ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೌಂಡರಸ

ವಿಕಿಸೋರ್ಸ್ದಿಂದ

ಚೌಂಡರಸ : - ಸು. 1250. ಕನ್ನಡದಲ್ಲಿ "ಅಭಿನವ ದಶಕುಮಾರಚರಿತೆ" ಹಾಗೂ "ನಳಚಂಪು" ಎಂಬ ಗ್ರಂಥಗಳನ್ನು ಬರೆದ ಕವಿ. ಪಂಪರನ್ನಾದಿ ಜೈನ ಕವಿಗಳು ಹಾಕಿದ ಚಂಪೂ ಕಾವ್ಯದ ಹೆದ್ದಾರಿಯಲ್ಲಿ ನಡೆದ ಪ್ರಮುಖ ಬ್ರಾಹ್ಮಣ ಕವಿಗಳಲ್ಲಿ ಒಬ್ಬ. ಈತನ ತನ್ನ ಕಾವ್ಯದಲ್ಲಿ ಪಂಪ, ಪೊನ್ನ, ರುದ್ರಭಟ್ಟರನ್ನು ಹೊಗಳಿರುವನಾದರೂ ಕಾವ್ಯವಸ್ತುವಿನ ದೃಷ್ಟಿಯಿಂದ, ಈ ಕವಿ ಕಾದಂಬರಿಯ ನಾಗವರ್ಮ, ಲೀಲಾವತಿಯ ನೇಮಿಚಂದ್ರ, ಕುಸುಮಾವಳಿಯ ದೇವಕವಿ ಇವರ ಸಾಲಿನಲ್ಲಿ ನಿಲ್ಲುತ್ತಾನೆ. ನಾಗವರ್ಮ ಬಾಣನ ಸಂಸ್ಕøತ ಗದ್ಯಕಾವ್ಯವನ್ನು ಚಂಪೂ ರೂಪಕ್ಕೆ ತಿರುಗಿಸಿದ್ದರೆ ಈತ ದಂಡಿಯ ಸಂಸ್ಕøತ ಗದ್ಯಕಾವ್ಯವಾದ ದಶಕುಮಾರಚರಿತಕ್ಕೆ ಚಂಪೂ ರೂಪವನ್ನು ಕೊಟ್ಟಿದ್ದಾನೆ. ರುದ್ರಭಟ್ಟನಿಗಿಂತ ಈಚೆಯವನಾದ ಈತನ ಕಾಲವನ್ನು 13ನೆಯ ಶತಮಾನದ ಉತ್ತರಾರ್ಧ ಎಂದು ಇಟ್ಟುಕೊಳ್ಳಬಹುದು. ಸುಮಾರು ಇದೇ ಕಾಲದಲ್ಲಿ ತೆಲುಗಿನಲ್ಲಿಯೂ ಒಂದು ದಶಕುಮಾರಚರಿತ ರಚಿತವಾಗಿರುವುದು ಗಮನಾರ್ಹ. ಬಾಣಾಸುರ ವಿಜಯಂ ಕಲ್ಯಾಣ ನಳಖ್ಯಾತಿ ದಶಕುಮಾರ ಚರಿತ್ರಂ………ಇವು ಚೌಂಡರಾಜ ಕೃತಿಗಳ್ ಎಂದು ನಳಚಂಪುವಿನಲ್ಲಿ ಹೇಳಿಕೊಂಡಿರುವ ಪ್ರಕಾರ ಬಾಣಾಸುರ ವಿಜಯನೆಂಬ ಕೃತಿಯೂ ಈತನದಿರಬಹುದೆಂದು ಊಹಿಸಲಾಗಿದೆ. ಆದರೆ ಕೃತಿ ಈಗ ಉಪಲಬ್ಧವಿಲ್ಲ.

ಚೌಂಡರಸ ಭರದ್ವಾಜ ಗೋತ್ರದವನೆಂದು, ತಂದೆ ವರ ಮಧುಸೂದನ, ತಾಯಿ ಮಲ್ಲವ್ವೆ, ಅಣ್ಣ ಸರಸ ಕವೀಶ್ವರ, ಹೆಂಡತಿ ಲಕ್ಷ್ಮಿ ಎಂದು ಈತನ ಕಾವ್ಯಗಳ ಪೀಠಿಕೆಗಳಿಂದ ತಿಳಿದುಬರುತ್ತದೆ. ಕಾವ್ಯಾರಂಭದಲ್ಲಿ 'ಪಂಡರೀರಾಯನಭಂಗ ವಿಟ್ಠಲನನ್ನು ಈತ ಸ್ತುತಿಸಿರುವುದರಿಂದ, ಪಂಡರಾಪುರದ ವಿಟ್ಠಲ ಈತನ ಇಷ್ಟದೈವ ಹಾಗೂ ಪಂಡರಾಪುರ ಈತನ ಜನ್ಮಸ್ಥಳವೋ ವಾಸಸ್ಥಳವೋ ಆಗಿದ್ದರಿಬಹುದು. ಕವಿತಾ ವಿಲಾಸ, ಕವಿರಾಜಶೇಖರ ಎಂಬವು ಈತ ಬಿರುದುಗಳು.

ದಶಕುಮಾರಚರಿತೆ ಶೃಂಗಾರ ವೀರ ಅದ್ಭುತ ರಸಗಳಿಂದ ಕೂಡಿದ, ಕೌತುಕಕಾರಿಗಳಾದ ಸಣ್ಣ ಕಥೆಗಳನ್ನು ಒಳಗೊಂಡ ಒಂದು ಅದ್ಭುತರಮ್ಯ ಕಾಲ್ಪನಿಕ ಕಥೆ. ಹೆಸರೇ ತಿಳಿಸುವಂತೆ, ಹತ್ತು ಮಂದಿ ರಾಜಕುಮಾರರ ಕಥೆ ಇದು. ರಾಜಹಂಸ ಮಗಧ ದೇಶದ ಅರಸು. ವಸುಮತಿ ಅವನ ಹೆಂಡತಿ. ಅವನಿಗೆ ಏಳು ಮಂದಿ ಸಚಿವರು, ರಾಜನ ಮಗ ಒಬ್ಬ. ಸಚಿವರ ಮಕ್ಕಳು ಏಳು ಮಂದಿ. ಮಿಥಿಲಾಪುರದ ಮಿತ್ರ ರಾಜನೊಬ್ಬನ ಇಬ್ಬರು ಮಕ್ಕಳು ಹೀಗೆ ಒಟ್ಟು ದಶಕುಮಾರರು. ಇವರೆಲ್ಲರೂ ರಾಜಹಂಸ ವಸುಮತಿಯರ ಲಾಲನೆ ಪಾಲನೆಯ ಮಡಿಲಿಗೆ ಬಂದು ಬೀಳುವ ಪ್ರಸಂಗಗಳು ವಿಸ್ಮಯವಾಗಿವೆ. ಪ್ರತಿ ಪ್ರಸಂಗವೂ ಒಂದು ಚಿಕ್ಕ ಕಥೆ. ಇದಿಷ್ಟು ಕಾವ್ಯದ ಪೀಠಿಕಾಭಾಗ; ಕಾವ್ಯದ ಮುಖ್ಯ ಭಾಗದಲ್ಲಿ ದಶಕುಮಾರರ ಸಾಹಸ ಕಥಾ ವೃತ್ತಾಂತಗಳ ನಿರೂಪಣೆ ಹರಡಿಕೊಂಡಿವೆ; ಪ್ರತಿ ಕುಮಾರನೂ ತನ್ನ ವೃತ್ತಾಂತವನ್ನು ಇತರರಿಗೆ ಹೇಳಿಕೊಳ್ಳುವಂತೆ ಕಥಾ ಸಂವಿಧಾನದ ವಿನ್ಯಾಸವಾಗಿದೆ. ಪ್ರತಿಯೊಬ್ಬನೂ ರೋಮಾಂಚನಕಾರಿಯೂ ಅದ್ಭುತವೂ ಆದ ಸಾಹಸಕಾರ್ಯವೆಸಗಿ ಕಡೆಯಲ್ಲಿ ಒಬ್ಬ ಸುಂದರ ಕನ್ಯೆಯನ್ನು ವರಿಸುತ್ತಾನೆ. ಒಟ್ಟಿನಲ್ಲಿ ಚೌಂಡರಸ ಸಂಸ್ಕøತಮೂಲದ ಜಾಡನ್ನು ಎಷ್ಟರಮಟ್ಟಿಗೆ ಯಥಾವತ್ತಾಗಿ ಅನುಸರಿಸಿರುವನೆಂದರೆ, ಮಂತ್ರಗುಪ್ತನೆಂಬ ಕುಮಾರನ ನಿರೋಷ್ಠ ಕಥಾವೃತ್ತಾಂತವನ್ನು ಕನ್ನಡದಲ್ಲಿಯೂ (ಬಹುಮಟ್ಟಿಗೆ) ನಿರೋಷ್ಠವಾಗಿಯೋ (ಎಂದರೆ `ಪ ವರ್ಗದ ಅಕ್ಷರಗಳನ್ನು ಬಿಟ್ಟು) ನಿರೂಪಿಸಿದ್ದಾನೆ. ಆದರೂ ಚೌಂಡರಸ ತನ್ನ ಅನುವಾದದಲ್ಲಿ ಅಲ್ಲಲ್ಲಿ ಸ್ವತಂತ್ರ ಕಲ್ಪನೆಗಳನ್ನೂ ವರ್ಣನೆಗಳನ್ನೂ ತಂದಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ ಚಾರಚೋರರ ಕಥೆ ಎಂಬ ಆಕ್ಷೇಪಕ್ಕೆ ಗುರಿಯಾಗಬಹುದಾದ ಮೂಲಕೃತಿಗೆ ಧಾರ್ಮಿಕತೆಯ ಮೆರಗನ್ನು ಕೊಡಲು ಪ್ರಯತ್ನಿಸಿದ್ದಾನೆ. ವಿಷ್ಣು ಜಗದ್ವ್ಯಾಪಕನಾದ್ದರಿಂದ `ಆವುದಂ ಬಣ್ಣಿಸಿದೊಡದು ಹರಿಸ್ತೋತ್ರಂ' ಎಂಬ ಘೋಷಣೆಯಿಂದ ಮಾತ್ರ ತೃಪ್ತನಾಗದೆ ವಿಶ್ರುತನೆಂಬ ಕುಮಾರನಿಂದ ಪಂಡರಾಪುರದ ಯಾತ್ರೆಯನ್ನೂ ವಿಟ್ಠಲಸ್ತುತಿಯನ್ನೂ ಮಾಡಿಸಿದ್ದಾನೆ. ಅಲ್ಲದೆ. ಮೂಲ ಗದ್ಯದ ಸರಳ ಕಥನಕ್ಕೆ ಅಲ್ಲಲ್ಲಿ ನಾಟಕೀಯತೆಯ ಕಳೆ ಕೊಟ್ಟಿದ್ದಾನೆ. ಈ ಕಾರಣಗಳಿಂದ, ಕನ್ನಡದ ಅನುವಾದಕ್ಕೆ ಅಭಿನವ ದಶಕುಮಾರ ಚರಿತೆ ಎಂಬ ಹೆಸರು ಖಚಿತವಾಗಿದೆ.

ನಳಚಂಪೂ : ಸಂಸ್ಕøತ ಮಹಾಭಾರತದಲ್ಲಿರುವ ನಳೋಪಾಖ್ಯಾನ ಲೋಕಪ್ರಸಿದ್ಧವಾದ ಕಥೆ. ಚೌಂಡರಸ ಈ ಕಥೆಯನ್ನೇ ಬಹುಮಟ್ಟಿಗೆ ಅನುಸರಿಸಿ ಅಲ್ಲಲ್ಲಿ ಸಣ್ಣಪುಟ್ಟ ಮಾರ್ಪಾಟುಗಳನ್ನು ಮಾಡಿಕೊಂಡು, ತನ್ನ ಕಾವ್ಯವನ್ನು ರಚಿಸಿರುವಂತೆ ತೋರುತ್ತದೆ. ಶ್ರೀಹರ್ಷನ ಸಂಸ್ಕøತ ಕಾವ್ಯ ಪ್ರಭಾವವನ್ನೂ ಈ ಕೃತಿಯಲ್ಲಿ ಅಲ್ಲಲ್ಲಿ ಕಾಣಬಹುದು. ಇದು ಹೆಸರಿಗೆ ಚಂಪೂ ಕಾವ್ಯ; ಗದ್ಯಭಾಗ ಬಹು ಕಡಿಮೆ; ದಮಯಂತಿ ನಳನನ್ನು ವರಿಸಿ ಮದುವೆಯಾದುದರಲ್ಲಿಯೂ ಕಾಡಿನಲ್ಲಿ ಅಗಲಿದ ಅವರಿಬ್ಬರು ಪುನಃ ಸೇರಿ ಸುಖದಿಂದಿರುವುದರಲ್ಲಿಯೂ ಕವಿಗೆ ಹೆಚ್ಚು ಆಸಕ್ತಿ. ಇದೊಂದು ಕಲ್ಯಾಣ ನಳಖ್ಯಾತ ಪುಣ್ಯ ಚರಿತ್ರೆ. ಇಷ್ಟಾದರೂ, ಈ ಕೃತಿಯಲ್ಲಿ ಕಥಾಭಾಗಕ್ಕಿಂತ ವರ್ಣನಾ ಭಾಗಗಳ ಕಡೆಗೇ ಕವಿಯ ಒಲವು. ಇದರ ಪರಿಣಾಮವಾಗಿ ಕಥೆಯ ಸ್ವಾರಸ್ಯ ಕುಗ್ಗಿದೆ; ಪಾತ್ರ ಪೋಷಣೆಗೂ ರಸಪೋಷಣೆಗೂ ಇದ್ದ ಅವಕಾಶವನ್ನು ಕವಿ ಪೂರ್ತಿಯಾಗಿ ಉಪಯೋಗಿಸಿಕೊಂಡಿಲ್ಲ. (ಎಂ.ವಿ.ಎಸ್.)