ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಾರ್ಧನ ಸ್ವಾಮಿ

ವಿಕಿಸೋರ್ಸ್ದಿಂದ

ಜನಾರ್ಧನ ಸ್ವಾಮಿ

	1504-1575. ಒಬ್ಬ ಅನುಭಾವಿ ಸಂತ. ಏಕನಾಥನ ಗುರು. ಈತ ಹುಟ್ಟಿದ್ದು ಈಗಿನ ಮಹಾರಾಷ್ಟ್ರದ ಒಂದು ಭಾಗವಾದ ಖಾಂದೇಶದ ಚಾಳೀಸಗಾಂವ್ ಎಂಬ ಹಳ್ಳಿಯಲ್ಲಿ. ಈತ ಮೊದಲು ಪರಮಾರ್ಥವನ್ನು ಒಲಿದಿರಲಿಲ್ಲ. ಒಳ್ಳೆಯ ರಾಜಕಾರಣಚತುರನಾದುದರಿಂದ ಈತನನ್ನು ಒಬ್ಬ ತುರುಕ ದೊರೆ ದೇವಗಡ ಕೋಟೆಯ ರಕ್ಷಕನಾಗಿ ನೇಮಕ ಮಾಡಿದ. ತನ್ನ ವಿವೇಕದಿಂದ ಜನಾರ್ಧನ ಸ್ವಾಮಿ ಇಹಪರವೆರಡನ್ನು ಚೆನ್ನಾಗಿ ಸಾಧಿಸಿದ. ಮುಂದೆ ಅಂಕಲಕೊಪ್ಪದಲ್ಲಿ ನರಸಿಂಹ ಸರಸ್ವತಿ ಸ್ವಾಮಿಯಿಂದ ಈತನಲ್ಲಿ ವೈರಾಗ್ಯ ಮೂಡಿತು. ಜನಾರ್ಧನ ದತ್ತಾತ್ರೇಯನ ಉಪಾಸಕನಾದರೂ ಏಕನಾಥನಿಗೆ ಪಂಡರಿಯ ಸುಲಭ ದಾರಿಯನ್ನು ತೋರಿಸಿದ. ದೇವಗಡದ ಗವಿಯೊಂದರಲ್ಲಿ ಈತನ ಸಮಾಧಿ ಇದೆ.

ಜನಾರ್ಧನ ಸ್ವಾಮಿ ಅನೇಕ ಅಭಂಗಗಳನ್ನು ರಚಿಸಿ ಭಕ್ತಿಭಾವವನ್ನು ತೋಡಿಕೊಂಡಿದ್ದಾನೆ. ಅವುಗಳಲ್ಲಿ ಆತನ ಅನುಭಾವಿ ಭಾವನೆಗಳು ಚೆನ್ನಾಗಿ ಮೂಡಿವೆ. (ಎಂ.ಎ.)