ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೇರಮಾಂಕ

ವಿಕಿಸೋರ್ಸ್ದಿಂದ

ಚೇರಮಾಂಕ : - ಸು. 1526. ಈತ ವಾರ್ಧಕ ಷಟ್ಪದಿಯ ಚೇರಮ ಕಾವ್ಯದ ಕರ್ತೃ. ವೀರಶೈವ. ಈತನ ಪಿತಾಮಹ ಆದಯ್ಯ ಸಿರಿಯಾಳನನ್ವಯೋದ್ದಾಮನೂ ಚಿಕ್ಕ ವೀರೇಶಕರಜಾತನೂ ಆದ ನಾಗಲಿಂಗ ಸೆಟ್ಟಿ. ತಂದೆ ರಾಜಪೂಜ್ಯನಾದ ಗಂಗಪ್ಪ ಸೆಟ್ಟಿ. ಗುರು ಚೆನ್ನವೀರೇಶ. ಗುಬ್ಬಿ ಮಲ್ಲಣಾರ್ಯನ (1513) ಕೃಪೆಯಿಂದ ತಾನು ಗ್ರಂಥರಚನೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಪೂರ್ವಕವಿಗಳಲ್ಲಿ ವಾಲ್ಮೀಕಿ, ಮಯೂರ, ಹಲಾಯುಧ, ಪಾಲ್ಕುರಿಕೆ ಸೋಮ, ಭೋಜ, ಬಾಣ, ಕರೆಯಪದ್ಮರಸ, ಕುಮಾರಪದ್ಮರಸ, ಹರೀಶ್ವರ-ಇವರನ್ನು ಸ್ಮರಿಸಿದ್ದಾನೆ. ದೇವತೆಗಳಲ್ಲಿ ಪಾರ್ವತಿ, ಗಣೇಶ, ಷಣ್ಮುಖ, ನಂದಿ, ಭಂಗಿ, ವೀರಭದ್ರ-ಇವರನ್ನು ಸ್ತುತಿಸಿದ್ದಾನೆ. ಗುರುಗಳಲ್ಲಿ ತನ್ನ ಗುರು ಚೆನ್ನವೀರೇಶ, ಗುಬ್ಬಿಯ ಮಲ್ಲಣಾರ್ಯ, ಸೋಲೂರ ಚಿಕ್ಕಬಸವ-ಇವರನ್ನು ಹೊಗಳಿದ್ದಾನೆ. ಈತ ತನ್ನನ್ನು ನವರಸಭಾವ ಲಕ್ಷಣಾಲಂಕಾರ ನಿಪುಣ ಎಂದು ವಿಶೇಷಿಸಿಕೊಂಡಿದ್ದಾನೆ.

ಚೇರಮ ಕಾವ್ಯದಲ್ಲಿ 11 ಸಂಧಿಗಳಿದ್ದು 555 ಪದ್ಯಗಳಿವೆ. ಶಿವಭಕ್ತ ಚೇರಮನ ಕಥೆಯೇ ಈ ಕಾವ್ಯದ ವಸ್ತು. ಈತ ನಂಬಿಯಣ್ಣನ ಜೊತೆಯಿದ್ದು ಆತ ಕೈಲಾಸಕ್ಕೆ ಹಿಂದಿರುಗಿದೊಡನೆಯೇ ತಾನೂ ಕೈಲಾಸವನ್ನು ಸೇರಿ ಅಲ್ಲಿ ಶಿವನಿಗೆ ಚಾರುಕಾವ್ಯವನ್ನು ಕೇಳಿಸಿದ-ಎಂಬುದೇ ಇದರ ಕಥಾವಸ್ತು. ಸಗ್ಗದ ಸುಧೆಯ ಸವಿ, ಮನವಲರ್ದು ನಟ್ಟುಕೂಡುವ ಲತಾಂಗಿಯ ಸೋಂಕು, ಪುಳಕವಳವಟ್ಟು ಹಾಡುವ ಗಾನರಸದಿಂಪು, ಚಾಜಿಯೊಳ್ಳಲರ ಕಂಪುಗಳ ಸೊಂಪು, ಕಟ್ಟ ಳ್ ಸುತನ ರೂಪು, ನಲ್ಪಿನ ಸೈಪು-ಇವೆಲ್ಲವೂ ತನ್ನ ಕಾವ್ಯದಲ್ಲಿ ಎಸೆಯುವುದಾಗಿಯೂ ಮುಟ್ಟಿ ಪಂಚೇಂದ್ರಿಯಂ ನಲಿವವೋಲ್ ತಾನು ಕಾವ್ಯವನ್ನು ಹೇಳಿರುವುದಾಗಿಯೂ ಕವಿ ಸ್ವಪ್ರಶಂಸೆ ಮಾಡಿಕೊಂಡಿದ್ದಾನೆ. ಆದರೆ ಈತನ ಕಾವ್ಯ ಒಂದು ಮಧ್ಯಮ ತರಗತಿಯ ಲಕ್ಷಣಯುಕ್ತ ಷಟ್ಪದೀಕಾವ್ಯ. (ಜಿ.ಜಿಯು.)