ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿಕ್ಕದೇವರಾಜ ಒಡೆಯರ್

ವಿಕಿಸೋರ್ಸ್ದಿಂದ

ಚಿಕ್ಕದೇವರಾಜ ಒಡೆಯರ್ - ಸು.164-1704. ಮೈಸೂರಿನ ಪ್ರಸಿದ್ಧ ದೊರೆಗಳಲ್ಲೊಬ್ಬರು. ಕರ್ಣಾಟಕ ಚಕ್ರವರ್ತಿ ಅಪ್ರತಿಮವೀರ, ತೆಂಕಣರಾಜ ಎಂಬ ಬಿರುದುಗಳನ್ನು ಧರಿಸಿದ್ಧ ಇವರು ಪರಾಕ್ರಮಶಾಲಿ, ವ್ಯವಹಾರ ಚತುರ, ಒಳ್ಳೆಯ ಆಡಳಿತಗಾರ, ದೂರದರ್ಶಿಯಾದ ರಾಜಕಾರಣಿ, ಸಾಹಿತ್ಯಪ್ರೇಮಿ, ಸ್ವತಃ ಕವಿ. ಮೈಸೂರಿನಲ್ಲಿ ವಿಜಯನಗರ ಸಾಮ್ರಾಟರ ವಾರಸುದಾರರು ಮೈಸೂರು ಒಡೆಯರೆಂದು ಪ್ರತಿಪಾದಿಸಿದ ದೇವರಾಜ ಒಡೆಯರ ಸೋದರರ ಪುತ್ರರು. ಬಹುಮುಖ ಪ್ರತಿಭೆ ಹೊಂದಿದ್ದ ದೇವರಾಜ ಒಡೆಯರ ಸೋದರರ ಪುತ್ರರು. ಬಹುಮುಖ ಪ್ರತಿಭೆ ಹೊಂದಿದ್ದ ಇವರು 1645ರಲ್ಲಿ ಜನ್ಮವೆತ್ತಿದರು. 1673ರಲ್ಲಿ ತಮ್ಮ 28ನೆಯ ವಯಸ್ಸಿನಲ್ಲಿ ಮೈಸೂರಿನ ಸಿಂಹಾಸವನ್ನೇರಿದರು.

ಚಿಕ್ಕದೇವರಾಜರು ಮೊಗಲ್ ಚಕ್ರವರ್ತಿ ಔರಂಗ್‍ಜೇಬನ, ಮರಾಠರ ನಾಯಕ ಶಿವಾಜಿಯ ಸಮಕಾಲೀನರು. ಅವರ ಆಡಳಿತ ಕಾಲದಲ್ಲಿ ಭಾರತದ ಪರಿಸ್ಥತಿ. ಅದರಲ್ಲೂ ದಕ್ಷಿಣ ಭಾರತದ ರಾಜಕೀಯ ಸನ್ನಿವೇಶ, ಜಟಿಲಮಯವಾಗಿತ್ತು. ಮೈಸೂರು ಅರಸರ ಸ್ಥಾನವೇ ಭದ್ರವಾಗಿರಲಿಲ್ಲ. ಪಾಳೆಯಗಾರರ ಪಿತೂರಿ ಒಂದು ಕಡೆ ; ಕರ್ಣಾಟಕಕ್ಕೆ ಕಂಟಕಪ್ರಾಯರಾಗಿದ್ದ ದಕ್ಷಿಣದ ಮುಸ್ಲಿಂ ಅರಸರು ಇನ್ನೊಂದು ಕಡೆ ; ಇವರ ವೈರದ ಜೊತೆಗೆ ಮರಾಠರ ದಾಳಿಗಳು-ಇವೆಲ್ಲವನ್ನೂ ಎದುರಿಸಿ ಕನ್ನಡ ರಾಜ್ಯವನ್ನು ವ್ಯಾಪಕವಾಗಿ ಕಟ್ಟುವ ಧ್ಯೇಯ ಹೊಂದಿ, ಯಶಸ್ವಿಯಾದ ಕೀರ್ತಿ ಚಿಕ್ಕದೇವರಾಜರದು.

ಚಿಕ್ಕದೇವರಾಜರು ಪಟ್ಟಕ್ಕೆ ಬಂದ ತರುಣದಲ್ಲೇ ಮೈಸೂರು ರಾಜ್ಯವನ್ನು ಕಬಳಿಸುವ ಯತ್ನದಲ್ಲಿದ್ದ ಶತ್ರುಗಳನ್ನು ಎದುರಿಸಬೇಕಾಯಿತು. ಇವರು ಅನೇಕ ವಿಜಯ ಯಾತ್ರೆಗಳನ್ನು ಕೈಗೊಂಡರು. ತಮ್ಮ ರಾಜ್ಯದ ಮೇಲೆ ದಂಡೆತ್ತಿ ಬಂದ ಮಧುರೆಯ ನಾಯಕ ಚೊಕ್ಕನಾಥನ ದಾಳಿಯನ್ನು ಎದುರಿಸಿ ಜಯಗಳಿಸಿದರು. 1674ರಲ್ಲಿ ಕೆಳದಿಯ ಅರಸನ ಸೊಲ್ಲಡಗಿಸಿದರು. 1675 ರಲ್ಲಿ ಖಿಡಾಪುರದ ದಂಡನಾಯಕನಾದ ರಣದುಲ್ಲಾಖಾನನನ್ನು ಸೋಲಿಸಿ, ಕೇತಸಮುದ್ರ, ಕಂಡಿಕೆರೆ, ಹಂಡಾಲಕೆರೆ, ಗೂಳೂರು, ತುಮಕೂರು ಮತ್ತು ಹೊನ್ನಾವಳ್ಳಿ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ರಾಜ್ಯ ವಿಸ್ತಾರಮಾಡಿದ್ದು ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತ್ವದ ಘಟನೆ. ಇದರಿಂದ ದಕ್ಷಿಣದಲ್ಲಿ ಮುಸ್ಲಿಮರ ಪ್ರಭಾವ ಸಡಿಲವಾಗತೊಡಗಿತು. 1677 ರಲ್ಲಿ ರಾಜ್ಯಕ್ಕೆ ಬಂದೊದಗಿದ್ದ ಮರಾಠರ ವಿಪತ್ತನ್ನು ಇವರು ನಿವಾರಿಸಿದರು. ಮತ್ತೆ 1682ರಲ್ಲಿ ದಾಳಿ ನಡೆಸಿದ ಸೇನಾನಾಯಕರ ದಾಳಿಯನ್ನು ಎದುರಿಸಿ ಯಶಸ್ವಿಯಾದರು. ಎರಡು ಬಾರಿ ಸೋತ ಮರಾಠರು ಮತ್ತು ಚಿಕ್ಕದೇವರಾಜರನ್ನು ಎದುರಿಸುವ ಸನ್ನಾಹ ಮಾಡಲಿಲ್ಲ. ಹೀಗೆ ರಾಜ್ಯಕ್ಕೆ ಬಂದೊದಗಿದ ವಿಷಮ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಿ ಇವರು ಮೈಸೂರು ರಾಜ್ಯದ ಭವ್ಯ ಭವಿಷ್ಯಕ್ಕೆ ಬುನಾದಿ ಹಾಕಿದರು. ಮೈಸೂರಿನಲ್ಲಿ ಸಾರ್ವಭೌಮತ್ವವನ್ನು ಸ್ಥಿರವಾಗಿ ಸ್ಥಾಪಿಸಿ, ದಕ್ಷಿಣ ಭಾರತದಲ್ಲಿ ಅಪ್ರತಿಮ ವೀರರೆನಿಸಿಕೊಂಡರು. 1687 ರಲ್ಲಿ ಮೊಗಲರ ಸೇನಾನಿ ಖಾಸಿಮ್‍ಖಾನನಿಂದ ಕೊಂಡ ಬೆಂಗಳೂರು ಮೈಸೂರು ರಾಜ್ಯಕ್ಕೆ ತಿಲಕಪ್ರಾಯವಾಯಿತು.

ವ್ಯವಹಾರಚತುರರಾದ ಚಿಕ್ಕದೇವರಾಜರು ಭಾರತದ ರಾಜಕೀಯವನ್ನು ಕೂಲಂಕಷವಾಗಿ ಅಭ್ಯಸಿಸಿ, ಸುತ್ತಮುತ್ತಲಿನ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಂಡು, ರಾಜ್ಯದ ಆಭ್ಯುದಯಕ್ಕೆ ಕಾರಣಕರ್ತರಾದರು. ಪ್ರಾರಂಭದ ವಿರೋಧಗಳನ್ನು ಅಡಗಿಸಿದ ಮೇಲೆ ನಮ್ಮ ರಾಜ್ಯವನ್ನು ಸುಭದ್ರಗೊಳಿಸುವತ್ತ ಗಮನ ಹರಿಸಿದರು. ಅಂದು ಪ್ರಬಲವಾಗಿದ್ದ ಮರಾಠರ ಶಕ್ತಿಯನ್ನು ಕುಗ್ಗಿಸಬೇಕಾದರೆ, ದಕ್ಷಿಣದ ಮುಸಲ್ಮಾನರು ದಾಳಿ ಮಾಡದಂತೆ ತಪ್ಪಿಸಬೇಕಾದರೆ, ಮೊಗಲರ ಚಕ್ರವರ್ತಿ ಔರಂಗಜೇಬನ ಸ್ನೇಹಸಂಬಂಧ ಅನಿವಾರ್ಯವೆಂದು ತಿಳಿದ ಚಿಕ್ಕದೇವರಾಜರು, ಲಿಂಗಪ್ಪಯ್ಯನ ನೇತೃತ್ತ್ವದಲ್ಲಿ ರಾಯಭಾರವೊಂದನ್ನು ಅಹಮದ್‍ನಗರದಲ್ಲಿದ್ದ ಔರಂಗ್‍ಜೇಬನಲ್ಲಿಗೆ ಕಳುಹಿಸಿದರು. ಮುಖ್ಯವಾಗಿ ಮರಾಠರ ಮುತ್ತಿಗೆಗಳಿಂದ ಮತ್ತು ಪಾಳೆಯಗಾರರ ದಾಳಿಗಳಿಂದ ರಾಜ್ಯವನ್ನು ರಕ್ಷಿಸುವುದು. ಅಲ್ಲದೆ ಚಿಕ್ಕದೇವರಾಜರ ಸ್ನೇಹಿತನಾದ ಮೊಗಲ್ ದಳಪತಿ ಖಾಸಿಮ್‍ಖಾನನ ಮರಣದ ಅನಂತರ ಮೊಗಲರಿಂದ ಒದಗಬಹುದಾಗಿದ್ದ ವಿಪತ್ತಿನಿಂದ ಮೈಸೂರನ್ನು ರಕ್ಷಿಸುವುದು, ಮೈಸೂರು ರಾಜ್ಯದ ಪ್ರತಿಷ್ಠೆಯನ್ನು ಹೆಚ್ಚಿಸುವುದು-ಇವು ರಾಯಭಾರದ ಉದ್ದೇಶ್ಯಗಳಾಗಿದ್ದುವು. ಚಿಕ್ಕದೇವರಾಜರ ಪ್ರಭುತ್ವಕ್ಕೆ ಔರಂಗಜೇಬ್ ಮನ್ನಣೆ ನೀಡಿದನಲ್ಲದೆ ಅವರಿಗೆ ಜಗದೇವರಾಯ ಎಂಬ ಬಿರುದನ್ನಿತ್ತ. ಔರಂಗಜೇಬನಿಗೂ ಈ ಮೈತ್ರಿಯಿಂದ ಪ್ರತಿಫಲ ದೊರಕಿತು. ಮುಖ್ಯವಾಗಿ ಮರಾಠರನ್ನು ದಕ್ಷಿಣದಲ್ಲಿ ಎದುರಿಸಿ, ಅವರ ಪ್ರಾಬಲ್ಯವನ್ನು ಕುಂಠಿತಗೊಳಿಸುವ ಅವನ ಯತ್ನದಲ್ಲಿ ಚಿಕ್ಕದೇವರಾಜರು ಸಹಾಯಕರಾದರು. ಅನಂತರ ಚಿಕ್ಕದೇವರಾಜರು ಕುಮಾರಯ್ಯನ ನೇತೃತ್ವದಲ್ಲಿ ದಕ್ಷಿಣಕ್ಕೆ ಕಳಿಸಿದ ಸೈನ್ಯ ದೀರ್ಘಕಾಲ ಮುತ್ತಿಗೆ ಹಾಕಿ ತಿರುಚಿನಾಪಳ್ಳಿಯನ್ನು ವಶಪಡಿಸಿಕೊಂಡಿತು.

ಹೀಗೆ ಕಾಲೋಚಿತವಾದ ಉದಾತ್ತ ರಾಜಕೀಯ ಧೋರಣೆಯನ್ನು ತಳೆದ ಚಿಕ್ಕದೇವರಾಜರು ಕರ್ಣಾಟಕದ ಸ್ವತಂತ್ರ ರಾಜರಲ್ಲಿ ಅಗ್ರಗಣ್ಯರಾದರು. ಮೈಸೂರು ರಾಜ್ಯದ ರಾಜಕೀಯ ಪ್ರಗತಿಗೆ ರಾಜ ಒಡೆಯರ್ ಮತ್ತ ಕಂಠೀರವ ನರಸರಾಜರು ಸಾಕಷ್ಟು ಶ್ರಮಪಟ್ಟಿದ್ದು ನಿಜವಾದರೂ, ಅದನ್ನು ಇಮ್ಮಡಿಗೊಳಿಸಿದ ಕೀರ್ತಿ ಚಿಕ್ಕದೇವರಾಜರಿಗೆ ಸಲ್ಲತಕ್ಕದ್ದಾಗಿದೆ. ಇವರ ಆಡಳಿತಕಾಲದಲ್ಲಿ ಮೈಸೂರು ರಾಜ್ಯ ಉತ್ತರದಲ್ಲಿ ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳಿಂದ ದಕ್ಷಿಣದಲ್ಲಿ ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳವರೆಗೂ ಪೂರ್ವದಲ್ಲಿ ಸೇಲಂನಿಂದ ಪಶ್ಚಿಮದಲ್ಲಿ ಬೇಲೂರು ಮತ್ತು ಕೊಡಗಿನವರೆಗೂ ವಿಸ್ತರಿಸಿತು. ಇವರು ಮಹಾರಾಜಾಧಿರಾಜ ಎಂಬ ಬಿರುದು ಧರಿಸಿದರು. ಅಪ್ರತಿಮವೀರರೆಂದು ಪ್ರಸಿದ್ಧಿ ಹೊಂದಿದರು. ವೀರಯೋಧರಾಗಿದ್ದ ಚಿಕ್ಕದೇವರಾಜರು ಆಡಳಿತಪರಿಣಿತರೂ ಆಗಿದ್ದರು. ಆಡಳಿತವನ್ನು ಸುಗಮವಾಗಿ ನಡೆಸಲು ಸಚಿವ ಸಂಪುಟವನ್ನು ನೇಮಿಸಿ, ರಾಜ್ಯಭಾರವನ್ನು ವಿಚಕ್ಷಣೆಯಿಂದ ನಡೆಸಿದರು. ಭೂಮಿ ಮತ್ತು ಇತರ ವಿಷಯಗಳಿಗೆ ಸಂಬಂಧಪಟ್ಟ ಕಂದಾಯ ಕಾನೂನುಗಳನ್ನು ಕ್ರೋಢಿಕರಿಸಿದರು. ದೇಶಕ್ಕೆಲ್ಲ ಅನ್ವಯವಾಗುವಂತೆ ಅಂಚೆ ವ್ಯವಸ್ಥೆ ರೂಢಿಗೆ ಬಂತು. ಸರ್ಕಾರದ ಕೆಲಸ ತ್ವರಿತವಾಗಿ ನಡೆಸುವ ಸಲುವಾಗಿ ಕೇಂದ್ರಾಡಳಿತವನ್ನು 18 ಇಲಾಖೆಗಳನ್ನಾಗಿ ವಿಂಗಡಿಸಲಾಯಿತು. ಆಡಳಿತದಲ್ಲಿ ಗ್ರಾಮ ಕಲ್ಯಾಣಕ್ಕೆ ಹೆಚ್ಚಿನ ಗಮನ ಕೊಡುವಂತೆ ಇವರು ಏರ್ಪಾಡು ಮಾಡಿದರು. ಅಧಿಕಾರಿಗಳು ತಮಗೆ ಬರುವ ಆದಾಯಕ್ಕಿಂತ ಹೆಚ್ಚಿನ ವೆಚ್ಚ ಮಾಡದಂತೆ ಕಟ್ಟಳೆ ಮಾಡಿದ್ದುದರಿಂದ ಲಂಚಕ್ಕೆ ಆಸ್ಪದ ನೀಡದೆ ಅಧಿಕಾರಿಗಳು ನ್ಯಾಯದಿಂದ ವರ್ತಿಸುವುದಕ್ಕೆ ದಾರಿಮಾಡಿಕೊಟ್ಟಿತು. ರಾಜ್ಯದ ನಾನಾ ಬಾಬ್ತುಗಳಿಂದ ಬರಬೇಕಾದ ಆದಾಯಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದರಿಂದ ವಾರ್ಷಿಕ ಆದಾಯ ಇಮ್ಮಡಿಯಾಯಿತು. ಅಲ್ಲದೆ ಅದರ ವಿತರಣೆಯಲ್ಲಿ ಒಂದು ಕ್ರಮವನ್ನು ಅನುಸರಿಸಿದ್ದರಿಂದ ರಾಜ್ಯದಲ್ಲಿ ಕ್ಷೇಮ, ಶಾಂತಿ ಮತ್ತು ಪ್ರಗತಿ ಸಾಧಿಸಿದುವು. ಮಿತವ್ಯಯ ನೀತಿಯಿಂದ, ಸಮರ್ಥ ಆರ್ಥಿಕ ನಿರ್ವಹಣೆಯಿಂದ ಚಿಕ್ಕದೇವರಾಜರು ಅಪಾರ ಧನಸಂಗ್ರಹ ಮಾಡಲು ಸಹಾಯವಾಯಿತು. ಅವರು ನವಕೋಟಿ ನಾರಾಯಣ ಎಂಬ ಹೆಸರು ಗಳಿಸಿದರು. ಪ್ರಜೆಗಳಿಗೆ ನ್ಯಾಯವಾದ ಬೆಲೆಯಲ್ಲಿ, ನಿರ್ದಿಷ್ಟ ಅಳತೆಯಲ್ಲಿ ಪದಾರ್ಥಗಳು ಸಿಗುವಂತೆ ನಿಯಂತ್ರಿತ ಮಾರುಕಟ್ಟೆಗಳು ಸ್ಥಾಪಿತವಾದುವು. ತೂಕ ಮತ್ತು ಅಳತೆಗಳನ್ನು ನಿರ್ದಿಷ್ಟಗೊಳಿಸಲಾಯಿತು. ಇವರು ವರ್ತಕರ ವ್ಯಾಪಾರ ವಹಿವಾಟುಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದರು. ರಾಜ್ಯದ ನೀರಾವರಿ ಯೋಜನೆಗಳಲ್ಲಿ ಆಸಕ್ತಿ ವಹಿಸಿ, ಕಾವೇರಿ ನದಿಗೆ ಅಣೆಕಟ್ಟನ್ನು ಕಟ್ಟಿಸಿ, ಹೆಚ್ಚಿನ ಪ್ರದೇಶವನ್ನು ನೀರಾವರಿಗೆ ತರುವ ಪ್ರಯತ್ನ ಮಾಡಿದರು.

ಚಿಕ್ಕದೇವರಾಜರು ಶ್ರೀವೈಷ್ಣವ ಧರ್ಮಿಯರಾಗಿದ್ದರೂ ಪರಮತಸಹಿಷ್ಣುವಾಗಿದ್ದರು. ರಾಜ್ಯದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದುವು. ಶ್ರವಣಬೆಳಗೊಳದಲ್ಲಿ ಇವರು ತಟಾಕವನ್ನು ಕಟ್ಟಿಸಿದರು.

ಸಾಹಿತ್ಯಪೋಷಕರಾಗಿದ್ದ ಚಿಕ್ಕದೇವರಾಜರ ಕಾಲದಲ್ಲಿ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಸಾಂಸ್ಕøತಿಕ ಕೇಂದ್ರವಾಗಿ ಪ್ರಾಮುಖ್ಯ ಗಳಿಸಿತು. ಅವರ ಆಸ್ಥಾನದಲ್ಲಿ ವಿದ್ವಾಂಸರೂ ತಿರುಮಲಾರ್ಯ, ಮಲ್ಲರಸ ಮುಂತಾದ ಕವೊಗಳೂ, ಶೃಂಗಾರಮ್ಮ ಹೊನ್ನಮ್ಮ ಎಂಬ ಕವಯಿತ್ರಿಯರೂ ಇದ್ದರು. ಚಿಕ್ಕದೇವರಾಜರ ಆಡಳಿತಾವಧಿಯಾದ (1673-1704) 17ನೆಯ ಶತಮಾನದ ಉತ್ತರಾರ್ಧವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿಕ್ಕದೇವರಾಜಯುಗವೆಂದೇ ಕರೆಯಲಾಗಿದೆ. ತಿರುಮಲಾರ್ಯ ಬರೆದ ಗ್ರಂಥಗಳಲ್ಲಿ ಚಿಕ್ಕದೇವರಾಜರೇ ಕಥಾನಾಯಕ. ಅವರ ವಂಶದ ಗೌರವಪ್ರತಿಷ್ಠೆಗಳ ಹಿನ್ನೆಲೆಯಲ್ಲಿ ತನ್ನ ಒಡನಾಡಿ ಒಡೆಯನ ಸೌಜನ್ಯವನ್ನು, ಶೌರ್ಯವನ್ನು, ದಿಗ್ವಿಜಯ ಸಂಗ್ರಾಮಗಳನ್ನು, ಧರ್ಮಬುದ್ಧಿಯನ್ನು, ಪ್ರಜಾಪರಿಪಾಲನ ನೀತಿಯನ್ನು ಮತ್ತು ಅವನ ವ್ಯಕ್ತಿತ್ವವನ್ನು ತಿರುಮಲಾರ್ಯ ವರ್ಣಿಸಿದ್ದಾನೆ.

ಚಿಕ್ಕದೇವರಾಜರು ಸ್ವತಃ ಕವಿಯಾಗಿದ್ದರು. ಅವರು ಚಿಕ್ಕದೇವರಾಜ ಭಿನ್ನಪ ಎಂಬ ಕೃತಿ ಶ್ರೀ ವೈಷ್ಣವ ಸಿದ್ಧಾಂತಕ್ಕೆ ಸರಳ ಮತ್ತು ಸುಂದರ ಕೈಪಿಡಿಯಾಗಿದೆ. ಹೆಚ್ಚಿನ ವಿವರಗಳಿಗೆ (ನೊಡಿ- ಒಡೆಯರ-ಕಾಲದ-ಕನ್ನಡ-ಸಾಹಿತ್ಯ) (ನೋಡಿ- ಕನ್ನಡ-ಸಾಹಿತ್ಯ) (ಎಚ್.ಡಿ.)

ಚಿಕ್ಕದೇವರಾಜರು ಆಡಳಿತವನ್ನು ವಿಚಕ್ಷಣೆಯಿಂದ ನಡೆಸಿ, ಕನ್ನಡ ರಾಜ್ಯವನ್ನು ವ್ಯಾಪಕವಾಗಿ ಕಟ್ಟಿ, ಅದರ ಪ್ರತಿಷ್ಠೆಗೌರವಗಳನ್ನು ಹೆಚ್ಚಿಸಿ, 1704ರಲ್ಲಿ ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾದರು. (ಕೆ.ಟಿ.ಆರ್.)