ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಮ್ಮು ಮತ್ತು ಕಾಶ್ಮೀರ

ವಿಕಿಸೋರ್ಸ್ದಿಂದ

ಜಮ್ಮು ಮತ್ತು ಕಾಶ್ಮೀರ - ಭಾರತದ ಒಂದು ರಾಜ್ಯ. ಭಾರತದ ಉತ್ತರದಂಚಿನಲ್ಲಿ ವಾಯವ್ಯ ಪ್ರದೇಶಕ್ಕೆ ಸೇರಿದಂತಿರುವ ಈ ರಾಜ್ಯ ಉ.ಅ. 32ಲಿ 17' -35ಲಿ 58'. ಪೂ.ರೇ. 73ಲಿ 26' - 80ಲಿ 30' ವರೆಗೆ ವಿಸ್ತರಿಸಿದೆ. ಈ ರಾಜ್ಯವನ್ನು ದಕ್ಷಿಣದಲ್ಲಿ ಹಿಮಾಚಲ್ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳೂ ಪೂರ್ವ ಮತ್ತು ಉತ್ತರದಲ್ಲಿ ಟಿಬೆಟ್ ಮತ್ತು ಚೀನ, ಹಾಗೂ ಆಫ್ಘಾನಿಸ್ತಾನ ಪಶ್ಚಿಮದಲ್ಲಿ ಪಾಕಿಸ್ತಾನ ಸುತ್ತುವರೆದಿವೆ. ಈ ರಾಜ್ಯದ ವಿಸ್ತೀರ್ಣ 2,22,236 ಚ.ಕಿ.ಮೀ. (ಇದರಲ್ಲಿ 78,114 ಚ.ಕಿ.ಮೀ ಪ್ರದೇಶವನ್ನು ಪಾಕಿಸ್ತಾನ ನ್ಯಾಯಬಾಹಿರವಾಗಿ ಆಕ್ರಮಿಸಿಕೊಂಡಿದೆ. 5,180 ಚ.ಕಿ.ಮೀ. ಪ್ರದೇಶವನ್ನು ಪಾಕಿಸ್ತಾನ ಚೀನ ದೇಶಕ್ಕೆ ನೀಡಿದೆ ಜೊತೆಗೆ ಭಾರತದ 37,555 ಚ.ಕಿ.ಮೀ ಪ್ರದೇಶವನ್ನು ನ್ಯಾಯಬಾಹಿರವಾಗಿ ಚೀನ ಆಕ್ರಮಿಸಿಕೊಂಡಿದೆ. (ಆಕ್ರಮಿತ ಪ್ರದೇಶ ಬಿಟ್ಟು) ಜನಸಂಖ್ಯೆ 1,00,69,987 (2001). ರಾಜಧಾನಿ ಶ್ರೀನಗರ ಜಮ್ಮು ಚಳಿಗಾಲದ ಆಡಳಿತಕೇಂದ್ರ.

ಭೂವಿಜ್ಞಾನ : ಈ ಪ್ರದೇಶದ ಆರ್ಷೇಯ ಕಲ್ಪದ ಶಿಲೆಗಳಿಗೆ ಡಿ.ಎನ್. ವಾಡಿಯ ಸಲ್ಕಲ ಶಿಲಾಸಮುದಾಯ ಎಂದು ಹೆಸರು ಕೊಟ್ಟಿದ್ದಾರೆ. ಇವು ಐರ್ ಪಂಜಲ್ ಮತ್ತು ನಂಗಪರ್ಬಾತ್ ಪ್ರದೇಶಗಳಲ್ಲಿ, ಅತ್ಯುತ್ತಮವಾಗಿ ರೂಪುಗೊಂಡಿವೆ. ಇವು ಸ್ಲೇಟು, ಫಿಲ್ಲೈಟ್, ಬೆಣಚುಶಿಲೆ, ಅಭ್ರಕ ಸಿಸ್ಟ್, ನೈಸ್, ಸುಣ್ಣಶಿಲೆ ಮತ್ತು ಡಾಲೊಮೈಟುಗಳಿಂದ ಕೂಡಿವೆ. ಹಿಮಾಲಯದ ಭೂಚಲನೆಯ ಪರಿಣಾಮವಾಗಿ ಇವು ಮಡಿಚಿ ಮಡಿಕೆಗಳಾಗಿ, ಕಿರಿಯ ಶಿಲೆಗಳಿಂದ ಪರ್ವೋಕಾರ್ಬಾನಿಫೆರಸ್ ಶಿಲೆಗಳ ಮೇಲೆ ಚಾಚಿವೆ. ಇವು ಪ್ರಾದೇಶಿಕ ಅಂತಸ್ಸರಣ ಕಾರ್ಯಕ್ಕೊಳಗಾಗಿ ಅಧಿಕ ಮಟ್ಟದ ರೂಪಾಂತರವನ್ನು ವ್ಯಕ್ತಪಡಿಸುತ್ತವೆ. ಈ ಶಿಲೆಗಳ ಮೇಲೆ ಸ್ಲೇಟುಗಳಿವೆ. ಇವಕ್ಕೆ ಡೋಗ್ರಾ ಸ್ಲೇಟುಗಳು ಎಂದು ಹೆಸರು. ಇವು ಕಡಪ ಮತ್ತು ವಿಂಧ್ಯನ್ ಶಿಲೆಗಳಿಗೆ ಸರಿಸಮಾನವಾದ ಪುರಾಣಕಲ್ಪದ ಶಿಲೆಗಳು. ಲಿಡಾರ್ ಕಣಿವೆ ಮತ್ತು ವಿಂಧ್ಯನ್ ಶಿಲೆಗಳಿಗೆ ಸರಿಸಮಾನವಾದ ಪುರಾಣಕಲ್ಪದ ಶಿಲೆಗಳು. ಲಿಡಾರ್ ಕಣಿವೆ ಮತ್ತು ಶಾಮ್‍ಸ್- ಅಬಾರಿ ಪ್ರದೇಶದ ಹುಂಡವಾರ ಮುಂತಾದ ಕಡೆಗಳಲ್ಲಿ, ಡೋಗ್ರಾ ಸ್ಲೇಟುಗಳ ಮೇಲೆ ಜೀವ್ಯವಶೇಷಗಳಿಂದ ಕೂಡಿದ ಪ್ರಾಚೀನ ಕಲ್ಪದ ಶಿಲೆಗಳಿವೆ. ತಳದಲ್ಲಿ ಜೇಡುಶಿಲೆ ಮತ್ತು ಬೆಣಚುಶಿಲೆ ಮತ್ತು ಎರೆಹುಳುಗಳ ಜಾಡುಗಳು ಇವೆ. ಇವು ಕೇಂಬ್ರಿಯನ್ ಯುಗದ ಆದಿಕಾಲದವು. ಮೇಲ್ಭಾಗದಲ್ಲಿ ಟ್ರೈಲೊಬೈಟ ಮತ್ತು ಬಾಹುಪಾದಿ ಗುಂಪಿನ ಪ್ರಾಣಿಗಳ ಅವಶೇಷಗಳಿವೆ. ಇವು ಕೇಂಬ್ರಿಯನ್ ಅಂತ್ಯ ಕಾಲವನ್ನು ಸೂಚಿಸುತ್ತವೆ. ಇವು ಸ್ಪಿಟಿ ಮತ್ತು ಸಾಲ್ಟ್ ರೇಂಜ್ ಪ್ರದೇಶಗಳ ಪ್ರಾಣಿಗಳನ್ನು ಹೋಲದೆ, ಚೀನ ಮತ್ತು ಪರ್ಷಿಯಾದ ಪ್ರಾಣಿ ವರ್ಗವನ್ನು ಹೋಲುವುವು. ಆರ್ಡೋವೀಶಿಯನ್ ಯುಗದ ಶಿಲಾಸಮುದಾಯ ಕೆಲವೇ ಸ್ಥಳಗಳಲ್ಲಿ ಮಾತ್ರ ಕಾಣಬರುತ್ತದೆ. ಆದರೆ ಇದರಲ್ಲಿ ಉತ್ಕøಷ್ಟ ರೀತಿಯಲ್ಲಿ ರಕ್ಷಿತವಾಗಿರುವ ಅವಶೇಷಗಳಿಲ್ಲ. ಸೈಲೂರಿಯನ್ ಯುಗದ ಶಿಲೆಗಳು ಲಿಡಾರ್ ಕಣಿವೆಯಲ್ಲಿ ವಿಮುಖ ಮಡಿಕೆಯಾಗಿ ಹೊರಕಾಣಿಸಿವೆ. ಇವು ಮರಳು ಮಿಶ್ರ ಜೇಡುಶಿಲೆ ಮತ್ತು ಹಳದಿ ಸುಣ್ಣಶಿಲೆಗಳಿಂದ ಕೂಡಿ, ಶಿಲಾಸಂಯೋಜನೆಯಲ್ಲಿ ಆರ್ಡೋವೀಶಿಯನ್ ಶಿಲೆಗಳನ್ನು ಹೋಲಿದರೂ ಇವುಗಳಲ್ಲಿ ಹೇರಳವಾದ ಜೀವ್ಯವಶೇಷಗಳಿರುವುದರಿಂದ ಇವನ್ನು ಸುಲಭವಾಗಿ ಗುರುತಿಸಬಹುದು. ಈ ಕಾಲದ ಜೀವರಾಸಿ ಉತ್ಕøಷ್ಟ ರೀತಿಯಲ್ಲಿ ರಕ್ಷಿತವಾಗಿರುವ ಭಾರತದ ಕೆಲವೇ ಪ್ರದೇಶಗಳಲ್ಲಿ ಇದು ಒಂದು. ಆರ್ತಿಸ್, ಸ್ಟ್ರೋಪೊಮೀನ ಮುಂತಾದ ಬಾಹುಪಾದಿಗಳು, ಹವಳಗಳು ಮತ್ತು ಕ್ರೈನಾಯಿಡುಗಳು ಈ ಶಿಲಾ ಸಮುದಾಯದಲ್ಲಿ ಸಿಕ್ಕುವ ಮುಖ್ಯ ಜೀವ್ಯವಶೇಷಗಳು. ಈ ಶಿಲಾಸಮುದಾಯದ ಮೇಲೆ ಗಡಸು ಸ್ವಭಾವದ 3,000 ದಪ್ಪವಿರುವ ಜೀವ್ಯವಶೇಷರಹಿತ ಬಿಳಿ ಬೆಣಚು ಶಿಲೆಗಳಿವೆ. ಇವಕ್ಕೆ ಮುತ್ ಬೆಣಚುಶಿಲೆಗಳು ಎಂದು ಹೆಸರು. ಇವು ಎಲ್ಲ ರೀತಿಯಲ್ಲಿಯೂ ಸ್ಪಿಟಿ ಪ್ರದೇಶದ ಮುತ್ ಬೆಣಚುಶಿಲೆಗಳನ್ನು ಹೋಲುತ್ತವೆ. ಶಿಲಾಪೇರಿಕೆಯ ಕ್ರಮದಿಂದ ಇವು ಭಾಗಶಃ ಸೈಲೂರಿಯನ್ ಅಂತ್ಯಕಾಲ ಮತ್ತು ಡಿವೋನಿಯನ್ ಯುಗದ ನಿಕ್ಷೇಪಗಳೆಂದು ಹೇಳಬಹುದು. ಲಿಡಾರ್ ಕಣಿವೆಯಲ್ಲಿ ಮುತ್ ಬೆಣಚುಶಿಲೆಗಳ ಮೇಲೆ ಕಾರ್ಬಾನಿಫೆರಸ್ ಯುಗದ ಶಿಲೆಗಳು ನಿಕ್ಷೇಪವಾಗಿವೆ. ಇವನ್ನು ಎರಡು ಭಾಗಗಳನ್ನಾಗಿ ವಿಭಾಗಿಸಬಹುದು. ಇದರ ಕೆಳಭಾಗ ಸುಣ್ಣಶಿಲೆ. ಅದರಲ್ಲಿ ಸಿರಿಂಗೋಥೀರಿಸ್ ಬಾಹುಪಾದಿಯ ಅವಶೇಷಗಳು ಅಧಿಕವಾಗಿರುವುದರಿಂದ ಅದಕ್ಕೆ ಸಿರಿಂಗೋಥೀರಿಸ್ ಸುಣ್ಣಶಿಲೆ ಎಂದು ಹೆಸರು ಬಂದಿದೆ. ಮೇಲ್ಭಾಗಕ್ಕೆ ಫೆನೆಸ್ಟೆಲಾ ಜೇಡುಶಿಲೆಗಳು ಎಂದು ಹೆಸರು. ಇವೆರಡರ ಮಧ್ಯೆ ಜೀವ್ಯವಶೇಷರಹಿತ ಪದರುಗಳಿವೆ. ಜೀವ್ಯವಶೇಷರಹಿತವಾದ ಈ ಪದರಗಳು ಅನುಕ್ರಮವಾಗಿ ಸ್ಪಟಿ ಪ್ರದೇಶದ ಲಿಪಾಕ್ ಮತ್ತು ಪೊ ಶ್ರೇಣಿಗಳ ಸಮಕಾಲಿನ ಶಿಲೆಗಳು.

ಕಾರ್ಬಾನಿಫೆರಸ್ ಯುಗವಾದ ಬಳಿಕ ಒಂದು ಮಹಾಪ್ರಳಯವಾಯಿತು. ಇದಕ್ಕೆ ಹರ್ಷೀನಿಯನ್ ಪ್ರಳಯ ಎಂದು ಹೆಸರು. ಇದು ಕಾಶ್ಮೀರವನ್ನು ಭೂಮಟ್ಟಕ್ಕೆ ತಂದು, ಅದನ್ನು ಜ್ವಾಲಾಮುಖಿಗಳ ಚಟುವಟಿಕೆಯ ಕೇಂದ್ರವನ್ನಾಗಿ ಪರಿವರ್ತಿಸಿತು. ಈ ಕಾರ್ಯ ಮೊದಲು ಸ್ಫೋಟಕ ರೀತಿಯದಾಗಿತ್ತು. ಶಿಲಾಚೂರುಗಳು ಉಗುಳುವಿಕೆ ಪ್ರಾರಂಭವಾಗಿ, ಈ ಕಾರ್ಯ ಪರ್ಮಿಯನ್ ಯುಗದ ಆದಿಯಲ್ಲಿ ತೀವ್ರಗತಿ ಮುಟ್ಟಿದ ಬಳಿಕ, ಕ್ರಮೇಣ ಇಳಿಮುಖವಾಯಿತು. ಒಂದು ಕಡೆ ಜ್ವಾಲಾಮುಖಿಯ ಕಾರ್ಯಾಚರಣೆಯಾಗುತ್ತಿದ್ದರೆ ಮತ್ತೊಂದು ಕಡೆ ಸಾಗರಾಕ್ರಮಣವಾಯಿತು. ಆದ್ದರಿಂದಲೇ ಜ್ವಾಲಾಮುಖಿಜ ಶಿಲೆಗಳು ಮತ್ತು ಸಾಗರಜನಿತ ಶಿಲೆಗಳನ್ನು ಪಕ್ಕಪಕ್ಕದಲ್ಲಿಯೇ ಈ ಪ್ರದೇಶದಲ್ಲಿ ಕಾಣುತ್ತೇವೆ. ಜೊತೆಗೆ ಗೋಂಡ್ವಾನ ನಿಕ್ಷೇಪಗಳೂ ಇವೆ. ಸ್ಫೋಟಕವಸ್ತುಗಳಿಂದಾದ ನಿಕ್ಷೇಪಗಳಿಗೆ ಅಗ್ಲಾಮರಿಟಿಕ್ ಸ್ಲೇಟುಗಳೆಂದೂ ಶಿಲಾರಸದಿಂದಾದವುಗಳಿಗೆ ಪಂಜಾಲ್ ಟ್ರ್ಯಾಪ್ ಎಂದೂ ಹೆಸರು. ಪಂಜಾಲ್ ಟ್ರ್ಯಾಪುಗಳು ಹಸಿರು ಅಥವಾ ಊದಾ ಬಣ್ಣದವು. ಇವುಗಳಲ್ಲಿ ನಾನಾ ವಿಧಗಳ ಭಿನ್ನ ಒಳರಚನೆಗಳಿವೆ. ಇವು ಮುಖ್ಯವಾಗಿ ಆಂಡಿಸೈಟ್ ಮತ್ತು ಬೆಸಾಲ್ಟ್ ಶಿಲೆಗಳಿಂದಾಗಿವೆ. ಈ ಶಿಲೆಗಳ ಮಧ್ಯೆ ಕೆಲವೆಡೆ ಗ್ಲಾಸಾಪ್ಟರಿಸ್ ಇಂಡಿಕ ಮತ್ತು ಗಂಗಮಾಪ್ಟರಿಸ್ ಕಾಶ್ಮೀರೆನ್ಸಿಸ್ ಎಂಬ ಸಸ್ಯಾವಶೇಷಗಳಿಂದ ಕೂಡಿದ ಜಲಜಶಿಲೆಗಳಿವೆ. ಇವುಗಳಿಗೆ ಗಂಗಮಾಪ್ಟರಿಸ್ ಪದರುಗಳೆಂದು ಹೆಸರು. ಇವು ಕಾರ್ಬಾನಿಫೆರಿಸ್ ಅಂತ್ಯ ಮತ್ತು ಪೆರ್ಮಿಯನ್ ಆದಿಕಾಲವನ್ನು ಸೂಚಿಸುತ್ತವೆ. ಇವುಗಳಲ್ಲಿ ಆರ್ಕಿಗೋಸಾರಸ್ ಆರ್ನಾಟಸ್ ಎಂಬ ದ್ವಿಚರ ಪ್ರಾಣಿ ಮತ್ತು ಆಮ್ಲಿಪ್ಟರಸ್ ಮೀನುಗಳ ಅವಶೇಷಗಳಿವೆ. ಇವುಗಳ ಮೇಲೆ ಝೀವಾನ್ ಮತ್ತು ಬಾರುಸ್ ಎಂಬಲ್ಲಿ ಪ್ರೋಟೊರೆಟಿಫೋರ ಆಮ್ಟ ಮುಂತಾದ ಬ್ರಯೊeóÉೂೀವ ಮತ್ತು ಪರ್ಮಿಯನ್ ಯುಗದ ವಿಶಿಷ್ಟ ಬಾಹುಪಾದಿಗಳು ಮತ್ತು ಹವಳಗಳಿಂದ ಕೂಡಿದ ಸಾಗರಶಿಲೆಗಳಿವೆ. ಇವು ಸಾಲ್ಟ್ ರೇಂಜಿನ ಪೊಡಕ್ಟಸ್ ಶಿಲಾಸಮುದಾಯದ ಮೇಲ್ಭಾಗದ ಸಮಕಾಲೀನ ಶಿಲೆಗಳು.

ಕಾಶ್ಮೀರ ಹeóÁರ ಪ್ರದೇಶದಲ್ಲಿ ಡೋಗ್ರಾ ಸ್ಲೇಟುಗಳ ಮೇಲೆ ಮತ್ತು ಟ್ರಯಾಸಿಕ್ ಶಿಲೆಗಳ ಕೆಳಗೆ ಜೀವ್ಯವಶೇಷರಹಿತ ಶಿಲಾರಾಸಿ ಇದೆ. ಇವನ್ನು ಜೀವ್ಯವಶೇಷರಹಿತ ಪ್ರಾಚೀನ ಜೀವಕಲ್ಪ ಶಿಲೆಗಳು ಎಂದು ಕರೆಯಲಾಗಿದೆ. ಇವುಗಳ ಮಧ್ಯೆ ನೀರ್ಗಲ್ಲು ನಿಕ್ಷೇಪ ಗುಂಡುಶಿಲೆ ಇದೆ. ಇದಕ್ಕೆ ತಾನಕ್ಕಿ ಗುಂಡು ಶಿಲೆ ಎಂದು ಹೆಸರು. ಇದರ ಕೆಳಗಿರುವ ಶಿಲೆಗಳಿಗೆ ತನವಾಲ್ ಶಿಲಾಶ್ರೇಣಿ ಎಂದು ಹೆಸರು. ಇದರ ವಯಸ್ಸನ್ನು ನಿಖರವಾಗಿ ನಿರ್ಧರಿಸುವುದು ಕಷ್ಟ. ಇವು ಕೇಂಬ್ರಿಯನ್ ಕಾಲದಿಂದ ಕಾರ್ಬಾನಿಫೆರಿಸ್ ಮಧ್ಯಕಾಲದ ವರೆಗಿನ ಯಾವ ಕಾಲವನ್ನಾದರೂ ಪ್ರತಿನಿಧಿಸಬಹುದು. ತಾನಕ್ಕಿ ಗುಂಡುಸಿಲೆಯ ಮೇಲೆ ಸುಣ್ಣಶಿಲೆ ಮತ್ತು ಡಾಲೊಮೈಟುಗಳಿವೆ. ಇದನ್ನು ಇನ್ಫ್ರಟ್ರಯಸ್ ಎಂದು ಕರೆಯಲಾಗಿದೆ. ಟ್ರಯಾಸಿಕ್ ಶಿಲಾಸಮುದಾಯ ಕಾಶ್ಮೀರದ ಭೂಕಡಿತದಲ್ಲೆಲ್ಲ ಅತ್ಯುತ್ತಮವಾಗಿ ರೂಪುಗೊಂಡು ಎದ್ದುಕಾಣುತ್ತದೆ. ಇದರಲ್ಲಿ ನೀಲಿ ಮತ್ತು ಬೂದುಬಣ್ಣದ ಸುಣ್ಣಶಿಲೆಗಳು ಮತ್ತು ಡಾಲೋಮೈಟುಗಳು ಪ್ರಮುಖ ಶಿಲೆಗಳು. ಅವು 3,000 ಅಡಿಗಳಷ್ಟು ಸಂಚಯಿಸಿ ಸ್ಪಿಟಿ ಪ್ರದೇಶದ ಟ್ರಯಾಸಿಕ್ ಶಿಲೆಗಳನ್ನೆಲ್ಲ ಪ್ರತಿನಿಧಿಸುವುದಲ್ಲದೆ ದಪ್ಪದಲ್ಲಿ ಅವನ್ನು ಮೀರಿಸಿವೆ. ಆದರೆ ಜೀವ್ಯವಶೇಷಗಳು ಹೇರಳವಾಗಿಲ್ಲ. ಈ ಶಿಲೆಗಳು ಸಿಂಧ್, ಲಿಡಾರ್ ಮತ್ತು ವಾದ್ರ್ವಾನ್ ಕಣಿವೆಗಳು. ಗುರೈಲ್ ಮತ್ತು ಲಡಾಕ್ ಪ್ರದೇಶಗಳಲ್ಲಿ ಅತ್ಯುತ್ತಮವಾಗಿ ರೂಪುಗೊಂಡಿವೆ. ಪೀರ್ ಪಂಜಲ್ ಮತ್ತು ಹeóÁರಪ್ರದೇಶಗಳಲ್ಲಿ ಮೇಲ್ಭಾಗ ಮಾತ್ರ ರೂಪುಗೊಂಡಿವೆ.

ಕಾಶ್ಮೀರ ಪ್ರಾಂತ್ಯದಲ್ಲಿ ಜುರಾಸಿಕ್ ಯುಗದ ಶಿಲೆಗಳು ಅತಿ ವಿರಳ. ಪೀರ್‍ಪಂಜಲ್ ಪ್ರದೇಶದ ಬನಿಹಾಲ್ ಮತ್ತು ಲಡಾಕ್ ಪ್ರದೇಶಗಳಲ್ಲಿ ಟ್ರಯಾಸಿಕ್ ಸ್ತೋಮದ ಮೆಗಲೊಂಡಾನ್ ಸುಣ್ಣಶಿಲೆಯ ಸಂಚಯನ ಜುರಾಸಿಕ ಯುಗದ ಆದಿಕಾಲಕ್ಕೂ (ಲಯಾಸಿಕ್) ಮುಂದುವರಿದಿದೆ. ಇವುಗಳ ಮೇಲೆ ಕಪ್ಪು ಬಣ್ಣದ ಸ್ಪಿಟೀ ಜೇಡು ಶಿಲೆಗಳು ನಿಕ್ಷೇಪವಾಗಿವೆ. ಈ ಶಿಲೆಗಳಲ್ಲಿ ಮ್ಯಾಕ್ರೋಕೆಫಲಸ್ ಇತ್ಯಾದಿ ಅಮ್ಮೊ ನೈಟುಗಳೂ ಅವಿಕ್ಯುಲ, ಪೆಕ್ಟೆನ್, ಸೆರಿತಿಯಮ್, ನರಿನಿಯ ಮುಂತಾದ ಕಪ್ಪೆಚಿಪ್ಪುಗಳೂ ಇವೆ. ಹeóÁರ ಪ್ರದೇಶದಲ್ಲಿ ಜುರಾಸಿಕ್ ನಿಕ್ಷೇಪದ ಎರಡು ಮುಖಗಳನ್ನು ಕಾಣಬಹುದು. ಉತ್ತರ ಭಾಗದಲ್ಲಿರುವ ನಿಕ್ಷೇಪಗಳು ಶಿಲಾ ಸಂಯೋಜನೆ ಮತ್ತು ಜೀವ್ಯವಶೇಷಗಳಲ್ಲಿ ಸ್ಪಿಟಿ ಜೇಡುಶಿಲೆಗಳನ್ನು ಹೋಲುತ್ತವೆ. ದಕ್ಷಿಣ ಭಾಗದ ನಿಕ್ಷೇಪಗಳು ತೀರ ನಿಕ್ಷೇಪಗಳು. ಇವು ಸಾಲ್ಟ್ ರೇಂಜ್ ಪ್ರದೇಶದ ಶಿಲೆಗಳನ್ನು ಹೋಲುತ್ತವೆ. ಜುರಾಸಿಕ್ ಯುಗದ ಶಿಲೆಗಳು ಅತಿವಿರಳವಾದರೆ, ಕ್ರೀಟೇಷಸ್‍ಯುಗದ ಶಿಲೆಗಳು ಅತ್ಯಂತ ವಿರಳ, ಗ್ರಾಫಿಯ ವೆಸಿಕ್ಯುಲೋಸವಿರುವ ಶಿಲೆಗಳು ಬುರ್ಜಿಲ್, ಡ್ರ್ಯಾಸ್, ಲಡಾಕ್ ಮುಂತಾದ ಕಡೆಗಳಲ್ಲಿರುವುದು ಕ್ರಿಟೇಷಸ್ ಶಿಲೆಗಳು ಇರುವಿಕೆಯ ಕುರುಹು. ಈ ಶಿಲೆಗಳಲ್ಲಿ ಗ್ರ್ಯಾನೈಟು. ಗ್ಯಾಬ್ರೊ ಮತ್ತು ಪೆರಿಡೊಟೈಟುಗಳು ಅಂತಸ್ಸರಣವಾಗಿರುವುದು ಒಂದು ವಿಶೇಷ ಸಂಗತಿ. ಗ್ರ್ಯಾನೈಟು ಹಿಮಾಲಯ ಪ್ರದೇಶದಲ್ಲಿ ಸಿಗುವ ಮೂರು ವಿಧಗಳಲ್ಲಿ ಒಂದು. ಆದ್ದರಿಂದ ಈ ಗ್ರ್ಯಾನೈಟು ನವಜೀವಿಕಲ್ಪದಲ್ಲಿ ರೂಪಗೊಂಡಿತೆಂಬುದು ನಿರ್ವಿವಾದವಾದಂತಾಯಿತು. ಲಡಾಕಿನಲ್ಲಿ ಪೆರಿಡೂಟೈಟ್ ಮತ್ತು ಗ್ಯಾಬ್ರೊಗಳ ಅಂತಸ್ಸರಣದಿಂದ ಕ್ರೋಮೈಟ್ ನಿಕ್ಷೇಪವಾಗಿವೆ. ಈ ಕಾಲದಲ್ಲಿ ಜ್ವಾಲಾಮುಖಿ ಕಾರ್ಯಾಚರಣೆಯೂ ನಡೆದಿದೆ. ಹeóÁರ ಪ್ರಾಂತ್ಯದ ಉತ್ತರ ಮತ್ತು ದಕ್ಷಿಣ ಭಾಗಗಳೆರಡರಲ್ಲೂ ಕ್ರಿಟೇಷಸ್ ಯುಗದ ಗುಯಮಲ್ ಮರಳುಸಿಲೆ ಮತ್ತು ಚಿಕ್ಕಿಮ್ ಜೇಡುಶಿಲೆಗಳು ರೂಪುಗೊಂಡಿವೆ. ಇವುಗಳಲ್ಲಿ ಅಮ್ಮೊನೈಟುಗಳು ಹೇರಳವಾಗಿವೆ. ಇವು ಮತ್ತು ಇಯೋಸೀನ್ ಶಿಲೆಗಳ ಮಧ್ಯೆ ಇರುವ ಲ್ಯಾಟರೈಟ್ ನಿಕ್ಷೇಪ ಅನನುರೂಪತೆಯನ್ನು ವ್ಯಕ್ತಪಡಿಸುತ್ತದೆ.

ಟೆತಿಸ್ ಸಾಗರದಲ್ಲಿ ಸಂಚಯಿಸಿದ ನಿಕ್ಷೇಪಗಳೆಲ್ಲ ಭೂಚಲನೆಗೊಳಗಾಗಿ ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಹಿಮಾಲಯ ಪರ್ವತಗಳಾಗಿ ಮೇಲೊಗೆಯಲ್ಪಟ್ಟವು. ಈ ಕಾರ್ಯ ಇಯೋಸೀನ್ ಯುಗದ ಮಧ್ಯದಲ್ಲಿ ನಡೆಯಿತು. ಇದರ ಪರಿಣಾಮವಾಗಿ ಟೆತಿಸ್ ಸಾಗರದ ನೀರು ಟಿಬೆಟ್, ಹಿಮಾಲಯ ಪ್ರದೇಶಗಳಿಂದ ಸಿಂಧ್-ಬಲೂಚಿಸ್ತಾನ ಮತ್ತು ಅಸ್ಸಾಮ್-ಬರ್ಮ್ ಖಾರಿಗಳ ಮೂಲಕ ನಿರ್ಗಮಿಸಿತು. ಆದರೆ ಇದು ಲಡಾಕ್, ಹುಂಡೆಸ್, ಕಮಾಯೂನ್ ಪ್ರದೇಶಗಳಲ್ಲಿ ಸರೋವರಗಳ ರೂಪದಲ್ಲಿ ಉಳಿಯಿತು. ಆದ್ದರಿಂದ ಇಯೋಸೀನ್ ಯುಗದ ಆದಿ ಮತ್ತು ಮಧ್ಯಕಾಲಗಳನ್ನು ಪ್ರತಿನಿಧಿಸುವ ರಾಣಿಕೂಟ್ ಮತ್ತು ಲಾಕಿ ಶಿಲಾಶ್ರೇಣಿಗಳು ಕೋಹಟ್‍ನಿಂದ ಹeóÁರ ಪರ್ವತ, ಕಾಶ್ಮೀರಗಳ ಮೂಲಕ ಕಾಶ್ಮೀರದಲ್ಲಿ ಹಿಮಾಲಯ ಪರ್ವತಗಳ ಮಂಡಿಬಾಗಿಲಿನಲ್ಲಿ ತಿರುಗಿ ಪೀರ್‍ಪಾಂಜಲ್‍ವರೆಗೆ ವಿಸ್ತರಿಸಿವೆ. ರಾಣಿಕೋಟ್ ಶಿಲೆಗಳು ನಮ್ಮುಲಿಟಿಕ್ ಸುಣ್ಣ ಶಿಲೆಯಿಂದ ಕೂಡಿವೆ. ಇವಕ್ಕೆ ಪರ್ವತಸುಣ್ಣಶಿಲೆ ಎಂದು ಹೆಸರು. ಈ ಶಿಲೆಗಳ ಮೇಲೆ ಇಂಗಾಲಯುಕ್ತ ಜೇಡುಶಿಲೆಗಳಿವೆ. ಇವು ಲಾಕಿಶಿಲೆಗಳಿಗೆ ಸಮಕಾಲಿನ ಶಿಲೆಗಳು. ಪೀರ್ ಪಂಜಾಲ್‍ಗೆ ದಕ್ಷಿಣದಲ್ಲಿ ಸಿಮ್ಲಾಶಿಲೆಗಳನ್ನು ಹೋಲುವ ನಿಕ್ಷೇಪಗಳಿವೆ. ಇವನ್ನು ಸುಬತು ಶಿಲಾಶ್ರೇಣಿ ಎನ್ನುತ್ತೇವೆ. ಇವು ಇಯೋಸೀನ್ ನಿಕ್ಷೇಪಗಳ ಎರಡನೆಯ ಮುಖ. ಕಾಶ್ಮೀರ ಪ್ರದೇಶದಲ್ಲಿ ಆಲಿಗೋಸೀನ್ ಕಾಲದ ಶಿಲೆಗಳು ಸಂಚಯಿಸಿಲ್ಲ. ಇನ್ನು ಮುಂದಿನ ಶಿಲೆಗಳು ಜಮ್ಮು ಪ್ರಾಂತ್ಯದಲ್ಲಿ ಮಾತ್ರ ರೂಪುಗೊಂಡಿವೆ. ಇಲ್ಲಿ ಇಯೋಸೀನ್ ಶಿಲೆಗಳ ಮೇಲೆ ಕೆಂಪು ಮತ್ತು ಊದಾ ಬಣ್ಣದ ಮರಳುಶಿಲೆಗಳು ಮತ್ತು ಜೇಡುಶಿಲೆಗಳು ಅನನುರೂಪವಾಗಿ ನಿಕ್ಷೇಪಿಸಿವೆ. ಇವುಗಳಲ್ಲಿ ಪಾಮ್ ಜಾತಿ ಮರಗಳ ಎಲೆಗಳು, ಸಬಲ್ ಮೇಜರ್ ಮುಂತಾದವುಗಳ ಅವಶೇಷಗಳಿವೆ. ಇವು ಇಯೋಸೀನ್ ಯುಗದ ಆದಿಕಾಲದವು. ಇವನ್ನು ಮುರ್ರಿ ಶಿಲಾಶ್ರೇಣಿ ಎಂದು ಕರೆಯಲಾಗಿದೆ.

ಮಯೋಸೀನ್ ಆದಿಕಾಲದ ಬಳಿಕ ಹಿಮಾಲಯದ ಮೇಲೊಗೆತದ ಕಾರ್ಯಾಚರಣೆಯ ಮತ್ತೊಂದು ಹಂತ ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಟೆತಿಸ್ ಸಾಗರದಲ್ಲಿ ಸಂಚಯಿಸಿದ್ದ ನಿಕ್ಷೇಪ ಅನೇಕ ಕಡೆಗಳಲ್ಲಿ ಪರ್ವತಗಳ ರೂಪದಲ್ಲಿ ಮೇಲೆದ್ದಿತು. ಜೊತೆಗೆ ಈ ಪರ್ವತಗಳ ಉದ್ದಕ್ಕೂ ಅವುಗಳ ತಪ್ಪಲಲ್ಲಿ ಕಡಿಮೆ ಅಗಲದ ತಗ್ಗು ಉಂಟಾಯಿತು. ಈ ಪರ್ವತಶ್ರೇಣಿಗಳಲ್ಲಿ ಉದಯಿಸಿದ ನದಿ ಮತ್ತು ಉಪನದಿಗಳು ಈ ಪರ್ವತ ಪ್ರದೇಶದ ಶಿಥಿಲೀಕರಿಸಿದ ಮೆಕ್ಕಲನ್ನು ಈ ತಗ್ಗು ಪ್ರದೇಶಕ್ಕೆ ಒಯ್ದು ಹರಡಿದುವು. ಈ ಕಾರ್ಯ ಮೆಯೋಸೀನ್ ಮಧ್ಯ ಕಾಲದಲ್ಲಿ ಪ್ರಾರಂಭವಾಗಿ ಪ್ಲೀಸ್ಟೋಸೀನ್ ಯುಗದ ಆದಿಯವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ ನಿಕ್ಷೇಪಗೊಂಡ ಶಿಲಾಸಮುದಾಯಕ್ಕೆ ಶಿವಾಲಿಕ್ ಶಿಲಾ ಸಮುದಾಯವೆಂದು ಹೆಸರು. ಇವು ಜಮ್ಮು ಬೆಟ್ಟ ಪ್ರದೇಶದಲ್ಲಿ ಸುಮಾರು ಇಪ್ಪತ್ತ ನಾಲ್ಕು ಮೈಲಿ ಅಗಲದ ಪ್ರದೇಶದಲ್ಲಿ ರೂಪುಗೊಂಡಿವೆ. ಇವು ಶಿಲಾರಚನೆ, ಜೀವ್ಯವಶೇಷಗಳು ಮುಂತಾದ ಎಲ್ಲ ವಿಚಾರಗಳಲ್ಲಿಯೂ ಮಾದರಿ ಪ್ರದೇಶದ ಶಿವಾಲಿಕ್ ಶಿಲಾಸಮುದಾಯವನ್ನು ಹೋಲುತ್ತವೆ. ಇವನ್ನು ಕೆಳಕಂಡಂತೆ ವಿಭಜಿಸಲಾಗಿದೆ :

ಮೇಲಣ ಶಿವಾಲಿಕ್ : 6,000 ಅಡಿಗಳು, ಗುಂಡುಶಿಲೆ, ಗ್ರೀಟ್; ಮರಳು ಮತ್ತು ಜೇಡು ಮಧ್ಯ ಶಿವಾಲಿಕ್ : 6,000 ಅಡಿಗಳು, ಬೂದು ಮರಳು ಶಿಲೆ ಮತ್ತು ಜೇಡು ಶಿಲೆಗಳು ಕೆಳ ಶಿವಾಲಿಕ್ : 5,000 ಅಡಿಗಳು, ಕಂದು ಮರಳು ಶಿಲೆ ಮತ್ತು ಕೆಂಪು ಜೇಡು ಶಿಲೆಗಳು

ಈ ಶಿಲಾಸಮುದಾಯದ ವೈವಿಧ್ಯವೆಂದರೆ, ಅದರಲ್ಲಿರುವ ಹೇರಳವಾದ ಬೆನ್ನೆಲುಬುಳ್ಳ ಪ್ರಾಣಿಗಳ (ಸಸ್ತನಿಗಳ) ಅವಶೇಷಗಳು. ಮಾಸ್ಟಡಾನ್ (ವಂಶನಷ್ಟ ಆನೆ) ಆನೆ, ಜಿರಾಫೆ, ಒಂಟೆ, ಕುದುರೆ, ನೀರಾನೆ, ಖಡ್ಗಮೃಗ, ಜಿಂಕೆ , ಕಪಿ, ಆಮೆ-ಇವೆಲ್ಲವುಗಳ ಅವಶೇಷಗಳಿವೆ.

ಕಾಶ್ಮೀರದಲ್ಲಿ ಪ್ಲೀಸ್ಟೊಸೀನ್ ಕಾಲದ ಶಿಲಾವರ್ಗ ನದಿ, ಸರೋವರ ಮತ್ತು ನೀರ್ಗಲ್ಲು ನದೀ ನಿಕ್ಷೇಪಗಳಿಂದ ಕೂಡಿದೆ. ಇವಕ್ಕೆ ಕೆರೆವ ಶಿಲೆಗಳು ಎಂದು ಹೆಸರು. ಇವು ವಾಯವ್ಯದಲ್ಲಿ 8-16 ಮೈಲು ಅಗಲವಿದ್ದು, ಸೋಪ್ಯಾನ ಮತ್ತು ಬಾರಾಮುಲದಲ್ಲಿ 50 ಮೈಲಿ ಅಗಲ ಇವೆ. ಈ ನಿಕ್ಷೇಪಗಳಲ್ಲಿ ನೀಲಿ, ಬೂದು ಮತ್ತು ಕಾಕಿ ಬಣ್ಣದ ಒಂದು ಮರಳು, ಅರೆಗಟ್ಟಿಯಾದ ಗುಂಡುಶೀಲೆ ಮತ್ತು ನೀರ್ಗಲ್ಲು ನದಿಯ ಮುರುಕಲು ಗುಪ್ಪೆಗಳಿವೆ. ಇವುಗಳ ಮಧ್ಯೆ ಲಿಗ್ನೈಟ್ ಪದರಗಳೂ ಇವೆ. ಆದ್ದರಿಂದ ತೀವ್ರ ಶೀತವಾಯು ಗುಣಗಳ ಮಧ್ಯೆ ಸಾಮಾನ್ಯ ವಾಯುಗುಣವನ್ನು ಹೊಂದಿ, ಸಾಕಷ್ಟು ಸಸ್ಯನಿಬಿಡವಾದ ಕಾಲಗಳೂ ಇದ್ದುವೆಂದು ಅರ್ಥವಾಗುವುದು. ತೀವ್ರ ಶೀತವಾಯುಗುಣವಿದ್ದ ಕಾಲಗಳನ್ನು ನೀರ್ಗಲ್ಲುಯುಗಗಳೆಂದೂ ಮತ್ತು ತೇವಭರಿತ ಉಷ್ಣವಾಯು ಗುಣವಿದ್ದ ಕಾಲಗಳನ್ನು ಅಂತರ ನೀರ್ಗಲ್ಲುಯುಗಗಳೆಂದೂ ಕರೆಯುತ್ತವೆ. ಡಿ.ಟೆರ್ರಾರವರು ನಾಲ್ಕು ಕಾಲಗಳ ನೀರ್ಗಲ್ಲು ನದಿ ಮುರುಕಲು ಗುಪ್ಪೆಗಳನ್ನೂ ಅವುಗಳ ನಡುವೆ ಕೆರವಾ ನಿಕ್ಷೇಪಗಳಿರುವುದನ್ನೂ ವರದಿ ಮಾಡಿದ್ದಾರೆ. (ಡಿ.ಆರ್.)

ಭೌತ ಲಕ್ಷಣ : ಇಡೀ ರಾಜ್ಯ ಬಹುತೇಕ ಪರ್ವತಮಯ. ದಕ್ಷಿಣದ ಹೊರ ಬೆಟ್ಟಗಳ ಅಂಚಿನಲ್ಲಿ ಫಲವತ್ತಾದ ಮೈದಾನವುಂಟು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರದೇಶ ಸ್ಥೂಲವಾಗಿ ಮೂರು ಅಂತಸ್ತುಗಳ ಮನೆಯಂತಿದೆ. ಶಿವಾಲಿಕ್ ಮತ್ತು ಹೊರಬೆಟ್ಟಗಳನ್ನೂಳಗೊಂಡ ಜಮ್ಮು ಪ್ರದೇಶ ಇದರ ಮೊದಲ ಅಂತಸ್ತು. ಮಧ್ಯ ಹಿಮಾಲಯದ ಎತ್ತರ ಶ್ರೇಣಿಗಳು ಎರಡನೆಯ ಅಂತಸ್ತು. ಅಂಡಾಕಾರದ ಕಾಶ್ಮೀರ ಕಣಿವೆಯನ್ನು ಎತ್ತರದ ಬೆಟ್ಟಗಳು ಸುತ್ತುಗಟ್ಟಿವೆ. ಕಾಶ್ಮೀರ ಕಣಿವೆಯಿಂದಾಚೆಗೆ ಉತ್ತರದಲ್ಲೂ ಪಶ್ಚಿಮದಲ್ಲೂ ಮಹಾ ಹಿಮಾಲಯ ಶ್ರೇಣಿಗಳು ಹಬ್ಬಿವೆ. ಗಿಲ್ಗಿಟ್ ಮತ್ತು ಲಡಾಕ್ ಜಿಲ್ಲೆಗಳನ್ನೊಳಗೊಂಡ ಈ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 15,000 ಎತ್ತರದಲ್ಲೂ ಜನವಸತಿಯಿದೆ. ಇದು ಪ್ರಪಂಚದ ಅತ್ಯಂತ ಎತ್ತರದ ಜನವಸತಿ ಪ್ರದೇಶ.

ಭೌಗೋಳಿಕವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಏಳು ಪ್ರದೇಶಗಳನ್ನಾಗಿ ವಿಂಗಡಿಸಬಹುದು. 1 ಹೊರ ಮೈದಾನ: ಪಂಜಾಬಿನ ಝೀಲಮ್, ಗುಜಾರಾತ್, ಸೈಯಲ್ ಕೋಟ್ ಮತ್ತು ಗುರುದಾಸಪುರಗಳಿಂದ ಮುಂದುವರಿದ ಮೈದಾನ 240 ಮೈ.ಗಳಷ್ಟು ದೂರ ಹಬ್ಬಿದೆ. ಇದರ ಸರಾಸರಿ ಎತ್ತರ 1,000 12,000. ರಾವಿಯ ಪಶ್ಚಿಮಕ್ಕೆ. ಝೀಲಮ್ ನದಿಯ ಪೂರ್ವಕ್ಕೆ ಇರುವ ಈ ಮೈದಾನದ ಅಗಲ 4-26 ಮೈ. ಈ ಮೈದಾನದ ಅಂಚಿನಲ್ಲಿ ಕಿರುಬೆಟ್ಟಗಳ ಸಾಲಿದೆ.

2 ಹೊರಬೆಟ್ಟ ಪ್ರದೇಶ : ಈ ಪ್ರದೇಶ ವೈವಿಧ್ಯಮಯ, ಸಂಕೀರ್ಣ, ಉತ್ತರದಲ್ಲಿ ಬಹಳ ಕಡಿದಾಗಿದೆ. ಮಧ್ಯೆ ಮಧ್ಯೆ ಸಣ್ಣ ಕಣಿವೆಗಳುಂಟು. ಬೆಟ್ಟಸಾಲಿನ ಪಶ್ಚಿಮ ಭಾಗ ವಿಶಾಲವಾದ್ದು. ಭಾರಿ ಉಂಡೆಗಲ್ಲುಗಳೂ ಬಂಡೆಗಳೂ ಜೇಡಿಮಣ್ಣೂ ಹೇರಳವಾಗಿವೆ.

3 ಮಧ್ಯ ಹಿಮಾಲಯ : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಈ ಪ್ರದೇಶ ಮಧ್ಯ ಹಿಮಾಲಯದ ಅನೇಕ ಶ್ರೇಣಿಗಳಿಂದ ಕೂಡಿ ಅತ್ಯಂತ ಸುಂದರವಾದ ಪ್ರದೇಶವೆನಿಸಿಕೊಂಡಿದೆ. 15,000ಗಿಂತ ಎತ್ತರವಾಗಿರುವ ಶ್ರೇಣಿಗಳು ನಿರಂತರವಾಗಿ ಹಿಮಾಚ್ಛಾದಿತ. ಬ್ರಹ್ಮ ಶಿಖರ 21,000 ಗಿಂತ ಎತ್ತರ. ಇಲ್ಲಿಯ ಅನೇಕ ಆಳವಾದ ಪ್ರಪಾತಗಳಲ್ಲಿ ನದಿಗಳು ತುಂಬಿ ಹರಿಯುತ್ತವೆ. ಇಲ್ಲಿ ಬಲು ಸುಂದರವಾದ ಅರಣ್ಯಗಳುಂಟು. ಅವುಗಳ ಉತ್ತರಕ್ಕೆ ಪೀರ್ ಪಂಜಾಲ್ ಪರ್ವತಶ್ರೇಣಿ ಇದೆ. ಈ ಪರ್ವತಶ್ರೇಣಿಯನ್ನು ದಾಟಿದರೆ ಕಾಶ್ಮೀರ ಕಣಿವೆ ಸಿಗುತ್ತದೆ.

4 ಕಾಶ್ಮೀರ ಕಣಿವೆ : ಕಾಶ್ಮೀರ ಕಣಿವೆಯ ವಿಸ್ತೀರ್ಣ ಸುಮಾರು 15,120.3 ಚ.ಕಿಮೀ (5,838 ಚ.ಮೈ) ಸುಮಾರು 120 ಚ.ಮೈ.ಗಳಷ್ಟು ಪ್ರದೇಶ ಜಲಾವೃತ. ಈ ಕಣಿವೆ ಝೀಲಮ್ ಮತ್ತು ಅದರ ಉಪನದಿಗಳಿಗೆ ಜಲಾನಯನ ಭೂಮಿ. ಇಲ್ಲಿಯ ವೂಲಾರ್ ಭಾರತದ ಅತ್ಯಂತ ದೊಡ್ಡ ಸಿಹಿನೀರಿನ ಸರೋವರ. ಫಲವತ್ತಾದ ಭೂಮಿಯೂ ಸಮೃದ್ಧಿಯೂ ಇರುವ ಈ ಎತ್ತರದ ಕಣಿವೆಯಲ್ಲಿ ಜನ ಹೆಚ್ಚಾಗಿ ನೆಲೆಸುತ್ತಿದ್ದಾರೆ. ಬಾರಾಮುಲದ ಉತ್ತರಕ್ಕಿರುವ ಮನೋಹರವಾದ ಲೋಲಬ್ ಕಣಿವೆಯಲ್ಲಿ ಅನೇಕ ತೊರೆಗಳು ಹರಿಯುತ್ತವೆ.

5 ಸಿಂದ್ ಕಣಿವೆ : ಇದು ಝೀಲಮ್ ನದಿಯನ್ನು ಸೇರುವ ಸಿಂದ್ ನಾಲ ಹರಿಯುವ ಕಣಿವೆ. ಇದರ ಉದ್ದ ಸು.60ಮೈ. (96 ಕಿಮೀ.) ಕಣಿವೆಯ ಪಶ್ಚಿಮಕ್ಕೆ ಮೆಕ್ಕಲು ಮಣ್ಣಿನ ಫಲವತ್ತಾದ ಭೂಮಿಯಿದೆ. ಕಣಿವೆಯ ಗಂದರ್‍ಬಾಲ್ ಎಂಬ ಸ್ಥಳ ಆರೋಗ್ಯಧಾಮ. ಅದರ ಬಳಿಯ ಅಂಚರ್ ಸರೋವರಕ್ಕೆ ಷಾದಿಪುರದಿಂದ ಸಿಂದ್ ನಾಲಾ ಮೂಲಕ ಜಲಯಾನ ಸಾಧ್ಯ. ಡಾಲ್ ಸರೋವರಕ್ಕೂ ರಸ್ತೆ ಸೌಕರ್ಯವುಂಟು. ಸಿಂದ್ ಕಣಿವೆ ಜೋಜಿ ಲಾ ಕಣಿವೆ ಮಾರ್ಗದ ಬಳಿ ಹಠಾತ್ತನೆ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ ಇರುವುದು ಲಡಾಕ್ ಪ್ರದೇಶ.

6 ಲಿಡಾರ್ ಕಣಿವೆ : ಝೀಲು ನದಿಯ ಪೂರ್ವಕ್ಕೆ ಇರುವ ಎತ್ತರದ ಕಣಿವೆ ಇದು. ಇಲ್ಲಿ 6,500 ಗಿಂತ ಎತ್ತರದ ಪ್ರದೇಶಗಳಲ್ಲಿ ನೀರ್ಗಲ್ಲ ನದಿಗಳು ತಂದು ಹಾಕಿದ ಮುರುಕಲು ಗುಪ್ಪೆಗಳು ಬಂಡೆಗಳ ಮೇಲೆ ತುಂಬಿವೆ. ಅವುಗಳಿಂದ ಬಂಡೆಗಳು ನುಣುಪಾಗಿರುವುದನ್ನು ಪಹಲ್ಗಾಂ ಪ್ರದೇಶದಲ್ಲಿ ಕಾಣಬಹುದು. 11,200 ಎತ್ತರದಲ್ಲಿ ಕೊಲಾಹೈ ನೀರ್ಗಲ್ಲ ನದಿ ಹರಿಯುತ್ತದೆ.

7 ಒಳ ಹಿಮಾಲಯ : ಉತ್ತರದಲ್ಲಿ ಕಾಜ್ ನಾಗ್ ಶ್ರೇಣಿಯತ್ತ ಕಾಶ್ಮೀರ ಕಣಿವೆ ಕಿರಿದಾಗಿದೆ. ಗುಲ್ ಮಾರ್ಗ್ ಪಶ್ಚಿಮಕ್ಕೆ ಪೀರ್ ಪಂಜಾಲ್ ಪರ್ವತ ಶ್ರೇಣಿ 60 ಮೈ. (96 ಕಿಮೀ.) ದೂರ ಮುಂದುವರಿಯುತ್ತದೆ. ಇದರ ಎತ್ತರ ಸಮುದ್ರಮಟ್ಟದಿಂದ 9,000-12,000. ಉರಿಯಿಂದ ಪುಂಚ್‍ಗೆ ಹೋಗುವ ರಸ್ತೆಯೊಂದು ಹಾಜಿ ಪೀರ್ ಕಣಿವೆಯನ್ನು ದಾಟಿ ಸಾಗುತ್ತದೆ. ಇಲ್ಲಿ ದೇವದಾರು ಅರಣ್ಯಗಳಿಂದ ಕೂಡಿದ ಶ್ರೇಣಿಗಳುಂಟು. ಇಲ್ಲಿ ಹಿಮಾಲಯದ ಮಹಾಶ್ರೇಣಿಗಳು ಹಿಮರೇಖೆಯಿಂದಲೂ ಮೇಲಕ್ಕೆ-20,000ವರೆಗೆ —ಏರಿವೆ. ನಂಗ ಪರ್ವತ (26,620) ಒಂದು ಉನ್ನತ ಶಿಖರ. ಮಧ್ಯ ಹಿಮಾಲಯನ್ ಅಕ್ಷ ಕುಲು ಬಳಿ ಕವಲೊಡೆಯುತ್ತದೆ. ಅದರ ವಾಯವ್ಯ ಶಾಖೆಯೇ ಜನ್ಸ್‍ಕಾರ್ ಶ್ರೇಣಿ. ನುನ್ ಕುನ್‍ನ ಎರಡು ಶಿಖರಗಳು 23,147 ಎತ್ತರ ನಿಲುಕುತ್ತವೆ. ಹಿಮಾಲಯದ ಧವಳಧರ ಶ್ರೇಣಿ ಇನ್ನೂ ಆಚೆಗೆ ಹಬ್ಬಿದೆ.

ಹಿಂದೂಕುಷ್ ಮತ್ತು ಕಾರಕೋರಂ ಶ್ರೇಣಿಗಳು ಹಿಂದೂಸಾಗರಕ್ಕೆ ಹರಿಯುವ ಏಷ್ಯನ್ ನದೀ ವ್ಯವಸ್ಥೆಯ ಜಲವಿಭಾಗ ರೇಖೆಗಳು. ಹಿಮಾಲಯದ ಈಶಾನ್ಯ ಶ್ರೇಣಿಗಳು ಆಳವಾದ ಕಮರಿಗಳಿಂದ ಕೂಡಿವೆ. ಸಸ್ಯಗಳು ಕಡಿಮೆ. ಇದು ಬರಡು ಪ್ರದೇಶ. ಶಿಖರಗಳು ಹಿಮದಿಂದ ಕೂಡಿ ಠೀವಿಯಿಂದ ನಿಂತಿವೆ. ಈ ಭಾಗದಲ್ಲಿ ಪ್ರಪಂಚದ ಎರಡನೆಯ ಅತ್ಯುನ್ನತ ಶಿಖರವಾದ ಗಾಡ್ವಿನ್ ಆಸ್ಟೆನ್ ಶಿಖರವಿದೆ (28,265). ಇಲ್ಲಿ ನೀರ್ಗಲ್ಲ ನದಿಗಳು ಹರಿಯುತ್ತವೆ; ನೀರ್ಗಲ್ಲ ಮೈದಾನಗಳು 50 ಚ.ಮೈ.ಗಳಷ್ಟು ವ್ಯಾಪಿಸಿವೆ. ಗಿಲ್ಗಿಟ್ ನದಿಯನ್ನು ಸೇರುವ ಹುನ್‍ಜಾ ನದಿ ಉಗಮಿಸುವುದು ಇಲ್ಲಿ. ವಿಶಾಲವಾದ ಲಡಾಕ್ ಪ್ರದೇಶ ಇರುವುದು ಈ ಭಾಗದಲ್ಲೇ. ವಾಯವ್ಯದಲ್ಲಿರುವ ಗಿಲ್ಗಿಟ್ ಸಮುದ್ರಮಟ್ಟದಿಂದ 5,000 ಎತ್ತರದಲ್ಲಿರುವ ಕಣಿವೆ.

ನದಿಗಳು, ಸರೋವರಗಳು : ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅನೇಕ ಸರೋವರಗಳೂ ನೀರ್ಗಲ್ಲ ನದಿಗಳೂ ಊಟೆಗಳೂ ಇವೆ.

ರಾವಿ (ಇರಾವತಿ) ನದಿ ಪೀರ್ ಪಂಜಾಲ್ ಶ್ರೇಣಿಯ ದಕ್ಷಿಣ ಇಳಿಜಾರಿನಲ್ಲೂ ಧವಳಧರ ಶ್ರೇಣಿಯ ಉತ್ತರ ಇಳಿಜಾರಿನಲ್ಲೂ ಹರಿದುಬರುತ್ತದೆ. ಬಸೋಲಿಯ ಬಳಿ ಹಿಮಾಲಯವನ್ನು ಬಿಟ್ಟು ಕಾಟುವಾ ಮತ್ತು ಮಾಧೋಪುರ್ ಬಳಿ ಪಂಜಾಬ್ ಬಯಲನ್ನು ಸೇರುತ್ತದೆ. ಇದರ ಉದ್ದ 400 ಮೈ. (640 ಕಿಮೀ.) ಇದರ ಒಟ್ಟು ಪತನ 16,500 (2,640 ಕಿಮೀ).

ಚಂದ್ರಾ ನದಿ ಸಮುದ್ರಮಟ್ಟಕ್ಕೆ 20,000 ಅಡಿ ಎತ್ತರದಲ್ಲಿರುವ ಬರಲಾಚ ಪರ್ವತದ ಆಗ್ನೇಯ ಭಾಗದ ವಿಶಾಲ ಮಂಜಿನ ಬಯಲಿನಲ್ಲೂ, ಭಾಗಾ ನದಿ ಬರಲಾಚ ಕಣಿವೆಯ ವಾಯವ್ಯ ಇಳಕಲು ಪ್ರದೇಶದಲ್ಲೂ ಹುಟ್ಟಿ ತಂಡಿ ಎಂಬಲ್ಲಿ ಸಂಗಮವಾಗಿ ಅಲ್ಲಿಂದ ಚಂದ್ರಭಾಗಾ (ಚೀನಾಬ್) ನದಿಯಾಗಿ ಪರಿಣಮಿಸುತ್ತವೆ. ಅದು ಪಂಗಿ ಕಣಿವೆಯ ಮಾರ್ಗವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪ್ರವೇಶಿಸಿ ಕಿಷ್ಟವಾರ್ ಬಳಿ ವಾದ್ವಾನ್ ನದಿಯೊಡನೆ ಕೂಡಿ. ಅಲ್ಲಿಂದ ಮುಂದೆ 180 ಮೈ. (288 ಕಿಮೀ) ಹರಿದು. ಆಖ್‍ನೂರ್ ಬಳಿ ಹಿಮಾಲಯವನ್ನು ಬಿಟ್ಟು ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ರಾಮ್‍ಬನ್ ಬಳಿ ಈ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿದೆ.

ರಾವಿ ಮತ್ತು ಚೀನಾಬ್ ನದಿಗಳ ನಡುವಣ ಪ್ರದೇಶಗಳಲ್ಲಿ ಹರಿಯುವ ಕಿರು ನದಿಗಳು ಉಜ್ ಮತ್ತು ಟಾವಿ. ಉಜ್ ಶಿವಾಲಿಕ್ ಪರ್ವತಗಳಿಂದ ಹರಿದು ಬರುತ್ತದೆ. ತಾವಿ ಜಮ್ಮು ನಗರವನ್ನು ಬಳಸಿ ಹರಿದು ಉಧಮ್ ಪುರದ ಬಳಿ ಬಾಗಿ ಸಾಗುತ್ತದೆ.

ಝೀಲಮ್ ನದಿ ಪೀರ್ ಪಂಜಲ್ ಶ್ರೇಣಿಯಲ್ಲಿ ಹುಟ್ಟುತ್ತದೆ. ರಾಮ್ ಬಿಯಾರ. ರೋಮೂಷಿ. ಸಿಂದ್ ಇವು ಇದರ ಕೆಲವು ಉಪನದಿಗಳು. ಝೀಲಮ್ ನದಿ ವೂಲರ್ ಸರೋವರವನ್ನು ಅದರ ಆಗ್ನೇಯ ದಿಕ್ಕಿನಲ್ಲಿ ಸೇರಿ, ಪಶ್ಚಿಮದಲ್ಲಿ ಅದರಿಂದ ಹೊರಬರುತ್ತದೆ. ವೂಲಾರ್ ಅನ್ನು ಸೇರುವ ಕಿರುನದಿಗಳು ಹರ್ಬೂಜಿ, ಆರಾಹಿ, ಎರಿನ್, ಪೊಹ್ರು ಮತ್ತು ಬಂದಿಪುರ್, ಬಹ್ರಾಂಗುಲ್‍ನಿಂದ ಆಚೆಗೆ ಝೀಲಂ 100 ಗಜಗಳಿಗಿಂತ ಹೆಚ್ಚು ಅಗಲವಿಲ್ಲ. ಅದರ ಆಳ 10ಗಿಂತ ಕಡಿಮೆ. ಅಲ್ಲಿ ನದಿ ಕಡಿದಾದ ಕಮರಿಯ ಮೂಲಕ 80 ಮೈ. (128 ಕಿಮೀ.) ದೂರ ಹರಿದು ಸಾಗುತ್ತದೆ. ಮುಜûಫರ್‍ಬಾದ್ ಬಳಿ ಕಿಷೆನ್‍ಗಂಗಾ ಇದನ್ನು ಸಂಗಮಿಸುತ್ತದೆ.

	ಸಿಂಧೂ ನದಿ ಆಗ್ನೇಯದಲ್ಲಿ ಚೀನೀ ಟಿಬೆಟ್ ಗಡಿಯಿಂದ ರಾಜ್ಯವನ್ನು ಪ್ರವೇಶಿಸಿ, ಲೇ ಬಳಿ ಜನ್ಸ್‍ಕಾರ್ ನದಿಯೊಡನೆ ಸಂಗಮವಾಗುತ್ತದೆ. ಅಲ್ಲಿಂದ ಮುಂದೆ ಲಡಾಕ್ ಪ್ರದೇಶದಲ್ಲಿ ಶಯೋಕ್ ನದಿಯೊಂದಿಗೆ ಕೂಡಿ ನಂಗಪರ್ವತ ಭಾಗದಲ್ಲಿ ವಾಯವ್ಯಕ್ಕೆ ಹರಿದು, ಅಲ್ಲಿಂದ ಸಾಗಿ ಪಾಕಿಸ್ತಾನದ ಗಡಿಯನ್ನು ಪ್ರವೇಶಿಸುತ್ತದೆ.

ಹಿಮಾಲಯ ಕಣಿವೆಗಳಲ್ಲಿ ಹರಿಯುವ ಮುಖ್ಯ ನದಿಗಳೊಂದಿಗೆ ಸಂಗಮವಾಗುವ ಉಪನದಿಗಳು ಪರ್ವತಗಳ ಅಂಚಿನಲ್ಲಿ ನೂರಾರು ಅಡಿಗಳ ಮೇಲಿರುವ ತೂಗುಕಣಿವೆಗಳಲ್ಲಿ ಹರಿಯುತ್ತವೆ. ನೀರ್ಗಲ್ಲ ನದಿಗಳ ಕ್ರಿಯೆ ಮತ್ತು ಅವು ಹೊತ್ತು ತಂದ ಭೂಸಾರ-ಇವೇ ಈ ಮೇಲು ಕಣಿವೆಗಳ ನಿರ್ಮಾಣಕ್ಕೆ ಕಾರಣ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಿಗರ್ ನದಿಗೆ ಪೋಷಕವಾದ ಅತ್ಯಂತ ಹಿರಿಯ ನೀರ್ಗಲ್ಲ ನದಿ ಇದೆ. ರಾಜ್ಯದಲ್ಲಿ ಜಲಪಾತಗಳೂ ಊಟೆಗಳೂ ಹೆಚ್ಚು.

ಪ್ರಮುಖ ಸಿಹಿನೀರಿನ ಸರೋವರಗಳಲ್ಲಿ ವೂಲಾರ್ ಮತ್ತು ದಾಲ್ ದೊಡ್ಡವು. ವೂಲಾರ್ ಸರೋವರ 10 ಮೈ. ಉದ್ದ, 6 ಮೈ. ಅಗಲ ಇದೆ. ಮನ್ ಸಾರ್ ಜಮ್ಮು ನಗರಕ್ಕೆ ನೈಋತ್ಯದಲ್ಲಿದೆ. ಇದರ ವಿಸ್ತೀರ್ಣ 6 ಚ.ಮೈ. ಸುರಿಮ್ ಸಾರ್‍ಮನ್‍ಸಾರ್‍ನ ಪಶ್ಚಿಮದಲ್ಲಿದೆ. ಸನಸಾರ್ ಎಂಬುದು ಪಟ್ನಿ ಟಾಪ್‍ಗೆ ಉತ್ತರದಲ್ಲಿದೆ. ಲಡಾಕ್ ಪ್ರದೇಶದ ಪಾಂಗ್ ಕಾಂಗ್ ಉಪ್ಪುನೀರಿನ ಸರೋವರ. ಇದು 40 ಮೈ. ಉದ್ದ, 2-4 ಮೈ. ಅಗಲ ಇದೆ ; ಸಮುದ್ರಮಟ್ಟಕ್ಕೆ 14,000 ಎತ್ತರದಲ್ಲಿದೆ. ತ್ಸಿಮೋರಿರಿ ಸರೋವರ 15 ಮೈ. ಉದ್ದ 2-3 ಮೈ. ಅಗಲವಾಗಿದೆ.

ವಾಯುಗುಣ : ಕಾಶ್ಮೀರ ಉ.ಅ.32( 17' ರಿಂದ ಉ.ಅ.36( 58' ವರೆಗೆ ಹಬ್ಬಿದೆ. ಈ 400 ಮೈ.ಗಳ ಅಗಲದಲ್ಲಿ ನೆಲದ ಎತ್ತರ ಸಮುದ್ರ ಮಟ್ಟದಿಂದ 1,000ರಿಂದ 28,250 ಗೆ ಥಟ್ಟನೆ ಏರುತ್ತದೆ. ಇದರಿಂದ ಜಮ್ಮು-ಕಾಶ್ಮೀರ ಪ್ರದೇಶದ ವಾಯುಗುಣದ ಮೇಲೆ ಆಗಿರುವ ಪರಿಣಾಮ ಅಗಾಧ. ಎತ್ತರ, ಪರ್ವತಶ್ರೇಣಿಗಳ ದಿಕ್ಕು, ಗಾಳಿಯ ವೇಗ, ಸೂರ್ಯಕಿರಣಗಳ ಬಾಗು-ಇವು ಈ ರಾಜ್ಯದ ವಿವಿಧ ಭಾಗಗಳ ವಾಯುಗುಣವನ್ನು ನಿರ್ಣಯಿಸುವ ಅಂಶಗಳು. ಹೊರ ಮೈದಾನ ಮತ್ತು ಹೊರ ಬೆಟ್ಟಗಳನ್ನು ವಾಯುಗುಣದ ದೃಷ್ಟಿಯಿಂದ ಒಂದು ಪ್ರದೇಶವೆಂದು ಪರಿಗಣಿಸಬಹುದು. ಈ ಪ್ರದೇಶದ ಒಟ್ಟು ಮಳೆ 41.4 ಉತ್ತರಕ್ಕೆ ಹೋದಂತೆ ಮಳೆ ಅಧಿಕ. ಅಲ್ಲಿ ಚಳಿಗಾಲದಲ್ಲಿ ಮಂಜು ಬೀಳುತ್ತದೆ. ಮಾರ್ಚ್ ತಿಂಗಳಾದ ಮೇಲೆ ಪಂಜಾಬಿನ ಪ್ರದೇಶದಂತೆ ಇಲ್ಲೂ ಉಷ್ಣತೆ ಹೆಚ್ಚುತ್ತದೆ; ಮಳೆಯಾದ ಮೇಲೆ ಇಳಿಯುತ್ತದೆ. ಒಟ್ಟಿನಲ್ಲಿ ಇಲ್ಲಿಯದು ಉಪೋಷ್ಣವಲಯದ ವಾಯುಗುಣ.

ಮಧ್ಯ ಪರ್ವತಗಳ ಮತ್ತು ಕಣಿವೆಗಳ ಪ್ರದೇಶ ಇನ್ನೊಂದು ವಾಯುಗುಣವಲಯ. ಎತ್ತರಕ್ಕೆ ಅನುಗುಣವಾಗಿ ಉಷ್ಣತೆಯೂ ಅವಪತನವೂ ವ್ಯತ್ಯಾಸವಾಗುತ್ತವೆ. ಬೇಸಗೆಯಲ್ಲಿ ಹೊರ ಬೆಟ್ಟಗಳ ವಲಯದಲ್ಲಿ ಮಳೆ ಸುರಿಸುವ ಮುಂಗಾರು ಮಾರುತಗಳು ಮಧ್ಯ ಪರ್ವತಗಳನ್ನೇರುವಾಗ ದುರ್ಬಲವಾಗುತ್ತವೆ. ಚಂದ್ರಭಾಗಾನದಿಯ ಕಣಿವೆಯಲ್ಲಿ ಚಳಿಗಾಲ ದೀರ್ಘ, ತೀವ್ರ ಬೇಸಗೆ ಹ್ರಸ್ವ, ಚುರುಕುಲ ಇನ್ನೂ ಎತ್ತರದ ಕಣಿವೆಗಳಲ್ಲಿ ಬೇಸಗೆಯ ಚುರುಕು ಕಡಿಮೆ. ಪರ್ವತಗಳ ನೆತ್ತಿಯಲ್ಲಿ ಬೀಳುವ ಹಿಮ ಏಪ್ರಿಲ್ ತಿಂಗಳಿನಿಂದ ಕರಗತೊಡಗುತ್ತದೆ.

ಉಷ್ಣತೆ, ಅವಪತನ, ತೇವಾಂಶ ಮುಂತಾದ ದೃಷ್ಟಿಗಳಿಂದ ಕಾಶ್ಮೀರ ಕಣಿವೆ ಒಂದು ಪ್ರತ್ಯೇಕ ವಾಯುಗುಣವಲಯ. ಮಾರ್ಚ್‍ವರೆಗೆ ಚಳಿಗಾಲ, ತುಂಬ ತೀವ್ರ. ಮೆಡಿಟರೇನಿಯನ್ ಮೇಲಿಂದ ಆಫ್ಘಾನ್ ಗಡಿಯ ಮೂಲಕ ಬೀಸುವ ಮಾರುತದಿಂದ ಹಿಮರೂಪದಲ್ಲಿ ಅವಪತನವಾಗುತ್ತದೆ. ಮಾರ್ಚ್ ತಿಂಗಳಿಂದ ಮೇವರೆಗೆ ವಸಂತಕಾಲ. ಜುಲೈ-ಆಗಸ್ಟ್ ಗರಿಷ್ಟ ಸೆಕೆಯ ತಿಂಗಳುಗಳು. ಕಾಶ್ಮೀರ ಕಣಿವೆಯ ಉತ್ತರ ಪೂರ್ವಗಳ ಉನ್ನತ ಪರ್ವತಗಳ ನದೀ ಕಣಿವೆಗಳು ತಂಪಾಗಿರುತ್ತವೆ. ಪೀರ್ ಪಂಜಾಲ್ ಶ್ರೇಣಿಯ ದಕ್ಷಿಣಕ್ಕೆ ಮುಂಗಾರು ಸ್ತಬ್ಧವಾಗುತ್ತದೆ. ಉ.ಅ.34(ಯ ಮೇಲೆ, ಸಮುದ್ರಮಟ್ಟದಿಂದ 5,200 ಎತ್ತರದಲ್ಲಿರುವ ಶ್ರೀನಗರದ್ದು ಸಮಶೀತೋಷ್ಣ ಹಾಗೂ ಮೆಡಿಟರೇನಿಯನ್ ಪ್ರರೂಪಿ ವಾಯುಗುಣ. ಕಾಶ್ಮೀರ ಕಣಿವೆಯಲ್ಲಿ ಜುಲೈ, ಆಗಸ್ಟ್ ತಿಂಗಳುಗಳು ಮಳೆಗಾಲ. ಆ ತಿಂಗಳುಗಳಲ್ಲಿ ಸರಾಸರಿ ಮಳೆ ಅನುಕ್ರಮವಾಗಿ 2.33 ಮತ್ತು 2,42. ಆಗಸ್ಟ್ ಗರಿಷ್ಟ ಉಷ್ಣತೆಯ ತಿಂಗಳು. ಗರಿಷ್ಟ ಉಷ್ಣತೆ 83.3 ಫ್ಯಾ. ಸರಾಸರಿ ವಾರ್ಷಿಕ ಮಳೆ ಶ್ರೀನಗರದಲ್ಲಿ 27.2. ಸಸ್ಯಗಳು : ರಾಜ್ಯದ ಅರಣ್ಯಗಳ ಒಟ್ಟು ವಿಸ್ತೀರ್ಣ 8,200 ಚ.ಮೈ. ವಾಯುಗುಣ, ಮಳೆ, ಭೂಗುಣ ಹಾಗೂ ಭೂಮಟ್ಟಗಳಿಂದ ಸಸ್ಯವರ್ಗ ಪ್ರಭಾವಿತ. ದಕ್ಷಿಣ ಭಾಗದಲ್ಲಿ ಕುರುಚಲು ಅರಣ್ಯ, ವಿವಿಧ ಜಲಸಸ್ಯಗಳು, ಮಾವು ಇವೆ. ಜಮ್ಮು ಭಾಗದ ಶಿವಾಲಿಕ್ ಬೆಟ್ಟ ಪ್ರದೇಶದಲ್ಲಿ ಕುರುಚಲುಕಾಡು. ಕಾಶ್ಮೀರ ಕಣಿವೆಯ ದಕ್ಷಿಣ ಅಂಚಿನ ಪೀರ್ ಪಂಜಾಲ್ ಕಣಿವೆಯ 180 ಮೈ. ಉದ್ದಕ್ಕೂ ವಿವಿಧ ಮರಗಿಡಗಳೂ ಹುಲ್ಲುಗಾವಲುಗಳೂ ಮೂಲಿಕೆ ಗಿಡಗಳೂ ಉಂಟು. ಕಾಶ್ಮೀರ ಕಣಿವೆಯಲ್ಲಿ ಜೌಗು ಭೂಮಿ ಹೆಚ್ಚು ; ನಾನಾ ತರದ ಕಾಡು ಹೂ, ಹಳದಿ ಐರಿಸ್ ಹೂ ಗಿಡಗಳು ಬೆಳೆಯುತ್ತವೆ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಫಿರ್, ಬರ್ಚ್, ಹೇಜûಲ್, ಓಕ್, ಮೇಪಲ್, ಬೀಚ್ ಮೊದಲಾದ ಮರಗಳಿವೆ. ಚೌಬೀನೆಗೆ ಯೋಗ್ಯವಾದ ವೃಕ್ಷಗಳು ಹಾಗೂ ದೇವದಾರು ಮರಗಳು ಹೇರಳ. ಮರದ ದಿಮ್ಮಿಗಳನ್ನು ನದಿಗಳಲ್ಲಿ ಸಾಗಿಸುತ್ತಾರೆ. ಲಡಾಕ್ ಪ್ರದೇಶದಲ್ಲಿ ಸಸ್ಯಗಳು ಕಡಿಮೆ.

ಪ್ರಾಣಿಗಳು : ಅರಣ್ಯಗಳಲ್ಲಿ ಐಬೆಕ್ಸ್, ಕಾಡುಮೇಕೆ, ತೋಳ, ನರಿ, ಕೆಂಪು ಮತ್ತು ಕಪ್ಪು ಕರಡಿ, ಕಾಡುಹಂದಿ, ಕಸ್ತೂರಿಮೃಗ ಇವೆ. ಸರೋವರಗಳಲ್ಲಿ ವಿವಿಧ ಬಾತುಗಳು, ಉಲ್ಲಂಗಿ ಹಕ್ಕಿ, ಕೊಕ್ಕರೆ, ಮೀನು. ಆಮೆ, ಇವೆ. ಜೀವಂಜೀವ, ಕವುಜಗ ಮೊದಲಾದ ಹಕ್ಕಿಗಳಿವೆ.

	ಸಾಕುಪ್ರಾಣಿಗಳಲ್ಲಿ ಪ್ರಮುಖವಾದವು ಚಮರೀಮೃಗ ಮತ್ತು ಜೆಹೊ. ಜೆಹೊ ಎಂಬುದು ಹಸು ಮತ್ತು ಚಮರೀಮೃಗಗಳ ಅಡ್ಡತಳಿ.

ಖನಿಜಗಳು : ಜಮ್ಮು ಜಿಲ್ಲೆಯ ಕಾಲಕೋಟ್, ಚಿನ್‍ಪುರ್, ರಿಯಾಸಿ, ಗೋವ ಬೆರ್, ಸಿಯಾರ್ ಮತ್ತು ಕಾಶ್ಮೀರ ಕಣಿವೆಯ ನಿಚಹೋಮದಲ್ಲಿ ಕಲ್ಲಿದ್ದಲು ನಿಕ್ಷೇಪಗಳಿವೆ. ಪಿಂಗಾಣಿ ಮಣ್ಣು, ಮುಲಾಮು ತಯಾರಿಕೆಯಲ್ಲಿ ಉಪಯೋಗಿಸುವ ಒಚ್ರಿ ಕಾವಿ ಮಣ್ಣು, ತಾಮ್ರ, ಬಾಕ್ಸೈಟ್, ನಿಕಲ್, ಸೀಸ, ಕಬ್ಬಿಣದ ಅದುರು-ಇವೂ ಸ್ವಲ್ಪ ಮಟ್ಟಿಗೆ ಸಿಗುತ್ತವೆ. ಪಚ್ಚೆ, ಕೆಂಪು, ಸ್ಫಟಿಕ ಮೊದಲಾದ ಶಿಲೆಗಳ ಪದರಗಳು ಪರ್ವತಗಳ ಕೆಲವು ಭಾಗಗಳಲ್ಲಿವೆ.

ಸಂವಿಧಾನ ಮತ್ತು ಸರ್ಕಾರ : 26ರ ಅಕ್ಟೋಬರ್ 1947ರಂದು ಜಮ್ಮು ಮತ್ತು ಕಾಶ್ಮೀರ ಸಂಸ್ಥಾನ ಭಾರತದಲ್ಲಿ ವಿಲೀನಗೊಂಡಿತು. ರಾಜ್ಯಕ್ಕೆ ಸಂವಿಧಾನವನ್ನು ರಚಿಸಲು 1951ರಲ್ಲಿ ಸಂವಿಧಾನ ಸಭೆ ಏರ್ಪಟ್ಟಿತು. ವಯಸ್ಕರ ಮತದಾನದ ಪ್ರಕಾರ ಚುನಾವಣೆಗಳು ನಡೆದುವು. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜತ್ವ ರದ್ದಾಗಬೇಕೆಂದೂ ಪ್ರಜಾಸತ್ತಾತ್ಮಕ ರಾಜ್ಯ ಭಾರತಕ್ಕೆ ಸೇರಬೇಕೆಂದೂ ಸಭೆ ಐತಿಹಾಸಿಕ ನಿರ್ಣಯ ಕೈಗೊಂಡಿತು. ನವಂಬರ್ 1952ರಲ್ಲಿ ರಾಜಪ್ರಭುತ್ವ ರದ್ದಾಯಿತು. ಜನವರಿ 26, 1957ರಲ್ಲಿ ಹೊಸ ಸಂವಿಧಾನ ಜಾರಿಗೆ ಬಂತು.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶಾಸಕಾಂಗ ದ್ವಿಸದನಗಳಿಂದ ಕೂಡಿದ್ದು. ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಇರುತ್ತವೆ. ರಾಜ್ಯಕ್ಕೆ ಕೇಂದ್ರ ಸಂಸತ್ತಿನ ಲೋಕಸಭೆ ರಾಜ್ಯಸಭೆಗಳಲ್ಲೂ ಪ್ರಾತಿನಿಧ್ಯವಿದೆ.

ಪರಮೋಚ್ಚ ನ್ಯಾಯಾಲಯದ ಮತ್ತು ಚುನಾವಣಾ ಆಯೋಗದ ಅಧಿಕಾರ ರಾಜ್ಯಕ್ಕೂ ವ್ಯಾಪಿಸುತ್ತದೆ. ಕೇಂದ್ರ ಸರ್ಕಾರದ ಕಾನೂನುಗಳನ್ನು ರಾಜ್ಯ ಸರ್ಕಾರ ಆಳವಡಿಸಿಕೊಂಡಿದೆ.

ಈಗ ರಾಜ್ಯಪಾಲರು ರಾಜ್ಯದ ಆಡಳಿತ ಮುಖ್ಯರು. ಮುಖ್ಯಮಂತ್ರಿಯಿಂದ ಕೂಡಿದ ಮಂತ್ರಿಮಂಡಲವಿದೆ. ಆಡಳಿತ ಜಿಲ್ಲೆಗಳು ಹತ್ತು: ಕಾಟುವಾ, ಜಮ್ಮು, ಉಧಮ್‍ಪುರ, ದೋದಾ, ಅನಂತನಾಗ್, ಶ್ರೀನಗರ, ಬಾರಾಮುಲ, ಪುಂಚ್, ರಾಜೂರಿ ಮತ್ತು ಲಡಾಕ್.

	ಶಿಕ್ಷಣ : 2001ರ ಗಣತಿಯ ಪ್ರಕಾರ ರಾಜ್ಯದ ಸಾಕ್ಷರದ ಸಂಖ್ಯೆ ಸರಾಸರಿ 54.46 ಗ್ರಾಮೀಣರ ಸಂಖ್ಯೆ ಶೇ 48.22. ನಗರವಾಸಿಗಳು ಶೇ. 72.17 ಇತ್ತು. 5 ವಿಶ್ವವಿದ್ಯಾನಿಲಯಗಳೂ, 41 ಕಾಲೇಜುಗಳು ಇವೆ. 2004ರಲ್ಲಿ 168 ಪ್ರೌಢಶಾಲೆಗಳು, 1030 ಮಾಧ್ಯಮ, 2560. ಪ್ರಾಥಮಿಕ ಶಾಲೆಗಳಿದ್ದವು.

ವ್ಯವಸಾಯ : ಪರ್ವತಗಳು, ಕಮರಿಗಳು ಹಾಗೂ ಹಿಮ ಹೆಚ್ಚಾಗಿರುವುದರಿಂದ ಸಾಗುವಳಿಗೆ ಒಳಪಟ್ಟ ಭೂಮಿ ಕಡಿಮೆ. ರಾಜ್ಯದ ಸೇ.80ರಷ್ಟು ಮಂದಿಯ ಕಸಬು ವ್ಯವಸಾಯ. ಬತ್ತ ಮತ್ತು ಮುಸುಕಿನ ಜೋಳ ಮುಖ್ಯ ಬೆಳೆಗಳು. ಪರ್ವತ ಭಾಗಗಳಲ್ಲಿ 7,000 ಎತ್ತರದಲ್ಲೂ ಬತ್ತ ಬೆಳೆಯುತ್ತದೆ. ಹೆಚ್ಚಿನ ಗೋಧಿ ಬೆಳೆಯುವುದು ಜಮ್ಮು ಪ್ರದೇಶದಲ್ಲಿ. ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ, ಜೂನ್ ತಿಂಗಳಲ್ಲಿ ಕುಯಿಲು. ಬಾರ್ಲಿ, ಜೋಳ, ಎಣ್ಣೆಬೀಜಗಳು ಸ್ವಲ್ಪಮಟ್ಟಿಗೆ ಬೆಳೆಯುತ್ತವೆ. ಕುಂಕುಮ ಕೇಸರಿ ಕಾಶ್ಮೀರ ಕಣಿವೆಯಲ್ಲಿ ಬೆಳೆಯುತ್ತದೆ. ಇದರಿಂದ ರಾಜ್ಯಕ್ಕೆ ಒಳ್ಳೆಯ ಆದಾಯವುಂಟು.

ರಾಜ್ಯ ಹಣ್ಣಿನ ಬೆಳೆಗೆ ಪ್ರಸಿದ್ಧ. ಸೇಬು, ಮರಸೇಬು, ಪ್ಲಮ್, ಪೀಚಸ್, ಆಪ್ರಿಕಾಟ್, ವಾಲ್‍ನಟ್, ದ್ರಾಕ್ಷಿ, ಮಾವು, ಬಾಳೆ, ಕಿತ್ತಲೆ-ಇವು ಬೆಳೆಯುತ್ತವೆ.

ಪರ್ವತ ಭಾಗಗಳ ಮೇಡುಗಳಲ್ಲಿ ನದಿಗಳು ರಭಸದಿಂದ ಹರಿಯುವುದರಿಂದ ಮತ್ತು ನೀರು ಮಂಜುಗಟ್ಟಿರುವುದರಿಂದ ನೀರಾವರಿ ಕಷ್ಟ. ರಾಜ್ಯದ ಕಣಿವೆಗಳಲ್ಲಿ ನೀರ್ಗಾಲುವೆಗಳು ಹೇರಳ. ರಣಭೀರ್ ನಾಲ, ಪ್ರತಾಪ ನಾಲ, ಬಸಂತಪುರ್ ನಾಲ, ಉಜ್, ನಾಲ, ಝೀಲಂ ನಾಲ-ಇವು ಬಂಜರು ಪ್ರದೇಶಗಳನ್ನು ಸಾಗುವಳಿಗೆ ತಂದಿವೆ. ರಣಭೀರ್ ನಾಲ 250 ಮೈ. ಹರಿಯುತ್ತದೆ. ಝೀಲು ನದಿಯ ಪ್ರವಾಹ 1950, 1953, 1956.1957 ಮತ್ತು 1959ರಲ್ಲಿ ಹೆಚ್ಚು ನಷ್ಟ ಉಂಟು ಮಾಡಿತು. ನದಿಗಳ ಪ್ರವಾಹದಿಂದ ಬೆಳೆಗಳನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಕೈಗಾರಿಕೆ ಮತ್ತು ವಾಣಿಜ್ಯ : ಮುಖ್ಯ ಕೈಗಾರಿಕೆ ಉಣ್ಣೆ ಬಟ್ಟೆ ಮತ್ತು ಕಂಬಳಿ ತಯಾರಿಕೆ, ಪಿಂಗಾಣಿ ಸಾಮಾನು, ಔಷಧವಸ್ತು, ಬೆಂಕಿಕಡ್ಡಿ, ಸಿಮೆಂಟ್, ಚರ್ಮ ಹದಗಾರಿಕೆ, ಕರ್ಪೂರ ತೈಲ, ರೇಷ್ಮೆ-ಇವುಗಳ ಕಾರ್ಖಾನೆಗಳಿವೆ. ಕುಶಲಕಲೆ, ಕೈಕಸಬು, ಕೆತ್ತನೆ ಕೆಲಸಗಳಿಗೆ ರಾಜ್ಯ ಹೆಸರಾಗಿದೆ. ಸುಂದರವಾಗಿ ಕಸೂತಿ ಹಾಕಿದ ಶಾಲುಗಳು, ಕಾಶ್ಮೀರಿ ಜಮಖಾನೆಗಳು, ಕೃತಕ ಆಭರಣಗಳು ತಯಾರಾಗುತ್ತವೆ. ಕಾಗದದ ತಿರಳಿನಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ವಿಲೋ ಕಡ್ಡಿಗಳಿಂದ ಬುಟ್ಟಿ, ಸೋಫ, ಕುರ್ಚಿ, ಪೆಟ್ಟಿಗೆ ಮೊದಲಾದ ವಸ್ತುಗಳನ್ನು ಮಾಡುತ್ತಾರೆ. ಈ ವಸ್ತುಗಳನ್ನು ಚಳಿಗಾಲದಲ್ಲಿ ತಯಾರಿಸಿ, ಬೇಸಗೆಯಲ್ಲಿ ಅಲ್ಲಿಗೆ ಬರುವ ಪ್ರವಾಸಿಗಳಿಗೆ ಮಾರುತ್ತಾರೆ. 2003-04ರಲ್ಲಿ ಗೃಹ ಕೈಗಾರಿಕೆ 8.21 ಕೋಟಿ ರೂಪಾಯಿಗಳ ಆದಾಯ ತಂದಿತ್ತು. ಸು. 3.40 ಲಕ್ಷ ಮಂದಿಗೆ ಉದ್ಯೋಗ ಒದಗಿಸಿತ್ತು.

ವಿದ್ಯುತ್ ಉತ್ಪಾದನ ಕೇಂದ್ರಗಳಲ್ಲಿ ಮುಖ್ಯವಾದವು ಗಂದರ್‍ಬಲ್‍ನಲ್ಲಿರುವ ಸಿಂದ್‍ನಾಲಾ ಜಲವಿದ್ಯುತ್ ಕೇಂದ್ರ, ಪಹಲ್ಗಾಂ ಬಳಿಯ ಝೀಲಂ ಜಲವಿದ್ಯುತ್ ಕೇಂದ್ರ, ಲಡಾಕ್‍ನ ಕಾರ್ಗಿಲ್ ಮತ್ತು ಲೇ ನಗರಗಳ ವಿದ್ಯುತ್ ಕೇಂದ್ರಗಳು, ಜಮ್ಮು ಪ್ರದೇಶದ ಸಲಾಲ್ ಜಲವಿದ್ಯುತ್ ಕೇಂದ್ರ.

ರಾಜ್ಯ ಆಮದು ಮಾಡಿಕೊಳ್ಳುವ ವಸ್ತುಗಳು ಹತ್ತಿ ಬಟ್ಟೆ, ಸಕ್ಕರೆ, ಚಹ, ಉಪ್ಪು, ಹೊಗೆಸೊಪ್ಪು, ಔಷಧ, ಯಂತ್ರೋಪಕರಣ. ರಾಜ್ಯದಿಂದ ರಫ್ತಾಗುವ ವಸ್ತುಗಳ ಉಣ್ಣೆ ಬಟ್ಟೆ, ಶಾಲು, ಜಮಖಾನೆ, ಚಕ್ಕಳ, ಚೌಬೀನೆ, ರೇಷ್ಮೆ, ಕುಂಕುಮಕೇಸರಿ, ಹಣ್ಣುಗಳು.

ಸಾರಿಗೆ ಸಂಪರ್ಕ : ಎತ್ತರದ ಪರ್ವತ ಮಾರ್ಗಗಳಲ್ಲಿ ಚಮರೀಮೃಗ ಮತ್ತು ಮೇಕೆಗಳ ಮೇಲೆ ಸಾಮಾನುಗಳನ್ನು ಹೇರಿ ಪ್ರಯಾಣ ಮಾಡುತ್ತಾರೆ. ತಗ್ಗು ಪ್ರದೇಶಗಳಲ್ಲಿ ಕುದುರೆ ಮತ್ತು ಹೇಸರಗತ್ತೆಗಳ ಉಪಯೋಗ, ಕಡಿದಾದ ಭಾಗಗಳಲ್ಲಿ ಸ್ಲೆಡ್ಜ್ ಮಾದರಿಯ ಚಕ್ರವಿಲ್ಲದ ಬಂಡಿಗಳನ್ನು ಉಪಯೋಗಿಸುತ್ತಾರೆ.

ಪಠಾಣ್‍ಕೋಟ್-ಜಮ್ಮು-ಕಾಶ್ಮೀರ ರಸ್ತೆ ರಾಜ್ಯದ ಬಹು ಮುಖ್ಯ ಹೆದ್ದಾರಿ. ಕಾಶ್ಮೀರ ಕಣಿವೆಯಲ್ಲಿ ರಸ್ತೆಗಳು ಹಾಸುಹೊಕ್ಕಾಗಿ ಸಾಗಿ ಮುಖ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತವೆ. ಇತರ ಮುಖ್ಯ ರಸ್ತೆ ಮಾರ್ಗಗಳು ಝೀಲಂ ಕಣಿವೆ ರಸ್ತೆ. ಬನಿಹಾಲ್ ರಸ್ತೆ ಮತ್ತು ಗಿಲ್ಗಿಟ್ ರಸ್ತೆ. ಕೆಲವು ರಸ್ತೆಗಳು ತೀರ ಕಿರಿದಾಗಿವೆ; ಅವು ಗ್ರಾಮಗಳಿಗೆ ಸಂಪರ್ಕ ಕಲಿಸುತ್ತವೆ. ರಾಜ್ಯದಲ್ಲಿ ನಬಾರ್ಡ್ ಸಿ.ಆರ್.ಎಫ್ ಇವುಗಳ ಮೂಲಕ ವಿವಿಧ ರಸ್ತೆ ನಿರ್ಮಾಣ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಗೆ 15,102 ಕಿ.ಮೀ. ರಸ್ತೆ ಸೇರಿದೆ.

ರಾಜ್ಯದಲ್ಲಿ ಜಲಮಾರ್ಗಗಳು ಹೆಚ್ಚು, ಅಗ್ಗ ಹಾಗೂ ಅನುಕೂಲಕರ. ಕಾಶ್ಮೀರ ಕಣಿವೆಯಲ್ಲಿ ಖಾನಾಬಾಲ್‍ನಿಂದ ಬಾರಾಮೂಲವರೆಗೆ ಜಲಯಾನವಿದೆ. ಶಿಕಾರಾ ಎಂಬ ಪ್ರಯಾಣಿಕ ದೋಣಿಯಲ್ಲಿ ಐವತ್ತು ಪ್ರಯಾಣಿಕರು ಸಂಚರಿಸಬಹುದು. ಸರಕು ಸಾಗಿಸಲು ಡೂಂಗ ಎಂಬ ದೋಣಿಗಳಿವೆ; ಕೆಲವು ಕಡೆ ದೋಣಿಗಳಲ್ಲೇ ಜನ ವಾಸಿಸುತ್ತಾರೆ. ಪ್ರವಾಸಿಗರ ಉಪಯೋಗಕ್ಕೆ ಗೃಹ ದೋಣಿಗಳಿವೆ.

ಜಮ್ಮು-ಸಿಯಾಲ್ ಕೋಟ್ ನಡುವೆ ರೈಲುಮಾರ್ಗವಿದೆ. ಇದು ವಾಯವ್ಯ ರೈಲ್ವೆ ವಿಭಾಗದ ಶಾಖೆ. ಪಠಾಣ್ ಕೋಟ್ ರೈಲುಮಾರ್ಗವನ್ನು ಕಾಟುವಾ ಜಿಲ್ಲೆಗೆ ವ್ಯಾಪಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ನಗರಗಳಲ್ಲಿ ವಿಮಾನ ನಿಲ್ದಾಣಗಳು ಇವೆ. ಶ್ರೀನಗರದಿಂದ ದೆಹಲಿ, ಪಠಾಣ್ ಕೋಟ್ ಮತ್ತು ಜಮ್ಮು ನಗರಗಳಿಗೆ ವಿಮಾನ ಸಂಚಾರವುಂಟು

ಪ್ರವಾಸ : ಶ್ರೀನಗರಕ್ಕೆ ಸಮೀಪದಲ್ಲಿ ಮೊಗಲರ ಕಾಲದ ಹಲವು ತೋಟಗಳಿವೆ. ನಗರದ ಸುತ್ತಮುತ್ತಣ ಪ್ರದೇಶದಲ್ಲಿ ಮನೋಹರವಾದ ಸರೋವರಗಳುಂಟು. ದಾಲ್ ಸರೋವರದಲ್ಲಿ ತೆಪ್ಪದ ತೋಟಗಳಿವೆ. ಪ್ರಯಾಣಿಕರ ಸಂಚಾರಕ್ಕೆ ದೋಣಿಗಳು, ತಂಗಲು ಸರೋವರದಲ್ಲಿ ತೇಲುವ ಗೃಹದೋಣಿಗಳು ಉಂಟು. ವೂಲಾರ್ ಸರೋವರ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಗುಲ್ಮಾರ್ಗ್ ರಮಣೀಯವಾದ ಹೂಗಾವಲು ; ಚಳಿಗಾಲದ ಸ್ಕೇಟಿಂಗ್ ಕ್ರೀಡೆಯ ಕೇಂದ್ರ. ಶ್ರೀನಗರಕ್ಕೆ 60 ಮೈ. ದೂರದಲ್ಲಿರುವ ಪಹಲ್ಗಾಂ ಮತ್ತೊಂದು ಸುಂದರ ಸ್ಥಳ. ಅಲ್ಲಿಂದ 28 ಮೈ. ದೂರದಲ್ಲಿರುವ ಪಹಲ್ಗಾಂ ಮತ್ತೊಂದು ಸುಂದರ ಸ್ಥಳ. ಅಲ್ಲಿಂದ 29 ಮೈ. ದೂರದಲ್ಲಿರುವ ಅಮರನಾಥ್ ಗವಿಗೆ ಹೋಗಬಹುದು. ಶ್ರೀನಗರದಿಂದ ಈಶಾನ್ಯಕ್ಕೆ 51 ಮೈ. ದೂರದಲ್ಲಿರುವ ಸೋನಾಮಾರ್ಗ ಪ್ರವಾಸಿಕ್ಷೇತ್ರ. ಅಲ್ಲಿಂದ ಸಮೀಪದ ನೀರ್ಗಲ್ಲ ನದಿಗಳಿರುವ ಸ್ಥಳಗಳನ್ನು ನೋಡಿಬರಬಹುದು. ಶ್ರೀನಗರದ ಬಳಿ ಶಂಕರಾಚಾರ್ಯರ ಬೆಟ್ಟವಿದೆ. ನಗರದಲ್ಲಿ ಪ್ರತಾಪ್ ಸಿಂಗ್ ವಸ್ತುಸಂಗ್ರಹಾಲಯವುಂಟು. ಜಮ್ಮು ಜಿಲ್ಲೆಯ ಬಹುಕೋಟೆ, ರಾಂನಗರದ ಅಮರ್‍ಮಹಲ್ ಅರಮನೆ, ಕಪೂರಗಢದ ಕೋಟೆ, ಆಖ್-ನೂರ್ ಮತ್ತು ಸಾಂಬ ಕೋಟೆಗಳು, ಉಧಮ್‍ಪುರದ ಬಳಿಯ ಪ್ರಾಚೀನ ದೇವಾಲಯಗಳು-ಇವು ಆಕರ್ಷಣೀಯ ಸ್ಥಳಗಳು. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ (1971) (4.23.253). ಜಮ್ಮು (1.57.908) ಇನ್ನೊಂದು ಮುಖ್ಯ ನಗರ. ಇದು ಚಳಿಗಾಲದ ರಾಜಧಾನಿ.

ಕ್ರಮ. ಸಂಖ್ಯೆ ಜಿಲ್ಲೆಗಳು ವಿಸ್ತೀರ್ಣ ಚ.ಕಿ.ಮೀ ಜನಸಂಖ್ಯೆ (2001) ಆಡಳಿತ ಕೇಂದ್ರ

1 2 3 4 5 6 7 8 9 10 11 12 13 14 ಅನಂತನಾಗ್ ಬದಗಾಮ್ ಬಾರಾಮುಲ ದೋದಾ ಜಮ್ಮು ಕಾರ್ಗಿಲ್ ಕಾಟುವಾ ಕುಪವಾರ ಲೆಹ ಪುಲ್ವಾಮ ಪೂಂಚ್ ರಾಜೂರಿ ಶ್ರೀನಗರ ಉಧಮ್‍ಪುರ 3,984 1,371 4,588 11,691 3,097 14,036 2,651 2,379 82,655 1,398 1,674 2,630 2,228 4,550 11,70,013 6,32,338 11,66,772 6,90,474 15,71,911 1,15,227 5,44,206 6,40,013 1,17,637 648,762 3,71561 4,78,595 11,83,493 7,38,965 ಅನಂತನಾಗ್ ಬದಗಾಮ್ ಬಾರಾಮುಲ ದೋದಾ ಜಮ್ಮು ಕಾರ್ಗಿಲ್ ಕಾಟುವಾ ಕುಪವಾರ ಲೆಹ ಪುಲ್ವಾಮ ಪೂಂಚ್ ರಾಜೂರಿ ಶ್ರೀನಗರ ಉಧಮ್‍ಪುರ


(ಇದರಲ್ಲಿ 37,555 ಚ.ಕಿ.ಮೀ ನ್ಯಾಯಬಾಹಿರವಾಗಿ ಚೀನ ಆಕ್ರಮಿಸಿ ಕೊಂಡಿರುವುದೂ ಸೇರಿದೆ.)

ಪ್ರಾಗಿತಿಹಾಸ : ಕಾಶ್ಮೀರದ ಪ್ರಾಚೀನ, ಮಧ್ಯ ಮತ್ತು ಅಂತ್ಯ ಶಿಲಾಯುಗ ಸಂಸ್ಕøತಿಗಳ ಬಗ್ಗೆ ಸಿಕ್ಕಿರುವ ಮಾಹಿತಿಗಳ ಅತ್ಯಲ್ಪ ಮತ್ತು ಅನಿರ್ದಿಷ್ಟ. ಆದರೆ ವಿಶ್ವದ ಇತರ ಎಡೆಗಳಲ್ಲಿ ಪ್ರಾಚೀನ ಶಿಲಾಯುಗ ಸಂಸ್ಕøತಿಗಳು ಹರಡಿದ್ದ ಪ್ಲೀಸ್ಟೋಸೀನ್ ಯುಗದಲ್ಲಿ ಕಾಶ್ಮೀರದಲ್ಲೂ ವಾಯುಗುಣ ಮತ್ತು ಭೂ ಲಕ್ಷಣಗಳಲ್ಲಿ ಹಲವು ಬದಲಾವಣೆಗಳು ಆದುವು. ಆ ಕಾಲದಲ್ಲಿ ಕಾಶ್ಮೀರದ ನೆರೆಯ ಪ್ರದೇಶಗಳಲ್ಲಿ ಶಿಲಾಯುಧ ಸಂಸ್ಕøತಿಗಳು ಹರಡಿದ್ದುದರಿಂದ, ಕಾಶ್ಮೀರದಲ್ಲೂ ಈ ಸಂಸ್ಕøತಿಗಳು ಇದ್ದಿರಬಹುದು. ಈಚೆಗೆ ಆ ಕಾಲದ ಕೆಲವು ಶಿಲಾಯುಧಗಳು ಅಲ್ಲಿ ದೊರಕಿವೆ.

ಕಳೆದ ಕೆಲವು ವರ್ಷಗಳಲ್ಲಿ ಶ್ರೀನಗರದಿಂದ 7 ಮೈ. ಈಶಾನ್ಯಕ್ಕಿರುವ ಬುರ್ಜಹೋಮ್ ಎಂಬಲ್ಲಿ ನಡೆದ ಉತ್ಪನನಗಳಲ್ಲಿ ನಾಲ್ಕು ಸಾಂಸ್ಕøತಿಕ ಘಟ್ಟಗಳು ಗುರುತಿಸಲ್ಪಟ್ಟಿವೆ. ಇವುಗಳಲ್ಲಿ ಮೊದಲ ಎರಡು ನವಶಿಲಾಯುಗದ ಸಂಸ್ಕøತಿಗೆ ಸೇರಿದವು. ಮೂರನೆಯದು ಬೃಹತ್ ಶಿಲಾಯುಗದ ಸಂಸ್ಕøತಿಯದು ಬೃಹತ್ ಶಿಲಾಯುಗದ ಸಂಸ್ಕøತಿಯದು, ನಾಲ್ಕನೆಯದು ಚಾರಿತ್ರಿಕ ಕಾಲದ್ದು. ನವಶಿಲಾಯುಗಕ್ಕೆ ಮೊದಲು ಇಲ್ಲಿಯ ಜನ ನೆಲದಲ್ಲಿ ಅಗೆದ ಹಳ್ಳಗಳ ಮೇಲೆ ಮರದ ಕಂಬಗಳನ್ನು ನಿಲ್ಲಿಸಿ, ಇಳಿಜಾರಾಗಿ ಹೊಂದಿಸಿದ ಚಾವಣಿಗಳಿದ್ದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಇವು ಗುಂಡಗೆ ಅಥವಾ ಅಂಡಾಕಾರವಾಗಿ ಇರುತ್ತಿದ್ದುವು. ಇವುಗಳಲ್ಲಿ ಅತ್ಯಂತ ದೊಡ್ಡದು 3.96 ಮೀ. ಆಳವಾಗಿ 4,57 ಮೀ. ತಳವ್ಯಾಸ ಮತ್ತು 2,74 ಮೀ. ಬಾಯಿವ್ಯಾಸ ಉಳ್ಳುದಾಗಿ ಇದೆ. ಈ ಗುಳಿಗಳ ಒಳಕ್ಕೆ ಇಳಿಯಲು ಮೆಟ್ಟಲುಗಳೂ ಒಳಗೆ ಪದಾರ್ಥಗಳನ್ನಿಡಲು ಗೂಡುಗಳೂ ನೆಲದಲ್ಲಿ ಒಲೆಗಳೂ ಇದ್ದವು. ಈ ಗುಳಿಮನೆಗಳಲ್ಲಿ ವಾಸಿಸುತ್ತಿದ್ದ ಜನ ಕಲ್ಲಿನ ನುಣುಪು ಕೊಡಲಿ, ಉದ್ದದ ಚಾಕು, ಹಲವು ರೀತಿಯ ಎಲುಬಿನ ಆಯುಧಗಳು ಮತ್ತು ಕಂದುಬಣ್ಣದ ನಯ ಮಾಡಿದ ಕೈ ತಯಾರಿಕೆಯ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ನವಶಿಲಾಯುಗದ ಎರಡನೆಯ ಘಟ್ಟದ ಜನ ಗುಳಿಮನೆಗಳಿಗೆ ಬದಲಾಗಿ ಮಣ್ಣು ಮತ್ತು ಹಸಿ ಇಟ್ಟಿಗೆಗಳ ಮನೆಗಳಲ್ಲಿ ವಾಸಿಸಲಾರಂಭಿಸಿದರು. ಈ ಮನೆಗಳು ಸಾಮಾನ್ಯವಾಗಿ ಚೌಕ ಮತ್ತು ಆಯಾಕಾರವಾಗಿರುತ್ತಿದ್ದುವು. ನೆಲಕ್ಕೆ ಕೆಂಪು ಮಣ್ಣಿನ ಗಚ್ಚೂ ಇತ್ತು. ಈ ಕಾಲದಲ್ಲಿ, ಕುಂಬಾರಚಕ್ರದಿಂದ ಮಾಡಿದ, ಹೊಳಪಿನ ಕಪ್ಪು ಮಡಕೆಗಳು ಬಳಕೆಗೆ ಬಂದುವು. ಈ ಕಾಲದಲ್ಲೂ ಹಿಂದಿನ ಹಂತದಲ್ಲಿದ್ದಂಥ ಕಲ್ಲಿನ ಆಯುಧಗಳೂ ಇನ್ನೂ ಹೆಚ್ಚು. ಎಲುಬಿನ ಉಪಕರಣಗಳೂ ಬಳಕೆಯಲ್ಲಿದ್ದವು. ಈ ಹಂತದ ಅಂತ್ಯದಲ್ಲಿ ತಾಮ್ರವನ್ನೂ ಉಪಯೋಗಿಸುತ್ತಿದ್ದುದಾಗಿ ಕಂಡುಬರುತ್ತದೆ. ಆ ಕಾಲದ ಕೆಲವು ಸಮಾಧಿಗಳವು ಅಲ್ಲಿಯ ವಾಸದ ನೆಲೆಯಲ್ಲೇ ದೊರಕಿವೆ. ಇವುಗಳಲ್ಲಿ ಎರಡು ವಿಧ. ಮೊದಲನೆಯ ರೀತಿಯಲ್ಲಿ ಇಡೀ ದೇಹವನ್ನು ಹಳ್ಳದಲ್ಲಿ ಹೂಳುತ್ತಿದ್ದುದು ಒಂದು ಬಗೆ. ಶವವನ್ನು ಬೇರೆಲ್ಲಿಯೋ ಸ್ವಲ್ಪಕಾಲ ಇಟ್ಟಿದ್ದು, ಅನಂತರ ಅದರ ದೊಡ್ಡ ಎಲುಬುಗಳನ್ನೇ ತಂದು ಸಂಸ್ಕರಿಸುತ್ತಿದ್ದುದು ಎರಡನೆಯ ಬಗೆ. ಈ ಸಮಾಧಿಗಳಲ್ಲಿ ಶವದ ಜೊತೆಯಲ್ಲಿ ಮೇಕೆ, ನಾಯಿ ಮುಂತಾದ ಸಾಕುಪ್ರಾಣಿಗಳನ್ನೂ ಹೂಳುತ್ತಿದ್ದರು. ಇವಲ್ಲದೆ ಸಾಕುಪ್ರಾಣಿಗಳಿಗೇ ಮೀಸಲಾದ ಕೆಲವು ಸಮಾಧಿಗಳೂ ಸಿಕ್ಕಿವೆ.

	ಬುರ್ಜಹೋಮ್‍ನ ಮೊದಲನೆಯ ಎರಡು ಸಂಸ್ಕøತಿಗಳನ್ನು ನವಶಿಲಾಯುಗದ್ದೆಂದು ಕರೆದರೂ ಆಗ ಧಾನ್ಯಗಳನ್ನು ಬೆಳೆಯುತ್ತಿದ್ದುದಕ್ಕೆ ನೇರ ಆಧಾರಗಳೇನೂ ದೊರಕಿಲ್ಲ. ದೊರಕಿರುವ ಕೆಲವು ಕಲ್ಲಿನ ಚಾಕುಗಳು ಮತ್ತು ತೂತಿರುವ ದುಂಡು ಕಲ್ಲುಗಳಿಂದ ಆ ಕಾಲದಲ್ಲಿ ವ್ಯವಸಾಯವಿದ್ದಿರಬಹುದೆಂದು ಹೇಳಬಹುದಾದರೂ ಅಲ್ಲಿ ಎಲುಬಿನ ಆಯುಧಗಳು ವಿಪುಲವಾಗಿ ದೊರಕಿರುವುದರಿಂದ ಜನರಿಗೆ ಬೇಟೆ ಮುಖ್ಯ ಕಸುಬಾಗಿದ್ದಿರಬೇಕು. ಹಿಮಾಲಯಕ್ಕೆ ಉತ್ತರದಲ್ಲಿರುವ ಚೀನ, ಸೈಬೀರಿಯ ಮುಂತಾದ ದೇಶಗಳ ನವಶಿಲಾಯುಗದ ಸಂಸ್ಕøತಿಗಳಿಗೂ ಇಲ್ಲಿಯ ಸಂಸ್ಕøತಿಗೂ ಹೆಚ್ಚಿನ ಸಾಮ್ಯ ಇದೆ. ಕಾರ್ಬನ್-14ರ ಗಣನೆಯಿಂದ ಇಲ್ಲಿಯ ಈ ಸಂಸ್ಕøತಿ ಕ್ರಿ.ಪೂ.2300ರ ಸುಮಾರಿನಲ್ಲೇ ಆರಂಭವಾಗಿದ್ದಂತೆ ತಿಳಿಯುತ್ತದೆ.

ಮುಂದಿನ ಹಂತ ಬೃಹತ್ ಶಿಲಾಯುಗ ಸಂಸ್ಕøತಿಗೆ ಸೇರಿದ್ದು. ಪ್ರಾಯಶಃ ಮೃತರ ಸ್ಮಾರಕವಾಗಿ ನೆಟ್ಟ ಇಲ್ಲಿಯ ಕೆಲವು ದೊಡ್ಡ ಬಂಡೆಗಳು ಈ ಕಾಲಕ್ಕೆ ಸೇರಿದವಾದ್ದರಿಂದ, ಈ ಸಂಸ್ಕøತಿಗೆ ಆ ಹೆಸರು ಬಂದಿದೆ. ಆದರೆ ಈ ಶಿಲಾಸ್ಮಾರಕಗಳ ಅಡಿಯಲ್ಲಿ ಸಮಾಧಿಗಳಾಗಲಿ ಅವಕ್ಕೆ ಸಂಬಂಧಿಸಿದ ಇತರ ಸಾಂಸ್ಕøತಿಕ ಅಂಶಗಳಾಗಲಿ ಸ್ಪಷ್ಟವಾಗಿಲ್ಲ. ಇದರ ಅನಂತರದ ಹಂತದಲ್ಲಿ ಪ್ರಾಚೀನ ಚಾರಿತ್ರಿಕ ಕಾಲದ ಅವಶೇಷಗಳು ದೊರಕಿವೆ. ಈ ಸಂಸ್ಕøತಿಗಳನ್ನು ಬಿಂಬಿಸುವ ಇತರ ನೆಲೆಗಳು, ಅದೇ ಪ್ರದೇಶದಲ್ಲಿ ಹರಿಪರಿಗೋನ್, ಜಯದೇವಿ-ಉದರ್, ಪಾಂಪುರ್, ಸೊಂಬರ್ ಓಲ್ಜಿಬಾಗ್ ಮುಂತಾದ ಎಡೆಗಳಲ್ಲಿ ಬೆಳಕಿಗೆ ಬಂದಿವೆ.

ಕಾಶ್ಮೀರದ ಸಸ್ಸಿರ್ ಕಣಿವೆಯ ಕೆಲವು ಗುಹೆಗಳಲ್ಲಿ ಪ್ರಾಗೈತಿಹಾಸಿಕ ರೀತಿಯ ಚಿತ್ರಗಳಿವೆ. ಆದರೆ ಅವುಗಳ ಸರಿಯಾದ ಕಾಲವನ್ನು ನಿಷ್ಕರ್ಷಿಸುವುದು ಕಷ್ಟ. ದಾರ್ದಿಸ್ತಾನದಲ್ಲೂ ಬಂಡೆಗಳ ಮೇಲೆ ಸ್ಥೂಲವಾಗಿ ಸಸ್ಸಿರ್ ಕಣಿವೆಯ ಗುಹೆಗಳಲ್ಲಿರುವ ಚಿತ್ರಗಳಂತಿರುವ ಪ್ರಾಣಿಗಳ ಮತ್ತು ಬೇಟೆಯ ಚಿತ್ರಗಳು ಇವೆಯಾದರೂ ಇಲ್ಲಿ ಇವುಗಳ ಜೋತೆಯಲ್ಲೇ ಕೆಲವು ಬ್ರಾಹ್ಮೀ ಮತ್ತು ಖರೋಷ್ಠೀ ಶಾಸನಗಳೂ ಇರುವುದರಿಂದ ಇವು ಐತಿಹಾಸಿಕ ಯುಗಕ್ಕೆ ಸೇರಿದವಾಗಿರಬಹುದು.

ಇತಿಹಾಸ : ಈ ರಾಜ್ಯದ ಇತಿಹಾಸವನ್ನು ಅರಿಯಲು ದೇಶೀಯ ಗ್ರಂಥರಾಶಿ, ಇತಿಹಾಸ ಮತ್ತು ಪ್ರಾಚೀನ ಅವಶೇಷಗಳು ಆಧಾರ. ಪರ್ಷಿಯನ್ ಭಾಷೆಯಲ್ಲಿ ಬರೆದ ಕೆಲವು ಗ್ರಂಥಗಳು ಸಹಾಯಕ. 1148-49ರಲ್ಲಿ ಕಲ್ಹಣನಿಂದ ಸಂಸ್ಕøತದಲ್ಲಿ ರಚಿತವಾದ ರಾಜತರಂಗಿಣಿ ಒಂದು ಮುಖ್ಯ ಗ್ರಂಥ. ಇದು ಕಾಶ್ಮೀರ ಇತಿಹಾಸವನ್ನು ನಿರೂಪಿಸುವ ನಾಲ್ಕು ಸಂಸ್ಕøತ ಗ್ರಂಥಗಳಲ್ಲಿ ಒಂದು. ಇದರಲ್ಲಿ ಪ್ರಾಚೀನ ಕಾಲದಿಂದ ಹಿಡಿದು 1006ರಲ್ಲಿ ಸಂಗ್ರಾಮದೇವ ಪಟ್ಟಾಭಿಷಿಕ್ತನಾಗುವವರೆಗಿನ ಇತಿಹಾಸವಿದೆ. ಪ್ರಾಚೀನ ಕಾಲದಿಂದ ಗ್ರಂಥಕರ್ತೃ ಜೀವಿಸಿದ್ದ ಕಾಲದವರೆಗೆ ಕಾಶ್ಮೀರವನ್ನು ಆಳಿದ ರಾಜವಂಶಗಳನ್ನು ಇದರಲ್ಲಿ ವಿವರಿಸಲಾಗಿದೆ. ಈ ಗ್ರಂಥದ ಮೊದಲನೆಯ ಮೂರು ಸರ್ಗಗಳಲ್ಲಿ ನಿರೂಪಿಸಲಾಗಿರುವ ಘಟನಾವಳಿಗಳು ದಂತಕಥೆಗಳು. ಉಳಿದ 5 ಸ್ವರ್ಗ ಚರಿತ್ರೆ. ಕಲ್ಪಣನ ಇತಿಹಾಸ ರಚನಾಕಾರ್ಯವನ್ನು ಜೋನರಾಜ ಮುಂದುವರಿಸಿದ. ಕಲ್ಹಣ ಬಿಟ್ಟಲ್ಲಿಂದ ಮುಂದಕ್ಕೆ ಮುಸ್ಲಿಮರ ಏಳಿಗೆಯ ಕಾಲದವರೆಗೆ-1420ರಲ್ಲಿ ಸಿಂಹಾಸನಾರೋಹಣ ಮಾಡಿದ eóÉೈನ್-ಉಲ್_ಅಬದಿನನ ಕಾಲದವರೆಗೆ-ಕಾಶ್ಮಿರವನ್ನು ಆಳಿದ ರಾಜರ ವಿವರಗಳು ಈ ಗ್ರಂಥದಲ್ಲಿವೆ. ಅವನ ಅನಂತರ ಅವನ ಶಿಷ್ಯನಾದ ಶ್ರೀವರ ಈ ಕೆಲಸವನ್ನು ಮುಂದುವರಿಸಿದ. 1459ರಿಂದ 1489ರವರೆಗಿನ ಘಟನಾವಳಿಗಳನ್ನು ಅವನು ವರದಿ ಮಾಡಿದ್ದಾನೆ. ನಾಲ್ಕನೆಯ ಗ್ರಂಥ ರಾಜಾವಳೀ ನಾಟಕ. ಇದು ಪ್ರಾಜ್ಯಭಟ್ಟನಿಂದ ವಿರಚಿತವಾದ್ದು. ಇದರಲ್ಲಿ 1586ರ ವರೆಗಿನ-ಕಾಶ್ಮೀರ ಮೊಗಲರ ಸಾಮ್ರಾಜ್ಯದಲ್ಲಿ ವಿಲೀನಗೊಳ್ಳುವ ವರೆಗಿನ-ಇತಿಹಾಸವಿದೆ.

ಕಾಶ್ಮೀರ ಕಣಿವೆಯ ಮೂಲವನ್ನು ಕುರಿತ ಐತಿಹ್ಯ ಅತ್ಯಂತ ಸ್ವಾರಸ್ಯಕರವಾದ್ದು. ಹಿಂದೆ ಅದೊಂದು ಪುಷ್ಕರಿಣಿಯಾಗಿತ್ತಂತೆ. ಅದರ ಸುತ್ತಲೂ ಚಾಚಿ ಹಬ್ಬಿಕೊಂಡಿರುವ ಪರ್ವತಶಿಖರಗಳಿಂದ ಹರಿದು ಬರುತ್ತಿದ್ದ ಇಬ್ಬನಿಯಿಂದಲೂ ಮಂಜುಗಡ್ಡೆಗಳು ಕರಗಿ ಬರುತ್ತಿದ್ದ ನೀರಿನಿಂದಲೂ ಆ ಪುಷ್ಕರಿಣಿ ತುಂಬಿ ಮನಸ್ಸಿಗೆ ಆನಂದವನ್ನುಂಟುಮಾಡುತ್ತಿತ್ತು. ರಾಜತರಂಗಿಣಿಯ ಪ್ರಕಾರ ಅದಕ್ಕೆ ಸತೀಸರಸ್ ಎಂಬ ಹೆಸರಿತ್ತು. ಏಳನೆಯ ಮನುವಿನ ಕಾಲದಲ್ಲಿ ಆ ಪುಷ್ಕರಿಣಿಯಲ್ಲಿ ಜೀವಿಸಿದ್ದ ಜಲೋದ್ಭವನೆಂಬ ರಾಕ್ಷಸ ತನ್ನ ಪಾಶವೀಕೃತ್ಯಗಳಿಂದ ನೆರೆಹೊರೆಯ ಪ್ರದೇಶಗಳಿಗೆ ಕಂಟಕಪ್ರಾಯನಾಗಿದ್ದ. ಕಶ್ಯಪ ಮಹರ್ಷಿ. ಆ ರಾಕ್ಷಸನನ್ನು ಧ್ವಂಸ ಮಾಡಲು ನಿಶ್ಚಯಿಸಿ, ಬ್ರಹ್ಮನ ಸಹಾಯ ಯಾಚಿಸಿದ. ಬ್ರಹ್ಮನ ಆಜ್ಞೆಯ ಮೇರೆಗೆ ಎಲ್ಲ ದೇವತೆಗಳೂ ಕಶ್ಯಪನನ್ನು ಹಿಂಬಾಲಿಸಿ ಸತೀಸರಸ್ಸಿನ ನೆರೆಯ ಪರ್ವತದ ಮೇಲೆ ತಳ ಊರಿದರು. ರಾಕ್ಷಸ ಆ ಪುಷ್ಕರಿಣಿಯಿಂದ ಹೊರಬರಲು ನಿರಾಕರಿಸದ. ಬಲಭದ್ರ ತನ್ನ ಅಸ್ತ್ರವಾದ ನೇಗಿಲಿನಿಂದ ಪರ್ವತವನ್ನು ಸೀಳಿ ಆ ಕಂದಕದ ಮೂಲಕ ನೀರು ಹೊರಗೆ ಹೋಗುವಂತೆ ಮಾಡಿದ. ಪುಷ್ಕರಿಣಿ ಒಣಗಿಹೋಯಿತು. ಆಗ ವಿಷ್ಣು ಆ ರಾಕ್ಷಸನ ಮೇಲೆ ಬಿದ್ದು ಅವನನ್ನು ಸಂಹರಿಸಿದ. ಕಾಶ್ಮೀರವನ್ನು ಕಟ್ಟುವ ಕೆಲಸ ಕಶ್ಯಪನದಾಯಿತು. ದೇವತೆಗಳೂ ನಾಗರೂ ಅಲ್ಲಿ ವಾಸಿಸತೊಡಗಿದರು.

ಅನೇಕ ಮಂದಿ ದೇವತೆಗಳು ನದಿಗಳ ರೂಪ ತಳೆದು ಅಲ್ಲಿ ಹರಿಯಲು ಆರಂಭಿಸಿದರು. ಆದರೆ ವರ್ಷದಲ್ಲಿ ಆರು ತಿಂಗಳು ಅಲ್ಲಿ ವಿಪರೀತವಾದ ಚಳಿ ಇತ್ತು. ಆ ಕಾಲದಲ್ಲಿ ಅಲ್ಲಿ ಪಿಶಾಚಿಗಳು ನೆಲಸಿರುತ್ತಿದ್ದವು. ಆಗ ಜನರು ಕಣಿವೆಯನ್ನು ಬಿಟ್ಟು ಹೋಗಿದ್ದು, ಚೈತ್ರಮಾಸದಲ್ಲಿ, ಪಿಶಾಚಿಗಳು ಹಿಮ್ಮೆಟ್ಟಿದಾಗ, ಅಲ್ಲಿಗೆ ಮತ್ತೆ ಬರುತ್ತಿದ್ದರು. ನಾಲ್ಕು ಯುಗಗಳು ಕಳೆದ ಮೇಲೆ ಚಂದ್ರದೇವನೆಂಬ ಒಬ್ಬ ಬ್ರಾಹ್ಮಣನ ಶ್ರಮದ ಫಲವಾಗಿ ಆ ದೇಶ ಪಿಶಾಚಿಗಳಿಂದಲೂ ವಿಪರೀತವಾದ ಚಳಿಯಿಂದಲೂ ಮುಕ್ತಿ ಪಡೆಯಿತು. ಅನಂತರ ಕಾಶ್ಮೀರ ಮಾನವರಿಗೆ ವರ್ಷಪೂರ್ತಿ ವಾಸಿಸಲು ಯೋಗ್ಯವಾದ ಸ್ಥಳವಾಯಿತು.

ಕಾಶ್ಮೀರಿಗಳು ಭಾರತಕ್ಕೆ ಇಂಡೊ-ಯುರೋಪಿಯನ್ ಭಾಷೆಗಳನ್ನು ತಂದವರ ವಂಶದವರು. ಇಂಡೊ-ಆರ್ಯರ ಪೂರ್ವಜರು ಆಕ್ಸಸ್ ಮಾರ್ಗವಾಗಿ ಬಂದು ಖೋಕಂದ್ ಸುತ್ತ ಇರುವ ಎತ್ತರದ ಪ್ರದೇಶದಲ್ಲಿ ನೆಲಸಿದರು. ಅಲ್ಲಿ ಕೆಲವರು ಪ್ರತ್ಯೇಕಗೊಂಡು ದಕ್ಷಿಣಾಭಿಮುಖವಾಗಿ ಹೊರಟು ಹಿಂದೂಕುಷ್‍ನ ಪಶ್ಚಿಮದ ಕಣಿವೆಗಳನ್ನು ಹಾಯ್ದು ಕಾಬೂಲ್ ನದೀ ಕಣಿವೆಯಲ್ಲೂ ಭಾರತದ ಬಯಲು ಪ್ರದೇಶದಲ್ಲೂ ನೆಲಸಿದರು. ಕಾಬೂಲ್ ಕಣಿವೆಗೆ ವಲಸೆ ಬಂದವರ ಜೊತೆ ಸೇರದೆ, ಹಿಂದೂಕುಷ್‍ನ ಉತ್ತರ ಭಾಗದಲ್ಲಿಯೇ ಉಳಿದ ಆರ್ಯರು ಪೂರ್ವ ಪಶ್ಚಿಮವಾಗಿ ಹರಡಿದರು. ಆರ್ಯರನ್ನು ಅನುಸರಿಸಿ ಬಂದು ಅನೇಕರು ಕಾಶ್ಮೀರದಲ್ಲಿ ನೆಲೆಸಿದರು. ಅನಂತರ ಪರ್ಷಿಯನರು, ಗ್ರೀಕರು ಮತ್ತು ಯೂಚಿಗಳು ಅಥವಾ ತುರ್ಕಿ ವಂಶಜರು ಬಂದು ಕಾಶ್ಮೀರದಲ್ಲಿ ನೆಲಸಿದರು.

ಕಲ್ಹಣ ಕಾಶ್ಮೀರವನ್ನು ಆಳಿದ ರಾಜರುಗಳ ಪಟ್ಟಿಯನ್ನು ಕೊಡುತ್ತಾನೆ. ಅಶೋಕನಿಗೆ ಮೊದಲು ಕಾಶ್ಮೀರವನ್ನು ಆಳಿದ ರಾಜರ ಬಗ್ಗೆ ನಿಖರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಈ ರಾಜರ ಬಗ್ಗೆ ಚರ್ಚಿಸುತ್ತ ಕಲ್ಯಾಣ ವಾಸ್ತವಿಕ ಅಥವಾ ಕಾಲ್ಪನಿಕ ಸ್ಥಳೀಯ ರಾಜರುಗಳ ವಿಷಯವನ್ನು ವಿವರಿಸುತ್ತಾನೆ. ಪಾಂಡವರ ಮುಖ್ಯನಾದ ಯುಧಿಷ್ಠಿರ ಪಟ್ಟಕ್ಕೆ ಬಂದಾಗ 1ನೆಯ ಗೋಣಂದ ಕಾಶ್ಮೀರದ ಸಿಂಹಾಸನವನ್ನೇರಿದವನೆಂದು ಕಲ್ಯಾಣ ತನ್ನ ಚರಿತ್ರೆಯನ್ನು ಆರಂಭಿಸುತ್ತಾನೆ. ಜರಾಸಂಧ ಕೃಷ್ಣನ ವಿರುದ್ಧ ಯುದ್ದಕ್ಕೆ ನಿಂತಾಗ 1ನೆಯ ಗೋಣಂದರಾಜ ಅವನ ಸಹಾಯಕ್ಕೆ ಹೋಗಿ ರಣರಂಗದಲ್ಲಿ ಕೃಷ್ಣನ ಸಹೋದರನಾದ ಬಲಭದ್ರನಿಂದ ಕೊಲ್ಲಲ್ಪಟ್ಟ. ಅವನ ಮಗನಾದ ದಾಮೋದ್ರನೂ ಕೃಷ್ಣನ ವಿರುದ್ಧ ಹೋರಾಡಿ ಹತನಾದ. ಅವನ ಸತಿ ಯಶೋವತಿ ಸಿಂಹಾಸನವನ್ನೇರಿದಳು. ಇದನ್ನು ಶ್ರೀಮಂತ ಸಭಿಕರು ವಿರೋಧಿಸಿದರು. ಕೃಷ್ಣ ಮಧ್ಯೆ ಪ್ರವೇಶಿಸಿ ಅವರಿಗೆ ಬುದ್ಧಿವಾದ ಹೇಳಿದ್ದರಿಂದ ಅವರು ಸುಮ್ಮನಾದರು. ಅವಳ ಮಗನಾದ 2ನೆಯ ಗೋಣಂದ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗಲೇ ಅವನಿಗೆ ಪಟ್ಟಕಟ್ಟಲಾಯಿತು. ಅದೇ ಕಾಲದಲ್ಲಿ ಮಹಾಭಾರತ ಯುದ್ಧ ಆರಂಭವಾಯಿತು. ಅವನ ಅನಂತರ ಆಡಳಿತ ನಡೆಸಿದ ಮೂವತ್ತೈದು ಮಂದಿ ರಾಜರ ಬಗ್ಗೆ ಪ್ರಮಾಣಭೂತವಾದ ಯಾವ ಗ್ರಂಥವೂ ಇಲ್ಲದಿರುವುದರಿಂದ ಅವರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲವೆಂದು ಕಲ್ಯಾಣ ತಿಳಿಸುತ್ತಾನೆ.

ಅಶೋಕನ ಕಾಲದಿಂದ ಈಚೆಗೆ ನಮಗೆ ಸರಿಯಾದ ಖಚಿತವಾದ ಐತಿಹಾಸಿಕ ನೆಲೆ ಸಿಗುತ್ತದೆ. ಕಾಶ್ಮೀರವನ್ನಾಲಿದ ಅಶೋಕ ಮಗಧರಾಜ್ಯವನ್ನಾಳಿದ ಚಕ್ರವರ್ತಿ ಅಶೋಕನೇ ಹೊರತು ಬೇರೆಯವನಲ್ಲವೆಂದು ಇತಿಹಾಸಕಾರರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಏಕೆಂದರೆ ಅಶೋಕಚಕ್ರವರ್ತಿಯ ಸಾಮ್ರಾಜ್ಯ ಪೂರ್ವದಲ್ಲಿ ಬಂಗಾಳದವರೆಗೂ ಪಶ್ಚಿಮದಲ್ಲಿ ಹಿಂದೂಕುಷ್‍ವರೆಗೂ ವ್ಯಾಪಿಸಿತ್ತು. ಕಲ್ಯಾಣ ತನ್ನದೇ ಆದ ಕಾಲ ಗಣನೆಯ ಶಾಸ್ತ್ರವನ್ನು ಅನುಸರಿಸಿ, ಅಶೋಕನಿಗೆ ಕ್ರಿ.ಪೂ.1182ಕ್ಕೆ ಸಮನಾದ ಕಾಲವನ್ನು ಸೂಚಿಸಿದ್ದರಿಂದ ಸ್ವಲ್ಪ ತೊಡಕುಂಟಾಗಿದೆ. ಶಕಾನುಕ್ರಮದಲ್ಲಿ ಸ್ವಲ್ಪ ದೋಷವಿದೆ ಎಂದು ಹೇಳಲಾಗಿದೆ. ಅಶೋಕನ ಕಾಲಕ್ಕೆ ಮೊದಲು ಕಾಶ್ಮೀರದ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ರಾಜತರಂಗಿಣಿ ಖಚಿತವಾಗಿ ಏನನ್ನೂ ಹೇಳುವುದಿಲ್ಲ. ಸಂಸ್ಕøತದ ಕೆಲವು ಗ್ರಂಥಗಳಿಂದಲೂ ವೇದದ ಉತ್ತರ ಭಾಗಗಳಲ್ಲಿ ಕಂಡುಬರುವ ವಿಷಯಗಳಿಂದಲೂ ಅಕಿಮೆನಿಡೀಸ್ ಮನೆತನದ ದೊರೆಗಳು ಮತ್ತು ಗ್ರೀಕರು ಭಾರತದ ಮೇಲೆ ನಡೆಸಿದ ದಂಡಯಾತ್ರೆಯ ಸೂಚನೆಗಳಿಂದಲೂ ಕಾಶ್ಮೀರ ಆಫ್ಘಾನಿಸ್ಥಾನಕ್ಕೆ ಉತ್ತರದಲ್ಲಿದ್ದ ಗಾಂಧಾರದ ಒಂದು ಭಾಗವಾಗಿತ್ತೆಂದು ತಿಳಿಯಬಹುದು. ಪರ್ಷಿಯದ ದೊರೆ ಕೈರಸ್, ಪೆಲೊಪೊನೀಸಸ್ ಮತ್ತು ಕಾಬೂಲ್ ಕಣಿವೆಯಲ್ಲಿ ಭಾರತೀಯ ಜನರನ್ನು ಅಧೀನಕ್ಕೆ ಒಳಪಡಿಸಿಕೊಂಡಿದ್ದನೆಂದು ಗ್ರೀಕ್ ಚರಿತ್ರಕಾರರ ಬರಹಗಳಿಂದ ತಿಳಿದು ಬರುತ್ತದೆ. ಡೇರಿಯಸನ ಒಂದು ಶಾಸನದಲ್ಲಿ ಗಾಂಧಾರ ಅವನ ಸಾಮ್ರಾಜ್ಯದ ಒಂದು ಪ್ರಾಂತ್ಯವಾಗಿತ್ತೆಂದು ಉಲ್ಲೇಖವಿದೆ. ಅವನ ಉತ್ತರಾಧಿಕಾರಿಗಳು ಪಶ್ಚಿಮ ರಾಜ್ಯಗಳ ವ್ಯವಹಾರದಲ್ಲಿ ಕೈಹಾಕಿದ್ದರಿಂದ ಅವರು ಪೂರ್ವದ ರಾಜ್ಯಗಳ ಕಡೆ ಗಮನ ನೀಡಲಿಲ್ಲ. ಆದರೆ 1ನೆಯ ಡೇರಿಯಸ್ (ಕ್ರಿ.ಪೂ.5582-486) ಸಿಂಧು ಪ್ರದೇಶದ ಒಂದು ಭಾಗವನ್ನು ಕ್ರಿ.ಪೂ.518ರಲ್ಲಿ ಆಕ್ರಮಿಸಿದಂತೆ ಕಂಡುಬರುತ್ತದೆ. ಕಾಶ್ಮೀರ ಸ್ವಲ್ಪ ಕಾಲ ಅಕಿಮೆನಿಡೀಸ್ ದೊರೆಗಳ ಆಧೀನದಲ್ಲಿತ್ತು ಎನ್ನುವುದರ ಬಗ್ಗೆ ಯಾವ ಸಂಶಯವೂ ಇಲ್ಲ. ಅಲೆಗ್ಸಾಂಡರ್ ಭಾರತದ ಮೇಲೆ ಕೈಗೊಂಡ ದಂಡಯಾತ್ರೆಯನ್ನು ಕುರಿತ ದಾಖಲೆಗಳಲ್ಲಿ ಕಾಶ್ಮೀರದ ಉಲ್ಲೇಖವಿಲ್ಲ.

ಅಲೆಗ್ಸಾಂಡರ್ ಭಾರತವನ್ನು ಬಿಟ್ಟು ಹೋದಮೇಲೆ ಚಂದ್ರಗುಪ್ತ ಮಗಧ ರಾಜ್ಯದ ದೊರೆಯಾಗಿ ತನ್ನ ಪ್ರಭುತ್ವವನ್ನು ಉತ್ತರ ಹಿಂದೂಸ್ಥಾನಕ್ಕೆಲ್ಲ ವಿಸ್ತರಿಸಿದ. ಅವನು ಗಾಂಧರವನ್ನೂ ಭಾರತದ ವಾಯವ್ಯ ಭಾಗದಲ್ಲಿದ್ದ ಎಲ್ಲ ಸತ್ರಪಿಗಳನ್ನೂ ವಶಪಡಿಸಿಕೊಂಡ. ಚಂದ್ರಗುಪ್ತನ ಮೊಮ್ಮ್ಮಗನಾದ ಅಶೋಕ ಕಾಶ್ಮೀರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿ, ಅಲ್ಲಿಗೆ ಆಗಾಗ್ಗೆ ಭೇಟಿ ಕೊಡುತ್ತಿದ್ದ. ಕಾಶ್ಮೀರದ ರಾಜಧಾನಿಯಾದ ಶ್ರೀನಗರವನ್ನು ಸ್ಥಾಪಿಸಿ ಅಲ್ಲಿ 96.000 ಮನೆಗಳನ್ನು ಕಟ್ಟಿಸಿದನೆಂದು ಹೇಳಲಾಗಿದೆ. ಇವುಗಳ ಜೊತೆಗೆ ಅಶೋಕ ಅಲ್ಲಿ ಅನೇಕ ವಿಹಾರಗಳನ್ನೂ ಸ್ತೂಪಗಳನ್ನೂ ಕಟ್ಟಿಸಿದ. ವಿಜಯೇಶ್ವರ ದೇವಾಲಯದ ಸುತ್ತ ಕಲ್ಲುಗೋಡೆ ಕಟ್ಟಿಸಿ ಆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ. ಅಲ್ಲದೆ ಅವನು ಭೂತೇಶ ಶಿವದೇವಾಲಯದ ಭಕ್ತನಾಗಿದ್ದಂತೆ ಕಂಡುಬರುತ್ತದೆ. ಕಾಶ್ಮೀರದಲ್ಲಿ ಬೌದ್ಧಮತವನ್ನು ಪ್ರಚಾರಕ್ಕೆ ತಂದವನು ಅವನೇ. ಮೊಗ್ಗಲಿಪುತ್ತ ತಿಸ್ಸನ ಅಧ್ಯಕ್ಷತೆಯಲ್ಲಿ ಸೇರಿದ್ದ ಬೌದ್ಧಸಭೆಯ ಕಾರ್ಯಕಲಾಪಗಳು ಮುಕ್ತಾಯವಾದ ಮೇಲೆ, ಮಜ್ಜಂತಿಕನೆಂಬ ಧರ್ಮಪ್ರಚಾರಕನನ್ನು ಕಾಶ್ಮೀರ ಮತ್ತು ಗಾಂಧಾರಗಳಿಗೆ ಕಳುಹಿಸಲಾಯಿತು. ಅಶೋಕನ ಆಜ್ಞೆಯ ಮೇರೆಗೆ 5,000 ಬೌದ್ಧ ಸನ್ಯಾಸಿಗಳು ಕಾಶ್ಮೀರಕ್ಕೆ ಬಂದು ನೆಲಸಿದರೆಂದು ಹ್ಯೂಯೆನ್ ತ್ಸಾಂಗ್ ಮತ್ತು ಔಕಾಂಗ್ ತಿಳಿಸುತ್ತಾರೆ. ಬೌದ್ಧಮತ ಪ್ರಚಾರಕ್ಕೂ ಅಧ್ಯಯನಕ್ಕೂ ಅದನ್ನೇ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಳ್ಳುವಂತೆ ಹೇಳಿ ಅಶೋಕ ಆ ಕಣಿವೆಯನ್ನು ಸಂಘಕ್ಕೆ ಬಿಟ್ಟುಕೊಟ್ಟ. ಅಶೋಕನ ಚಕ್ರಾಧಿಪತ್ಯ ಆಫ್ಘಾನಿಸ್ಥಾನ, ಕಾಶ್ಮೀರ ಮತ್ತು ನೇಪಾಳ ದೇಶಗಳಿಂದ ಹಿಡಿದು ದಕ್ಷಿಣದಲ್ಲಿ ಕರ್ನಾಟಕದವರೆಗೂ ವಿಸ್ತರಿಸಿತ್ತೆಂಬುದು ಆ ಶಾಸನಗಳಿಂದ ತಿಳಿದುಬರುತ್ತದೆ. ಅಶೋಕನ ಕಾಲವಾದ ಬಳಿಕ ಮಗಧ ಸಾಮ್ರಾಜ್ಯ ಅವನತಿಯ ಹಾದಿ ಹಿಡಿಯಿತು. ಕಾಶ್ಮೀರದಲ್ಲಿದ್ದ ಹರ ಮುಕುಟ ಗಂಗಾ ಎಂಬ ವಿಖ್ಯಾತವಾದ ದೇವಾಲಯದ ಶಿವಭೂತ ದೇವರನ್ನು ಪೂಜಿಸಿ, ಅವನ ಕೃಪಾಕಟಾಕ್ಷದಿಂದ ಅಶೋಕ ಒಬ್ಬ ಮಗನನ್ನು ಪಡೆದನೆಂದು ಕಲ್ಹಣ ತಿಳಿಸುತ್ತಾನೆ. ಜಲೌಕನೆಂದು ಪ್ರಸಿದ್ಧನಾದ ಅವನು ತನ್ನ ತಂದೆಯ ಮರಣಾನಂತರ ಕಾಶ್ಮೀರದಲ್ಲಿ ಒಬ್ಬ ಸ್ವತಂತ್ರ ರಾಜನಾದ. ಅವನು ಶಿವನ ಆರಾಧಕನಾಗಿದ್ದು ಪ್ರತಿನಿತ್ಯವೂ ಭೂತೇಶ ಮತ್ತು ವಿಜಯೇಶ್ವರ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದ. ಮೊದಲು ಅವನು ಬೌದ್ಧರ ವಿರೋಧಿಯಾಗಿದ್ದು ಅನಂತರ ಅವರ ಸ್ನೇಹಿತನಾದ. ಬಾರಾಮೂಲಕ್ಕೆ 5 ಮೈ. ದೂರವಿರುವ ಝೀಲಂ ನದಿಯ ಎಡದಂಡೆಯ ಕೃತ್ಯ ಶ್ರಾಮ ಎಂಬ ಹಳ್ಳಿಯಲ್ಲಿ ಅವನು ಒಂದು ಬೌದ್ಧ ವಿಹಾರ ಕಟ್ಟಿಸಿ, ಬೌದ್ಧಮತಕ್ಕೆ ಪ್ರೋತ್ಸಾಹ ನೀಡಿದ. ಅವನು ಅಪ್ರತಿಮ ವೀರನಾಗಿದ್ದ. ದೇಶದ ಮೇಲೆ ದಾಳಿಯಿಟ್ಟು ಮ್ಲೇಚ್ಛರನ್ನು ಹೊಡೆದೋಡಿಸಿ ರಾಜ್ಯವನ್ನು ವಿಸ್ತರಿಸಿದ, ಕನೌಜ್ ಮತ್ತು ಗಾಂಧಾರಗಳನ್ನು ಗೆದ್ದು ಅಲ್ಲಿದ್ದ ವಿದ್ವಾಂಸರನ್ನು ಸೆರೆಹಿಡಿದು ತಂದು ಕಾಶ್ಮೀರದಲ್ಲಿ ನೆಲಸುವಂತೆ ಮಾಡಿದ. ಆಫ್ಘಾನಿಸ್ಥಾನದ ಕೆಲವು ಭಾಗಗಳಲ್ಲೂ ಪಂಜಾಬಿನಲ್ಲೂ ಕೆಲವು ಗ್ರೀಕ್ ರಾಜರು ಸುಮಾರು 300 ವರ್ಷಗಳ ಕಾಲ ಆಳಿದರು. ಕ್ರಿ.ಪೂ.150ರಲ್ಲಿ ರಾಜ್ಯವಾಳುತ್ತಿದ್ದ ಮಿನಾಂಡರ್ ಎಂಬುವನು ಇವರಲ್ಲಿ ಅತ್ಯಂತ ಪ್ರಸಿದ್ಧ. ಕಾಶ್ಮೀರದಿಂದ 12 ಯೋಜನ ದೂರದಲ್ಲಿದ್ದ ಒಂದು ಸ್ಥಳದಲ್ಲಿ ಭಾರತದ ವಾಯವ್ಯ ಭಾಗದಲ್ಲಿ ಆಳುತ್ತಿದ್ದ ಇಂಡೋ-ಗ್ರೀಕ್ ದೊರೆಯಾದ ಮಿನಾಂಡರ್ ಮತ್ತು ಬೌದ್ಧ ಸನ್ಯಾಸಿಯಾದ ನಾಗಸೇನ ಇವರ ನಡುವೆ ಚರ್ಚೆ ನಡೆದುದು ಮಿಳಿಂದ ಪನಃ ಎಂಬ ಗ್ರಂಥದಿಂದ ತಿಳಿದುಬರುತ್ತದೆ. ಅನಂತರ ಪಾರ್ಥಿಯನರೂ ಶಕರೂ ಗ್ರೀಕರಿಗೆ ಸೇರಿದ್ದ ಭಾಗಗಳನ್ನು ಜಯಿಸಿದರು. ಶಕರ ತರುವಾಯ ಬಂದ ಕುಶಾಣರ ವಿಸ್ತಾರವಾದ ರಾಜ್ಯದಲ್ಲಿ ಕಾಶ್ಮೀರ ಸೇರಿತ್ತು. ಕನಿಷ್ಕ ಇವರಲ್ಲಿ ಪ್ರಸಿದ್ಧನಾದವನು. ಪುರುಷಪುರವೇ (ಪೆಷಾವರ್) ಅವನ ರಾಜಧಾನಿಯಾಗಿತ್ತು. ಕನಿಷ್ಕ ಬೌದ್ಧಮತವನ್ನವಲಂಬಿಸಿದ. ಬೌದ್ಧ ಸಿದ್ಧಾಂತಗಳನ್ನು ವ್ಯವಸ್ಥೆಗೊಳಿಸಿ ಕ್ರಮಪಡಿಸುವುದಕ್ಕಾಗಿ ಅವನು ಕಾಶ್ಮೀರದಲ್ಲಿ ಬೌದ್ಧಮಹಾಸಭೆಯನ್ನು ಕೂಡಿಸಿದ. ಕನಿಷ್ಕನ ತರುವಾಯ ಬೌದ್ಧಮತಕ್ಕೆ ಭಾರಿ ಪೆಟ್ಟು ಬಿದ್ದಿತು. ನಾಗಾರ್ಜುನನ ಮಾರ್ಗದರ್ಶನದಲ್ಲಿ ಮುಂದುವರಿದ ಬೌದ್ಧರು ವೈದಿಕಮತವನ್ನು ಮೂಲೋತ್ಪಾಟನೆ ಮಾಡಲು ಯತ್ನಿಸಿದರು. ಇದರಿಂದ ಕೋಪಗೊಂಡ ನಾಗರು ಬೌದ್ಧರನ್ನು ಹಿಂಸಿಸಲು ಪ್ರಾರಂಭಿಸಿದರು. ಅಂತ್ಯದಲ್ಲಿ ಕಾಶ್ಮೀರದ ನಾಗರ ರಾಜನಾದ ನೀಲನಾಗನೆಂಬ ದೊರೆಯ ಅಪ್ಪಣೆ ಪಡೆದ ಒಬ್ಬ ಬ್ರಾಹ್ಮಣ ಹಿಂದೂಮತವನ್ನು ಪುನರುಜ್ಜೀವನಗೊಳಿಸಿ, ಬೌದ್ಧರ ಪ್ರಾಬಲ್ಯವನ್ನು ಕಡಿಮೆ ಮಾಡಿದ. ಎರಡೂ ಮತಗಳೂ ಕಾಶ್ಮೀರದಲ್ಲಿ ಬೆಳೆದುವು. ಈ ಹಿಂದೂ-ಬೌದ್ಧ ಕಾಲದಲ್ಲಿ, ಅದರಲ್ಲೂ ಪ್ರಧಾನವಾಗಿ 5ನೆಯ ಶತಮಾನದಿಂದ 10ನೆಯ ಶತಮಾನದವರೆಗೆ, ಹಿಂದೂಗಳು ಕಾಶ್ಮೀರದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದರು.

ಕಾಶ್ಮೀರಿ ಸನ್ಯಾಸಿಗಳು, ಮತಪ್ರಚಾರಕರು, ಬರಹಗಾರರು ಮತ್ತು ವಿದ್ವಾಂಸರು ಭಾರತೀಯ ಸಂಸ್ಕøತಿಯನ್ನೂ ಮತಧರ್ಮವನ್ನೂ ಚೀನದಲ್ಲಿ ಹರಡುತ್ತಿದ್ದಂತೆಯೇ ಅಲ್ಲಿಂದ ಪ್ರವಾಹದೋಪಾದಿಯಲ್ಲಿ ಯಾತ್ರಿಕರೂ ವಿದ್ಯಾರ್ಥಿಗಳೂ ಭಾರತದ ಪವಿತ್ರ ಸ್ಥಳಗಳನ್ನೂ ವಿದ್ಯಾಕೇಂದ್ರಗಳನ್ನೂ ಸಂದರ್ಶಿಸುವ ಸಲುವಾಗಿ ಬರತೊಡಗಿದರು. ಅವರಲ್ಲಿ ಅನೇಕ ಮಂದಿ ಕಾಶ್ಮೀರಕ್ಕೆ ಭೇಟಿ ಕೊಟ್ಟರು. ಕಾಶ್ಮೀರದಲ್ಲಿ ಸಂಪಾದಿಸಿದ ಜ್ಞಾನವನ್ನು ಅವರು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಪ್ರಸಾರ ಮಾಡತೊಡಗಿದರು. ಬುದ್ಧನ ಪವಿತ್ರ ಗ್ರಂಥಗಳನ್ನು ಸಂಗ್ರಹಿಸುವುದಕ್ಕೂ ಬುದ್ಧನ ಜನ್ಮಸ್ಥಳದಲ್ಲಿ ಜನರು ಅವನ ವಿಷಯವಾಗಿ ಏನನ್ನು ನೆನಪಿನಲ್ಲಿಟ್ಟಿದ್ದಾರೆಂಬುದನ್ನು ತಿಳಿಯುವುದಕ್ಕೂ ಫಾಹಿಯೆನ್ ಎಂಬ ಬೌದ್ಧ ಸನ್ಯಾಸಿ ಚೀನದಿಂದ ಹೊರಟು, ಕಾಶ್ಮೀರದ ಗಡಿಯ ಮೂಲಕ ಭಾರತಕ್ಕೆ ಬಂದ (ಕ್ರಿ.ಶ.399). ಪೂರ್ವ ತುರ್ಕಿಸ್ತಾನದ ಮಾರ್ಗವಾಗಿ ಬರುತ್ತ ಅವನು ಗಿಲ್ಗಿಟ್ ಮತ್ತು ಲಡಾಕ್‍ಗಳಿಗೆ ಭೇಟಿ ಕೊಟ್ಟ. ಅಲ್ಲಿ ಬೌದ್ಧ ಮತ ಉಚ್ಛ್ರಾಯ ಸ್ಥಿತಿಯಲ್ಲಿದ್ದುದನ್ನು ಅವನು ಕಂಡ. ಅವನು ಚೀನಕ್ಕೆ ಹಿಂದಿರುಗುವಾಗ ಜೊತೆಯಲ್ಲಿ ಕಾಶ್ಮೀರದ ನಿವಾಸಿಯಾದ ಬುಧಜೀವಿಯನ್ನು ಕರೆದುಕೊಂಡು ಹೋದ. ಫಾಹಿಯೆನನ ತರುವಾಯ ಮತ್ತೊಬ್ಬ ಚೀನೀಯಾತ್ರಿಕನಾದ ಜೆ-ಮಾಂಗ್ ಮತ್ತು ಅವನ ಜೊತೆಗಾರರು ಕಾಶ್ಮೀರದಲ್ಲಿ ಬಹಳ ಕಾಲದವರೆಗೆ ಇದ್ದು, ಬೌದ್ಧಮತದ ಪ್ರಗತಿಯನ್ನು ಕಂಡು ಆನಂದಿಸಿ, ಅನಂತರ ಭಾರತದ ಪವಿತ್ರ ಸ್ಥಳಗಳ ಸಂದರ್ಶನಾರ್ಥವಾಗಿ ಅಲ್ಲಿಂದ ಹೊರಟರು. ಕ್ರಿ.ಶ.424ರಲ್ಲಿ ಅವನು ಚೀನವನ್ನು ಮರಳಿ ಸೇರಿದ. ಮತ್ತೊಬ್ಬ ಚೀನೀ ಸನ್ಯಾಸಿ ಫ-ಯಂಗ್ 20 ಮಂದಿ ಸನ್ಯಾಸಿಗಳ ಗುಂಪಿಗೊಂದಿಗೆ 420ರಲ್ಲಿ ಹೊರಟು, ಗಿಲ್ಗಿಟ್ ಮೂಲಕ ಕಾಶ್ಮೀರಕ್ಕೆ ಬಂದು, ಒಂದು ವರ್ಷಕ್ಕೂ ಹೆಚ್ಚು ಕಾಲ ಅಲ್ಲಿದ್ದು ಸಂಸ್ಕøತ ಭಾಷೆ ಕಲಿತು, ಬೌದ್ಧ ಗ್ರಂಥವನ್ನು ಅಧ್ಯಯನ ಮಾಡಿ, ಸ್ವದೇಶಕ್ಕೆ ಮರಳಿದ, ಹ್ಯುಯೆನ್‍ತ್ಸಾಂಗ್ ಕೂಡ ಕಾಶ್ಮೀರವನ್ನು ಪ್ರವೇಶಿಸಿ ಅಲ್ಲಿ ಸೂತ್ರಗಳ ಮತ್ತು ಶಾಸ್ತ್ರಗಳ ಅಧ್ಯಯನದಲ್ಲಿ ಎರಡು ವರ್ಷಗಳನ್ನು ಕಳೆದ (ಏಪ್ರಿಲ್ 631-ಏಪ್ರಿಲ್ 633). ಕಾಶ್ಮೀರದ ರಾಜ ಅವನಿಗೆ ಅದ್ದೂರಿಯ ಸ್ವಾಗತ. ಕೋರಿದ. ಐದು ಸಾವಿರಕ್ಕೂ ಹೆಚ್ಚು ಮಂದಿ ಬೌದ್ಧ ಸನ್ಯಾಸಿಗಳು ಅನೇಕ ಸಂಘಗಳಲ್ಲಿ ಜೀವಿಸುತ್ತಿದ್ದುದನ್ನು ಹ್ಯುಯೆನ್‍ತ್ಸಾಂಗ್ ಅಲ್ಲಿ ಕಂಡ. ಙ-ಕಾಂಗ್ ಎಂಬ ಮತ್ತೊಬ್ಬ ಚೀನೀ ಬೌದ್ಧಯಾತ್ರಿಕ ಕಾಬೂಲ್ ಕಣಿವೆ ಮತ್ತು ಗಾಂಧಾರದ ಮೂಲಕ ಕ್ರಿ.ಶ.759ರಲ್ಲಿ ಕಿ-ಪಿನ್‍ಗೆ ಬಂದ. ಅವನು ಕಾಶ್ಮೀರದಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ. ಅವನು ಸಂಸ್ಕøತವನ್ನು ಅಭ್ಯಸಿಸಿ, ಮೂರು ಮಂದಿ ಉಪಾಧ್ಯಾಯರ ಸಹಾಯದಿಂದ ವಿನಯಪಿಟಕವನ್ನು ಕಲಿತುಕೊಂಡ. ಹೀಗೆ ಚೀನೀ ಯಾತ್ರಿಕರು ಕಾಶ್ಮೀರಕ್ಕೆ ಪದೇಪದೇ ಬರುತ್ತಲೇ ಇದ್ದರು.

ಕಾರ್ಕೋಟರಾಜ ವಂಶದ ದುರ್ಲಭವರ್ಧನ ಕಾಶ್ಮೀರದ ಸಿಂಹಾಸನವನ್ನೇರಿದಕಾಲದಿಂದ ಕಲಃಣನ ಚರಿತ್ರೆ ಅಧಿಕೃತ ಗ್ರಂಥದ ಸ್ವರೂಪ ಪಡೆಯುತ್ತದೆ. ಕ್ರಿ.ಶ.7ನೆಯ ಶತಮಾನದಿಂದ 12ನೆಯ ಶತಮಾನದವರೆಗೂ ಕಾಶ್ಮೀರವನ್ನು ಆಳಿದ ರಾಜರ ಚರಿತ್ರೆಯನ್ನು ಅವನು ಖಚಿತವಾಗಿಯೂ ನಿರ್ಣಾಯಕವಾಗಿಯೂ ವಿವರಿಸಿದ್ದಾನೆ. ಕಲ್ಹಣನ ಪ್ರಕಾರ ದುರ್ಲಭವರ್ಧನ ಕಾಶ್ಮೀರವನ್ನು ಸುಮಾರು 36 ವರ್ಷಗಳ ಕಾಲ ಆಳಿದ. ಆವಂತಿವರ್ಮನವರೆಗೆ ಕಾಶ್ಮೀರವನ್ನಾಳಿದ ಕಾರ್ಕೋಟ ರಾಜವಂಶದ ಅರಸರು ಇವರು : ದುರ್ಲಭವರ್ಧನ (600-636), 2ನೆಯ ಪ್ರತಾಪಾದಿತ್ಯ (636-686), ಚಂದ್ರಾಪೀಡ (686-694), ತಾರಾಪೀಡ (694-699), ಮುಕ್ತಾಪೀಡ (699-736), ಕುವಲಾಯಾಪೀಡ (736-737), ವಜ್ರಾದಿತ್ಯ (737-744) ಪ್ರಿತ್ಯಪೀಡ (744-748), ಸಂಗ್ರಾಮಪೀಡ (748), ಜಜ್ಜ (748-751), ಜಯಾಪೀಡ (751-782), ಲಲಿತಾಪೀಡ (782-794) 2ನೆಯ ಸಂಗ್ರಾಮಪೀಡ (794-801), ಸಿಪ್ಪತ ಜಯಾಪೀಡ (801-853), ಉತ್ಪಲಾಪೀಡ (853-855).

ಅವಂತಿವರ್ಮನ ಕಾಲದಲ್ಲಿ (855-83) ಕಾಶ್ಮೀರ ಸಂಪದ್ಭರಿತವಾದ ರಾಜ್ಯವಾಗಿ ಬೆಳೆಯಿತು. ಯುದ್ಧಗಳನ್ನು ತೊರೆದು ದೇಶದಲ್ಲಿ ಶಾಂತಿ ನೆಮ್ಮದಿಗಳನ್ನು ಸ್ಥಾಪಿಸಲು ಅವನು ಬಹುವಾಗಿ ಶ್ರಮಿಸಿದ. ಅನೇಕ ದೇವಸ್ಥಾನಗಳನ್ನು ಕಟ್ಟಿಸಿ, ನಗರ ನಿರ್ಮಾಣಕಾರ್ಯದಲ್ಲಿ ಹೆಚ್ಚು ಆಸಕ್ತಿ ವಹಿಸಿದ. ಅವನ ಪತ್ನಿ ಮತ್ತು ಮಕ್ಕಳೂ ಅನೇಕ ದೇವಾಲಯಗಳನ್ನೂ ಮಠಗಳನ್ನೂ ಕಟ್ಟಿಸಿದರು. ಅವನ ಮಗನೂ ಉತ್ತರಾಧಿಕಾರಿಯೂ ಆದ ಶಂಕರವರ್ಮ (883-902) ತನ್ನ ವಿರೋಧಿಗಳನ್ನು ದಮಿಸಿ, ಅನೇಕ ರಾಜ್ಯಗಳನ್ನು ಜಯಿಸಿ, ಕಾಶ್ಮೀರದ ಕೀರ್ತಿಯನ್ನು ಎತ್ತಿಹಿಡಿದ. ಗೋಪಾಲವರ್ಮ (902-904). ರಾಣಿ ಸುಗಂಧಾ (904-906). ಸುರವರ್ಮ (933-34), ಉನ್ಮತ್ತಿವಂತಿ (937-939), ಯಶಸ್ಕರ (939-948), ಪರ್ವಗುಪ್ತ (949-50), ಅಭಿಮನ್ಯು (958-972), ನಂದಿಗುಪ್ತ (972-73), ಬೀಮಗುಪ್ತ (975-981), ದಿಡ್ಡಾ(981-1003)-ಇವರು ಕಾಶ್ಮೀರವನ್ನು ಆಳಿದರು.

ಹನ್ನೊಂದನೆಯ ಶತಮಾನದಲ್ಲಿ ಘಜ್ನಿ ಮಹಮೂದ ನಡೆಸಿದ ದಂಡ ಯಾತ್ರೆಗಳಿಂದ ಕಾಶ್ಮೀರ ಕಣಿವೆಗೆ ಯಾವ ಅಪಾಯವೂ ತಗುಲಲಿಲ್ಲ. ಆನಂದಪಾಲನ ಮಗನಾದ ತ್ರಿಲೋಚನಪಾಲ ಘಜಿû್ನ ಮಹಮೂದನ ವಿರುದ್ಧ ನಡೆಸಿದ ಯುದ್ಧದಲ್ಲಿ ಕಾಶ್ಮೀರದ ಸೇನಾನಾಯಕನಾದ ತುಮಗ ಎಂಬುವನು ತ್ರಿಲೋಚನಪಾಲನ ಪರವಾಗಿ ಹೋರಾಡಿ ಸೋತುಹೋದನೆಂದು ತಿಳಿದುಬರುತ್ತದೆ. ಮಹಮೂದ ಆರನೆಯ ಸಾರಿ ಭಾರತದ ಮೇಲೆ ದಂಡಯಾತ್ರೆ ಮಾಡಿದಾಗ ಕಾಶ್ಮೀರದ ಮೇಲೆ ದಾಳಿ ಮಾಡಿದ. ಆದರೆ ಈ ವಿಷಯದ ಬಗ್ಗೆ ಕಲ್ಯಾಣ ಏನನ್ನೂ ಹೇಳುವುದಿಲ್ಲ.

ಕಾಶ್ಮೀರವನ್ನು ಆಳಿದ ಹರ್ಷ (1089-1101) ಪ್ರಸಿದ್ಧನಾದ ದೊರೆ. ಅವನು ಅಪ್ರತಿಮ ವೀರ, ಮಹಾವಿದ್ವಾಂಸ, ಬಹುಭಾಷಾವಿದ, ಸಂಗೀತಪ್ರಿಯ, ಸಾಹಿತ್ಯ ಕಲಾಪ್ರವೀಣ, ಕಾಶ್ಮೀರವನ್ನು ಆಳಿದ ಕೊನೆಯ ಹಿಂದೂರಾಜರಲ್ಲಿ ಅವನು ಶ್ರೇಷ್ಠ. ಕಾಶ್ಮೀರದ ರಾಜಸ್ತಾನದ ವೈಭವವನ್ನು ಕುರಿತು ಕಲ್ಯಾಣ ಒಂದು ಹೃದಯಂಗಮ ಚಿತ್ರ ಕೊಟ್ಟಿದ್ದಾನೆ. ಉಡುಪು, ಆಭರಣಗಳಲ್ಲಿ ಹೊಸ ಹೊಸ ಶೈಲಿಗಳನ್ನು ಹರ್ಷ ಜಾರಿಗೆ ತಂದ ಹರ್ಷನ ಮರಣಾನಂತರ ಕಾಶ್ಮೀರ ಸಿಂಹಾಸನವನ್ನು ಪಡೆಯುವುದಕ್ಕಾಗಿ ಉಕ್ಕಾಲ ಮತ್ತು ಸುಸ್ಸಾಲ ಎಂಬ ಇಬ್ಬರು ಸಹೋದರರು ನಡೆಸಿದ ಘೋರ ಹೋರಾಟವನ್ನು ಕಲ್ಯಾಣ ಚಿತ್ರಿಸಿದ್ದಾನೆ. ಸುಸ್ಸಾಲನ ಕೊಲೆಯಾದ ಮೇಲೆ ಅವನ ಮಗನಾದ ಜಯಸಿಂಹ (1128-1155) ತನ್ನ ರಕ್ಷಣೆಗಾಗಿ ಕಾಶ್ಮೀರವನ್ನು ಬಿಟ್ಟು ಲೊಹಾರ ಎಂಬ ಸ್ಥಳಕ್ಕೆ ಓಡಿಹೋದ. ಅಲ್ಲಿ ಸ್ವಲ್ಪ ಕಾಲವಿದ್ದು, ಒಂದು ಸೈನ್ಯವನ್ನು ಸಜ್ಜುಗೊಳಿಸಿಕೊಂಡ. ಭಿಕ್ಷಕರನೆಂಬ ಶತ್ರು ಶ್ರೀನಗರದ ಕಡೆಗೆ ಧಾವಿಸುತ್ತಿದ್ದಾನೆಂಬ ವರ್ತಮಾನವನ್ನು ಕೇಳಿ, ಧಾರಾಕಾರವಾಗಿ ಬೀಳುತ್ತಿದ್ದ ಹಿಮವನ್ನು ಲೆಕ್ಕಿಸದೆ ಸೇನಾಸಮೇತನಾಗಿ ಹೊರಟು, ಯುದ್ಧದಲ್ಲಿ ಶತ್ರುವನ್ನು ಸೋಲಿಸಿ, ಕಾಶ್ಮೀರ ಸಿಂಹಾಸನವನ್ನೇರಿ ರಾಜ್ಯವನ್ನು ವಿಸ್ತರಿಸಿದ. ಕಾಶ್ಮೀರದ ಮೇಲೆ ಆಕ್ರಮಣ ನಡೆಸಿದ ದಾರ್ದ್ ಜನರನ್ನು ಹೊಡೆದೋಡಿಸಿದ. ಹಿಂದೂ ರಾಜರ ಆಳ್ವಿಕೆಯ ಇನ್ನುಳಿದ ಕಾಲದ ಚರಿತ್ರೆಯನ್ನು 1459ರಲ್ಲಿ ಜೋನರಾಜನಿಂದ ರಚಿತವಾದ ಕೃತಿಯಿಂದ ತಿಳಿಯಬಹುದು.

ಹದಿಮೂರನೆಯ ಶತಮಾನದ ಆರಂಭದಲ್ಲಿ ಉತ್ತರ ಭಾರತ ಮತ್ತು ಮಧ್ಯ ಏಷ್ಯದ ಮೇಲೆ ಇಸ್ಲಾಂ ಪರಿಣಾಮಕಾರಿಯಾದ ಪ್ರಭಾವ ಬೀರಿತು. ಘಜಿû್ನ ಮಹಮೂದ ಮತ್ತು ಇತರರ ಆಕ್ರಮಣಗಳನ್ನು ಕಾಶ್ಮೀರ ತಪ್ಪಿಸಿಕೊಂಡರೂ ಇಸ್ಲಾಂ ಮತ ಪ್ರಚಾರದಿಂದ ಅದು ಪ್ರಭಾವಿತವಾಯಿತು. ಸಹದೇವ (1301-1320) ಸಿಂಹಾಸನಕ್ಕೆ ಬರುವ ಹೊತ್ತಿಗೆ ಕಾಶ್ಮೀರದಲ್ಲಿ ಹಲವರು ಇಸ್ಲಾಂ ಮತವನ್ನು ಅವಲಂಬಿಸಿದ್ದರು. ಇಪ್ಪತ್ತು ವರ್ಷಗಳ ಕಾಲ (1318-1338) ಪಿತೂರಿ, ಗಲಭೆ, ಕ್ರಾಂತಿ ಮತ್ತು ಯುದ್ಧಗಳ ಒಂದು ನಾಟಕವೇ ನಡೆದು ಅಂತ್ಯದಲ್ಲಿ ಕಾಶ್ಮೀರ ಮುಸ್ಲಿಂ ಆಳ್ವಿಕೆಗೆ ಒಳಪಟ್ಟಿತು. ಹಿಂದೂ ರಾಜರ ಆಳ್ವಿಕೆ 1338ರಲ್ಲಿ ಮುಕ್ತಾಯಗೊಂಡಿತು. ರಾಮಚಂದ್ರ ಸಹದೇವನ ದಕ್ಷ ಪ್ರಧಾನಿಯೂ ಸೇನಾಧಿಕಾರಿಯೂ ಆಗಿದ್ದ. ರಾಜ್ಯಾಡಳಿತದ ಎಲ್ಲ ಭಾಗಗಳನ್ನೂ ನೋಡಿ ಕೊಳ್ಳುತ್ತಿದ್ದವನು ರಾಮಚಂದ್ರನೇ. ಅವನ ಮಗಳಾದ ಕೋಟಾ ಎಂಬವಳು ತಂದೆಗೆ ಸಹಾಯಕಳಾಗಿದ್ದಳು. ರಿಂಚನ್ ಎಂಬ ನಿರಾಶ್ರಿತ ರಾಜಕುಮಾರ ಟಿಬೆಟ್ಟಿನಿಂದ ಓಡಿಬಂದು ರಾಮಚಂದ್ರನ ಆಶ್ರಯ ಬೇಡಿದ. ಸ್ವಲ್ಪ ಕಾಲಾನಂತರ ರಿಂಚಿನ್ ಕುತಂತ್ರದಿಂದ ಕಾಶ್ಮೀರವನ್ನು ವಶಪಡಿಸಿಕೊಂಡು ಅದರ ರಾಜನೆಂದು ಘೋಷಿಸಿಕೊಂಡ, ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು, ಕೋಟಾಳ ಕೈಹಿಡಿದು, ರಾಜ್ಯಭಾರ ಮಾಡತೊಡಗಿದ. ಲಾಮಾ ಮತವನ್ನು ಬಿಟ್ಟು ಹಿಂದೂಮತವನ್ನು ಅವಲಂಬಿಸುವಂತೆ ರಾಣಿ ಕೋಟಾ ಅವನನ್ನು ಕೇಳಿಕೊಂಡಳು. ಆದರೆ ಅವನು ಹಾಗೆ ಮಾಡದೆ ಇಸ್ಲಾಂ ಮತಾವಲಂಬಿಯಾದ. ಅವನೇ ಕಾಶ್ಮೀರದ ಮೊಟ್ಟ ಮೊದಲನೆಯ ಮುಸ್ಲಿಂ ದೊರೆ. ರಿಂಚನ್ ಮತ್ತು ಅವನ ರಾಣಿ ಇಬ್ಬರೂ ರಾಜ್ಯಾಡಳಿತವನ್ನು ದಕ್ಷತೆಯಿಂದಲೂ ನ್ಯಾಯಪರತೆಯಿಂದಲೂ ನಡೆಸಿದರು. ದೇಶದಲ್ಲಿ ಶಾಂತಿ, ನೆಮ್ಮದಿ ನೆಲಸುವಂತೆ ಶ್ರಮಿಸಿದರು. ಸಹದೇವನ ಸಹೋದರನಾದ ಉದ್ಯಾನದೇವ ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ, ರಿಂಚಿನನ ಕೊಲೆಗೆ ಪ್ರಯತ್ನಿಸಿದ. ಆದರೆ ರಿಂಚಿನ್ ಅವನನ್ನು ಅಡಗಿಸಿ ದೇಶದಲ್ಲಿ ಶಾಂತಿ ನೆಲಸುವಂತೆ ಮಾಡಿದ. ರಿಂಚಿನ್ ಮೃತಿ ಹೊಂದಿದ ಮೇಲೆ ಉದ್ಯಾನದೇವ ಕಾಶ್ಮೀರದ ಮೇಲೆ ದಾಳಿ ಮಾಡಿದ. ಕೋಟಾರಾಣಿ ಅವನನ್ನು ಬರಮಾಡಿಕೊಂಡು, ಸಿಂಹಾಸನವನ್ನು ಅವನಿಗೆ ಅರ್ಪಿಸಿ, ಅವನ ಕೈಹಿಡಿದಳು. ತನ್ನ ಸೌಂದರ್ಯ, ಪ್ರೇಮ ಮತ್ತು ಬುದ್ಧಿವಂತಿಕೆಯಿಂದ ಅವನ ಮೇಲೆ ತನ್ನ ಅಧಿಕಾರ ಸ್ಥಾಪಿಸಿ, ರಾಜ್ಯಾಡಳಿತವನ್ನು ತಾನೇ ನಡೆಸತೊಡಗಿದಳು. ಇವಳೇ ಕಾಶ್ಮೀರದ ಕೊನೆಯ ಹಿಂದೂ ಮಹಾರಾಣಿ. ಅವಳು ಬಹಿರಂಗವಾಗಿ ದರ್ಬಾರಿನಲ್ಲಿ ಮಂಡಿಸುತ್ತಿದ್ದಳು. ಯುದ್ಧಸಮಯದಲ್ಲಿ ಸೈನ್ಯದ ನಾಯಕಿಯಾಗುತ್ತಿದ್ದಳು. ಬಹಳ ದರ್ಪದಿಂದ ರಾಜ್ಯವಾಳಿದಳು. 1338ರಲ್ಲಿ ಉದ್ಯಾನವನದೇವ ಮೃತಿ ಹೊಂದಿದ. ಉದ್ಯಾನದೇವನ ಕೈಕೆಳಗೆ ವಜೀರನಾಗಿದ್ದ ಷಮೀರನಿಗೂ ರಾಣಿಗೂ ಹೋರಾಟ ಆರಂಭವಾಯಿತು. ಷಾಮೀರನ ಕಿರುಕುಳವನ್ನು ತಾಳಲಾರದೆ ಅವಳು ಆತ್ಮಹತ್ಯೆ ಮಾಡಿಕೊಂಡಳು. ಷಾಮೀರ ಸುಲ್ತಾನ್ ಷಂಸುದ್ದೀನ್ ಎಂಬ ಹೆಸರಿನಿಂದ (1339-42) ಕಾಶ್ಮೀರದ ಸಿಂಹಾಸನವನ್ನೇರಿ, ಕಾಶ್ಮೀರದಲ್ಲಿ ಸುಲ್ತಾನ್ ಸಂತತಿ ಅಭಿವೃದ್ಧಿ ಹೊಂದಲು ತಳಪಾಯವನ್ನು ಹಾಕಿದ. ಸುಲ್ತಾನ್ ಸಂತತಿಯವರು ಸುಮಾರು 222 ವರ್ಷಗಳ ಕಾಲ ಕಾಶ್ಮೀರವನ್ನು ಆಳಿದರು. ಕಾಶ್ಮೀರದ ದೀರ್ಘ ಇತಿಹಾಸದಲ್ಲಿ ಈ ಕಾಲ ಬಹಳ ಮುಖ್ಯವಾದ್ದು. ಕಾಶ್ಮೀರದ ಫಲವತ್ತಾದ ಭೂಮಿಯಲ್ಲಿ ಇಸ್ಲಾಂ ಮತ ಬಹುಬೇಗ ಬೇರುಬಿಟ್ಟು ಹೆಮ್ಮರವಾಗಿ ಬೆಳೆಯತೊಡಗಿತು. ಸುಲ್ತಾನ್ ವಂಶದ ಜೈನ್-ಉಲ್-ಅಬದಿನನ ಕಾಲದಲ್ಲಿ ಕಾಶ್ಮೀರಿಗಳು ಸಾಹಿತ್ಯ ಮತ್ತು ಕಲೆಗಳ ಕ್ಷೇತ್ರದಲ್ಲಿ ಉನ್ನತ ಸ್ಥಾನ ಗಳಿಸಿದರು. ಕಾಶ್ಮೀರಿ ಭಾಷೆ ಬೆಳೆಯಿತು. ಮೀರ್ ಷಂಸುದ್ದೀನ್ ಇರಾಕಿಯಿಂದ ಷಿಯಾ ಮತ ಜಾರಿಗೆ ಬಂತು. ಜೈನ್-ಉಲ್-ಅಬದಿನನ ಕಾಲದಲ್ಲಿ ಸಂಸ್ಕøತದ ಬದಲು ಪರ್ಷಿಯನ್ ಅಧಿಕೃತ ಭಾಷೆಯಾಯಿತು. ಈ ಕಾಲದಲ್ಲಿ ಪರ್ಷಿಯನ್ ಮತ್ತು ಅರಬ್ಬೀ ಕಲೆ ಮತ್ತು ಸಂಸ್ಕøತಿಗಳು ಕಾಶ್ಮೀರದ ಮೇಲೆ ತಮ್ಮ ಪ್ರಭಾವ ಬೀರಿದುವು. ಇಸ್ಲಾಂ, ಬೌದ್ಧ ಮತ್ತು ಹಿಂದೂ ಸಂಸ್ಕøತಿಗಳ ಸಂಯೋಜನೆ ಅಲ್ಲಿ ಸಾಧ್ಯವಾಯಿತು. ಮೂರು ವರ್ಷಗಳ ಆಳ್ವಿಕೆಯಲ್ಲಿ ಷಂಸುದ್ದೀನ್ ದೇಶದ ಪ್ರಗತಿಗಾಗಿ ಶ್ರಮಿಸಿ, ಜನರ ಸುಖದುಃಖಗಳಲ್ಲಿ ಭಾಗಿಯಾಗಿ, ಒಳ್ಳೆಯ ಆಡಳಿತಗಾರನೆಂಬ ಹೆಸರು ಪಡೆದ. ಸುಲ್ತಾನ್ ಅಲ್ಲಾಉದ್ದೀನ್ (1343-54), ಸುಲ್ತಾನ್ ಶಿಹಾಬ್-ಉದ್ದೀನ್ (1354-73), ಸುಲ್ತಾನ್ ಕುತ್ಬುದ್ದೀನ್ (1373-89), ಸುಲ್ತಾನ್ ಸಿಕಂದರ್ (1389-1413), ಸುಲ್ತಾನ್ ಅಲಿ ಷಾ (1413-20) ಇವರು ದೇಶವನ್ನು ಹೊರಗಿನ ಆಕ್ರಮಣದಿಂದ ರಕ್ಷಿಸಿ, ಜನರಿಗೆ ಸುಭದ್ರವಾದ ಸರ್ಕಾರ ನೀಡಲು ಶ್ರಮಿಸಿದರು.

ಸುಲ್ತಾನ್ ಜೈನ್-ಉಲ್-ಅಬದಿನ್ (1420-70) ಸಿಂಹಾಸನಾರೋಹಣ ಮಾಡಿದಂದಿನಿಂದ ಕಾಶ್ಮೀರ ವೈಭವಯುತವಾಗಿಯೂ ಸಂಪದ್ಭರಿತವಾಗಿಯೂ ಏಳಿಗೆ ಹೊಂದಲು ಅರಂಭಿಸಿತು. ಅವನು ಉದಾರಿ, ಕ್ಷಮಾಶೀಲ, ವಿಶಾಲ ಬುದ್ಧಿಯುಳ್ಳವ, ಪರಮತಸಹಿಷ್ಣು. ಅವನನ್ನು ಬುದ್ ಷಾ ಅಥವಾ ಮಹಾ ದೊರೆ ಎಂದು ಜನರು ಕರೆದು ತಮ್ಮ ಗೌರವವನ್ನು ಸೂಚಿಸಿದರು. ಒಳ್ಳೆಯ ಶಿಕ್ಷಣ ಪಡೆದು, ಸಾಮರ್ ಕಂಡ್ ಮೊದಲಾದ ದೇಶಗಳಲ್ಲಿ ಸಂಚರಿಸಿ, ಜನರ ರೀತಿನೀತಿಗಳನ್ನು ಗಮನಿಸಿ, ವಿವಿಧ ಸರ್ಕಾರಗಳ ಸ್ವರೂಪವನ್ನು ಕಂಡು ಅವನು ಜನರಿಗೆ ಯಾವುದು ಹಿತವೋ ಅಂಥ ಕೆಲಸಗಳನ್ನು ಮಾಡಲು ಯತ್ನಿಸಿದ. ಆಡಳಿತ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಅಪ್ರಾಮಾಣಿಕ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತಿದ್ದ. ಜನತೆಗೆ ಶೀಘ್ರವಾಗಿ ನ್ಯಾಯ ದೊರಕಿಸಿ ಕೊಡುತ್ತಿದ್ದ. ಸರ್ಕಾರವನ್ನು ಮಾನವೀಯತೆ ಮತ್ತು ಕಾನೂನುಗಳ ತಳಪಾಯದ ಮೇಲೆ ರಚಿಸಿದ. ಸೈನ್ಯ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಶಿಸ್ತು ನೆಲಸುವಂತೆ ಕ್ರಮ ಕೈಗೊಂಡ. ಅನೇಕ ಕೈಗಾರಿಕೆಗಳು ಸ್ಥಾಪಿತವಾದವು. ಸಂಗೀತ ಮತ್ತು ನೃತ್ಯ ಕಲೆಗಳ ಅಭಿವೃದ್ಧಿಗೆ ಉದಾರವಾಗಿ ಧನಸಹಾಯ ಮಾಡಿದ. ನಗರಗಳು, ಹಳ್ಳಿಗಳು ನಾಲೆಗಳು ಮತ್ತು ಸೇತುವೆಗಳ ನಿರ್ಮಾಣಕಾರ್ಯ ಕೈಗೊಂಡ. ವಿದ್ಯಾವಂತರಿಗೆ ಆಶ್ರಯ ದೊರಕಿತು. ಬೋಧಿಭಟ್ಟ ಅನೇಕ ಸಂಸ್ಕøತ ಗ್ರಂಥಗಳನ್ನು ಪರ್ಷಿಯನ್ ಭಾಷೆಗೆ ತರ್ಜುಮೆ ಮಾಡಿದ. ಜೋನರಾಜ ಮತ್ತು ಶ್ರೀವರರಾಜ ಇವನ ಆಶ್ರಯದಲ್ಲಿದ್ದರು. ಪರ್ಷಿಯನ್ ಮತ್ತು ಅರಬ್ಬೀ ವಿದ್ವಾಂಸರಾದ ಮೌಲನಾ ಕಬೀರ್, ಮುಲ್ಲಾ ಜಮಾಲ್ ಉದ್ದೀನ್ ಮತ್ತು ಕಾಜಿ ಮೀರ್ ಆಲಿ ಇವರ ಆಸ್ಥಾನವನ್ನು ಬೆಳಗಿದರು. 1470ರಲ್ಲಿ ಇವನು ಮರಣ ಹೊಂದಿದ.

ಜೈನ್-ಉಲ್-ಅಬದಿನನ ಎರಡನೆಯ ಮಗನಾದ ಹಾಜಿಖಾನ ಹೈದರ್ ಷಹ ಎಂಬ ಹೆಸರಿನಿಂದ 1470ರಲ್ಲಿ ಸಿಂಹಾಸನವನ್ನೇರಿದ. 1472ರಲ್ಲಿ ಅವನು ಕುಡಿದು ಮತ್ತನಾಗಿ ಅರಮನೆಯ ಉಪ್ಪರಿಗೆಯಿಂದ ಕಾಲುಜಾರಿ ಬಿದ್ದು ಸತ್ತ. ಹಸನ್ ಷಹ (1472-84). ಮಹಮದ್ ಷಹ (1484-86) ಫತೇ ಷಹ (1486-93), 2ನೆಯ ಮಹಮದ್ ಷಹ (1493-1505), 2ನೆಯ ಫತೇ ಷಹ (1505-14). 3ನೆಯ ಮಹಮದ್ ಷಹ (1514-15), 3ನೆಯ ಫತೇ ಷಹ (1515-17) ಮತ್ತು 4ನೆಯ ಮಹಮದ್ ಷಹ (1517-28) ಇವರು ಅನುಕ್ರಮವಾಗಿ ಕಾಶ್ಮೀರವನ್ನು ಆಳಿದರು. 1528ರಿಂದ ಮೊಗಲರು ಕಾಶ್ಮೀರವನ್ನು ವಶಪಡಿಸಿಕೊಳ್ಳುವವರೆಗೆ (1586) ಚಾಕ್ ವಂಶದವರು ಇಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು.

ಹುಮಾಯೂನನ ಹೆಸರಿನಲ್ಲಿ ಮಿರ್ಜಾ ಹೈದರ್ ದುಗ್ಲಕ್ ಕಾಶ್ಮೀರವನ್ನು ವಶಪಡಿಸಿಕೊಂಡಿದ್ದರಿಂದ ಆ ರಾಜ್ಯ ತನಗೆ ಸೇರಬೇಕೆಂದು ಅಕ್ಬರ್ ಚಕ್ರವರ್ತಿ ಕಾಶ್ಮೀರವನ್ನು ಆಳುತ್ತಿದ್ದ ಯೂಸುಫ್ ಖಾನನಿಗೆ ತಿಳಿಸಿ, ಆ ಬಗ್ಗೆ ಮಾತುಕತೆ ನಡೆಸಲು ಕೂಡಲೆ ಬರುವಂತೆ ಆಜ್ಞೆ ಮಾಡಿದ. ಯೂಸುಫ ಖಾನ್ ಅವನ ಆಜ್ಞೆಯನ್ನು ಉಪೇಕ್ಷಿಸಿದ. ಕೋಪಕೊಂಡ ಚಕ್ರವರ್ತಿ 1585ರಲ್ಲಿ ಐದು ಸಾವಿರ ಸೈನಿಕರ ಪಡೆಯನ್ನು ಭಗವಾನ್ ದಾಸನ ನಾಯಕತ್ವದಲ್ಲಿ ಕಾಶ್ಮೀರಕ್ಕೆ ಕಳುಹಿಸಿಕೊಟ್ಟ. ಯೂರುಫ್ ಖಾನನ ಮಗ ಯಾಕೂಬ್ ವೀರಾವೇಶದಿಂದ ಹೋರಾಡಿ ಮೊಗಲರ ದಾಳಿಯನ್ನು ಪ್ರತಿಭಟಿಸಿದ. ಭಗವಾನ್‍ದಾಸ ಕಂಗೆಟ್ಟು ಯೂಸುಫ್ ಷಹನೊಂದಿಗೆ ಶಾಂತಿಸಂಧಾನ ಮಾಡಿಕೊಂಡು, ಯೂಸುಫ್ ಷಹನನ್ನು ಮೋಸದಿಂದ ಸೆರೆ ಹಿಡಿಸಿದ. 1592ರಲ್ಲಿ ಯೂಸುಫ ಷಹ ಕಾರಾಗೃಹದಲ್ಲಿ ಮರಣಹೊಂದಿದ. ಮತ್ತೆ ಅಕ್ಬರ್ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ. ಕಾಸಿಮ್‍ಖಾನನ್ನು ಕಳುಹಿಸಿಕೊಟ್ಟ. 1586ರ ಅಕ್ಟೋಬರ್ 14ರಂದು ಮೊಗಲ್ ಸೈನ್ಯ ಶ್ರೀನಗರದ ಮೇಲೆ ದಾಳಿಮಾಡಿತು. ಯಾಕೂಬ್ ಆಕ್ರಮಣಕಾರರನ್ನು ಎದುರಿಸಲಾರದೆ ದೇಶ ಬಿಟ್ಟು ಓಡಿಹೋದ. ಶ್ರೀನಗರ ಮೊಗಲರ ವಶವಾಯಿತು. ಅಂದಿನಿಂದ ಕಾಶ್ಮೀರ ಮೊಗಲ್ ಸಾಮ್ರಾಜ್ಯದ ಒಂದು ಪ್ರಾಂತ್ಯವಾಯಿತು.

ಅಕ್ಬರ್ ಕಾಶ್ಮೀರದ ಮೇಲೆ ತನ್ನ ಅಧಿಕಾರವನ್ನು 19 ವರ್ಷಗಳ ಕಾಲ ಸ್ಥಾಪಿಸಿದ್ದ. ಆ ಕಾಲದಲ್ಲಿ ಮಿeóರ್Á ಖಾಸಿಂ (1586-1587), ಮಿeóರ್Á ಯೂಸುಫ್ ಖಾನ್ ರಿಜಿû್ವ (1587-1590), ಮಹಮದ್ ಕುಲಿeóï ಖಾನ್ (1590-1601), ಮತ್ತು ಮಿeóರ್Á ಅಲಿ ಅಕ್ಬರ್ (1601-1606) ಸುಭೇದಾರರಾಗಿ ಕಾಶ್ಮೀರದ ಆಡಳಿತ ನಡೆಸಿದರು. ಅಕ್ಬರ್ ಕೈಗಾರಿಕೆಗಳನ್ನು ಸ್ಥಾಪಿಸಲು ಧನಸಹಾಯ ಮಾಡಿ, ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ. ಅಕ್ಬರನ ಮಗ ಜಹಾಂಗೀರ್ ಕಾಶ್ಮೀರದ ಸೌಂದರ್ಯದಿಂದ ಆಕರ್ಷಿತನಾಗಿ, ತನ್ನ ತಂದೆಯ ಜೊತೆಯಲ್ಲಿ 1589ರಲ್ಲಿ ಪ್ರಥಮವಾಗಿ ಅಲ್ಲಿಗೆ ಭೇಟಿಕೊಟ್ಟಿದ್ದ. ಆಮೇಲೆ ಪದೇಪದೇ ಕಾಶ್ಮೀರಕ್ಕೆ ಭೇಟಿಕೊಡುತ್ತಿದ್ದ. ಅವನ ಕಾಲದಲ್ಲಿ ಹಷಾಮ್ ಖಾನ್ (1609-12), ಸರ್ದಾರ್ ಖಾನ್ (1612-15), ಅಹಮದ್ ಬೇಗ್ (1615-18), ದಿಲಾವರ್ ಖಾನ್ (1618-20), ಇರಾದತ್ ಖಾನ್ (1620-22) ಮತ್ತು ಇತ್‍ಕದ್ ಖಾನ್ (1622-33) ಮೊಗಲ್ ಸುಭೇದಾರರಾಗಿ ಕಾಶ್ಮೀರದ ಆಡಳಿತವನ್ನು ದಕ್ಷತೆಯಿಂದ ನಡೆಸಿದರು. ಜಹಾಂಗೀರ್ ನಾನಾ ಬಗೆಯ ಹೂ ಗಿಡಗಳನ್ನೂ ಮರಗಳನ್ನೂ ಅಲ್ಲಿ ನೆಡಿಸಿ ಬೆಳಸಿದ. ಷಾಲಿಮಾರ್ ಮತ್ತು ನಿಷಾತ್ ಬಾಗ್ ಎಂಬ ಉದ್ಯಾನಗಳು ಫಲಪುಷ್ಪ ಗಿಡಮರಗಳಿಂದ ಕಂಗೊಳಿಸತೊಡಗಿದವು. ಜನರು ಮೂಢನಂಬಿಕೆಯಿಂದ ನಡೆಸುತ್ತಿದ್ದ ಕೆಲವು ಹೇಯಕೃತ್ಯಗಳನ್ನು ಜಹಾಂಗೀರ್ ನಿಲ್ಲಿಸಿದ. ಸಹಗಮನ, ಮಕ್ಕಳ ಬಲಿ, ಬಲವಂತ ಮತಾಂತರ ಮೊದಲಾದವನ್ನು ತೊಡೆದುಹಾಕಿದ.

ಜಹಾಂಗೀರನ ಮಗನಾದ ಷಾಹಜಹಾನನಿಗೂ (1627-1658) ಕಾಶ್ಮೀರದಲ್ಲಿ ಹೆಚ್ಚು ಆಸಕ್ತಿಯಿತ್ತು. ಅವನು ಕಾಶ್ಮೀರಕ್ಕೆ ಅನೇಕ ಬಾರಿ ಭೇಟಿ ಕೊಟ್ಟ. ಕಾಶ್ಮೀರದ ಗಿರಿಶ್ರೇಣಿಗಳು, ಪುಷ್ಕರಿಣಿಗಳು, ಉದ್ಯಾನಗಳು, ನದಿಗಳು, ಝರಿಗಳು, ಶುಕಪಿಕಗಳು ಅವನನ್ನು ಬಹುವಾಗಿ ಆಕರ್ಷಿಸಿದ್ದವು. ಅವನು ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಕಾಶ್ಮೀರದಲ್ಲಿ ಅನೇಕ ತೋಟಗಳನ್ನು ಬೆಳೆಸಿದ. ಮಸೀದಿಗಳನ್ನೂ ಸರಾಯ್‍ಗಳನ್ನೂ ಕಟ್ಟಿಸಿದ. ಜಫಾರ್ ಖಾನ್, ಅಲಿಮರ್ದನ್ ಖಾನ್, ಲಷ್ಕರ ಖಾನ್ ಇವರು ಮೊಗಲ್ ಸುಭೇದಾರರಾಗಿದ್ದರು. ಕವಿಯೂ ರಾಜಕಾರಣಿಯೂ ಯೋಧನೂ ಆದ ಜಫಾರ್ ಖಾನ್ ಬಾಲ್ಟಿಸ್ತಾನದ ದಂಗೆಕೋರರನ್ನು ಅಡಗಿಸಿ, ಕಾಶ್ಮೀರದಲ್ಲಿ ಸುಖಶಾಂತಿ ನೆಲಸುವಂತೆ ಕ್ರಮ ಕೈಗೊಂಡ. ಷಾಹಜಹಾನನ ಮಗನಾದ ಮುರಾ ರಾಜಕುಮಾರ ಕಾಶ್ಮೀರದ ಆಡಳಿತಾಧಿಕಾರಿಯಾಗಿ ಒಂದು ವರ್ಷ ಇದ್ದ.

ಷಾಹಜಹಾನನ ಮರಣಾನಂತರ (1658) ಅವನ ಮಗ ಔರಂಗ್eóÉೀಬ್ ದೆಹಲಿ ಸಿಂಹಾಸನವನ್ನೇರಿದ. 1665ರಲ್ಲಿ ಒಂದೇ ಒಂದು ಸಾರಿ ಅವನು ಕಾಶ್ಮೀರಕ್ಕೆ ಭೇಟಿಕೊಟ್ಟ. ತನ್ನ ಮಗಳೂ ರೋಷನಾರಳೊಂದಿಗೆ ಔರಂಗ್eóÉೀಬ್ ಕಾಶ್ಮೀರಕ್ಕೆ ಭೇಟಿ ಕೊಟ್ಟದ್ದನ್ನು ಫ್ರಾಂಕೋಯಿಸ್ ಬರ್ನಿಯರ್ ಎಂಬ ಪ್ರವಾಸಿ ಬಹು ರಮ್ಯವಾಗಿ ವರ್ಣಿಸಿದ್ದಾನೆ. ಔರಂಗ್eóÉೀಬನ 49 ವರ್ಷಗಳ ಆಳ್ವಿಕೆಯಲ್ಲಿ 14 ಮಂದಿ ಗವರ್ನರುಗಳು ದಕ್ಷತೆಯಿಂದ ಕಾಶ್ಮೀರದ ಆಡಳಿತ ನಡೆಸಿದರು. ಅವರೂ ಹೊಸಹೊಸ ತೋಟಗಳನ್ನೂ ಮಸೀದಿಗಳನ್ನೂ ವಿಹಾರಸ್ಥಳಗಳನ್ನೂ ಕಟ್ಟಿಸಿದರು. ಔರಂಗ್eóÉೀಬನ ಮರಣಾನಂತರ (1707) ದೆಹಲಿ ಸಿಂಹಾಸನಕ್ಕೆ ಬಂದ ಬಾದಷಹರೂ ಕಾಶ್ಮೀರದ ಆಡಳಿತದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು.

ಅನಂತರ ಆಫ್ಘನರ ಆಳ್ವಿಕೆ ಬಂತು. ಅಹಮದ್ ಷಾ ಅಬ್ದಾಲಿ ತನ್ನ ದಿಗ್ವಿಜಯವನ್ನು ಮುಗಿಸಿಕೊಂಡು ಲಾಹೋರಿನಲ್ಲಿ ಬೀಡುಬಿಟ್ಟಿದಾಗ, ಪ್ರಭಾವ ಶಾಲಿಗಳಾದ ಇಬ್ಬರು ಕಾಶ್ಮೀರಿಗಳು, ಗವರ್ನರ್ ಅಬುಲ್ ಖಾಸಿಂ ಖಾನನ ಮೇಲೆ ಇಲ್ಲದ ಸಲ್ಲದ ಆರೋಪಣೆಗಳನ್ನು ಹೊರಿಸಿ, ಕಾಶ್ಮೀರದ ಮೇಲೆ ದಾಳಿ ಮಾಡುವಂತೆ ಅಬ್ಬಾಲಿಯನ್ನು ಕೇಳಿಕೊಂಡರು. ಅಬ್ಚಾಲಿ ಬಹು ಸಂತೋಷದಿಂದ ಅವರ ಆಹ್ವಾನವನ್ನು ಅಂಗೀಕರಿಸಿ, 1753ರಲ್ಲಿ ಒಂದು ದೊಡ್ಡ ಆಫ್ಘನ್ ಸೈನ್ಯವನ್ನು ಕಳುಹಿಸಿಕೊಟ್ಟ. ಹದಿನೈದು ದಿವಸಗಳವರೆಗೆ ಆಫ್ಘನರಿಗೂ ಖಾಸಿಂಖಾನನ ಸೈನಿಕರಿಗೂ ಭೀಕರ ಯುದ್ಧ ನಡೆದು, ಅಂತ್ಯದಲ್ಲಿ ಆಫ್ಘನರು ಗೆದ್ದರು. ಆಫ್ಘನರು ಕಾಶ್ಮೀರದಲ್ಲಿ ಮೊಗಲರ ಆಳ್ವಿಕೆಯನ್ನು ಕೊನೆಗಾಣಿಸಿದರು.

ಆಫ್ಘನರ ಆಳ್ವಿಕೆಯಲ್ಲಿ ದೇಶ ಅಧೋಗತಿಗೆ ಇಳಿಯಿತು. ಆಫ್ಘನ್ ಸೈನಿಕರು ಪಟ್ಟಣಗಳನ್ನೂ ಹಳ್ಳಿಗಳನ್ನೂ ಲೂಟಿಮಾಡಿ, ಹಿಂಸಾಕೃತ್ಯಗಳಲ್ಲಿ ತೊಡಗಿದರು. ಅರಮನೆಯಲ್ಲಿದ್ದ ಧನಕನಕ ವಸ್ತುವಾಹನಗಳನ್ನೆಲ್ಲ ಆಕ್ರಮಣಕಾರರು ವಶಪಡಿಸಿಕೊಂಡರು. ಸುಖಜೀವನಮಲ್ಲನೆಂಬವನು ಪ್ರಬಲನಾಗಿ ಕಾಶ್ಮೀರದ ದೊರೆಯಾದ. ಅಹಮದ್ ಷಾ ಅಬ್ದಾಲಿ ಸುಖಜೀವನನ ಮೇಲೆ ಯಾವ ಶಿಸ್ತಿನ ಕ್ರಮವನ್ನೂ ಕೈಗೊಳ್ಳದೆ, ಕಾಶ್ಮೀರದ ವೈಸ್ ರಾಯಿಯೆಂದು ಅವನಿಗೆ ಮಾನ್ಯತೆ ನೀಡಿ, ಅವನ ಸಹಾಯಕ್ಕೆ ಖ್ವಾಜಾ ಕಿeóÁಕ್ ಎಂಬ ಆಫ್ಘನ್ ಶ್ರೀಮಂತನನ್ನು ಕಳುಹಿಸಿಕೊಟ್ಟ. ಆದರೆ ಅಹಮದ್ ಷಾ ಅಬ್ಚಾಲಿಯ ದಂಡಯಾತ್ರೆಯಿಂದಲೂ ಮರಾಠರು ಮತ್ತು ಸಿಖ್ಖರನ್ನು ಎದುರಿಸಬೇಕಾದ್ದರಿಂದಲೂ ಆಫ್ಘನರಿಗೆ ಆರ್ಥಿಕ ತೊಂದರೆಗಳು ಉದ್ಭವಿಸಿದುವು. ಹಣಕ್ಕಾಗಿ ಅವರು ಸುಖಜೀವನನನ್ನು ಪೀಡಿಸಿದರು. ಸುಖಜೀವನ ಶ್ರಿಮತರ ಸಲಹೆಯ ಮೇರೆಗೆ ಆಫ್ಘನರನ್ನೂ ಖ್ವಾಜಾ ಕಿeóÁಕನನ್ನೂ ಬಾರಾಮುಲದಲ್ಲಿ ಸೋಲಿಸಿ ಓಡಿಸಿದ. ಕೋಪಗೊಂಡ ಅಬ್ದಾಲಿ ಸುಖಜೀವನನ್ನು ಶಿಕ್ಷಿಸಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತೊಂದು ಸೈನ್ಯವನ್ನು ಕಳುಹಿಸಿಕೊಟ್ಟ. ಆದರೆ ಆ ಸೈನ್ಯ ಮಳೆಗಾಲದಲ್ಲಿ ದಂಡಯಾತ್ರೆ ಕೈಗೊಂಡದ್ದರಿಂದ ಕಾಶ್ಮೀರಿಗಳಿಗೆ ಸೋತು ರಣರಂಗವನ್ನು ಬಿಟ್ಟು ಓಡಿತು. ಹೊರ ಆಕ್ರಮಣದಿಂದ ರಾಜ್ಯವನ್ನು ರಕ್ಷಿಸಿದರೂ ಪ್ರಕೃತಿಯ ಪ್ರಕೋಪಕ್ಕೆ ಗುರಿಯಾದ ಕಾಶ್ಮೀರವನ್ನು ಸುಖಜೀವನ ರಕ್ಷಿಸಲಾರದೆ ಹೋದ. 1755ರಲ್ಲಿ ಕ್ಷಾಮ ತಲೆದೋರಿ ಅನೇಕ ಮಂದಿ ಕಾಶ್ಮೀರಿಗಳು ಬಲಿಯಾದರು. 1762ರಲ್ಲಿ ಅಹಮದ್ ಷಾ ಅಬ್ದಾಲಿ ದೊಡ್ಡ ಸೈನ್ಯವನ್ನು ಕಾಶ್ಮೀರದ ಮೇಲೆ ದಾಳಿ ಮಾಡಲು ಕಳುಹಿಸಿದ. ಕಾಶ್ಮೀರೀ ಸೈನಿಕರ ದ್ರೋಹದಿಂದ ಸುಖಜೀವನ ಸೆರೆಸಿಕ್ಕಿದ. ಕಣ್ಣುಗಳನ್ನು ಕೀಳಿಸಿ, ಆನೆಯ ಕಾಲಿನಿಂದ ತುಳಿಸಿ ಅವನನ್ನು ಸಾಯಿಸಲಾಯಿತು. ಮತ್ತೊಮ್ಮೆ ಕಾಶ್ಮೀರ ಆಫ್ಘನರ ಆಳ್ವಿಕೆಗೆ ಒಳಪಟ್ಟಿತು. ಅಹಮದ್ ಷಾ ಅಬ್ಚಾಲಿಯ ಮರಣಾನಂತರ ಅವನ ಮಗನಾದ ತೈಮೂರ್ ಷಹ ಆಫ್ಘನ್ ಸಿಂಹಾಸನವನ್ನೇರಿದ. ಅವನು ತನ್ನ ಅಧಿಕಾರವನ್ನು ಕಾಶ್ಮೀರದ ಮೇಲೆ ಭದ್ರವಾಗಿ ಸ್ಥಾಪಿಸಿದ. ಕಾಶ್ಮೀರ ಸಂಪತ್ತಿನ ಗಣಿಯೊಂದು ಆಫ್ಘನರು ಭಾವಿಸಿದ್ದರು. ಅನೇಕ ಮಂದಿ ಆಫ್ಘನ್ ಆಡಳಿತಾಧಿಕಾರಿಗಳು ಕಾಶ್ಮೀರವನ್ನು ಆಳಿದರು. ಕೊನೆಗೆ ಕಾಶ್ಮೀರದಲ್ಲಿ ಆಫ್ಘನ್ ಆಡಳಿತ ಅಂತ್ಯಗೊಳ್ಳಲು ಆಡಳಿತಾಧಿಕಾರಿಗಳು ಅನುಸರಿಸಿದ ಕಠಿಣನೀತಿಯೇ ಬಹುಮಟ್ಟಿಗೆ ಕಾರಣವಾಯಿತು. ಎಲ್ಲ ಪಂಥದ ಜನರೂ ಅವರ ಆಳ್ವಿಕೆಯನ್ನು ಕಿತ್ತೊಗೆಯಬೇಕೆಂದು ಸಂಕಲ್ಪಿಸಿದರು. ಕಾಶ್ಮೀರವನ್ನು ರಕ್ಷಿಸಬೇಕೆಂದು ಸಿಖ್ ದೊರೆಯಾದ ರಣಜಿತ್ ಸಿಂಗನಿಗೆ ಮೊರೆಯಿಟ್ಟರು. ಅವನು 1819ರಲ್ಲಿ ಕಾಶ್ಮೀರವನ್ನು ಆಫ್ಘನರಿಂದ ಕಸಿದುಕೊಂಡ. ರಣಜಿತ್ ಸಿಂಗನ ಮತ್ತು ಅವನ ಉತ್ತರಾಧಿಕಾರಿಗಳ ಕಾಲದಲ್ಲಿ ಎಂಟು ಮಂದಿ ಹಿಂದೂ ಮತ್ತು ಸಿಖ್ ಗವರ್ನರುಗಳೂ ಅಂತ್ಯದಲ್ಲಿ ಇಬ್ಬರು ಮುಸ್ಲಿಂ ಗೌರ್ನರುಗಳೂ ಕಾಶ್ಮೀರದ ಆಡಳಿತ ನಡೆಸಿದರು. ಸಿಖ್ಖರು ಕಾಶ್ಮೀರವನ್ನು ವಶಪಡಿಸಿಕೊಂಡ ಮೇಲೆ, ದೋಗ್ರ ರಜಪೂತ ಗುಲಾಬ್ ಸಿಂಗನ ಆಡಳಿತದಲ್ಲಿದ್ದ ಜಮ್ಮುವಿಗೆ ಐತಿಹಾಸಿಕ ಪ್ರಾಮುಖ್ಯ ಬಂತು. ಈತ ಕಾಶ್ಮೀರದ ಮೇಲೂ ತನ್ನ ಅಧಿಕಾರವನ್ನು ವಿಸ್ತರಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಆಸ್ತಿಭಾರ ಹಾಕಿದ. 18ನೆಯ ಶತಮಾನದ ಮಧ್ಯಭಾಗದಲ್ಲಿ ಜಮ್ಮುವನ್ನು ಆಳುತ್ತಿದ್ದ ರಾಜ ರಣಜೀತ್ ದೇವ ಎಂಬವನ ಸಂತತಿಗೆ ಸೇರಿದವನು ಗುಲಾಬ್ ಸಿಂಗ್. ಕೆಲವರು ಅವನನ್ನು ರಾಜತರಂಗಿಣಿಯಲ್ಲಿ ಉಲ್ಲೇಖಿತನಾದ ಗೋಣಂದನ ಸಂತತಿಯವನೆಂದು ಹೇಳುತ್ತಾರೆ. ಗುಲಾಬ್ ಸಿಂಗನ ಕಾಲಕ್ಕೆ ಹಿಂದೆ ಜಮ್ಮುವಿಗೆ ಕೇವಲ ಸ್ಥಳೀಯ ಪ್ರಾಮುಖ್ಯ ಇತ್ತು. 1780ರ ತರುವಾಯ ಜಮ್ಮುವಿನ ದೊರೆಗಳು ಲಾಹೋರಿನ ಸಿಖ್ಖರ ಸಾಮಂತರಾಗಿದ್ದರು. ಸಿಖ್ ಸೇನೆಗೆ ಸೇರಿದ ಗುಲಾಬ್ ಸಿಂಗನಿಗೆ ರಣಜಿತ್ ಸಿಂಗ್ ಉನ್ನತ ಅಧಿಕಾರ ನೀಡಿದ ; 1820ರಲ್ಲಿ ಅವನನ್ನು ಜಮ್ಮುವಿನ ದೊರೆಯಾಗಿ ನೇಮಿಸಿದ. ಮೊದಮೊದಲು ಜಮ್ಮುವನ್ನು ಆಳುವುದು ಅವನಿಗೆ ಬಲು ಕಷ್ಟವಾಗಿತ್ತು. ಹೀಗೆ ಸುಮಾರು ಹತ್ತು ವರ್ಷಗಳ ಕಾಲ ಹೆಣಗಿದ ಮೇಲೆ ಅವನೂ ಅವನ ಇಬ್ಬರು ಸೋದರರೂ ಕಾಶ್ಮೀರದಿಂದ ಪಂಜಾಬಿನ ನೆಲದ ಮೇಲೆ ಪ್ರಭುತ್ವ ಸ್ಥಾಪಿಸಿದರು. ಭದರ್ ವಾರ್ ಮತ್ತು ಕಿಷ್ತ್ ವಾರ್ ಪ್ರದೇಶಗಳೂ ಅವರಿಗೆ ಸೇರಿದುವು. ರಣಜಿತ್ ಸಿಂಗ್ 1839ರಲ್ಲಿ ತೀರಿಕೊಂಡ. 1845-46ರಲ್ಲಿ ಇಂಗ್ಲಿಷರಿಗೂ ಸಿಖ್ಖರಿಗೂ ನಡೆದ ಯುದ್ಧದಲ್ಲಿ ಸಿಖ್ಖರು ಸೋತರು. 1846ರ ಲಾಹೋರ್ ಒಪ್ಪಂದದ ಪ್ರಕಾರ ಕೆಲವು ಪ್ರದೇಶಗಳ ಜೊತೆಗೆ ಕೊಡಬೇಕಾದ ಒಂದೂವರೆ ಕೋಟಿ ರೂ.ಗಳನ್ನು ಕೊಡಲಾರದ ಸಿಖ್ಖರು ಅದರ ಬದಲು ಕಾಶ್ಮೀರ ಪ್ರದೇಶವನ್ನು ಬ್ರಿಟಿಷರಿಗೆ ಕೊಡಬೇಕಾಯಿತು. ಜಮ್ಮುವನ್ನಾಳುತ್ತಿದ್ದ ಗುಲಾಬ್ ಸಿಂಗನಿಗೆ ಕಾಶ್ಮೀರವನ್ನು ವಹಿಸಿಕೊಟ್ಟು ಅವನ ಸ್ನೇಹ ಸಂಪಾದಿಸಲು ಬ್ರಿಟಿಷರು ಬಯಸಿದರು. ಬ್ರಿಟಿಷರಿಗೆ ಸಿಖ್ಖರಿಂದ ಬರಬೇಕಾಗಿದ್ದ ಹಣವನ್ನು ಕೊಡಲು ಗುಲಾಬ್ ಸಿಂಗ್ ಸಿದ್ಧನಿದ್ದ. 1846ರ ಮಾರ್ಚ್ 16ರಂದು ಇಂಗ್ಲಿಷರಿಗೂ ಗುಲಾಬ್ ಸಿಂಗನಿಗೂ ಆದ ಅಮೃತಸರ ಕೌಲಿನ ಪ್ರಕಾರ ಇಂಗ್ಲಿಷರು ಗುಲಾಬ್ ಸಿಂಗನಿಗೆ ಜಮ್ಮು ಮತ್ತು ಕಾಶ್ಮೀರದ ದೊರೆಯೆಂದು ಮನ್ನಣೆ ನೀಡಿದರು. ಆ ವೇಳೆಗೆ ಆಗಲೇ ಗುಲಾಬ್ ಸಿಂಗ್ ಜಮ್ಮುವಿನ ಪೂರ್ವ ಪಶ್ಚಿಮ ಪ್ರದೇಶಗಳನ್ನೂ ಲಾಸಕ್ಕೆ ಸೇರಿದ ಲಡಾಕನ್ನೂ ಸ್ವತಂತ್ರ ಮುಸ್ಲಿಂ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಸ್ಕಾರ್ದುವನ್ನೂ ಗೆದ್ದುಕೊಂಡಿದ್ದ. ಗುಲಾಬ್ ಸಿಂಗ್ 1857ರಲ್ಲಿ ತೀರಿಕೊಂಡ. ಅವನ ಮಗನಾದ ರಣಬೀರ್ ಸಿಂಗ್ (1857-85) ಪಟ್ಟಕ್ಕೆ ಬಂದ. 1857ರಲ್ಲಿ ಭಾರತದಲ್ಲಿ ನಡೆದ ಬಂಡಾಯದಲ್ಲಿ ರಣಬೀರ್ ಸಿಂಗ್ ಬ್ರಿಟಿಷರಿಗೆ ವಿಧೇಯನಾಗಿದ್ದುದರಿಂದ, ಸ್ವಂತ ಮಕ್ಕಳಿಲ್ಲದ ಅವನು ದತ್ತು ತೆಗೆದುಕೊಳ್ಳಲು ಬ್ರಿಟಿಷರು ಅವಕಾಶ ನೀಡಿದರು. ಮುಂದಿನ ದೊರೆ ಮಹಾರಾಜ ಪ್ರತಾಪ್ ಸಿಂಗ್. ಅವನ ಆಡಳಿತದ ಕಾಲದಲ್ಲಿ (1885-1925) ಪ್ರಥಮವಾಗಿ ಕಾಶ್ಮೀರಕ್ಕೆ ಒಬ್ಬ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಲಾಯಿತು. ಆಡಳಿತದಲ್ಲಿ ಸುಧಾರಣೆಗಳಾದುವು. ಭೂಕಂದಾಯವನ್ನು ನಿರ್ಧರಿಸಲಾಯಿತು. ಇವನು ಗಿಲ್ಗಿಟ್ನ ಮೇಲೆ ಕಾಶ್ಮೀರದ ಸಾರ್ವಭೌಮತ್ವವನ್ನು ಮತ್ತೆ ಸ್ಥಾಪಿಸಿದ. ಮಹಾರಾಜ ಹರಿ ಸಿಂಗ್ ಪಟ್ಟಕ್ಕೆ ಬಂದದ್ದು 1925ರಲ್ಲಿ. 1947ರಲ್ಲಿ ಭಾರತದ ವಿಭಜನೆಯಾದ ಅನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವಣ ಕಲಹಕ್ಕೆ ಕಾಶ್ಮೀರ ಒಂದು ಕಾರಣವಾಯಿತು. 1947ರ ಅಕ್ಟೋಬರ್ 20ರಂದು ಪಾಕಿಸ್ತಾನದ ವಾಯವ್ಯಗಡಿ ಪ್ರದೇಶದಿಂದ ಪಾಕಿಸ್ತಾನಿಗಳು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ ರಾಜಧಾನಿಯಾದ ಶ್ರೀನಗರದವರೆಗೆ ಧಾವಿಸಿ ಬಂದರು. ಕಾಶ್ಮೀರದ ದೊರೆ ಆ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿ, ಆಕ್ರಮಣಕಾರರನ್ನು ಎದುರಿಸಲು ಭಾರತದ ಸಹಾಯ ಕೋರಿದರು. ಭಾರತದ ಸೇನೆ ದಾಳಿಕಾರರನ್ನು ಹಿಮ್ಮೆಟ್ಟಿಸಿತಲ್ಲದೆ, ಪಾಕಿಸ್ತಾನಿ ಆಕ್ರಮಣವನ್ನು ನಿಲ್ಲಿಸಲು ವಿಶ್ವಸಂಸ್ಥೆಗೆ ದೂರು ನೀಡಿತು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದಂತೆ ಕಾಶ್ಮೀರದಲ್ಲಿ ಕದನ ನಿಲುಗಡೆ ಆಯಿತು. ಆಕ್ರಮಣ ಸಂಪೂರ್ಣವಾಗಿ ತೆರವಾಗಿ ಆ ರಾಜ್ಯದಲ್ಲಿ ಪ್ರಸಾಮಾನ್ಯ ಪರಿಸ್ಥಿತಿ ಏರ್ಪಟ್ಟ ಮೇಲೆ ಆ ರಾಜ್ಯದ ಭವಿಷ್ಯದ ಬಗ್ಗೆ ಜನಮತಗಣನೆ ಆಗಬೇಕೆಂದು ನಿರ್ಣಯಿಸಲಾಯಿತು. ಆದರೆ ಆಕ್ರಮಿತ ಪ್ರದೇಶದಿಂದ ಪಾಕಿಸ್ತಾನ ವಾಪಸಾಗಲಿಲ್ಲವಾದ್ದರಿಂದ ಇದು ಸಾಧ್ಯವಾಗಲಿಲ್ಲ. 1949ರಲ್ಲಿ ಜಮ್ಮು ಮತ್ತು ಕಾಶ್ಮೀರದ ದೊರೆ ಹರಿ ಸಿಂಗ್ ಸಿಂಹಾಸನ ತ್ಯಾಗ ಮಾಡಿದರು. ಅವರ ಮಗ ಯುವರಾಜ ಕರಣ್ ಸಿಂಗ್ ರೀಜೆಂಟ್ ಆದರು. ಕಾಶ್ಮೀರದ ಆಕ್ರಮಣ ತೆರವಾಗುವಂತೆ ಭಾರತ ನಡೆಸಿದ ಪ್ರಯತ್ನವೆಲ್ಲ ವ್ಯರ್ಥವಾಗಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿದ್ದರೆ ಮಾತ್ರವೇ ತಮ್ಮ ಭವಿಷ್ಯ ಸುಭದ್ರವೆಂಬುದನ್ನು ಅಲ್ಲಿಯ ಪ್ರಜೆಗಳು ಅನಂತರ ಅಲ್ಲಿ ನಡೆದ ಚುನಾವಣೆಗಳಲ್ಲಿ ಸುವ್ಯಕ್ತ ಪಡಿಸಿದ್ದಾರೆ. ಕ್ರಮಕ್ರಮವಾಗಿ ಕಾಶ್ಮೀರದ ಜನತೆಯ ಆಶಯವನ್ನು ಭಾರತ ಸಕಾರ ಕಾರ್ಯಗತಗೊಳಿಸಿದೆ. 1952-56ರಲ್ಲಿ ಕರಣ್ ಸಿಂಗರನ್ನು ಜಮ್ಮು-ಕಾಶ್ಮೀರದ ಸದರ್-ಇ-ರಿಯಾಸತ್ ಆಗಿ ಭಾರತ ಸರ್ಕಾರ ನೇಮಕ ಮಾಡಿತು. ಈಗ ಅಲ್ಲಿ ಭಾರತದ ಇತರ ರಾಜ್ಯಗಳಲ್ಲಿರುವಂತೆ ರಾಜ್ಯಪಾಲರಿದ್ದಾರೆ. ಆಕ್ರಮಿತ ಪ್ರದೇಶವನ್ನು ತೆರವು ಮಾಡುವ ಬದಲು ಜಮ್ಮು-ಕಾಶ್ಮೀರದ ಉಳಿದ ಭಾಗಗಳನ್ನೂ ಆಕ್ರಮಿಸಿಕೊಳ್ಳಲು ಪಾಕಿಸ್ತಾನ ಹಲವು ಬಾರಿ ಪ್ರಯತ್ನಿಸಿತು. ಆದರೆ ಅದು ಸಾಧ್ಯವಾಗಲಿಲ್ಲ. ಜಮ್ಮು-ಕಾಶ್ಮೀರದ ಭಾಗವಾದ ಲಡಾಕಿನಲ್ಲಿ ಚೀನಿಯರು ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡು, ಸಿಂಕಿಯಾಂಗ್ ಟಿಬೆಟ್‍ಗಳೊಡನೆ ಸಂಪರ್ಕ ಏರ್ಪಡಿಸುವ ರಸ್ತೆಯೊಂದನ್ನು ನಿರ್ಮಿಸಿದ್ದುದಾಗಿ 1959ರಲ್ಲಿ ತಿಳಿಯಿತು. ಗಡಿಯನ್ನು ಕಾಯುತ್ತಿದ್ದ ಭಾರತ ಸೈನಿಕರ ಮೇಲೆ ಚೀನಿಯರು ಗುಂಡು ಹಾರಿಸಿ ಕೆಲವರನ್ನು ಕೊಂದರು. ಚೀನೀಯರು ಆಕ್ರಮಣ ನೀತಿಯನ್ನು ಭಾರತ ಖಂಡಿಸಿತು. ಭಾರತದ ವಿರೋಧಕ್ಕೆ ಉತ್ತರವಾಗಿ ಚೀನೀ ಸರ್ಕಾರ ವಿವಾದಕ್ಕೊಳಪಟ್ಟ ಪ್ರದೇಶವೆಲ್ಲವೂ ತನಗೆ ಸೇರಬೇಕೆಂದು ಹೇಳಿ, ತನ್ನ ಸೇನೆಯನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳಲು ನಿರಾಕರಿಸಿತು. 1962ರ ಅಕ್ಟೋಬರಿನಲ್ಲಿ ಚೀನ ಭಾರತದ ಗಡಿಯಲ್ಲಿ ವ್ಯಾಪಕವಾಗಿ ಆಕ್ರಮಣ ನಡೆಸಿತು. ಆ ವರ್ಷದ ನವೆಂಬರ್ ತಿಂಗಳಲ್ಲಿ ಅದು ಏಕಪಕ್ಷೀಯವಾಗಿ ಕದನವಿರಾಮ ಘೋಷಿಸಿತು. ಆದರೆ ಉತ್ತರ ಲಡಾಕ್ ಪ್ರದೇಶದಲ್ಲಿ ಅದು ಆಕ್ರಮಿಸಿಕೊಂಡಿದ್ದ 14,000 ಚ.ಮೈ. ಪ್ರದೇಶದಿಂದ ಹಿನ್ನಡೆಯಲಿಲ್ಲ.

ಕಾಶ್ಮೀರದಲ್ಲಿ ಆಗಿಂದಾಗ್ಗೆ ಕದನವಿರಾಮ ರೇಖೆಯನ್ನು ಉಲ್ಲಂಘಿಸುತ್ತಿದ್ದ ಪಾಕಿಸ್ತಾನ 1965ರ ಆಗಸ್ಟ್ 5ರಂದು ಮುಂಜಾನೆ ಅತಿ ಭಾರಿ ಪ್ರಮಾಣದಲ್ಲಿ ಅದನ್ನು ಅತಿಕ್ರಮಣ ಮಾಡಿತು. ಕದನವಿರಾಮರೇಖೆಯನ್ನು ನಾಲ್ಕಾರು ಕಡೆಗಳಿಂದ ದಾಟಿಬಂದ ಸಹಸ್ರಾರು ಮಂದಿ ಸಶಸ್ತ್ರ ಪಾಕಿಸ್ತಾನಿಗಳು ಶ್ರೀನಗರದ ಕಡೆಗೆ ಧಾವಿಸಲಾರಂಭಿಸಿದರು. ಜಮ್ಮು-ಕಾಶ್ಮೀರ ಸರ್ಕಾರ ರಕ್ಷಣಾ ಮತ್ತು ಪೊಲೀಸ್ ಬಲದಿಂದ ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸಿತು. ಭಾರತ ಮತ್ತೆ ವಿಶ್ವಸಂಸ್ಥೆಗೆ ಸಲ್ಲಿಸಿದ ದೂರಿನಿಂದ ಪ್ರಯೋಜನವಾಗಲಿಲ್ಲ. 1965ರ ಸೆಪ್ಟೆಂಬರ್ ಒಂದರಂದು ಪಾಕಿಸ್ತಾನಿಗಳು ಜಮ್ಮುವಿನ ಚಂಬ್ ವಲಯದಲ್ಲಿ ಅಂತರ ರಾಷ್ಟ್ರೀಯ ಗಡಿಯನ್ನು ದಾಟಿ ನುಗ್ಗಿ ಬಂದಾಗ ಭಾರತ-ಪಾಕಿಸ್ತಾನಿಗಳ ನಡುವೆ ಯುದ್ಧ ಆರಂಭವಾಯಿತು. ಭಾರತ ಸೈನಿಕರು ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿದರು. ಪಾಕಿಸ್ತಾನದ ಲಾಹೋರ್ ವಲಯವನ್ನು ಭಾರತದ ಸೈನ್ಯ ಪ್ರವೇಶಿಸಿತು. ಪಾಕಿಸ್ತಾನದ ಲಾಹೋರ್ ವಲಯವನ್ನು ಭಾರತದ ಸೈನ್ಯ ಪ್ರವೇಶಿಸಿತು. ಪಾಕಿಸ್ತಾನದ ರಕ್ಷಣಾ ಠಾಣ್ಯಗಳ ಮೇಲೂ ಶಸ್ತ್ರಾಸ್ತ್ರ ಕೋಠಿಗಳ ಮೇಲೂ ಭಾರತೀಯ ವಿಮಾನಬಲದವರು ಕಾರ್ಯಾಚರಣೆ ನಡೆಸಿದರು. ಅಂತ್ಯದಲ್ಲಿ 1965ರ ಸೆಪ್ಟೆಂಬರ್ 23ರಂದು ಭಾರತ-ಪಾಕಿಸ್ತಾನಗಳೆರಡೂ ಭದ್ರತಾಸಮಿತಿಯ ನಿರ್ಣಯಕ್ಕನುಗುಣವಾಗಿ ಕದನ ನಿಲ್ಲಿಸಿದವು. 1971ರ ಡಿಸೆಂಬರಿನಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲೂ ಪಾಕಿಸ್ತಾನ ಕಾಶ್ಮೀರದ ಉಳಿದ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿ ವಿಫಲಗೊಂಡಿತು. ಭಾರತ ಗಣರಾಜ್ಯದ ಅಂಗವಾಗಿ ಜಮ್ಮು-ಕಾಶ್ಮೀರ ರಾಜ್ಯ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

ವಾಸ್ತು, ಶಿಲ್ಪ : ಕಾಶ್ಮೀರ ಅಶೋಕನ ಸಾಮ್ರಾಜ್ಯದ ಭಾಗವಾಗಿದ್ದಾಗ, ಅವನು ಅಲ್ಲಿ ಶ್ರೀನಗರಿ (ಈಗಿನ ಪಂಸ್ರಿಥಾನ್) ಎಂಬ ಪಟ್ಟಣ ಕಟ್ಟಿ ಅಲ್ಲಿ ಒಂದು ಸ್ತೂಪವನ್ನು ನಿರ್ಮಿಸಿದನೆಂದು ಬೌದ್ಧ ಗ್ರಂಥಗಳಿಂದ ತಿಳಿಯುತ್ತದೆ. ಹಾಗೆಯೇ ಅವನ ಮಗ ಜಲೌಕ ಗುಷ್ಕುರ್‍ನಲ್ಲಿಯ ಜೇಷ್ಠೇಶ, ಬಿಜ್ಜೆಹರಾದಲ್ಲಿನ ಅಶೋಕೇಶ್ವರ ಮತ್ತು ವಂಥ್‍ನಲ್ಲಿಯ ಜೇಷ್ಠೆರುದ್ರ ದೇವಾಲಯಗಳನ್ನೂ. ಜಲೌಕನ ತಾಯಿ ಈ ಪ್ರದೇಶದಲ್ಲಿ ಅನೇಕ ಮಾತೃಚಕ್ರಗಳನ್ನೂ (ವೃತ್ತಾಕಾರದ ಮಾತೃದೇವತೆಗಳ ಗುಡಿಗಳು) ಕಟ್ಟಿಸಿದರೆಂದು ಪ್ರತೀತಿ. ಆದರೆ ಈ ಸ್ಥಳಗಳಲ್ಲಿ ಉಳಿದಿರುವ ಈಗಿನ ದೇವಾಲಯಗಳು ಅನಂತರಕಾಲದ ಪುನರ್ರಚನೆಗಳು. ಮೌರ್ಯರ ಅನಂತರ ಕುಶಾನ ಅರಸರಾದ ಕನಿಷ್ಕ, ಜುಷ್ಕ ಮತ್ತು ಹುವಿಷ್ಕರು ಅನುಕ್ರಮವಾಗಿ ಕಾನಿಷ್ಕಪುರ (ಈಗಿನ ಉಷ್ಕೂರ್) ಕಟ್ಟಿದರು. ಇವುಗಳಲ್ಲಿ ಹುವಿಷ್ಕಪುರ ಪ್ರಸಿದ್ಧವಾದ್ದು. ಇಲ್ಲಿ ಹುವಿಷ್ಕ ಒಂದು ಸ್ತೂಪವನ್ನೂ ಅದರ ಸುತ್ತಲೂ ಅನೇಕ ಸಂಘಾರಾಮಗಳನ್ನೂ ಕಟ್ಟಿಸಿದ್ದನೆಂಬುದಕ್ಕೆ ಕೆಲವು ಮಾಹಿತಿಗಳಿವೆ. ಇಲ್ಲಿ ನಡೆದಿರುವ ಉತ್ಖನನದಿಂದ ಸ್ತೂಪದ ಅಡಿಪಾಯವಷ್ಟೇ ಬೆಳಕಿಗೆ ಬಂದಿದೆ. ಕುಶಾನರ ಸಾಮ್ರಾಜ್ಯ ಕಾಶ್ಮೀರವಲ್ಲದೆ ಪಂಜಾಬ್ ಮತ್ತು ಉತ್ತರ ಪ್ರದೇಶಗಳ ಭಾಗಗಳನ್ನೂ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯದ ಭಾಗಗಳನ್ನೂ ಒಳಗೊಂಡಿದ್ದರಿಂದಲೂ ಅನಂತರ ಈ ಪ್ರದೇಶಗಳು ಆಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯದಿಂದ ಬಂದ ಪಾರ್ಥೀಯ, ಸಸ್ಸಾನೀಯ ಮತ್ತು ಶ್ವೇತಹೂಣರ ಆಳ್ವಿಕೆಗೆ ಒಳಪಟ್ಟಿದ್ದರಿಂದಲೂ ಇಲ್ಲಿ ಭಾರತೀಯ ವಾಸ್ತುಶಿಲ್ಪಶೈಲಿಗಳು ಇತರ ಶೈಲಿಗಳೊಂದಿಗೆ ಮಿಳಿತವಾಗಿ ಬೆಳೆದದ್ದು ಕಂಡುಬರುತ್ತದೆ. ಕುಶಾನ ಅರಸನ ಪ್ರತಿಮೆಯೊಂದು ಶ್ರೀನಗರದಲ್ಲಿದೆ. ಇದರದು ಪಾರ್ಥೀಯ ಶಿಲ್ಪಶೈಲಿ. ಗಾಂಧಾರ ಶಿಲ್ಪಶೈಲಿಯ ಅನೇಕ ಸುದ್ದೆವಿಗ್ರಹಗಳು ಅಖ್ನೂರ್, ಉಷ್ಕೂರ್ ಮುಂತಾದೆಡೆಗಳಲ್ಲಿ ದೊರಕಿವೆ. ಕೆಲವು ವಿದ್ವಾಂಸರ ಪ್ರಕಾರ ಇವು ಕುಶಾನರ ಕಾಲದ ಅನಂತರ 4-8ನೆಯ ಶತಮಾನಗಳ ಇಳಿಮುಖದ ಗಾಂಧಾರ ಶೈಲಿಯ ಕೃತಿಗಳು. ಈ ಸುದ್ದೆವಿಗ್ರಹಗಳಲ್ಲಿ ಹೆಚ್ಚಿನವು ಬುದ್ಧ, ಬೋಧಿಸತ್ವ ಮತ್ತು ಬೌದ್ಧಕಥೆಗಳ ನಿರೂಪಣೆಗಳಾಗಿವೆ. ಹಾರ್ವಾನ್ ಎಂಬಲ್ಲಿಯ ಉತ್ಖನನದಲ್ಲಿ ಬೆಳಕಿಗೆ ಬಂದ ಬೌದ್ಧಸಂಘಾರಾಮದಲ್ಲಿ ಪಾರ್ಥೀಯ ಶೈಲಿ ಚೆನ್ನಾಗಿ ವ್ಯಕ್ತವಾಗಿದೆ. ಇಲ್ಲಿ ಅನೇಕ ಸ್ತೂಪಗಳು ಅರ್ಧ ವೃತ್ತಾಕಾರದ ಹಿಂಭಾಗವಿರುವ ಚೈತ್ಯ ಗೃಹಗಳ ಮತ್ತು ಭಿಕ್ಷುಗಳಿಗಾಗಿ ಕಟ್ಟಿದ ಸಣ್ಣ ಕೊಠಡಿಗಳ ಅಡಿಪಾಯಗಳ ಕಂಡುಬಂದಿವೆ. ಇಲ್ಲಿಯ ಒಂದು ಹಜಾರದಲ್ಲಿ ಸುಂದರ ಚಿತ್ರಣವಿರುವ ನೆಲಹೆಂಚುಗಳನ್ನು ಹಾಸಲಾಗಿದೆ. ಪಾರ್ಥೀಯ ಕುದುರೆ ಸವಾರರ, ಎದೆಮಟ್ಟ ಚಿತ್ರಗಳ, ಭಾರತೀಯ ವಸ್ತ್ರ ಧರಿಸಿದ ಪಾರ್ಥೀಯರ, ಬ್ರಾಹ್ಮಣ ಸನ್ಯಾಸಿಗಳ, ಬಳ್ಳಿಗಳೇ ಮುಂತಾದವುಗಳ ಉಬ್ಬುಶಿಲ್ಪಗಳು ಈ ಹೆಂಚುಗಳಲ್ಲಿವೆ. ಇವು ಪಾರ್ಥೀಯ ಶಿಲ್ಪಶೈಲಿಯವಾದರೂ, ಗುಪ್ತರ ಕಲೆಯ ಪ್ರಭಾವವೂ ಕಂಡುಬರುತ್ತದೆ.

ಬಿಜ್ಬೆಹರಾದಲ್ಲಿ ಶ್ರೀ ಲಕ್ಷ್ಮೀ, ಗಜಲಕ್ಷ್ಮೀ ಮುಂತಾದ ಕೆಲವು ಸುದ್ದೆವಿಗ್ರಹಗಳು ದೊರಕಿವೆ. ಗಾಂಧಾರ ಶೈಲಿಯ ಇಳಿಗಾಲದ ಈ ವಿಗ್ರಹಗಳಲ್ಲೂ ಗುಪ್ತ ಸಂಪ್ರದಾಯದ ಛಾಯೆಯನ್ನು ಕಾಣಬಹುದು. ಇವು ಬೌದ್ಧ ಧರ್ಮಕ್ಕೆ ಮಾರಕವಾಗಿ ಹಿಂದೂ ಧರ್ಮವನ್ನು ಎತ್ತಿಹಿಡಿಯಲು ಯತ್ನಿಸಿದ ಹೂಣಮಿಹಿರಗುಲನ (ಸು.520-530) ಕಾಲದವಾಗಿರಬಹುದೆಂದು ಕೆಲವರ ಅಭಿಪ್ರಾಯ. ಮಿಹಿರಗುಲ ವಿಜ್ಬೆಹರಾದಲ್ಲಿ ವಿಜಯೇಶ್ವರ ಎಂಬ ಶಿವದೇವಾಲಯವನ್ನು ಕಟ್ಟಿಸಿದ್ದ.

ಸು.410ರಿಂದ 470ರವರೆಗೆ ಆಳಿದ ಇಮ್ಮಡಿ ಪ್ರವರಸೇನ ಪ್ರವರಪುರವನ್ನು (ಈಗಿನ ಶ್ರೀನಗರ) ಕಟ್ಟಿಸಿದ. ಇವನ ಕಾಲದ ಪ್ರವರೇಶ್ವರ ದೇವಾಲಯವೂ ಇವನ ವಂಶದವನೇ ಆದ ರಾಣಾದಿತ್ಯನೆಂಬುವನ ರಾಣಾಸ್ವಾಮಿ ದೇವಾಲಯವೂ ಈಗಿನ ಬಹಾಉದ್ದೀನ್ ಮತ್ತು ಪೀರ್ ಹಾಜ್ಜ್ ಮುಹಮ್ಮುದ್ ಸಾಹಿಬ್ ಗೋರಿಗಳು ಇರುವ ಎಡೆಗಳಲ್ಲಿದ್ದುವೆಂದು ತಿಳಿದುಬಂದಿದೆ. ಆದರೆ 8ನೆಯ ಶತಮಾನದ ಕೆಲವು ಸೇರ್ಪಡೆಗಳಷ್ಟೇ ಈಗ ಇಲ್ಲಿ ಕಂಡುಬರುವ ಅತ್ಯಂತ ಪ್ರಾಚೀನ ಅವಶೇಷಗಳು. ಕಾಶ್ಮೀರದ ಆ ಕಾಲದ ವಾಸ್ತುಶಿಲ್ಪಕಲೆ ಗುಪ್ತಶೈಲಿಯಿಂದ ಬಹು ಪ್ರಭಾವಿತವಾಗಿದ್ದಿತೆಂಬುದು ಆಗಿನ ಇತರ ಕೆಲವು ಸಣ್ಣಪುಟ್ಟ ಅವಶೇಷಗಳಿಂದ ತಿಳಿದುಬರುತ್ತದೆ.

ಕಾಶ್ಮೀರದ ಕಲೆಯ ಇತಿಹಾಸದಲ್ಲಿ ಕಾರ್ಕೋಟ ರಾಜವಂಶದ ಕಾಲ ಮುಖ್ಯವಾದ್ದು. ಈ ವಂಶದ ಲಲಿತಾದಿತ್ಯ ಮುಕ್ತಾಪೀಡ ತನ್ನ ಅಪಾರ ಸಂಪತ್ತನ್ನು ದೊಡ್ಡ ದೇವಾಲಯಗಳ ನಿರ್ಮಾಣಕ್ಕೆ ವಿನಿಯೋಗಿಸಿದನೆಂದು ಪ್ರತೀತಿ. ಶ್ರೀನಗರದ ಬಳಿಯ ಕಶ್ತ್-ಇ--ಸುಲೈಮಾನ್ ಬೆಟ್ಟದ ಮೇಲಿರುವ ಶಂಕರಾಚಾರ್ಯ (ಜೇಷ್ಠೇಶ) ದೇವಾಲಯ ಪ್ರಾಯಶಃ ಕಾರ್ಕೋಟ ಶೈಲಿಯ ಅತ್ಯಂತ ಪ್ರಾಚೀನ ಕಟ್ಟಡ. ಅಷ್ಟಭುಜಾಕೃತಿಯ ಜಗತಿಯ ಮೇಲೆ ನಿಂತಿರುವ ಮಧ್ಯಬಾರತದ ಗುಡಿಗಳ ಶಿಖರಗಳಂತಿರುವ ಈ ಗುಡಿ ದೊಡ್ಡದಾದರೂ ಕಲೆಯ ದೃಷ್ಟಿಯಲ್ಲಿ ಬಹು ಒರಟು. ಆದರೂ ಮುಂದೆ ಕಾಶ್ಮೀರ ವಾಸ್ತುಶೈಲಿಯಲ್ಲಿ ಪ್ರಚುರವಾದ ಕೆಲವು ಅಂಶಗಳ ಉಗಮ ಇಲ್ಲಿ ಕಾಣುತ್ತದೆ. ಪಾಂಪುರ್ ಬಳಿಯ ಲೋದುವ್‍ನ (ಪ್ರಾಯಶಃ ಪ್ರಚೀನ ಲಲಿತಪುರ) ರುದ್ರೇಶ ದೇವಾಲಯ ಗಾಂಧಾರ ವಾಸ್ತುಶಿಲ್ಪ ರೀತಿಯದು. 48 ಚೌಕದ ಜಗತಿಯ ಮೇಲೆ 28 ಚೌಕದ ಈ ಗುಡಿಯ ಒಳಭಾಗ ವೃತ್ತಾಕಾರವಾದ್ದು. ಮುಂದೆ ಕುದುರೆಲಾಳದ ಆಕೃತಿಯ ತಲೆ ಇರುವ ದ್ವಾರವಿದೆ. ಗುಡಿಯ ಚಾವಣಿ ಉಳಿದಿಲ್ಲವಾದರೂ ದುಂಡನೆಯ ಮರದ ಹಂಜರ ಇದ್ದಿರಬಹುದೆಂದು ಊಹಿಸಬಹುದಾಗಿದೆ. ಸಮೀಪದ ನೋರ್ವಾದಲ್ಲೂ ಇದೇ ರೀತಿಯ ಇನ್ನೊಂದು ದೇವಾಲಯ ಇದೆ. ಇವು ಲಲಿತಾದಿತ್ಯನ ಆಳ್ವಿಕೆಯ ಮೊದಲ ಭಾಗದಲ್ಲಿ ಕಟ್ಟಿದವಿರಬಹುದು.

ಚೀನದ ಆಸ್ಥಾನದಲ್ಲಿದ್ದು ಅನಂತರ ಲಲಿತಾದಿತ್ಯನ ಪ್ರಧಾನಿಯಾದ ಚಂಕುಣ ಕಾಶ್ಮೀರದ ವಾಸ್ತುಶಿಲ್ಪದಲ್ಲಿ ಕೆಲವು ಹೊಸ ಅಂಶಗಳನ್ನು ಅಳವಡಿಸಿದ. ಇವನ ಕಾಲದಲ್ಲಿ ಕಟ್ಟಿದ ಗುಪ್ತಶೈಲಿಯ ಸೂಪಗಳ ಅಲಂಕರಣದಲ್ಲಿ ಗುಪ್ತರೀತಿಯ ಬುದ್ಧವಿಗ್ರಹಗಳು ಅರೆಚೀನೀ ರೀತಿಯ ಬೋಧಿಸತ್ತ್ವ ವಿಗ್ರಹಗಳು ಮಿಳಿತವಾಗಿವೆ. ಬೋಧಿಸತ್ತ್ವ ವಿಗ್ರಹಗಳಲ್ಲಿ ಚೀನದ ವೀ ಮತ್ತು ಕಾಂಗ್ ಶೈಲಿಗಳ ಸಂಬಂಧವನ್ನು ಗುರುತಿಸಬಹುದು. ಲಲಿತಾದಿತ್ಯ ಪರಿಹಾಸಪುರವೆಂಬ (ಈಗಿನ ಪರಸ್ಪೋರ್) ಹೊಸ ರಾಜಧಾನಿಯನ್ನು ನಿರ್ಮಿಸಿದಾಗ ಅಲ್ಲಿ ಚಂಕುಣ ರಾಜ ವಿಹಾರವೆಂಬ ಸಂಘಾರಾಮವನ್ನೂ ಚೈತ್ಯ ಮತ್ತು ಸ್ತೂಪವನ್ನೂ ಕಟ್ಟಿಸಿದ. ಇಲ್ಲಿಯ ಸ್ತೂಪ ಗಾಂಧಾರ ಶೈಲಿಯದಾದರೂ ಮುಂಭಾಗದಲ್ಲಿ ಬಾಮಿಯನ್ ರೀತಿಯ ಬೃಹತ್ ಬುದ್ಧವಿಗ್ರಹಗಳನ್ನೂ ಟಾಂಗ್ ಶೈಲಿಯ ಬೋಧಿಸತ್ತ್ವ ವಿಗ್ರಹಗಳನ್ನೂ ಗಾಂಧಾರ ರೀತಿಯ ವಿನ್ಯಾಸಗಳನ್ನೂ ಅಲಂಕರಣಕ್ಕಾಗಿ ಬಳಸಲಾಗಿದೆ. ಹೀಗಾಗಿ ಇಲ್ಲಿ ಹಲವು ಶೈಲಿಗಳ ಮಿಶ್ರಣವನ್ನು ಕಾಣಬಹುದು. ಇವು ಸು.747ಕ್ಕಿಂತ ಹಿಂದಿನವು. ಲಲಿತಾದಿತ್ಯನ ಕಾಲಕ್ಕೆ ಸೇರಿದ ಅನಂತರದ ದೇವಾಲಯಗಳಲ್ಲಿ ಬಿeóÁಂಟಿನ್ ಮತ್ತು ಸಿರಿಯನ್-ರೋಮನ್ ಶೈಲಿಯ ಅಂಶಗಳು ಎದ್ದು ಕಾಣುತ್ತವೆ. ಮಾರ್ತಾಂಡದಲ್ಲಿರುವ ಸೂರ್ಯದೇವಾಲಯ ಇದಕ್ಕೆ ಉದಾಹರಣೆ. ಎರಡೂ ಕಡೆ ಚಿಕ್ಕ ಗುಡಿಗಳಿರುವ ಚೌಕಾಕಾರದ ಈ ದೇವಾಲಯ ವಿಶಾಲವಾದ ಜಗತಿಯ ಮೇಲೆ ಇದೆ. ಗಾರೆ ಮತ್ತು ಬೆಣೆಯ ಉಪಯೋಗ. ದುಂಡು ಕಮಾನುಗಳು, ಪರಸ್ಪರ ಕತ್ತರಿಸುವಂತೆ ಒಂದರ ಮೇಲೋಂದು ಎತ್ತಿರುವ ಚೌಕಗಳ ಭುವನೇಶ್ವರಿ, ಡೋರಿಕ್ ಸ್ತಂಭಗಳು, ಪಟ್ಟಿಕೆ ಮತ್ತು ಕೋಷ್ಠಗಳನ್ನೊಳಗೊಂಡಿರುವ ಕಾರಿಂತಿಯನ್ ಅರೆಗಂಬಗಳು ಮುಂತಾದ ರೋಮನ್ ವಾಸ್ತು ಅಂಶಗಳೂ ಸಿರಿಯದ ವಾಸ್ತುವಿನ ರೀತಿಯ ದೊಡ್ಡ ಕಪೋತಗಳುಳ್ಳ ಕಿಟಕಿಗಳೂ, ಬಿeóÁಂಟಿನ್ ರೀತಿಯ ಮುಂಚಾಚಿದ ತಲೆಯ ಅಲಂಕರಣವಿರುವ ತ್ರಿಕೋಣಪಟ್ಟಿಕೆಗಳೂ ಈ ದೇವಾಲಯದಲ್ಲಿವೆ. ಈ ಕಾಲದಲ್ಲಿ ಸಿರಿಯ ಮತ್ತು ಏóಷ್ಯ ಮೈನರ್ ಪ್ರದೇಶಗಳು ಅರಬರ ಆಕ್ರಮಣಕ್ಕೆ ಒಳಗಾದ್ದರಿಂದ, ಅಲ್ಲಿಯ ಶಿಲ್ಪಗಳಿಗೆ ಅಲ್ಲಿ ಆಸರೆ ದೊರೆಯದೆ ಅಲ್ಲಿಯವರು ಕಾಶ್ಮೀರದೆಡೆಗೆ ಬಂದಿರಬಹುದೆಂದೂ ಕಾಶ್ಮೀರದ ಕಲೆಯಲ್ಲಿಯ ಈ ಪಾಶ್ಚಾತ್ಯ ಪ್ರಭಾವಕ್ಕೆ ಅವರೇ ಕಾರಣರಂದೂ ಅಭಿಪ್ರಾಯವಿದೆ. ಆದರೆ ಮಾರ್ತಾಂಡದ ಮೂರ್ತಿಶಿಲ್ಪ ಬಹುತೇಕ ಗುಪ್ತಶೈಲಿಯಲ್ಲಿರುವುದು ಗಮನಾರ್ಹ. ಸಮಕಾಲಿನ ಕಲೆಯಲ್ಲಿಯ ರೋಮನ್ ಪ್ರಭಾವ ಪರಿಹಾಸಪುರದ ಅವಶೇಷಗಳಲ್ಲಿ ಎದ್ದು ಕಾಣುತ್ತದೆ. ಲಲಿತಾದಿತ್ಯನ ಕಾಲದ ದೇವಾಲಯಗಳು ವಂಗಥ್, ಪಂದ್ರೆಥಾನ್, ನರಸ್ತಾನ್ ಮುಂತಾದ ಎಡೆಗಳಲ್ಲೂ ಇವೆ. ಗುಪ್ತ ರೀತಿಯ ಅಧಿಷ್ಠಾನ, ಡೋರಿಕ್ ಅಥವಾ ಕಾರಿಂತಿಯನ್ ರೀತಿಯ ಕಂಬಗಳು ಮತ್ತು ಅರೆಗಂಬಗಳು, ಇಳಿಕಪೋತದ ಕೆಳಗಿರುವ ತ್ರಿಪತ್ರ ಕಮಾನು ಮತ್ತು ದ್ವಿಪಿರಮಿಡ್ಡಿನಂತಿರುವ ಚಾವಣಿ-ಇವು ಕಾಶ್ಮೀರದ ಕಾರ್ಕೋಟ ವಾಸ್ತುಶೈಲಿಯ ಸಾಮಾನ್ಯ ಲಕ್ಷಣಗಳು. ಈ ಕಾಲದ ಶಿಲ್ಪಗಳು ಹೆಚ್ಚಲ್ಲವಾದರೂ, ಅವುಗಳಲ್ಲಿ ಗುಪ್ತ, ಗಾಂಧಾರ ಮತ್ತು ರೋಮನ್ ಅಂಶಗಳನ್ನು ಕಾಣಬಹುದು. ಕಾರ್ಕೋಟ ವಂಶದ ರೋಮನ್ ಜಯಪುರವೆಂಬ ರಾಜಧಾನಿಯ ನಿರ್ಮಾತ. ಇಲ್ಲಿಯ ಅವಶೇಷಗಳಲ್ಲಿ ಅನೇಕ ದೇವಾಲಯಗಳ ಉಳಿಕೆಗಳಿವೆ. ಇವುಗಳಲ್ಲಿ ಲಲಿತಾದಿತ್ಯನ ಕಾಲದ್ದಕ್ಕಿಂತಲೂ ಶಕ್ತಿಯುತವೂ ಪರಿಷ್ಕøತವೂ ಆದ ಕಲಾಶೈಲಿಯನ್ನು ಗುರುತಿಸಬಹುದು. ಕಾರ್ಕೋಟ ವಂಶದ ಕೊನೆಯ ಕಾಲದ ಕಟ್ಟಡಗಳಲ್ಲಿ ಪದ್ಮಪುರದ (ಈಗಿನ ಪಾಂಪುರ್) ಪದ್ಮಸ್ವಾಮಿ ದೇವಾಲಯ 9ನೆಯ ಶತಮಾನದ ಆದಿಭಾಗಕ್ಕೆ ಸೇರಿದ್ದು.

ಕಾರ್ಕೋಟರ ಅನಂತರ ಆಳಿದ ಉತ್ಪಲ ವಂಶದ ಕಾಲ ಕಾಶ್ಮೀರದ ವಾಸ್ತುಶಿಲ್ಪ ಇತಿಹಾಸದ ಮತ್ತೊಂದು ವೈಭವಯುಗ. ಈ ವಂಶದ ಅವಂತಿವರ್ಮ (855-83) ಅವಂತಿಪುರದ ಅವಂತಿಸ್ವಾಮಿ ಎಂಬ ವಿಷ್ಣುದೇವಾಲಯವನ್ನೂ ಅವಂತೀಶ್ವರ ಎಂಬ ಶಿವದೇವಾಲಯವನ್ನೂ ನಿರ್ಮಿಸಿದ. ವಿಶಾಲ ಪ್ರಾಂಗಣದ ಮಧ್ಯೆ ಜಗತಿಯ ಮೇಲೆ ಕಟ್ಟಿರುವ ಈ ದೇವಾಲಯಗಳ ಸುತ್ತಲೂ ನಾಲ್ಕು ಚಿಕ್ಕ ಗುಡಿಗಳಿವೆ. ಇವು ಪಂಚಾಯತನ ರೀತಿಯವು. ಇಲ್ಲಿಯ ವಾಸ್ತುವಿನ್ಯಾಸ ಲಲಿತಾದಿತ್ಯನ ಕಾಲದವುಗಳಿಗಿಂತ ಹೆಚ್ಚು ಪರಿಷ್ಕøತ. ಅಲಂಕಾರಯುತ. ಅಲಂಕರಣದಲ್ಲಿ ಸಸ್ಸಾನೀಯ ಅಂಶಗಳು ಹೆಚ್ಚು. ಇಲ್ಲಿಯ ಶಿಲ್ಪಗಳು ಹಿಂದಿನವುಗಳಿಗಿಂತ ಉತ್ತಮವೂ ಹೆಚ್ಚು ಶಕ್ತಿಯುತವೂ ಆಗಿವೆ. ದೇವ ಮತ್ತು ಮಾನವರ ನಿರೂಪಣೆಯಲ್ಲಿ ಗಾಂಭಿರ್ಯ ಎದ್ದುಕಾಣುತ್ತದೆ. ಶಂಕರವರ್ಮ (883-902) ಅನೇಕ ಪ್ರಾಚೀನ ದೇವಾಲಯಗಳನ್ನು ಒಡೆದು ಅವನ್ನು ತನ್ನ ಕಟ್ಟಡಗಳಿಗಾಗಿ ಬಳಸಿಕೊಂಡ. ಶಂಕರಪುರದಲ್ಲಿರುವ ಶಂಕರ, ಗೌರೀಶ್ವರ ಮತ್ತು ಸುಗಂಧೇಶ್ವರ ದೇವಾಲಯಗಳು ಆ ಕಾಲದ ಕೃತಿಗಳಲ್ಲಿ ಮುಖ್ಯವಾದುವು. ಶಂಕರವರ್ಮನ ಅನಂತರದ ಕಾಲ ಕಾಶ್ಮೀರದ ಇತಿಹಾಸದಲ್ಲಿ ಘೋರಯುಗ. ಅರಾಕತೆಯೂ ಅನೀತಿಯೂ ಪ್ರಬಲಿಸಿದ್ದ ಆ ಕಾಲದಲ್ಲೂ ವಾಸ್ತುಶಿಲ್ಪ ಮುಂದುವರಿದರೂ ಆಗಿನ ಕೃತಿಗಳಲ್ಲಿ ಹೆಚ್ಚಿನವು ಸುಲಭದ ದಾರುಕೃತಿಗಳೂ. ಉತ್ಪಲ ಕಲೆಯ ಕಾಲಿಕ ವ್ಯಾಪ್ತಿ ಹೆಚ್ಚಿಲ್ಲವಾದರೂ ಅದರ ಪ್ರಭಾವವನ್ನು ಗಿಲ್ಗಿಟ್, ಅಗ್ನೇಯ ಹಿಮಾಲಯ, ಜಮ್ಮು ಮತ್ತು ಕಾಶ್ಮೀರದ ಪ್ರಾಚೀನ ಹಿಂದೂ ವಾಸ್ತುಶಿಲ್ಪದ ಇತಿಹಾಸದ ಕಡೆಯ ಅಧ್ಯಾಯವೆನ್ನಬಹುದು. ಈ ಕಾಲದ ಶಿಲಾ ದೇವಾಲಯಗಳು ಬುಮಜುವ್, ಪಂದ್ರೆಥಾನ್, ಜûರಿಬಲ್, ಕೋಥೇರ್, ಪಾಯರ್, ಮಾಮಲ್, ಗರೂರ್ ಮುಂತಾದೆಡೆಗಳಲ್ಲಿವೆ. ದೇವಾಲಯಗಳ ವಿನ್ಯಾಸ ಕ್ರಮೇಣ ಸರಳವಾಯಿತಲ್ಲದೆ ಅವುಗಳ ಗಾತ್ರವೂ ಚಿಕ್ಕದಾಯಿತು, ಅಲಂಕರಣದಲ್ಲೂ ಇದೇ ರೀತಿಯ ಬಡತನ ಕಾಣಿಸಿಕೊಳ್ಳುತ್ತದೆ. ಪಂದ್ರೆಥಾನ್‍ನಲ್ಲಿರುವ ರಿಲ್ಹಣೇಶ್ವರ ದೇವಾಲಯ (1135) ಈ ಶೈಲಿಗೆ ಒಳ್ಳೆಯ ಉದಾಹರಣೆ. ಶಿಲಾದೇವಾಲಯಗಳಿಗಿಂತ ಮರದ ಗುಡಿಗಳ ರಚನೆ ಹೆಚ್ಚಿದ್ದು ಈ ಕಾಲದ ವೈಶಿಷ್ಟ್ಯ. ಕಾಶ್ಮೀರ ಕಣಿವೆಯಲ್ಲಿಯ ಈ ಕಾಲದ ಮರದ ದೇವಾಲಯಗಳು ಬಹುಮಟ್ಟಿಗೆ ನಷ್ಟವಾಗಿದ್ದರೂ ಈ ಪ್ರದೇಶದ ಹೊರಗೆ ಇದೇ ಶೈಲಿಯಲ್ಲಿ ಕಟ್ಟಿದ ಮರದ ರಚನೆಗಳೂ ಉಳಿದಿವೆ. ಚಂಬಾದ ಮಿರ್ಕುಲ-ಉದೈಪುರ್‍ದಲ್ಲಿರುವ ಕಾಳಿ ದೇವಾಲಯ, ಪಶ್ಚಿಮ ಟಿಬೆಟ್ಟಿನ ಗುಗೆ ಭಾಗದಲ್ಲಿರುವ ತ್ಸಪರಂಗ್ನ ಬೌದ್ಧ ಗುಡಿಗಳಲ್ಲಿರುವ ಕೆತ್ತನೆಗಳು, ಸ್ಥಿತಿಯ ಕೋಲುಂಗ್ ಮತ್ತು ಲ್ಹಕುನ್, ಲಡಾಕ್‍ನ ಅಲಿ ಮುಂತಾದ ಎಡೆಗಳಲ್ಲಿರುವ ದಾರುಕೃತಿಗಳು ಈ ರೀತಿಯವು. ಇವು ಸಮಕಾಲೀನ ಕಾಶ್ಮೀರ ವಾಸ್ತುಶಿಲ್ಪದ ಬಗ್ಗೆ ಬೆಳಕು ಚೆಲ್ಲುತ್ತವೆ. ಜಮ್ಮು-ಕಾಶ್ಮೀರದ ಈ ಕಾಲದ ಹಲವು ಶಿಲ್ಪಕೃತಿಗಳು ಶ್ರೀನಗರದ ವಸ್ತುಸಂಗ್ರಹಾಲಯದಲ್ಲಿವೆ. ವಿಚಿತ್ರ ಕೋಷ್ಠಗಳಲ್ಲೋ ಸುತ್ತುವರಿದ ಬಳ್ಳಿಯಿಂದೆದ್ದ ಕಮಲಗಳ ಮೇಲೋ ನಿರೂಪಿಸಿದ ಮೂರ್ತಿಗಳು ಮತ್ತು ಅತಿಯಾದ ಕುಸುರಿಕೆಲಸ-ಇವು ಈ ಕಾಲದ ಕಟ್ಟಡಗಳ ಅಲಂಕರಣಶಿಲ್ಪಗಳ ವೈಶಿಷ್ಟ್ಯ. ಮೂರ್ತಿಶಿಲ್ಪಗಳು ಎಚ್ಚರಿಕೆಯಿಂದ ಮಾಡಿದವಾದರೂ ಅವುಗಳಲ್ಲಿ ಅಂಗಾಂಗ ಪ್ರಮಾಣ ವ್ಯತ್ಯಾಸವಾಗಿರುವುದಲ್ಲದೆ, ಮುಖ ಸಪ್ಪೆಯಾಗಿಯೂ ಸ್ವಲ್ಪ ಉಬ್ಬಿಕೊಂಡೂ ಇರುತ್ತದೆ. ಈ ದೋಷಗಳಿದ್ದರೂ ಈ ಕಾಲದಲ್ಲಿ ಕಾಶ್ಮೀರದ ಅನೇಕ ಶಿಲ್ಪಿಗಳನ್ನು ಟಿಬೆಟ್ಟಿನ ಲಾಮಾಗಳು ಆಹ್ವಾನಿಸುತ್ತಿದ್ದುದರಿಂದ ಈ ಇಳಿಮುಖ ಶಿಲ್ಪಶೈಲಿಯೇ ಮುಂದೆ ಟಿಬೆಟ್ಟಿನ ಲಾಮಾ ಪಂಥೀಯ ಶಿಲ್ಪಗಳಲ್ಲಿ ಬೇರೂರಿತು.

ಕಾಶ್ಮೀರದಲ್ಲಿ ಇಸ್ಲಾಮೀ ಪ್ರಭುತ್ವ ಪ್ರಾರಂಭವಾದ್ದು 1339ರಲ್ಲಿ. ಆದರೆ 16ನೆಯ ಶತಮಾನದ ಅಂತ್ಯದಲ್ಲಿ ಮೊಗಲರ ಆಳ್ವಿಕೆ ಆರಂಭವಾಗುವ ವರೆಗೆ ಅಲ್ಲಿಯ ವಾಸ್ತುಶೈಲಿಯಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಲಿಲ್ಲ. ಕಾಶ್ಮೀರ ಸುಲ್ತಾನರ ಹೆಚ್ಚು ಕಟ್ಟಡಗಳೆಲ್ಲ ಮರವಾದ್ದರಿಂದ ಅವು ಯಾವುವೂ ಉಳಿದಿಲ್ಲ. ಆದರೆ ಶ್ರೀನಗರದಲ್ಲಿರುವ ಜಾಮಿ ಮಸೀದಿ, ಷಾಹಾಮಾದಾನ್‍ನ ಗೋರಿ-ಮಸೀದಿ ಮತ್ತು ಪಾಂಪುರ್‍ನಲ್ಲಿರುವ ಮಸೀದಿಗಳು ಅನಂತರ ನವೀಕೃತವಾಗಿದ್ದರೂ ಹೆಚ್ಚು ಕಡಿಮೆ ಹಳೆಯ ವಿನ್ಯಾಸವನ್ನೇ ಉಳಿಸಿಕೊಂಡಿರುವುದರಿಂದ ತತ್ಕಾಲೀನ ವಾಸ್ತುರೀತಿಯ ಅಧ್ಯಯನಕ್ಕೆ ಉಪಯುಕ್ತವಾಗಿವೆ. ಈ ಕಟ್ಟಡಗಳು ವಿಶೇಷವಾಗಿ ಚೌಕಾಕಾರದವು. ಮಧ್ಯೆ ಒಂದು ಅಥವಾ ಎರಡು ಅಂತಸ್ತುಗಳ, ಕೆಲವೊಮ್ಮೆ ನಾಲ್ಕು ಕಂಬಗಳ ಮೇಲೆ ನಿಂತ, ಹಜಾರಗಳು ಇರುತ್ತವೆ. ಒಳಭಾಗದಲ್ಲಿ ಸುತ್ತುಗೋಡೆಗಳಿಗೆ ಸೇರಿದ ಹಾಗೆ ಉಗ್ರಾಣ ಕೋಣೆಗಳೂ ಕೆಲವು ಕಟ್ಟಡಗಳಲ್ಲಿವೆ. ಚಾವಣಿ ಸ್ವಲ್ಪ ಮಾತ್ರ ಇಳಿಜಾರಾಗಿರುತ್ತದೆ. ಮೂಲೆಗಳಲ್ಲಿ ಘಂಟಾಕೃತಿಯ ಅಲಂಕರಣವಿರುತ್ತದೆ. ಚಾವಣಿಯ ಮೇಲೆ ಮಧ್ಯದಲ್ಲಿ ಕಲಶಾಕೃತಿಯ ಮೆಜೀನ್ ಇರುತ್ತದೆ. ಈ ಕಟ್ಟಡಗಳು ಇಸ್ಲಾಮ್ ಮತೀಯವಾಗಿದ್ದರೂ ಇವುಗಳಲ್ಲಿ ಕಾಶ್ಮೀರದ ಪ್ರಾಚೀನ ಹಿಂದೂ ಬೌದ್ಧ ವಾಸ್ತುಸಂಪ್ರದಾಯವೇ ಮುಂದುವರಿದಿರುವುದನ್ನು ಗುರುತಿಸಬಹುದು. ಅಲ್ಲದೆ ಇಲ್ಲಿಯ ಕೆಲವು ಜಿûಯರಾಗಳನ್ನು ಹಿಂದೂದೇವಾಲಯಗಳ ಅಡಿಪಾಯದ ಮೇಲೆ ಕಟ್ಟಿರುವುದರಿಂದ ಅವು ಆ ದೇವಾಲಯಗಳ ವಿನ್ಯಾಸವನ್ನೇ ಅನುಸರಿಸುತ್ತವೆ. 1585ರಲ್ಲಿ ಅಕ್ಬರ್ ಕಾಶ್ಮೀರವನ್ನು ಆಕ್ರಮಿಸಿದ ಮೇಲೆ ಈ ಪ್ರದೇಶದಲ್ಲಿ ಮೊಗಲ್ ಶೈಲಿಯ ಕಟ್ಟಡಗಳು ನಿರ್ಮಿತವಾದುವು. 1589-99ರಲ್ಲಿ ಹರಿ ಪರ್ವತದ ಮೇಲೆ ಅಕ್ಬರ್ ಒಂದು ಕೋಟಿ ಕಟ್ಟಿಸಿದ. 1619ರ ಅನಂತರ ಜಹಾಂಗೀರ್ ಪೀರ್ ಪಂಜಾಲ್ ಕಣಿವೆಯ ಮುಖ್ಯರಸ್ತೆಯ ಅಕ್ಕಪಕ್ಕಗಳಲ್ಲಿ ನೂರ್‍ಮಹಲ್, ಸೈದಾಬಾದ್ ಮುಂತಾದೆಡೆಗಳಲ್ಲಿ ಸರಾಯ್‍ಗಳನ್ನು ಕಟ್ಟಿಸಿದ. ಶ್ರೀನಗರದ ಬಳಿ ಷಾಲಿಮಾರ್ ಉದ್ಯಾನವನ್ನೂ ವೇರಿನಾಗ್‍ನಲ್ಲಿ ಸ್ನಾನಕೊಳವನ್ನೂ ಅಚಾಬಲ್, ಮಾನಸಬಲ್, ಗಂಧರ್‍ಬಲ್‍ಗಳಲ್ಲಿ ಉದ್ಯಾನಗಳನ್ನೂ ನಿರ್ಮಿಸಿದ. ಶ್ರೀನಗರದ ಪತ್ಥರ್ ಮಸೀದಿಯನ್ನು ನೂರ್‍ಜಹಾನ್ ಕಟ್ಟಿಸಿದಳು. ಚಶ್ಮ-ಇ-ಷಾಹಿಯನ್ನು ಷಾಹಜಹಾನ್ 1632-33ರಲ್ಲಿ ನಿರ್ಮಿಸಿದ. ಯುವರಾಜದಾರಾ ಶಿಕೋ 1644ರಲ್ಲಿ ಶ್ರೀನಗರದ ಪರೀಮಹಲನ್ನೂ ಹರಿಪರ್ವತದಲ್ಲಿ ಒಂದು ಮಸೀದಿಯನ್ನೂ ಕಟ್ಟಿಸಿದ. ಇವೆಲ್ಲ ಮೊಗಲ್ ವಾಸ್ತುಶೈಲಿಯಲ್ಲೇ ಇವೆ. ಇವುಗಳಲ್ಲಿ ಮುಖ್ಯವಾದ್ದು ಕಾಶ್ಮೀರದಲ್ಲೇ ದೊಡ್ಡದಾದ ಪತ್ಥರ್ ಮಸೀದಿ. ಇದರಲ್ಲಿ 27 ಗುಮ್ಮಟಗಳೂ, ಮುಂದೆ ಒಂಬತ್ತು ಕಮಾನುಗಳೂ ಇವೆ. ಇದರದು ಪರ್ಷಿಯನ್ ಮಾದರಿ, ಕಟ್ಟಡವನ್ನು ಪೂರ್ತಿಯಾಗಿ ಕಂದುಬಣ್ಣದ ಸುಣ್ಣಕಲ್ಲಿನಲ್ಲಿ ಕಟ್ಟಲಾಗಿದೆ. ಭಾರತದಲ್ಲೇ ಪ್ರಪ್ರಥಮವಾಗಿ, ಹಲ್ಲುಹಲ್ಲಿನ ಕಮಾನನ್ನು ಇಲ್ಲಿ ರಚಿಸಲಾಗಿದೆ.

ಹರಿಪರ್ವತದ ಮೇಲೆ ಈಗ ಇರುವ ಕೋಟೆಯನ್ನು 18ನೆಯ ಶತಮಾನದಲ್ಲಿ, ಕಾಶ್ಮೀರ ಆಫ್ಘನ್ ರಾಜರ ಆಳ್ವಿಕೆಗೆ ಒಳಪಟ್ಟಿದ್ದಾಗ ಕಟ್ಟಲಾಯಿತು. ಆ ಕಾಲದಲ್ಲಿ ಶ್ರೀನಗರದ ಅನೇಕ ಕಟ್ಟಡಗಳು ದುರಸ್ತಿಗೊಂಡವು. ಡೋಗ್ರಾ ಅರಸರ ಕಾಲದ ಕಾಶ್ಮೀರ ವಾಸ್ತುಕಲೆಯಲ್ಲಿ ಭಾರತೀಯ, ಅಫ್ಘನ್, ಸಿಖ್ ಮತ್ತು ಕಾಂಗ್ರಾ ರಾಜಸ್ಥಾನಗಳ ಅಂಶಗಳನ್ನು ಕಾಣಬಹುದು. ಆದರೆ ಶೇರ್ ಗಡಿಯಲ್ಲಿ ಕಟ್ಟಿರುವ ಬೇಸಗೆ ಅರಮನೆಯೊಂದೇ ಈ ಕಾಲದ ಹೆಸರಿಸಬಹುದಾದ ಕಟ್ಟಡ. ಈ ಕಾಲದಲ್ಲಿ ಲಡಾಕ್ ಕಾಶ್ಮೀರದಲ್ಲಿ ಸೇರಿದ್ದರಿಂದ ಅಲ್ಲಿ ಹರಡಿದ್ದ ಚೀನೀ ಶಿಲ್ಪಕಲೆ ಇಲ್ಲೂ ಪ್ರಸಾರಗೊಂಡಿತು. ಈ ಪ್ರಭಾವ ಹೆಚ್ಚಾಗಿ ಕಾಶ್ಮೀರದ ಮರದ ಕೆತ್ತನೆಯಲ್ಲಿ ಕಂಡುಬರುತ್ತದೆ.

ಶಾಸನಗಳು : ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿರುವ ಶಾಸನಗಳು ಕಡಿಮೆ. ಲಡಾಕ್‍ನ ಖಲಾತ್ಸೆ ಎಂಬಲ್ಲಿ ಖರೋಷ್ಠೀ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಇರುವ ಕುಶಾನ ವರ್ಷ 187ರ ವೀಮ ಕಡ್‍ಪೀಸಿಸ್‍ನ ಶಾಸನವೇ ಅತ್ಯಂತ ಪ್ರಾಚೀನವಾದ್ದು. ಅನಂತರ ದಿದ್ದಾ ರಾಣಿಯಿಂದ ಬೆಳೆದ ಶಾರದಾ ಲಿಪಿಯಲ್ಲಿವೆ. ಇವು ಹೆಚ್ಚಾಗಿ ದಾನಶಾಸನಗಳು. ಕೆಲವು ಶಾಸನಗಳು ದೇವಾಲಯ ಅಥವಾ ವಿಗ್ರಹಗಳ ಸ್ಥಾಪನೆಯನ್ನು ತಿಳಿಸುತ್ತದೆ. ಅರಿಗೋಮ್ ಎಂಬಲ್ಲಿಯ 1197ರ ಒಂದು ಶಾಸನದಲ್ಲಿ ಇಟ್ಟಿಗೆಯಲ್ಲಿ ಕಟ್ಟಿದ ವಿಹಾರವೊಂದರ ಸ್ಥಾಪನೆಯ ವಿಷಯವಿದೆ. ಆ ಕಾಲದಲ್ಲಿಯ ಶಾಸನಗಳಲ್ಲಿ ಲೌಕಿಕ ವರ್ಷವನ್ನು ನಮೂದಿಸುವುದು ಒಂದು ವಿಶೇಷ. ಕಾಶ್ಮೀರದ ಮುಸ್ಲಿಮ್ ಅರಸರ ಕಾಲದಲ್ಲೂ ಸಂಸ್ಕøತ ಮತ್ತು ಕಾಶ್ಮೀರೀ ಭಾಷೆಯಲ್ಲಿ ಶಾರದಾ ಲಿಪಿಯಲ್ಲಿ ಶಾಸನಗಳನ್ನು ಬರೆಯುತ್ತಿದ್ದರು. ಸುಲ್ತಾನ್ eóÉೈನುಲ್ ಅಬಿದೀನನ ಆಳ್ವಿಕೆಯಲ್ಲಿ ಕಲಿ ಸಂವತ್ಸರ 4530ರಲ್ಲಿ (ಕ್ರಿ.ಶ.1428) ಹೊರಡಿಸಲಾದ ಒಂದು ಶಾಸನ ಆಶ್ರಮವೊಂದರ ಸ್ಥಾಪನೆಯ ವಿಷಯವನ್ನು ಕುರಿತದ್ದು. ಆ ಕಾಲದ ಕೆಲವು ಅರಬ್ಬೀ ಶಾಸನಗಳೂ ದೊರಕಿವೆ. ಮೊಗಲರ ಶಾಸನಗಳು ಬಹುಮಟ್ಟಿಗೆ ಪಾರಸೀ ಲಿಪಿ ಮತ್ತು ಭಾಷೆಯವು. ಕಾಶ್ಮೀರದ ಇತಿಹಾಸದ ಬಗ್ಗೆ ವಿಪುಲವಾದ ಗ್ರಂಥಸಾಮಗ್ರಿ ದೊರಕುವುದರಿಂದ ಶಾಸನಗಳಿಂದ ದೊರಕುವ ಸಾಮಗ್ರಿ ಕಡಿಮೆ. ನಾಣ್ಯಗಳು : ಕಾಶ್ಮೀರದಲ್ಲಿ ಇಂಡೋ-ಗ್ರೀಕ್ ಅರಸರಿಂದ ಇತ್ತೀಚಿನ ವರೆಗೆ ಆಳಿದ ಎಲ್ಲ ರಾಜವಂಶಗಳ ನಾಣ್ಯಗಳೂ ದೊರಕಿವೆ. ಇಂಡೊ-ಗ್ರೀಕ್ ಅರಸರಾದ ಅಜಿûಸ್ ಮತ್ತು ಅಜಿûಲೈಸೆಸ್‍ರ ಬೆಳ್ಳಿ ನಾಣ್ಯಗಳು ಬಾರಾಮುಲ ಬಳಿಯೂ ಕನಿಷ್ಕ, ಹುವಿಷ್ಕ ಮುಂತಾದ ಕುಶಾನ ಅರಸರ ನಾಣ್ಯಗಳು ಉಷ್ಕೂರ್, ಹಾರ್ವಾನ್ ಮುಂತಾದ ಸಮಕಾಲೀನ ನಿವೇಶನಗಳಲ್ಲೂ ದೊರಕಿವೆ.

ಕಾಶ್ಮೀರದ್ದೇ ಆದ ಪ್ರತ್ಯೇಕ ನಾಣ್ಯ ಚಲಾವಣೆಗೆ ಬಂದದ್ದು ಮಿಹಿರಗುಲನ ಕಾಲದಲ್ಲಿ. ಇವನ ನಾಣ್ಯಗಳು ಬೆಳ್ಳಿ ಮತ್ತು ತಾಮ್ರದವು. ಇವು ಸಸ್ಸಾನೀಯ ಮಾದರಿಯಲ್ಲಿವೆ. ಬೆಳ್ಳಿಯ ನಾಣ್ಯಗಳ ಮುಂಬದಿಯಲ್ಲಿ ರಾಜನ ತಲೆ, ನಂದಿಯ ಚಿತ್ರವಿರುವ ರಾಜದಂಡ ಮತ್ತು ತ್ರಿಶೂಲವು, ಹಿಂಬದಿಯಲ್ಲಿ ಜಯತು ಮಿಹಿರಗುಲ ಅಥವಾ ಜಯತು ವೃಷಧ್ವಜ ಎಂಬ ಲೇಖವೂ ಇರುತ್ತವೆ. ಕೆಲವು ನಾಣ್ಯಗಳ ಹಿಂಬದಿಯಲ್ಲಿ ಅರ್ಧೋಕ್ಷೋ ದೇವತೆಯ ಚಿತ್ರವಿರುವುದೂ ಉಂಟು. ತಾಮ್ರದ ನಾಣ್ಯಗಳೂ ಸುಮಾರು ಇದೇ ತರಹದವೇ. ಇವನ ಅನಂತರ ಅಳಿದ ತೋರಮಾನ ಮತ್ತು ಪ್ರವರಸೇನರ ನಾಣ್ಯಗಳೂ ಇದೇ ಮಾದರಿಯವೇ, ಆದರೆ ಅವುಗಳ ಮೇಲಣ ಬರಹ ಸೂಕ್ತವಾಗಿ ಬದಲಾಗುತ್ತದೆ.

ಕಾರ್ಕೋಟ ಅರಸರ ನಾಣ್ಯಗಳು ತೂಕ ಮತ್ತು ಮಾದರಿಗಳಲ್ಲಿ ಕುಶಾನರ ನಾಣ್ಯಗಳಂತೆ ಇದ್ದರೂ ಅವು ಬಹು ಒರಟು. ಈ ವಂಶದ ದುರ್ಲಭ, ವಿಗ್ರಹ, ಪ್ರತಾಪಾದಿತ್ಯ, ಜಯಾಪೀಡ ಮುಂತಾದವರ ನಾಣ್ಯಗಳ ಮುಂಬದಿಯಲ್ಲಿ ರಾಜನ ತಲೆಯೂ ಹಿಂಬದಿಯಲ್ಲಿ ದೇವಿಯ ವಿಗ್ರಹವೂ ರಾಜನ ಹೆಸರೂ ಇರುತ್ತದೆ.

ಉತ್ಪಲವಂಶದ ಮತ್ತು ಅನಂತರದ ಹಿಂದೂ ರಾಜರ ನಾಣ್ಯಗಳೂ ಇದೇ ರೀತಿಯವು. ಆದರೆ ಇವುಗಳಲ್ಲಿ ರಾಜರ ಹೆಸರು ದಪ್ಪ ಅಕ್ಷರಗಳಲ್ಲಿ ಎರಡೂ ಬದಿಗಳಲ್ಲೂ ಭಾಗಶಃ ಇರುತ್ತದೆ. ಉದಾಹರಣೆಗೆ, ಕ್ಷೇಮಗುಪ್ತನ ನಾಣ್ಯಗಳ ಮುಂಬದಿಯಲ್ಲಿ ಕ್ಷೇಮಗು ಎಂದೂ ಹಿಂಬದಿಯಲ್ಲಿ ಪ್ರದೇವ ಎಂದೂ ಬರೆಯಲಾಗಿದೆ. ಈ ವಂಶದ ಬಹುತೇಕ ಎಲ್ಲ ಅರಸರ ನಾಣ್ಯಗಳೂ ಬೆಳಕಿಗೆ ಬಂದಿವೆ. ಈ ಹಿಂದೂ ಅರಸರ ಪೈಕಿ ಹರ್ಷ ದೇವ ಹೊರಡಿಸಿದ ನಾಣ್ಯಗಳಲ್ಲಿ ಕೆಲವು ವೈಶಿಷ್ಟ್ಯಗಳುಂಟು. ಇವನು ಕರ್ನಾಟಕದ ನಾಣ್ಯಗಳ ರೀತಿಯಲ್ಲಿ ಮುಂಬದಿಯಲ್ಲಿ ಆನೆಯ ಚಿತ್ರ ಇರುವ ಚಿನ್ನದ ನಾಣ್ಯಗಳನ್ನೂ ಕಾಬೂಲಿನ ಬ್ರಾಹ್ಮಣೀ ಅರಸರ ನಾಣ್ಯಗಳ ರೀತಿಯಲ್ಲಿ ಮುಂಬದಿಯಲ್ಲಿ ಕುದುರೆ ಸವಾರರ ಚಿತ್ರ ಇರುವ ನಾಣ್ಯಗಳನ್ನೂ ಕಾಶ್ಮೀರದಲ್ಲಿ ಚಲಾವಣೆಗೆ ತಂದ.

ಕಾಶ್ಮೀರದ ಮುಸ್ಲಿಮ್ ಅರಸರ ನಾಣ್ಯಗಳು ಬೇರೆ ರೀತಿಯವು. ಇವುಗಳಲ್ಲಿ ಹೆಚ್ಚಿನವು ತಾಮ್ರದವು. ಗುಂಡಗಿನ ಮತ್ತು ಚೌಕಾಕಾರದ ಎರಡೂ ಬಗೆಯ ನಾಣ್ಯಗಳು ಬಳಕೆಯಲ್ಲಿದ್ದುವು. ಹೆಚ್ಚಿನ ನಾಣ್ಯಗಳಲ್ಲಿ ಮುಂಬದಿಯಲ್ಲಿ ಮಧ್ಯೆ ಗಂಟಿರುವ ಒಂದು ಅಡ್ಡಗೆರೆಯೂ ತಳದಲ್ಲಿ ಅರಬ್ಬೀ ಲಿಪಿಯಲ್ಲಿ ರಾಜನ ಹೆಸರೂ ಇರುತ್ತವೆ. ಹಿಂಬದಿಯಲ್ಲಿ ನಾಲ್ಕು ಮೂಲೆಗಳಲ್ಲೂ ಗಂಟುಗಳುಳ್ಳ ಚೌಕವಿದೆ. ನಾಣ್ಯ ಅಚ್ಚಾದ ಸ್ಥಳವೂ ಹೆಸರೂ ಮಧ್ಯದಲ್ಲಿ ಅರಬ್ಬೀ ಲಿಪಿಯಲ್ಲಿದೆ. ಈ ನಾಣ್ಯಗಳಲ್ಲಿ ಹೆಚ್ಚಿನವು ಕಾಶ್ಮೀರದಲ್ಲೇ ಅಚ್ಚಾದ್ದರಿಂದ ಜûರ್ಬ್-ಇ-ಕಾಶ್ಮೀರೀ ರೀತಿಯಲ್ಲಿ ತಮ್ಮ ನಾಣ್ಯಗಳನ್ನಲ್ಲದೆ ತಮ್ಮ ಇತರ ರೀತಿಯ ನಾಣ್ಯಗಳನ್ನೂ ಚಲಾವಣೆಗೆ ತಂದರು.

ಅನಂತರ ಈ ಪ್ರದೇಶ ಪಂಜಾಬಿನ ರಣಜಿತ್ ಸಿಂಗ್, ರಣಬೀರ್ ಸಿಂಗ್ ಮುಂತಾದವರ ಕೈವಶವಾದಾಗ, ಇಲ್ಲಿ ಅವರ ನಾಣ್ಯಗಳು ಚಲಾವಣೆಗೆ ಬಂದುವು. ಇವುಗಳಲ್ಲಿ ಸಾಮಾನ್ಯವಾಗಿ ಮುಂಬದಿಯಲ್ಲಿ ಗುರುಮುಖಿಯಲ್ಲಿ ಅಕಾಲ್ ಸಹಾಇ ಗುರು ನಾನಕ್‍ಜೀ ಎಂದೂ ಹಿಂಬದಿಯಲ್ಲಿ ನಸ್ತಾಲಿಕ್‍ನಲ್ಲಿ ಜûರ್ಬ್-ಇ-ಕಶ್ಮೀರ್ ಎಂದೂ ಇರುತ್ತವೆ. ಇತ್ತೀಚಿನ ಡೋಗ್ರಾ ಅರಸರ ನಾಣ್ಯಗಳೂ ಸುಮಾರು ಇದೇ ರೀತಿಯವೇ.

ಇವಲ್ಲದೆ ಕಾಶ್ಮೀರದಲ್ಲೆ ಆಫ್ಘನ್ ಮತ್ತು ನೇಪಾಲೀ ರಾಜರ ಕೆಲವು ನಾಣ್ಯಗಳೂ ದೊರಕಿವೆ. (ಎಸ್.ಎನ್.)