಗಳು, ರಾಜರಿಂದ ನೇಮಿಸಲ್ಪಟ್ಟ ಪೀರ್‍ಗಳು ಮತ್ತು ಲಾ ಲಾರ್ಡ್‍ಗಳು, ಜೀವಾವಧಿ ಪೀರ್‍ಗಳು, ಪಾರಮಾರ್ಥೀಕ ಪೀರ್‍ಗಳು ಸ್ಕಾಟ್ಲೆಂಡಿನ ಪ್ರತಿನಿಧಿ ಪೀರ್‍ಗಳು - ಎಂಬ ಆರು ಬಗೆಯ ಲಾರ್ಡ್ ಸದಸ್ಯರಿದ್ದಾರೆ. ಪ್ರಜಾಪ್ರತಿನಿಧಿಗಳನ್ನು ಹೊಂದಿರದ ಈ ಸಭೆಗೆ ಪ್ರತಿನಿಧಿ ಸಭೆಗಿಂತ ಹೆಚ್ಚಿನ ಅಥವಾ ಸಮನಾದ ಹಕ್ಕೂ ಇರಬಾರದೆಂಬ ಕಾರಣದಿಂದ ಕ್ರಮೇಣ ಲಾಡ್ರ್ಸ್ ಸಭೆಯ ಅಧಿಕಾರಗಳು ಕಡಿಮೆಯಾಗುತ್ತ ಬಂದಿವೆ. ಹಣಕಾಸು ವಿಧೇಯಕಗಳ ಮೇಲೆ ಹೌಸ್ ಆಫ್ ಲಾಡ್ರ್ಸ್‍ಗೆ ಇದ್ದ ಅಧಿಕಾರವನ್ನು ಪಾರ್ಲಿಮೆಂಟ್ ಆಕ್ಟ್ ಎಂಬ ಅಧಿನಿಯಮ ಮೊಟಕು ಮಾಡಿತು. ಲಾರ್ಡ್ ಚಾನ್ಸಲರ್ ಈ ಸಭೆಯ ಅಧ್ಯಕ್ಷತೆ ವಹಿಸುತ್ತಾನೆ. ಅವರ ಗೈರುಹಾಜರಿಯಲ್ಲಿ ರಾಜರಿಂದ ನೇಮಿಸಲ್ಪಟ್ಟ ಉಪಾಧ್ಯಕ್ಷ ಅಧ್ಯಕ್ಷತೆ ವಹಿಸುತ್ತಾನೆ. ಸದಸ್ಯರಾದವರೆಲ್ಲರೂ ಸಾಮಾನ್ಯವಾಗಿ ಸಭೆಯಲ್ಲಿ ಭಾಗವಹಿಸದೆ, ರಾಜಕಾರಣದಲ್ಲಿ ವಿಶೇಷ ಆಸಕ್ತಿ ಮತ್ತು ಅನುಭವಗಳನ್ನುಳ್ಳ ಲಾರ್ಡ್‍ಗಳು ಮಾತ್ರ ಭಾಗವಹಿಸುವುದರಿಂದ ಇದರ ಕಾರ್ಯಾಚರಣೆ ಹೌಸ್ ಆಫ್ ಕಾಮನ್ಸಿನ ಕಾರ್ಯಕ್ಕೆ ಪೂರಕವಾಗಿದ್ದು ಫಲದಾಯಕವಾಗಿರುತ್ತದೆ. ತಜ್ಞರಲ್ಲದ, ವಂಶಗತ ಅಥವಾ ಸ್ಥಾನಗಳ ಲಾರ್ಡ್‍ಗಳು ಭಾಗವಹಿಸುವುದರಿಂದ ಉಂಟಾಗಬಹುದಾದ ಅಸಮಂಜಸತೆಯನ್ನು ಹೋಗಲಾಡಿಸಿ, ಲಾಡ್ರ್ಸ್ ಸಭೆಯ ಪ್ರತಿಭೆ ಮತ್ತು ಪ್ರಭಾವವನ್ನು ಹೆಚ್ಚಿಸುವ ಉದ್ದೇಶದಿಂದ ತಜ್ಞ ಅನುಭವಿಗಳನ್ನು ಜೀವಾವಧಿ ಲಾರ್ಡ್‍ಗಳಿಗಾಗಿ ನೇಮಿಸಲು 1958ರ ಲೈಫ್ ಪೀರೇಜಸ್ ಅಧಿನಿಯಮ ಅವಕಾಶ ಮಾಡಿಕೊಟ್ಟಿದೆ.

ಹೌಸ್ ಆಫ್ ಕಾಮನ್ಸ್ : ಬ್ರಿಟನಿನ ಸರ್ಕಾರದ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯವಾದ ಮತ್ತು ಶಕ್ತವಾದ ಸಂಸ್ಥೆ ಎಂದರೆ ಹೌಸ್ ಆಫ್ ಕಾಮನ್ಸ್ (ಕಾಮನ್ಸ್ ಸಭೆ). ಏಕಸದಸ್ಯ ಪ್ರಾದೇಶಿಕ ಕ್ಷೇತ್ರಗಳಿಂದ ಚುನಾಯಿತರಾಗುವ 630 ಸದಸ್ಯರಿಂದ ಕುಡಿದ ಈ ಸಭೆ ರಾಷ್ಟ್ರದ ಎಲ್ಲ ಪ್ರಜೆಗಳನ್ನೂ ಪ್ರತಿನಿಧಿಸುತ್ತದೆ. 1949ರ ಪ್ರಜಾಪ್ರಾತಿನಿಧ್ಯ ಅಧಿನಿಯಮದ ಪ್ರಕಾರ ನಡೆಯುವ ಈ ಸಭೆಗೆ ಸಂಬಂಧಪಟ್ಟ ಸಾರ್ವತ್ರಿಕ ಅಥವಾ ಉಪ - ಚುನಾವಣೆಗಳಲ್ಲಿ ಬ್ರಿಟನಿನ 18 ಮತ್ತು ಅದಕ್ಕೂ ಹೆಚ್ಚಿನ ವಯಸ್ಕರಾದ, ಎಲ್ಲ ಪ್ರಜೆಗಳೂ ಗುಪ್ತವಾಗಿ ಮತ ನೀಡವ 21 ಮತ್ತು ಅದಕ್ಕೂ ಹೆಚ್ಚಿನ ವಯಸ್ಕರಾದ ಯಾವ ಅರ್ಹ ಪ್ರಜೆಯಾಗಲಿ ಅಭ್ಯರ್ಥಿಯಾಗುವ ಹಕ್ಕು ಪಡೆದಿರುತ್ತಾರೆ. ಇದರ ಸದಸ್ಯರಾಗಿ ತಮ್ಮ ಕಾರ್ಯನಿರ್ವಹಣೆಗಾಗಿ ವರ್ಷಕ್ಕೆ 2,000 ಪೌಂಡುಗಳಷ್ಟು ವೇತನವೂ 1,250 ಪೌಂಡುಗಳಷ್ಟು ಪಾರ್ಲಿಮೆಂಟರಿ ಭತ್ಯವೂ ಕಾರ್ಯದರ್ಶಿಗಳ ಸೇವೆ ಪಡೆಯಲು 500 ಪೌಂಡುಗಳಿಗೆ ಮೀರದಂತೆ ಸಹಾಯ ಧನವೂ ದೊರೆಯುತ್ತದೆ. ಇದರ ಸದಸ್ಯತ್ವ ಬಹಳ ಗೌರವಪ್ರಾಯವಾದ್ದು.

ವರ್ಷದಲ್ಲಿ ಸುಮರು 165 ದಿವಸಗಳ ಕಾಲ ಅಧಿವೇಶನ ನಡೆಸುವ ಈ ಸಭೆ ನಿಷ್ಪಕ್ಷಪಾತವಾದ ಸ್ಪೀಕರನ (ಸಭಾಪತಿ) ಅಧ್ಯಕ್ಷತೆಯಲ್ಲಿ, ಅನೇಕ ಸಮಿತಿಗಳ ಸಹಾಯದಿಂದ ದಕ್ಷತೆಯಿಂದ ಕೆಲಸ ನಿರ್ವಹಿಸುವುದು ಸಾಧ್ಯವಾಗಿದೆ. ಸರ್ಕಾರದ ಅಳಿವು ಉಳಿವು, ನೀತಿ ನಿಯಮಗಳು ಮತ್ತು ಹಣಕಾಸಿನ ಆಯವ್ಯಯಗಳನ್ನು ನಿಯಂತ್ರಿಸುವ ಹಕ್ಕು ಈ ಸಭೆಗೆ ಇದೆ. ಈ ಸಭೆ ದಕ್ಷತೆಯಿಂದ ಕಾರ್ಯನಿರ್ವಹಿಸಲು ಒಂದು ಮುಖ್ಯ ಕಾರಣವೆಂದರೆ ಮಾನ್ಯತೆ ಮತ್ತು ಕಾರ್ಯಾನುಕೂಲಗಳನ್ನು ಪಡೆದ ದಕ್ಷ, ಸಂಘಟಿತ ಮತ್ತು ಸೂಕ್ತಸಂಖ್ಯಾಬಲ ಇರುವಂಥ ವಿರೋಧ ಪಕ್ಷ. ವಿರೋಧವನ್ನು ಪ್ರಭಾವಯುತವೂ ಜವಾಬ್ದಾರಿಯುತವೂ ಪರಿಣತವೂ ಆದ್ದನ್ನಾಗಿ ಮಡಲು ವಿರೋಧ ಪಕ್ಷ ತನ್ನದೇ ಆದ ಸಂಪುಟವನ್ನು ರಚಿಸಿ ಸರ್ಕಾರವನ್ನು ನೆರಳಿನಂತೆ ಹಿಂಬಾಲಿಸುತ್ತದೆ. ಈ ವಿರೋಧಿ ಸಂಪುಟಕ್ಕೆ ಛಾಯಾ ಸಂಪುಟ (ಷ್ಯಾಡೋ ಕ್ಯಾಬಿನೆಟ್) ಎಂದು ಹೆಸರು. ಇಂಥ ಪ್ರಬಲ ವಿರೋಧ ಪಕ್ಷವೂ ಕೂಡಿದ ದ್ವಿಪಕ್ಷ ಪದ್ಧತಿ ಇರುವುದರಿಂದಲೇ ಬ್ರಿಟನಿನ ಸರ್ಕಾರ ಜುವಾಬ್ದಾರಿಯುತವೂ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವಂಥದೂ ಆಗಿರುತ್ತದೆ. ಸಂಸತ್ತಿನ ಒಳಗೂ ಹೊರಗೂ ಸಂವಿಧಾನವನ್ನು ನಡೆಸಲು ದ್ವಿಪಕ್ಷಪದ್ಧತಿ ಬಹಳ ಸಹಾಯಕವಾಗಿದೆ.

ಪೌರಸ್ವಾತಂತ್ರ್ಯ : ಪೌರಸ್ವಾತಂತ್ರ್ಯಕ್ಕೆ ಅನೇಕ ಶತಮಾನಗಳಿಂದಲೂ ಬ್ರಿಟನ್ನು ವಿಶೇಷ ಮಾನ್ಯತೆ ನೀಡಿದೆ. ಆದರು ಬ್ರಿಟಿಷ್ ಪೌರನ ಹಕ್ಕು ಸ್ವಾತಂತ್ರ್ಯಗಳಿಗೆ ಯಾವುದೇ ಒಂದು ಮೂಲವಿಲ್ಲ. 1679ರ ಆಸಾಮಿ ಹಾಜರಿ (ಹೇಬಿಯಸ್ ಕರ್ಪಸ್) ಅಧಿನಿಯಮ, 1689ರ ಬಿಲ್ ಆಫ್ ರೈಟ್ಸ್, ಸಂಪ್ರದಾಯ ನ್ಯಾಯ (ಕಾಮನ್ ಲಾ) - ಇವು ಬ್ರಿಟನಿನ ಪೌರಸ್ವಾತಂತ್ರ್ಯದ ಮೂಲಗಳು. ಇವುಗಳ ಆಧಾರದ ಮೇಲೆ ವಾಕ್‍ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಸ್ವತ್ತಿನ ಸ್ವಾತಂತ್ರ್ಯ, ಮತೀಯ ಸ್ವಾತಂ5ತ್ರ್ಯ, ರಾಜಕೀಯ ಸ್ವಾತಂತ್ರ್ಯ ಮುಂತಾದ ಪ್ರಜಾಪ್ರಭುತ್ವದಲ್ಲಿ ದೊರೆಯುವ ಎಲ್ಲ ಸ್ವಾತಂತ್ರ್ಯಗಳೂ ಉದ್ಭವಿಸಿವೆ. ಕಾನೂನುಬದ್ಧ ಆಡಳಿತ ಪದ್ಧತಿಯನ್ನು ಅನುಸರಿಸಲು ಕಾರ್ಯಾಂಗಕ್ಕೆ, ಶಾಸಕಾಂಗಕ್ಕೆ ಮತ್ತು ನ್ಯಾಯಾಲಯಕ್ಕಿರುವ ವಿಶೇಷ ಅಧಿಕಾರ, ಎಲ್ಲಕ್ಕಿಂತ ಹೆಚ್ಚಾಗಿ ಪೌರರಿಗೆ ತಮ್ಮ ಹಕ್ಕಿನ ಬಗ್ಗೆ ಇರುವ ಪ್ರೇಮ, ಏನೇ ಆದರೂ ಅದನ್ನು ರಕ್ಷಿಸಿಕೊಳ್ಳಲು ಅವರಿಗಿರುವ ಅಸೆ - ಇವು ಪ್ರಜಾಸ್ವಾತಂತ್ರ್ಯದ ಮುಖ್ಯ ರಕ್ಷಣೆಗಳು. ಆದರೂ ಯುದ್ಧವೇ ಮುಂತಾದ ತುರ್ತುಪರಿಸ್ಥಿತಿಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪೌರ ಸ್ವಾತಂತ್ರ್ಯವನ್ನು ಪರಿಮಿತಗೊಳಿಸುವ ಅಧಿಕಾರ ಸರ್ಕಾರಕ್ಕೆ ಹಲವು ಅಧಿನಿಯಮಗಳಿಂದ ದತ್ತವಾಗಿದೆ.

ರಕ್ಷಣೆ : ರಕ್ಷಣಾ ನೀತಿಯನ್ನು ರೂಪಿಸಿ ನಿರ್ದೇಶಿಸುವ ಪರಮ ಜವಾಬ್ದಾರಿ ಪ್ರಧಾನ ಮಂತ್ರಿ ಮತ್ತು ಸಂಪುಟದ್ದು. ಸಹಾಯಕ್ಕೆ ರಕ್ಷಣಾ ಮತ್ತು ವಿದೇಶ ನೀತಿ ಕುರಿತ ಸಚಿವ ಸಂಪುಟ ಸಮಿತಿ ಉಂಟು. ಆದರೆ ರಕ್ಷಣಾ ನೀತಿಯ ವಾಸ್ತವಿಕ ನಿರೂಪಣೆ ರಕ್ಷಣಾ ಸಚಿವನದು (ಸೆಕ್ರೆಟರಿ ಆಶಫ್ ಸ್ಟೇಟ್ ಫಾರ್ ಡಿಫೆನ್ಸ್). ಈತನಿಗೆ ನೆರವು ನೀಡಲು ಒಂದು ರಕ್ಷಣಾ ಸಮಿತಿ ಇದೆ. ರಕ್ಷಣಾ ಸಚಿವನೇ ಅಧ್ಯಕ್ಷನನ್ನಾಗಿ ಉಳ್ಳ ಈ ಉನ್ನತ ಸಮಿತಿಯಲ್ಲಿ ರಕ್ಷಣಾ ಇಲಾಖೆಯ ರಾಜ್ಯ ಸಚಿವ, ನೌಕಾಬಲ, ಸೈನ್ಯಬಲ ಮತ್ತು ವಾಯುಬಲ ಇಲಾಖೆಗಳ ಉಪಸಚಿವರುಗಳು ಮತ್ತು ಈ ಬಲಗಳ ಮುಖ್ಯ ದಂಡನಾಯಕರು, ರಕ್ಷಣಾ ಬಲಗಳ ಶ್ರೇಷ್ಠ ದಂಡನಾಯಕ, ಸಂಶೋಧನೆ ಮತ್ತು ಯೋಜನೆಗಳ ಮುಖ್ಯ ಸಲಹೆಗಾರರು, ಸಿಬ್ಬಂದಿ ಮತ್ತು ಸಾಧನಗಳ ಮುಖ್ಯಾಧಿಕಾರಿ ಇವರು ಇರುತ್ತಾರೆ. ಈ ಸಮಿತಿಗೆ ತಾಂತ್ರಿಕ ಸಲಹೆ ನೀಡಲು ಮೂರು ಮುಖ್ಯ ದಂಡನಾಯಕರಿಂದ ಕೂಡಿದ, ರಕ್ಷಣಾ ಬಲಗಳ ಶ್ರೇಷ್ಠ ದಂಡನಾಯಕರ ಅಧ್ಯಕ್ಷತೆಯಲ್ಲಿ ಸೇರುವ ದಂಡನಾಯಕರ ಸಮಿತಿ ಇದೆ. ಈ ವ್ಯವಸ್ಥೆ ರಕ್ಷಣೆ ಕುರಿತ ನಿಯಮ ಮತ್ತು ಯೋಜನೆಗಳನ್ನು ರೂಪಿಸುತ್ತದೆ. ಈ ಸಂಬಂಧವಾದ ದೈನಂದಿನ ಆಡಳಿತವನ್ನು ನೌಕಾ, ಸೇನಾ ಮತ್ತು ವಾಯುಬಲ ಮಂಡಳಿಗಳು ನಡೆಸುತ್ತವೆ.

ಸೇನೆ : ಬ್ರಿಟನಿನ ಅಂತರ್ಯುದ್ಧದ ಕಾಲದಲ್ಲಿ ಕ್ರಾಮ್ವೆಲ್ ಆಧುನಿಕ ಸೇನೆಯ ತಳಹದಿಯನ್ನು ಹಾಕಿದಂದಿನಿಂದ ಬ್ರಿಟಿಷ್ ಸೇನೆ ಆಧುನಿಕ ತರಬೇತು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆದ ಮಹಾಬಲವಾಗಿ ಬೆಳೆದುಬಂದಿದೆ. ಸುಮಾರು 30 ವಿವಿಧ ಅಂಗಗಳಾಗಿ ವ್ಯವಸ್ಥೆಗೊಂಡಿರುವ ಬ್ರಿಟಿಷ್ ಸೇನೆ ಬ್ರಿಟನಿನ ಒಳಗೂ ಹೊರಗೂ ಅನೇಕ ಕಮ್ಯಾಂಡ್‍ಗಳಾಗಿ ವ್ಯವಸ್ಥೆಗೊಂಡಿದೆ. ಇದರ ದೈನಂದಿನ ಆಡಳಿತವನ್ನು ಸೇನಾ ಮಂಡಳಿಯ ಸಹಾಯದಿಂದ ಸೇನಾಮುಖ್ಯ ದಂಡನಾಯಕ ನಡೆಸುತ್ತಾನೆ.

ನೌಕಬಲ : ಕ್ರಾಮ್‍ವೆನಿಂದಲೇ ಆಧುನಿಕಗೊಂಡ ಬ್ರಿಟಿಷ್ ನೌಕಾಪಡೆ 18 ಮತ್ತು 19ನೆಯ ಶತಮಾನಗಳಲ್ಲಿ ಸಾಗರಗಳ ರಾಣಿಯಾಗಿ ಶೋಭಿಸಿ ಬ್ರಿಟಿಷ್ ಚಕ್ರಾಧಿಪತ್ಯವನ್ನು ರಚಿಸಿ ರಕ್ಷಿಸಿತು. ಆದರೆ ಬ್ರಿಟನಿನ ಇಂದಿನ ನೌಕಾಬಲ ಅಮೇರಿಕ ಸಂಯುಕ್ತ ಸಂಸ್ಥಾನಗಳ ಮತ್ತು ಸೋವಿಯೆತ್ ಒಕ್ಕೂಟದ ನೌಕಾ ಬಲಗಳಷ್ಟು ಬಲಿಷ್ಠವಾಗಿಲ್ಲ. ನಾಲ್ಕು ಮುಖ್ಯ ಅಂಗಗಳಿರುವ ನೌಕಾಬಲವನ್ನು ಹಲವು ತೀರ ಕಮ್ಯಾಂಡ್‍ಗಳು ಮತ್ತು ಸಮುದ್ರದ ಕಮ್ಯಾಂಡ್‍ಗಳಾಗಿ ವ್ಯವಸ್ಥಿಸಲಾಗಿದೆ. ಇದರ ದೈನಂದಿನ ಆಡಳಿತವನ್ನು ಆಡ್ಮಿರಾಲ್ಟಿ ಬೋರ್ಡು ಅಥವಾ ನೌಕಾಬಲದ ಮಂಡಲಿಯ ಸಹಾಯದಿಂದ ನೌಕಾಧಿಪತಿ ನಿರ್ವಹಿಸುತ್ತಾನೆ.

ವಾಯುಬಲ : ವಾಯುಪಡೆಯ ನಿರ್ಮಾಣದಲ್ಲಿ ಬ್ರಿಟನ್ ಇತರ ರಾಷ್ಟ್ರಗಳಿಗಿಂತ ಸ್ವಲ್ಪ ಹಿಂದಾಗಿತ್ತೆಂದು ಹೇಳಬೇಕು. 1880ರಲ್ಲಿ ಅದು ಒಂದು ಬಲೂನ್ ವಿಭಾಗವನ್ನು ಪಡೆದಿತ್ತು. ಒಂದನೆಯ ಮಹಾಯುದ್ಧದ ಅಂತ್ಯದಲ್ಲಿ, ಎಂದರೆ 1918ರ ಏಪ್ರಿಲ್ ಒಂದರಂದು. ರಾಯಲ್ ಏರ್ ಫೋರ್ಸ್ ಎಂಬ ಪೂರ್ಣರೂಪದ ವಾಯುಬಲವನ್ನು ಸ್ಥಾಪಿಸಿತು. ಎರಡನೆಯ ಮಹಾಯುದ್ಧದ ಪೂರ್ವದ ಕಾಲದಲ್ಲಿ ಮತ್ತು ಅನಂತರ ತ್ವರೆಯಾಗಿ ಅಭಿವೃದ್ಧಿಗೊಂಡ ಬ್ರಿಟಿಷ್ ವಾಯುಪಡೆ ನೂತನ ಯುದ್ಧ ವಿಮಾನಗಳೇ ಅಲ್ಲದೆ ಪರಮಾಣು ಬಾಂಬುಗಳು, ಕ್ಷಿಪಣಿಗಳು, ರೇಡಾರ್‍ಗಳು ಮುಂತಾದ ಎಲ್ಲ ಆಧುನಿಕ ಶಸ್ತ್ರಾಸ್ತ್ರರಗಳಿಂದ ಸಜ್ಜಿತವಾದ ಒಂದು ಶ್ರೇಷ್ಠ ಬಲವಾಗಿದೆ. ವಾಯುಬಲದ ದಂಡನಾಯಕ ವಾಯುಮಂಡಲಿಯ ಸಹಾಯದಿಂದ ಇದರ ಆಡಳಿತ ನಡೆಸುತ್ತಾನೆ. ಈ ಬಲವನ್ನು ಆಂತರಿಕವಾಗಿ ಕಾರ್ಯಾಧಾರದ ಮೇಲೂ ವಿದೇಶಗಳಲ್ಲಿ ಭೌಗೋಳಿಕ ಆಧಾರದ ಮೇಲೂ ಅನೇಕ ಕಮ್ಯಾಂಡ್‍ಗಳಾಗಿ ವ್ಯವಸ್ಥೆಗೊಳಿಸಲಾಗಿದೆ.

ನಾಗರಿಕ ರಕ್ಷಣೆ : ಯುದ್ಧಪ್ರಯತ್ನಗಳಿಗೆ ಆಂತರಿಕವಾಗಿ ಪೂರಕವಾಗಿ ನಾಗರಿಕ ರಕ್ಷಣಾ ವ್ಯವಸ್ಥೆಯೊಂದು ಎರಡನೆಯ ಮಹಾಯುದ್ಧದ ಕಾಲದಲ್ಲಿ ಆರಂಭಗೊಂಡು, ಯುದ್ಧಾನಂತರ 1848ರ ನಾಗರಿಕ ರಕ್ಷಣಾ ಕಾನೂನಿನ ಆಧಾರದ ಮೇಲೆ ಪುನರ್ರರಚಿತವಾದ ಮತ್ತು ಶಾಶ್ವತವಾದ ವ್ಯವಸ್ಥೆಯಾಯಿತು. ಈ ವ್ಯವಸ್ಥೆಯಲ್ಲಿ 1 ದಿ ಸಿವಿಲ್ ಡಿಫೆನ್ಸ ಕೋರ್, 2 ದಿ ಇಂಡಸ್ಟ್ರಯಲ್ ಸಿವಿಲ್ ಡಿಪೈನ್ಸ ಕೋರ್, 3 ದಿ ಆಕ್ಸಿಲಿಯರಿ ಫೈರ್ ಸರ್ವಿಸ್ ಮತ್ತು 4 ದಿ ನ್ಯಾಷನಲ್ ಹಾಸ್ಪಟಲ್ ಸರ್ವಿಸ್ ಎಂಬ ನಾಲ್ಕು ಸ್ವಯಂಸೇವಕ ದಳಗಳಲ್ಲದೆ, ತುರ್ತು ಪರಿಸ್ಥಿಯ ಸಂಪರ್ಕ ನಿರ್ವಹಣ ವ್ಯವಸ್ಥೆ ಮತ್ತು ಸಂಯುಕ್ತರಾಜ್ಯ ವಾರ್ನಿಂಗ್ ಮತ್ತು ಮಾನಿಟಿಯರಿಂಗ್ ಸಂಸ್ಥೆಯೂ ಸೇರಿವೆ. 1968ರಿಂದ ಈಚೆಗೆ ಈ ಕ್ಷೇತ್ರದಲ್ಲಿಯ ವ್ಯವಸ್ಥೆಯನ್ನು ಅವಶ್ಯಕವೆನಿಸುವಷ್ಟಕ್ಕೆ ಮಾತ್ರ ಮಿತಿ ಗೊಳಿಸಲಾಗಿದೆ. ಆದರೂ ಹೊಸವಿಧಾನಗಳ ಜ್ಞಾನ ಮತ್ತು ತರಬೇತು ಪಡೆಯಲು ಪ್ರಯತ್ನಗಳು ಮುಂದುವರಿಯುತ್ತಿವೆ.

(ಎಂ.ಯು.ಎಂ.)

ಶಿಕ್ಷಣ ಪದ್ಧತಿ : ಜ್ಞಾನ ಲಾಭ ಪಡೆದು ಬಲ್ಲ ಎಲ್ಲ ಪೌರರಿಗೂ ವ್ಯಾಪಕವಾದ ಶಿಕ್ಷಣ ಸೇವಾ ಸೌಲಭ್ಯವನ್ನೊದಗಿಸುವುದು ಸಂಯುಕ್ತ ರಾಜ್ಯದ ಶಿಕ್ಷಣ ನೀತಿಯಾಗಿವೆ. ಸರ್ಕಾರದಿಂದ, ಹಾಗೂ ಸರ್ಕಾರದ ಧನಸಹಾಯದಿಂದ ನಡೆಯುವ ಶಾಲೆಗಳ ಸ್ಥಾಪನೆ ಅಧ್ಯಾಪಕರಿಗೆ ತಕ್ಕಷ್ಟು ಸ್ವಾತಂತ್ರ್ಯ, ಆಡಳಿತದ ವಿಕೇಂದ್ರೀಕರಣ, ಸ್ವಯಂ ಸೇವಾ ಕರ್ತರ ಪ್ರಮುಖ ಪಾತ್ರ, ವಿಶ್ವವಿದ್ಯಾಲಯಗಳ ವಿದ್ಯಾಸ್ವಾತಂತ್ರ್ಯ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ-ಇವು ಇಲ್ಲಿಯ ಶಿಕ್ಷಣವ್ಯವಸ್ಥೆಯ ಮುಖ್ಯ ಲಕ್ಷಣಗಳು, ವರ್ಷವರ್ಷಕ್ಕೂ ಇಲ್ಲಿಯ ಶಿಕ್ಷಣ ಸೌಲಭ್ಯ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಕಡ್ಡಾಯ ಶಿಕ್ಷಣದ ವಯೋಮಿತಿಯ ಅನಂತರವೂ ಎಂದರೆ 16 ವರ್ಷಗಳ ಅನಂತರವೂ ಶಿಕ್ಷಣ ಪಡೆಯಲಾಶಿಸುವುದೇ ಇದಕ್ಕೆ ಕಾರಣ. ಸಂಯುಕ್ತ ರಾಜ್ಯದ ಎಲ್ಲ ರಾಜ್ಯಗಳಲ್ಲೂ ಮೇಲಿನ ಸಾಮಾನ್ಯ ಶಿಕ್ಷಣ ನೀತಿಯನ್ನು ಕಾಣಬಹುದಾದರೂ ಇಂಗ್ಲೆಂಡ್ ಮತ್ತು ವೇಲ್ಸ, ಸ್ಕಾಟ್ಲೆಂಡ್, ಉತ್ತರ ಐರ್ಲೆಂಡ್-ಈ ಮೂರು ರಾಜ್ಯಗಳಲ್ಲಿ ಒಂದೊಂದು ತನ್ನದೇ ಆದ ರೀತಿಯಲ್ಲಿ ತನ್ನ ಶಿಕ್ಷಣ ಪದ್ಧತಿಯನ್ನು ರೂಪಿಸಿಕೊಂಡು ತನ್ನದೇ ಆದ ವೈಶಿಷ್ಟ್ಯಗಳನ್ನು ರೂಢಿಸಿಕೊಂಡಿದೆ; ಕೆಲಕೆಲವು ವೈಲಕ್ಷಣಗಳನ್ನೂ ಹೊಂದಿದೆ. ಆದ್ದರಿಂದ ಸ್ಪಷ್ಟತೆಯ ಉದ್ದೇಶಕ್ಕಾಗಿ ಈ ಮೂರು ರಾಜ್ಯಗಳ ಪದ್ಧತಿಗಳನ್ನು ಪ್ರತ್ಯೇಕವಾಗಿ ವಿವರಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸಿನಲ್ಲಿ ಶಿಕ್ಷಣ : ಇಂಗ್ಲೆಂಡ್ ಮತ್ತು ವೇಲ್ಸಿನಲ್ಲಿ ಬಹು ಹಿಂದಿನಿಂದಲೂ ವಿಶ್ವವಿದ್ಯಾಲಯದ ವೆರೆಗಿನ ಶಿಕ್ಷಣ ಸೌಲಭ್ಯದ ವ್ಯವಸ್ಥೆ ನಡೆದು ಕೊಂಡೇ ಬಂದಿದೆ. ಆದರೆ ಎಲ್ಲರಿಗೂ ಆ ಸೌಲಭ್ಯವೊದಗುಸುವ ಕಾರ್ಯ 19ನೆಯ ಶತಮಾನದಲ್ಲಿ ಆರಂಭವಾಯಿತೆನ್ನಬಹುದು. ಸರ್ಕಾರ 1833ರಲ್ಲಿ ಶಿಕ್ಷಣಕ್ಕಾಗಿ ಮೊಟ್ಟ ಮೊದಲು ಹಣ ಒದಗಿಸಿತು. 1870ರ ಶಿಕ್ಷಣ ಶಾಸನದ ಅನಂತರ ಸರ್ಕಾರದ ಹಣದಿಂದ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಆರಂಭವಾಗಿ ಕಡ್ಡಾಯ ಶಿಕ್ಷಣದ ತತ್ತ್ವ ಆಚರಣೆಗೆ ಬಂತು. ಪ್ರೌಢ ಶಿಕ್ಷಣಕ್ಕೆ ಸರ್ಕಾರದ ಹಣವನ್ನು ವಿನಿಯೋಗಿಸುವುದು ಇಂಗ್ಲೆಂಡಿನಲ್ಲಿ 1889ರಿಂದಲೂ ವೇಲ್ಸಿನಲ್ಲಿ 1902ರಿಂದಲೂ ಆರಂಭವಾಯಿತು. ಸದ್ಯದಲ್ಲಿ ಆ ಎರಡು ದೇಶಗಳಲ್ಲೂ ಇರತಕ್ಕ ಶಿಕ್ಷಣ ಪದ್ಧತಿ 1944ರ ಶಿಕ್ಷಣ ಶಾಸನದ ಆಧಾರದ ಮೇಲೆ ವ್ಯವಸ್ಥೆಗೊಂಡಿದೆ. ಈ ಎರಡು ದೇಶಗಳಲ್ಲೂ ಏಕರೀತಿಯ ಶಿಕ್ಷಣ ಸಂಸ್ಥೆಗಳನ್ನೂ ಕಾರ್ಯಕ್ರಮಗಳನ್ನೂ ಕಾಣಬಹುದು. ವಿಶ್ವವಿದ್ಯಾಲಯದ ಶಿಕ್ಷಣ 12ನೆಯ ಶತಮಾನದ ಅಂತ್ಯದಿಂದ ಆರಂಭವಾಯಿತು. ಇತ್ತೀಚಿನವರೆಗೂ ಇಂಗ್ಲೆಂಡ್ ಮತ್ತು ವೇಲ್ಸಿಗೆ ಆಕ್ಸಫರ್ಡ್ ಮತ್ತು ಕೇಂಬ್ರಿಜ್ ಇವೆರಡೇ ವಿಶ್ವವಿದ್ಯಾಲಯಗಳಿದ್ದು ಅನಂತರ 19ನೆಯ ಶತಮಾನದಲ್ಲಿ 13 ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆಯಾದುವು. ಸದ್ಯದಲ್ಲಿ ಒಟ್ಟು 34 ವಿಶ್ವವಿದ್ಯಾಲಯಗಳಿವೆ. ಒಂದು ಬಹಿರಂಗ ವಿಶ್ವವಿದ್ಯಾಲಯವೂ 1970ರಿಂದ ಕಾರ್ಯಾರಂಭ ಮಾಡಿದೆ. ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲೂ ಸ್ಥಳೀಯ ಸರ್ಕಾರದ ಕಾಲೇಜುಗಳಲ್ಲೂ ಪಾಲಿಟಕ್ನಿಕ್ ಮತ್ತು ಮುಂದುವರಿದ (ಮುನ್ನಡೆ) ಶಿಕ್ಷಣದ ಕಾಲೇಜುಗಳಲ್ಲಿ ತಾಂತ್ರಿಕ ಮತ್ತು ಇತರ ಕಾಲೇಜುಗಳಲ್ಲೂ ವ್ಯವಸ್ಥೆಗೊಂಡಿದೆ ಹೆಚ್ಚಿನ ವಿವರಗಳಿಗೆ (ನೋಡಿ- ಇಂಗ್ಲೆಂಡಿನ-ಶಿಕ್ಷಣ-ವ್ಯವಸ್ಥೆ).

ಸ್ಕಾಟ್ಲೆಂಡಿನಲ್ಲಿ ಶಿಕ್ಷಣ : ಸಂಯುಕ್ತ ರಾಜ್ಯದ ಇತರ ಭಾಗಗಳಿಗಿಂತ ಹಿಂದೆಯೇ ಸ್ಕಾಟ್ಲೆಂಡಿನಲ್ಲಿ ಎಲ್ಲರಿಗೂ ಶಿಕ್ಷಣ ಸೌಲಭ್ಯವೊದಗಿಸುವ ಅಗತ್ಯವನ್ನು ಒಪ್ಪಲಾಗಿತ್ತು. 1560ರ ಸುಮಾರಿನಲ್ಲಿ ಸ್ಕಾಟ್ಲಂಡಿನ ಸುಧಾರಕರು ಪ್ರತಿ ಗ್ರಾಮಕ್ಕೂ ಒಂದೊಂದು ಶಾಲೆಯೂ ಒಬ್ಬೊಬ್ಬ ಅಧ್ಯಾಪಕನೂ ಇರಬೇಕೆಂದೂ ಆಶಿಸಿದ್ದರು. 1969ರಲ್ಲಿ ಅಲ್ಲಿಯ ಪಾರ್ಲಿಮೆಂಟು ಎಲ್ಲ ಊರುಗಳೂ ಶಾಲೆಗಳಿಗೆ ಒಂದು ಪೂರ್ಣವಾಗಿ ಕಾರ್ಯರೂಪಕ್ಕೆ ಬರುವುದು ಸಾಧ್ಯವಾಗಲಿಲ್ಲ. 19ನೆಯ ಶತಮಾನದಲ್ಲಿ ಚರ್ಚುಗಳ ಯತ್ನದಿಂದಲೂ ಕೈಗಾರಿಕಾ ಕ್ರಾಂತಿ ಮೂಡಿಸಿದ ಒತ್ತಡದಿಂದಲೂ ಆ ಸೌಲಭ್ಯ ವಿಸ್ತರಿಸುವಂತಾಯಿತು. 1872ರ (ಸ್ಕಾಟ್ಲೆಂಡಿನ) ಶಾಸನದ ಮೂಲಕ ಶಿಕ್ಷಣದ ವ್ಯವಸ್ಥೆ ಮತ್ತು ಆಡಳಿತವನ್ನು ಚರ್ಚುಗಳಿಂದ ಸರ್ಕಾರ ವಹಿಸಿಕೊಂಡಿತು. ಅದಕ್ಕಾಗಿ 1,000 ಶಾಲಾಮಂಡಲಗಳನ್ನು ಸ್ಥಾಪಿಸಲಾಯಿತು. 5 ರಿಂದ 13 ವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ವಯೋಮಿತಿಯನ್ನು 14ಕ್ಕೆ ಹೆಚ್ಚಿಸಿತು. 1918ರ ಶಾಸನ ಬಯಸತಕ್ಕವರಿಗೆಲ್ಲ ಪ್ರೌಢಶಿಕ್ಷಣದ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆ ಮಾಡಲು 33 ಕೌಂಟಿಯ ಮತ್ತು 13 ನಗರದ ಶಿಕ್ಷಣವನ್ನು ಕೌಂಟಿ ಮತ್ತು ನಗರ ಕೌನ್ಸಿಲುಗಳಿಗೆ ವರ್ಗಾಯಿಸಿತು. 1936ರಲ್ಲಿ ಕಡ್ಡಾಯ ಶಿಕ್ಷಣದ ವಯೋಮಿತಿಯನ್ನು 15ಕ್ಕೆ ಹೆಚ್ಚಿಸಿತು. ಆದರೆ ಯುದ್ಧದ ದೆಸೆಯಿಂದ ಅದನ್ನು 1947ರ ವರೆಗೂ ಮುಂದೆಹಾಕಬೇಕಾಯಿತು. 5194ರ ಶಾಸನದ ಪ್ರಕಾರ 3196ರಲ್ಲಿ ಪರೀಕ್ಷಾ ಮಂಡಲಿ ಸ್ಥಾಪನೆಯಾಯಿತು. 1969ರ ಶಾಸನ ಎಲ್ಲ ಶಾಲೆಗಳಲ್ಲೂ ಶಿಕ್ಷಣವನ್ನೂ ಮನೋರಂಜನ ಶಿಕ್ಷಣವನ್ನೂ ವ್ಯವಸ್ಥೆಗೊಳಿಸಬೇಕೆಂದೂ ಸೂಚಿಸಿತು. ಅದುತನಕ ಪಠ್ಯಕ್ರಮದ ಬದಲಾವಣೆಯೇ; ಮುಂತಾದ ಕಾರ್ಯಗಳಿಗೆ ಸ್ಕಾಟ್ಲೆಂಡಿನ ಶಿಕ್ಷಣ ಕಾರ್ಯದರ್ಶಿಗಳ (ಸಚಿವರ) ಅನುಮತಿಯನ್ನು ಪಡೆಯಲೇ ಬೇಕಾಗಿದ್ದ ಅನಿವಾರ್ಯ ಇದರಿಂದ ಕಡಿಮೆಯಾಯಿತು.

ಪ್ರಾಥಮಿಕ ಶಿಕ್ಷಣ : ಇಂಗ್ಲೆಂಡು ಮತ್ತು ವೇಲ್ಸಿನಲ್ಲಿ ಪ್ರಾಥಮಿಕ ಶಿಕ್ಷಣ 5ರಿಂದ 12 ವರ್ಷದ ವರೆಗಿನ 7 ವರ್ಷದ್ದಾಗಿರುತ್ತದೆ. ಸದ್ಯದಲ್ಲಿ ಅಲ್ಲಿ 2,553 ಪ್ರಾಥಮಿಕ ಶಾಲೆಗಳು 185 ಶಿಶುವಿಹಾರಗಳೂ ಇವೆ. ಸ್ಥಳೀಯ ಶಿಕ್ಷಣ ಪ್ರಾಧಿಕಾರದಿಂದ (ಲೋಕಲ್ ಎಜುಕೇಷನ್ ಅಥಾರಿಟಿ) ನಡೆಯುವ ಅಥವಾ ಅದರಿಂದ ಸಹಾಯಧನ ಪಡೆಯುವ ಶಾಲೆಗಳೆಲ್ಲ ಸರ್ಕಾರಿ ಶಾಲೆಗಳಿಸಿವೆ. ಜನಸಂಖ್ಯೆ ವಿರಳವಾದ ಪ್ರದೇಶಗಳು ಹೆಚ್ಚಾಗಿರುವುದರಿಂದ ಅವುಗಳಲ್ಲಿ 15.2ರಷ್ಟು ಶಾಲೆಗಳು ಸಣ್ಣ ಏಕೋಪಾಧ್ಯಾಯ ಶಾಲೆಗಳು. ಧಾರ್ಮಿಕ ಶಿಕ್ಷಣವನ್ನು ಶಾಲೆಯ ಕಾರ್ಯಕ್ರಮಗಳಲ್ಲಿ ಸೇರಿಸಿದೆ. ಸ್ಕಾಟ್ಲೆಂಡಿನ ಸಚಿವರಿಂದ (ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಸ್ಕಾಟ್ಲೆಂಡ್) ರೂಪಿತವಾದ ನಿಯಮಗಳನ್ನು ಅನುಸರಿಸಿ ಶಾಲೆಗಳು ಕೆಲಸ ಮಾಡುತ್ತವೆ. ತರಗತಿಯ ಸಂಖ್ಯಾಬಲ, ಸ್ಥಳ ಸೌಲಭ್ಯ ಅಧ್ಯಾಪಕರ ಶಿಕ್ಷಣಾರ್ಹತೆ ಇಂಥ ವಿಷಯಗಳನ್ನು ಆ ನಿಯಮಗಳು ಗೊತ್ತುಮಾಡಿವೆ. ಒಳನಾಡಿನ ಗ್ರಾಮಗಳಲ್ಲೂ ಹತ್ತಿರದ ದ್ವೀಪಗಳಲ್ಲೂ ಗೇಲಿಕ್ ಮಾತೃಭಾಷೆ ಆದ್ದರಿಂದ ಅಲ್ಲಿಯ ಶಾಲೆಗಳಲ್ಲಿ ಗೇಲಿಕ್ ಮತ್ತು ಇಂಗ್ಲಿಷ್ ಈ ಎರಡು ಭಾಷೆಗಳನ್ನೂ ಬೋಧಿಸುವರು. ಮೇಲಿನ ತರಗತಿಗೆ ಹೋದಂತೆ ಪಾಠಗಳು ಇಂಗ್ಲಿಷ್ ಮಾಧ್ಯಮದಲ್ಲೆ ನಡೆಯುತ್ತವೆ. ಆದರೆ ಗೇಲಿಕ್ ಎಲ್ಲ ಶಾಲೆಗಳಲ್ಲೂ ಹಾಡುತ್ತಾರೆ.

ಪ್ರೌಢಶಿಕ್ಷಣ : ಕಳೆದ ಶತಮಾನದಲ್ಲಿ ಆರಂಭವಾದ ಕೆಲವು ನಗರಗಳ ಹಳೆಯ ಪ್ರಾಢಶಾಲೆಗಳನ್ನು ಬಿಟ್ಟರೆ ಮಿಕ್ಕೆಲ್ಲ ಸಹಶಿಕ್ಷಣದ ಪಾಠಶಾಲೆಗಳು. ಒಟ್ಟು 573 ಪ್ರೌಢಶಾಲೆಗಳಿದ್ದು ಅವುಗಳಲ್ಲಿ 110 ಸ್ವತಂತ್ರ (ವಸತಿ ವಿದ್ಯಾಲಯ) ಶಾಲೆಗಳು. ಪ್ರೌಢಶಿಕ್ಷಣ ಉಚಿತವಾಗಿದ್ದರೂ ಕೆಲವು ಸರ್ಕಾರದ ಮತ್ತು ಖಾಸಗಿ ಶಾಲೆಗಳಲ್ಲಿ ಶುಲ್ಕವನ್ನು ವಿಧಿಸುವುದುಂಟು. ಒಳನಾಡಿನಲ್ಲಿ ವಿದ್ಯಾರ್ಥಿಗಳಿಗೆ ಮನೆ ಹತ್ತಿರವಿರುವ ಕೆಲವಡೆ ವಸತಿ ಸೌಕರ್ಯವೇರ್ಪಡಿಸಿರುವರು. ಧಾರ್ಮಿಕ ಶಿಕ್ಷಣ 6 ವರ್ಷ ಕಾಲದ್ದಾಗಿದೆ. ಕೆಲವೆಡೆ ಅದನ್ನು 4 ವರ್ಷದ ಜೂನಿಯರ್ ಮತ್ತು 2 ವರ್ಷದ ಸೀನಿಯರ್ ಪ್ರೌಢಶಾಲೆಗಳಲ್ಲಿ ವ್ಯವಸ್ಥೆಗೊಳಿಸಿರುವರು. ಸಾಮಾನ್ಯವಾಗಿ ವ್ಯಾಪಕ (ಕಾಂಪ್ರಿಹೆನ್ಸಿವ್) ಮಾದರಿಯ ಪ್ರೌಢಶಾಲೆಗಳು ಅಸ್ತಿತ್ವದಲ್ಲಿವೆ. 16 ವರ್ಷಗಳ ಕಡ್ಡಾಯ ಶಿಕ್ಷಣ ಮುಗಿಸಿ ಶಾಲೆಯನ್ನು ಬಿಡುವವರಿಗೆ ಜೂನಿಯರ್ ಪ್ರೌಢಶಾಲೆಗಲು ಅಸ್ತಿತ್ವದಲ್ಲಿವೆ. ಆಯ್ಕೆಯ (12+) ಪರೀಕ್ಷೆಯಿರುವೆಡೆ ವಿದ್ಯಾರ್ಥಿಗಳನ್ನು ಅವರ ವಯಸ್ಸು ಯೋಗ್ಯತೆ ಮತ್ತು ಆಸಕ್ತಿಗಳಿಗನುಗುಣವಾದ ಪ್ರೌಢಶಾಲೆಗೆ ವರ್ಗಾಯಿಸಲು ಆಯಾ ಪ್ರೌಢಶಾಲೆಯ ಮತ್ತು ವಿದ್ಯಾರ್ಥಿಗಳು ಬರುವ ಪ್ರಾಥಮಿಕ ಶಾಲೆಯ ಮಖ್ಯೋಪಾಧ್ಯಾಯರನ್ನೊಳಗೊಂಡ ಸಮಿತಿಗಳು ನಿರ್ಧರಿಸುತ್ತವೆ. ಪರೀಕ್ಷೆಗೆ ಕೂಡದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಚರಿತ್ರೆ ಭೂಗೋಳ, ಅಂಕಗಣಿತ, ವಿಜ್ಞಾನ, ಕಲೆ, ಸಂಗೀತ, ಧಾರ್ಮಿಕ ಮತ್ತು ದೈಹಿಕ ಶಿಕ್ಷಣ ಇವನ್ನು ಬೋಧಿಸು ಅಥವಾ ವಾಣಿಜ್ಯ ವ್ಯವಹಾರದ ವಿಷಯಗಳನ್ನೂ ಹೆಣ್ಣುಮಕ್ಕಳು ಗೃಹವಿಜ್ಞಾನ ಅಥವಾ ವಾಣಿಜ್ಯ ವ್ಯವಹಾರದ ವಿಷಯಗಳನ್ನೂ ಅಭ್ಯಾಸಿಸುವರು. ಕೆಲವು ಕಡೆ ಸಮುದ್ರಯಾನ ವಿಜ್ಞಾನವನ್ನೂ ಗ್ರಾಮಿಣ ವಿಜ್ಞಾನವನ್ನೂ ಆಯ್ದುಕೊಳ್ಳುವರು. ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳೂ ಅನ್ಯಭಾಷೆ ಮತ್ತು ಗಣಿತಶಾಸ್ತ್ರವನ್ನೂ ವ್ಯಾಸಂಗ ಮಾಡುವರು. ಪ್ರೌಢಶಾಲಾ ವಿದ್ಯಾರ್ಥಿಗಳು, 5ನೆಯ ವರ್ಷ ಆರ್ಡಿರಿನ ಅಥವಾ 6ನೆಯ ವರ್ಷ ಹೈಯರ್ ಸ್ಕಾಟಿಷ್ ಸರ್ಟಿಫಿಕೇಟ್ ಆಫ್ ಎಜುಕೇಷನ್ ಪರೀಕ್ಷೆಗೆ ಕೂಡುವರು.

ಮುಂದುವರಿದ ಶಿಕ್ಷಣ (ಮುನ್ನಡೆಯ ಶಿಕ್ಷಣ, ಫರ್ದರ್ ಎಜುಕೇಷನ್) : 3-4 ವರ್ಷ ಪ್ರೌಢಶಾಲಾ ಶಿಕ್ಷಣದ ಅನಂತರ ಉದ್ಯೋಗನಿರತರಾದವರಿಗೆ ಶಿಕ್ಷಣವನ್ನು ಮುಂದುವರಿಸುವ ಅವಕಾಶವನ್ನೊದಗಿಸಲು 92 ಸ್ಥಳೀಯ ಕೇಂದ್ರಗಳಿವೆ. ಅವುಗಳಲ್ಲಿ 79 ಸ್ಥಳೀಯ ಮುನ್ನಡೆ ಶಿಕ್ಷಣದ ಕೇಂದ್ರಗಳು; 13 ಕೇಂದ್ರೀಯ ಪ್ರಾದೇಶಿಕ ಸಂಸ್ಥೆಗಳೂ, ಕೇಂದ್ರೀಯ ಸಂಸ್ಥೆಗಳೂ 5 ವರ್ಷ ಪ್ರೌಢಶಾಲೆಯ ಶಿಕ್ಷಣವನ್ನು ಮುಗಿದವರನ್ನು ಮಾತ್ರ ಸೇರಿಸಿಕೊಂಡು, ಪೂರ್ಣಕಾಲದ ಶಿಕ್ಷಣವಿತ್ತು. ಡಿಪ್ಲೊಮ ಪರೀಕ್ಷೆಗಳಿಗೆ ಸಿದ್ಧಪಡಿಸುತ್ತವೆ. ಔದ್ಯೋಗಿಕ ತರಬೇತಿ ಮಂಡಲಿಗಳೂ ಮುನ್ನಡೆಯ ಶಿಕ್ಷಣದಲ್ಲಿ ಭಾಗವಹಿಸುತ್ತವೆ. ತಾಂತ್ರಿಕ ಮತ್ತು ವೃತ್ತಿವಿಷಯಗಳನ್ನೊ ವಾಣಿಜ್ಯ ವ್ಯವಹಾರಾದಿ ವಿಷಯಗಳನ್ನೊ ಕಾರ್ಯಾಲಯ ನಿರ್ವಹಣೆಯ ವಿಷಯಗಳನ್ನೊ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುವರು. ಅವು ನೀಡುವ ಶಿಕ್ಷಣ ಉನ್ನತ ಶಿಕ್ಷಣದ ಮಟ್ಟದ್ದೆಂದು ಪರಿಗಣಿತವಾಗಿದೆ. ವಯಸ್ಕರ ಶಿಕ್ಷಣ ಇಂಗ್ಲೆಂಡಿನಲ್ಲಿದ್ದಂತೆಯೇ. ಆದರೆ ವಿಶ್ವವಿದ್ಯಾಲಯಗಳ ವಿಸ್ತರಣ ವಿಭಾಗವಾಗಲಿ, ಕಾರ್ಮಿಕರ ಶಿಕ್ಷಣ ಸಂಸ್ಥೆಯಾಗಲಿ ಅದನ್ನು ನಿರ್ವಹಿಸುವ ಹೊಣೆ ಹೊತ್ತಿಲ್ಲ. ವಯಸ್ಕರಿಗೆಂದೇ ನ್ಯೂಬ್ಯಾಟಲ್ ಆಬೆಯಲ್ಲಿ ಒಂದು ದೀರ್ಘಾವಧಿ ಶಿಕ್ಷಣದ ವಿದ್ಯಾಲಯವಿದೆ. ಸ್ಕಾಟ್ಲೆಂಡಿನ ವಯಸ್ಕರ ಶಿಕ್ಷಣ ಸಂಸ್ಥೆ ಆ ಕ್ಷೇತ್ರದಲ್ಲಿ ಸಮನ್ವಯ ಕಾರ್ಯವನ್ನು ನಿರ್ವಹಿಸುವುದಲ್ಲದೆ ಅಗತ್ಯ ಸುದ್ದಿ ಪ್ರಸಾರವನ್ನೂ ಕೈಗೊಳ್ಳುತ್ತದೆ.

ಯುವಜನರ ಪ್ರಶಿಕ್ಷಣಕ್ಕಾಗಿ ಎರಡು ಮಟ್ಟದ ಕಾರ್ಯಕ್ರಮಗಳುಂಟು - ಮೂರು ವರ್ಷದ ಮೂಲ ಪ್ರಶಿಕ್ಷಣ ಮತ್ತು ಶಿಕ್ಷಿತ ಯುವಕರಿಗೆ ಒಂದು ವರ್ಷದ ಪ್ರಶಿಕ್ಷಣ. ಇವೆರಡೂ ಯುವಕರ ಮತ್ತು ಸಮುದಾಯ ಶಿಕ್ಷಣ ವ್ಯವಸ್ಥೆಯ ಅಂಗವಾಗಿ ನಡೆಯುತ್ತದೆ.

ಉನ್ನತ ಶಿಕ್ಷಣ : ಉನ್ನತ ಶಿಕ್ಷಣ ಇಂಗ್ಲೆಂಡಿನಂತೆ ಇಲ್ಲಿಯ ವಿಶ್ವವಿದ್ಯಾಲಯಗಳಲ್ಲೂ 10 ಶಿಕ್ಷಣಶಾಸ್ತ್ರದ ಮತ್ತು ಇತರ ಕಾಲೇಜುಗಳಲ್ಲೂ 13 ಮುನ್ನಡೆ ಶಿಕ್ಷಣದ ಕೇಂದ್ರಿಯ ಸಂಸ್ಥೆಗಳಲ್ಲೂ ಪಾಲಿಟೆಕ್ನಿಕ್ ಮತ್ತು ಟೆಕ್ನಾಲಜಿ ಸಂಸ್ಥೆಗಳಲ್ಲೂ ವ್ಯವಸ್ಥೆಗೊಂಡಿದೆ.

ಆಕ್ಸ್‍ಫರ್ಡ್ ಕೇಂಬ್ರಿಜ್ ವಿಶ್ವವಿದ್ಯಾಲಯಗಳಷ್ಟೇ ಪ್ರಾಚೀನವೆನ್ನಬಹುದಾದ ಸೇಂಟ್ ಆ್ಯಂಡ್ರೂಸ್ ವಿಶ್ವವಿದ್ಯಾಲಯವನ್ನೂ ಒಳಗೊಂಡಂತೆ ನಾಲ್ಕು ಹಿಂದಿನ ವಿಶ್ವವಿದ್ಯಾಲಯಗಳೂ (ಸೇಂಟ್ ಆ್ಯಂಡ್ರೂಸ್, ಗ್ಲಾಸ್ಗೋ, ಎಡಿನ್‍ಬರಾ, ಅಬರ್ಡೀನ್) ಈಚೆಗೆ ಆರಂಭವಾದ ನಾಲ್ಕು ವಿಶ್ವವಿದ್ಯಾಲಯಗಳೂ (ಡಂಡಿ, ಹೆರಿಯಟ್ ವಾಟ್, ಸ್ಟರ್ಲಿಂಗ್ ಮತ್ತು ಸ್ಟ್ರಾತ್‍ಕ್ಲೈಡ್) ಸೇರಿ ಒಟ್ಟು 8 ವಿಶ್ವವಿದ್ಯಾಲಯಗಳಿವೆ. ಈ ವಿಶ್ವವಿದ್ಯಾಲಯಗಳೂ ಬ್ರಿಟನಿನ ಇತರ ವಿಶ್ವವಿದ್ಯಾಲಯಗಳಂತೆ ವಿಶ್ವವಿದ್ಯಾಲಯದ ಅನುದಾನ ಸಮಿತಿಯ ಕಾರ್ಯಕ್ಷೇತ್ರಕ್ಕೆ ಒಳಪಟ್ಟಿದ್ದು, ಆದರಿಂದ ಸಹಾಯಧನ ಪಡೆದುಕೊಳ್ಳುತ್ತವೆ. ಸಾಮಾನ್ಯವಾಗಿ ಪ್ರಥಮ ಪದವಿ 3 ವರ್ಷದ್ದು; ವಾಸ್ತುಶಿಲ್ಪ, ವೈದ್ಯ, ಪಶುವೈದ್ಯ - ಇವು 5--6 ವರ್ಷಗಳವು.

ಅಧ್ಯಾಪಕರ ಕಾಲೇಜುಗಳು ಪದವೀಧರರಲ್ಲದವರಿಗೆ 3 ವರ್ಷದ, ಪದವೀದರರಿಗೆ ಒಂದು ವರ್ಷದ ಪ್ರಶಿಕ್ಷಣ ನೀಡುತ್ತವೆ. ಕೆಲವು ಶಿಕ್ಷಕರ ಕಾಲೇಜುಗಳು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿವೆ. ಅವು ನಾಲ್ಕು ವರ್ಷಗಳ ಪ್ರಶಿಕ್ಷಣವಿತ್ತು ಬಿ.ಎಡ್. ಪದವಿಗೆ ಸಿದ್ಧಪಡಿಸುವುವು.

ಆಡಳಿತ ಮತ್ತು ಹಣಕಾಸು : ವಿಶ್ವವಿದ್ಯಾಲಯಗಳನ್ನುಳಿದು ಮಿಕ್ಕ ಸಾರ್ವಜನಿಕ ಶಿಕ್ಷಣದ ಆಡಳಿತ ಸ್ಕಾಟ್ಲೆಂಡಿನ ರಾಜ್ಯ ಸಚಿವರಿಗೆ ಸೇರಿದೆ. ಆ ಕಾರ್ಯವನ್ನವರು ಸ್ಕಾಟ್ಲೆಂಡಿನ ಶಿಕ್ಷಣ ಶಾಖೆಯ ಮೂಲಕ ನಿರ್ವಹಿಸುವರು. ಶಾಲೆಯ ಆರೋಗ್ಯ ಕಾರ್ಯಕ್ರಮಗಳನ್ನು ಆರೋಗ್ಯ ಶಾಖೆಯ ಮೂಲಕ ನಿರ್ವಹಿಸುವರು. ಸ್ಥಳೀಯವಾಗಿ ಶಿಕ್ಷಣದ ಆಡಳಿತವನ್ನು 35 ಸ್ಥಳೀಯ ಶಿಕ್ಷಣ ಪ್ರಾಧಿಕಾರಗಳೂ ಅವು ನೇಮಿಸುವ ಶಾಸನದತ್ತ ಶಿಕ್ಷಣ ಸಮಿತಿಗಳೂ ನಿರ್ವಹಿಸುತ್ತವೆ. ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಅಗತ್ಯವೆನಿಸುವಾಗ ಸಚಿವರು ತಮ್ಮ ಅಭಿಪ್ರಾಯ ಸೂಚಿಸುವರು. ಸಾಮಾಜಿಕ ಶಿಕ್ಷಣ, ಶಿಶುರಕ್ಷಣೆ, ಅಪ್ರೂವ್ಡ್ ಶಾಲೆಗಳ (ವಸತಿ ವಿದ್ಯಾಲಯ) ಆಡಳಿತ ಇವಿಷ್ಟೂ ಅವರಿಗೆ ಸೇರಿದೆ. ಸಾಮಾನ್ಯ ಶಿಕ್ಷಣ, ಪಠ್ಯಕ್ರಮ, ತಾಂತ್ರಿಕ ಶಿಕ್ಷಣ, ಯುವಜನ ಮತ್ತು ಸಮುದಾಯ ಸೇವೆ, ಅಧ್ಯಾಪಕರ ಶಿಕ್ಷಣ (ಬೋಧನೆ)- ಇವಕ್ಕೆ ಸಂಬಂಧಿಸಿದಂತೆ ರಚಿತವಾಗಿರುವ ಸಲಹಾಮಂಡಲಿಗಳು ಅವರಿಗೆ ಸಲಹೆ ನೀಡುತ್ತವೆ. ಅವರ ಮುಖ್ಯ ಕಾರ್ಯಾಲಯ ಎಡಿನ್‍ಬರಾದಲ್ಲಿದೆ.

ಸ್ಥಳೀಯ ಶಿಕ್ಷಣ ಪ್ರಾಧಿಕಾರಗಳು ಇಂಗ್ಲೆಂಡಿನಲ್ಲಿರುವಂತೆ ಕಾರ್ಯ ನಿರ್ವಹಿಸಿದರೂ ಅವುಗಳ ಅಧಿಕಾರವ್ಯಾಪ್ತಿ ಸ್ವಲ್ಪ ಕಡಿಮೆ; ಅವು ಮುನ್ನಡೆ ಶಿಕ್ಷಣದ ಕೇಂದ್ರಿಯ ಸಂಸ್ಥೆಗಳನ್ನಾಗಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ತಾಂತ್ರಿಕ ಮತ್ತು ಕಲಾ ಕಾಲೇಜುಗಳನ್ನಾಗಲಿ ಅಧ್ಯಾಪಕರ ಕಾಲೇಜುಗಳನ್ನಾಗಲಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಹೊಂದಿಲ್ಲ. ಆದರೆ ಅವು ಸಾರ್ವಜನಿಕ (ಸರ್ಕಾರಿ) ಶಾಲೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತವೆ. ಧಾರ್ಮಿಕ ಸಂಸ್ಥೆಗಳ ಖಾಸಗಿ ಶಾಲೆಗಳನ್ನೂ ನೋಡಿಕೊಳ್ಳುತ್ತವೆ. ಶಾಲೆಯ ಆರೋಗ್ಯ ಆಹಾರ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುವುದರ ಜೊತೆಗೆ ವಿಶ್ವವಿದ್ಯಾಲಯ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳನ್ನುಳಿದು ಮಿಕ್ಕ ಸಂಸ್ಥೆಗಳಿಗೆ ಸಹಾಯಧನವನ್ನೂ ನೀಡುತ್ತವೆ. ಕೇಂದ್ರೀಯ ಸಂಸ್ಥೆಗಳೂ ಅಧ್ಯಾಪಕರ ಕಾಲೇಜುಗಳೂ ಸ್ವಯಂಸೇವಾ ಆಡಳಿತ ಮಂಡಲಿಗಳನ್ನು ಹೊಂದಿವೆ. 1965ರಿಂದ ಸ್ಕಾಟಿಷ್ ಸರ್ಟಿಫಿಕೇಟ್ ಆಫ್ ಎಜುಕೇಷನ್ ಪರೀಕ್ಷೆಯನ್ನು ಸ್ವಯಮಾಡಳಿತ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ನ್ಯೂನ ಮಕ್ಕಳ ವಸತಿ ವಿಶ್ವವಿದ್ಯಾಲಯಗಳು ಬಹುಮಟ್ಟಿಗೆ ಸ್ವಯಂಸೇವಾ ಸಂಸ್ಥೆಗಳಿಗೆ ಸೇರಿವೆ.

ಶಿಕ್ಷಣದ ಆದಾಯವೆಚ್ಚಗಳು ಇಂಗ್ಲೆಂಡಿನಲ್ಲಿದ್ದಂತೆಯೇ. 1969 -- 70ರಲ್ಲಿ ವಿದ್ಯಾಸೌಲಭ್ಯಗಳಿಗಾಗಿ ಸರ್ಕಾರ 26.65 ಕೋಟಿ ಪೌಂಡುಗಳನ್ನು ವೆಚ್ಚ ಮಾಡಿತು.

ಉತ್ತರ ಐರ್ಲೆಂಡಿನಲ್ಲಿ ಶಿಕ್ಷಣ : ಉತ್ತರ ಐರ್ಲೆಂಡ್ 1921ರಲ್ಲಿ ಸ್ವಯಮಾಡಳಿತ ಘಟಕವಾದೊಡನೆ ಆರಂಭವಾದ ಶಿಕ್ಷಣ ಸಚಿವಾಲಯ ಅದು ತನಕ ಮೂರು ಭಿನ್ನ ಶಾಖೆಗಳಿಗೊಳಪಟ್ಟಿದ್ದ ಶಿಕ್ಷಣ ಸೇವಾವ್ಯವಸ್ಥೆಯ ಎಲ್ಲ ಆಡಳಿತವನ್ನೂ ವಹಿಸಿಕೊಂಡಿತು.

1923ರ (ಐರ್ಲೆಂಡಿನ) ಶಾಸನದ ಪ್ರಕಾರ ಕೌಂಟಿ ಮತ್ತು ಕೌಂಟಿಬರೋ ಸ್ಥಳೀಯ ಸರ್ಕಾರಗಳ (ಸಂಸ್ಥೆ) ಸ್ಥಾಪನೆಯಾಗಿ ಅವುಗಳ ಶಿಕ್ಷಣ ಸಮಲಿತಿಗಳು ತಮ್ಮ ತಮ್ಮ ಕ್ಷೇತ್ರದ ಪ್ರಾಥಮಿಕ, ಪ್ರೌಢ ಮತ್ತು ತಾಂತ್ರಿಕ ಶಿಕ್ಷಣಗಳನ್ನು ವ್ಯವಸ್ಥೆಗೊಳಿಸಿ ನಡೆಸುವ ಅಧಿಕಾರ ಪಡೆದುವು. 5ರಿಂದ 14ರಮರೆಗೆ ಶಿಕ್ಷಣ ಕಡ್ಡಾಯವಾಯಿತು. ಅದುತನಕ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿದ್ದ ಪ್ರಾಥಮಿಕ ಶಾಲೆಗಳಲ್ಲಿ ಬಹುಪಾಲನ್ನು ಅವುವಹಿಸಿಕೊಂಡು ಮಿಕ್ಕವಕ್ಕೆ ಸಹಾಯಧನ ನೀಡುತ್ತಿದ್ದುವು. ಪ್ರೌಢ ಶಾಲೆಗಳೆಲ್ಲ ಬಹುಮಟ್ಟಿಗೆ ಸ್ವಯಂಸೇವಾ ಸಂಸ್ಥೆಗಳ ಆಡಳಿತದಲ್ಲೆ ಉಳಿದುವು. ಆದರೆ ಅವಕ್ಕೆ ಸರ್ಕಾರದ ಬೊಕ್ಕಸದಿಂದ ಹಣಸಹಾಯ ದೊರಕುತ್ತಿತ್ತು. ತಾಂತ್ರಿಕ ಶಿಕ್ಷಣವನ್ನು ಪೂರ್ಣವಾಗಿ ಸ್ಥಳೀಯ ಪ್ರಾಧಿಕಾರವೇ ನಡೆಸುತ್ತಿತ್ತು. 1938ರ ಶಿಕ್ಷಣ ಶಾಸನ ಕಡ್ಡಾಯ ಶಿಕ್ಷಣದ ಮಯೋಮಿತಿಯನ್ನು 18ಕ್ಕೆ ಏರಿಸಿತು. ಆದರೆ ಯುದ್ಧದ ದೆಸೆಯಿಂದ ಅದು 1947ರಲ್ಲಿ ಮಾತ್ರ ಕಾರ್ಯರೂಪಕ್ಕೆ ಬಂತು.

ಸದ್ಯದ ಶಿಕ್ಷಣವ್ಯವಸ್ಥೆ 1947ರ ಶಿಕ್ಷಣ ಶಾಸನವನ್ನು ಅವಲಂಬಿಸಿ ಏರ್ಪಟ್ಟಿದೆ. ಇದು ಇಂಗ್ಲೆಂಡಿನ 1944ರ ಶಿಕ್ಷಣ ಶಾಸನದಂತೆಯೇ ಇದೆ. ಪ್ರಾಥಮಿಕ, ಪ್ರೌಢ ಮತ್ತು ಮುನ್ನಡೆ ಎಂಬ ಮೂರು ಅಂತಸ್ತುಗಳಲ್ಲಿ ಶಿಕ್ಷಣವನ್ನು ವ್ಯವಸ್ಥೆಗೊಳಿಸಿದೆ: 6 ವರ್ಷಗಳ ಪ್ರಾಥಮಿಕ ಶಿಕ್ಷಣ, 4 ವರ್ಷಗಳ ಇಂಟರ್‍ಮಿಡಿಯೆಟ್ ಪ್ರೌಢ ಶಾಲೆಯ ಶಿಕ್ಷಣ, ಅನಂತರ ಶಾಲೆಯನ್ನು ಬಿಡುವವರಿಗೆ ಮುನ್ನಡೆ ಶಿಕ್ಷಣ. 1968ರ ರಾಜ್ಯ ಶಾಸನದ ಪ್ರಕಾರ ಅನೇಕ ಖಾಸಗಿ ಪ್ರೌಢಶಾಲೆಗಳು `ಮೇಂಟೇನ್ಡ್ ಶಾಲೆಗಳಾದವು. ಅವು ತಮ್ಮ ಆಡಳಿತ ಮಂಡಲಿಯಲ್ಲಿ 1/3 ಭಾಗದಷ್ಟು ಸರ್ಕಾರದ ನಾಮಕರಣ ಸದಸ್ಯರನ್ನು ಸೇರಿಸಿಕೊಳ್ಳುವುದಕ್ಕೂ ತಮ್ಮ ಶಾಲೆಯ ಕಟ್ಟಡಕ್ಕಾಗಿ ಸೇ. 80ರಷ್ಟು ಧನಸಹಾಯವನ್ನು ಸರ್ಕಾರದಿಂದ ಪಡೆದುಕೊಳ್ಳುವುದಕ್ಕೂ ಅನುಕೂಲವಾಯಿತು. ಜೊತೆಗೆ ಅವುಗಳ ಇತರ ವೆಚ್ಚವನ್ನು ಸರ್ಕಾರವೇ ನೀಡುವಂತಾಯಿತು.

ಪ್ರಾಥಮಿಕ ಶಿಕ್ಷಣ : 1970ರಲ್ಲಿ 22 ಶಿಶುವಿಹಾರಗಳೂ 1256(643 ಸರ್ಕಾರಿ, 613 ಖಾಸಗಿ) ಪ್ರಾಥಮಿಕ ಶಾಲೆಗಳೂ ಗ್ರಾಮರ್ ಶಾಲೆಗೆ ಸಿದ್ಧತೆ ನೀಡುತ್ತಿದ್ದ 41 ಶಾಲೆಗಳೂ ಇದ್ದುವು. 16 ವರ್ಷಗಳ ತನಕ ಉಚಿತ ಕಡ್ಡಾಯ ಶಿಕ್ಷಣ ಆಚರಣೆಯಲ್ಲಿದೆ. ಧಾರ್ಮಿಕ ಶಿಕ್ಷಣ ಎಲ್ಲ ಶಾಲೆಗಳಲ್ಲೂ ಉಂಟು.

ಪ್ರೌಢ ಶಿಕ್ಷಣ : ಸಾಮಾನ್ಯವಾಗಿ ಪ್ರೌಢಶಿಕ್ಷಣ ಉಚಿತ. 1970ರಲ್ಲಿ ಒಟ್ಟು 266 ಪ್ರೌಢಶಾಲೆಗಳಿದ್ದವು. ಅವುಗಳಲ್ಲಿ ಮೂರು ವಿಧ : ಗ್ರಾಮರ್‍ಶಾಲೆಗಳು (81); ಇಂಟರ್ ಮಿಡಿಯೆಟ್ ಪ್ರೌಢಶಾಲೆಗಳು (168) ಮತ್ತು ತಾಂತ್ರಿಕ ಪ್ರೌಢಶಾಲೆಗಳು (17). ಗ್ರಾಮರ್ ಪ್ರೌಢಶಾಲೆಯಲ್ಲಿ ಶಿಕ್ಷಣ 6 ವರ್ಷಕಾಲಾವಧಿಯದು; ಅಲ್ಲಿ ಮಾತ್ರ ಶುಲ್ಕವನ್ನು ವಿಧಿಸುವರು. ಧಾರ್ಮಿಕ ಶಿಕ್ಷಣ ಪ್ರಾಥಮಿಕ ಮಟ್ಟದಲ್ಲಿರುವಂತೆಯೇ ಮಿಕ್ಕ ಅಂಶಗಳು ಇಂಗ್ಲೆಂಡಿನಲ್ಲಿರುವಂತೆ; ಉತ್ತರ ಐರ್ಲೆಂಡಿನ `ಜನರಲ್ ಸರ್ಟಿಫಿಕೇಟ್ ಆಫ್ ಎಜುಕೇಷನ್ ಕೌನ್ಸಿಲ್ ತನ್ನ ಪರೀಕ್ಷಾಮಂಡಳಿಯ ಮೂಲಕ ಪರೀಕ್ಷೆ ನಡೆಸುತ್ತದೆ. ಗ್ರಾಮರ್ ಮತ್ತು ಇತರ ಪ್ರೌಢಶಾಲೆಗಳ, ಹಾಗೂ ವಿಶಿಷ್ಟ ಶಿಕ್ಷಣದ ಶಾಲೆಗಳ ವಿದ್ಯಾರ್ಥಿಗಳೂ ಪರೀಕ್ಷೆಗೆ ಕೂಡಬಹುದು.

1973ರಿಂದ `ಸರ್ಟಿಫಿಕೇಟ್ ಆಫ್ ಸೆಕಂಡರಿ ಎಜುಕೇಷನ್ (ಸಿ.ಎಸ್.ಇ.) ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇವೆಲ್ಲ ಇಂಗ್ಲೆಂಡಿನ (ಜೆ.ಸಿ.ಇ.) ಪರೀಕ್ಷೆಗಳ ಮಟ್ಟದವು. ಕೇವಲ 15ನೆಯ ವರ್ಷಕ್ಕೆ ಶಿಕ್ಷಣ ಮುಗಿಸುವವರಿಗಾಗಿ ಒಂದು ಜೂನಿಯರ್ ಪರೀಕ್ಷೆಯನ್ನು ಆರಂಭಿಸುವ ಯೋಜನೆಯಿದೆ.

ಮುನ್ನಡೆಯ ಶಿಕ್ಷಣ : 15-- 16ನೆಯ ವರ್ಷದವರೆಗೆ ಶಿಕ್ಷಣ ಪಡೆದ ಉದ್ಯೋಗ ನಿರತರಾದ ಯುವಜನಕ್ಕೆ ಮುನ್ನಡೆಯ ಶಿಕ್ಷಣವನ್ನೊದಗಿಸುವ ಶಾಸನದತ್ತ ಕರ್ತವ್ಯ ಸ್ಥಳೀಯ ಶಿಕ್ಷಣ ಪ್ರಾಧಿಕಾರಕ್ಕೆ ಸೇರಿದೆ. ಇತರ ಖಾಸಗಿ ಸಂಸ್ಥೆಗಳೂ ಕಾರ್ಯದಲ್ಲಿ ಸಹಕರಿಸುತ್ತವೆ. 1969 -- 70ರಲ್ಲಿ ವಿವಿಧ ಪಠ್ಯಕ್ರಮಗಳನ್ನೊಳಗೊಂಡ 31 ಕಾಲೇಜುಗಳೂ ಭಾಗಶಃ ಅಥವಾ ಪೂರ್ಣಕಾಲದ ಮುನ್ನಡೆ ಶಿಕ್ಷಣವನ್ನೊದಗಿಸುತ್ತಿದ್ದವು. ಇವುಗಳಲ್ಲಿ ನಾಲ್ಕು ಕೇಂದ್ರೀಯ ಸಂಸ್ಥೆಗಳು (ಬೆಲ್ಫಾಸ್ಟ್‍ನ ಟೆಕ್ನಾಲಜಿ, ಕಲೆ, ನಮೂನೆ ಮತ್ತು ಗೃಹವಿಜ್ಞಾನ ಕಾಲೇಜುಗಳು); ಜೊತೆಗೆ 159 ಬಾಹ್ಯ ಕೇಂದ್ರಗಳಲ್ಲೂ ಆ ಶಿಕ್ಷಣವನ್ನೂ ವ್ಯವಸ್ಥೆಗೊಳಿಸಿದೆ. 18ನೆಯ ವಯಸ್ಸಿನವರೆಗೆ ಅಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉಚಿತ ಪುಸ್ತಕ ಮತ್ತು ಬಂದುಹೋಗಲು ತಗಲುವ ಪ್ರಯಾಣದ ಭತ್ಯ ಅಥವಾ ಉಚಿತ ಊಟವಸತಿ - ಇವನ್ನೆಲ್ಲ ಕೊಡುವರು. ಅಲ್ಲಿ ವಿದ್ಯಾರ್ಥಿಗಳು ಲಂಡನ್ ಇನ್ಸ್ಟ್‍ಟಿಟ್ಯೂಟಿನ ಸಿಟಿಅಂಡ್‍ಗಿಲ್ಡ್ಸ್ ಪರೀಕ್ಷಾ ಸಂಸ್ಥೆಯ ಪಠ್ಯಕ್ರಮದ ಸುಮಾರು 140 ವಿಷಯಗಳಲ್ಲಿ ವ್ಯಾಸಂಗಕ್ಕೆ ಸೇರಬಹುದು. ಅವರು ನ್ಯಾಷನಲ್ ಸರ್ಟಿಫಿಕೇಟ್ ಮತ್ತು ಡಿಪ್ಲೊಮ ಪರೀಕ್ಷೆಗಳಿಗೆ ಕೂಡುವರು, ಕೈಗಾರಿಕಾ ತರಬೇತು ಮಂಡಲಿಗಳನ್ನು ಆರಂಭಿಸಿ ಆ ವಿದ್ಯಾರ್ಥಿಗಳಿಗೆ ಅಗತ್ಯ ಅಭ್ಯಾಸಾರ್ಥ ತರಬೇತನ್ನು ದೊರಕಿಸಲಾಗುತ್ತಿದೆ. ನೂತನವಾಗಿ ಆರಂಭವಾಗಿರುವ ಅಲ್ಸ್ಟರ್ ಕಾಲೇಜಿಗೆ ಮೇಲೆ ಉಲ್ಲೇಖಿಸಿದ ಬೆಲ್ಫಾಸ್ಟಿನ ನಾಲ್ಕು ಕಾಲೇಜುಗಳನ್ನೂ ಸೇರಿಸಿ ಉನ್ನತ ಶಿಕ್ಷಣವೀಯುವ ವ್ಯವಸ್ಥೆ ಮಾಡಿದೆ.

ವಯಸ್ಕರ ಶಿಕ್ಷಣ : ವಯಸ್ಕರ ಶಿಕ್ಷಣ ಇಲ್ಲೂ ಇಂಗ್ಲೆಂಡಿನಲ್ಲಿರುವಂತೆ ವ್ಯವಸ್ಥೆಗೊಂಡಿದೆ. ಮನೋರಂಜಕ ಕಾರ್ಯಕ್ರಮಗಳನ್ನು ಸ್ಥಳೀಯ ಶಿಕ್ಷಣ ಪ್ರಾಧಿಕಾರವೇ ಒದಗಿಸುತ್ತದೆ. ಕ್ವೀನ್ಸ್ ವಿಶ್ವವಿದ್ಯಾಲಯದ ಹೊರಗಿನ ಶಾಖೆಯೂ ಅಲ್ಸ್ಟರ್ ವಿಶ್ವವಿದ್ಯಾಲಯದ ವಯಸ್ಕರ ಶಿಕ್ಷಣದ ವಿಭಾಗವೂ ಕಾರ್ಮಿಕರ ಶಿಕ್ಷಣ ಸಂಘವೂ ವಯಸ್ಕರಿಗೆ ಮೇಲ್ಮಟ್ಟದ ಶಿಕ್ಷಣದ ತರಗತಿಗಳನ್ನು ನಡೆಸುತ್ತಿವೆ. ಸುಮಾರು 6 ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವರು.

ಯುವಜನಾ ಸೇವಾ ವ್ಯವಸ್ಥೆ : ಕೇಂದ್ರಸರ್ಕಾರ, ಸ್ಥಳೀಯ ಸರ್ಕಾರ ಮತ್ತು ಖಾಸಗಿ ಸ್ವಯಂಸೇವಾಸಂಸ್ಥೆಗಳು ಸಹಕರಿಸಿ ಯುವಜನರಿಗೆ ಆಟಪಾಟಗಳಲ್ಲೂ ಅಂಗಸಾಧನೆ, ಮನೋರಂಜನೆ ಮುಂತಾದ ಶಿಕ್ಷಣವನ್ನು ವ್ಯವಸ್ಥೆಗೊಳಿಸುತ್ತಿವೆ. ಆ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ಯುವಜನ ಕ್ರೀಡಾಮಂಡಲಿಯನ್ನು ಸ್ಥಾಪಿಸಿದೆ. ಯುವಜನ ಕಲ್ಯಾಣಕಾರ್ಯಕ್ರಮಗಳಿಗಾಗಿ ವರ್ಷಂಪ್ರತಿ 60 ಲಕ್ಷ ಪೌಂಡುಗಳಷ್ಟು ಹಣ ವಿನಿಯೋಗವಾಗುತ್ತಿದೆ.

ಉನ್ನತ ಶಿಕ್ಷಣ : ಬೆಲ್‍ಫಾಸ್ಟ್ ವಿಶ್ವವಿದ್ಯಾಲಯವೊಂದೇ ಇತ್ತೀಚಿನ ವರೆಗೆ ಉತ್ತರ ಐರ್ಲೆಂಡಿನಲ್ಲಿದ್ದ ವಿಶ್ವವಿದ್ಯಾಲಯ. 1965ರ ಲಾರ್‍ವುಡ್ ಸಮಿತಿಯ ಸಲಹೆಯಂತೆ ಕೊಲೆರೈನಿನಲ್ಲಿ ಅಲ್ಸ್ಟರ್ ವಿಶ್ವವಿದ್ಯಾಲಯ ನೂತನವಾಗಿ ಆರಂಭವಾಗಿದೆ. ಅದರಲ್ಲಿ ಬೆಲ್‍ಫಾಸ್ಟಿನಲ್ಲಿದ್ದ 4 ಕಾಲೇಜುಗಳು ಸೇರಿಹೋಗಿವೆ. ಈ ವಿಶ್ವವಿದ್ಯಾಲಯಗಳ ಜೊತೆಗೆ ನೂತನವಾಗಿ ಸಂಘಟಿಸಿರುವ ಅಲ್ಸ್ಟರ್ ಕಾಲೇಜಿನಲ್ಲಿ ಟೆಕ್ನಾಲಜಿ, ವಾಣಿಜ್ಯವಿದ್ಯೆ, ವ್ಯವಹಾರವಿದ್ಯೆ, ಕಲೆ, ದೈಹಿಕಶಿಕ್ಷಣ - ಇವನ್ನು ಬೋಧಿಸಲಾಗುತ್ತಿದೆ.

ಅಧ್ಯಾಪಕರ ಶಿಕ್ಷಣವನ್ನು ಕ್ವೀನ್ಸ್ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರದ ವಿಭಾಗದಲ್ಲೂ ಅಲ್ಸ್ಟರ್ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರದ ವಿದ್ಯಾಲಯದಲ್ಲೂ ವ್ಯವಸ್ಥೆಗೊಳಿಸಿದೆ. ಜೊತೆಗೆ, 3 ಶಿಕ್ಷಣ ಕಾಲೇಜುಗಳಲ್ಲಿ ಕಲೆ ಮತ್ತು ನಮೂನೆ, ಗೃಹ ವಿಜ್ಞಾನ - ಇವುಗಳಲ್ಲಿ ವಿಶಿಷ್ಟ ಪ್ರಶಿಕ್ಷಣದ ವ್ಯವಸ್ಥೆಯೂ ಉಂಟು.

ಆಡಳಿತ ಮತ್ತು ಹಣಕಾಸು : ಉತ್ತರಐರ್ಲೆಂಡಿನ ಪಾರ್ಲಿಮೆಂಟ್ ಶಿಕ್ಷಣಕ್ಕೆ ನಿರ್ದಿಷ್ಟ ಮೊತ್ತದ ಹಣವನ್ನು ವೆಚ್ಚಮಾಡಲು ಅನುಮತಿ ನೀಡುತ್ತದೆ. ಶಿಕ್ಷಣ ಸಚಿವರು ಪಾರ್ಲಿಮೆಂಟು ಅಂಗೀಕರಿಸುರುವ ಶಿಕ್ಷಣ ಕಾರ್ಯಕ್ರಮಗಳಿಗೆ ಅದನ್ನು ವಿನಿಯೋಗಿಸುವರು. ಇಂಗ್ಲೆಂಡಿನಲ್ಲಿರುವಂತೆ ಕೇಂದ್ರ ಮಟ್ಟದಲ್ಲಿ ಶಿಕ್ಷಣ ಸಚಿವಾಲಯವೂ ಸ್ಥಳೀಯಮಟ್ಟದಲ್ಲಿ ಸ್ಥಳೀಯ ಶಿಕ್ಷಣಪ್ರಾಧಿಕಾರಗಳೂ ಅದನ್ನು ವಿನಿಯೋಗಿಸುವುವು. ಗ್ರೇಟ್‍ಬ್ರಿಟನ್ನಿನಲ್ಲಿರುವಂತೆ ವಿಶ್ವವಿದ್ಯಾಲಯದ ಅನುದಾನಸಮಿತಿ ಇಲ್ಲಿನ ವಿಶ್ವವಿದ್ಯಾಲಯಗಳೊಡನೆ ನೇರವಾಗಿ ಸಂಪರ್ಕವಿಟ್ಟುಕೊಂಡಿಲ್ಲ. ಅಲ್ಲಿನ ಸಚಿವಾಲಯದ ಮೂಲಕ ಅಗತ್ಯವೆನಿಸುವ ಸಲಹೆಗಳನ್ನು ನೀಡುವುದು. ಶಿಕ್ಷಣಕ್ಕಾಗಿ 1969 --- 70ರಲ್ಲಿ 6.43ಕೋಟಿ ಪೌಂಡ್ ವೆಚ್ಚಮಾಡಲಾಯಿತು.

ಶೈಕ್ಷಣಿಕ ಅಂಕಿ ಆಂಶಗಳು : ಪುಟ 903 ಪಟ್ಟಿಯಲ್ಲಿ 1970ಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಮತ್ತು ವೇಲ್ಸಿನ, ಸ್ಕಾಟ್ಲೆಂಡಿನ ಐರ್ಲೆಂಡಿನ, ಮತ್ತು ಇಡೀ ಸಂಯುಕ್ತ ರಾಜ್ಯದ ಶಿಕ್ಷಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಕೊಟ್ಟಿದೆ. (ಎನ್.ಎಸ್.ವಿ.)