ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾಮರಾಜನಗರ

ವಿಕಿಸೋರ್ಸ್ದಿಂದ

ಚಾಮರಾಜನಗರ- ಕರ್ನಾಟಕ ರಾಜ್ಯದ ಒಂದು ಜಿಲ್ಲೆ, ತಾಲ್ಲೂಕು ಹಾಗೂ ಅವುಗಳ ಆಡಳಿತ ಕೇಂದ್ರ. 1997ರಲ್ಲಿ ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳನ್ನು ಮರುವಿಂಗಡಣೆ ಮಾಡಿದಾಗ ಮೈಸೂರು ಜಿಲ್ಲೆಯಿಂದ ನಾಲ್ಕು ತಾಲ್ಲೂಕುಗಳನ್ನು ಬೇರ್ಪಡಿಸಿ ಚಾಮರಾಜನಗರ ಜಿಲ್ಲೆಯನ್ನು ರಚಿಸಲಾಯಿತು. ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು- ಇವು ಈ ಜಿಲ್ಲೆಗೆ ಸೇರಿರುವ ತಾಲ್ಲೂಕುಗಳು. ರಾಜ್ಯದ ದಕ್ಷಿಣದ ತುತ್ತತುದಿಯಲ್ಲಿರುವ ಈ ಜಿಲ್ಲೆಯ ಉತ್ತರದಲ್ಲಿ ಮೈಸೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೂ ಪ್ರರ್ವ ಮತ್ತು ದಕ್ಷಿಣದಲ್ಲಿ ತಮಿಳುನಾಡು ರಾಜ್ಯ, ಪಶ್ಚಿಮಕ್ಕೆ ಕೇರಳ ರಾಜ್ಯಗಳೂ ಇವೆ. ಜಿಲ್ಲೆಯ ವಿಸ್ತೀರ್ಣ 5,685ಚ.ಕಿಮೀ. ಜನಸಂಖ್ಯೆ 9,64,775.

ಭೂಲಕ್ಷಣ: ದಕ್ಷಿಣ ಭಾರತ ಪ್ರಸ್ಥಭೂಮಿಯ ದಕ್ಷಿಣದ ತುದಿ ಯಲ್ಲಿರುವ ಜಿಲ್ಲೆ ಪ್ರರ್ವ ಮತ್ತು ಪಶ್ಚಿಮ ಘಟ್ಟಗಳು ಕೂಡುವೆಡೆಯಲ್ಲಿದೆ. ನೀಲಗಿರಿ ಬೆಟ್ಟಗಳ ಕವಲುಗಳು ಇದರೊಳಕ್ಕೆ ಚಾಚಿವೆ. ಈ ಪ್ರದೇಶ ಸಮುದ್ರಮಟ್ಟಕ್ಕಿಂತ ಸರಾಸರಿ 800ಮೀ ಎತ್ತರದಲ್ಲಿದೆ. ಜಿಲ್ಲೆಯ ಮೂರು ಕಡೆ ಹಬ್ಬಿರುವ ಬೆಟ್ಟಗಳಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಮಹದೇಶ್ವರ ಬೆಟ್ಟ (976 ಮೀ), ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ (1,279ಮೀ), ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಸ್ವಾಮಿಬೆಟ್ಟ (1,468ಮೀ) ಇವು ಈ ಜಿಲ್ಲೆಯ ಹೆಗ್ಗುರುತುಗಳಾಗಿವೆ. ಇವಲ್ಲದೆ ಪುಣಜೂರು (1252.7ಮೀ), ಮತ್‍ಪೆÇೀಡ್ (1515.5ಮೀ), ಹೊನ್ನನೆತ್ತಿಕಲ್ (1773.2ಮೀ), ಕತ್ತರಿ (1816ಮೀ), ಹೊನಬೆರ್ರ (1646ಮೀ) ಬೆಟ್ಟಗಳಿವೆ. ಮಹದೇಶ್ವರಬೆಟ್ಟ ಸಾಲಿನಲ್ಲಿ ಆನೆಮಲೆ, ಕಾಡುಮಲೆ, ಜೇನುಮಲೆ ಮೊದಲಾದ 77 ದಟ್ಟಡವಿಗಳಿವೆ. ಬಿಳಿಗಿರಿರಂಗನ ಬೆಟ್ಟದ ಸಾಲು ಬಂಡೀಪುರದವರೆಗೂ ನಿಬಿಡವಾಗಿ ಹಬ್ಬಿದೆ. ಇವು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ದೊಡ್ಡ ಅಭೇದ್ಯ ಗೋಡೆಗಳಂತೆ ನಿಂತಿವೆ. ಕೇರಳದ ಗಡಿ ಪ್ರದೇಶ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟದ ಹತ್ತಿರ ಬರುತ್ತದೆ. ಈ ಇಡೀ ಅರಣ್ಯ ರಾಶಿಯ ನಡುವೆ ಅತ್ಯಂತ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರಗಳಿರುವುದೊಂದು ವಿಶೇಷ. ಪಶ್ಚಿಮ ಘಟ್ಟಗಳ ಶ್ರೇಣಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಬೀಳುವ ಮಳೆ ಕಡಿಮೆಯೇ. ಆದರೆ ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಂಚಿನ ನೆಲಗಳನ್ನು ವಿಸ್ತಾರವಾದ ಅರಣ್ಯ ಆವರಿಸಿದೆ.

ಜಿಲ್ಲೆಯ ಉತ್ತರ ಮತ್ತು ಪ್ರರ್ವದಲ್ಲಿ ಬಯಲು ಪ್ರದೇಶವಿದೆ. ಕಪಿಲಾ ನದಿಯ ದಂಡೆಯ ಮೇಲೆ ವಿಸ್ತರಿಸಿರುವ ಈ ಭಾಗ ಹೆಚ್ಚಾಗಿ ಕೆಂಪುಮಣ್ಣಿನಿಂದ ಕೂಡಿದ್ದು, ಅಲ್ಲಲ್ಲಿ ಹೆಚ್ಚು ಎತ್ತರವಲ್ಲದ ಗುಡ್ಡಗಳು ಕಂಡುಬರುತ್ತವೆ.

ಭೂವಿಜ್ಞಾನ: ಈ ಜಿಲ್ಲೆ ದಕ್ಷಿಣ ಪ್ರಸ್ಥಭೂಮಿಯ ಅಂಚಿನಲ್ಲಿದ್ದರೂ ಪ್ರಸ್ಥಭೂಮಿ ಶಿಲಾ ರಚನೆಗಿಂತ ಸ್ವಲ್ಪ ಬಿsನ್ನವಾಗಿದೆ. ಈ ಭಾಗದಲ್ಲಿ ಧಾರವಾಡ ಶಿಲಾ ರಚನೆ ಕಾಣದಿರುವುದೊಂದು ವಿಶೇಷ. ಇದರ ಬದಲು ಚಾರ್ನೊಕೈಟ್ ಶಿಲೆಗಳು ಕಂಡುಬರುತ್ತವೆ. ಅಲ್ಲಲ್ಲಿ ಹಾರ್ನ್‍ಬ್ಲೆಂಡ್, ಪೈರಾಕ್ಸೆನೈಟ್ ಮಾನೈಟ್ ಶಿಲೆಗಳ ಹೊಡೆಸಾಲುಗಳು ಹಬ್ಬಿವೆ. ತೆರಕಣಾಂಬಿಯಲ್ಲಿ ಮಣಿಶಿಲೆ ಇದೆ. ಅಲ್ಲಲ್ಲಿ ಬಂಡೆ ಶ್ರೇಣಿಗಳಲ್ಲಿ ಕಯನೈಟ್ ಮತ್ತು ಸಿಲಿಮನೈಟ್ ಖನಿಜಗಳಿವೆ. ಖನಿಜ ಸಂಪತ್ತಿನಲ್ಲಿ ಈ ಜಿಲ್ಲೆ ಸಂಪದ್ಭರಿತವಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ತಾಮ್ರದ ನಿಕ್ಷೇಪವುಂಟು. ಗುಂಡ್ಲುಪೇಟೆ ಸುತ್ತಮುತ್ತ ಕುರಂಗದ ಕಲ್ಲಿದೆ. ಕೊಳ್ಳೇಗಾಲದ ವಾಣಿಜ್ಯ ಪ್ರಮಾಣದಲ್ಲಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿ ಚಿನ್ನದ ಅದಿರು ಕಂಡುಬರುತ್ತದೆ. ಕೆಲವಡೆ ಕಬ್ಬಿಣದ ಅಂಶ ಗಣನೀಯವಾಗಿರುವ ಶಿಲೆಗಳುಂಟು. ಈ ಪ್ರದೇಶದಲ್ಲೇ ಮೆಗ್ನೀಷಿಯಂ ಲೋಹ ನಿಕ್ಷೇಪವೂ ಇದೆ. ಸುಣ್ಣಕಲ್ಲು ನಿಕ್ಷೇಪ ಮತ್ತು ಸಿಲಿಮನೈಟ್ ಖನಿಜಗಳು ಕೆಲವೆಡೆ ಉಂಟು. ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ರೇಷ್ಮೆಯಂತೆ ಹೊಳಪಾದ ಊದಾಬಣ್ಣದ ಚಂದ್ರಶಿಲೆ ಇದೆ. ಕಟ್ಟಡಗಳ ಅಲಂಕಾರಕ್ಕಾಗಿ ಬಳಸಲು ಯೋಗ್ಯವಾದ ನಾನಾ ಬಗೆಯ ಗ್ರಾನೈಟ್ ಶಿಲೆಗಳು ಜಿಲ್ಲೆಯಲ್ಲಿವೆ. ಕಲ್ಲು ತೆಗೆಯುವುದು ಇಲ್ಲಿನ ಒಂದು ಪ್ರಮುಖ ಉದ್ಯಮ. ಅವುಗಳಲ್ಲಿ ಕೆಂಪು, ಹಸುರು ಮತ್ತು ಗುಲಾಬಿ ಬಣ್ಣದ ಈ ಶಿಲೆಗಳು ಜಪಾನ್ ಮೊದಲಾದ ದೇಶಗಳಿಗೆ ರಫ್ತಾಗುತ್ತವೆ. ಕೆಲವು ಗ್ರಾನೈಟ್ ಶಿಲೆಗಳಿಂದ ಜಪಮಣಿ, ಗುಂಡಿಗಳು, ಆಭರಣ ಹರಳುಗಳು, ಮಸಿಕುಡಿಕೆ, ಪಾತ್ರೆಗಳನ್ನು ತಯಾರಿಸುತ್ತಾರೆ.

ನದಿಗಳು: ಚಾಮರಾಜನಗರ ಜಿಲ್ಲೆಯಲ್ಲಿ ದೊಡ್ಡ ನದಿಗಳು ಹರಿಯು ವುದಿಲ್ಲ. ಆದರೆ ಕಾವೇರಿಯ ಉಪನದಿಯಾದ ಕಪಿಲಾ ಅಥವಾ ಕಬಿನಿ ಈ ಜಿಲ್ಲೆಯ ಉತ್ತರ ಮತ್ತು ಪ್ರರ್ವ ಭಾಗದ ಸರಹದ್ದಿನಲ್ಲೇ ಹರಿಯುತ್ತದೆ. ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದ ಬಳಿ ಇದು ಕಾವೇರಿಯನ್ನು ಸೇರುತ್ತದೆ. ಮುಂದೆ ಕಾವೇರಿ ನದಿ ಸ್ವಲ್ಪ ದೂರ ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಹಾಗೂ ತಮಿಳುನಾಡು ರಾಜ್ಯದ ಗಡಿಯಾಗಿ ಪರಿಣಮಿಸಿದೆ. ಕಪಿಲಾ ಮತ್ತು ಕಾವೇರಿ ನದಿಗಳನ್ನು ಸೇರುವ ಹಲವಾರು ಉಪನದಿಗಳು ಮತ್ತು ತೊರೆಗಳು ಈ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ಹುಟ್ಟಿ ಹರಿಯುತ್ತವೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಟ್ಟುವ ಮಾವಿನಹಳ್ಳ ಮೈಸೂರು ಜಿಲ್ಲೆಯನ್ನು ಪ್ರವೇಶಿಸಿ ನುಗುಹೊಳೆಯನ್ನು ಸೇರುತ್ತದೆ. ಗುಂಡ್ಲುಹೊಳೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹುಟ್ಟಿ ನಂಜನಗೂಡು ಬಳಿ ಕಪಿಲಾ ನದಿಯನ್ನು ಕೂಡಿಕೊಳ್ಳುತ್ತದೆ.

ತಮಿಳುನಾಡಿನಿಂದ ಹರಿದುಬರುವ ಸುವರ್ಣಾವತಿ (ಹೊನ್ನುಹೊಳೆ), ಬಿಳಿಗಿರಿರಂಗನ ಬೆಟ್ಟದಿಂದ ಬರುವ ಗುಂಡಾಲ್ ಹೊಳೆ, ಹನೂರು ಸಮೀಪದ ಉಡುತೊರೆ ಹಳ್ಳ-ಇವು ಉತ್ತರಾಬಿsಮುಖವಾಗಿ ಹರಿದರೆ ಮೋಯರ್ ಹಾಗೂ ಪಾಲಾರ್ ಈ ಜಿಲ್ಲೆ ಸರಹದ್ದಿನಲ್ಲಿ ಹರಿದು ಕಾವೇರಿಯನ್ನು ಸೇರುತ್ತವೆ. ಸುವರ್ಣಾವತಿ ಗಜಹಗಟ್ಟಿ ಕಣಿವೆಯ ಬಳಿ ದಿಂಬಂ ಎಂಬಲ್ಲಿ ಹುಟ್ಟಿ ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಹರಿದು ತಲಕಾಡಿನ ಸಮೀಪ ಕಾವೇರಿಯನ್ನು ಕೂಡಿಕೊಳ್ಳುತ್ತದೆ. ಚಿಕ್ಕಹೊಳೆ ಇದರ ಉಪನದಿ. ಮಹದೇಶ್ವರ ಬೆಟ್ಟದ ಗುಳಿಯಾತನೂರು ಹಳ್ಳ, ಯೇಲಕ್ಕಿಯಾತು ಹಳ್ಳ, ಮೆದುಗನಾಳು ಹಳ್ಳ, ಬಿಳಿಗಿರಿರಂಗನ ಬೆಟ್ಟದ ಉಲಿಕೊಪ್ಪ ಹಳ್ಳ, ತಟ್ಟಿನ ಹಳ್ಳ - ಇವು ಇತರ ತೊರೆಗಳು. ಚಾಮರಾಜನಗರ ಜಿಲ್ಲೆಯಲ್ಲಿ ವಿಸ್ತಾರವಾದ ಅರಣ್ಯ ಪ್ರದೇಶವೂ ಹೊಳೆತೊರೆಗಳು ಇದ್ದರೂ ಇಲ್ಲಿ ಮಳೆಯ ಪ್ರಮಾಣ ಅಷ್ಟೇನೂ ಇಲ್ಲವಾದ್ದರಿಂದ, ಹೆಚ್ಚಿನ ಜಲಸಂಪತ್ತಿಲ್ಲ. ಒಳ್ಳೆಯ ಮಳೆಯಾದಾಗ ಪರಿಸ್ಥಿತಿ ಸುಧಾರಿಸುತ್ತದೆ. ನೀರಾವರಿಯಲ್ಲಿ ಅಭಿವೃದ್ಧಿಯನ್ನು ಸಾದಿsಸಲಾಗುತ್ತಿದೆ.

ಅರಣ್ಯ ಸಂಪತ್ತಿಗೆ ಸಂಬಂದಿsಸಿದಂತೆ ಈ ಜಿಲ್ಲೆ ಕರ್ನಾಟಕದ ಐದು ಮುಖ್ಯ ಜಿಲ್ಲೆಗಳಲ್ಲೊಂದು. ಜಿಲ್ಲೆಯ ಸು.1/3 ಭಾಗವನ್ನು ಅರಣ್ಯ ಆವರಿಸಿದೆ. ಚಾಮರಾಜನಗರವನ್ನು ಬಿಟ್ಟು ಉಳಿದೆಲ್ಲ ತಾಲ್ಲೂಕುಗಳಲ್ಲಿ ಕಾಡುಗಳಿವೆ. ಮಲೆನಾಡಿನ ಅರಣ್ಯಗಳಂತೆ ಇವು ದಟ್ಟವಾಗಿರದಿದ್ದರೂ ಇಲ್ಲಿ ಉತ್ತಮ ಜಾತಿಯ ಮರಗಳಿವೆ. ತೇಗ, ಬೀಟೆ, ಗಂಧ, ನಂದಿ, ಹೊನ್ನೆ, ಮತ್ತಿ ಮತ್ತು ಕರಿ ಮರಗಳು ಸಾಕಷ್ಟು ಕಂಡುಬರುತ್ತವೆ. ಬಿದಿರು, ಅರಗು, ಮರಗೋಂದು, ನೆಲ್ಲಿ, ಹುಣಿಸೆ, ಮಾವು ಸೀಗೆ -ಇವು ಇಲ್ಲಿಯ ಉಪೆÇೀತ್ಪನ್ನಗಳು. ಜಿಲ್ಲೆಯ ಅರಣ್ಯ ಪ್ರದೇಶದ ಒಟ್ಟು ವಿಸ್ತೀರ್ಣ 2,75,610 ಹೆಕ್ಟೇರ್ (1998-99). ಅಷ್ಟೇನೂ ಎತ್ತರವಲ್ಲದ ಕಾಡುಗಳು ಮತ್ತು ಪೆÇದೆಗಳಲ್ಲಿ, ಹುಲ್ಲುಗಾವಲುಗಳಲ್ಲಿ ಹುಲಿ, ಚಿರತೆ, ಕರಡಿ, ಆನೆ, ಜಿಂಕೆ, ಸಾರಂಗ, ಕಾಡುಕೋಣ ಮುಂತಾದ ಪ್ರಮುಖ ವನ್ಯಜೀವಿಗಳನ್ನು ಕಾಣಬಹುದು. ಮೊಲ, ನರಿ, ಕಾಡುಬೆಕ್ಕು, ಅಳಿಲು ಮುಂತಾದವೂ ಉಂಟು. ನವಿಲು ಇಲ್ಲಿನ ಕಾಡುಗಳಿಗೆ ಶೋಭೆ ತಂದಿರುವ ಪಕ್ಷಿ. ಬಂಡೀಪುರ (ನೋಡಿ- ಬಂಡೀಪುರ) ಅಭಯಾರಣ್ಯ ಕಾಡು ಪ್ರಾಣಿಗಳ ಸಂರಕ್ಷಣಾ ತಾಣ. ಕಾಡುಗಳ್ಳರ ಹಾವಳಿಯಿಂದಾಗಿ ವೃಕ್ಷ ಸಂಕುಲ ಹಾಗೂ ಪ್ರಾಣಿಸಂಕುಲಗಳೆರಡಕ್ಕೂ ಹಾನಿಯಾಗುತ್ತಿದೆ.

ವ್ಯವಸಾಯ: ಚಾಮರಾಜನಗರ ಒಂದು ಹಿಂದುಳಿದ ಜಿಲ್ಲೆ. ವ್ಯವಸಾಯ ಇಲ್ಲಿನ ಮುಖ್ಯ ಕಸಬು. ಬತ್ತ, ರಾಗಿ, ಜೋಳ, ಕಬ್ಬು, ಹಿಪ್ಪುನೇರಳೆ, ನೆಲಗಡಲೆ, ಹರಳು, ಹತ್ತಿ, ಬಾಳೆ, ತೆಂಗು, ಅಡಕೆ - ಇವು ಮುಖ್ಯ ಬೆಳೆಗಳು. ವ್ಯವಸಾಯಕ್ಕೆ ನೀರಾವರಿ ಮುಖ್ಯ ಆಧಾರ. ಜಿಲ್ಲೆಯ ಸರಾಸರಿ ಮಳೆ 751ಮಿಮೀ. ಜಿಲ್ಲೆಯಲ್ಲಿ ಭಾರಿ ಜಲಾಶಯಗಳಿಲ್ಲ. ಹಲವಾರು ಮಧ್ಯಮ ಮತ್ತು ಸಣ್ಣ ಪ್ರಮಾಣದ ನೀರಾವರಿ ಯೋಜನೆಗಳು ಜಾರಿಗೆ ಬಂದಿವೆ. ಚಿಕ್ಕಹೊಳೆ, ಉಡುತೊರೆ ಹಳ್ಳ, ಸುವರ್ಣಾವತಿ, ಗುಂಡಾಲ್ ಹೊಳೆಗಳಿಗೆ ಅಲ್ಲಲ್ಲಿï ಜಲಾಶಯಗಳನ್ನು ನಿರ್ಮಿಸಿ ನೀರಾವರಿಗೆ ಸೌಲಭ್ಯ ವಿಸ್ತರಿಸಲಾಗುತ್ತಿದೆ. ಕಬಿನಿ ಮತ್ತು ನುಗು ಜಲಾಶಯಗಳಿಂದ ಕೆಲವು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಬರುತ್ತಿದೆ. ಕೊಳವೆ ಬಾವಿಗಳ ಮೂಲಕ ಅಂತರ್‍ಜಲವನ್ನು ಬಳಸಿಕೊಳ್ಳುವ ಪ್ರಯತ್ನ ನಡೆದಿದೆ.

ಜಿಲ್ಲೆಯಲ್ಲಿ ಸಾಗುವಳಿಗೆ ಯೋಗ್ಯವಾದ ನೆಲದಲ್ಲಿ 5,69,901 ಹೆಕ್ಟೇರ್ ಜಮೀನು ಬೇಸಾಯಕ್ಕೆ ಒದಗಿ ಬಂದಿದೆ (1998-99). ಕಾಲುವೆಯಿಂದ 11,192 ಹೆಕ್ಟೇರ್, ಕೆರೆಗಳಿಂದ 5,591, ಹೆಕ್ಟೇರ್ ಬಾವಿಗಳಿಂದ 18,799 ಹೆಕ್ಟೇರ್ ಜಮೀನು ನೀರಾವರಿಗೆ ಒಳಪಟ್ಟಿದೆ. ಜಿಲ್ಲೆಯಲ್ಲಿ ಸಾಕಷ್ಟು ಮಳೆಯನ್ನು ಆಧರಿಸಿದ ಭೂಮಿಯಲ್ಲಿ ರಾಗಿ, ಜೋಳ, ಕಡಲೆ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಹತ್ತಿ ಒಂದು ಪ್ರಮುಖ ವಾಣಿಜ್ಯ ಬೆಳೆ. ರೇಷ್ಮೆ ಸಾಕಣೆಗೆ ಜಿಲ್ಲೆ ಪ್ರಸಿದ್ಧವಾಗಿದೆ. ಜಿಲ್ಲೆಯಲ್ಲಿ ಆಧುನಿಕ ಮೀನುಗಾರಿಕೆ ಜನಪ್ರಿಯವಾಗಿದೆ. ಕೆರೆಗಳು ಮತ್ತು ಜಲಾಶಯಗಳಲ್ಲಿ ಮೀನುಮರಿಗಳನ್ನು ಬೆಳೆಸಿ ಮೀನು ಉತ್ಪಾದಿಸಲಾಗುತ್ತದೆ. ವಾರ್ಷಿಕ ಉತ್ಪನ್ನ 1508 ಟನ್. ಬೇಡಿಕೆಗೆ ಅನುಗುಣವಾಗಿ ಹೈನುಗಾರಿಕೆ ಬೆಳೆಯುತ್ತಿದೆ. ಹೆಚ್ಚು ಹೆಚ್ಚಾಗಿ ಜಾನುವಾರನ್ನು ಸಾಕಲಾಗುತ್ತಿದೆ. ಪಶುಸಂಗೋಪನೆಗಾಗಿ 11 ಕೃತಕಗರ್ಭಧಾರಣೆ ಕೇಂದ್ರಗಳಿವೆ. 4 ಸಂಚಾರಿ ಪಶು ಚಿಕಿತ್ಸಾಲಯಗಳು ಜಿಲ್ಲೆಯಲ್ಲಿ ಕಾರ್ಯನಿರತವಾಗಿವೆ. ಪಟ್ಟಣಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಕೋಳಿ ಫಾರಂಗಳು ಅಸ್ತಿತ್ವಕ್ಕೆ ಬಂದಿವೆ. ಅದಿsಕ ಮಾಂಸೋತ್ಪನ್ನ ಸಾಧಕಗಳಾದ ಮಿಶ್ರತಳಿ ಕೋಳಿಗಳ ಸಾಕುವಿಕೆ ಅಬಿsವೃದ್ಧಿ ಸಾದಿsಸುತ್ತಿದೆ. ಕೈಗಾರಿಕೆ: ಚಾಮರಾಜನಗರ ಜಿಲ್ಲೆ ಕೈಗಾರಿಕೆಯಲ್ಲಿ ಹಿಂದುಳಿದಿದೆ. ಮೈಸೂರು ಜಿಲ್ಲೆಯಿಂದ ಪ್ರತ್ಯೇಕಗೊಂಡ ಈ ಜಿಲ್ಲೆಯಲ್ಲಿ ಬೆಳೆವಣಿಗೆಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ರೇಷ್ಮೆ ಉದ್ಯಮ, ಹತ್ತಿಗಿರಣಿ ಮತ್ತು ಸಕ್ಕರೆ ಕಾರ್ಖಾನೆಗಳು ಇಲ್ಲಿನ ಮುಖ್ಯ ಉದ್ಯಮಗಳು. ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಕೇಂದ್ರೀಯ ರೇಷ್ಮೆ ಸಂಶೋಧನ ಮಂಡಳಿಯ ಪ್ರಾದೇಶಿಕ ಸಂಶೋಧನ ಕೇಂದ್ರಗಳು ಮತ್ತು ತರಬೇತಿ ಸಂಸ್ಥೆಗಳಿವೆ. ರೇಷ್ಮೆ ಬೀಜದ ಕೋಠಿಯೊಂದು ಚಾಮರಾಜನಗರದಲ್ಲಿದೆ. ಇಲ್ಲಿ ಮತ್ತು ಕೊಳ್ಳೇಗಾಲದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಗಳೂ ಕೊಳ್ಳೇಗಾಲದಲ್ಲಿ ಸರ್ಕಾರಿ ರೇಷ್ಮೆ ನೂಲು ಸುತ್ತುವ ಕಾರ್ಖಾನೆಯೂ ಇವೆ. ಮಾಂಬಳ್ಳಿಯಲ್ಲಿ ರೇಷ್ಮೆ ಸುತ್ತುವ ಮತ್ತು ನೇಯುವ ಕೇಂದ್ರವೂ ಸಂತೆಮರಳ್ಳಿಯಲ್ಲಿ ಸರ್ಕಾರಿ ರೇಷ್ಮೆ ನೂಲು ಸುತ್ತುವ ಘಟಕವೂ ಉಂಟು. ಅನೇಕ ಕಡೆಗಳಲ್ಲಿ ರೇಷ್ಮೆ ಸಾಕುವವರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಈ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಹಿಪ್ಪುನೇರಳೆ ಬೆಳೆಯುವುದು ಮತ್ತು ರೇಷ್ಮೆ ಹುಳು ಸಾಕಣೆ ಒಂದು ಪ್ರಮುಖ ಉಪ ಉದ್ಯಮ.

ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ಪ್ರದೇಶ 12738 ಹೆಕ್ಟೇರ್. ಹಲವೆಡೆಗಳಲ್ಲಿ ಹತ್ತಿಯ ಮತ್ತು ಸ್ಪನ್ ಹತ್ತಿಯ ಕೈಮಗ್ಗಗಳಿವೆ. ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದಲ್ಲಿ ಜವಳಿ ಉದ್ಯಮ ಬೆಳೆದಿದೆ. ಚಾಮರಾಜನಗರ ಮತ್ತು ಅದರ ಬಳಿಯ ಅಂಕಣಸೆಟ್ಟಿಪುರದಲ್ಲಿ ಜವಳಿ ಗಿರಣಿಗಳಿವೆ.

ಕೊಳ್ಳೇಗಾಲದಲ್ಲಿ ಮಹದೇಶ್ವರ ಸಕ್ಕರೆ ಕಾರ್ಖಾನೆಯಿದೆ. ಜಿಲ್ಲೆಯ ಕೆಲವೆಡೆ ಬೆಲ್ಲ ಮತ್ತು ಖಂಡಸಾರಿ ತಯಾರಾಗುತ್ತವೆ. ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದಲ್ಲಿ ಕಾಗದ ತಯಾರಿಸುವ ಘಟಕವಿದೆ. ಜಿಲ್ಲೆಯಲ್ಲಿ ಮರಕೊಯ್ಯುವ ಉದ್ಯಮಗಳಲ್ಲಿ ಪೀಠೋಪಕರಣ ತಯಾರಿಕಾ ಘಟಕಗಳೂ ಬೀಡಿ ಕಟ್ಟುವ ಕೇಂದ್ರಗಳೂ ಎಂಜಿನಿಯರಿಂಗ್ ಕಾರ್ಯಾಗಾರಗಳೂ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಗಳೂ ಎಣ್ಣೆ ತೆಗೆಯುವ ಕೇಂದ್ರಗಳೂ ಚರ್ಮ ಹದಗಾರಿಕೆ, ಸುಣ್ಣ ತಯಾರಿಕೆ, ಕಬ್ಬಿಣ ಮತ್ತು ಗ್ರಿಲ್ ಕೆಲಸ, ಮಣ್ಣಿನಿಂದ ಕುಂಡ, ಗಾಡಿ ತಯಾರಿಕೆ ಮುಂತಾದ ಉದ್ಯಮಗಳೂ ಅಲ್ಲಲ್ಲಿ ಉಂಟು. ಒಟ್ಟು 19 ಕಾರ್ಖಾನೆಗಳು, 1 ಕೈಗಾರಿಕಾ ಎಸ್ಟೇಟ್, 24 ಕೈಗಾರಿಕಾ ಷೆಡ್ಡುಗಳು ಜಿಲ್ಲೆಯಲ್ಲಿವೆ. ಒಟ್ಟು 3,482 ಜನರಿಗೆ ಉದ್ಯೋಗ ಒದಗಿಸಿವೆ (2001). ಕೊಳ್ಳೇಗಾಲದಲ್ಲಿ 1962-63ರಲ್ಲಿ ಸರ್ಕಾರಿ ಯಾಂತ್ರಿಕ ಕಾರ್ಯಾಗಾರವನ್ನು ಸ್ಥಾಪಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಅಂಕಳ್ಳಿಯಲ್ಲಿ ಚರ್ಮಗೆಲಸ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. (1987). ಅದೇ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಚಾಪೆ ನೇಯುವ ತರಬೇತಿ ಕೇಂದ್ರವೂ ಚಾಮರಾಜನಗರದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯೂ ಉದ್ಯೋಗಾರ್ಥಿಗಳಿಗೆ ತರಬೇತಿ ನೀಡುತ್ತವೆ. ಗ್ರಾನೈಟ್, ಸುಣ್ಣಕಲ್ಲು ಗಣಿಗಾರಿಕೆ ಇಲ್ಲಿನ ಇನ್ನೆರಡು ಉದ್ಯಮಗಳು.

ಶಿಕ್ಷಣ ಕ್ಷೇತ್ರದಲ್ಲಿ ಈ ಜಿಲ್ಲೆ ಗಮನಾರ್ಹವಾಗಿ ಮುಂದುವರಿಯುತ್ತಿದೆ. ಜೆ.ಎಸ್.ಎಸ್. ವಿದ್ಯಾಸಂಸ್ಥೆ ಸ್ಥಾಪಿಸಿರುವ ಅನೇಕ ಶಾಲಾ ಕಾಲೇಜುಗಳು ಚಾಮರಾಜನಗರದಲ್ಲಿವೆ. ಜಿಲ್ಲೆಯಲ್ಲಿ 119 ಪ್ರೌಢಶಾಲೆಗಳೂ 32 ಕಿರಿಯ ಕಾಲೇಜುಗಳೂ ಇವೆ (2000-01). ಕೊಳ್ಳೇಗಾಲದಲ್ಲಿರುವ ಸರ್ಕಾರಿ ಕಾಲೇಜು ಅತ್ಯಂತ ಹಳೆಯದು. ಇತ್ತೀಚೆಗೆ ಚಾಮರಾಜನಗರದ ಜೆ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಶಿಕ್ಷಣ ಸೌಲಭ್ಯ (ಎಂ.ಎ.) ಕಲ್ಪಿಸಲಾಗಿದೆ (2002).

ಸಾರಿಗೆ ಸಂಪರ್ಕ: ರಾಜ್ಯದ ಗಡಿಭಾಗದಲ್ಲಿರುವ ಈ ಜಿಲ್ಲೆಯಲ್ಲಿ ನೆರೆರಾಜ್ಯಗಳೊಂದಿಗೆ ಸಂಪರ್ಕ ಸಾದಿsಸುವ ಪ್ರಮುಖ ರಸ್ತೆ ಮಾರ್ಗಗಳು ಹಾದುಹೋಗುತ್ತವೆ. 1998-99ರ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ 160 ಕಿಮೀ ರಾಷ್ಟ್ರೀಯ ಹೆದ್ದಾರಿ, 106ಕಿಮೀ ರಾಜ್ಯ ಹೆದ್ದಾರಿ, 658ಕಿಮೀ ಜಿಲ್ಲಾ ರಸ್ತೆ ಮತ್ತು 209ಕಿಮೀ ಇತರ ರಸ್ತೆಗಳಿವೆ. ತಾಲ್ಲೂಕು ಅಬಿsವೃದ್ಧಿ ಮಂಡಳಿಗಳಿಗೆ ಸೇರಿದ ರಸ್ತೆಗಳ ಉದ್ದ 337ಕಿಮೀ, ಅರಣ್ಯ ಇಲಾಖೆಗೆ ಸೇರಿದ ರಸ್ತೆಗಳು 449ಕಿಮೀ ಪುರಸಭೆಗಳ ರಸ್ತೆಗಳು 951ಕಿಮೀ ಪಂಚಾಯತಿ ರಸ್ತೆಗಳು 72ಕಿಮೀ ಮೈಸೂರು-ಊಟಿ ರಸ್ತೆ, ಬೆಂಗಳೂರು-ಕೊಯಮತ್ತೂರು, ಮೈಸೂರು-ಸುಲ್ತಾನ್‍ಬತೇರಿ, ಗುಂಡ್ಲುಪೇಟೆ-ಗೂಡಲೂರು-ಊಟಿ, ಕೊಳ್ಳೇಗಾಲ-ಸತ್ಯಮಂಗಲ ಘಾಟಿ, ಕೊಳ್ಳೇಗಾಲ-ಮಹದೇಶ್ವರ ಬೆಟ್ಟ-ಭವಾನಿ ರಸ್ತೆಗಳು ಈ ಜಿಲ್ಲೆಯಲ್ಲಿ ಹಾದು ಹೋಗುವ ಅಂತಾರಾಜ್ಯ ಮಾರ್ಗಗಳು. ಮೈಸೂರು-ಚಾಮರಾಜನಗರ-ಪುಣಜೂರು ಘಾಟಿ, ಹನೂರು-ರಾಮಪುರ, ಗುಂಡ್ಲುಪೇಟೆ-ಚಾಮರಾಜನಗರ ತಿರುಮಕೂಡಲು ನರಸೀಪುರ ರಸ್ತೆಗಳು ಮುಖ್ಯ ಜಿಲ್ಲಾ ರಸ್ತೆ ಮಾರ್ಗಗಳು.

ಮೈಸೂರು-ಚಾಮರಾಜನಗರ ರೈಲುಮಾರ್ಗ ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲೇ ನಿರ್ಮಾಣವಾಯಿತು. ಚಾಮರಾಜನಗರ-ಸತ್ಯಮಂಗಲಂ ರೈಲುಮಾರ್ಗ ನಿರ್ಮಾಣ ಬಹಳ ದೀರ್ಘಕಾಲದಿಂದ ನೆನೆಗುದಿಯಲ್ಲಿದೆ. ಇತಿಹಾಸ ಮತ್ತು ಸಂಸ್ಕøತಿ: ಚಾಮರಾಜನಗರ ಜಿಲ್ಲೆ ದಟ್ಟವಾದ ಅರಣ್ಯದ ಪರಿದಿsಯಲ್ಲಿದ್ದು ಇಲ್ಲಿ ಪ್ರಾಚೀನ ಕಾಲದಿಂದಲೇ ಸಂಸ್ಕøತಿ ಮತ್ತು ನಾಗರಿಕತೆ ಬೆಳೆದುಬಂದಿವೆ. ಇಲ್ಲಿನ ಬಹುಸಂಖ್ಯೆಯ ಚಿಕ್ಕಪುಟ್ಟ ನದಿಗಳು ಹಾಗೂ ಸರಹದ್ದಿನ ಕಪಿಲಾ, ಕಾವೇರಿ ನದಿ - ಇವು ವ್ಯವಸಾಯ ಸಮುದಾಯಗಳು ಇಲ್ಲಿ ನೆಲಸಲು ಅನುಕೂಲಕರವಾದ ನೀರಿನ ಆಸರೆಯನ್ನು ಒದಗಿಸಿದವು. ಸುತ್ತಲ ಅರಣ್ಯಗಳು ಆದಿವಾಸಿಗಳ ಮತ್ತು ಪರಿಶಿಷ್ಟಪಂಗಡಗಳ ಜನರ ನೆಲೆಸುವಿಕೆಗೆ ಭದ್ರತೆಯನ್ನು ತಂದುಕೊಟ್ಟಿದ್ದುವು. ಅತ್ಯಂತ ಪ್ರಾಚೀನ ನೆಲೆಗಳ ಗುರುತುಗಳು ಹಲವೆಡೆ ಕಂಡುಬಂದಿವೆ. ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ, ಹನೂರು, ಬೆಳ್ತೂರು, ಚಿಕ್ಕಯಲಾಪುರ, ಕನ್ನಿಕೆರೆ, ತೆಲ್ನೂರ್, ಯಳಂದೂರು ತಾಲ್ಲೂಕಿನ ಯರಗಂಬಳಿ, ಗುಂಬಳ್ಳಿ, ಶಿವಕಳ್ಳಿ, ದೇವರಹಳ್ಳಿ, ಯರಿಯೂರು, ಗಾಣಿಗನೂರು, ಮಲ್ಲಾರಪಾಳ್ಯ, ಚಾಮರಾಜನಗರ ತಾಲ್ಲೂಕಿನ ಆಲೂರು, ಬೆಟ್ಟಹಳ್ಳಿ, ಚಂದಕವಾಡಿ, ಹೊಂಗನೂರು ಮತ್ತು ನಲ್ಲೂರು, ಹೊಸಹಳ್ಳಿ, ಬೂದಿತಿಟ್ಟು, ಗುಂಡ್ಲುಪೇಟೆ ತಾಲ್ಲೂಕಿನ ಕಳಲೆ, ಪಂಜನಹಳ್ಳಿ, ವೀರನಪುರ, ಹೊಸಹಳ್ಳಿ, ಗುಂಡ್ಲುಪೇಟೆ ಮೊದಲಾದ ಕಡೆಗಳಲ್ಲಿ ಇತಿಹಾಸ ಪ್ರರ್ವದ ನೆಲೆಗಳ ಶಿಲಾ ಅವಶೇಷಗಳು ದೊರೆತಿವೆ. ಇಲ್ಲೆಲ್ಲ ಶಿಲಾಯುಗದ ಮತ್ತು ಬೃಹತ್ ಶಿಲಾಯುಗದ ಜನರ ಆಯುಧಗಳೂ ಸಮಾದಿsಗಳೂ ಕಂಡುಬಂದಿವೆ.

ಕರ್ನಾಟಕದ ಅತ್ಯಂತ ಪುರಾತನವೆನಿಸಿದ ಪುನ್ನಾಟ ರಾಜ್ಯಕ್ಕೆ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಕಿತ್ತೂರು (ಕೀರ್ತಿಪುರ) ರಾಜಧಾನಿಯಾಗಿತ್ತು. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಸ್ಥಾಪಿತವಾಗಿ 6ನೆಯ ಶತಮಾನದವರೆಗೆ ಉಳಿದುಬಂದಿತ್ತು. ಪ್ರಾಚೀನ ದಾಖಲೆಗಳಲ್ಲಿ ಬರುವ `ಪುಂಟ್ ಎಂಬುದು ಪುನ್ನಾಟವಿರಬಹುದೆಂದು ಕೆಲವು ವಿದ್ವಾಂಸರು ಅಬಿಪ್ರಾಯಪಟ್ಟಿದ್ದಾರೆ. ಮಗಧ ರಾಜ್ಯದಿಂದ ದಕ್ಷಿಣಕ್ಕೆ ವಲಸೆ ಬಂದ ಜೈನ ಸಂಘವೊಂದು ಭದ್ರಬಾಹುವಿನ ಸೂಚನೆಯಂತೆ ಪುನ್ನಾಟ ದೇಶಕ್ಕೆ ಹೋಯಿತು ಎಂಬ ಪ್ರಸ್ತಾಪ ಹರಿಷೇಣನ ಬೃಹತ್ಕಥಾಕೋಶದಲ್ಲಿ ಬರುತ್ತದೆ. 2ನೆಯ ಶತಮಾನದ ಗ್ರೀಕ್ ಭೂಗೋಳಕಾರ ಟಾಲೆಮಿಯ ಪ್ರಕಾರ ಪೌನ್ನಟ ಎಂಬ ಪ್ರದೇಶ ಪಚ್ಚೆಕಲ್ಲುಗಳಿಗೆ ಪ್ರಸಿದ್ಧವಾಗಿತ್ತು. ಹೆಗ್ಗಡದೇವನ ಕೋಟೆ, ಗುಂಡ್ಲುಪೇಟೆ ವಲಯವು ಪಚ್ಚೆ, ಹರಳು ಮತ್ತು ಪದ್ಮರಾಗಗಳಿಗೆ ಪ್ರಸಿದ್ಧವಾಗಿತ್ತು. ಪೆÇನ್ನಿನವಾಡು ಎಂಬುದು ಪುನ್ನಾಡು, ಪುನ್ನಾಟು, ಪುನ್ನಾಟ ಆಗಿರಬಹುದೆನ್ನಲಾಗಿದೆ. ಪುನ್ನಾಟದ ಅರಸರು ಕದಂಬ ಮತ್ತು ಗಂಗ ಮನೆತನಗಳೊಂದಿಗೆ ವಿವಾಹ ಸಂಬಂಧ ಹೊಂದಿದ್ದ ವಿಷಯ ಶಾಸನಗಳಿಂದ ತಿಳಿದುಬರುತ್ತದೆ. ಗಂಗ ದುರ್ವಿನೀತ ಪುನ್ನಾಟ ರಾಜಮನೆತನದ ವಧುವಿನ ಮಗನಾಗಿದ್ದ, ತಾಯಿಯ ಮನೆತನದಲ್ಲಿ ಗಂಡು ಮಕ್ಕಳಿಲ್ಲದ್ದರಿಂದ ಪುನ್ನಾಟ ರಾಜ್ಯವನ್ನು ಗಂಗರಾಜ್ಯಕ್ಕೆ ಸೇರಿಸಿಕೊಳ್ಳಲಾಯಿತು (6ನೆಯ ಶತಮಾನ). ಈ ರಾಜಮನೆತನದವರ ಬಗ್ಗೆ ದೊರೆಯುವ ಕೆಲವೇ ಶಾಸನಗಳು ಯಳಂದೂರು, ನಂಜನಗೂಡು, ಹೆಗ್ಗಡದೇವನಕೋಟೆಗಳ ಬಳಿ ದೊರೆತಿವೆ. ಇವರು ಗಂಗರು ಮತ್ತು ಕದಂಬರಿಗಿಂತ ಹಿಂದೆಯೇ ಕರ್ನಾಟಕದಲ್ಲಿ ರಾಜ್ಯ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಗಂಗ ರಾಜ್ಯದ ವಿಸ್ತರಣೆಯಿಂದ ಇವರ ಅಸ್ತಿತ್ವಕ್ಕೆ ಚ್ಯುತಿಯುಂಟಾಯಿತೆಂದು ತೋರುತ್ತದೆ. ಈ ರಾಜವಂಶದ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ. ಆದರೆ ಗಂಗ-ಕದಂಬ ಪ್ರರ್ವ ಕಾಲದಲ್ಲಿ ಪುನ್ನಾಟ ರಾಜ್ಯ ಕಾವೇರಿ ಪ್ರದೇಶದ ಬಹುಭಾಗದಲ್ಲಿ ವ್ಯಾಪಿಸಿದ್ದಿರಬಹುದು.

ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳತೊಡಗಿದ ತಲಕಾಡಿನ ಗಂಗರು ಅಥವಾ ಪಶ್ಚಿಮ ಗಂಗರು 4ನೆಯ ಶತಮಾನದಿಂದ 11ನೆಯ ಶತಮಾನದ ಪ್ರಾರಂಭದವರೆಗೂ ಆಳಿ ಕರ್ನಾಟಕದ ರಾಜಮನೆತನಗಳಲ್ಲೇ ಅತ್ಯಂತ ದೀರ್ಘಕಾಲ ಆಳಿದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಂಶದ ದುರ್ವಿನೀತನ (ಸು.529-79) ಕಾಲದಿಂದ ಹಿಡಿದು, ಪುನ್ನಾಟ ರಾಜ್ಯ ಗಂಗರಾಜ್ಯದಲ್ಲಿ ಅಂತರ್ಗತವಾದ ಮೇಲೆ ಅವರ ಆಳಿಕೆಯ ಕೊನೆಯವರೆಗೂ ಈ ಜಿಲ್ಲೆ ಗಂಗರ ಅಧೀನದಲ್ಲಿದ್ದಿತು. ಈ ವಂಶದ ದುರ್ವಿನೀತ, ಭೂವಿಕ್ರಮ, ಶ್ರೀಪುರುಷ, ಎರಡನೆಯ ಬೂತುಗ, ಎರಡನೆಯ ಮಾರಸಿಂಹ -ಇವರು ದಕ್ಷ ಪ್ರಭುಗಳಾಗಿದ್ದರು. ಈಗಿನ ತಮಿಳನಾಡಿನ ಭಾಗವಾಗಿರುವ ಕೊಯಮತ್ತೂರು ಮತ್ತು ಸೇಲಂ ಪ್ರದೇಶ ಹಲವು ಶತಮಾನಗಳ ಕಾಲ ಗಂಗರಾಜ್ಯದ ಒಂದು ಪ್ರಾಂತವಾಗಿತ್ತು. ಅದನ್ನು ಕೊಂಗುದೇಶವೆಂದು ಕರೆಯಲಾಗುತ್ತಿತ್ತು. ಇದರಿಂದಾಗಿ ಕನ್ನಡ ಸಂಸ್ಕøತಿ ಅತ್ತ ಹರಡಿ, ಈಗಿನ ಮೈಸೂರು ಚಾಮರಾಜನಗರ ಜಿಲ್ಲೆಗಳ ಪ್ರದೇಶ ತಮಿಳು ಪ್ರಭಾವದಿಂದ ಮುಕ್ತವಾಗಲು ಸಾಧ್ಯವಾಯಿತು. ಗಂಗರ ಸಮಕಾಲೀನರಾದ ಕದಂಬರು, ಬಾದಾಮಿ ಚಾಳುಕ್ಯರು ಮತ್ತು ರಾಷ್ಟ್ರಕೂಟರ ಕಾಲದಲ್ಲೂ ಗಂಗರೇ ಈ ಪ್ರದೇಶದ ಮುಖ್ಯ ಅಧಿಪತಿಗಳಾಗಿದ್ದರು.

ತಲಕಾಡಿನ ಗಂಗರ ರಾಜ್ಯದ ಹೃದಯಭಾಗವಾಗಿದ್ದ ಈ ಜಿಲ್ಲೆಯಲ್ಲಿ ಅವರ ದೇವಾಲಯಗಳು ಶಾಸನಗಳು ಹೇರಳವಾಗಿವೆ. ಆ ಕಾಲದಲ್ಲಿ ಕಲ್ಲಿಗಿಂತ ಇಟ್ಟಿಗೆಯಲ್ಲೇ ಹೆಚ್ಚಾಗಿ ದೇವಾಲಯ ಕಟ್ಟುತ್ತಿದ್ದುದರಿಂದ ಅವುಗಳಲ್ಲಿ ಹೆಚ್ಚಿನವು ನಷ್ಟವಾಗಿವೆ, ಇಲ್ಲವೇ ಮಾರ್ಪಟ್ಟಿವೆ. ಅವರ ಕಟ್ಟಡಗಳಲ್ಲಿ ಪ್ರ್ರಾಚೀನವೂ ಶ್ರೇಷವಿವೂ ಆದದ್ದು ಚಾಮರಾಜನಗರ ತಾಲ್ಲೂಕಿನ ನರಸಮಂಗಲದ ರಾಮೇಶ್ವರ ದೇವಾಲಯ. ಇದರ ತಳಹದಿ ಕಗ್ಗಲ್ಲಿನದು. ಮೇಲಿನ ಕಟ್ಟಡ ಇಟ್ಟಿಗೆಯದು. ಗಂಗರ ಕಾಲದ ಹತ್ತಾರು ಸಣ್ಣ ನಿರ್ಮಾಣಗಳೂ ಶಿಲ್ಪಗಳೂ ಇನ್ನೂ ಉಳಿದು ಬಂದಿವೆ.

ಗಂಗರ ಕಾಲದಲ್ಲಿ ರಾಜಕೀಯವಾಗಿ ಅಖಂಡವಾಗಿದ್ದ ಈ ಜಿಲ್ಲೆ 10ನೆಯ ಶತಮಾನದ ಅನಂತರ ರಾಜಕೀಯ ಏರುಪೇರುಗಳಿಗೆ ಒಳಗಾಯಿತು. 11ನೆಯ ಶತಮಾನದ ಪ್ರಾರಂಭದಲ್ಲಿ ಗಂಗರ ಆಳಿಕೆಯನ್ನು ಚೋಳರ ರಾಜರಾಜನು ಕೊನೆಗಾಣಿಸಿ ಈ ಪ್ರದೇಶವನ್ನು ತನ್ನ ಆಡಳಿತಕ್ಕೆ ಒಳಪಡಿಸಿಕೊಂಡ. ಚೋಳರ ಒಂದು ಶತಮಾನದ ಆಳಿಕೆಯಲ್ಲಿ ಇಲ್ಲಿನ ಆಡಳಿತ, ಕಲೆ ಮತ್ತು ವಾಸ್ತು ವಿನ್ಯಾಸದಲ್ಲಿ ಅನೇಕ ಬದಲಾವಣೆಗಳಾದವು. ಈ ಪ್ರದೇಶವೂ ಸೇರಿದಂತೆ ತಮ್ಮ ಅದಿsೀನದಲ್ಲಿದ್ದ ಪ್ರಾಂತದಲ್ಲಿ ಚೋಳರು ನಾಡುಗಳನ್ನು ರಚಿಸಿದರು. ಈ ಕಾಲಕ್ಕೆ ಸೇರಿದ ಕೆಲವು ಶಾಸನಗಳು ದೊರೆತಿವೆ. ಈ ಕಾಲದಲ್ಲಿ ಅಗ್ರಹಾರಗಳನ್ನೂ ದೇವಾಲಯಗಳನ್ನೂ ನಿರ್ಮಿಸಿದ ಬಗ್ಗೆ ಶಾಸನಗಳಲ್ಲಿ ಆಧಾರಗಳಿವೆ. ಮುಂದೆ ಹೊಯ್ಸಳರು ಪ್ರವರ್ಧಮಾನಕ್ಕೆ ಬಂದರು. ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ (1116) ಚೋಳರು ನಿರ್ಣಾಯಕವಾಗಿ ಸೋತರು. ತಲಕಾಡು ಹೊಯ್ಸಳರ ವಶವಾಯಿತು. ಈ ಯುದ್ಧದ ವಿಜಯದಲ್ಲಿ ದಂಡನಾಯಕ ಗಂಗರಾಜ ಪ್ರಮುಖ ಪಾತ್ರ ವಹಿಸಿದ್ದನೆಂದು ಶಾಸನಗಳಿಂದ ತಿಳಿದುಬರುತ್ತದೆ.

ಮುಂದೆ ಎರಡೂವರೆ ಶತಮಾನಗಳ ಕಾಲದ ಹೊಯ್ಸಳರ ಆಳಿಕೆಯಲ್ಲಿ ಈ ಜಿಲ್ಲೆ ಹೆಚ್ಚಿನ ಅಭ್ಯುದಯವನ್ನು ಕಂಡಿತು. ತಮಿಳುನಾಡಿನ ಅನೇಕ ಪ್ರದೇಶಗಳನ್ನು ತಮ್ಮ ಆಡಳಿತಕ್ಕೆ ಸೇರಿಸಿಕೊಂಡಿದ್ದ ಹೊಯ್ಸಳರ ರಾಜ್ಯದಲ್ಲಿ ಇದು ಆಯಕಟ್ಟಿನ ಮಹತ್ವ ಪಡೆದಿತ್ತು. ಅವರ ಕಾಲದಲ್ಲಿ ಇಲ್ಲಿ ಹಲವಾರು ದೇವಾಲಯಗಳು, ಕೆರೆಕಟ್ಟೆಗಳು, ಕಾಲುವೆಗಳು, ನಿರ್ಮಾಣವಾದವು. ಚಾಮರಾಜನಗರದಲ್ಲಿ ವಿಷ್ಣುವರ್ಧನನ ಮಹಾದಂಡನಾಯಕ ಪುಣಿಸಮಯ್ಯ ಪಾಶ್ರ್ವನಾಥಸ್ವಾಮಿ ಬಸದಿಯನ್ನು ಕಟ್ಟಿಸಿ ಅದಕ್ಕೆ ದಾನದತ್ತಿಗಳನ್ನು ನೀಡಿದನೆಂದು 1116ರ ಶಾಸನ ತಿಳಿಸುತ್ತದೆ. ಈತ ಗಂಗವಾಡಿ ಪ್ರಾಂತದಲ್ಲಿ ಹಲವಾರು ಬಸದಿಗಳನ್ನು ಜೀರ್ಣೋದ್ಧಾರ ಮಾಡಿಸಿದ. ಪುಣಜನೂರಿಗೆ ಆ ಹೆಸರು ಬರಲು ಅವನು ಕಾರಣನಾಗಿರಬೇಕು. ಎರಡನೆಯ ಬಲ್ಲಾಳ ಯಳಂದೂರು ತಾಲ್ಲೂಕಿನ ಯೆರಿಯೂರು ಎಂಬಲ್ಲಿ ವಲ್ಲಾಳೇಶ್ವರ ದೇವಾಲಯವನ್ನು ಕಟ್ಟಿಸಿದ. ಗುಂಡ್ಲುಪೇಟೆಯ ಬಿಟ್ಟ ದೇವಾಲಯ ನಿರ್ಮಾಣವಾದುದ್ದು ಇವನ ಕಾಲದಲ್ಲೇ. ಮೂರನೆಯ ವೀರಬಲ್ಲಾಳನ ಕಾಲದಲ್ಲಿ ಮಾಧವ ದಂಡನಾಯಕ ಗುಂಡ್ಲುಪೇಟೆ ತಾಲ್ಲೂಕಿನ ಗೋವರ್ಧನಗಿರಿಯ ಗೋಪಿನಾಥ ದೇವಸ್ಥಾನದಲ್ಲಿ ಒಂದು ಮೂರ್ತಿಯನ್ನು ಪ್ರತಿಷಾವಿಪನೆ ಮಾಡಿಸಿದ. ಹೊಯ್ಸಳ ಅರಸರ ಮಾಂಡಲಿಕರಾಗಿದ್ದವರದೊಂದು ಮನೆತನ, ಈ ಜಿಲ್ಲೆಯ ಹದಿನಾಲ್ಕುನಾಡು ಅಥವಾ ಕುಡುಗುನಾಡನ್ನು ಮುಕ್ಕಾಲು ಶತಮಾನ ಕಾಲ ಆಳಿತು. ಇದರ ಮೂಲಪುರುಷ ಹೊಯ್ಸಳ ಮೂರನೆಯ ನರಸಿಂಹನ ಸೇನಾನಿ ಪೆರುಮಾಳೆ ದಂಡನಾಯಕ. ಇವನು ನೀಲಗಿರಿ ಮತ್ತು ಕೊಂಗುನಾಡುಗಳ ಮೇಲೂ ತನ್ನ ಸ್ವಾಮ್ಯ ಸಾದಿsಸಿಕೊಂಡಿದ್ದ. ತೆರಕಣಾಂಬಿ ಇವನ ರಾಜಧಾನಿಯಾಗಿತ್ತು. ಗೋಪಾಲಸ್ವಾಮಿ ಬೆಟ್ಟದ ಗೋವರ್ಧನಗಿರಿ ಗೋಪಿನಾಥ ದೇವಾಲಯವನ್ನು 1315ರಲ್ಲಿ ಪೆರುಮಾಳೆಯ ಮಗ ಕಟ್ಟಿಸಿದ. ಹೊಯ್ಸಳರ ಪತನಾನಂತರ ಈ ಅರಸು ಮನೆತನ ಕೊನೆಗೊಂಡಿತು. ವಿಜಯನಗರದ ಸಾಮಂತರಾಗಿದ್ದ ಉಮ್ಮತ್ತೂರಿನ ಪಾಳೆಯಗಾರರು ಇದರ ಸ್ವಾಮ್ಯ ಪಡೆದರು.

ಹೊಯ್ಸಳರ ಅನಂತರ ಇಲ್ಲಿ ವಿಜಯನಗರದ ಅರಸರು ಪ್ರಬಲರಾದರು. 1350ರ ದಶಕದಿಂದ ಇಲ್ಲಿ ವಿಜಯನಗರದ ಶಾಸನಗಳು ಕಾಣಿಸಿಕೊಳ್ಳುತ್ತವೆ. ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆಯ ಬಳಿ ದೊರೆತಿರುವ 1354ರ ಶಾಸನ ಇವುಗಳಲ್ಲಿ ಪ್ರಮುಖವಾದದ್ದು. ವಿಜಯನಗರದ ರಾಜ ಬುಕ್ಕಣ್ಣಒಡೆಯನ ಮಗ ಕಂಪಣ್ಣಒಡೆಯ ಹಾಕಿಸಿದ ಶಾಸನ ಇದು. ಕಂಪಣ್ಣನ ಮಗ ಕುಮಾರ ನಂಜಣ್ಣ ಗುಂಡ್ಲುಪೇಟೆಯ ರಾಮನಾಥ ದೇವಾಲಯಕ್ಕೆ ತನ್ನ ತಂದೆ ಕಂಪಣನ ಸ್ಮರಣಾರ್ಥ ದತ್ತಿಬಿಟ್ಟ ವಿಚಾರ ಶಾಸನಗಳಿಂದ ತಿಳಿದುಬರುತ್ತದೆ. 1380ರವರೆಗೂ ನಂಜಣ್ಣ ಇಲ್ಲಿಯ ಮಾಂಡಲಿಕನಾಗಿದ್ದ. 15ನೆಯ ಶತಮಾನದ ಮಧ್ಯಭಾಗದವರೆಗೂ ವಿಜಯನಗರದ ಅರಸರಿಗೆ ಸೇರಿದ ಹತ್ತಾರು ಶಾಸನಗಳು ಈ ಭಾಗದಲ್ಲಿ ಕಂಡುಬರುತ್ತವೆ. ಇಲ್ಲಿ ಹರಿಹರ, ಒಂದನೆಯ ದೇವರಾಯ, ಎರಡನೆಯ ದೇವರಾಯ, ಮಲ್ಲಿಕಾರ್ಜುನ ಮೊದಲಾದವರ ಶಾಸನಗಳಿವೆ. ವಿಜಯನಗರದ ಸಾಮಂತರಾಗಿದ್ದ ಉಮ್ಮತ್ತೂರು ಪಾಳೆಯಗಾರರು ಮುಂದೆ ಇಲ್ಲಿ ಆಳಿಕೆ ನಡೆಸಿದರು.

1467-82ರ ಕಾಲಕ್ಕೆ ಸಂಬಂದಿsಸಿದ ಇಲ್ಲಿಯ ನಾಯಕರ ಶಾಸನಗಳಲ್ಲಿ ವೀರ ಹನುಮಪ್ಪ ಮತ್ತು ಆತನ ಮಗ ಇಮ್ಮಡಿರಾಯ ಅಥವಾ ಸೋಮಯ್ಯ ಎಂಬ ಹೆಸರುಗಳು ಕಂಡುಬರುತ್ತವೆ. ಅವರು ನಂಜನಗೂಡಿನ ನಂಜುಂಡೇಶ್ವರನಿಗೆ ದಾನ ಮಾಡಿದ ವಿಷಯ ಮುಳ್ಳೂರು ಶಾಸನದಲ್ಲಿದೆ. ಸೋಮಯ್ಯನ ಮಗ ದೇವರಾಯ ಒಡೆಯನೂ ತೆರಕಣಾಂಬಿಯಿಂದ ಕುಡುಗು ನಾಡನ್ನು ಆಳುತ್ತಿದ್ದನೆಂದು ಹೇಳಲಾಗಿದೆ. ಕುಡುಗು ನಾಡು ಸುಮಾರಾಗಿ ಗುಂಡ್ಲುಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಬರುತ್ತದೆ. ಅವನು ಹರವೆಯಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿದ. ಈ ಮನೆತನದ ಇಮ್ಮಡಿ ಚಿಕ್ಕರಾಜನೆಂಬವನು ಹದಿನಾಡನ್ನು ಆಳುತ್ತಿದ್ದ. ಆತ ಸಾಲೂರು ವೀರಶೈವ ಮಠಕ್ಕೆ ದತ್ತಿನೀಡಿದ.

ಉಮ್ಮತೂರಿನ ನಾಯಕರ ವಂಶಾವಳಿ ಮತ್ತು ಅವರ ಚಟುವಟಿಕೆಗಳ ಬಗ್ಗೆ ಖಚಿತವಾದ ಸಮಗ್ರವಾದ ವಿವರಗಳು ತಿಳಿದುಬರುವುದಿಲ್ಲ. ಅವರು ಉಮ್ಮತ್ತೂರಿನಲ್ಲಿ ರಂಗನಾಥ ಮತ್ತು ಭುಜಂಗೇಶ್ವರ ದೇವಸ್ಥಾನಗಳನ್ನು ಕಟ್ಟಿಸಿದರು. ಪ್ರರ್ವಘಟ್ಟದ ಕೆಳಗೆ ಕೊಯಮತ್ತೂರಿನವರೆಗೂ ಇವರು ಆದಿsಪತ್ಯ ಹೊಂದಿದ್ದಿರಬಹುದೆಂದು ನಂಬಲಾಗಿದೆ. ಕಳಲೆ ಒಡೆಯರಿಗೂ ಇವರಿಗೂ ತೀವ್ರವಾದ ಹಗೆತನವಿದ್ದಿತು. ಕ್ರಮೇಣ ಪ್ರಬಲವಾದ ಈ ನಾಯಕರು ಕೃಷ್ಣದೇವರಾಯನ ಕಾಲದಲ್ಲಿ ಬಂಡೇಳುವ ಪ್ರವೃತ್ತಿ ತೋರಿಸಿದರು. ಆಗ (1512ರಲ್ಲಿ) ಕೃಷ್ಣದೇವರಾಯನೇ ದಂಡನಾಯಕತ್ವ ವಹಿಸಿ ಸೈನ್ಯವನ್ನು ಮುನ್ನಡೆಸಿ ಉಮ್ಮತ್ತೂರಿನ ಪಾಳೆಯಗಾರರನ್ನು ಸೋಲಿಸಿ ಅವರನ್ನು ಅದಿsಕಾರದಿಂದ ಇಳಿಸಿದ. ಈ ಪ್ರಾಂತ್ಯದ ಮೇಲೆ ಆಡಳಿತ ನಡೆಸುವ ಸಲುವಾಗಿ ಸಾಳುವ ಗೋವಿಂದರಾಜನನ್ನು ಮಾಂಡಲಿಕನಾಗಿ ನೇಮಿಸಿದ. ಗುಂಡ್ಲುಪೇಟೆಯ 29ನೆಯ ಶಾಸನ ಉಮ್ಮತ್ತೂರಿನಿಂದ ಆಳುತ್ತಿದ್ದ ವಿಜಯನಗರದ ಒಡೆಯರು ದೇವಾಲಯಕ್ಕೆ ದಾನ ನೀಡಿದ ವಿಷಯ ತಿಳಿಸುತ್ತದೆ. ವಿಜಯನಗರದ ರಾಮರಾಯನ ಸೇವಕ, ಊಳಿಗದ ಬಸವಪ್ಪ ಒಡೆಯ ಇಲ್ಲಿ ಆಳುತ್ತಿದ್ದುದನ್ನು ಗುಂಡ್ಲುಪೇಟೆ ತಾಲ್ಲೂಕಿನ 216ನೆಯ ಶಾಸನ (1562) ದೃಢಪಡಿಸುತ್ತದೆ. ವಡಗೆರೆಯಲ್ಲಿ ದೊರೆತಿರುವ ಯಳಂದೂರಿನ 182ನೆಯ ಶಾಸನ 1582ರಲ್ಲಿ ಹಾಕಿಸಿದ್ದಾಗಿದ್ದು, ಅದು ವಿಜಯನಗರದ ಪರಮಾದಿsಕಾರ ಈ ಭಾಗದಲ್ಲಿ ಮುಂದುವರಿದ್ದಿದ್ದುದಕ್ಕೆ ಸಾಕ್ಷಿಯಾಗಿದೆ. ಹದಿನಾಡ ಅರಸರು ವಿಜಯನಗರದ ಪರಮಾದಿsಕಾರವನ್ನು ಒಪ್ಪಿಕೊಂಡು 17ನೆಯ ಶತಮಾನದ ಪ್ರಾರಂಭದವರೆಗೂ ಈ ಜಿಲ್ಲೆಯ ಕೆಲವು ಭಾಗಗಳನ್ನು ಆಳುತ್ತಿದ್ದರು. ಅವರ ಮನೆತನದ ಸಿಂಗಪದೇವನೆಂಬವನು ಯಳಂದೂರಿನ ಗೌರೀಶ್ವರ ದೇವಾಲಯವನ್ನು ಕಟ್ಟಿಸಿದ.

1565ರಲ್ಲಿ ನಡೆದ ತಾಳಿಕೋಟೆ ಯುದ್ಧದಲ್ಲಿ ವಿಜಯನಗರದ ಸೈನ್ಯ ಶಾಹಿ ಸುಲ್ತಾನರ ಸಂಯುಕ್ತ ಸೈನ್ಯದೆದುರು ಸೋತಾಗ ಆ ಸಾಮ್ರಾಜ್ಯ ದುರ್ಬಲವಾಗತೊಡಗಿತು. ಮುಂದೆ ಹಂತ ಹಂತವಾಗಿ ಸ್ಥಳೀಯ ಸಾಮಂತರು, ತುಂಡರಸರು ತಮ್ಮ ಶಕ್ತಿ ಸಂಪನ್ಮೂಲಗಳನ್ನು ಬೆಳೆಸಿಕೊಂಡು ಸ್ವತಂತ್ರರಾಗಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಯಶಸ್ವಿಯಾದವರಲ್ಲಿ ಮೈಸೂರು ಅರಸರು (ನೋಡಿ- ಮೈಸೂರು-ಒಡೆಯರು) ಸೇರಿದ್ದಾರೆ. 15ನೆಯ ಶತಮಾನದಲ್ಲಿ 33 ಗ್ರಾಮಗಳ ಒಡೆತನದಿಂದ ರಾಜ್ಯವಾಳಲಾರಂಬಿsಸಿದ ಇವರು ಚಾಮರಾಜನಗರ ಜಿಲ್ಲೆಯ ನೆರೆಯ ಹದಿನಾಡಿನ ಮೇಲೆ ನಿಯಂತ್ರಣ ಹೊಂದಿದ್ದರು. ಈ ಮನೆತನದವರು ಮೈಸೂರಿಗೆ ತಮ್ಮ ನೆಲೆಯನ್ನು ವರ್ಗಾಯಿಸಿಕೊಂಡರು. ರಾಜ ಒಡೆಯರು (1578-1617) ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ಪ್ರತಿನಿದಿs ತಿರುಮಲರಾಯನನ್ನು ಪದಚ್ಯುತಗೊಳಿಸಿ ತಾನೇ ವಿಜಯನಗರದ ಪ್ರತಿನಿದಿs ಎಂದು ಘೂೀಷಿಸಿಕೊಂಡ. ಆತ ಮುಂದೆ ಶೀಘ್ರವಾಗಿ ರಾಜ್ಯ ವಿಸ್ತರಣೆ ಮಾಡಿ ತಲಕಾಡು, ಚಾಮರಾಜನಗರ ಮತ್ತು ಉಮ್ಮತ್ತೂರು ಸೇರಿದಂತೆ ಈಗಿನ ಮಂಡ್ಯ, ಹಾಸನ ಮತ್ತು ಬೆಂಗಳೂರು ಜಿಲ್ಲೆಯ ಅನೇಕ ಭಾಗಗಳನ್ನು ತನ್ನ ಅದಿsೀನಕ್ಕೆ ತೆಗೆದುಕೊಂಡ. ಶ್ರೀರಂಗಪಟ್ಟಣ ಇವನ ರಾಜಧಾನಿಯಾಯಿತು. ಆದರೆ ಇವನು ಮೈಸೂರು ಒಡೆಯನೆಂದೇ ಪರಿಚಿತನಾದ. ಚಾಮರಾಜನಗರ ಜಿಲ್ಲೆ ಒಡೆಯರ ರಾಜ್ಯದ ಖಾಯಂ ಭಾಗವಾಯಿತು. ಈಗಿನ ಚಾಮರಾಜನಗರದಲ್ಲಿ ಮಹಾಪ್ರಭು ಎಂಬ ಸ್ಥಾನಿಕ ಅಧಿಕಾರ ನಿರ್ವಹಿಸುತ್ತಿದ್ದ.

ಮೈಸೂರು ಒಡೆಯರು ತಮಿಳುನಾಡಿನತ್ತಲೂ ರಾಜ್ಯ ವಿಸ್ತರಿಸಿದರು. ಚಾಮರಾಜನಗರ, ಜಿಲ್ಲೆಯ ಆಯಕಟ್ಟಿನ ಪ್ರದೇಶವಾಗಿದ್ದುದರಿಂದ ಅದನ್ನು ಎಚ್ಚರಿಕೆಯಿಂದ ಸಂರಕ್ಷಿಸಿಕೊಂಡು ಬಂದರು. ಟಿಪ್ಪುಸುಲ್ತಾನ ಬ್ರಿಟಿಷರಿಗೆ ಸಂಪ್ರರ್ಣವಾಗಿ ಸೋತು ಹತನಾದ ಮೇಲೆ (1799) ಮೈಸೂರು ರಾಜ್ಯದ ವಿಭಜನೆಯಾದಾಗ ಈ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಮದರಾಸು ಪ್ರಾಂತಕ್ಕೆ ಸೇರಿತು. ಒಡೆಯರ ರಾಜಮನೆತನ ಮೈಸೂರಿನಲ್ಲಿ ನೆಲೆಸಿತು. ಚಾಮರಾಜನಗರ ಪಟ್ಟಣಕ್ಕೆ ಅರಿಕುಠಾರವೆಂಬ ಹೆಸರಿತ್ತು. ಅಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ತಂದೆ ಎಂಟನೆಯ ಚಾಮರಾಜ ಒಡೆಯರು ಜನಿಸಿದ್ದರು. ಅವರ ನೆನಪಿಗಾಗಿ ಕೃಷ್ಣರಾಜ ಒಡೆಯರು 1818ರಲ್ಲಿ ಅರಿಕುಠಾರಕ್ಕೆ ಚಾಮರಾಜನಗರ ಎಂದು ನಾಮಕರಣ ಮಾಡಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಇಲ್ಲಿ ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಿ ಅದನ್ನು ವಿಸ್ತರಿಸಿದರು. ಈ ಜಿಲ್ಲೆಯಲ್ಲಿ ಹಲವೆಡೆ ಮೈಸೂರು ಒಡೆಯರು ಮತ್ತು ಅವರ ರಾಣಿವಾಸದವರು ಕಟ್ಟಿಸಿದ ದೇವಾಲಯಗಳೂ ಪ್ರತಿಷಾವಿಪಿಸಿದ ವಿಗ್ರಹಗಳೂ ಕಟ್ಟಿಸಿದ ಛತ್ರಗಳೂ ಅಗ್ರಹಾರಗಳೂ ಇವೆ.

ಈಗಿನ ಚಾಮರಾಜನಗರ ಜಿಲ್ಲೆ ಪ್ರದೇಶ ಮೈಸೂರು ಸಂಸ್ಥಾನದಲ್ಲೇ ಅತ್ಯಂತ ದೊಡ್ಡದೆನಿಸಿದ್ದ ಮೈಸೂರು ಜಿಲ್ಲೆಯ ಭಾಗವಾಗಿತ್ತು. ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆ 1939ರಲ್ಲಿ ಪ್ರತ್ಯೇಕವಾಯಿತು.

ಮೈಸೂರು ಸಂಸ್ಥಾನದ ಕಾಲದಲ್ಲಿ ಈ ಜಿಲ್ಲೆ ಹೆಚ್ಚಿನ ಅಬಿsವೃದ್ಧಿ ಸಾಧಿಸಲಾಗಲಿಲ್ಲ. ಆದರೆ ಇಲ್ಲಿನ ಪ್ರವಾಸಿ ಮತ್ತು ಯಾತ್ರಾ ಸ್ಥಳಗಳು ಪ್ರಸಿದ್ಧವಾಗಿದ್ದುವು. 1926ರಲ್ಲಿ ಮೈಸೂರಿನಿಂದ ಚಾಮರಾಜನಗರದವರೆಗೆ ರೈಲುಮಾರ್ಗ ನಿರ್ಮಾಣವಾಯಿತು. ಇದು ಈ ಭಾಗದ ಸಾರಿಗೆ ಅಭಿವೃದ್ಧಿಗೆ ದೊಡ್ಡ ಕೊಡುಗೆಯಾಯಿತು.

ಸ್ವಾತಂತ್ರ್ಯ ಚಳವಳಿಯಲ್ಲಿ ಈ ಭಾಗದ ಜನರೂ ಭಾಗವಹಿಸಿದ್ದರು. 1928ರಲ್ಲಿ ಸಂಸ್ಥಾನದ ಪ್ರಥಮ ಕಾಂಗ್ರೆಸ್ ಅದಿsವೇಶನ ಮೈಸೂರು ನಗರದಲ್ಲಿ ಜರುಗಿತು. ಅದು ಈ ಭಾಗದ ಜನರಿಗೆ ಕಾಂಗ್ರೆಸ್ ಬಗ್ಗೆ ಒಲವು ಬೆಳೆಯಲು ಪ್ರೇರಕವಾಯಿತು. ಗಾಂದಿsೀಜಿಯವರು ತಮ್ಮ ಪ್ರವಾಸ ಕಾಲದಲ್ಲಿ ಈ ಜಿಲ್ಲೆಯ ಸರಹದ್ದಿನ ತಗಡೂರು, ಬದನವಾಳು ಮತ್ತು ನಂಜನಗೂಡುಗಳಿಗೆ ಭೇಟಿ ನೀಡಿದ್ದರು. ಸ್ವಾತಂತ್ರ್ಯಾನಂತರ ಭಾಷಾನುಗುಣ ಪ್ರಾಂತ್ಯ ರಚನೆಯಾದಾಗ (1956) ಕೊಳ್ಳೇಗಾಲ ತಾಲ್ಲೂಕು ಮೈಸೂರು ಜಿಲ್ಲೆಗೆ ಸೇರಿತು.

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲದೆ ಇನ್ನೂ ಹಲವಾರು ಐತಿಹಾಸಿಕ ಮತ್ತು ಸಾಂಸ್ಕøತಿಕ ಮಹತ್ವದ ಸ್ಥಳಗಳಿವೆ. ಇಲ್ಲಿನ ಎಲ್ಲ ತಾಲ್ಲೂಕು ಕೇಂದ್ರಗಳೂ ಐತಿಹಾಸಿಕ ಮಹತ್ತ್ವ ಪಡೆದಿವೆ. ಇವಲ್ಲದೆ ಅಗರಂ, ಅಮಚವಾಡಿ, ಗಾಣಿಗನೂರು, ಹರದನಹಳ್ಳಿ, ಹೊಳೆ ಆಲೂರು, ಹೊಂಗನೂರು, ಕಂದಗಾಲ, ಕೆಸ್ಲೂರು, ಕೋಟೆಕೆರೆ, ಕುದೇರು, ಕುಂತೂರು, ಮದ್ದೂರುಗಳು ವಿವಿಧ ಕಾರಣಗಳಿಗಾಗಿ ಮಹತ್ತ್ವ ಪಡೆದಿವೆ.

ಈ ಜಿಲ್ಲೆಯಲ್ಲಿ ಇತರೆಡೆಗಳಂತೆ ಎಲ್ಲ ಧರ್ಮದವರೂ ಇದ್ದಾರೆ. ಕೊಂತಿ ಪ್ರಜೆ, ಚೌಡೇಶ್ವರಿ ಜಾತ್ರೆ, ಬಸವನ ಓಕಳಿ, ಅತ್ತಿಗುಳಿ ಹಬ್ಬದಂತಹ ಜನಪದ ಹಬ್ಬಗಳೂ ಜಾತ್ರೆಗಳೂ ನಡೆಯುತ್ತವೆ. ಜನರು ಮಲೆಯ ಮಹದೇಶ್ವರ, ನಂಜನಗೂಡು, ತಿರುಮಕೂಡಲು ನರಸೀಪುರ, ಮೈಸೂರಿನ ಚಾಮುಂಡಿಬೆಟ್ಟಗಳಿಗೆ ಹೆಚ್ಚಾಗಿ ಯಾತ್ರೆ ಹೋಗಿಬರುತ್ತಾರೆ. ಮಲೆಯೂರು ಜೈನ ಯಾತ್ರಾಸ್ಥಳವಾಗಿದೆ.

 			 *

ತಾಲ್ಲೂಕು: ಈ ತಾಲ್ಲೂಕು ಪಶ್ಚಿಮ ಮತ್ತು ಉತ್ತರಕ್ಕೆ ಇದೇ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಮತ್ತು ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ತಿರುಮಕೂಡಲು ನರಸೀಪುರ ತಾಲ್ಲೂಕುಗಳನ್ನು, ಪ್ರರ್ವಕ್ಕೆ ಇದೇ ಜಿಲ್ಲೆಯ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳನ್ನು, ದಕ್ಷಿಣಕ್ಕೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯನ್ನು ಮೇರೆಗಳಾಗಿ ಹೊಂದಿದೆ. ಚಾಮರಾಜನಗರ, ಹರದನಹಳ್ಳಿ, ಹರವೆ, ಸಂತೇಮರಳ್ಳಿ, ಚಂದಕವಾಡಿ ಹೋಬಳಿಗಳಿಂದಲೂ ಒಟ್ಟು 189 ಗ್ರಾಮಗಳಿಂದಲೂ ಕೂಡಿರುವ ಈ ತಾಲ್ಲೂಕಿನ ವಿಸ್ತೀರ್ಣ 1235.9ಚ.ಕಿಮೀ. ಜನಸಂಖ್ಯೆ 3,36,893.

ಪ್ರರ್ವ ಮತ್ತು ದಕ್ಷಿಣ ಎಲ್ಲೆಯಲ್ಲಿ ಬಿಳಿಗಿರರಂಗ ಶ್ರೇಣಿಯ ಬೆಟ್ಟಪ್ರದೇಶವಿದೆ. ಈ ಪ್ರದೇಶದಲ್ಲಿ ಸುಮಾರು ದಟ್ಟವಾದ ಪರ್ಣಪಾತಿ ವೃಕ್ಷಗಳಿರುವ ಕಾಡಿದೆ. ಆ ಭಾಗವನ್ನು ಬಿಟ್ಟರೆ ತಾಲ್ಲೂಕು ಬಹುತೇಕ ಮೈದಾನ.

ಇಲ್ಲಿಯ ಮುಖ್ಯ ನದಿ ಹೊನ್ನುಹೊಳೆ ಅಥವಾ ಸುವರ್ಣಾವತಿ. ಇದು ದಕ್ಷಿಣ ಗಡಿಯ ಆಚೆ ನೀಲಗಿರಿ ಬೆಟ್ಟಸಾಲಿನಲ್ಲಿ ದಿಂಬಂ ಎಂಬಲ್ಲಿ ಹುಟ್ಟಿ ಈಶಾನ್ಯಾಬಿsಮುಖವಾಗಿ ಹರಿದು ರಾಮಸಮುದ್ರ ಮತ್ತು ಆಲೂರುಗಳನ್ನು ದಾಟಿ ಯಳಂದೂರಿನತ್ತ ಸಾಗುತ್ತದೆ. ಚಿಕ್ಕ ಹೊಳೆ ಇದರ ಉಪನದಿ.

ಬಿಳಿಗಿರಿರಂಗನ ಬೆಟ್ಟದ ಪ್ರದೇಶ ಚಾರ್ನೋಕೈಟ್ ಶಿಲೆಗಳದು. ತಾಲ್ಲೂಕಿನ ಇತರ ಭಾಗದಲ್ಲಿ ಕಣಶಿಲೆಯೇ ತಳಶಿಲೆ. ತಾಲ್ಲೂಕಿನಲ್ಲಿ ಚಂದ್ರಶಿಲೆ ಮತ್ತು ಅಲಂಕಾರಕ್ಕಾಗಿ ಬಳಸುವ ಗ್ರಾನೈಟ್ ಶಿಲೆಗಳ ಸಂಪತ್ತಿದೆ. ತಾಲ್ಲೂಕಿನಲ್ಲಿ ಕಪ್ಪು ಮತ್ತು ಕೆಂಪು ಮಣ್ಣಿನಿಂದ ಹಿಡಿದು ನುರುಜು ಮಿಶ್ರಿತ ಮಣ್ಣಿನ ಭೂಮಿ ಇದ್ದು ಸಾಮಾನ್ಯವಾಗಿ ಫಲವತ್ತಾಗಿದೆ. ಸುವರ್ಣಾವತಿಯ ಬಳಿ ಚೌಳು ಮಣ್ಣು ವಿಶೇಷವಾಗಿದೆ. ತಾಲ್ಲೂಕಿನ ಪಶ್ಚಿಮದ ಭಾಗದ ನೆಲ ಹೆಚ್ಚು ಸಾರವತ್ತಾದ್ದಲ್ಲ. ಪ್ರರ್ವಕ್ಕೆ ಸಾಗಿದಂತೆ ಮಣ್ಣಿನ ಗುಣ ಅದಿsಕ. ಹೊನ್ನುಹೊಳೆ ಕಣಿವೆಯ ಮಣ್ಣು ತುಂಬ ಉತ್ತಮ. ಸುವರ್ಣಾವತಿಗೆ ಅಟುಗುಳಿಪುರದ ಬಳಿ ಕಟ್ಟೆ ಕಟ್ಟಲಾಗಿದೆ. 26ಮೀ. ಎತ್ತರವಿರುವ ಈ ಕಟ್ಟೆಯ ಉದ್ದ ಸು.1158ಮೀ. ಇದರ ಬಲನಾಲೆಯ ಉದ್ದ 23ಕಿಮೀ ಎಡನಾಲೆ 6.5ಕಿಮೀ. 1971 ರಿಂದ ನೀರಾವರಿಗೆ ಬಳೆಸಿಕೊಳ್ಳಲಾಗುತ್ತಿರುವ ಇದರ ಒಟ್ಟು ಅಚ್ಚುಕಟ್ಟು 1,000 ಎಕರೆ. ಕೊಯಮತ್ತೂರು ಜಿಲ್ಲೆಯಲ್ಲಿ ಹುಟ್ಟಿ ಚಾಮರಾಜನಗರ ತಾಲ್ಲೂಕಿನಲ್ಲಿ ಸುವರ್ಣಾವತಿಯನ್ನು ಸೇರುವ ಚಿಕ್ಕಹೊಳೆಗೆ ಈ ತಾಲ್ಲೂಕಿನಲ್ಲಿ, ಸುವರ್ಣಾವತಿ ಕಟ್ಟೆಯಿಂದ ಕೆಳಕ್ಕೆ 8ಕಿಮೀ ದೂರದಲ್ಲಿ, ಒಂದು ಮಧ್ಯಮ ವರ್ಗದ ಕಟ್ಟೆ ಕಟ್ಟಲಾಗಿದೆ. ಇವಲ್ಲದೆ ತಾಲ್ಲೂಕಿನಲ್ಲಿ ನೀರಾವರಿಗೆ ಅನುಕೂಲವಾದ ಹಲವು ಕೆರೆಗಳುಂಟು. ತಾಲ್ಲೂಕಿನ ಕೊಳವೆ ಬಾವಿಗಳು ಒಣಪ್ರದೇಶದಲ್ಲಿ ಮುಖ್ಯ ನೀರಾವರಿ ಮೂಲಗಳಾಗಿವೆ. ವಾರ್ಷಿಕ ಸರಾಸರಿ ಮಳೆ 667.59ಮಿಮೀ.

ಜೋಳ ಈ ತಾಲ್ಲೂಕಿನ ಮುಖ್ಯ ಬೆಳೆ. ರಾಗಿ, ಹುರುಳಿ ಮತ್ತು ಇತರ ಹಲವು ಖುಷ್ಕಿ ಬೆಳೆಗಳನ್ನೂ ಬೆಳೆಯುತ್ತಾರೆ. ಹತ್ತಿಯನ್ನೂ ಬೆಳೆಯುವುದುಂಟು. ಕೆಲವೆಡೆ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ನೀರಾವರಿ ಸೌಲಭ್ಯ ಇರುವಲ್ಲಿ ಬತ್ತ, ಕಬ್ಬು ಬೆಳೆಯುತ್ತವೆ. ಹಿಪ್ಪುನೇರಳೆ ವ್ಯವಸಾಯವೂ ವಿಶೇಷವಾಗಿ ನಡೆಯುತ್ತದೆ. ರೇಷ್ಣೆಹುಳು ಸಾಕುವುದು, ಎಳೆ ತೆಗೆಯುವುದು ತಾಲ್ಲೂಕಿನ ಒಂದು ಮುಖ್ಯ ಕಸಬು. ಹೊನ್ನುಹೊಳೆಯ ದಂಡೆಯ ಮೇಲೆ ಒಳ್ಳೆಯ ಅಡಕೆ, ತೆಂಗು ತೋಟಗಳಿವೆ. ಬಿಳಿಗಿರಿರಂಗನ ಬೆಟ್ಟ ಶ್ರೇಣಿಯಲ್ಲಿ ಕಾಪಿsತೋಟಗಳೂ ಉಂಟು.

ತಾಲ್ಲೂಕಿನಲ್ಲಿ ಅಂಚೆ, ತಂತಿ, ವಿದ್ಯುಚ್ಫಕ್ತಿ ಸೌಲಭ್ಯಗಳ ಜೊತೆಗೆ ಶಾಲಾ ಕಾಲೇಜುಗಳೂ ವೈದ್ಯಾಲಯಗಳೂ ಇವೆ. ಸುತ್ತಲ ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ನಂಜನಗೂಡುಗಳಿಗೆ ರಸ್ತೆ ಮಾರ್ಗ ಸಂಪರ್ಕವಿದೆ. ಮೈಸೂರು ಚಾಮರಾಜನಗರ ರೈಲ್ವೆ ಮಾರ್ಗವಿದ್ದು ಮುಂದೆ ಇದನ್ನು ವಿಸ್ತರಿಸುವ ಯೋಜನೆ ಇದೆ. ಅಮಚವಾಡಿ, ಬಾಗಳಿ, ಬದನಗುಪ್ಪೆ, ಚಂದಕವಾಡಿ, ಗಣಗನೂರು, ಹೊಂಗನೂರು, ಹರದನಹಳ್ಳಿ, ಹರವೆ, ಜ್ಯೋತಿಗೌಡನಪುರ, ಕಾಗಲವಾಡಿ, ಕೊತ್ತಲವಾಡಿ, ಕಡಲೂರು, ಕುದೇರು, ಮಂಗಲ, ನಾಗವಳ್ಳಿ, ರಾಮಸಮುದ್ರ, ಸರಗೂರು, ಸಂತೇಮರಳ್ಳಿ, ತಮ್ಮಡಹಳ್ಳಿ, ಉಮ್ಮತ್ತೂರು ಈ ತಾಲ್ಲೂಕಿನ ದೊಡ್ಡ ಗ್ರಾಮಗಳು. ಸಂತೇಮರಳ್ಳಿಯ ಸಂತೆ ಪ್ರಸಿದ್ಧವಾದುದು. ಕುದೇರು ಮತ್ತು ಮರಳ್ಳಿಗಳಲ್ಲಿ ರೇಷ್ಮೆ ವ್ಯವಸಾಯ ಉತ್ತಮವಾಗಿದೆ. ಚಾಮರಾಜ ನಗರಕ್ಕೆ 10ಕಿಮೀ ದೂರದಲ್ಲಿರುವ ಹಳೇ ಆಲೂರಿನಲ್ಲಿ ಪುರಾತನವಾದ ಅರ್ಕೇಶ್ವರ ಗುಡಿಯುಂಟು. ಹರದನಹಳ್ಳಿ (ನೋಡಿ) ಐತಿಹಾಸಿಕ ಸ್ಥಳ. ತೋಂಟದ ಸಿದ್ಧಲಿಂಗರ ಗುರುವಾದ ಗೋಸಲ ಚೆನ್ನಬಸವರು ಇದ್ದ ಗ್ರಾಮವಿದು. ನರಸಮಂಗಲದಲ್ಲಿ ಜೀರ್ಣವಾದ ರಾಮೇಶ್ವರ ಗುಡಿಯೊಂದಿದೆ. ಚಾಮರಾಜ ನಗರಕ್ಕೆ 3ಕಿಮೀ ದೂರದಲ್ಲಿರುವ ರಾಮಸಮುದ್ರದಲ್ಲಿ ಪುರಾತನ ಮಣಿಪುರದ್ದೆಂದು ಹೇಳಲಾದ ಅವಶೇಷಗಳಿವೆ. ಮಲೆಯೂರು ಬೆಟ್ಟದಲ್ಲಿ ಕೆಲವು ಪ್ರಾಚೀನ ಜೈನ ಅವಶೇಷಗಳಿವೆ. ಚಾಮರಾಜನಗರಕ್ಕೆ 16ಕಿಮೀ ದೂರದಲ್ಲಿ ನಂಜನಗೂಡು ಯಳಂದೂರು ರಸ್ತೆಯಲ್ಲಿರುವ ಉಮ್ಮತ್ತೂರು ಗ್ರಾಮ ಪಾಳೆಯಪಟ್ಟಿನ ಕೇಂದ್ರವಾಗಿತ್ತು.

ಪಟ್ಟಣ: ಜಿಲ್ಲಾ ಕೇಂದ್ರವಾದ ಚಾಮರಾಜನಗರ ಈ ತಾಲ್ಲೂಕಿನ ಮುಖ್ಯ ಪಟ್ಟಣ. ಮೈಸೂರು ನಗರದ ಆಗ್ನೇಯಕ್ಕೆ 61ಕಿಮೀ ದೂರದಲ್ಲೂ ನಂಜನಗೂಡಿನಿಂದ 35ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 60,810. ಮೈಸೂರು ಚಾಮರಾಜನಗರ ರೈಲು ಮಾರ್ಗದ ಕೊನೆಯ ನಿಲ್ದಾಣವಿದು. ನಂಜನಗೂಡಿನಿಂದ ಕೊಯಮತ್ತೂರಿನ ಕಡೆಗೆ ಚಾಮರಾಜನಗರದ ಮೂಲಕ ಸಾಗುವ ಒಂದು ಹೆದ್ದಾರಿಯಿದೆ. ಗುಂಡ್ಲುಪೇಟೆ ತಿರುಮಕೂಡಲು ನರಸೀಪುರ ರಸ್ತೆ ಈ ಊರಿನ ಮೂಲಕ ಸಾಗುತ್ತದೆ. ಇದೊಂದು ಮುಖ್ಯ ವ್ಯಾಪಾರಸ್ಥಳ. ಇಲ್ಲಿ ಪುರಸಭಾಡಳಿತವಿದೆ. ರೇಷ್ಮೆ ಕೈಗಾರಿಕಾ ಕೇಂದ್ರ, ಶಾಲಾ ಕಾಲೇಜುಗಳೂ ಆಸ್ಪತ್ರೆಗಳೂ ಇವೆ.

ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ (1826) ಇಲ್ಲಿನ ಚಾಮರಾಜೇಶ್ವರ ದೇವಸ್ಥಾನ ದೊಡ್ಡ ಪ್ರಾಕಾರ, ಎತ್ತರವಾದ ಮಹಾದ್ವಾರ ಗೋಪುರ ಮತ್ತು ಸುತ್ತಲೂ ಕೈಸಾಲೆ ಇರುವ ದೊಡ್ಡ ದೇವಾಲಯ. ಒಳಗೆ ಮೂರು ಗುಡಿಗಳಿವೆ. ಮಧ್ಯದ ಗುಡಿಯಲ್ಲಿ ಶಿವಲಿಂಗವಿದೆ. ಇದು ಚಾಮರಾಜೇಶ್ವರ. ಎಡಗಡೆ ಗುಡಿಯಲ್ಲಿ ಕೆಂಪನಂಜಾಂಬಾ ವಿಗ್ರಹವೂ ಬಲಗಡೆಯದರಲ್ಲಿ ಚಾಮುಂಡಿ ವಿಗ್ರಹವೂ ಇವೆ. ನವರಂಗದ ಎಡಬಲಗಳಲ್ಲಿ ಆರು ಲಿಂಗಗಳೂ ನವರಂಗದ್ವಾರದ ಒಳಪಕ್ಕಗಳಲ್ಲಿ ಸೂರ್ಯಚಂದ್ರರ ವಿಗ್ರಹಗಳೂ ಉಂಟು. ಪ್ರಾಕಾರದೊಳಗೆ ಸುತ್ತಲೂ ಹಲವು ಲಿಂಗಗಳೂ ಅರವತ್ತು ಮೂರು ಪುರಾತನರ ವಿಗ್ರಹಗಳೂ ಇವೆ. ಶಿವನ ಕೆಲವು ಲೀಲಾಮೂರ್ತಿಗಳು ಸುಂದರವಾಗಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ, ಅವರ ನಾಲ್ವರು ರಾಣಿಯರ ವಿಗ್ರಹಗಳೂ ಇವೆ. ಈ ಊರಿನ ವೀರಭದ್ರ ಗುಡಿಯೂ ಗಮನಾರ್ಹ. ದೇಗುಲದಲ್ಲಿ ವೀರಭದ್ರ ಮೂರ್ತಿಯ ಮತ್ತು ಭದ್ರಕಾಳಿಯ ವಿಗ್ರಹಗಳು ಮುಖ್ಯವಾದವು. ಪಾಶ್ರ್ವನಾಥ ದೇವಸ್ಥಾನದ ಕೆಲವು ಮೂರ್ತಿಗಳು ತೆರಕಣಾಂಬಿ ಮತ್ತು ಹರಳಕೋಟೆಯಿಂದ ತಂದವೆನ್ನಲಾಗಿದೆ. ಚಾಮರಾಜ ಒಡೆಯರು ಹುಟ್ಟಿದ ಸ್ಥಳದಲ್ಲಿ ಕಟ್ಟಲಾದ ಜನನ ಮಂಟಪ ಸುಂದರವಾಗಿದೆ. ಅದರ ಗೋಡೆಯ ಮೇಲಣ ಚಿತ್ರಗಳು ಆಕರ್ಷಕವಾಗಿವೆ. ಇಲ್ಲಿರುವ ದೊಡ್ಡ ಅರಸಿನಕೊಳ ಕಂಠೀರವ ನರಸರಾಜ ಒಡೆಯರ್ ಕಟ್ಟಿಸಿದ್ದು. *