ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಶೇಖರ, ಬಿ ಎಸ್

ವಿಕಿಸೋರ್ಸ್ದಿಂದ

ಚಂದ್ರಶೇಖರ, ಬಿ ಎಸ್ - 1945-. ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಉತ್ತಮ ಬೌಲರ್. ಭಗವತ್ ಸುಬ್ರಹ್ಮಣ್ಯಂ ಚಂದ್ರಶೇಖರ್ ಇವರ ಪೂರ್ಣ ಹೆಸರು.

1963ರ ನವೆಂಬರ್ 14ರಂದು ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ (ಕೇರಳದ ವಿರುದ್ಧ) ಕರ್ನಾಟಕ ರಾಜ್ಯದ ಟೀಮಿನಲ್ಲಿ ಚಂದ್ರಶೇಖರ್ ಪ್ರಥಮ ಬಾರಿಗೆ ಸೇರಿಕೊಂಡರು. ಇವರು ಭಾಗಿಯಾದ ಪ್ರಥಮ ಟೆಸ್ಟ್ ಪಂದ್ಯ-1964ರ ಜನವರಿ 21ರಂದು ಮುಂಬಯಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೆಯ ಟೆಸ್ಟ್.

ಬಾಲ್ಯದಲ್ಲಿ ಪೋಲಿಯೋ ರೋಗಕ್ಕೆ ಗುರಿಯಾಗಿದ್ದ ಚಂದ್ರಶೇಖರ್ ಇಂದು ವಿಶ್ವದ ಅಸಾಧಾರಣ ಬೌಲರ್‍ಗಳಲ್ಲಿ ಒಬ್ಬರು. ಬಲಗೈನಿಂದ ಬೌಲ್ ಮಾಡುವ ಇವರು ಪರಿಣಾಮಕಾರಿ ಲೆಗ್ ಸ್ಪಿನ್ ಬೌಲರ್ ಆಗಿದ್ದಾರೆ. ಮಧ್ಯೆ ಮಧ್ಯೆ ಗೂಗ್ಲಿ ಬಾಲ್‍ಗಳನ್ನು ಕೂಡ ಹಾಕುತ್ತಾರೆ. 1971ರ ಇಂಗ್ಲೆಂಡ್ ಪ್ರವಾಸಾನಂತರ ಕರಾರುವಾಕ್ಕಾದ ಲೆಂಗ್ತ್ ಮತ್ತು ಗುರಿಯನ್ನು ಸಾಧಿಸಿಕೊಂಡಿದ್ದಾರೆ. ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದ ಚಂದ್ರಶೇಖರ್ ವೈ. ಎಸ್. ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನ್‍ಮೆಂಟ್‍ನಲ್ಲಿ ಭಾಗವಹಿಸಿ ಮೂರು ಪಂದ್ಯಗಳಲ್ಲಿ 17 ವಿಕೆಟ್ ಗಳಿಸುವ ಮೂಲಕ ಬೆಳಕಿಗೆ ಬಂದರು. 1963-64ರಲ್ಲಿ ಜ್ಯೂನಿಯರ್ ಕ್ರಿಕೆಟ್‍ನಿಂದ ಟೆಸ್ಟ್ ಹಂತಕ್ಕೆ ಏರಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ಕ್ರಿಕೆಟ್ ಟೀಮಿನ ನಾಯಕರೂ ಆಗಿದ್ದರು.

ವಿಜ್ಞಾನದ ಪದವೀಧರರಾಗಿರುವ ಚಂದ್ರಶೇಖರ್ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಒಬ್ಬ ಅಧಿಕಾರಿಯಾಗಿದ್ದಾರೆ.

1972-73ರಲ್ಲಿ ದೆಹಲಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 79ರನ್ ಕೊಟ್ಟು 8 ವಿಕೆಟ್‍ಗಳನ್ನೂ 1966-67ರಲ್ಲಿ ಮುಂಬಯಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 235 ರನ್ ಕೊಟ್ಟು 11 ವಿಕೆಟ್‍ಗಳನ್ನೂ ಪಡೆದಿರುವುದು ಇವರ ಅತ್ಯುತ್ತಮ ಬೌಲಿಂಗ್ ಸಂದರ್ಭಗಳು.

1971ರ ಆಗಸ್ಟ್ 24ರಂದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ನಾಲ್ಕು ವಿಕೆಟ್‍ಗಳ ಜಯ ತಂದುಕೊಟ್ಟ ಐತಿಹಾಸಿಕ ಓವಲ್ ಟೆಸ್ಟ್‍ನಲ್ಲಿ ಚಂದ್ರಶೇಖರ್ 114 ರನ್‍ಗಳಿಗೆ ಎಂಟು ವಿಕೆಟ್ ಬಲಿ ತೆಗೆದುಕೊಂಡಿದ್ದರು. (ಮೊದಲ ಇನ್ನಿಂಗ್ಸ್‍ನಲ್ಲಿ 76 ಕ್ಕೆ 2, ಎರಡನೇ ಇನ್ನಿಂಗ್ಸ್‍ನಲ್ಲಿ 38ಕ್ಕೆ 6.)

1967-68ರಲ್ಲಿ ಭಾರತದ ಟೀಮು ಆಸ್ಟ್ರೇಲಿಯಾದಲ್ಲಿ ಪ್ರವಾಸ ಮಾಡುತ್ತಿದ್ದಾಗ ಪ್ರವಾಸದ ಮುಕ್ತಾಯದಲ್ಲಿ ಭಾರತಕ್ಕೆ ಹಿಂತಿರುಗಿದ ಚಂದ್ರಶೇಖರ್ ನ್ಯೂಜಿûಲೆಂಡ್ ಪ್ರವಾಸಕ್ಕೆ ಹೋಗಲಿಲ್ಲ. ಆನಂತರ ಬೆಂಗಳೂರಿನಲ್ಲಿ ಉಂಟಾದ ಸ್ಕೂಟರ್ ಅಪಘಾತವೊಂದರಲ್ಲಿ ಗಾಯಗೊಂಡಿದ್ದರಿಂದ ನ್ಯೂಜಿûಲೆಂಡ್ (1968-69) ಆಸ್ಟ್ರೇಲಿಯ (1969) ಮತ್ತು ವೆಸ್ಟ್ ಇಂಡೀಸ್ (1971) ವಿರುದ್ಧ ನಡೆದ ಪಂದ್ಯಗಳಲ್ಲೂ ಭಾಗವಹಿಸಲಿಲ್ಲ.

1973ರ ಫೆಬ್ರವರಿ 11 ರಂದು ನಡೆದ ಪಂದ್ಯದ ಎರಡನೆಯ ಇನ್ನಿಂಗ್ಸ್‍ನಲ್ಲಿ ಇಂಗ್ಲೆಂಡಿನ ಸ್ಕೋರು 37 ರನ್ ಆಗಿದ್ದಾಗ 8 ರನ್ ಮಾಡಿದ್ದ ಇಂಗ್ಲೆಂಡಿನ ವಿಕೆಟ್ ಕೀಪರ್ ಅಲನ್ ನಾಟ್ ಚಂದ್ರಶೇಖರ್ ಅವರ ಬೌಲಿಂಗಿಗೆ ಬಲಿಯಾದರು. ಈ ವಿಕೆಟ್ ಪತನ ಹೊಸ ವಿಕ್ರಮವನ್ನು ಸ್ಥಾಪಿಸಿತು. ಈ ವಿಕೆಟ್ಟನ್ನು ಪಡೆಯುವುದರ ಮೂಲಕ ಚಂದ್ರಶೇಖರ್ 1972-73ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 662 ರನ್ನುಗಳಿಗೆ 35 ವಿಕೆಟ್ಟುಗಳನ್ನು ಗಳಿಸಿ ಹೊಸವಿಕ್ರಮವನ್ನು ಸ್ಥಾಪಿಸಿದಂತಾಯಿತು. 1951-52ರಲ್ಲಿ ವಿನೂ ಮಂಕಡ್ 571 ರನ್‍ಗಳಿಗೆ 34 ಇಂಗ್ಲೆಂಡ್ ವಿಕೆಟ್ಟುಗಳನ್ನೂ ಸುಭಾಷ್ ಗುಪ್ತೆ 1955-59ರಲ್ಲಿ 669 ರನ್ನುಗಳಿಗೆ 34 ನ್ಯೂಜಿûೀಲೆಂಡ್ ವಿಕೆಟ್ಟುಗಳನ್ನೂ ಪಡೆದು ಸ್ಥಾಪಿಸಿದ್ದ ವಿಕ್ರಮ ಇದರಿಂದ ಆಳಿಸಿಹೋಯಿತು.

ಈ ಸರಣಿಯಲ್ಲಿ ಚಂದ್ರಶೇಖರ್ ಇನ್ನೂ ಒಂದು ವಿಕ್ರಮವನ್ನು ಸ್ಥಾಪಿಸಿ ಹಿಂದಿನ ವಿನೂ ಮಂಕಡ್ ಅವರ ವಿಕ್ರಮವನ್ನು ಮುರಿದರು. ವಿನೂ ಮಂಕಡ್ ಹನ್ನೊಂದು ಟೆಸ್ಟ್ ಪಂದ್ಯಗಳಲ್ಲಿ 1249 ರನ್‍ಗಳಿಗೆ 54 ಇಂಗ್ಲೆಂಡ್ ವಿಕೆಟ್‍ಗಳನ್ನು ಪಡೆದಿದ್ದರೆ ಚಂದ್ರಶೇಖರ್ 15 ಟೆಸ್ಟ್‍ಗಳಲ್ಲಿ 1815ರನ್ ಗಳಿಗೆ ಇಂಗ್ಲೆಂಡಿನ 74 ವಿಕೆಟ್‍ಗಳನ್ನು (1972-73ರ ಸರಣಿ ಮುಕ್ತಾಯವಾದಾಗ) ಪಡೆದಿದ್ದರು.

1974ರ ಜನವರಿ 14ರಂದು ಮದ್ರಾಸಿನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೆಯ ಇನ್ನಿಂಗ್ಸ್‍ನಲ್ಲಿ ಇಂಗ್ಲೆಂಡಿನ ಅಮಿಸ್ ಅವರನ್ನು ಔಟ್ ಮಾಡಿದ ಚಂದ್ರಶೇಖರ್ ಅಧಿಕೃತ ಟೆಸ್ಟ್‍ಗಳಲ್ಲಿ ವಿಕೆಟ್‍ಗಳ ಶತಕವನ್ನು ಪೂರ್ಣಗೊಳಿಸಿದರು. ಇದರಿಂದ 1972-73ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ (ಇದು ಮೂರನೆಯ ಟೆಸ್ಟ್) 25 ವಿಕೆಟ್‍ಗಳ ಸಂಖ್ಯೆಯನ್ನು ಇವರು ದಾಟಿದರು. (ಬಿ.ವಿ.ವಿ.ವೈ.)