ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಪಾನೀ ಸಂಗೀತ

ವಿಕಿಸೋರ್ಸ್ದಿಂದ

ಜಪಾನೀ ಸಂಗೀತ - ಚೀನೀ ಸಂಗೀತವನ್ನು ತಳಹದಿಯಾಗಿಟ್ಟುಕೊಂಡು ಜಪಾನೀಯರು ತಮ್ಮದೇ ಸಂಗೀತದ ನಡೆಯಲ್ಲಿ ರಾಗ ತಾಳಗಳಲ್ಲಿ ಸಾಹಿತ್ಯದಲ್ಲಿ ವಾದ್ಯಗಳಲ್ಲಿ ಎರಡೂ ಕಲೆಗಳ ಮಿಶ್ರಣವನ್ನೂ ಕಾಣಬಹುದು. ಅನೇಕ ಶತಮಾನಗಳ ಕಾಲ ಇಂಥ ಮಿಶ್ರಣ ನಡೆದು ಬಂದಿತಾಗಿ ಜಪಾನೀ ಸಂಗೀತದಲ್ಲಿ ಒಂದು ಸ್ಥಿರವಾದ ಹೊಸ ನಡೆ ಏರ್ಪಟ್ಟಿದೆ. ಸುಮಾರು ಮೂರನೆಯ ಶತಮಾನದಲ್ಲಿ ಚೀನೀಯರ ಸಂಗೀತ ಕೊರಿಯವನ್ನು ಹಾದು ಜಪಾನನ್ನು ಸೇರಿತೆಂದು ಇತಿಹಾಸ ತಿಳಿಸುತ್ತದೆ.

ಜಪಾನಿನ ವಾದ್ಯಮೇಳದಲ್ಲಿ ಹಿಚಿರಿಕಿ (ಪಾಶ್ಚಾತ್ಯ ದೇಶದ ಪಿಕಲೊ ಎಂಬ ವಾದ್ಯವನ್ನು ಹೋಲುತ್ತದೆ) ಹಾಗೂ ಷೋ ಎಂಬ ಸುಶಿರವಾದ್ಯವೂ ಹಲವಾರು ವೇಣುವಾದ್ಯಗಳೂ ತಾಳಗಳೂ ಮದ್ದಳೆಗಳೂ ಇವೆ. ಸಂಗೀತ ವಿದ್ವಾಂಸರು ಚೀನದಿಂದ ಹಿಂದಿರುಗುವಾಗ ತಮ್ಮೊಡನೆ ಬಿವಾ ಮತ್ತು ಷಕುಹಜೀ ವಾದ್ಯಗಳನ್ನು ತಂದು ತಮ್ಮ ದೇಶದ ವಾದ್ಯಮೇಳವನ್ನು ಅತ್ಯಂತ ರಂಜನೀಯವನ್ನಾಗಿ ಮಾಡಿದರು. ಚೀನದಲ್ಲಿನಂತೆ ಮತಧರ್ಮಕ್ಕನುಸಾರವಾಗಿ ನಾರಾ ಮುಂತಾದ ದೇವಾಲಯಗಳಲ್ಲಿ ಜಪಾನಿನಲ್ಲಿಯೇ ಹುಟ್ಟಿ ಬೆಳೆದ ಮತ್ತೊಂದು ರೀತಿಯ ಸಂಗೀತ ಮತ್ತು ನೃತ್ಯಕ್ರಮಗಳು ಬಳಕೆಯಲ್ಲಿದ್ದುವು. ಜಪಾನಿನಲ್ಲಿ ಪ್ರಧಾನವಾಗಿ ಬಳಸುತ್ತಿದ್ದ ಇತರ ವಾದ್ಯಗಳೆಂದರೆ ಕೋಟೋ ಮತ್ತು ಕೊಳಲು, ಷಿಂಟೋ ಮತ್ತು ಬೌದ್ಧ ಮತಾಚಾರ ಹಬ್ಬಗಳಲ್ಲಿ ರೂಢಿಯಲ್ಲಿದ್ದ ಕಾಂಗಾರು ಸಂಗೀತ ಮೇಲೆ ಹೇಳಿದ ವಾದ್ಯಗಳನ್ನೊಳಗೊಂಡಿತ್ತು. ಮನೋರಂಜನೆಯೇ ಪ್ರಧಾನವಾಗಿದ್ದ ಮತ್ತೊಂದು ಸಂಗೀತ ಶೈಲಿಯೊಂದು ಮತೀಯ ಗಾಯನದ ಜೊತೆಜೊತೆಗೇ ಕ್ರಮವಾಗಿ ವೃದ್ಧಿಯಾಗುತ್ತಿತ್ತು. ಕೋಟೋ ವಾದ್ಯದ ಉಗಮ ಜಪಾನಿನಲ್ಲಿಯೇ ಆದುದೆಂದು ಕೆಲವು ಗ್ರಂಥಗಳು ಉಲ್ಲೇಖಿಸುತ್ತವೆ. 17ನೆಯ ಶತಮಾನದಲ್ಲಿ ಈ ವಾದ್ಯ ಮತೀಯ ಗಾಯನ ಮತ್ತು ಲೌಕಿಕ ಗಾಯನಗಳಲ್ಲಿಯೂ ಬಳಕೆಯಲ್ಲಿತ್ತು. ಇದು ಚೀನದಲ್ಲಿನ ಕಿನ್ ವಾದ್ಯದ ಪರಿವರ್ತನೆ ಹೊಂದಿದ ರೂಪವೆಂತಲೂ ಹೇಳುವವರಿದ್ದಾರೆ. ಸುಮಾರು 6'ಯಷ್ಟು ಉದ್ದವಿರುವ ಈ ವಾದ್ಯದ ಅನುರಣಕ ಸ್ವಲ್ಪ ಉಬ್ಬಿದೆ. ರೇಷ್ಮೆಯಿಂದ ಸುತ್ತಲ್ಪಟ್ಟಿರುವ ಹದಿಮೂರು ತಂತಿಗಳನ್ನು ವಾದ್ಯದ ಒಂದು ತುದಿಯಲ್ಲಿ ಬಿಗಿದು ಮತ್ತೊಂದು ತುದಿಯನ್ನು ಚಲಿಸುವ ಕುದುರೆಗಳ ಮೇಲೆ ಹಾಯಸಿ ಕಟ್ಟಿರುತ್ತಾರೆ. ತಂತಿಯನ್ನು ಶ್ರುತಿಗೆ ಸಿದ್ಧಪಡಿಸಿ ನಾದದಲ್ಲಿ ಸ್ವಲ್ಪ ಏರಿಳಿತಗಳು ಬೇಕಾದ ಸಂದರ್ಭಗಳಲ್ಲಿ ಈ ಚಲಿಸುವ ಕುದುರೆಗಳನ್ನು ಹಿಂದಕ್ಕೂ ಮುಂದಕ್ಕೂ ಜರುಗಿಸಿ ತೀವ್ರ ಮತ್ತು ಕೋಮಲ ಸ್ವರಗಳನ್ನು ಉತ್ಪತ್ತಿ ಮಾಡಬಹುದು. ಈ ವಾದ್ಯದಲ್ಲಿ ಪೂರ್ಣ ಶ್ರುತಿ, ಅರ್ಧ ಶ್ರುತಿ ಅಂತರಗಳನ್ನು ಪಡೆಯಲವಕಾಶವಿದೆ. ಚೀನ ಮತ್ತು ಇತರ ಪಾಶ್ಚಾತ್ಯ ದೇಶದವರಂತೆಯೇ 12 ಸ್ವರಗಳನ್ನು ಸಮಾನ ಅಂತರದಲ್ಲಿ ಒಂದು ಅಷ್ಟಕದಲ್ಲಿ ಸೇರಿಸಿ ಹಲವಾರು ಸ್ವರಶ್ರೇಣಿಗಳನ್ನು ಜಪಾನೀಯರೂ ಬಳಸುತ್ತಾರೆ. ಆದರೆ ಇವರಲ್ಲಿ ಅತಿ ಪ್ರಮುಖವಾದ ಒಂದು ಔಡವ ಸ್ವರಶ್ರೇಣಿ ಇದೆ. ಈ ಶೃತಿಗೆ ಸೇರಿಸುವ ಕ್ರಮವನ್ನು ಹಿರಾಜೋಷಿ ಎನ್ನುತ್ತಾರೆ. ಇದೇ ಕ್ರಮವಲ್ಲದೆ ಹಲವಾರು ಕ್ರಮಗಳುಳ್ಳ ಸ್ವರಶ್ರೇಣಿಗಳನ್ನು ಕಲ್ಪಿಸಿರುವುದುಂಟು. ಮೇಲೆ ಹೇಳಿದ ಸ್ವರಶ್ರೇಣಿಗೆ ಸೆಮಿಟೋನಲ್ ಪೆಂಟೊಟೋನಿಕ್ ಎಂದು ಹೆಸರು. ಈ ಸ್ವರಶ್ರೇಣಿಯ ಸ್ತರಗಳೂ ಜಟ್‍ಇಂಟೋನೇಷನ್ ಸ್ವರಶ್ರೇಣಿಯ ಸ್ವರಗಳೂ ಬಹಳ ಸಾಮ್ಯಉಳ್ಳವು. ಪ್ರಮುಖವಾದ ಮತ್ತೆರಡು ಸ್ವರಶ್ರೇಣಿಗಳೆಂದರೆ ಕುಮಾಯ್ ಅಥವಾ ಐಪ್ ಮೋಡ್ ಮತ್ತು ಯಿವಾಟೋ ಅಥವಾ ಡಿ ಮೋಡ್. ಕೋಟೋ ವಾದ್ಯದಲ್ಲಿ ಬೇರೆ ಬೇರೆ ಸ್ವರಶ್ರೇಣಿಗಳನ್ನು ಆಯ್ದುಕೊಳ್ಳುವಾಗ ಅವಕ್ಕೆ ಬೇಕಾದ ತೀವ್ರ ಮತ್ತು ಕೋಮಲ ಸ್ವರಗಳನ್ನು ಕುದುರೆಗಳನ್ನು ಜರುಗಿಸುವುದರ ಮೂಲಕ ಶೃತಿಗೆ ಹೊಂದಿಸುತ್ತಾರೆ. ಈ ರೀತಿ ವಿವಿಧ ರೀತಿಯ ಕಂಪನಾವರ್ತ ಸಂಖ್ಯೆಗಳನ್ನು ಉಂಟು ಮಾಡಿ ನಾದವೈವಿಧ್ಯವನ್ನು ಪಡೆಯಬಹುದು. ಕೋಟೋ ವಾದ್ಯ ಚೀನದ ಪ್ರಮುಖ ವಾದ್ಯವಾದ ಚಿನ್ ಜಿûತರ್ ವಾದ್ಯವನ್ನೇ ಹೋಲುತ್ತದೆ. ಜಪಾನೀ ಸಂಗೀತದಲ್ಲಿ ಸ್ವರಸಾಂಗತ್ಯ ಮತ್ತು ಧ್ವನಿಗುಣವೇ ಪ್ರಮುಖವಾದ ಅಂಶಗಳು.

ರಾಜಾಸ್ಥಾನದಲ್ಲಿ ನೆಲೆಸಿದಸಂಗೀತವನ್ನು ಮನೋರಂಜನೆಯನ್ನೇ ಮುಖ್ಯಧ್ಯೇಯವನ್ನಾಗಿಟ್ಟುಕೊಂಡು ಆಗಾಗ ಪರಿಷ್ಕರಿಸಲಾಯಿತು. ಹಲವಾರು ವಾದ್ಯಗಳನ್ನು ಪರಿವರ್ತನೆಗೊಳಿಸಿ. ಮತ್ತೆ ಹಲವಾರು ವಾದ್ಯಗಳನ್ನು ಹೊಸದಾಗಿ ಸೃಷ್ಟಿಸಿದರು. ಅವುಗಳಲ್ಲಿ ಸೆಮಿಸಾನ್ ವಾದ್ಯ ಬಹು ಮುಖ್ಯವಾದುದು. ಇವುಗಳಲ್ಲಿ ಹಲವನ್ನು ಜಪಾನಿನ ವೇದಿಕೆಯ ಮೇಲೆ ನಡೆಯುವ ನರ್ತನ ಮತ್ತು ನಾಟಕಗಳಲ್ಲಿ ಸಂಗೀತವನ್ನೊದಗಿಸುವುದಕ್ಕಾಗಿ ಬಳಸುತ್ತಿದ್ದರು. ತರುಣದಲ್ಲಿ ವಾದ್ಯಮೇಳಗಳಲ್ಲಿ ಪಾಲ್ಗೊಳ್ಳುತ್ತಿದ್ದ ಈ ವಾದ್ಯ ರಂಗಮಂಟಪದ ಸಂಗೀತದ ನಡೆಗೆ ಸರಿಹೊಂದಿ ಅಲ್ಲಿಯ ಸಂಗೀತಕ್ಕೆ ಪ್ರಧಾನವಾದ ವಾದ್ಯವಾಯಿತು. ಸೆಮಿಸಾನ್ ವಾದ್ಯ ಮೊಗೆ ಗುದ್ದಲಿಯಾಕಾರದಲ್ಲಿದ್ದು ಮೂರು ತಂತಿಗಳನ್ನು ಹೊಂದಿದೆ. ಅದರಲ್ಲಿ ಉದ್ದವಾದ ಕುತ್ತಿಗೆ ಹಾಗೂ ಚಚ್ಚೌಕವಾದ ಅನುರಣಕವಿರುತ್ತವೆ. ಈ ವಾದ್ಯದ ಎದೆ ಹಲಗೆಯನ್ನು ಬೆಕ್ಕಿನ ಧರ್ಮದಿಂದ ಮುಚ್ಚಿರುತ್ತಾರೆ. ಮೆಟ್ಟಲುಗಳಿಲ್ಲದ ಇದನ್ನು ನುಡಿಸುವಾಗ ಕೊಡಲಿಯಾಕಾರದ ಸ್ವಲ್ಪ ದೊಡ್ಡದಾದ ಕೋನದಿಂದ ತಂತಿಗಳನ್ನು ತಾಡಿಸುತ್ತಾರೆ. ಕೋಕ್‍ಯೂ ಎಂಬ ಮತ್ತೊಂದು ವಾದ್ಯ ಸೆಮಿಸಾನ್ ವಾದ್ಯವನ್ನೆ ಹೋಲುತ್ತಿದ್ದು ನಾಲ್ಕು ತಂತಿಗಳನ್ನು ಹೊಂದಿದೆ. ಹಿಚಿರಿಕಿ ಎಂಬ ಮತ್ತೊಂದು ವಾದ್ಯ ಎರಡು ಜೊಂಡುಗಳನ್ನು ಪೀಪಿಯಂತೆ ಮಾಡಿ ಸೇರಿಸಿರುವ ವಾದ್ಯಗಳ ವರ್ಗಕ್ಕೆ ಸೇರಿದುದು. ಬಾಯಿಂದ ಪೀಪಿಗೆ ಉಸಿರು ಪ್ರಸಾರವಾದಾಗ ಗಾಳಿಯ ಒತ್ತಡದಿಂದ ಗುಂಭವಾದ ನಾದ ಉತ್ಪತ್ತಿಯಾಗುತ್ತದೆ. ಈ ನಾದಕ್ಕೆ ಕರುಣರಸವನ್ನು ಉದ್ರೇಕಿಸುವ ಗುಣವಿದೆ.

ಈಚೀಚೆಗೆ ಜಪಾನೀಯ ವಾಗ್ಗೇಯಕಾರರೂ ಇತರ ಪಾಶ್ಚಾತ್ಯ ದೇಶಗಳ ಪ್ರಭಾವದಿಂದ ಅತ್ಯಾಧುನಿಕ ಸಂಗೀತವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗೂ ಜಾeóï ಮತ್ತು ಪಾಪ್ ಸಂಗೀತವನ್ನೂ ರೂಢಿಗೆ ತರುತ್ತಿದ್ದಾರೆ. ಹಲವಾರು ಹೊಸ ಪ್ರಕಾರಗಳನ್ನು ರಚಿಸಿ ಅವನ್ನು ಪಾಶ್ಚಾತ್ಯ ಸಂಗೀತ ಮತ್ತು ವಾದ್ಯಮೇಳಗಳಿಗಾಗಿ ಹಲವಾರು ರಚನೆಗಳನ್ನು ರಚಿಸುತ್ತಿದ್ದಾರೆ. ಆಧುನಿಕ ವಾಗ್ಗೇಯಕಾರನಾದ ಬುನ್ ಯೋಕೋಲನ ರಚನೆಗಳು ಪ್ರಖ್ಯಾತ ಪಾಶ್ಚಾತ್ಯ ವಾಗ್ಗೇಯಕಾರರಾದ ಬಾರ್ ಟಕ್ ಮತ್ತು ಷ್ಚುಯಂಬರ್ಗ್ ಮುಂತಾದವರ ರಚನೆಗಳನ್ನೇ ಹೋಲುತ್ತವೆ. ಶಕುಹಚಿ ಎಂಬುದು ಮತ್ತೊಂದು ಸುಶಿರ ವಾದ್ಯ, ಇದನ್ನು ನುಡಿಸುವಾಗ ಎರಡು ತುಟಿಗಳನ್ನೂ ಮುಚ್ಚಿ ಮಧ್ಯೆ ಒಂದು ಸಣ್ಣ ತೂತನ್ನು ಮಾಡಿಕೊಂಡು ಅದರ ಮೂಲಕ ನಾದೋತ್ಪತ್ತಿಯನ್ನುಂಟುಮಾಡಬೇಕು.

ಜಪಾನೀಯರ ರಾಜಾಸ್ಥಾನದ ಸಂಗೀತಕ್ಕೆ ತೋಗಾಕು ಎಂದು ಹೆಸರು. ಈ ಸಂಗೀತದಲ್ಲಿ ನಾದವೈವಿಧ್ಯಕ್ಕಾಗಿ ಟ್ರಂಪೆಟ್ ಎಂಬ ಅವನದ್ಧ ವಾದ್ಯವನ್ನೂ ಇ.ಪ್ಲಾಟ್ ಕ್ಲಾರಿನೆಟ್ ವಾದ್ಯವನ್ನೂ ರ್ಯುತೇಕಿ ಎಂಬ ವೇಣುವಾದ್ಯವನ್ನೂ ಹಿಚಿರಿಕಿ ಮುಂತಾದ ವಾದ್ಯಗಳನ್ನೂ ಬಳಸುತ್ತಿದ್ದರು. ಪಿಕಲೊ ಮತ್ತು ಬಿ.ಪ್ಲಾಟ್‍ಕ್ಲಾರಿನೆಟ್ ವಾದ್ಯ ಉಚ್ಚಸ್ಥಾಯಿಯ ಶಬ್ದಗಾಂಭಿರ್ಯವನ್ನು ನುಡಿಸುತ್ತಿದ್ದರೆ ಷೋ ಮತ್ತು ಟ್ರಂಬೋನ್ ವಾದ್ಯಗಳು ತಗ್ಗು ಸ್ಥಾಯಿಯಲ್ಲಿ ತೋಗಾಕು ಸಂಗೀತಕ್ಕೆ ಉತ್ತಮ ಸ್ಥಾನ ಸಿಕ್ಕಿತು. ಪ್ರತಿಯೊಂದು ವಾದ್ಯವೂ ತನ್ನದೇ ಆದ ವೈಶಿಷ್ಟ್ಯ. ನಾದಗುಣ, ನಾದವ್ಯಾಪ್ತಿಯನ್ನು ಪಡೆದಿರುತ್ತದೆ. ಜಪಾನೀಯರ ಕಲೆಗಳಲ್ಲಿ ಸರ್ವ ಸಾಮಾನ್ಯವಾಗಿ ಪಾಶ್ಚಾತ್ಯ ಪ್ರಭಾವ ಹೆಚ್ಚಾಗಿದ್ದು ಸಂಗೀತದಲ್ಲಿ ಅತ್ಯುತ್ಕøಷ್ಟವಾದ ಸಿಂಪೋನಿ ವಾದ್ಯಮೇಳ, ಜಾeóï ರಾಕ್ ಅಂಡ್ ರೋಲ್ ಸಂಗೀತ ಬೆಳೆಯುತ್ತಿವೆ. (ಎಂ.ಪಿ.ಆರ್.ಎ.)