ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಂಬಿಟ್ಟಿಗೆ

ವಿಕಿಸೋರ್ಸ್ದಿಂದ

ಜಂಬಿಟ್ಟಿಗೆ- ಪಶ್ಚಿಮ ಕರಾವಳಿಯ ಪ್ರದೇಶದಲ್ಲಿ ಮುಖ್ಯವಾಗಿ ಕೇರಳ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಘಟ್ಟದ ಮೇಲೆ ಬೆಳಗಾಂವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಟ್ಟಡ ಕಟ್ಟುವುದಕ್ಕೆ ಉಪಯೋಗವಾಗುವ ಮಣ್ಣಿಟ್ಟಿಗೆಯಂತಿರುವ ಕೆಂಪು ಬಣ್ಣದ, ಇಟ್ಟಿಗೆ ಕಲ್ಲು (ಲ್ಯಾಟರೈಟ್), ಮುರಕಲ್ಲು ಪರ್ಯಾಯನಾಮ. ಲ್ಯಾಟಿನ್, ಭಾಷೆಯಲ್ಲಿ ಇಟ್ಟಿಗೆಗೆ ಲ್ಯಾಟರ್ ಎಂಬ ಪದ ಉಂಟು. ಇದನ್ನು ಮಲಬಾರಿನಲ್ಲಿ ಮೊದಲಿಗೆ ಗುರುತಿಸಿದ ಬ್ಯೂಕ್ಯಾನನ್ ಎಂಬ ಶಿಲಾವಿಜ್ಞಾನಿ ಇಟ್ಟಿಗೆಯಂತೆ ಉಪಯೋಗವಾಗುವ ಈ ಕಲ್ಲಿಗೆ ಲ್ಯಾಟರೈಟ್ ಎಂದು ನಾಮಕರಣ ಮಾಡಿದ. ಈ ಬಗೆಯ ಕಲ್ಲನ್ನು ಶ್ರೀಲಂಕಾ, ಬರ್ಮ, ಇಂಡೋನೇಷಿಯ ರಾಜ್ಯಗಳಲ್ಲಿ ವಿಶೇಷವಾಗಿ ಗುರುತಿಸಲಾಗಿದೆ. ಇದು ಹಾಸು ಕಲ್ಲಾಗಿ ಅನೇಕ ಕಡೆ ಕರಾವಳಿಯ ಅಂಚಿನಲ್ಲಿ ಕಾಣುತ್ತದೆ. ಇದನ್ನು ತೆಗೆಯುವಾಗ ಮೆದುವಾಗಿರುತ್ತದೆ. ಆದ್ದರಿಂದ ಇದಕ್ಕೆ ಉಳಿಯ ಸಹಾಯದಿಂದ ಯಾವ ಆಕಾರವನ್ನು ಬೇಕಾದರೂ ಕೊಡಬಹುದು. ಬಿಸಿಲಿನಲ್ಲಿ ಆರಿದ ತರುವಾಯ ಇದು ಕಲ್ಲಿನಂತೆ ಗಡುಸಾಗುತ್ತದೆ. ಮಳೆಗಾಳಿಗಳ ಹೊಡೆತಕ್ಕೆ ಸಿಕ್ಕಿದರು ಕ್ಷಯಿಸುವುದಿಲ್ಲ. ಜಂಬಿಟ್ಟಿಗೆಯಿಂದ ಕಟ್ಟಿದ ಮನೆಗಳು, ನೂರಾರು ವರ್ಷಗಳು ಕಳೆದು ಹೋಗಿದ್ದರು ಶಿಥಿಲವಾಗದೆ ಇನ್ನೂ ನಿಂತಿವೆ.

ಜಂಬಿಟ್ಟಿಗೆ ಮುಖ್ಯವಾಗಿ ಆಫ್ರಿಕ, ಆಸ್ಟ್ರೇಲಿಯ, ಭಾರತ, ಇಂಡೋನೇಷಿಯ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿ ವಿಶೇಷವಾಗಿ ಕಾಣುತ್ತದೆ. ಭಾರತದಲ್ಲಿ ಇದು ಹರಡಿರುವುದು ದಕ್ಷಿಣದಲ್ಲಿ ಮಾತ್ರ. ಇಲ್ಲಿಯೂ ಎರಡೂ ಮುಖ್ಯ ವರ್ಗಗಳು ಉಂಟು ; ಒಂದು ಕರಾವಳಿಯ ಅಂಚಿನಲ್ಲಿರುವ ಕೆಳಮಟ್ಟದ ಜಂಬಿಟ್ಟಿಗೆ, ಇನ್ನೊಂದು ಬೆಟ್ಟಗಳ ಮೇಲಿರುವ ಮೇಲುಮಟ್ಟದ ಜಂಬಿಟ್ಟಿಗೆ. ಪೂರ್ವ ಕರಾವಳಿಯಲ್ಲಿ ಕನ್ಯಾಕುಮಾರಿಯಿಂದ ಹಿಡಿದು ವಿಶಾಖಪಟ್ಟಣ, ಒರಿಸ್ಸ, ಮಿಡ್ನಾಪುರ, ವೀರಭೂಮಿ, ಬರ್ದವಾನ್ ಜಿಲ್ಲೆಯವರೆಗೂ ಜಂಬಿಟ್ಟಿಗೆಯ ಹರವನ್ನು ಕಾಣಬಹುದು. ಪಶ್ಚಿಮ ಕರಾವಳಿಯಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಮುಂಬಾಯಿಯವರೆಗೂ ಜಂಬಿಟ್ಟಿಗೆಯನ್ನು ಕಾಣಬಹುದು. ಈ ಸ್ಥಳಗಳಲ್ಲಿನ ಕಟ್ಟಡಗಳೆಲ್ಲಕ್ಕೂ ಜಂಬಿಟ್ಟಿಗೆಯನ್ನೇ ಉಪಯೋಗಿಸುತ್ತಾರೆ.

ಜಂಬಿಟ್ಟಿಗೆ ಕಲ್ಲು ಅದರ ಕೆಳಗಿರುವ ಗಡಸು ಕಲ್ಲುಗಳ ಮೇಲೆ ಒಂದು ವಿಧವಾದ ಮೇಲು ಹೊದಿಕೆಯಂತೆ ಹಬ್ಬಿರುತ್ತದೆ. ಇದು ಹೇಗೆ ಉಂಟಾಗುತ್ತದೆ ಎನ್ನುವ ವಿಷಯವಾಗಿ ನಾನಾ ತರದ ಕಾರಣಗಳು ಕೊಡಲ್ಪಟ್ಟಿವೆ. ಮುಖ್ಯವಾಗಿ ಮಳೆಯ ಶ್ರಾಯ ದೀರ್ಘವಾಗಿರುವ ಸ್ಥಳಗಳಲ್ಲಿ ಮಳೆಗಾಲದಲ್ಲಿ ಹೆಚ್ಚು ನೆಂದು ಮತ್ತೆ ಮುಂದಿನ ಬಿಸಿಲುಗಾಲದಲ್ಲಿ ಆರಿ ಒಣಗುತ್ತ ಬರುವಂಥ ವಿರುದ್ಧ ವಾತಾವರಣದಲ್ಲಿ ಎಂಥ ಗಡಸು ಕಲ್ಲು ಕೂಡ ಬೀಳು ಬಿದ್ದು ಮಣ್ಣಾಗುವ ಸಂಭವವುಂಟು. ಹಾಗೇ ಮಣ್ಣಾದರೂ ಕೆಲವು ರಾಸಾಯನಿಕ ಗುಣಗಳ ದೆಸೆಯಿಂದ ಗಡಸುತನವನ್ನು ಪಡೆದು ಕೊಚ್ಚಿ ಹೋಗದೆ ಇದ್ದಲ್ಲಿಯೇ ಶೇಖರವಾಗುವ, ಮಣ್ಣಾದರೂ ಕಲ್ಲಿನಂಥ ಗುಣವನ್ನು ಪಡೆದಿರುವ, ಇಟ್ಟಿಗೆ ಕಲ್ಲೇ ಜಂಬಿಟ್ಟಿಗೆ, ಇದರಲ್ಲಿ ಅಲ್ಯೂಮಿನಿಯಮ್ ಆಕ್ಸೈಡ್ ಅಂಶ ಹೆಚ್ಚಿರುತ್ತದೆ. ಇದು 40% ಮೀರಿದಾಗ ಅಂಥ ಜಂಬಿಟ್ಟಿಗೆ ಅಲ್ಯೂಮಿನಿಯಂ ಅದುರಾಗುತ್ತದೆ. ಆಗ ಅದಕ್ಕೆ ಬಾಕ್ಸೈಟ್ ಎಂಬ ಹೆಸರು ಬರುವುದು.

ಜಂಬಿಟ್ಟಿಗೆಗೆ ಬಣ್ಣದಲ್ಲಿ ನಾನಾ ಛಾಯೆಗಳು ಉಂಟು. ಮಣ್ಣು ಕೆಂಪು ಅಥವಾ ಕಂದು ಬಣ್ಣವೇ ಸಾಮಾನ್ಯ. ಅಲ್ಲಲ್ಲಿ ಹಳದಿ ಬಣ್ಣದ ಮಚ್ಚೆಗಳು ಕಾಣುವುದೂ ಉಂಟು. ಒಂದೇ ಕಲ್ಲಿನಲ್ಲಿ ಬಗೆಬಗೆಯ ಬಣ್ಣಗಳನ್ನೂ ಕಾಣಬಹುದು. ಕಬ್ಬಿಣಾಂಶ ಹೆಚ್ಚಿದರೆ ಕೆಂಪು ಅಥವಾ ಕಂದು ಬಣ್ಣವನ್ನು ಪ್ರದರ್ಶಿಸುವುದು. ಅಲೂಮನ ಮತ್ತು ಸಿಲಿಕಾಂಶ ಹೆಚ್ಚಿದಂತೆ ತಿಳಿ ಹಳದಿ ಅಥವಾ ಬಿಳುಪು ಛಾಯೆಯನ್ನು ತೋರಿಸುತ್ತದೆ. ಕಬ್ಬಿಣಾಂಶ ಹೆಚ್ಚಿದಾಗ ಲ್ಯಾಟರೈಟ್ ಕಬ್ಬಿಣದ ಅದುರಾಗಿ ಮಾರ್ಪಡುತ್ತದೆ. ಉತ್ತರ ಕನ್ನಡ ಮತ್ತು ಗೋವಗಳಲ್ಲಿ ಲ್ಯಾಟರೈಟ್ ಸಂಬಂಧದ ಕಬ್ಬಿಣದ ಅದುರನ್ನು ಗಣಿ ತೋಡಿ ವಿದೇಶಗಳಿಗೆ ರಫ್ತು ಮಾಡುತ್ತಾರೆ. (ಬಿ.ವಿ.ಆರ್.)

ಜಂಬಿಟ್ಟಿಗೆ ಮಣ್ಣು : ಉಷ್ಣವಲಯಗಳಲ್ಲಿರುವ ಒಂದು ಬಗೆಯ ಪ್ರತ್ಯಾಮ್ಲೀಯ ಶಿಲೆಗಳ ಮೇಲೆ ಹೆಚ್ಚು ಮಳೆ ಬಿದ್ದ ಪ್ರತಿಕ್ರಿಯೆಯಿಂದ ಉಂಟಾಗುವ ಮಣ್ಣು. ಲ್ಯಾಟರೈಟ್ ಕಲ್ಲುಗಳಿಂದ ವಿಘಟನೆಯಿಂದ ವಸ್ತುವಿನಿಂದ ಕೂಡಿರುವ ಮಣ್ಣಿಗೆ ಲ್ಯಾಟರಿಟಿಕ್ ಅಥವಾ ಜಂಬಿಟ್ಟಿಗೆ ಮಣ್ಣು ಎಂಬ ಹೆಸರಿದೆ. ಹೆಚ್ಚು ಬಸಿಯುವಿಕೆಯ ಕಾರಣದಿಂದ ಪ್ರತ್ಯಾಮ್ಲಗಳು ಕಳೆದುಹೋಗುತ್ತವೆ. ಹೀಗೆ ಬಸಿಯುವ ನೀರು ಕ್ಷಾರ ಗತಿಯುಳ್ಳದ್ದಾದ್ದರಿಂದ ಸಿಲಿಕ ಕರಗಿ ಕೆಳಮುಖವಾಗಿ ಚಲಿಸಿ, ಮೇಲ್ಮೈಯಲ್ಲಿ ಕಬ್ಬಿಣ ಮತ್ತು ಅಲ್ಯೂಮಿನಿಯಮ್ ಆಕ್ಸೈಡ್ ಶೇಖರಣೆಯಾಗುವುದು. ಈ ಮಣ್ಣುಗಳ ಬಣ್ಣ ಸಾಮಾನ್ಯವಾಗಿ ಕೆಂಪು ಇಲ್ಲವೇ ಹಳದಿ. ಇವು ರಚನೆಯಲ್ಲಿ ಜೇನುಗೂಡನ್ನು ಹೋಲುತ್ತವೆ. ದಟ್ಟವಾಗಿ ಗಟ್ಟಿಯಾಗಿರಬಹುದು. ಅಥವಾ ಕಬ್ಬಿಣ ವಸ್ತುವಿನ ಸಣ್ಣ ಸಣ್ಣ ಗಂಟುಗಳ ಸಡಿಲ ಮೊತ್ತವಾಗಿರಬಹುದು. ದಟ್ಟವಾಗಿ ಗಟ್ಟಿಯಾಗಿರುವ ಮಣ್ಣನ್ನು ಹದವಾದ ತೇವವಿದ್ದಾಗ ಕಿತ್ತು ತೆಗೆದು ಬೇಕಾದ ಅಳತೆಗೆ ಕತ್ತರಿಸಿ ಒಣಗಿಸಿ ಇಟ್ಟಿಗೆಗಳಾಗಿ ಬಳಸುತ್ತಾರೆ. ಒಣಗಿದಾಗ ಇವು ಕಲ್ಲಿನ ಹಾಗೆ ಗಟ್ಟಿಯಾಗುತ್ತವೆ.

ಈ ಮಣ್ಣುಗಳಲ್ಲಿ ಮೂಲ ಜೇಡಿ ಖನಿಜಗಳಿಲ್ಲದಿರುವುದರಿಂದ ನಮ್ಯತೆ, ಜಿಗುಟು, ಕುಗ್ಗುವುದು, ಪ್ರತ್ಯಾಮ್ಲ ವಿನಿಮಯ-ಮುಂತಾದ ಜೇಡಿಯ ಗುಣಗಳು ಅಷ್ಟಾಗಿ ಕಂಡುಬರುವುದಿಲ್ಲ. ಲ್ಯಾಟರೈಟಿನ ಪ್ರತ್ಯಾಮ್ಲ ವಿನಿಮಯ ಸಾಮಥ್ರ್ಯ 100 ಗ್ರಾಮ್, 2-4 ಮಿ.ಲಿ. ಈಕ್ವಿವಲೆಂಟ್ ಇರುತ್ತದೆ. ಲ್ಯಾಟರೈಟ್ ಮಣ್ಣಗುಗಳಿಗೆ ಪ್ರತ್ಯಾಮ್ಲ ವಿನಿಮಯ ಸಾಮಥ್ರ್ಯ 4-6 ಇರಬಹುದು. ಸಿಲಿಕಾ ಸೆಸ್ಕ್ವಿ ಆಕ್ಸೈಡ್ ಅನುಪಾತ 1 ; 35 ಕ್ಕಿಂತ ಕಡಿಮೆ ಇರುತ್ತದೆ. ಎಲ್ಲೋ ಕೆಲವೆಡೆ ಬಿಟ್ಟು ಉಳಿದೆಡೆ ಈ ಮಣ್ಣುಗಳ ಆಳ ಕಡಿಮೆ.

ಕರ್ನಾಟಕದಲ್ಲಿ ಮಲೆನಾಡು ಪ್ರದೇಶಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಘಟ್ಟದ ಕೆಳಗಿನ ತೀರಪ್ರದೇಶಗಳು ಮತ್ತು ಬೆಂಗಳೂರಿನ ಉತ್ತರಕ್ಕೆ ಕೆಲವೆಡೆ, ಅಲ್ಲದೆ ಬಿದರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಜಂಬಿಟ್ಟಿಗೆ ಮಣ್ಣು ದೊರೆಯುತ್ತದೆ. ಮಳೆಗೆ ಹೊಂದಿಕೊಂಡಿರುವ ತೋಟದ ಬೆಳೆಗಳಾದ ಕಾಫಿ, ಟೀ, ಏಲಕ್ಕಿ, ಅಡಿಕೆ, ಕಿತ್ತಲೆ-ಮೊದಲಾದವು ಈ ಪ್ರದೇಶದ ಮುಖ್ಯ ಬೆಳೆಗಳು. ಮಳೆಯ ಆಸರೆಯಿಂದ ಕಣಿವೆಗಳಲ್ಲೂ ಬೆಟ್ಟದ ಇಳಿಜಾರುಗಳಲ್ಲು ಬತ್ತವನ್ನು ಸಾಮಾನ್ಯವಾಗಿ ಬೆಳೆಸುತ್ತಾರೆ. ಮೈದಾನದಲ್ಲಿ ಗೋಚರವಾಗುವ ಸಣ್ಣ ಹಿಡುವಳಿಗಳು ಇಲ್ಲಿ ಬಹುಮಟ್ಟಿಗೆ ಕಡಿಮೆ. ಸಮುದ್ರ ತೀರಪ್ರದೇಶದಲ್ಲಿ ತೆಂಗು ಒಂದು ಮುಖ್ಯ ಬೆಳೆ.

ಈ ಮಣ್ಣಿನಲ್ಲಿ ಸುಣ್ಣದ ಅಂಶ ಕಡಿಮೆಯಿರುವುದರಿಮದ ಠಿಊ ಹೆಚ್ಚು ಹುಳಿ ಮುಖವಾಗಿರುತ್ತದೆ. ಎಲೆಗಳು ಉದುರಿ, ಕೊಳೆಯುವುದರಿಂದ ಹ್ಯೂಮಸ್ ಹೆಚ್ಚಾಗಿರುತ್ತದೆ. ಇದರಿಂದ ಸಾರಜನಕ ಅಂಶವೂ ಹೆಚ್ಚಿದ್ದು, ರಂಜಕ ಮತ್ತು ಪೋಟ್ಯಾಷುಗಳ ಕೊರತೆ ಹೆಚ್ಚು. ಸಾರಜನಕ, ರಂಜಕ ಮತ್ತು ಪೊಟ್ಯಾಷುಗಳನ್ನು ಗೊಬ್ಬರದ ಮೂಲಕ ಒದಗಿಸುವುದು ಆವಶ್ಯಕ. ಸುಣ್ಣವನ್ನು ತಕ್ಕ ಪರಿಮಾಣದಲ್ಲಿ ಆಗಾಗ ಕೊಡುವುದರಿಂದ ಮಣ್ಣಿನ ಹುಳಿಯನ್ನು ನಿವಾರಿಸಿ, ಹದವಾದ ಪರಿಸ್ಥಿತಿಯನ್ನು ಉಂಟು ಮಾಡಬಹುದು. (ಜಿ.ವಿ.ವಿ. ; ಕೆ.ಆರ್. ಜಿಎ.)